ಪ್ರೇಮವೆಂದರೆ..
ಪ್ರೇಮವೆಂದರೆ,
ರಾತ್ರಿಯಿಡೀ ಪರಿತಪಿಸಿ
ನಿದ್ರೆಗೆಟ್ಟ ಕಣ್ಣುಗಳನ್ನು
ಏಕಾಂತದ ಸ್ಮಶಾನದಲ್ಲಿ
ಹೂತು
ಕೈಮುಗಿವ ಕ್ರಿಯೆಯಲ್ಲ..
ಪ್ರೇಮವೆಂದರೆ,
ಅಸಂಖ್ಯ
ಮೊಲೆ ಯೋನಿ ನಿತಂಬ
ಉಬ್ಬು ತಗ್ಗುಗಳ
ಕನವರಿಸಿ;
ಬೊಂಬಾಯಿ, ದಿಲ್ಲಿಯ
ಅಥವಾ ಗುರುತೇ ಇರದ
ಕಿರಿದಾದ ಓಣಿಯೊಳಹೊಕ್ಕು
ಹೂವ ಹೊಸಕಿದ
ದಿನವನ್ನು ಗುರುತು ಹಾಕಿ
ಹೊತ್ತಲ್ಲದ ಹೊತ್ತಿನಲ್ಲಿ
ಸ್ಕಲಿಸುವುದಲ್ಲ..
ಪ್ರೇಮವೆಂದರೆ,
ದಿಕ್ಕೆಟ್ಟ
ತೆಪ್ಪವೊಂದರ
ಹುಟ್ಟು ಜಾರಿ
ನದಿಗೆ ಬಿದ್ದಾಗ
ಹಿಂದೂ ಮುಂದೂ ನೋಡದೆ
ಇಬ್ಬರೂ ಕೈ ಹಿಡಿದು ಸಿದಾ
ನದಿಗೆ ಹಾರುವುದು
ಮತ್ತೆ ದಡದತ್ತ ಈಜುವುದು..