ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು. ಅವಕ್ಕೆ ತೆಳುಪರದೆ. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು. ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು. ಆಶಾ ರಘು ಬರೆದ  ‘ಮಾಯೆ’ ಕಾದಂಬರಿಯ ಒಂದು ಅಧ್ಯಾಯ ಕೆಂಡಸಂಪಿಗೆಯ ಓದುಗರಿಗಾಗಿ ಇಲ್ಲಿದೆ.

 

ಪಡುತ್ತಿದ್ದ ಅಪರಿಮಿತವಾದ ಶೋಕಕ್ಕೂ, ಕಂಡು ಬಂದಿದ್ದ ಅಗಾಧವಾದ ಕಡಲಿಗೂ ಅದೆಂತಹುದೋ ಸಂಬಂಧವೇರ್ಪಟ್ಟು, ಶೋಕದಲ್ಲಿ ಕಣ್ಣ ಮುಚ್ಚಿದರೆ, ಕಣ್ಣೀರೇ ಕಡಲಾಗಿ ಆವರಿಸಿಕೊಂಡಂತೆ ಭಾಸವಾಗುತ್ತಿತ್ತು! ಎರಡು ದಿನ ಹೊಟ್ಟೆಗೆ ಏನೂ ಸೇರಲಿಲ್ಲ.. ಮೂರನೆಯ ದಿನ ಅಜ್ಜಿ ಬಲವಂತ ಮಾಡಿ ಒಂದಿಷ್ಟು ಗಂಜಿ ಕುಡಿಸಿದಳು. ಒಂದು ವಾರ ಕಳೆದ ಮೇಲೆ ಒಂದು ಶುಕ್ರವಾರದ ದಿನ.. ತಲೆಯಲ್ಲೇನೋ ಲೆಕ್ಕಾಚಾರ ಹಾಕಿಕೊಂಡು ಮಕಣಾರೆಯ ಕಡೆಗೆ ಗಾಡಿ ಓಡಿಸಿದೆ. ಸಾಯಂಕಾಲದ ವೇಳೆಗೆ ಆ ಊರಿನ ಶಿವನಾಲಯ ತಲುಪಿದೆ. ನಾನೆಣಿಸಿದಂತೆ ದೇವಾಲಯದ ತುಂಬ ಜನ ಸೇರಿದ್ದರು ಹಿಂದೆ. ಮಂಗಳೆಯನ್ನು ಮದುವೆಯಾಗುವ ಮೊದಲು, ಇದೇ ವೈಶಾಲಿಯ ಕನವರಿಕೆಯಲ್ಲಿ ಗಡ್ಡ ಮೀಸೆಗಳನ್ನು ಬಿಟ್ಟು ಹುಚ್ಚೆದ್ದು ಅಲೆಯುತ್ತಿದ್ದ ಸಂದರ್ಭದಲ್ಲಿ ಗೆಳೆಯರ ಗುಂಪಿನ ಯಾರೋ ಹೇಳಿದ್ದರು. ‘ಮಕಣಾರೆಯ ಶಿವನಾಲಯದಲ್ಲಿ ಪ್ರತಿ ಶುಕ್ರವಾರ ನೃತ್ಯ ಕಾರ್ಯಕ್ರಮವಿರುತ್ತೆ. ಹೆಸರಾಂತ ದೇವದಾಸಿ ಸನಕವ್ವ ನರ್ತಿಸುತ್ತಾಳೆ. ಒಮ್ಮೆ ಅಲ್ಲಿಗೆ ಹೋದರೆ ದುಃಖವೆಲ್ಲಾ ಕರಗಿ ಹೋಗಿ, ಜೀವನೋತ್ಸಾಹ ತುಂಬಿಕೊಳ್ಳುತ್ತೆ’ ಎಂದು! ಆದರೆ ಆಗ ನಾನು ಹೋಗಿರಲಿಲ್ಲ. ವೈಶಾಲಿ ನನ್ನ ಜೀವನದಿಂದ ಮಾತ್ರವೇನು.. ಈ ಲೋಕದಿಂದಲೇ ದೂರವಾದ ಮೇಲೆ ಹೋಗಬೇಕೆನಿಸಿ ಹೋಗಿದ್ದೆ.

ದೀಪೋತ್ಸವದ ರೀತಿ ಸಾಲು ದೀಪಗಳನ್ನು ಬೆಳಗಿಸಿದ್ದರು. ಮೇಳದವರು ಆಗಲೇ ಬಂದು ಆಸೀನರಾಗಿದ್ದರು.. ದೇವದಾಸಿಯೆಲ್ಲೋ ಕಾಣಲಿಲ್ಲ. ಜನ ಗಿಜಿಗಿಜಿ ಎನ್ನುತ್ತಿದ್ದರು. ದೇವದಾಸಿ ಸನಕವ್ವ ದೇವಾಲಯದ ಮುಂಭಾಗ ಕುದುರೆಗಾಡಿಯಲ್ಲಿ ಬಂದಿಳಿದಳು. ಜನರ ನಡುವೆ ಗದ್ದಲ ಇನ್ನಷ್ಟು ಹೆಚ್ಚಿತು. ತನ್ನ ವಸ್ತ್ರಾಲಂಕಾರವೆಲ್ಲಾ ಮುಚ್ಚುವ ಹಾಗೆ ಮೇಲು ಹೊದಿಕೆಯೊಂದನ್ನು ಹೊದ್ದುಕೊಂಡು ಒಳ ಪ್ರವೇಶಿಸಿದ ಸನಕವ್ವ ಅದನ್ನು ಮೇಳದಲ್ಲಿ ಕುಳಿತಿದ್ದ ಒಬ್ಬ ಹೆಂಗಸಿಗೆ ಕೊಟ್ಟಳು. ನಿಜಕ್ಕೂ ಸುಂದರಿ..! ದೀಪದ ಬೆಳಕೆಲ್ಲಾ ಅವಳು ಮೈಮೇಲೆ ಹಾಕಿದ್ದ ಒಡವೆಗಳ, ರೇಷಿಮೆಯ ವಸ್ತ್ರದ ಮೇಲೆ ಪ್ರತಿಫಲನಗೊಂಡು ಇನ್ನಷ್ಟು ಕಣ್ಣು ಕೂರೈಸುವಂತೆ ಕಾಣುತ್ತಿದ್ದಳು.

ತಂಬೂರಿಯ ಶೃತಿಯು ನಿಧಾನವಾಗಿ ಮೊಳಗಲು ಶುರುವಾಗುತ್ತಿದ್ದಂತೆ ಸಭಿಕರೆಲ್ಲಾ ನಿಶ್ಯಬ್ದವಾಗಿ ಕುಳಿತುಕೊಂಡರು.
ಶಂಕರನೆ ಕೇಳೋ ಎನ್ನ
ಮನದ ಮಾತ
ಹಾಡಲಿ ಅಡಗಿದೆ ಭಿನ್ನ
ಜೀವನಗಾಥ
ಎಂಬ ಗಾಯಕಿಯ ಹಾಡಿಗೆ ಸನಕವ್ವ ಭಾವಾಭಿನಯ ಮಾಡುತ್ತ ಹೆಜ್ಜೆ ಹಾಕತೊಡಗಿದಳು. ಆಕರ್ಷಕ ಭಂಗಿಗಳು, ಹಸ್ತ ಮುದ್ರೆಗಳು.. ಚೂಟಿಯಾಗಿ ಜಿಗಿಜಿಗಿದು ಕುಣಿದಳಲ್ಲ..! ಸುಮಾರು ಐದಾರು ಹಾಡುಗಳು.. ಆರ್ತವಾಗಿ ಮೊರೆಯಿಡುವುದು.. ಕೆಣಕುವುದು.. ಕೋಪಿಸಿಕೊಳ್ಳುವುದು.. ಅಲ್ಲಗಳೆಯುವುದು.. ವಿರಹದಿಂದ ತತ್ತರಿಸುವುದು.. ಮತ್ತೆ ಶರಣಾಗುವುದು.. ಹೀಗೆ ನಾನಾ ರೀತಿಯ ಭಾವಗಳನ್ನು ಪ್ರದರ್ಶಿಸಿ ಪ್ರೇಕ್ಷಕರನ್ನು ರಂಜಿಸಿದಳು.

(ಆಶಾ ರಘು)

ನೃತ್ಯ ಕಾರ್ಯಕ್ರಮ ಮುಗಿದ ಮೇಲೆ ಶಿವನಿಗೆ ತನ್ನ ನೃತ್ಯ ಶೈಲಿಯಲ್ಲಿಯೇ ಪ್ರತ್ಯೇಕವಾಗಿ ನಮಸ್ಕರಿಸಿ, ತೀರ್ಥ ಪ್ರಸಾದಗಳನ್ನು ಸ್ವೀಕರಿಸಿ, ಬಂದಷ್ಟೇ ವೇಗವಾಗಿ ಮಿಂಚಿನಂತೆ ಕಣ್ಮರೆಯಾಗಿಬಿಟ್ಟಳು. ನಾನು ತಕ್ಷಣವೇ ನನ್ನ ಗಾಡಿಯಲ್ಲಿ ಕುಳಿತು ಅವಳನ್ನು ಹಿಂಬಾಲಿಸಲು ಯತ್ನಿಸಿದೆ. ಅವಳ ಗಾಡಿ ಹೊಡೆಯುವವನು ಶೀಘ್ರವಾಗಿ ಮಾಯವಾಗಿಬಿಟ್ಟಿದ್ದ..! ನಂತರ ಅವರಿವರಲ್ಲಿ ವಿಚಾರಿಸಿಕೊಂಡು.. ಹುಂ.. ವಿಚಾರಿಸಿಕೊಂಡು ಅಂದರೇನು..? ಹೇಗೆ ಮುಖ ಮಾಡುತ್ತಿದ್ದರು ಕೇಳಿದಾಗ..? ಅರ್ಥಗರ್ಭಿತವಾಗಿ ಮುಗುಳುನಗುತ್ತಾ ಅಥವಾ ವಡಿಯನ್ನು ಪ್ರಕಟಿಸಿ ಮುಖ ಸಿಂಡರಿಸಿಕೊಳ್ಳುತ್ತಾ..! ನನಗೂ ಒಳಗೆ ಮುಜುಗರ.. ಆದರೂ ಕೇಳಿ ತಿಳಿದುಕೊಂಡು ಅವಳ ಹಿಂದೆಯೇ ನಾನೂ ಅವಳ ಮನೆಯನ್ನು ತಲುಪಿಕೊಂಡೆ.

ತಕ್ಕಮಟ್ಟಿಗೆ ವಿಶಾಲವಾದ ಉಪ್ಪರಿಗೆ ಮನೆ.. ಮನೆಯ ಸುತ್ತಲೂ ಬಣ್ಣಬಣ್ಣದ ಹೂವಿನ ಗಿಡಗಳು.. ಅವಳು ಬೇಲಿಯ ದ್ವಾರ ದಾಟಿಕೊಂಡು ಒಳಗೆ ಪ್ರವೇಶಿಸಿದಳು. ಹಿಂದೆಯೇ ನಾನೂ ನುಗ್ಗಿದೆ.

‘ಯಾರು ನೀವು..?’ ಎಂದಳು ಹೊರಳಿ.
ನನಗೆ ನನ್ನ ಹೆಸರು ಹೇಳಲೂ ಧೈರ್ಯವಾಗಲಿಲ್ಲ.
ಅವಳೇ ನಿಡುಸುಯ್ದು, ‘ಇರಲಿ ಬನ್ನಿ.. ಒಳಗೆ ಬನ್ನಿ’ ಎಂದು ಒಳಗೆ ಕರೆದೊಯ್ದಳು.

‘ಇಲ್ಲಿ ಕೂತುಕೊಳ್ಳಿ’ ಎಂದು ಕೂರಲು ಆಸನ ತೋರಿಸಿ, ‘ಪಾರವ್ವ’ ಎಂದು ಕೂಗಿದಳು.

ಒಳಗಿನಿಂದ ನಡುವಯಸ್ಸು ಮೀರಿದ ಹೆಂಗಸೊಬ್ಬಳು ಹೊರಗೆ ಬಂದು ನಿಂತು ‘ಅಮ್ಮ’ ಎಂದಳು ಏನಪ್ಪಣೆ? ಎನ್ನುವಂತೆ.

‘ಅತಿಥಿಗಳು ಬಂದಿದಾರೆ. ನಿಗ ನೋಡು. ನಾನು ಬಟ್ಟೆ ಬದಲಾಯಿಸಿಕೊಂಡು ಬರ್ತೀನಿ..’ ಎಂದು ಅವಳಿಗೆ ಹೇಳಿ, ‘ಈಗ ಬಂದೆ. ನೀವು ಕೂತಿರಿ..’ ಎಂದು ಉಪ್ಪರಿಗೆಯ ಮೆಟ್ಟಿಲುಗಳನ್ನು ಏರಿದಳು ಸನಕವ್ವ.

ಪಾರವ್ವ, ‘ಬಾಯಾರಿಕೆಗೆ ಏನು ಕುಡೀತೀರಿ..? ಪಾನಕವೋ, ಮಜ್ಜಿಗೆಯೋ, ಕಷಾಯವೋ, ಸುರೆಯೋ..?’ ಎಂದು ಕೇಳಿದಳು.

ನಾನು ‘ಸುರೆ’ ಎಂದೆ.

ಪಾರವ್ವ ಒಂದು ಮೊಗೆಯಲ್ಲಿ ಸುರೆಯನ್ನು ತಂದುಕೊಟ್ಟು ಹೋದಳು. ನಾಲ್ಕು ಗುಟುಕು ಹೀರುವುದರಲ್ಲಿ ಮೇಳದ ಗುಂಪು ಶಿವಾಲಯದಿಂದ ಹಿಂದಿರುಗಿ ಬಂದಿತು. ತಮ್ಮ ವಾದ್ಯ ಸಲಕರಣೆಗಳನ್ನು ಅಂಗಳಲ್ಲಿ ಜೋಡಿಸಿಟ್ಟು ಉಳಿಯುವವರು ಉಳಿದರು, ಮಿಕ್ಕವರು ಹೊರಟುಹೋದರು. ನಾನು ಸುರೆಯ ಮೊಗೆಯನ್ನು ಬರಿದು ಮಾಡಿ ಬದಿಗಿಟ್ಟೆ. ಅಷ್ಟರಲ್ಲಿ ಸನಕವ್ವ ಉಪ್ಪರಿಗೆಯಿಂದ ಕೆಳಗಿಳಿದು ಬಂದಳು. ಬಂದು ನನ್ನ ಎದುರಿಗೆ ನಿಂತು, ‘ಪಾನೀಯವಾಯಿತೇ?’ ಎಂದು ಕೇಳಿದಳು. ನಾನು ತಲೆಯಾಡಿಸಿದೆ.

‘ಬನ್ನಿ ಹಾಗಿದ್ದರೆ, ಮೇಲೆ ಹೋಗೋಣ’ ಎಂದು ನನ್ನ ಕೈ ಹಿಡಿದುಕೊಂಡು ಕರೆದೊಯ್ದಳು.

ವಿಶಾಲವಾದ ಕೋಣೆ. ಕೆತ್ತನೆಯ ಕುಸುರಿ ಮಾಡಲಾದ ದೊಡ್ಡ ಮಂಚ.. ಮೆತ್ತೆ.. ಎರಡು ದೊಡ್ಡ ದೊಡ್ಡ ಗವಾಕ್ಷಿಗಳು.. ಅವಕ್ಕೆ ತೆಳುಪರದೆ.. ಇನ್ನುಳಿದ ಗೋಡೆಯ ಭಾಗಗಳಲ್ಲಿ ನಾಲ್ಕಾರು ನೃತ್ಯ ಭಂಗಿಗಳ ಚಿತ್ರಪಟಗಳು.
ಮೆತ್ತೆಯ ಮೇಲೆ ನನ್ನ ಪಕ್ಕದಲ್ಲಿ ಕುಳಿತು, ನನ್ನ ಕೈಗಳನ್ನು ಅವಳ ಕೈಗಳಲ್ಲಿ ಹಿಡಿದು ಮುಗುಳುನಕ್ಕಳು. ನನಗೆ ಅವಳ ಜಾಗದಲ್ಲಿ ವೈಶಾಲಿಯನ್ನು ಕಲ್ಪಿಸಿಕೊಂಡು ಕಣ್ಣುಗಳಲ್ಲಿ ನೀರು ತುಂಬಿಕೊಂಡುಬಿಟ್ಟಿತು.

ಸನಕವ್ವ ಸ್ವಲ್ಪವೂ ವಿಚಲಿತಳಾಗದೆ, ಶಾಂತವಾಗಿ ಬೆನ್ನು ನೇವರಿಸಿ, ತನ್ನ ಸೆರಗಿನಲ್ಲಿ ನನ್ನ ಕಣ್ಣುಗಳನ್ನು ಒರೆಸಿ, ಮೆಲುದನಿಯಲ್ಲಿ ‘ಯಾಕೆ? ಏನಾಯ್ತು..?’ ಎಂದಳು. ನನಗೆ ಅವಳ ಆಪ್ತ ದನಿ ಕೇಳಿ ಇನ್ನಷ್ಟು ಉಮ್ಮಳಿಸಿ ಬಂದಿತಲ್ಲ..! ಏನೆಂದಳು ಸನಕವ್ವ..? ‘ಹೇಳಿ, ನಿಮ್ಮ ಕಥೆ ಅದೇನು ಹೇಳಿ.. ಕಿವಿಯಾಗ್ತೀನಿ..’!

‘ಒಂದು ರೀತೀಲಿ ಅವಳ ಸಾವಿಗೆ ನಾನೇ ಕಾರಣ..’ ಎಂದು ಬಿಕ್ಕಿದೆ.

‘ಯಾರ ಸಾವಿಗೆ?’

‘ವೈಶಾಲಿಯ ಸಾವಿಗೆ’

‘ಯಾರು ವೈಶಾಲಿ ಎಂದರೆ?’

‘ನನ್ನ ಪ್ರಾಣಸಖಿ.. ಬಾಲ್ಯ ಸ್ನೇಹಿತೆ. ಅವಳೂ ನಾನೂ ಕೂಡಿ ಆಡಿ ಬೆಳೆದವರು. ಅವಳನ್ನು ನಾನು ತುಂಬಾ ಪ್ರೀತಿಸುತ್ತಿದ್ದೆ.. ಅವಳೂ ಪ್ರೀತಿಸುತ್ತಿದ್ದಳು. ನನಗೆ ಗೊತ್ತಿಲ್ಲದೆ ಗುಟ್ಟಾಗಿ ಅವರಪ್ಪ ಅವಳಿಗೆ ಮದುವೆ ಮಾಡಿಬಿಟ್ಟರು.. ಕನ್ಯಾಶುಲ್ಕಕ್ಕಾಗಿ..! ಕೆಲಕಾಲ ಗಡ್ಡಬಿಟ್ಟುಕೊಂಡು ಹುಚ್ಚೆದ್ದು ತಿರುಗಿದೆ. ಆ ನಂತರ ಮನೆಯಲ್ಲಿ ಬಲವಂತಪಡಿಸಿ ನನಗೂ ಮದುವೆ ಮಾಡಿದರು. ಇಬ್ಬರು ಮಕ್ಕಳಾದರು. ಒಂದಷ್ಟು ಭೂಮಿ, ಆಸ್ತಿ ಮಾಡಿಕೊಂಡ ಮೇಲೆ ಮತ್ತೆ ಅವಳು ಬೇಕು ಅನ್ನಿಸಿತು. ಆಗ ನಾನು ಅವಳನ್ನು..’
‘ಅವಳನ್ನು..?’

ನಾನು ಸುರೆಯ ಮೊಗೆಯನ್ನು ಬರಿದು ಮಾಡಿ ಬದಿಗಿಟ್ಟೆ. ಅಷ್ಟರಲ್ಲಿ ಸನಕವ್ವ ಉಪ್ಪರಿಗೆಯಿಂದ ಕೆಳಗಿಳಿದು ಬಂದಳು. ಬಂದು ನನ್ನ ಎದುರಿಗೆ ನಿಂತು, ‘ಪಾನೀಯವಾಯಿತೇ?’ ಎಂದು ಕೇಳಿದಳು. ನಾನು ತಲೆಯಾಡಿಸಿದೆ.

‘ಅವಳನ್ನು ಅಪಹರಿಸಿಕೊಂಡು ಬಂದೆ. ನನ್ನನ್ನ ಮದುವೆ ಆಗು ಅಂತ ಬಲವಂತಪಡಿಸಿದೆ. ಬಂಧನದಲ್ಲಿಟ್ಟೆ. ಸುಮಾರು ಮಾಸಗಳ ಕಾಲ..! ಈ ಮಧ್ಯೆ ನಾನೆಲ್ಲೋ ಕೆಲಕಾಲ ಪ್ರವಾಸ ಹೋಗಬೇಕಾಗಿತ್ತು. ಹೋಗಿ ಹಿಂತಿರುಗಿ ಬರುವುದರಲ್ಲಿ ಅವಳಿರಲಿಲ್ಲ. ಮೂರು ಮಾಸಗಳ ಹಿಂದೆಯೇ ವಿಷಮ ಜ್ವರ ಬಂದು ತೀರಿಕೊಂಡುಬಿಟ್ಟಳಂತೆ! ಅವಳನ್ನ ನಾನು ಇಲ್ಲದಾಗ ನೋಡಿಕೊಳ್ಳುತ್ತಿದ್ದ ಅಜ್ಜಿ ಹೇಳಿದಳು.. ತನ್ನ ಗಂಡ, ಮಗನನ್ನ ನೋಡಬೇಕು ಅಂತ ತುಂಬಾ ಹಂಬಲಿಸುತ್ತಿದ್ದಳಂತೆ.. ಊಟ ಬಿಟ್ಟಿದ್ದಳಂತೆ.. ಎರಡು ಸಲ ತಪ್ಪಿಸಿಕೊಳ್ಳೋಕ್ಕೆ ಪ್ರಯತ್ನ ಪಟ್ಟು ಸೋತಿದ್ದಳಂತೆ.. ಆ ನಂತರ ಇಲ್ಲಿಂದ ಬಿಡುಗಡೆಯೇ ಇಲ್ಲ ಅಂತ ಗೊತ್ತಾದ ಮೇಲೆ ಯಾವಾಗಲೂ ಅಳ್ತಾ ಮಲಗಿರುತ್ತಿದ್ದಳಂತೆ..! ಈ ಮನೋವೇದನೆಯಿಂದಲೇ ಅವಳಿಗೆ ಅನಾರೋಗ್ಯ ಬಂದಿರೋದು.. ಸತ್ತಿರೋದು.. ಅಂತ ನನಗೆ ಅಪರಾಧಿ ಪ್ರಜ್ಞೆ ಕಾಡ್ತಾ ಇದೆ. ಅವಳನ್ನ ಸೆರೆಯಲ್ಲಿಟ್ಟ ಅಷ್ಟು ದಿವಸದಲ್ಲಿ ಎಂದಾದರೂ ಒಂದು ದಿನ ನನ್ನ ಕಡೆ ತಿರುಗಿ ನೋಡ್ತಾಳೆ ಅಂತ ಆಸೆ ಇಟ್ಟುಕೊಂಡಿದ್ದೆ. ತಿರುಗಿ ನೋಡೋಕ್ಕೆ ನಿರಾಕರಿಸಿಯೇ ಹೊರಟುಹೋದ್ಲು ಕಡೆಗೂ..’

‘ಈಗ ನಿಮ್ಮನ್ನ ಹೆಚ್ಚು ಬಾಧಿಸ್ತಾ ಇರೋ ಸಂಗತಿ ಯಾವುದು..? ನಿಮ್ಮಿಂದಲೇ ಆಕೆಗೆ ಹೀಗಾಯ್ತು ಅನ್ನೋ ಪಾಪಪ್ರಜ್ಞೆನಾ.. ಅಥವಾ ಕಡೆಗೂ ಅವಳು ನಿಮ್ಮ ಕಡೆ ತಿರುಗಿ ನೋಡಲೇ ಇಲ್ಲ ಅನ್ನೋ ಕೊರಗಾ..?’
‘ಎರಡೂ..’

‘ನಿಮ್ಮಿಂದಲೇ ಹೀಗಾಯ್ತು ಅಂತ ಪಶ್ಚಾತ್ತಾಪ ಪಡುವಾಗ ಅವಳು ಕಡೆಗೂ ತಿರುಗಿ ನೋಡಲಿಲ್ಲ ಅನ್ನೋ ವಿಚಾರದಿಂದ ಹೊರಬರಬೇಕು. ಇಲ್ಲವಾದರೆ ಪಶ್ಚಾತ್ತಾಪಕ್ಕೆ ಅರ್ಥ ಏನಿರುತ್ತೆ ಹೇಳಿ..’
ನನಗೆ ಗೊಂದಲವಾಯಿತು.

‘ವೇಶ್ಯಾವೃತ್ತಿಯನ್ನ ಮಾಡ್ತಾ ಇರೋ ನಾನು ಧರ್ಮ ಅಧರ್ಮಗಳ ಬಗ್ಗೆ ಮಾತಾಡಿದರೆ ತಪ್ಪಾಗಬಹುದೋ ಏನೋ. ಅದರಲ್ಲೂ ಪರಸ್ತ್ರಿಯನ್ನ ಬಯಸಿದ ನಿಮ್ಮ ವಿಚಾರವನ್ನಂತೂ ಮಾತನಾಡಲೇಬಾರದು ಅನಿಸುತ್ತೆ. ಆದರೂ ಆಪ್ತವಾಗಿ ನೀವು ಹಂಚಿಕೊಳ್ತಾ ಇರೋದರಿಂದ ಹೇಳಬೇಕು ಅನ್ನಿಸುತ್ತಿದೆ. ಹೇಳಲಾ?’
‘ಹೇಳು..’

‘ವೈಶಾಲಿಯನ್ನ ಅವಳ ಗಂಡ, ಮಗನಿಂದ ದೂರ ಮಾಡಿ, ಅಪಹರಿಸಿ ಕರೆತಂದಿಟ್ಟುಕೊಂಡು, ಮದುವೆಯಾಗು ಅಂತ ಪೀಡಿಸ್ತಾ ಇದ್ದದ್ದು ತಪ್ಪು. ಅದರಿಂದಲೇ ಅವಳು ಕೊರಗಿ ಸೊರಗಿ ಖಾಯಿಲೆ ಬಂದು ಸತ್ತಳು ಅಂತಲ್ಲವೇ ತಾವು ಹೇಳಿದ್ದು..?’

‘ಹೌದು..’

‘ಹಾಗಿದ್ದ ಮೇಲೆ, ಅದು ತಮಗೆ ಮನವರಿಕೆ ಆಗಿದ್ದ ಮೇಲೆ ಮತ್ತೂ ಅವಳ ಪ್ರೇಮ ಕೊನೆಗೂ ದಕ್ಕದೇ ಹೋಯಿತು ಅಂತ ನೊಂದುಕೊಳ್ಳೋದು ಸರಿಯೇ..?’

‘ಇನ್ನು ಪಾಪಪ್ರಜ್ಞೆ ಅಂದಿರಿ.. ಅದರಿಂದ ಸಂಪೂರ್ಣವಾಗಿ ಹೊರಬರೋಕ್ಕೆ ಸಾಧ್ಯವಾಗದಿದ್ದರೂ ಸ್ವಲ್ಪಮಟ್ಟಿಗಾದರೂ ಅದರ ತಾಪವನ್ನು ನೀಗಿಕೊಳ್ಳೋಕ್ಕೆ ಸಾಧ್ಯವಿದೆ. ಅವಳ ಮನೆಯವರನ್ನ ಎದುರಿಸೋದು.. ಕ್ಷಮಾಪಣೆ ಕೇಳೋದು..’

‘ಅವಳ ಮನೆಯವರನ್ನ ಎದುರಿಸೋದೇ?’
‘ಹುಂ.. ನೀವು ಹೇಳೋದು ನೋಡಿದ್ರೆ ಅವಳ ಮನೆಯವರಿಗೆ ಅವಳನ್ನ ನೀವು ಅಪಹರಿಸಿಕೊಂಡು ಬಂದಾಗಿನಿಂದ ಸಾವಿನ ತನಕ ಯಾವ ಸುದ್ದಿಯೂ ಗೊತ್ತಿಲ್ಲ ಅನ್ಸುತ್ತೆ. ಅವರು ಅವಳ ಬಗ್ಗೆ ತಪ್ಪಾಗಿಯೂ ಕಲ್ಪಿಸಿಕೊಂಡಿರಬಹುದಲ್ಲ..? ತಾನೇ ಸ್ವಯಿಚ್ಛೆಯಿಂದ ಯಾರ ಹಿಂದೆಯೋ ಹೊರಟುಹೋಗಿದ್ದಾಳೆ ಎಂದೋ ಅಥವಾ ಅಪಹರಣ ಮಾಡಿದವನೊಂದಿಗೇ ಹೊಂದಾಣಿಕೆ ಮಾಡಿಕೊಂಡು ಸುಖವಾಗಿದ್ದಾಳೆ ಎಂದೋ ಅಂದುಕೊಂಡಿದ್ದರೂ ಇರಬಹುದು ಅಲ್ಲವೆ..? ಈಗ ನೀವು ಹೋಗಿ ಅವರುಗಳನ್ನ ಕಂಡು ಇರೋ ವಿಷಯ ಹೇಳಿದ್ರೆ ಅವಳ ಮೇಲಿನ ಕಳಂಕವೋ ಅನುಮಾನವೋ ಪರಿಹಾರವಾಗುತ್ತೆ ಅಲ್ಲವೇ? ಆಮೇಲೆ ಅವರ ಮನೆಯವರು ನಿಮ್ಮ ಮೇಲೆ ಹರಿಹಾಯಬಹುದು, ಬೇಕಾದ ಶಿಕ್ಷೆ ಕೊಡಬಹುದು.. ಅದಕ್ಕೆ ಶರಣಾಗಿಬಿಡಿ. ಕ್ಷಮೆ ಕೋರಿಕೊಳ್ಳಿ.. ಅವರು ತೋಚಿದ ರೀತಿಯಲ್ಲಿ ಪ್ರತಿಕ್ರಿಯಿಸಲಿ ಅವರ ಮನಸ್ಸಿಗೂ ಶಾಂತಿ ಸಿಗುತ್ತೆ.. ನಿಮ್ಮ ಮನಸ್ಸೂ ನಿರಾಳ ಆಗುತ್ತೆ..’
ನನಗೂ ಅವಳ ಮಾತು ಸರಿ ಎನ್ನಿಸಿತು.. ಮೇಲೆದ್ದೆ.

‘ಎಲ್ಲಿಗೆ?’ ಎಂದಳು.

‘ಸಾಗತ್ರಿಗೆ.. ವೈಶಾಲಿಯ ಗಂಡನ ಮನೆಗೆ’

‘ಅಗತ್ಯವಾಗಿ ಹೋಗಿ. ಆದರೆ ಈ ರಾತ್ರಿಯ ವೇಳೆಯಲ್ಲಿ ಅಲ್ಲ.. ನಾಳೆ..’

‘ಓ ಸನಕವ್ವ.. ನನ್ನನ್ನ ಕ್ಷಮಿಸು.. ಈ ರಾತ್ರಿ ನನ್ನಿಂದ ಏನನ್ನೂ ನಿರೀಕ್ಷಿಸಬೇಡ..’

‘ನೀವು ನಿರೀಕ್ಷಿಸುವಂತಿದ್ದಿದ್ದರೆ ಸಹಕರಿಸಲು ನಾನು ಸಿದ್ಧಳಿರಲಿಲ್ಲ! ಶುಕ್ರವಾರ ನನಗೆ ನಿಷಿದ್ಧ..’

‘ನಿಷಿದ್ಧವೇ? ಏಕೆ?’

‘ಅದು ನನ್ನ ಚೆಲುವನಂಜಯ್ಯನಿಗೆ ಬಿಟ್ಟ ವಾರ’

‘ಯಾರು ಚೆಲುವನಂಜಯ್ಯ ಎಂದರೆ?’

‘ನನ್ನ ಆಪ್ತಸಖ.. ಶಿವ’

‘ಶಿವ..!? ಅಂದರೆ ದೇವರೇ?’

‘ಹೌದು.. ಅವನು ಎಲ್ಲರಿಗೂ ದೇವರು.. ನನಗೆ ಮಾತ್ರ ಸಖ’

‘ಓ.. ಅದಕ್ಕೇ ಚೆಲುವನಂಜಯ್ಯ ಅಂತ ಹೆಸರಿಸಿದ್ದೀಯ..’

‘ಚೆಲುವನಂಜಯ್ಯ ನನ್ನ ವಚನಗಳ ಅಂಕಿತ’

‘ಓ.. ನೀನು ವಚನಗಾರ್ತಿಯಾ?’

‘ಹೌದು.. ಆ ಸೂಳೆ ಸಂಕವ್ವನ ಹಾಗೆ ನಾನೂ ಒಬ್ಬಳು ಸೂಳೆ ಸನಕವ್ವ’

‘ಸನಕ ಅಂದರೆ ಏನು?’

‘ಅದೊಂದು ಬೇಲಿ ಹೂವಿನ ಹೆಸರಂತೆ!’

ನನಗೆ ತಕ್ಷಣ ಮುಂದಿನ ಮಾತು ಹೊರಡಲಿಲ್ಲ. ಅವಳೂ ಸುಮ್ಮನಿದ್ದಳು.

(ಕೃತಿ: ಮಾಯೆ (ಕಾದಂಬರಿ), ಲೇಖಕರು: ಆಶಾರಘು, ಪ್ರಕಾಶಕರು: ಸಾಹಿತ್ಯಲೋಕ ಪಬ್ಲಿಕೇಷನ್ಸ್, ಬೆಲೆ 250)