ಚುನಾವಣೆಯ ದಿನ ವಿಜಾಪುರದ ಒಂದು ಹಳ್ಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು. ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ಹೊಲಗಳಲ್ಲಿ ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ. ಸರದಿಯಲ್ಲಿ ನಿಂತು ಇಂದಿರಾ ಕಾಂಗ್ರೆಸ್‌ಗೆ ಮತ ಚಲಾಯಿಸಿದರು.
ರಂಜಾನ್‌ ದರ್ಗಾ ಬರೆಯುವ ಆತ್ಮಕತೆ ʻನೆನಪಾದಾಗಲೆಲ್ಲʼ ಸರಣಿಯ 66ನೇ ಕಂತು ನಿಮ್ಮ ಓದಿಗೆ

1967ರ ಸಾರ್ವತ್ರಿಕ ಚುನಾವಣೆಯಲ್ಲಿ ಇಂದಿರಾ ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಜಯ ಗಳಿಸಿತು. ಇಂದಿರಾ ಪ್ರಧಾನಿಯಾದರು.

1969ರಲ್ಲಿ ರಾಷ್ಟ್ರಪತಿ ಝಾಕೀರ್ ಹುಸೇನ್ ಅವರ ನಿಧನದ ನಂತರ ನಡೆದ ರಾಷ್ಟ್ರಪತಿ ಚುನಾವಣೆಯಲ್ಲಿ ಇಂದಿರಾ ಜೊತೆಗೆ ಭಿನ್ನಾಭಿಪ್ರಾಯ ಹೊಂದಿದ್ದ ನೀಲಂ ಸಂಜೀವರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಇಂದಿರಾ ಗಾಂಧಿಯವರ ಸಲಹೆಯ ಮೇರೆಗೆ ಉಪ ರಾಷ್ಟ್ರಪತಿ ವಿ.ವಿ. ಗಿರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆತ್ಮಸಾಕ್ಷಿಯಂತೆ ಮತ ಚಲಾಯಿಸಲು ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಎಂ.ಪಿ. ಮತ್ತು ಎಂ.ಎಲ್.ಎ. ಗಳಿಗೆ ಕರೆನೀಡಿದರು. ವಿ.ವಿ. ಗಿರಿ ರಾಷ್ಟ್ರಪತಿಗಳಾದರು. ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದಕ್ಕೆ ಈ ರಾಷ್ಟ್ರಪತಿ ಚುನಾವಣೆ ಕಾರಣವಾಗಿತ್ತು.

(ಎಸ್. ನಿಜಲಿಂಗಪ್ಪ)

16.08.1969 ರಂದು ಭಾರತದ 5ನೇ ರಾಷ್ಟ್ರಪತಿಯಾಗಿ ವಿ.ವಿ. ಗಿರಿ ಆಯ್ಕೆಯಾದರು. ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿ ನೀಲಂ ಸಂಜೀವರೆಡ್ಡಿ ಸೋತಿದ್ದನ್ನು ಎಸ್. ನಿಜಲಿಂಗಪ್ಪ ಮತ್ತು ಅವರ ಜೊತಿಗಿದ್ದ ಹಿರಿಯ ನಾಯಕರು ಗಂಭೀರವಾಗಿ ಪರಿಗಣಿಸಿದರು.

ಪಕ್ಷದ ಶಿಸ್ತು ಉಲ್ಲಂಘಿಸಿದ ಆರೋಪದ ಮೇಲೆ ಕಾಂಗ್ರೆಸ್ ಅಧ್ಯಕ್ಷ ಎಸ್. ನಿಜಲಿಂಗಪ್ಪ ಪ್ರಧಾನಿ ಇಂದಿರಾ ಗಾಂಧಿ ಅವರನ್ನು 1969ನೇ ನವೆಂಬರ್ 12ರಂದು ಪಕ್ಷದಿಂದ ಉಚ್ಚಾಟಿಸಿದರು. ಇಂದಿರಾ ಗಾಂಧಿ ಹೊಸದಾದ ಭಾರತ ರಾಷ್ಟ್ರೀಯ ಕಾಂಗ್ರೆಸ್ ಸ್ಥಾಪಿಸಿದರು. ಅದಕ್ಕೆ ಇಂದಿರಾ ಕಾಂಗ್ರೆಸ್, ಕಾಂಗೈ, ಇಂಡಿಕೇಟ್ ಮುಂತಾದ ಪದಗಳಿಂದ ಕರೆಯಲಾಯಿತು. ನಿಜಲಿಂಗಪ್ಪ ಕಾಂಗ್ರೆಸ್‌ಗೆ ಕಾಂಗ್ರೆಸ್ (ಓಲ್ಡ್), ಕಾಂಗೋ, ಸಂಸ್ಥಾ ಕಾಂಗ್ರೆಸ್, ಸಿಂಡಿಕೇಟ್ ಮುಂತಾಗಿ ಕರೆಯಲಾಯಿತು.

ಆಗ ನಾನು ವಿಜಾಪುರದಲ್ಲಿ ಪಿ.ಯು.ಸಿ. ವಿದ್ಯಾರ್ಥಿ. ಭಾರತ ರಾಷ್ಟ್ರೀಯ ಕಾಂಗ್ರೆಸ್ ತನ್ನ ಭಾರಕ್ಕೆ ತಾನೇ ಕುಸಿದಿತ್ತು. ಸಿಂಡಿಕೇಟ್‌ಗೆ ಎಸ್. ನಿಜಲಿಂಗಪ್ಪನವರು ನಾಯಕರಾದರೆ, ಇಂಡಿಕೇಟ್‌ಗೆ ಇಂದಿರಾಗಾಂಧಿ ಅವರು ನಾಯಕಿಯಾಗಿದರು.

1969ರಲ್ಲಿ ಪ್ರಧಾನಿ ಇಂದಿರಾ ಗಾಂಧಿ ಅವರು ಬೆಂಗಳೂರಿನ ಲಾಲ್‌ಬಾಗ್ ಗ್ಲಾಸ್‌ಹೌಸ್‌ನಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯ ನಂತರ ದೆಹಲಿಗೆ ಹೋದ ಮೇಲೆ 19.07.1969 ರ ಮಧ್ಯರಾತ್ರಿ ವೇಳೆ, ಮೊದಲ ಹಂತದಲ್ಲೇ 14 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿ ರಾಜಧನ ರದ್ದತಿ ಘೋಷಿಸಿದರು. ರಾಜಧಾನಿ ರದ್ದತಿ ವಿರುದ್ಧ ರಾಜ್ಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರಾಷ್ಟಪತಿ ವಿ.ವಿ. ಗಿರಿ ರಾಜಧನ ರದ್ದತಿಯ ಪರ ನಿರ್ಣಯ ಕೈಗೊಂಡರು. ಸಂಸ್ಥಾನಿಕರು ಕೋರ್ಟಿಗೆ ಹೋದರು. ಈ ನಿರ್ಣಯ ಕಾನೂನಿಗೆ ವಿರುದ್ಧ ಎಂದು ಕೋರ್ಟ್ ತೀರ್ಪು ನೀಡಿತು.

1971ರಲ್ಲಿ ಇಂದಿರಾ ಗಾಂಧಿ ಅವಧಿಗೆ ಮುನ್ನವೇ ಲೋಕಸಭಾ ಚುನಾವಣೆ ಘೋಷಿಸಿದರು. ಈ ಸಾರ್ವತ್ರಿಕ ಚುನಾವಣೆಯಲ್ಲಿ ತಾನು ಬಡವರ ಪರ ಎಂದು ಇಂದಿರಾ ಕಾಂಗ್ರೆಸ್ ಸಾರಿತು. ‘ಗರೀಬಿ ಹಟಾವೋ’ ಮತ್ತು ‘ರೋಟಿ ಕಪಡಾ ಮಕಾನ್’ ಘೋಷಣೆಗಳೊಂದಿಗೆ ಇಂದಿರಾ ಕಾಂಗ್ರೆಸ್ ಜಯಭೇರಿ ಹೊಡೆಯಿತು. ಸಂಸ್ಥಾ ಕಾಂಗ್ರೆಸ್ ಮೂಲೆಗುಂಪಾಯಿತು.

ಸಿಂಡಿಕೇಟ್‌ನಲ್ಲಿ ಜಮೀನುದಾರರು, ದೊಡ್ಡವ್ಯಾಪಾರಿಗಳು, ಶ್ರೀಮಂತರು ಮತ್ತು ಮೇಲ್ಜಾತಿಗಳ ಬಹುಪಾಲು ಹಳೆ ಕಾಂಗ್ರೆಸ್ ನಾಯಕರು ತುಂಬಿದ್ದರು. ಈ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪತ್ತುಳ್ಳವರು ಮತ್ತು ವಯಸ್ಸಾದವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿಗಳಾದರು. ಇಂದಿರಾ ಕಾಂಗ್ರೆಸ್‍ನಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮುಂತಾದ ಮೂಲಗಳಿಂದ ಬಂದ ಯುವ ರಾಜಕಾರಣಿಗಳು ಅಭ್ಯರ್ಥಿಗಳಾದರು.

ಚುನಾವಣೆಯ ದಿನ ವಿಜಾಪುರದ ಒಂದು ಹಳ್ಳಿಯಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತಿದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು.
ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ತಮ್ಮ ಹೊಲಗಳಲ್ಲಿ ಬೇಕಾದಷ್ಟು ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ. ಸರದಿಯಲ್ಲಿ ನಿಂತು ಇಂದಿರಾ ಕಾಂಗ್ರೆಸ್‌ಗೆ ಮತ ಚಲಾಯಿಸಿದರು. ಇಂದಿರಾ ಮತ್ತೆ ಪ್ರಧಾನಿಯಾಗಿ ರಾರಾಜಿಸಿದರು. ಇದು ಒಂದು ರೀತಿಯಿಂದ ಬಡವರ ಮತ್ತು ದಲಿತರ ವಿಜಯವಾಗಿತ್ತು.

ನಂತರ ಇಂದಿರಾ ಗಾಂಧಿಯವರು 1971ನೇ ಡಿಸೆಂಬರ್ 28ರಂದು ಸಂವಿಧಾನಕ್ಕೆ 26ನೇ ತಿದ್ದುಪಡಿ ತಂದು 363–ಎ ಪರಿಚ್ಛೇದದಲ್ಲಿ ಕೊಡಮಾಡಲಾದ ರಾಜಧನದ ಹಕ್ಕನ್ನು ರದ್ದುಗೊಳಿಸಿದ ನಂತರ ರಾಜಧನ ರದ್ದತಿ ಜಾರಿಗೆ ಬಂದಿತು. 500 ಕ್ಕೂ ಹೆಚ್ಚು ರಾಜಮನೆತನಗಳಿಗೆ ರಾಜಧನ ಸಂದಾಯ ಮಾಡುವುದನ್ನು ಕೇಂದ್ರ ಸರ್ಕಾರ ನಿಲ್ಲಿಸಿತು. ಇದರಿಂದಾಗಿ ದೇಶದ ಬೊಕ್ಕಸಕ್ಕೆ ಪ್ರತಿವರ್ಷ ನೂರಾರು ಕೋಟಿ ರೂಪಾಯಿ ಉಳಿತಾಯವಾಯಿತು.ಇಂದಿರಾ ಗಾಂಧಿಯವರ ಈ ಎರಡು ಘೋಷಣೆಗಳು ಶ್ರೀಮಂತರಲ್ಲಿ ಭಯವನ್ನೂ ಬಡವರಲ್ಲಿ ಭರವಸೆಯನ್ನೂ ಹುಟ್ಟಿಸಿದವು.

ಇಂದಿರಾ ಗಾಂಧಿ ಈ ಕ್ರಾಂತಿಕಾರಿ ನಿರ್ಧಾರಗಳನ್ನು ಘೋಷಣೆ ಮಾಡಿದ ಸಂದರ್ಭದಲ್ಲಿ ವಿಜಾಪುರದ ಗಾಂಧೀ ಚೌಕಿನಿಂದ ಲಕ್ಷ್ಮೀ ಗುಡಿಯ ಕಡೆಗೆ ಹೋಗುವಾಗ ಜನ ಗುಂಪುಗುಂಪಾಗಿ ಮಾತನಾಡುತ್ತಿದ್ದರು. ಬ್ರಾಹ್ಮಣ ಹಿರಿಯರ ಗುಂಪೊಂದು ‘ಇಂದಿರಾ ಗಾಂಧಿ ಕಮ್ಯುನಿಸ್ಟ್’ ಎಂದು ಮಾತನಾಡುತ್ತಿದ್ದರು. ಇನ್ನು ನಮಗೆ ಉಳಿಗಾಲ ಇಲ್ಲ ಎಂಬ ರೀತಿಯಲ್ಲಿ ಅವರ ಮಾತುಕತೆ ನಡೆದಿತ್ತು. ಇವರು ಇಂದಿರಾ ಗಾಂಧಿಗೇ ಕಮ್ಯುನಿಸ್ಟ್ ಎನ್ನಬೇಕಾದರೆ ನಿಜವಾದ ಕಮ್ಯುನಿಸ್ಟ್ ಹೇಗಿರುತ್ತಾರೆ ಎಂದು ತಿಳಿದುಕೊಳ್ಳುವ ಆಸಕ್ತಿ ಮೂಡಿತು. ಹೊರಳಿ ಕಮ್ಯುನಿಸ್ಟ್ ಪಾರ್ಟಿ ಕಚೇರಿ ಹುಡುಕುತ್ತ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಹೋದೆ. ಅದೊಂದು ಅವಿಸ್ಮರಣೀಯ ಘಟನೆ.

ಗುಜರಾತ್ ನವನಿರ್ಮಾಣ ಚಳವಳಿ: 1972ರ ವಿಧಾನ ಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಭಾರೀ ಬಹುಮತದಿಂದ ಆರಿಸಿ ಬಂದಿತ್ತು. ಸರ್ಕಾರ ಹಾಸ್ಟೆಲ್ ಮೆಸ್ ಶುಲ್ಕ ಏರಿಸಿದ್ದಕ್ಕೆ ವಿದ್ಯಾರ್ಥಿಗಳಲ್ಲಿ ಅಸಮಾಧಾನ ಹೊಗೆಯಾಡುತ್ತಿತ್ತು. ಅಹಮದಾಬಾದ್ ವಿದ್ಯಾರ್ಥಿಗಳು 1973ರಲ್ಲಿ ಇದರ ವಿರುದ್ಧ ಚಳವಳಿ ಪ್ರಾರಂಭಿಸಿದರು. ಅದೇ ವರ್ಷ ಜುಲೈನಲ್ಲಿ ಮುಖ್ಯಮಂತ್ರಿ ಘನಶ್ಯಾಮದಾಸ್ ಓಝಾ ಸ್ಥಾನದಲ್ಲಿ ಚಿಮನಭಾಯಿ ಪಟೇಲ್ ಮುಖ್ಯಮಂತ್ರಿಯಾಗಿ ಬಂದರು. ಆ ವೇಳೆಗಾಗಲೇ ಎ.ಬಿ.ವಿ.ಪಿ., ಭಾರತೀಯ ಜನಸಂಘ ಮತ್ತು ಸಂಸ್ಥಾ ಕಾಂಗ್ರೆಸ್ ಬೆಂಬಲದೊಂದಿಗೆ ನವನಿರ್ಮಾಣ ಚಳವಳಿಯನ್ನು ವಿದ್ಯಾರ್ಥಿಗಳು ಜೋರಾಗಿ ಪ್ರಾರಂಭಿಸಿದ್ದರು. ಈ ಚಳವಳಿಯಿಂದಾಗಿ ಚಿಮನಭಾಯಿ ಪಟೇಲ್ 1974ನೇ ಫೆಬ್ರವರಿ 9 ರಂದು ಮುಖ್ಯಮಂತ್ರಿ ಪದವಿಯಿಂದ ಕೆಳಗಿಳಿಯಬೇಕಾಯಿತು. ಇದಾದ ಎರಡು ದಿನಗಳ ನಂತರ ಜಯಪ್ರಕಾಶ ನಾರಾಯಣ ಅವರು ಗುಜರಾತ್‌ಗೆ ಭೇಟಿ ನೀಡಿದರು. ಈ ವಿದ್ಯಾರ್ಥಿಗಳ ಚಳವಳಿಯ ರೂಪುರೇಷೆಗಳನ್ನು ಅರಿತುಕೊಂಡು ಬಿಹಾರದ ವಿದ್ಯಾರ್ಥಿಗಳಿಗೆ ವಿವರಿಸುವುದು ಅವರ ಉದ್ದೇಶವಾಗಿತ್ತು.

(ಜಯಪ್ರಕಾಶ ನಾರಾಯಣ)

ಜೆ.ಪಿ. ಚಳವಳಿ: ಸಂಸ್ಥಾಕಾಂಗ್ರೆಸ್, ಜನಸಂಘ ಮುಂತಾದ ಪಕ್ಷಗಳು ಇಂದಿರಾ ಕಾಂಗ್ರೆಸ್ ಸರ್ಕಾರ ಉರುಳಿಸುವಲ್ಲಿ ತಲ್ಲೀನವಾಗಿದ್ದವು. ಆ ಎಲ್ಲ ಪಕ್ಷಗಳಿಗೆ ಪೂರಕವಾದ ಜಯಪ್ರಕಾಶ ನಾರಾಯಣರ ಸಮಗ್ರಕ್ರಾಂತಿ ಹೆಸರಿನ ಚಳವಳಿ, ಜೆ.ಪಿ. ಚಳವಳಿ ಎಂದು ಪ್ರಸಿದ್ಧವಾಯಿತು.

1964ರಲ್ಲೇ ಭಾರತ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ)ದಿಂದ ಬೇರ್ಪಟ್ಟು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಎಂ) ಅಸ್ತಿತ್ವಕ್ಕೆ ಬಂದಿತ್ತು. ಅಂದಿನ ಜನಸಂಘ (ಇಂದಿನ ಬಿ.ಜೆ.ಪಿ), ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಮುಂತಾದ ಪಕ್ಷಗಳ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ ಸಿ.ಪಿ.ಎಂ. ಕೂಡ ಕೈ ಜೋಡಿಸಿತು. ಸಿ.ಪಿ.ಐ. ಪಕ್ಷ ಪಾರ್ಲಿಮೆಂಟ್ ಒಳಗಡೆ ಕಾಂಗ್ರೆಸ್ ವಿರುದ್ಧ ಜನಪರ ಬೇಡಿಕೆಗಳನ್ನಿಟ್ಟು ಹೋರಾಡುತ್ತಿತ್ತು. ಆದರೆ ಪಾರ್ಲಿಮೆಂಟ್ ಹೊರಗಡೆ ದೇಶವ್ಯಾಪಿ ಪಸರಿಸಿದ ಜೆ.ಪಿ. ಚಳವಳಿಯ ವಿರುದ್ಧ ಹೋರಾಡುತ್ತಿತ್ತು.

ಈ ಜೆ.ಪಿ. ಚಳವಳಿಯಿಂದಾಗಿ ಅರಾಜಕತೆಯುಂಟಾಗಿ ಕೋಮುವಾದಿಗಳು ಅಧಿಕಾರಕ್ಕೆ ಬರುತ್ತಾರೆ ಎಂಬುದು ಸಿ.ಪಿ.ಐ. ತರ್ಕವಾಗಿತ್ತು. ಎಡಪಂಥೀಯ ವಿದ್ಯಾರ್ಥಿಗಳಾಗಿದ್ದ ನಮಗೆಲ್ಲ ಆರ್.ಎಸ್.ಎಸ್.ನವರು ಕಾಡುತ್ತಲೇ ಇದ್ದರು. ಹಲ್ಲೆ ಮಾಡಲು ಕೂಡ ಯತ್ನಿಸುತ್ತಿದ್ದರು.
ಆರ್.ಎಸ್.ಎಸ್. ಫ್ಯಾಸಿಸ್ಟ್ ಎಂದು ಜೆ.ಪಿ. 1968ರಲ್ಲಿ ಟೀಕಿಸಿದ್ದರು. ಆದರೆ ಈ ಚಳವಳಿಯ ಸಂದರ್ಭದಲ್ಲಿ ‘ಆರ್.ಎಸ್.ಎಸ್. ಫ್ಯಾಸಿಸ್ಟ್ ಎಂದರೆ ನಾನೂ ಫ್ಯಾಸಿಸ್ಟ್’ ಎಂದು ಘೋಷಿಸಿದರು! ಅಲ್ಲದೆ ತಾವು ಹೊಸ ಸರ್ಕಾರದಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ತಿಳಿಸಿದರು. ಒಂದು ಸಂದರ್ಭದಲ್ಲಿ ಬಂಡೇಳಲು ಸೈನ್ಯಕ್ಕೆ ಕರೆನೀಡಿದರು. ಆ ಸಂದರ್ಭದಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ವಿಶ್ವವಿದ್ಯಾಲಯದಲ್ಲಿ ಇತರ ಗೆಳೆಯರ ಸಹಾಯದೊಂದಿಗೆ ಎ.ಐ.ಎಸ್.ಎಫ್. ವಿದ್ಯಾರ್ಥಿ ಸಂಘಟನೆ ಆರಂಭಿಸಿದೆ. ಆ ಸಂದರ್ಭದಲ್ಲಿ ಸರಜೂ ಕಾಟಕರ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದ. ಆತ ಕರ್ಮವೀರಕ್ಕಾಗಿ ನಾನೂ ಸೇರಿದಂತೆ ನಾಲ್ಕು ಯುವಜನರ ಸಂದರ್ಶನ ಮಾಡಿದ. ಆ ಸಂದರ್ಶನದಲ್ಲಿ ‘ಜೆ.ಪಿ. ಬಂಧನ ಅಗತ್ಯ’ ಎಂದು ಹೇಳಿದ್ದೆ. ಅದೇ ಶೀರ್ಷಿಕೆಯಲ್ಲಿ ಸಂದರ್ಶನ ಪ್ರಕಟವಾಯಿತು. ಕಾಂಗ್ರೆಸ್ ಸೋಲಿಸಲು ಪಣ ತೊಟ್ಟ ಜೆ.ಪಿ., ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಿಲ್ಲದಿರುವಾಗ ಮೇಲ್ಜಾತಿಯವರು, ಕೋಮುವಾದಿಗಳು ಮತ್ತು ಬಂಡವಾಳಶಾಹಿಗಳು ಆ ಸ್ಥಾನವನ್ನು ತುಂಬುತ್ತಾರೆ ಎಂಬುದು ನನ್ನ ಮುಖ್ಯ ವಾದವಾಗಿತ್ತು. ಅದಕ್ಕಾಗಿಯೆ ಜೆ.ಪಿ. ಬಂಧನ ಅಗತ್ಯ ಎಂದು ಹೇಳಿದ್ದೆ. ಆಗ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ನಾನು ಕೆಲ ದಿನ ಅವರಿವರ ಕೋಣೆಗಳಲ್ಲಿ ಇರಬೇಕಾಯಿತು.

  ಇಂದಿರಾ ಗಾಂಧಿ ಅವರು ಬೆಂಗಳೂರಿನ ಲಾಲ್‌ಬಾಗ್ ಗ್ಲಾಸ್‌ಹೌಸ್‌ನಲ್ಲಿ ಪಕ್ಷದ ಕಾರ್ಯಕಾರಿ ಸಮಿತಿ ಸಭೆಯ ನಂತರ ದೆಹಲಿಗೆ ಹೋದ ಮೇಲೆ 19.07.1969 ರ ಮಧ್ಯರಾತ್ರಿ ವೇಳೆ, ಮೊದಲ ಹಂತದಲ್ಲೇ 14 ಬ್ಯಾಂಕುಗಳ ರಾಷ್ಟ್ರೀಕರಣ ಮಾಡಿ ರಾಜಧನ ರದ್ದತಿ ಘೋಷಿಸಿದರು. ರಾಜಧನಿ ರದ್ದತಿ ವಿರುದ್ಧ ರಾಜ್ಯಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು. ರಾಷ್ಟಪತಿ ವಿ.ವಿ. ಗಿರಿ ರಾಜಧನ ರದ್ದತಿಯ ಪರ ನಿರ್ಣಯ ಕೈಗೊಂಡರು.

ಸೈನ್ಯಕ್ಕೆ ಬಂಡೇಳುವ ಕರೆ ಮುಂತಾದ ಕಾರಣಗಳಿಂದ ಒಂದು ರೀತಿಯ ಅರಾಜಕ ಸ್ಥಿತಿ ನಿರ್ಮಾಣವಾಗುವ ಸಂದರ್ಭದಲ್ಲಿ ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದರು. ಬಹುಪಾಲು ದಲಿತ ಸಾಹಿತಿಗಳು ಜೆ.ಪಿ. ಚಳವಳಿಯಲ್ಲಿದ್ದರೆ, ದಲಿತ ಜನರು ಇಂದಿರಾ ಗಾಂಧಿ ಮೇಲೆ ಭರವಸೆ ಇಟ್ಟಿದ್ದರು. ಮುಂದೆ ನಾನು ಭಾವಿಸಿದಂತೆಯೆ ಆಯಿತು. ಜನಸಂಘದಿಂದ ಕೇವಲ ಇಬ್ಬರು ಎಂ.ಪಿ.ಗಳು ಆಯ್ಕೆಯಾಗುತ್ತಿದ್ದರು. ನಂತರ ಬಿಜೆಪಿಯಾಗಿ ದೇಶವನ್ನೇ ಆಳತೊಡಗಿದರು.

ಜನಸಂಘ ಸೇರಿದಂತೆ ಅನೇಕ ಕಾಂಗ್ರೆಸ್ ವಿರೋಧಿ ಪಕ್ಷಗಳು ಸೇರಿ ಜನತಾ ಪಕ್ಷವಾಗಿ ಅಧಿಕಾರಕ್ಕೆ ಬಂದ ನಂತರ ಜೆ.ಪಿ. ಅವರಿಗೆ ಕೇಳುವವರೇ ಇರಲಿಲ್ಲ!

ತೀವ್ರವಾದ ಚಳವಳಿ: ಲಾಲೂ ಪ್ರಸಾದ ಅಧ್ಯಕ್ಷತೆಯ ಬಿಹಾರ ರಾಜ್ಯ ಸಂಘರ್ಷ ಸಮಿತಿ, ಎ.ಬಿ.ವಿ.ಪಿ, ಸಮಾಜವಾದಿ ಯುವಜನ ಸಭಾ, ಬಿಹಾರ ಛಾತ್ರ ಸಂಘರ್ಷ ಸಮಿತಿ ಈ ಬಿಹಾರ ಚಳವಳಿಯ ಮುಂಚೂಣಿಯಲ್ಲಿದ್ದವು.

1974ರ ಮಾರ್ಚ್ 18ರಂದು ಬಿಹಾರ ವಿದ್ಯಾರ್ಥಿಗಳು ಜಯಪ್ರಕಾಶ ನಾರಾಯಣ ನೇತೃತ್ವದಲ್ಲಿ ಭ್ರಷ್ಟಾಚಾರದ ವಿರುದ್ಧ ಚಳವಳಿ ಪ್ರಾರಂಭಿಸಿದರು. ನಂತರ ಅದು ಕೇಂದ್ರ ಸರ್ಕಾರದ ವಿರುದ್ಧ ತಿರುಗಿತು. ಆಗ ಅದು ‘ಬಿಹಾರ ಚಳವಳಿ’, ‘ಸಂಪೂರ್ಣ ಕ್ರಾಂತಿ’ ಮತ್ತು ‘ಜೆ.ಪಿ. ಚಳವಳಿ’ ಎಂದು ಪ್ರಸಿದ್ಧವಾಯಿತು. ಅಬ್ದುಲ್ ಗಫೂರ್ ನೇತೃತ್ವದ ಕಾಂಗ್ರೆಸ್ ಸರ್ಕಾರದ ಭ್ರಷ್ಟಾಚಾರದ ವಿರುದ್ಧ ಅವರ ಹೋರಾಟ ತೀವ್ರವಾಗಿತ್ತು. 1974ನೇ ಮಾರ್ಚ್ 18ರಂದು ವಿದ್ಯಾರ್ಥಿಗಳು ಬಿಹಾರ ವಿಧಾನ ಸಭೆಗೆ ಮುತ್ತಿಗೆ ಹಾಕಿದರು. ಪೊಲೀಸರ ಗುಂಡೇಟಿಗೆ ಮೂವರು ವಿದ್ಯಾರ್ಥಿಗಳು ಅಸುನೀಗಿದರು. ಬಿಹಾರದ ತುಂಬೆಲ್ಲ ಚಳವಳಿ ಹಬ್ಬಿತು. ಏಪ್ರಿಲ್ 12ರಂದು ಮತ್ತೆ ಎಂಟು ವಿದ್ಯಾರ್ಥಿಗಳು ಗುಂಡಿಗೆ ಆಹುತಿಯಾದರು. ಜೆ.ಪಿ. ಚಳವಳಿಯನ್ನು ತೀವ್ರಗೊಳಿಸಿದರು.

(ಜಾರ್ಜ್ ಫರ್ನಾಂಡಿಸ್)

ರೈಲ್ವೆ ಮುಷ್ಕರ: ಎಂಟು ಗಂಟೆ ಶಿಫ್ಟ್ ಮತ್ತು ಸಂಬಳ ಪರಿಷ್ಕರಣೆ ಬೇಡಿಕೆಯಿಂದ ಪ್ರಾರಂಭವಾದ ಅಖಿಲ ಭಾರತ ರೈಲ್ವೇ ಮುಷ್ಕರ ಕೂಡ ತಾರಕಕ್ಕೇರಿತು. ಅದರ ನೇತೃತ್ವ ವಹಿಸಿದ್ದ ಜಾರ್ಜ್ ಫರ್ನಾಂಡಿಸ್ 1974ನೇ ಮೇ 8ರಂದು ಅಖಿಲ ಭಾರತ ರೈಲ್ವೆ ಮುಷ್ಕರಕ್ಕೆ ಕರೆ ನೀಡಿದರು. ಅವರನ್ನು ಬಂಧಿಸಲಾಯಿತು.

1974ನೇ ಜೂನ್ 5ರಂದು ಪಟ್ನಾದಲ್ಲಿ ನಡೆದ ರ್ಯಾಲಿಯಲ್ಲಿ ಜೆ.ಪಿ. ಸಂಪೂರ್ಣ ಕ್ರಾಂತಿಗೆ ಕರೆನೀಡಿದರು.ಚಳವಳಿಯಿಂದಾಗಿ ಗುಜರಾತ್ ವಿಧಾನ ಸಭೆಯನ್ನು ವಿಸರ್ಜಿಸಿ ರಾಷ್ಟ್ರಪತಿ ಆಡಳಿತ ಜಾರಿಗೊಳಿಸಲಾಯಿತು. 1975ರಲ್ಲಿ ಮರುಚುನಾವಣೆಯಾಗಿ ಜೂನ್ 12ರಂದು ಕಾಂಗ್ರೆಸ್ಸೇತರ ಸರ್ಕಾರ ಅಧಿಕಾರಕ್ಕೆ ಬಂದಿತು. ಅದೇ ದಿನ ಅಲಹಾಬಾದ್ ಹೈಕೋರ್ಟ್ 1971ರ ಇಂದಿರಾ ಗಾಂಧಿ ಆಯ್ಕೆಯನ್ನು ಅಸಿಂಧುಗೊಳಿಸಿತು. ಅವರ ಆಯ್ಕೆಯಲ್ಲಿ ಅವ್ಯವಹಾರ ನಡೆದಿದೆ ಎಂದು ರಾಜ ನಾರಾಯಣ ತಕರಾತು ಅರ್ಜಿ ಸಲ್ಲಿಸಿ ಗೆಲುವು ಸಾಧಿಸಿದ್ದರು. ಆದರೆ ಇಂದಿರಾ ಗಾಂಧಿ ಆ ತೀರ್ಪನ್ನು ಒಪ್ಪಿಕೊಳ್ಳಲಿಲ್ಲ.

ಈ ಚಳವಳಿ ದೇಶದ ತುಂಬ ಹಬ್ಬಿತು. ಅದಾಗಲೇ ಜೆ.ಪಿ. ಸೈನ್ಯಕ್ಕೆ ಬಂಡೇಳಲು ಕರೆ ನೀಡಿದ್ದರು. ಅರಾಜಕತೆ ಸೃಷ್ಟಿಯಾಗತೊಡಗಿತು. ಪ್ರಧಾನಿ ಇಂದಿರಾ ಗಾಂಧಿ ಅವರು 1975ನೇ ಜೂನ್ 25ರಂದು ಮಧ್ಯರಾತ್ರಿ ತುರ್ತುಪರಿಸ್ಥಿತಿ ಘೋಷಣೆ ಮಾಡಿದರು.

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಕರ್ನಾಟಕದಲ್ಲಿ ಅರಸು ಮುಖ್ಯಮಂತ್ರಿಯಾಗಿದ್ದರು. ಆ ಸಂದರ್ಭದಲ್ಲಿ ಅರಸು ಅವರು ಸಾಮಾಜಿಕ ಕ್ರಾಂತಿ ಮಾಡುವ ಮೂಲಕ ಇತಿಹಾಸ ಸೃಷ್ಟಿಸಿದರು. ಶ್ರೀಮಂತ ಜಾತಿಗಳ ಹುಟ್ಟಡಗಿ ಹೋಗಿತ್ತು. ‘ಉಳುವವನೇ ಭೂಮಿಯ ಒಡೆಯ’ ಎಂಬುದು ಕಾರ್ಯಗತವಾಗುತ್ತಿತ್ತು.

(ದೇವರಾಜ ಅರಸು)

ಸಮರ್ಥ ಜನಪರ ನಾಯಕ ಬಿ. ಸುಬ್ಬಯ್ಯಶೆಟ್ಟಿ ಅವರನ್ನು ದೇವರಾಜ ಅರಸು ಅವರು ಭೂ ಸುಧಾರಣಾ ಸಚಿವರಾಗಿ ನೇಮಿಸಿದರು. ಈ ಸಚಿವ ಹುದ್ದೆ ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇರಲಿಲ್ಲ. ಕರ್ನಾಟಕದಲ್ಲಿ ಭೂ ಸುಧಾರಣೆ ಬಡವರಲ್ಲಿ ಭರವಸೆ ಮೂಡುವ ರೀತಿಯಲ್ಲಿ ಜಾರಿಯಾಯಿತು. 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಅರಸು ಸರ್ಕಾರ ತಲ್ಲೀನವಾಗಿತ್ತು.

ತುರ್ತು ಪರಿಸ್ಥಿತಿ ಘೋಷಿಸಿದ 21 ತಿಂಗಳುಗಳ ನಂತರ ಮಾರ್ಚ್ 1977ರಲ್ಲಿ ಇಂದಿರಾ ಗಾಂಧಿ ಲೋಕಸಭಾ ಚುನಾವಣೆ ಘೋಷಣೆ ಮಾಡಿದರು. ಸಂಸ್ಥಾ ಕಾಂಗ್ರೆಸ್, ಜನಸಂಘ ಮುಂತಾದ ಪಕ್ಷಗಳು ಒಂದಾಗಿ 1977ನೇ ಜನವರಿ 23ರಂದು ಜನತಾ ಪಕ್ಷದ ಸ್ಥಾಪನೆ ಮಾಡಿದ್ದವು. ಈ ಪಕ್ಷ ಗೆಲವು ಸಾಧಿಸಿತು. ಆದರೆ ಒಳಜಗಳಗಳಿಂದ ಬಹಳ ದಿನಗಳವರೆಗೆ ಮುಂದುವರಿಯಲಿಕ್ಕಾಗಲಿಲ್ಲ.

ಸಿಂಹಾವಲೋಕನ ಮಾಡಿದಾಗ ಈ 50 ವರ್ಷಗಳಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಮಾಡಿದ ತಪ್ಪುಗಳಿಂದಲೇ ಕೋಮುವಾದಿಗಳು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎನ್ನಬಹುದು.

ಷಾ ಬಾನೂ ಪ್ರಕರಣ: 1985ರಲ್ಲಿ ಸಂಭವಿಸಿದ ನಿರಕ್ಷರಿ ಷಾ ಬಾನೂ ಪ್ರಕರಣ ದೇಶದ ಚರಿತ್ರೆಯನ್ನೇ ಬದಲಿಸಿತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮುಸ್ಲಿಂ ಮೂಲಭೂತವಾದಿಗಳು ಪ್ರದರ್ಶಿಸಿದ ಮೂರ್ಖತನದಿಂದಾಗಿ ಭಾರತದ ಮುಸ್ಲಿಮರು ಮಾನಸಿಕ ಒತ್ತಡಕ್ಕೆ ಒಳಗಾದರು. ಹಿಂದುತ್ವದ ಹೆಸರಿನಲಿ ಕೋಮುವಾದಿಗಳು ಮುಸ್ಲಿಮರ ಬಗ್ಗೆ ಹಿಂದೂ ಸಮಾಜದಲ್ಲಿ ಅಪನಂಬಿಕೆ ಹುಟ್ಟುವ ಹಾಗೆ ನೋಡಿಕೊಂಡರು. ಷಾ ಬಾನೂ ಪ್ರಕರಣ ಒಂದು ಕೌಟುಂಬಿಕ ಸಮಸ್ಯೆಯಾಗಿತ್ತು. ಮೂಲಭೂತವಾದಿಗಳು ಮತ್ತು ಕೋಮುವಾದಿಗಳು ಒಬ್ಬರನ್ನೊಬ್ಬರು ದ್ವೇಷಿಸುತ್ತ ಅದನ್ನು ರಾಷ್ಟ್ರೀಯ ಸಮಸ್ಯೆಯಾಗಿ ಪರಿವರ್ತಿಸಿದರು.

ಮೂಲಭೂತವಾದಿಗಳು ‘ಇಸ್ಲಾಂ ಗಂಡಾಂತರದಲ್ಲಿದೆ’ ಎಂದು ಘೋಷಿಸುತ್ತ ಬಡ ಮುಸ್ಲಿಮರನ್ನು ದೇಶಾದ್ಯಂತ ಬೀದಿಗೆ ಎಳೆದರು
ಕೋಮುವಾದಿಗಳಿಗೂ ಇಷ್ಟೇ ಬೇಕಾಗಿತ್ತು. ಹಿಂದೂ ಕೋಮುವಾದ ತೀವ್ರವಾಗಿ ಬೆಳೆಯಲು ಮುಸ್ಲಿಂ ಮೂಲಭೂತವಾದಿಗಳೇ ಕಾರಣರಾದರು. ಅದು ಬಾಬರಿ ಮಸೀದಿ ಬೀಳುವವರೆಗೂ ನಂತರ ಕೋಮುವಾದಿಗಳು ದೇಶವನ್ನು ಆಳುವವರೆಗೂ ಮುಂದುವರಿಯಿತು.

ಭರವಸೆಯ ದಲಿತ ನಾಯಕರು ಬಿ.ಜೆ.ಪಿ. ಸೇರಿ ಮಂತ್ರಿಗಳಾದರು. ಬಿ.ಜೆ.ಪಿ. ಬೆಂಬಲದೊಂದಿಗೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದರು. ಕೆಲ ದಲಿತ ನಾಯಕರು ಗಾಂಧೀಜಿಯವರನ್ನು ಟೀಕಿಸುವ ಕ್ರಮಕ್ಕೂ ಸಂಘಪರಿವಾರದವರು ಟೀಕಿಸುವ ಕ್ರಮಕ್ಕೂ ವ್ಯತ್ಯಾಸವೇ ಇಲ್ಲದಂತಾಯಿತು.

ಕಮ್ಯುಸನಿಸ್ಟರು ದಲಿತ ದೌರ್ಜನ್ಯದ ವಿರುದ್ಧ ಮಾತನಾಡಿದರೂ ಹೋರಾಟ ಮಾಡಿದರೂ ಇತ್ತೀಚಿನವರೆಗೆ ಅಂಬೇಡ್ಕರ್ ಚಿಂತನೆಯ ಮಹತ್ವವನ್ನು ಮನಗಾಣಲೇ ಇಲ್ಲ. ಮೊದಲಿನಿಂದಲೂ ಕಮ್ಯುನಿಸ್ಟರು ಅಂಬೇಡ್ಕರರ ಮಹತ್ವವನ್ನು ಅರಿತುಕೊಂಡಿದ್ದರೆ ದೇಶದ ಪರಿಸ್ಥಿತಿ ಬೇರೆಯೆ ಆಗಿರುತ್ತಿತ್ತು. ಇನ್ನು ಕಾಂಗ್ರೆಸ್ಸಿಗರಂತೂ ಭ್ರಷ್ಟತೆಯನ್ನೇ ಜೀವನವಿಧಾನವಾಗಿಸಿಕೊಂಡರು. ಈ ಎಲ್ಲ ಕಾರಣಗಳಿಂದ ದೇಶ ಇಂದು ಭಯಾನಕ ಸ್ಥಿತಿಗೆ ಬಂದು ನಿಂತಿದೆ. ಈ ವಿಷಮ ಸ್ಥಿತಿಯಲ್ಲಿ ದೇಶದಲ್ಲಿ ರಾಹುಲ್ ಭರವಸೆಯ ನಾಯಕರಾಗಿ ಕಾಣುತ್ತಿದ್ದಾರೆ.

ಕ್ರಾಂತಿಕಾರಿ ಸಾಮಾಜಿಕ ಬದಲಾವಣೆಗಾಗಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಂದಾಗುವ ಅವಶ್ಯಕತೆ ಇದೆ. ಬುದ್ಧ, ಬಸವ, ಅಂಬೇಡ್ಕರ, ಗಾಂಧಿ ಮತ್ತು ಮಾರ್ಕ್ಸ್‌ವಾದಿ ಚಿಂತನೆಗಳು ಮಾತ್ರ ನಮ್ಮನ್ನು ಬೆಳಕಿನೆಡೆಗೆ ಒಯ್ಯಬಲ್ಲವು.

(ಮುಂದುವರೆಯುವುದು…)