ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ! ನಮಗೆ ಪ್ರವಾಸಿಗರಾಗಿ ತಮಾಷೆ ಎನ್ನಿಸಿದರೂ, ಆಗಿನ ಕಾಲದ ಭಾವನೆಗಳನ್ನು ಊಹಿಸಲು ಸಾಧ್ಯವಿಲ್ಲ.
“ದೂರದ ಹಸಿರು” ಸರಣಿಯಲ್ಲಿ ಇನ್ಸ್ಬ್ರುಕ್ ನಗರದಲ್ಲಿ ಓಡಾಡಿದ ಅನುಭವಗಳ ಬರೆದಿದ್ದಾರೆ ಗುರುದತ್ ಅಮೃತಾಪುರ

ಸುತ್ತ ಪರ್ವತಗಳ ಸಾಲು. ಚಳಿಗಾಲದಲ್ಲಿ ಶುಭ್ರ ಶ್ವೇತ ವರ್ಣದ ಹಿಮದ ಹೊದಿಕೆ. ಬೇಸಿಗೆ ಕಾಲದಲ್ಲಿ ಕಂಗೊಳಿಸುವ ಹಸಿರು. ಊರಿನ ಮಧ್ಯ ಭಾಗದಲ್ಲಿ ಝುಳು ಝುಳು ಹರಿಯುವ ಸ್ವಚ್ಛ ನದಿ. ಹೆಂಗಸರಿಗೆ ಶಾಪಿಂಗ್ ಮಾಡಲು ವಜ್ರ ವೈಡೂರ್ಯಗಳಂತೆ ಕಾಣುವ ಒಡವೆಗಳು. ಇತಿಹಾಸಕ್ಕೆ ಸಾಕ್ಷಿಯಾಗಿರುವ ಸ್ವರ್ಣ ಲೇಪಿತ ಅರಮನೆಗಳು. ಪ್ರವಾಸಿಗರಿಗೆ ಹಸಿವಾದರೆ ಬಗೆ ಬಗೆಯ ಊಟ-ತಿಂಡಿಗಳು… ಈ ನಗರದ ಬಗ್ಗೆ ಪಟ್ಟಿ ಮಾಡುತ್ತಾ ಕುಳಿತರೆ ಇಷ್ಟಕ್ಕೆ ಮುಗಿಯುವುದಿಲ್ಲ. ಅಂದ ಹಾಗೆ ನಾನು ಯಾವ ಊರಿನ ಬಗ್ಗೆ ಹೇಳುತ್ತಿದ್ದೇನೆ ತಿಳಿಯಿತೇ? ಅದೇ ಆಸ್ಟ್ರಿಯಾ ದೇಶದ “Innsbruck” ನಗರ.

“ಇನ್” ಎನ್ನುವುದು ಆಸ್ಟ್ರಿಯಾ ದೇಶದ ಪ್ರಮುಖ ನದಿ. “ಬ್ರುಕ್” ಎಂದರೆ ಜೆರ್ಮನ್ ಭಾಷೆಯಲ್ಲಿ ಸೇತುವೆ ಎನ್ನುವ ಅರ್ಥ. ಇನ್ ಎನ್ನುವ ನದಿಗೆ ಇಲ್ಲಿ ಸೇತುವೆ ಕಟ್ಟಿದ್ದರಿಂದ ಈ ನಗರಕ್ಕೆ “ಇನ್ಸ್ಬ್ರುಕ್” ಎನ್ನುವ ಹೆಸರು ಬಂದಿದೆ. ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ, ಶಿಲಾಯುಗದ ಕುರುಗಳು ಸಹ ಇಲ್ಲಿ ದೊರೆತಿವೆ. ಆದರೆ ಈ ನಗರದ ಸುವರ್ಣ ಯುಗ ಇದ್ದದ್ದು ಸುಮಾರು ಹದಿನೈದನೇ ಶತಮಾನದಲ್ಲಿ. ಚಕ್ರವರ್ತಿ ಮ್ಯಾಕ್ಸಿಮಿಲಿಯಾನ್ ತನ್ನ ರಾಜಧಾನಿಯಾಗಿಸಿಕೊಂಡಿದ್ದು ಇನ್ಸ್ಬ್ರುಕ್ ನಗರವನ್ನು! ಈತನ ಆಳ್ವಿಕೆಯ ಸಮಯವಾದ 1490 ರಲ್ಲಿ ಇನ್ಸ್ಬ್ರುಕ್‌ನಿಂದ ಈಗಿನ ಬೆಲ್ಜಿಯಂ ದೇಶದ ನಗರ ಆಂಟ್‌ವರ್ಪ್‌ಗೆ ಖಾಸಗಿ ಅಂಚೆ ಸೇವೆ ಆರಂಭವಾಗಿತ್ತಂತೆ! ಆಂಟ್‌ವರ್ಪ್ ನಗರ ಎಲ್ಲರಿಗೂ ತಿಳಿದಿರುವಂತೆ ಪ್ರಪಂಚಕ್ಕೆ ವಜ್ರಗಳ ರಾಜಧಾನಿ. ಆ ಕಾಲದಲ್ಲಿ ಡಚ್ ವಸಾಹತು ಭಾಗಳಾದ ಭಾರತ, ಆಫ್ರಿಕಾ ಖಂಡದ ಕೆಲವು ದೇಶಗಳಿಂದ ದೋಚಿದ ವಜ್ರಗಳು ಇಲ್ಲಿ ತಲುಪಿ, ವಿವಿಧ ಆಕರ್ಷಕ ಆಕಾರಗಳನ್ನು ಪಡೆದು ವಿಶ್ವದ ಶ್ರೀಮಂತರುಗಳನ್ನು ಅಲಂಕರಿಸುತ್ತಿತ್ತು. ಇನ್ಸ್ಬ್ರುಕ್ ಮತ್ತು ಆಂಟ್‌ವರ್ಪ್ ನಡುವಿನ ವ್ಯಾವಹಾರಿಕ ಸಂಬಂಧಗಳಿಗೆ ಇದೊಂದು ಬಹು ಮುಖ್ಯ ಕಾರಣ. ಒಟ್ಟಿನಲ್ಲಿ ಯೂರೋಪಿನ ಯಾವುದೇ ಶ್ರೀಮಂತ ರಾಷ್ಟ್ರವನ್ನು ಗಣನೆಗೆ ತೆಗೆದುಕೊಂಡರೂ, ನಮ್ಮ ಭಾರತದ ಒಂದು ಕೊಂಡಿ ಸಿಗುವುದು ನನಗೆ ಆಶ್ಚರ್ಯ! ದೋಚಿ ಶ್ರೀಮಂತರಾಗುವಾಗ ತಮ್ಮ ನೆರೆಹೊರೆಯವರಿಗೂ ಹಂಚಿ, ವ್ಯಾಪಾರ ವೃದ್ಧಿಸಿಕೊಂಡಿರುವುದು ಇತಿಹಾಸದ ಸತ್ಯ. ನಮಗೆ ಬಾಕಿ ಕೊಡಬೇಕಾಗಿರುವುದು ತೀರಿಸಲಾಗದಷ್ಟಿದೆ! ಅಂದಹಾಗೆ ಈ ಖಾಸಗಿ ಅಂಚೆ ಸೌಲಭ್ಯ ಮುಂದಿನ ದಿನಗಳಲ್ಲಿ ಅಂಚೆ ಜಗತ್ತಿನ ದಿಕ್ಸೂಚಿಯಾಗಿತ್ತು. ಸುಸಜ್ಜಿತ ಅಂಚೆ ಚೀಟಿಯಿಂದ ಹಿಡಿದು, ಆಯಾ ತೂಕಕ್ಕೆ ತಕ್ಕಂತೆ ಇಂತಿಷ್ಟು ದರ ಎಂದು ನಿಗದಿಪಡಿಸಲಾಗಿತ್ತು.

ಆಸ್ಟ್ರಿಯಾ ಎಂದಾಕ್ಷಣ ನನಗೆ ಮೊದಲು ನೆನಪಾಗುವುದು ನಮ್ಮ ಸುಭಾಷ್ ಚಂದ್ರ ಬೋಸ್! ಅವರು ಈ ದೇಶದ ಬಾದ್ ಗಸ್ಟೈನ್ ಎನ್ನುವ ಊರಿನಲ್ಲಿ ನಾಲ್ಕು ದಿನ ತಂಗಿದ್ದರಂತೆ. ಆ ಕಾಲದ ದಿನಪತ್ರಿಕೆಯೊಂದರಲ್ಲಿ ಚಿತ್ರ ಸಹಿತ ಸುದ್ದಿ ಪ್ರಕಟವಾಗಿರುವ ದಾಖಲೆ ಬಿಟ್ಟರೆ, ಬೇರೆ ಯಾವ ನೆನಪುಗಳು ಸಹ ಇಲ್ಲಿ ಸಿಕ್ಕಲಿಲ್ಲ. ಅವರ ವಿಷಯದ ಬಗೆಗೆ ಹೆಚ್ಚು ಕೆದಕುವ ಹಾಗು ಇಲ್ಲ. ಹಾಗೆ ಮಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ. ಏಕೆಂದರೆ ಎರಡು ವಿಶ್ವ ಯುದ್ಧಗಳನ್ನು ನಡೆಸಿ ಪ್ರಪಂಚಕ್ಕೆ ಶಾಪವಾಗಿದ್ದ ಹಿಟ್ಲರ್ ಬಗ್ಗೆ ಮಾತಾಡುವುದಾಗಲಿ, ವಿಚಾರಿಸುವುದಾಗಲಿ ಇಲ್ಲಿ ನಿಷಿದ್ಧ. ಬೋಸರು ಅವರ ಆತಿಥ್ಯದ ಮೇರೆಗೆ ಇಲ್ಲಿ ಬಂದಿದ್ದರಿಂದ ಸದ್ಯದ ಪರಿಸ್ಥಿಯಲ್ಲಿ ಇದೊಂದು ಸೂಕ್ಷ್ಮವಾದ ವಿಷಯ. ಅದೇನೇ ಆದರೂ ಭಾರತದ ಸ್ವತಂತ್ರ ಸಂಗ್ರಾಮಕ್ಕೂ, ಆಸ್ಟ್ರಿಯಾ ದೇಶಕ್ಕೂ ಬೋಸರ ಮುಖಾಂತರ ಒಂದು ನಂಟಿದೆ.

ಇನ್ಸ್ಬ್ರುಕ್ ನಗರದಲ್ಲಿ ಹದಿನೇಳನೇ ಶತಮಾನದಲ್ಲಿಯೇ ಒಂದು ಸುಸಜ್ಜಿತವಾದ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಲಾಯಿತು. ಇಂದಿಗೂ ಈ ವಿಶ್ವವಿದ್ಯಾನಿಲಯ ಕಾರ್ಯನಿರ್ವಹಿಸುತ್ತಿದೆ. ನೆರೆಯ ಜೆರ್ಮನ್ ರಾಜ್ಯವಾದ ಬವೇರಿಯಾ ಸಂಸ್ಥಾನಕ್ಕೂ, ಇನ್ಸ್ಬ್ರುಕ್ ಇರುವ ಟಿರೋಲ್ ರಾಜ್ಯಕ್ಕೂ ಆಗಾಗ ಯುದ್ಧಗಳು ನಡೆದ ದಾಖಲಾತಿಗಳಿವೆ. ಕಾಲ ಕ್ರಮೇಣ ಪೂರ್ಣ ಪ್ರಮಾಣದ ನಗರವಾದ ಇನ್ಸ್ಬ್ರುಕ್, ಇತಿಹಾಸದಿಂದಲೂ ಟಿರೋಲ್ ಸಂಸ್ಥಾನದ ಮತ್ತು ಈಗಿನ ಟಿರೋಲ್ ರಾಜ್ಯದ ರಾಜಧಾನಿ. ದಕ್ಷಿಣಕ್ಕೆ ರೋಮನ್ ಸಾಮ್ರಾಜ್ಯದ ಭಾಗಗಳಾದ ವೆರೋನಾ, ವೆನಿಸ್ ಭಾಗಗಳಿಂದ ಉತ್ತರದ ಜರ್ಮನಿ, ಫ್ರಾನ್ಸ್, ಡಚ್ ತಲುಪಬೇಕಾದರೆ ಟಿರೋಲ್ ಕಣಿವೆಯ ಮುಖಾಂತರ ಇನ್ಸ್ಬ್ರುಕ್ ದಾಟಿ ಸಾಗಬೇಕಿತ್ತು. ಹಾಗಾಗಿ ಇತಿಹಾಸದುದ್ದಕ್ಕೂ ಪ್ರಸ್ತುತವಾಗಿರುವ ನಗರ ಇನ್ಸ್ಬ್ರುಕ್!

ಯೂರೋಪಿನ ಉಳಿದೆಲ್ಲ ನಗರಗಳಲ್ಲಿ ಪ್ರಮುಖ ಹಬ್ಬವಾದ ಕ್ರಿಸ್ಮಸ್ ಸಮಯದ ಪ್ರಮುಖ ಆಕರ್ಷಣೆ ಕ್ರಿಸ್ಮಸ್ ಮಾರುಕಟ್ಟೆಯಾದರೆ, ಇನ್ಸ್ಬ್ರುಕ್ ನಗರದಲ್ಲಿ ಮಾತ್ರ “ಈಸ್ಟರ್ ಮಾರುಕಟ್ಟೆ” ಅತ್ಯಂತ ಜನಪ್ರಿಯ. ಈಸ್ಟರ್ ಹಬ್ಬದ ಸಮಯದಲ್ಲಿ “ಮೊಟ್ಟೆ” ಸಾಂಕೇತಿಕ ವಸ್ತು. ಈಸ್ಟರ್ ಹಬ್ಬ ಎಂದರೆ ಕ್ರಿಸ್ಮಸ್ ನಂತರದ ಸ್ಥಾನದಲ್ಲಿರುವ ಕ್ರೈಸ್ತರ ಪ್ರಮುಖ ಹಬ್ಬ. ಚೈತ್ರ ಕಾಲದ ಮೊದಲ ಭಾಗದಲ್ಲಿ ಬರುವ ಈ ಹಬ್ಬದ ಸಂದರ್ಭದಲ್ಲಿ ಮೊಟ್ಟೆ “ಹೊಸ ಜೀವನ” ಮತ್ತು “ಪುನರ್ಜನ್ಮದ” ಸಂಕೇತವಾಗಿದೆ. ಹಾಗಾಗಿ ಮೊಟ್ಟೆಗೆ ಅತ್ಯಂತ ಪ್ರಮುಖ ಸ್ಥಾನ. ಈಸ್ಟರ್ ಮಾರುಕಟ್ಟೆಯಲ್ಲಿ ಹಲವಾರು ಪಾರಂಪರಿಕೆ ಮರದ ಅಂಗಡಿ ಮುಂಗಟ್ಟುಗಳು ಕಾಣಿಸಿದ್ದವು. ಬಹುತೇಕ ಅಂಗಡಿಗಳಲ್ಲಿ ಚಿತ್ರಕಲೆಯ ಮೆರಗು ತುಂಬಿದ ಕೋಳಿ ಮೊಟ್ಟೆಗಳನ್ನು ಮಾರುತ್ತಿದ್ದರು. ಊರಿನ ಹೃದಯ ಭಾಗದಲ್ಲಿ ದೊಡ್ಡ ದೊಡ ಮೊಟ್ಟೆ ಆಕೃತಿಗಳನ್ನು ಮಾಡಿ ನಿಲ್ಲಿಸಲಾಗಿತ್ತು. ಒಂದು ಅಂಗಡಿಯಲ್ಲಿ ಮರದ ಹಾಳೆಯ ಮೇಲೆ ನಮ್ಮ ಹೆಸರನ್ನು ಕೆತ್ತುವ ಅವಕಾಶವಿತ್ತು. ನನಗೆ ಪೆನ್ನು ಪೇಪರ್ ಕೊಟ್ಟರೂ ಅಷ್ಟು ಸುಂದರವಾಗಿ ಬರೆಯಲು ಬರುವುದಿಲ್ಲ. ಅವರು ಮಾತ್ರ ಹಳೆಯ ಕಾಲದ ಕ್ಯಾಲಿಗ್ರಾಫಿ ಶೈಲಿಯಲ್ಲಿ ನಮ್ಮ ಹೆಸರುಗಳನ್ನೂ ಕೆತ್ತಿ ಕೊಟ್ಟಿದ್ದು ಇಂದಿಗೂ ನಮ್ಮ ಮನೆಯ ಶೋ ಕೇಸ್‌ನಲ್ಲಿದೆ.

(ಈಸ್ಟರ್ ಮಾರುಕಟ್ಟೆ)

ಈಸ್ಟರ್ ಮಾರುಕಟ್ಟೆಯಲ್ಲಿ ಸುತ್ತಾಡುವಾಗ ಕಣ್ಣಿಗೆ ಬಿದ್ದದ್ದು “ಚಿನ್ನದ ಛಾವಣಿ”. ಹದಿನೈದನೇ ಶತಮಾನದ ಚಕ್ರವರ್ತಿಯಾಗಿದ್ದ ಮ್ಯಾಕ್ಸಿ ಮಿಲಿಯನ್ ನಿರ್ಮಿಸಿದ್ದ ಅರಮನೆಯ ಛಾವಣಿಗೆ ಚಿನ್ನದ ಲೇಪನವನ್ನು ಮಾಡಿಸಿದ್ದ. ಇನ್ಸ್ಬ್ರುಕ್ ನಗರದ ಐತಿಹಾಸಿಕ ಭಾಗದಲ್ಲಿ ಈ ಛಾವಣಿ ಪ್ರಮುಖ ಆಕರ್ಷಣೆ. ಅರಮನೆಯ ಒಳಗೂ ಸಹ ರಾಜ ವೈಭೋಗದ ನೆನಪು ಮರುಕಳಿಸಲು, ಚಕ್ರವರ್ತಿ ಉಪಯೋಗಿಸುತ್ತಿದ್ದ ವಸ್ತುಗಳನ್ನು ಪ್ರದರ್ಶನಕ್ಕಿಡಲಾಗಿದೆ. ಆತನ ವಿರಮಿಸುವ ಜಾಗ, ಐಷಾರಾಮಿ ಊಟದ ಮನೆ, ಖಾಸಗಿ ಕೋಣೆ ಎಲ್ಲವೂ ಅವನ ಕಾಲದ ಶ್ರೀಮಂತಿಕೆಯನ್ನು ತೋರಿಸುತ್ತವೆ. ಸಮೀಪದಲ್ಲಿರುವ ಒಂದು ಚರ್ಚ್ ಇನ್ನೊಂದು ಆಕರ್ಷಣೆ.

ಆ ಕಾಲದಲ್ಲಿ ಡಚ್ ವಸಾಹತು ಭಾಗಳಾದ ಭಾರತ, ಆಫ್ರಿಕಾ ಖಂಡದ ಕೆಲವು ದೇಶಗಳಿಂದ ದೋಚಿದ ವಜ್ರಗಳು ಇಲ್ಲಿ ತಲುಪಿ, ವಿವಿಧ ಆಕರ್ಷಕ ಆಕಾರಗಳನ್ನು ಪಡೆದು ವಿಶ್ವದ ಶ್ರೀಮಂತರುಗಳನ್ನು ಅಲಂಕರಿಸುತ್ತಿತ್ತು. ಇನ್ಸ್ಬ್ರುಕ್ ಮತ್ತು ಆಂಟ್‌ವರ್ಪ್ ನಡುವಿನ ವ್ಯಾವಹಾರಿಕ ಸಂಬಂಧಗಳಿಗೆ ಇದೊಂದು ಬಹು ಮುಖ್ಯ ಕಾರಣ. ಒಟ್ಟಿನಲ್ಲಿ ಯೂರೋಪಿನ ಯಾವುದೇ ಶ್ರೀಮಂತ ರಾಷ್ಟ್ರವನ್ನು ಗಣನೆಗೆ ತೆಗೆದುಕೊಂಡರೂ, ನಮ್ಮ ಭಾರತದ ಒಂದು ಕೊಂಡಿ ಸಿಗುವುದು ನನಗೆ ಆಶ್ಚರ್ಯ! ದೋಚಿ ಶ್ರೀಮಂತರಾಗುವಾಗ ತಮ್ಮ ನೆರೆಹೊರೆಯವರಿಗೂ ಹಂಚಿ, ವ್ಯಾಪಾರ ವೃದ್ಧಿಸಿಕೊಂಡಿರುವುದು ಇತಿಹಾಸದ ಸತ್ಯ.

ಹಾಗೆಯೇ ಮುಂದೆ ಸಾಗಿದರೆ ಫುನಿಕ್ಯುಲರ್ ರೈಲಿನ ನಿಲ್ದಾಣ ಸಿಗುತ್ತದೆ. ಆಧುನಿಕತೆಯ ಸ್ಪರ್ಶ ಪಡೆದಿದ್ದ ಪುಟ್ಟ ಫುನಿಕ್ಯುಲರ್ ರೈಲಿನ ಡಬ್ಬಿಯೊಳಗೆ ಹತ್ತು ಕುಳಿತರೆ, ಕೆಲವೇ ನಿಮಿಷಗಳಲ್ಲಿ ಇನ್ಸ್ಬ್ರುಕ್ ನೆತ್ತಿಯ ಮೇಲೆ ನಿಂತ ಅನುಭವವಾಗುತ್ತದೆ. ಈ ರೈಲು ನಗರದಿಂದ ಸುಮಾರು ಏಳನೂರು ಮೀಟರ್ ಎತ್ತರದ ಬೆಟ್ಟದ ತುದಿಗೆ ತಂದು ನಿಲ್ಲಿಸುತ್ತದೆ. ಕಣ್ಣೆತ್ತಿ ನೋಡಿದರೆ ಬೆಟ್ಟಗಳ ಸಾಲು, ತಲೆ ತಗ್ಗಿಸಿದರೆ ಇನ್ಸ್ಬ್ರುಕ್ ಎಂಬ ಸುಂದರ ನಗರ. ಅದೊಂದು ದೃಶ್ಯ ವೈಭವ! ಪಕ್ಕದಲ್ಲಿ ಯೂರೋಪಿನ ಅತ್ಯಂತ ವಿಶೇಷವಾದ ಪ್ರಾಣಿಸಂಗ್ರಹಾಲಯವೊಂದಿದೆ. ಇದರ ವಿಶೇಷ ಎಂದರೆ ಸಮುದ್ರ ಮಟ್ಟದಿಂದ ಎರಡು ಸಾವಿರ ಮೀಟರ್‌ಗಿಂತ (ಅಂದರೆ ಆರೂವರೆ ಸಾವಿರ ಅಡಿಗಳಷ್ಟು) ಮೇಲಿನ ಪ್ರದೇಶಗಳಲ್ಲಿ ಸಿಗುವ ಪ್ರಾಣಿ, ಪಕ್ಷಿ, ಉರಗ ಮತ್ತು ಜಲಚರಗಳ ಪ್ರಭೇದಗಳನ್ನು ರಕ್ಷಿಸಿ ಇಲ್ಲಿ ಮೃಗಾಲಯ ಸೃಷ್ಟಿಸಲಾಗಿದೆ. ಯೂರೋಪಿನ ಬೆಟ್ಟ ಗುಡ್ಡ ಪ್ರದೇಶಗಳಲ್ಲಿ ವರ್ಷದ ಏಳೆಂಟು ತಿಂಗಳು ಹಿಮ ಇರುವುದರಿಂದ ಪ್ರಾಣಿ ಸಂಕುಲಗಳಲ್ಲಿ ಇಷ್ಟೊಂದು ವೈವಿಧ್ಯತೆಗಳಿವೆ ಎಂದು ತಿಳಿದಿರಲಿಲ್ಲ. ಅದರಲ್ಲಿಯೂ ಯೂರೋಪಿನ ಯಾವ ಭಾಗದಲ್ಲಿಯೂ ಹಾವುಗಳನ್ನು ಸಹಜವಾಗಿ ನೋಡಿರದ ನನಗೆ ಇಲ್ಲಿನ ಉರಗ ಪ್ರಭೇದಗಳನ್ನು ನೋಡಿ ಆಶ್ಚರ್ಯವಾಯಿತು. ವಿಧ ವಿಧವಾದ ಜಿಂಕೆ, ಮೇಕೆ ಪ್ರಭೇದಗಳು ಅಚ್ಚರಿ ಮೂಡಿಸಿದವು. ಎಷ್ಟೋ ಪ್ರಾಣಿ ಸಂಗ್ರಹಾಲಯಗಳನ್ನು ನೋಡಿದ್ದರೂ, ಈ ರೀತಿಯ ಸ್ಥಳೀಯ ಮತ್ತು ಎತ್ತರದ ಪ್ರದೇಶಗಳ ಪ್ರ್ರಾಣಿ ಸಂಕುಲದ ಮೃಗಾಲಯವನ್ನು ನೋಡಿದ್ದು ಇದೇ ಮೊದಲು.

ಇಲ್ಲಿಂದ ಕೇಬಲ್ ಕಾರು ಹಿಡಿದು ಮತ್ತೆ ಹೊರಟರೆ ತಲುಪುವುದು “ನೊರ್ಡ್ ಕೆಟ್ಟೆ” ಎನ್ನುವ ಬೆಟ್ಟದ ತುತ್ತ ತುದಿ. ನಾವು ಭೇಟಿ ನೀಡಿದಾಗ ಅಲ್ಲಿ ಇನ್ನು ಹಿಮ ಆವರಿಸಿತ್ತು. ಕಣಿವೆಯಲ್ಲಿ ಆಗ ತಾನೇ ಚಿಗುರಿದ ಸ್ವಚ್ಛ ಹಸಿರು, ಸ್ವಲ್ಪ ಮೇಲೆ ಸಾಗಿದರೆ ಶೀತ ವಾತಾವರಣ, ಇನ್ನು ಮೇಲೆ ಹಿಮ! ಹೀಗೆ ಮೇಲೆ ಮೇಲೆ ಸಾಗಿದಂತೆ ಕೆಲವೇ ನಿಮಿಷಗಳಲ್ಲಿ ಬದಲಾಗುವ ಭೂದೃಶ್ಯಗಳು ಪ್ರಕೃತಿಯ ಸೊಬಗನ್ನು ಪ್ರದರ್ಶಿಸಿತ್ತು. ನಾರ್ಡ್ ಕೆಟ್ಟೆಯಲ್ಲಿ ಪ್ರವಾಸಿಗರಿಗೋಸ್ಕರ “ಇಗ್ಲೂ” ಕೂಡ ಮಾಡಿ ಇಡಲಾಗಿತ್ತು. ಗಟ್ಟಿಯಾದ ಹಿಮದ ಇಟ್ಟಿಗೆಗಳಿಂದ ಕಟ್ಟಿದ ಪುಟ್ಟ ಮನೆಯೇ ಇಗ್ಲೂ. ತಾಪಮಾನ ಹೆಚ್ಚಿದ ಹಾಗೆ ಕರಗಿ ಹೋಗುವ ಈ ಮನೆ, ಬೇಸಿಗೆಯಲ್ಲಿ ಮಾಯವಾಗಿಬಿಡುತ್ತದೆ. ಮತ್ತೆ ಚಳಿಗಾಲದಲ್ಲಿ ಹೊಸದಾಳಿ ಹಿಮ ಬಿದ್ದು, ಗಟ್ಟಿಯಾದಮೇಲೆ ಪುನಃ ಕಟ್ಟಿಕೊಳ್ಳಬೇಕು. ಅಲ್ಲಿಗೆ ಹಿಂದಿನವರ ಕಾಲದಲ್ಲಿ ಪ್ರತಿವರ್ಷ ಹೊಸ ಮನೆ ಕಟ್ಟಿ, ಗೃಹಪ್ರವೇಶ ನಡೆಯುತ್ತಿತ್ತು ಅನ್ನಿಸುತ್ತದೆ! ನಮಗೆ ಪ್ರವಾಸಿಗರಾಗಿ ತಮಾಷೆ ಎನ್ನಿಸಿದರೂ, ಆಗಿನ ಕಾಲದ ಭಾವನೆಗಳನ್ನು ಊಹಿಸಲು ಸಾಧ್ಯವಿಲ್ಲ.

ಇನ್ಸ್ಬ್ರುಕ್ ನಗರದಲ್ಲಿ ಬರುವ ಪ್ರವಾಸಿಗರು ಪ್ರಕೃತಿಯ ಸೊಬಗು ಕಣ್ತುಂಬಿಸಿಕೊಂಡರೂ, ಇಲ್ಲಿ ಮತ್ತೊಂದು ವಿಶೇಷ ಸ್ಥಳವಿದೆ. ಈ ಸ್ಥಳ ಆಭರಣ ಪ್ರಿಯರಿಗೆ ಅಚ್ಚು ಮೆಚ್ಚು. ಅದುವೇ “ಸ್ವರೋಸ್ಕಿ” ಮ್ಯೂಸಿಯಂ. ಬೆಂಗಳೂರಿನ ಫೋರಂ ಮಾಲ್‌ನಲ್ಲಿ ಕೂಡ ಇದರದ್ದೊಂದು ಮಳಿಗೆ ನೋಡಿದ್ದ ನೆನಪು. ಪುನೀತ್ ರಾಜ್ ಕುಮಾರ್ ಅಭಿನಯದ ಸುಪ್ರಸಿದ್ಧ ಗೀತೆ “ನೀನೆ ನೀನೆ.. ನನಗೆಲ್ಲಾ ನೀನೆ..” ಹಾಡಿನ ಪ್ರಾರಂಭದಲ್ಲಿ ಒಂದು ದೊಡ್ಡ ಮುಖದ ಆಕೃತಿಯಿಂದ ನೀರು ಬೀಳುವ ಹಿನ್ನೆಲೆಯಿದೆ. ಅದು ಸ್ವರೋಸ್ಕಿ ಮ್ಯೂಸಿಯಂನ ಪ್ರವೇಶದ್ವಾರ. ಒಳಗೆ ಪ್ರವೇಶಿಸುತ್ತಿದ್ದಂತೆ ಹರಳುಗಳ ಲೋಕದ ಅನಾವರಣವಾಗುತ್ತದೆ. ಗಾಜಿನ ಹರಳುಗಳಿಂದ ಸೃಷ್ಟಿಸಿದ ಹಲವಾರು ವಿಧದ ಅಲಂಕಾರಗಳು ಇಲ್ಲಿ ಪ್ರದರ್ಶನಕ್ಕಿವೆ. ಎರಡಂತಸ್ತಿನ ಸಂಗ್ರಹಾಲಯದಲ್ಲಿ ಸುಮಾರು ಮೂರು-ನಾಲ್ಕು ತಾಸು ಬೇಕು. ಎಲ್ಲ ನೋಡಿ ಹೊರಬಂದರೆ ಮಾರಾಟದ ಮಳಿಗೆಯಲ್ಲಿ ಆಭರಣಗಳ ಭಂಡಾರವಿದೆ. ಗಣೇಶನ ವಿಗ್ರಹದಿಂದ ಹಿಡಿದು ನವಿಲು, ಜಿಂಕೆ ಇತ್ಯಾದಿ ಪ್ರದರ್ಶನದ ವಸ್ತುಗಳು ಮಾರಾಟಕ್ಕಿವೆ. ಅಂಗೈಯಗಲದ ಸ್ವರೋಸ್ಕಿ ಗಣಪನ ಮೂರ್ತಿ ಬಹಳ ಸುಂದರವಾಗಿತ್ತು. ಅದರ ಬೆಲೆ ಸರಿ ಸುಮಾರು ಹತ್ತು ಲಕ್ಷ ರೂಪಾಯಿಗಳು! ಭಾರತದಿಂದ ಯೂರೋಪ್ ಪ್ರವಾಸಕ್ಕೆ ಬರುವ ಬಹುತೇಕ ಟೂರ್ ಏಜನ್ಸಿಗಳು ಇನ್ಸ್ಬ್ರುಕ್ ಊರನ್ನು ಈ ಸ್ವರೋಸ್ಕಿ ಮ್ಯೂಸಿಯಂಗೋಸ್ಕರ ತಮ್ಮ ಪಟ್ಟಿಯಲ್ಲಿ ಸೇರಿಸಿರುತ್ತವೆ. ಇದೊಂದು ಅನನ್ಯ ಸಂಗ್ರಹಾಲಯ.

ಇನ್ಸ್ಬ್ರುಕ್ ನಗರದ ಪ್ರವಾಸ ಒಂದೊಳ್ಳೆ ಆಹ್ಲಾದಕರ ಅನುಭವ ನೀಡುವುದು ಖಚಿತ. ಸ್ವಲ್ಪ ಟೂರಿಸ್ಟಿಕ್ ಅನ್ನಿಸಿದರೂ, ಒಮ್ಮೆಯಾದರೂ ಭೇಟಿ ನೀಡಬೇಕಾದ ಸ್ಥಳ. ಪ್ರವಾಸಿಗರಿಗೆ ವೈವಿಧ್ಯಮಯ ಆಯ್ಕೆಗಳಿವೆ. ಪ್ರತಿಕೂಲ ಹವಾಮಾನದ ದಿನಗಳಲ್ಲಿಯೂ ಸಹ ಕಾಲ ಕಳೆಯಲು ಸ್ವರೋಸ್ಕಿ ಮ್ಯೂಸಿಯಂ ಇದೆ. ಎರಡು ಮೂರು ದಿನಗಳು ಇಲ್ಲಿ ತಂಗುವ ಹಾಗೆ ಬಂದರೆ, ಸುತ್ತಾಡಿ ನೆನಪುಗಳನ್ನು ನಮ್ಮೊಟ್ಟಿಗೆ ತೆಗೆದುಕೊಂಡು ಹೋಗಬಹುದು.

(ಫೋಟೋಗಳು: ಲೇಖಕರವು)