ಅಪ್ಪಾಜಿ ತನಗಿಂತ ಹತ್ತು ವರ್ಷ ಚಿಕ್ಕವರಿದ್ದ ಮಕ್ಕಳಂತಿದ್ದ ಚಿಕ್ಕಪ್ಪಂದಿರು ಹೊತ್ತಿನ ಊಟಕ್ಕಾಗಿ ಇತರರ ಹೊಲಗಳಲ್ಲಿ ಕೆಲಸ ಮಾಡಿ ಹೆಬ್ಬೆರಳು ಕಿತ್ತು ರಕ್ತ ಸೋರಿಕೊಳ್ಳುವುದನ್ನು ನೋಡಿ ಮಧ್ಯ ರಾತ್ರಿ ಎದ್ದು ತನ್ನ ಜವಾಬ್ದಾರಿ ನೆನೆಯುತ್ತಿದ್ದನಾ. ಮೊದಲ ಚಿಕ್ಕಪ್ಪ ಬೇಗ ಮದುವೆಯಾಗಿ ಮಕ್ಕಳಿಗೆ ಊಟಕ್ಕೆ ನೀಡಲಾರದೇ ಹೆಣಗುತ್ತಿದ್ದುದು ಬಾದಿಸಿತ್ತಾ. ನಮ್ಮಜ್ಜಿ ಅಪ್ಪನ ತಮ್ಮಂದಿರಿಗೆ ಬಡಿಸಲು ಇಲ್ಲದಾಗ ಒದ್ದಾಡಿದ್ದು ಅಪ್ಪನ ಕಣ್ರೆಪ್ಪೆ ನೋಯಿಸಿತ್ತಾ. ಅಪ್ಪನ ಅಕ್ಕ ತಂಗಿಯರ ಬಗ್ಗೆ ಯೋಚಿಸಿ ಅಜ್ಜಿ ದಂಗಾಗಿದ್ದು ಅಪ್ಪನ ಕರಳು ಕರೆದಿತ್ತಾ.
ಮಂಜುಳ ಡಿ ಬರೆದ ಲಹರಿ ನಿಮ್ಮ ಓದಿಗೆ

 

ಅಮ್ಮನ ಬೈಗುಳ ಮುಗಿಲು ಮುಟ್ಟಿತ್ತು. ಅಪ್ಪ ಸುಮ್ಮನೇ ಬೈಗುಳ ಉ‌ಣ್ಣುತ್ತಾ ಕೂತಿದ್ದರು. ಇದೇ ಹವಾಮಾನ ಮುಂದಿನ ಎರಡು ದಿನಗಳಿಗೂ ಮುಂದುವರೆಯುವ ಸ್ಪಷ್ಟತೆ ಅವರಿಗೆ. ಇದೇನೂ ಹೊಸತಲ್ಲ ನಮಗೆಲ್ಲ. ಅಪ್ಪ ಚಿಕ್ಕಪ್ಪ ಮತ್ತು ಅವರ ಕುಟುಂಬಗಳಿಗೆ ಅಮ್ಮನಿಗೆ ತಿಳಿಯದಂತೆ ಹಣ ಸಹಾಯ ಮಾಡಿದಾಗಲೆಲ್ಲ ವಾತಾವರಣದಲ್ಲಿ ಈ ಪ್ರಕ್ಷುಬ್ಧತೆ ಯಥೇಚ್ಛವಾಗಿರುತ್ತಿತ್ತು. ಇದಕ್ಕೆ ಅಪ್ಪನ‌ ತಣ್ಣನೆಯದೊಂದು ಮೌನ ಹೊರತಾಗಿ ಇನ್ಯಾವುದೇ ಪ್ರತಿಕ್ರಿಯೆ ಸಾಧ್ಯವಾಗುತ್ತಿರಲಿಲ್ಲ. ನಮಗೋ ಇಲ್ಲಿ ಸರಿ ಯಾರು ಎಂದು ಅರಿವಾಗದ ವಯಸ್ಸು. ಅಮ್ಮ ಮತ್ತು ಅಮ್ಮನ ಕಡೆಯವರ ಹೆಚ್ಚು ಮಮತೆ, ಅಮ್ಮನ ಕಡೆ ವಾಲಿ ಇದೊಂದು ವಿಷಯದಲ್ಲಿ ನಮಗೆಲ್ಲಾ ಅಪ್ಪ ವಿಲನ್ ನಂತೆ ಕಾಣುತ್ತಿದ್ದರು.

ಈಗ ವರ್ಷಗಳು ಉರುಳಿವೆ. ತಮ್ಮಂದಿರ ಎಲ್ಲಾ ಜವಾಬ್ದಾರಿ ನಿಭಾಯಿಸಿದ್ದಲ್ಲದೆ, ಓದಿಸೋಕೆ ಸಾಧ್ಯವೇ ಇರದ ಸ್ಥಿತಿಯಲ್ಲಿದ್ದ ಅಪ್ಪಾಜಿ ತಮ್ಮಂದಿರ ಮಕ್ಕಳ ಓದು ಇತರೆ ಎಲ್ಲಾ ನೋಡಿಕೊಂಡು ಇಂದು ಅವರೆಲ್ಲಾ ಒಂದು ಸ್ಥಿತಿಯಲ್ಲಿರಲು ಮೂಲ ಕಾರಣವಾದ ಅಪ್ಪ ಆಗಸದಗಲ ವ್ಯಕ್ತಿತ್ವದಂತೆ ಕಾಣುತ್ತಾರೆ. ನೆಂಟರ ಬಳಗದ ಎಷ್ಟೋ ಜನರ ಎಷ್ಟೆಷ್ಟೋ ಅಗತ್ಯಗಳಲ್ಲಿ ಅಪ್ಪ ಒದಗಿ ಬಿಟ್ಟಿದ್ದರು. ಪಟ್ಟಿ ತುಸು ಕಷ್ಟ ಸಾಧ್ಯ.

ಇಂಥ ಅಪ್ಪಾಜಿಯನ್ನು ಅವರೆಲ್ಲಾ ಒಂದು ಕಾಲಕ್ಕೆ ದೊಡ್ಡಪ್ಪಾಜಿ ಎಂದೇ ಕರೆಯುತ್ತಿದ್ದರು. ಆ ಕರೆ ಎಷ್ಟು ಅನ್ವರ್ಥವಾಗಿತ್ತೆಂದರೆ, ತಂದೆಯಿಲ್ಲದ ಒಂದಿಡೀ ಮನೆತನ ಎತ್ತಿ ತೂಗಿಸಿದ ಅವರ ವ್ಯಕ್ತಿತ್ವ ದಿನಗಳೆದಂತೆ ಏರು ಎತ್ತರದಲ್ಲಿ ಕಾಣತೊಡಗಿತು.

ಇತ್ತೀಚೆಗೆ ಚಿಕ್ಕಪ್ಪಂದಿರು ಮತ್ತವರ ಮಕ್ಕಳು ಮೊದಲ ಗೌರವ ಕೊಡುವುದಿಲ್ಲ, ಎಂದು ನಾವು ಬೇಸರ ಮಾಡಿಕೊಂಡರೆ “ಅದನ್ನು ಬಯಸಿ ಮಾಡುವುದಾದರೆ ಯಾಕೆ ಮಾಡಬೇಕು. ನನಗೆ ಮಾಡುವ ಸಾಧ್ಯತೆ ಇತ್ತು ಮಾಡಿದೆ. ಇದು ವ್ಯವಹಾರವಲ್ಲ.” ಎನ್ನುವ ಅವರ ಉತ್ತರ ಮತ್ತಷ್ಟು ಮಗದಷ್ಟು ಗೌರವಾದರ ಮೂಡುತ್ತದೆ.

ಅಪ್ಪಾಜಿಯನ್ನು ನೋಡುತ್ತಿದ್ದರೆ ಯಾವ ಸಾಧಕರಿಗಿಂತ ಕಡಿಮೆ. ಹಾಗಂತ ಅಮ್ಮ ಏನೂ ಕಡಿಮೆಯಲ್ಲ. ನಗರದ ಅತೀ ಸೂಕ್ಷ್ಮ ಕುಟುಂಬದಿಂದ ಒಮ್ಮೆಲೇ ಹಳ್ಳಿಯ ವಾತಾವರಣಕ್ಕಿಳಿದು, ಹತ್ತಾರು ಜನರಿಗೆ ಅಡುಗೆ ಮಾಡುವ ಕೆಲಸಕ್ಕಿಳಿದು ಆರೋಗ್ಯ ಅತಿಯಾಗಿ ಹದಗೆಡಿಸಿಕೊಂಡರೂ ಕೊಂಕು ತೆಗೆಯದ ಧೀಮಂತೆ. ಕೃಶ ದೇಹಿ ಅಮ್ಮ ಉಂಡ ಕಾರ್ಯಭಾರ ಜೊತೆಗೆ ನಮ್ಮಜ್ಜಿಯ ದರ್ಬಾರು ಇವೆಲ್ಲಾ ಆಗಾಗ ಅಪ್ಪನ ಮೇಲೆ ಸಿಡಿ ಬಾಂಬುಗಳಾಗಿ ಸಿಡಿದು ಮನೆ ಯುದ್ಧ ಭೂಮಿಯಾಗುವುದೂ ಉಂಟು.

ಆದರೆ ಇವೆಲ್ಲದರ ಹಿಂದೆ ತಂದೆಯಿಲ್ಲದ ಹತ್ತಾರು ಮಕ್ಕಳಿಗೆ ಹಿರಿಯವನಾಗಿ ಹುಟ್ಟಿದ ಅಪ್ಪಾಜಿ 15 ರ ವಯಸಿಗೆ ಸಮಸ್ತ ಜವಾಬ್ದಾರಿ ಹೆಗಲಿಗೇರಿಸಿಕೊಂಡು ನಿಭಾಯಿಸಿದ ರೀತಿ ಇಂದು ನಮಗೆಲ್ಲಾ ಅತೀವ ಹೆಮ್ಮೆ ದೊಡ್ಡ ಆದರ್ಶವಾಗಿ ಕಾಣುತ್ತದೆ.

ಚಿಕ್ಕಪ್ಪನ ಮಕ್ಕಳು ಇಂದು ಬಿಂಕದಿಂದ ಓಡಾಡುವುದು ನೋಡಿದಾಗೆಲ್ಲ, ಅಮ್ಮನ ಆಕ್ರೋಶ ಮುಗಿಲು ಮುಟ್ಟುತ್ತದೆ. ‘ಆವತ್ತು ನನಗೆ ತಿಳಿಯದಂತೆ ದುಡಿದದ್ದೆಲ್ಲಾ ಅವರಿಗಾಗಿ ಸುರಿದಿರಿ, ಇವತ್ತು ಅವರ ವರ್ತನೆ ನೋಡಿ… ನನ್ನ ಮಕ್ಕಳನ್ನು ಇನ್ನೂ ಹೆಚ್ಚು ಓದಿಸಬಹುದಿತ್ತು…’ ಇತ್ಯಾದಿ ರುಟೀನ್ ಡೈಲಾಗ್ ಗಳ ಚಂಡಮಾರುತ. ಅಮ್ಮನ ಇಷ್ಟೆಲ್ಲಾ ಕೊರೆತಗಳಿಗೆ ತಾನು ಮಾಡಿದ್ದು ಅತ್ಯಂತ ಸರಿ ಎಂಬ ಅಂತರಾಳದ ಆತ್ಮ ತೃಪ್ತಿ ಚಹರೆಯಲ್ಲಿ ಪ್ರಶಾಂತ ಕಳೆ ಹೆಚ್ಚಿಸುವ ಮೌನ ಉಕ್ಕಿಸುತ್ತದೆ.

ಎಷ್ಟೊಂದು ಸುಲಭವಿತ್ತು. ಅಪ್ಪ ಕೂಲಿ ಕೆಲಸ ಮಾಡಿ ಇಡೀ ಹಳ್ಳಿಗೆ ಎಸ್ ಎಸ್ ಎಲ್ ಸಿ ಪಾಸದ ಮೊದಲನೆಯವನಾದ. ಹದಿನೆಂಟರ ವಯಸಿಗೆ ತಕ್ಕಮಟ್ಟಿನ ಕೆಲಸ. ತನ್ನ ಪಾಡು ತಾನು ನೋಡಿಕೊಳ್ಳುವುದು ದುಸ್ತರವಿತ್ತೇ. ಪೇಟೆಯಲ್ಲಿ ಸೊಗಸಾದ ಬದುಕು ಬದುಕಬಹುದಿತ್ತು. ಹೌದು! ಹಾಗೆ ನೋಡಿಕೊಂಡಿದ್ದರೆ ಏನಾಗುತ್ತಿತ್ತು. ಹೆಚ್ಚೆಂದರೆ ಹಣಕಾಸಿನಲ್ಲಿ ಇನ್ನಷ್ಟು ಅನುಕೂಲವಾಗುತ್ತಿದ್ದಿರಬೇಕು.

ಅಪ್ಪಾಜಿಯನ್ನು ಅವರೆಲ್ಲಾ ಒಂದು ಕಾಲಕ್ಕೆ ದೊಡ್ಡಪ್ಪಾಜಿ ಎಂದೇ ಕರೆಯುತ್ತಿದ್ದರು. ಆ ಕರೆ ಎಷ್ಟು ಅನ್ವರ್ಥವಾಗಿತ್ತೆಂದರೆ, ತಂದೆಯಿಲ್ಲದ ಒಂದಿಡೀ ಮನೆತನ ಎತ್ತಿ ತೂಗಿಸಿದ ಅವರ ವ್ಯಕ್ತಿತ್ವ ದಿನಗಳೆದಂತೆ ಏರು ಎತ್ತರದಲ್ಲಿ ಕಾಣತೊಡಗಿತು.

ಆದರೆ ನಿಜ್ಕೂ ಹಾಗಾಗಲಿಲ್ಲ…!

ಬರುತ್ತಿದ್ದ ಸಂಬಳ ತೀರಾ ಕಡಿಮೆ. ತಲೆಮಾರಿನ ಆಸ್ತಿ ಅಂತ ಇದ್ದದು ಅತೀವ ಕಡಿಮೆ. ತಾನು ಬದುಕಲು ಹೆಣಗುತ್ತಿದ್ದ ದಿನಗಳಲ್ಲೇ ಹತ್ತಾರು ಜನರನ್ನು ಮೇಲೆತ್ತುವ ಅಪ್ಪಾಜಿಯ ಅಗಾಧ ಯೋಚನೆ ಇಂದು ಎಷ್ಟೊಂದಾಗಿ ಕಾಣುತ್ತದೆ. ಆತನ ಆಲದ ಮರದಂತ ನೆರಳಿನಾಸರೆಯಲ್ಲಿ ದಣಿವಾರಿಸಿಕೊಂಡವರೆಷ್ಟೋ…

ಅಮ್ಮ, ಅಮ್ಮನ ಅಣ್ಣ ಮತ್ತು ನಮ್ಮೆಲ್ಲರ ವಿರುದ್ಧ ಅವರ ಆತ್ಮಕ್ಕೆ ಸರಿ ಎನ್ನಿಸಿದ ಎಲ್ಲಾ ಜವಾಬ್ದಾರಿ ಅತ್ಯಂತ ಸಮರ್ಪಕವಾಗಿ ನಿಭಾಯಿಸಿದರು ಮತ್ತು ಹೀಗೆ ಎಲ್ಲಾ ವೈರುಧ್ಯಗಳ ನಡುವೆ ನಿಭಾಯಿಸಲು ಹೆಣಗುವಾಗ ಅವರ ಮನಸ್ಥಿತಿ ಹೇಗಿರಬೇಕು. ಸಮಾಧಾನ ಹೇಳಬೇಕಾದ ನಾವೆಲ್ಲಾ ವಿರುದ್ಧ ಬಳಗದಲ್ಲಿ ತಿವಿಯುತ್ತಿದ್ದೆವು. ಹಾಗಾದರೆ ಅವರು ಬರುತ್ತಿದ್ದ ತೀರಾ ಚಿಕ್ಕ ಆದಾಯದಲ್ಲಿ ಹತ್ತಾರು ಅಣ್ಣ ತಮ್ಮಂದಿರ ಓದು ಇತ್ಯಾದಿ ಸಂಭಾಳಿಸಿದ್ದು ಹೇಗೆ.

ಅಪ್ಪಾಜಿ ತನಗಿಂತ ಹತ್ತು ವರ್ಷ ಚಿಕ್ಕವರಿದ್ದ ಮಕ್ಕಳಂತಿದ್ದ ಚಿಕ್ಕಪ್ಪಂದಿರು ಹೊತ್ತಿನ ಊಟಕ್ಕಾಗಿ ಇತರರ ಹೊಲಗಳಲ್ಲಿ ಕೆಲಸ ಮಾಡಿ ಹೆಬ್ಬೆರಳು ಕಿತ್ತು ರಕ್ತ ಸೋರಿಕೊಳ್ಳುವುದನ್ನು ನೋಡಿ ಮಧ್ಯ ರಾತ್ರಿ ಎದ್ದು ತನ್ನ ಜವಾಬ್ದಾರಿ ನೆನೆಯುತ್ತಿದ್ದನಾ. ಮೊದಲ ಚಿಕ್ಕಪ್ಪ ಬೇಗ ಮದುವೆಯಾಗಿ ಮಕ್ಕಳಿಗೆ ಊಟಕ್ಕೆ ನೀಡಲಾರದೇ ಹೆಣಗುತ್ತಿದ್ದುದು ಬಾದಿಸಿತ್ತಾ. ನಮ್ಮಜ್ಜಿ ಅಪ್ಪನ ತಮ್ಮಂದಿರಿಗೆ ಬಡಿಸಲು ಇಲ್ಲದಾಗ ಒದ್ದಾಡಿದ್ದು ಅಪ್ಪನ ಕಣ್ರೆಪ್ಪೆ ನೋಯಿಸಿತ್ತಾ. ಅಪ್ಪನ ಅಕ್ಕ ತಂಗಿಯರ ಬಗ್ಗೆ ಯೋಚಿಸಿ ಅಜ್ಜಿ ದಂಗಾಗಿದ್ದು ಅಪ್ಪನ ಕರಳು ಕರೆದಿತ್ತಾ.

ಅಮ್ಮ ಇದ್ಯಾವುದೂ ನೋಡಿಲ್ಲ. ನಗರದ ಸೂಕ್ಷ್ಮತೆಯಲ್ಲಿ ಇವೆಲ್ಲಾ ಬಾದೆಯ ತೀವ್ರತೆ ಆಕೆಗೆ ತುಸುವಾದರೂ ಅರಿವು ಹೇಗೆ. ಇವೆಲ್ಲದರ ಮುಂದೆ ಆಕೆ ಆಡುವ ಯಾವ ಮಾತು ಅಪ್ಪನನ್ನು ಬಾದಿಸಲಿಲ್ಲ. ತನ್ನ ಜವಾಬ್ದಾರಿಯ ಮುಂದೆ ಎಲ್ಲಾ ಮಾತು ತಿವಿತಗಳು ಗೌಣವಾದವು. ಆತ ಜವಾಬ್ದಾರಿ ನಿಭಾಯಿಸುತ್ತಾ ಸಾಗಿದ್ದು, ಇಡೀ ಕುಟುಂಬವನ್ನು ಊರಿಗೆ ಊರೇ ತಿರುಗಿ ನೋಡುವಂತಾಯ್ತು. ಒಂದು ಮನೆತನವಾಯ್ತು. ಊರಿನ ಪ್ರಮುಖ ತೀರ್ಮಾನಗಳಲ್ಲಿ ಅಪ್ಪನ ಒಂದು ಪಾತ್ರ ಸಹಜವಾಯ್ತ.

ಇದು ಅಪ್ಪ ಜವಾಬ್ದಾರಿ ಹೊತ್ತದರ ಎಲ್ಲರನ್ನೂ ಎಳೆದುಕೊಂಡು ಸಾಗಿದ್ದಕ್ಕೆ ಮಾತ್ರ ಸಿಕ್ಕಂತದು.

ಇಂದು ತಾನು ಶ್ರಮವಿಟ್ಟು ಎತ್ತಿದವರು, ಅದರ ಪರಿವೆ ಇಲ್ಲದವರಂತೆ ಓಡಾಡುತ್ತಾರೆ. ಅಪ್ಪಾಜಿಗೆ ಅದರ ಬಗ್ಗೆ ಕೊಂಚ ಕೂಡ ಬೇಸರವಿಲ್ಲ. ಅದೆಲ್ಲಾ ತನ್ನ ಕರ್ತವ್ಯವಾಗಿತ್ತು ಎನ್ನುವ ಆಲೋಚನೆ ಅವರನ್ನು ಇನ್ನೂ ಮಾದರಿಯಾಗಿ ಕಾಣುವಂತೆ ಮಾಡುತ್ತದೆ.

ಸರಿ ಮಾಡುತ್ತಿದ್ದೇನೆ, ಎನ್ನುವ ಆತ್ಮದ ಅಂತರಾಳದ ಧೃಢತೆ ಇಷ್ಟೆಲ್ಲಾ ನಿಭಾಯಿಸುವ ಸಾಧ್ಯತೆಯ ಮೂಲ ಕಾರಣ ಎನ್ನುವ ಉತ್ತರ ಸ್ಪಷ್ಟ ಗೋಚರವಾಗುವುದು. ಅಮ್ಮನ ಎಲ್ಲಾ ರೋಷಗಳು ಅಪ್ಪನ ಕಿವಿಯವರೆಗೂ ತಾಕಲಾರವು, ಯಾಕೆಂದರೆ ಆತ ಸರಿಯಿದ್ದಾನೆ ಎನ್ನುವ ಸತ್ಯ ಮತ್ತು ನಾವು ಯೋಚಿಸಲೂ ಸಾಧ್ಯವಾಗದಂತದ್ದು ಮಾಡಿದ್ದಾನೆ ಎಂಬ ಸತ್ಯದ ಅರಿವು ನಮಗೆಲ್ಲಾ ಆಗಿದೆ. ಅರಿವಿಲ್ಲದೇ ಎಲ್ಲರೂ ಪಾರ್ಟಿ ಬದಲಿಸಿ ಅಪ್ಪನ ಸೈಡ್ ಸೇರಿದ್ದೇವೆ.

ಇದೆಲ್ಲದರ ನಡುವೆ

“ಇವಳು ಬಂದಳು ನೋಡಿ ಥೇಟ್ ಅಪ್ಪಾಜಿ ತರಾ ಇವಳ ಡ್ರಾಮಾ” ಅಂಥ ಎಲ್ಲಾ ಸೇರಿದಾಗ ರೇಗಿಸಿಕೊಳ್ಳುವಾಗ ಭಾಸವಾಗುವ ಚಂದದ feel…

ಅಪ್ಪಾಜಿಯನ್ನು ಕೊಟ್ಟದ್ದಕ್ಕೆ ದೈವಕ್ಕೆ ಋಣಿಯಾಗಿದ್ದೇನೆ.