ಈ ಪಾಂಡುರಾಜನೊಬ್ಬನ ಸಾವನ್ನು ವರ್ಣಿಸುವುದಕ್ಕೆ ಪಂಪ ತನ್ನ ಎರಡನಡೆಯ ಆಶ್ವಾಸದಲ್ಲಿ ಆರು ಪದ್ಯಗಳನ್ನು ಪ್ಲಾಟ್ ಆಗಿ ಬಳಸುತ್ತಾನೆ ಎಂದರೆ ಆಶ್ಚರ್ಯ ಅನಿಸದೆ ಇರದು. ಪ್ಲಾಟ್ ಕಳೆದುಕೊಳ್ಳುವ ಬದುಕಿನ ಚಿತ್ರ ರಚನೆಗೂ ಒಂದು ಪ್ಲಾಟ್ ನಿರ್ಮಿಸಿಕೊಡುವ ಶಕ್ತಿ ಪಂಪನನ್ನು ಗಂಭೀರವಾಗಿ ಗಮನಿಸುವಂತೆ ಮಾಡುತ್ತದೆ. ಉಳಿದೆಡೆಗಳಲ್ಲಿ ಅಂತಹಾ ಗಮನ ಹರಿಸದೆ ಬಂದಂ, ಸತ್ತಂ, ಪೋದಂ, ಅಸುವಂ ನೀಗಿದಂ, ಎಂದ ಪಂಪ ಇದನ್ನು ಹೇಳುವುದಕ್ಕೆ ಕಾರಣ ಏನು? ಏಕೆ ಆ ಎರಡು ವೈರುಧ್ಯ ಭಾವಗಳನ್ನು ತಂದನು? ಅದೂ ವಸಂತದ ಚಿಗುರಿನಲ್ಲೆ ಸಾವಿನ ಚಿಗುರನ್ನ ಕಾಣಿಸುವುದಕ್ಕೆ ಅಷ್ಟು ಆತುರಯೇಕೆ?
ಆರ್. ದಿಲೀಪ್ ಕುಮಾರ್ ಅಂಕಣ

 

(ಪಾಂಡುರಾಜನ ಮರಣ)

ಪಂಪನ ಕಾವ್ಯ ಶಕ್ತಿ ಇರುವುದೇ ಅವನ ಭಾಷೆಯಲ್ಲಿ. ಅವನ ಕಾವ್ಯ ಭಾಷೆಯ ಬಳಕೆಯಲ್ಲಿ. ಒಬ್ಬ ಅತ್ಯುತ್ತಮ ಕವಿ ತನ್ನ ಭಾಷೆಯ ಮೂಲಕ ಕಥಾವಸ್ತುವನ್ನು ಮೀರಿ ಎಲ್ಲಾ ಕಾಲದಲ್ಲಿಯೂ ಭಾವದ ರೂಪದಲ್ಲಿ ನಿಂತುಬಿಡುವನು ಅನ್ನುವುದಕ್ಕೆ ಪಂಪನ ಕಾವ್ಯಗಳೇ ಸಾಕ್ಷಿ. ಕಾವ್ಯವೊಂದರಲ್ಲಿ ಕಡೆಯುವ ಸೂಕ್ಷ್ಮ ಕಲಾಕೃತಿಯ ಅಂಶದಿಂದಲೇ ಮುಖ್ಯವಾಗುವುದರ ಜೊತಗೇ ತನ್ನ ಕಾಲವನ್ನು ಕಂಡಿರಿಸುವ ಸೂಕ್ಷ್ಮ ಕ್ರಮದಿಂದ ಪಂಪ ಮುಖ್ಯನಾಗುತ್ತಾನೆ. ಹಾಗೆ ನೋಡಿದರೆ ಮಹಾಭಾರತದ ಅರ್ಜುನನೊಂದಿಗೆ ಅರಿಕೇಸರಿಯನ್ನು ಈ ‘ತಗುಳ್ಚುವ’ ಕಾವ್ಯ ತಂತ್ರದಿಂದ ಇದು ಸಾಧ್ಯವೂ ಸಾಧುವೂ ಆಗಿದೆ ಅನಿಸುತ್ತದೆ.

ಸಾಧುವೂ ಅನ್ನುವಾಗಲೂ ಅವನ ಮನೋಧರ್ಮವನ್ನು ಒಪ್ಪುವುದಲ್ಲದೆ ಬೇರೆ ಮಾರ್ಗ ನಮಗಿಲ್ಲ. ಕೆಲವೊಮ್ಮೆಯಂತೂ ಈ ಸಾಧ್ಯತೆ ಬಹಳ ಅತಿರೇಕಕ್ಕೆ ಮುಟ್ಟಿ ನಿಲ್ಲುತ್ತದೆ. ಉದಾಹರಣೆಗೆ ಮೊದಲನೆಯ ಆಶ್ವಾಸದ ಆದಿ ವಂಶಾವತಾರದಲ್ಲಿನ ಅರ್ಜುನ ಜನನ ಸಮಯವನ್ನು ಹೇಳುವ ಭಾಗವನ್ನು ಹಾಗೂ ಅರ್ಜುನನ ದಶನಾಮಾವಳಿಯನ್ನು ಹೇಳುವಾಗಿನ ಭಾಗವನ್ನೊ, ಅದರ ಭಾವವನ್ನೊಮ್ಮೆ ಗಮನಿಸಿ ನೋಡಿ. ಅಲ್ಲೆಲ್ಲಾ ಅರ್ಜುನನ ಹೆಸರು ಒಂದು ನೆಪವಾಗಿ ಅರಿಕೇಸರಿ ಮುಖ್ಯನಾಗುತ್ತಾ ಕಥೆ ಬೆಳೆಯುತ್ತದೆ. ಅದು ಅರ್ಜುನನ ದಶನಾಮಾವಳಿ ಅಲ್ಲ, ಅರಿಕೇಸರಿಯ ಶತನಾಮಾವಳಿಗೆ ಸಮ ಅನಿಸದೆ ಇರಲಾರದು.

ಪುರಾಣದ ಕಥೆಯು ಸದ್ಯದ ಸ್ಥಿತಿ ಸಿಕ್ಕು ಕಥೆ ಬೆಳೆಯುತ್ತಲೇ ಅರ್ಜುನನೂ ಗುಣಾರ್ಣವನೂ ಬೆಳೆದು, ಪಂಪ ಕಾಲದ ಜೊತೆ ಜೊತೆಗೇ ನಡೆದು ಕಾಲಾತೀತವಾಗಿ ಬೆಳೆಯುತ್ತಿದ್ದಾನೆ. ಇಲ್ಲೆಲ್ಲಾ ಭಾಷೆಯ ಬಳಕೆ ಹಾಗೆ ಯಶಸ್ವಿ ಕಾರ್ಯ ಮಾಡಿದೆ. ಪಂಪನ ಕಾವ್ಯದಲ್ಲಿನ ಒಂದು ಭಾಗದಲ್ಲಿನ ಶೃಂಗಾರ ರಸದ ಜೊತೆ ಜೊತೆಯಾಗೇ ಆಗುವ ಮತ್ತೊಂದು ಭಾವದ ಉದಯವನ್ನು ನೋಡುವುದು ಒಳಿತು ಅನಿಸುತ್ತದೆ.

ಮೊದಲನೆಯ ಲೇಖನದಲ್ಲಿ ಮೀಮಾಂಸಕರು ಹೇಳುವಂತೆ ವರ್ಣಿತವಾಗುತ್ತಿರುವ ಒಂದು ಭಾವದ, ರಸದ ಜೊತೆ ಜೊತೆಗೆ ಧುತ್ತೆಂದು ಮತ್ತೊಂದು ಹೊಸ ಭಾವ ಉಂಟಾಗುವುದಕ್ಕೆ ಭಾವೋದಯ ಅನ್ನುತ್ತಾರೆ. ಈ ಭಾವೋದಯ ಎಲ್ಲಿಯೂ ಕಥಾ ಸಂವಿಧಾನಕ್ಕೆ, ಕಥಾ ಬೆಳವಣಿಗೆಗೆ, ಕಾವ್ಯ ಸಮಯಕ್ಕೆ ಹೊಂದಿಲ್ಲದೆ ಬಂದಿದೆ ಅನಿಸದೆ ಸಹಜವಾಗಿ ಸಂಬಂಧ ಸಾಧಿಸಿ ಬರುವಂತೆ ಮಾಡುವುದು ಉತ್ತಮ ಕವಿಯಿಂದ ಮಾತ್ರ ಸಾಧ್ಯ. ಹಾಗೆ ಹೊಂದಿಕೆಯಾಗಿ ಪರಿಸಮಾಪ್ತಿ ಕಾಣುವುದು ಭಾವಶಾಂತಿಯಾದರೆ ಹೊಂದಿಕೆ ಆಗದೆ ಒಡೆದು ನಿಂತಂತೆ ಕಂಡರೆ ಅದು ರಸಾಭಾಸವಾಗಿ ನಿಲ್ಲುತ್ತದೆ.

ಕಥೆಯನ್ನು ಸಂಕ್ಷೇಪಿಸಿ ಹೇಳುವಾಗ ಇಂತಹಾ ಚಮತ್ಕಾರಗಳು ಸಾಮಾನ್ಯವಾದರೂ ಕಾವ್ಯದ ಓದಿನಲ್ಲಿ ಇದು ಬಹಳ ಮುಖ್ಯ ಅನಿಸುತ್ತದೆ. ಪಂಪನಲ್ಲಿ ಈ ಭಾಗವು ಭಾವೋದಯ ಅನ್ನುವುದಕ್ಕೆ ಉತ್ತಮ ಉದಾಹರಣೆಯಾಗಿ ನಿಲ್ಲುತ್ತದೆ. ಇಲ್ಲಿ ರಸದಲ್ಲಿಯೂ ಯಶಸ್ವಿಯಾಗಿದ್ದು ಶೃಂಗಾರದಿಂದ ಕರುಣದ ಅಂಶ ಸೇರಿ ವಿಪ್ರಲಂಭ ಶೃಂಗಾರವಾಗಿಬಿಡತ್ತದೆ.

ಪಾಂಡು ಮಹಾರಾಜನ ಕಥೆ ಎಲ್ಲರಿಗೂ ತಿಳಿದಿರುವುದೇ ಆಗಿದೆ. ಅಂಬಾಲಿಕೆಯನ್ನ ವಿವಾಹವಾದ ವಿಚಿತ್ರವೀರ್ಯನು ಕೆಲವು ಕಾಲಾನಂತರ ‘ಅತ್ಮಜ ವಿಗತ ಜೀವಿಯಾಗಿ ಪರಲೋಕಪ್ರಾಪ್ತವಾದೊಡೆ’ ಅವರಿಬ್ಬರಿಗೂ ಹಿಂದೆಯೇ ಮತ್ಸ್ಯಗಂಧಿಯೊಡನೆ ಸೇರಿ ಪರಾಶರರಿಂದ ವ್ಯಾಸನು ಜನಿಸಿ, ಮತ್ಸ್ಯಗಂಧಿಯು ಯೋಜನಗಂಧಿಯಾದ ಕಥೆ. ಹುಟ್ಟುತ್ತಲೇ ಹದಿನಾರು ವರ್ಷದ ಬಾಲಕ ವ್ಯಾಸ ತಾಯಿಯೊಡನೆ ಮಾತಾಡಿ, ಅವಳಿಗೇ ವರವಕೊಟ್ಟು ತಪಸ್ಸಿಗೆ ನಡೆದವನು! ಅವನ ತಾಯಿ ಮಕ್ಕಳಿಲ್ಲದ ವಂಶ ನಾಶವಾಗುವುದೆಂಬ ಕೊರಗಿನಲಿ ‘ಹಿರಣ್ಯಗರ್ಭ ಬ್ರಹ್ಮರಿಂ ತಗುಳ್ದು ಅವ್ಯವಚ್ಛಿನ್ನಮಾಗಿ ಬಂದ ಸೋಮವಂಶದೊಳ್ ಕುಲಸಂತತಿಗಳಿಲ್ಲದೆ ಎಡೆವರಿದು ಕಿಡುವಂತಾಗಿರ್ದುದು’ ಎಂದು ಒರಲಿ ಕರೆದುದನು ಕೇಳಿ, ಹಿಮಾಲಯದಿಂದ ಬಂದು ತಾಯ ವಚನಕೆ ಮಣಿದು ವ್ಯಾಸರಿಂದ ಅಂಬಾಲಿಕೆಗೆ ಹುಟ್ಟಿದ ಮಗ ಪಾಂಡು” ಅಂಬಾಲೆ ಮದ್ರೂಪಮಂ ಕಂಡು ಮೊಗಮಂ ಪಾಂಡುರಂ ಮಾಡಿದಳಪ್ಪುದರಿಂ ಆಕೆಯ ಮಗಂ ಪಾಂಡುವೆಂಬನ್ ಪಾಂಡುರೋಗ ಸಂಗತನಾಗಿಯುಮ್ ಅನೇಕ ಭದ್ರ ಲಕ್ಷಣಲಕ್ಷಿತನುಮ್ ಅತ್ಯಂತ ಪ್ರತಾಪಿಯುಂ ಅಕ್ಕುಂ” ಎಂದು ಹೇಳಿ ಹೊರಟವನು ವ್ಯಾಸ. ಅದರ ಫಲವಾಗಿಯೇ ಹುಟ್ಟುವಾಗಲೇ ಪಾಂಡುರೋಗಕ್ಕೆ ತುತ್ತಾಗಿ ಪಾಂಡುವೆಂದೇ ಪ್ರಖ್ಯಾತನಾದವನು.

ಪಾಂಡು ಒಮ್ಮೆ “ಅೞ್ತಿಯಿಂ” ಬೇಟೆಯಾಡಲು ಹೋಗಿದ್ದಾಗ ಕಿಂದಮನೆಂಬ ಮುನಿಯು ತಾನೂ ತನ್ನ ನಲ್ಲೆಯೂ ಮೃಗವಾಗಿ “ಮರುಳ್ದು ಕೂಡುವ” ಸಮಯಕ್ಕೆ ಅದನ್ನು ಮೃಗಗಳೆಂದೇ ಭಾವಿಸಿ ತನ್ನ ಬಾಣ ಹೂಡಿ “ಮಾರಿಯಂ ತಂದಂತೆ” ತನ್ನ ಅವಸಾನವನ್ನು ತಂದುಕೊಂಡವನು. ಅ ಕಿಂದಮನೋ ಸಾಯುವಾಗ ನನ್ನನ್ನು ಹೇಗೆ ನಲ್ಲೆಯೊಡನೆ ಕೂಡುವಾಗ ಕೊಡೆದು ಕೊಂದೆಯೋ ಅಂತೆಯೇ ನೀನೂ ನಲ್ಲೆಯೊಡನೆ ಕೂಡಿದ ತಕ್ಷಣ ಸಾಯುವೆ ಅಂದು ಶಾಪ ನೀಡಿ ಪ್ರಾಣ ನೀಗಿದನು. ಅಲ್ಲಿನ ಸಂದರ್ಭದ ಶಾಪಯುಕ್ತ ಪದ್ಯದ ಸಾಲುಗಳನ್ನು ನೋಡಿ

ಸನ್ನತದಿಂ ರತಕ್ಕೆ ಎಳಸಿ
ನಲ್ಲನೊಳ್ ಓತು ಒಡಗೂಡಿದ ಎನ್ನನ್
ಇಂತು ಅನ್ನೆಯದೆ ಎಚ್ಚುದರ್ಕೆ
ಪೆಱತಿಲ್ಲದು ದಂಡಮ್
‘ಒರೞ್ದು ನಲ್ಲಳೊಳ್
ನೀ ನಡೆ ನೋಡೆಯುಂ
ಬಯಸಿ ಕೂಡಿಯುಂ
ಆಗಡೆ ಸಾವೆ ‘ ಯಾಗಿ ಪೋಗಿನ್ನು ಎನೆ
ರೌದ್ರ ಶಾಪ ಪರಿತಾಪ ವಿಳಾಪದೊಳಾ ಮಹೀಶನುಂ ( ೧.೧೧೨ )

ಎಂದ ತಕ್ಷಣ ಈ ಅಘಟಿನ ಘಟಿತದಿಂದ ಬೇಸರವಾಗಿ ಶತಶೃಂಗಕ್ಕೆ ವನವಾಸಕ್ಕೆ ಹೋದವನು.

ಇದು ಕಾವ್ಯ ಸಂದರ್ಭದ ವಿವರವಾದರೆ, ಮುಂದೆ ನಡೆಯುವ ಕ್ರಿಯೆಯು ಇದಕ್ಕೆ ಪೂರಕವಾದುದು. ಅದೂ ಶತಶೃಂಗದಂತಹಾ ಪರ್ವತದಲ್ಲಿ. ಪಾಂಡುವಿಗೆ ಈ ಶಾಪವಿದ್ದುದ್ದರಿಂದ ದೂರ್ವಾಸರು ಕೊಟ್ಟ ವರಗಳಿಂದ ಕುಂತಿ ಮೂರು ಮಕ್ಕಳನ್ನು, ಮಾದ್ರಿ ಇಬ್ಬರು ಯಮಳರನ್ನು ಹೆತ್ತಿದ್ದು. ಆ ಐದು ಜನ ಮಕ್ಕಳೂ ಬೆಳೆದು ದೊಡ್ಡವರಾದುದು ಅಲ್ಲಿಯೇ.

ಒಂದಾನೊಂದು ದಿನ ಮಾಮೂಲಿಯಂತೆ ಬರದೆ ಸಾವನ್ನು ಹೊತ್ತು ಪಾಂಡುವಿಗಾಗಿ ವಸಂತ ಮಾಸ ಬಂದ. ಇಲ್ಲಿನ ಭಾಗ ಬಹಳ ಮುಖ್ಯವಾದ್ದು. ಕವಿಯೊಬ್ಬನಿಗೆ ಕಥೆಯ ಪರಿಚಯ ವ್ಯಾಸರ ಮೂಲಕ ಮೊದಲೇ ಆಗಿದೆ. ಅದನ್ನು ಸಂಕ್ಷೇಪಿಸುವಾಗ ಅವನು ವಹಿಸುವ ಜಾಗರೂಕತೆ, ಸಂಕ್ಷೇಪಿಸುವ ಶಕ್ತಿ, ಮತ್ತು ತನ್ನ ಕಲಾತ್ಮಕತೆಯಿಂದ ಸಾವನ್ನು ವರ್ಣಿಸುತ್ತಲೇ ದೊಡ್ಡವನಾಗಿಬಿಡತ್ತಾನೆ. (ಕನ್ನಡದಲ್ಲಿ ಸಾವನ್ನು ಅದ್ಭುತವಾಗಿ ವರ್ಣಿಸಿ ದೊಡ್ಡವರಾದವರು ಪಂಪ, ರನ್ನ, ಕುಮಾರವ್ಯಾಸ, ರಾಘವಾಂಕರು) ಈ ಕಥೆಯ ನಿರ್ವಹಣೆಗೆ ಕವಿ ವಹಿಸುವ ಜಾಗರೂಕತೆ, ವರ್ಣಿಸುವ ಸೂಕ್ಷ್ಮತೆಗಳು ವಸಂತ ಹೊತ್ತು ಬಂದು ಕಾಡಿನೊಡನೆ ಕುಂತಿ ಮಾದ್ರಿಯರಿಗೆ ಬಳುವಳಿಯಾಗಿ ಕೊಟ್ಟ ಸಾವಿನ ಜಾಲವಾಗಿ ನಿಲ್ಲಿಸುತ್ತಾನೆ.

ಈ ಪಾಂಡುರಾಜನೊಬ್ಬನ ಸಾವನ್ನು ವರ್ಣಿಸುವುದಕ್ಕೆ ಪಂಪ ತನ್ನ ಎರಡನಡೆಯ ಆಶ್ವಾಸದಲ್ಲಿ ಆರು ಪದ್ಯಗಳನ್ನು ಪ್ಲಾಟ್ ಆಗಿ ಬಳಸುತ್ತಾನೆ ಎಂದರೆ ಆಶ್ಚರ್ಯ ಅನಿಸದೆ ಇರದು. ಪ್ಲಾಟ್ ಕಳೆದುಕೊಳ್ಳುವ ಬದುಕಿನ ಚಿತ್ರ ರಚನೆಗೂ ಒಂದು ಪ್ಲಾಟ್ ನಿರ್ಮಿಸಿಕೊಡುವ ಶಕ್ತಿ ಪಂಪನನ್ನು ಗಂಭೀರವಾಗಿ ಗಮನಿಸುವಂತೆ ಮಾಡುತ್ತದೆ. ಉಳಿದೆಡೆಗಳಲ್ಲಿ ಅಂತಹಾ ಗಮನ ಹರಿಸದೆ ಬಂದಂ, ಸತ್ತಂ, ಪೋದಂ, ಅಸುವಂ ನೀಗಿದಂ, ಎಂದ ಪಂಪ ಇದನ್ನು ಹೇಳುವುದಕ್ಕೆ ಕಾರಣ ಏನು? ಏಕೆ ಆ ಎರಡು ವೈರುಧ್ಯ ಭಾವಗಳನ್ನು ತಂದನು? ಅದೂ ವಸಂತದ ಚಿಗುರಿನಲ್ಲೆ ಸಾವಿನ ಚಿಗುರನ್ನ ಕಾಣಿಸುವುದಕ್ಕೆ ಅಷ್ಟು ಆತುರಯೇಕೆ? ಅನ್ನುವ ಪ್ರಶ್ನೆ ಕಾಡದೆ ಇರದು. ಇವುಗಳಿಗಿಂತ ಮುಂಚೆ ಒಂದೆರಡು ಪದ್ಯಭಾಗಗಳನ್ನು ನೋಡುವುದು ಉತ್ತಮ. “ವಸಂತ ಬಂದ ಋತುಗಳ ರಾಜ ತಾ ಬಂದ” ಅನ್ನುವುದಷ್ಟೇ ಅಲ್ಲದೇ ಸಾವನು ತಂದ ಅನ್ನುವುದೂ ಇಲ್ಲಿ ಮುಖ್ಯವಾಗುತ್ತದೆ.

ವಸಂತದ ವರ್ಣನೆಯ ಭಾಗದ ಪದ್ಯಗಳನು ನೋಡಿ

ಅಲರ್ದ ಅದಿರ್ಮುತ್ತೆ
ಪೂತ ಪೊಸ ಮಲ್ಲಿಗೆ
ಕಂಪನ್ ಅವುಂಕುತಿರ್ಪ ತಂಬೆಲರ್
ಅವನಿಂ ಗೆಲಲ್ ಮೊರೆವ ತುಂಬಿ
ಗಳಧ್ವನಿಯಿಂ ಕುಕಿಲ್ವ ಕೋಗಿಲೆ
ನೆಮೆದೋರಿ ನುಣ್ಪೆಸೆವ ಮಾಮರನ್
ಒರ್ಮೊದಲಲ್ಲದೆ ಉಣ್ಮುವ ಉಯ್ಯಲ ಪೊಸಗಾವರಂ
ಪುಗಿಲೊಳ್ ಏನೆಸೆದಿತ್ತೋ ಬಸಂತ ಮಾಸದ ( ೨.೧೨ )

ವಸಂತನ ಆಗಮನಕ್ಕೆ ಗುಡಿಕಟ್ಟಿದಂತಹಾ ಬೆಳೆದು ನಿಂತ ಅಶೋಕೆಯ ಮರಗಳು, ಆತನ ಬರವನ್ನ ಸೂಚಿಸುವ ಲತೆಗಳು, ಬದ್ದವಣ ಬಾಜಿಪಂತಹಾ ದುಂಬಿಗಳು ಹೀಗೆ ಎಲ್ಲವೂ ಬಂದಿತ್ತು ಬಸಂತನ ಬರುವಿಕೆಯ ಸೂಚಿಸಿ.

ವರ್ಣಿತವಾಗುತ್ತಿರುವ ಒಂದು ಭಾವದ, ರಸದ ಜೊತೆ ಜೊತೆಗೆ ಧುತ್ತೆಂದು ಮತ್ತೊಂದು ಹೊಸ ಭಾವ ಉಂಟಾಗುವುದಕ್ಕೆ ಭಾವೋದಯ ಅನ್ನುತ್ತಾರೆ. ಈ ಭಾವೋದಯ ಎಲ್ಲಿಯೂ ಕಥಾ ಸಂವಿಧಾನಕ್ಕೆ, ಕಥಾ ಬೆಳವಣಿಗೆಗೆ, ಕಾವ್ಯ ಸಮಯಕ್ಕೆ ಹೊಂದಿಲ್ಲದೆ ಬಂದಿದೆ ಅನಿಸದೆ ಸಹಜವಾಗಿ ಸಂಬಂಧ ಸಾಧಿಸಿ ಬರುವಂತೆ ಮಾಡುವುದು ಉತ್ತಮ ಕವಿಯಿಂದ ಮಾತ್ರ ಸಾಧ್ಯ.

ವಸಂತನ ಅನುಸರಿಸಿ ಬರುತ್ತಿರವ ಮನ್ಮಥನು ತನ್ನ ಬಗೆಗೆ ಮಾತಾಡಿಕೊಳ್ಳುವಂತಹಾ ಒಂದು ಪದ್ಯ ಈ ಭಾಗದಲ್ಲಿದೆ. ಕೊಗಿಲೆಯ ಕೊರಳ ನಾದ ಯಾರಿಗೆ ತಾನೆ ಹಿಡಿಸದು? ಅಂತಹಾ ಕೋಗಿಲೆ ಭಯದಿಂದ ಮನ್ಮಥನ ಬರುವನ್ನಹ ಜಗಕ್ಕೆ ಸಾರಿ ಹೇಳುತ್ತಿದೆ ಅನ್ನುವ ಚಿತ್ರ

ಬಿರಯಿಯ ಮಿೞ್ತುವೆಂ
ಮಿದಿದೊಡಲ್ಲದೆ ಅಣಂ ಮುಳಿಸಾರದು ಎಂದು
ಪಲ್ ಮೊರೆದಪನಿಲ್ಲಿ ಮನ್ಮಥಂ
ಇದಂ ಪುಗಲಿಂ ಗಡಿಮ್ ಎಂದು
ಬೇಟೆಕಾಱನ್ ಇರದೋಱಿ ಸಾಱಿ ಜಡಿವಂತೆ ಎಸೆಗುಂ
ಸಹಕಾರ ಕೋಮಳಾಂಕುರ ಪರಿತುಷ್ಟ ಪುಷ್ಟ ಪರಪುಷ್ಟ ಗಳಧ್ವನಿ
ನಂದನಂಗಳೊಳ್ ( ೨.೧೩ )

ಇದು ಅಸಾಮಾನ್ಯ ಅನಿಸದೆ ಇರದು. ಇದಾದ ನಂತರದ ಚಿತ್ರ ಒಂದು ವಸಂತಮಾಸ ಆನೆಯ ಹಾಗೆ ಅನ್ನುವಾಗ ಅದರಲ್ಲಿನ ಗಂಭೀರತೆ, ಅದರ ಬಲ, ಅದರ ಪ್ರಭಾವ ಎಲ್ಲವನ್ನೂ ಗಮನಿಸಿ ಕೊಡುವ ಮುಂದಿನ ಚಿತ್ರ ಮನೋಹರವಾದುದು. ಅಲ್ಲಿನ ಪ್ರತಿಯೊಂದನ್ನೂ ಗಮನಿಸಿದಾಗ ಅದು ಎಷ್ಟು ಅದ್ಭುತವೆಂದು ತಿಳಿಯುತ್ತದೆ.

ಪೋಗದೆ ಪಾಡುತಿರ್ಪಳಿಯೆ ಬೃಂಹಿತಮಾಗಿರೆ
ಚಂದ್ರಕಾಂತಿ ಕಾಯ್ಪಾಗಿರೆ
ಬೀಸುವೊಂದೆಲರೆ ಬೀಸುವುದಾಗಿರೆ
ಕಾಯ್ಗಳಿಂದಂಮಿಂ ಬಾಗಿರೆ ಸೋರ್ವ ಸೋನೆ
ಮದಮಾಗಿರೆ
ಮಾವಿನ ಬಂದ ಕೋಡೆ ಕೋಡಾಗಿರೆ
ಕೋಡುಗೊಂಡು ಪರಿದಿತ್ತು ವಸಂತಗಜಂ
ವಿಯೋಗಿಯಂ ( ೨.೧೫ )

ಆ ಶತಶೃಂಗ ಪರ್ವತದ ವನವನ್ನು ಬಿಟ್ಟು ಹೋಗದೆ ಅಲ್ಲಿಯೇ ಹಾರಾಡುತ್ತಿರುವ ದುಂಬಿಗಳ ಸದ್ದೇ ಆನೆಯ ಘೀಂಕಾರದಂತೆ ಇರುವಾಗ, ಬೆಳದಿಂಗಳೇ ಅದರ ಕೋಪವಾಹಿರುವಾಗ, ಬೀಸುವಗಾಳಿಯೇ ಬೀಸಣಿಗೆಯಾಗಿರುವಾಗ, ಕಾಯಿಗಳಿಂದ ಸೊಗಸಾಗಿ ಸೋರುತಿರುವ ಸೋನೆಯೇ ಮದೋದಕವಾಗಿರುವಾಗ, ಮಾವಿನಮರದಲ್ಲಿ ಹುಟ್ಟಿಬಂದ ಕೊಂಬೆಗಳೇ ಅದರ ಕೊಂಬಾಗಿರುವಾಗ ವಸಂತನೆಂಬ ಆನೆಯು ತನ್ನ ಕೊಂಬಿನಿಂದ ತಿವಿದು ಓಡಿತು.

ಇಲ್ಲಿನ ‘ಪರಿದಿತ್ತು’ ಅನ್ನುವ ಪದವನ್ನು ಗಮನಿಸಿ ಅದು ಓಡಿತು ಅನ್ನುವ ಅರ್ಥವನ್ನು ಕೊಡುವ ಹಾಗೇ ಹರಿಯಿತು ಅನ್ನುವ ಅರ್ಥವನ್ನು ಕೊಡುತ್ತಿದೆ. ಅದರಂತೆ ಕೊನೆಯ ಪದವಾದ ‘ವಿಯೋಗಿಯಂ’ ಅನ್ನುವುದು ವಿರಹಿ, ಅಗಮಿದವನು ಅನ್ನುವುದನ್ನೆಲ್ಲವನ್ನು ತಿಳಿಸುತ್ತದೆ. ಪಾಂಡುವಿನ ಸಂದರ್ಭಕ್ಕದು “ವಿಚಿತ್ರ ಯೋಗಿ ” ಅನ್ನುವುದನ್ನು ತಿಳಿಸುತ್ತಿದೆ. ಆ ಶಾಪದಿಂದ ಪಂಪ ಹೇಳುತೆ ಅವನು ವಿಯೋಗಿಯೇ ಸರಿ ಅನಿಸಿಬಿಡುತ್ತದೆ. ಪಂಪನಿಗೆ ಹೀಗೆ ಮತ್ತೊಂದು ಅರ್ಥವನ್ನು ಒಂದು ಪದದಲ್ಲಿ ಕಟ್ಟಿಕೊಡುವ ಶಕ್ತಿಯಿರುವುದೇ ಅವನ ದೊಡ್ಡತನಕ್ಕೆ ಕಾರಣ ಅನಿಸಿಬಿಡುತ್ತದೆ. ಇಂದಿಗೆ ಅತೀ ಹೆಚ್ಚು ಬಳಸುವ “ಹೊಸ ನುಡಿಗಟ್ಟು” ಅನ್ನುವುದಕ್ಕೆ ಮೊದಲಿಗೆ ಈತ. ನವಪದ ನಿರ್ಮಾಣ ಶಕ್ತಿ ಕೌಶಲಿ ಅನಿಸಿಬಿಡುತ್ತದೆ.

ಹೀಗೆ ಆನೆಯಂತೆ ಬಂದ ವಸಂತಮಾಸ ತನ್ನೆಲ್ಲಾ ಶಕ್ತಿಯನ್ನು ತೋರಿ ಕೊಂದುದು ಒಬ್ಬ ರಾಜನನ್ನು, ಶಾಪಕ್ಕೆ ಗುರಿಯಾಗಿ ಅಕಾಲಿಕ ವಿಯೋಗಿಯಾದ ಪಾಂಡುವನ್ನು ಅನ್ನುವಾಗ ಪಂಪ ಓದುಗರನ್ನು ಕಾವ್ಯದ ಸುತ್ತಣ ಪರಿಸರದ ಪ್ರಭಾವದಲ್ಲಿನ ಮನುಜನ ಭಾವ ಉದ್ದೀಪನದ ಕಡೆಗೆ ಮುಖಮಾಡಿಸಿ, ಆ ನಂತರ ನೇರವಾಗಿ ಅವನ ಬಳಿಗೆ ಕರೆತರುತ್ತಾನೆ.

ನೇರವಾಗಿ “ತಾಪಸಾಶ್ರಮದಿಂ ಪೊಱಮಟ್ಟು ಉಂತೆ ತೊೞಲ್ವ ಪಾಂಡುರಾಜಂ ಕಂಡು” ಬರುತ್ತಿರುವಾಗ ಅವನು ಮಾದ್ರಿಯನ್ನು ಕಂಡ, ಅವಳೋ

ಮಿಳಿರ್ವ ಕುರುಳ್ಗಳೊಳ್ ತೊಡರ್ದು
ದೇಸಿಯನಾವಗಮೀವ ಚೆನ್ನ ಪೊಗಳನವನ್
ಒಯ್ಯನೋಸರಿಸುತಂ
ವದನಾಬ್ಜದ ಕಂಪನ್ ಆಳ್ದುಣಲ್ ಬಳಸುವ ತುಂಬಿಯಂ
ಪಡಿದು ನೆಯ್ದಿಲೊಳ್ ಒಯ್ಯನೆ ಸೋವುತಂ
ಬೆಡಂಗೊಳಕೊಳೆ
ಸೊರ್ಕಿದಂಗಜ ಮತಂಗಗಜದಂತಿರೆ ಬರ್ಪ ಮಾದ್ರಿಯಂ ( ೨.೧೭ )

ಮದನನೆಂಬ ಆನೆಯೇ ಒಂದು ರೂಪತಾಳೆ ತನ್ನೆದುರು ಬಂದು ನಿಂತಂತೆ ಮಾದ್ರಿಯು ಅವನ ಕಣ್ಣ ಮುಂದೆ ಕಂಡಳು. ಕಂಡೊಡನೆಯೇ ಅವನ ಸುತ್ತಲ ಪರಿಸರ, ಆ ವಸಂತ, ಆ ಆನೆ, ಆ ಮನ್ಮಥ, ಅವನ ಬಾಣ ಎಲ್ಲವೂ ಇವನೆಡೆಗೆ ನೆಟ್ಟನೆ ಬಂದಂತೆ ಬಂದು ತಾಗಿದ ತಕ್ಷಣ ಹಿಂದೆ ಕಿಂಧಮ ಕೊಟ್ಟ ಶಾಪವೆಲ್ಲವನೂ ಮರೆತು ಅವಳನ್ನು “ಮಿೞ್ತುದೇವತೆಯನ್ ಅೞ್ಕಱಳುರ್ಕೆಯಿನಪ್ಪುವಂತೆವೋಲ್” (ಮೃತ್ಯು ದೇವತೆಯನ್ನು ಅತಿಶಯವಾದ ಪ್ರೀತಿಯಿಂದ ಅಪ್ಪಿದ ಹಾಗೆ) ಹಿಡಿದ.

ಪಾಂಡು ಮಾದ್ರಿಯನ್ನು ಮೇಲಿನ ಎಲ್ಲಾ ಪ್ರಭಾವಗಳಿಗೆ ಸಿಕ್ಕು ಬಿಡಿಸಿಕೊಳಲಾರದೆ ಅವಳನ್ನು ಮುಟ್ಟಿ ಹಿಡಿದ ತಕ್ಷಣ ಅಲ್ಲಿನ ರಮ್ಯ ಪರಿಸರ, ಆನೆಯಂತೆ ಬಂದ ವಸಂತ, ವನದ ಚಲುವು, ಅ ಮನ್ಮಥ, ಆ ದುಂಬಿ, ಆ ಕೋಗಿಲೆ, ಈ ಪಾಂಡು ಈ ಮಾದ್ರಿಗೆ ಎಲ್ಲವೂ ಮರೆಯಾಗಿ “ಅಂತು ಅಪ್ಪುವುದುಂ ವಿಷಮ ವಿಷವಲ್ಲಿಯನಪ್ಪಿದಂತೆ ತಳ್ತ ನಲ್ಲಳ ಮೃಣಾಳ ಕೋಮಲ ಬಾಹು ಪಾಶಗಳೇ ಯಮಪಾಶವಾಗಿ” ಸಾವು ಕಣ್ಣೆದುರೆ ಬಂದು ನಿಂತಿತು.

ಬಿಗಿದಮರ್ದಿರ್ದ ತೋಳ್ ಸಡಿಲೆ
ಜೋಲೆ ಮೊಗಂ
ಮೊಗದಿಂದಮ್
ಒಯ್ಯೊಗೊಯ್ಯೊಗೆ ನಗೆಗಣ್ಗಳಾಲಿ ಮಗುೞ್ದಂತಿರೆ ಮುಚ್ಚಿರೆ
ಸುಯ್ಯಡಂಗೆ
ಮೆಲ್ಲಗೆ ಮಱುಸಂದಿದಂದದೊಳೆ ಜೋಲ್ದು
ನಿಜೇಶನನ್
ಆ ಲತಾಂಗಿ ತೊಟ್ಟನೆ ಕೊಳೆ ನೋಡೆ
ಕೆಟ್ಟೆನ್ , ಇನಿಯಂ ಮಱುಸಂದಿದನೋ ಬೞಲ್ದನೋ ( ೨.೧೯ )

ವಚನ – ಎಂದು ಪರಿಕಿಸಿ ನೋಡಿ, ಪಱೆಪಟ್ಟಸುಯ್ಯಮಂ, ಜೋಲ್ದು ಕೋಡುವ ಮಯ್ಯುಮಂ ಕಂಡು ಪರಲೋಕ ಪ್ರಾಪ್ತಮಾದುದನ್ ಅಱಿದು

ಪಂಪ ತನ್ನ ಕಾವ್ಯದಲ್ಲಿ ಒಂದು ಭಾವವನ್ನು ತರುವಾಗ ವಹಿಸುವ ಜಾಗರೂಕತೆ, ಕಣ್ಣೆದುರು ನಡೆದಂತೆ ಕಟ್ಟುವ ಕ್ರಮಗಳು ಎಲ್ಲಿಯೂ ಧುತ್ತೆಂದು ಅವತರಿಸಿದ ಕ್ಷಣವಿದು ಭಾವವಿದು ಅನಿಸಿ ಆಭಾಸ ಆಗುವಂತೆ ಮಾಡುವುದಿಲ್ಲ. ಪಾಂಡು ರಾಜನ ಸಾವಿನ ಸಂದರ್ಭದ ಒಂದು ಪದ್ಯವು ಶೃಂಗಾರದಿಂದ ಪ್ರಾರಂಭವಾಗಿ ಶೋಕದಲ್ಲಿ ಕೊನೆಯಾಗುವಾಗ ಅಲ್ಲೊಂದು ಸೂಕ್ಷ್ಮವಾಗಿ ಕಾಲ, ಪರಿಸರ, ಅದರಲ್ಲಿನ ಬದಲಾವಣೆ, ಅದನ್ನನುಸರಿಸಿ ದೇಹದಲ್ಲಾಗುವ ಬದಲಾವಣೆ ಕೊನೆಗೆ ಅದು ಮನಸ್ಸಿನ ಮೇಲೆ ಬೀರುವ ಪರಿಣಾಮ, ಮುಖ್ಯವಾದ ಅಂಶದಲ್ಲಿಯೂ ಆಗುವ ಮರೆವು ಇದೆಲ್ಲವೂ ಒಂದು ದೊಡ್ಡ ಸಂಬಂಧ ಹೊಂದಿರುವ ಭಾವೋದಯಕ್ಕೆ ಉದಾಹರಣೆಯಾಗಿ ನಿಲ್ಲುತ್ತದೆ.

ಪಂಪ ಭಾರತದಲ್ಲಿನ ಪಾತ್ರಗಳ ಸಾವು ಕೇವಲ ಅದೊಂದರ ಸಾವಾಗದೆ ದೊಡ್ಡ ಕಾಣ್ಕೆಯಾಗಿ ನಿಂತುಬಿಡುತ್ತದೆ. ಕವಿಯೊಬ್ಬ ತನ್ನೊಂದಿಗೆ ಎಷ್ಟು ವ್ಯುತ್ಪತ್ತಿಗಳನ್ನು ತೆಗೆದುಕೊಂಡು ಕಾವ್ಯ ಕಟ್ಟಲು ಸಾಧ್ಯವೋ ಅಷ್ಟು ವ್ಯುತ್ಪತ್ತಿಯಿರುವ ಕಾವ್ಯಗಳಿವು ಅನಿಸಿಬಿಡುತ್ತದೆ.

ಈ ಭಾವೋದಯದಲ್ಲಿ ಯಾವುದೇ ಸಮಸ್ಯೆಯಿರದೆ ಕಾವ್ಯದ ಓದಿಗೆ ಎಲ್ಲೂ ಧಕ್ಕೆ ಬರದ ಹಾಗೆ, ನಿಲ್ಲಿಸಿ ಬಿಡಬೇಕು ಅನ್ನಿಸುವ ಹಾಗೆ ಎಲ್ಲೂ ಮಾಡದೆ ನಡೆಸಿರುವುದು ಪಂಪನಲ್ಲಿನ ಕಲಾತ್ಮಕ ಅಭಿವ್ಯಕ್ತಿಗೆ ಸಾಕ್ಷಿಯಾಗಿ ಇಂತಹ ಹಲವಾರು ಪ್ರಸಂಗಗಳು ನಿಲ್ಲುತ್ತದೆ.