ನಾಕೈದು ವಾರದ ಹಿಂದೆ ದೇಶವನ್ನು ಈಗಾಳುತ್ತಿರುವ ಲೇಬರ್‍ ಪಕ್ಷದ ಒಳಗೆ ನಾಯಕಪಟ್ಟಕ್ಕೆ ಹಣಾಹಣಿ ನಡೆದಿತ್ತು. ಅದರಲ್ಲಿ ಗೆದ್ದು ಪ್ರಧಾನಿಯಾದ ಜೂಲಿಯಾ ಗಿಲಾರ್ಡ್ ಎರಡು ವಾರದ ಕೆಳಗೆ ತಟ್ಟನೆ ಚುನಾವಣೆ ಘೋಷಿಸಿದರು. “ನಾನು ಜನರಿಂದ ನಾಯಕಳಾಗಿ ಚುನಾಯಿಸ್ಪಟ್ಟಿಲ್ಲ – ಹಾಗಾಗಿ ಈ ಕೂಡಲೆ ಚುನಾವಣೆ ನಡೆಯುವುದು ಉಚಿತ” ಎಂದು ಎಲ್ಲರೂ ಶಹಭಾಸ್ ಎನ್ನುವಂತಹ ಕಾರಣಕೊಟ್ಟರು. ಆದರೆ ಇಲ್ಲಿ ಕೆಲವು ಸೂಕ್ಷ್ಮಗಳಿವೆ. ಲೇಬರ್ ಪಕ್ಷ ಒಪೀನಿಯನ್ ಪೋಲಿನಲ್ಲಿ ಜನಬೆಂಬಲ ಕಳೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಪಕ್ಷದ ಒಳಗೆ ನಡೆದ ಜಗ್ಗಾಟದಲ್ಲಿ ಹಿಂದಿನ ಪ್ರಧಾನಿ ಕೆವಿನ್ ರಡ್ ಕೆಳಗಿಳಿಯಬೇಕಾಯಿತು. ಜೂಲಿಯ ಪ್ರಧಾನಿಯಾದೊಡನೆ ಪಕ್ಷದ ಜನಬೆಂಬಲ ಉತ್ತುಂಗಕ್ಕೆ ಏರಿದೆ. ಕೂಡಲೆ ಚುನಾವಣೆ ನಡೆಸಿದರೆ ಇನ್ನೊಂದು ನಾಕು ವರ್ಷ ಅಧಿಕಾರ ಖಾಯಂ ಎಂಬ ಯೋಚನೆ ಇದರ ಹಿಂದೆ ಕೆಲಸ ಮಾಡಿದೆ. ಇದು ಎಲ್ಲರಿಗೂ ತಿಳಿದಿರುವ ಅಂಶ ಹಾಗು ರಾಜಕೀಯ ಜಾಣತನವಷ್ಟೆ.

ಜೂಲಿಯಾ ಗಿಲಾರ್ಡ್ ಪ್ರಧಾನಿ ಆಗಿದ್ದು ನನಗೆ ಖುಷಿಯೇ. ಆಸ್ಟ್ರೇಲಿಯಾದ ಮೊದಲ ಮಹಿಳಾ ಪ್ರಧಾನಿ. ಯಾವುದೇ ಪುರುಷನಿಗೂ ಕಡಿಮೆ ಇಲ್ಲದ ಹಾಗೆ ತನ್ನ ಒತ್ತಾಸೆಯನ್ನು ಮುಂದಿಟ್ಟು ಪ್ರಧಾನಿ ಆದವಳು. ಮಹಿಳೆ ಪ್ರಧಾನಿ ಆಗುವುದು, ಕರಿಯ ಅಧ್ಯಕ್ಷನಾಗುವುದು ತನ್ನದೇ ಆದ ಕೆಲವು ಸಾಂಕೇತಿಕ ಮಹತ್ವ ಹೊಂದಿರುವಂತ ಸಂಗತಿಗಳು. ಆದರೂ ಅವರು ಬಿಂಬಿಸುವ ಮೌಲ್ಯಗಳು ಹಾವು ತಾತ್ವಿಕತೆ ಕೂಡ ತುಲನೆಯಾಗುವುದು ಮುಖ್ಯವೇ. ಆದರೆ ಮೊದಲ ಹೆಜ್ಜೆಯೂ ಅಷ್ಟೇ ಮುಖ್ಯ.

ಮೂರು ವಾರ ಪ್ರಧಾನಿ ಆಗಿದ್ದ ಕಾಲದಲ್ಲೇ ಗಿಲಾರ್ಡ್ ಕೆಲವು ಬಗೆಯಲ್ಲಿ ನಿರಾಶೆಯನ್ನೇ ಮಾಡಿದರು. ಗಣಿದೊರೆಗಳ ಜತೆಗಿನ ಒಪ್ಪಂದ, ಅದರ ರೂಪರೇಷೆಯನ್ನು ತಿಳಿಸದ ಕಾರಣ ಹಲವರಲ್ಲಿ ಆತಂಕವನ್ನು ಉಂಟುಮಾಡಿದೆ. ಅದಕ್ಕಿಂತ ಹೆಚ್ಚಾಗಿ ಶ್ರೀಲಂಕಾ ಹಾಗು ಆಫ್ಗಾನಿಸ್ತಾನದಿಂದ ಬರುತ್ತಿರುವ ನಿರಾಶ್ರಿತರ ಬಗ್ಗೆ ತಳೆದ ನಿಲುವು ನಿಜವಾಗಿಯೂ ನಿರಾಶಾದಾಯಕವಾಗಿದೆ. ಅವರನ್ನು ಆಸ್ಟ್ರೇಲಿಯದಾಚೆಯೇ ತಡೆದು ನಿಲ್ಲಿಸಿ ಪರಿಷ್ಕರಿಸಬೇಕೆಂದು ನಡೆಸಿರುವ ಹುನ್ನಾರ ಹವರ್ಡ್ ದಿನಗಳನ್ನು ನೆನಪಿಸಿದವು. ಇದು ಬರೇ ಚುನಾವಣೆಗೋಸ್ಕರ ತಳೆದ ನಿಲುವಾಗಿದ್ದರೆ ಮುಂದೆ ತಾನಾಗಿಯೇ ತಿಳಿಯಾಗುತ್ತದೆ.

ನನಗೆ ಮೆಚ್ಚುಗೆಯಾದ ಒಂದೆರಡು ಅಂಶವನ್ನೂ ಹೇಳಿಬಿಡುತ್ತೇನೆ. ಜೂಲಿಯ ಗಿಲಾರ್ಡ್‌ಗೆ ಮದುವೆಯಾಗಿಲ್ಲ. ಸಂಗಾತಿಯೊಡನೆ ಸಹಜೀವನ ನಡೆಸಿದ್ದಾಳೆ. ಇದರ ಬಗ್ಗೆ ಯಾರೂ ಹೆಚ್ಚೇನೂ ತಲೆಕೆಡಿಸಿಕೊಂಡಂತೆ ಕಾಣಲಿಲ್ಲ. ಹತ್ತಿಪ್ಪತ್ತು ವರ್ಷದ ಹಿಂದಾಗಿದ್ದರೆ ತುಸು ಚರ್ಚೆಯಾದರೂ ಆಗುತ್ತಿತ್ತೇನೋ. ಈಕೆಯ ಸಂಗಾತಿ ಹೇರ್‌ಡ್ರೆಸಿಂಗ್ ಕೆಲಸ ಮಾಡುತ್ತಾನೆ. ಅದರ ಬಗ್ಗೆ ಕೂಡ ಯಾವುದೇ ಮುಜುಗರ ತೋರಿಲ್ಲ. ಆದರೆ ಈಕೆಗೆ ಮಕ್ಕಳಿಲ್ಲದಿರುವುದರಿಂದ – ಸಂಸಾರಸ್ತರ ಸುಖ-ದುಃಖ ಅರಿಯಬಲ್ಲಳೇ ಎಂಬ ಗುಸುಗುಸು ಎದ್ದು ಹಾಗೆಯೇ ತಣಿಯಿತು.

ಎಲ್ಲಕ್ಕಿಂತ ಮುಖ್ಯವಾಗಿ ಈಕೆ ನಾಸ್ತಿಕಳು ಹಾಗು ಚರ್ಚಿಗೆ ಹೋಗದ ಅಧರ್ಮಿಯಳು. ಕೆವಿನ್ ರಡ್ ಚುನಾವಣೆ ಸಮಯದಲ್ಲಿ ತಾನು ಕ್ರಿಶ್ಚಿಯನ್ ಡೆಮಾಕ್ರಟ್ ಎಂದು ಹೇಳಿಕೊಂಡು ಹಲ್ಲುಕಿರಿದಿದ್ದ. ಈಕೆ ಮಾತ್ರ ಧರ್ಮದ ಬಗೆಗಿನ ಎಲ್ಲ ಪ್ರಶ್ನೆಗೂ, ತಾನು ದೇವರು ಹಾಗು ಧರ್ಮದಲ್ಲಿ ನಂಬಿಕೆಯಿಟ್ಟಿಲ್ಲ. ಆದರೆ ಇಟ್ಟಿರುವವರ ಬಗ್ಗೆ ನನಗೆ ಯಾವುದೇ ತಕರಾರಿಲ್ಲ ಎಂದು ವಿನಯಪೂರ್ವಕವಾಗಿ ಹೇಳಿದ್ದಾಳೆ. ಈ ನಿಲುವು ಈಕೆಯ ಪಾಲಿಸಿ ನಿರ್ಧಾರಗಳ ಬಗ್ಗೆ ನೇರವಾಗಿ ಯಾವುದೇ ಪ್ರಭಾವವನ್ನೂ ಬೀರದಿರಬಹುದು. ಆದರೆ ದಿಟ್ಟತನವಂತೂ ಮೆಚ್ಚುವಂತಹುದೇ. ಈ ಹಿಂದಿನ ಹತ್ತಾರು ವರ್ಷಗಳಲ್ಲಿ ಜಾಗತಿಕವಾಗಿ ಎಲ್ಲ ನಾಯಕರೂ ಧರ್ಮದ ಸಂಗತಿಯಲ್ಲಿ ಸೋಗಲಾಡಿತನದ ಮಾತಾಡುತ್ತಿರುವಾಗ ಈ ತಾಜಾ ಸಂಗತಿ ಒಂದು ಆಶಾಕಿರಣವೇ ಅನ್ನಬೇಕು.