ನಾನು ಬ್ರಿಸ್ಬನ್ ನಗರದಲ್ಲಿ ಮಾವು, ಬೇವು, ಬಸಳೆ, ಪರಂಗಿಹಣ್ಣು ಇತ್ಯಾದಿಗಳನ್ನು ನೋಡಿದಾಗ ಉಷ್ಣವಲಯದ ತರಕಾರಿ ಬೆಳೆದುನೋಡೋಣ ಅನ್ನೋ ಆಸೆಗೆ ಬಿದ್ದೆ. ಅಲ್ಲಿಯವರೆಗೂ ಹೂ, ತರಕಾರಿ, ಹರ್ಬ್ಸ್ ಗಳನ್ನ ಪಾಟ್ ಗಳಲ್ಲಿ ಬೆಳೆಸಿ ಊರು ಬಿಟ್ಟು ಬರುವಾಗ ಸ್ನೇಹಿತರಿಗೆ ಅವನ್ನ ಕೊಟ್ಟು ಮುಂದೆಸಾಗುತ್ತಿದ್ದೆ. ಬ್ರಿಸ್ಬನ್ ನಗರದಲ್ಲಿ ಜನರ, ಊರಿನ ಅಲ್ಪಸ್ವಲ್ಪ ಪರಿಚಯ ಮಾಡಿಕೊಂಡು, ಗಿಡಗಳ ಸಂಗ್ರಹ, ಬೀಜಗಳ ಸಂಪಾದನೆ, ಅವಕ್ಕೆ ಬೇಕಾದ ಒಂದಷ್ಟು ಪಾಟ್ ಗಳು ಎಲ್ಲವನ್ನೂ ಒದಗಿಸಿಕೊಳ್ಳುವುದರಲ್ಲಿ ಮೊದಲ ವರ್ಷ ಕಳೆದೇಹೋಯ್ತು.
ಡಾ. ವಿನತೆ ಶರ್ಮಾ ಬರೆಯುವ ಆಸ್ಟ್ರೇಲಿಯಾ ಅಂಕಣ

 

ಇತ್ತೀಚಿನ ವರ್ಷಗಳಲ್ಲಿ ಸಾವಯವ ಆಹಾರದ ಅಭ್ಯಾಸ ಹೆಚ್ಚುತ್ತಿದೆ. ಆಸ್ಟ್ರೇಲಿಯಾದಲ್ಲಿ ಸಾವಯವ ಆಹಾರ (organic food) ಎನ್ನುವ ವಿಷಯವೇ ಬರುಬರುತ್ತಾ ಹೆಚ್ಚು ಜನಪ್ರಿಯವಾಗುತ್ತಿದೆ. ನೈಸರ್ಗಿಕ ವಿಧಾನಗಳಿಂದ ಮಣ್ಣಿನ ಸಾಮರ್ಥ್ಯವನ್ನು ಕಾಪಾಡಿಕೊಂಡು, ನಮ್ಮ ಆರೋಗ್ಯಕ್ಕೆ ಹಾನಿ ಮಾಡುವ ಕೆಟ್ಟ ರಾಸಾಯನಿಕಗಳನ್ನು, ಗೊಬ್ಬರಗಳನ್ನು, ಕೀಟ ನಾಶಕಗಳನ್ನು, ಕೃತಕ ಆಹಾರ ಸಂರಕ್ಷಕಗಳನ್ನು ದೂರವಿಟ್ಟು, ಪ್ರಕೃತಿಯ ಜಾಯಮಾನಕ್ಕೆ ತಕ್ಕಂತೆ ಆಹಾರವನ್ನು ನಾವು ಬೆಳೆದಾಗ ಅದು ನೈಸರ್ಗಿಕವಾಗಿ ಬೆಳೆದ ಆಹಾರ. ನನ್ನ ಬಾಲ್ಯದಲ್ಲಿ ನಮ್ಮಪ್ಪ ಯಾವುದೇ ರಾಸಾಯನಿಕ ಗೊಬ್ಬರವಿಲ್ಲದೆ, ಬರೀ ಸಗಣಿ ಮತ್ತು ಹೊಲಗಳಲ್ಲಿ ಬೆಳೆ ಕಟಾವಾದ ನಂತರ ಉಳಿದ ಒಣಹುಲ್ಲನ್ನ ಬಳಸಿ ಬುಟ್ಟಿಗಟ್ಟಲೆ ತರಕಾರಿಗಳನ್ನ ಬೆಳೆಯುತ್ತಿದ್ದದ್ದು ಚೆನ್ನಾಗಿ ನೆನಪಿದೆ. ಅದು

ಅಲ್ಲ ಅನ್ನೋ ವ್ಯತ್ಯಾಸ ಆಗ ತಿಳಿದಿರಲಿಲ್ಲ. ಅಂಥಾ ಅವಶ್ಯಕತೆಯೂ ಇರಲಿಲ್ಲ. ಅತ್ಯಂತ ಕಡಿಮೆ ರಾಸಾಯನಿಕಗಳ ಮತ್ತು ಪ್ಲಾಸ್ಟಿಕ್ ನ ಬಳಕೆ ಇಲ್ಲದ ಕಾಲ ಅದು. ಮುಂದೆ ಫುಕುವೋಕ ಬರೆದ ‘ವನ್ ಸ್ಟ್ರಾ ರೆವಲ್ಯೂಷನ್’ (One Straw Revolution) ಪುಸ್ತಕವನ್ನ ಓದಿದಾಗ ಜೀವನದ ಬಗ್ಗೆ ಇರಬೇಕಾದ ಸಮಷ್ಟಿದೃಷ್ಟಿಯ ಕಡೆ ಆಸಕ್ತಿ ಹೋಗಿ, ಆಗಲೂ ಸಾವಯವ ಆಹಾರ ಎನ್ನುವ ವಿಷಯ ಆಕರ್ಷಕವಾಗಿ, ವಿಶೇಷವಾಗಿ ಕಂಡಿರಲಿಲ್ಲ. ಸಾವಯವ ಕೃಷಿಯಲ್ಲಿ ಬಳಸುವ ಗೊಬ್ಬರದ ವಿಧಗಳು, ಅವನ್ನು ತಯಾರಿಸುವ ಕ್ರಮಗಳು, ಗೊಬ್ಬರಗಳ ಮತ್ತು ಮಣ್ಣಿನ ನಡುವೆ ಇರುವ ಬಹು ಸೂಕ್ಷ್ಮ ಸಂಬಂಧ, ಅಂತಹ ಕೃಷಿ ಹೊಂದಿರುವ ಒಳನೋಟಗಳು ಹೇಗೆ ಇಡೀ ಭೂಮಿಗೆ, ಎಲ್ಲಾ ಚರಾಚರ ವಸ್ತುಗಳಿಗೆ ತಳಕುಹಾಕಿಕೊಂಡಿವೆ ಅನ್ನುವ ವಿಷಯಗಳೆಲ್ಲಾ ಸಾವಯವ ಕೃಷಿಕಾರರಿಗೆ ತಿಳಿದಿರಬೇಕಂತೆ.

ಎಲ್ಲಕ್ಕೂ ಇರುವಂತೆ ಸಾವಯವ ಆಹಾರಕ್ಕೂ ಒಂದು ಮಾನದಂಡವಿದೆ. ಅವೆಲ್ಲವನ್ನೂ ತಮ್ಮ ಬಳಕೆಯ ಪದ್ಧತಿಗಳಲ್ಲಿ, ಆಚರಣೆಗಳಲ್ಲಿ ಚಾಚೂತಪ್ಪದೆ ಅನುಷ್ಠಾನಗೊಳಿಸಿದ್ದರೆ ಮಾತ್ರ ಆಸ್ಟ್ರೇಲಿಯಾದಲ್ಲಿ ಇದು ಸಾವಯವ ಆಹಾರ ಎಂಬ ಪ್ರಮಾಣಪತ್ರ ಸಿಗುತ್ತದೆ.

ಇಂತಹ ಪ್ರಮಾಣಪತ್ರ ಪಡೆಯಲು ಈ ಆಸ್ಟ್ರೇಲಿಯಾದಲ್ಲಿ ಸಾಕಷ್ಟು ಸರ್ಕಸ್ ಮಾಡಬೇಕು. ಅದು ಸುಲಭದ ವಿಷಯವಲ್ಲ. ಈ ದೇಶದಲ್ಲಿ ಆಹಾರದ ಬಗ್ಗೆ ಅತ್ಯಂತ ಉನ್ನತ ಗುಣಮಟ್ಟವನ್ನು ಕಾಪಾಡಿಕೊಂಡಿದ್ದಾರಂತೆ. ಅದು ಸ್ವಲ್ಪ ಉತ್ಪ್ರೇಕ್ಷೆಯ ಮಾತು, ಬಿಡಿ! ಆಸ್ಟ್ರೇಲಿಯಾದಲ್ಲಿ ಈ ವರ್ಷದ (೨೦೧೮) ಲೆಕ್ಕದ ಪ್ರಕಾರ ಅಂದಾಜು ೨೩೦೦ ಸಾವಯವ ಆಹಾರ ಬೆಳೆಗಾರರು ಇದ್ದಾರೆ. ಅವರೆಲ್ಲರ, ಒಟ್ಟು ಮಾರುಕಟ್ಟೆಯ ಆದಾಯ ಸುಮಾರು ಎರಡು ಬಿಲಿಯನ್ ಡಾಲರುಗಳು. ಬರೋಬ್ಬರಿ ಮೂರುವರೆ ಸಾವಿರದಷ್ಟು ಆಹಾರ ಪದಾರ್ಥಗಳನ್ನು ಸಾವಯವ ಎಂದು ಪ್ರಮಾಣಿಸಲಾಗಿದೆ ಎಂದು ವರದಿಗಳು ಹೇಳುತ್ತವೆ. ಬೆಳಗ್ಗೆ ಉಪಹಾರಕ್ಕೆ ಬೇಕಿರುವ cereal, ಬ್ರೆಡ್, ಮೊಟ್ಟೆ, ಜೇನುತುಪ್ಪ, ಜಾಮ್, ಹಾಲುಗಳಿಂದ ಹಿಡಿದು ಬೇಳೆಕಾಳುಗಳು, ಅಕ್ಕಿ, ಗೋಧಿ, ಅರಿಶಿನ, ಮಸಾಲೆ ಪದಾರ್ಥಗಳು, ಮಾಂಸ ಮುಂತಾದವುಗಳು ಈಗ ಸಾವಯವ ರೂಪದಲ್ಲಿ ಲಭ್ಯವಿದೆ. ದೇಶದೊಳಗೆ ಹೆಚ್ಚುತ್ತಿರುವ ಗ್ರಾಹಕರ ಜೊತೆಗೆ ಆಚೆ ದೇಶಗಳಾದ ಚೈನಾ, ಹಾಂಗ್ ಕಾಂಗ್, ಸಿಂಗಪುರ, ಕೊರಿಯಾ ಮತ್ತು ಉತ್ತರ ಅಮೆರಿಕೆಯ ಜನರಿಗೆ ಆಸ್ಟ್ರೇಲಿಯಾ ರಫ್ತು ಮಾಡುವ ಸಾವಯವ ಮಾಂಸ, ಹೈನುಗಾರಿಕೆಯ ಉತ್ಪನ್ನಗಳು ಬಲು ಇಷ್ಟವಾಗಿಬಿಟ್ಟಿದೆ. ಮುಂಬರುವ ವರ್ಷಗಳಲ್ಲಿ ಅವರಿಂದ ಆಸ್ಟ್ರೇಲಿಯಾದ ಸಾವಯವ ಆಹಾರ ಮಾರುಕಟ್ಟೆಗೆ ಮತ್ತಷ್ಟು ಬಿಲಿಯನ್ ಡಾಲರುಗಳು ಹರಿದು ಬರುವ ಸಾಧ್ಯತೆ ಇದೆ.

ಗಾತ್ರ ಮತ್ತು ವಿಸ್ತೀರ್ಣದಲ್ಲಿ ಆಸ್ಟ್ರೇಲಿಯಾ ದೊಡ್ಡದಾಗಿದ್ದರೂ ಸಹ ದೂರದ ಉತ್ತರ ಅಮೇರಿಕ ಮತ್ತು ಯೂರೋಪಿನ ರಾಷ್ಟ್ರಗಳಾದ ಡೆನ್ಮಾರ್ಕ್, ಸ್ವೀಡನ್ ಮತ್ತು ಸ್ವಿಟ್ಜರ್ಲ್ಯಾಂಡ್ ಗಳ ಪ್ರಜೆಗಳು ಬಳಸುವಷ್ಟು ಇಲ್ಲಿಯ ಜನ ಸಾವಯವ ಆಹಾರವನ್ನು ಬಳಸುತ್ತಿಲ್ಲ. ಕಾರಣಗಳೇನು ಅಂತ ಯೋಚಿಸಿದರೆ ಆಸ್ಟ್ರೇಲಿಯಾ ಬಹಳ ದುಬಾರಿ ದೇಶ, ಇಲ್ಲಿನ ‘ಕಾಸ್ಟ್ ಆಫ್ ಲಿವಿಂಗ್’ (cost of living) ಬಹಳ ದುಬಾರಿ ಅನ್ನಿಸುತ್ತದೆ. ಜೊತೆಗೆ ಆಸ್ಟ್ರೇಲಿಯಾದಲ್ಲಿ ಕಟ್ಟುನಿಟ್ಟಾಗಿ ಅನುಸರಿಸುವ ಸಾವಯವ ಆಹಾರ ಮಾನದಂಡ ಮತ್ತು ಪ್ರಮಾಣಪತ್ರಗಳ ಕಷ್ಟಕರ ಕ್ರಮಗಳು ಬಹಳಷ್ಟು ಚಿಕ್ಕಪುಟ್ಟ ಬೆಳೆಗಾರರನ್ನು ದೂರವಿಟ್ಟಿದೆ. “ಆ ಸರ್ಟಿಫಿಕೇಟ್ ಪಡೆಯುವುದು ಬಹಳ ಕಷ್ಟ ಮತ್ತು ದುಬಾರಿ. ಅದರ ಯೋಚನೆಗೆ ಎಳ್ಳುನೀರು ಬಿಟ್ಟಾಗಿದೆ. ವರ್ಷಕ್ಕೆ ನಾಲ್ಕಾರು ಬಾರಿ ಸರ್ಕಾರದಿಂದ ಬಂದು ನಮ್ಮನ್ನು ಪರಿಶೀಲಿಸುವುದು, ಅವರ ನೂರಾರು ಪ್ರಶ್ನೆಗಳಿಗೆ ನಾವು ಉತ್ತರ ಕೊಡುವುದು, ನೋಂದಾವಣಿಗೆಂದು ಅಷ್ಟೊಂದು ಫೀಸ್ ಕಟ್ಟುವುದು ಇವೆಲ್ಲವೂ ಬಹಳ ರೇಜಿಗೆಯ ವಿಷಯಗಳು. ಹೋಗತ್ಲಾಕೆ ಅಂತ ನಾವು ಸುಮ್ಮನಾದ್ವಿ” ಎಂದು ವಾರಾಂತ್ಯದ ಮಾರ್ಕೆಟ್ ನಲ್ಲಿ ಹಲವಾರು ಬೆಳೆಗಾರರು ಹೇಳುತ್ತಾರೆ. ಅವರೆಲ್ಲಾ ನೈಸರ್ಗಿಕವಾಗಿ ಆಹಾರವನ್ನು ಬೆಳೆದರೂ ಅವರು ಸಾಮಾನ್ಯ ಮಾರುಕಟ್ಟೆಯ ಗ್ರಾಹಕರನ್ನು ಸುಲಭವಾಗಿ ತಲುಪಲು ಆಗುವುದಿಲ್ಲ. ಅವರು ತಮ್ಮ ಬೆಳೆಯ ಬಗ್ಗೆ ಪ್ರಚಾರ ಮಾಡಲೂ ಕೂಡ ಬರುವುದಿಲ್ಲ. ನೈಸರ್ಗಿಕವಾಗಿ ಆಹಾರವನ್ನು ಬೆಳೆಸಿದ್ದೀವಿ ಎನ್ನುವ ತೃಪ್ತಿ ಅವರಿಗಿದ್ದರೂ ಜನರು ಅವರನ್ನ ನಂಬಲು ಯಾವುದೇ ಸರ್ಟಿಫಿಕೇಟ್ ಇರುವುದಿಲ್ಲವಲ್ಲ! ವಾರಾಂತ್ಯದ ಮಾರ್ಕೆಟ್ಟಿಗೆ ಪ್ರತಿವಾರವೂ ಹೋಗುತ್ತಿದ್ದರೆ ನಮಗೆ ಅವರುಗಳ ಪರಿಚಯವಾಗಿ, ಕಾಲಕ್ರಮೇಣ ಅವರಲ್ಲಿ ನಂಬಿಕೆ ಬೆಳೆದು, ಅವರಿಂದ ಉತ್ತಮ ಮಟ್ಟದ, ತಾಜಾ ಹಣ್ಣುತರಕಾರಿಗಳು ಸಿಗುತ್ತದೆ. ಇದಕ್ಕೆ ಹೋಲಿಸಿದರೆ ಸಾವಯವ ಆಹಾರ ಬಲು ದುಬಾರಿ! ಸಾಮಾನ್ಯ ಜನರ ಕಿಸೆಗೆ ಒಗ್ಗುವುದಿಲ್ಲ.

ದೇಶದೊಳಗೆ ಹೆಚ್ಚುತ್ತಿರುವ ಗ್ರಾಹಕರ ಜೊತೆಗೆ ಆಚೆ ದೇಶಗಳಾದ ಚೈನಾ, ಹಾಂಗ್ ಕಾಂಗ್, ಸಿಂಗಪುರ, ಕೊರಿಯಾ ಮತ್ತು ಉತ್ತರ ಅಮೆರಿಕೆಯ ಜನರಿಗೆ ಆಸ್ಟ್ರೇಲಿಯಾ ರಫ್ತು ಮಾಡುವ ಸಾವಯವ ಮಾಂಸ, ಹೈನುಗಾರಿಕೆಯ ಉತ್ಪನ್ನಗಳು ಬಲು ಇಷ್ಟವಾಗಿಬಿಟ್ಟಿದೆ. ಮುಂಬರುವ ವರ್ಷಗಳಲ್ಲಿ ಅವರಿಂದ ಆಸ್ಟ್ರೇಲಿಯಾದ ಸಾವಯವ ಆಹಾರ ಮಾರುಕಟ್ಟೆಗೆ ಮತ್ತಷ್ಟು ಬಿಲಿಯನ್ ಡಾಲರುಗಳು ಹರಿದು ಬರುವ ಸಾಧ್ಯತೆ ಇದೆ.

ಆದರೂ ಕೂಡ ಸಾವಯವ ಆಹಾರವೆಂದರೆ ಜನ “ಹೌದುರೀ, ನಾವು ಕೂಡ ಅವನ್ನೇ ಮೆಚ್ಚುತ್ತೀವಿ,” ಅಂತಿದ್ದಾರೆ. ಮುಖ್ಯಕಾರಣವೆಂದರೆ ಜನರಲ್ಲಿ ದಿನದಿನಕ್ಕೆ ಹೆಚ್ಚುತ್ತಿರುವ ಅರೋಗ್ಯ ಮತ್ತು ಸೌಖ್ಯದ ಬಗೆಗಿನ ಕಾಳಜಿ. ನಮ್ಮ ಆಹಾರದಲ್ಲಿ ದಶಕಗಳಿಂದ ಬಳಸುತ್ತಿರುವ ರಾಸಾಯನಿಕಗಳಿಂದ ಮತ್ತು ಕೃತಕ ಸಂರಕ್ಷಕಗಳಿಂದ ಉಂಟಾಗುತ್ತಿರುವ ಅನೇಕ ದುಷ್ಪರಿಣಾಮಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ವ್ಯಾಪಕ ಜಾಗೃತಿ ಉಂಟಾಗಿದೆ. ಹಾನಿಕಾರಕ ರಾಸಾಯನಿಕ ವಸ್ತುಗಳಿಂದ ಮಕ್ಕಳ ಮಾನಸಿಕ ಆರೋಗ್ಯದ ಮೇಲೆ ಆಗುತ್ತಿರುವ ಪರಿಣಾಮಗಳ ಬಗ್ಗೆ ವ್ಯಾಪಕ ಚರ್ಚೆಗಳು ನಡೆಯುತ್ತಿವೆ. ಶಾಲೆಗಳಲ್ಲಿ, ಕಾಲೇಜು/ಯೂನಿವರ್ಸಿಟಿಗಳಲ್ಲಿ, ಉದ್ಯೋಗದ ಸ್ಥಳಗಳಲ್ಲಿ ಎಲ್ಲೆಲ್ಲಿ ನೋಡಿದರೂ ಜನರು ಆರೋಗ್ಯಕರ ಆಹಾರ, ಆರೋಗ್ಯಕರ ಜೀವನಶೈಲಿ (healthy food, healthy lifestyle) ಬಗ್ಗೆ ಪ್ರಚಾರ ನಡೆಸುತ್ತಿದ್ದಾರೆ. ಸಾವಯವ ಕ್ರಮಗಳನ್ನು, ವಿಧಾನಗಳನ್ನು ಅಳವಡಿಸಿಕೊಂಡು ಹಣ್ಣು, ತರಕಾರಿ, ಬೆಳೆಗಳು, ಹಾಲು, ಹಾಲಿನ ಉತ್ಪನ್ನಗಳು, ಮಾಂಸ, ಮೊಟ್ಟೆ, ಅಷ್ಟೇಕೆ ಸಾವಯವ ಮೀನನ್ನು ಮತ್ತು ವೈನನ್ನೂ ಕೂಡ ನಾವು ತಿಂದು, ಕುಡಿದು, ಆನಂದಿಸಿ ಆಹಾ, ನಮ್ಮ ಆರೋಗ್ಯವನ್ನ ಚೆನ್ನಾಗಿಟ್ಟುಕೊಂಡಿದ್ದೀವಿ ಅಂತ ಬೆನ್ನು ತಟ್ಟಿಕೊಳ್ಳಬಹುದು.

ನಾವೂ ಕೂಡ ಆರೋಗ್ಯಕರ ಆಹಾರ, ಆರೋಗ್ಯಕರ ಜೀವನಶೈಲಿ ಎಂಬ ಮಂತ್ರ ಜಪಿಸುತ್ತಾ ನಮ್ಮನೆಯಲ್ಲಿ ಕೆಲ ಸಾವಯವ ಆಹಾರ ಪದಾರ್ಥಗಳನ್ನು ಬಳಸುತ್ತೀವಿ. ಅರ್ಧದಷ್ಟು ಸಾಮಾನ್ಯ ರೀತಿಯಲ್ಲಿ ಬೆಳೆದ ತಾಜಾ ತರಕಾರಿಹಣ್ಣುಗಳು, ಒಂದಷ್ಟು ಸಾವಯವ ಆಹಾರ, ಇನ್ನೊಂದಷ್ಟು ನೈಸರ್ಗಿಕವಾಗಿ ಬೆಳೆದದ್ದು ಎಂದು ನಮ್ಮನೆಯಲ್ಲಿ ಮಿಶ್ರ ವಿಧಾನ (mixed approach) ರೂಢಿಯಲ್ಲಿದೆ. ಹಾಸಿಗೆ ಇದ್ದಷ್ಟು ಕಾಲು ಚಾಚಬೇಕು ತಾನೇ!

ನಾನು ಬ್ರಿಸ್ಬನ್ ನಗರದಲ್ಲಿ ಮಾವು, ಬೇವು, ಬಸಳೆ, ಪರಂಗಿಹಣ್ಣು ಇತ್ಯಾದಿಗಳನ್ನು ನೋಡಿದಾಗ ಉಷ್ಣವಲಯದ ತರಕಾರಿ ಬೆಳೆದುನೋಡೋಣ ಅನ್ನೋ ಆಸೆಗೆ ಬಿದ್ದೆ. ಅಲ್ಲಿಯವರೆಗೂ ಹೂ, ತರಕಾರಿ, ಹರ್ಬ್ಸ್ ಗಳನ್ನ ಪಾಟ್ ಗಳಲ್ಲಿ ಬೆಳೆಸಿ ಊರು ಬಿಟ್ಟು ಬರುವಾಗ ಸ್ನೇಹಿತರಿಗೆ ಅವನ್ನ ಕೊಟ್ಟು ಮುಂದೆಸಾಗುತ್ತಿದ್ದೆ. ಬ್ರಿಸ್ಬನ್ ನಗರದಲ್ಲಿ ಜನರ, ಊರಿನ ಅಲ್ಪಸ್ವಲ್ಪ ಪರಿಚಯ ಮಾಡಿಕೊಂಡು, ಗಿಡಗಳ ಸಂಗ್ರಹ, ಬೀಜಗಳ ಸಂಪಾದನೆ, ಅವಕ್ಕೆ ಬೇಕಾದ ಒಂದಷ್ಟು ಪಾಟ್ ಗಳು ಎಲ್ಲವನ್ನೂ ಒದಗಿಸಿಕೊಳ್ಳುವುದರಲ್ಲಿ ಮೊದಲ ವರ್ಷ ಕಳೆದೇಹೋಯ್ತು. ಅದೇ ಸಮಯದಲ್ಲಿ ನಗರಮಧ್ಯದಲ್ಲಿರುವ ನಾರ್ಥಿ ಸ್ಟ್ರೀಟ್ ಆರ್ಗ್ಯಾನಿಕ್ ಫಾರ್ಮ್ (Northy Street Organic Farm) ಎಂಬ ಸಾವಯವ ಆಹಾರದ ಪುಟ್ಟ ಸ್ವರ್ಗದ ಪರಿಚಯವಾಯ್ತು. ಯಾರು ಬೇಕಾದರೂ ಯಾವ ಸಮಯದಲ್ಲಿ ಬೇಕಾದರೂ ಅಲ್ಲಿಗೆ ಹೋಗಿ ಅಲ್ಲಿ ನಡೆಯುವ ಚಟುವಟಿಕೆಗಳನ್ನು ನೋಡುವ ಆಹ್ವಾನ ನನ್ನನ್ನ ಕೈಬೀಸಿ ಕರೆಯಿತು. ಆಗಾಗ ಅಲ್ಲಿಗೆ ಹೋಗಿ ಪರ್ಮಾಕಲ್ಚರ್, ಆರ್ಗ್ಯಾನಿಕ್ ಫಾರ್ಮಿಂಗ್, ನ್ಯಾಚುರಲ್ ಫಾರ್ಮಿಂಗ್, ಮಡ್ ಆರ್ಟ್ (Permaculture, Organic Farming, Natural Farming, Mud Art) ಇನ್ನೂ ಏನೇನೋ ಚಟುವಟಿಕೆಗಳ ಬಗ್ಗೆ ಮಾಹಿತಿ ಪಡೆದು, ಅವನ್ನೆಲ್ಲಾ ಗಮನವಿಟ್ಟು ನೋಡುವ ಪರಿಪಾಠವಾಯ್ತು. ಅಲ್ಲಿ ಬೆಳೆಯುತ್ತಿದ್ದ ಹಾಗಲಕಾಯಿ, ನುಗ್ಗೆಕಾಯಿ, ಕೆಂಪು ಸೀಬೆಹಣ್ಣು, ಸಪೋಟ, ಚಿಕ್ಕಬಾಳೆ, ಪರಂಗಿಹಣ್ಣುಗಳನ್ನ ನೋಡಿ ಅವುಗಳನ್ನೆಲ್ಲಾ ನಾನೇ ಬೆಳೆಯುತ್ತಿದ್ದಂತೆ ಕನಸು ಬೀಳುವುದು!!

ಮರುವರ್ಷ ಮತ್ತೆ ಬೇರೆ ಮನೆಗೆ ಹೋದಾಗ ಅಲ್ಲಿ ನೆಲದಲ್ಲೇ ಬೀಜ ಬಿತ್ತಿ ಬೆಳೆಯುವ ಸಾಹಸಕ್ಕೆ ಇಳಿದೆವು. ಸಾಹಸ ಎನ್ನುವ ಪದವನ್ನ ಇಲ್ಲಿ ಬಳಸಿದ್ದು ಯಾಕೆಂದರೆ ಅಲ್ಲಿ ನೆಲವೆಲ್ಲಾ ಬರಡುಬೆಂಗಾಡು! ಬರೀ ಕಲ್ಲುಚೂರುಗಳಿಂದ ತುಂಬಿದ್ದು, ಮಣ್ಣಿನ ಅಂಶ ಅತ್ಯಂತ ಕಡಿಮೆ ಇತ್ತು. ಅದರಲ್ಲಿ ಏನೂ ಸತ್ವವೇ ಇರಲಿಲ್ಲ. ಮಳೆ ಬಿದ್ದಾಗಲೆಲ್ಲಾ ನೀರು ಕಲ್ಲುಚೂರುಗಳ ಮೇಲೆ ಹರಿದು ಇಳಿಜಾರಿನಲ್ಲಿ ಮಾಯವಾಗುತ್ತಿತ್ತು. ನಮ್ಮ ಮುಂದಿದ್ದ ಮೊದಲ ಸವಾಲೆಂದರೆ ನಾವು ಮಣ್ಣಿಗೆ ಜೀವ ಕೊಡಬೇಕಿತ್ತು! ನಾರ್ಥಿ ಸ್ಟ್ರೀಟ್ ಆರ್ಗ್ಯಾನಿಕ್ ಫಾರ್ಮ್ ಗೆ ಹೋಗಿ ಅವರ ಮುಂದೆ ನನ್ನ ನೂರು ಪ್ರಶ್ನೆಗಳನ್ನ ಇಟ್ಟೆ. ಮೊದಲು ಮಲ್ಚಿಂಗ್ (mulching) ಮಾಡಿ, ಅದರ ನಂತರ ಮುಂದಿನ ಮಾತು ಅನ್ನುವ ಉತ್ತರ ಬಂತು. ಮರೆತೇಹೋಗಿದ್ದ ಇಂಗ್ಲೀಷ್ ಡಿಕ್ಷನರಿ ಮತ್ತೆ ಸಹಾಯಕ್ಕೆ ಬಂತು. ವಲೊಂಗೊಂಗ್ ನಲ್ಲಿ ಸಮದ್ರದ ಭಾಷೆಯನ್ನ, ಹೊಸ ಪದಸಂಪತ್ತನ್ನ ಕಲಿತುಕೊಂಡಂತೆ ಈಗ ಬ್ರಿಸ್ಬನ್ ನಲ್ಲಿ ಆಸ್ಟ್ರೇಲಿಯನ್ ಗಾರ್ಡನಿಂಗ್ ಭಾಷೆ ಕಲಿಯಲಾರಂಭಿಸಿದೆ. ಪಾಪ, ನಿನ್ನ ಪಾಡು ನೋಡಲಾರೆ ಎಂದು ಜೀಬೀ ಗಾರ್ಡನಿಂಗ್ ಪುಸ್ತಕಗಳನ್ನು ಕೊಂಡುತಂದರು. ಯಾಕೋ ಪುಸ್ತಕಕ್ಕಿಂತಲೂ ನಾರ್ಥಿ ಸ್ಟ್ರೀಟ್ ಆರ್ಗ್ಯಾನಿಕ್ ಫಾರ್ಮ್ ನ ಅರೆಹಿಪ್ಪಿ ಗುರುಗಳೇ ವಾಸಿ ಎನ್ನಿಸುತ್ತಿತ್ತು!

Lucern ಹುಲ್ಲು, ಕಬ್ಬಿನ ಹಸಿಗೊಬ್ಬರ (sugarcane mulch) ಗಳನ್ನ ಬಳಸಿದರೆ ಉತ್ತಮ; ಬೇರೆಬೇರೆ ತರಹದ ಹಸಿಗೊಬ್ಬರ(mulch) ಗಳಿಗೆ ಅವುಗಳದ್ದೇ ಆದ ಗುಣಗಳಿರುತ್ತದೆ; ಪ್ರತಿ mulch ವಿಧ, ಬೆಳೆಯುವ ಆಹಾರ ಮತ್ತು ಮಣ್ಣಿಗೆ ಇರುವ ಸಂಬಂಧವನ್ನ ಆಳವಾಗಿ ಅರ್ಥ ಮಾಡಿಕೊಳ್ಳಬೇಕು ಎನ್ನುವ ಹೊಸ ಜ್ಞಾನ ಬಂತು. ಇದೆಲ್ಲದರ ಮಧ್ಯೆ ನಾವು ಮನೆಯಲ್ಲೇ ಕಾಂಪೋಸ್ಟ್ ತಯಾರಿಸುವ ಕೆಲಸವೂ ನಡೆದಿತ್ತು. ಮೊದಲಬಾರಿ ನೆಲದಲ್ಲಿ ಬೆಳೆದ ಬಿಳಿಮೂಲಂಗಿ ಬರೀ ಬೆಂಡು. ಕ್ಯಾರೆಟ್ ಭೂಮಿಯೊಳಗೆ ಸುರುಟಿಕೊಂಡು ಭೂದೇವಿಗೆ ಶರಣು ಎಂದಿತ್ತು. ಒಂದೇ ಒಂದು ಟೊಮೇಟೊ ಕೂಡ ಹಣ್ಣಾಗಲಿಲ್ಲ. ವಿಚಿತ್ರಾಕಾರದ ಹುರಳಿಕಾಯನ್ನ ನೋಡಿ ಮಕ್ಕಳು ಕೇಕೆ ಹಾಕಿದ್ದರು. ನಾನು, ನನ್ನ ದೊಡ್ಡ ಮಗ ಆಸ್ಟ್ರೇಲಿಯನ್ ಗಾರ್ಡನಿಂಗ್ ನಲ್ಲಿ ತರಬೇತಿ ಪಡೆಯಲು ಹೊರಟೆವು. ಸಾವಯವ (Organic) ಅಲ್ಲವಾದರೂ, ಕಡೇಪಕ್ಷ ಸಹಜ ಕೃಷಿ (natural farming) ವಿಧಾನಗಳಿಂದಲಾದರೂ ಒಂದಷ್ಟು ತರಕಾರಿ ಬೆಳೆಯೋಣ ಅನ್ನೋ ಮಹದಾಸೆ ನನ್ನದು! ಸರಿ, ನಾವಿಬ್ಬರೂ ಕಸದಿಂದ ರಸದ ಕಾಂಪೋಸ್ಟ್ ತಯಾರಿಕೆ ತರಬೇತಿ ಪಡೆದೆವು. ಬ್ರಿಸ್ಬೇನ್ ಆರ್ಗ್ಯಾನಿಕ್ ಫಾರ್ಮರ್ಸ್ (Brisbane Organic Growers) ಎಂಬ ಸಮುದಾಯಕ್ಕೆ ಸೇರಿಕೊಂಡೆವು. ಅಲ್ಲಿಂದ ನಮಗೆ ಅನೇಕ ಆಸ್ಟ್ರೇಲಿಯನ್ನರು ಬಯೋಡೈನಮಿಕ್ (Biodynamic) ವಿಧಾನವನ್ನು ಕೂಡ ಬಳಸುತ್ತಿದ್ದಾರೆ ಅನ್ನುವ ವಿಷಯ ತಿಳಿಯಿತು. ಬಯೋಡೈನಮಿಕ್ ಗ್ರೋಯಿಂಗ್ (Biodynamic Growing) ತರಬೇತಿಗೂ ಹಾಜರಾದೆವು.

ಆ ತರಬೇತಿಯಲ್ಲಿ ಕಲಿತ ವಿಷಯಗಳಿಗೂ ಮತ್ತು ನಮ್ಮಪ್ಪ, ನನ್ನಜ್ಜಿಯ ಹಳ್ಳಿಯಲ್ಲಿ ಕೃಷಿಕರು ಬಳಸುತ್ತಿದ್ದ ವಿಧಾನಗಳಿಗೂ ಬಹಳ ಸಾಮ್ಯತೆಯಿತ್ತು. ಅದನ್ನು ತರಬೇತಿದಾರರಲ್ಲಿ ಹಂಚಿಕೊಂಡೆ. “ಹೌದು, ಬಯೋಡೈನಮಿಕ್ ಕೃಷಿವಿಧಾನಗಳಿಗೆ ಭಾರತದ ಮತ್ತು ಹಿಂದೂಧರ್ಮದ ಪ್ರಭಾವ ಬಹಳ ಇದೆ. ಈ ಬಯೋಡೈನಮಿಕ್ ಪದ್ಧತಿಯಲ್ಲಿ ಹಸುವಿನ ಗೊಬ್ಬರಕ್ಕೆ ಮಹತ್ವದ ಸ್ಥಾನ ಇದೆ,” ಎಂದರವರು, ಆ ಅಪ್ಪಟ ಆಸ್ಟ್ರೇಲಿಯನ್ ಕೃಷಿಕ!!! ನಾನು ಅದರ ಬಗ್ಗೆ ಒಂದಷ್ಟು ಅಧ್ಯಯನ ಮಾಡಿ ಒಂದು ತೀರ್ಮಾನಕ್ಕೆ ಬಂದೆ. ಕಲ್ಲುಚಿಪ್ಪುಗಳಿಂದ ತುಂಬಿದ್ದ ನಮ್ಮ ಮನೆಯಂಗಳದ ಮಣ್ಣಿಗೆ ಜೀವಕೊಡುವ ಹೊಸವಿಧಾನವೆಂದರೆ ಅಜ್ಜಿ, ಅಪ್ಪ ಅನುಸರಿಸುತ್ತಿದ್ದ ಪದ್ಧತಿಯಂತೆ ಹಸುವಿನ ಸಗಣಿ, ಗಂಜಳವನ್ನ ಸಂಗ್ರಹಿಸಿ ನಾನೇ ಅಮೃತಗೊಬ್ಬರವನ್ನ ತಯಾರಿಸುವುದು. ಆಗ ಅಷ್ಟೆಲ್ಲಾ ಹಣ ಸುರಿದು ಪದೇಪದೇ ಕಾಂಪೋಸ್ಟ್ ಸಾಯಿಲ್, ಹಸಿಗೊಬ್ಬರ (compost soil, mulch) ಮತ್ತು ಒಣಗಿದ ಗೊಬ್ಬರವನ್ನು ಕೊಂಡುಕೊಳ್ಳುವ ಸಂಕಟ ಕಡಿಮೆಯಾಗುತ್ತದೆ. ನೈಸರ್ಗಿಕ ಗೊಬ್ಬರವನ್ನ ತಾಜಾ ಆಗಿ ಮನೆಯಲ್ಲೇ ತಯಾರಿಸಬಹುದು ಎಂಬ ಆಲೋಚನೆಯೇ ನನಗೆ ಬಹಳ ರೋಮಾಂಚನ ತಂದಿತ್ತು.

ಲೊಂಗೊಂಗ್ ನಲ್ಲಿ ಸಮದ್ರದ ಭಾಷೆಯನ್ನ, ಹೊಸ ಪದಸಂಪತ್ತನ್ನ ಕಲಿತುಕೊಂಡಂತೆ ಈಗ ಬ್ರಿಸ್ಬನ್ ನಲ್ಲಿ ಆಸ್ಟ್ರೇಲಿಯನ್ ಗಾರ್ಡನಿಂಗ್ ಭಾಷೆ ಕಲಿಯಲಾರಂಭಿಸಿದೆ. ಪಾಪ, ನಿನ್ನ ಪಾಡು ನೋಡಲಾರೆ ಎಂದು ಜೀಬೀ ಗಾರ್ಡನಿಂಗ್ ಪುಸ್ತಕಗಳನ್ನು ಕೊಂಡುತಂದರು. ಯಾಕೋ ಪುಸ್ತಕಕ್ಕಿಂತಲೂ ನಾರ್ಥಿ ಸ್ಟ್ರೀಟ್ ಆರ್ಗ್ಯಾನಿಕ್ ಫಾರ್ಮ್ ನ ಅರೆಹಿಪ್ಪಿ ಗುರುಗಳೇ ವಾಸಿ ಎನ್ನಿಸುತ್ತಿತ್ತು!


ನನ್ನ ಪ್ಲಾನ್ ಕೇಳಿದ ಜೀಬೀ, “ಹಸುವೇ? ಅದರ ಉಚ್ಚೆ?! ತಾಜಾ ಸಗಣಿಯೇ?! ಎಲ್ಲಿ ಹುಡುಕ್ತೀಯಾ?” ಎಂದರು. ಮುಚ್ಚಳವಿರುವ ನಾಲ್ಕು ಬಕೆಟ್ ಖರೀದಿಸಿ, ನಮ್ಮ ಸಂಸಾರವೆಲ್ಲ ಕಾರಲ್ಲಿ ಕೂತು ಹಸುವನ್ನ ಹುಡುಕುತ್ತಾ ಹೋದೆವು. ಹಸುಗಳಿದ್ದ ಫಾರ್ಮ್ ಇದ್ದರೂ ಅವಕ್ಕೆ ಬೇಲಿಯಿತ್ತು, ಇಲ್ಲವೇ ಅವು ಮೈಲಿ ದೂರ ಇದ್ದವು. ಇಲ್ಲವೇ, ರೀ ಸ್ವಲ್ಪ ನಿಮ್ಮ ಹಸುವಿನ ಸಗಣಿ ಕೊಡ್ತೀರಾ ಅಂತ ಕೇಳಲು ಹೋದರೆ ಯಾರೂ ಜನರೇ ಕಾಣದಿದ್ದದ್ದು ಎಂಬ ಕಾರಣಗಳಿಂದ ಊರಾಚೆ ಹೋದೆವು. ಹೋಗಿಹೋಗಿ ಗ್ಲಾಸ್ ಮೌಂಟೇನ್ಸ್ (Glass Mountains) ಹತ್ತಿರ ತಲುಪಿದರೆ ಹಸುಗಳಿದ್ದ ಒಂದು ಫಾರ್ಮ್ ಗೇಟ್ ನನಗಾಗಿ ಎಂಬಂತೆ ತೆಗೆದೇ ಇತ್ತು. ಜೀಬೀ ಬೇಡಬೇಡ ಎಂದರೂ ಬಿಡದೆ ಕಾರನ್ನ ಗೇಟಿನೊಳಗೆ ಹೊಕ್ಕಿಸಿಯೇಬಿಟ್ಟೆ. ಒಂದು ಕಿ.ಮೀ. ದೂರದಲ್ಲಿದ್ದ ಮನೆಯ ಬಳಿ ಹೋದರೆ ವಯಸ್ಸಾದ ದಂಪತಿ ಅಂಗಳದಲ್ಲಿ ಕೂತಿದ್ದಾರೆ. ಅವರ ಕೆಲಸಗಾರ ನಮ್ಮ ಬಳಿ ಧಾವಿಸಿ ಬಂದು ಏನು ವಿಷಯ ಎಂದು ಕೇಳಿದ. ನಮ್ಮ ತಾಜಾಸಗಣಿ, ಗಂಜಳ, ಬಯೋಡೈನಮಿಕ್, ನ್ಯಾಚುರಲ್ ಫಾರ್ಮಿಂಗ್ ಗೊಬ್ಬರದ ವಿಷಯ ಹೇಳಿದೆವು. ಆ ವೃದ್ಧ ದಂಪತಿಯ ಬಳಿ ಹೋಗಿ ಅವ ಏನೋ ಮಾತನಾಡಿಬಂದ. “ಈ ಬಾರಿ ಸಗಣಿ ಕೊಂಡೊಯ್ಯಿರಿ, ಆದರೆ ಮತ್ತೆಂದೂ ಇಲ್ಲಿಗೆ ಬರಬೇಡಿ,” ಅಂದ. ನಾನು ಲಗುಬಗೆಯಿಂದ ಸಗಣಿ ಸಂಗ್ರಹಿಸಿ ಬಕೆಟ್ ನಲ್ಲಿ ತುಂಬಿಸಿಕೊಂಡೆ. ವಾಪಸ್ ದಾರಿಯುದ್ದಕ್ಕೂ ಗಂಡ, ಮಕ್ಕಳು ನನಗೆ ಹಿಡಿಶಾಪ ಹಾಕಿದರು. ಕಾರಲ್ಲಿ ಸಗಣಿಯ ವಾಸನೆ, ಆದ ಅವಮಾನ ಬೇರೆ. “ಸದ್ಯ, ಅವರು ನಮ್ಮೆಡೆಗೆ ರೈಫಲ್ ಗುರಿಮಾಡಲಿಲ್ಲ,” ಎಂದು ಗಂಡ ಹೇಳಿದರೆ, ಮಕ್ಕಳು “Mum, why are you so crazy about cow poo?” ಅಂತ ಕೇಳಿದರು. ನಾಳೆ ಶಾಲೆಯಲ್ಲೇನಾದರೂ ಇದರ ಬಗ್ಗೆ ಬಾಯಿಬಿಟ್ಟರೆ ಹುಷಾರ್ ಎಂದು ಅವರ ಬಾಯಿ ಬಂದ್ ಮಾಡಿ, ಏನೋ ಸ್ವಲ್ಪ ನನ್ನ ಆತ್ಮಗೌರವವನ್ನ ಕಾಪಾಡಿಕೊಂಡೆ.
ಅದೇ ವಾರದಲ್ಲಿ ಗಂಜಳವಿಲ್ಲದೆ, ಹೆಸರುಕಾಳು, ಬೆಲ್ಲ ಇತ್ಯಾದಿ ಬೆರೆಸಿ ಅಮೃತಗೊಬ್ಬರವನ್ನು ತಯ್ಯಾರಿಸಿ ಮಣ್ಣಿಗೆ ಉಣಿಸಿದೆ. ಬಯೋಡೈನಮಿಕ್, ಸಹಜ ಕೃಷಿ, ಸಾವಯವ ಕೃಷಿ, ಕಾಂಪೋಸ್ಟಿಂಗ್ ಅಂತ ಎಷ್ಟೆಲ್ಲಾ ಕಸರತ್ತುಗಳನ್ನು ಮಾಡಿದ ಫಲವಾಗಿ ಅದರ ಮುಂದಿನ ವರ್ಷದಿಂದ ನಮ್ಮನೆಯ ಕಲ್ಲುಭೂಮಿಯಲ್ಲಿ ನೈಸರ್ಗಿಕವಾಗಿ ಬೆಳೆದ ಸೀಮೆಬದನೆಕಾಯಿ, ಹುರಳಿಕಾಯಿ, ಕ್ಯಾರೆಟ್, ಗಜನಿಂಬೆ, ಬಟಾಣಿ, ಟೊಮೇಟೊ, ಬ್ರೊಕಲಿ, ಅರಿಶಿನ, ಶುಂಠಿ, ಪರಂಗಿ ಹಣ್ಣು, ದಂಟುಸೊಪ್ಪು, ಗೋಂಗೂರ, ಕೊತ್ತಂಬರಿ, ಮೆಣಸಿನಕಾಯಿ, ಪುದಿನ, ಇಟಾಲಿಯನ್ ಹೆರ್ಬ್ಸ್ ಎಂಬಂತೆ ಆಹಾರದ ಹಸಿರುವಲಯ ನಳನಳಿಸಿ ಹೂಗಿಡಗಳ ತೋಟ ಅಭಿವೃದ್ಧಿಗೊಂಡಿತು. ಮಕ್ಕಳಿಗೆ, ನನಗೆ ಇದು ನಾವು ಬೆಳೆದಿದ್ದು ಅನ್ನೋ ಹಿರಿಹಿರಿ ಹಿಗ್ಗು!