ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಯ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ. ಇವೆಲ್ಲದರಿಂದಾಗಿ, ಒಟ್ಟಾರೆ ಓದುಗರನ್ನು ಮಧ್ಯಯುಗಕ್ಕೆ ಒಯ್ಯುವುದರಲ್ಲಿ ಕೃತಿ ಸಫಲವಾಗುತ್ತದೆ.
ಉಂಬರ್ಟೋ ಇಕೋ ಬರೆದ “ದ ನೇಮ್ ಆಫ್ ದ ರೋಸ್”ಕಾದಂಬರಿಯ ಕುರಿತು ಬರೆದಿದ್ದಾರೆ ಕಮಲಾಕರ ಕಡವೆ

 

ಸಾಹಿತ್ಯಿಕ ಪ್ರಕಾರಗಳಲ್ಲಿ ಕಾದಂಬರಿಯು ವಿಶ್ವಕೋಶದ ವೈಶಾಲ್ಯವನ್ನು ಹೊಂದಿ, ಬಗೆಬಗೆಯ ಶೈಲಿ, ವಿಷಯ, ಮಾಹಿತಿ, ಪ್ರಯೋಗ, ಉದ್ದಿಶ್ಯಗಳನ್ನು ಸಾಕಾರಗೊಳಿಸುವ ಪ್ರಕಾರವಾಗಿದೆ. ಇತಿಹಾಸವನ್ನೋ, ಭವಿತವ್ಯದ ಸಾಧ್ಯತೆಯನ್ನೋ, ಅಂತರಂಗದ ತುಮುಲಗಳನ್ನೋ, ಒಂದೇ ವಿದ್ಯಮಾನವನ್ನು ಹಲವರು ವಿಭಿನ್ನವಾಗಿ ಕಾಣುವುದನ್ನೋ, ದೇಶವೊಂದರ ಸೂಕ್ಷ್ಮರೂಪವನ್ನೋ, ಸಾಂಸ್ಕೃತಿಕ ಸ್ಮೃತಿಯನ್ನೋ, ಅವುಗಳ ಅಪಾರ ಸಂಕೀರ್ಣತೆಯೊಂದಿಗೆ, ಓದುಗರಿಗೆ ರಂಜನೀಯವಾಗುವಂತೆ ನಿರೂಪಿಸಲು ಕಾವ್ಯ, ನಾಟಕಗಳಿಗಿಂತ ಹೆಚ್ಚು ಅವಕಾಶ ದೊರೆಯುವುದು ಕಾದಂಬರಿಯಲ್ಲಿ. ಆದ್ದರಿಂದ, ಹದಿನೇಳನೇ ಶತಮಾನದಿಂದ ವಿಕಸಿತಗೊಳ್ಳುತ್ತ ಬಂದ ಈ ಗದ್ಯಕಥನದ ಪ್ರಕಾರ ಜನಪ್ರಿಯತೆಯಲ್ಲಿಯೂ, ನಾವೀನ್ಯತೆಯಲ್ಲಿಯೂ ಬೆಳವಣಿಗೆಗಳನ್ನು ಕಾಣುತ್ತಲೇ ಬಂದಿದೆ.

(ಉಂಬರ್ಟೋ ಇಕೋ)

ಈ ವಿಕಾಸದ ಇತಿಹಾಸದುದ್ದಕ್ಕೂ ಜಗತ್ತಿನ ಹಲವು ನಾಡುಗಳಲ್ಲಿ, ಭಾಷೆಗಳಲ್ಲಿ, ಬರಹಗಾರರು ಕಾದಂಬರಿಯನ್ನು ಕತೆ ಹೇಳಲು ಎಷ್ಟೋ, ಇತರ ಉದ್ದಿಶ್ಯಸಾಧನೆಗೂ ಅಷ್ಟೇ ವ್ಯಾಪಕವಾಗಿ ಬಳಸಿದ್ದಾರೆ. ಹದಿನೆಂಟನೇ ಶತಮಾನದ ಮಧ್ಯದಲ್ಲಿ, ಇಂಗ್ಲೀಷ್ ಲೇಖಕ ಸ್ಯಾಮ್ಯುಯೆಲ್ ರಿಚರ್ಡಸನ್ ಹೆಣ್ಣುಮಕ್ಕಳಿಗೆ ಪತ್ರಲೇಖನದ ಶಿಷ್ಟಾಚಾರ ಕಲಿಸುವುದಕ್ಕಾಗಿ ಕಾದಂಬರಿ ಬಳಸಿದ ಉದಾಹರಣೆ ಸರ್ವವಿದಿತ. ಭಾರತದಲ್ಲಿಯೂ ಸಮಾಜಸುಧಾರಕರು, ಸ್ವಾತಂತ್ರ್ಯ ಹೋರಾಟಗಾರರು ತಮ್ಮ ವಿಚಾರಗಳ ಪ್ರಸಾರಕ್ಕಾಗಿ ಕಾದಂಬರಿಗಳನ್ನು ಬರೆದ ಉದಾಹರಣೆಗಳಿವೆ.
ಕಾದಂಬರಿಯ ಇನ್ನೊಂದು ವಿಶೇಷವೆಂದರೆ ಅದು ಹುಟ್ಟಿನಿಂದಲೇ ಹಲವು ಲೇಖನ ಪ್ರಕಾರಗಳ ಮಿಶ್ರಣದ ಫಲವಾಗಿದ್ದು, ಅಂತರ್-ಪಠ್ಯದ ಅನಂತ ಉದಾಹರಣೆಗಳು ನಮಗೆ ಕಾದಂಬರಿಗಳಲ್ಲಿ ದೊರಕುತ್ತವೆ. ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬರೆಯುತ್ತಿದ್ದ ಲಾರೆನ್ಸ್ ಸ್ಟರ್ನ್ ನಿಂದ ಹಿಡಿದು, ಇಟಾಲೋ ಕ್ಯಾಲ್ವಿನೊ, ಬೋರ್ಹೆಸ್, ಭಾರತೀಯ ಆಂಗ್ಲ ಲೇಖಕ ಅಮಿತಾವ್ ಘೋಷ್, ನಮ್ಮ ಪೂರ್ಣಚಂದ್ರ ತೇಜಸ್ವಿಯವರ “ಮಾಯಾಲೋಕ”ಗಳೆಲ್ಲ ಕಾದಂಬರಿ ಪ್ರಕಾರ ಹೇಗೆ ವಿಭಿನ್ನ ಬರವಣಿಗೆಗಳ ಭಿತ್ತಿಯಾಗಿದೆಯೆಂದು ದರ್ಶಿಸುತ್ತವೆ. ಕಾದಂಬರಿ ಪ್ರಕಾರದಲ್ಲಿ ಪ್ರಯೋಗ ನಡೆಸಿ ವಿವಿಧ ರೀತಿಯಲ್ಲಿ ಅದನ್ನು ದುಡಿಸಿಕೊಳ್ಳುವ, ಹಲವಾರು ತರಹದ ಬರವಣಿಗೆಗಳನ್ನು ಕಾದಂಬರಿಯ ಮುಖೇನ ಸಾಧಿಸುವ ಪ್ರಯತ್ನಗಳು ಜಗತ್ತಿನಲ್ಲಿ ಸಾಕಷ್ಟು ಆಗಿವೆ.

ಕನ್ನಡದಲ್ಲಿಯೂ ಕಾದಂಬರಿಯ ಪ್ರಕಾರದಲ್ಲಿ ಹಲವಾರು ಪ್ರಯೋಗಗಳಾಗಿವೆ. ನಾಡಿನ ಜನಪದ ಕಥನ ಪ್ರಕಾರಗಳನ್ನು ಕಾದಂಬರಿಯಲ್ಲಿ ತರುವುದು, ನಾಯಕ ಪಾತ್ರವಿಲ್ಲದ ಕಥಾಹಂದರ, ದೃಷ್ಟಿಕೋನಗಳಲ್ಲಿ ಹೊಸತನ, ಮಾಂತ್ರಿಕ ನಿರೂಪಣೆ ಇತ್ಯಾದಿ ಹಲವು ಪ್ರಯೋಗಗಳನ್ನು ಕನ್ನಡ ಕಾದಂಬರಿಯೂ ಕಂಡಿದೆ. ಆದರೆ, ನನ್ನ ಸೀಮಿತ ಓದಿನ ಮಿತಿಯಲ್ಲಿ ಕಂಡ ಹಾಗೆ ಕಾದಂಬರಿಯಲ್ಲಿ ಜಾಣತನದ (cleverness) ಪ್ರದರ್ಶನ ನಾವಿನ್ನೂ ಕನ್ನಡದಲ್ಲಿ ಅಷ್ಟಾಗಿ ಕಂಡಿಲ್ಲ. ಜಾಣತನದ ಪ್ರದರ್ಶನಕ್ಕೆ ತೊಡಗುವ ಕಾದಂಬರಿಯಲ್ಲಿ ಕತೆಯಷ್ಟೆ ಮುಖ್ಯ ಕಥನದಲ್ಲೋ, ಕತಾಹಂದರದಲ್ಲೋ ಬಳಸುವ ಚತುರ ಆಟಗಳು (game) – ಲೀವಿಸ್ ಕ್ಯಾರಲ್ ಅವರ “ಥ್ರೂ ದ ಲುಕಿಂಗ್ ಗ್ಲಾಸ್” ನೆನಪಿಸಿಕೊಳ್ಳಿ. ಅಥವಾ ಇಟಾಲೋ ಕ್ಯಾಲ್ವಿನ್ನನ “ಇನ್ವಿಸಿಬಲ್ ಸಿಟೀಸ್”. ಇದೇ ದಾರಿಯಲ್ಲಿ ನಮಗೆ ಎದುರಾಗುವ “ಜಾಣ” ಕಾದಂಬರಿಕಾರ ಇಟಲಿಯ ಉಂಬರ್ಟೋ ಇಕೋ.

ಸಂಜ್ಞೆಗಳ ಅರ್ಥೈಸುವಿಕೆಗೆ ಸಂಬಂಧಿಸಿದ ವಿಜ್ಞಾನವಾದ ಸಂಜ್ಞಾಶಾಸ್ತ್ರದ ಪ್ರಸಿದ್ಧ ಪರಿಣಿತ, ಪತ್ತೇದಾರಿ ಕಾದಂಬರಿಯೊಂದನ್ನು ಬರೆಯಲು ಹೊರಟರೆ, ಅಸ್ಪಷ್ಟ ಸೂಚನೆಗಳು, ಗುಪ್ತಲಿಪಿಗಳು, ಸಾಂಕೇತಿಕ ಘಟನೆಗಳಿಂದ ತುಂಬಿದ ಶೈಲಿಯನ್ನು ಯಾರೂ ಕೂಡ ಕಲ್ಪಿಸಿಕೊಳ್ಳಬಹುದು. ಅತಿಮಾನ್ಯ ಪತ್ತೇದಾರಿ ಸಾಹಿತಿ ಆರ್ಥರ್ ಕಾನನ್ ಡಾಯ್ಲನ “ಶೆರ್ಲಾಕ್ ಹೋಮ್ಸ್” ಮಾದರಿಯ, ಮಧ್ಯಯುಗದಲ್ಲಿ ಘಟಿಸುವ ರೋಚಕ ಕತೆಯನ್ನು ಹೇಳುವ ಉಂಬರ್ಟೋ ಇಕೋ ಅವರ “ದ ನೇಮ್ ಆಫ್ ದ ರೋಸ್” ಎಂಬ ಹೆಸರಿನ ಕಾದಂಬರಿ ಮಾತ್ರ ಇದೆಲ್ಲ ಇದ್ದರೂ ಇಷ್ಟು ಮಾತ್ರವಲ್ಲ, ಪತ್ತೇದಾರಿಕೆ ಅದರ ತಂತ್ರ ಮಾತ್ರ; ಅದೊಂದು “ಮರ್ಡರ್ ಮಿಸ್ಟರಿ” – ಅದು ಅದರ ಹೂರಣ ಮಾತ್ರ; ಮಧ್ಯಯುಗವು ಅದರ ಹಿನ್ನೆಲೆ ಮಾತ್ರ. ಇವೆಲ್ಲದರ ಜೊತೆ, ಜನರು ಹೇಗೆ ಅರ್ಥವನ್ನು ಕಟ್ಟಿಕೊಳ್ಳುತ್ತಾರೆಂದು ವಿವರಿಸುವ ಸಂಜ್ಞಾಶಾಸ್ತ್ರವನ್ನು ನಿದರ್ಶಿಸುವ ಕಥನವೂ ಅದಾಗಿದೆ.

1980ರಲ್ಲಿ ಇಟಾಲಿಯನ್ ಭಾಷೆಯಲ್ಲಿ ಪ್ರಕಟವಾದ “ದ ನೇಮ್ ಆಫ್ ದ ರೋಸ್” (ಇಂಗ್ಲೀಷ್ ಭಾಷಾಂತರ 1983ರಲ್ಲಿ ಬಂತು) ಐತಿಹಾಸಿಕ ಕಥನ, ಪತ್ತೇದಾರಿ ಕತೆ, ಮತ್ತು ಸಂಜ್ಞಾಶಾಸ್ತ್ರದ ಅರ್ಥವಿವರಣೆಯ ತಂತ್ರಗಳು ಒಂದೆಡೆ ಮೇಳೈಸಿದ ಕೃತಿ. ಈ ಕೃತಿಯ ಪ್ರಧಾನ ನಿರೂಪಕ ಒಂದೆಡೆ ಹೇಳುತ್ತಾನೆ: “ಪ್ರತಿ ಪುಸ್ತಕವೂ ಲೌಕಿಕ ಅಥವಾ ಪಾರಮಾರ್ಥಿಕ ಜಗತ್ತಿನ ವಿದ್ಯಮಾನಗಳ ಕುರಿತಾಗಿಯೇ ನುಡಿಯುತ್ತಿದೆಯೆಂದು ನಾನೆಂದುಕೊಂಡಿದ್ದೆ; ಆದರೆ, ಪುಸ್ತಕಗಳು ಇತರ ಪುಸ್ತಕಗಳ ಕುರಿತಾಗಿಯೂ ಇರಬಹುದೆಂಬ ಅರಿವು ನನಗೆ ಹೊಸದಾಗಿತ್ತು”. ಹೌದು, ಇಕೋರವರ ಕೃತಿ ಕೂಡ ಇತರ ಕೃತಿಗಳನ್ನು ಒಳಗೊಂಡಿರುವಂತದ್ದೇ. ಮೂಲತಃ ಈ ಕೃತಿ ಹೇಳುತ್ತಿರುವ ಕತೆಯಲ್ಲಿಯೂ ಸಹ, ಪುಸ್ತಕದ ಹಸ್ತಪ್ರತಿಗಳು ಅಪರಾಧದ ಅನಾವರಣಕ್ಕೆ ಸುಳಿವು ಕೊಡುತ್ತವೆ; ಅಪರಾಧದ ಹಿಂದಿನ ಉದ್ದೇಶವಾಗಿಯೂ ಬರುತ್ತವೆ; ಅಷ್ಟೇ ಅಲ್ಲದೇ, ಅಪರಾಧದಲ್ಲಿ ಬಳಸುವ ಶಸ್ತ್ರವಾಗಿಯೂ ಕಾಣಿಸಿಕೊಳ್ಳುತ್ತವೆ.

ಈ ಕಾದಂಬರಿಯ ಕಥನ ಶೈಲಿ ಸರಳವಾಗಿಲ್ಲ; ಯಾಕೆಂದರೆ, ಇಕೋ ತಾನು ಪ್ರಸ್ತುತ ಪಡಿಸುತ್ತಿರುವುದು ಮಧ್ಯಯುಗೀಣ ಅಧಿಕೃತ ಹಸ್ತಪ್ರತಿಯೆಂಬ ಕಲ್ಪನೆ ಓದುಗರಲ್ಲಿ ಮೂಡಿಸಲಿಕ್ಕಾಗಿ ಪ್ರಯತ್ನಿಸಿದ್ದಾನೆ. ಮಧ್ಯಯುಗದ ಐತಿಹಾಸಿಕ ವಿವರಗಳು, ಅಂದಿನ ಸಮಕಾಲೀನ ಚರ್ಚೆಗಳು, ಆವಿಷ್ಕಾರಗಳು, ಚರ್ಚು ಮತ್ತದರ ಆಂತರಿಕ ವಿವಾದಗಳು, ಇತ್ಯಾದಿ ಅನೇಕ ವಿವರಗಳನ್ನು ಬಳಸಿಕೊಳ್ಳಲಾಗಿದೆ. ಹಾಗೆಯೇ ಅನೇಕ ಸಮಕಾಲೀನ ವಿದ್ವಾಂಸರು, ಅನೇಕ ಭಾಷೆಗಳಲ್ಲಿರುವ ಅವರ ಬರಹಗಳನ್ನು, ಅನೇಕ ಪುರಾತನ ಉದ್ಧರಣಗಳನ್ನು ಉಲ್ಲೇಖಿಸಲಾಗಿದೆ. ಇವೆಲ್ಲದರಿಂದಾಗಿ, ಒಟ್ಟಾರೆ ಓದುಗರನ್ನು ಮಧ್ಯಯುಗಕ್ಕೆ ಒಯ್ಯುವುದರಲ್ಲಿ ಕೃತಿ ಸಫಲವಾಗುತ್ತದೆ. ತನ್ನ ಕೃತಿಯ ಮುನ್ನುಡಿಯಲ್ಲಿ ಇಕೋ ಹೇಳುವಂತೆ, “ದ ನೇಮ್ ಆಫ್ ದ ರೋಸ್” ಕೃತಿಯ ಮೂಲ ಈಗ ಲಭ್ಯವಿಲ್ಲದ ಲ್ಯಾಟಿನ್ನಿನ ಹಸ್ತಪ್ರತಿಯಾಗಿದೆ – ಇದೂ ಕೂಡ ಕತೆಯ ಅಂಶವೇ. ಆ ಲ್ಯಾಟಿನ್ ಹಸ್ತಪ್ರತಿಯ ಫ್ರೆಂಚ್ ಅನುವಾದದ ಒಂದು ನಿರ್ದಿಷ್ಟ ಫ್ರೆಂಚ್ ಆವೃತ್ತಿಯ ಇಟಾಲಿಯನ್ ಅನುವಾದದ ಇಂಗ್ಲೀಷ್ ಅನುವಾದ ನಾವು ಓದುತ್ತಿರುವ ಕೃತಿಯಾಗಿದೆ. ಈ ಬಗೆಯ ಕಾಲ್ಪನಿಕ ಅಂತರ್-ಪಠ್ಯ ಜಾಲದ ನಿರ್ಮಿತಿ ಇಕೋನ ತಂತ್ರಗಳಲ್ಲೊಂದು ಎಂದು ಪ್ರತ್ಯೇಕ ಹೇಳಬೇಕಿಲ್ಲ.

ಹದಿನೆಂಟನೇ ಶತಮಾನದ ಉತ್ತರಾರ್ಧದಲ್ಲಿ ಬರೆಯುತ್ತಿದ್ದ ಲಾರೆನ್ಸ್ ಸ್ಟರ್ನ್ ನಿಂದ ಹಿಡಿದು, ಇಟಾಲೋ ಕ್ಯಾಲ್ವಿನೊ, ಬೋರ್ಹೆಸ್, ಭಾರತೀಯ ಆಂಗ್ಲ ಲೇಖಕ ಅಮಿತಾವ್ ಘೋಷ್, ನಮ್ಮ ಪೂರ್ಣಚಂದ್ರ ತೇಜಸ್ವಿಯವರ “ಮಾಯಾಲೋಕ”ಗಳೆಲ್ಲ ಕಾದಂಬರಿ ಪ್ರಕಾರ ಹೇಗೆ ವಿಭಿನ್ನ ಬರವಣಿಗೆಗಳ ಭಿತ್ತಿಯಾಗಿದೆಯೆಂದು ದರ್ಶಿಸುತ್ತವೆ.

ಈ ಕಾದಂಬರಿಗೆ ಬರೆದ ಪುರವಣಿಯಲ್ಲಿ (Postscript) ಇಕೋ ಹೇಳುವ ಪ್ರಕಾರ ಕಾದಂಬರಿಯೆನ್ನುವುದು ವ್ಯಾಖ್ಯಾನಗಳನ್ನು ಹುಟ್ಟುಹಾಕಲೆಂದೇ ಇರುವ ಯಂತ್ರ. ಕಾದಂಬರಿಯ ಶೀರ್ಷಿಕೆಯೂ ಇದನ್ನೇ ಸೂಚಿಸುತ್ತದೆ ಯಾಕೆಂದರೆ, ಇಕೋ ಹೇಳುವಂತೆ, “ರೋಸ್” (ಗುಲಾಬಿ) ಶಬ್ದಕ್ಕೆ ಇರುವ ಅಪಾರ ಅರ್ಥಸಾಧ್ಯತೆಗಳಿಂದಾಗಿ ಅದೀಗ ನಿರ್ದಿಷ್ಟ ಅರ್ಥವೇ ಇರದ ಒಂದು ನಾಮಪದ ಮಾತ್ರವಾಗಿದೆ. ಮಧ್ಯಯುಗದಲ್ಲಿ ಶಬ್ದಗಳ ಅನಂತ ಸಾಧ್ಯತೆಗಳನ್ನು “ದ ನೇಮ್ ಆಫ್ ದ ರೋಸ್” ಎಂಬ ನುಡಿಗಟ್ಟಿನ ಮೂಲಕ ಸೂಚಿಸಲಾಗುತ್ತಿತ್ತು. ಯಾವುದೇ ಏಕನಿಷ್ಠ ವ್ಯಾಖ್ಯಾನವನ್ನು, ಅರ್ಥವನ್ನು, ಆಯ್ದುಕೊಳ್ಳುವುದು ಅಸಂಭವವೆನ್ನುವುದನ್ನು ಓದುಗರ ಅನುಭವಕ್ಕೆ ತರುವುದೇ ಈ ಕಾದಂಬರಿಯಲ್ಲಿ ಇಕೋನ ಉದ್ದೇಶವಾಗಿದೆ. ಯಾವೊಂದು ಸಂಜ್ಞೆಗೂ ಅನೇಕಾನೇಕ ಅರ್ಥಗಳು ಸಾಧ್ಯವಿರುತ್ತವೆ ಎನ್ನುವುದು ಸಂಜ್ಞಾಶಾಸ್ತ್ರದ ತತ್ವ. ಪ್ರತಿ ಅರ್ಥೈಸುವಿಕೆಯ ಸಂದರ್ಭದಲ್ಲಿಯೂ ಇದು ಬದಲಾಗಬಹುದು; ಹಾಗಾಗಿ, ಯಾವೊಂದು ಅರ್ಥವಿವರಣೆಯೂ ಕೂಡ ಏಕೈಕ ಸತ್ಯವಾಗಿರುವುದಿಲ್ಲವೆನ್ನುವ ಸಂಜ್ಞಾಶಾಸ್ತ್ರದ ತತ್ವವನ್ನು ಕಾದಂಬರಿಯ ಪಾತ್ರಗಳು ಅನುಭವಿಸುತ್ತವೆ ಮತ್ತು ಇಕೋನ ಶೈಲಿ ಅದೇ ಅನುಭವವನ್ನು ಓದುಗರಿಗೂ ತಲುಪಿಸುತ್ತದೆ. ಲೇಖಕ ಕಾದಂಬರಿಯಲ್ಲಿ ಅನೇಕ ಊಹೆಗಳಿಗೆ ಎಡೆಮಾಡಿಕೊಟ್ಟು, ಪಠ್ಯವೊಂದರ ವ್ಯಾಖ್ಯಾನ ಹೇಗೆ ಹಲದಿಕ್ಕುಗಳಲ್ಲಿ ಸಾಗಬಹುದೆಂಬುದನ್ನು ನೆನಪಿಸುತ್ತಾನೆ.

ಜಗತ್ತೂ ಕೂಡ ಒಂದು ಪಠ್ಯವೇ – ಅದನ್ನೂ ಕೂಡ ಅರ್ಥೈಸುವ ಬಗೆಗಳನ್ನು ಕಲಿಯುವುದೇ ನಮ್ಮ ಪ್ರಮುಖ ಸವಾಲಾಗಿರುತ್ತದೆ ಎನ್ನುವುದನ್ನು ಇಕೋ ಜ್ಞಾಪಿಸುತ್ತಾನೆ. ಓದುವುದು ಯಾಕೆ ಮುಖ್ಯ ಎನ್ನುವುದಕ್ಕೆ ಇಕೋ ರಂಜನೀಯ ಕತೆಯ ಮೂಲಕ ನಿದರ್ಶನ ಕೊಟ್ಟಿದ್ದಾನೆ. ಓದು ಎನ್ನುವುದೇ ಅರ್ಥವಿವರಣೆಯ – ಇಂಟರಪ್ರಿಟೇಶನ್ – ಪ್ರಕ್ರಿಯೆ. ಆದರೆ, ಸಾಮಾನ್ಯವಾಗಿ ನಾವು ಓದುತ್ತಿರುವುದರ ಅರ್ಥ ಸಹಜವಾಗಿ ಪಠ್ಯವೇ ನಮಗೆ ಒದಗಿಸುತ್ತಿದೆ; ಮತ್ತು ಆ ಅರ್ಥ ಸ್ಥಿರವಾದದ್ದು, ಎಲ್ಲರೂ ಅದೇ ಅರ್ಥವನ್ನು ಗ್ರಹಿಸುತ್ತಾರೆ ಎಂಬ ನಂಬಿಕೆಯಡಿಯಲ್ಲಿಯೇ ನಾವು ಓದುತ್ತೇವೆ. ಸಂಜ್ಞಾಶಾಸ್ತ್ರವೆಂಬ (semiotics) ವಿಜ್ಞಾನವು ನಮ್ಮ ಗ್ರಹಿಕೆಗಳು – ಓದುವಾಗ ಮಾತ್ರವಲ್ಲ, ಮೂಲಭೂತ ಗ್ರಹಿಕೆಗಳೂ ಸಹ – ಅರ್ಥವಿವರಣೆಯ ವಿದ್ಯಮಾನವೇ ಆಗಿರುತ್ತದೆ ಎನ್ನುವುದನ್ನು, ಮತ್ತು ಈ ಅರ್ಥಗ್ರಹಿಕೆಗಳನ್ನು ತಲುಪಲು ನಾವು ಬಳಸುವ ಆಧಾರಗಳು ಏನು, ಅದರ ಪ್ರಕ್ರಿಯೆ ಏನು ಎನ್ನುವುದರ ವಿಶ್ಲೇಷಣೆ ಮಾಡುತ್ತದೆ.

(ಆರ್ಥರ್ ಕಾನನ್ ಡಾಯ್ಲ್)

ಉಂಬರ್ಟೋ ಇಕೋ ಕಾದಂಬರಿ ಬರೆಯುವುದಕ್ಕೂ ಮುಂಚೆ ಸಂಜ್ಞಾಶಾಸ್ತ್ರಕ್ಕೆ ಸಂಬಂಧಿಸಿದ ಕೃತಿರಚನೆಗಳನ್ನು ಮಾಡಿದ್ದ.

ಸಂದರ್ಶನವೊಂದರಲ್ಲಿ ಉಂಬರ್ಟೋ ಇಕೋ ಎರಡು ಬಗೆಯ ಓದುಗರನ್ನು ಗುರುತಿಸುತ್ತಾನೆ. ಮೊದಲನೆಯದಾಗಿ, “ಸರಳ” ಓದುಗರು – ಕೃತಿಯ ಸಂಕೀರ್ಣ ಶ್ರೀಮಂತಿಕೆಯ ಕಡೆ ಹೆಚ್ಚು ಗಮನ ಕೊಡದೇ, ಮೇಲ್ಪದರದ ಓದಿನಲ್ಲಿ ತೃಪ್ತಿ ಕಾಣುವವರು. ಉದಾಹರಣೆಗೆ, “ದ ನೇಮ್ ಆಫ್ ದ ರೋಸ್” ಕೃತಿಯನ್ನು ಸರಳ ಓದುಗರು ಕೇವಲ ಪತ್ತೇದಾರಿ ಕತೆಯಾಗಿ ಓದಿ ಖುಷಿ ಪಡುತ್ತಾರೆ. ಎರಡನೆಯದಾಗಿ, “ನುರಿತ” ಓದುಗರು – ಕೃತಿಯ ಆಳದಲ್ಲಿರುವ ರಾಜಕೀಯ, ಆಧ್ಯಾತ್ಮಿಕ, ತತ್ವಶಾಸ್ತ್ರೀಯ ಅರ್ಥಗಳನ್ನು ಹುಡುಕಿ ತೆಗೆದು ಆನಂದಿಸುವವರು. ಅವರಿಗೆ “ದ ನೇಮ್ ಆಫ್ ದ ರೋಸ್” ಕೃತಿಯ ಸೂಕ್ಷ್ಮತೆ, ಹಾಸ್ಯ, ಸಂಕೀರ್ಣತೆ ಮುಖ್ಯವಾಗುತ್ತವೆ; ಅಂತೆಯೇ ಕೃತಿಯಲ್ಲಿ ಸಾಗಿರುವ ಭಾಷಾಸಂಬಂಧಿ, ಕಥನಸಂಬಂಧಿ ಆಟಗಳಲ್ಲಿ ವಿಶೇಷ ಆಸಕ್ತಿ ಇರುತ್ತದೆ.

ಇಕೋ ಇದನ್ನು ಓದುಗರಲ್ಲಿರುವ ಭಿನ್ನತೆಗಿಂತ ಹೆಚ್ಚಾಗಿ, ಓದುವ ಪ್ರಕ್ರಿಯೆಯಲ್ಲಿರುವ ಭಿನ್ನತೆಯೆಂದು ಬಿಂಬಿಸುತ್ತಾನೆ. ಹಾಗಾಗಿ, ಇದು ತಪ್ಪು-ಸರಿಯ ಪ್ರಶ್ನೆಯಾಗಿರದೇ, ಓದಿನ ಪ್ರಕ್ರಿಯೆಯಲ್ಲಿನ ತಂತ್ರಗಳ ಬಳಕೆಯ ಸ್ವರೂಪಕ್ಕೆ ಸಂಬಂಧಿಸಿದ್ದು. ಇಕೋ “ದ ನೇಮ್ ಆಫ್ ದ ರೋಸ್” ಕೃತಿಯ ಪುರವಣಿಯಲ್ಲಿ ಸೂಚಿಸಿರುವ ಹಾಗೆ, ಈ ಕಾದಂಬರಿಗೆ ಪರಸ್ಪರ ಅವಲಂಬಿಸಿದ ಹಲವು ಸ್ತರಗಳ ಅರ್ಥಸಾಧ್ಯತೆಯಿದೆ. ಕೊಲೆಗಾರನನ್ನು ಹುಡುಕುವ ಪತ್ತೇದಾರಿ ಅಂಶ ಒಂದು ಸ್ತರವಾದರೆ, ಆರ್ಥರ್ ಕಾನನ್ ಡಾಯ್ಲ್ ಅವರ “ಶೆರ್ಲಾಕ್ ಹೋಮ್ಸ್” ಕೃತಿಗಳೊಂದಿಗೆ ಹೊಂದಿರುವ “ಅಂತರ್-ಪಠ್ಯ”ದ ಸ್ತರ ಇನ್ನೊಂದು. ಈ ಕಾದಂಬರಿಯ ನಾಯಕ ಬಾಸ್ಕರ್ವಿಲ್ಲಿನ ವಿಲಿಯಂ ಶೆರ್ಲಾಕ್ ಹೋಮ್ಸ್ ಪಾತ್ರವನ್ನು ನೆನಪಿಸಿದರೆ, ನಿರೂಪಕ ಮೆಲ್ಕನ ಆದ್ಸೋ, ಹೋಮ್ಸನ ಜೊತೆಗಾರ ಡಾ. ವಾಟ್ಸನ್ನನ ಪ್ರತಿರೂಪ. ಇನ್ನೊಂದು ಸ್ತರದಲ್ಲಿ, ಹದಿನಾಲ್ಕನೇ ಶತಮಾನದ ಧಾರ್ಮಿಕ ವಾದವಿವಾದಗಳನ್ನು ನೆನಪಿಸುವ ಐತಿಹಾಸಿಕ ಸ್ತರವಿದೆ. ಹಾಗೆಯೇ, ಸಂಜ್ಞಾಶಾಸ್ತ್ರ ಸೂಚಿಸುವಂತೆ, ಬಾಹ್ಯ ಕುರುಹುಗಳನ್ನು ಆಧರಿಸಿ ಅರ್ಥವನ್ನು ಕಟ್ಟಿಕೊಳ್ಳುವುದು ಹೇಗೆ ಎನ್ನುವುದನ್ನು ಪತ್ತೇದಾರಿ ತಂತ್ರಗಳ ಮೂಲಕ ಸೂಚಿಸುವ ಸ್ತರವೂ ಈ ಕೃತಿಗಿದೆ.

“ದ ನೇಮ್ ಆಫ್ ದ ರೋಸ್” ಕೃತಿಯಲ್ಲಿ ಪ್ರಮುಖವಾಗಿ ಮೂರೆಳೆಯ ಕತಾಹಂದರವಿದೆ: ಒಂದು, ನಿರೂಪಕನಾದ ಮೆಲ್ಕನ ಆದ್ಸೋನ ಕತೆ: ಆತ ತನ್ನ ಯೌವನದ ದಿನಗಳಲ್ಲಿ ಕ್ರಿಸ್ತಮಠವೊಂದರಲ್ಲಿ ನಡೆದ ನಿಗೂಢ ಸಾವುಗಳ ಕುರಿತ ವಿಚಾರಣೆಯ ನೆನಪನ್ನು ಹಂಚಿಕೊಂಡಿರುವ ಹಸ್ತಪ್ರತಿಯ ಫ್ರೆಂಚ್ ಅನುವಾದದ ಆವೃತ್ತಿ ನಮ್ಮ ಲೇಖಕನಿಗೆ ದೊರೆತಿದೆ. ಎರಡನೆಯದು, ಫ್ರಾನ್ಸಿಸ್ಕನ್ನರು, ಪೋಪ್, ಇನ್ಕ್ವಿಸಿಷನ್, ಧರ್ಮವಿರೋಧಗಳ ಸುತ್ತ ನಡೆಯುವ ವಾದ ಮತ್ತು ಘಟನೆಗಳು; ಮೂರನೆಯದು, ಕೊಲೆಗಾರನನ್ನು ಹುಡುಕಲು ಲಭ್ಯ ಕುರುಹುಗಳ ಬಗೆಬಗೆಯ ಅರ್ಥಸಾಧ್ಯತೆಗಳನ್ನು ಶೋಧಿಸುವುದು, ಕ್ರಿಸ್ತಮಠದ ಗ್ರಂಥಾಲಯದ ನಿಗೂಢತೆಯ ಅನಾವರಣ ಮತ್ತು ಒಂದು ಅಜ್ಞಾತ ಪುಸ್ತಕದ ಹುಡುಕಾಟ.

ಇಕೋನ “ದ ನೇಮ್ ಆಫ್ ದ ರೋಸ್” ಕಾದಂಬರಿಯ ಪ್ರಧಾನ ನಿರೂಪಕ ಮೆಲ್ಕನ ಆದ್ಸೋ. ಅವನು ಬಾಸ್ಕರವಿಲ್ಲಿನ ವಿಲಿಯಂ ಎಂಬ ಫ್ರಾನ್ಸಿಸ್ಕನ್ ಬಿಕ್ಕುವಿನ ಜೊತೆ ಚರ್ಚಿನಲ್ಲಿ ಸಂಘರ್ಷಗಳು ನಡೆದಿರುವ ಕಾಲದಲ್ಲಿ ಕೈಗೊಂಡ ಪ್ರವಾಸವೇ ಕತೆಯ ಹೂರಣ. ರೋಮ್ ನ ಪವಿತ್ರ ಸಾಮ್ರಾಜ್ಯದ (Holy Roman Empire) ಮೇಲೆ ಹಿಡಿತಕ್ಕಾಗಿ ಮಿಲನ್ ಶಹರದಲ್ಲಿರುವ ಸಮ್ರಾಟ ನಾಲ್ಕನೆಯ ಲೂಯಿ ಮತ್ತು ಅವನ್ಯೂನ್ ಶಹರದಲ್ಲಿ ನೆಲೆಸಿರುವ ಪೋಪರ ನಡುವೆ ಸಂಘರ್ಷ; ಧರ್ಮವಿರೋಧಿಗಳನ್ನು ಹುಡುಕಿ ದಂಡಿಸುವ ಸಲುವಾಗಿ ನಡೆದಿರುವ ಧಾರ್ಮಿಕ ತನಿಖೆ (inquisition) ಹುಟ್ಟುಹಾಕಿರುವ ಭೀತಿ – ಈ ಹಿನ್ನೆಲೆಯಲ್ಲಿ ಬಾಸ್ಕರವಿಲ್ಲಿನ ವಿಲಿಯಂ ಸಮ್ರಾಟ ನಾಲ್ಕನೆಯ ಲೂಯಿಯ ದೂತನಾಗಿ ಇಟಲಿಯ ಬೆನೆಡಿಕ್ಟೈನ್ ಪಂಥದ ಕ್ರಿಸ್ತಮಠದ ಮುಖ್ಯಸ್ತನ ಬಳಿ ಬಂದಿರುತ್ತಾನೆ. ಆದ್ಸೋನ ಜೊತೆ ವಿಲಿಯಂ ಈ ಕ್ರಿಸ್ತಮಠಕ್ಕೆ ಬಂದ ಸಂದರ್ಭದಲ್ಲಿ, ಅಲ್ಲಿ ಓರ್ವ ಯುವ ಬಿಕ್ಕು ನಿಗೂಢ ಸಾವನ್ನಪ್ಪಿರುತ್ತಾನೆ. ವಿಲಿಯಂನಿಗೆ ಪತ್ತೇದಾರಿಕೆಯಲ್ಲಿರುವ ಕೌಶಲ್ಯವನ್ನು ಅರಿತಿದ್ದ ಮಠದ ಮುಖ್ಯಸ್ಥ ಈ ಸಾವಿನ ರಹಸ್ಯ ಕಂಡು ಹಿಡಿಯಲು ಅವನ ಮನವೊಲಿಸುತ್ತಾನೆ.

ಇನ್ಕ್ವಿಸಿಷನ್ ತಂಡ ಬರಲಿರುವ ಸುದ್ದಿ ಹುಟ್ಟಿಸಿದ್ದ ವಿಷಪೂರಿತ ಆತಂಕ, ಕೆಲವು ಬಿಕ್ಕುಗಳ ಅಪವಿತ್ರ ನಡವಳಿಕೆಗಳಿಂದ ಅದಾಗಲೇ ಕಲುಷಿತವಾಗಿದ್ದ ಆ ಕ್ರಿಸ್ತಮಠದ ವಾತಾವರಣವನ್ನು ದಿನಕ್ಕೊಂದರಂತೆ ಏಳುದಿನಗಳಲ್ಲಿ ಆಗುವ ಏಳು ನಿಗೂಢ ಸಾವುಗಳು ಮತ್ತಷ್ಟು ಕಲಕುತ್ತವೆ. ಮೊದಮೊದಲಲ್ಲಿ, ವಿಲಿಯಂ ಅಪೋಕಲಿಪ್ಸನ ಮುನ್ನ ಸಾವು ವಿನಾಶದ ಮುನ್ಸೂಚನೆಯಾಗಿ ಏಳು ಬಾರಿ ಕಹಳೆಯನ್ನು ಮೊಳಗಿಸಲಾಗುವುದೆಂದು “ಬುಕ್ ಆಫ್ ರೆವಿಲೇಷನ್” ನಲ್ಲಿ ಬರುವ ಭವಿಷ್ಯವಾಣಿ ಮತ್ತು ಈ ಸಾವುಗಳಿಗೆ ಸಂಬಂಧವಿದೆಯಾ ಎಂದು ಶೋಧನೆಗೆ ತೊಡಗುತ್ತಾನೆ. ಸಾವಿಗೀಡಾದ ಬಿಕ್ಕುಗಳ ಶರೀರಗಳ ಮೇಲಿದ್ದ ಕೆಲವು ಗುರುತುಗಳು ಮತ್ತು ಈ ಬಿಕ್ಕುಗಳು ಮಾಡುತ್ತಿದ್ದ ಹಸ್ತಪ್ರತಿಗಳ ನಕಲಿನ ಕೆಲಸದ ಆಧಾರದ ಮೇಲೆ ವಿಲಿಯಂನ ತನಿಖೆ ಕ್ರಮೇಣ ಕ್ರಿಸ್ತಮಠದ ಗ್ರಂಥಾಲಯದ ಮೇಲೆ ಕೇಂದ್ರೀಕರಿಸುತ್ತದೆ. ಅದೊಂದು ಸಾಮಾನ್ಯ ಗ್ರಂಥಾಲಯವಲ್ಲ, ಗ್ರಂಥಪಾಲಕ ಹೇಳುವ ಹಾಗೆ, “ಅದು ನೆಲೆನೀಡಿರುವ ಅಗಣಿತ ಸತ್ಯದಂತೆ ಅಳತೆಯನ್ನು ಮೀರಿದ್ದು, ಅದು ಬಚ್ಚಿಡುವ ಅಸತ್ಯದಂತೆ ಕಪಟಿಯಾದದ್ದು”. ಅದರ ಚಕ್ರವ್ಯೂಹದಂತ ಸಂಕೀರ್ಣವನ್ನು ಗ್ರಂಥಪಾಲಕ ಮಾತ್ರ ಬಲ್ಲವನಾಗಿರುತ್ತಾನೆ.

ಆ ಗ್ರಂಥಾಲಯದಲ್ಲಿರುವ ಯಾವುದೋ ಒಂದು ನಿಷೇದಿತ ಹಸ್ತಪ್ರತಿಯ ಶೋಧಕ್ಕೂ, ನಿಗೂಢ ಸಾವುಗಳಿಗೂ ಏನೋ ಸಂಬಂಧ ಇರುವುದಾಗಿ ವಿಲಿಯಂನ ತನಿಖೆಯ ನಿಷ್ಕರ್ಷವಾಗಿರುತ್ತದೆ. ಬಿಕ್ಕುಗಳಿಗೆ ಜ್ಞಾನದ ಕುರಿತಾಗಿ ಇರುವ ತೀವ್ರ ಕುತೂಹಲ, ಅವರನ್ನು ಅಜ್ಞಾತ ಹಸ್ತಪ್ರತಿಯ ಶೋಧದಲ್ಲಿ ಅಥವಾ ಆ ಹಸ್ತಪ್ರತಿ ಇನ್ನಾರಿಗೂ ಸಿಗಬಾರದೆನ್ನುವ ಆತಂಕದಲ್ಲಿ ತೊಡಗಿಸಿರಬಹುದೆಂದು ಅವನು ತೀರ್ಮಾನಿಸುತ್ತಾನೆ. ಹೀಗೆ, ಸುಮಾರು 450 ಪುಟಗಳ ತನಕ ಸಾಗುವ ತನಿಖೆಯ ಕೊನೆಯಲ್ಲಿ, ಆ ಅಜ್ಞಾತ ಹಸ್ತಪ್ರತಿ ಮತ್ತು ಅದರ ರಹಸ್ಯವನ್ನು ಬಿಡಲಿಚ್ಚಿಸದೇ ಕೊಲೆಗೆ ಕೈ ಹಾಕುವ ವ್ಯಕ್ತಿಯನ್ನು ವಿಲಿಯಂ ಪತ್ತೆ ಹಚ್ಚುತ್ತಾನೆ. ಆ ಅಜ್ಞಾತ ಹಸ್ತಪ್ರತಿ, ಅರಿಸ್ಟಾಟಲನ “ಪೋಯೆಟಿಕ್ಸ್” ಕೃತಿಯ ದ್ವಿತೀಯ ಭಾಗವಾದ “ಕಾಮೆಡಿ” ಕುರಿತಾದ ಗ್ರಂಥ. ಹಾಸ್ಯದ ಕುರಿತಾಗಿದ್ದ ಈ ಗ್ರಂಥ ಹಾಸ್ಯವನ್ನು ಕೊಂಡಾಡುತ್ತ, ಅದು ಒಳಿತು ಸಾಧಿಸುವ ದಾರಿಯಲ್ಲೊಂದು ಎಂದು ವಾದಿಸುತ್ತದೆ ಎನ್ನುವ ಕಾರಣಕ್ಕಾಗಿ, ಕರ್ಮಠತನದ ಮಠವಾಸಿಯೊಬ್ಬ ಆ ಹಸ್ತಪ್ರತಿಯನ್ನು ಹುದುಗಿಸಿರುತ್ತಾನೆ ಮತ್ತು ಅದು ಯಾರ ಗಮನಕ್ಕೆ ಬರುತ್ತದೋ ಅವರನ್ನು ಕೊಂದಿರುತ್ತಾನೆ. ಕೊಲೆಗಾರ ಯಾರು ಎಂದು ಹೇಳಿಬಿಟ್ಟರೆ, ನಿಮಗೆ ಓದುವ ಕುತೂಹಲವೇ ಉಳಿಯದು ಎಂದು ಆ ಪಾತ್ರದ ಸ್ಪಷ್ಟ ಚಿತ್ರ ಕೊಡುತ್ತಿಲ್ಲ.

ಅರಿಸ್ಟಾಟಲನ ಕಾಮೆಡಿ ಕುರಿತಾದ ಗ್ರಂಥ ಕಾಲ್ಪನಿಕವೇ ಸೈ, ಯಾಕೆಂದರೆ ಅದರ ಪ್ರತಿ ಉಳಿದಿಲ್ಲವೆನ್ನುತ್ತಾರೆ. ಆದರೆ, ಮಧ್ಯಯುಗದಲ್ಲಿ ಕ್ರೈಸ್ತ ಧರ್ಮೀಯರ ಜೀವನದಲ್ಲಿ ಹಾಸ್ಯದ ಕುರಿತಾಗಿಯೇ ನಡೆಯುತ್ತಿದ್ದ ವಾದಗಳ ಹಿನ್ನೆಲೆಯಲ್ಲಿ ಇಕೋ ಈ ಗ್ರಂಥದ ಕಾಲ್ಪನಿಕ ಹಸ್ತಪ್ರತಿಯ ಉಲ್ಲೇಖ ಮಾಡುತ್ತಾನೆ. ಆ ಕ್ರಿಸ್ತಮಠದಲ್ಲಿ ಜೋರಾಗಿ ನಡೆದಿದ್ದ ಹಾಸ್ಯದ ಪರ-ವಿರೋಧ ಚರ್ಚೆಯನ್ನು ಕಾದಂಬರಿ ವರದಿ ಮಾಡುತ್ತದೆ.


ಮತ್ತೊಂದು ಸಾಂಕೇತಿಕ ಮಹತ್ವದ ವಿಷಯವೆಂದರೆ, ಸತ್ಯದ ಭಂಡಾರವಾಗಿರಬೇಕಾಗಿದ್ದ ಗ್ರಂಥಾಲಯವೊಂದು ಸತ್ಯಶೋಧಕರನ್ನು ದೂರ ಇಡಲೆಂದೇ ರಹಸ್ಯಮಯವಾಗಿಬಿಡುವಲ್ಲಿನ ಭ್ರಷ್ಟತೆ. ಹಾಗೆಯೇ, ಪುರಾತನರು ಬರೆದಿದ್ದನ್ನು ನಕಲು ಮಾಡುವ ಯಾಂತ್ರಿಕ ಕಾರ್ಯದಲ್ಲಿಯೇ ತಮ್ಮ ಜೀವಮಾನ ಸವೆಸುವ ಬಿಕ್ಕುಗಳು, ಸ್ವತಃ ಜ್ಞಾನಶೋಧನೆಯ ದಾರಿಯಲ್ಲಿ ಸಾಗದೇ ಇರುವುದು. ಹೀಗೆ, “ದ ನೇಮ್ ಆಫ್ ದ ರೋಸ್” ಓದುಗರನ್ನು ಸಂಜ್ಞೆಗಳ ಹಲವು ಅರ್ಥಸಾಧ್ಯತೆಯತ್ತ ಗಮನ ಹರಿಸುವಂತೆ ಪ್ರೇರೇಪಿಸುತ್ತದೆ. “ಇದುವೇ ಅರ್ಥ”ವೆಂದು ನಿರ್ಧಾರಕ್ಕೆ ಬರುವುದನ್ನು ನಿಧಾನಗೊಳಿಸುವುದಕ್ಕಾಗಿ ಕಾದಂಬರಿಯೇ ಓದುಗರ ಕಲ್ಪನೆ ಹಲವು ದಿಕ್ಕುಗಳಲ್ಲಿ ಸಾಗುವಂತೆ ಮಾಡುತ್ತದೆ. ಅರ್ಥವಿವರಣೆಗೆ ಅಂತ್ಯವೆನ್ನುವುದು ಅಸಾಧ್ಯವೆನ್ನುವ ನಿಷ್ಕರ್ಷದತ್ತ ಓದುಗರನ್ನು ಒಯ್ಯುತ್ತದೆ. ಹೀಗೆ, ಅರ್ಥಸಾಧ್ಯತೆಗಳ ಬೆರಗಿನ ಲೋಕವನ್ನೇ ಅನಾವರಣಗೊಳಿಸುವ ಕೃತಿಯಾಗಿದೆ ಉಂಬರ್ಟೋ ಇಕೋನ “ದ ನೇಮ್ ಆಫ್ ದ ರೋಸ್”.