ನಂಬಿಕೆಗೆಟ್ಟ ಹೆಣ್ಣು
ಅವಳಿನ್ನೂ ಕನ್ನೆ ಎಂದು ನಂಬಿ ನಾನು
ಹೊಳೆಯ ಬಳಿ ಕರೆದೊಯ್ದಿದ್ದೆ ಅವಳನ್ನು
ಆದರೆ ಅವಳಿಗಾಗಲೇ ಗಂಡನಿದ್ದ
ರೇಶಿಮೆಯ ರತ್ನಗಂಬಳಿಯಂಥ ನೆಲ
ರಕ್ತಸಿಕ್ತ ಮುಂಗೈ, ಅವುಡುಗಚ್ಚಿದ ಹಲ್ಲು
ಹಾಗೆ ಮಾಡಲೇಬೇಕೆಂಬ ಒತ್ತಾಯದಲ್ಲಿ
ಮಾಡಿದ ಹಾಗೆ ಕರೆದೊಯ್ದಿದ್ದೆ ಅವಳನ್ನು
ದೀಪಗಳಾರಿ ಹೊತ್ತಿಕೊಂಡವು
ಮಿಂಚು ಹುಳುಗಳ ದೀಪ
ಅದು ದೂರದ ದಾರಿಯ ತಿರುವು
ಅವಳ ನಿದ್ರಾವಶ ಮೊಗ್ಗುಮೊಲೆಗಳನ್ನು
ಮೆಲ್ಲ ಸ್ಪರ್ಶಸಿದೆ, ಅದೊಂದು ಬಗೆ
ನೀರಪಾಚಿಯ ಮೊಗ್ಗುಗೊಂಚಲಿನ ಹಾಗೆ
ತೆರೆದುಕೊಂಡುಬಿಟ್ಟಿತು ನನಗೆ
ಅವಳ ಒಳಲಂಗಕ್ಕೆ ಹಾಕಿದ್ದ ಗರಿಗರಿ
ಗಂಜಿಯ ಸದ್ದು ಕಿವಿಗೆ ಬೀಳುತ್ತಿತ್ತು
ಹತ್ತು ಕತ್ತರಿಗಳು ಒಂದೇ ಬಾರಿ
ರೇಶಿಮೆಯ ತುಂಡನ್ನು ಕತ್ತರಿಸಿದಂತೆ
ಗಿಡಗಳಾದರೋ ಅವುಗಳೆಲೆಗಳ ಮೇಲೆ
ಬೆಳ್ಳಿ ಬೆಳಕು ಬೀಳದೇನೇ
ಹೆಮ್ಮರಗಳಾಗಿ ಬೆಳೆದುಬಿಟ್ಟಿದ್ದವು
ಬಾನಂಚಿನ ಉದ್ದಗಲಕ್ಕೂ
ನಾಯಿಗಳ ಬೊಗಳು, ದೂರ
ನದಿಯಿಂದ ಬಲು ದೂರ
ಮುಳ್ಳು ಪೊದೆಗಳ, ಹುಲ್ಲುಬಯಲ
ವಸತಿಗಳ ಗಡಿದಾಟಿ
ಅವಳ ಪೊದೆಗೂದಲ ಅಡಿಯಲ್ಲಿ
ಬದ್ದೊಂದ ಮಾಡಿ
ಟೈ ಬಿಚ್ಚಿದೆ, ಅವಳೂ ಬಟ್ಟೆ ಕಳಚಿದಳು
ನಾನು ನನ್ನ ಬೆಲ್ಟ್ ಮತ್ತು ರಿವಾಲ್ವರ್ ಗಳನ್ನು
ಅವಳು ತನ್ನ ನಾಲ್ಕು ಒಳ ಉಡುಪುಗಳನ್ನು
ಮುಲಾಮಿಗಿಂತಲೂ ನುಣುಪು
ಮುತ್ತಿಗಿಂತಲೂ ಹೊಳಪು ಮೈ
ಬೆಳ್ಳಿ ಲೇಪದ ಗಾಜು ಕೂಡ
ಇಷ್ಟು ಕೋರೈಸುವಂತೆ ಹೊಳೆಯಲಾರದು
ಅವಳ ನುಣುಪು ತೊಡೆಗಳು
ಗಲಿಬಿಲಿಗೊಂಡ ಮೀನಂತೆ
ಬೇಯುವ ಬೆಂಕಿ ಅರ್ಧ
ಕೊರೆವ ಚಳಿ ಇನ್ನರ್ಧ
ಆ ಇರುಳು ನಾನು ಸುಂದರ ರಹದಾರಿಯಲ್ಲಿ
ಮುತ್ತಿನ ಕುದುರೆಯನ್ನೇರಿ ಸವಾರಿಮಾಡಿದೆ
ನನಗವಳು ಹೇಳಿದ್ದನ್ನು ಒಬ್ಬ ಗಂಡುಸಾಗಿ
ಎಂದೂ ಎಲ್ಲೂ ಯಾರಿಗೂ ಹೇಳಲಾರೆ
ಜ್ಞಾನದ ಬೆಳಕು ನನ್ನ ಮತ್ತಷ್ಟು ಸೂಕ್ಷ್ಮವಾಗಿಸಿದೆ
ಮರಳ ಮುತ್ತುಗಳು ಮೆತ್ತಿಕೊಂಡಿದ್ದ ಅವಳನ್ನು
ಎಬ್ಬಿಸಿ ನದಿಯಿಂದ ದೂರ ಕರೆದೊಯ್ದೆ
ತಾವರೆಗತ್ತಿಗಳು ಗಾಳಿಯೊಂದಿಗೆ ಹೋರಾಡುತ್ತಿದ್ದವು
ನಾನು, ನಾನೇನೋ ಹಾಗೆಯೇ ನಡೆದುಕೊಂಡೆ
ಒಬ್ಬ ಯೋಗ್ಯ ಜಿಪ್ಸಿಯ ಹಾಗೆ
ಅವಳಿಗೆ ದೊಡ್ಡ ಹೊಲಿಗೆಯ
ಬುಟ್ಟಿಯೊಂದನ್ನು ಕೊಟ್ಟೆ
ಅದು ಹುಲ್ಲಿನ ಬಣ್ಣದ ಸ್ಯಾಟಿನ್ ಬುಟ್ಟಿ
ಆದರೆ ನಾನು ಅವಳ ಪ್ರೇಮದಲ್ಲಿ ಸಿಲುಕಲಿಲ್ಲ
ಏಕೆಂದರೆ
ತಾನಿನ್ನೂ ಕನ್ನೆ ಎಂದು ಅವಳು
ಹೊಳೆಗೆ ಕರೆದೊಯ್ಯುವಾಗ
ನನಗೆ ಹೇಳಿಬಿಟ್ಟಿದ್ದಳು, ಗಂಡನಿದ್ದಾಗ್ಯೂ
ಸೊಗಸಾದ ಕವಿತೆ ಸಮರ್ಥ ಅನವಾದ.