ಶ್ರೀಕೃಷ್ಣಜನನ, ನಿದ್ರಿಸುವ ಕಂಸನನ್ನು ತನ್ನ ಕೂಗಿನಿಂದ ಎಚ್ಚರಗೊಳಿಸಬಾರದೆಂದು ವಸುದೇವನು ಕತ್ತೆಯನ್ನು ಬೇಡಿಕೊಳ್ಳುವುದು, ಕಾಳಿಂಗಮರ್ದನ, ವೇಣುಗೋಪಾಲ, ಗೋವರ್ಧನಗಿರಿಧಾರಿ, ಕೃಷ್ಣನಿಂದ ಧೇನುಕ ಮತ್ತಿತರ ರಕ್ಕಸರ ಸಂಹಾರ ಮೊದಲಾದ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಕಥಾನಕಗಳೂ, ಅರ್ಜುನನು ದ್ರುಪದನನ್ನು ಸೆರೆಹಿಡಿದು ದ್ರೋಣನ ಮಂಚದ ಕಾಲಿಗೆ ಕಟ್ಟಿ ಅವನ ಪ್ರತಿಜ್ಞೆಯನ್ನು ಈಡೇರಿಸಿದುದು, ಅರಗಿನ ಮನೆಯನ್ನು ಸುಡುವುದು, ಅರ್ಜುನನಿಂದ ಮತ್ಸ್ಯಯಂತ್ರಛೇದ, ಪಾಂಡವರು ದ್ಯೂತದಲ್ಲಿ ಸೋಲುವುದು, ದ್ರೌಪದಿಯ ವಸ್ತ್ರಾಪಹಾರ, ಯುದ್ಧದೃಶ್ಯಗಳು ಮೊದಲಾಗಿ ಮಹಾಭಾರತದ ಹಲವು ಘಟನೆಗಳೂ ಈ ಫಲಕಗಳ ಮೇಲೆ ಚಿತ್ರಿತವಾಗಿರುವ ಪರಿ ಮನೋಹರವಾಗಿದೆ.
ಟಿ. ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಮೂವತ್ತೆಂಟನೆಯ ಕಂತು

 

ಪೂರ್ವಕಾಲದಲ್ಲಿ ಹೊಯ್ಸಳ ಸಾಮ್ರಾಜ್ಯದ ರಾಜಧಾನಿ ದ್ವಾರಸಮುದ್ರಕ್ಕೆ (ಹಳೇಬೀಡು) ಸಮೀಪದ ಪ್ರದೇಶವಾದ ಈಗಿನ ಚಿಕ್ಕಮಗಳೂರು ಜಿಲ್ಲೆಯೂ ಹಾಸನದ ಊರುಗ್ರಾಮಗಳಂತೆಯೇ ಮುಖ್ಯ ಚಟುವಟಿಕೆಗಳ ಭಾಗವಾಗಿತ್ತು. ಹೊಯ್ಸಳರು ಕಟ್ಟಿದ ಮೊದಲ ದೇವಾಲಯವಿರುವ ಅಂಗಡಿ ಮೂಡಿಗೆರೆಯ ಸಮೀಪದಲ್ಲಿದೆ. ಅಂತೆಯೇ ಮರಳೆ, ಬೆಳವಾಡಿ, ಅಯ್ಯನಕೆರೆ, ಬ್ರಹ್ಮಸಮುದ್ರ ಮೊದಲಾದ ಚಿಕ್ಕಮಗಳೂರಿನ ಆಸುಪಾಸಿನಲ್ಲಿರುವ ಗ್ರಾಮಗಳಲ್ಲಿ ಹೊಯ್ಸಳ ದೇವಾಲಯಗಳನ್ನು ಕಾಣಬಹುದು. ಈ ಪಟ್ಟಿಗೆ ಅಮೃತಾಪುರವನ್ನು ಸೇರಿಸಿಕೊಳ್ಳಲು ಮರೆಯುವಂತಿಲ್ಲ.

ಅಮೃತಾಪುರವು ತಾಲ್ಲೂಕು ಕೇಂದ್ರವಾದ ತರೀಕೆರೆಯಿಂದ ನಾಲ್ಕು ಕಿಲೋಮೀಟರ್ ದೂರದ ಒಳದಾರಿಯಲ್ಲಿ ಕಾಣಸಿಗುತ್ತದೆ. ಬೆಂಗಳೂರು-ಶಿವಮೊಗ್ಗ ಹೆದ್ದಾರಿಯಲ್ಲಿ ತರೀಕೆರೆಗೆ ಬಂದು ಅಮೃತಾಪುರಕ್ಕೆ ಸುಗಮವಾಗಿ ತಲುಪಬಹುದು. ಇಲ್ಲಿನ ಅಮೃತೇಶ್ವರ ದೇವಾಲಯವು ತನ್ನ ಹಲವು ವೈಶಿಷ್ಟ್ಯಗಳಿಂದಾಗಿ ಹೊಯ್ಸಳ ಶಿಲ್ಪವೈಭವದ ಪ್ರಸಿದ್ಧತಾಣಗಳಲ್ಲೊಂದೆನಿಸಿದೆ. ಯಶೋಧರ ಚರಿತೆಯಂತಹ ಶ್ರೇಷ್ಠಕಾವ್ಯವನ್ನು ರಚಿಸಿದ ಜನ್ನಕವಿಯು ರಚಿಸಿದ ಒಂದು ಶಾಸನ ಈ ದೇವಾಲಯದ ಆವರಣದಲ್ಲಿರುವುದೇ ಒಂದು ವಿಶೇಷ. ಅನೇಕ ಹೊಯ್ಸಳ ದೇವಾಲಯಗಳ ನಿರ್ಮಾಣದಲ್ಲಿ ಪಾಲ್ಗೊಂಡ ಪ್ರಸಿದ್ಧಶಿಲ್ಪಿ ಮಲ್ಲಿತಂಮನೇ ಅಮೃತಾಪುರದ ದೇಗುಲದ ನಿರ್ಮಾಣದಲ್ಲೂ ಪ್ರಮುಖಪಾತ್ರ ವಹಿಸಿದ್ದನೆಂದು ತಿಳಿದುಬರುತ್ತದೆ.

1196ರಲ್ಲಿ ನಿರ್ಮಾಣವಾದ ಈ ದೇವಾಲಯವನ್ನು ಕಟ್ಟಿಸಿದವನು ದಂಡನಾಯಕ ಅಮೃತೇಶ್ವರ. ಹೊಯ್ಸಳ ಅರಸ ಎರಡನೆಯ ವೀರಬಲ್ಲಾಳನ ಸೇನಾಪತಿಯಾಗಿದ್ದ ಈತನ ಹೆಸರೇ ದೇವಾಲಯಕ್ಕೂ ಅನ್ವಯವಾಯಿತು. ಹೊಯ್ಸಳ ದೇಗುಲಗಳ ಜೀರ್ಣೋದ್ಧಾರಕ್ಕೆ ಆಸಕ್ತಿವಹಿಸಿದ ವಿಜಯನಗರದ ಅರಸರು ಅಮೃತಾಪುರದ ದೇಗುಲದ ನಿರ್ವಹಣೆಗೂ ದಾನದತ್ತಿ ನೀಡಿದರು.

ಅಮೃತಾಪುರದ ದೇಗುಲವು ಏಕಕೂಟಾಚಲ ಎಂದರೆ ಒಂದೇ ವಿಮಾನಗೋಪುರವಿರುವ ದೇವಾಲಯ. ವಿವಿಧ ಸಾಲಂಕೃತ ಸ್ತರಗಳ ಮೇಲೆ ಕೀರ್ತಿಮುಖಗಳು ಸಿಂಹಪ್ರಭಾವಳಿಗಳು. ಸಿಂಹಮುಖಗಳಿಂದ ಹೊಮ್ಮಿದ ಹೂಬಳ್ಳಿಗಳಂಥ ವಿನ್ಯಾಸಗಳ ನಡುನಡುವೆ ಹಲವು ದೇವತಾಶಿಲ್ಪಗಳು. ಎಲ್ಲಕ್ಕೂ ಮೇಲೆ ಕವುಚಿದ ಪದ್ಮದಂತಹ ಸ್ತೂಪಿ. ಅದರ ಮೇಲಕ್ಕೆ ಲೋಹದ ಕಳಶ.

ಗರ್ಭಗುಡಿಯ ಸುತ್ತಲಿನ ಹೊರಗೋಡೆಯ ಮೇಲೆ ಇತರ ಹೊಯ್ಸಳ ದೇಗುಲಗಳಲ್ಲಿ ಕಂಡುಬರುವ ಭಿತ್ತಿಶಿಲ್ಪಗಳೇನೂ ಇಲ್ಲ. ಆದರೆ ಗೋಡೆಯ ಒಂದಿಂಚೂ ಬಿಡದಂತೆ ಕಿರುಗೋಪುರಗಳೂ, ಅವುಗಳನ್ನು ಹೊತ್ತ ಸಾಲಂಕೃತ ಕಂಬಗಳೂ ವಿರಾಜಿಸುತ್ತಿವೆ. ಇಂತಹ ನೂರಕ್ಕೂ ಹೆಚ್ಚು ಕಿರುಗೋಪುರಗಳು ಸುತ್ತುಗೋಡೆಯನ್ನು ಅಲಂಕರಿಸಿವೆ. ಕಿರುಗೋಪುರಗಳ ಮೇಲಕ್ಕೆ ಸಿಂಹಮುಖಗಳ ಪ್ರಭಾವಳಿ. ದೇವಾಲಯದ ಮುಂಭಾಗದಲ್ಲಿ ಮೂರು ದಿಕ್ಕುಗಳಿಂದ ಪ್ರವೇಶದ್ವಾರವಿರುವ ಮುಖಮಂಟಪ. ಸುತ್ತಲೂ ಒರಗಿಕೊಳ್ಳಲು ಕಕ್ಷಾಸನವಿರುವ ಮಂಟಪ. ನಡುವೆ ತಿರುಗಣೆಯ ಕೆತ್ತನೆಯಿರುವ ಕಂಬಗಳು. ಒಳಗುಡಿಯ ಬಾಗಿಲಮೇಲಿನ ಪಟ್ಟಕದಲ್ಲಿ ನಾಟ್ಯಶಿವನೂ ಪರಿವಾರವೂ ಗಮನಸೆಳೆಯುತ್ತಾರೆ. ಒಳಗುಡಿಯಲ್ಲಿ ಮನ್ಮಥ, ಭೈರವ, ನಾಗನಾಗಿಣಿಯರ ಶಿಲ್ಪಗಳನ್ನೂ ವೀರಗಲ್ಲೊಂದನ್ನೂ ಇರಿಸಲಾಗಿದೆ. ಅಂತರಾಳದ (ಒಳಗುಡಿ) ಭುವನೇಶ್ವರಿಯ ವಿನ್ಯಾಸ ಮನೋಹರವಾಗಿದೆ.

ನಕ್ಷತ್ರಾಕಾರದ ವಿನ್ಯಾಸವುಳ್ಳ ಹೊರಮಂಟಪದ ಸುತ್ತ ಕಕ್ಷಾಸನವಿದೆಯಲ್ಲ, ಅದರ ಹೊರಭಾಗದಲ್ಲಿನ ಶಿಲ್ಪರೂಪಗಳೇ ಅಮೃತಾಪುರದ ಮುಖ್ಯ ವೈಶಿಷ್ಟ್ಯ. ಈ ಒರಗುಫಲಕದ ಎರಡು ಅಡಿಯಗಲವನ್ನು ಬಳಸಿಕೊಂಡು ರಾಮಾಯಣ ಹಾಗೂ ಕೃಷ್ಣನ ಕಥೆಗಳನ್ನು ನಿರೂಪಿಸಿರುವ ಶಿಲ್ಪಿಗಳ ಕೌಶಲವನ್ನು ಎಷ್ಟು ಹೊಗಳಿದರೂ ಅತಿಶಯವಲ್ಲ. ಶ್ರೀಕೃಷ್ಣಜನನ, ನಿದ್ರಿಸುವ ಕಂಸನನ್ನು ತನ್ನ ಕೂಗಿನಿಂದ ಎಚ್ಚರಗೊಳಿಸಬಾರದೆಂದು ವಸುದೇವನು ಕತ್ತೆಯನ್ನು ಬೇಡಿಕೊಳ್ಳುವುದು, ಕಾಳಿಂಗಮರ್ದನ, ವೇಣುಗೋಪಾಲ, ಗೋವರ್ಧನಗಿರಿಧಾರಿ, ಕೃಷ್ಣನಿಂದ ಧೇನುಕ ಮತ್ತಿತರ ರಕ್ಕಸರ ಸಂಹಾರ ಮೊದಲಾದ ಕೃಷ್ಣನ ಜೀವನಕ್ಕೆ ಸಂಬಂಧಿಸಿದ ಕಥಾನಕಗಳೂ, ಅರ್ಜುನನು ದ್ರುಪದನನ್ನು ಸೆರೆಹಿಡಿದು ದ್ರೋಣನ ಮಂಚದ ಕಾಲಿಗೆ ಕಟ್ಟಿ ಅವನ ಪ್ರತಿಜ್ಞೆಯನ್ನು ಈಡೇರಿಸಿದುದು, ಅರಗಿನ ಮನೆಯನ್ನು ಸುಡುವುದು, ಅರ್ಜುನನಿಂದ ಮತ್ಸ್ಯಯಂತ್ರಛೇದ, ಪಾಂಡವರು ದ್ಯೂತದಲ್ಲಿ ಸೋಲುವುದು, ದ್ರೌಪದಿಯ ವಸ್ತ್ರಾಪಹಾರ, ಯುದ್ಧದೃಶ್ಯಗಳು ಮೊದಲಾಗಿ ಮಹಾಭಾರತದ ಹಲವು ಘಟನೆಗಳೂ ಈ ಫಲಕಗಳ ಮೇಲೆ ಚಿತ್ರಿತವಾಗಿರುವ ಪರಿ ಮನೋಹರವಾಗಿದೆ.

ಶ್ರೀರಾಮನು ವನವಾಸಕ್ಕೆ ಹೋದುದು, ಸಮುದ್ರಕ್ಕೆ ಕಪಿಗಳು ಸೇತುವೆ ಕಟ್ಟಿದುದು, ಯುದ್ಧದೃಶ್ಯಗಳು, ರಾವಣಸಂಹಾರ ಮತ್ತಿತರ ರಾಮಾಯಣಕ್ಕೆ ಸಂಬಂಧಪಟ್ಟ ದೃಶ್ಯಾವಳಿಯನ್ನೂ ಇಲ್ಲಿ ಕಾಣಬಹುದು. ಕುಂಭಕರ್ಣನನ್ನು ಎಚ್ಚರಗೊಳಿಸಲು ಅವನ ಮೈಮೇಲೆ ಆನೆಯನ್ನು ನಡೆದಾಡಿಸುವುದೇ ಮೊದಲಾದ ರಕ್ಕಸರ ಚಟುವಟಿಕೆಯ ಶಿಲ್ಪಚಿತ್ರ ಸ್ವಾರಸ್ಯಕರವಾಗಿದೆ. ಕಿರುಪಟ್ಟಿಕೆಗಳ ಮೇಲೆ ಹಂಸ, ಹೂಬಳ್ಳಿಗಳು, ಮಿಥುನಶಿಲ್ಪಗಳು, ಆನೆಸಿಂಹಗಳು ಕಂಡುಬರುತ್ತವೆ.

ದೇವಾಲಯದ ಮೇಲುಗೋಡೆಯ ಅಂಚಿಗೆ ಕೈಪಿಡಿಯ ಮೇಲೂ ಶಿಲ್ಪಾಲಂಕಾರ ಮುಂದುವರೆದಿದೆ. ಅಲ್ಲಲ್ಲಿ ಸಿಂಹಮುಖದ ಪ್ರಭಾವಳಿಯಿರುವ ಕಿರುಕೋಷ್ಠಗಳೂ ಅವುಗಳೊಳಗೆ ವಿಷ್ಣು, ಶಿವ ಮೊದಲಾದ ದೇವತಾಮೂರ್ತಿಗಳೂ ಗುಡಿಯ ಅಂದವನ್ನು ಹೆಚ್ಚಿಸಿವೆ. ಹೊಯ್ಸಳ ಶಿಲ್ಪಕಲೆಯ ವಿಶೇಷಮಾದರಿಯನ್ನು ಪ್ರದರ್ಶಿಸುವ ಅಮೃತಾಪುರಕ್ಕೆ ಭೇಟಿನೀಡಲು ಮರೆಯದಿರಿ.