ನೆಲದ ಕಣ್ಣು

ಅನಿಮಿಷನ ಮೌನ ಲಿಂಗ
ಹಿಡಿದಲೆದವನ ಪಾದದ ಬಳಿ ಆಲಯ ಬಯಲೇ
ಮಂದಿ ಕಣ್ಣಿಲಿ ಹಚ್ಚಾಟದ ಕಿಚ್ಚ ಹೊತ್ತಿಸಿ
ಮಾತಿನಲೆ ತೇಲಿಸದೆ ಕಾಣಿಸಿದ ಗುಹೇಶ್ವರ
ಸುಟ್ಟ ಬೂದಿಯಲೆಲ್ಲಾ ಬಸವನ ಕಲ್ಯಾಣ

ಹೆಜ್ಜೆ ಗುರುತಿಗೆ ಸೋತು ತೆರೆದ ಮನಸಿನ ಬಾಗಿಲು
ಸುಟ್ಟ ಗುರುತಿಗೆ ಕಮಟು ವಾಸನೆ ಸಾಕ್ಷಿ
ಸಂಕವ್ವನ ಪ್ರಶ್ನೆಗೆ ಕೊಟ್ಟ ಉತ್ತರದಲ್ಲೆ ನಕ್ಕ ಅಕ್ಕ

ಊರುದ್ದ ಅಲೆದ ಪ್ರಶ್ನೆಗೆ ಸಿಕ್ಕ ಉತ್ತರ
ಅಕ್ಕನ ಮಾತಿಗೆ ಮೌನ ಹೊಕ್ಕ ಅಲ್ಲಮನ ಮಾತು
ಜ್ಯೊತಿರ್ಲಿಂಗವಾಗದೆ ನಿಂತದ್ದಕ್ಕೆ ಸಾಕ್ಷಿ
ಸಾರುತಿದೆ ನೋಡಿ ಕಾಲದ ಪ್ರಶ್ನೆ

ನಗುತ ನಿಂತವಳಿಗೆ ಸಿಕ್ಕ ಎತ್ತರದ ಉತ್ತರ
ಊರೂರು ಅಲೆವುದನು ಬಿಟ್ಟು ಹಿಡಿ
ಮಾತಿನಲೆ ಮೌನವನು ಹಿಡಿ
ತಾಕೀತು ಒಳ ಹೊರಗೆ ನೆಲದ ಕಣ್ಣು

ಹತ್ತಿದೆ ಬೆಂಕಿ

ಅಲ್ಲಮನ ಮನೆಯಲ್ಲೆಲ್ಲಾ ಅಭಿನವ ಗುಪ್ತನ
ಹರಿದ ಹಾಳೆಯ ತುಂಡುಗಳೆ
ಶಂಕರನ ಅದ್ವೈತಾವಸ್ಥೆಯ ಆಗಸದ ನೋಟ
ಮಧ್ವನ ಮಾತಿನಲಿ ನೆಟ್ಟ ನೆಲದ ಕಣ್ಣು

ಅಲ್ಲಮನ ಜೋಳಿಗೆ ತುಂಬಿದ ಬಸವನ
ಲಿಂಗದೀಕ್ಷೆಗೆ ಕಿಚ್ಚಿಡುವ ಕಿಡಿ
ಊರೂರು ಅಲೆದವನಿಗೆ ನಿಲ್ಲಲಾರದ ಸಂಕಟ
ಮನೆಯ ಮಂದಲಿಗೆಯ ತುಂಬಾ ಬಯಲ ಕನಸು

ಇಲ್ಲಿ ನಿಂತ ಅಲ್ಲಮನ ಭಂಗಿ
ಪಾಣಿನಿಯ ಭಾಷೆಯ ಲಯಕಾಗಿ ಕೊಟ್ಟ ಪೆಟ್ಟು
ಕನ್ನಡಿಸಿದೆ ಇಂದಿಗೂ ಪುಟ್ಟ ಪುಟ್ಟ ಪದಗಳಲೆ
ನಿಂತು ನಗುತಿದೆ ಅಲ್ಲಮನ ಕಣ್ಣಲ್ಲಿ

ಕಟ್ಟಿದ ಮಾಳಿಗೆಯ ತುಂಬಾ ಕಿತ್ತ ಜಂತಿ
ಅಲ್ಲಾಡುತಿದೆ ಈಗೀಗ
ಅಲ್ಲಮನ ಮೌನಕ್ಕೆ ಬೆದರಿ ಹತ್ತಿದೆ ಬೆಂಕಿ
ಮನೆಯ ಸುಟ್ಟಲ್ಲದೆ ಆರಲಾರದು