ಬದುಕೆಂಬ ಬಯಲಿನಲ್ಲಿ
ಎದೆಯ ತುಂಬಾ
ಹುಚ್ಚೆದ್ದು ಹರಿಯುವ
ಕೆಂಡದ ನದಿ
ನನ್ನೊಳಗಿನ ಎಲ್ಲ
ಪ್ರಶ್ನೆಗಳನ್ನೂ
ಸುಡುತ್ತಿರುವಾಗ
ಉತ್ತರಗಳನ್ನು ಹುಡುಕುವುದರಲ್ಲಿ
ಯಾವ ಸುಖವಿದೆ?
ತಪ್ಪುಗಳನ್ನು ಬರೆಯುವಾಗ
ಒರಟು ಕೈಬೆರಳಿನ
ಮೇಲೆ ನಿನ್ನ ನುಣುಪಿನ
ಕೈಬೆರಳುಗಳೂ ಸಹಕರಿಸಿದ್ದವು;
ಬೆಸೆದ ಮೇಲೂ ಬೆಸೆದುಕೊಳ್ಳದ
ಸಂಬಂಧಗಳನ್ನು ತಪ್ಪು-ಒಪ್ಪಿನ
ಕಟಕಟೆಯಲ್ಲಿ ನಿಲ್ಲಿಸಿಬಿಟ್ಟೆ;
ಜೊತೆಯಿದ್ದರೂ
ಒಂಟಿಯಾಗಿರುವುದ ಕಲಿಸಿಕೊಟ್ಟೆ
ರಾತ್ರಿಗಳು
ನೆನಪಿನ ವೀರ್ಯದೊಳಗೆ
ಮಿಂದೆದ್ದು ಹಣ್ಣಾದರೂ
ಮತ್ತಷ್ಟು ಬೇಕೆನಿಸುತ್ತದೆ;
ಇನ್ನೇನೋ ಕೊರತೆ
ಕಾಡುತ್ತದೆ;
ಮತ್ತೊಮ್ಮೆ ನೀಗುತ್ತದೆ;
ಈ ಶಹರದೊಳಗಿನ
ಅವಶೇಷಗಳೊಳಗೆ
ಜೀವಂತವಿರುವ ನನ್ನಂಥ
ಎಷ್ಟೋ ತಪ್ತ ಜೀವಗಳ
ನಿಟ್ಟುಸಿರ ಲೆಕ್ಕ ಇಡುವವರಾರು?
ಸಾವಿಲ್ಲದ ಮನೆಯಿಂದ
ಸಾಸಿವೆ ತರಲಾಗದಂತೆಯೇ
ಪ್ರೀತಿಸದವನ ಮನೆಯಿಂದ
ಒಂದುಕಾಳು
ಸಾಸಿವೆಯನ್ನೂ ತರಲಾಗದು
ಕಣ್ಣೊಳಗಿನ ನಿದ್ರೆ ಸುಟ್ಟು
ದಿನಗಳು ಕಳೆದವು
ಕನವರಿಕೆ, ಬಿಕ್ಕಳಿಕೆಗಳು
ಜೊತೆಯಾದವು;
ಹಲ್ಲಿಗಳ ಮಿಥುನ
ಗೋಡೆಯನ್ನು ಸಿಂಗರಿಸುವಾಗ
ಕತ್ತಳಾಳದ ಕರಾಳ ರತಿಸುಖವನ್ನು
ಹೇಗೆ ಅನುಭವಿಸಲಿ??