ಸಾಕ್ಷಾತ್ಕಾರದ ಹಾದಿ

ಕೈಯನ್ನೇ ಬಟ್ಟಲಾಗಿಸಿ
ಭಂಗಿ ಸೊಪ್ಪು ಉಜ್ಜಿ ಚಿಲುಮೆಯಲಿ ತುಂಬಿ
ಅಳತೆಗೆ ಸಿಕ್ಕದೊಂದು ಕಿಡಿ ತಾಗಿಸಿದಾಗ ಧಿಗ್ಗೆಂದು ಹೊತ್ತಿ
ಅಗ್ನಿದಿವ್ಯಕ್ಕೆ ತಯಾರಾದಾಗ ಕಾಣುವವನು
ಎಳೆದಾಗ ಒಳಗಿನ ನಿರ್ವಾತದಲಿ ಹೊಗೆ ಲೀನವಾದಾಗಿ
ಕಣ್ಣ ಹಾದಿಯೆಲ್ಲಾ ತೇಲಿ ಗುಡ್ಡೆ ಮೇಲಾಗಿ
ಬಿಳಿ ಬಣ್ಣದಲಿ ಕುಳಿತಾಗ ಕಣ್ಣ ತುದಿಯಲಿ
ನೀರಾಗಿ ಕಂಡವನು ನೀನು

ಚಿಲುಮೆ ಹಿಡಿದು ಊರೆಲ್ಲಾ ಅಲೆದು ತೊಳಗಿ
ಸುಕ್ಕಾದ ಮೈ ಜಡೆಯಾದ ಕೂದಲು ಪಕ್ಕದಲೊಂದು ಜೋಳಿಗೆ
ಸೊರಗಿ ಮೈ ಮೇಲಿನ ಚರ್ಮವೆಲ್ಲಾ ಆತ್ಮಕ್ಕೆ ಅಂಟದೆ
ಬಿಡಿಸಿ ಹೊರಗುಳಿದಿರುವುದನ್ನು ಕಾಣಿಸಿ
ಗಾಳಿಯಂತೆ ನಕ್ಕು ಕೈಹಿಡಿದು ಆತ್ಮವನು ತಾಗಿಸಿ
ಹೊತ್ತಿಸಿ ಒಳಗೆಲ್ಲಾ ಬೆಂಕಿ ಉರಿವಂತೆ ಮಾಡಿ
ಹೊರಗೆ ಹೊಗೆ ಮಾತ್ರ ಕಾಣುವಂತೆಸಗಿ ಮರೆಯಾದವನು

ಮಾತು ಪಾತಾಳ ಲೋಕದ ಬಿಲಕ್ಕೆ ಹಾದಿಮಾಡಿ
ಗುಡಿಗೋಪುರದ ಶಿಖರಗಳನು ತಳದಲ್ಲಿ ಉಳಿಸಿ
ಎಳೆಯಲಾದರೆ ಚಿಲುಮೆ ಮೇಲೆ
ಅದನರಿಯಲಾರದೆ ಕುಳಿತ ತವಕದಲಿ
ಕಣ್ಣು ಬಿಡದೆ ಬಾಯ ದಾರಿಯಲಿ ಅರಸುವಂತೆ ಮಾಡಿದವನು

ಈಗೀಗ ಕಾಳರಾತ್ರಿಯ ತುಂಬಾ ಬಾವಲಿಗಳ ಜಾತ್ರೆ
ಕುರುಡಾಗಿಸಿದೆ ಉಲಿವ ಕೋಗಿಲೆಯ ಸದ್ದು
ಬಾನಂಗಳದ ತುಂಬಾ ಎಳೆನೀಲಿ ಮನದ ಕೊನೆಯಲ್ಲಿಷ್ಟು ಕಪ್ಪು
ಒಳಗೆಲ್ಲಾ ಬಿದ್ದಂತೆ ಚಿಲುಮೆ ಸದ್ದು

ಇಂದಿಗೆ ಅನಾದಿ ಕಾಲದ ಚಿಲುಮೆಯೆ ಹೊತ್ತಿ
ಮೇಲ್ಮುಖವಾಗಿ ಹೋದಾಗ ಬಿಂದುಗಳ ಕಣ್ಣಿಂದ ಉದುರಿಸಿ
ಹಿಡಿದಿಡುವಂತೆ ಮಾಡಿ ಹನಿಹನಿಯಲೂ ಕಂಡವನು
ನಕ್ಕು ಕೈ ಹಿಡಿದು ಬಿಡುವ ನಿನಗೆ ನನ್ನಷ್ಟೇ ಮಮತೆ
ಎಳೆನಾಗರದ ಹೆಡೆಯ ತುದಿಯಲೆಲ್ಲಾ ಹೊಳಪು
ಮನದ ಪೊರೆ ಕಳಚಿದಹಾಗೆ ಕೈಲಿದ್ದಾಗ ಚಿಲುಮೆ
ಕಾಲಂದಿಗೆ ಕುಣಿತಕ್ಕೆ ಇಷ್ಟು ಸಾಕು ನಿನ್ನ
ಕೈ ಬಟ್ಟಲಿನಲಿ ಉಜ್ಜಿದರೆ ಸೊಪ್ಪ
ಸಾಕ್ಷಾತ್ಕಾರಕ್ಕೆ ಇನ್ನೇನು ಬೇಕು

ಆರ್ . ದಿಲೀಪ್ ಕುಮಾರ್ , ಮೂಲತಃ ಚಾಮರಾಜನಗರದವರು.
ಸದ್ಯ ಗುಂಡ್ಲುಪೇಟೆ ಪಟ್ಟಣದ ಸರಕಾರಿ ಡಿ ಬಿ ಕಾಲೇಜಿನಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.
ವಿಮರ್ಶೆ, ಸಂಶೋಧನೆ , ಕಾವ್ಯರಚನೆ ಮತ್ತು ಭಾಷಾಂತರದಲ್ಲಿ ತೊಡಗಿದ್ದಾರೆ.