ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು. ಇನ್ನೇನು ನಾಳೆಯಿಂದ ಈ ಜಗತ್ತು ಕುಸಿಯುತ್ತದೆ, ಕುಸಿದೇಬಿಟ್ಟಿತು ಎಂಬ ಆಕ್ರಂದನ ಮಾಡಬೇಕು. ಆವಾಗ ನೀವು ಖಂಡಿತ ಒಳ್ಳೆಯ ವಿರೋಧಪಕ್ಷದ ನಾಯಕರಾಗುತ್ತೀರಿ.
ಕತೆಗಾರ ಕೆ. ಸತ್ಯನಾರಾಯಣ ಬರೆಯುವ “ಬೀದಿ ಜಗಳ ಮತ್ತು ಇತರೆ ಪ್ರಬಂಧಗಳು” ಪ್ರಬಂಧಗಳ ಸರಣಿ ಇನ್ನು ಪ್ರತಿ ಬುಧವಾರ ನಿಮ್ಮ ಕೆಂಡಸಂಪಿಗೆಯಲ್ಲಿ…

ಅಲವತ್ತುಕೊಳ್ಳುವುದು

ಎಲ್ಲವನ್ನೂ ಬಲ್ಲ ಎಲ್ಲ ಮಿತ್ರರೊಡನೆ ಸಮಾಲೋಚಿಸಿದೆ. ಅಲವತ್ತುಕೊಳ್ಳುವುದು ಪದದ ಸರಿಯಾದ ಅರ್ಥ ಮತ್ತು ಮಹತ್ವವೇನೆಂದು ಪ್ರಶ್ನಿಸಿದೆ. ಯಾರೂ ಸಮಾಧಾನಕರವಾದ ಉತ್ತರವನ್ನು ಕೊಡಲಿಲ್ಲ. ಗೊಣಗುವುದು, ಬೈದಾಡುವುದು, ಆಪಾದಿಸುವುದು, ಪಿರಿಪಿರಿಮಾಡುವುದು, ತನ್ನ ಮೈಯನ್ನು ಪರಚಿಕೊಂಡು ಇನ್ನೊಬ್ಬರ ಮೈಯನ್ನು ಪರಚುವುದು, ಯಾವಾಗಲೂ ನಕಾರಾತ್ಮಕವಾದ ಮಾತುಗಳನ್ನೇ ಆಡುವುದು, ಹೊಗಳಿಕೆಯನ್ನು ಕೂಡ ನಿಂದಾಸ್ತುತಿಯಲ್ಲೇ ಮಾಡುವುದು, ಕೆಟ್ಟ ಭವಿಷ್ಯ ಹಾರೈಸುವುದು, ಬಾಯಿ ಬಡಿದುಕೊಳ್ಳುವುದು, ತಲೆ ಚಚ್ಚಿಕೊಳ್ಳುವುದು – ಇದೆಲ್ಲವೂ ಅಲವತ್ತುಕೊಳ್ಳುವುದು ಪದದ ಅರ್ಥವ್ಯಾಪ್ತಿಯಲ್ಲಿ ಬರುತ್ತವೆ. ಈ ಎಲ್ಲ ಅಂಶಗಳೂ ಎಲ್ಲ ಕಾಲದಲ್ಲೂ ಎಲ್ಲರ ಅಲವತ್ತುಕೊಳ್ಳುವಿಕೆಯಲ್ಲಿ ಸೇರಿರುತ್ತದೆ ಎಂದು ಅರ್ಥವಲ್ಲ. ಇದರಲ್ಲಿ ಒಂದಿಷ್ಟು ಅಂಶಗಳು ಸೇರಿಕೊಂಡಿದ್ದರೂ ಸಾಕು ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾಗಿರುತ್ತದೆ, ರಸತೀವ್ರವಾಗಿರುತ್ತದೆ.

“ಸುಮ್ಮನೆ ಕೂತುಕೊಂಡು ಅಲವತ್ತುಕೊಳ್ಳಬೇಡ”, ಇದು ನಾನು ಬಾಲ್ಯದಲ್ಲಿ ಪದೇಪದೇ ಕೇಳುತ್ತಿದ್ದ ಮಾತು. ಮನೆಯಲ್ಲಿ ಎಲ್ಲರೂ ಏನೋ ಕೆಲಸ-ಕಾರ್ಯದಲ್ಲಿ ತೊಡಗಿರುತ್ತಾರೆ. ನಾಲ್ಕಾರು ಜನ ಮನೆಗೆ ಬಂದು ಹೋಗುತ್ತಿರುತ್ತಾರೆ. ವ್ಯಾಪಾರ-ವ್ಯವಹಾರ ನಡೆಯುತ್ತಿರುತ್ತದೆ. ಇದೆಲ್ಲವಕ್ಕೂ ಸಂಬಂಧವಿಲ್ಲದಂತೆ ಅಥವಾ ಇದ್ಯಾವುದರ ಜೊತೆಯೂ ಸಂಬಂಧವಿಟ್ಟುಕೊಳ್ಳಲು ಇಷ್ಟವಿಲ್ಲದೆ ಒಬ್ಬ ವ್ಯಕ್ತಿ ಸಾಕಷ್ಟು ವ್ಯಗ್ರವಾಗಿ, ಸಾಕಷ್ಟು ವ್ಯಾಕುಲತೆಯಿಂದ ಮಾತನಾಡಲು ಪ್ರಾರಂಭಿಸುತ್ತಾನೆ. ಆ ಮಾತುಗಳಲ್ಲಿ ಸೊಪ್ಪು ಇರುವುದಿಲ್ಲ, ಉಪ್ಪೂ ಇರುವುದಿಲ್ಲ. ಆದರೆ ಎಲ್ಲರ ಬಗ್ಗೆ, ಎಲ್ಲದರ ಬಗ್ಗೆ ಕೆಟ್ಟದ್ದನ್ನು ನುಡಿಯುತ್ತಿರುತ್ತಾನೆ. ಯಾರಾದರೂ ಒಬ್ಬರು ಅದಕ್ಕೆ ಪ್ರತಿಕ್ರಿಯಿಸಿದರೆ ಕಿಡಿ ಹತ್ತಿಕೊಳ್ಳುತ್ತದೆ. ದೊಡ್ಡ ಪ್ರಮಾಣದ ಜಗಳವೇ ಶುರುವಾಗುತ್ತದೆ. ಇದೆಲ್ಲ ಸಾಮಾನ್ಯವಾಗಿ ಬೆಳಿಗ್ಗೆ ಹತ್ತು ಹನ್ನೊಂದು ಘಂಟೆಗೆ ಶುರುವಾಗಿ ಮಧ್ಯಾಹ್ನ ಊಟದ ಹೊತ್ತಿಗೆ ತಾರಕ ಸ್ಥಿತಿಗೆ ತಲುಪುತ್ತಿತ್ತು. ಹೆಚ್ಚು ಕಡಿಮೆ ಇದು ಪ್ರತಿ ನಿತ್ಯವೂ ನಡೆಯುತ್ತಿದ್ದರಿಂದ ಮಧ್ಯಾಹ್ನದ ಊಟದ ಹೊತ್ತಿಗೆ ಈ ಮನೆಯಲ್ಲಿ ರಾಮಾಯಣ, ಮಹಾಭಾರತ, ಅಲವತ್ತುಕೊಳ್ಳುವಿಕೆ ಪ್ರತಿ ದಿನ ಇದ್ದೇ ಇರುತ್ತದೆ, ನಡೆದೇ ನಡೆಯುತ್ತದೆ ಎಂದು ಒಬ್ಬರು ಕರಿ ತೊಲೆಯ ಮೇಲೆ ಸೀಮೆಸುಣ್ಣದಲ್ಲಿ ಷರಾ ಬರೆದಿದ್ದರು.

ಇದೆಲ್ಲ ನಮ್ಮ ಕುಟುಂಬಕ್ಕೆ ಮಾತ್ರ ಸಂಬಂಧಿಸಿದ ಸಂಗತಿ ಎಂದು ತಿಳಿದುಕೊಂಡು ನಾನು ಸಂಕೋಚ, ಕೀಳರಿಮೆ ಬೆಳೆಸಿಕೊಂಡಿದ್ದೆ. ನಂತರ ಕಾಲಕ್ರಮೇಣ ಇದು ಅಂಗಡಿಗಳ ಮುಂಭಾಗದಲ್ಲಿ, ಆಲೆಮನೆಗಳಲ್ಲಿ ಬೆಲ್ಲ ಮಾಡಲು ಕಬ್ಬಿನ ಹಾಲು ಕುದಿಸುವಾಗ, ಅದರ ಸುತ್ತಮುತ್ತ ಕೂಡ ನಡೆಯುತ್ತಿರುತ್ತದೆ ಎಂದು ತಿಳಿಯಿತು. ವ್ಯಾಪಾರಕ್ಕೆ ಬೇಕಾದ ಜನ-ಲಯ ಮತ್ತು ಕಬ್ಬಿನ ಹಾಲು ಕುದಿಯಲು ಬೇಕಾದ ಶಾಖ ಸಪ್ರಮಾಣದಲ್ಲಿ, ಸಕಾಲದಲ್ಲಿ ಸಿಗಬೇಕಾದರೆ, ಅಲವತ್ತುಕೊಳ್ಳುವಿಕೆಯ ಮಾತುಗಳು ಕೂಡ ಕೇಳುತ್ತಿರಬೇಕಂತೆ. ಅಂಗಡಿಗೆ ಬರುವವರು ಕೇವಲ ಸರಕು-ಸಾಮಾನುಗಳನ್ನು ಕೊಳ್ಳಲು ಬರುವುದಿಲ್ಲ. ಅಲವತ್ತುಕೊಳ್ಳುವಿಕೆಯ ಮಾತುಗಳನ್ನು ಕೇಳಿಸಿಕೊಂಡು ತಮ್ಮದು ಅಂತ ನಾಲ್ಕು ಮಾತುಗಳನ್ನು ಕೂಡ ಸೇರಿಸುತ್ತಾರೆ. ವ್ಯಾಪಾರ ನಡೆಯಲಿ, ನಡೆಯದಿರಲಿ, ಕಬ್ಬಿನ ಹಾಲು ಕುದಿಯಲಿ, ಕುದಿಯದಿರಲಿ, ಅಲವತ್ತುಕೊಳ್ಳುವಿಕೆ ನಿರಂತರವಾಗಿ ನಡೆದುಕೊಂಡೇ ಹೋಗುತ್ತಿರುತ್ತದೆ. ಹಾಗೆಯೇ ಎತ್ತಿಗೆ ಲಾಳ ಕಟ್ಟಿಸುವಾಗಲೂ, ಅಲ್ಲಿ ಸುತ್ತಮುತ್ತ ಕೂತುಕೊಂಡು ಒಂದಿಷ್ಟು ಜನ ಅಲವತ್ತುಕೊಳ್ಳುತ್ತಲೇ ಇರುತ್ತಾರೆ. ಸಾಕುಪ್ರಾಣಿಗಾಗುತ್ತಿರುವ ಹಿಂಸೆ, ನೋವು ಯಾವುದನ್ನೂ ಅವರು ಗಮನಿಸುವುದಿಲ್ಲ.

ಹೀಗೆ ಅಲವತ್ತುಕೊಳ್ಳುವುದನ್ನು ಕಾಡು ಹರಟೆಗೆ ಸಮ ಎಂದು ಯಾರೂ ತಪ್ಪಾಗಿ ಭಾವಿಸಬಾರದು. ಕಾಡು ಹರಟೆ ಹೊಡೆಯಲು ವಾಚಾಳಿಯಾದರೆ ಸಾಕು. ಅಲವತ್ತುಕೊಳ್ಳುವಿಕೆಗೆ ತೀವ್ರವಾದ, ತೀಕ್ಷ್ಣವಾದ ಮಾತುಗಾರಿಕೆ, ಗಾದೆ ಒಗಟುಗಳ ಪರಿಚಯ, ಹಳೆ ಘಟನೆಗಳ ನೆನಪು, ಯಾರು ಯಾರಿಗೆ ಯಾವ ವಿಷಯದಲ್ಲಿ ಮೋಸ ಮಾಡಿದರು, ಏಕೆ ಒಂದು ಮನೆತನ ಯಾವ ಕಾಲದಲ್ಲೂ, ಯಾವ ದೃಷ್ಟಿಯಿಂದಲೂ ಏಳಿಗೆಯಾಗುವುದಿಲ್ಲ ಎಂಬುದೆಲ್ಲ ತಿಳಿದಿರಬೇಕಾಗುತ್ತದೆ. ಕಾಡು ಹರಟೆ ಹೊಡೆಯುವವರು ನಿರುದ್ಯೋಗಿಗಳೋ, ಇಲ್ಲ ಕುಟುಂಬದಲ್ಲಿ ಸಮಾಜದಲ್ಲಿ ಪ್ರಭಾವವಿಲ್ಲದವರೋ ಆಗಿರುತ್ತಾರೆ. ಆದರೆ ಅಲವತ್ತುಕೊಳ್ಳುವವರಿಗೆ ಎಲ್ಲ ರೀತಿಯಲ್ಲೂ ಅನುಕೂಲವಿರುತ್ತದೆ. ಒಂದು ರೀತಿಯ ಗತ್ತಿರುತ್ತದೆ. ಅವರ ಮಾತುಗಾರಿಕೆಗೆ ಇನ್ನೊಬ್ಬರಲ್ಲಿ ಭಯ ಹುಟ್ಟಿಸುವ ಕಾವಿರುತ್ತದೆ. ಯಾರೂ ಇವರ ಬಾಯಿಗೆ ಬೀಳಬಾರದೆಂದು ಹೆದರಿ ದೂರವಿರುತ್ತಾರೆ. ಇನ್ನೊಂದು ಅರ್ಥದಲ್ಲಿ ಇದು ಸಾರ್ವಜನಿಕ ಜೀವನಕ್ಕೆ ಬೇಕಾದ ಭಾಷಣ ಶೈಲಿ, ನಾಯಕತ್ವವನ್ನು ರೂಢಿಸಿಕೊಳ್ಳುವ ಪಾಠಶಾಲೆ ಕೂಡ ಆಗಿರಬಹುದು. ಅಲವತ್ತುಕೊಳ್ಳುವವರಲ್ಲಿ ಕೆಲವರಾದರೂ ಮುಂದೆ ಪಂಚಾಯತಿ, ತಾಲೂಕ್‌ ಬೋರ್ಡ್‌ ಸದಸ್ಯರಾದುದನ್ನು ನಾನು ನೋಡಿದ್ದೇನೆ.

ಒಂದು ಭಾಷಣದ ಶೈಲಿಯಾಗಿ ಕೂಡ ಅಲವತ್ತುಕೊಳ್ಳುವಿಕೆ ಪರಿಣಾಮಕಾರಿಯಾದದ್ದು. ನೀವು ಸುಮ್ಮನೆ ಬೈದು ಭಾಷಣ ಮಾಡಿದರೆ, ವಿರೋಧಪಕ್ಷದ ನಾಯಕರಾಗಲು ಸಾಧ್ಯವಾಗುವುದಿಲ್ಲ. ದೇಶದ ಭವಿಷ್ಯ ಕುರಿತು, ಆಳುವಪಕ್ಷವನ್ನು ಕುರಿತು ಭೀಕರ ಭವಿಷ್ಯವನ್ನು ನುಡಿಯಬೇಕು. ಇನ್ನೇನು ನಾಳೆಯಿಂದ ಈ ಜಗತ್ತು ಕುಸಿಯುತ್ತದೆ, ಕುಸಿದೇಬಿಟ್ಟಿತು ಎಂಬ ಆಕ್ರಂದನ ಮಾಡಬೇಕು. ಆವಾಗ ನೀವು ಖಂಡಿತ ಒಳ್ಳೆಯ ವಿರೋಧಪಕ್ಷದ ನಾಯಕರಾಗುತ್ತೀರಿ. ಹೀಗೆ ಒಂದೆರಡು ದಶಕಗಳ ಕಾಲ ಸಾರ್ವಜನಿಕವಾಗಿ ಅಲವತ್ತುಕೊಳ್ಳುತ್ತಿದ್ದ ಒಬ್ಬರು ಕಡೆಗೆ ಆಡಳಿತಪಕ್ಷದ ಶಾಸಕರೂ ಆಗಿ, ರಾಜ್ಯ ಮಂತ್ರಿಯೂ ಆಗಿಬಿಟ್ಟರು. ಮಂತ್ರಿಗಳಾಗಿ ಅವರಿಗೆ ಭಾಷಣ ಮಾಡುವುದಕ್ಕೆ ಕಷ್ಟವಾಯಿತು. ಹಿಂದಿನ ದಿನಗಳಂತೆ ಅಲವತ್ತುಕೊಳ್ಳುವ ಶೈಲಿಯಲ್ಲಿ ಮಾತನಾಡುವ ಹಾಗಿಲ್ಲ. ಭಾಷಣ ಮಾಡುವ ಅವಕಾಶಗಳನ್ನು ತಪ್ಪಿಸಿಕೊಂಡರು. ತುಂಬಾ ಬಲವಂತಮಾಡಿ ಅಧಿಕಾರಿಗಳು ಧ್ವನಿವರ್ಧಕದ ಮುಂದೆ ನಿಲ್ಲಿಸಿದರೆ, ಮತ್ತೆ ಅಲವತ್ತುಕೊಳ್ಳುವುದಕ್ಕೆ ಶುರು ಮಾಡುತ್ತಿದ್ದರು. ಇವರ ಅದೃಷ್ಟ ಚೆನ್ನಾಗಿತ್ತು. ಮುಂದೆ ಚುನಾವಣೆಯಲ್ಲಿ ಇವರು ಶಾಸಕರಾಗಿ ಗೆದ್ದರೂ, ಪಕ್ಷ ವಿರೋಧಪಕ್ಷವಾಯಿತು. ಈ ಶಾಸಕರು ವಿರೋಧಪಕ್ಷದ ನಾಯಕರಾಗಿ ಮಿಂಚಿದರು. ಶಾಸನ ಸಭೆಯಲ್ಲಿ ಅವರು ತಲೆಮೇಲೆ ಕೈ ಹೊತ್ತುಕೊಂಡು ಕೂರುತ್ತಿದ್ದ ರೀತಿ, ತಲೆ ಚಚ್ಚಿಕೊಳ್ಳುವ ರೀತಿ, ಇದೆಲ್ಲ ಪತ್ರಿಕೆಗಳ ಮುಖಪುಟದಲ್ಲಿ ಪ್ರತಿದಿನವೂ ಚೆನ್ನಾಗಿ ಮಿಂಚುತ್ತಿತ್ತು.

ಅಂಗಡಿಗೆ ಬರುವವರು ಕೇವಲ ಸರಕು-ಸಾಮಾನುಗಳನ್ನು ಕೊಳ್ಳಲು ಬರುವುದಿಲ್ಲ. ಅಲವತ್ತುಕೊಳ್ಳುವಿಕೆಯ ಮಾತುಗಳನ್ನು ಕೇಳಿಸಿಕೊಂಡು ತಮ್ಮದು ಅಂತ ನಾಲ್ಕು ಮಾತುಗಳನ್ನು ಕೂಡ ಸೇರಿಸುತ್ತಾರೆ. ವ್ಯಾಪಾರ ನಡೆಯಲಿ, ನಡೆಯದಿರಲಿ, ಕಬ್ಬಿನ ಹಾಲು ಕುದಿಯಲಿ, ಕುದಿಯದಿರಲಿ, ಅಲವತ್ತುಕೊಳ್ಳುವಿಕೆ ನಿರಂತರವಾಗಿ ನಡೆದುಕೊಂಡೇ ಹೋಗುತ್ತಿರುತ್ತದೆ.

ಇವರಿಗೆ ತಮ್ಮ ಪಾತ್ರ ಮತ್ತು ಸ್ವಭಾವ ಎರಡೂ ಚೆನ್ನಾಗಿ ಗೊತ್ತಿತ್ತು. ಸರಿಯಾದ ಪಾತ್ರವನ್ನು ಆಯ್ಕೆ ಮಾಡಿಕೊಂಡರು. ಇನ್ನೊಬ್ಬರಿಗೆ ಯಾವಾಗಲೂ ಅಲವತ್ತುಕೊಳ್ಳುವುದಕ್ಕೆ ಆಸೆ. ಅಧಿಕಾರಕ್ಕೆ ಬರಲು ಕೂಡ ಬಯಕೆ. ಒಂದಕ್ಕೊಂದು ತಾಳೆಯಾಗಲಿಲ್ಲ. ಪಕ್ಷವು ಅವರಿಗೆ ಚುನಾವಣೆಯಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಲಿಲ್ಲ. ನೀವು ಬೇಕಾದರೆ ಚುನಾವಣೆ ಸಮಯದಲ್ಲಿ ನಮ್ಮ ಪಕ್ಷದ Star speaker ಆಗಿ ಅಲವತ್ತುಕೊಳ್ಳಿ, ಭಾಷಣ ಮಾಡಿ, ಓಟು ಬರುತ್ತದೆ. ಶಾಸನ ಸಭೆಗೆ ಮಾತ್ರ ಬರಬೇಡಿ ಎಂದು ಕಟ್ಟುನಿಟ್ಟು ಮಾಡಿತು. ಚರಣ್‌ಸಿಂಗರಿಗೆ ಮಾತ್ರ ಜಾತಿ ಪಂಚಾಯತಿಯಲ್ಲಿ ಹೇಗೆ ಯಾವಾಗ ಅಲವತ್ತುಕೊಳ್ಳಬೇಕು, ಸಂಸತ್‌ನಲ್ಲಿ ಶಿಷ್ಟ ಶೈಲಿಯಲ್ಲಿ ಹೇಗೆ ಮಾತನಾಡಬೇಕು ಎರಡೂ ಕರಾರುವಾಕ್ಕಾಗಿ ಗೊತ್ತಿತ್ತಂತೆ. ಇಂದಿರಾ ಹತ್ಯೆಯಾದ ದಿನವೇ ರಾಜೀವರನ್ನು ಪ್ರಧಾನಿಯಾಗಿ ಆಯ್ಕೆ ಮಾಡಿದಾಗ, ಅದನ್ನು ವಿರೋಧಪಕ್ಷದ ನಾಯಕರ ಸಭೆ ಕರೆದು ತಿಳಿಸಿದಾಗ, ಚರಣ್‌ಸಿಂಗ್‌ ಅಲವತ್ತುಕೊಂಡು ಎದ್ದು ಹೋದ ರೀತಿ ಒಂದು Classic performance ಎಂದು ನನ್ನ ಉತ್ತರಪ್ರದೇಶದ ಮಿತ್ರರೊಬ್ಬರು ಹೇಳುತ್ತಾರೆ. ಲೋಹಿಯಾಗೆ ಈ ಎರಡು ವ್ಯತ್ಯಾಸಗಳು ಸ್ಪಷ್ಟವಾಗಿ ಗೊತ್ತಿರಲಿಲ್ಲವಂತೆ.

ಅವಿಭಕ್ತ ಕುಟುಂಬಗಳು, ಹಳೆ ಕಾಲದ ದೊಡ್ಡ ತೊಟ್ಟಿ, ಜಗುಲಿ ಇರುವ ಮನೆಗಳು ಅಲವತ್ತುಕೊಳ್ಳುವಿಕೆಗೆ ಸೂಕ್ತ ಪ್ರೇರಣೆ ನೀಡುತ್ತವೆಯೇ? ಹೆಂಗಸರು ತಮ್ಮ ಗೆಳತಿಯರ ಕೂದಲಿನಿಂದ ಹೇನು ತೆಗೆಯುತ್ತಾ ಜಗುಲಿಯ ಮೆಟ್ಟಿಲುಗಳ ಮೇಲೆ ಕುಳಿತುಕೊಂಡು ಅಲವತ್ತುಕೊಳ್ಳುವುದನ್ನು ಉದಾಹರಣೆಯಾಗಿ ನೀಡುತ್ತಾರೆ. ಗಂಡಸರು, ಗಂಡಂದಿರು ಎದುರಿಗಿದ್ದಾಗಲೇ ಹೆಂಗಸರು ಹೆಚ್ಚಾಗಿ ಅಲವತ್ತುಕೊಳ್ಳುವುದು. ಅವರವರೇ ಇದ್ದಾಗ ಆಡುವ, ಆಡಿಕೊಳ್ಳುವ ಮಾತಿನ ಶೈಲಿ ಬೇರೆಯೇ ಇರುತ್ತದಂತೆ.

ಇದೆಲ್ಲ ಹಳೇ ಕಾಲದ ಸಮಾಚಾರ. ಜೀವನಶೈಲಿ ಬದಲಾದಂತೆ, ಸಮಾಜ ಆಧುನಿಕವಾದಂತೆ ಅಲವತ್ತುಕೊಳ್ಳುವಿಕೆ ಕೂಡ ಬದಲಾಗುತ್ತದೆ ಎಂದು ನಾನು ತಿಳಿದಿದ್ದು ತಪ್ಪಾಯಿತು. ನನ್ನ ಮೇಲೇ ಈ ಆಪಾದನೆ ಬಂತು. ನಾನು ಮಾತನಾಡುವ ಶೈಲಿಯಲ್ಲೇ ಅಲವತ್ತುಕೊಳ್ಳುವಿಕೆ ಅಂತರ್ಗತವಾಗಿದೆಯೆಂದು, ಯಾರ ಬಗ್ಗೆಯೂ, ಯಾವ ಲೇಖಕರ ಬಗ್ಗೆಯೂ ನನಗೆ ಒಳ್ಳೆಯ ಅಭಿಪ್ರಾಯ-ಮಾತುಗಳಿಲ್ಲವೆಂದು, ಯಾವಾಗಲೂ ಎಲ್ಲವೂ ಹಾಳಾಗುತ್ತಿದೆ, ಹುಳ ಹಿಡಿಯುತ್ತಿದೆ ಎಂದು ಕೊರಗುತ್ತಾ ಮೂದೇವಿಯಂತೆ ಮನೆಯಲ್ಲೇ ಕೂತಿರುತ್ತೀರಿ ಎಂದು ನನ್ನ ಶ್ರೀಮತಿ ಆಪಾದಿಸಿದರೆ, ಅವಳೇ ಮನೆಗೆಲಸಗಳನ್ನು ಮಾಡಿಕೊಳ್ಳುವಾಗ, ಅಲವತ್ತುಕೊಳ್ಳದಿದ್ದರೆ ಕೆಲಸ ಮಾಡುವುದನ್ನು ಮುಂದುವರೆಸಲು ಸಾಧ್ಯವೇ ಆಗುವುದಿಲ್ಲ. ಪಾತ್ರೆ ತೊಳೆಯುವಾಗ, ಅಡುಗೆ ಮಾಡುವಾಗ ಅಲವತ್ತುಕೊಳ್ಳದಿದ್ದರೆ, ಅವಳಿಗೆ ಕೆಲಸದಲ್ಲಿ ಚುರುಕು ಬರುವುದೇ ಇಲ್ಲ. ಸಾರಿಗೆ ಒಗ್ಗರಣೆ ಹಾಕುವಾಗ ಅಲವತ್ತುಕೊಳ್ಳದೇ ಹೋದರೆ ಸಾಸಿವೆ ಸರಿಯಾಗಿ ಸಿಡಿಯುವುದೇ ಇಲ್ಲ. ಅತಿಥಿಗಳು ಮನೆಗೆ ಬರುವ ಮುನ್ನ ಅಡುಗೆ ಮಾಡುವಾಗ ಯಾವ ರೀತಿಯ ಅಲವತ್ತುಕೊಳ್ಳುವಿಕೆಯೂ ಇಲ್ಲದೆ, ಏಕಾಗ್ರತೆಯಿಂದ ತ್ಯಾಗರಾಜರ ಕೃತಿಗಳನ್ನು ಗುನುಗುತ್ತಾ ತಿಂಡಿ-ತಿನಸು ತಯಾರಿಸುವುದು ನಿಜ. ಆದರೆ, ಅಲವತ್ತುಕೊಳ್ಳುವಿಕೆಯ ಗೈರು ಹಾಜರಿಯಲ್ಲಿ ತಯಾರಾದ ಅಡುಗೆಯಲ್ಲಿ ಯಾವುದೇ ರುಚಿ ಇರುವುದಿಲ್ಲ.

ನಮ್ಮಿಬ್ಬರ ಸಂಸಾರದ ಗುಟ್ಟುಗಳನ್ನು ಬಲ್ಲ ಮಿತ್ರನೊಬ್ಬನ ಹತ್ತಿರ ಇದನ್ನೆ ತೋಡಿಕೊಂಡೆ. ನೀನೇ ಪುಣ್ಯವಂತ ಎಂದು ಅವನು ನಿಟ್ಟುಸಿರು ಬಿಟ್ಟ. ನನ್ನ ಹೆಂಡತಿ ಮನೆ ಮುಂದೆ ರಂಗೋಲಿ ಬಿಡಿಸುವಾಗಲೂ ಅಲವತ್ತುಕೊಳ್ಳುತ್ತಿರುತ್ತಾಳೆ ಎಂದು ಹೇಳಿದ. ಅವರ ಮನೆಯ ಮುಂದಿನ ರಂಗೋಲಿ ಕಲೆ ಗಮನಿಸಿದೆ. ಸುಂದರ ಚಿತ್ತಾರ, ವಿನ್ಯಾಸ, ಖುಷಿಯಾಯಿತು. ಎ. ಎನ್‌. ವಿಲ್ಸನ್‌ರ ಪ್ರಕಾರ ಟಾಲಸ್ಟಾಯ್‌-ಸೋಫಿಯಾ ನಡುವೆ ಪರಸ್ಪರ ಅಲವತ್ತುಕೊಳ್ಳುವಿಕೆ ತೀವ್ರವಾಗಿದ್ದಾಗಲೇ ಆತ ಹೆಚ್ಚು ಸೃಜನಶೀಲನಾಗಿರುತ್ತಿದ್ದನಂತೆ. ಮೈಸೂರಿನ ದಿವಂಗತ ಕತೆಗಾರರೊಬ್ಬರಿಗೆ ಕತೆ ಬರೆಯಲು ಹೇಳಿದರೆ, ವೈಎನ್‌ಕೆ ಮನೆಗೇ ಬಂದುಬಿಡುತ್ತಿದ್ದರಂತೆ. ಮನೆಯಲ್ಲಿ ಯಾವಾಗಲೂ ಹೆಂಡತಿ ಅಲವತ್ತುಕೊಳ್ಳುತ್ತಿರುತ್ತಾಳೆ. ಬರೆಯಲು ಸಾಧ್ಯವಾಗುವುದಿಲ್ಲ ಎಂದು. ಇಲ್ಲ ಇಲ್ಲ ನೀನು ಮನೆಗೆ ವಾಪಸ್‌ ಹೋಗು. ನಿನ್ನ ಹೆಂಡತಿ ಅಲವತ್ತುಕೊಳ್ಳುವುದನ್ನು ಚೆನ್ನಾಗಿ ಕೇಳಿಸಿಕೊಂಡು ನಂತರ ಧ್ಯಾನಿಸಿ ಬರೆ. ಕತೆ ತೀವ್ರವಾಗಿರುತ್ತದೆ ಎಂದರಂತೆ. ಕೊನೆಗೆ ಏನಾಯಿತು? ಆ ಕತೆಗಾರ ಸಾಂಸಾರಿಕ ಅಲವತ್ತುಕೊಳ್ಳುವಿಕೆಯನ್ನೇ ನಿರಂತರ ಕಾಳಜಿ ಮಾಡಿಕೊಂಡು ಒಂದೇ ರೀತಿಯ ಕತೆಗಳನ್ನು ಬರೆಯುತ್ತಾ ಹೋದ. ಹೀಗೆ ದಿನದುದ್ದಕ್ಕೂ, ಬದುಕಿನುದ್ದಕ್ಕೂ ಒಂದು ಕುಟುಂಬದೊಳಗೆ ಪರಸ್ಪರ ಅಲವತ್ತುಕೊಳ್ಳುವುದನ್ನು ಲಯವಾಗಿ ಹಿಡಿದು ಬರೆದ “ಗೃಹಭಂಗ” ಕಾದಂಬರಿ ಕನ್ನಡ ಓದುಗರಿಗೆಲ್ಲ ಪ್ರಿಯವಾಗಿರುವುದರಿಂದ, ಅಲವತ್ತುಕೊಳ್ಳುವಿಕೆಯನ್ನು ಒಂದು ಸಾಂಸ್ಕೃತಿಕ ನುಡಿಗಟ್ಟಾಗಿ ಕನ್ನಡಿಗರು ಸ್ವೀಕರಿಸಿದ್ದಾರೆಂದು ಹೇಳಬಹುದು. ಸಾಕವ್ವ ಮಾಡಿದ್ದಾದರೂ ಏನು? ಅಲವತ್ತುಕೊಳ್ಳುವಿಕೆಯ ಮೂಲಕವೇ ಹಟ್ಟಿಯ ಬದುಕನ್ನು ಕಟ್ಟಿದಳು.

ಕೆಲವು ವೃತ್ತಿಗಳಲ್ಲಿ ಅಲವತ್ತುಕೊಳ್ಳುವಿಕೆ ಅನಿವಾರ್ಯವೂ ಹೌದು. ಇಲ್ಲದಿದ್ದರೆ, ಕೆಲಸಗಾರರನ್ನು ನಿಯಂತ್ರಿಸಲು ಸಾಧ್ಯವೇ ಆಗುವುದಿಲ್ಲ. ಕಟ್ಟಡ ನಿರ್ಮಾಣ ನಡೆಯುವಾಗ, ಗದ್ದೆಯಲ್ಲಿ ನಾಟಿ ಮಾಡುವಾಗ, ಲಾರಿಗೆ ಸಾಮಾನು-ಸರಕು ತುಂಬಿಸುವಾಗ ಮೇಸ್ತ್ರಿ ಅಲ್ಲೇ ನಿಂತುಕೊಂಡು ಅಲವತ್ತುಕೊಳ್ಳುತ್ತಿರುತ್ತಾನೆ. ಅವನು ಯಾತಕ್ಕೆ ಅಲವತ್ತುಕೊಳ್ಳುತ್ತಿದ್ದಾನೆ, ಯಾರ ಮೇಲೆ ಅಲವತ್ತುಕೊಳ್ಳುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಾಗುವುದಿಲ್ಲ. ಯಾರಿಗೂ ಬೇಕಾಗಿಯೂ ಇರುವುದಿಲ್ಲ. ಆದರೆ ಅವನು ಹಾಗೆ ಅಲವತ್ತುಕೊಳ್ಳದಿದ್ದರೆ, ಕೆಲಸ ಮಾಡಲು-ತೆಗೆಯಲು ಬೇಕಾದ “ಹವಾ” ಮೂಡುವುದೇ ಇಲ್ಲ.

ಗೋವಾದಲ್ಲಿ ಒಂದು ತೆರಿಗೆ ಧಾಳಿಯ ಸಂದರ್ಭದಲ್ಲಿ, ಧಾಳಿ ಪೂರ್ತಿ ವಿಫಲವಾಯಿತು. ನಿರೀಕ್ಷಕರು, ಸಹಾಯಕ ಅಧಿಕಾರಿಗಳಿಗೆಲ್ಲ ಹತಾಶೆ, ಕ್ಷೋಭೆ. ತಂಡದಲ್ಲಿ ಅಶಿಸ್ತು, ಅರಾಜಕತೆ ಮೂಡಿತು. ನಾಯಕ ಅಧಿಕಾರಿಗೆ ಮೊದಲೇ ಬೇಸರ, ನೋವು. ಕೆಳಗಿನವರು ಕೂಡ ದಂಗೆ ಏಳುತ್ತಿದ್ದಾರೆ. ಹೇಗೆ ನಿಯಂತ್ರಿಸಬೇಕು. ತಲೆ ಚಚ್ಚಿಕೊಂಡು ಅಲವತ್ತುಕೊಳ್ಳಲು ಶುರು ಮಾಡಿದ. ಮೇಲಧಿಕಾರಿಗಳನ್ನು, ಮಂತ್ರಾಲಯವನ್ನು, ವಿತ್ತ ಸಚಿವರನ್ನು, ಶ್ರೀಮಂತರನ್ನು ಎಲ್ಲರನ್ನೂ ಬೈದ. ಅಲವತ್ತುಕೊಳ್ಳುವಿಕೆ ಉತ್ತುಂಗ ತಲುಪಿತು. ತಂಡವು ಕೂಡ ಶಾಂತವಾಯಿತು. ನಿಯಂತ್ರಣಕ್ಕೆ ಬಂತು.

ಆದರೂ ಈ ವಿದ್ಯಮಾನ ನನಗೆ ಸಂಪೂರ್ಣವಾಗಿ ಅರ್ಥವಾಗಿದೆಯೆಂದು ಈವತ್ತಿಗೂ ನನಗೆ ಅನಿಸುವುದಿಲ್ಲ. ಈಗ ನಾವು ವಾಸವಾಗಿರುವ ಪದ್ಮನಾಭನಗರ ಬಡಾವಣೆಯ ಪೌರ ಕಾರ್ಮಿಕರು ದಿನದ ಕೆಲಸ ಮುಗಿಸಿ ತಾಂಬೂಲ, ಹೊಗೆಸೊಪ್ಪು ಜಗಿಯುತ್ತಾ ಬಂದು ಮೈದಾನದ ಎದುರಿಗೆ ಗುಂಪಿನಲ್ಲಿ ಕೂರುತ್ತಾರೆ. ಮೇಸ್ತ್ರಿ ಬೈಕ್‌ನಲ್ಲಿ ಬರುತ್ತಾನೆ. ಬರುವ ಮುಂಚೆಯೇ ಅವನು ಅಲವತ್ತುಕೊಳ್ಳುವುದನ್ನು ಶುರು ಮಾಡಿರುತ್ತಾನೆ. ಅವನ ಮಾತು, ವರ್ತನೆ, ಸಿಟ್ಟು ಯಾವುದೂ ಸ್ಪಷ್ಟವಾಗಿರುವುದಿಲ್ಲ. ಕೂಲಿ ಬಟವಾಡೆಯಾಗುತ್ತದೆ. ಕೆಲವು ಕಾರ್ಮಿಕರು ತಮ್ಮ ಸಮಸ್ಯೆ, ಅಹವಾಲುಗಳನ್ನು ಹೇಳಿಕೊಳ್ಳುತ್ತಾ ಅಲವತ್ತುಕೊಳ್ಳುತ್ತಾರೆ. ಅದನ್ನೆಲ್ಲ ಅವನು ಕೇಳಿಸಿಕೊಂಡನೇ? ತಿಳಿಯುವುದಿಲ್ಲ. ಆದರೂ ಅವನು ವಾಪಸ್‌ ಹೋಗುವ ಹೊತ್ತಿಗೆ ಹೀಗೆ ಅಲವತ್ತುಕೊಂಡವರ ವದನಾರವಿಂದದಲ್ಲಿ ಕಳೆ-ಸಂತೋಷ ಮೂಡಿರುತ್ತದೆ. ನನಗೆ ಏನೊಂದೂ ಅರ್ಥವಾಗುವುದೇ ಇಲ್ಲ. ಅಂದರೆ, ನಾನು ಈ ಬಗ್ಗೆ ಗಮನಿಸಬೇಕಾದ್ದು, ಅಧ್ಯಯನ ಮಾಡಬೇಕಾದ್ದು ಇನ್ನೂ ಇದೆ. ಇಂತಹ ಅಧ್ಯಯನಕ್ಕೆಲ್ಲ ಯಾರು ಶಿಷ್ಯವೇತನ ಕೊಡುತ್ತಾರೆಂದು ನನಗೆ ದಯವಿಟ್ಟು ತಿಳಿಸಿ.

ಬರವಣಿಗೆಯ ಶೈಲಿಯಾಗಿ ಅಲವತ್ತುಕೊಳ್ಳುವುದು ಹೇಗೆ ಉಪಯೋಗಕ್ಕೆ ಬರುತ್ತದೆ? ಇದಕ್ಕೆ ಖಚಿತವಾದ ಉತ್ತರ ನನಗೆ ಗೊತ್ತಿಲ್ಲ. ಅಲವತ್ತುಕೊಳ್ಳುವುದು ನಮ್ಮ ಬಗ್ಗೆ ನಮ್ಮ ಕಾಲದ ಬಗ್ಗೆ ಮುಖವಾಡ ಹಾಕಿಕೊಂಡ ಸ್ವಗತವೇ. ಬರೆಯಲಾಗದವರು ಮಾತ್ರ ಅಲವತ್ತುಕೊಳ್ಳುತ್ತಾರೆಯೇ? ಅದರ ಸ್ವದ ಬಗ್ಗೆ, ಆಪ್ತರ ಬಗ್ಗೆ, ಕಾಲದ ಬಗ್ಗೆ, ಕರ್ಮದ ಬಗ್ಗೆ ಅಲವತ್ತುಕೊಳ್ಳದವನು ಬರಹಗಾರ ಹೇಗಾದಾನು? ಕೊನೆಗೂ ಜಗತ್ತಿನ ಬಗ್ಗೆ, ಸಮಾಜದ ಬಗ್ಗೆ, ಆಧುನಿಕತೆ ಬಗ್ಗೆ, ಚಾತುರ್ವರ್ಣ್ಯದ ಬಗ್ಗೆ ಅಲವತ್ತುಕೊಳ್ಳುವುದು ಎಷ್ಟೊಂದು ಸುಲಭ. ಆದರೆ ಸ್ವಭಾವದ ಬಗ್ಗೆ ಪಾರದರ್ಶಕವಾಗಿ ಅಲವತ್ತುಕೊಳ್ಳುವುದು ಎಷ್ಟು ಕಷ್ಟ!

ಇರಲಿ! ಆದರೆ ಈ ಶೈಲಿ ಕೆಲವು ಸಾಹಿತಿಗಳ ಬದುಕಿಗೆ ಚೆನ್ನಾಗಿ ಒಗ್ತುತ್ತದೆ. ಇಂಥವರು ಯಾವಾಗಲೂ ಅಲವತ್ತುಕೊಳ್ಳುತ್ತಿರುತ್ತಾರೆ. ಓದುಗರಿಲ್ಲ, ಒಳ್ಳೆಯ ಪುಸ್ತಕಗಳನ್ನು ಈಗ ಓದುವುದಿಲ್ಲ, ಪ್ರಶಸ್ತಿ ಸರಿಯಾದವರಿಗೆ ಬರುವುದಿಲ್ಲ, ಇನ್ನು ಮುಂದೆ ಶ್ರೇಷ್ಠ ಸಾಹಿತ್ಯ ಬರುವುದಿಲ್ಲ, ಹೀಗೆ ಅಲವತ್ತುಕೊಳ್ಳವವರು ಎಲ್ಲ ದೇಶದಲ್ಲೂ, ಎಲ್ಲ ಕಾಲದಲ್ಲೂ ಇದ್ದೇ ಇರುತ್ತಾರೆ. ಆದರೂ ಸಾಹಿತ್ಯಕ್ಕೆ, ಶ್ರೇಷ್ಠತೆಗೆ ಏನೂ ಆಗಿಲ್ಲ. ಇದು ನನ್ನ ತಿಳುವಳಿಕೆಯಾಗಿದ್ದರೂ, ಸದಾ ಅಲವತ್ತುಕೊಳ್ಳುವ ಸಾಹಿತಿಗಳ ಬಗ್ಗೆ ನನಗಿರುವ ಆಕರ್ಷಣೆಯಿಂದಾಗಿ ಒಬ್ಬರ ಹತ್ತಿರ ಹೋದೆ, ಎಲ್ಲವನ್ನೂ ಚರ್ಚಿಸಬಹುದೆಂದು. ಮಾನ್ಯರು ಮಠದ ಶ್ರೀಗಳಿಗೆ ಪಾದಪೂಜೆ ಸಲ್ಲಿಸುತ್ತಿದ್ದರು. ಪ್ರಸನ್ನರಾಗಿದ್ದರು. ಏನು ಸಾರ್‌ ಇದೆಲ್ಲ ಎಂದು ಕೇಳಿಯೇಬಿಟ್ಟೆ. ನೋಡಪ್ಪಾ, ಅಲವತ್ತುಕೊಳ್ಳುವುದು ಸುಲಭ. ಆದರೆ ಅದೆಲ್ಲ ಸಾರ್ವಜನಿಕ ಭಂಗಿ. ಸುಮ್ಮನೆ ಯಾವಾಗಲೂ ಎಲ್ಲರ ಬಗ್ಗೆ ಅಲವತ್ತುಕೊಂಡಿದ್ದರೆ ಜೀವನ ಸಾಗಬೇಕಲ್ಲ. ಹಾಗಾಗಿ ನಾವು ಖಾಸಗಿಯಾಗಿ ಬೇರೊಂದು ರೀತಿಯಲ್ಲಿ ಇರಬೇಕಾಗುತ್ತದೆ. ತಪ್ಪು ತಿಳಿಯಬೇಡ. ಅಲವತ್ತುಕೊಳ್ಳುವಿಕೆಯ ಬಗ್ಗೆ ನನಗೆ ತುಂಬಾ ಗೌರವವಿದೆ. ಇದನ್ನೆಲ್ಲ ಹೇಳುವಾಗ ತುಂಬಾ ಪ್ರೀತಿ ಮಾಡಿದರು. ಅವರ ಅಲವತ್ತುಕೊಳ್ಳುವಿಕೆಯ ಲೇಖನಗಳ ಈಚಿನ ಸಂಗ್ರಹವನ್ನು ಓದಲು ಕೊಟ್ಟರು.

ನಾನು ಬಲ್ಲ ಅತ್ಯುತ್ತಮ ಅಲವತ್ತುಕೊಳ್ಳುವ ಪಟುಗಳಲ್ಲಿ ದೂರದಿಂದ ಚಿಕ್ಕಪ್ಪನಾಗಬೇಕಾದ ಕಾಶೀಪತಯ್ಯ ಕೂಡ ಒಬ್ಬರು. ಇವರ ವ್ಯಕ್ತಿತ್ವದಿಂದಾಗಿ ನನಗೆ ಈಗಲೂ ಅಲವತ್ತುಕೊಳ್ಳುವಿಕೆಯ ಬಗ್ಗೆ ನಿಗೂಢವಾದ ಭಾವನೆ ಇನ್ನೂ ಹೆಚ್ಚಾಗುತ್ತಿದೆ. ತಾಲೂಕ್‌ ಆಫೀಸಿನಲ್ಲಿ ಮೂವತ್ತಾರು ವರ್ಷ ಮೂರನೇ ದರ್ಜೆ ಗುಮಾಸ್ತರಾಗಿ ಕೆಲಸ ಮಾಡಿದರು. ಬಡ್ತಿಯೇ ಸಿಗಲಿಲ್ಲ. ಕೊನೆ ವರ್ಷ ಎರಡನೇ ದರ್ಜೆ ಗುಮಾಸ್ತ ಎಂದು ತಾತ್ಕಾಲಿಕವಾಗಿ ನೇಮಕವಾದರು. ವಿಶೇಷವೆಂದರೆ, ಅವರು ಯಾವಾಗಲೂ ಅವರ ಕುಟುಂಬದ ಬಗ್ಗೆಯೇ ಅಲವತ್ತುಕೊಳ್ಳುತ್ತಿದ್ದರು. ಕುಟುಂಬದ ಸದಸ್ಯರ ಬಗ್ಗೆ ಕೊಂಚವೂ ಒಳ್ಳೆಯ ಅಭಿಪ್ರಾಯವಿರಲಿಲ್ಲ. ಯಾವಾಗಲೂ ಮನೆಯ ಹೊರಗಡೆ ಇರುತ್ತಿದ್ದರು. ಕಂಡ ಕಂಡವರ ಹತ್ತಿರವೆಲ್ಲ ಮನೆಯ ಎಲ್ಲ ವಿಷಯಗಳನ್ನೂ ಹೇಳಿಕೊಂಡು, ತಮ್ಮನ್ನು ತಾವೇ ಅವಹೇಳನ ಮಾಡಿಕೊಳ್ಳುತ್ತಿದ್ದರು. ಮಕ್ಕಳು ಪರೀಕ್ಷೆ ಬರೆಯಬಾರದು, ಉದ್ಯೋಗಕ್ಕೆ ಅರ್ಜಿ ಹಾಕಿಕೊಳ್ಳಬಾರದು, ಹೆಂಡತಿ ಚೆನ್ನಾಗಿ ಕಾಣಬಾರದು, ಮನೆಗೆ ಸುಣ್ಣ ಬಣ್ಣ ಮಾಡಿಸಬಾರದು. ಇದೆಲ್ಲ ನಮಗೆ ಯಾಕೆ? ಏನು ಮಾಡಿದರೂ ನಮ್ಮ ಕುಟುಂಬ ಮುಂದೆ ಬರೋಲ್ಲ ಎಂದು ವಾದಿಸುತ್ತಲೇ ಇರುವರು. ಮನೆ ಕಟ್ಟಲು ಹೋದರೆ, ಸೈಟು ಕೊಳ್ಳಲು ಹೋದರೆ, ಇದೆಲ್ಲ ನಮಗೇಕೆ, ನಮ್ಮ ಯೋಕ್ತಿ ಏನು, ನಾವೇನು ಎಂದು ಅವರೇ ಮೂದಲಿಸಿಕೊಂಡುಬಿಡುವರು. ಮಕ್ಕಳು ಉಲ್ಟಾ ಹೊಡೆದರು. ಚೆನ್ನಾಗಿ ಓದಿದರು. ಉದ್ಯೋಗ ಹಿಡಿದರು. ಮದುವೆ ಮಾಡಿಕೊಂಡರು. ಮನೆ ಕಟ್ಟಿದರು. ಈತ ಯಾವುದರಲ್ಲೂ ಭಾಗಿಯಾಗಲಿಲ್ಲ. ಇದೆಲ್ಲ ನಮಗಲ್ಲ ಎಂದೇ ಅಲವತ್ತುಕೊಳ್ಳುತ್ತಿದ್ದರು. ಕೊನೆಗೆ ಹೆಂಡತಿ ಮಕ್ಕಳೇ ಇವರನ್ನು ದೂರ ಮಾಡಬೇಕಾಯಿತು. ನಿವೃತ್ತರಾದ ಮೇಲೂ ಹಗಲಿರುಳು ಎನ್ನದೆ ಅದೇ ತಾಲೂಕ್‌ ಆಫೀಸ್‌ ಮೆಟ್ಟಿಲ ಮೇಲೆ ಕುಳಿತುಕೊಂಡು ಇನ್ನೂ ಹಾಗೇ ಅಲವತ್ತುಕೊಳ್ಳುತ್ತಲೇ ಇರುತ್ತಾರೆ.

ಸದ್ಯಕ್ಕೆ ನಮ್ಮ ರಾಜಕಾರಣದಲ್ಲಿ ಅಲವತ್ತುಕೊಳ್ಳುವಿಕೆಯ ಗುಟ್ಟನ್ನು ಬಲ್ಲವರು ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿಯವರು. ಮೋದಿಯಂತ ಮೋದಿಯವರನ್ನು ಕೂಡ ಅಲವತ್ತುಕೊಂಡು, ಅಲವತ್ತುಕೊಂಡೇ ಚುನಾವಣೆಯಲ್ಲಿ ಸೋಲಿಸಿಬಿಟ್ಟರು. ಅದು ದೊಡ್ಡವರ ಮಾತು. ಪಡಖಾನೆಗಳಲ್ಲಿ, ಪಡಸಾಲೆಗಳಲ್ಲಿ, ಸೆಲೂನುಗಳಲ್ಲಿ, ಪಾರ್ಕ್‌ಗಳಲ್ಲಿ ಇದು ಇನ್ನೂ ಮುಂದುವರೆಯುತ್ತಿದೆ. ನಮ್ಮ ಬೀದಿಯ ಪಾರ್ಕಿನಲ್ಲಿ ಕೂಡ ಅಲವತ್ತುಕೊಳ್ಳುವವರ ಒಂದು ಸಂಘವಿದೆ. ಈ ಸಂಘದ ಸದಸ್ಯರ ವಿಶೇಷವೆಂದರೆ, ಅವರೆಲ್ಲ ಯಾವಾಗಲೂ ನಿಂತುಕೊಂಡೇ ಅಲವತ್ತುಕೊಳ್ಳುತ್ತಿರುತ್ತಾರೆ. ಇದರ ಅಧ್ಯಕ್ಷರಿಗೆ ಗಾಢವಾದ ಓದು, ಸಾಂಸ್ಕೃತಿಕ ಪ್ರಜ್ಞೆ ಕೂಡ ಇದೆ. ಇಡೀ ಭಗವದ್ಗೀತೆಯನ್ನು ಅವರು ಶ್ರೀಕೃಷ್ಣ ಪರಮಾತ್ಮನು ಅರ್ಜುನನ ಮುಂದೆ ಅಲವತ್ತುಕೊಂಡಿರುವ ರೀತಿಯೆಂದು ವರ್ಣಿಸುತ್ತಾರೆ. ಇವರು ಹೀಗೆ ಅಲವತ್ತುಕೊಳ್ಳುತ್ತಿದ್ದಾಗ ಉಪಾಧ್ಯಕ್ಷರು ಇನ್ನೊಂದು ನೋಟ ಮಂಡಿಸಿದರು. ವ್ಯಾಸ ಕೂಡ ಮಹಾಭಾರತವನ್ನೆಲ್ಲ ಬರೆದಾದ ಮೇಲೆ ಏನು ಮಾಡಿದ – ಯಾರೂ ನನ್ನ ಮಾತು ಕೇಳುತ್ತಿಲ್ಲ ಎಂದು ಅಲವತ್ತುಕೊಂಡ. ಗಾಂಧಿ ಕೂಡ ಸಾಕು, ಸಾಕು, ಕಾಂಗ್ರೆಸ್‌ ಪಕ್ಷವನ್ನು ವಿಸರ್ಜಿಸಿ ಎಂದು ಎಷ್ಟು ಸಲ ಅಲವತ್ತುಕೊಳ್ಳಲಿಲ್ಲ.

ಅದೇಕೋ ಈಚೆಗೆ ನನಗೆ ಎಲ್ಲೆಲ್ಲೂ ಅಲವತ್ತುಕೊಳ್ಳುವಿಕೆಗೆ ಸಾಂಸ್ಕೃತಿಕ, ದಾರ್ಶನಿಕ ಮಹತ್ವ ನಿರಂತರವಾಗಿ ಹೆಚ್ಚಾಗುತ್ತಿರುವಂತೆ ಕಾಣುತ್ತಿದೆ. ಉಪನಿಷದ್‌ನ ಮಾತಿನ ಶೈಲಿ ಒಂದು ರೀತಿಯಲ್ಲಿ ಹೇಳಿದ್ದನ್ನೇ ಮತ್ತೆ ಮತ್ತೆ ಉದಾಹರಣೆಗಳಂತೆ ಅಲವತ್ತುಕೊಳ್ಳುತ್ತಿರುವ ರೀತಿಯಲ್ಲೇ ಕಾಣಿಸುತ್ತಿದೆ. ಈಚೆಗೆ ಹೊರ ಬಂದ ವಾಲ್ಟರ್‌ ಬೆಂಜಮಿನ್‌ ದಿನಚರಿಯ ತುಂಬಾ ಆತ ಯುರೋಪಿನ ಪಡಖಾನೆಗಳಲ್ಲಿ ಸಂಜೆ ಹೊತ್ತು ನಾಗರಿಕರು ಅಲವತ್ತುಕೊಳ್ಳುತ್ತಿರುವುದನ್ನು ತುಂಬಾ ಮಮಕಾರದಿಂದ ದಾಖಲಿಸಿದ್ದಾನೆ.

ಇಂತಹ ನೋಟಗಳು, ಈ ಪ್ರಬಂಧ ಎಲ್ಲವನ್ನೂ ಸೇರಿಸಿ ನಾನು ಒಂದು ಬೇಡಿಕೆ ಮಂಡಿಸುವವನಿದ್ದೇನೆ. ಈಗಲಾದರೂ ವಿಶ್ವಕೋಶಗಳಲ್ಲಿ, ನಿಘಂಟುವಿನಲ್ಲಿ, ಸಾಮಾಜಿಕ ಪರಿಭಾಷೆಗಳ ಕೋಷ್ಟಕದಲ್ಲಿ “ಅಲವತ್ತುಕೊಳೂವಿಕೆ”ಗೆ ಸಲ್ಲ ಬೇಕಾದ ಸ್ಥಾನಮಾನವನ್ನು ಕೊಡಲೇಬೇಕೆಂದು.