ತಮಿಳುನಾಡಿನ ರಾಧಾಪುರಂ ಜಿಲ್ಲೆಯ ಇಡಿಂದಕರೈ ಹಳ್ಳಿ ಕಡಲದಂಡೆಯ ಮೇಲಿರುವ, ಬೀಸುಗಾಳಿಗೆ ಮೈ ಒಡ್ಡಿಕೊಂಡ ಸುಂದರ ಊರು. ಕೂಡಂಕುಳಂ ಹಳ್ಳಿಯ ಪಕ್ಕದ ಹಳ್ಳಿ ಇಡಿಂದಕರೈ ಎಂದರೆ ಬೇಗನೇ ನೆನಪಿಗೆ ಬರಬಹುದು. ಮೀನುಗಾರರೇ ಹೆಚ್ಚಾಗಿರುವ ಇಡಿಂದಕರೈ ಊರಿನಲ್ಲಿ, ಅಣುಸ್ಥಾವರವನ್ನು ವಿರೋಧಿಸಿ ಅತೀ ದೀರ್ಘವಾದ ಉಪವಾದ ಸತ್ಯಾಗ್ರಹ ನಡೆದಿತ್ತು. ಆ ಅಹಿಂಸಾ ಸತ್ಯಾಗ್ರಹಕ್ಕೆ ಈಗ ಹತ್ತು ವರ್ಷಗಳು ತುಂಬಿವೆ.
ಹೋರಾಟದ ಹಾದಿಯ ನೆನಪುಗಳನ್ನು ಹೆಕ್ಕಿ ಬರೆದಿದ್ದಾರೆ ಕೋಡಿಬೆಟ್ಟು ರಾಜಲಕ್ಷ್ಮಿ

ನಮ್ಮ ದೇಶದ ದಕ್ಷಿಣ ತುದಿಯಲ್ಲಿರುವ ಪುಟ್ಟ ಹಳ್ಳಿ ಇಡಿಂದಕರೈ. ಅಪ್ಪಳಿಸುವ ಸಮುದ್ರದ ಅಲೆಗಳಿಗೆ ಎದೆಯೊಡ್ಡಿ ನಿಂತಿರುವ ಊರಿನಲ್ಲಿ ಸದಾ ಭರ್ರೋ ಎಂದು ಬೀಸುವ ಗಾಳಿ. ಮೊರೆಯುವ ಕಡಲ ಅಲೆಗಳ ಅಬ್ಬರದ ಧ್ವನಿ. ಕಡಲೇ ತನ್ನ ಸ್ನೇಹಿತ ಎನ್ನುವಂತೆ ನಿಂತಿರುವ ‘ಅವರ್ ಲೇಡಿ ಆಫ್ ಲೂರ್ಡ್ಸ್ ಪ್ಯಾರಿಶ್’ ಚರ್ಚ್. ಮೀನುಗಾರರೇ ಹೆಚ್ಚಾಗಿರುವ ಈ ಊರಿನಲ್ಲಿ ಬೇಸರವನ್ನು ಬೆರೆಸಿಕೊಂಡು ಉಪ್ಪುಗಾಳಿಯು ತೀಡುತ್ತಿದೆ. ಮೀನುಗಾರಿಕೆ ಮಾಡಲು ಯುವಜನರು ಉತ್ಸಾಹ ತೋರದೇ, ಊರುಬಿಟ್ಟು ಹೊರಟುಹೋಗಿದ್ದಾರೆ. ಹಿರಿಯರು ತಮ್ಮ ಸಾಹಸೀ ದಿನದ ಹಳೆಯ ಕತೆಗಳನ್ನು ನೆನಪಿಸಿಕೊಂಡು ದಿನ ದೂಡುತ್ತಿದ್ದಾರೆ.

ಇಡಿಂದಕರೈ ಹಳ್ಳಿಯ ಪಕ್ಕದ ಊರೇ ಕೂಡಂಕುಳಂ. ಕನ್ಯಾಕುಮಾರಿಯ ಬಳಿ ಇರುವ ಕೂಡಂಕುಳಂ ಹಳ್ಳಿಯೀಗ ಕೂಡಂಕುಳಂ ಅಣುವಿದ್ಯುತ್ ಸ್ಥಾವರದ ಗುಮ್ಮಟಗಳನ್ನು ಹೊತ್ತುಕೊಂಡು ‘ಹಳ್ಳಿ’ಯ ಚಹರೆಯನ್ನೆಲ್ಲ ಕಳೆದುಕೊಂಡಿದೆ. ಕೂಡಂಕುಳಂನಲ್ಲಿ ಅಣುವಿದ್ಯುತ್ ಸ್ಥಾವರ ಸ್ಥಾಪನೆಯಾಗಲಿದೆ ಎಂಬ ಸುದ್ದಿ ಕೇಳಿದ್ದೇ ತಡ, ಅದರಿಂದ ಉಂಟಾಗಬಹುದಾದ ಅನಾಹುತಗಳ ಬಗ್ಗೆ ಮೊದಲು ಜಾಗೃತರಾದವರೇ ಇಡಿಂದಕರೈ ಊರಿನ ಜನರು. ಅಣುಸ್ಥಾವರ ಸ್ಥಾಪನೆಯಾದರೆ ಮೀನುಗಾರರ ಬದುಕು ಮೂರಾಬಟ್ಟೆಯಾಗುವುದು ಎಂಬ ಅರಿವು ಅವರಿಗೆ ದೊರಕಿತ್ತು.

ಅಣುವಿದ್ಯುತ್ ಸ್ಥಾವರ ಸ್ಥಾಪನೆಗೆ ಸರ್ಕಾರ ನಿರ್ಧಾರ ಮಾಡಿಕೂಡಲೇ ಪ್ರತಿಭಟನೆ, ಘೆರಾವ್, ಹೋರಾಟ, ಕಾನೂನು ಹೋರಾಟ ..ಹೀಗೆ ಅನೇಕ ಮಾರ್ಗಗಳಲ್ಲಿ ಹೋರಾಟವನ್ನು ಕೈಗೆತ್ತಿಕೊಂಡ ಇಡಿಂದಕರೈ ಜನರು ಬೃಹತ್ ಉಪವಾಸ ಸತ್ಯಾಗ್ರಹವನ್ನೂ ಮಾಡಿದರು.

ಅಣುವಿದ್ಯುತ್ ನ ಪರಿಕಲ್ಪನೆಯನ್ನು ವಿರೋಧಿಸಿ 1980ರಲ್ಲಿ ಶುರುವಾದ ಹೋರಾಟ ಇಂದಿಗೂ ಮುಕ್ತಾಯವಾಗಿಲ್ಲ ಎನ್ನುತ್ತಾರೆ ಹೋರಾಟದ ನೇತಾರ ಡಾ. ಎಸ್. ಪಿ. ಉದಯ್ ಕುಮಾರ್. ನಾಗರಕೋವಿಲ್ ನ ನಿವಾಸಿ ಉದಯ್ ಕುಮಾರ್, ಸ್ವಚ್ಛ ಇಂಧನದ ಪರವಾಗಿ,  ಹೋರಾಟಕ್ಕೆಂದು ತಮ್ಮ ಬದುಕನ್ನು ಮುಡಿಪಾಗಿಟ್ಟವರು. ಸ್ಥಾವರದ ವಿರುದ್ಧ ಸಮುದ್ರದ ನೀರಿನಲ್ಲಿ ನಿಂತು ಪ್ರತಿಭಟನೆ, ಸ್ಥಾವರಕ್ಕೆ ಮುತ್ತಿಗೆ, ಬೃಹತ್ ಸಾರ್ವಜನಿಕ ರ್ಯಾಲಿಗಳಲ್ಲಿ ಭಾಗವಹಿಸಿದರು. ರ್ಯಾಲಿಗಳಲ್ಲಿ ಉದಯ್ ಕುಮಾರ್ ಅವರೇ ಮುಂಚೂಣಿಯಲ್ಲಿ ನಿಂತು ಸ್ಥಾವರ ತರಬಹುದಾದ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದರು. ಜನರು ಕೂಡ ತಮ್ಮ ಬದುಕನ್ನು ಉಳಿಸಿಕೊಳ್ಳುವ ನಿಟ್ಟಿನಲ್ಲಿ ಜೀವದ ಹಂಗುತೊರೆದು ಭಾಗವಹಿಸಿದ್ದರು. ಹೀಗೆ ನಡೆದ ಹೋರಾಟಕ್ಕೆ ಸಹಾಯಂ(40), ರೋಸಲಿನ್ (65), ರಾಜ್ ಸೆಗಲ್(65), ಅಂಟೋನಿ ಜಾನ್ ಮಣಪ್ಪಾಡ್ (66) ಎಂಬವರು ಬಲಿಯಾದರು ಕೂಡ.

ಹಾಗೆಂದು ಪ್ರತಿಭಟನೆ ನಿಲ್ಲಲಿಲ್ಲ. ಇಡಿಂದಕರೈ ಜನರು ಕೈಗೆತ್ತಿಕೊಂಡ ಇನ್ನೊಂದು ಪ್ರತಿಭಟನೆ ಎಂದರೆ ಉಪವಾಸ ಸತ್ಯಾಗ್ರಹ. ಕೂಡಂಕುಳಂ ಸ್ಥಾವರ ಸ್ಥಾಪನೆಯ ವಿರುದ್ಧ 2011ರ ಆಗಸ್ಟ್ 16ರಂದು ಉಪವಾಸ ಸತ್ಯಾಗ್ರಹ ಆರಂಭವಾಯಿತು. ಸುಮಾರು ಮೂರು ವರ್ಷಗಳಿಗೂ ಹೆಚ್ಚು ಕಾಲ ಈ ಉಪವಾಸ ಸತ್ಯಾಗ್ರಹ ಮುಂದುವರೆಯಿತು.

2011ರ ಸ್ವಾತಂತ್ರ್ಯ ದಿನಾಚರಣೆಯು ಇಡಿಂದಕರೈ ಜನರಿಗೆ ವಿಭಿನ್ನವಾಗಿತ್ತು. ಪ್ರತಿಭಟನೆಯು ಬಹಳ ತೀವ್ರವಾಗಿ ನಡೆಯುತ್ತಿದ್ದ ಸಂದರ್ಭವದು. ಅಹಿಂಸಾ ಹೋರಾಟಕ್ಕಾಗಿ ತಯ್ಯಾರಿಯನ್ನೂ ಶುರು ಮಾಡಿದ್ದರು. ಚರ್ಚ್ ನ ಪಕ್ಕದಲ್ಲಿಯೇ ಶ್ರಮದಾನದ ಮೂಲಕ ತೆಂಗಿನಗರಿಗಳನ್ನು ಹೆಣೆದು ಬೃಹತ್ ಚಪ್ಪರವೊಂದನ್ನು ಹಾಕಲಾಯಿತು. ಹೋರಾಟಕ್ಕೆ ಬಲಿಯಾದವರೇ ಪ್ರತಿಭಟನೆಗೆ ಸ್ಫೂರ್ತಿ ಎಂದು ಅವರ ಪೋಟೋಗಳನ್ನು ಚಪ್ಪರದೊಳಗೆ ಹಾಕಲಾಯಿತು. 16ರಂದು ಬೆಳಿಗ್ಗೆ ಆರಂಭವಾದ ಉಪವಾಸ ಸತ್ಯಾಗ್ರಹದಲ್ಲಿ ನೂರಾರು ಮಹಿಳೆಯರು ಭಾಗವಹಿಸಿದರು. ನಂತರ ಉಪವಾಸವನ್ನು ಸರಣಿಯ ಪ್ರಕಾರ ಮುಂದುವರೆಸಲಾಯಿತು.

ತಮ್ಮ ಗಳಿಕೆಯಲ್ಲಿ ಶೇ 20ರಷ್ಟನ್ನು ಪ್ರತೀ ಗುರುವಾರ ಹೋರಾಟಕ್ಕಾಗಿ ನೀಡುವ ಮೂಲಕ ಇಡಿಂದಕರೈ ಜನರು ಸಂಪನ್ಮೂಲವನ್ನೂ ಸಂಗ್ರಹಿಸಿದರು. ಅವರಿಗೆ ಬೆಂಬಲವಾಗಿ ನಿಂತದ್ದು ಸ್ಥಳೀಯ ಚರ್ಚ್. ಹಾಗೆ ನೋಡಿದರೆ ಸ್ವಾತಂತ್ರ್ಯ ಹೋರಾಟದ ಬಳಿಕ ನಡೆದ ಅತಿ ದೀರ್ಘವಾದ ಅಹಿಂಸಾ ಸತ್ಯಾಗ್ರಹಕ್ಕೆ ಇಡಿಂದಕರೈ ಸಾಕ್ಷಿಯಾಯಿತು.

ಭೋಪಾಲ್ ಅನಿಲ ದುರಂತ, ಚರ್ನೋಬಿಲ್ ದುರಂತಗಳ ಸುದ್ದಿಗಳು ಇಡಿಂದಕರೈ ಜನರ ಭಯವನ್ನು ಹೆಚ್ಚಿಸಿದ್ದವು. ಸುನಾಮಿ ಅಪ್ಪಳಿಸಿದ ಸಂದರ್ಭದಲ್ಲಿ ಜಪಾನಿನಲ್ಲಿ ನಡೆದ ಫುಕುಷಿಮಾ ದುರಂತವಂತೂ ಅವರಲ್ಲಿ ಭಯ ಮತ್ತಷ್ಟು ಹೆಪ್ಪುಗಟ್ಟುವಂತೆ ಮಾಡಿತ್ತು. ಫುಕುಷಿಮಾ ಡೈಚಿ ಅಣು ಸ್ಥಾವರ ದುರಂತದ ಸುದ್ದಿ ಕೇಳಿದ ದಿನದಂದೇ, ಇಡಿಂದಕರೈ ಜನರೆಲ್ಲಾ ಲೂರ್ಡ್ಸ್ ಮಾತಾ ಚರ್ಚ್ ನ ಆವರಣಕ್ಕೆ ಓಡಿಬಂದಿದ್ದರು ಎಂದು ನೆನಪಿಸಿಕೊಳ್ಳುತ್ತಾರೆ ಉದಯ್ ಕುಮಾರ್. ಆಗಿನ್ನೂ ಕೂಡಂಕುಳುಂ ಅಣುವಿದ್ಯುತ್ ಸ್ಥಾವರದ ಮೊದಲ ಘಟಕವಷ್ಟೇ ರೂಪುಗೊಳ್ಳುತ್ತಿತ್ತು. ಈ ಸ್ಥಾವರದ ಕೆಲಸವನ್ನು ಹೇಗಾದರೂ ನಿಲ್ಲಿಸಿ ಎಂಬುದು ಅವರ ಬೇಡಿಕೆಯಾಗಿತ್ತು. ಅಳಲಾಗಿತ್ತು. ಆದರೆ ಹಾಗೆ ಭೀತರಾಗಿ ಚರ್ಚ್ ಆವರಣದಲ್ಲಿ ಜಮಾಯಿಸಿದ್ದ ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದರು. ಭಯಗ್ರಸ್ಥರಾಗಿದ್ದ ಜನರು ದಿಕ್ಕಾಪಾಲಾಗಿ ಓಡಿದರು. ಅಲ್ಲಿ ಸೇರಿದ್ದ ಅನೇಕರ ವಿರುದ್ಧ ದೇಶದ್ರೋಹದ ಪ್ರಕರಣ ದಾಖಲಿಸಲಾಯಿತು ಮತ್ತು ಸುಮಾರು ಎರಡು ಸಾವಿರ ಜನರನ್ನು ಬಂಧಿಸಲಾಯಿತು.

(ಉದಯ್ ಕುಮಾರ್)

ನಾಗರಕೋವಿಲ್ ನ ನಿವಾಸಿ ಉದಯ್ ಕುಮಾರ್, ಸ್ವಚ್ಛ ಇಂಧನದ ಪರವಾದ ಹೋರಾಟಕ್ಕಾಗಿ ಬದುಕನ್ನು ಮುಡಿಪಾಗಿಟ್ಟವರು. ಸ್ಥಾವರದ ವಿರುದ್ಧ ಸಮುದ್ರ ನೀರಿನಲ್ಲಿ ನಿಂತು ಪ್ರತಿಭಟನೆ, ಸ್ಥಾವರಕ್ಕೆ ಮುತ್ತಿಗೆ, ಬೃಹತ್ ಸಾರ್ವಜನಿಕ ರ್ಯಾಲಿಗಳಲ್ಲಿ  ಭಾಗವಹಿಸಿದವರು. ಉದಯ್ ಕುಮಾರ್ ಅವರೇ ಮುಂಚೂಣಿಯಲ್ಲಿ ನಿಂತು ಸ್ಥಾವರ ತರಬಹುದಾದ ಸಮಸ್ಯೆಗಳ ಬಗ್ಗೆ ಹೇಳುತ್ತಿದ್ದರು.

ಸಾವಿರಾರು ಜನರ ಹೋರಾಟವು ಸರ್ಕಾರದ ಕಿವಿಯನ್ನು ತಲುಪಲೇ ಇಲ್ಲ. ಹಾಗಾಗಿ ಹೋರಾಟದ ನೇತಾರರೇ ಪ್ರಜಾಪ್ರಭುತ್ವ ವ್ಯವಸ್ಥೆಯಡಿ ಸರ್ಕಾರದ ಭಾಗವಾಗುವುದು ಸಾಧ್ಯವೇ ಎಂಬ ಯೋಚನೆಯೂ ಮೊಳಕೆಯೊಡೆಯಿತು. ಅದಕ್ಕೆ ಪೂರಕ ಎಂಬಂತೆ 2014ರಲ್ಲಿ ಲೋಕಸಭಾ ಚುನಾವಣೆ ಎದುರಾಯಿತು. ಅದೇ ವರ್ಷ ಫೆಬ್ರುವರಿ ತಿಂಗಳಲ್ಲಿ ಆಮ್ ಆದ್ಮಿ ಪಕ್ಷದ ಮೂಲಕ ಹೋರಾಟಗಾರರು ಚುನಾವಣಾ ಕಣಕ್ಕೆ ಇಳಿದರು. ಅದೇ ಸಂದರ್ಭದಲ್ಲಿ ಈ ದೀರ್ಘ ಅಹಿಂಸಾ ಸತ್ಯಾಗ್ರಹವನ್ನು ಅನಿವಾರ್ಯವಾಗಿ ಅಂತ್ಯಗೊಳಿಸಬೇಕಾಯಿತು.

ಇಷ್ಟು ದೀರ್ಘ ಕಾಲದ ವರೆಗೆ ನಡೆದ ಜನರ ಹೋರಾಟವನ್ನು ಆಳುವ ಸರ್ಕಾರಗಳು ಗಮನಿಸದೇ ಇರುವುದು ಬೇಸರದ ಸಂಗತಿ ಎಂದು ಉದಯ್ ಕುಮಾರ್ ಈಗ ನೆನಪಿಸಿಕೊಳ್ಳುತ್ತಾರೆ. ಸ್ಥಾವರದಿಂದ ತೊಂದರೆಗಳು ಎದುರಾಗುವುದನ್ನು ಮನಗಂಡ, ಕೂಟಪ್ಪುಳಿ, ಪೆರುಮೊನಾಲ್‌, ಕೂಟ್ಟಂಕುಳಿ, ಉವರಿ, ಕೂಡುತಳಿ, ಕೂಟಪ್ಪನಾಯಿ ಹಳ್ಳಿಯ ಜನರು ಇಡಂದ ಕರೈ ಜನರನ್ನು ಬೆಂಬಲಿಸಿದ್ದರು. ಆದರೆ ಈಗ ಅವರಲ್ಲಿ ನಿರಾಶೆಯಲ್ಲದೇ ಮತ್ತೇನೂ ಉಳಿದಿಲ್ಲ. ಪ್ರತಿಭಟನೆಗಳಲ್ಲಿ ಭಾಗವಹಿಸಿದವರ ಮೇಲೆ ಸರ್ಕಾರ ಕೇಸು ದಾಖಲಿಸಿದ್ದರಿಂದ ಪ್ರತಿಭಟನಾಕಾರರು, ಅವುಗಳ ಸುಳಿಯಿಂದ ಪಾರಾಗಲು ಓಡಾಡುತ್ತಿದ್ದಾರೆ.

ರಾಜ್ ಲಿಯೋನ್ ಅವರು ಹೋರಾಟಗಾರರಿಗೆ ದಿಕ್ಕು ನೀಡಿದ್ದ, ಮಾರ್ಗದರ್ಶನ ಮಾಡಿದ ವ್ಯಕ್ತಿ. ಇಡಿಂದಕರೈ ಬಗ್ಗೆ ಸ್ವಲ್ಪ ತಿಳಿದುಕೊಂಡವರೂ ಅವರೇ. ಇಡಿಂದಕರೈ ಎಂದರೆ ‘ಮುರಿದ ತೀರ’ ಎಂಬುದು ಅರ್ಥವಂತೆ.’ಆದರೆ ಈ ಊರಿನಲ್ಲಿ ಸಾಗಿಬಂದ ಹೋರಾಟವನ್ನು ಗಮನಿಸಿದರೆ ನಮ್ಮದು ಮುರಿದ ಊರಲ್ಲ ಎನ್ನುವುದು ಹೆಮ್ಮೆಯ ವಿಷಯ. ಹಿಂದೂಗಳು ಮತ್ತು ಕ್ರಿಶ್ಚಿಯನ್ನರು ಒಟ್ಟಾಗಿ ಪ್ರತಿಭಟನೆ ಮಾಡಿದ್ದರಿಂದಲೇ ದಶಕಗಳ ಕಾಲ ಈ ಪ್ರತಿಭಟನೆಯ ಕಾವು ಉಳಿಯುವುದು ಸಾಧ್ಯವಾಯಿತು’ ಎನ್ನುತ್ತಾರೆ ಅವರು.

ಇಡಿಂದಕರೈ ಅಹಿಂಸಾ ಸತ್ಯಾಗ್ರಹಕ್ಕೆ ಈಗ ಹತ್ತು ವರ್ಷಗಳಾಗಿವೆ ಎಂಬುದು ನೆನಪಷ್ಟೇ. 2014ರ ಫೆಬ್ರವರಿಯಲ್ಲಿ ಚರ್ಚ್ ನಲ್ಲಿ ಹಬ್ಬವಿತ್ತು. ಊರಿನ ಯುವಕರು ಹೊಟ್ಟೆಪಾಡಿಗಾಗಿ ಉದ್ಯೋಗವರಸಿ ಹೊರ ಊರುಗಳಿಗೆ ತೆರಳುವುದು ಅನಿವಾರ್ಯವಾಯಿತು. ಸ್ಥಾವರದಿಂದ ಹೊರಬರುವ ಬಿಸಿ ನೀರು ಸಮುದ್ರ ಸೇರುವುದರಿಂದ ಮೀನುಗಳ ಸಂತತಿ ಕಡಿಮೆಯಾಯಿತು. ಸ್ಥಾವರವು ನಿರೀಕ್ಷಿಸದಂತೆಯೇ ಮೀನುಗಾರರ ಬದುಕನ್ನು ಕಸಿದುಕೊಂಡಿತ್ತು. ಪೊಲೀಸರ ಸುಪರ್ದಿಯಲ್ಲಿ, ಬಲವಂತವಾಗಿ ಸತ್ಯಾಗ್ರಹ ನಿಲ್ಲಿಸಲಾಯಿತು ಎಂದು ರಾಜ್ ಲಿಯೊನ್ ನೆನಪಿಸಿಕೊಳ್ಳುತ್ತಾರೆ. ‘ಸತ್ಯಾಗ್ರಹದ ಮೂಲಕ ಮೀನುಗಾರಿಕೆಯ ಬದುಕನ್ನು ಕಟ್ಟಿಕೊಳ್ಳುತ್ತೇವೆ ಎಂದು ಎಲ್ಲರೂ ಸೇರಿ, ಶ್ರಮದಾನದ ಮೂಲಕ, ಹಾಕಿದ್ದ ತೆಂಗಿನ ಗರಿಯ ಚಪ್ಪರವನ್ನು ಹೋರಾಟಗಾರರೇ ತಮ್ಮ ಕೈಯ್ಯಾರ ಕಿತ್ತು ಹಾಕಬೇಕಾಯಿತು… ಈಗ ಇಡಿಂದಕರೈ ಗ್ರಾಮದಲ್ಲಿ ಹೋರಾಟದ ಕಿಚ್ಚಿಲ್ಲ. ಸ್ಥಾವರದ ಕುರಿತ ಭಯವಿನ್ನೂ ಅಳಿದಿಲ್ಲ. ಸ್ಥಳೀಯ ಮೀನುಗಾರಿಕೆಗೆ ಪ್ರೋತ್ಸಾಹ ನೀಡುವ ಬದಲಿಗೆ ಸರ್ಕಾರವು ಪಕ್ಕದ ಊರಾದ ಮಡಪ್ಪಾಡ್ ಕಡಲ ದಂಡೆಯನ್ನು ಮುಂಬೈಯ ಮರೀನಾ ಬೀಚ್ ಮಾದರಿಯಲ್ಲಿ ಪ್ರವಾಸಿ ತಾಣವನ್ನಾಗಿ ಮಾಡಲು ನಿರ್ಧರಿಸಿದೆ’ ಎನ್ನುತ್ತಾರೆ ರಾಜ್.

(ರಾಜ್ ಲಿಯೋನ್)

ಈ ಅಣುವಿದ್ಯುತ್ ಸ್ಥಾವರದ ಪ್ರಸ್ತಾಪಕ್ಕೂ ಮುನ್ನ ಒಮ್ಮೆ ಇಡಿಂದಕರೈ ಊರು ಪ್ರತಿಭಟನೆಯ ಮೂಲಕ ಸುದ್ದಿ ಮಾಡಿತ್ತು. 70ರ ದಶಕದಲ್ಲಿ ಚರ್ಚ್, ವಿಪರೀತ ತೆರಿಗೆ ವಿಧಿಸಿದೆ ಎಂದು ಪ್ರತಿಭಟಿಸಿ ಕೆಥೋಲಿಕ್ ಮೀನುಗಾರ ವ್ಯಕ್ತಿಯೊಬ್ಬರು ದೀರ್ಘ ಹೋರಾಟ ನಡೆಸಿದ್ದರಂತೆ.  ಎಂಟು ವರ್ಷಗಳ ಕಾಲ ಪ್ರತಿಭಟನೆ ನಡೆಸಿದ ಅವರು ಕೊನೆಗೆ ಮತಾಂತರ ಮಾಡಿಕೊಂಡರಂತೆ. ಹೋರಾಟ ಇಲ್ಲಿನ ಜನರಿಗೆ ಹೊಸದಲ್ಲ ಎಂಬುದು ರಾಜ್ ಮಾತುಗಳು.

ನಿನ್ನೆ ಅಂದರೆ 2021ರ ಅಕ್ಟೋಬರ್ 13 ರಂದು ರಾಧಾಪುರಂ ಜಿಲ್ಲೆಯ ಅತೀದೊಡ್ಡ ಪಂಚಾಯಿತಿ, ವಿಜಯಪತಿ ಪಂಚಾಯಿತಿ ಚುನಾವಣೆಯ ಫಲಿತಾಂಶ ಬಂದಿದೆ. ಇಡಿಂದಕರೈ ವಿಜಯಪತಿ ಪಂಚಾಯಿತಿಗೆ ಸೇರುತ್ತದೆ. ಪಂಚಾಯಿತಿಯು ಇಡಿಂದಕರೈಯ ಮೀನುಗಾರರಿಗೆ ಹೇಗೆ ನೆರವಾದೀತು ಎಂಬ ಬಗ್ಗೆ ಸದ್ಯಕ್ಕೆ ಜನರಲ್ಲಿ ಕುತೂಹಲವಿದೆ.

‘ಹೋರಾಟದಲ್ಲಿ ತೀರಿಕೊಂಡ ಸಹಾಯಂನ ಮೂವರು ಪುಟ್ಟ ಪುಟ್ಟ ಮಕ್ಕಳು ಶಾಲೆಗೆ ಹೋಗಲು,ಫೀಸು ಪುಸ್ತಕ ಹೊಂದಿಸಲು ಕಷ್ಟಪಡುತ್ತಿದ್ದಾರೆ. ಜನರಿಗೆ ಸಹಾಯಕ್ಕಿಂತ ಮಿಗಿಲಾಗಿ, ಅವರಿಗೆ ಬದುಕು ಕಟ್ಟಿಕೊಳ್ಳಲು ಒಂದು ದಾರಿ ದೊರೆಯಬೇಕಷ್ಟೆ’ ಎನ್ನುತ್ತಾರೆ ರಾಜ್ ಲಿಯೋನ್.

ಆದರೆ ಪ್ರತಿಭಟನಾಕಾರರ ಆಗ್ರಹವಾದರೂ ಏನಿತ್ತು, ಪರಿಸರ ಪರಿಣಾಮ ಅಧ್ಯಯನವನ್ನು ನಡೆಸಬೇಕು, ಸುರಕ್ಷತೆಯ ಮಾನದಂಡವನ್ನು ಕೈಗೆತ್ತಿಕೊಳ್ಳಬೇಕು ಎಂಬುದಷ್ಟೇ ಆಗಿತ್ತು. ಆದರೆ ಸರ್ಕಾರವೇಕೆ ಈ ಪ್ರಾಥಮಿಕ ಹೆಜ್ಜೆಗಳನ್ನು ಇಡಲು ಹಿಂಜರಿಯುತ್ತಿದೆ ಎಂದು ಪ್ರಶ್ನಿಸುತ್ತಾರೆ ಉದಯ್ ಕುಮಾರ್. ರಾಜಕೀಯದ ಮೂಲಕವಾದರೂ ಜನಜಾಗೃತಿ ಮೂಡಿಸುವ ದೃಷ್ಟಿಯಿಂದ ಅವರೀಗ ‘ಪಚ್ಚೈ ತಮಿಳಗಂ’ ಎಂಬ ಹೊಸ ಪಕ್ಷವೊಂದನ್ನು ಸ್ಥಾಪಿಸಿದ್ದಾರೆ. ಇಡಿಂದಕರೈ ಹೋರಾಟಗಾರರು ಪಕ್ಷವನ್ನು ಮುನ್ನಡೆಸುತ್ತಿದ್ದಾರೆ.

ಪ್ರಸ್ತುತ ನಮ್ಮ ದೇಶದಲ್ಲಿ 21 ಅಣುವಿದ್ಯುತ್ ರಿಯಾಕ್ಟರ್ ಗಳು ಕಾರ್ಯಾಚರಣೆ ಮಾಡುತ್ತಿವೆ. ಇಡೀ ಭಾರತದಲ್ಲಿಯೇ ಅತೀ ಹೆಚ್ಚು ಅಣುವಿದ್ಯುತ್ ಉತ್ಪಾದಿಸುವ ಸ್ಥಾವರವೇ ಕೂಡಂಕುಳಂ ಸ್ಥಾವರ. ವಿದ್ಯುತ್ ಸ್ಥಾವರವನ್ನು ದೇಶಕ್ಕೆ ಅರ್ಪಿಸುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೇಳಿದ ಪ್ರಕಾರ, ಈ ಸ್ಥಾವರವು ರಷ್ಯಾ ಮತ್ತು ಭಾರತದ ಸೌಹಾರ್ದ ಸಂಬಂಧದ ಸಂಕೇತವಾಗಿದೆ.

(ಚಿತ್ರಗಳು: ಲೇಖಕರವು)