ಜಂಬೂ ಸವಾರಿ ಹೆಸರುವಾಸಿಯೇನೋ ನಿಜ.ಅದರಷ್ಟೇ ಛಂದದ ಒಂದು ದೃಶ್ಯಾವಳಿ ಅಂದಿನ ಸಂಜೆಗಿದೆ.ಅದೇ ಪಂಜಿನ ಕವಾಯಿತು. ಜಂಬೂ ಸವಾರಿಯ ಮೆರವಣಿಗೆ ಅರಮನೆಯಿಂದ ಹೊರಟು ಜನಸಾಗರದೊಡನೆ ನಿಧಾನ ಗತಿಯಲ್ಲಿ ಸಾಗಿ ಬನ್ನಿಮಂಟಪದಲ್ಲಿ ತಂಗಿ ಎಂದೋ ಸಿಕ್ಕಿದ ಗೆಲುವಿನ ಸಂಕೇತವಾಗಿ ಬನ್ನಿ ಮರವೊಂದನ್ನು ಪೂಜಿಸಿ,ಅದರ ಬದಲು ಬಾಳೆಯ ಗಿಡವೊಂದನ್ನು ಕತ್ತರಿಸಿ ದೇವಿಗೆ ಅರ್ಪಿಸಿ ತಮ್ಮ ಗೆಲುವನ್ನು ನೆನಪಿಸಿಕೊಳ್ಳುವುದು ಇಂದಿಗೂ ರಾಜ ಮನೆತನದವರ ಸಾಂಕೇತಿಕ ಪೂಜೆಯಾಗಿ ಉಳಿದು ಬಂದಿದೆ.
ಸುಜಾತಾ ಎಚ್.ಆರ್. ಬರೆಯುವ ತಿರುಗಾಟ ಕಥಾನಕದ ಆರನೆಯ ಕಂತು.

ದೀಪದ ಕಡಲಾದ ಮೈಸೂರು

ದೇವಸ್ಥಾನಗಳಲ್ಲಿ, ಮನೆಮನೆಯ ಬಾಗಿಲ ಗೂಡುಗಳಲ್ಲಿ ಹಚ್ಚಿಡುತ್ತಿದ್ದ ಹಣತೆಯ ಕಿರುಬೆಳಕು, ಬೇಲಿ ಮೇಲಿನ ಮಿಂಚುಳುಸಾಲುಗಳು, ಕರಿಯಾಗಸದ ನಕ್ಷತ್ರ ಪುಂಜ, ಇರುಳುಕಣ್ಣುಗಳೇನೋ ಅನ್ನುವ ಹಾಗೇ ಉರಿಯುವ ಪ್ರಾಣಿಕಣ್ಣುಗಳು, ಕತ್ತಲಲ್ಲಿ ಪ್ರಯಾಣಿಗನ ಕಣ್ಣಿಗೆ ಬೆರಗನ್ನೀಯುತ್ತ ದಾರಿ ದೀಪವಾಗಿರುತ್ತಿದ್ದವು.

ಖಲೀಲ್ ಗಿಬ್ರಾನ್ ಕವಿಯೊಬ್ಬ ಹೇಗಿರಬೇಕು ಅಂತ ಅವನದ್ದೊದು ಸಣ್ಣ ಕಥೆಯಲ್ಲಿ ಒಂದು ರೂಪಕದ ಮೂಲಕ ಹೇಳ್ತಾನೆ. ಕಿಟಕಿಯಲ್ಲಿ ನಾನೊಂದು ದೀಪವನ್ನು ಹಚ್ಚಿಡುತ್ತೇನೆ ದಾರಿ ಹೋಕರು ಎಡವದಿರಲೆಂದು. ಕವಿಯ ಉದ್ದೇಶ ಹೇಗಿರಬೇಕೆನ್ನುವುದಕ್ಕೆ ಇದಕ್ಕಿಂತ ಮತ್ತೊಂದು ರೂಪಕದ ಮಾತು ದೊರೆಯಲಾರದು.

ಹೀಗೆ ಘನ ಉದ್ದೇಶಗಳೊಂದಿಗೆ ಕತ್ತಲಲ್ಲಿ ಸುಂದರವಾಗಿ ಚಿಕ್ಕಿಯಂತೆ ದಾರಿ ತೋರುತ್ತಿದ್ದ ಬೆಳಕಿನ ಬೊಗಸೆಗಳು ಹಲವು ವಿನ್ಯಾಸಗಳೊಂದಿಗೆ ಮನೆಯ ದೀಪಗಳಾಗಿ, ದಾರಿ ದೀಪಗಳಾಗಿ, ದೇವರ ನೀಲಾಂಜನಗಳಾಗಿ ಬೆಳಕು ಬೀರತೊಡಗಿ… ಇರುಳನ್ನು ಇರುಳ ಪಾಡಿಗೆ ಬಿಡದೆ ಕತ್ತಲಾದೊಡನೆ ಸಣ್ಣ ದೀಪಗಳಲ್ಲಿ ಬೇಗನೆ ಕೆಲಸ ಮುಗಿಸಿ ಮಲಗುತ್ತಿದ್ದ ಮನುಷ್ಯ ತನ್ನ ಇರುಳನ್ನು ವಿಸ್ತರಿಸುತ್ತ, ಕುತೂಹಲಕ್ಕೆ… ಸೂರ್ಯನ ಕಾಲದ ದಿಕ್ಕನ್ನೇ ಆವಿಷ್ಕರಿಸಿ, ಹೊಸ ಕಾಲವನ್ನು ತನಗೆ ಬೇಕಾದ ಹಾಗೆ ರೂಪಿಸಿಕೊಂಡ.

ಆ ನಂತರ ಸಾಲು ದೀಪಗಳ ಮೆರವಣಿಗೆ, ಪಂಜಿನ ಬಳಕೆ, ಗಾಳಿಗೆದುರಾಗಿ ಉರಿಯುವ ಬಯಲು ದೀಪಗಳಿಗೆ ಸೋರೆ ಬುರುಡೆಯ ಗೂಡುಗಳು, ಮಣ್ಣಿನ ದೀಪಗಳು, ಅದರ ಮೇಲಿನ ಚಿತ್ತಾರಗಳು, ತಗಡು, ಕಂಚು, ತಾಮ್ರ, ಗಾಜಿನ ಲ್ಯಾಂಟನ್ ಗಳು, ಹಸಿಯಾಗಿದ್ದರೂ ಎಣ್ಣೆ ಸುರಿದು ಉರಿಯುವ ಮರದ ದೊಂದಿಗಳು, ಬಟ್ಟೆ ಸುತ್ತಿಕೊಂಡು ಕುಡಿಕೆಯಲ್ಲಿ ಸುರಿವ ಎಣ್ಣೆ ಹೀರಿ ಉರಿಯ ಬೆಳಗುವ ದೊಂದಿಗಳು.

ಹೀಗೆ ಬೆಳಕಿನ ಚಕ್ರ ತಿರುಗಿ ಮುಂದುವರೆದು, ಪೆಟ್ರೋಮ್ಯಾಕ್ಸ್ ದೀಪಗಳು ಸೀಮೆ ಎಣ್ಣೆಯ ಬಳಕೆಯಿಂದುರಿದು…. ನಾಲ್ವಡಿ ಕೃಷ್ಣರಾಜರ ಆಳ್ವಿಕೆಯಲ್ಲಿ ಶಿಂಷಾದ ಜಲವಿದ್ಯುತ್ ಕೇಂದ್ರದಲ್ಲಿ ಶುರುವಾದ ವಿದ್ಯುತ್ ಉತ್ಪಾದನೆ ವಿಸ್ತಾರಗೊಂಡು…..ಇಂದು ಗಾಳಿಯಲ್ಲಿ ಕೈಬೀಸಿ ಸುತ್ತುವ ಗಾಳಿ ಯಂತ್ರಗಳು ಮಾಯಾಮಾಂತ್ರಿಕರಂತೆ ಬೆಳಕನ್ನು ಉತ್ಪಾದಿಸಲು ಸಹಾಯ ಮಾಡುತ್ತಿವೆ. ಸೋಲಾರ್ ಬೆಳಕಿನ ಕನ್ನಡಿಗಳು ಸೂರ್ಯನಿಗೇ ಕನ್ನಡಿ ಹಿಡಿದಂತಿವೆ.

ಇಂತು ಇರುಳು ತೆರೆಯುವ ದೀಪ ದಿಬ್ಬಣದ ಮಾಯಾಲೋಕವೊಂದನ್ನು ಮೈಸೂರು ನಗರ ಜಂಬೂಸವಾರಿ ಕಾಲದಿಂದಲೂ ಮುನ್ನಡೆಸಿಕೊಂಡು ಬರುತ್ತಿದೆ. ಮೈಸೂರಿನ ಕಟ್ಟಡಗಳ ವಿನ್ಯಾಸ ಹಾಗೂ ದೀಪಾಲಂಕಾರ ಪ್ರಪಂಚದ  ಯಾತ್ರಿಕರನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ. ಮೈಸೂರು ನಗರಕ್ಕೆ ಇರುವ ಬೆಡಗನ್ನು ಅದರ ಹಳೆಯ ಕಟ್ಟಡಗಳ ವಿನ್ಯಾಸವನ್ನು, ಇಂಡೋ-ಯೂರೋಪಿನ ಕಟ್ಟಡಗಳನ್ನು ಕಾಪಾಡಿಕೊಳ್ಳುವುದು ಇಂದು ನಮ್ಮ ರಾಜ್ಯಕ್ಕೆ ಸವಾಲಾಗಬೇಕಿದೆ. ಪ್ರವಾಸೋದ್ಯಮಕ್ಕೆ ಬೇಕಾದ ಎಲ್ಲ ಘನ ಅರ್ಹತೆಗಳು ಈ ನಗರಕ್ಕಿದೆ. ಆದರೆ ಅದರ ವಿನ್ಯಾಸವನ್ನು ಹಾಳುಗೆಡುವದಂತೆ ಕಾಪಾಡಬೇಕಾದ ಜವಾಬ್ದಾರಿಯೂ ನಮ್ಮ ರಾಜಕಾರಣಿಗಳ ಮೇಲಿದೆ.

ಈ ಬಾರಿ ಮೈಸೂರು ಕಿನ್ನರ ಲೋಕವಾಗಿತ್ತು. ಇಡೀ ಮೈಸೂರು ವರುಷವರುಷಕ್ಕಿಂತ ಮಿಗಿಲಾದ ಬೆಳಕಿನ ಸ್ವರ್ಗದಂತೆ ಸಿಂಗಾರಗೊಂಡಿತ್ತು. ಪ್ರಪಂಚದ ಚಿಕ್ಕಿಗಳೆಲ್ಲ ಆಗಸದಿಂದಿಳಿದು ಬೀದಿಗಳಲ್ಲಿ ನೆರೆದಿದ್ದವು. ಅರಮನೆ ಕನಸಲ್ಲಿ ತೆರೆದಿಟ್ಟಂತಿತ್ತು. ವೃತ್ತಗಳಲ್ಲಿ, ಬೀದಿಗಳಲ್ಲಿ, ಜಗತ್ತಿನಲ್ಲಿರುವ ಮಿಣುಕು ಹುಳದ ಸಾಲುಗಳನ್ನೆಲ್ಲ ತಂದು ಮರಗಳಲ್ಲಿ ತೂಗಿಬಿಟ್ಟಿದ್ದರು. ಇದು ಕಣ್ಣಿಗೆ ಹಬ್ಬ. ವರುಷ ವರುಷದ ವಿನ್ಯಾಸ ಇಮ್ಮಡಿಸಿದಂತೆ ಕಾಣಿಸುತಿತ್ತು. ಈ ಬಾರಿಯ ದೀಪಾಲಂಕಾರ ಸಿಂಗಪೂರಿನಿಂದ ಬಂದ ವಿನ್ಯಾಸಕಾರರ ಕೈಚಳಕವೆಂದು ಜನ ಹೇಳುತ್ತಿದ್ದರು.

ಇಂತು ಇರುಳು ತೆರೆಯುವ ದೀಪ ದಿಬ್ಬಣದ ಮಾಯಾಲೋಕವೊಂದನ್ನು ಮೈಸೂರು ನಗರ ಜಂಬೂಸವಾರಿ ಕಾಲದಿಂದಲೂ ಮುನ್ನಡೆಸಿಕೊಂಡು ಬರುತ್ತಿದೆ. ಮೈಸೂರಿನ ಕಟ್ಟಡಗಳ ವಿನ್ಯಾಸ ಹಾಗೂ ದೀಪಾಲಂಕಾರ ಪ್ರಪಂಚದ  ಯಾತ್ರಿಕರನ್ನು ಬಿಟ್ಟ ಕಣ್ಣು ಬಿಟ್ಟ ಹಾಗೆ ನೋಡುವಂತೆ ಮಾಡುವುದರಲ್ಲಿ ಎರಡು ಮಾತಿಲ್ಲ.

ಪ್ರತಿ ವರುಷದಂತೆ ಚಾಮುಂಡಿ ಬೆಟ್ಟದಲ್ಲಿ ನಿಂತು ಕೆಳಗೆ ಚೆಲ್ಲಿದ್ದ ನಗರವನ್ನು ನೋಡಿದೆವು. ಅರಮನೆಯ ದೀಪಗಳು ಝಗ್ ಎಂದು ಹೊತ್ತಿಕೊಂಡಿತ್ತು. ಮೈಸೂರಿನ ಬಣ್ಣ ಬಣ್ಣದ ದೀಪದ ನಡುವೆ ಅದು ಹೊಂಬೆಳಕಿನ ಬೊಂಬೆ ಮನೆಯಂತೆ ಕಾಣಿಸುತಿತ್ತು. ದೀಪದ ಕಡಲನ್ನೇ ತೇಲಿಬಿಟ್ಟ ತನ್ನ ಮಕ್ಕಳನ್ನು ಕಣ್ತುಂಬಿಕೊಳ್ಳುತ್ತ ತಾಯಿ ಚಾಮುಂಡಿ ಬೆಟ್ಟದಲ್ಲಿ ಮೈ ಚಾಚಿ ವಿಶ್ರಮಿಸಿದ್ದಳು. ಬೆಟ್ಟವಿಳಿದು ಬರುವಾಗ ಟಪಟಪನೆ ಬಾಲವಾಡಿಸುತ್ತ ಮೊಲೆ ಕುಡಿಯುತ್ತಿದ್ದ ನಾಕಾರು ನಾಯಿಮರಿಗಳು.

ಬೆಟ್ಟದೆದೆಯ ಮೇಲೆ ಮೈ ಚಾಚಿ ಮೊಲೆಕೊಟ್ಟು ಮಲಗಿದ್ದ ತಾಯಕಣ್ಣು ಅತ್ತಿತ್ತ ಸರಿದಾಡುತ್ತಿದ್ದ ತನ್ನೆರಡು ಮರಿಗಳ ಮೇಲಿತ್ತು. ತಾಯಿಕಣ್ಣು, ನಾಯಿಕಣ್ಣು ಎಂದಿಗೂ ಬೇರೆಯಲ್ಲ ಅನ್ನಿಸಿತು. ಚಾಮುಂಡಿ ಬೆಟ್ಟದ ಮೈ ಚಾಚು… ಮರಿ ನಾಯಿಯ ಮೈಚಾಚೂ ಒಂದಕ್ಕೊಂದು ಮನದಲ್ಲಿ ತಾಳೆಯಾಗುತ್ತಿದ್ದವು.

ವರುಷವರುಶಕ್ಕೂ ಚಾಮುಂಡಿಯ ಮಕ್ಕಳು ತೇಲಿ ಬಿಟ್ಟ ದೀಪದ ಕಡಲು ಹಿಗ್ಗುತ್ತಿದೆ. ತುಂಟ ಮರಿಗಳು ತಾಯಿ ನಾಯಿಂದ ಮತ್ತೇನನ್ನೋ ಅತ್ತ ಇತ್ತ ಹುಡುಕಿ ಅಲೆವಂತೆ, ಅವಳ ಕಣ್ಣಿನ ಕಾವಲು ಮೀರಿ ನಗರ ಬೆಳೆಯುತ್ತಿದೆ. ಅದು ಅವಳ ಕಿರುಗಣ್ಣಿಗೂ ತಿಳಿಯುತ್ತಿದೆ. ಮಕ್ಕಳ ದುರಾಸೆಯನ್ನು ಅವಳು ಮೌನವಾಗಿ ಹೊಟ್ಟೆಗಿಳಿಬಿಟ್ಟುಕೊಳ್ಳುತ್ತಿದ್ದಾಳೆ. ಯಾವತ್ತು ಗುಡುಗುತ್ತಾಳೋ ಗೊತ್ತಿಲ್ಲ.

ಪಂಜಿನ ಕವಾಯಿತು

ಜಂಬೂ ಸವಾರಿ ಹೆಸರುವಾಸಿಯೇನೋ ನಿಜ. ಅದರಷ್ಟೇ ಛಂದದ ಒಂದು ದೃಶ್ಯಾವಳಿ ಅಂದಿನ ಸಂಜೆಗಿದೆ. ಅದೇ ಪಂಜಿನ ಕವಾಯಿತು. ಜಂಬೂ ಸವಾರಿಯ ಮೆರವಣಿಗೆ ಅರಮನೆಯಿಂದ ಹೊರಟು ಜನಸಾಗರದೊಡನೆ ನಿಧಾನ ಗತಿಯಲ್ಲಿ ಸಾಗಿ… ಬನ್ನಿಮಂಟಪದಲ್ಲಿ ತಂಗಿ…. ಅಲ್ಲಿ ಯುದ್ಧ ವಿಜಯೋತ್ಸಾಹದಲ್ಲಿ, ಎಂದೋ ಸಿಕ್ಕಿದ ಗೆಲುವಿನ ಸಂಕೇತವಾಗಿ ಬನ್ನಿ ಮರವೊಂದನ್ನು ಪೂಜಿಸಿ, ಅದರ ಬದಲು ಬಾಳೆಯ ಗಿಡವೊಂದನ್ನು ಕತ್ತರಿಸಿ ದೇವಿಗೆ ಅರ್ಪಿಸಿ ತಮ್ಮ ಗೆಲುವನ್ನು ನೆನಪಿಸಿಕೊಳ್ಳುವುದು ಇಂದಿಗೂ ರಾಜ ಮನೆತನದವರ ಸಾಂಕೇತಿಕ ಪೂಜೆಯಾಗಿ ಉಳಿದು ಬಂದಿದೆ.

ಆದರೆ ಈಗ ಭುವನೇಶ್ವರಿಯ ವಿಗ್ರಹವನ್ನಿಟ್ಟು ಪೂಜಿಸುವ ಸರ್ಕಾರ ಇದರಿಂದ ತಪ್ಪಿಸಿಕೊಂಡಿದೆ. ಬನ್ನಿ ಕಡಿದ ಮೇಲೆ ಮೆರವಣಿಗೆಯಲ್ಲಿ ದಣಿದ ಜೀವಗಳಿಗೆ ವಿಶ್ರಾಂತಿಯಲ್ಲಿ ಒಂದು ಮನರಂಜನಾ ಕಾರ್ಯಕ್ರಮವಾಗಿ ಈ ಪಂಜಿನ ಕವಾಯಿತು ಅಂದಿನಿಂದ ನಡೆದು ಬಂತು. ಇದು ಅಂದು ಹುಟ್ಟಿದ್ದು ಹೇಗೆ?

ಸಮವಸ್ತ್ರ, ಮದ್ದು ಪಿರಂಗಿಗಳು, ಶಿಸ್ತು ಇಲ್ಲಿಯ ಹೆಗ್ಗಳಿಕೆ. ಅರಸೊತ್ತಿಗೆಯೆಂದರೆ ಪಳಗಿದ ನಡವಳಿಕೆ, ಜವಾಬ್ದಾರಿ, ಕ್ಷಣಗಣನೆ, ಎಚ್ಚರಿಕೆ ಎಲ್ಲವೂ ಮಿಳಿತವಾದ ರಾಜಕಾರಣ. ಅದು ಯುದ್ಧದ ತಯ್ಯಾರಿಯ ಎಚ್ಚರಿಕೆಯ ಒಂದು ಭಾಗವೂ ಆಗಿರುತ್ತದೆ. ಒಂದರ ಮೇಲೊಂದರ ಅಧಿಪತ್ಯವಿರುತ್ತದೆ.

ಬ್ರಿಟೀಷರ ಆಳ್ವಿಕೆಯ ಶಿಸ್ತು, ಕುರುಹುಗಳು ಇದರಲ್ಲಿ ಮಿಳಿತವಾಗಿವೆ. ಇದರ ಮೊದಲ ಸುತ್ತು ಇಳಿಗತ್ತಲು ಹೆಗಲಿಗೆ ಬಿದ್ದ ಮೇಲೆ ಶುರುವಾಗುತ್ತದೆ, ಯಾವುದೇ ಗಡಿಬಿಡಿಯಿಲ್ಲದೆ. ಮೊದಲ ಸುತ್ತು, ರಾಷ್ಟ್ರಗೀತೆ. ನಂತರ ಆಗ ರಾಜರಿಗೆ ಮಾಡುತಿದ್ದ ಆನರ್… ಒಪನ್ ಜೀಪಿಲ್ಲಿ ಸ್ಟೇಡಿಯಂ ಸುತ್ತುವ ಈಗಿನ ರಾಜ್ಯಪಾಲರಿಗೆ ದೊರಕುತ್ತದೆ. ನಾಕು ಸುತ್ತು ಮದ್ದುಗುಂಡನ್ನು ಹಾರಿಸಲಾಗುತ್ತದೆ. ನಂತರ ನಾಡಗೀತೆ. ಮತ್ತೆ ಮದ್ದುಗುಂಡುಗಳ ದೊಡ್ದ ಸದ್ದು. ಮುಖ್ಯಮಂತ್ರಿಗಳ ಪುಟ್ಟ ಭಾಷಣ. ಸುತ್ತ ಇರುವ ದೀಪದ ಕಂಬದ ಬೆಳಕಲ್ಲಿ ಆಗ ತಣ್ಣಗೆ ನಡೆಯುತ್ತಿದ್ದ ಕಾರ್ಯಕ್ರಮ ಈಗ ಲೇಸರ್ ಬೆಳಕಲ್ಲಿ ಕಣ್ಛುಚ್ಛುವಂತಿರುತ್ತದೆ. ಇದು ಪಕ್ಕಾ ಸೈನಿಕರ, ಕಾವಲುಪಡೆಯವರ, ಅವರ ಕುದುರೆ, ವಾಹನಗಳ ಶಿಸ್ತಿನ ಕಾರ್ಯಕ್ರಮ.

ನಂತರ ಕುದುರೆ ಕವಾಯಿತು. ಇದು ಇಲ್ಲಿನ ಹೆಗ್ಗಳಿಕೆ. ಹಿಂದೆ ಇದ್ದ ಮರಿಬಾ ಶೆಟ್ಟಿ ಹಾಗೂ ಈಗಿರುವ ಅವರ ಮಗನ ಕುದುರೆಗಳಿಗೂ ಅವರಿಬ್ಬರ ಕೈ ಚಳಕದ ಚಮತ್ಕಾರಕ್ಕೂ ಕಳ್ಳುಬಳ್ಳಿಯ ನಂಟು. ಇದು ಪಕ್ಕಾ… ಕುದುರೆ ಮೇಲಿನ ಓಟದಲ್ಲಿ ಸವಾರ ನಡೆಸುವಂಥ ಚಮತ್ಕಾರ. ಆರೋಗ್ಯಕರವಾದ ಪಳಗಿದ ಕುದುರೆಗಳ ಬಣ್ಣ ಹಾಗೂ ವಿನ್ಯಾಸ, ಓಟ, ಜನರಿಗೆ ಮುದ ನೀಡುವ ಗಳಿಗೆಗಳು.

ಬೆಂಕಿಯ ಗೂಟಗಳನ್ನು ಕುದುರೆಯ ನಾಗಾಲೋಟದಲ್ಲೇ ಎತ್ತಿ ಹಾರಿಸಿಕೊಂಡು ಹೋಗುವುದು. ಹಚ್ಚಿದ ಬೆಂಕಿಯ ವರ್ತುಲದಲ್ಲಿ ಹಾರಿ ಹೋಗುವುದು, ಹಾರು ಮಣೆಗಳನ್ನು, ಅಡ್ಡಗಟ್ಟೆಗಳನ್ನು ಹಾರುವುದು, ಹೀಗೆ ಪಳಗಿದ ಪ್ರಾಣಿಯ ಜೊತೆಗೆ ಮನುಷ್ಯ ಅಧಿಪತ್ಯ ಹಾಗೂ ಬಾಂಧವ್ಯವನ್ನು ಬೆಳೆಸಿಕೊಂಡು, ವಿಜಯದ ಕಡೆಗೆ ದಾಪುಗಾಲು ಹಾಕಿದ… ಅನ್ನುವುದನ್ನು ತೋರಿಸುತ್ತವೆ. ನುರಿತ ಕಟ್ಟಾಳುಗಳು ಹಾಗೂ ಬುದ್ಧಿವಂತ ಸೂಕ್ಷ್ಮ ಪ್ರಾಣಿಗಳು ಕೂಡ ಅಂದಿನ ಸಾಮ್ರಾಜ್ಯದ ಅಳಿವು ಉಳಿವಿನ ಭಾಗವಾಗಿದ್ದವು. ಮರುಳುಗಾಡಿನಲ್ಲಿ ಒಂಟೆಗಳೂ, ಹಿಮ ಪ್ರದೇಶದಲ್ಲಿ ಯಾಕ್ ಪ್ರಾಣಿಗಳು ಕತ್ತೆಕುದುರೆಗಳು, ಹಳ್ಳಿಯ ಅನುಕೂಲತೆಯಲ್ಲಿ ಎತ್ತುಗಳು, ಕುದುರೆಗಳು, ಹಾಗೆಯೇ ರಾಜರ ಬೀಡುಗಳಲ್ಲಿ ಆನೆ ಕುದುರೆ ಲಾಯಗಳು ಇರುತ್ತಿದ್ದವು. ಮನುಷ್ಯನಿಗೆ ಇವು ಸಂಪೂರ್ಣ ಪಳಗಿದಂಥವಾಗಿದ್ದವು.

ಆಗ ಸೈನಿಕರು ಯುದ್ಧದ ಸಮಯದಲ್ಲಿ ಗುಡಾರ ಹೂಡಿರುತ್ತಿದ್ದ ಎದುರಾಳಿಗಳ ಜಾಗಕ್ಕೆ ಹೋಗುತ್ತಿದ್ದರು. ಗೂಟ ಹೊಡೆದಿದ್ದ ಮೊಳೆಗಳನ್ನು ಇಲ್ಲಿ ಈಗ ಮಾಡುವ ಕಸರತ್ತಿನಂತೆ ವೇಗವಾಗಿ ಕುದುರೆ ಸವಾರಿಯಲ್ಲಿ ಬಂದ ಸೈನಿಕರು, ಉದ್ದಕೋಲಿನ ಭರ್ಜಿಗಳಲ್ಲಿ ಎತ್ತಿ ಬಿಡುತ್ತಿದ್ದರಂತೆ. ಇದಕ್ಕೆ “ಟೆಂಟ್ ಪೆಗ್ಗಿಂಗ್” ಅಂತಾರೆ. ಆಗ ಗುಡಾರ ಕವುಚಿ ಹಾಕಿಕೊಂಡು ಬಿದ್ದುಬಿಡುತಿತ್ತು. ಎದುರಾಳಿ ಸೈನಿಕರು ಅದರೊಳಗೆ ಬಲೆಯಲ್ಲಿ ಬಿದ್ದಂತೆ ಸಿಕ್ಕಿಕೊಂಡಿರುವಾಗ ಆನೆಗಳ ಕಾಲು ಉಗುರಿಗೆ ಭರ್ಜಿಯಿಂದ ಅವರು ಚುಚ್ಚುತ್ತಿದ್ದರಂತೆ. ಆಗ ಆನೆಗಳು ಘೀಳಿಟ್ಟು ಹುಚ್ಚೆದ್ದು ಓಡುತ್ತಾ ಸಿಕ್ಕ ಸೈನಿಕರನ್ನು ಬಡಿದು ಹಾಕುತ್ತಿದ್ದವಂತೆ. ಸೈನಿಕರು ಹೆದರಿ ಸಾವು ನೋವಿನೊಂದಿಗೆ ಚೆಲ್ಲಾಪಿಲ್ಲಿ ಆಗಿ ಹೋಗುತ್ತಿದ್ದರಂತೆ.

ಇದೀಗ ಈ ಆಟ, ಯುದ್ಧ ತಂತ್ರದ ಪಳೆಯುಳಿಕೆಯಾಗಿ ಜನರನ್ನು ರಂಜಿಸುತ್ತಿದೆ. ಪ್ರತಿ ವರುಷ ಆನೆಗಳು ಕಾಡಿಂದ ಅಂಬಾರಿ ಹೊರಲು ಬಂದು ಹೀಗೆಯೇ ಮೈಸೂರಿನ ಜನರ ಮನಸ್ಸನ್ನು ಹಿಡಿದಿಟ್ಟು, ತಮ್ಮ ಬಿಡಾರಕ್ಕೆ ತೆರಳುತ್ತವೆ. ಹೋಗುವಾಗ ಈ ಬಾರಿ ಅಂಬಾರಿ ಹೊರುವ ಅರ್ಜುನ ಲಾರಿ ಹತ್ತದೆ ಗಲಾಟೆ ಮಾಡಿದನಂತೆ. ಇಲ್ಲಿನ ಪೌಷ್ಠಿಕ ಆಹಾರಕ್ಕೆ ಒಗ್ಗಿದ್ದಕ್ಕೋ ಏನೋ ಗೊತ್ತಿಲ್ಲ. ಆನೆಗಳು ಬಹಳ ಭಾವುಕ ಜೀವಿಗಳು ಎಂದು ಬಲ್ಲವರು ಹೇಳುತ್ತಿರುತ್ತಾರೆ.

ಇನ್ನು “ಟಾರ್ಚ್ ಲೈಟ್ ಪೆರೇಡಿ”ನ ಕವಾಯಿತು, ಬೈಕ್ ಕಸರತ್ತು ಅಪರೂಪದ್ದಾಗಿರುತ್ತದೆ. ಯಾವ ಸರ್ಕಸ್ ಕಂಪೆನಿಗಳಿಗಿಂತಲೂ ಮೇಲ್ಮಟ್ಟದ ಕಸರತ್ತು ಇಲ್ಲಿ ಕಾಣ ಸಿಗುತ್ತದೆ. ಒಗ್ಗಟ್ಟಿನಲ್ಲಿ ಬಲವಿದೆಯೆಂಬ ಸೈನ್ಯದ ಅಥವಾ ರಕ್ಷಕ ದಳದ ಸಿಬ್ಬಂದಿಯಿಂದ ಆಗುವ ಕ್ರಾಸಿಂಗ್ ರೈಡ್ ನೋಡುವಾಗ ಅವರ ತಾಧ್ಯಾತ್ಮಕ್ಕೆ, ಕಠಿಣ ಪರಿಶ್ರಮಕ್ಕೆ, ಸೈ ಅನ್ನದವರೇ ಇಲ್ಲ. ಬೈಕು ಅನ್ನುವುದು ಅವರಿಗೊಂದು ಸಾಧನ. ಅಷ್ಟೇ….

ಇನ್ನು ಕೊನೆಯ ಆಕರ್ಷಣೆ ಪಂಜಿನ ಕವಾಯಿತು. ಇದೇ ಆ ರಾತ್ರಿಯ ಮುಖ್ಯ ಭಾಗ. ಇದರಲ್ಲಿಯೂ ಅತೀ ಶಿಸ್ತಿನ ತರಬೇತಿ ಕಾಣಿಸುವುದಲ್ಲದೆ ಆಕರ್ಷಕ ವಿನ್ಯಾಸದ ಪರಿಕಲ್ಪನೆಯದ್ದೇ ಒಂದು ವಿಶೇಷ. ಇಂದಿನ ಚಮತ್ಕಾರ ಎಂಥದ್ದೇ ಇರಲಿ, ಆ ದೊಂದಿಯ ಬೆಳಕಿನ ವಿನ್ಯಾಸದ, ಮನುಷ್ಯನ ಅದ್ಭುತ ಪರಿಕಲ್ಪನೆಗೆ ಸಾಕ್ಷಿಯಾಗಿ…. ಎಂದಿಗೂ ಮಾಸದೆ ಪಂಜಿನ ಕವಾಯಿತು ಕಂಡವರ ಮನದಲ್ಲುಳಿಯುತ್ತದೆ.

ನೂರಾರು ತರಬೇತಿ ಪಡೆದ ಕವಾಯಿತು ಗುಂಪಿನ ಸಿಬ್ಬಂದಿಗಳು ಎರಡು ಕೈಲಿ ಹಿಡಿದ ಪಂಜುಗಳು ಸೃಷ್ಟಿಸುವ ಲೋಕವೊಂದನ್ನು ನೋಡಲು ಹಾಗೂ ಅವರು ರಚಿಸುವ ವಿನ್ಯಾಸವನ್ನು ಆ ಕಡುಕತ್ತಲಿನಲ್ಲಿ ಕಾಣಲು ಅತಿ ರಮ್ಯವಾಗಿರುತ್ತದೆ. ಹಾಗಾಗಿಯೇ ಆನೆಗಳ ಗಂಭೀರ ನಡೆಯ ಜಂಬೂಸವಾರಿಯಂತೆ ಇದು ಇಂದಿಗೂ ಜನ ಮಾನಸದಲ್ಲಿ ಉಳಿದು ಬಂದಿದೆ. ನೂಕು ನುಗ್ಗಲಿನಲ್ಲೇ ಮೈಸೂರಿನ ಜನಸಾಗರ ನುಗ್ಗಿಬಂದು, ಬಿಡದೆ, ಈ ಕಾರ್ಯಕ್ರಮವನ್ನು ನೋಡುತ್ತಾರೆ. ವಿನ್ಯಾಸಗಾರರ ಕೈಲಿ ಅರಳಿದ ಬೆಳಕಿನ ಹೂವಂತೆ, ಚೆಂಡಂತೆ, ಉರಿವ ಸಾಲುಗಳಂತೆ, ಅಕ್ಷರದ ಸಾಲುಗಳಂತೆ, ಪದಕಟ್ಟಿನಂತೆ ಕರಾರುವಕ್ಕಾಗಿ ರೂಪು ಪಡೆಯುವ ಅವುಗಳ ಚಲನೆ ಅತ್ಯಂತ ಪುರಾತನ ಕಾಲವೊಂದನ್ನು ನೆನಪಿಸುವುದರೊಂದಿಗೆ ವರ್ತಮಾನದ ಇಂದಿನ ಇಸವಿಯನ್ನು ಕೂಡಾ ತೋರುತ್ತವೆ.

ನೂರಾರು ತರಬೇತಿ ಪಡೆದ ಕವಾಯಿತು ಗುಂಪಿನ ಸಿಬ್ಬಂದಿಗಳು ಎರಡು ಕೈಲಿ ಹಿಡಿದ ಪಂಜುಗಳು ಸೃಷ್ಟಿಸುವ ಲೋಕವೊಂದನ್ನು ನೋಡಲು ಹಾಗೂ ಅವರು ರಚಿಸುವ ವಿನ್ಯಾಸವನ್ನು ಆ ಕಡುಕತ್ತಲಿನಲ್ಲಿ ಕಾಣಲು ಅತಿ ರಮ್ಯವಾಗಿರುತ್ತದೆ. ಹಾಗಾಗಿಯೇ ಆನೆಗಳ ಗಂಭೀರ ನಡೆಯ ಜಂಬೂಸವಾರಿಯಂತೆ ಇದು ಇಂದಿಗೂ ಜನ ಮಾನಸದಲ್ಲಿ ಉಳಿದು ಬಂದಿದೆ.

ಈ ಪರಿಕಲ್ಪನೆ ಹುಟ್ಟಿದ್ದು ಹೇಗಪ್ಪ ಎಂದರೆ, ರಾಜರುಗಳು ಊರಿಂದ ಪ್ರಯಾಣ ಬೆಳೆಸಿ…. ಗುಡಾರ ಹೂಡಿ…. ಹೊರಗುಳಿದಾಗ, ಆ ಕತ್ತಲಲ್ಲಿ…. ದೊಂದಿ ಬೆಳಕಿನಲ್ಲಿ, ಅಡ್ಡಾಡುವ ಕಾವಲುಪಡೆಯ ಬೆಳಕಿನ ವಿನ್ಯಾಸಗಳು…. ರಾಜರ ಕಣ್ಣಿಗೆ ದೂರದಿಂದ ಗೋಚರಿಸಿ, ಅದಕ್ಕೊಂದು ರೂಪ ಬಂದು ಪರಿಣಿತರ ಕೈಲಿ ಈ ರೂಪ ಪಡೆಯಿತು. ಇಂದಿಗೂ ಬೆಂಕಿಯದು ಅದೇ ಅಪ್ಪಟ ಬೆಳಕು.

ಈ ಎಲೆಕ್ಟ್ರಿಕ್ ಯುಗದಲ್ಲಿ ಊರಿಗೆ ಊರೇ ವಿದ್ಯುತ್ತಿನಿಂದ ಝಗಮಗಿಸುವುದನ್ನು ನೋಡಿ ಬಂದವರೂ ಸಹ ಆ ಕಾಲದ ದೊಂದಿಯ ಬೆಳಕಿನ ಬೆರಗಿಗೆ ಮಾರು ಹೋಗುತ್ತಾರೆ. ಇದನ್ನು ನೋಡಿದರೆ, ನಮ್ಮೊಳಗೆ ಅಳಿಯದೇ ಉಳಿದು ಹೋದ ಒಂದು ಅಪರಂಜಿಯ ಆಭರಣದಂತೆ ಕಾರ್ಯಕ್ರಮದ ಸರಮಾಲೆ ಕಂಗೊಳಿಸುತ್ತದೆ.

ಇಂಥಹ ಕಣ್ತಂಪಿನ ಪಂಜು ಕವಾಯಿತು ಮುಗಿದ ಮೆಲೆ ಆಕರ್ಷಕ ಪಟಾಕಿಗಳು ಭೂಮಿಯಿಂದ ಬಾನಿನವರೆಗೂ ಚಿಮ್ಮಿ ಮಕ್ಕಳಿಗೆ ಖುಷಿ ಕೊಡುತ್ತವೆ. ಇಲ್ಲಿಗೆ ದಸೆರೆ ಮುಗಿಯುತ್ತದೆ.

ಹಿಂದೆ ಮದ್ದು ಗುಂಡು ಮತಾಪಿನ ಮನೆಯವರೆಂದೇ ಹೆಸರಾದ ಅರಮನೆಗೆ ಸಂಪರ್ಕವಿದ್ದ ದೊಡ್ಡ ಶ್ರೀಮಂತರ ಕುಟುಂಬಗಳಿದ್ದವು. ಆ ಕುಟುಂಬಗಳಿಗೆ ವಿಶೇಷ ಸ್ಥಾನಮಾನಗಳು ಸೌಲಭ್ಯಗಳು ಅರಮನೆಯ ಜೊತೆಗಿರುತ್ತಿದ್ದವು. ಎರಡು ತಲೆಮಾರಿನ ಹಿಂದೆ ಅಂಥ ಅರಮನೆಯ ಸಂಪರ್ಕವಿದ್ದ ಮದ್ದಿನ ಮನೆಯೊಂದು ಹೊಟ್ಟೆಕಿಚ್ಚಿನ ದಾಯಾದಿಗಳು ಎಸೆದ ಬೆಂಕಿಯಿಂದ ಸಿಡಿದು ಸುಟ್ಟು ಹೋಯಿತು. ಆ ದಿನ ಆ ಮನೆಯ ಗಂಡುಮಕ್ಕಳು ಕುಟುಂಬದವರು, ಆಳುಕಾಳುಗಳು, ಹೀಗೆ ಸತ್ತು ಹೋದವರ ಸಂಖ್ಯೆ ಹದಿನೆಂಟು.

ಮದುವೆ ಮಾಡಿಕೊಟ್ಟಿದ್ದ ಇಬ್ಬರು ಹೆಣ್ಣುಮಕ್ಕಳಲ್ಲಿ ಒಬ್ಬರು, ನನ್ನ ಮಾವನ ತಾಯಿಯಾಗಿದ್ದರು. ಅಜ್ಜಿಯ ಹೆಸರು ಅರಸಮ್ಮ. ಅವರ ಮನೆಯ ದುರ್ಘಟನೆ ನೆನಪಾದಾಗೊಮ್ಮೆ ಎದೆಗೆ ಕೊಳ್ಳಿ ಇಟ್ಟಂತೆ ಎದೆ ಬಡಿದುಕೊಂಡು “ಅಯ್ಯೋ ನನ್ನ ಮನೆಯ ಕರಿಮರದ ತೂಗಾಲೆ, ಕರಿ ಮರದ ಬೀರು, ನಮ್ಮ ಅಪ್ಪ ಅವ್ವ” ಎಂದು ಅಜ್ಜಿ ಸಂಕಟ ಪಡುವುದನ್ನು ನಾನು ಮದುವೆಯಾದ ಮೇಲೆ ಕಂಡಿದ್ದೆ. ಆಗಾಗ ಕರುಳ ದಳ್ಳುರಿಯಲ್ಲಿ ಬೆಂದ ಅಜ್ಜಿ ಈಗ ತೀರಿ ಹೋಗಿದ್ದಾರೆ. ಆದರೂ, ಮದ್ದುಗುಂಡು ಪಟಾಕಿಗಳ ಸದ್ದು ಹಾರಿದಾಗ ಅವರ ಸಂಕಟದ ಮಾತುಗಳು ರೆಕ್ಕೆ ಕಟ್ಟಿಕೊಂಡು ನನ್ನ ನೆನಪಿಗೆ ಹಾರಿ ಬರುತ್ತವೆ.

ಮದ್ದಿನ ಮನೆಯೆಂಬುದೇ…. ಅರಮನೆ ಹಾಗೂ ಯುದ್ಧದ ಸಂಕಟದಲ್ಲಿ ನೊಂದ ಜನರ ನಡುವಿನ ಸೇತುವೆ. ಅದು ಸುಳ್ಳು ತಳಹದಿಯ ಮೇಲೆ ಕಟ್ಟಿದ ಮನೆಯಂತೆ ಅನ್ನಿಸಿಬಿಡುತ್ತದೆ. ಮನುಷ್ಯನ ನೆನಪು ಸೌಂದರ್ಯದ ಬೆನ್ನಲ್ಲಿ ಕುರೂಪವನ್ನು ಕಟ್ಟಿಕೊಂಡೇ ಉಳಿದಿರುತ್ತದೆ. ಇಂದಿನ ವರ್ತಮಾನವನ್ನು ಅಂದಿನ ತಳಹದಿಯ ಮೇಲೇ ನಡೆಸುತ್ತಿರುತ್ತದೆ. ಸುಖವಾದರೆ ಹಗುರವಾದ ತೇಲು. ದುಃಖದ ಸಂಗತಿಯಾದರೆ ಮುಳುಗುವ ಅನ್ಯಮನಸ್ಕತೆ.

ಸುಖದ ಬೆನ್ನಲ್ಲೆ ಜೋತುಬಿದ್ದ ಬೇತಾಳವದು ದುಃಖ. ಯಾರೂ ಇದರಿಂದ ಪಾರಾಗಲಾರರು. ಆದರೆ ದಸರೆಗೆ ಮಕ್ಕಳನ್ನು ಕರೆತಂದು, ಮಕ್ಕಳಿಗೆ ತೋರು ಬೆರಳಲ್ಲಿ ತೋರಿಸುವ ತಂದೆತಾಯಂದಿರ ಆಸೆಯೇ, ಒಂದು ಕುಟುಂಬದ ಸುಖದ ನೆನಪಾಗಿ ಮಕ್ಕಳಲ್ಲಿ ಉಳಿಯುವುದೂ ಸುಳ್ಳಲ್ಲ. ಬದುಕೇ ಒಂದು ಮರೆಯಲಾರದ ಪಯಣ. ಹೆಜ್ಜೆ ಹೆಜ್ಜೆಗೂ ನೆನಪಿನ ಕಲ್ಲುಗಳನ್ನು ಎಡವುತ್ತ ನಡೆವ ಪಯಣ.