ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ. ಹಿಂಗತ್ತಿನ ಸುತ್ತುಬಳೆಯಿಂದ ಪೋಣಿಸಿ ಕಟ್ಟಲಾಗಿದ್ದ ಲೋಹ ಸರಪಳಿಯ ನೀಳದ ಪ್ರಯೋಜನ ಪಡೆದು ಅಯ್ಯಾಪಿಳ್ಳೆ ಶರೀರವನ್ನು ಮೆಲ್ಲಗೆ ಮುಂದಕ್ಕೂ ಹಿಂದಕ್ಕೂ ಅಲುಗಾಡಿಸಿ ನೋಡಿದ.
ಡಾ.ಅಶೋಕ್ ಕುಮಾರ್ ಅನುವಾದಿಸಿದ ಸುಭಾಷ್ ಚಂದ್ರನ್ ಅವರ ಮಲಯಾಳಂ ಕಾದಂಬರಿಮನುಷ್ಯನಿಗೆ ಒಂದು ಮುನ್ನುಡಿ”ಯ ಒಂದು ಭಾಗ

 

‘ಧೀರನೂ ಸ್ವತಂತ್ರನೂ ಎಲ್ಲಕ್ಕಿಂತ ಮಿಗಿಲಾಗಿ ಸೃಜನಶೀಲನೂ ಆದ ಮನುಷ್ಯಶಿಶು ಅರುವತ್ತೋ ಎಪ್ಪತ್ತೋ ವರ್ಷಗಳೊಳಗೆ ಭೀರುವೂ ಪರತಂತ್ರನೂ ಆಗಿಬಿಟ್ಟು ಸ್ವಂತ ಸೃಷ್ಟಿಸಾಮಥ್ರ್ಯವನ್ನು ವಂಶಾಭಿವೃದ್ಧಿಗಾಗಿ ಮಾತ್ರ ವ್ಯಯಿಸಿ ಕೊನೆಗೆ ವೃದ್ಧ ಪಾತ್ರ ಧರಿಸಿದ ಒಂದು ದೊಡ್ಡ ಮಗುವಾಗಿ ಮರಣ ಹೊಂದುವುದನ್ನೇ ಮನುಷ್ಯಜೀವನ ಎನ್ನುವುದಾದರೆ, ಪ್ರೀತಿಪಾತ್ರಳೇ, ಮನುಷ್ಯನಾಗಿ ಹುಟ್ಟಿದುದರಲ್ಲಿ ನಾನು ಅಭಿಮಾನ ಪಡುವಂತಹದ್ದೇನೂ ಇಲ್ಲ.”

ಜಿತೇಂದ್ರನ್ ಆನ್ಮೇರಿಗೆ ಕಳಿಸಿದ ಒಂದು ಪತ್ರದ ಸಾಲುಗಳು

1.ವಿಳಾಸ

ಮರಣಾನಂತರ ಕಾರ್ಯಗಳು ಮುಗಿದು, ಬಂಧುಗಳು ಮಕ್ಕಳೆಲ್ಲ ತೆರಳಿ ಆ ಫ್ಲಾಟ್ ನಲ್ಲಿ ವಿಧವೆಯಾಗಿ ಒಬ್ಬೊಂಟಿಯಾದ ಮೊದಲ ದಿವಸ, ತನಗೊಬ್ಬಳಿಗೇ ಅಮೂಲ್ಯವೆಂದೆನಿಸಿದ್ದ, ತನ್ನ ಗಂಡ ಕಾಲು ಶತಮಾನದ ಹಿಂದೆ ನೋವುದುಂಬಿದ ತಿರಸ್ಕಾರದಿಂದ ತ್ಯಜಿಸಿದ್ದ ಒಂದು ಹಿಂಡು ಅಕ್ಷರಗಳನ್ನು ಅವಳು ಹುಡುಕಿ ತೆಗೆದಳು. ಒಮ್ಮೆ ಚರಂಡಿ ನೀರಿನಲ್ಲಿ ಒದ್ದೆಯಾದ ಪುಸ್ತಕದ ಕಟ್ಟುಗಳ ಮಧ್ಯದಿಂದ ಅವಳು ಕಾಪಾಡಿ ತೆಗೆದು ಒಣಗಿಸಿ ಜತನವಾಗಿರಿಸಿದ್ದ ಕೆಲವು ಕಾಗದಗಳು ಮತ್ತು ಯೌವನದಲ್ಲಿ ಆತ ಬರೆಯಬೇಕೆಂದು ತೀವ್ರವಾಗಿ ಹಂಬಲಿಸಿದ್ದ ಒಂದು ಪುಸ್ತಕದ ಸಂಕ್ಷೇಪ ರೂಪದ ಟಿಪ್ಪಣಿಗಳೇ ಅವು.

ತನ್ನನ್ನು ಭಾವೀವಧುವೆಂದು ನಿರ್ಧರಿಸಿದ ಮೇಲೆ ತಮ್ಮ ವಿವಾಹದವರೆಗೆ ಮನ್ವಂತರದ ಹಾಗೆ ದೀರ್ಘವಾಗಿಬಿಟ್ಟ ಆರು ವರ್ಷಗಳ ಕೊನೆಯ ಹತ್ತು ತಿಂಗಳುಗಳಲ್ಲಿ-ಸಾವಿರದಒಂಬೈನೂರತೊಂಬತ್ತೊಂಬತ್ತರ ಮಾರ್ಚ್ ನಿಂದ ಎರಡುಸಾವಿರದ ಜನವರಿ ತನಕ-ಆತ ಕಳುಹಿಸಿದ ಹಲವು ಗಾತ್ರಗಳ ನಲವತ್ತು ಪತ್ರಗಳದೇ ಅವುಗಳಲ್ಲಿ ಸಿಂಹಪಾಲು. ಅವುಗಳಲ್ಲಿ, ಯಾವೊಬ್ಬ ಪ್ರಿಯಕರನೂ ತನ್ನ ಹುಡುಗಿಗೆ ಬರೆಯುವ ರೀತಿಯಲ್ಲಿದ್ದ ಪ್ರಣಯ ನಾರುವ ನುಡಿಗಳೇ ಹೆಚ್ಚಿನವು. ಮೊದಲ ಬಾರಿ ಓದಿದಾಗ ಕೈಬೆರಳುಗಳನ್ನೂ ಹೃದಯವನ್ನೂ ಏಕಪ್ರಕಾರವಾಗಿ ನಡುಗಿಸುತ್ತಿದ್ದ ಆ ಭಾಗಗಳನ್ನು ಈಗ, ತನ್ನ ಐವತ್ತನೇ ವಯಸ್ಸಿನಲ್ಲಿ, ಬೇರೆ ಯಾರೋ ಇನ್ನಾರಿಗೋ ಕಳಿಸಿದ ನುಡಿಗಳೆಂಬಂತೆ ನಿಸ್ಸಂಗತೆಯಿಂದ ಓದಲು ಅವಳಿಗೆ ಸಾಧ್ಯವಾಯಿತು. ಆದರೆ ಮನುಷ್ಯನ ಮಹತ್ವದ ಬಗ್ಗೆ ಒಬ್ಬ ಯುವಕನಾಗಿದ್ದಾಗಲೇ ಆತ ಬರೆದಿರಿಸಿದ್ದ, ಕೆಲವು ವ್ಯಾಕುಲತೆಗಳು ಉರಿದು ನಂದಿಹೋಗದಂತೆ ಆ ಪತ್ರದಲ್ಲಿ ಅಲ್ಲಲ್ಲಿ ತಲೆಯೆತ್ತಿ ನಿಂತಿದ್ದವು. ಅವು ಹಿಂದೆ ಅನುಭವವಾಗದಿದ್ದ ರೀತಿಯಲ್ಲಿ ಈಗ ಅವಳನ್ನು ಮಥಿಸತೊಡಗಿದವು. ಹಲವು ಪತ್ರಗಳಿಂದ, ಇನ್ನೆಂದಿಗೂ ಯಾವ ಯುವಕನೂ ತನ್ನ ಪ್ರಣಯಿನಿಗೋ ಗೆಳೆಯನಿಗೋ ಬರೆಯುವ ಸಾಧ್ಯತೆಯಿಲ್ಲದ ಆ ಸಾಲುಗಳನ್ನು ಅವಳು ಅನೇಕ ಸಾರಿ ಓದಿದಳು.

ಇಪ್ಪತ್ತೆಂಟನೇ ವಯಸ್ಸಿನಲ್ಲೇ ಆತ ಬರೆಯದೆ ತೊರೆದು ಬಿಟ್ಟ ಕಾದಂಬರಿಯ ಭಾಗಗಳನ್ನು ಅವಳು ಡವಗುಟ್ಟುವ ಎದೆಯೊಂದಿಗೆ ಹಿಂಬಾಲಿಸಿದಳು. ಅದನ್ನು ಬರೆಯುತ್ತಿರುವಾಗ ಇದ್ದ ಆತನ ಮನೋಸಂಘರ್ಷಗಳು ಕಾಲು ಶತಮಾನದ ಈಚೆಗೂ ಅದರಲ್ಲಿ ಅಂಟಿಕೊಂಡು ನಿಂತಿರುವ ಹಾಗೆ ಅವಳಿಗೆ ತೋರಿತು. ಅಕ್ಷರಗಳ ಮೇಲೆ ಬೆರಳೋಡಿಸುವಾಗ ಅವಳ ಬೆರಳು ಸುಟ್ಟಿತು. ಭವಿಷ್ಯಕ್ಕೋಸ್ಕರ ಜೋಪಾನವಾಗಿರಿಸಲ್ಪಟ್ಟ ಮಹಾವೃಕ್ಷಗಳ ಬೀಜಗಳ ಹಾಗೆ ಭಾಸವಾದಂತಹ ಅವು ಈಗ ಪೂರ್ಣರೂಪದಲ್ಲಿ ಅವಳ ಒಳಬಗೆಯಲ್ಲಿ ಸೊಂಪಾಗಿ ಹೊಮ್ಮ ತೊಡಗಿದವು. ಕಾಲು ಶತಮಾನದ ತನಕ ಅವನ್ನು ಮುಟ್ಟಲು ಅವಳಿಗೆ ಅನುಮತಿ ಇರಲಿಲ್ಲ. ಅದರ ಬಗ್ಗೆ ನೆನೆಯುವುದಾಗಲಿ ನುಡಿಯುವುದಾಗಲಿ ಮಾಡದೆ ಸ್ವಸ್ಥನಾಗಿ ಬಾಳುವುದರಲ್ಲಿ ಆಶ್ಚರ್ಯಕರವಾದ ಜಾಣ್ಮೆಯನ್ನು ಆತ ಮೆರೆದಿದ್ದ. ಕಾದಂಬರಿಯಂತೆ ಅರಳಿಸಿ ತೆಗೆಯಬಹುದಾಗಿದ್ದ ಸಂಕ್ಷಿಪ್ತ ಟಿಪ್ಪಣಿಗಳ ಬಗೆಗೆ ಮಧ್ಯೆ ಯಾವಾಗಲೋ ಸೂಚಿಸಿದಾಗ ಮಾತ್ರ, ಅದು ಬೇರೆ ಯಾರದೋ ತಮಾಷೆಯ ಬದುಕು ಎಂಬ ಧಾಟಿಯಲ್ಲಿ ಆತ ಗಹಗಹಿಸಿ ನಕ್ಕು ಬಿಟ್ಟಿದ್ದನಷ್ಟೆ. ಜೀವನದಲ್ಲಿ ಆತ ಬಾಯ್ತುಂಬ ನಕ್ಕದ್ದನ್ನು ಕಂಡ ಅಪರೂಪದ ಸಂದರ್ಭಗಳಲ್ಲಿ ಖಂಡಿತ ಅದೂ ಒಂದು. ಆದರೆ ಈಗ ಅವೆಲ್ಲವೂ ತನ್ನ ಉಳಿದ ವೈಧವ್ಯ ಜೀವನದ ನಿಸ್ಸಹಾಯವಾದ ಏಕಾಂತತೆಯಲ್ಲಿ ಮತ್ತೆ ಮೆಲುಕು ಹಾಕಿ ಸ್ಮರಿಸಲೂ, ಬೇರಾರಿಗೋಸ್ಕರವೋ ಅಲ್ಲದೆ, ಅಕ್ಷರಬೀಜಗಳನ್ನು ಮಾಮರಗಳಾಗಿ, ಬಿರುಗಾಳಿಗಳಾಗಿ, ಬದಲಾಯಿಸಲೂ ಅವಳಿಗೆ ಧಾರಾಳವಾಗಿ ಸಮಯಾವಕಾಶವಿರುವುದು.

ಒಬ್ಬ ವ್ಯಕ್ತಿಯ ಮರಣದ ಬಳಿಕವೂ ನೆಲೆನಿಲ್ಲಬಲ್ಲ ಸಾಮರ್ಥ್ಯವು, ಆತ ಹೊರಡಿಸುವ ಯಥಾರ್ಥ ಮಾತುಗಳಿಗೆ ಇರುವುದು ಎಂದು ಅವಳಿಗೆ ಅರಿವಾಗತೊಡಗಿತು: ಚಿತೆಗಳಿಗೂ ಸಹ ಸುಡಲು ಸಾಧ್ಯವಿಲ್ಲದಂತಹ ಆ ನುಡಿಗಳನ್ನು ಇಡೀ ಮನುಷ್ಯ ಜೀವನದ ಮುನ್ನುಡಿಯಾಗಿ ತೆಗೆದುಕೊಂಡು ಆದರಿಸಬೇಕಾಗಿದೆ.

“ಚೊಕ್ಕಾಂಪೆಟ್ಟಿ, ಪಾಚ್ಚಿ, ಸುಂದರಮಲೆ, ಕೋಮಲೆ
ವಳ್ಳಿ ಹಾಗೂ ಕಾಳಿ ನಾಗರಮಲೆ ಕ್ರಮದಲೆ”

*ಪೆರಿಯಾರ್ ಹೊಳೆಯನ್ನು ಹೆತ್ತು ಪೋಷಿಸಿದ ಮಲೆಗಳ ಹೆಸರುಗಳನ್ನು ಪೋಣಿಸಿ ಕಟ್ಟಿದ ದ್ವಿಪದಿಯನ್ನು ಅಜ್ಜ ಜಿತನಿಗೆ ಹೇಳಿಕೊಟ್ಟ. ಪಶ್ಚಿಮ ಘಟ್ಟದಲ್ಲಿ ಹಸಿರಿನ ಹೊದಿಕೆ ಹೊದ್ದು ನಿಂತ ಭವ್ಯವಾದ ಏಳು ಪರ್ವತಗಳು: ಅವುಗಳಲ್ಲಿ ನಾಲ್ಕು ಹೆಣ್ಣು, ಮೂರು ಗಂಡು. ಇನ್ನೂ ಸ್ವಲ್ಪ ದೊಡ್ಡವನಾದ ಮೇಲಷ್ಟೇ ಜಿತನಿಗೆ ಅರ್ಥವಾಗುವಂತಹ ಏನೋ ಒಂದು ಪ್ರಯತ್ನದಲ್ಲಿ ಅವು ಬೆವೆತು ಹರಿಯುತ್ತಿವೆ. ಬೆವರ ಕಾಲುವೆಗಳು ಸಂಗಮಿಸಿ ಒಂದು ಹೊಳೆಯಾಗುತ್ತಿದೆ.

‘ಹೇಳ್ತೀಯಾ ಹೈದಾ, ಯಾವುದು ಗಂಡು ಯಾವುದು ಹೆಣ್ಣೂಂತ?’ ಕಾಫಿಗಿಡಗಳ ನೆರಳಲ್ಲಿ ಕುಕ್ಕರು ಕುಳಿತು ಮುಲುಕುತ್ತಿರುವುದರ ಮಧ್ಯೆ ಹೊತ್ತು ಕಳೆಯುವುದಕ್ಕೆ ಅಜ್ಜ ಕೇಳಿದ.

ಕೈಯಲ್ಲಿದ್ದ ಕಂಚಿನ ಗಿಂಡಿಯನ್ನು ಅವನು ಕೆಳಗಿರಿಸಿ ಬೆರಳಲ್ಲಿ ಎಣಿಸಲಾರಂಭಿಸಿದ. ಚೊಕ್ಕಾಂಪೆಟ್ಟಿಮಲೆ, ಸುಂದರಮಲೆ, ಕೋಮಲೆ ಗಂಡುಗಳು, ಪಾಚ್ಚಿಮಲೆ, ವಳ್ಳಿಮಲೆ, ಕಾಳಿಮಲೆ…. ಆಮೇಲಿನ್ನೊಂದೇನು, ಹಾಂ, ನಾಗಮಲೆ ಹೆಣ್ಣುಗಳು.’

‘ಜಾಣ!’ ಅಜ್ಜ ಅವನನ್ನು ಅಭಿನಂದಿಸಿ ಬಲು ನೀಳವಾಗಿ ಒಂದು ಕೆಳಶ್ವಾಸ ಬಿಟ್ಟ. ಅನಂತರ ಬೆನ್ನ ಮೇಲಿನ ರೋಮಗಾಡನ್ನು ಗರಿಗೆದರಿಸುವ ಹಾಗೆ ಇನ್ನೊಮ್ಮೆ ಮುಕ್ಕಿದ. ಭಾರವಿಳಿದ ನಿರಾಳದಿಂದ ಅಜ್ಜನ ಬಿಗಿದುಕೊಂಡಿದ್ದ ಕಪ್ಪು ಮುಖ ಸಡಿಲಾಗಿ ಬೆಳಗಿತು.

ಕೆಂಪಗೆ ಹಣ್ಣಾಗಿದ್ದ ಕಾಫಿ ಬೀಜದ ಅಂಟಂಟಾದ ಸಿಹಿಯನ್ನು ಉಗುಳಿ ಜಿತನ್ ಬೆರಳನ್ನು ನಿಕ್ಕರಿಗೆ ಒರೆಸಿಕೊಂಡ. ಕಬ್ಬಿನ ತೋಟಗಳಂತೆ ಕಳ್ಳವೇಷ ಧರಿಸಿ ಹೊಳೆಯ ಕರೆಯಲ್ಲಿ ದಟ್ಟವಾಗಿ ಬೆಳೆದಿದ್ದ ಜೊಂಡು ಹುಲ್ಲುಗಳು ಗಾಳಿ ಬೀಸಿ ಬಂದಾಗ ಚೀತ್ಕಾರ ಹುಟ್ಟಿಸಿದವು. ಕಾಫಿಗಿಡಗಳ ಮತ್ತು ಜೊಂಡು ಹುಲ್ಲುಗಳ ನಡುವೆ ಇದ್ದ ಇಟ್ಟಿಗೆ ಭಟ್ಟಿಯು ಜಿತನ ದೃಷ್ಟಿಯಲ್ಲಿ ಹನುಮಂತ ಸುಟ್ಟು ಉರಿಸಿದ ಲಂಕಾನಗರವೇ ಆಗಿತ್ತು. ಉರಿಬಿಸಿಲಿನಲ್ಲಿ ಕೆಲಸ ಮಾಡುವ ಆಳುಗಳು ಸುಟ್ಟು ಕರಿಕಾದ ಅರಮನೆ ಸಾಲುಗಳಿಂದ ರಕ್ಕಸ ಕೂಸುಗಳನ್ನು ಕಾಪಾಡಲು ಹೆಣಗುತ್ತಿರುವವರು.

ಎದ್ದು ನಿಂತು ಖಾಲಿ ಗಿಂಡಿಗಾಗಿ ಕೈ ಚಾಚಿದ ಅಜ್ಜ ವಾಡಿಕೆಯಿಲ್ಲದ ಹಾಗೆ ನಕ್ಕ, ‘ಅದು ಯಾರ ಪದ್ಯ ಗೊತ್ತಾ?’

ಪ್ರಶ್ನೆ ಯಾವುದರ ಬಗ್ಗೆ ಎಂದು ತಿಳಿಯದೆ ಜಿತನ್ ಅಜ್ಜನು ಹಿಂದುಗಡೆ ತ್ಯಜಿಸಿದ್ದ ಪೀತ ನಾಗವನ್ನು ಕಳ್ಳನೋಟದಿಂದ ನೋಡಿದ. ಬಳಿಕ ಕಾಫಿಗಿಡಗಳಾಚೆ ಜೊಂಡು ಹುಲ್ಲುಗಳು ನಿಂತಿರುವಲ್ಲಿನ ಸ್ಥಿರವಾದ ಶೌಚಸ್ಥಾನದವರೆಗೆ ನಿಶ್ಶಬ್ದವಾಗಿ ಅಜ್ಜನನ್ನು ಹಿಂಬಾಲಿಸತೊಡಗಿದ.

ಕೆಸರಿನ ಬಣ್ಣದ ಗೆರೆಯಂಚುಳ್ಳ ಬೈರಾಸನ್ನುಟ್ಟುಕೊಂಡೇ ಅಜ್ಜ ಬಹಿರ್ದೇಶಕ್ಕೆ ಕೂರಲು ಬರುವುದು. ನಿತ್ಯಕರ್ಮ ಮುಗಿಸಿ ತೊಳೆದುಕೊಳ್ಳಲೆಂದು ಹೊಳೆ ದಡಕ್ಕೆ ನಡೆವಾಗ ಉಟ್ಟಬಟ್ಟೆ ಆಸನಕ್ಕೆ ತಾಗದಿರುವಂತೆ ಹಿಂದಕ್ಕೆ ಚಾಚಿಕೊಂಡ ಕೈ ಪೊರೆಯುವುದು. ಖಾಲಿ ಗಿಂಡಿಯ ಬಾಲವನ್ನು ಹಿಡಿದ ಬಲಗೈಯನ್ನು ಮುಂದಕ್ಕೆ ಚಾಚಿ ಹಿಡಿದಿರುತ್ತಿದ್ದ. ಇಬ್ಬದಿಗೂ ಬಿರಿದು ನಿಂತ ಕಾಲ್ಬೆರಳುಗಳನ್ನು ಮರಳಿನಲ್ಲಿ ಬಲವಾಗಿ ಊರಿ ಮೆಲ್ಲಗೆ ನಡಿಗೆ. ಹೊಳೆಗೆ ಇಳಿದು ನೀರನ್ನು ಮೊಗೆಯುವಾಗ ಗಿಂಡಿಯು ‘ಬ್ಲುಧಂ’ ಎನ್ನುವುದು. ಹೊಳೆಯ ‘*ಕಡವಿ’ನಲ್ಲಿ ಹೆಚ್ಚಿನ ವೇಳೆ ಕೆನ್ನೆ ಮೇಲೆ ಕರಿದುಂಬಿಯುಳ್ಳ ಮಡಿವಾಳ್ತಿ ಅಮ್ಮು ಬೇರೆಲ್ಲ ಜನರ ಕೊಳೆಬಟ್ಟೆಗಳನ್ನು ತೊಳೆಯುತ್ತಿರುತ್ತಿದ್ದಳು. ಹೊಳೆಗೆ ಇಳಿದು ಶುಚಿ ಮಾಡಿಕೊಳ್ಳುವುದರ ಬದಲಿಗೆ ಅಜ್ಜ ನೀರು ತೆಗೆದುಕೊಂಡು ಜೊಂಡಿನ ಮರೆಗೆ ಹೋಗಲು ಅದೇ ಕಾರಣ. ಅಜ್ಜ ಮರಳಿ ಬರುವ ತನಕ ತನ್ನ ತಾಯಿಗಿಂತ ಹೆಚ್ಚಿನ ಪ್ರಾಯವಿರುವ ಅಮ್ಮುವಿನ ಮೊಲೆಮಲೆಗಳಿಂದ ಜಿನುಗಿ ಹರಿಯುವ ಎಂಟನೆಯ ಬೆವರ ಹೊಳೆಯನ್ನು ಜಿತನ್ ಅಚ್ಚರಿಯಿಂದ ನೋಡುತ್ತ ನಿಲ್ಲುವನು. ಒಗೆಯುವ ಕಲ್ಲುಬಂಡೆಯ ಎದೆಮೇಲಿನ ಸವೆದು ನೆಗ್ಗಾದ ಹಳದಿ ನಾಮದಗೆರೆಯ ಮೇಲೆ ಬಟ್ಟೆ ಅಪ್ಪಳಿಸುವ ಸದ್ದು ಒಂದು ನಿಮಿಷದ ಬಳಿಕ ಆಚೆ ದಡದಿಂದ ಪ್ರತಿಧ್ವನಿಸುವುದು.

‘ಹೇಳಲಿಲ್ಲಲ್ಲೋ ನೀನು’, ಅಜ್ಜ ನಿರ್ಮಲನಾಗಿ ಮತ್ತೆ ಪದ್ಯದತ್ತ ಮರಳಿಬಂದ, ‘ಹಾಗಾದ್ರೆ ನಾ ಹೇಳ್ತೀನಿ. ನಿನ್ನ ಮುತ್ತಜ್ಜ, ಅಂದ್ರೆ ನನ್ನ ಅಪ್ಪ, ಬರೆದದ್ದು ಅದು. ಬರೆದದ್ದು ಅಂದ್ರೆ ಹಾಗೆ ತಾಳೆ ಓಲೆಯಲ್ಲೇನಲ್ಲ, ಮನಸ್ಸಲ್ಲೇ!’

‘ಅಜ್ಜನ ಅಪ್ಪನ ಹೆಸರೇನಿತ್ತು?’ ಜಿತನ್ ಕೇಳಿದ.

‘ಓ!’, ಅಜ್ಜ ಕೈಯಗಲಿಸಿ ಬಿಟ್ಟು ನಕ್ಕ, ‘ಹಾಗೆ ಹೆಸರೆಲ್ಲ ನೆನಪಿಡೋಕೆ ಆತ ಯಾರು ಅಂತ ಗೊತ್ತಿರಬೇಕಲ್ಲ. ನಾನು ನೋಡಿಲ್ಲ. ನನ್ನ ಅಮ್ಮ ಹೇಳಿ ತಿಳಿದದ್ದು. ನಮ್ಮ ಅಯ್ಯಾಟ್ಟುಂಪಿಳ್ಳಿ ಕುಟುಂಬಕ್ಕೆ *ಸಂಬಂಧಕ್ಕೆಂದು ಬಂದ ಯಾರೋ ಒಬ್ಬ ಬಡಪಾಯಿ!’

ಹಿಂತಿರುಗುವ ಮುನ್ನ ಅಜ್ಜ ತಲೆ ಕೊಂಕಿಸಿ ಒಲೆದಾಡುವ ನೆರಳನ್ನು ತಲೆಕೆಳಗಾಗಿಸಿಕೊಂಡಿರುವ ಅಮ್ಮುವನ್ನು ನೋಡಿ ಒಮ್ಮೆ ಗಟ್ಟಿಯಾಗಿ ಹೂಂಕರಿಸಿದ. ಅಮ್ಮು ತನ್ನ ಚೌಕಳಿ ಲುಂಗಿಯ ಚುಂಗನ್ನು ಎಳೆದು ಮೊಲೆಗಳ ನಡುವಿನ ಭಂಡಾರದಿರುಕಿನಲ್ಲಿ ಸಿಕ್ಕಿಸಿದಳು.

ಹೊಗೆಸೊಪ್ಪಿನ ಕರೆ ಅಂಟಿದ್ದ ದೊಡ್ಡ ಹಲ್ಲುಗಳನ್ನು ಕಿಸಿದು ಕಾರಣವೇನೂ ಇಲ್ಲದೆ ಅಜ್ಜ ಗಹಗಹಿಸಿ ನಕ್ಕ, ‘ದಡ್ಡಾ’, ಅಜ್ಜ ಹೇಳಿದ, ‘ಅಯ್ಯಾಟ್ಟುಂಪಿಳ್ಳಿ ಮನೆತನದಲ್ಲಿ ಮೊದಲು ಹುಟ್ಟಿದ್ದು ಅಯ್ಯಾ ಪಿಳ್ಳೆ!’

ಕಾಲೆಳೆದುಕೊಂಡು ದೂರ ಸಾಗುತ್ತಿದ್ದ ದುಷ್ಟ ಮುದುಕನನ್ನೂ ಆತನಿಗೆ ಕಾವಲಾಗಿ ಬಂದ ಆರು ವಯಸ್ಸಿನವನನ್ನೂ ನೋಡಿ ಮಡಿವಾಳ್ತಿ ಅಮ್ಮು ತನಗೆ ತಾನೇ ಹೇಳಿಕೊಂಡಳು, ‘ಹ್ಞುಂ, ಅಯ್ಯಾಟ್ಟುಂಪಿಳ್ಳಿ!’

‘ಥೂ!’ ಅಯ್ಯಾಪಿಳ್ಳೆ ಅತಿ ಭಯಂಕರವಾಗಿ ಬೈದಟ್ಟಿದ.

ಜನದಟ್ಟಣೆಯ ಹೆದ್ದಾರಿಯಲ್ಲಿ ಆಕಾಶದೆತ್ತರಕ್ಕೆ ಬೆಳೆದ ಮಾಮರದ ತುದಿಯಲ್ಲಿ ಮನುಷ್ಯಾಕೃತಿಯ ಕಬ್ಬಿಣದ ಪಂಜರದ ಸೆರೆಯಲ್ಲಿ ನೇತು ಬಿದ್ದಿರುವ ಐವತ್ತಾರು ವಯಸ್ಸಿನ ಅಯ್ಯಾಪಿಳ್ಳೆ: *ವಂಜೀಶ ಕೋಪದ ಬಲಿ. ಶಿಕ್ಷೆ ಜಾರಿಗೆ ತಂದು ಅಂದಿಗೆ ಇಪ್ಪತ್ತೇಳನೇ ದಿನ ತುಂಬಿತ್ತು. ಅನ್ನ ನೀರುಗಳಿಲ್ಲದೆ ದಿನಗಳೊಳಗೇ ಅಪರಾಧಿ ಮರಣವನ್ನೈದುವ ವಾಡಿಕೆಯನ್ನು ಅಯ್ಯಾಪಿಳ್ಳೆ ತಪ್ಪಿಸಿದ್ದ.

ಶಿಕ್ಷೆಯನ್ನು ಜಾರಿಗೊಳಿಸಿದ್ದು ಕುಂಭ ಮಾಸದ ಮೊದಲ ವಾರದಲ್ಲಿ. ಕಬ್ಬಿಣದ ಪಟ್ಟಿಗಳನ್ನು ಬೆಸುಗೆ ಮಾಡಿ ನಿರ್ಮಿಸಿದ ಮನುಜಪಂಜರವನ್ನು ನೋಡಲು ತಿರುವಿತಾಂಕೂರು ಸಂಸ್ಥಾನಕ್ಕೆ ಹೊಸದಾಗಿ ಸೇಪರ್ಡೆಯಾಗಿದ್ದ ‘ಪರವೂರ್’ ಪ್ರಜೆಗಳೂ ‘ಆಲಂಗಾಡ್’ ನಿವಾಸಿಗಳೂ ಮರದ ಸುತ್ತಲೂ ಕಿಕ್ಕಿರಿದು ನೆರೆದಿದ್ದರು. ಮರದ ರಾಟೆಗೆ ಸಿಕ್ಕಿಸಿದ್ದ ಹಗ್ಗದಲ್ಲಿ ಜೋತು ಬಿದ್ದ ಅಯ್ಯಾಪಿಳ್ಳೆ ಮೇಲೇರಿ ಹೋಗುತ್ತಿದ್ದಾಗ ಮಹಾರಾಜರಿಗೆ ಜೈ ಎಂದು ಕೂಗುತ್ತ ಅವರು ಮುಷ್ಟಿಗಳನ್ನು ಅಪರಾಧಿಯ ಕಡೆಗೆ ಎತ್ತಿದರು. ವಧೆ ಶಿಕ್ಷೆಯನ್ನು ಕಾಣಲು ಬಂದು ತಲುಪಿದ್ದವರು ಅಂಗಾತ ಅರಳಿದ ಹಲವು ತಲೆಗಳ ಎಸಳುಗಳಾಗಿ ಚದುರುವುದನ್ನು ಅಯ್ಯಾಪಿಳ್ಳೆ ಕಂಡನು. ಒಳಸುತ್ತಿನಲ್ಲಿ *ಅನಂತಪುರದ ಅರಮನೆಯಿಂದ ಬಂದಿದ್ದ ಸಚಿವ ಮತ್ತು ವಿಚಾರಣಾಧಿಕಾರಿಗಳು, ಎರಡನೆ ಸಾಲಿನಲ್ಲಿ ಮಾಂಡಲಿಕರು ಮತ್ತು ಸೀಮೆಯ ಗಣ್ಯರು ಮತ್ತವರ ಹಿಂಬಾಲಕರು, ಬಳಿಕ ಮೈಲಿಗೆ ಕಾಯ್ದು ದೂರ ನಿಂತ ಚಾತುರ್ವರ್ಣದವರು, ಅದಕ್ಕೂ ಹೊರಗೆ ರೋದನದನಿಯೆಬ್ಬಿಸಿ ಬೊಬ್ಬಿರಿಯುತ್ತಿರುವ ತನ್ನ ಕುಟುಂಬದವರು….

ಹಗ್ಗದ ಹೊಸೆತದೊಂದಿಗೆ ಮೊದಲು ಗಡಿಯಾರ ಕ್ರಮದಲ್ಲೂ ಅನಂತರ ಅದೇ ಸುತ್ತಳತೆಯಲ್ಲಿ ಹಿಂದಕ್ಕೂ ಕ್ರಮಿಸಿ ತಿರುತಿರುಗುತ್ತ ಅಯ್ಯಾಪಿಳ್ಳೆ ಹೊಮ್ಮಿ ಮೇಲಕ್ಕೇರಿ ಕೊನೆಗೆ ಲಕ್ಷ್ಯಸ್ಥಾನದಲ್ಲಿ ದೃಢಗೊಂಡ. ಅಷ್ಟು ಹೊತ್ತೂ ಮರದ ಮೇಲೆ ಬೆವೆತು ಕ್ಲೇಶಪಟ್ಟಿದ್ದ ಮೂರು ಜನರು ಆ ಬಳಿಕ ಕೆಳಕ್ಕಿಳಿದರು. ಅಷ್ಟೆತ್ತರದಿಂದ ಅಪರಾಧಿಯು ಹೊರಚೆಲ್ಲಬಹುದಾದ ಮಲಮೂತ್ರಾದಿಗಳಿಗೋಸ್ಕರ ನೇರ ಕೆಳಗೆ ಎರಡು ಅಡಿ ವರ್ತುಲದಲ್ಲಿ ಮಣ್ಣನ್ನು ಅಗೆದು ತೆಗೆವ ಕೆಲಸವನ್ನು ಸಹ ಮುಗಿಸಿದ ಮೇಲೆ ಅವರು ಕೈಕಾಲು ತೊಳೆದರು. ಪಹರೆಯವನನ್ನು ನೋಡಿ ಅವರಲ್ಲೊಬ್ಬನು ಹೇಳಿದ, ‘ ಭಾರೀ ಮೈಯ ಆಸಾಮಿ ಮೇಲಿರೋನು. ಆದರೂನೂ ಹತ್ತು ದಿನದೊಳಗೆ ಗೊಟಕ್ ಅಂತಾನೆ!’

ಕೆಂಪಗೆ ಹಣ್ಣಾಗಿದ್ದ ಕಾಫಿ ಬೀಜದ ಅಂಟಂಟಾದ ಸಿಹಿಯನ್ನು ಉಗುಳಿ ಜಿತನ್ ಬೆರಳನ್ನು ನಿಕ್ಕರಿಗೆ ಒರೆಸಿಕೊಂಡ. ಕಬ್ಬಿನ ತೋಟಗಳಂತೆ ಕಳ್ಳವೇಷ ಧರಿಸಿ ಹೊಳೆಯ ಕರೆಯಲ್ಲಿ ದಟ್ಟವಾಗಿ ಬೆಳೆದಿದ್ದ ಜೊಂಡು ಹುಲ್ಲುಗಳು ಗಾಳಿ ಬೀಸಿ ಬಂದಾಗ ಚೀತ್ಕಾರ ಹುಟ್ಟಿಸಿದವು. ಕಾಫಿಗಿಡಗಳ ಮತ್ತು ಜೊಂಡು ಹುಲ್ಲುಗಳ ನಡುವೆ ಇದ್ದ ಇಟ್ಟಿಗೆ ಭಟ್ಟಿಯು ಜಿತನ ದೃಷ್ಟಿಯಲ್ಲಿ ಹನುಮಂತ ಸುಟ್ಟು ಉರಿಸಿದ ಲಂಕಾನಗರವೇ ಆಗಿತ್ತು.

ದಿಕ್ಕುಗಳು ಕತ್ತಲಿಸಿದಾಗ ಮತ್ತೆ ಮತ್ತೆ ಹಿಂದಕ್ಕೆ ತಿರುಗಿ ನೋಡುತ್ತಲೇ ಜನಸಂದಣಿ ಚದುರಿ ಹಲದಾರಿಗಳಲ್ಲಿ ಕರಗಿ ಇಲ್ಲವಾಯಿತು. ಚಿನ್ನದಂಥ ಮಹರಾಜರ ಇಬ್ಬರು ಭಟರು ಮಾತ್ರ ಹಸಿವೆಮರಣಕ್ಕಾಗಿ ತೂಗುಹಾಕಲ್ಪಟ್ಟ ಅಯ್ಯಾಪಿಳ್ಳೆಯ ಕೆಳಗೆ ಉಳಿದುಕೊಂಡರು.

ಅವರು ಅಯ್ಯಾಪಿಳ್ಳೆ ಅಸು ನೀಗುವವರೆಗೆ ಮರದ ನೆರಳಿನಲ್ಲಿ ಮಲಮೂತ್ರಗಳು ಬೀಳದ ದೂರದಲ್ಲಿ ರಾತ್ರಿ ಹಗಲು ಸರದಿಯಂತೆ ಕಾವಲುಕೆಲಸಕ್ಕೆ ತೊಡಗಿದರು.

ಅಯ್ಯಾಪಿಳ್ಳೆಯನ್ನು ನೋಡಲು ಪ್ರೇಕ್ಷಕರು ಗಾವುದಗಳ ದೂರದಿಂದ ನಡೆದು ಬರುತ್ತಿದ್ದುದರಿಂದ ಹಗಲಿನ ಪಹರೆಗಾರರಿಗೆ ಏಕಾಂತತೆ ಸೋಂಕಲಿಲ್ಲ. ಆದರೆ ರಾತ್ರಿಕಾವಲುಗಾರನಾದರೋ, ಮರೋಟಿ ಎಣ್ಣೆ ಹಾಕಿ ಹೊತ್ತಿಸಿರಿಸಿದ ದೊಂದಿಯ ಪಕ್ಕದಲ್ಲಿ ನಿದ್ರೆ ಬಾರದೆ ಒಬ್ಬಂಟಿಯಾಗಿ ಕುಳಿತು ಹೈರಾಣಾದ. ಆಗ ಎತ್ತರದಲ್ಲಿನ ಕತ್ತಲಿನಲ್ಲಿ ಅಯ್ಯಾಪಿಳ್ಳೆ ನೇತಾಡುತ್ತಿರುವ ದೂರವನ್ನು ಊಹಿಸಿಕೊಂಡು ಅವನು ಪ್ರಶ್ನೆಗಳನ್ನು ಎಸೆದನು.

‘ಮಾಪಾಪೀ!’ ಆಕಳಿಸುತ್ತ ತಲೆ ತುರಿಸುತ್ತ ಗಟ್ಟಿಯಾಗಿ ಗುಟ್ಟಿನ ಮಾತಾಡಬೇಕಾದ ದುರ್ಗತಿಯಿಂದ ಖಿನ್ನನಾಗಿ ಅವನು ತಲೆಯರಳಿಸಿ ಕೇಳಿದ, ‘ಅನ್ನ ನೀರು ಸಿಗದಂತಾದಾಗ ಮಾಡಿದ ಘನಂದಾರಿ ತಪ್ಪೇನಂತ ತಿಳೀತೇನೋ?’

ಮೇಲುಗಡೆಯಿಂದ ಪ್ರತಿಕ್ರಿಯೆ ಬಾರದೆ ನಿರಾಶನಾದ ಪಹರೆಗಾರ ಪಂಜನ್ನೆತ್ತಿ ಮೇಲಕ್ಕೆ ಚಾಚಿ ಕಣ್ಣನ್ನು ಚೂಪುಗೊಳಿಸಿದನು. ಎಲೆ ತೊಂಗಲಿನ ನಡುವಿನಿಂದ ಕೈ ಹಾಕಿ ಕುಂಭ ಮಾಸದ ಬೆಳುದಿಂಗಳು ಅಯ್ಯಾಪಿಳ್ಳೆಯನ್ನು ಒಂದು ಶಿಲಾಪ್ರತಿಮೆಯಂತೆ ಎತ್ತಿ ಹಿಡಿದಿರುವುದನ್ನು ಕಂಡು ಅವನು ಬೆಚ್ಚಿದನು. ಆಗಲೂ ಆಗಿಂದಾಗ ಎವೆತೆರೆದಿಕ್ಕುತ್ತಿರುವ ಎರಡು ಜ್ವಲಿಸುವ ಕಣ್ಣುಗಳು ತನ್ನ ಮೇಲ್ಗಡೆ ಇವೆಯೆಂಬುದನ್ನು ನೆನೆದಾಗ ತಾನು ಅಯ್ಯಾಪಿಳ್ಳೆಗೆ ಅಲ್ಲ, ಅಯ್ಯಾಪಿಳ್ಳೆ ತನಗೆ ಕಾವಲು ನಿಂತಿರುವನು ಎಂಬ ವಿಚಿತ್ರವಾದ ಅನಿಸಿಕೆಯುಂಟಾಗಿ ಪಹರೆಯವನು ಬಸವಳಿದ.

ದಿನಗಳು ಉರುಳಿದಂತೆಲ್ಲ ಮಲಮೂತ್ರಗಳು ಕೆಳಕ್ಕೆ ಜಾರುವುದು ಕಮ್ಮಿಯಾಗುತ್ತ ಬಂದಿತು. ಚಿನ್ನದಂಥ ಮಾರಾಜರ ಇಂಗಿತ ನೆರವೇರುವುದನ್ನು ಕಾಣಲು ಆಕಾಶದ ಕಡೆಗೆ ಕಣ್ಣೆತ್ತರಿಸಿ ನಿಂತ ಇಬ್ಬರು ಪಹರೆಯಾಳುಗಳು ಅಯ್ಯಾಪಿಳ್ಳೆ ಇನ್ನೂ ಸತ್ತಿಲ್ಲವೆಂದರಿತು ಅಸಹನೆಗೊಂಡರು. ಕೈಕಾಲುಗಳನ್ನು ಅಲುಗಿಸಲಾಗದ ಮರಣದಂಗಿಯೊಳಗೂ ಅಯ್ಯಾಪಿಳ್ಳೆ ಅಕ್ಷೋಭ್ಯನಾಗಿದ್ದ. ಒಂಬತ್ತನೇ ದಿನ ಮೊದಲ ರಣಹದ್ದು ಒಂದು ಬೊಟ್ಟಿನ ಹಾಗೆ ಪಡುವಣ ಬಾನಿನಲ್ಲಿ ಪ್ರತ್ಯಕ್ಷವಾದಾಗ ಅದೊಂದು ಪಾರಿವಾಳವಾಗಿರಬಹುದು ಮತ್ತು ಅದರ ಕಾಲಿನಲ್ಲಿ ಸುರುಳಿ ಸುತ್ತಿ ಹಿಡಿದ ಒಂದು ಸಂದೇಶ ಪತ್ರ ಇರಬಹುದು ಎಂದೂ ಆತ ವ್ಯಾಮೋಹಿಸಿದ. ಅಯ್ಯಾಪಿಳ್ಳೆ ಕಣ್ಣುಗಳನ್ನು ಗಟ್ಟಿಯಾಗಿ ಮುಚ್ಚಿಕೊಂಡನು. ಆಗ ಒಂದು ಗಿಂಡಿ, ಹಸೆಮಣೆ ಮತ್ತು ಕಿರುಕೊಪ್ಪರಿಗೆ ಒಳಗಣ್ಣಿನಲ್ಲಿ ನಿಚ್ಚಳವಾದವು. ಮರುಕ್ಷಣದಲ್ಲಿ ಅವು ಅಂತರ್ಧಾನವಾದವು. ಹಸಿವೆ ಸೃಷ್ಟಿಸುವ ಮಾಯಾಜಾಲಗಳಲ್ಲಿ ಮುಂದಿನದು ಇನ್ನೂ ಹೆಚ್ಚು ವಿಚಿತ್ರವಾಗಿತ್ತು. ವಿದೂಷಕ ವೇಷಧಾರಿಯಾದ ಒಬ್ಬ ವೃದ್ಧನು ನರ್ತನಶಾಲೆಯಂತಹ ಸ್ಥಳದ ಮುಂದೆ ನಿಂತು ಬಾಡಿದ ಎಲೆಯಲ್ಲಿ ಅನ್ನ ಚಾಚಿ ಹೀಗೆ ಹೇಳಿದ, ‘ಅಯ್ಯಾ! ನೀನೇಕೆ ಬಂದೆ!’

‘ಶಾಲೆಯೊಳ್ ಉಣಿಸಿಹುದೆಂಬುದ ಕೇಳಿದಂತಿರಲೆನಗುಂ ದೊರೆಯಲೆಂದೆಣಿಸಿ ಬಂದೆಂ!’, ಅಯ್ಯಾಪಿಳ್ಳೆ ಕನಸಿನಲ್ಲೋ ಎಂಬಂತೆ ನುಡಿದನು.
ಮೇಲಿನಿಂದ ಅಯ್ಯಾಪಿಳ್ಳೆಯ ವಿಚಿತ್ರ ಭಾಷೆ ಕೇಳಿಬಂದಾಗ ಹಗಲ ಪಹರೆಗಾರ ಗಾಬರಿಗೊಂಡ. ಅವನು ಕಿವಿಯಾನಿಸಿ ಹಿಡಿದ. ಆಗ ಕಣ್ಣು ತೆರೆದು ರಣಹದ್ದನ್ನು ನೋಡಿ ಅಯ್ಯಾಪಿಳ್ಳೆ ಹಲುಬತೊಡಗಿದ, ‘ಜುಟ್ಟು ಬಿಟ್ಟು ಮೇಲೂ ಕೆಳಗೂ ಕೂದಲು ತೆಗಿ. ಬಿಳಿ ಬಟ್ಟೆ ತೊಟ್ಟು ಉಪಾಸಕನಾಗು. ಪಂಚಶಿಕ್ಷಾ ಪಾಠವ ಕಲಿ. ಜನಿವಾರ ಕಾಲಾಚೆ ಕಳಚಿ ಜುಟ್ಟು ಕತ್ತರಿಸಿ ಕೈಲಿ ಹಿಡಿ. ಊಧ್ರ್ವಲೋಕಂ ಗಚ್ಛಂ ಎಂದೆನ್ನು! ಥೂ!’

ಮರಣದ ವಾಸನೆ ಲಭಿಸದೆ ಸಂಶಯಾತ್ಮನಾಗಿ ರಣಹದ್ದು ಮರವನ್ನು ಸುತ್ತು ಹಾಕಿ ಹಾರತೊಡಗಿತು. ಸತತವಾದ ಮೂರು ದಿನಗಳ ಪ್ರದಕ್ಷಿಣೆಯಲ್ಲಿ ಸಮೀಪಿಸಲು ಯತ್ನಿಸಿದಾಗಲೆಲ್ಲ ಕಬ್ಬಿಣದ ಕವಚದೊಳಗಿನ ಮನುಷ್ಯನ ಉಗ್ರವಾಗಿ ಬೈದಟ್ಟುವ ಥೂಕಾರ ಕೇಳಿ ರಣಹದ್ದು ಕಂಗೆಟ್ಟಿತು.

ಹನ್ನೆರಡನೇ ದಿವಸ ಕುಂಭ ಮಾಸವು ಅಯ್ಯಾಪಿಳ್ಳೆಗೆ ಸಾವನ್ನು ಮುಂದಕ್ಕೆ ಹಾಕಲು ಒಂದು ಅವಕಾಶ ಕಲ್ಪಿಸಿತು. ಧಗಧಗಿಸುತ್ತಿದ್ದ ಮಧ್ಯಾಹ್ನದ ವೇಳೆ ಹಠಾತ್ತನೆ ಮೋಡಗಳು ಕಪ್ಪಾಗಿ ಮಳೆ ಸಿಡಿಯಿತು. ಮೂರು ದಿನಗಳಿಂದ ಆಹಾರ ಸಿಗದೆ ದಣಿದಿದ್ದ ರಣಹದ್ದು ಅಯ್ಯಾಪಿಳ್ಳೆಯನ್ನು ತೂಗು ಹಾಕಿದ್ದ ಕೊಂಬೆಗೆ ಹಾರಿಬಂದು ಆತನನ್ನೇ ದುರುಗುಟ್ಟಿ ನೋಡುತ್ತ ಕುಳಿತುಕೊಂಡಿತು.

ಮಳೆ ಜೋರಾಗಿ ಮರವನ್ನೇ ಮುಳುಗಿಸುವಂತೆ ಸುರಿಯತೊಡಗಿದಾಗ ರಣಹದ್ದಿನ ಪುಕ್ಕಗಳು ತೊಯ್ದು ತೊಪ್ಪೆಯಾಗುವುದನ್ನು ತನ್ನ ಕಡೆಗಣ್ಣಿಂದ ನೋಡುವುದು ಅಯ್ಯಾಪಿಳ್ಳೆಗೆ ಸಾಧ್ಯವಾಯಿತು. ಪಂಜರಕ್ಕೆ ಒತ್ತಿಕೊಂಡಂತಿದ್ದ ಜುಟ್ಟಿನ ಗಂಟು ಕಳಚಿಕೊಂಡು ಹಿಂದಕ್ಕೆ ಚದುರಿದ್ದ ಕೂದಲಿಗೆ ಕುತ್ತಿಗೆಯನ್ನೊತ್ತಿ ಅಯ್ಯಾಪಿಳ್ಳೆ ತಲೆಯನ್ನು ಹೊರಳಿಸಲು ನೋಡಿದನಾದರೂ ಸಾಧ್ಯವಾಗಲಿಲ್ಲ. ಭೋರ್ಗರೆದು ಸುರಿಯುತ್ತಿರುವ ಮಳೆಯಲ್ಲಿ ಆತ ಬಾಯಾರಿ ತಹತಹಿಸಿದ. ಹಿಂಗತ್ತಿನ ಸುತ್ತುಬಳೆಯಿಂದ ಪೋಣಿಸಿ ಕಟ್ಟಲಾಗಿದ್ದ ಲೋಹ ಸರಪಳಿಯ ನೀಳದ ಪ್ರಯೋಜನ ಪಡೆದು ಅಯ್ಯಾಪಿಳ್ಳೆ ಶರೀರವನ್ನು ಮೆಲ್ಲಗೆ ಮುಂದಕ್ಕೂ ಹಿಂದಕ್ಕೂ ಅಲುಗಾಡಿಸಿ ನೋಡಿದ. ನಿಧಾನವಾಗಿ ಅದನ್ನೊಂದು ಜೀಕುವ ಆಟವಾಗಿಸಲು ಆತನಿಗೆ ಸಾಧ್ಯವಾಯಿತು. ಹೊಯ್ದಾಟ ಬಿಗಿಯಾದಾಗ ಒಂದೊಂದು ಬಾರಿಯೂ ಮುಖ ಮೇಲಕ್ಕಾಗುವ ಹೊಂಚಿನಲ್ಲಿ ತುಸುತುಸುವೇ ಆತ ನಾಲಿಗೆ ನೀಡಿ ತೆರೆದ ಬಾಯೊಳಕ್ಕೆ ಮಳೆನೀರನ್ನು ಹಿಡಿದ. ಹತ್ತು ದಿನಗಳ ಒಣದೇಹಕ್ಕೆ ತೇವ ತಗುಲಿದಾಗ ಇಡೀ ದೇಹವನ್ನು ನಡುಗಿಸುತ್ತ ಪ್ರಾಣವು ನುಲಿಯಿತು. ಲೋಹ ಪಟ್ಟಿಗಳಿಗೆ ಉಜ್ಜಿ ಚರ್ಮ ಕಿತ್ತ ಗಾಯಗಳಲ್ಲಿ ಹರಿಯಲು ಚೈತನ್ಯವಿಲ್ಲದೆ ಹೆಪ್ಪುಗಟ್ಟಿದ್ದ ರಕ್ತ, ಮಳೆ ಸೋಕಿದಾಗ ಚರ್ಮದಲ್ಲಿ ಕೆಂಪು ಬೇರುಗಳನ್ನು ಬರೆಯುತ್ತ ತೇವದಲ್ಲಿ ಹಬ್ಬಿತು. ಅತ್ಯಾಶೆಯ ಚಡಪಡಿಕೆಯಲ್ಲಿ ಅಯ್ಯಾಪಿಳ್ಳೆ ಕಣ್ಣುಗಳ, ಬಾಯಿಯ, ಕಿವಿಗಳ ಮೂಲಕವೆಲ್ಲ ಕುಡಿದ. ಆತನಿಗೆ ಹುರುಪು ಹೆಚ್ಚುತ್ತ ಬಂತು. ಕುಂಭ ಮಾಸ ಕಳೆದು ಮೀನ ಮಾಸಕ್ಕೆ ಬೇಕಾದುದನ್ನು ಸಹ ಕುಡಿದು ಆತ ಹೊಟ್ಟೆಯೊಳಗೆ ಮಳೆಯನ್ನು ತುಂಬಿಸಿಕೊಂಡ. ನಾಲ್ಕು ಗಳಿಗೆ ಎಡೆಬಿಡದೆ ಸುರಿದ ಮಳೆ ಅಯ್ಯಾಪಿಳ್ಳೆಯ ದಾಹ ತೀರಿಸಿ ಹಿಂತೆಗೆಯಿತು.

ಹದಿನೆಂಟನೆಯ ದಿನ ಎರಡನೆಯ ರಣಹದ್ದು ಬಂದು ಸೇರಿತು. ಸರಳಿನ ಅಂಗಿಯ ಎಡೆಯಿಂದ ತನ್ನ ಮಾಂಸವನ್ನು ಕುಕ್ಕಿ ಎಳೆಯಲು ಹಾತೊರೆಯುತ್ತಿರುವ ರಣಹದ್ದುಗಳನ್ನು ದೂರಕ್ಕಟ್ಟಲು ದುರುಗುಟ್ಟುವ ಕಣ್ಣುಗಳು ಸಾಲುವುದಿಲ್ಲವೆಂದೆನಿಸಿದಾಗ ಆತ ಉಳಿದಿದ್ದ ಸರ್ವಶಕ್ತಿಯನ್ನೂ ಒಗ್ಗೂಡಿಸಿ ಅತ್ಯುಗ್ರ ದನಿಯಲ್ಲಿ ಅಟ್ಟತೊಡಗಿದನು, ‘ಥೂ! ಥೂ!’

ಪಾಪದ ಧ್ವಜಸ್ತಂಭದಲ್ಲಿ ಹಾರುತ್ತಿರುವ ಪತಾಕೆಯ ಹಾಗೆ ಅಷ್ಟೆತ್ತರದಲ್ಲಿ ತೂಗಿಬಿದ್ದಿರುವ ಆ ಮನುಷ್ಯನ ಪ್ರಾಣದೊಳಗಿಂದ ಕಿತ್ತು ಬಂದ ಶಬ್ದ ರಾತ್ರಿಯೂ ಹಗಲೂ ಬಿಟ್ಟೂ ಬಿಟ್ಟೂ ಮೊಳಗುತ್ತಲೇ ಇತ್ತು. ಪರಲೋಕದಿಂದ ಧ್ವನಿಸುತ್ತಿರುವಂತಹ ಅದನ್ನು ಕೇಳಿ ಮಕ್ಕಳು ಭಯಪಡದೆ ಇರಲು, ಸುತ್ತಮುತ್ತಲಿನ ಒಂಟಿಯಾದ ಮನೆಗಳಲ್ಲಿ ತಾಯಂದಿರು ಹಳೆ ಬಟ್ಟೆ ಹರಿದು ಚಿಕ್ಕ ಉಂಡೆಗಳನ್ನಾಗಿಸಿ ಮಕ್ಕಳ ಎಳೆಗಿವಿಗಳೊಳಕ್ಕೆ ತುರುಕಿದರು.

ಅಯ್ಯಾಪಿಳ್ಳೆಯ ಅಟ್ಟುವ ಥೂಕಾರವು ಕುಂಭ ಮಾಸ ಕಳೆದು ಮೀನ ಮಾಸವನ್ನು ದಾಟಲಿಲ್ಲ. ಪಂಚೇಂದ್ರಿಯಗಳೂ ಕೊಳೆತು ಆತ ನಿಶ್ಚೇತನನಾದ ಸಂಗತಿ ಭೂಮಿಯಲ್ಲಿರುವ ಪಹರೆಯಾಳುಗಳಿಗಿಂತಲೂ ಮುನ್ನ ಆಗಸದ ಹಕ್ಕಿಗಳು ಅರಿತವು. ಹಸಿವೆಯಿಂದ ತಾಳ್ಮೆಗೆಟ್ಟಿದ್ದ ರಣಹದ್ದುಗಳು ಒಣಗಲಾರಂಭಿಸಿದ್ದ ಅಯ್ಯಾಪಿಳ್ಳೆಯ ಕಿಬ್ಬೊಟ್ಟೆ ಚರ್ಮವನ್ನು ಸೀಳಲು ಕೊಕ್ಕನ್ನು ತಾಗಿಸಿದ ನಿಮಿಷ, ಕಚಗುಳಿಯಲ್ಲಿ ಸುತ್ತಲ್ಪಟ್ಟ ಮರಣವು ತನ್ನ ಪ್ರಾಣವನ್ನು ಚುಂಬಿಸುತ್ತಿರುವುದನ್ನರಿತುಕೊಂಡ ಅಯ್ಯಾಪಿಳ್ಳೆಯು ಅಂತಿಮ ಅಟ್ಟುವ ದನಿ ಹೊರಹಾಕಿದ.

ಅದರ ಉಗ್ರತೆಯು ಒಂದು ಕುಲಕ್ಕೆ ಹೆಸರು ನೀಡಿತು: *’ಅಯ್ಯಾಟ್ಟುಂಪಿಳ್ಳಿ’.

ಇಟ್ಟಿಗೆ ಭಟ್ಟಿಯ ಕೆಲಸದಾಳುಗಳು ಮಧ್ಯಾಹ್ನದೂಟಕ್ಕೆ ಮೊದಲು ಕೈ ಕಾಲು ತೊಳೆಯಲು ಬರುವ ಮುನ್ನ ಬಟ್ಟೆ ಒಗೆಯುವುದನ್ನು ಮುಗಿಸಿ ಹೊರ ಬರಲು ಅಮ್ಮು ಅವಸರ ಪಟ್ಟಳು. ಅವರುಗಳೆಲ್ಲ ಬಂದು ಹೊಳೆಗಿಳಿದರೆ ನೀರೆಲ್ಲ ತಿಳಿಹಾಲೆರೆದ ಚಹಾದಂತೆ ಕದಡಿ ಹೋಗುವುದು. ಮಡಿ ಮಾಡಿರಿಸಿದ ಬಟ್ಟೆಗಳ ಮೇಲೆಲ್ಲ ಕೆಸರಿನ ಗೋಪೀಚಂದನ ಗೆರೆಗಳು ಸಿಡಿಯುವುವು.

ಅಷ್ಟರೊಳಗೆ ತಂಡಾಂಬಾಟ್ ಶಾರದೆ ಮತ್ತು ನಾಟುಕುಳಂ ಭವಾನಿಯಮ್ಮ ಒಂದೊಂದು ಬಟ್ಟೆ ಗಂಟು ಹಿಡಿದು ಅಲ್ಲಿಗೆ ಬಂದರು.

‘ಆ ನಾರಾಪಿಳ್ಳಣ್ಣ ಹೇತು ತೊಳಕೊಂಡು ಹೋದನಾ ಅಮ್ಮೂ?’ ಶಾರದೆ ಬಟ್ಟೆ ಗಂಟನ್ನು ಕೆಳಗಿಟ್ಟು ಬೇರಾರೋ ಒಗೆದಾದಮೇಲೆ ಕಲ್ಲಿನಲ್ಲಿ ಅಂಟಿಕೊಂಡು ಉಳಿದಿದ್ದ ಹಳದಿ ಪಟಿಕಾರದಲ್ಲಿ ಹಿಮ್ಮಡಿಯ ಬಿಸಿ ಬಿರುಕುಗಳನ್ನು ಉಜ್ಜಿ ತೊಳೆಯುತ್ತ ಕೇಳಿದಳು.

‘ಅಯ್ಯಾಟ್ಟುಂಪಿಳ್ಳಿಯ ಹಿರಿಮನುಷಾ ಅಲ್ಲೇನು? ಈಗಷ್ಟೇ ಹೋದ ನೋಡು.’ ಅಮ್ಮು ಹೇಳಿದಳು.

‘ಓಹ್! ಸಮಾಧಾನ!’ ಶಾರದೆ ಕಾಲನ್ನುಜ್ಜುತ್ತಲೇ ಜಂಪರಿನ ಪಿನ್ನುಗಳನ್ನು ಕಳಚಿ ಚೌಕಳಿ ಲುಂಗಿಯನ್ನು ಮೇಲಕ್ಕೆ ಎಳೆದು ಕಟ್ಟಿ ಮೊಲೆಕಚ್ಚೆಯಾಗಿಸಿದಳು
.
‘ಆತಂಗೆ ಅದೇನು ರೋಗಾಂತ? ಅಯ್ಯಾಟ್ಟುಂಪಿಳ್ಳೀಲಿ ಪಾಯಖಾನೆ ಇಲ್ಲೇನು?’ ಭವಾನಿಯಮ್ಮ ಕಿಲುಬುಹಿಡಿದ ಹಲ್ಲುಗಳನ್ನು ಬೀರಿ ಸಹತಾಪ ತೋರಿದಳು.

‘ಅದಲ್ಲ ವಿಷ.’ ಅಮ್ಮು ಕಣ್ಣು ಮಿಟುಕಿಸಿ ಹೇಳಿದಳು, ‘ಕೆಲವರಿಗೆ ಹುಲ್ಲು ತಾಕಿದ್ರೇನೆ ಹೊರಕ್ ಬರೋದು!’

ಕೆನ್ನೆ ಮೇಲೆ ಕರಿದುಂಬಿಯಿರುವ ಅಮ್ಮುವಿನ ದ್ವಂದ್ವಾರ್ಥದಲ್ಲಿ ಮುಳುಗಿದ ಹೆಣ್ಣುಗಳ ನಗೆ ಹೊಳೆಯಲ್ಲಿ ಕುದಿದು ಚಿಮ್ಮಿತು.

*****

*ಪೆರಿಯಾರ್- ಕೇರಳದ ಮುಖ್ಯ ನದಿಗಳಲ್ಲೊಂದು, ಪೆರಿಯ=ದೊಡ್ಡ, ಆರ್=ನದಿ, ಹೊಳೆ.
*ಕಡವು- ಜನಬಳಕೆಯ ಹೊಳೆಯ ದಂಡೆ, ಸ್ನಾನ ಘಟ್ಟ, ದೋಣಿ ಕಟ್ಟೆ.
*ಸಂಬಂಧ- ಹಿಂದೆ ಕೇರಳದ ನಾಯರ್ ಸಮುದಾಯದ ಮಾತೃಮೂಲೀಯ ಕುಟುಂಬದಲ್ಲಿ ನಾಯರ್, ನಂಬೂದಿರಿ ಗಂಡುಗಳು ‘ಸಂಬಂಧ’ ಬೆಳೆಸಿ (ಮದುವೆಯಾಗಿ) ಹೆಣ್ಣಿನ ಮನೆಗೆ ಬಂದು ಹೋಗುವ ಸಂಪ್ರದಾಯವಿದ್ದು, ಹೆಣ್ಣು ತನ್ನ ಮನೆಯಲ್ಲೇ ಉಳಿಯುತ್ತಿದ್ದು, ಹಿರಿಯ ಮಾವ/ಸೋದರ ಮನೆ ಆಡಳಿತ ನಡೆಸುತ್ತಿದ್ದರು.
*ವಂಜೀಶ- ಕೇರಳದ ವಂಜಿನಾಡು (ತಿರುವಿತಾಂಕೂರು) ಪ್ರಾಂತದ ಅಧೀಶ(ರಾಜ).
*ಅನಂತಪುರ- ರಾಜಧಾನಿ ತಿರುವನಂತಪುರ.
*ಅಯ್ಯಾಟ್ಟುಂಪಿಳ್ಳಿ- ಅಯ್ಯಾ ಆಟ್ಟುಂ ಪಿಳ್ಳಿ; ‘ಅಯ್ಯಾ’ ಪಿಳ್ಳೆಯ ‘ಆಟ್ಟ್'(ಬೈದು ಅಟ್ಟುವಿಕೆ, ಥೂ/ಛೀತ್ಕಾರ)ನಿಂದ ಹೆಸರು ಪಡೆದ ಮನೆ, ಮನೆತನ, ಕುಟುಂಬ, ಸ್ಥಳ.