ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್‌ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ. ಒಂದು ದೇವಾಲಯ ಕಟ್ಟಲು ಅದೆಷ್ಟು ಜ್ಞಾನಶಾಖೆಗಳಲ್ಲಿ ಪರಿಣತಿ ಇರಬೇಕಿತ್ತು.
ಗಿರಿಜಾ ರೈಕ್ವ ಬರೆಯುವ ‘ದೇವಸನ್ನಿಧಿ’ ಅಂಕಣದಲ್ಲಿ ಹೊಸ ಬರಹ

ಕಳೆದ ಅನೇಕ ದಶಕಗಳ ಕಾಲ ದೇವರು, ನಂಬಿಕೆ, ಶ್ರದ್ಧೆ, ಮೂರ್ತಿಪೂಜೆ ಇತ್ಯಾದಿ ಧಾರ್ಮಿಕ ಆಚರಣೆಗಳು ಅದಕ್ಕೆ ಸಂಬಂಧಿಸಿದ ವಿಚಾರಗಳು ಅಂದರೆ ಮೂಗುಮುರಿಯುತ್ತಿದ್ದವರೇ ಹೆಚ್ಚು. ಒಳಗೆ ಅವೆಲ್ಲವುಗಳ ಮೇಲೆ ನಂಬಿಕೆ ಇದ್ದರೂ ಹೊರಗೆ ನಾಸ್ತಿಕರಂತೆ, ಆಧುನಿಕರಂತೆ ತೋರಿಸಿಕೊಳ್ಳಬೇಕಾದ ಒತ್ತಡವೋ, ಅವಶ್ಯಕತೆಯೋ ಮತ್ತೆ ಎಂಥದೋ ಇತ್ತು. ಸಿನಿಮಾಲೋಕದಲ್ಲಿ ಅಪಾರ ಜನಪ್ರಿಯತೆ ಗಳಿಸಿದ ಇದೇ ಕಾಂತಾರ ಒಂದು ದಶಕದ ಹಿಂದೆ ಬಂದಿದ್ದರೆ ಇಂತಹ ಅಭೂತಪೂರ್ವ ಯಶಸ್ಸು ಸಿಗುತ್ತಿತ್ತೋ ಇಲ್ಲವೋ. ಅದೊಂದು ಮೂಢನಂಬಿಕೆ, ಕಥೆ ಅಂತ ತಳ್ಳಿಹಾಕುವ ಎಲ್ಲಾ ಸಾಧ್ಯತೆಗಳಿದ್ದವು. ಈಗ ಕಾಲ ಬದಲಾಗಿದೆ. ತಮ್ಮ ಆಸ್ತಿಕ ನಂಬಿಕೆಗಳನ್ನು ಜನ ಮರೆಮಾಚಬೇಕಿಲ್ಲ. ಜನ ಪುರಾಣಗಳ ಬಗ್ಗೆ ಮಾತನಾಡುತ್ತಿದ್ದಾರೆ, ರಾಮಾಯಣ ಮಹಾಭಾರತಗಳು ಇವತ್ತಿಗೂ ಹೊಸ ರೂಪದಲ್ಲಿ ಕಾದಂಬರಿಗಳಾಗಿ ಮತ್ತೆ ಮರುಹುಟ್ಟು ಪಡೆಯುತ್ತಿವೆ. ಅವುಗಳ ಪಾತ್ರಗಳ ವಿಶ್ಲೇಷಣಾತ್ಮಕವಾದ ಕತೆಗಳು ಹುಟ್ಟುತ್ತಿವೆ. ಕಳೆದ ಕೆಲವು ವರ್ಷಗಳಲ್ಲಿ ಬಹುಶಃ ಪ್ರತಿ ಭಾಷೆಯಲ್ಲೂ ಇಂತಹ ಹಲವು ಪುಸ್ತಕಗಳು ಹೊರಬಂದಿವೆ. ಜನ ದುಡ್ಡು ಕೊಟ್ಟು ಪ್ರಾಚೀನ ಗ್ರಂಥಗಳ ಅಧ್ಯಯನ ಮಾಡುತ್ತಿದ್ದಾರೆ. ಜನ ಇಂತಹ ಪುಸ್ತಕಗಳನ್ನು ಓದುತ್ತಿದ್ದಾರೆ, ಪ್ರಕಾಶಕರಿಗೆ ಚೆನ್ನಾಗಿ ಮಾರಾಟವಾಗುತ್ತವೆ. ಇದೆಲ್ಲ ಒಳ್ಳೆಯ ಬೆಳವಣಿಗೆಯೇ.

ಆದರೆ ಇದರ ನಡುವೆ ಓತಪ್ರೋತವಾಗಿ ಇಂಟರ್ನೆಟ್‌ ಹುಟ್ಟುಹಾಕುತ್ತಿರುವ ಆಧುನಿಕ ಹಸಿಸುಳ್ಳುಗಳು, ಕಂತೆಬೊಂತೆ ಪುರಾಣಗಳು, ಎಲ್ಲವೂ ನಮ್ಮಲ್ಲೇ ಎನ್ನುವ ಕಟ್ಟುಕತೆಗಳು, ಮತ್ಯಾವುದೋ ದೇಶದ ಯಾವುದೋ ಚಿತ್ರವನ್ನು ಹಾಕಿ ಇದು ನಮ್ಮದೇ ಎನ್ನುವ ಡೋಂಗಿ ಮಾನಸಿಕತೆ ಇವೆಲ್ಲಾ ಈ ಹೊಸ ಅಲೆಯ ಅನಾಹುತಕಾರಿ ಬೆಳವಣಿಗೆಗಳು. ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳ ಈ ಮಾಹಿತಿ ಪ್ರವಾಹದಲ್ಲಿ ನಿಜ ಯಾವುದು ಸುಳ್ಳು ಯಾವುದು ಅಂತ ಗುರುತಿಸಲಾರದಷ್ಟು ಮಾಹಿತಿ ಕಲಬೆರಕೆಯಾಗುತ್ತಿದೆ. ಇನ್ನೂ ನಿಜ ಇತಿಹಾಸವನ್ನೇ ಸರಿಯಾಗಿ ತಿಳಿಯದ ಈ ಹೊತ್ತಿನಲ್ಲಿ ಇಂತಹ ಸುಳ್ಳು ಮಾಹಿತಿಗಳು ಜನರನ್ನು ದಾರಿತಪ್ಪಿಸುತ್ತವೆ.

ನಮಗೆ ಹೇಳಿಕೊಳ್ಳಲು ಹೆಮ್ಮೆ ಪಡಲು ಶ್ರೀಮಂತ ಪರಂಪರೆಯಿದೆ. ಇರೋದನ್ನು ಬಿಟ್ಟು ಇಲ್ಲದ್ದನ್ನು ಹೇಳುವ, ನಂಬುವ ಅವಶ್ಯಕತೆಯೇನು? ನಾನು ಕೆಲವು ಪ್ರಾಚೀನ ದೇವಾಲಯಗಳ ಬಗೆಗಿನ ಗುಂಪುಗಳಲ್ಲಿ ಇದ್ದೇನೆ. ಅಲ್ಲಿ ಬರುವ ಸುಳ್ಳುಗಳನ್ನು ಓದಿ ಬೆಚ್ಚಿಬಿದ್ದಿದ್ದೇನೆ. ಅಂತಹ ಕೆಲವು ಮೂರ್ತಿಗಳ ಬಗ್ಗೆ ಇರುವ ಒಂದಷ್ಟು ಸುದ್ದಿಗಳನ್ನು ನೋಡೋಣ.

(ಈ ಚಿತ್ರ ಕೃಪೆ youturn blog)

ಗುಜರಾತಿನ ಪಾಲಿಟಾನದ ಒಂದು ಶಿಲ್ಪ ಅಂತರ್ಜಾಲದಲ್ಲಿ ಸಿಕ್ಕಾಪಟ್ಟೆ ಓಡಾಡುತ್ತಾ ಇರುತ್ತದೆ. ೧೦೦೦ ವರ್ಷಗಳ ಹಿಂದೆಯೇ ಜನ ಟ್ಯಾಬ್ಲೆಟ್‌ ಬಳಸುತ್ತಿದ್ದರು, ಹೆಣ್ಣುಮಕ್ಕಳು ಮೊಬೈಲ್‌ ಫೋನ್‌ ಬಳಸುತ್ತಿದ್ದರು ಎಂದು. ( ಚಿತ್ರ ೧). ಅಸಲಿ ವಿಷಯ ಅಂದರೆ, ಆಕೆ ಪತ್ರಲೇಖೆ. ಅವಳು ಬರೆಯುತ್ತಿದ್ದಾಳೆ. ಮತ್ತೊಂದು ಬದಿಯಿಂದ ತೆಗೆದ (ಚಿತ್ರ ೨) ಚಿತ್ರದಲ್ಲಿ ಅದು ಫೋನಲ್ಲ ಅಂತ ತಿಳಿಯುತ್ತದೆ. ಅವಳು ಕಣ್ಣಿಗೆ ಕಾಡಿಗೆ ಹಚ್ಚುತ್ತಿದ್ದಾಳೆ ಅಂತ ಎಂತಹವರಿಗೂ ತಿಳಿಯುತ್ತದೆ. ಬೇಕು ಅಂತಲೇ ತಪ್ಪು ಕಲ್ಪನೆ ಬರುವ ಕೋನದಿಂದ ಚಿತ್ರ ತೆಗೆದು ವೈರಲ್‌ ಮಾಡುತ್ತಾರೆ.

ನಮ್ಮ ಹಳೇಬೀಡಿನ ಶಿಲ್ಪಗಳ ಬಗ್ಗೆಯಂತೂ ನಾನಾರೀತಿಯಲ್ಲಿ ಅಧ್ವಾನದ ಕತೆ ಹರಿಯಬಿಟ್ಟಿದ್ದಾರೆ. ಇತ್ತೀಚೆಗೆ ನಾನು ಹಳೇಬೀಡಿಗೆ ಹೋಗಿದ್ದಾಗ ಒಬ್ಬ ಗೈಡ್‌ ಒಂದು ಗುಂಪಿಗೆ ಇಂತಹದೇ ಒಂದು ಯ್ಯೂಟ್ಯೂಬ್‌ ಸುಳ್ಕಥೆಯನ್ನು ವಿವರಿಸುತ್ತಿದ್ದರು. (ಚಿತ್ರ ೩). ಈ ಚಿತ್ರದಲ್ಲಿ ಡಾಕ್ಟರ್‌ ಆಧುನಿಕ ಸಿಪಿಆರ್‌ ಮಾಡುತ್ತಿದ್ದಾರೆ. ಆ ಬಾಲಕನನ್ನು ಬದುಕಿಸುತ್ತಿದ್ದಾರೆ ಅಂತ. ಸರಿಯಾಗಿ ಚಿತ್ರವನ್ನು ನೋಡಿದರೆ ಗೊತ್ತಾಗುತ್ತದೆ. ಅಲ್ಲಿ ನಡೆಯುತ್ತಿರುವುದು ತಾಂತ್ರಿಕ ಮತದ ಒಂದು ಕ್ರಿಯೆ. ಎಡದಲ್ಲಿ ಒಂದು ತಾಂತ್ರಿಕ ದೇವರು ಪೀಠದ ಮೇಲೆ ಆಸೀನವಾಗಿದೆ. ಬಲದ ತುದಿಯಲ್ಲಿ ಒಬ್ಬಾಕೆ ಮಗು ಎತ್ತಿಕೊಂಡು ನಿಂತಿದ್ದಾಳೆ. ಅಮ್ಮ ಇರಬೇಕು. ಪಕ್ಕದಲ್ಲಿ ತಂದೆಯಿರಬೇಕು. ಅವನ ಪಕ್ಕದಲ್ಲಿ ಬೇತಾಳದಂತಹ ಒಂದು ಆಕೃತಿ. ಅದರ ಪಕ್ಕದಲ್ಲಿ ಒಬ್ಬ ಮಾಂತ್ರಿಕ. ಅವನ ಪಕ್ಕದಲ್ಲಿ ತಂದೆ ಮಗುವನ್ನು ಬಲಿ ಕೊಡುತ್ತಿದ್ದಾನೆ. ಕತ್ತಿ ಹಾಕಿ ಇರಿದಿದ್ದಾನೆ. ಕತ್ತಿಯ ಹಿಡಿ ಅವನ ಕೈಯಲ್ಲಿದೆ. ಬೇತಾಳ, ರುಂಡಾಸೀನವಾದ ದೇವರು… ಇದರ ಮಧ್ಯ ಚೆನ್ನಾಗಿರುವ ಮಗುವನ್ನು ಅವನೇಕೆ ಸಿಪಿಆರ್‌ ಮಾಡಿ ಬದುಕಿಸುತ್ತಿದ್ದಾನೆ? ಆ ಕಾಲದಲ್ಲಿ ಚಾಲ್ತಿಯಲ್ಲಿದ್ದ ಸಾಮಾನ್ಯ ಜೀವನ ಚಿತ್ರಣ ಹಳೇಬೀಡಿನ ಈ ಸಾಲಿನಲ್ಲಿ ಸುಂದರವಾಗಿ ಚಿತ್ರಿತವಾಗಿದೆ. ಇದರ ಮೇಲಿನ ಸಾಲಿನಲ್ಲಿ ಬೆರಗಾಗಿಸುವ ದೇವ ದೇವತೆಗಳ ಚಿತ್ರಣ ಇದ್ದರೆ ಕೆಳಗಿನ ಈ ಸಾಲಿನಲ್ಲಿ ಜನಜೀವನದ ಕೆತ್ತನೆಯಿದೆ. ಇದು ನನಗೆ ತುಂಬಾ ಪ್ರಿಯವಾದ ಸಾಲು.

(ಚಿತ್ರ ೩)

ಮುದ್ರಣ ಮತ್ತು ಎಲೆಕ್ಟ್ರಾನಿಕ್‌ ಮಾಧ್ಯಮಗಳ ಈ ಮಾಹಿತಿ ಪ್ರವಾಹದಲ್ಲಿ ನಿಜ ಯಾವುದು ಸುಳ್ಳು ಯಾವುದು ಅಂತ ಗುರುತಿಸಲಾರದಷ್ಟು ಮಾಹಿತಿ ಕಲಬೆರಕೆಯಾಗುತ್ತಿದೆ. ಇನ್ನೂ ನಿಜ ಇತಿಹಾಸವನ್ನೇ ಸರಿಯಾಗಿ ತಿಳಿಯದ ಈ ಹೊತ್ತಿನಲ್ಲಿ ಇಂತಹ ಸುಳ್ಳು ಮಾಹಿತಿಗಳು ಜನರನ್ನು ದಾರಿತಪ್ಪಿಸುತ್ತವೆ.

ಇದೇ ರೀತಿ ಮತ್ತೊಂದು ಚಿತ್ರ ೫. ಇಲ್ಲಿ ಕೆಲವು ಶಿರಸ್ತ್ರಾಣ ಧರಿಸಿದ ಜನರು ದೇವರ ಮುಂದೆ ಕೈಮುಗಿದು ಕುಳಿತಿದ್ದಾರೆ. ಆ ದೇವರು ಶಿವನೋ ವಿಷ್ಣುವೋ ಇರಬೇಕು. ಮುಖ ಮತ್ತು ಅವರ ಆಯುಧಗಳು ಭಗ್ನವಾಗಿರುವುದರಿಂದ ಸರಿಯಾಗಿ ತಿಳಿಯುವುದಿಲ್ಲ. ಇನ್ನು ಕುಳಿತಿರುವವರ ಹಿಂದೆ ಸ್ವಲ್ಪ ಬಲವಾಗಿರುವವರು ನಿಂತಿದ್ದಾರೆ. ಇದು ಯಾವುದೋ ಯುದ್ಧದ ಸನ್ನಿವೇಶ ಇರಬೇಕು. ಇದನ್ನು ‘೮೦೦ ವರ್ಷಗಳ ಹಿಂದೆಯೇ ಗಗನಯಾತ್ರಿಗಳು ಲೋಕಸಂಚಾರ ಮಾಡುತ್ತಿದ್ದುದನ್ನು ಈ ಚಿತ್ರ ಬಿಂಬಿಸುತ್ತದೆʼ ಅಂತ ತಲೆಬುಡವಿಲ್ಲದ ಕಥೆ ಹೇಳಿ ಜನ ಇತ್ತೀಚೆಗೆ ಇದನ್ನು ಗಗನಯಾತ್ರಿಗಳು ಎಂದೇ ಗುರುತಿಸುತ್ತಾರೆ. ಅಲ್ಲಾ ಅವರು ಗಗನಯಾತ್ರಿಗಳಾಗಿದ್ದರೆ ತಲೆಗೆ ಮಾತ್ರ ಯಾಕೆ ಹೆಲ್ಮೆಟ್‌ ಧರಿಸಿದ್ದಾರೆ. ಕಾಲನ್ನು ಯಾಕೆ ಮುಚ್ಚಿಕೊಂಡಿಲ್ಲ? ಯಾವುದೋ ಯುದ್ಧದಲ್ಲಿ ಶರಣಾಗತರಾಗಿರುವವರ ಹಾಗೆ ಕಾಣುತ್ತಾರೆ. ಅನೇಕ ಶಿಲ್ಪಗಳ ಕಥಾನಿರೂಪಣೆ ಹಿಂದೆ ಮುಂದಿನ ಸಾಲುಗಳನ್ನು ಅಧ್ಯಯನ ಮಾಡದೆ ಸುಲಭಕ್ಕೆ ಗೊತ್ತಾಗುವುದಿಲ್ಲ, ಇದರ ಕಥೆ ಯಾವುದೋ ಪುರಾಣಗಳಲ್ಲೋ ಮತ್ತೆ ಯಾವುದೋ ಗ್ರಂಥಗಳಲ್ಲೋ ಉಲ್ಲೇಖಿಸಿರಬೇಕು. ನಮ್ಮ ಮಿತಿಯಲ್ಲಿ ಅರ್ಥವಾಗದೆ ಇರಬಹುದು. ಈ ಕುರಿತು ಇದುವರೆಗೆ ಬರೆದಿರುವ ಖ್ಯಾತ ಇತಿಹಾಸಕಾರ-ಸಂಶೋಧಕರು ಸಹ ಏನೂ ಬರೆಯದೆ ಇರಬಹುದು. ಪರಂಪರೆಯ ಮುಂದುವರಿಕೆಯೆಂದರೆ ಹಳಹಳಿಕೆ ಅಲ್ಲ, ಇಲ್ಲದ್ದನ್ನು ಇದೆ ಅಂತ ಎದೆಯುಬ್ಬಿಸಿ ಸುಮ್ಮನೆ ರೈಲು ಬಿಡುವುದಲ್ಲ. ಸರಿ ಎಂದು ಮೇಲ್ನೋಟಕ್ಕೆ ಕಂಡಿದ್ದನ್ನೂ ತರ್ಕದ-ಅನುಭವದ, ಅಧ್ಯಯನದ ಒರೆಗಲ್ಲಿಗೆ ಹಚ್ಚಿ ನೋಡಿ ಜ್ಞಾನದ ಅನ್ವೇಷಣೆಯನ್ನು ಸತತವಾಗಿ ಮುಂದುವರೆಸುತ್ತಿರುವುದೆ ಭಾರತೀಯತೆಯ ಹೃದಯವಲ್ಲವೆ?

ಅದೇ ಇದರ ಸೌಂದರ್ಯ. ಅರ್ಥ ಆಗದೇ ಇದ್ದಾಗ ಓದಿ ಜ್ಞಾನವನ್ನು ವಿಸ್ತರಿಸಿಕೊಳ್ಳಬೇಕು. ಅದನ್ನು ಶಿಲ್ಪಗಳಲ್ಲಿ ನೋಡಿ ಆನಂದಿಸಬೇಕು. ಬಹುಶಃ ಇಷ್ಟು ವಿಸ್ತೃತವಾಗಿ ಕೆತ್ತುತ್ತಿದ್ದಕ್ಕೆ ಇದೇ ಕಾರಣ ಇರಬೇಕು. ಗೊತ್ತಿಲ್ಲ.

ಒಂದು ವಾಟ್ಸಾಪ್‌ ಫಾರ್ವಡ್‌ ಬಂದಿತ್ತು. ಹಳೇಬೀಡಿನ ದೇವಾಲಯದಲ್ಲಿ ಹಲ್ಲಿನ ಡೆಂಚರ್ಸ್‌(ಕೃತಕ ಹಲ್ಲುಕಟ್ಟು) ಕೆತ್ತಿದ್ದಾರೆ. ಅದೆಷ್ಟು ಲಕ್ಷ ಫಾರ್ವರ್ಡ್‌ ಆಗಿತ್ತೋ. ಅದರಲ್ಲಿ ಆ ಕಾಲದಲ್ಲೇ ಡೆಂಚರ್ಸ್‌ ಇತ್ತು ಅಂತ ಒಂದು ಶಿಲ್ಪದ ಚಿತ್ರವನ್ನು ಹಾಕಿದ್ದರು. ಅಪೂರ್ಣವಾದ, ಭಗ್ನವಾದ ಶಿಲ್ಪಗಳನ್ನು ಯಾವುಯಾವುದೋ ಕೋನದಲ್ಲಿ ತೆಗೆದು ಇಂತಹ ವಾದಗಳನ್ನು ಮಾಡಬಹುದು. ಉತ್ಸಾಹದ ಭರದಲ್ಲಿ ಅವುಗಳಿಗೆ ಮೋಸಹೋಗಬಾರದಷ್ಟೇ.

ಹಳೇಬೀಡಿನಲ್ಲಿ ಒಂದು ಶಿಲ್ಪ ಇದೆ. ಒಬ್ಬ ತಾಂತ್ರಿಕನ ಚಿತ್ರ ಅದು. ಆತ ಉದ್ದನೆಯ ಕೋಟಿನಂತಹ ವಸ್ತ್ರ ಧರಿಸಿದ್ದಾನೆ. ತಲೆಗೂ ಉದ್ದನೆಯ ವಿಗ್‌ ತರಹದ ತಲೆದಿರುಸು ಧರಿಸಿರುತ್ತಾನೆ. ಅದರ ಪಕ್ಕದಲ್ಲಿ ವಿಷಕನ್ಯೆ ಅಂತ ಕರೆಯುವ ಒಂದು ಶಿಲ್ಪವೂ ಇರುತ್ತದೆ. ಇದು ಸಾಮಾನ್ಯವಾಗಿ ಹೊಯ್ಸಳರ ಬಹುತೇಕ ಎಲ್ಲಾ ದೇವಾಲಯಗಳಲ್ಲೂ ಕಾಣಸಿಗುವ ಸಾಮಾನ್ಯ ಚಿತ್ರಣ. ನಾನು ಇವೆರಡು ಜೋಡಿಗಳಿಲ್ಲದ ಯಾವ ಹೊಯ್ಸಳ ದೇವಾಲಯವನ್ನೂ ಇದುವರೆಗೆ ನೋಡಿಲ್ಲ. ಈ ಕೆತ್ತನೆ ಈಜಿಪ್ಟಿನ ವ್ಯಕ್ತಿಯದ್ದು ಅಂತ ಸುಳ್ಸುದ್ದಿ ಇದೆ. ಈತ ಬಹುಪಾಲು ತಾಂತ್ರಿಕ ಅಂತ ಹೇಳಬಹುದು. ಯಾಕೆಂದರೆ ಹೊಯ್ಸಳರ ಮೊದಮೊದಲಿನ ದೇವಾಲಯಗಳಲ್ಲಿ ಒಂದಾದ ದೊಡ್ಡಗದ್ದವಳ್ಳಿಯ ಲಕ್ಷ್ಮಿ ದೇವಾಲಯದಲ್ಲಿ ಕೂಡ ಇದೇ ಕೆತ್ತನೆಯನ್ನು ಕಾಣಬಹುದು. ಭೈರವ ದೇವಾಲಯದ ಬಾಗಿಲ ಬದಿಯಲ್ಲಿ ಇವೆರಡು ಜೋಡಿ ಚಿತ್ರಗಳು ಕಾಣುತ್ತವೆ. ಬಹುಶಃ ನಾನು ನೋಡಿದ ಹಾಗೆ ಇಲ್ಲೇ ಹೊಯ್ಸಳರ ದೇವಾಲಯಗಳ ಪೈಕಿ ಇದರ ಮೊದಲ ಚಿತ್ರಣ ಕಾಣುವುದು. ಅದನ್ನೇ ಮುಂದೆ ಹಲವಾರು ಹೊಯ್ಸಳ ದೇವಾಲಯಗಳಲ್ಲಿ ಇನ್ನಷ್ಟು ಕುಸುರಿ ಕಲೆಗಾರಿಕೆಯೊಂದಿಗೆ ನೋಡಬಹುದು. ದೊಡ್ಡಗದ್ದವಳ್ಳಿಯ ಕಾಳಿಯ ದೇವಾಲಯ ಒಂದು ತಾಂತ್ರಿಕ ದೇವಾಲಯವಾಗಿರಬಹುದು.

ಅನೇಕ ಪ್ರಖ್ಯಾತ ಯೂಟ್ಯೂಬಿಗರು ಎಲ್ಲವನ್ನೂ ವಿಜೃಂಭಿಸುವುದು, ರೋಚಕವಾಗಿ ಇತಿಹಾಸ ಕಟ್ಟುವುದು, ಸತ್ಯದ ತಲೆ ಮೇಲೆ ಹೊಡೆದಂತಹ ಥಿಯರಿಗಳನ್ನು ಕಟ್ಟುವುದು, ಇಂತಹ ಕಟ್ಟುಕತೆಗಳನ್ನು ಹೆಣೆಯುತ್ತಿದ್ದಾರೆ. ಜನ ಇದನ್ನೇ ನಿಜ ಅಂತ ನಂಬುತ್ತಾರೆ. ಅವೆಲ್ಲವೂ ಹಿಂದೂ ಧರ್ಮದ ಬುನಾದಿಯ ಮೇಲೆ ನಿಂತಿಲ್ಲ. ಅಸಲಿಗೆ ಋತ, ನಿಜದ ಬುನಾದಿಯನ್ನು ಹಿಂದೂ ಧರ್ಮ ನಂಬುತ್ತದೆ.

ಭೂಲೋಕದಲ್ಲಿರುವ ಬೆರಗು ಹುಟ್ಟಿಸುವ ಎಲ್ಲ ಕೆಲಸಗಳನ್ನು ಅನ್ಯಲೋಕದ ಜೀವಿಗಳು ಬಂದು ಮಾಡಿದ್ದಾರೆ ಅಂತ ಎಲ್ಲವನ್ನೂ ಏಲಿಯನ್‌ ಟೆಕ್ನಾಲಜಿಗೆ ಒಪ್ಪಿಸುವ ಅಸಂಬದ್ಧತೆ ಈಗ ಎಲ್ಲಾ ಕಡೆಗಳಲ್ಲಿ ಢಾಳಾಗಿ ಕಾಣಿಸುತ್ತಿದೆ. ಅದು ಎಷ್ಟರ ಮಟ್ಟಿಗೆ ಜನರನ್ನು ನಂಬಿಸಿದೆ ಅಂದರೆ ಇತ್ತೀಚೆಗೆ ಒಬ್ಬರು ನನ್ನೊಂದಿಗೆ ಯಾರಾದರೂ ಮನುಷ್ಯರು ಅಷ್ಟು ಚೆನ್ನಾಗಿ ಕೆತ್ತಲು ಸಾಧ್ಯವೇ ಇಲ್ಲ ಅಂತ ವಾದಿಸುತ್ತಿದ್ದರು. ಅವರಿಗೆ ಈಗಲೂ ಕೆತ್ತನೆ ಮಾಡುವ ಸ್ಥಪತಿಗಳಿರುವುದು ತಿಳಿದಂತಿಲ್ಲ. ಒಂದು ದೇವಾಲಯ ಕಟ್ಟಲು ಅದೆಷ್ಟು ಜ್ಞಾನಶಾಖೆಗಳಲ್ಲಿ ಪರಿಣತಿ ಇರಬೇಕಿತ್ತು. ವೇದ, ಉಪನಿಷತ್‌, ಪುರಾಣಗಳು, ನೃತ್ಯ, ಸಂಗೀತಗಳ ಜ್ಞಾನ ಒಂದುಕಡೆಯಾದರೆ, ಗಣಿತ, ಜಾಮಿಟ್ರಿ, ಭೌತಶಾಸ್ತ್ರ, ಖಗೋಳಶಾಸ್ತ್ರ, ಜ್ಯೋತಿಷ್ಯಶಾಸ್ತ್ರ, ಇತ್ಯಾದಿ ಹಲವಾರು ಜ್ಞಾನಗಳ ಅರಿವಿರಬೇಕಿತ್ತು. ಹಾಗಾಗಿ ಸ್ಥಪತಿಗಳು ಪರಂಪರಾನುಗತವಾಗಿ ಇಂತಹ ಒಂದು ಶಿಕ್ಷಣಕ್ಕೆ ಒಳಗಾಗಿ ಆಮೇಲೆ ಅದ್ಭುತ ದೇವಾಲಯಗಳನ್ನು ಸೃಷ್ಟಿಸುತ್ತಿದ್ದರು. ನಮ್ಮ ಕಣ್ಣ ಮುಂದೆ ಅಂತಹ ಹಲವಾರು ಇವತ್ತಿಗೂ ಮತ್ತೆ ಮರುಸೃಷ್ಟಿಸಲಾಗದ ದೇವಾಲಯಗಳು ಇವೆ. ಕರಾರುವಕ್ಕಾಗಿ ಸೂರ್ಯನ ಬೆಳಕು ದೇವರ ಮೇಲೆ ಬೀಳುವುದು, ಕಟ್ಟಡ ನಿರ್ಮಾಣದಲ್ಲಿ ಕಾಣುವ ಎಂಜಿನಿಯರಿಂಗ್‌ ಕೌಶಲ ಇವೆಲ್ಲ ಇವತ್ತಿಗೂ ದೇವಾಲಯಗಳ ಜೊತೆ ಹಾಗೇ ಉಳಿದು ಬಂದಿವೆ. ಅವನ್ನೆಲ್ಲಾ ಸಾರಾಸಗಟಾಗಿ ಅನ್ಯಲೋಕ ಜೀವಿಗಳು ಬಂದು ಮಾಡಿದ್ದು ಅನ್ನುವುದು ಅದನ್ನು ಕಟ್ಟಿದವರಿಗೆ ಮಾಡುವ ಅವಮಾನ.

ಇತಿಹಾಸದಲ್ಲಿ ಹಾಸ್ಯಕ್ಕೆ ಅವಕಾಶ ಕಮ್ಮಿ, ಅಲ್ಲಿ ಏನಿದ್ದರೂ ದಾಖಲೆ, ಶಾಸನ, ನಾಣ್ಯಗಳೇ ಚಲಾವಣೆಯಲ್ಲಿರುತ್ತವೆ. ಆದರೆ ಭಾಷಾಂಧತೆ, ದೇಶಾಭಿಮಾನದ ಅಂಧತೆಯಿಂದ ನಮ್ಮ ಸಂಸ್ಕೃತಿಯೋ ನಾಗರಿಕತೆಯೋ ಬೇರೆಯವರದ್ದಕ್ಕಿಂತ ಬರೀ ಶ್ರೇಷ್ಠವಲ್ಲ ಅತ್ಯಂತ ಮಹಾನ್‌ ಎಂದು ತೋರಿಸುವ ರಭಸದಲ್ಲಿ ಇತಿಹಾಸದ ಕಟ್ಟಡವನ್ನು ಕೇವಲ ಅಭಿಮಾನದ ಹುಲ್ಲು, ಎಲೆಗಳ ಮೇಲೆ ಕಟ್ಟುವ ಕಾಯಕ ಈಚೆಗೆ ಬಹಳ ನಡೆದಿದೆ. ಇತಿಹಾಸ, ಪುರಾತತ್ವ ಕ್ಷೇತ್ರದಲ್ಲಿ ಕೆಲಸ ಮಾಡಿದವರು, ಸದ್ದಿಲ್ಲದೆ ಕೆಲಸ ಮಾಡುತ್ತಲೇ ಇರುವವರು ನಮ್ಮ ನಡುವೆಯೆ ಇದ್ದಾರೆ. ಆದರೆ ಈ ವಾಟ್ಸ್ಯಾಪ್‌ ಫಾರ್ವರ್ಡ್‌ ವೀರರಿಗೆ ಕಣ್ಣಿಗೆ ಬಿದ್ದಿದ್ದನ್ನೆಲ್ಲಾ ಬೇರೆಯವರಿಗೆ ರವಾನಿಸುವ ಆತುರ. ರಾತ್ರೋ ರಾತ್ರಿ ವಿಡಿಯೋ ಮಾಡಿ, ಫೇಸ್‌ಬುಕ್ಕಿನಲ್ಲಿ ಕೆಲವು ಲೇಖನ ಬರೆದು (ಇದರಲ್ಲಿ ಬಹುತೇಕ ಬೇರೆಯವರಿಂದ ದೋಚಿಕೊಂಡದ್ದೆ!) ದಿಢೀರ್‌ನೆ ಖ್ಯಾತ ತಜ್ಞರಾದವರಿಗೇನೂ ಬರವಿಲ್ಲ.

ಸಾವಿರಾರು ಶಾಸನಗಳು, ದಾಖಲೆಗಳು, ಸಮೃದ್ಧವಾದ ಸಾಹಿತ್ಯ ನಮ್ಮಲ್ಲಿ ಇದೆ. ಅದರ ಆಧಾರದ ಮೇಲೆ ಬೇಕಾದಷ್ಟು ಹೆಮ್ಮೆ ಪಡಬಹುದು. ಮಿಗಿಲಾಗಿ ಎಲ್ಲವನ್ನೂ ಅನುಭವದ, ಪ್ರಾಮಾಣಿಕ ತರ್ಕದ ನಿಕಷಕ್ಕೆ ಒಡ್ಡಿಯೆ ಸ್ವೀಕರಿಸುವುದು ಅಸಲಿ ಭಾರತೀಯತೆಯ, ಭಾರತೀಯರ ಲಕ್ಷಣ.