ಗೆಳೆಯರೆಲ್ಲ ಸೇರಿ ಏನೇನೋ ಸವಾಲು ಹಾಕಿಕೊಂಡು, ಅವರಲ್ಲಿ ಇಬ್ಬರು ಸ್ಮಶಾನಕ್ಕೆ ಹೋಗುವುದು, ದೆವ್ವ ಗೆಳೆಯನ ವೇಷ ಧರಿಸಿ ಬಂದರೆ ಪತ್ತೆ ಮಾಡಲೆಂದು ಕೋಡ್‌ವರ್ಡ್ ನಿಕ್ಕಿ ಮಾಡಿಕೊಳ್ಳುವುದು, ನಂತರ ಆಗುವ ಅವಾಂತರಗಳು, ಬೂದಿಯಲ್ಲಿ ಮುಳುಗೆದ್ದ ಕಜ್ಜಿ ನಾಯಿಯೊಂದು ಫಾಲೋ ಮಾಡುವುದು, ಧೈರ್ಯವಂತನೊಬ್ಬ ಸವಾಲು ಸ್ವೀಕರಿಸಿ ಮಧ್ಯರಾತ್ರಿಯಲ್ಲಿ ಸುಡುಗಾಡಿಗೆ ಹೋಗಿ, ಗುರುತಿಗೆಂದು ಗೂಟ ಬಡಿಯುವಾಗ ತನ್ನ ಬಟ್ಟೆಯನ್ನೂ ಸೇರಿಸಿ ಬಡಿದು, ದೆವ್ವ ಎಂದು ಹೆದರಿ ಸಾಯುವುದು… ಹೀಗೆ, ದೇವರು, ದೆವ್ವ, ಜ್ಯೋತಿಷ್ಯ ಬರೀ ಪೊಳ್ಳು ಎಂದು ಪರೋಕ್ಷವಾಗಿ ಸಾರುವ ಇಂಥವೇ ಕತೆಗಳನ್ನು ಓದೋರು.
ಸಹ್ಯಾದ್ರಿ ನಾಗರಾಜ್‌ ಬರೆಯುವ ‘ಸೊಗದೆ’ ಅಂಕಣ

 

ಗಾಳಿಹಳ್ಳಿ ಕ್ರಾಸು ದಾಟಿದೆ. ಕೊನೆಯ ಬೀದಿ ದೀಪವೂ ಹಿಂದೆ ಸರಿಯಿತು. ಗಡಿಯಾರ ನೋಡಿಕೊಂಡಾಗ ಇನ್ನೇನು ಎಂಟು ಗಂಟೆ. ನನ್ನೂರಿಗೆ ಇನ್ನೂ ಒಂಬತ್ತು ಕಿಲೋಮೀಟರ್. ಪೆಡಲ್ ಜೋರು ಒತ್ತಿದ್ದೇ ತಡ, ಯುದ್ಧಭೂಮಿಯ ಮುಂತುದಿಯಲ್ಲಿರುವ ಸೈನಿಕನಂತೆ ನುಗ್ಗತೊಡಗಿತು ಅಟ್ಲಾಸ್ ಸೈಕಲ್ಲು. ಬೆಳಕಿಗೆ ಅಂತ ನನ್ನ ಬಳಿ ಎಂತ ಇರಲಿಲ್ಲ. ನಕ್ಷತ್ರಗಳ ಮಂಕು ಬೆಳಕು, ಆಗಾಗ ಕರುಣೆಯಿಂದಲೋ ಉಡಾಫೆಯಿಂದಲೋ ಚೂರು ಬೆಳಕು ಎಸೆದುಹೋಗುವ ವಾಹನಗಳು, ಕಿಲೋಮೀಟರಿಗೊಂದರಂತೆ ತೋಟದಮನೆಯ ಲೈಟು, ದಾರಿ ಮಧ್ಯದಲ್ಲಿ ದೋರನಾಳು, ಹೊಸಹಳ್ಳಿ ಎಂಬೆರಡೂರು ಮತ್ತು ಶಿವಾಜಿನಗರ, ಬೈರಾಪುರ ಎಂಬೆರಡೂರಿನ ಗೇಟು… ಓಹ್, ಬೇಕಾದಷ್ಟಾಯಿತು. ರಸ್ತೆಯಂತೂ ಊಟದ ತಟ್ಟೆಯಷ್ಟೇ ಚಂದ ಪರಿಚಿತ. ಹಂಗಾಗಿ, ಸೈಕಲ್ ವೇಗದಲ್ಲಿ ರಾತ್ರಿಗೂ ಹಗಲಿಗೂ ಇಲ್ಲವೆನ್ನುವಷ್ಟು ಕಡಿಮೆ ಫರಕು.

ತರೀಕೆರೆಯಿಂದ ಲಿಂಗದಹಳ್ಳಿವರೆಗೆ ರಸ್ತೆಯ ಎರಡೂ ಬದಿ ಆಲದಮರಗಳ ಕಾರುಬಾರು. ಈ ಚಂದ ಶುರುವಾಗುವುದು ತರೀಕೆರೆ ಪೇಟೆಯ ಹೊರವಲಯ ಗಾಳಿಹಳ್ಳಿಯಿಂದ. ಹಂಗಾಗಿ, ಬೇರೆಲ್ಲ ಕಡೆಗಿಂತ ಇಲ್ಲಿ ಚೂರು ಜಾಸ್ತಿಯೇ ಕತ್ತಲು. ಕತ್ತಲಿನಲ್ಲಿ ಸೈಕಲ್ ಜೋರು ಓಡಿಸಿ ಅಭ್ಯಾಸ ನನಗೆ. ಭಯಕ್ಕಂತೂ ಅಲ್ಲ. ರಸ್ತೆಯಲ್ಲಿ ಕತ್ತಲೆ ಉಂಟು ಅಂದ್ರೆ, ಬೇರಾವುದೇ ವೆಹಿಕಲ್ ಇಲ್ಲ ಅಂತರ್ಥ. ಆ ಹೊತ್ತಿನಲ್ಲಿ ಜೋರು ಸೈಕಲ್ ಓಡಿಸಿದರೆ, ಬೇಗನೆ ಮನೆ ತಲುಪಬಹುದು ಎಂಬ ಲೆಕ್ಕಾಚಾರ. ಅಂದೂ ಅಂಥದ್ದೇ ವೇಗದಲ್ಲಿತ್ತು ಸೈಕಲ್.

ಗಾಳಿಹಳ್ಳಿ ಕ್ರಾಸು ದಾಟಿ, ಬಲಕ್ಕಿರುವ ಕೆರೆ ಕೋಡಿಯ ಪುಟಾಣಿ ಸೇತುವೆ ಹಾಯ್ದು ಮುಂದೆ ಬಂದರೆ ಸ್ವಲ್ಪ ಏರು ರಸ್ತೆ. ಆ ದಿಬ್ಬ ಮುಗಿದು ರಸ್ತೆ ಸಪಾಟಾಗುತ್ತಲೇ ಶಿವಾಜಿನಗರ ಗೇಟು. ಯಾವುದೂ ವೆಹಿಕಲ್ ಇರಲಿಲ್ಲ. ಇನ್ನೊಂದು ತಿರುವು ತೆಗೆದುಕೊಂಡರೆ ದೋರನಾಳು. ದಿಬ್ಬ ಮುಗಿಯುತ್ತಲೇ ಸೈಕಲ್ ವೇಗ ಹೆಚ್ಚಿಸಿಕೊಂಡಿತು. ಇನ್ನೇನು ಶಿವಾಜಿನಗರ ಗೇಟ್ ದಾಟಿದೆ ಎನ್ನುವಷ್ಟರಲ್ಲಿ, ಬಲಭಾಗದ ಆಲದಮರದಡಿ ಕೆಂಡದ ಮಿಂಚೊಂದು ಸರಿದಂತಾಯಿತು! ಎದೆ ಬಡಿತ ಹೆಚ್ಚಾಯ್ತು. ಸಡನ್ ಬ್ರೇಕ್ ಹಾಕಿದೆ. ಸೈಕಲ್‌ನ ಟಯರ್ರು ಯರ್ರಾಬಿರ್ರಿ ಬಯ್ಯುತ್ತ, ಲೇನ್ ಬದಲಿಸಿ, ಆ ಆಲದಮರದತ್ತಲೇ ಹೊರಳಿ ಸ್ಟಾಪು ಕೊಟ್ಟಿತು.

ಸುಮಾರು ಇಪ್ಪತ್ತೈದು ಅಡಿಯಷ್ಟು ಎತ್ತರ, ಐವತ್ತರಿಂದ ಅರವತ್ತು ಅಡಿ ಅಗಲಕ್ಕೆ ಹರಡಿಕೊಂಡಿದ್ದ ಪೊಗದಸ್ತಾದ ಆಲದಮರವದು. ತಿಂಗಳ ಹಿಂದಷ್ಟೇ, ತರೀಕೆರೆಯಿಂದ ತಣಿಗೇಬೈಲ್‌ಗೆ ಹೋಗುತ್ತಿದ್ದ ಸಿದ್ದರಾಮೇಶ್ವರ (ಸಿಎನ್‌ಟಿ) ಎಂಬ ಡಕೋಟ ಬಸ್ಸು, ಪಂಕ್ಚರ್ ಆಗಿಯೋ ಅಥವಾ ಬ್ರೇಕ್ ಫೇಲ್ ಆಗಿಯೋ, ಅಂತೂ ಲೇನ್ ಬದಲಿಸಿ, ಬಲದಲ್ಲಿದ್ದ ಇದೇ ಆಲದಮರಕ್ಕೆ ಸಮ್ಮಾ ಢಿಕ್ಕಿ ಹೊಡೆದಿತ್ತು. ಘಟನೆಯಲ್ಲಿ, ತರೀಕೆರೆಯ ಎಸ್‌ಜೆಎಂ ಡಿಗ್ರಿ ಕಾಲೇಜಿನ ವಿದ್ಯಾರ್ಥಿಯೊಬ್ಬಳು ತೀರಿಕೊಂಡಿದ್ದಳು. ಹಲವರಿಗೆ ಗಂಭೀರ ಪೆಟ್ಟಾಗಿತ್ತು. ಸದ್ಯಕ್ಕೆ ನನ್ನ ಅಟ್ಲಾಸ್ ಸೈಕಲ್ಲು ಅದೇ ಆಲದಮರದ ಬಳಿ ಏದುಸಿರು ಬಿಡುತ್ತ ನಿಂತಿತ್ತು.

*****

ಮೂರ್ತಿ ಸರ್ರು ತಮ್ಮ ಬಳಿ ಇದ್ದ ಆ ಕಪ್ಪು ಪುಸ್ತಕವನ್ನು ಕ್ಲಾಸಿಗೆ ತಂದ ದಿನ ನಮಗೆಲ್ಲ ಹಬ್ಬ. ಮೊದಲೇ ಗುರುತು ಮಾಡಿಟ್ಟುಕೊಂಡು ಬಂದಿದ್ದ ಪುಟ ತೆರೆದು, ಆಕಾಶವಾಣಿಯ ದನಿಯಂತೆ ಓದಲು ಶುರುಮಾಡಿದರೆ, ಆ ಕೊಠಡಿ ಎಂದೂ ಕಂಡಿರದಷ್ಟು ನಿಶ್ಶಬ್ದ. ಗೆಳೆಯರೆಲ್ಲ ಸೇರಿ ಏನೇನೋ ಸವಾಲು ಹಾಕಿಕೊಂಡು, ಅವರಲ್ಲಿ ಇಬ್ಬರು ಸ್ಮಶಾನಕ್ಕೆ ಹೋಗುವುದು, ದೆವ್ವ ಗೆಳೆಯನ ವೇಷ ಧರಿಸಿ ಬಂದರೆ ಪತ್ತೆ ಮಾಡಲೆಂದು ಕೋಡ್‌ವರ್ಡ್ ನಿಕ್ಕಿ ಮಾಡಿಕೊಳ್ಳುವುದು, ನಂತರ ಆಗುವ ಅವಾಂತರಗಳು, ಬೂದಿಯಲ್ಲಿ ಮುಳುಗೆದ್ದ ಕಜ್ಜಿ ನಾಯಿಯೊಂದು ಫಾಲೋ ಮಾಡುವುದು, ಧೈರ್ಯವಂತನೊಬ್ಬ ಸವಾಲು ಸ್ವೀಕರಿಸಿ ಮಧ್ಯರಾತ್ರಿಯಲ್ಲಿ ಸುಡುಗಾಡಿಗೆ ಹೋಗಿ, ಗುರುತಿಗೆಂದು ಗೂಟ ಬಡಿಯುವಾಗ ತನ್ನ ಬಟ್ಟೆಯನ್ನೂ ಸೇರಿಸಿ ಬಡಿದು, ದೆವ್ವ ಎಂದು ಹೆದರಿ ಸಾಯುವುದು… ಹೀಗೆ, ದೇವರು, ದೆವ್ವ, ಜ್ಯೋತಿಷ್ಯ ಬರೀ ಪೊಳ್ಳು ಎಂದು ಪರೋಕ್ಷವಾಗಿ ಸಾರುವ ಇಂಥವೇ ಕತೆಗಳನ್ನು ಓದೋರು. ನಾವು ಕಣ್ಣಗಲಿಸಿ, ಕಿವಿ ನಿಮಿರಿಸಿ, ಕುಂತಲ್ಲಿಯೇ ಗಲ್ಲಕ್ಕೆ ಕೈ ಊರಿ ಬಾಗಿ, ಅವರು ಉಸುರುತ್ತಿದ್ದ ಒಂದೇ ಒಂದು ಪದವೂ ದಾರಿ ತಪ್ಪಿಹೋಗದಂತೆ ಜತನದಿಂದ ಎದೆಯೊಳಕ್ಕೆ ಇಳಿಸಿಕೊಳ್ಳುತ್ತಿದ್ದೆವು. ಕ್ಲಾಸು ಮುಗಿದಾಗ ನಾವು ನಾವಾಗಿರುತ್ತಿರಲಿಲ್ಲ!

ಕತ್ತಲಿನಲ್ಲಿ ಸೈಕಲ್ ಜೋರು ಓಡಿಸಿ ಅಭ್ಯಾಸ ನನಗೆ. ಭಯಕ್ಕಂತೂ ಅಲ್ಲ. ರಸ್ತೆಯಲ್ಲಿ ಕತ್ತಲೆ ಉಂಟು ಅಂದ್ರೆ, ಬೇರಾವುದೇ ವೆಹಿಕಲ್ ಇಲ್ಲ ಅಂತರ್ಥ. ಆ ಹೊತ್ತಿನಲ್ಲಿ ಜೋರು ಸೈಕಲ್ ಓಡಿಸಿದರೆ, ಬೇಗನೆ ಮನೆ ತಲುಪಬಹುದು ಎಂಬ ಲೆಕ್ಕಾಚಾರ. ಅಂದೂ ಅಂಥದ್ದೇ ವೇಗದಲ್ಲಿತ್ತು ಸೈಕಲ್.

ಈ ಮೂರ್ತಿ ಸರ್ ಬಗ್ಗೆ ಚೂರು ಹೇಳಬೇಕು ನಿಮಗೆ. ಹೈಯರ್ ಪ್ರೈಮರಿಯಲ್ಲಿ ನಮಗವರು ವಿಜ್ಞಾನ ಮತ್ತು ಇಂಗ್ಲಿಷ್ ಕ್ಲಾಸು ತಗೋತಿದ್ದವರು. ಆ ಕ್ಲಾಸುಗಳ ಘಮ್ಮತ್ತೇ ಘಮ್ಮತ್ತು. ಅವರ ಪಾಠದ ಎದುರು ಯುನಿವರ್ಸಿಟಿ ಮೇಷ್ಟ್ರುಗಳನ್ನೂ ಧಾರಾಳ ನಿವಾಳಿಸಿ ಎಸೀಬಹುದು. ಅಷ್ಟು ಸರಳ, ಅಷ್ಟು ಚಂದ ಮತ್ತು ಅಷ್ಟೇ ವಿದ್ವತ್ಪೂರ್ಣ. ಶಿಸ್ತಿನಲ್ಲಿ ಮಾತ್ರ ಅತಿರೇಕ ಎಂಬಷ್ಟು ಎತ್ತರ. ಕ್ಲಾಸ್ ಟೈಮಿಗೆ ಸರಿಯಾಗಿ ಎಲ್ಲರೂ ರೂಮಿನಲ್ಲಿರಬೇಕು, ಕ್ಲಾಸು ತಗೊಂಡ ನಂತರ ಯಾರೂ ಒಳಕ್ಕೆ ಬರೋ ಹಾಗಿಲ್ಲ, ಕ್ಲಾಸು ನಡೀವಾಗ ಯಾರೂ ನಗುವಂತಿಲ್ಲ, ಪಿಸುಗುಡುವಂತಿಲ್ಲ, ಆಚೆ ಹೋಗುವಂತಿಲ್ಲ… ಇತ್ಯಾದಿ ಶಿಸ್ತಲ್ಲ. ಇದನ್ನೆಲ್ಲ ಅವರ್ಯಾವತ್ತೂ ಹೇಳಿದವರೇ ಅಲ್ಲ.

ಅವರ ಶಿಸ್ತು ಬಹಳ ಸರಳ. ಯಾವುದೇ ವಿದ್ಯಾರ್ಥಿ ತಾಯತ ಕಟ್ಟಿಕೊಳ್ಳುವಂತಿರಲಿಲ್ಲ. ಕುಂಕುಮ, ವಿಭೂತಿ, ನಾಮ ಇತ್ಯಾದಿ ಎಂತಾನೂ ಬಳಿದುಕೊಳ್ಳುವಂತಿರಲಿಲ್ಲ. ದೇವರ ಫೋಟೊ ಇರೋ ಸ್ಟಿಕ್ಕರ್ರು, ಲಾಕೆಟ್ಟು ಊಹುಂ. ನೋಟ್ಸಿನಲ್ಲಿ ಆ ನಮಃ ಈ ನಮಃ ಅಂತೆಲ್ಲ ಏನೂ ಬರೆಯುವಂತಿರಲಿಲ್ಲ. ಸ್ವಾರಸ್ಯ ಅಂದ್ರೆ, ಈ ಶಿಸ್ತನ್ನೆಲ್ಲ ಪಾಲಿಸದವರಿಗೆ ಅವರೇನೂ ಪೆಟ್ಟು ಕೊಡುತ್ತಿರಲಿಲ್ಲ. ಬದಲಿಗೆ, ಹತ್ತಿರ ಕರೆದು ಒಂದಷ್ಟು ಕೇಳ್ವಿ ಕೇಳ್ತಿದ್ದರು. ಅದರ ಉದ್ದೇಶ ಏನು, ಅದು ಹೇಗೆ ಮೂಢನಂಬಿಕೆ, ಆ ಬೂಟಾಟಿಕೆಯಿಂದ ಏನೇನು ಅಡ್ಡಪರಿಣಾಮ ಆಗ್ತದೆ, ಯಾಕೆ ಅಂಥದ್ದಕ್ಕೆಲ್ಲ ದಾಸರಾಗಬಾರದು ಅಂತ ಚಂದದೊಂದು ಚುಟುಕು ಭಾಷಣ ಮಾಡ್ತಿದ್ದರಷ್ಟೆ. ಅಷ್ಟು ಹೇಳಿದರೂ ಬದಲಾಗದಿದ್ದರೆ ಚೂರು ಗದರೋರು. ಯಾರಾದರೂ, “ಅಮ್ಮ-ಅಪ್ಪ ಬಯ್ತಾರೆ,” ಅಂತೇನಾದ್ರೂ ಹೇಳಿದ್ರೆ, “ನಾಳೆ ಕರ್ಕಂಡ್ ಬಾ ಅವ್ರಿಬ್ರುನ್ನೂ,” ಅಂತ ಫರ್ಮಾನು. ಮರುದಿನ ಮೂರೂ ಜನಕ್ಕೂ ಸ್ಪೆಷಲ್ ಕ್ಲಾಸು. ಹೀಗೆ… ಅವರ ಕ್ಲಾಸಿನ ನೆಪದಲ್ಲಿ ಇಡೀ ಶಾಲೆಯ ವಿದ್ಯಾರ್ಥಿಗಳು ತಮ್ಮ ಎಳೆಯ ವಯಸ್ಸಿನಲ್ಲೇ ಸಾಕಷ್ಟು ಮೌಢ್ಯಗಳ ಬಗ್ಗೆ ಗೊತ್ತು ಮಾಡಿಕೊಂಡಿದ್ದರು. ಜೊತೆಗೆ, ಊರಿನ ಜನ ಕೂಡ.

ಆದರೆ, ಕತೆಗಳನ್ನು ಓದಿಹೇಳುವಾಗ ಮಾತ್ರ ಅದನ್ನು ಬರೆದವರು ಯಾರು ಇತ್ಯಾದಿ ವಿವರ ಹೇಳಿರಲೇ ಇಲ್ಲ ಮೇಷ್ಟ್ರು. ಪಿಯುಸಿ ಹೊತ್ತಿಗೆ ಅವರು ಓದಿಹೇಳಿದ್ದ ಒಂದೊಂದೇ ಕತೆಗಳು ನಮ್ಮ ಮುಂದೆ ತೆರೆದುಕೊಂಡವು. ಅಲ್ಲಿ ತೇಜಸ್ವಿ ಕತೆಗಳಿದ್ದವು. ಎಚ್ ನರಸಿಂಹಯ್ಯನವರ ಭಾಷಣಗಳಿದ್ದವು. ಅಬ್ರಹಾಂ ಟಿ ಕೋವೂರ್ ತೆರೆದಿಟ್ಟ ಮನಮುಟ್ಟುವ ಘಟನೆಗಳಿದ್ದವು. ಇದರ ಜೊತೆ, ಎ ಎನ್ ಮೂರ್ತಿರಾಯರ ‘ದೇವರು’ ಕೂಡ ಸೇರಿ ರೊಚ್ಚಿಗೆಬ್ಬಿಸಿದ ಪರಿಣಾಮ, ಹೈಸ್ಕೂಲಿನ ಒಂದಷ್ಟು ಗೆಳೆಯರು ಒಟ್ಟಾಗಿ, ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಸಹಭಾಗಿತ್ವದಲ್ಲಿ ‘ಕಲ್ಪನಾ ಚಾವ್ಲ ವಿಜ್ಞಾನ ಪ್ರಸಾರ ಕೇಂದ್ರ’ ಅಂತೊಂದು ಶುರುಮಾಡಿದೆವು. ತರೀಕೆರೆ ತಾಲೂಕಿನ ಎಲ್ಲ ಹೈಸ್ಕೂಲುಗಳಲ್ಲಿ, ಒಂದಷ್ಟು ಪಿಯು ಕಾಲೇಜುಗಳಲ್ಲಿ, ಎಸ್‌ಜೆಎಂ ಡಿಗ್ರಿ ಕಾಲೇಜಿನಲ್ಲಿ, ‘ದೇವರು, ದೆವ್ವ ಮತ್ತು ಜ್ಯೋತಿಷ್ಯ ಹೇಗೆ ಪೊಳ್ಳು, ಅದರಿಂದ ನಮ್ಮ ಬದುಕಿನ ಮೇಲೆ ಯಾವೆಲ್ಲ ಬಗೆಯ ಪರಿಣಾಮ ಆಗುತ್ತೆ’ ಅಂತ ಸರಣಿ ಉಪನ್ಯಾಸ ಕಾರ್ಯಕ್ರಮ ಮಾಡಿದೆವು. ಇದೆಲ್ಲವನ್ನೂ ಮಾಡುವಷ್ಟೊತ್ತಿಗೆ ಮೂರ್ತಿ ಮೇಷ್ಟ್ರಿಗೆ ವರ್ಗಾವಣೆ ಆಗಿತ್ತು.

ಅಂದು, ತೇಜಸ್ವಿಯ ‘ಮಾಯಾಮೃಗ’ ಕತೆ ಓದಿ ಮುಗಿಸಿದ ಮೇಲೆ ಮೇಷ್ಟ್ರು ಬಹಳ ಗಂಭೀರ ದನಿಯಲ್ಲಿ, ಬದುಕಿಡೀ ನೆನಪಿರುವಂಥ ಒಂದು ಅತ್ಯದ್ಭುತ ಮಾತು ಹೇಳಿದ್ದರು: “ಅಸಹಜ, ಅತಿಮಾನುಷ ಅನ್ಸೋ ಯಾವುದೇ ಘಟನೆ ನಡೆದರೂ, ಹೆದರಿ ತಕ್ಷಣ ಜಾಗ ಖಾಲಿ ಮಾಡೋದ್ನ ಬಿಡ್ಬೇಕು. ಭಯ ಬಿಟ್ಟು, ಅಲ್ಲಿ ಆಗಿದ್ದೇನು, ಆ ಘಟನೆ ನಡೆದಿದ್ದು ಹೆಂಗೆ, ಅದಕ್ಕೆ ನಿಜವಾದ ಕಾರಣ ಏನಿರ್ಬೋದು ಅಂತ ಸಾವಧಾನದಿಂದ ಯೋಚಿಸಿಬಿಟ್ರೆ ನಿಮ್ಗೆ ನಿಜ ಏನೂಂತ ಗೊತ್ತಾಗುತ್ತೆ.”

*****

ಸಾವರಿಸಿಕೊಂಡ ನಂತರ ಸೈಕಲ್‌ನಿಂದ ಇಳಿದು, ಸ್ಟಾಂಡ್ ಹಾಕಿ ಆಲದಮರದ ಸಂದಿನಿಂದ ಆಕಾಶ ದಿಟ್ಟಿಸಿದೆ. ಮೋಡವೇನೂ ಆಗಿರಲಿಲ್ಲ. ಹಾಗಾಗಿ, ಮರದಡಿ ದಿಢೀರ್ ಕಂಡ ಬೆಳಕು ಮಿಂಚಿನದ್ದಾಗಿರಲಿಲ್ಲ. ಯಾರಾದರೂ ಬೆಂಕಿ ಹಾಕಿ, ಅದರ ಕೆಂಡ ಏನಾದರೂ ಉಳಿದಿರಬಹುದೇ ಗಮನಿಸಿದರೆ, ಅಂಥದ್ಯಾವುದೇ ಕುರುಹು ಇಲ್ಲ. ಆಲದಮರದ ಪಕ್ಕ ತಂತಿಬೇಲಿಯಾಚೆಗೆ ಅಡಕೆ ತೋಟ. ಅಲ್ಲೇ, ಎದುರಿಗೆ ಕಾಣುವಂತೆ ತೋಟದ ಮನೆ. ಮನೆ ಎದುರೊಂದು ಲೈಟು. ಅದರ ಬೆಳಕು ಆಲದಮರದಡಿ ಧಾರಾಳ ಬೀಳುತ್ತಿತ್ತು. ಮರದ ಬುಡಕ್ಕೆ ಸರಿದು, ಬೆಳಕು ಕಾಣಿಸಿಕೊಂಡ ಜಾಗವನ್ನು ಅಂದಾಜಿಸಿ, ಅದರ ಆಸುಪಾಸು ಗಮನಿಸಿದೆ. ಆಕ್ಸಿಡೆಂಟಿನ ಪಳೆಯುಳಿಕೆಗಳು, ಒಂದಷ್ಟು ಚಪ್ಪಲಿ, ಬಟ್ಟೆಯ ತುಣುಕು, ಒಣಗಿದ ಗಿಡಗಳ ತರಗು ಇತ್ಯಾದಿಗಳ ನಡುವೆ, ಅಂಗೈನಷ್ಟು ಅಗಲದ ಒಂದಷ್ಟು (ಕಿಟಕಿಯ) ಗಾಜಿನ ತುಣುಕುಗಳು ಕಂಡವು. ಮೊಗದಲ್ಲಿ ನಗು ಮೂಡಿತು. ತಕ್ಷಣವೇ ಅಲ್ಲಿಂದ ಹಿಂದೆ ಸರಿದು, ಸೈಕಲ್‌ನಲ್ಲಿ ಬರುವಾಗ ಮಿಂಚು ಕಂಡಂತಾದ ಜಾಗಕ್ಕೆ ವಾಪಸ್ ನಡೆದೆ. ಅಲ್ಲಿಂದ ಆಲದಮರದತ್ತ ನಿಧಾನ ನಡೆಯೊಡಗಿದಾಗ, ಒಂದು ಹಂತದಲ್ಲಿ ಆ ಮಿಂಚು ಮತ್ತೆ ಪ್ರತ್ಯಕ್ಷವಾಯಿತು! ಆದರೆ, ಬೆಳಕಿನ ತೀವ್ರತೆ ಈ ಬಾರಿ ಕಡಿಮೆ ಇತ್ತು. ನಿಟ್ಟುಸಿರು ಬಿಟ್ಟೆ. ಮರದಡಿ ಇದ್ದ ಗಾಜಿನ ಚೂರುಗಳ ಮೇಲೆ ತರಗು ಮುಚ್ಚಿ, ಸೈಕಲ್ಲೇರಿ ವೇಗ ಹೆಚ್ಚಿಸಿದೆ. ಏನನ್ನೋ ಸಾಧಿಸಿದ ಖುಷಿ.

ಅಲ್ಲಿ ಆಗಿದ್ದಿಷ್ಟೆ… ನಾನು ಗಾಳಿಹಳ್ಳಿ ಕ್ರಾಸ್ ದಾಟುವಾಗ ಇನ್ನೇನು ಎಂಟು ಗಂಟೆ ಆಗಲಿಕ್ಕಿತ್ತು. ಶಿವಾಜಿನಗರ ಗೇಟ್ ತಲುಪುವ ಹೊತ್ತಿಗೆ ಎಂಟು ಗಂಟೆಯ ಮೇಲೆ ಒಂದು ನಿಮಿಷ ಆಗಿದ್ದಿರಬಹುದು. ನಮ್ಮಲ್ಲೆಲ್ಲ ಎಂಟು ಗಂಟೆಗೆ ಎಲೆಕ್ಟ್ರಿಸಿಟಿಯ ಫೇಸ್ ಬದಲಿಸ್ತಾರೆ. ಅಂದ್ರೆ, ರಾತ್ರಿ ಎಂಟು ಗಂಟೆಯ ಹೊತ್ತಿಗೆ ಕರೆಂಟು, ಟು ಫೇಸ್‌ನಿಂದ ತ್ರೀ ಫೇಸ್‌ಗೆ ಬಡ್ತಿ ಹೊಂದುತ್ತೆ. ಈ ಫೇಸ್ ಬದಲಾಗುವಾಗ ಕರೆಂಟ್ ಸಂಪೂರ್ಣ ಬಂದ್ ಆಗಿ, ಮತ್ತೆ ಚಾಲೂ ಆಗುವುದುಂಟು. ನಾನು ಶಿವಾಜಿನಗರ ಗೇಟ್ ದಾಟುವ ಹೊತ್ತಿಗೆ, ಈ ಮೊದಲೇ ಹೋಗಿದ್ದ ಕರೆಂಟು ವಾಪಸಾಗಿತ್ತು. ಮೊದಲೇ ಆನ್‌ನಲ್ಲಿದ್ದ, ಆಲಮರದ ಪಕ್ಕದ ತೋಟದಮನೆಯ ಹೊರಗಿನ ಲೈಟು ಕರೆಂಟು ಬಂದೊಡನೆ ಝಗ್ಗನೆ ಬೆಳಗಿತ್ತು. ಕರೆಂಟು ಹೋಗಿ-ಬಂದು, ಆ ಲೈಟು ಬೆಳಗುವ ಹೊತ್ತಿಗೆ ಸರಿಯಾಗಿ, ಲೈಟಿನ ಬೆಳಕು ಮರದಡಿಯ ಗಾಜಿನ ಮೇಲೆ ಬಿದ್ದು ಪ್ರತಿಫಲಿಸಬಹುದಾದ ಕರಾರುವಾಕ್ ಕೋನದಲ್ಲಿ ನಾನಿದ್ದೆ! ಮೊದಲೇ ಬೆಳಕು ಇದ್ದಿದ್ದರೆ, ಅಂದರೆ, ತೋಟದಮನೆಯ ಲೈಟು ಬೆಳಗುತ್ತಲೇ ಇದ್ದಿದ್ದರೆ, ನನಗೆ ಎದುರಾಗಬಹುದಾಗಿದ್ದ ಪ್ರತಿಫಲನದ ಕಣ್ಣು ಕೋರೈಸುವ ಮಿಂಚು ಸಾಧಾರಣ ಬೆಳಕಾಗಿ ಬದಲಾಗುತ್ತಿತ್ತು ಅಥವಾ ಅದು ಎಲ್ಲಿನ ಬೆಳಕು ಎಂದು ನನಗೆ ಸುಲಭವಾಗಿ ಅರ್ಥವಾಗಿಬಿಡುತ್ತಿತ್ತು. ಆದರೆ, ಆಗಿದ್ದೇ ಬೇರೆ.