ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್‌ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು.
ಇಸ್ಮಾಯಿಲ್‌ ತಳಕಲ್‌ ಬರೆಯುವ ʻತಳಕಲ್‌ ಡೈರಿʼ

ನಾನು ಪಿಯುಸಿ ಓದುವ ಕಾಲಕ್ಕೆ ನಡೆದ ಒಂದು ಘಟನೆ ಈಗಲೂ ನೆನಪಿದೆ. ನನ್ನೂರಿನಿಂದ ಹತ್ತು ಕಿಲೋಮೀಟರ್ ದೂರವಿದ್ದ ಕೊಪ್ಪಳದ ಕಾಲೇಜಿಗೆ ಹೋಗಿ ಬರುವುದೆಂದರೆ ಏನೋ ಒಂಥರ ಸಡಗರ ಅನಿಸುತ್ತಿತ್ತು. ಶಾಲೆಯೊಳಗೆ ಒಂದು ಚೌಕಟ್ಟಿನೊಳಗೆ ಕಲಿಯುವ ನಾವು ಕಾಲೇಜಿಗೆ ಹೋಗತೊಡಗಿದಾಗ ನಮ್ಮ ಬಟ್ಟೆ, ಹಾವಭಾವ, ವರ್ತನೆಗಳ ಜೊತೆಗೆ ಮನಸ್ಸೂ ಕೂಡ ಹೆಂಗೆಂಗೊ ಆಡಲು ಶುರು ಮಾಡಿರುತ್ತದೆ. ಸಿನಿಮಾಗಳಲ್ಲಿ ತೋರಿಸುವಂತೆ ಕಾಲೇಜೆಂದರೆ ಸ್ವೇಚ್ಛಾಚಾರದ, ಮನಸ್ಸಿಗೆ ಬಂದಂತೆ ವರ್ತಿಸುವ, ಕಲಿಕೆಗಿಂತ ಹೆಚ್ಚು ಮೋಜು ಮಸ್ತಿಯನ್ನು ಮಾಡಬಹುದಾದ ತಾಣಗಳೆನ್ನುವ ಇಮ್ಯಾಜಿನೇಶನ್ ನಮ್ಮಗಳ ತಲೆಯಲ್ಲಿ ವಿನ್ಯಾಸಗೊಂಡಿರುತ್ತದೆ. ತುಂಬಾ ಗಂಭೀರವಾಗಿ ಕಲಿಯುವ ವಿದ್ಯಾರ್ಥಿಗಳಿಗೆ ಈ ಮಾತು ಅಪವಾದವಾಗುತ್ತದಾದರೂ ನಮ್ಮಂತಹವರಿಗೆ ಅವು ಸಿನಿಮಾದ ಕಾಲೇಜುಗಳೇ. ಹುಡುಗಿಯರಿಗೆ ಕಿಚಾಯಿಸುವುದು, ಉಪನ್ಯಾಸಕರಿಗೆ ರೇಗಿಸುವುದು, ಮನಸ್ಸಿಗೆ ಬಂದಾಗ ಕ್ಲಾಸಿನೊಳಗೆ ಹೊಕ್ಕು ಮನಸ್ಸಿಲ್ಲದಿದ್ದರೆ ಹೇಳದೇ ಕೇಳದೆ ಹಿಂದಿನ ಬಾಗಿಲ ಮೂಲಕ ಎದ್ದು ಹೋಗುವುದು ಸರ್ವೆ ಸಾಮಾನ್ಯ. ಕಂಬಗಳ ಮರೆಯಲ್ಲೋ ಗೋಡೆಗಳ ಪಕ್ಕವೊ ನಿಂತು ಒಂದು ಹುಡುಗ ಹುಡುಗಿ ಮಾತನಾಡತೊಡಗಿದರೆ ಅವರನ್ನು ನೋಡುವ ದೃಷ್ಟಿಕೋನವೇ ಬದಲಾಗುತ್ತದೆ. ಆಗಿನ್ನೂ ಕಾಲೇಜಿಗೆ ಹೋಗುವ ವಿದ್ಯಾರ್ಥಿಗಳಿಗೆ ಸಮವಸ್ತ್ರ ಕಡ್ಡಾಯ ಮಾಡಿರಲಿಲ್ಲ ಅಥವಾ ನಮ್ಮ ಕಾಲೇಜಿನಲ್ಲಿ ಅದು ಜಾರಿಗೆ ಬಂದಿರಲಿಲ್ಲವೋ ಏನೊ.. ನಮ್ಮ ಬಟ್ಟೆಗಳೆಲ್ಲ ಕಲರ್‌ಫುಲ್‌ಗಳೆ ಆಗಿದ್ದವು.

ಒಮ್ಮೆ ನಮ್ಮ ಸಹಪಾಠಿಯೊಬ್ಬಳು ಅಪರೂಪಕ್ಕೆಂಬಂತೆ ಒಂದು ದಿನ ಟೀ ಶರ್ಟ್ ಹಾಕಿ ಜೀನ್ಸ್ ಪ್ಯಾಂಟ್ ತೊಟ್ಟುಕೊಂಡು ಕಾಲೇಜಿಗೆ ಬಂದಿದ್ದಳು. ಆಧುನಿಕತೆಯ ಬಣ್ಣ ಅಷ್ಟೊಂದು ಮೆತ್ತಿಕೊಂಡಿರದಿದ್ದ ನಮ್ಮ ಕಾಲೇಜಿಗೆ ಆಗ ಒಂದು ಹುಡುಗಿ ಜೀನ್ಸ್ ತೊಟ್ಟು ಬಂದಿರುವುದೇ ದೊಡ್ಡ ವಿಷಯ ಆಗಿಹೋಯಿತು. ಅಂದು ಅವಳನ್ನು ಯಾವುದೋ ಅನ್ಯಗ್ರಹವೊಂದರಿಂದ ಬಂದಿಳಿದ ಏಲಿಯನ್‌ಳಂತೆ ಎಲ್ಲಾ ಹುಡುಗರು ಅವಳನ್ನೆ ದಿಟ್ಟಿಸತೊಡಗಿದ್ದರು. ಅವಳ ಆ ಬಟ್ಟೆ ಕಂಡು ಆಡಿಕೊಂಡು ನಗುವುದು ಕೊಂಕು ಮಾತನಾಡುವುದು ಶುರು ಮಾಡಿದ್ದರು. ಹುಡುಗರ ವರ್ತನೆ ಎಷ್ಟು ಅತಿರೇಕಕ್ಕೆ ಹೋಯಿತೆಂದರೆ ಆ ಹುಡುಗಿ ತಾನೇನೋ ಮಹಾಪರಾಧ ಮಾಡಿ ಸಿಕ್ಕಿಬಿದ್ದಳೇನೋ ಎನ್ನುವ ಮನೋಭಾವನೆಯಲ್ಲಿ ಕಾಲೇಜು ಮುಗಿಯುವವರೆಗೂ ತಲೆ ತಗ್ಗಿಸಿಕೊಂಡೆ ಕೂಡಬೇಕಾಯಿತು. ಅವಳು ದಿನವೂ ತನ್ನ ಮನೆಗೆ ಹೋಗುವ ದಾರಿ ಬಿಟ್ಟು ಬೇರೆ ಯಾವುದೋ ನಿರ್ಜನ ದಾರಿ ಹಿಡಿದು ಸಂಧುಗೊಂದುಗಳನ್ನು ದಾಟಿ ತನ್ನ ಮನೆ ಸೇರಿದ್ದಳು.

ಆಗ ಅವಳ ಮನಸ್ಸಿನಲ್ಲಿ ಏನೆಲ್ಲಾ ಪ್ರಶ್ನೆಗಳು ಮೂಡಿರಬಹುದು? ಈ ವಿಷಯ ಕೇಳಿ ಅವಳ ತಂದೆ ತಾಯಿಯೋ, ಅಣ್ಣನೋ ತಮ್ಮನೋ ಅವಳನ್ನು ಏನೆಲ್ಲಾ ಅಂದಿರಬಹುದು? ತನ್ನನ್ನು ಹಿಯ್ಯಾಳಿಸಿದವರ ಬಗ್ಗೆ ಯಾವ ಅಭಿಪ್ರಾಯ ತಳೆದಿರಬಹುದು? ಎಂದು ಯೋಚಿಸುತ್ತಾ ಹೋದರೆ ಬಹಳ ಕೆಟ್ಟೆನಿಸುತ್ತದೆ. ನಾವು ತೊಡುವ ಬಟ್ಟೆಗಳು ನಮ್ಮನ್ನು ಇಷ್ಟರ ಮಟ್ಟಿಗೆ ಜಡ್ಜ್ಮೆಂಟಲ್‌ಗಳನ್ನಾಗಿ ಮಾಡಿಬಿಡುತ್ತವೆ ಎಂದು ನನಗೆ ಆವತ್ತೆ ತಿಳಿದದ್ದು. ಪಾಪ ಆ ಹುಡುಗಿ ಎಷ್ಟು ನೊಂದುಕೊಂಡಿತೊ ಅದ್ಯಾರೂ ಗಮನಿಸಲಿಲ್ಲ. ನಾಲ್ಕೈದು ದಿನ ಆ ಹುಡುಗಿ ಕಾಲೇಜಿಗೆ ಬರುವುದನ್ನೆ ಬಿಟ್ಟುಬಿಟ್ಟಳು. ಈ ಘಟನೆಯಾಗಿ ಇಪ್ಪತ್ತು ವರ್ಷಗಳ ನಂತರ ಪರಿಸ್ಥಿತಿ ಮೊದಲಿನಂತೆ ಇಲ್ಲದೇ ಇರಬಹುದು. ಹೆಣ್ಣು ಮಕ್ಕಳು ತಮಗೆ ತೋಚಿದ ಬಟ್ಟೆಗಳನ್ನು ಹಾಕಿಕೊಂಡು ಬರುತ್ತಿರಬಹುದು. ಆದರೆ ಅಂದು ಹಿಯ್ಯಾಳಿಸಿದ ಮನಸ್ಥಿತಿ ಬೇರೆ ಬೇರೆ ರೂಪಗಳಲ್ಲಿ ತನ್ನ ಬೇರನ್ನು ಆಳಕ್ಕಿಳಿಸಿಕೊಂಡೆ ಇದೆ ಎನ್ನುವುದನ್ನ ಅಲ್ಲಗಳೆಯಲಾಗದು. ಬೇರೆಯವರನ್ನು ಅವರು ಇದ್ದ ಹಾಗೆಯೇ ಒಪ್ಪಿಕೊಳ್ಳುವಲ್ಲಿ ನಮಗೆ ತೊಂದರೆಗಳಿವೆ. ನಮ್ಮ ಮೂಗಿನ ನೇರೆಕ್ಕೇನೆ ಎಲ್ಲರೂ ಕುಣಿಯಬೇಕೆನ್ನುವ ಮನೋಭಾವನೆಯ ಗಟ್ಟಿ ಪರದೆ ನಮ್ಮನ್ನಾವರಿಸಿಕೊಂಡಿರುತ್ತದೆ. ಆ ಪರದೆಯ ಆಚೆ ನಾವೆಂದೂ ಬರಲು ಇಚ್ಚಿಸುವುದಿಲ್ಲ. ಮನುಷ್ಯನ ಈ ಕಾಂಪ್ಲಿಕೇಷನ್ನೆ ಬಹುಶಃ ಬಹಳಷ್ಟು ಸಮಸ್ಯೆಗಳ ಮೂಲ.

ವಿಕಾಸಪಥದಲ್ಲಿ ಮಾನವ ತನ್ನನ್ನೂ ಬದಲಾಯಿಸಿಕೊಳ್ಳುವುದರ ಜೊತೆಗೆ ತನ್ನ ಪರಿಸರವನ್ನು, ಸಂಸ್ಕೃತಿಯನ್ನು, ಜೀವನ ಶೈಲಿಯನ್ನೂ ಬದಲಾಯಿಸಿಕೊಳ್ಳುತ್ತಲೆ ಬಂದಿದ್ದಾನೆ. ಬದಲಾಯಿಸಿಕೊಳ್ಳುವ ಪ್ರಕ್ರಿಯೆ ಇಲ್ಲಿಗೆ ನಿಲ್ಲುತ್ತದೆ ಎಂತಲೂ ಇಲ್ಲ. ಮಾನವ ಆವಿಷ್ಕಾರಗಳನ್ನು ಮಾಡುತ್ತಾ ಬಂದಂತೆ ಸಂಕೀರ್ಣನಾಗುತ್ತಾ ಬಂದ. ಆದಿ ಮಾನವ ಬಟ್ಟೆಗಳನ್ನು ಆವಿಷ್ಕರಿಸದೇ ಇದ್ದಿದ್ದರೆ ಆಗುತ್ತಿದ್ದ ನಷ್ಟವಾದರೂ ಏನಿತ್ತು? ಮಾನವನ ಹಲವಾರು ಆವಿಷ್ಕಾರಗಳು ನಮಗೆ ಒಳಿತೆಂದು ಕಂಡರೂ ಸೂಕ್ಷ್ಮವಾಗಿ ಗಮನಿಸಿದಾಗ ಮಾನವನ ಸ್ವಾರ್ಥ, ವಾಂಛೆ, ಅತಿಯಾಸೆಗಳು ಈ ಆವಿಷ್ಕಾರಗಳ ಬಳುವಳಿಗಳು ಎನಿಸುತ್ತದೆ. ಮಾನ ಮುಚ್ಚಿಕೊಳ್ಳುವದಕ್ಕಿದ್ದ ಬಟ್ಟೆ ಈಗ ಪ್ರತಿಷ್ಠೆಯ ವಿಷಯ. ಅವರವರ ಸ್ಟೇಟಸ್ಸಿಗೆ ತಕ್ಕಂತಹ ಬಟ್ಟೆಗಳನ್ನು ಹಾಕಿಕೊಳ್ಳದಿದ್ದರೆ ಅದು ತಮಗೆ ಅವಮಾನ ಎಂದು ಭಾವಿಸುವವರೂ ಇದ್ದಾರೆ. ಬಡವರು, ಜನಸಾಮಾನ್ಯರು ಹಾಕಿಕೊಳ್ಳುವ ಬಟ್ಟೆಗಳು ಸಾಧಾರಣವಾದದ್ದೋ ಹರಿದದ್ದೋ ಇರಬೇಕು. ಅವರೇನಾದರೂ ಒಳ್ಳೆಯ ದುಬಾರಿ ಬಟ್ಟೆಗಳನ್ನು ಹಾಕಿಕೊಂಡುಬಿಟ್ಟರೆ ಮುಗಿಯಿತು. ತಲೆಗೊಬ್ಬರಂತೆ ಆಡಿಕೊಳ್ಳುವ ಚಟ ಶುರುವಾಗಿಬಿಡುತ್ತದೆ. ಇನ್ನು ಹೆಣ್ಣಿನ ವಿಷಯದಲ್ಲಿ ಕೇಳಬೇಕೆ? ಅವರು ತೊಡುವ ಬಟ್ಟೆಗಳಲ್ಲಿ ಒಂಚೂರು ಆಚೀಚೆಯಾದರೆ ಮುಗಿದೇ ಹೋಯಿತು. ನಮ್ಮ ಕಾಲೇಜಿನ ಹುಡುಗಿಗೆ ಆದ ಗತಿಯೇ ಸರಿ.

ನಾನು ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾಗ ನಮ್ಮ ಮಹಿಳಾ ಮೇಲಾಧಿಕಾರಿಯೊಬ್ಬರಿದ್ದರು. ಅವರು ಬಹಳ ಸೂಕ್ಷ್ಮಮತಿ. ಚಿಕ್ಕ ಚಿಕ್ಕ ವಿಷಯಗಳಿಗೆ ಖುಷಿಗೊಳ್ಳುವುದು ಚಿಕ್ಕ ಚಿಕ್ಕ ವಿಷಯಗಳಿಗೆ ನೊಂದುಕೊಳ್ಳುವುದು ಅವರ ಸಹಜ ಸ್ವಭಾವ. ಹೆಣ್ಣುಮಕ್ಕಳ ಬಗ್ಗೆ ಅಪ್ಪಿತಪ್ಪಿಯೂ ಸ್ವಲ್ಪ ಹಗುರ ಮಾತನಾಡಿದರೂ ಅವರಿಗೆ ವಿಪರೀತ ಕೋಪ ಬರುತ್ತಿತ್ತು. ಹೆಣ್ಣು ಗಂಡು ಇಬ್ಬರೂ ಸಮಾನರು ಎನ್ನುವದನ್ನೇ ಅವಕಾಶ ಸಿಕ್ಕಾಗಲೆಲ್ಲ ಪ್ರತಿಪಾದಿಸುತ್ತಿದ್ದರು. ಒಮ್ಮೆ ಹೀಗೆಯೆ ಹತ್ತನ್ನೆರೆಡು ಜನ ಅವರೊಂದಿಗೆ ಹರಟುತ್ತಿದ್ದಾಗ ನಮ್ಮ ಮಾತು ಆಗ ದಿನಕ್ಕೊಂದರಂತೆ ಸುದ್ದಿಯಾಗುತ್ತಿದ್ದ ಲೈಂಗಿಕ ದೌರ್ಜನ್ಯಗಳ ಕಡೆಗೆ ಹೊರಳಿತು. ತಕ್ಷಣ ನಮ್ಮ ಆ ಮಹಿಳಾ ಮೇಲಾಧಿಕಾರಿ ‘ಈ ಲೈಂಗಿಕ ದೌರ್ಜನ್ಯಗಳಿಗೆ ಹಣ್ಣುಮಕ್ಕಳು ತೊಡುವ ಬಟ್ಟೆ ಕಾರಣವೋ, ಇಲ್ಲಾ ಪುರುಷರ ಮನದೊಳಗಿನ ವಿಕಾರ ದೃಷ್ಟಿಯೋ?’ ಎಂದು ಪ್ರಶ್ನಿಸಿದರು. ಅವರು ಹೀಗೆ ಪ್ರಶ್ನೆ ಕೇಳುವುದಕ್ಕೆ ಒಂದು ಕಾರಣವೂ ಇತ್ತು. ಲೈಂಗಿಕ ದೌರ್ಜನ್ಯಗಳು ಹೆಚ್ಚು ಸುದ್ದಿಯಾಗುತ್ತಿದ್ದ ದಿನಗಳಲ್ಲಿ ರಾಜಕಾರಣಿಯೊಬ್ಬರು ಮಹಿಳೆಯರ ಬಟ್ಟೆಗಳ ಕಡೆಗೆ ಬೊಟ್ಟು ಮಾಡಿದ್ದು ಭಾರಿ ಚರ್ಚಿತವಾಗತೊಡಗಿತ್ತು. ಅದಕ್ಕಾಗಿಯೇ ನಮ್ಮ ಅಭಿಪ್ರಾಯವೇನಿರಬಹುದೆಂದು ಅವರು ಆ ಪ್ರಶ್ನೆ ಕೇಳಿದ್ದರು.

ಆದರೆ ಅಲ್ಲಿದ್ದವರೆಲ್ಲರೂ ಈ ಪ್ರಶ್ನೆಯಿಂದ ವಿಚಲಿತಗೊಂಡು ಯಾವುದು ಕಾರಣವಿರಬಹುದೆಂದು ಯೋಚಿಸಿ ಕೊನೆಗೆ ಮಹಿಳೆಯರು ತೊಡುವ ಬಟ್ಟೆಯೆ ಕಾರಣ ಎಂದುಬಿಟ್ಟಿದ್ದರು. ಈ ಉತ್ತರದಿಂದ ಪಾಪ ಆ ಯಮ್ಮ ಅದೆಷ್ಟೊಂದು ನೊಂದುಕೊಂಡಿತೆಂದರೆ ನಮ್ಮಗಳ ಜೊತೆ ಮಾತನಾಡುವುದನ್ನೆ ಬಿಟ್ಟುಬಿಟ್ಟಿದ್ದರು. ನಮ್ಮನ್ನೆಲ್ಲ ಪ್ರತಿಯೊಂದಕ್ಕೂ ಹುರಿದುಂಬಿಸಿ ನಮ್ಮಲ್ಲಿಯ ಕಾರ್ಯಕ್ಷಮತೆ ಹೆಚ್ಚಿಸುತ್ತಿದ್ದ ಅವರು ಮೊದಲ ಬಾರಿ ಅಷ್ಟೊಂದು ಗಂಭೀರವಾಗಿದ್ದನ್ನು ನೋಡಿದ್ದೆ. ಅವರು ಒಂದು ಮಾತು ಹೇಳಿ ಅಲ್ಲಿಂದ ಎದ್ದು ಹೋದರು. “ಹೆಣ್ಣು ಹಾಗಿರಬೇಕು ಹೀಗಿರಬೆಕು ಎಂದು ನೀವು ನಿರ್ಧರಿಸುವ ಬದಲು ಮಹಿಳೆಯರ ಬಗೆಗಿನ ನಿಮ್ಮ ದೃಷ್ಟಿಕೋನ ಬದಲಿಸಿಕೊಳ್ಳಿ, ಮುಂದೆ ಹುಟ್ಟಲಿರುವ ನಿಮ್ಮ ಗಂಡುಮಕ್ಕಳಿಗೆ ಮಹಿಳೆಯರೊಂದಿಗೆ ಹೇಗೆ ವರ್ತಿಸಬೇಕೆಂದು ತಿಳಿಸಿಕೊಟ್ಟರೆ ಇಂತಹ ದೌರ್ಜನ್ಯಗಳು ಕಡಿಮೆಯಾಗಬಹುದು” ಎಂದು ಹೇಳಿ ಹೋಗಿಬಿಟ್ಟರು. ಅಲ್ಲಿದ್ದವರೆಲ್ಲರೂ ಮಕ ಮಕ ನೋಡುತ್ತಾ ಕುಳಿತುಕೊಂಡಿದ್ದರು.

ಬಟ್ಟೆ ಎನ್ನುವುದು ಆಯಾ ವ್ಯಕ್ತಿಯ ವೈಯಕ್ತಿಕ ಹಕ್ಕು. ಆ ಹಕ್ಕನ್ನು ಕಸಿದುಕೊಳ್ಳಲು ಯಾರಿಗೂ ಹಕ್ಕಿಲ್ಲ. ಇರಾನಿನ ಮಾಶಾ ಅಮಿನಿ ಎನ್ನುವ ಕಾಲೇಜಿನ ಹುಡುಗಿಯೊಬ್ಬಳು ಇದೆ ಬಟ್ಟೆ ವಿಚಾರಕ್ಕೆ ಪ್ರಾಣ ತೆರಬೇಕಾಯಿತು. ಅವಳ ಸಾವಿನಿಂದ ಸಿಟ್ಟಿಗೆದ್ದ ಇರಾನಿನ ಬಹಳಷ್ಟು ಮಹಿಳೆಯರು, ಕಾಲೇಜಿನ ವಿದ್ಯಾರ್ಥಿನಿಯರು ತಮ್ಮ ಬಟ್ಟೆ ತೊಡುವ ಹಕ್ಕಿಗಾಗಿ ಪ್ರತಿಭಟನೆಗಿಳಿದರು. ಅವರಲ್ಲಿಯೂ ಕೆಲವೊಬ್ಬರು ಸಾವನ್ನಪ್ಪಿದರೂ ಕೂಡ.


ಒಂದೇ ಬಟ್ಟೆಯ ವಿಚಾರಕ್ಕೆ ಕರ್ನಾಟಕ ಮತ್ತು ಇರಾನಿನ ಮಹಿಳೆಯರು ಬೀದಿಗಿಳಿದು ಪ್ರತಿಭಟಿಸಿದ್ದಾರೆ. ಕರ್ನಾಟಕದ ಮಹಿಳೆಯರು ಯಾವುದನ್ನು ಬೇಕೆಂದು ಹೋರಾಡುತ್ತಿದ್ದಾರೊ ಇರಾನಿನ ಮಹಿಳೆಯರು ಬೇಡವೆಂದು ಸರ್ಕಾರಕ್ಕೆ ಒತ್ತಾಯಿಸುತ್ತಿದ್ದಾರೆ. ನಾನು ಇಬ್ಬರನ್ನೂ ಬೆಂಬಲಿಸುತ್ತೇನೆ. ಒಂದು ಹೆಣ್ಣು ಏನು ಬೇಕೆನ್ನುತ್ತಾಳೋ ಅದು ಅವಳ ಹಕ್ಕು. ಯಾವುದು ಬೇಡವೆನ್ನುತ್ತಾಳೋ ಅದೂ ಕೂಡ ಅವಳದ್ದೆ ಹಕ್ಕು. ಅವರ ಭಾವನೆಗಳನ್ನು ಗೌರವಿಸುವ ಕೆಲಸ ನಮ್ಮದಾಗಬೇಕಾಗಿದೆ. ಮಹಿಳೆ ಯಾವುದೋ ಆಧುನಿಕ ಬಟ್ಟೆಯೊಂದನ್ನು ಹಾಕಿಕೊಂಡು ಸ್ವಲ್ಪ ನಗುತ್ತಾ ಸಲುಗೆಯಿಂದ ಮಾತನಾಡಿದರೆ ಅವಳ ಚಾರಿತ್ರ್ಯ ಹರಣ ಮಾಡುವ ನಾವು ಕೆಲವೊಂದು ಸಂದರ್ಭಗಳಲ್ಲಿ ಮಹಿಳೆಯರಿಗೆ ಮುಜುಗುರವಾಗುವ ಬಟ್ಟೆಗಳನ್ನು ನಾವು ಹಾಕಿಕೊಂಡಾಗ ಅವರ ಪ್ರಶ್ನೆಗಳಿಗೆ ಪ್ರಾಮಾಣಿಕವಾಗಿ ಉತ್ತರಿಸಲು ನಮ್ಮ ಈಗೊ ಬಿಡುತ್ತದೆಯೇ? ಅಥವಾ ಆಗ ನಮ್ಮ ವರ್ತನೆಗಳು ಹೇಗಿರಬಹುದು?