ವೇದಿಕೆಯಲ್ಲಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ, ನರ್ತಿಸಿದ್ದಾರೆ ಎಂದಾಗ ನಾವು ಅವರಲ್ಲಿ ಕಂಡಂತಹ ವಿಶೇಷತೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಕಲಾವಿದರ ಕಣ್ಣುಗಳು ಮಾತನಾಡುತ್ತಿದ್ದವು, ಕೈಗಳೂ ಮಾತನಾಡುತ್ತಿದ್ದವು, ಕಾಲುಗಳೂ ಮಾತನಾಡುತ್ತಿದ್ದವು ಹೀಗೆ… ಇಲ್ಲಿ ಒಂದೊಂದು ಅಂಗಗಳು ತಮ್ಮ ಅಭಿನಯದ ಮೂಲಕ  ನಮ್ಮ ಮನಸ್ಸನ್ನು ತಟ್ಟುವ ಕೆಲಸವನ್ನು ಮಾಡಿರುತ್ತವೆ ಎಂದೇ ಅರ್ಥ. ಹಾಗೆಂದರೆ ಇಲ್ಲಿ ಮಾತು ಎಂಬ ಪದ ಕಲಾವಿದ ಪ್ರೇಕ್ಷಕನನ್ನು ತಲುಪಿದ್ದಾನೆ ಎಂಬುವುದನ್ನು ಸೂಚಿಸುತ್ತದೆ ಎಂದರೂ ಸರಿಯೇ. ವಿದುಷಿ ಮಂಜುಳಾ ಸುಬ್ರಹ್ಮಣ್ಯ ಹಸ್ತಾಭಿನಯದ ಸಾಧ್ಯತೆಗಳ ಕುರಿತು ಬರೆದ ಬರಹ ಇಲ್ಲಿದೆ. 

 

ನೃತ್ಯವೆಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಅದು ಇಂತಹವೇ ಪ್ರಕಾರದ್ದು ಅಂತ ಆಗಿರಬೇಕೆಂದೇನೂ ಇಲ್ಲ.. ಹುಟ್ಟಿದ ಮಗು ತನ್ನ ಬೆಳವಣಿಗೆಯಲ್ಲಿಯೇ ಡ್ಯಾನ್ಸ್ ಮಾಡು ಅಂದರೆ ಕೈ, ಕಾಲು ಆಡಿಸುವುದಕ್ಕೆ ಪ್ರಾರಂಭಿಸುತ್ತದೆ. ನೃತ್ಯವೆಂದಾಕ್ಷಣ ಚಲನೆ ಎಂಬುವುದು ಆವಾಗಲೇ ಅರಿವಿಗೆ ಬಂದಿರುತ್ತದೆ. ಈ ಚಲನೆ ಎಂಬುವುದು ನಮಗೆ ಪ್ರಕೃತಿ ನೀಡಿರುವಂತಹ ಕೊಡುಗೆ. ಪ್ರಕೃತಿಯ ಧ್ವನಿ ಸಂಗೀತವಾದರೆ, ಚಲನೆ ನೃತ್ಯ, ನಾಟ್ಯವಾಗಿರಬಹುದೆಂಬ ಕಲ್ಪನೆ ಸಹಜವಾದದ್ದೂ ಅಲ್ಲದೆ ಸಾದೃಶ್ಯವಾದುದು ಕೂಡಾ. ಇಂತಹ ಚಲನೆಗಳೇ ಬೇರೆ ಬೇರೆ ನೃತ್ಯ ಪ್ರಕಾರಗಳಾಗಿ, ವಿಕಾಸಗೊಂಡು ನಮ್ಮ ಮುಂದಿರಲೂಬಹುದು.

ನಂದಿಕೇಶ್ವರನು ತನ್ನ ಅಭಿನಯದರ್ಪಣ ಎಂಬ ಗ್ರಂಥದಲ್ಲಿ ನಾಟ್ಯದ ನಾಲ್ಕುವಿಧದ ಅಭಿನಯಗಳನ್ನು ವಿವರಿಸಿದ್ದಾನೆ. ಆಂಗಿಕ, ವಾಚಿಕ, ಆಹಾರ್ಯ, ಮತ್ತು ಸಾತ್ವಿಕ. ಈ ಮೂಲಕ ಮನಸ್ಸಿನ ಭಾವನೆಗಳನ್ನು ಪ್ರೇಕ್ಷಕರಿಗೆ ದಾಟಿಸುವುದಾಗಿದೆ. ದೇಹದ ಸಂಪೂರ್ಣ ಚಲನೆಯಿದ್ದಾಗ ಎಲ್ಲವನ್ನೂ ಹೇಳುವುದು ಸಲೀಸು. ಅದು ಆಂಗಿಕಾಭಿಯ. ಮತ್ತೆ ಅದನ್ನು ವಿಸ್ತೃತಗೊಳಿಸಿದರೆ ಆಂಗಿಕದಲ್ಲಿ ಅಂಗ, ಪ್ರತ್ಯಂಗ, ಉಪಾಂಗ ಎಂಬ ಶರೀರದ ಭಾಗಗಳ ಚಲನೆಯನ್ನು ಕಾಣುತ್ತೇವೆ. ಪ್ರತಿಯೊಂದು ಅಂಗಗಳ ಚಲನೆಗೂ ಅದರದ್ದೇ ಆದ ಪ್ರಾಮುಖ್ಯತೆ ಇದೆ, ಆದರೆ ಒಂದು ಅಂಗವನ್ನೇ ಪ್ರಧಾನವಾಗಿಟ್ಟುಕೊಂಡು ಮಾಡುವುದು ಸಾಧ್ಯವೇ, ಅಥವಾ ಅದರ ಸಾಧ್ಯತೆಗಳೇನು ಎಂಬುವುದನ್ನು ಗಮನಿಸಿದಾಗ ಮೊದಲಿಗೆ ಕಾಣುವುದು ಹಸ್ತಾಭಿನಯ.

ನಾಟ್ಯಶಾಸ್ತ್ರ, ಅಭಿನಯ ದರ್ಪಣ ಗ್ರಂಥಗಳಲ್ಲಿ ಒಂದೇ ಕೈಯನ್ನು ಬಳಸಿ ಮಾಡುವ ಹಸ್ತಗಳು (ಅಸಂಯುತ) ಎರಡೂ ಕೈಯನ್ನು ಉಪಯೋಗಿಸಿ ತೋರಿಸುವಂತಹ ಹಸ್ತಗಳು(ಸಂಯುತ) ಎಂದು ವಿಂಗಡಿಸಿದ್ದಾರೆ. ಇನ್ನು ಅನೇಕ ದೇವತಾ ಹಸ್ತ, ನೃತ್ತ ಹಸ್ತಗಳು ಎಲ್ಲವೂ ಇವೆ.

ವೇದಿಕೆಯಲ್ಲಿ ಕಲಾವಿದರು ಅದ್ಭುತವಾಗಿ ಅಭಿನಯಿಸಿದ್ದಾರೆ, ನರ್ತಿಸಿದ್ದಾರೆ ಎಂದಾಗ ನಾವು ಅವರಲ್ಲಿ ಕಂಡಂತಹ ವಿಶೇಷತೆಗಳ ಬಗ್ಗೆ ಮಾತನಾಡುತ್ತಿರುತ್ತೇವೆ. ಕಲಾವಿದರ ಕಣ್ಣುಗಳು ಮಾತನಾಡುತ್ತಿದ್ದವು, ಕೈಗಳೂ ಮಾತನಾಡುತ್ತಿದ್ದವು, ಕಾಲುಗಳೂ ಮಾತನಾಡುತ್ತಿದ್ದುವು ಹೀಗೆ… ಇಲ್ಲಿ ಒಂದೊಂದು ಅಂಗಗಳು ಅಭಿನಯದ ಮೂಲಕ ಸಂವಹನ ನಡೆಸಿ ನಮ್ಮ ಮನಸ್ಸನ್ನು ತಟ್ಟುವ ಕೆಲಸವನ್ನು ಮಾಡಿರುತ್ತವೆ ಎಂದೇ ಅರ್ಥ. ಹಾಗೆಂದರೆ ಇಲ್ಲಿ ಮಾತು ಎಂಬ ಪದ ಕಲಾವಿದ ಪ್ರೇಕ್ಷಕನನ್ನು ತಲುಪಿದ್ದಾನೆ ಎಂಬುವುದನ್ನು ಸೂಚಿಸುತ್ತದೆ ಎಂದರೂ ಸರಿಯೇ.

ಪ್ರಕೃತಿಯ ಧ್ವನಿ ಸಂಗೀತವಾದರೆ, ಚಲನೆ ನೃತ್ಯ, ನಾಟ್ಯವಾಗಿರಬಹುದೆಂಬ ಕಲ್ಪನೆ ಸಹಜವಾದದ್ದೂ ಅಲ್ಲದೆ ಸಾದೃಶ್ಯವಾದುದು ಕೂಡಾ. ಇಂತಹ ಚಲನೆಗಳೇ ಬೇರೆ ಬೇರೆ ನೃತ್ಯ ಪ್ರಕಾರಗಳಾಗಿ, ವಿಕಾಸಗೊಂಡು ನಮ್ಮ ಮುಂದಿರಲೂಬಹುದು.

ಹಸ್ತಾಭಿನಯ ಈ ಹಸ್ತಗಳ ಬಳಕೆ ಬಗ್ಗೆ ಅಂತಾರಾಷ್ಟ್ರೀಯ ನೃತ್ಯಕಲಾವಿದೆ ಮೀನಾಕ್ಷಿ ಶ್ರೀನಿವಾಸನ್ ಅವರು, ಅವರ ಕ್ಲಾಸ್ ನಲ್ಲಿ ವಿವರಿಸುವ ಪರಿ ನಿಜಕ್ಕೂ ಆಕರ್ಷಣೀಯ. ‘ನೃತ್ಯಕಲಾವಿದರು ರಂಗದಲ್ಲಿ ಬಳಸುವ ಹಸ್ತವಿನ್ಯಾಸ ಹೇಗಿರಬೇಕು ಎಂದರೆ ನಮ್ಮ ಜಾತ್ರೆಗಳಲ್ಲಿ ಸಿಗುವ ಒಂದು ತೆರನಾದ ಪೀಪಿಯ ಹಾಗೆ. ಅದು ಒಮ್ಮೆ ಊದಿದಾಗ ಮೇಲಕ್ಕೆ ಹೋಗಿ ಅರಳಿ ಮತ್ತೆ ಮುದುಡಿಕೊಳ್ಳುತ್ತದೆ. ಕಲಾವಿದರ ಬೆರಳುಗಳ ಚಲನೆ ಅಂತಹ ನಾಜೂಕುತನದಿಂದ, ಚುಟುಕಾಗಿ (crispy) ಇರಬೇಕು. ಒಂದು ಹಸ್ತವನ್ನು ತೋರಿಸಿ ಅದು ಪುನಃ ಸ್ವಸ್ಥಾನಕ್ಕೇ ಬರುವ ಸಮಯದಲ್ಲಿನ ಚಲನೆ ಪೀಪಿಯ ಚಲನೆಯ ಹಾಗಿರಬೇಕು ಎಂಬುವುದು ಅವರ ಮಾತು. ಇದು ಬೆರಳುಗಳಿಗೆ ಒಂದು ರೀತಿಯ ವ್ಯಾಯಾಮದೊಂದಿಗೆ, ಅಚ್ಚುಕಟ್ಟಾದ ಹಸ್ತಗಳ ಬಳಕೆ ಸರಿಯಾದ ಅರ್ಥವನ್ನು ಕೊಡುವುದಕ್ಕೆ ಶಕ್ತವಾಗುತ್ತದೆ ಕೂಡಾ. ಅದ್ಭುತ ನೃತ್ಯಕಲಾವಿದೆಯಾಗಿರುವ ಮೀನಾಕ್ಷಿ ಶ್ರೀನಿವಾಸನ್ ಅವರ ನೃತ್ಯ ಪ್ರದರ್ಶನದಲ್ಲಿ ಅವರ ಹಸ್ತ ವಿನ್ಯಾಸದ ಬಳಕೆಯು ಒಂದು ವಿಶಿಷ್ಟ ಆಕರ್ಷಣೆಯನ್ನು ಹೊಂದಿದೆ.

ನಾನು ಹಿಂದೆ ಉಲ್ಲೇಖಿಸಿದಂತೆ ಹಸ್ತಗಳು ನಾನಾ ಅರ್ಥವನ್ನು ಕೊಡುತ್ತವೆ. ನಾವು ದಿನನಿತ್ಯ ಬಳಸುವ ಕೈಯ ಚಲನೆಗಳೇ ಅದಾಗಿದ್ದರೂ ನಮ್ಮ ಅರಿವಿಗೆ ಬಾರದ ಸಂಗತಿಯಾಗಿ ಕಲಾವಿದರಲ್ಲಿ ನಾವು ನೋಡುತ್ತೇವೆ. ಸರಳವಾಗಿ ಗ್ರಹಿಸಬಹುದಾದ ಒಂದೆರಡು ಹಸ್ತಗಳನ್ನು ನಾನಿಲ್ಲಿ ಉಲ್ಲೇಖಿಸುತ್ತೇನೆ. ಹಂಸಾಸ್ಯ, ಸೂಚಿ, ಶಿಖರ, ಅಲಪದ್ಮ, ಮಯೂರ, ಪತಾಕ, ಸರ್ಪಶಿರ ಇದು ಒಂದೇ ಕೈಯಲ್ಲಿ ಬಳಸುವಂತಹ ಮಾಡುವ ಹಸ್ತಗಳು, ಈಗ ಇದೇನೂ ಅಂತಾನೇ ಅರ್ಥ ಆಗದೇ ಇರಬಹುದು, ಅದರೆ ಇದೆಲ್ಲವನ್ನು ನಾವು ದಿನನಿತ್ಯ ಸಂಭಾಷಣೆಯಲ್ಲಿ ಬಳಸಿರುತ್ತೇವೆ ಎನ್ನುವುದನ್ನು ನಾವು ಗಮನಿಸಿಯೇ ಇರುವುದಿಲ್ಲ‌. ಕ್ರಮಪ್ರಕಾರವಾಗಿ ಹಂಸಾಸ್ಯ- ಚೆನ್ನಾಗಿದೆ(ಸೂಪರ್) ಸೂಚಿ- ಒಂದು, ಶಿಖರ-ಏನು, ಅಲಪದ್ಮ-ಗೊತ್ತಿಲ್ಲ, ಮಯೂರ- ನವಿಲು, ಪತಾಕ-ನಿಲ್ಲು, ಸರ್ಪಶಿರ-ಹಾವು. ಇವೂ ನಾವು ದಿನನಿತ್ಯ ಬಳಸುವಂತಹ ಕೈಯ ಚಲನೆಗಳು. ಎರಡೂ ಕೈ ಬಳಕೆಯಲ್ಲೂ ಇಂತಹ ಸರಳವಾದ ಹಸ್ತಗಳು ಇವೆ. ಮತ್ಸ್ಯ- ಮೀನು, ಅಂಜಲಿ-ಕೈಮುಗಿಯುವುದು, ಗರುಡ-ಹಕ್ಕಿ, ಇವೆಲ್ಲಾ ನೃತ್ಯದಲ್ಲಿ, ಅಭಿನಯದಲ್ಲಿ ಮಾತ್ರ ನಾವು ಬಳಸುತ್ತೇವೆ ಎಂದಲ್ಲ. ನಮ್ಮ ನಿತ್ಯಸಂಭಾಷಣೆಯಲ್ಲಿ ಕಾಣುವುದು. ನವರಸಗಳು, ಭಾವಗಳು ನಮ್ಮ ದೈನಂದಿನ‌ ಬದುಕಿನಲ್ಲಿ ಹೇಗೆ ಹಾಸುಹೊಕ್ಕಾಗಿದೆಯೋ ಹಾಗೇ ಹಸ್ತ ಗಳೂ ನಮ್ಮ ದಿನಚರಿಯಲ್ಲಿಯೇ ಒಳಗೊಂಡಿದೆ. ನಾವು ಅಷ್ಟಾಗಿ ಅದರ ಬಗ್ಗೆ ಗಮನಕೊಟ್ಟಿರುವುದಿಲ್ಲ. ಈ ಹಸ್ತಗಳ ಮೂಲಕ ಶ್ರವ್ಯವಾಗಿರುವುದನ್ನು ದೃಶ್ಯವಾಗಿ ಮಾರ್ಪಾಡಿಸಿಕೊಂಡಲ್ಲಿ ಇನ್ನಷ್ಟು ಆಪ್ತ ಆಗುವುದರಲ್ಲಿ ಸಂದೇಹವೇ ಇಲ್ಲ‌. ಇಂತಹ ಹಸ್ತಾಭಿನಯಗಳು ನಾವು ಒಂದು ಸಂದರ್ಭವನ್ನು, ಸನ್ನಿವೇಶವನ್ನು, ಕಥೆಯ ವಿಸ್ತಾರವನ್ನು ನೆನಪಿನಲ್ಲಿ ಉಳಿಯುವಂತೆ ಮಾಡುವುದಕ್ಕೂ ಸಹಾಯವಾಗುತ್ತದೆ. ಹೇಗೆಂದರೆ ಪ್ರತಿಯೊಂದು ಶಬ್ಧ ಅಥವಾ ವಾಕ್ಯವನ್ನು ಹಸ್ತದ ಮೂಲಕ ತೋರಿಸುತ್ತಾ ಸೂಚಿಸುತ್ತಾ ಹೋದಂತೆ ಅದು ನಮ್ಮ ಸೃತಿ ಪಟಲದಲ್ಲಿ ಗಟ್ಟಿಯಾಗುತ್ತಾ ಹೋಗುತ್ತದೆ. ಇದರ ಹೆಚ್ಚಿನ ಉಪಯೋಗವಾಗುವುದು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ.

ಖ್ಯಾತ ನೃತ್ಯಕಲಾವಿದೆ ಡಾ. ಜಾನಕೀ ರಂಗರಾಜನ್ ಅವರು ಒಂದು ಕೈಯನ್ನು ಬಳಸಿ ಮಾಡುವ ಅಸಂಯುತ ಹಸ್ತಗಳ (ಇಪ್ಪತ್ತೆಂಟು ಹಸ್ತಗಳು) ಬಗ್ಗೆ ಗಮನಿಸೋಣ. ಹಸ್ತಗಳನ್ನು ಜೋಡಿಸಿ ಕತೆ ಹೆಣೆದ ಇತ್ತೀಚೆಗಿನ ಅವರ ಪ್ರಸ್ತುತಿ,  ಹೊಸ ಪ್ರಯೋಗವಾಗಿ ಮೂಡಿ ಬಂದಿದೆ. ಅಭಿನಯ ಚತುರೆಯಾದ ಗುರು ಭೃಗ ಭಸೆಲ್ ಅವರ ಅಭಿನಯದಲ್ಲಿ ಹಸ್ತಗಳ ಬಳಕೆ ತುಂಬಾ ಸರಳ ಎಂದು ನಮಗನಿಸಿದರೂ ಅದರ ಬಳಕೆ ಅಷ್ಟೇ ಪರಿಣಾಮಕಾರಿಯಾಗಿರುತ್ತದೆ. ಶೃಂಗಾರದ ಉತ್ಕಟವಾದ ಅಭಿನಯವನ್ನು ಅಭಿವ್ಯಕ್ತಿಸುವ ಜಯದೇವ ಕವಿಯ ಗೀತಗೋವಿಂದದ ಒಂದು ಅಷ್ಟಪದಿಯಲ್ಲಿ ಶ್ಯಾಮಾ ಮೃದುಮಧುರವಾಗಿ ನಕ್ಕು ನುಡಿಯುವಾಗ ‘ನನ್ನ ಸೀರೆಯನ್ನು ಸಡಿಲಿಸುವನೂ..’ ಎಂದು ರಾಧೆ ಹೇಳುವ ವಾಕ್ಯವಿದೆ, ‘ಮೃದುಮಧುರ ಸ್ಮಿತ ಭಾಷಿತಯಾ ಶಿಥಿಲೀಕೃತ ಜಘನದುಕೂಲಂ’ (ಅಷ್ಟಪದಿ ಆರು, ಸಖಿಹೇ ಕೇಶಿ ಮಥನ). ಇದನ್ನು ಭೃಗ ಭಸೆಲ್ ಅವರು ಯಾವ ಅಶ್ಲೀಲತೆಯನ್ನು, ದೇಹಾಂಗವನ್ನು, ಸೀರೆಯನ್ನೂ ತೋರಿಸದೆ‌ ಬರಿಯ ಕರ್ತರೀಮುಖ ಹಸ್ತದ ಬಳಕೆಯ ಮೂಲಕ ಅಭಿನಯಿಸುವುದು ನಿಜಕ್ಕೂ ಹಸ್ತವಿನ್ಯಾಸದ ಬಳಕೆಯ ಸಾಮರ್ಥ್ಯವೇ ಆಗಿದೆ. ಹಸ್ತಗಳನ್ನು ಪರಿಣಾಮಕಾರಿಯಾಗಿ ಬಳಸುವ ಕ್ರಮ ಕೂಡಾ ಅಭಿನಯದಲ್ಲಿ ಅಷ್ಟೇ ಪ್ರಾಮುಖ್ಯತೆಯನ್ನು ಪಡೆಯುತ್ತದೆ.

ಬರಿಯ ನೃತ್ಯದಲ್ಲಿ ಸೌಂದರ್ಯಕ್ಕಾಗಿ ಹಸ್ತಗಳ ಬಳಕೆ ಒಂದೆಡೆಯಾದರೆ ಅಭಿನಯದಲ್ಲಿ ಅರ್ಥಕ್ಕನುಸಾರವಾಗಿ ಹಸ್ತಗಳನ್ನು ವಿನ್ಯಾಸಗೊಳಿಸಲಾಗುತ್ತದೆ. ಯೋಗ, ಧ್ಯಾನದಲ್ಲಿಯೂ ಕೂಡಾ ಮುದ್ರೆಗಳ ಬಳಕೆಯನ್ನು ನಾವು ಕಾಣಬಹುದು. ಇವುಗಳಿಗೆ ವೈಜ್ಞಾನಿಕವಾದ ಕಾರಣಗಳೂ ಇವೆ ಎನ್ನುತ್ತಾರೆ ಪ್ರಾಜ್ಞರು. ಒಟ್ಟಿನಲ್ಲಿ ಕಲಾವಿದನ ಬೆರಳ ತುದಿಯ ಬಳಕೆಯೂ ಕೂಡ ಪ್ರೇಕ್ಷಕನಿಗೇ ಕಾಣುವಂತಿರಬೇಕು. ಬೆರಳ ತುದಿಯೂ ಅಭಿನಯಿಸುತ್ತಿರಬೇಕು ಎನ್ನುವುದು ನಿಜದ ಮಾತೂ ಕೂಡಾ.