ಕಲ್ಲಿನ ಮೂರ್ತಿಯ ಸುತ್ತ

ಓ ಕಲ್ಲೇ
ನಿನ್ನ ಮೈ ಮೇಲೆ
ಒಂದೇ ಸಮನೆ
ಉಳಿಯೇಟು ಕೊಡುವಾಗಲೂ
ಸುಮ್ಮನಿದ್ದೆ;
ರೆಪ್ಪೆಗಳು
ಬಡಿಯದ ಕಣ್ಣುಗಳು
ಅಂತರಾಳದ
ನೋವುಗಳ ಉಣ್ಣುತ್ತಲೇ ಇದ್ದೆ;
ಉಸಿರಾಡದ
ವಾಸನೆ ಹಿಡಿಯದ ಮೂಗು
ಅನುಭಾವದ
ಕಿಡಿಗಳನ್ನು ತೂರುತ್ತಿದ್ದೆ;
ಮಾತನಾಡದ ಬಾಯಿ
ಹುಣ್ಣಾಗಿದ್ದರೂ
ಮೌನದ ಕುಲುಮೆಗೆ
ದನಿಯನ್ನು ಒಟ್ಟಿದ್ದೆ;
ಕೇಳದ ಕಿವಿಯನ್ನು
ಧರಿಸಿದರೂ
ನೆತ್ತರ ಚರಿತ್ರೆಯನ್ನು
ಬಿತ್ತಿದ್ದೆ;
ಈಗಲೂ ಗಢದ್ದು ನಿದ್ದೆ??

ಬಂದವರೆಲ್ಲ ತಲೆಸವರಿ
ಅಂಗೈ ತುರಿಕೆ
ತೀರಿಸಿಕೊಂಡು
ಹೊರಟುಬಿಡುತ್ತಾರೆ;
ತಲೆಯ ಮೇಲೆ
ಸತ್ತ ಮತ್ಸ್ಯದ ಶವ
ಕೇಶವಾಗಿ ಸಿಂಗರಿಸಿದೆ

ಬಿಸಿಲು,
ಮಳೆ,
ಚಳಿಗಾಲದ
ಗುರುತು ಪರಿಚಯವೇ ಇಲ್ಲ;
ಮರೆವು-ನೆನಪುಗಳ ಹಂಗೂ ಇಲ್ಲ
ದುರಂತವೆಂದರೆ
ಮೈಥುನದ ಅಂಗಗಳನ್ನೂ ಕೆತ್ತಲಾಗಿಲ್ಲ
ರಾತ್ರಿಯದ್ದಾಗಲಿ ಹಗಲಿನದ್ದಾಗಲಿ
ಕಲ್ಪನೆಯ ಸಣ್ಣ ಬಲೆಯನ್ನೂ ಹೆಣೆಯುವಂತಿಲ್ಲ
ಇಲ್ಲಿ
‘ಶಿಲ್ಪಿ’ ಕನಸುಗಳಿಗೂ
ಮುಳ್ಳಿನ ಬೇಲಿ ನೆಟ್ಟಿದ್ದಾನೆ

ಮೂರ್ತಿ ಹರಾಜಿಗಿಟ್ಟಿಲ್ಲ
ತಲೆಯ ಮೇಲೆ ಕೂತ
ಹಸಿದ ಹದ್ದು
ಮೀನನ್ನು ಒಂದೇ ಸಮನೆ
ಕುಟುಕಿ ಕುಟುಕೀ
ಸುಸ್ತಾಗಿದೆ,
ಹಾರಲೇಬೇಕು
ಬಹು ಎತ್ತರಕ್ಕೆ
ರಕ್ತ ಮಾಂಸದ ಹಸಿ ಚೂರಿಗೆ…!

ಅಭಿಷೇಕ್ ವೈ.ಎಸ್ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಕನ್ನಡ ಎಂ.ಎ ಪದವಿ ಪಡೆದಿದ್ದಾರೆ.
‘ಕಣ್ಣಿಲ್ಲದ ಕತ್ತಲರಾತ್ರಿ’ ಇವರ ಪ್ರಕಟಿತ ಕವನ ಸಂಕಲನ
ಕಥೆಗಳನ್ನು ಬರೆಯುವುದು,ಕವಿತೆಗಳನ್ನು ಬರೆಯುವುದು, ಛಾಯಾಗ್ರಹಣ, ತಿರುಗಾಟ ಇವರ ಹವ್ಯಾಸಗಳು