‘ಆವರ್ತ’ ಈ ಬಗೆಯ ಆಕರ್ಷಕ ಶೈಲಿಯಲ್ಲಿದ್ದರೂ, ಇದೊಂದು ಸಾಂಕೇತಿಕ ಕಾದಂಬರಿ. ಮುಖ್ಯವಾಗಿ, ಮಾನವಾಂತರ್ಗತ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಪ್ರವೃತ್ತಿಗಳೇ ಇಲ್ಲಿ ಮಾನವರೂಪಿ ಪಾತ್ರಗಳಾಗಿ ಇಡೀ ಕಾದಂಬರಿಗೆ ಸಂತತ ಚಾಲನೆ ಕೊಡುತ್ತವೆ. ಆದರೆ ಇವುಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಚಿತ್ರಣ ಈ ಕಾದಂಬರಿಯ ಮೂಲಭೂತ ವಸ್ತು. ಪ್ರಸ್ತುತದಲ್ಲಿ ಪ್ರತೀಪನ ಬಾಳಿನಲ್ಲಿ ಈ ಆರು ಚಿತ್ರವೃತ್ತಿ ವಿಶೇಷಗಳೇ ಆರು ಮಂದಿ ಸ್ತ್ರೀಯರಾಗಿ ಪ್ರವೇಶಿಸಿ, ಒಬ್ಬೊಬ್ಬರೂ ಅವನಲ್ಲಿ ಒಂದೊಂದು ಭಾವವನ್ನು ಉದ್ದೀಪನಗೊಳಿಸುತ್ತಾರೆ.
ಆಶಾ ರಘು ಬರೆದ “ಆವರ್ತ” ಕಾದಂಬರಿಯ ಕುರಿತು ಡಾ. ಸಾ.ಶಿ. ಮರುಳಯ್ಯನವರ ಬರಹ

ಪ್ರಾಚೀನ ಮಹಾಕಾವ್ಯ ರಚನೆಯಿಂದ ತೆರವಾದ ಸ್ಥಾನವನ್ನು ಈ ಆಧುನಿಕ ಯುಗದಲ್ಲಿ ಮಹಾಕಾದಂಬರಿಗಳು ತುಂಬಿವೆ. ಇಪ್ಪತ್ತನೆಯ ಶತಮಾನದಲ್ಲಂತೂ ಪೌರಾಣಿಕ, ಐತಿಹಾಸಿಕ, ಸಾಮಾಜಿಕ, ಮನಶ್ಶಾಸ್ತ್ರೀಯ, ವೈಚಾರಿಕ, ವೈಜ್ಞಾನಿಕಾಧಾರಿತ ಕಾದಂಬರಿಗಳು ಕನ್ನಡ ಸಾಹಿತ್ಯಾಕಾಶದಲ್ಲಿ ಧ್ರುವತಾರೆಗಳಂತೆ ಪ್ರಕಾಶಿಸಿದವು. ಇಂತನೇಕ ವಸ್ತು ವಿಶೇಷಗಳನ್ನುಳ್ಳ ವೈವಿಧ್ಯಮಯ ಕಾದಂಬರಿಗಳು ಅಸಂಖ್ಯಾತವಿದ್ದರೂ ಪೌರಾಣಿಕ ವಸ್ತುವಾಧಾರಿತ ಕಾದಂಬರಿಗಳನ್ನು ಕೊಟ್ಟವರು ಒಬ್ಬರು ಮಾತ್ರ. ಅವರೇ ವೇದಾಂತ ಹಾಗೂ ಪೂರ್ವ ಮೀಮಾಂಸಾಶಾಸ್ತ್ರಗಳ ಪ್ರಕಾಂಡ ಪಂಡಿತರಾದ ಶ್ರೀ ದೇವುಡು ನರಸಿಂಹಶಾಸ್ತ್ರಿಗಳು. ಶ್ರೀಯುತರು ಇಂದಿಗೆ ಆರೇಳು ದಶಕಗಳ ಹಿಂದೆಯೇ ‘ಮಹಾಬ್ರಾಹ್ಮಣ’, ‘ಮಹಾಕ್ಷತ್ರಿಯ’ ಮತ್ತು ‘ಮಹಾದರ್ಶನ’ ಎಂಬ ಬೃಹತ್ತು ಮಹತ್ತುಗಳಿಂದ ಕೂಡಿದ ಮೂರು ಮಹಾಕಾದಂಬರಿಗಳನ್ನು ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಕೊಡಮಾಡಿದವರು. ಇವು ಅನುಕ್ರಮವಾಗಿ, ‘ಮಹಾಬ್ರಾಹ್ಮಣ’ದಲ್ಲಿ ವಿಶ್ವಾಮಿತ್ರ ಮಹರ್ಷಿಯ ಮಹತ್ಸಾಧನೆ ಸಿದ್ಧಿಯನ್ನೂ, ‘ಮಹಾಕ್ಷತ್ರಿಯ’ದಲ್ಲಿ ನಹುಷನ ಕಥೆಯನ್ನೂ, ‘ಮಹಾದರ್ಶನ’ದಲ್ಲಿ ಯಾಜ್ಞವಲ್ಕ್ಯರ ಅಧಿಭೌತಿಕಾತೀತ ಅಪರೋಕ್ಷ ಜ್ಞಾನದ ಮಹದ್ದರ್ಶನವನ್ನೂ ಬಿತ್ತರಿಸಿವೆ. ದೇವುಡುನಂತರ ಅಪ್ರತಿಮ ಪ್ರತಿಭಾಶಾಲಿಗಳಾದ ಡಾ. ವಿ.ಕೃ.ಗೋಕಾಕರ ‘ಭಾರತ ಸಿಂಧು ರಶ್ಮಿ’ ಎಂಬ ಮಹಾಕಾವ್ಯ ಬಂತೇ ಹೊರತು, ಮಹಾಕಾದಂಬರಿ ಬರಲಿಲ್ಲ. ಆ ಕೊರತೆಯನ್ನು ನಿವಾರಿಸಲು ಶ್ರೀಮತಿ ಆಶಾರಘುರವರು ಬರಲಿ ಎಂದು ಕಾಲ ಕಾಯುತ್ತಿತ್ತೆಂದು ತೋರುತ್ತದೆ. ಕಾಲದ ಆಸೆ ಈಡೇರಿತು. ಶ್ರೀಮತಿ ಆಶಾರಘುರವರು ಕಂಕಣಕಟ್ಟಿ ಪ್ರಸ್ತುತ ‘ಆವರ್ತ’ ಎಂಬ ‘ಪೌರಾಣಿಕವಲ್ಲದ ಪೌರಾಣಿಕ’ ಕಾದಂಬರಿಯನ್ನು ರಚಿಸಿದರು! ಈ ವಿಚಿತ್ರ ವಿಶಿಷ್ಟ ರೂಪದ ಕಾದಂಬರಿಗೆ ಸಪ್ತಕೋಟಿ ಕನ್ನಡಿಗರ ಪರವಾಗಿ ಹಾರ್ದಿಕ ಸ್ವಾಗತ ಕೋರುತ್ತೇನೆ.

‘ಆವರ್ತ’ ಕಾದಂಬರಿಯ ರಚನಾ ಶಿಲ್ಪ ‘ಬಾಣೋಚ್ಛಿಷ್ಟಂ ಜಗತ್‍ಸರ್ವಂ’ ಎಂಬ ಖ್ಯಾತಿಗೆ ಪಾತ್ರನಾಗಿದ್ದ ಸಂಸ್ಕೃತದ ಬಾಣಭಟ್ಟನ ‘ಕಾದಂಬರಿ’ ಎಂಬ ತುಂಬು ಮಹತ್ವದ ಗದ್ಯ ಕೃತಿಯನ್ನು, ಹತ್ತನೆಯ ಶತಮಾನದ ಕನ್ನಡ ಕವಿಪುಂಗವ ಮೊದಲನೆಯ ನಾಗವರ್ಮನು ಚಂಪೂಕಾವ್ಯವಾಗಿ ಪರಿವರ್ತಿಸಿ ರಚಿಸಿದ್ದಾನೆ. ಆ ‘ಕರ್ನಾಟಕ ಕಾದಂಬರಿ’ಯ ರಚನಾತಂತ್ರದಂತೆ ಕಥೆ ಅಂತ್ಯದಿಂದ ಆರಂಭಗೊಂಡು, ಪೂರ್ಣಗೊಳ್ಳುವೆಡೆಯಲ್ಲಿ ಮೊದಲಸ್ತರಕ್ಕೆ ಬಂದು ಮುಕ್ತಾಯಗೊಳ್ಳುವ ಹಿನ್ನೋಟ ನಿರೂಪಣೆಯ ತಂತ್ರ (Flashback Technique) ಅಚ್ಚರಿ ಮೂಡಿಸುತ್ತದೆ. ನಾಗವರ್ಮನ ಕಾವ್ಯಕಥೆ ಹಂತಹಂತವಾಗಿ ಸರಣಿಯ ರೂಪದಲ್ಲಿ ತೆರೆದುಕೊಳ್ಳುತ್ತಾ ಸಾಗಿ, ಅಂತ್ಯದಲ್ಲಿ ಪುಂಡರೀಕ ಮಹಾಶ್ವೇತೆ ಹಾಗೂ ಚಂದ್ರಾಪೀಡ ಕಾದಂಬರಿಯರ ಪ್ರಣಯ ಫಲಿಸಿದ ಕಥೆಯಾದರೆ, ಸೋದರಿ ಆಶಾರಘುರವರ ‘ಆವರ್ತ’ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಅರಿಷಡ್ವರ್ಗಗಳ ಸುಳಿಯಲ್ಲಿ ಓರ್ವ ವ್ಯಕ್ತಿ ತೊಳಲಿ, ಬಳಲಿ, ಅಂತ್ಯದಲ್ಲಿ ವಿಶೇಷಾನುಭೂತಿಯ ಅಪರೋಕ್ಷ ಜ್ಞಾನಿಯಾಗುವ ಚಿತ್ರಣ ಇಲ್ಲಿ ಬಿತ್ತರಗೊಂಡಿದೆ.

‘ಆವರ್ತ’ದ ಕಥಾನಾಯಕ ಪ್ರತೀಪನ ಸುತ್ತಲೂ ಕಾದಂಬರಿಕಾರ್ತಿ ಒಂದು ಸುಂದರ, ಮನಮೋಹಕ ಕಲೆಯ ಬಲೆಯನ್ನು ನೇಯ್ದಿದ್ದಾರೆ. ಕಾದಂಬರಿಯ ಆರಂಭದ ಅವತಾರವೇ ರಮ್ಯ ರಂಜಕ Romanatic ಶೈಲಿಯದು. ಪ್ರತೀಪನಿಗೆ ಆರ್ತಳಾಗಿ ತನ್ನನ್ನೇ ನೋಡುತ್ತಾ ತೋಳುಗಳ ಚಾಚಿ ಕರೆಯುತ್ತಿದ್ದ ಅವಳ ಬಿಂಬವನ್ನು ನೀರಿನಲ್ಲಿ ಕಂಡು, ಅರೆಕ್ಷಣವೂ ಯೋಚಿಸದೆ, ಹರಿಯುವ ನೀರಿಗೆ ಧುಮುಕಿ, ಪ್ರವಾಹಕ್ಕೆ ವಿರುದ್ಧವಾಗಿ ಈಜುತ್ತಾ, ಅವಳಿಗಾಗಿ ಇನ್ನಿಲ್ಲದ ಹಾಗೆ ಹುಡುಕುತ್ತಾ, ಭೋರ್ಗರೆಯುವ ನೀರಿನ ರಭಸಕ್ಕೆ ಆಯತಪ್ಪಿ ನಿತ್ರಾಣನಾಗಿ, ನೀರಿನ ಸುಳಿಗೆ ಸಿಕ್ಕು, ಗಿರಗಿರನೆ ತಿರುಗುತ್ತಿರುವಂತಾಗಿ ಕಣ್ಣಿಗೆ ಕತ್ತಲು ಕವಿದದ್ದಷ್ಟೇ ನೆನಪು.. ಕಣ್ಣು ತೆರೆದಾಗ ದಟ್ಟ ಕಾನನದ ಒಣ ಎಲೆ ಬಳ್ಳಿ ಕಲ್ಲು ಮುಳ್ಳುಗಳ ಇಳುವಿನಲ್ಲಿ ಬಿದ್ದಿದ್ದ. ಅರಿವು ಮರಳಿದಾಗ ಪೂರ್ವಸ್ಮರಣೆಯ ಸುರುಳಿ ಬಿಚ್ಚಿಕೊಳ್ಳುತ್ತದೆ.

‘ಆವರ್ತ’ ಈ ಬಗೆಯ ಆಕರ್ಷಕ ಶೈಲಿಯಲ್ಲಿದ್ದರೂ, ಇದೊಂದು ಸಾಂಕೇತಿಕ ಕಾದಂಬರಿ. ಮುಖ್ಯವಾಗಿ, ಮಾನವಾಂತರ್ಗತ ಕಾಮ, ಕ್ರೋಧ, ಲೋಭ, ಮೋಹ, ಮದ, ಮತ್ಸರಗಳೆಂಬ ಪ್ರವೃತ್ತಿಗಳೇ ಇಲ್ಲಿ ಮಾನವರೂಪಿ ಪಾತ್ರಗಳಾಗಿ ಇಡೀ ಕಾದಂಬರಿಗೆ ಸಂತತ ಚಾಲನೆ ಕೊಡುತ್ತವೆ. ಆದರೆ ಇವುಗಳ ಸುಳಿಯಲ್ಲಿ ಸಿಕ್ಕಿಕೊಂಡು ತೊಳಲಾಡುವ, ಬಿಡಿಸಿಕೊಳ್ಳಲು ಯತ್ನಿಸುವ, ಕಡೆಗೆ ಒಳಗಿದ್ದೂ ಇರದ ಹದವನ್ನು ಕಂಡುಕೊಳ್ಳುವ ಪ್ರತಿಯೊಬ್ಬ ವ್ಯಕ್ತಿಯ ಬದುಕಿನ ಚಿತ್ರಣ ಈ ಕಾದಂಬರಿಯ ಮೂಲಭೂತ ವಸ್ತು. ಪ್ರಸ್ತುತದಲ್ಲಿ ಪ್ರತೀಪನ ಬಾಳಿನಲ್ಲಿ ಈ ಆರು ಚಿತ್ರವೃತ್ತಿ ವಿಶೇಷಗಳೇ ಆರು ಮಂದಿ ಸ್ತ್ರೀಯರಾಗಿ ಪ್ರವೇಶಿಸಿ, ಒಬ್ಬೊಬ್ಬರೂ ಅವನಲ್ಲಿ ಒಂದೊಂದು ಭಾವವನ್ನು ಉದ್ದೀಪನಗೊಳಿಸುತ್ತಾರೆ. ಪ್ರತೀಪನನ್ನು ಬಿಡದ ‘ಮೋಹ’ದಲ್ಲಿ ಬಂಧಿಸಿದವಳು ‘ಪ್ರಮದ್ವರೆ’, ‘ಕಾಮ’ಜ್ವರವನ್ನು ಬೆಸೆದವಳು ‘ಮಧುವಂತಿ’, ‘ಕ್ರೋಧಾಗ್ನಿ’ಯನ್ನು ಜ್ವಲಿಸುವಂತೆಸಗಿದವಳು ‘ಲಾಕ್ಷಿ’, ಅವನ ‘ಲೋಭ’ಕ್ಕೊಂದು ಮೆಟ್ಟಿಲಾದವಳು ‘ಸತ್ಯವತಿ’, ‘ಮದ’ದ ಸಂಕೇತವೋ ಎಂಬಂತೆ ಅವನ ಕಿರೀಟದ ಗರಿಯಾಗಿ ಮೆರೆವವಳು ‘ಕಾಂತಲತೆ’, ತಾತ್ಸಾರಗೈಯದೆ ಪ್ರತೀಪನಲ್ಲಿ ‘ಮತ್ಸರ’ವನ್ನು ಮೆರೆಸಿದವಳು ‘ಶ್ಲಾಘ್ಯದೇವಿ’ – ಇವರುಗಳೇ ಈ ಕಾದಂಬರಿಯ ಚಾಲಕಶಕ್ತಿಗಳು. ಆದರೆ ಈ ಅರಿಷಡ್ವರ್ಗಗಳಲ್ಲಿ ‘ಮೋಹ’ ಸಮನ್ವಯ ಸಾಧಕ ಚಿರನೂತನ ಚೇತನ. ಆ ಕಾರಣದಿಂದಲೇ ಪ್ರತೀಪ ಮೋಹಳ ನಿತ್ಯ ಪಾರಾಯಣದಲ್ಲೇ ಜೀವನ ಸಾಗಿಸುತ್ತಾನೆ. ಪ್ರತೀಪನ ಪಾತ್ರ ಇಡೀ ಕಾದಂಬರಿಯ ಕೇಂದ್ರಬಿಂದುವೂ ಅಹುದು, ಅದರ ಪರಿಧಿಯೂ ಅಹುದು. ಅವನ ಪರಿವರ್ತನ ಪ್ರಭಾವಲಯದಲ್ಲಿ ಕಾದಂಬರಿ ತನ್ನ ಪರಿಪೂರ್ಣತೆಯ ವ್ಯಾಪ್ತಿ-ದೀಪ್ತಿಗಳೆರಡನ್ನೂ ಪಡೆದುಕೊಂಡಿದೆ.

ವಿಶ್ವಸೃಷ್ಟಿಯ ಪ್ರಭಾವಲಯದಲ್ಲಿ ಬೆಳೆದು ಹೊಳೆಯುವ ಪ್ರಕೃತಿ ಸೌಂದರ್ಯದಂತೆ, ಕಾದಂಬರಿಯ ಕಥಾನಕದ ಪ್ರತಿ ಘಟ್ಟವೂ ಸ್ವಯಂ ಸುಂದರ. ಅಂತೆಯೇ ಅಲ್ಲಿನ ಪ್ರೀತಿ, ಪ್ರಣಯ, ವಾತ್ಸಲ್ಯಗಳು ಆಸ್ವಾದ್ಯವಾಗುವಂತೆ, ರಾಗ, ದ್ವೇಷ, ಶೋಕ, ಕ್ರೋಧ, ಭೀಭತ್ಸಗಳೂ ಕೂಡ ಸಹೃದಯ ಶ್ರೋತ್ರುವಿನ ಚಿತ್ತಚೇತೋಹಾರಿಯಾಗುವಂತೆಸಗುತ್ತವೆ. ಸಾಹಿತಿ ಆಶಾರಘುರವರ ‘ಆವರ್ತ’ ಒಂದು ಅಧ್ಯಾತ್ಮ ವಸ್ತುವಾಧಾರಿತ ಸಾಂಕೇತಿಕ ಕಾದಂಬರಿಯಾದರೂ ವಾಸ್ತವತೆಯ ನೆಲಗಟ್ಟಿನ ಮೇಲೆ ನಿಂತ ಸಹಜ ಜೀವನದ ಸತ್ಯಸಾಕ್ಷಾತ್ಕಾರ ಸ್ವರೂಪಿ ತಾನಾಗಿದೆ. ಏಕೆಂದರೆ ಕಲಾನುಭವ ನಿಂತಿರುವುದೇ ಲೋಕಾನುಭವದ ತಳಹದಿಯ ಮೇಲೆ. ಪ್ರಸಕ್ತ ಕೃತಿಯು ರಾಜಕೀಯ ರಂಗಿನಿಂದ ಕೂಡಿರುವುದರಿಂದ ಇದು ಶುದ್ಧ ಚದುರಂಗದಾಟದ ದಾಳವೂ ಆಗಿದೆ!

ಪೌರಾಣಿಕ ಛಾಯೆಯ ಪರಿವರ್ತಿತ ರಚನೆಯಾದರೂ ಇದರಲ್ಲಿ ನಮ್ಮ ಆರ್ಷೇಯ ಸಂಸ್ಕೃತಿಯ ಸೊಗಡು ತುಂಬಿದ ಒಳನೋಟವೂ ಇದೆ. ಸೋದರಿ ಆಶಾರಘುರವರ ಪಾಂಡಿತ್ಯ ಪ್ರತಿಭೆ ದಿಗಂತ ವಿಶ್ರಾಂತವಾಗಿದೆ. ಕಥಾನುಸಂಧಾನದ ಪ್ರಗತಿಯ ಶಿಖರವನ್ನೇರಿದ ಪ್ರಸ್ತುತ ಕಾದಂಬರಿಕಾರ್ತಿ ಆಶಾರಘುರವರ ಕಥಾಸಂವಿಧಾನ ಕೌಶಲ, ಪಾತ್ರ ಪೋಷಣೆ, ಸಂಭಾಷಣೆಯ ಸೌಷ್ಠವ, ಭಾಷಾಶೈಲಿಯ ಶ್ರೀಮಂತಿಕೆ, ವರ್ಣನಾವೈಖರಿ, ಘಟನಾವಳಿಗಳ ಸಂಯೋಜನೆಯ ಸಹಜತೆ, ನೋವು-ನಲಿವು, ರಾಗ-ದ್ವೇಷ, ರೋಷಭೀಷಣತೆ, ಶ್ಲೀಲ-ಅಶ್ಲೀಲಗಳ ವಿಶೇಷಣೆಯಿಲ್ಲದೆ ಕಾದಂಬರಿಯ ಶ್ರೀಮಂತಿಕೆಗೆ ಪೂರಕ ಪೋಷಕಗಳಾಗಿ ರಾಚನಿಕ ಪರಿಣತಿಯ ಪ್ರಭಾವಲಯವನ್ನು ನಿರ್ಮಿಸಿವೆ. ಶ್ರೀಮತಿಯವರು ತಮ್ಮ ಪ್ರಾತಿಭ ಪರಂಜ್ಯೋತಿಯ ನೆರವಿನಿಂದ, ತಮ್ಮ ಪ್ರಾಂಜಲ ಜೀವನಾನುಭವ ಕಾವ್ಯನುಭವಗಳ ಬಳಕೆಯ ರಹಸ್ಯವರಿತಿರುವುದರಿಂದ, ಇವರು ಸಂವಹನ ಪ್ರಕ್ರಿಯೆಯ (Communication aspect) ಗುಟ್ಟರಿತ ಗಾರುಡಿಗರಾಗಿದ್ದಾರೆ.


ಮಾನವಾಂತರ್ಗತ ಅರಿಷಡ್ವರ್ಗಗಳನ್ನು ನಿದರ್ಶನಗಳೊಂದಿಗೆ ಪ್ರದರ್ಶಿಸಿ, ಭಾರತೀಯ ಸನಾತನ ಸಂಸ್ಕೃತಿಯ ವೈಜಯಂತಿಯನ್ನು ಹಿಮಾಲಯದ ಉತ್ತುಂಗ ಶೃಂಗದ ಮೇಲೆ ಅನಾವರಣಗೊಳಿಸುವ ಮಹಾನ್ ಸಾಹಸಕ್ಕೆ ಕೈ ಹಾಕಿ ಯಶಸ್ವಿಯಾಗಿರುವ ಸೋದರಿ ಆಶಾರಘುರವರು ಎಲ್ಲ ಕನ್ನಡಿಗರ ಗೌರವಾದರಗಳಿಗೂ ಪಾತ್ರರಾಗುವುದರಲ್ಲಿ ಸಂದೇಹವಿಲ್ಲ. ಅಂತಹ ಅಪ್ರತಿಮ ‘ಪ್ರತಿಭೆ’ಯನ್ನು ತಮ್ಮ ಪ್ರಿಯ ಪತ್ನಿಯನ್ನಾಗಿ ಪಡೆದಿರುವ ಶ್ರೀ ರಘುರವರು ನಿಜಕ್ಕೂ ಭಾಗ್ಯಶಾಲಿಗಳು. ಶ್ರೀಯುತರಿಗೆ ನನ್ನ ಅಭಿನಂದನೆಗಳು. ‘ಆವರ್ತ’ ಶ್ರೀಮತಿ ಆಶಾರಘುರವರ ಚೊಚ್ಚಲ ಕೃತಿ. ಈಗ ತಾನೆ ಪರ್ವತಾರೋಹಣ ಮಾಡಿರುವುದರಿಂದ ನನ್ನ ಈ ಅನಿಮಿತ್ತ ಸೋದರಿಯ ಶ್ರೀಮಂತ ಧೀಮಂತ ಲೇಖಣಿ, ಇದಕ್ಕಿಂತಲೂ ಇನ್ನೂ ಅತ್ಯುತ್ತಮ ಕೃತಿರತ್ನವನ್ನಿತ್ತು ಕನ್ನಡಮ್ಮನ ಮಡಿಲು ತುಂಬಲಿ, ಮುಡಿಯ ಸಿಂಗರಿಸಲಿ ಎಂದು ಹಾರ್ದಿಕವಾಗಿ ಹಾರೈಸಿ, ಸಕಲ ಶುಭಗಳನ್ನೂ ಕೋರಿ ವಿರಮಿಸುತ್ತೇನೆ.

(ಕೃತಿ: ಆವರ್ತ (ಕಾದಂಬರಿ), ಲೇಖಕರು: ಆಶಾ ರಘು, ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್‌, ಬೆಲೆ: 530/-)