ನನ್ನ ಬೆಂಗಳೂರಿನ ತರಬೇತಿಗಳು ಮುಗಿದ ತಕ್ಷಣ ನಾನು ರಾಮ್ ಇಬ್ಬರೂ ಕಾರಿನಲ್ಲಿ ಹಳ್ಳಿಗೆ ಹೊರಟೆವು. ಅದೇ ವಾರಾಂತ್ಯದಲ್ಲಿ ವಿನೋದ ಅವರಿಗೂ ಕೂಡ ಬರಲು ಹೇಳಿದ್ದೆ. ಅವರೂ ಹಳ್ಳಿಯಲ್ಲಿ ನಾವು ಸಧ್ಯ ವಾಸಕ್ಕಿದ್ದ ಹೊಸ ಮನೆಯನ್ನು ಇನ್ನೂ ನೋಡಿರಲಿಲ್ಲ. ಅದೂ ಅಲ್ಲದೆ ರಾಮನನ್ನು ಅವರಿಗೆ ಪರಿಚಯಿಸಿದಂತಾಗುತ್ತದೆ ಎಂಬುದು ನನ್ನ ಯೋಚನೆ. ಬೆಂಗಳೂರಿನಿಂದ ನಮ್ಮ ಹಳ್ಳಿಗೆ ಹೋಗಲು ಹೆಚ್ಚು ಕಡಿಮೆ ಏಳು ಗಂಟೆಗಳು ಬೇಕು. ರಾಮನಿಗೆ ಅದು ಮೊದಲ ಆಘಾತ! ಅವನು ನಮ್ಮ ಹಳ್ಳಿ ಬೆಂಗಳೂರಿನ ಹತ್ತಿರವೇ ಇತ್ತು ಅಂದುಕೊಂಡಿದ್ದನಂತೆ! ದೂರದ ಆಂಧ್ರದಿಂದಲೇ ಬಂದ ನಿನಗೆ ಬೆಂಗಳೂರಿಗೆ ಹತ್ತಿರವಿದ್ದರೇನು, ದೂರವಿದ್ದರೇನು ವ್ಯತ್ಯಾಸ ಅಂತ ಸಮಾಧಾನ ಮಾಡಿದೆ.
ಗುರುಪ್ರಸಾದ್‌ ಕುರ್ತಕೋಟಿ ಬರೆಯುವ ಗ್ರಾಮ ಡ್ರಾಮಾಯಣ ಅಂಕಣ

ನಮ್ಮ ಅದೃಷ್ಟಕ್ಕೆ ಭತ್ತ ತನ್ನಷ್ಟಕ್ಕೆ ತಾನು ಬೆಳೆಯುತ್ತಿತ್ತು! ಪ್ರಕೃತಿಯನ್ನು ಅದರಷ್ಟಕ್ಕೆ ಬಿಟ್ಟರೆ ನಮಗೆ ಬೇಕಾದಷ್ಟು ಕೊಟ್ಟೇ ಕೊಡುತ್ತದೆ. ಅದರಲ್ಲಿ ಸಂಶಯವೇ ಇಲ್ಲ. ಆದರೆ ಮಾನವನ ದುರಾಸೆಗೆ ಕೊನೆ ಎಲ್ಲಿ. ಎಷ್ಟು ಇದ್ದರೂ ಸಾಲದು.

ಅಷ್ಟೊತ್ತಿಗೆ ಮಣ್ಣು ರಹಿತ ಕೃಷಿಯ (Hydroponics) ತರಬೇತಿ ಶಿಬಿರಗಳನ್ನು ಇಟ್ಟುಕೊಂಡಿದ್ದ ಕಾರಣ ನಾನು ಮತ್ತೆ ಬೆಂಗಳೂರಿಗೆ ಹೋಗಬೇಕಾಗಿ ಬಂತು. ನಾಗಣ್ಣ ಅವರೂ, ತಮ್ಮ ಮಗಳನ್ನು ನೋಡಿ ಬಹಳ ದಿನಗಳಾದವು ಊರಿಗೆ ಹೋಗಿ ಬರುವೆ ಅಂದರು. ಇಬ್ಬರೂ ಸೇರಿ ಊರಿಗೆ ನಡೆದೆವು. ನಾವು ಬರುವವರೆಗೆ ನಮ್ಮ ಬೆಳೆಗಳ ಗತಿ ಏನು ಅಂತ ಚಿಂತೆ ಶುರುವಾಯ್ತು.

ಸರ್ ಶ್ಯಾಮನಿಗೆ ದಿನಕ್ಕೆ ಒಂದು ಸಲವಾದರೂ ಹೊಲಕ್ಕೆ ಹೋಗಿ ಬರಲು ಹೇಳಿದ್ದೇನೆ ಅಂತ ನಾಗಣ್ಣ ಅಂದರು. ಅವರಷ್ಟು ಮುಗ್ಧರು!

ನನಗಂತೂ ನಾವಿಲ್ಲದಾಗ ಶ್ಯಾಮನು ಕೆಲಸ ಮಾಡಬಹುದು ಎಂಬ ಎಳ್ಳಷ್ಟು ನಂಬಿಕೆ ಇನ್ನೂ ಬಂದಿರಲಿಲ್ಲ. ನಾಗಣ್ಣ ಅವನೊಟ್ಟಿಗೆ ಹಲವು ದಿನಗಳಿಂದ ಕೆಲಸ ಮಾಡುತ್ತಿದ್ದುದರಿಂದ ಇವರಿಗೆ ಅವನ ಬಗ್ಗೆ ಸ್ವಲ್ಪ ನಂಬಿಕೆ ಬೆಳೆದಿತ್ತು ಅಂತ ಕಾಣುತ್ತೆ.

ಅವನು ಹೊಲಕ್ಕೆ ಹೋಗಿ ಬಂದೆ ಅಂತ ಸುಳ್ಳೇ ಹೇಳಿದ್ರೆ ಹೆಂಗ್ರಿ ನಂಬ್ತೀರಾ?

ಸರ್, ಅವನು 100% ಹೋಗೇ ಹೋಗ್ತಾನೆ bet ಕಟ್ತೀನಿ ಅಂತ ಅವರು ಹೇಳಿದ್ದು ಕೇಳಿ ನನಗೆ ಆಶ್ಚರ್ಯ ಆಯ್ತು. ಅಲ್ಲಿನವರ ಬಗ್ಗೆ ಇವರಿಗಿಂತ ಹೆಚ್ಚು ತಿಳಿದಿದ್ದ ನನಗೆ ಇವರದು ಕುರುಡು ನಂಬಿಕೆ ಅಂತಲೆ ಅನಿಸಿತು. ನನ್ನ ಸಂಶಯ ಪಿಶಾಚಿಯನ್ನು ಉಚ್ಚಾಟಿಸಲು ಅವರು ನಕ್ಕು ಹೇಳಿದರು;

“ಸರ್ ಶ್ಯಾಮನಿಗೆ ಬೀಡಿ ಸೇದೋ ಚಟ ಇದೆ. ಮನೇಲಿ ಹೆಂಡ್ತಿ ಬಿಡೋಲ್ಲ. ಅದಕ್ಕೆ ಯಾರಿಗೂ ಕಾಣದೇ ಇರೋ ಜಾಗಕ್ಕೆ ಹೋಗಿ ಬೀಡಿ ಹೊಡಿತಾನೆ. ನಾನು ಒಂದು ಕಟ್ಟು ಬೀಡಿ ಹಾಗೂ ಲೈಟರ್ ನಮ್ಮ ಹೊಲದ ಟೆಂಟ್‌ನಲ್ಲಿ ಇಟ್ಟೀದಿನಿ. ಅದರ ಆಸೆಗಾದ್ರೂ ಅವನು ದಿನಾಲೂ ಅಲ್ಲಿಗೆ ಹೋಗಲೇ ಬೇಕು!” ಅಂದರು.

“ವಾಹ್.. ಒಳ್ಳೆಯ ತಲೆ ನಿಮ್ಮದು ನಾಗಣ್ಣ! ಸೂಪರ್ idea ಬಿಡ್ರಿ!” ಅಂತ ಅವರ ಬೆನ್ನು ಚಪ್ಪರಿಸಿದೆ. ಇಂತಹ ಶಿಷ್ಯನ ಪಡೆದ ನಾನೇ ಧನ್ಯ ಅನಿಸಿತು!

ಹೊಲವನ್ನು ಶ್ಯಾಮನ ಹೆಗಲಿಗೆ ಹೊರೆಸಿ ಇಬ್ಬರೂ ಬೆಂಗಳೂರಿಗೆ ಧಾವಿಸಿದೆವು.

*****

ಒಂದು ವಾರ ಬೆಂಗಳೂರಿನ ನನ್ನ ಉಳಿದ ಕೆಲಸ ಹಾಗೂ workshop ಗಳಲ್ಲಿ ಮಗ್ನನಾದೆ. ಬೆಂಗಳೂರಿನಲ್ಲಿಯೂ ನಮ್ಮ Hydroponics ತಂತ್ರಜ್ಞಾನವನ್ನು ಬಳಸಿ ಬೆಳೆಸುತ್ತಿರುವ ತೋಟ ಇದೆ. ಅಲ್ಲಿಯೂ ಹಲವು ತರಕಾರಿಗಳನ್ನು ಬೆಳೆಯುತ್ತಿದ್ದೇವೆ. ನಾನು ಹಳ್ಳಿಗೆ ಬಂದಾಗ ಆಶಾಳ ಮೇಲೆ ಸ್ವಲ್ಪ ಹೆಚ್ಚು ಜವಾಬ್ದಾರಿ ಬೀಳುತ್ತಿತ್ತು. ಬೆಂಗಳೂರಿನ ತೋಟ ಚಿಕ್ಕದೆ ಆದರೂ, ಮನೆಯ ಕೆಲಸವನ್ನೂ ನೋಡಿಕೊಂಡು ಅದನ್ನೂ ನಿರ್ವಹಿಸುವುದು ಅವಳಿಗೆ ಕಷ್ಟ. ಬೆಂಗಳೂರಿನ ತೋಟದಲ್ಲಿ ಮಣ್ಣನ್ನು ಬಳಸದೆ ಬೆಳೆಯುವುದು ವಿಶೇಷ. ಅದನ್ನು ಹೇಗೆ ಮಾಡಬೇಕು ಎಂಬ ಬಗ್ಗೆ ಹಲವಾರು ತರಬೇತಿಗಳನ್ನು ನಾನು ಆಗಾಗ ನಡೆಸುತ್ತಿರುತ್ತೇನೆ. ಅದಕ್ಕಾಗಿ ದೇಶದ ವಿದೇಶಗಳಿಂದ ನನ್ನ ಬಳಿ ವಿಚಾರಿಕೊಂಡು ಕಲಿಯಲು ಬರುತ್ತಾರೆ. ಅದಕ್ಕೆಲ್ಲ ನನಗೆ ಸಹಕಾರಿಯಾಗುವುದು, ಹಾಗೂ ನನ್ನನ್ನು ಜಗತ್ತಿನವರಿಗೆಲ್ಲ ಪರಿಚಯಿಸುವುದು ಗೂಗಲ್ ಎಂಬ ಅದ್ಭುತ ಸಾಧನ!

ಒಂದು ದಿನ ಹಾಗೆಯೇ ಇಮೇಲ್ ನೋಡುತ್ತಿದ್ದಾಗ ರಾಮ್ ಅನ್ನುವ ಒಬ್ಬ ಹುಡುಗನಿಂದ ಬಂದ ಒಂದು ಪತ್ರ ಗಮನ ಸೆಳೆಯಿತು. ಅವನು ತಾನು ಆಂಧ್ರಪ್ರದೇಶದವನು, MBA ಮಾಡಿದ್ದೇನೆ, ಕೃಷಿ ಬಗ್ಗೆ ಒಲವಿದೆ. ನಿಮ್ಮ ಬಳಿ ಇದ್ದು ಕಲಿಯುವ ಆಸೆಯಿದೆ ಅಂತ ಬರೆದಿದ್ದ. ಬೆಂಗಳೂರಿನಲ್ಲಿ ಮಣ್ಣುರಹಿತ ಕೃಷಿಯ ಬಗ್ಗೆ ಅಷ್ಟು ದೀರ್ಘ ಅವಧಿಯ ತರಬೇತಿಗಳನ್ನು ಸಧ್ಯಕ್ಕೆ ನಡೆಸುವ ಯೋಚನೆ ಇರಲಿಲ್ಲ. ಹಳ್ಳಿಯಲ್ಲಿ ಬೆಳೆಸಿರಿ ರೈತ ಬಳಗ ಕಟ್ಟುತ್ತಿದ್ದೆನಾದರೂ, ಈಗ MBA ಮುಗಿಸಿದ ಈತ ಇನ್ನೂ ಚಿಕ್ಕವನು. ಹೀಗಾಗಿ ಅವನನ್ನು ಹಳ್ಳಿಗೆ ಕರೆದೊಯ್ಯಬೇಕು ಅಂದರೆ ಅಲ್ಲಿ ಅವನು ಇದ್ದು ಕಲಿಯುವುದು ಬಗೆಹರಿಯದ ವಿಷಯ ಅನಿಸಿ, ಈಗ ಸಧ್ಯಕ್ಕೆ ಅಂತಹ ತರಬೇತಿ ಬೆಂಗಳೂರಿನಲ್ಲಿ ಇಲ್ಲ, ಹಳ್ಳಿಯಲ್ಲಿ ಇದೆಯಾದರೂ ಅದು ನಿನಗೆ ಸೂಕ್ತ ಆಗಲಿಕ್ಕಿಲ್ಲ ಅಂತ ಬರೆದೆ. ಕೂಡಲೇ ಉತ್ತರಿಸಿದ ಅವನು ನಿಮ್ಮ ಜೊತೆ ಮಾತಾಡಬಹುದೆ ಅಂದ. ಇವನಿಗೆ ಕೃಷಿ ಬಗ್ಗೆ ತುಂಬಾ ಆಸ್ಥೆ ಇರಬೇಕು ಅನಿಸಿತು. ಫೋನ್‌ನಲ್ಲಿ ಮಾತಾಡಿದ ಅವನು ಹಳ್ಳಿಯಾದರೂ ಸರಿ ತಾನು ಬರುತ್ತೇನೆ, ನಿಮ್ಮ ಜೊತೆ ಇದ್ದು ಎಲ್ಲವನ್ನೂ ಕಲಿಯುತ್ತೇನೆ ಅಂದ.

ಅಲ್ಲಿ ಮನೆಗಳು ಇಲ್ಲಿಯ ತರಹ ಇಲ್ಲಪ್ಪ. ನಾವಿರೋದು ಹೆಂಚಿನ ಮನೆ. ನಿನಗೆ ಸರಿ ಹೋಗೋಲ್ಲ ಅಂದೆ. ಆದರೂ ಅವನು ಕೇಳಲಿಲ್ಲ. “ಇಲ್ಲ ಸರ್ ನಮ್ಮ ತಂದೆ ಜೊತೆಗೆ ಮಾತಾಡಿದ್ದೇನೆ. ಅವರೂ ಒಪ್ಪಿದ್ದಾರೆ ನಾನು ಬರುತ್ತೇನೆ”, ಅಂತ ಒತ್ತಾಯಿಸಿದ. ಸರಿ ನಿನ್ನಿಷ್ಟ ಅಂತ ಅವನಿಗೆ ಒಂದು ದಿನಾಂಕ ಗೊತ್ತುಪಡಿಸಿದೆ. ಅವನು ತನ್ನ ಊರಿನಿಂದ ಬೆಂಗಳೂರಿಗೆ ಬರುವುದು, ಆಮೇಲೆ ನಾನು ಅವನು ಸೇರಿ ಹಳ್ಳಿಗೆ ಹೋಗುವುದು ಅಂತ ನಿರ್ಧಾರ ಆಯ್ತು. ನಾನು ಇಂತಹ ಅನೇಕ ಆರಂಭಶೂರರನ್ನು ನೋಡಿದ್ದೆ. ಅವನು ಬರಲಾರ ಅಂತಲೆ ಅನಿಸಿತ್ತು.

ಆದರೆ ನನಗೆ ಅಚ್ಚರಿ ಮೂಡಿಸಲೇ ಅಂತಾನೋ, ಹೇಳಿದ ದಿನದಂದು ಬಂದೇ ಬಿಟ್ಟನಲ್ಲ ರಾಮ್! ಸಪೂರ ದೇಹಿಯಾದ ಅವನು ಇನ್ನೂ PUC ಓದುತ್ತಿರುವ ಹುಡುಗನಂತೆ ಇದ್ದ. ಅವನನ್ನು ಮಧ್ಯಾಹ್ನ ಬೆಂಗಳೂರಿನ ನಮ್ಮ ಮನೆಗೆ ಊಟಕ್ಕೆ ಕರೆದುಕೊಂಡು ಹೋದೆ. ಅವನ ಊಟವೂ ತುಂಬಾ ಕಡಿಮೆ. ನೀರು ಮಾತ್ರ ಲಿಟರುಗಟ್ಟಲೆ ಗಟ ಗಟ ಅಂತ ಕುಡೀತಿದ್ದ. ಅವನ ಜೊತೆ ಮಾತಾಡತೊಡಗಿದಾಗ ಅವನು ಸಿಕ್ಕಾಪಟ್ಟೆ ಪುಸ್ತಕಗಳನ್ನು ಓದಿದ್ದ ವಿಷಯ ತಿಳಿಯಿತು. ಆದರೆ ವ್ಯವಹಾರ ಜ್ಞಾನ ತುಂಬಾ ಕಡಿಮೆ ಅನಿಸಿತು. ಅವನ ಒಂದು ಗುರುತಿನ ಚೀಟಿಯನ್ನು ಫೋಟೋ ತೆಗೆದುಕೊಂಡೆ. ಯಾಕೆಂದರೆ ಅವನು ನನಗೆ ಇನ್ನೂ ಅಪರಿಚಿತ. ಯಾವುದಕ್ಕೂ ಇರಲಿ ಅಂತ ಅವರ ತಂದೆಯ ಮೊಬೈಲ್ ನಂಬರ್ ಕೂಡ ತೆಗೆದುಕೊಂಡೆ. ಅವರ ಜೊತೆಗೆ ಒಂದು ಸಲ ಮಾತಾಡಿಸು ಅಂದರೆ ಯಾಕೋ ಅಷ್ಟು ಇಷ್ಟವಿದ್ದಂತೆ ಕಾಣಲಿಲ್ಲ. ಬಹುಶಃ ಅವರಿಗೆ ತೆಲುಗು ಬಿಟ್ಟು ಬೇರೆ ಭಾಷೆ ಬರಲಿಕ್ಕಿಲ್ಲ ಅದಕ್ಕೆ ಮುಜುಗರಕ್ಕೆ ಈಡು ಮಾಡುವುದು ಬೇಡ ಅಂತ ನಾನೂ ಸುಮ್ಮನಾದೆ. ಹಾಗೆಯೇ ಮೊಬೈಲ್‌ನಲ್ಲಿ ನಮ್ಮಿಬ್ಬರ ಸೆಲ್ಫಿ ತೆಗೆದುಕೊಂಡೆ. ಅವನು ಹಾಗೆ ಫೋಟೋ ತೆಗೆದುಕೊಳ್ಳುವಾಗ ಸ್ವಲ್ಪ ಹಿಂಜರಿಕೆ ತೋರಿಸಿದ. ಯಾಕೆ ಅಂತ ಕೇಳಿದಾಗ ಫೋಟೋಗಳು ತನಗೆ ಇಷ್ಟವಿಲ್ಲ ಅಂದ. ಅವನದು facebook, insta ದಂತಹ ಯಾವುದೇ ಅಕೌಂಟ್‌ಗಳು ಇರಲಿಲ್ಲ. ಒಟ್ಟಿನಲ್ಲಿ ಅವನು ಈಗಿನ ಯುವ ಪೀಳಿಗೆಯಂತೆ ನನಗೆ ಕಾಣಿಸಲಿಲ್ಲ. ತುಂಬಾ ಓದುತ್ತಿದ್ದ, ಮೊಬೈಲ್ ಕೂಡ ಜಾಸ್ತಿ ನೋಡುತ್ತಿರಲಿಲ್ಲ. ಅಥವಾ ಈಗಿನ ಪೀಳಿಗೆಯಲ್ಲೂ ಕೂಡ ಎಲ್ಲ ತರಹದವರೂ ಇದ್ದಾರೆ. ನಾವು ಎಲ್ಲರನ್ನೂ ಒಂದೇ ತಕ್ಕಡಿಯಲ್ಲಿ ತೂಗಬಾರದು ಅನಿಸಿತು.

ಹಳ್ಳಿಯಲ್ಲಿ ಸಧ್ಯಕ್ಕೆ ಯಾರೂ ಇರಲಿಲ್ಲ. ನಾಗಣ್ಣ ಕೂಡ ಬೆಂಗಳೂರಿಗೆ ಬಂದಿದ್ದರು. ಅವರಿಗೆ ಹಾಗೂ ವಿನೋದ ಅವರಿಗೆ, ರಾಮ್ ಎಂಬ ಹೊಸ ಸದಸ್ಯ ಬೆಳೆಸಿರಿ ರೈತ ಬಳಗಕ್ಕೆ ಸೇರ್ಪಡೆಯಾದ ವಿಷಯ ಹೇಳಿದೆ. ನನ್ನ ಇಬ್ಬರೂ ಶಿಷ್ಯಂದಿರು ಖುಷಿ ಪಟ್ಟರು.

ನನ್ನ ಬೆಂಗಳೂರಿನ ತರಬೇತಿಗಳು ಮುಗಿದ ತಕ್ಷಣ ನಾನು ರಾಮ್ ಇಬ್ಬರೂ ಕಾರಿನಲ್ಲಿ ಹಳ್ಳಿಗೆ ಹೊರಟೆವು. ಅದೇ ವಾರಾಂತ್ಯದಲ್ಲಿ ವಿನೋದ ಅವರಿಗೂ ಕೂಡ ಬರಲು ಹೇಳಿದ್ದೆ. ಅವರೂ ಹಳ್ಳಿಯಲ್ಲಿ ನಾವು ಸಧ್ಯ ವಾಸಕ್ಕಿದ್ದ ಹೊಸ ಮನೆಯನ್ನು ಇನ್ನೂ ನೋಡಿರಲಿಲ್ಲ. ಅದೂ ಅಲ್ಲದೆ ರಾಮನನ್ನು ಅವರಿಗೆ ಪರಿಚಯಿಸಿದಂತಾಗುತ್ತದೆ ಎಂಬುದು ನನ್ನ ಯೋಚನೆ.

“ಸರ್ ಶ್ಯಾಮನಿಗೆ ಬೀಡಿ ಸೇದೋ ಚಟ ಇದೆ. ಮನೇಲಿ ಹೆಂಡ್ತಿ ಬಿಡೋಲ್ಲ. ಅದಕ್ಕೆ ಯಾರಿಗೂ ಕಾಣದೇ ಇರೋ ಜಾಗಕ್ಕೆ ಹೋಗಿ ಬೀಡಿ ಹೊಡಿತಾನೆ. ನಾನು ಒಂದು ಕಟ್ಟು ಬೀಡಿ ಹಾಗೂ ಲೈಟರ್ ನಮ್ಮ ಹೊಲದ ಟೆಂಟ್‌ನಲ್ಲಿ ಇಟ್ಟೀದಿನಿ. ಅದರ ಆಸೆಗಾದ್ರೂ ಅವನು ದಿನಾಲೂ ಅಲ್ಲಿಗೆ ಹೋಗಲೇ ಬೇಕು!” ಅಂದರು.

ಬೆಂಗಳೂರಿನಿಂದ ನಮ್ಮ ಹಳ್ಳಿಗೆ ಹೋಗಲು ಹೆಚ್ಚು ಕಡಿಮೆ ಏಳು ಗಂಟೆಗಳು ಬೇಕು. ರಾಮನಿಗೆ ಅದು ಮೊದಲ ಆಘಾತ! ಅವನು ನಮ್ಮ ಹಳ್ಳಿ ಬೆಂಗಳೂರಿನ ಹತ್ತಿರವೇ ಇತ್ತು ಅಂದುಕೊಂಡಿದ್ದನಂತೆ! ದೂರದ ಆಂಧ್ರದಿಂದಲೇ ಬಂದ ನಿನಗೆ ಬೆಂಗಳೂರಿಗೆ ಹತ್ತಿರವಿದ್ದರೇನು, ದೂರವಿದ್ದರೇನು ವ್ಯತ್ಯಾಸ ಅಂತ ಸಮಾಧಾನ ಮಾಡಿದೆ.

ಮಧ್ಯಾಹ್ನ ನಾವು ಹೊಸಕೊಪ್ಪದ ನಮ್ಮ ಮನೆಯನ್ನು ತಲುಪಿದೆವು. ಗಾಡಿಯನ್ನು ಇಳಿದು ಒಳಗೆ ಹೋಗುತ್ತಲೇ ರಾಮನ ಕಣ್ಣುಗಳು ಅಲ್ಲಿನ ಗೋಡೆಗಳ ಮೇಲೆ ಹರಿದಾಡಿದವು. ಕೂಡಲೇ ಬೆಚ್ಚಿ ಬಿದ್ದವನಂತೆ…

“ಅಯ್ಯೋ ಸರ್ ಹಲ್ಲಿಗಳು ಇವೆ ಅಂದ..!” ನನಗೆ ಸ್ವಲ್ಪ ಕೋಪ ಬಂತು. ಆದರೂ ಸಾವರಿಸಿಕೊಂಡು ಸಮಾಧಾನದಿಂದಲೇ ಹೇಳಿದೆ.

“ಅಯ್ಯಾ ನಿನಗೆ ಹೇಳಿದ್ದೆನಲ್ಲವೇ, ಇದು ಹಳ್ಳಿ ಅಂತ? ಹಳ್ಳಿಯಲ್ಲಿ ಹಲ್ಲಿಗಳೂ ಇರುತ್ತವೆ, ಹಾವುಗಳೂ ಇರುತ್ತವೆ!”

“ಸರ್.. ನನಗೆ ಹಳ್ಳಿ ಇಷ್ಟ, ಆದರೆ ಹಲ್ಲಿ ಕಂಡರೆ ಆಗೋಲ್ಲ” ಅಂದ.

“ಸರಿ ಒಬ್ಬೊಬ್ಬರಿಗೆ ಒಂದೊಂದು ಕಂಡರೆ ಆಗೋಲ್ಲ ಬಿಡು. ಎಲ್ಲ ರೂಡಿ ಆಗುತ್ತೆ” ಅಂದೆನಾದರೂ ಇವನು ಇಲ್ಲಿ ಬಹಳ ದಿನ ಉಳಿಯಲಿಕ್ಕಿಲ್ಲ ಅಂತ ಮನದಟ್ಟಾಯಿತು. ಅವತ್ತು ರಾತ್ರಿ ಫೋನ್ ಮಾಡಿದ್ದ ನಾಗಣ್ಣ ತಮ್ಮ ಹೊಸ ಸಂಗಾತಿಯ ಬಗ್ಗೆ ವಿಚಾರಿಸಿದರು. ವೀಡಿಯೊ ಕಾಲ್ ಮಾಡಿ ಅವರಿಗೂ ಪರಿಚಯಿಸಿದೆ. ಮುಂದೆರಡೆ ದಿನಗಳಲ್ಲಿ ವಿನೋದ್ ಕೂಡ ಬರುವವರಿದ್ದರು. ಅಷ್ಟರಲ್ಲೇ ರಾಮನಿಗೆ ಹೊಲ ತೋರಿಸಲು ಕರೆದೊಯ್ದೆ. ಭತ್ತ ಇನ್ನೂ ಉದ್ದವಾಗಿ ಹಸಿರಿನಿಂದ ಕಂಗೊಳಿಸುತ್ತಿತ್ತು. ನಡು ನಡುವೆ ಸಣ್ಣ ಸಣ್ಣ ಬೇರೆ ಗಿಡಗಳೂ ಬೆಳೆಯುತ್ತಿದ್ದವು. ಅವುಗಳು ಭತ್ತದ ಗಿಡವನ್ನು ಮೀರಿ ಬೆಳೆಯಲಾರದಂತೆ ಏನು ಮಾಡಬೇಕು ಅಂತ ಯೋಚಿಸುತ್ತಿದ್ದೆ. ಅವುಗಳ ನಡುವೆ ಹೋಗಿ ಕಳೆಗಳನ್ನು ಕೀಳುವಷ್ಟು ಧೈರ್ಯ ಇನ್ನೂ ಬಂದಿರಲಿಲ್ಲ. ನಮ್ಮ ಅಡಿಕೆ ಗಿಡಗಳ ನೆರಳಿಗೆ ನಡು ನಡುವೆ ಬಾಳೆ ಗಿಡಗಳನ್ನು ಇನ್ನೂ ಹಾಕುವ ಕೆಲಸ ಉಳಿದಿತ್ತು. ವೀಕೆಂಡ್‌ನಲ್ಲಿ ವಿನೋದ ಬಂದಾಗ ಎಲ್ಲರೂ ಸೇರಿ ಮಾಡಿದರಾಯ್ತು ಅಂತ ರಾಮನಿಗೆ ಹೇಳಿದೆ.

ಅವನಿಗೆ ಬೋರಿನ ಪಾಯಿಂಟ್ ತೋರಿಸಿ ಅದನ್ನು ಚಾಲೂ ಮಾಡಿದಾಗ ಮತ್ತೆ ಒಂದೆರಡು ಕಡೆ ಪೈಪ್ ಒಡೆದು ಸೋರುತ್ತಿತ್ತು. ನನಗೆ ತುಂಬಾ ಸಿಟ್ಟು ಬಂತು. ಅದು ಯಾರೋ ಬೇಕಂತಲೇ ಮಾಡಿದ್ದು ಅಂತ ಎಂತಹ ದಡ್ಡನಿಗೂ ಗೊತ್ತಾಗುತ್ತಿತ್ತು. ಆದರೆ ಬಡವನ ಸಿಟ್ಟು ದವಡೆಗೆ ಮೂಲ ಅಂತ, ಏನೂ ತೋರ್ಪಡಿಸದೆ ಹಾಗೆಯೇ ನುಂಗಿಕೊಂಡೆ. ಮತ್ತೆ ಗಮ್ ತಂದು ನಾನು ರಾಮ್ ಸೇರಿ ಅದನ್ನು ಜೋಡಿಸಿದೆವು. ಅವನಿಗೆ ನಮ್ಮ ಅಡಿಕೆ ತೆಂಗು ಮಾಡೆಲ್ ಬಗ್ಗೆ ವಿವರಿಸಿದೆ. ಅದನ್ನೆಲ್ಲ ಕೇಳಿ ಯಾವುದೇ ಕೃಷಿ ಅನುಭವ ಹೊಂದಿರದಿದ್ದ ನಾನು ಇಷ್ಟೆಲ್ಲಾ ಹೇಗೆ ಕಲಿತೆ ಅಂತ ಅವನು ಆಶ್ಚರ್ಯದಿಂದ ಕೇಳಿದ. ಯಾವುದೇ ವಿಷಯದ ಬಗ್ಗೆ ಆಸ್ಥೆಯಿದ್ದರೆ ಎಲ್ಲವನ್ನೂ ಕಲಿಯಬಹುದು, ನಿನಗೂ ಎಲ್ಲ ಹೇಳಿಕೊಡುತ್ತೇನೆ ಅಂತ ಹೇಳಿದೆ. ಹೂಂ ಸರ್ ಅಂದ ಅವನು ಯಾಕೋ ಸ್ವಲ್ಪ ಡಲ್ ಆಗಿದ್ದ ಅಂತ ಅವನ ಮುಖ ನೋಡಿದಾಗ ಅನಿಸಿತು. ಚಿಕ್ಕವನು, ಆಗ ತಾನೇ ತನ್ನ ಕಂಫರ್ಟ್ ಜೋನ್‌ನಿಂದ ಹೊರಗೆ ಬಂದಿದ್ದಾನೆ, ಕಾಯ್ದು ನೋಡೋಣ ಅಂತ ಒಂದಿಷ್ಟು ಸಣ್ಣಪುಟ್ಟ ಕೆಲಸ ನಿರ್ವಹಿಸಿ ಮನೆಗೆ ಹೋದೆವು.

ರಾತ್ರಿ ಸುಮಾರು ಹೊತ್ತು ತೆಲುಗಿನಲ್ಲಿ ತನ್ನ ಅಪ್ಪ ಅಮ್ಮನ ಜೊತೆಗೆ ಮಾತಾಡುತ್ತಿದ್ದ ಅನಿಸಿತು. ಅಡಿಕೆ, ತೆಂಗು ಅಂತೇನೇನೋ ಇಂಗ್ಲಿಷ್ ಅಲ್ಲಿ ಹೇಳಿದ ಕೆಲವು ಪದಗಳನ್ನು ಕೇಳಿದಾಗ ಅವರಿಗೆ ತಾನು ನೋಡಿದ್ದನ್ನು ವಿವರಿಸುತ್ತಿದ್ದ ಅಂತ ಅನಿಸಿತು. ನಾನು ಅಡಿಗೆ ಮಾಡುವುದರಲ್ಲಿ ಮಗ್ನನಾಗಿದೆ. ರಾಮ ತನಗೆ ಅಡಿಗೆ ಮಾಡಲು ಬರುವುದಿಲ್ಲ ಅಂತ ಖಡಾಖಂಡಿತವಾಗಿ ಹೇಳಿದ್ದ. ನಾನು ನಿನಗೆ ಅದನ್ನೂ ಕಲಿಸುವೆ, ನೀನು ಅಡಿಗೆ ಮಾಡಲೇಬೇಕು ಅಂತ ನಾನೂ ಖಡಾಖಂಡಿತವಾಗಿ ಹೇಳಿದ್ದೆ. ಯಾರೂ ಇಲ್ಲದೆ ನೀನೊಬ್ಬನೇ ಇದ್ದರೆ ಹಸಿವಿನಿಂದಲೇ ಇರುತ್ತೀಯಾ? ಅಂತ ಕೇಳಿದೆ. ಅದಕ್ಕವನು ಆಯ್ತು ಕಲಿಯುವೆ ಅಂತ ಸಮ್ಮತಿಸಿದ ಕೂಡ.

ಶನಿವಾರ ಮುಂಜಾನೆ ಬೊರೊಬ್ಬರಿ ಏಳು ಗಂಟೆಗೆ ವಿನೋದ್ ದಾಸನಕೊಪ್ಪದ ಕತ್ರಿಗೆ ಬಂದು ತಲುಪಿದರು. ನಮ್ಮ ಹೊಸಕೊಪ್ಪದ ಮನೆಯಿಂದ ಅದು ನಾಲ್ಕು ಕಿಲೋಮೀಟರುಗಳಷ್ಟು ದೂರ. ಬೆಳಿಗ್ಗೆ ಅಲ್ಲಿಂದ ಬರಲಿಕ್ಕೆ ಬಸ್ಸು ಅಥವಾ ಟೆಂಪೋಗಳು ಇರೋದಿಲ್ಲ. ಅಲ್ಲಿಂದ ಬರಬೇಕೆಂದರೆ ಬನವಾಸಿಯ ಕಡೆಗೆ ಹೋಗುವ ವಾಹನಗಳೇ ಆಗಬೇಕು. ಇಂತಹ ಸಂದರ್ಭಗಳಲ್ಲಿ ನಮ್ಮ ಬಳಿ ಸ್ಕೂಟರ್ ಇದ್ದದ್ದು ತುಂಬಾ ಅನುಕೂಲ ಆಗಿತ್ತು. ಅವತ್ತಿನ ಕಾರ್ಯಕ್ರಮವನ್ನು ಮನಸಿನಲ್ಲೇ ರೂಪಿಸುತ್ತಾ ವಿನೋದವರನ್ನು ಕರೆ ತರಲು ದಾಸನಕೊಪ್ಪದತ್ತ ಹೊರಟೆ…

(ಮುಂದುವರಿಯುವುದು…)