ನೀರನ್ನು ಕುದಿಸಿ ಅದರಲ್ಲಿ ಒಂದು ಟೀ ಬ್ಯಾಗ್ ಕೇವಲ ೧೫ ಸೆಕೆಂಡು ಹಾಕಿ, ತೆಗೆದು, ಸಕ್ಕರೆ ಹಾಕಿಕೊಳ್ಳದೇ, ನೀರು ನೀರಾದ ಕೊಬ್ಬಿಲ್ಲದ ಹಾಲು ಹಾಕಿಕೊಂಡು ಇಲ್ಲಿನ ಥಂಡಿಯಲ್ಲಿ ಗಂಟೆಗಟ್ಟಲೇ ಕೂತು ಆರಿದ ಚಹಾ ಕುಡಿಯುತ್ತಾರೆ.  ಕಾಫಿ ಕುಡಿಯಬೇಕೆಂದರೆ ಚಕೋರಿ ಇಲ್ಲದ ಕಾಫಿ, ಕೆಫೀನ್ ಇಲ್ಲದ ಕಾಫಿ!  ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.

ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ಚಹಾಪುಡಿಯನ್ನು ನೀರಲ್ಲಿ ಕುದಿಸಿ, ಸಕ್ಕರೆ ಕರಗಿಸಿ, ಹಾಲು ಹಾಕಿಕೊಂಡು ಕುಡಿದವರು ಇಂಗ್ಲಂಡಿಗೆ ಬರುತ್ತಿದ್ದಂತೆ ಡಯಾಬಿಟಿಸ್ ಬಂದವರ ಥರ, ಕೊಲೆಸ್ಟೆರಾಲ್ ರಕ್ತನಾಳಗಳನ್ನೆಲ್ಲ ಬ್ಲಾಕ್ ಮಾಡಿದವರಂತೆ, ಸ್ಕಿಮ್ಡ್ ಹಾಲು ಹಾಕಿಕೊಂಡು ಸಕ್ಕರೆಯಿಲ್ಲದೇ ಚಹಾ ಕಾಫಿ ಕುಡಿಯುತ್ತಾರೆ. ಆದರೆ ಕೆಲವರಿರುತ್ತಾರೆ, ಅವರಿಗೆ ಸಕ್ಕರೆಯಿಲ್ಲದೇ ಚಹಾ ಕಾಫಿ ಕುಡಿಯಲಾಗುವುದಿಲ್ಲ. ಆದರೂ ಎಲ್ಲರ ಮುಂದೆ “ನೋ ಶುಗರ್” ಎಂದು ಹೇಳಿ ತಮ್ಮ ಕೋಣೆಗೆ ಬಂದು ಎರಡು ಸಕ್ಕರೆ ಪ್ಯಾಕೆಟ್ ಹಾಕಿ ಕದಡುತ್ತಾರೆ. ಇಲ್ಲಿನ ಜನರ ತಿಂಡಿ, ಊಟದಲ್ಲಿ ಸಕ್ಕರೆಯಿಲ್ಲದಿದ್ದರೆ ಆಗುವುದೇ ಇಲ್ಲ (ಕೇಕು, ಚಾಕಲೇಟು, ಡೋನಟ್ ಇತ್ಯಾದಿ). ಚಹಾ ಕುಡಿಯುವಾಗ ಅವರ ಕೈಯಲ್ಲೊಂದು ಯಾವುದಾದರೂ ಸಿಹಿ ತಿಂಡಿ ಇರುತ್ತದೆ. ಭಾರತೀಯರ ದಿನನಿತ್ಯದ ಊಟದಲ್ಲಿ ಸಕ್ಕರೆಗೆ ಜಾಗವಿಲ್ಲವೆಂದೇ ಹೇಳಬಹುದು (ಅದರಲ್ಲೂ ದಕ್ಷಿಣ ಭಾರತದಲ್ಲಿ). ಅಂಥಹುದರಲ್ಲಿ ಚಹಾಕ್ಕೆ ಒಂದೆರೆಡು ಚಮಚ ಸಕ್ಕರೆ ಹಾಕಿಕೊಂಡ ಮಾತ್ರಕ್ಕೆ ಕೊಬ್ಬು ಜಾಸ್ತಿಯಾಗುತ್ತದೆ ಎಂಬ ಲಾಜಿಕ್ಕಿನಲ್ಲಿ ಯಾವ ಅರ್ಥವಿದೆ?

ಪೃಷ್ಟ ಕಾಗದ:
ಯುರೋಪಿನಲ್ಲಿ, ಚೈನಾದಲ್ಲಿ ಚಳಿ ಬಹಳ. ಆಗಿನ ಕಾಲದಲ್ಲಿ ಬಿಸಿನೀರು ಬಹುಷಃ ಲಕ್ಸುರಿಯಿರಬಹುದು. ಆದ್ದರಿಂದ ಅವರು ತಮ್ಮ ಪೃಷ್ಟವನ್ನು ಹುಲ್ಲು, ಎಲೆಗಳಿಂದ ಒರೆಸಿಕೊಂಡು ಏಳುತ್ತಿದ್ದರೆಂದು ಇತಿಹಾಸ ಹೇಳುತ್ತದೆ. ಕಾಗದ ಕಂಡು ಹಿಡಿದ ಬಳಿಕ ಆ ಜಾಗದಲ್ಲಿ ಈಗ ಇಲ್ಲೆಲ್ಲ ಟಾಯ್ಲೆಟ್ ಟಿಶ್ಯೂ.  ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.

ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ನೀರಿನಿಂದ ತಿಕ ತೊಳೆದ ಜನ ಇಲ್ಲಿಗೆ ಬರುತ್ತಲೇ ಕಾಗದ ಹಿಡಿದು ಒರೆಸಿಕೊಳ್ಳಲು ಆರಂಭಿಸುತ್ತಾರೆ. ಅಷ್ಟೇ ಅಲ್ಲ, ನೀರಿನಲ್ಲಿ ತೊಳೆಯುವುದು ಶುದ್ಧ ಅನಾಗರಿಕ ಕೆಲಸ ಎಂದು ನಮ್ಮವರ ಮುಂದೆಯೇ ಹೇಳುತ್ತಾರೆ. ನಾನು ಸೌದಿಯಲ್ಲಿದ್ದಾಗ ಅಲ್ಲಿನ ಜನರು ಭಾರತೀಯರಂತೆ ನೀರಿನಲ್ಲಿ ತೊಳೆಯುತ್ತಾರೆ. ಈಗ ಇಲ್ಲಿ ಕೂಡ ಯಾವಾಗಲೂ ಒಂದು ನಲ್ಲಿಯಲ್ಲಿ ಬಿಸಿ ನೀರು ಬರುತ್ತದೆ, ಒಂದು ಚಂಬಿನಲ್ಲಿ ನೀರು ತೆಗೆದುಕೊಂಡು ತೊಳೆದರೆ ಹೆಚ್ಚು ಸ್ವಚ್ಛವಾಗುವುದೋ ಇಲ್ಲಾ ಕಾಗದದಿಂದ ಒರೆಸಿಕೊಂಡರೆ ಹೆಚ್ಚು ಸ್ವಚ್ಛವಾಗುವುದೋ ಎಂದು ಪರೀಕ್ಷಿಸಲು ಪಿ.ಎಚ್.ಡಿ ಏನೂ ಮಾಡಬೇಕಾಗಿಲ್ಲ.

ಊಟ, ಫೋರ್ಕು ಮತ್ತು ಕೈ:
ಈ ದೇಶದಲ್ಲಿ ಕೈಯಿಂದ ತಿಕ ತೊಳೆಯುವುದು ಹೇಗೆ ಅನಾಗರಿಕತೆಯ ಪ್ರತೀಕವೋ, ಹಾಗೆಯೇ ಕೈಯಿಂದ ಊಟ ಮಾಡುವುದು ಕೂಡ. ಮಕ್ಕಳಿಗೆ ಒಂದು ವರ್ಷವಾಗುತ್ತಿದ್ದಂತೆ ಬಲಗೈಯಲ್ಲೊಂದು ಚಾಕು, ಎಡಗೈಯಲ್ಲೊಂದು ಫೋರ್ಕು ಕೊಟ್ಟು ತಿನ್ನುವುದನ್ನು ವಿಧಿವತ್ತಾಗಿ ಹೇಳಿ ಕೊಡಲಾಗುತ್ತದೆ. ಕಳೆದ ವರ್ಷ ಇಲ್ಲಿನ ಟಿವಿಯಲ್ಲಿ ನಡೆದ “ಸೆಲೆಬ್ರಿಟಿ ಬಿಗ್ ಬ್ರದರ್” ಎಂಬ ರಿಯಾಲಿಟಿ ಕಾರ್ಯಕ್ರಮದಲ್ಲಿ ಶಿಲ್ಪಾ ಶೆಟ್ಟಿಗೆ ಭಾರತೀಯರು ಕೈಯಲ್ಲಿ ಊಟ ಮಾಡುವ ವಿಷಯದ ಬಗ್ಗೆ ಜೇಡ್ ಗುಡಿ ಮತ್ತು ಅವಳ ಸಂಗಡಿಗರು ಅವಹೇಳನ ಮಾಡಿ, ಅದು ಜನಾಂಗೀಯ ನಿಂದನೆ ಎಂದು ಇಂಗ್ಲಂಡಿನ ಪಾರ್ಲಿಮೆಂಟಿನಲ್ಲೂ ಗಲಾಟೆಯಾಯಿತು. ಭಾರತೀಯರು ಕೈಯಿಂದ ತಿನ್ನುವುದನ್ನು ಅವಹೇಳನ ಮಾಡುವ ಇವರೇ ಸ್ಯಾಂಡ್-ವಿಚ್-ಗಳನ್ನು, ಕೇಕುಗಳನ್ನು, ಹಾಟ್-ಡಾಗ್-ಗಳನ್ನು ಕೈಯಿಂದಲ್ಲದೇ ಚಾಕು ಫೋರ್ಕಿನಲ್ಲಿ ತಿನ್ನುತ್ತಾರೆಯೇ? ಅದು ಬೇರೆ ಮಾತು. ಅದು ಅವರವರ ಇಷ್ಟ, ಅಯಾ ದೇಶದ ರೀತಿ ರಿವಾಜು.

ಭಾರತದಲ್ಲಿ ಇಪ್ಪತೈದು ಮೂವತ್ತು ವರ್ಷ ಕೈಯಿಂದ ಊಟ ಮಾಡಿದ ಜನ, ಇಲ್ಲಿಗೆ ಬರುತ್ತಲೇ, ಮನೆಯಲ್ಲಿ ಮಾಡುವ ಭಾರತೀಯ ಊಟವನ್ನೂ ಚಾಕು ಫೋರ್ಕಿನಿಂದಲೇ ತಿನ್ನಲು ಶುರುವಚ್ಚಿಕೊಳ್ಳುತ್ತಾರೆ, ಮುಖ್ಯವಾಗಿ ಮಕ್ಕಳಿಗೆ ಕಲಿಸುತ್ತಾರೆ. ಇಂಡಿಯನ್ ರೆಸ್ಟೋರಂಟುಗಳಲ್ಲಿ ಭಾರತೀಯರೇ ಮಸಾಲೆ ದೋಸೆಯನ್ನೂ, ತಂದೂರಿ ರೋಟಿಯನ್ನೂ ಕಷ್ಟದಲ್ಲಿ ಚಾಕುವಿನಿಂದ ಕತ್ತರಿಸಿ, ಫೋರ್ಕಿನಲ್ಲಿ ಹಿಡಿದು ತಿನ್ನುವ ದೃಶ್ಯ ಸರ್ವೇ ಸಾಮಾನ್ಯ. ಲಂಡನ್ನಿನ ಚನ್ನೈ ದೋಸಾ ಎಂಬ ರೆಸ್ಟೋರೆಂಟಿನಲ್ಲಿ ಒಂದು ಸುಂದರ ಬರಹವಿದೆ, ‘ಊಟವನ್ನು ಎಲ್ಲ ಇಂದ್ರಿಯಗಳೂ ಅನುಭವಿಸಿದರೆ ಚೆನ್ನ. ಚಾಕು ಫೋರ್ಕು ಬದಿಯಿಟ್ಟು ಕೈಯಿಂದ ತಿನ್ನಿ. ಇದು ನಮ್ಮ ನಮ್ರ ವಿನಂತಿ’ ಎಂದು.

ಇವು ಬರೀ ಮೂರು ಉದಾಹರಣೆಗಳಷ್ಟೇ. ಯುರೋಪಿಯನ್ನರು ಅಥವಾ ಅಮೇರಿಕದವರು ಭಾರತಕ್ಕೆ ಬಂದರೆ ಭಾರತೀಯರ ಥರ ಕೈಯಿಂದ ತಿನ್ನುತ್ತಾರೆಯೇ? ಸಕ್ಕರೆ ಹಾಕಿದ ಚಹಾ ಕುಡಿಯುತ್ತಾರೆಯೇ? ನೀರಿನಲ್ಲೀ ತಿಕ ತೊಳೆಯಬಲ್ಲರೇ? ನಾವೇಕೆ ಸಮುದ್ರೋಲಂಘನ ಮಾಡುತ್ತಿದ್ದಂತೆ, ಯಾರಿಗೂ ಹಾನಿಕಾರಕವಲ್ಲದ ನಮ್ಮ ಸರಳ ಆಚಾರಗಳನ್ನು ಬಿಟ್ಟು, ಕಂದು ಬಣ್ಣದ ಚರ್ಮವಿದ್ದರೂ ಒಳಗೆಲ್ಲ ಬಿಳಿಯಾಗ ಬಯಸುವ ತೆಂಗಿನಕಾಯಿಗಳಾಗುತ್ತೇವೆ?

0
0