ಕವಿ, ಕಥೆಗಾರ ಜಯಂತ ಕಾಯ್ಕಿಣಿ ಅವರ ‘ಒಂದು ಜಿಲೇಬಿ’ ಕವನ ಸಂಕಲನದಿಂದ ಆಯ್ದ ಕವನ ‘ಒಂದು ಸರೀ ಕಡ್ಡಿಗಾಗಿ’ ತೀರಾ ಸ್ಥಳೀಯ ನೋಟಗಳ ಪ್ರತಿಮೆಗಳನ್ನು ಹೆಕ್ಕಿ ತೆಗೆದುಕೊಂಡು ಕಾವ್ಯ ದುಕೂಲದಲ್ಲಿ ಅವುಗಳನ್ನು ಬಂಧಿಸಿದ ಪರಿ ವಿಶೇಷವಾದುದು. ಕವನವು ಆಧ್ಯಾತ್ಮಿಕ ಹೊಳಹುಗಳನ್ನಷ್ಟೇ ಅಲ್ಲ, ತತ್ವಶಾಸ್ತ್ರಕ್ಕೆ ಸಂಬಂಧಿಸಿದ ಜಿಜ್ಞಾಸೆಯ ಕಿಡಿ ಹಚ್ಚುವ ಸಾಮರ್ಥ್ಯ ಹೊಂದಿದೆ. ಅಂತಹ ವಿಶ್ಲೇಷಣೆಯೊಂದನ್ನು ಇಲ್ಲಿ ಮಂಡಿಸಿದ್ದಾರೆ ಲೇಖಕಿ ಗೀತಾ ಹೆಗಡೆ

 

‘ಇಟ್ ಮಸ್ಟ್ ಗೋ ಫರ್ದರ್ ಸ್ಟಿಲ್;
ದಟ್ ಸೌಲ್ ಮಸ್ಟ್ ಬಿಕಂ ಇಟ್ಸ್ ಓನ್ ಬಿಟ್ರೇಯರ್.
ಇಟ್ಸ್ ಓನ್ ಡೆಲಿವರರ್;
ದಿ ಒನ್ ಆಕ್ಟಿವಿಟಿ, ಅಂಡ್ ದಿ ಮಿರರ್ ಟರ್ನ್ ಲ್ಯಾಂಪ್.’

ಸೃಜನಕ್ರಿಯೆಗೆ ಯೇಟ್ಸ್ ನ ವ್ಯಾಖ್ಯಾನವಿದು. ಈ ಬಿಟ್ರೇಯರ್ ಅಥವಾ/ಮತ್ತು ಡೆಲಿವರರ್ ಆಗಬೇಕಾದರೆ ಆ ನಿತಾಂತ ಒಳಪ್ರಜ್ಞೆಗೆ ಒಂದು ಚಿಕ್ಕದಾದ, ಸೂಕ್ಷ್ಮ ಸಂಘಾತ ಸ್ಪರ್ಶಿಸಿ ಸಂವೇದನೆಯ ಅಲೆಯೆಬ್ಬಿಸಬೇಕಾಗುತ್ತದೆ. ನಿಶ್ಚಲತತ್ವದಲ್ಲಿ ಜೀವನ್ಮುಕ್ತಿಯ ಸಂಭವಕ್ಕೆ ಅದೇ ಕಾರಣವಾಗುವುದಾಗ. ಇದು ಕಾವ್ಯಕ್ರಿಯೆಯಲ್ಲಿ ಅಹರ್ನಿಶಿ ನಡೆಯುವ ಚಮತ್ಕಾರ.

ಮುಕ್ತಿಯು ಬಿಡುಗಡೆಯ ಪ್ರತ್ಯರ್ಥಿಯಾಗಬೇಕಾದರೂ ಅದೂ ಕೂಡ ಸಮ್ಯಕ್‍ಭವ -ಕ್ರಿಯೆಗೆ, ಅನುಭವ-ಕ್ರಿಯೆಗೆ, ಅನುಭಾವ-ಕ್ರಿಯೆಗೆ ಒಳಗಾಗಲೇಬೇಕು ಎಂದಾಯಿತು. ಇಂಥ ಪ್ರಕ್ರಿಯೆಗಳ ಒಂದು ನಿರ್ವಚನದಂತೆ ಕವಿ ಜಯಂತ ಕಾಯ್ಕಿಣಿಯವರ ‘ಒಂದು ಸರೀ ಕಡ್ಡಿಗಾಗಿ’ [‘ಒಂದು ಜಿಲೇಬಿ’ ಕವನಸಂಕಲನ] ಕವನ ತೋರುತ್ತದೆ. ಅಮೂರ್ತತೆಯಲ್ಲಿ ಹೃದ್ಗೋಚರವಾದುದನ್ನು, ಮೂರ್ತಾತ್ಮಕ ಶಬ್ದಮುಖೇನ ದೃಗ್ಗೋಚರವಾಗಿಸುವಂತೆ, ಅದೂ-ಕವನವೊಂದನ್ನು ವ್ಯಾಖ್ಯಾನಿಸುವುದೆಂದರೆ, ‘ಕವನ ಬರೆಯುವುದು ಕಷ್ಟವೇ ಸ್ವಾಮೀ? ಬರೆಯದಿರುವುದೇ ಕಷ್ಟ..’ [ಎ.ಕೆ.ರಾಮಾನುಜನ್] ಎಂಬ ಸಾಲು ನೆನಪಾಗುತ್ತದೆ. ಈ ನೆನಪು ಕಾಡಿ, ಕೆಲವೊಂದು, ಕಾವ್ಯಶೀಲತೆಯ ಕವನಗಳನ್ನು ‘ಅರ್ಥೈಸುವೆನಯ್ಯ’- ಎನ್ನುವುದು ಕಡುಕಷ್ಟ. ಇಂತಹ ಜಿಜ್ಞಾಸೆಯಲ್ಲಿಯೂ, ಇದೇ ನೆಪದಲ್ಲಿಯೇ ಈ ಕಾವ್ಯಾನುಸಂಧಾನ ಹೊಸ-ಹೊಸ ಹೊಳಹುಗಳಿಗೆ ಸಾಕ್ಷಿಯಾಯಿತು!

‘ಪ್ರೀತಿ ಇರುತ್ತದೆ ಅಥವಾ ಇರುವುದಿಲ್ಲ ಅಷ್ಟೇ
ಇದ್ದರೆ ಎಲ್ಲರ ಮೇಲೂ ಇರುತ್ತದೆ,
ಇಲ್ಲದಿದ್ದರೆ ಯಾರ ಮೇಲೂ ಇರುವುದಿಲ್ಲ ಅಷ್ಟೇ
ಎನ್ನುತ್ತ ಶುರು ಹಚ್ಚುವ ಪ್ರಜ್ಞಾಪಾತಳಿ, ಇದ್ದಕ್ಕಿದ್ದಂತೆ ಒಂದು ಮಾಯಾದರ್ಪಣದ ಪ್ರಭಾವಕ್ಕೊಳಗಾದಂತೆ ಕನಸೊಂದರಲ್ಲಿ ಪ್ರವೇಶಿಸುತ್ತದೆ.

‘..ಒಂದು ದಿನ ಕನಸಲ್ಲಿ ಬಗೆಬಗೆಯ ಸೆರೆಮನೆಯ
ಬಗೆಬಗೆಯ ಬಾಗಿಲು ತೆಗೆದು ಎಲ್ಲರನ್ನೂ ಬಿಟ್ಟರು
ಒಬ್ಬನ ಕೈಲಿ ಯುಗಗಳ ಹಿಂದೆ ಅಳುಕುತ್ತ

ಸ್ಟಾಫ ರೂಮಿನಿಂದ ತರಗತಿಯ ಮಾಸ್ತರರಿಗೆ ತಂದುಕೊಟ್ಟ ನಸುಹಳದಿ ಚಾಕ್ ಪೀಸಿತ್ತು
ಇನ್ನೊಬ್ಬಳ ಕೈಲಿ ಕಸಗುಡಿಸುವಾಗ ಕದ್ದು ಎತ್ತಿಕೊಂಡಿದ್ದ ಝಗಮಗ ಹೇರ್ ಕ್ಲಿಪ್ಪು
ಮಗದೊಬ್ಬನ ಕೈಲಿ ಆಸ್ಪತ್ರೆಯ

ಪಕ್ಕದ ಬೆಡ್ಡಿನಲ್ಲಿ ಯಾರೋ ಮರೆತ ಫ್ಲಾಸ್ಕ್..’

-ಹೀಗೆ ಕವನ ತೆರೆದುಕೊಳ್ಳುತ್ತ, ಸಂಗತಿಗಳನ್ನು ಸಂಗ್ರಹಿಸತೊಡಗುತ್ತದೆ. ಈ ಬಗೆಬಗೆಯ ಬಾಗಿಲುಗಳ ಸೆರೆಮನೆಯು, ಹಠಾತ್ತನೆ ಶಾಲೆಯದೋ, ಆಸ್ಪತ್ರೆಯದೋ ಬಾಗಿಲುಗಳೆಂಬಂತೆ ಚುರುಕಾಗಿ ವ್ಯಕ್ತಗೊಳ್ಳಲು ಹಂಬಲಿಸುತ್ತವೆ.

*****

ಬಾಲ್ಯದ ದಿನಗಳ ಮನಃಸ್ಥಿತಿಯಲ್ಲಿ ಗಟ್ಟಿಗೊಂಡ ದೃಶ್ಯಾವಳಿಯ ಪ್ರತಿನಿಧಿಯಾಗಿ ಎಂಬಂತೆ, ತರಗತಿ ರೂಪಕವಾದರೆ, ಅದಕ್ಕಿಂತ ವಿಭಿನ್ನವಾದ, ಅಮಾಯಕತ್ವಕ್ಕೆ ವಿರುದ್ಧವಾದ, ‘ಚೌರ್ಯ’ದ ಉದಾಹರಣೆ. ಈ ದಾಖಲೆಗಳ ಸರಣಿಯಲ್ಲಿ ಬರುವ ‚ಯಾರೋ ಮರೆತ ಫ್ಲಾಸ್ಕ್. ಅಲ್ಲಿ ಯಾರೋ ಅಸ್ತಿತ್ವದಲ್ಲಿದ್ದರು ಎಂಬುದರ ಕುರುಹು. ಅವರು ಯಾರಾದರೂ ಆಗಿರಬಹುದು. ರೋಗಿಯೋ, ಬಾಣಂತಿಯೋ ಅಥವಾ ಬಳಸಿದ ವ್ಯಕ್ತಿ, ಫ್ಲಾಸ್ಕಿನ ಅಗತ್ಯ ಇನ್ನಿಲ್ಲವೆಂದು ಅದನ್ನು ಬಿಟ್ಟು ಹೋಗಿರಬಹುದೆ? ಒಂದು ವೇಳೆ ಮರೆತಿದ್ದರೆ, ಅದನ್ನು ಮರೆತಿದ್ದು ಸಂತೋಷದಿಂದಲೋ ಅಥವಾ ಸಂತಾಪದಿಂದಲೋ? ಈ ಎಲ್ಲ ಪ್ರಶ್ನೆಗಳನ್ನು ಹುಟ್ಟಿಸುವ ಸಾಲು ಅದು. ಹಾಗಾಗಿ ಆ ಘಟನೆ ಜೀವನ ನಷ್ಟದ್ದೋ, ಜೀವನಫಲಿತದ್ದೋ ಎಂಬುದು ನಿಗೂಢ. ಇದು ಕವನಸಾಲುಗಳ ಅದೆಷ್ಟೋ ಸಂಗತಿಗಳ ಹಾಗೆ ಮೌನಸಾಧಕ.

ಇವೆಲ್ಲವೂ ಶುರುವಾದದ್ದು ಕನಸಿನಲ್ಲಿ, ಬಗೆಬಗೆಯ ಸೆರೆಮನೆಯ ಬಗೆಬಗೆಯ ಬಾಗಿಲುಗಳನ್ನು ತೆಗೆದು ಎಲ್ಲರನ್ನೂ ಬಿಟ್ಟಾಗ ಕಂಡಿದ್ದು ಬಂಧನ ಮತ್ತು ವಿಮೋಚನೆ. ಅನುಕ್ಷಣವೂ ನಿರಂತರವಾಗಿ ಸಂವೇದನಾ ಪ್ರಕ್ರಿಯೆಯಲ್ಲಿ ಸಂಭವಿಸುವಂಥದ್ದು. ‘ಕನಸು ಕಾಣು’ವುದು ಚೈತನ್ಯಶೀಲತೆಯ ಒಂದು ಅವಸ್ಥಾಂತರದಲ್ಲಿ. ವಿಮೋಚನೆಯಿಲ್ಲದ ಬಂಧನವಾದರೂ ಇರಬಹುದು; ಆದರೆ ಬಂಧನವಿಲ್ಲದೆ ವಿಮೋಚನೆಯಿಲ್ಲ. ಬಂಧನ ಮತ್ತು ವಿಮೋಚನೆಯ ಸಂಬಂಧ ಅಂಥದ್ದು!

ಎಷ್ಟೋ ಕಾಲ ಬಂಧಿತರಾಗಿದ್ದವರು ಪುನಃ ಸಲೀಸಾಗಿ, ಸಹಜವಾಗಿ ನಡೆದಾಡುವುದಕ್ಕೆ ಸ್ವಲ್ಪ ಕಷ್ಟಪಡಬೇಕು. ಪಂಜರದ ಗಿಣಿ ದೀರ್ಘಕಾಲದ ನಂತರ ಮತ್ತೆ ಮೊದಲಿನಂತೆ ಹಾರಲು ಪ್ರಯಾಸಪಡುತ್ತದೆ. ಹಾಗೆ ‘..ಕುಂಟುವವರಂತೆ ಹೊರಬಂದ ಅವರ್ಲೆರು ಸಾಲು ಮನೆಗಳ’- ಅದೂ- ‘ಬಾಗಿಲುಗಳಲ್ಲೇ ಕೂತುಬಿಟ್ಟರು.’

‘ಬಾಗಿಲು’ ಕಾವ್ಯಶಕ್ತಿಯ ಅರ್ಥಪೂರ್ಣ ಪ್ರತಿಮೆಗಳಲ್ಲೊಂದು. ಈಗ ತಾನೇ ಬಂಧನದಿಂದ ಬಿಡುಗಡೆಗೊಂಡ ಅವರು ಮತ್ತೆ ಬಾಗಿಲುಗಳಲ್ಲಿ ಪ್ರತಿಷ್ಠಾಪಿತರಾದರು.

ಬಾಗಿಲ ಹೊರಗೂ ಒಂದು ಪ್ರಪಂಚ/ ಅವಕಾಶ;
ಬಾಗಿಲ ಒಳಗೂ ಒಂದು ಪ್ರಪಂಚ/ ಅವಕಾಶ.

ಎರಡೂ ಪ್ರಪಂಚಗಳನ್ನು ಅವಕಾಶದಲ್ಲಿಟ್ಟು ಕವಿಪ್ರಜ್ಞೆ ದ್ವಂದ್ವ ಸಾಧಿಸುತ್ತಿದೆ. ದ್ವೈತದ ಒಂದುಭಾಗ [ಭೂತಕಾಲ]- ಬೆನ್ನ ಹಿಂದಾದರೆ, ಮತ್ತೊಂದು ಭಾಗ[ಭವಿಷ್ಯತ್‍ಕಾಲ]ವನ್ನು ಪ್ರಜ್ಞಾಪಾತಳಿಗೆ ಮುಖಾಮುಖಿಯಾಗಿಸುವುದು ಬದುಕಿನ ಆಟ. ಬೆನ್ನಿಗೆ ‘ಕಣ್ಣಿಲ್ಲ’ದುದರಿಂದ ಮನುಷ್ಯನಿಗೆ ಜನ್ಮಾತೀತ ಗತ ಅಥವಾ ಭೂತಕಾಲದಲ್ಲಿ ಹಿಂತಿರುಗಿ ನೋಡುವ ಶಕ್ತಿ ಇಲ್ಲವೇ ಇಲ್ಲ-ಎಂಬಷ್ಟು ಇದೆ. ನಿಜವಾಗಿ ಭೂತ-ಭವಿಷ್ಯತ್ತುಗಳ ಅಂತರ್ಜೋಡಣೆಯಾಗಿರುವುದು ವರ್ತಮಾನದ ಸೂಕ್ಷ್ಮಅದೃಶ್ಯ ಸರಪಣಿಯಲ್ಲಿ. ವರ್ತಮಾನವಾದರೂ ಚಲಿಸುವ ಗಾಲಿಯ ಅಡಿಯಲ್ಲಿನ ಅಸ್ಥಿರ ಬಿಂದುವಿನಂತಿರುತ್ತದೆ.

‘ಅರ್ಜುನ, ನನಗೂ-ನಿನಗೂ ಅದೆಷ್ಟೋ ಜನ್ಮಗಳು ಕಳೆದುಹೋಗಿವೆ. ಅವುಗಳೆಲ್ಲವನ್ನು ನಾನು ಬಲ್ಲೆನು; ಹೇ ಪರಂತಪನೆ, ನೀನು ತಿಳಿಯಲಾರೆ’ [‚ಬಹೂನಿ ಮೇ ವ್ಯತೀತಾನಿ ಜನ್ಮಾನಿ ತವಚಾರ್ಜುನ/ ತಾನ್ಯಹಂ ವೇದ
ಸರ್ವಾಣಿ ನ ತ್ವಂ ವೇತ್ಥ ಪರಂತಪ‛] ಎಂದು ಶ್ರೀಕೃಷ್ಣನು ಹೇಳಿದುದು ಇದನ್ನೇ. [ಭಗವದ್ಗೀತೆ-4ನೇ ಅಧ್ಯಾಯ, 5ನೇ ಶ್ಲೋಕ] ಹಾಗೆ, ಜನ-ಜಗತ್ತು ಬೇರೆ-ಬೇರೆಯಾಗಿ ತನ್ನದು-ತಾನು-ಅನ್ಯರು ಅಂತ ಹೊಂದುವಿಕೆ[ಪೊಸೆಸ್ಸಿವ್‍ನೆಸ್ಸ್]ಗೊಳಗಾಗಿ ‘ಊರಿಗೆ ಊರೇ ಇದ್ದಲ್ಲಿಯೇ ಹೊಸತಾಗಿಬಿಡುತ್ತದೆ’: ಅರ್ಥಾತ್ ನವೀಕೃತ ವರ್ತಮಾನ!.

ಕಣ್ಣು ರೆಪ್ಪೆ ಬಡಿಯುವುದರೊಳಗೆ ಜಗ ಮಗುಚಿ [‘ಕಸ ಬೀಳಬಾರದು ಅಂತ ಎವೆ/ ಮುಚ್ಚುತ್ತದಲ್ಲ ಆಗ..’]

‘ಮತ್ತೆ ಮನೆಗಳು
ಬೀದಿಗಳು ಬದಲಾಗಿ ಹೋದವೋ..’ ಎಂದು ಕನಸುಗಾರನಿಗೆ ಅನುಮಾನ ಶುರು.

‘ಏಕೆಂದರೆ ಒಲೆಯೆದುರು ಬಡಿಸಲು ಕೂತಿರುವ ಈ ಹಣ್ಣುಮುದುಕ/ ಇನ್ನೂ ಒಂತುತ್ತು ಉಣ್ಣು ಅಂತೇಕೆ ಜುಲುಮೆ ಮಾಡುತ್ತಾನೆ. ಅವನೆಂದೋ/ ಹರಿಹರ ಬಸ್‍ಸ್ಟ್ಯಾಂಡಿನಲ್ಲಿ ಕೊಡೆ ರಿಪೇರಿ/ ಮಾಡಿಕೊಟ್ಟಿದ್ದನಲ್ಲವೆ ಒಂದು ಸರೀ ಕಡ್ಡಿಗಾಗಿ/ ತನ್ನ ಇಡೀ ಪೆಟ್ಟಿಗೆಯನ್ನೇ ಜಾಲಾಡಿದ್ದನಲ್ಲವೆ..’

ಕನಸುಗಾರ ಕವನದಾರಂಭದಲ್ಲಿ ತೆಗೆದುಕೊಂಡ ನಿರ್ಧಾರಕ್ಕೆ ಇದೂ ಒಂದು ಕಾರಣವಾಗಿರಬಹುದು. ಯಾರೋ, ಎಲ್ಲೋ, ಏನೋ ಕಾರಣದಿಂದ ಭೆಟ್ಟಿ ಆಗಿದ್ದವ, ಬೇರೆ ಯಾರೂ, ಬೇರೆಲ್ಲೂ, ಬೇರೆ ಯಾವುದಾದರೂ ಕಾರಣದಿಂದ ಮಾಡುವ ಸಂಭವನೀಯತೆ ಇಲ್ಲದ, ‘ಇನ್ನು ಒಂತುತ್ತು ಉಣ್ಣು’ ಎಂದೇಕೆ ಜುಲುಮೆ ಮಾಡುತ್ತಾನೆ? ಪ್ರಾಯಶಃ ಏಕೆಂದರೆ, ದೃಶ್ಯಗಳು, ಪರಿಕಲ್ಪನೆಗಳು, ಪರಿಭಾಷೆಗಳು, ನಾಮರೂಪಗಳು ನಿರಂತರ ಚಕಚಕನೆ ಬದಲಾಗುತ್ತಲೇ ಇರುವ ಪ್ರಾಪಂಚಿಕ ಅಸ್ಮಿತೆ-ಸಂಹಿತೆಗಳಲ್ಲಿ -ಬದಲಾಗದೇ ಇರುವುದೆಂದರೆ ಜೀವ-ಜೀವದ ನಡುವೆ ಪ್ರವಹಿಸುವ ವಾತ್ಸಲ್ಯವಾಹಿನಿ! ಹಣ್ಣು ಮುದುಕನ ಜುಲುಮೆಯಂತೆಯೇ!

ಅವರ ಸಮಗ್ರ ಕಾವ್ಯಭಂಡಾರದ ಸಂದೂಕದಲ್ಲಿ ಮರುಕಳಿಸುತ್ತ, ಮರುದನಿಸುತ್ತ ಪ್ರತಿಮಿಸುವ ‘ಬಾಗಿಲು’, ‘ಹೆದ್ದಾರಿ’, ‘ಟ್ರಕ್ಕು-ಲಾರಿ’, ‘ಬಿಸಿಲು-ಮಳೆ..ಇತ್ಯಾದಿ] ಸ್ವೇಚ್ಛಾಪ್ರತಿಮೆಗಳಲ್ಲಿ ‘ಒಲೆ’ಯೂ ಒಂದು.

ಮುದುಕನೆದುರು ಇರುವ ‘ಒಲೆ’ ಕವನದಲ್ಲಿ ಒಡಮೂಡಿದ ಮತ್ತೊಂದು ಸಶಕ್ತ ಪ್ರತಿಮೆ. ಕಾಯ್ಕಿಣಿಯವರ ಮತ್ತೆ, ಯಾವುದೇ ಕವಿಯ ಸಹಜಪ್ರೀತಿಯ ಪ್ರತಿಮೆಯಾಗುವ ಸಹಜ ಸ್ವಾಭಾವಿಕತೆ ‘ಒಲೆ’ಗೆ ಇದ್ದೇ ಇದೆ! ಸ್ವತಃ ಜ್ವಲಂತ ಅಸ್ತಿತ್ವದ ಮತ್ತು ಚರಾಚರ ಜೀವಜಾಲದ ಮುಖ್ಯ ಉದ್ದೀಪ್ತಕ್ಷಣವಾದ ‘ಹಸಿವು’; ಆ ಹಸಿವನ್ನು ತಣಿಸುವ ಪ್ರತಿ-ಜೀವಂತಿಕೆ ಇವೆರಡೂ-ತನ್ನಷ್ಟಕ್ಕೆ ತಾನೇ ‘ಉರಿಯುವ ಒಲೆ’ಯಲ್ಲಿ ಪ್ರತಿಮೆಯಾಗಿ ಮೈದಾಳುತ್ತವೆ.

‘ಒಲೆ’ ಇದೆ ಎಂದಮೇಲೆ ಅಲ್ಲಿ ಹಸಿದವರಿರಬೇಕು; ಬೇಯಿಸಿದವರಿರಬೇಕು; ಉಣ್ಣುವವರಿರಬೇಕು; ಉಣಿಸುವವರಿರಬೇಕು. ಅಲ್ಲಿ ಹೊರಗೂ ಮತ್ತು ಒಳಗೂ ಉರಿಯುವ ಪ್ರಕ್ರಿಯೆ ಏಕಕಾಲದಲ್ಲಿ ಜರುಗುತ್ತಿರುತ್ತದೆ. ತನ್ನಲ್ಲಿ ಉರಿಯನ್ನು ಹೊತ್ತು, ಉಣ್ಣುವವನ ಜಠರಾಗ್ನಿಯನ್ನು ಉಪಶಮಿಸುವ ಹೊಣೆ ಒಲೆಯದ್ದಾಗಿದೆ. ಹಾಗೆಯೇ ಓದುಗನ ಮನದ ಪಾರ್ಶ್ವ ಕೋನಗಳಲ್ಲಿ ಈ ಎರಡು ರೂಪಕಗಳು ಹೊಳೆದರೆ ಅಚ್ಚರಿಯೇನಿಲ್ಲ.

ನೆನಪು ಕಾಡಿ, ಕೆಲವೊಂದು, ಕಾವ್ಯಶೀಲತೆಯ ಕವನಗಳನ್ನು ‘ಅರ್ಥೈಸುವೆನಯ್ಯ’- ಎನ್ನುವುದು ಕಡುಕಷ್ಟ. ಇಂತಹ ಜಿಜ್ಞಾಸೆಯಲ್ಲಿಯೂ, ಇದೇ ನೆಪದಲ್ಲಿಯೇ ಈ ಕಾವ್ಯಾನುಸಂಧಾನ ಹೊಸ-ಹೊಸ ಹೊಳಹುಗಳಿಗೆ ಸಾಕ್ಷಿಯಾಯಿತು!

ಒಂದು, ‘ಕವಿ ಎಚ್.ಎಸ್.ಶಿವಪ್ರಕಾಶರ ‘ಗೂಡು’ ಕವನ.

‘ಪಕ್ಕೆಲು ಗೂಡು ಗುಡಿಸಲಿನಲ್ಲಿ ಮೂಡುವ ದಿವಿನಾದ ಒಲೆ ಮೇಲೆ
ಮಧ್ಯಾಹ್ನ ಕುದಿ ಬಂದ ಎತ್ತರದ ಹಿಟ್ಟಿನ ಕೋಲಿನಿಂದ ತಿರುವುತ್ತ ಇರೋರು ಯಾರು?
ಚುಕ್ಕೆ ಚಪ್ಪರದ ಕೆಳಗೆ
ಬನ್ನಿಬೆಳದಿಂಗಳೂಟಕ್ಕೆ
ಇವತ್ತು ರಾತ್ರಿ‛ ಅಂತ
ಪಕ್ಕೆಲುಬು ಗೂಡ ಗುಡಿಸಿಲ ಮುಂದೆ
ನಮ್ಮ
ಕರೆಯುತ್ತಾ ಇರೋರು ಯಾರು?

ಇನ್ನೊಂದು, ಭಗವದ್ಗೀತೆಯಲ್ಲಿ ಶ್ರೀಕೃಷ್ಣ ಹೇಳಿದ ಸಾಲು- ‘ಅಹಂ ವೈಶ್ವಾನರೋ ಭೂತ್ವಾ’! ಅಖಂಡ ಬ್ರಹ್ಮಾಂಡದ ಸಂಚಲನ ಶಕ್ತಿಗೆ ಮೂಲಾಧಾರವಾದ ‘ಆ ಒಂದನ್ನು’ ಏನೆಂದು ಬೇಕಾದರೂ ಕರೆಯಬಹುದು. ಏಕೆಂದರೆ ಎಲ್ಲರೊಳಗೂ ಮನೆಮಾಡಿರುವುದು ‘ಆ ಅದೇ’ ಆಗಿರುತ್ತದೆ. ಎಲ್ಲ ಕಾವ್ಯಗಳ ಸುಪ್ರಾ ಕಾನ್‍ಶಸ್ ನೆಸ್ ಆಗಿ, ಎಲ್ಲ ಕವಿಗಳ ಕಾನ್ಶೆನ್ಸ್ ಆಗಿ ಅದು ವ್ಯಕ್ತವಾಗಲು ಜಂಗಮತರಂಗವಾಗಿ ಹರಿಯುತ್ತಿರುತ್ತದೆ. ಇದೇ ರೀತಿಯಲ್ಲಿ, ಹರಿಹರದ ಬಸ್ಟ್ಯಾಂಡಿನಲ್ಲಿ [ಕನಸಲ್ಲೆ ಅದರೂ] ಕೊಡೆ ರಿಪೇರಿ ಮಾಡಿಸಿಕೊಳ್ಳಲು ಬಂದವನೊಳಗಿನ [ವೈಶ್ವಾನರ] ‘ಭೂತತೃಪ್ತಿಯ’ ಜುಲುಮೆ ಮಾಡಿದವ ಶತಸಹಸ್ರ ಸಂಹಿತೆಗಳಗಳ ಉಕ್ತನಾದ ‘ಅನಿಋದ್ಧೋ ವೃದ್ಧಾತ್ಮಾ’ನೇ ಅಲ್ಲವೆ?

ಆ ಮುದುಕ ಒಂದು ಸರೀ ಕಡ್ಡಿಗಾಗಿ ತನ್ನಿಡೀ ಪೆಟ್ಟಿಗೆಯನ್ನು ಜಾಲಾಡಿದ್ದುದು ಕನಸಿಗನಿಗೆ ಸ್ಪಷ್ಟವಾಗುತ್ತದೆ. ಈ ಜಾಲಾಟವು ಗೋಜಲಿನ ದೃಶ್ಯಾವಳಿಗಳಲ್ಲಿ ತಬ್ಬಿಬ್ಬಾದ ಅಂತರ್ಮನಸ್ಸಿನ ಜಾಲಾಟ ಕೂಡ ಆಗಿದೆ. ಅನಂತ ಆಕಾಶದಡಿಯಲ್ಲಿ ನಿರವಧಿಯ ವಿಶ್ವವ್ಯಾಪಾರಗಳಲ್ಲಿ ಎಲ್ಲೋ ಹೇಗೋ ತಪ್ಪಿದ ತಾಳ-ಸೂತ್ರವೊಂದರ ಸಮನ್ವಯದ ಅನ್ವೇಷಣೆಯು ಕವಿಕಾಸಾರಗಳಲ್ಲಿ ನಿರಂತರ ನಡೆಯತಕ್ಕದ್ದೇ ಆಗಿದೆ.

‘ಬೆಳೆದಿದ್ದೇನೆ ಬಿಡೇ..ಬೇಡ ಸರ್
ನಾನು ನಿಮ್ಮ ಹಳೇ ವಿದ್ಯಾರ್ಥಿ ಸರ್ ಎಂದರೂ
ಅವರು ಬಹುವಚನ ಕೊಟ್ಟು ತೆಪ್ಪಗೆ ನೋಡುತ್ತಿದ್ದಾರೆ
ಎರಡು ಬಿಗಿಯಿರಿ ಸರ್ ದಯವಿಟ್ಟು
ಪ್ರೀತಿಯ ಪೆಟ್ಟು ತಿಂದು ಯುಗವಾಯಿತು ಸರ್..

– ಇಲ್ಲಿ ಪಲ್ಲಟಗೊಳ್ಳುತ್ತಿರುವುದು ಮನೆ, ಬೀದಿ ಮಾತ್ರವಲ್ಲದೆ [ಸಾರ್ವತ್ರಿಕತೆಯಿಂದ ವೈಯಕ್ತಿಕತೆಗೆ ಹೊರಳುವಿಕೆ] ಮನೋಭೌತಿಕ ಸ್ತರಗಳು ಕೂಡ! ಬಾಲ್ಯವು ಪ್ರೌಢತೆ ಅನುಭವಿಸುವವನ ಅಪ್ರಜ್ಞೆಯಲ್ಲಿ ಅವಿನಾಭಾವವಾಗಿ ಹೋದ ಭೌತಿಕ ಸ್ಥಿತ್ಯಂತರಗಳೂ, ಭಾವುಕ ಸ್ಥಿತ್ಯಂತರಗಳೂ ಇಲ್ಲಿ ಪ್ರಕಟಗೊಳ್ಳುತ್ತವೆ.

‘ಒಂದನ್ನು ಅರಿಯಬೇಕಾದರೆ ನೀನು ಇನ್ನೊಂದು ತುದಿಯಿಂದ ಆರಂಭಿಸು’-ಇದು ‘ತಾವೋ’ ತತ್ವ. ಇದೇ ಬದುಕಿನ ವಿಡಂಬನೆ. ದೇಹಕ್ಕೆ ವಯಸ್ಸಿನ ಗುರುತೋ, ಮನಸ್ಸಿಗೆ ವಯಸ್ಸಿನ ಗುರುತೋ, ಅದು ಅನಧ್ಯಾತ್ಮಕ ಪ್ರಶ್ನೆಯೇನಲ್ಲ. ಈ ‘ಬೆಳೆಯುವ’ ಪ್ರಕ್ರಿಯೆಯು ಸ್ವತಃ ವ್ಯಕ್ತಿಯ ಸ್ವಂತಿಕೆಯ ಲೆಕ್ಕದ ಪಟ್ಟಿಯಲ್ಲೂ, ಪರರ ದೃಷ್ಟಿಯಲ್ಲೂ ಸಂದರ್ಭಕ್ಕೆ ಅನುಗುಣವಾಗಿ ಅಥವಾ ಒಟ್ಟಾರೆ ಸಾಪೇಕ್ಷ-ವಿಪರ್ಯಯಕ್ಕೊಳಗಾಗುತ್ತಿರುತ್ತದೆ. ಇದಿಲ್ಲಿ ಫ್ಯಾಂಟಾಸ್ಮಾಗೋರಿಯಲ್ ಅಥವಾ ಅತಿರಂಜಿತ/ಅತಿಕಲ್ಪಿತ ಪ್ರಸ್ತುತಿ. ಮತ್ತೆ ಅದು ಹಾಗೆ ಸೇರ್ಪಡೆಯಾಗದಿದ್ದರೆ ಕಾವ್ಯ ಎನಿಸದು-ಎಂಬುದು ಎಲಿಯೆಟ್‍ನ ಅಭಿಪ್ರಾಯವೂ ಹೌದು.

ವೈಯಕ್ತಿಕತೆಯಲ್ಲಿಯೇ ಹುಟ್ಟುವ ಕಾವ್ಯ-ವು ವೈಯಕ್ತಿಕತೆಯನ್ನು ಮೀರಿದಲ್ಲದೇ ಕಾವ್ಯತ್ವ ಸಿದ್ಧಿಸದು. ‘ಮೀರುವಿಕೆ’ಯನ್ನು ಸರಿಯಾಗಿ ಗುರುತಿಸುವುದೇ ಕಾವ್ಯ-ರಸಿಕನ ಗುರುತು. ‘ಒಂದು ಬೆಳಜಾವದ ಆಟದಬಯಲಿನ ತುಂಬ..’ ಕವಿ ಚಿತ್ರವಿಚಿತ್ರ ಗಗನನೌಕೆಗಳನ್ನು ನೋಡುತ್ತಾನೆ. ಭವದಿಂದ ಮೇಲೇರಿ ಭೌಮಕ್ಕೆ ರಹದಾರಿಯಾಗುವ ನೌಕೆಗಳಾಗಿರಬಹುದು ಅವು. ಆಟ ಜೀವನದಾಟವಾದರೆ,

*****

ಬಯಲು ಮಾಟದ ಕೂಟ. ಇವೆಲ್ಲದರಿಂದ ಪಾರಾಗುವ ಗಗನಗಾಮೀ ಹಂಬಲ[ಇರದುದರೆಡೆಗೆ ತುಡಿವ!]ವನ್ನು ತಾರ್ಕಿಕವಾಗಿ [ತಾತ್ವಿಕವಾಗಿಯೂ] ನೋಡಿದರೆ ಇಲ್ಲಿ, ಸೆರೆಮನೆಯನ್ನು ಸೃಷ್ಟಿಸಿದ ಮನಸ್ಸೇ ನಂತರ ಆಟದ ಬಯಲು, ಬೆಳಗು, ಊರ್ಧ್ವಗಾಮೀ ವಾಹಕಗಳನ್ನು ಸೃಷ್ಟಿಸಿರುವುದು! ಮನಸ್ಸಿನಾಚೆ ಇದೆ-ಎಂದು ಭಾವಿಸಿದ ‘ಬಯಲು’ ಕೂಡ ಮನಸ್ಸಿನ ಸೀಮಿತ ಅವರಣದಲ್ಲಿಯೇ ಬರುವಂಥದು.

ಚಿತ್ತವು ಆಕಾಶತತ್ವ. ವಾಸ್ತವವಾಗಿ ‘ಮನಸ್’ ಸ್ವತಃ ಒಂದು ಭ್ರಾಮಕ [ರಿಲೇಟಿವ್ಲೀ ಟ್ರಾನ್ಸಾಕ್ಷನಲ್] ಇರವು. ‚ದೇರ್ ಆರ್ ನೋ ಫ್ಯಾಕ್ಸ್ಟ್; ಓನ್ಲೀ ಇಂಟರ್‍ ಪ್ರೆಟೇಶನ್ಸ್’-[ಫ್ರೆಡರಿಕ್ ನೀಶೆ]. ನಮ್ಮ ಮನೋಮಯ ಪ್ರಪಂಚದ ತಿರುಳೇ ಇದು. ಛಾಂದೋಗ್ಯ ಉಪನಿಶತ್ತಿನಲ್ಲಿ ಬರುವ ಮಾತು; ‚ಅನ್ನಮಯಂ ಹಿ ಸೋಮ್ಯಮನಃ ‛ಮನಸ್ಸೆಂಬ ಇಂದ್ರಿಯವು ಅನ್ನಾವಲಂಬಿ. ಹಾಗಾಗಿ ಮನೋಮಯ ಕೋಶವು ಅನ್ನಮಯಕೋಶದ ಮೇಲೆ ನಿರ್ಭರವಾಗಿದೆ. ನಿದ್ರೆಯಲ್ಲಿ, ಗಾಢ ಸುಪ್ತಿಯಲ್ಲಿ, ವೃತ್ತಿಗಳು ತಾನಾಗಿ ಲಯವಾಗಿರುವಾಗ ಆ ಅವಸ್ಥೆಯು ‘ಅಭಾವ ಪ್ರ್ಯತ್ಯಯಾಂಬನಂ ನಿದ್ರಾ’ ಅಥವಾ ‘ತತ್ವವಿಸ್ಮೃತಿ’ ಎಂದು ಕರೆಯಲ್ಪಟ್ಟಿದೆ. ಹೀಗೆ ಫಲಿಸುತ್ತಿದೆ-ಎಂಬ ಅರಿವು; ಆದರೆ ಏಕೆ ಹೀಗೆ- ಎಂಬ ಅರಿವಿರದು. ಅಷ್ಟು ಸೆರೆಮನೆಗಳು; ಇನ್ನಷ್ಟು ಬಾಗಿಲುಗಳು; ಕೀಲಿಕೈಗಳು..ಹಾಕುವವರಾರು?
ತೆಗೆಯುವವರಾರು?

‘ಒಬ್ಬನ ಕನಸಿನ ಮನೆಯ ಬೀಗದ ಕೈ
ಇನ್ನೊಬ್ಬನ ಕನಸಿನಲ್ಲಿ
ಯಾರು ಎಬ್ಬಿಸಬೇಕು ಯಾರನ್ನು
ಎಂಥ ನಂಬಿಕೆಯಲ್ಲಿ..’

ಎಚ್ಚರದ ಪ್ರಖರತೆಯಲ್ಲಿ ಕವಿಮನ-ಕನಸಿಗನೀಗ, ನಿಧಾನವಾಗಿ ಪ್ರತ್ಯೇಕತೆಯು ನಶಿಸುವ, ತೆರವಾಗುವ ಮತ್ತು ‘ಸ್ವಂತ’ ಪದ ಅರ್ಥ ಕಳೆದುಕೊಂಡ ವಿಭ್ರಾಂತಿಯನ್ನು ನೋಡುತ್ತಿದ್ದಾನೆ. ವಿಭ್ರಾಂತಿಯಾಚೆ ಮೂಡಿದ ‘ಬೋಧೆ’ಯ ಹೊಳಹೂ ಆವರಿಸುತ್ತ, ಗೋಜಲು ನಿವಾರಣೆಯಾಗಿ ಸ್ಪಷ್ಟತೆ ಉದ್ಭವಿಸಿ, ಪ್ರಶಾಂತಭಾವ ಉದಯಿಸುವ ಹಂತ. ಇದೊಂದು ರೀತಿ ‘ಆನು ನೀನಿನಾ ನೀನು ತಾನಿನಾ ತಾನು ತಾನಾದ ತನನನಾ’ [ಬೇಂದ್ರೆ]. ಇದು ಬುದ್ಧನಾದ ಹಂತ,

‘ಅಣ್ಣಾ ನೆನಪಿದೆಯೆ ಅಂತ ಕೇಳಬೇಡ ತಾಯೀ/ ಪದವಿಲ್ಲದಾಗಲೂ ಕದವ್ಲಿದಾಗಲೂ ಒಂದಾಗಿದ್ದೇವೆ ಎಲ್ಲ/ ಮೌನ ಅಂದಾಕ್ಷಣ ಮೌನ ಇಲ್ಲ..’ದ್ವೈತವು ಅದ್ವೈತವಾಗುವ ಸಮಯ! ಪದವಿಲ್ಲದಂತೆಯೇ, ಕದವೇ ಇಲ್ಲದ ಮೇಲೆ ಮನೆ, ಸೆರೆಮನೆ, ಬಾಗಿಲು, ಊರು, ಕೇರಿ, ಇತ್ಯಾದಿ ಬಹುಮುಖೀ ಪ್ರಪಂಚವೆಲ್ಲಿ? ಲೋಕಾಂತ ಕರಗಿ ಏಕಾಂತದಲ್ಲಿ ಮಿಳಿತವಾಗಿಬಿಟ್ಟಿದೆ! ಮೌನ-ದಂಥ ಕೇವಲ ಅನುಭವಗಮ್ಯಕ್ಕೂ ಪದದ ಹಂಗು ಬೇಡದ ಸಮಯ. ಮಾತು ಮೌನದ ತಪೋಭಂಗ ಮಾಡದಿರಲಿ; ‘ಒಂದಾಗಿದ್ದೇವೆ ಎಲ್ಲ’ ಎಂಬ ಆಶ್ವಾಸನೆ. ಯಾವ ಯೋಗಿಯು ಸಂಪೂರ್ಣ ಪ್ರಾಣಿಗಳನ್ನು ತನ್ನಂತೆಯೇ ನೋಡುತ್ತಾನೋ, ಸುಖ-ದುಃಖಗಳನ್ನೂ ಸಮಾನವಾಗಿ ನೋಡುತ್ತಾನೋ, ಅವನೇ ಪರಮಯೋಗಿ ಎಂದು ತಿಳಿಯ್ಪಟ್ಟಿದ್ದಾನೆ. (ಆತ್ಮೌಪಮ್ಯೇನ ಸರ್ವತ್ರ ಸಮಂ ಪಶ್ಯತಿಯೋರ್ಜುನ/ ಸುಖಂ ವಾ ಯದಿ ವಾ ದುಃಖಂ ಸ ಯೋಗೀ ಪರಮೋ ಮತಃ-[ಭಗವದ್ಗೀತೆ-6ನೇ ಅಧ್ಯಾಯ, 32ನೇ ಶ್ಲೋಕ)

ಚಲ್ಲಾಪಿಲ್ಲಿಯಾಗಿ ಹರಿದ, ಮುರಿದ ಕಡ್ಡಿಗಳನ್ನು ಅಂತೂ ‘ಆ ಮುದುಕ’ ತನ್ನಪೆಟ್ಟಿಗೆಯನ್ನೆಲ್ಲ ಜಾಲಾಡಿ ‘ಸರೀ’ ಮಾಡಿಕೊಟ್ಟುಬಿಟ್ಟಿದ್ದಾನೆ. ಅನೇಕವು ಏಕವಾಗಿದೆ. ಈಗ ಕವನದ ಆರಂಭದ ಘೋಷವಾಕ್ಯಗಳನ್ನು ಮತ್ತೆ ಸಂಪರ್ಕಿಸಬಹುದು. ಏಕೆಂದರೆ ಕವನದ ಆರಂಭ, ಮಧ್ಯ-ಮಧ್ಯಂತರ ಮತ್ತು ಮುಕ್ತಾಯ[ಹಾಗೆಂದುಕೊಳ್ಳಲಾಗದು; ಕವನದಲ್ಲಿ ಪ್ರತಿಪದವೂ ಕಾವ್ಯಕೋಶದೊಳಗಿನ ಜೀವಕಣಿವೆಯ ಸ್ಫೂರ್ತ ಪರಮಾಣುಗಳು. ಒಂದು ಕಾವ್ಯಶಿಲ್ಪದ ಜೀವಾಳದ ಆದ್ಯಂತದ ಪ್ರತಿಫಲನೆಗೋಸುಗ ಅವು ಹಾಸುಹೊಕ್ಕಾಗಿ ಹೆಣೆಯಲ್ಪಟ್ಟಾಗಲೇ ಅದ್ಭುತ ಸೃಷ್ಟಿ ಹೊಮ್ಮುವುದು. ಹಾಗಾಗಿ ಎಲ್ಲ ಪದಗಳೂ ತನ್ನಷ್ಟಕ್ಕೆ ತಾನೇ ಮುಕ್ತಾಯವೂ, ಆರಂಭವೂ ಆಗಿರುತ್ತವೆ.

ಒಂದು ಸಫಲಕಾವ್ಯದಲ್ಲಿ ಪ್ರತಿ ಪದ, ಚಿಹ್ನೆ, ಮೌನ, ಸ್ವತಂತ್ರ ಅಸ್ತಿತ್ವವನ್ನು ಇಟ್ಟುಕೊಂಡೇ [ಇಟ್ಟುಕೊಂಡೂ], ಇಡೀ ಕವನದ ಹತ್ತಿರ-ದೂರದೆಲ್ಲ ಪದಗಳಿಗೆ ಅರ್ಥದಾನಗೈಯುತ್ತಿರುತ್ತದೆ. ಕವನವು ಕೊನೆಯ ಚರಣದಲ್ಲಿ ಸಾಧಿಸುವಂತೆ, ‘ಒಂದಾಗಿದ್ದೇವೆ ಎಲ್ಲ’ ಸಾಧಿತವಾದಾಗ, ಒಂದು ದೀಪವನ್ನು ನೋಡಲು ಇನ್ನೊಂದು ದೀಪದ ಅವಶ್ಯಕತೆ ಇಲ್ಲದಂತೆ, ಸರ್ವವ್ಯಾಪೀ ಸ್ವಯಂಪ್ರಕಾಶ ಬೆಳಗುವುದು.

‘ಸರ್ವಭೂತಸ್ಥಮಾತ್ಮಾನಂ ಸರ್ವಭೂತಾನಿಚಾತ್ಮನಿ
ಈಕ್ಷತೇ ಯೋಗಯುಕ್ತಾತ್ಮಾ
ಸರ್ವತ್ರ ಸಮದರ್ಶನಃ’. [ಭಗವದ್ಗೀತೆ; ಆತ್ಮಸಂಯಮಯೋಗ 6-29]. ಇದನ್ನೇ ಯೇಟ್ಸ್ ಕವಿಯ ‚ಮಿರರ್ ಟರ್ನ್ಸ್ ಲ್ಯಾಂಪ್’ ಹೇಳಿಕೆಯಲ್ಲಿ ‘ಕಾಣ’ಬಹುದು. ಮತ್ತೆ ಇದನ್ನು ‘ಎಲ್ಲಿಯ ಬೆಟ್ಟದ ನೆಲ್ಲಿಕಾಯಿ; ಎಲ್ಲಿಯ ಸಮುದ್ರ’-ಎಂದು ಹುಬ್ಬೇರಿಸುವಂತಿಲ್ಲ. ಕವಿ ಎಂದರೇ ಕ್ರಾಂತದರ್ಶಿ. ನಾನೃಷಿಃ ಕುರುತೇ ಕಾವ್ಯಂ.

ಓದುಗ-ಸಹೃದಯಿಯೊಬ್ಬನಿಗೆ ಕವನದ ಒಳಹೊಗುವ ಮುನ್ನ ಯಾವುದೇ ಸುಳಿವೂ ಇಲ್ಲದೆ, ಕೇವಲ ಕವನ-ಪ್ರವೇಶದಿಂದ ‘ಹೊಳೆಯಿಸಿಕೊಂಡ’ ಅ-ದೃಷ್ಟ-ಬಂಧ-ಸಾಧನೆಯಲ್ಲಿ ಕವಿಯ ಸಾಫಲ್ಯ ಮಾತ್ರವಲ್ಲ, ಓದುಗ ಸಹೃದಯನ ಸಾಫ್ಯವೂ ಅಡಗಿದೆ. ಜಯಂತರ ‘ಒಂದು ಸರೀ ಕಡ್ಡಿಗಾಗಿ’ ಇಂಥ ಸಫಲ ಕವನ ಎಂದು ಧಾರಾಳವಾಗಿ ಹೇಳಬಹುದು.