ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ.
ನಾಳೆ ಅಕ್ಷತಾ ಕೃಷ್ಣಮೂರ್ತಿಯವರ “ಇಸ್ಕೂಲು” ಅಂಕಣ ಬರಹಗಳ ಸಂಕಲನ ಬಿಡುಗಡೆಯಾಗುತ್ತಿದೆ. ಈ ಹೊತ್ತಿನಲ್ಲಿ ಇಸ್ಕೂಲಿನ ಕುರಿತ ಅವರ ಮಾತುಗಳು ನಿಮ್ಮ ಓದಿಗೆ

ಜೋಯಿಡಾದ ಕಾನನದಲ್ಲಿ ವರ್ಷದ ಆರು ತಿಂಗಳು ಮಳೆ, ಮಳೆಯ ಎಲ್ಲಾ ರೂಪಗಳನ್ನು ತೆರೆದಿಡುವ ಹಗಲು, ಮನ ತುಂಬಿ ತನ್ನದೆ ಹೊಸ ಹೊಸ ಸ್ವರ ಸಂಯೋಜನೆಯೊಂದಿಗೆ ಹರಿಯುವ ನದಿ, ಹಳ್ಳಗಳ ಸೊಬಗು, ಆಗಾಗ ಏಳುವ ಝರಿಗಳೊಂದಿಗೆ ನಿಚ್ಚ ತನಮನದಲ್ಲಿ ಅಚ್ಚಳಿಯದೆ ಉಳಿಯುವ ಜಲಪಾತಗಳ ಭೋರ್ಗರೆತ, ಇಲ್ಲಿ ಪ್ರತಿ ಕಲ್ಲು ಒಂದೊಂದು ಶಿಲ್ಪ ರೂಪ, ಕಲ್ಲರಳುವ ಸೊಬಗು ನಿತ್ಯ ನಿರಂತರ, ಇಂತಹ ತಪೋಭೂಮಿ ನನ್ನ ಜೋಯಿಡಾ. ಉತ್ತರಕನ್ನಡ ಜಿಲ್ಲೆ ಭೌಗೋಳಿಕವಾಗಿ ಬಹು ದೊಡ್ಡದಾದ ತಾಲೂಕು. ಮರಗಳೆ ಸಂಗಾತಿಗಳಾಗುವ, ಗೆಳತಿಯಾಗುವ, ಮಾತಾಡುವ, ಮೌನವಾಗುವ, ನಲಿವುಕ್ಕಿಸುವ, ಕಣ್ಣೀರೊರೆಸುವ, ಶಕ್ತಿ ತುಂಬುವ, ಹುರುಪು ಸೃಷ್ಟಿಸುವ ವಿಸ್ಮಯದ ಗೂಡು. ಜೋಯಿಡಾ ಎಂದರೆ ಪ್ರವಾಸಿ ತಾಣ, ಪ್ರೇಕ್ಷಣೀಯ ಸ್ಥಳ. ಅದರ ಜೊತೆ ಜೊತೆಗೆ ಮುಗ್ಧ ಕುಣಬಿ, ಗೌಳಿ ಮುಂತಾದ ಬುಡಕಟ್ಟು ಜನಾಂಗದ ಹಾಡು ಪಾಡು.

ಈ ಗೂಡಿನೊಳಗೆ ವಿದ್ಯಾದೇವಿಯ ಗಂಟೆ ಬಾರಿಸುತ್ತದೆ, ನಿಧಾನ ಒಂದೊಂದಾಗಿ ಶಾಲೆಯ ಬಾಗಿಲು ತೆರೆದುಕೊಳ್ಳುತ್ತದೆ, ಕಿಟಕಿಯೂ ತಾನೇ ಮುಂದಾಗಿ ತನ್ನ ತಾ ತೆರೆದುಕೊಂಡು ಬೆಳಕು ಹರಡುತ್ತದೆ. ಹರಡಿದ ಬೆಳಕಲ್ಲಿ ಎಲ್ಲ ಮುಖಗಳು ಸ್ಪಷ್ಟವಾಗಿ ಕಾಣುತ್ತವೆ. ಮುಖದ ಮೇಲಿದ್ದ ಗುರುತುಗಳು ತಮ್ಮ ಪರಿಚಯವನ್ನು ನೀಡುತ್ತವೆ, ತಮ್ಮ ಕಥೆಗಳನ್ನು ಹೇಳುತ್ತಾ ಇತಿಹಾಸ ಸೃಷ್ಟಿಸುತ್ತವೆ. ಇಂತಹ ಕಥೆಯನ್ನು ಕೇಳುತ್ತ, ಕಥೆಯ ಕೆಲವರು ಪಾತ್ರಧಾರಿಗಳಾಗುತ್ತಾರೆ, ಕೆಲವರು ಕಣ್ಣಲ್ಲಿ ತುಂಬಿಕೊಳ್ಳುತ್ತಾರೆ. ಇನ್ನೂ ಹಲವರು ಕಿವಿಯಾಗುತ್ತಾರೆ. ಕುತೂಹಲ ಬೆಳೆಸಿಕೊಳ್ಳುತ್ತಾರೆ. ವಿದ್ಯಾದೇವಿ ಇರುವಲ್ಲಿ ಸದಾ ಖುಷಿ, ನೆಮ್ಮದಿಯೆ ಇರುತ್ತದೆ. ಆತ್ಮತೃಪ್ತಿ ಕೆಲಸಗಳು ನಡೆಯುತ್ತವೆ. ಸುತ್ತ ಹರಡಿದ ಬೆಳಕಲ್ಲಿ ಕಂಡ ಮುಖಗಳು ತಮ್ಮ ತಮ್ಮ ಕಥೆ ಹೇಳುತ್ತಾ ಸರಕಾರಿ ಶಾಲೆಯ ಶಿಕ್ಷಕಿಯಾದ ನನ್ನಲ್ಲಿ ಬಂದು ಸೇರಿಕೊಳ್ಳುತ್ತವೆ. ಹೀಗೆ ಸೇರಿದ ಕಥೆಗಳು ಜೋಯಿಡಾದ ಕಾಳಿ ನದಿಯನ್ನು ಬಳಸಿ ಸುತ್ತುವರಿದು ನಿಮ್ಮೊಳಗು ದಾಖಲಾಗುತ್ತವೆ. ಇಸ್ಕೂಲು ಬಾಗಿಲು ತೆರೆಯುತ್ತದೆ. ಸೌತೆ ಬಳ್ಳಿ ಚಿಗುರುವವರೆಗೂ ಮುಂದುವರೆಯುತ್ತದೆ.

*****

ಇಂದು ನನ್ನೆಲ್ಲ ಇಸ್ಕೂಲಿನ ವಿಷಯಗಳು ತುಷಾರದಲ್ಲಿ ದಾಖಲಾಗಿ, ತುಷಾರ ಓದುಗ ಬಳಗದವರ ಮನಸ್ಸಿನಲ್ಲಿ ಜಾಗ ಪಡೆದಿವೆ. ಈಗ ಪುಸ್ತಕ ರೂಪದಲ್ಲಿ ನಿಮಗೆ ಸಿಕ್ಕಿ ಇಸ್ಕೂಲು ನಿಮ್ಮದಾಗುವ ಕಾಲಕ್ಕೆ ಬಂದು ನಿಂತಿದೆ. ಈ ಅಂಕಣ ಆರಂಭವಾದಾಗ ಅದು ಇಷ್ಟೆಲ್ಲ ಬರೆಸುತ್ತದೆ ಎಂದು ನನಗೆ ಅನಿಸಿರಲಿಲ್ಲ, ಕಾಳಿ ತೀರದ ಗೀತಗಳು, ನನ್ನ ಜೋಯಿಡಾ ತಾಲೂಕಿನ ಮಕ್ಕಳ ರೀತಿನೀತಿಗಳು ಏನನ್ನೆಲ್ಲಾ ನನಗೆ ಕಲಿಸಿಕೊಟ್ಟವು ಎಂದು ನನಗೆ ಒಮ್ಮೆ ಅಚ್ಚರಿಯಾಗುತ್ತದೆ, ನಿಜ, `ಮಕ್ಕಳಿಂದ ಕಲಿಯುವುದಿರುತ್ತದೆ’ ಎಂದು ಹೇಳಿದ ಮಾತು ಈಗ ದಕ್ಕಿತು ಅನಿಸುತ್ತದೆ. ಜೋಯಿಡಾ ಗಡಿ ತಾಲೂಕು. ಮೂಲಭೂತ ಸೌಲಭ್ಯಗಳ ಕೊರತೆ ಎದುರಿಸುತ್ತಿರುವ ತಾಲೂಕು. ಇಂದಿಗೂ ಪಟ್ಟಣ ಪಂಚಾಯತಿ ಹೊಂದಿರದ ರಾಜ್ಯದ ಏಕೈಕ ತಾಲೂಕು. ಇಲ್ಲಿನ ಬಹುತೇಕ ಹಳ್ಳಿಗಳಿಗೆ ಮಳೆಗಾಲದಲ್ಲಿ ತಲುಪಲು ಇಂದಿಗೂ ಕೂಡ ಸಾಧ್ಯವಿಲ್ಲ. ಇಂತಹ ಗಡಿ ತಾಲೂಕಿನಲ್ಲಿ ವರ್ಷದುದ್ದಕ್ಕೂ ಸಂಭ್ರಮದಿಂದ ತೆರೆದುಕೊಳ್ಳುವುದು ಸರ್ಕಾರಿ ಶಾಲೆಗಳು ಮಾತ್ರ. ಇಲ್ಲಿನ ಶಿಕ್ಷಕರು ಮೂಲಭೂತ ಸೌಲಭ್ಯದ ಕೊರತೆಯ ನಡುವೆಯೂ, ಉತ್ತಮ ದವಾಖಾನೆ ಇಲ್ಲದ ಜೋಯಿಡಾ ತಾಲೂಕಿನಲ್ಲಿ ತಮ್ಮ ಆರೋಗ್ಯ ಪಣವಾಗಿಟ್ಟು ಕೆಲಸ ಮಾಡುತ್ತಿದ್ದಾರೆ. ಕಾಡಿನ ನಡುವೆ, ಸಮಸ್ಯೆಗಳ ನಡುವೆ ಸರ್ಕಾರದ ಯೋಜನೆಗಳನ್ನು ಸಫಲಗೊಳಿಸಲು ಪ್ರಯತ್ನಿಸುತ್ತಿರುತ್ತಾರೆ. ಎಲ್ಲರಿಂದ ತಿರಸ್ಕೃತಗೊಂಡಂತಿರುವ ಈ ಜೋಯಿಡಾದಲ್ಲಿ ವರ್ಷಗಟ್ಟಲೆ ನಮ್ಮ ಶಿಕ್ಷಕರು ಅಕ್ಷರ ಬೀಜ ಸದ್ದಿಲ್ಲದೆ ಬಿತ್ತುತ್ತಿದ್ದಾರೆ. ಅವರೆಲ್ಲರ ಕೆಲಸಗಳ ಬಗ್ಗೆ ನನಗೆ ರಾಶಿ ಹೆಮ್ಮೆಯಿದೆ. ಹಾಗಾಗಿ ಈ ಕೃತಿ ನಾನು ಜೋಯಿಡಾದ ಪ್ರಾಥಮಿಕ ಹಾಗೂ ಪ್ರೌಢ ಶಾಲಾ ಶಿಕ್ಷಕರಿಗೆ ಮಾತ್ರ ಅರ್ಪಿಸಬಯಸುತ್ತೇನೆ. ಅಂಕಣ ಬರೆಯುತ್ತಿದ್ದ ಒಂದುವರೆ ವರ್ಷದ ಯಾನದಲ್ಲಿ ಇಸ್ಕೂಲಿನ ಅಂಗಳದಲ್ಲಿ ಕಂಡ ಚಿತ್ರಗಳನ್ನು ದಾಖಲಿಸಿರುವುದು ನಿಜ. ಆದರೆ ಇಸ್ಕೂಲಿನ ಹೊರಗೆ ನಿಂತು ಬರೆದವುಗಳನ್ನು ನಾವು ನೋಡುವ ರೀತಿಗಿಂತ ಭಿನ್ನವಾಗಿ ನೋಡಿದವರು ಇಸ್ಕೂಲಿನ ಓದುಗರು. ತುಷಾರದಲ್ಲಿ ಕೆಲವರಿಗೆ ಇಸ್ಕೂಲು ಬಹಳವಾಗಿ ತೆರೆದುಕೊಂಡರೆ, ಇನ್ನೂ ಕೆಲವರಿಗೆ ಏನೂ ಕಾಣದೆ ಕೂಡ ಹೋಗಿರಬಹುದು.

ಆದರೂ `ಚಂದ ಬರುತ್ತಿದೆ, ಬರಿ. ಈ ಅನುಭವವೇ ಹೊಸದು. ಜೊತೆಗೆ ಕವಿತೆ ಕಥೆ ಬರೆಯುವುದನ್ನು ನಿಲ್ಲಿಸಬೇಡ’ ಎಂದು ಎಚ್ಚರಿಸಿದ ಮಿತ್ರರಿದ್ದಾರೆ. `ಬೇಗ ಇಸ್ಕೂಲಿನ ಅಂಕಣಗಳ ಸೇರಿಸಿ ಪುಸ್ತಕ ಮಾಡಿ ಕೊಡು’ ಎಂದು ಕೇಳುವ ಜೀವಗಳಿವೆ. `ನಮ್ಮೆಲ್ಲರ ಬಾಲ್ಯ ನೆನಪಿಸಿತು’ ಎಂದು ಓದುವ ಓದುಗರಿದ್ದಾರೆ. ಸಕ್ಕರೆ ಕಾಯಿಲೆಯಿಂದ ದೃಷ್ಟಿ ದೋಷ ಅನುಭವಿಸುತ್ತಿದ್ದಾಗಲೂ ಮನೆಗೆ ಬಂದ ಅತಿಥಿಗಳಿಂದ ಇಸ್ಕೂಲು ಓದಿಸಿಕೊಂಡು ಪ್ರತಿ ತಿಂಗಳು ಫೋನಾಯಿಸುವ ಕಸ್ತೂರಿ ಬಾಯೇರಿ ಅವರಂತಹ ಹಿರಿಯ ಲೇಖಕಿಯ ಮಾತುಗಳು, ಇಸ್ಕೂಲನ್ನು ಪ್ರತಿ ತಿಂಗಳು ಓದಿ, ಕಥೆಯ ರೂಪದಲ್ಲಿ ತನ್ನ ಮೊಮ್ಮಕ್ಕಳಿಗೆ ಹೇಳುವ ಅದೆಷ್ಟೊ ಜನ ಅಮ್ಮಂದಿರ ಮೇಲ್‌ಗಳು, `ಓದುತ್ತಾ ಹೋದರೆ ಬೇರೆಯದೆ ಅನುಭೂತಿ ನೀಡಿ ನೆಮ್ಮದಿ ಸಿಗುತ್ತದೆ’ ಎನ್ನುವ ಬರಹಗಾರರು, ಶಿಕ್ಷಕರು, ಖಾಸಗಿ ಬಸ್ ಚಾಲಕರು, ಕಂಡೆಕ್ಟರಗಳು, ಬ್ಯಾಂಕಿನವರು, ವೈದ್ಯರು… ಬರೆಯುತ್ತ ಹೋದರೆ ದೊಡ್ಡದಾಗಿ ಬೆಳೆಯುವ ಅನೇಕ ವೃತ್ತಿಯ ಓದುಗರು ಬಹುಬಗೆಯಾಗಿ ಪ್ರತಿ ತಿಂಗಳು ಮೇಲ್ ಮೂಲಕ ಪತ್ರ ಬರೆಯುತ್ತಿದ್ದಾರೆ. ಫೋನ್ ನಂಬರ್‌ ಸಿಕ್ಕಿದರೆ ಫೋನಾಯಿಸುತ್ತಾರೆ, ಮೇಸೆಜಿಸುತ್ತಾರೆ. ಕೊನೆ ಕೊನೆಗೆ ಕರ್ನಾಟಕದ ದೂರದೂರುಗಳಿಂದ ಇಸ್ಕೂಲಿನ ಮುಖಗಳನ್ನು ನೋಡಲು, ರಾಧಕ್ಕೋರನ್ನು ನೋಡಲು ಬಂದ ಅನೇಕ ಶ್ರೀಮಂತ ಮನಸುಗಳ ಪ್ರೀತಿಗೆ ಏನೆನ್ನಲಿ. ಇವರೆಲ್ಲರ ಹೆಸರು ಇಸ್ಕೂಲಿನ ಅಂಗಳ ಖಂಡಿತ ಮರೆತಿಲ್ಲ. ಅವರೆಲ್ಲರ ಒಂದೊಂದು ಪತ್ರ ಬಂದಾಗ ಆಗುವ ಖುಷಿಯನ್ನು, ಮಕ್ಕಳೆದುರು ಪತ್ರ ಓದಿ, ಮಕ್ಕಳೊಂದಿಗೆ ನಾನು ರೋಮಾಂಚಿತಳಾಗುವ ಘಳಿಗೆಯ ಸುಖವನ್ನು ಉಂಡಿದ್ದೇನೆ. ತುಷಾರದಲ್ಲಿ ಮಕ್ಕಳು ತಮ್ಮ ಫೋಟೋಗಳನ್ನು ನೋಡಿ ಕಣ್ಣರಳಿಸುವ ವಿಸ್ಮಯದ ಅವ್ಯಕ್ತ ಭಾವವನ್ನು ಅನುಭವಿಸಿದ್ದೇನೆ. ನನ್ನೂರು ಅಂಕೋಲೆಯ ಬೇಲೇಕೇರಿಗೆ ಹೋದಾಗ `ನಿನ್ನ ಅಮ್ಮನ ನಮೂನಿಯೆ ಲೈಕ್ ಮಾಸ್ತರ್ಣಿ ಆಗಿಬಿಟ್ಟಿ’ ಎಂದಾಗ ಅಮ್ಮನ ಮಡಿಲಿನ ಗುಬ್ಬಿಮರಿಯಾಗಿ ಬಿಡುತ್ತೇನೆ. ಇಸ್ಕೂಲು ಬರಿ ಅಂಕಣವಲ್ಲ ನನಗೆ. ನನ್ನ ವೃತ್ತಿ ಮತ್ತು ಪ್ರೀತಿ ಅದು. ನನ್ನ ಸುತ್ತ ಮುತ್ತ ಓಡಾಡುವ ಚಿಗರೆ ಕಣ್ಣಿನ ಮಕ್ಕಳ ಭರವಸೆ ಅದು. ಅಂದಹಾಗೆ, ಇಸ್ಕೂಲು ಅಂಕಣ ಮುಗಿದು ಈ ಪುಸ್ತಕ ಪ್ರಕಟವಾಗುವ ಹೊತ್ತಿನವರೆಗೆ ನನ್ನ ಶಾಲೆಗೆ ಸಹಾಯ ಮಾಡುತ್ತಿರುವ ಮನಸುಗಳ ಪ್ರೀತಿಗೆ ರಾಶಿ ಧನ್ಯವಾದ. ಇಸ್ಕೂಲನ್ನು ನೋಡಲು ಬೆಳಗಾವಿ, ಠಾಣಾ, ಬೆಂಗಳೂರಿನಿಂದ ಬರುವ ಹೂ ಮನಸುಗಳ ಪ್ರೀತಿಗೆ ಅಣಶಿ ಹಾಗೂ ನಾನು ಋಣಿಯಾಗಿದ್ದೇವೆ.

*****

ಈ ಸಂದರ್ಭದಲ್ಲಿ ವಿಶೇಷವಾಗಿ ಕೆಲವರಿಗೆ ಧನ್ಯವಾದ ಹೇಳಲೇಬೇಕು. ಅವರೆಲ್ಲ ನನ್ನ ಶಾಲೆಗೆ ಸಹಾಯ ಮಾಡಿದವರು. ಇಸ್ಕೂಲು ಅಂಕಣ ಓದಿ ಶಾಲೆಗೆ ಏನಾದರೂ ನೆರವು ಬೇಕೆ ಎಂದು ಕೇಳಿದವರು. ಅವರೆಲ್ಲರ ಮೂಲಕ ಇಂದು ಸುಮಾರು 23,000 ರೂ. ಮೌಲ್ಯದ ಪುಸ್ತಕಗಳು ನನ್ನ ಶಾಲೆಯ ಗ್ರಂಥಾಲಯಕ್ಕೆ ಸೇರಿವೆ. ಇವೆಲ್ಲ ಪುಸ್ತಕಗಳನ್ನು ಮಕ್ಕಳು ಓದುವಂತಹದ್ದು, ಮಕ್ಕಳ ಜ್ಞಾನ ಹೆಚ್ಚಿಸುವ ಪುಸ್ತಕಗಳಿವು. ಇಸ್ಕೂಲನ್ನು ಓದಿ ದೂರದ ಕೋಲಾರದಿಂದ ಇಸ್ಕೂಲು ನೋಡಲು ಬಂದ ಬಂದ ನಿವೃತ್ತಿ ಜೀವನ ನಡೆಸುತ್ತಿರುವ ವೇಣುಗೋಪಾಲ, ಬೆಂಗಳೂರಿನ ಸಂಜಯ ಹಾಗೂ ಅವರ ಮಗ ತೇಜಸ್ವಿ ಶಾಲೆಗೆ ಬಂದು ಇಸ್ಕೂಲಿನೊಂದಿಗೆ ಮನದಣಿಯೆ ಮಾತಾಡಿಹೋಗಿದ್ದಾರೆ. ಇನ್ನೂ ಅನೇಕ ಶಿಕ್ಷಕರು ಶಾಲೆಗೆ ಬರುವವರಿದ್ದಾರೆ.

ತುಷಾರಕ್ಕಾಗಿ ಕಾಯುತ್ತಾ ಸಿಕ್ಕಿದ ಕೂಡಲೆ ಇಸ್ಕೂಲನ್ನು ಮೊಟ್ಟ ಮೊದಲು ತೆರೆದು ನೋಡುವ ಸಹೃದಯರು ಬಹಳಷ್ಟು ಜನರಿದ್ದಾರೆ. ನನ್ನ ಜಿಲ್ಲೆಯವರು, ಜಿಲ್ಲೆಯ ಹೊರಗಿನವರು, ರಾಜ್ಯದ ಹೊರಗಿನವರು… ಹೀಗೆ ಅನೇಕರು. ಇಸ್ಕೂಲನ್ನು ಓದುವುದಕ್ಕಾಗಿಯೆ ತುಷಾರ ಚಂದಾದಾರರಾದವರು ನನ್ನ ಕಣ್ಣೆದುರು ಇದ್ದಾರೆ. ನಿಮ್ಮೆಲ್ಲರ ಇಂತಹ ಪ್ರೀತಿಗೆ ಏನೆನ್ನಲಿ. ಧನ್ಯವಾದವೆಂದರೆ ಕಡಿಮೆ ಅನಿಸುತ್ತೆ. ನಿಮ್ಮ ಅಮೂಲ್ಯ ಸಮಯ ಮೀಸಲಿಟ್ಟು ಪ್ರತಿಬಾರಿ ಇಸ್ಕೂಲನ್ನು ಓದಿ ಮೇಲ್ ಕಳಿಸುವ ನಿಮ್ಮ ಮನಸ್ಸಿಗೆ ಶರಣು.

ಪುಸ್ತಕ ಪ್ರಕಟವಾಗುತ್ತಿರುವ ಈ ಹೊತ್ತಿನವರೆಗೂ ಇಸ್ಕೂಲು ನೋಡಲು ಬರುವವರ ಪಟ್ಟಿಯಿದೆ. ಇಸ್ಕೂಲು ಅವರಿಗಾಗಿ ಸದಾ ಕಾಯುತ್ತಿರುತ್ತದೆ. ಇಸ್ಕೂಲು ಪ್ರಕಟ ಮಾಡಿದ ಜನ ಪ್ರಕಾಶನಕ್ಕೆ ಈ ಸಂದರ್ಭದಲ್ಲಿ ವಂದಿಸುತ್ತೇನೆ. ಪುಸ್ತಕವನ್ನು ನೀವೆಲ್ಲ ಕೊಂಡು ಓದುವಿರಿ ಎಂಬ ನಂಬಿಕೆ ಖಂಡಿತ ಇದೆ. ರಾಶಿ ಧನ್ಯವಾದಗಳು ನಿಮಗೆ.

-ಅಕ್ಷತಾ ಕೃಷ್ಣಮೂರ್ತಿ

ಬಾವುಟ ಹಾರುವ ಹೊತ್ತು

ಉತ್ತರಕನ್ನಡ ಜಿಲ್ಲೆಯ ದಟ್ಟ ಅರಣ್ಯ ಗಡಿ ತಾಲೂಕು ಜೋಯಿಡಾದ ಬೇರೆ ಬೇರೆ ಹಳ್ಳಿಯಲ್ಲಿ ರಾಷ್ಟ್ರೀಯ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸುತ್ತಾರೆ. ಕನ್ನಡ ಹಾಗೂ ಮರಾಠಿ ಮಾಧ್ಯಮದ ಗಡಿಭಾಗದ ಶಾಲೆಗಳಾಗಿರುವ ಕಾರಣದಿಂದ ಶಾಲೆಯ ಹಬ್ಬಗಳು, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಮಾತ್ರ ಸೀಮಿತವಾಗಿರದೆ ಆ ಇಡೀ ಊರಿಗೆ ಊರೇ ಸಂಭ್ರಮದಿಂದ ತಯಾರಿಗೊಳ್ಳುತ್ತದೆ. ಗಣರಾಜ್ಯ ದಿನಾಚರಣೆಗೆ ಒಂದು ವಾರದ ಹಿಂದಿನಿಂದಲೂ ತಯಾರಿ ಜೋರಾಗಿರುತ್ತದೆ. ಕರ್ನಾಟಕದ ನಕಾಶೆಯಲ್ಲಿ `ಕಾಳಿ ಹುಲಿ ಸಂರಕ್ಷಿತ ಪ್ರದೇಶ’ವೆಂದು ಗುರ್ತಿಸಿಕೊಂಡ `ಅಣಶಿ’ ಊರಿನ ಶಾಲೆಯಲ್ಲಿ ಆ ದಿನ ಹೊಸ ಸಂಭ್ರಮ ಪ್ರತಿ ಬೆಳಕಿನ ಕಿರಣದಲ್ಲೂ ಅಡಗಿದೆ. ಸುತ್ತ ಹಸಿರು ಗುಡ್ಡ, ಒತ್ತೊತ್ತಾದ ಮರಗಳ ನಡುವೆ ಸಣ್ಣ ಮೈದಾನ ಹೊಂದಿದ ಆ ಶಾಲೆಯ ಎದುರಿಗೆ ಗ್ರಾಮ ಪಂಚಾಯತಿ ಇದೆ. ಕುಣಬಿಗಳು, ದೇಸಾಯಿಗಳು, ಮಡಿವಾಳರು ಒಂದೆರಡು ಮುಸ್ಲಿಂ ಕುಟುಂಬಗಳು ಪ್ರೀತಿಯಿಂದ ವಾಸಿಸುವ ಹಳ್ಳಿ ಇದು. ಇಂತಿರ್ಪ ಕನ್ನಡ ಶಾಲೆಯಲ್ಲಿ ಹಬ್ಬ ಬಂತೆಂದರೆ ಶಿಕ್ಷಕರೇ ವಿದ್ಯಾರ್ಥಿಗಳಾಗಿ ತಯಾರಿಯಲ್ಲಿ ತೊಡಗಿಬಿಡುತ್ತಾರೆ. ಸರ್ಕಾರದಿಂದ ಶಾಲೆಗೆ ಸಿಗುವ ಅನುದಾನ ಕಡಿಮೆಯಿರುವುದರಿಂದ ಮಾಸ್ತರುಗಳು, ಬಾಯೋರು ಸೇರಿ ಹೆಡ್ ಬಾಯೋರ ಸಮ್ಮುಖದಲ್ಲಿ ಧ್ವಜದ ಕಟ್ಟೆಯ ಮುಂದೆ ಕುಳಿತು ಸಣ್ಣ ಮೀಟಿಂಗ್ ನಡೆಯುತ್ತದೆ. ಇರುವ ಹಣದಲ್ಲಿ ಶಾಲೆಗೆ ಸುಣ್ಣ ಬಣ್ಣ ಬಳಿಯಬೇಕಾಗಿದೆ. ಹಳ್ಳಿಯ ಕಡೆಗೆಲ್ಲ ಕಟ್ಟಡಕ್ಕೆ ಬಣ್ಣ ಮಾಡಿಕೊಡುವವರು ಬಹಳ ಕಡಿಮೆಯಿರುವುದರಿಂದ ತುರ್ತಾಗಿ ಬಣ್ಣ ಬಳಿಯಲು ಸಿಕ್ಕವರು ಸಿಕ್ಕಾಪಟ್ಟೆ ಹಣ ಕೇಳುತ್ತಾರೆ. ಹೀಗಾಗಿ, ಏಳನೆಯ ವರ್ಗದ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ತಾವೇ ಬಣ್ಣ ಬಳಿದು ಒಂದೊಂದೇ ಕೋಣೆಯನ್ನು ಮಕ್ಕಳಿಗೆ ಇಷ್ಟವಾದ ಬಣ್ಣದಿಂದಲೇ ಶೃಂಗರಿಸಿ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತಾರೆ. ಹಣ ಉಳಿತಾಯವಾಗಿದೆ ಎಂದು ಹೆಡ್ ಬಾಯಿ ಕೂಡ ಖುಷಿಯಾಗಿದ್ದಾರೆ.

ಮೊನ್ನೆ ತಾನೆ ಸಂಕ್ರಾಂತಿಯ ಎಳ್ಳು, ಬೆಲ್ಲ, ಚಿರಮುರಿ ಹಂಚಿ ಖುಷಿಯಲ್ಲಿದ್ದ ಊರಿನ ಹಿರೀಕರೆಲ್ಲ ಗಣರಾಜ್ಯ ದಿನಾಚರಣೆ ಹತ್ತಿರ ಬರುತ್ತಿದೆ ಎಂದೇ ಅವರ ವೈಯಕ್ತಿಕ ಕೆಲಸ ಕಾರ್ಯ ಬೇಗ ಮುಗಿಸಿಕೊಳ್ಳುತ್ತಾರೆ. ಎಸ್.ಡಿ.ಎಮ್.ಸಿ ಸದಸ್ಯರು ಹಾಗೂ ಪಾಲಕರು ಮಕ್ಕಳ ಜೊತೆಗೂಡಿ ಶಾಲಾ ಆವರಣ ಸ್ವಚ್ಛತೆಯ ಕೆಲಸ ಮಾಡಿದರೆ, ಅಡುಗೆಯವರು ತಲೆಗೊಂದು ಟೋಪಿ ತೊಟ್ಟು ಏಪ್ರಾನ್ ಹಾಕಿಕೊಂಡು, ಬಳಸದೇ ಇದ್ದ ದೊಡ್ಡ ಪಾತ್ರೆಗಳನ್ನೆಲ್ಲ ತೊಳೆಯುತ್ತಿದ್ದಾರೆ. ಕಳೆದ ರವಿವಾರ ಊರಿಗೆ ಹೋಗಿದ್ದ ಮೋಹನ ಸರ್ ಖುಷಿಯಿಂದ ಮೂವರಿಗೂ ದೊಡ್ಡ ಟೋಪಿ ತಂದು ಕೊಟ್ಟಿದ್ದಾರೆ. ಒಂದೇ ನಮೂನಿಯ ಮೂರು ಟೋಪಿಗಳು ಅದಲು ಬದಲಾಗಬಾರದು ಎಂದು ಬೇರೆ ಬೇರೆ ರೀತಿ ಬಣ್ಣದ ದಾರದಿಂದ ಹೊಲಿದುಕೊಂಡಿದ್ದಾರೆ. ಮುಖ್ಯ ಮತ್ತು ಸಹಾಯಕ ಅಡುಗೆಯವರ ಈ ಟೋಪಿಗಳು ಹೊಸತಾಗಿರುವುದರಿಂದ ಬಣ್ಣ ಎದ್ದು ಕಂಡು ಅವರ ಮುಖವು ಒಂದು ನಮೂನಿ ಹೊಳೆಯುತ್ತಿದೆ. ತಾಲೂಕು ಪಂಚಾಯಿತ ಅನುದಾನದಿಂದ ಕಟ್ಟುತ್ತಿರುವ ಹೊಸ ವರ್ಗಕೋಣೆಯ ಕಟ್ಟಡ ಕೆಲಸಕ್ಕೆ ತಂದ ಕಂಬಗಳ ಮೇಲೆ ಮೋಹನ ಮಾಸ್ತರರ ದೃಷ್ಟಿ ಬಿದ್ದಿದೆ.

ಧ್ವಜದ ಸುತ್ತ ಕಂಬ ನೆಟ್ಟು ಪತಾಕೆ ಹಚ್ಚಲು ಎರಡು ದಿನದ ಮಟ್ಟಿಗೆ ಕಂಬ ಬೇಡಿ ಪಡೆದಿದ್ದಾರೆ. ತರಗತಿಯ ದೊಡ್ಡ ಹುಡುಗರು ದೇಸಾಯಿ ಮನೆಯಿಂದ ಎರಡು ಮೂರು ಹಾರೆ ತಂದು ಹೊಂಡ ತೆಗೆದು ಕಂಬ ನೆಟ್ಟು ಕಂಬ ಗಟ್ಟಿಯಾಗಿದೆಯೆ ಎಂದು ಪರೀಕ್ಷಿಸಲು ಮಲ್ಲ ಕಂಬದ ಮೊದಲ ಪಾಠ ಕಲಿತಿದ್ದಾಗಿದೆ. ಹಳೆ ವಿದ್ಯಾರ್ಥಿ ಸಂಘದ ವಿದ್ಯಾರ್ಥಿಗಳೆಲ್ಲ ಬಂದು ಬಾಯೋರಿಗೆ `ತಮ್ಮಿಂದ ಏನಾದರೂ ಕೆಲಸವಾಗಬೇಕೇ?’ ಎಂದು ಪ್ರಶ್ನಿಸಿದ್ದಾರೆ. ರಾಧಕ್ಕೋರು ನಗುತ್ತ ಅವರಿಗೊಂದು ಚಂದದ ಕೆಲಸ ಹೇಳಿದ್ದಾರೆ. ಊರಿನ ಸುತ್ತ ತಿರುಗಿ ಬಿದ್ದ ಸಗಣಿಯನ್ನೆಲ್ಲ ಆರಿಸಿ ತಂದು ಧ್ವಜ ಕಟ್ಟೆಯ ಸುತ್ತ ಸಾರಿಸಲು ಸೂಚಿಸಿದ್ದಾರೆ. ಆ ಕೆಲಸವನ್ನು ಮಾಡಲು ಖುಷಿಯಿಂದಲೇ ಹಳೆ ವಿದ್ಯಾರ್ಥಿಗಳು ತೆರಳಿದ್ದಾರೆ. ಅವರ ಕೈಯಲ್ಲಿ ಖಾಲಿಯಾದ ಬಣ್ಣದ ಡಬ್ಬಗಳಿವೆ. ಪೇಯಿಂಟ್ ತುಂಬಿದ್ದ ಖಾಲಿಯಾದ ಆ ಡಬ್ಬಗಳು ಬಕೇಟುಗಳಾಗಿ ಮಕ್ಕಳ ಕೈಯಿಂದ ಜಾರಿ ಬಿದ್ದರೂ ಒಡೆಯದೆ ಬಹುಕಾಲ ಬಾಳಿಕೆ ಬರುವಂತದು ಎಂದು ತಿಳಿದ ಕಾರಣದಿಂದ ಬಾಯೋರು ಮಕ್ಕಳಿಗೆ ಬಳಸಲು ಅಂತಹ ಹಳೆಯ ಬಕೇಟುಗಳನ್ನೇ ಕೊಡುತ್ತಾರೆ. ಮೂರನೆಯ ವರ್ಗದ ಸ್ನೇಹ ವೇಳಿಪ, ಗಿಡಕ್ಕೆ ನೀರು ಹಾಕುತ್ತೇನೆ ಎಂದು ಮೂರು ಬಕೇಟು ಒಡೆದದ್ದು, ಅಕ್ಕೋರಿಗೆ ತಲೆಬಿಸಿ ಆಗಿದ್ದು ಎಲ್ಲ ಮಕ್ಕಳಿಗೆ ಅರಿವಿದೆ. ಮಕ್ಕಳೆಲ್ಲ ಸೇರಿ ಕೆಲಸ ಮಾಡುವಾಗ ಇಂತಹ ಬಕೇಟುಗಳ ಅಗತ್ಯ ತೀರಾ ಇದೆ ಎಂಬುದು ಎಲ್ಲರಿಗೂ ಮನವರಿಕೆಯಾಗಿದೆ. ಊರಿನ ಸುತ್ತ ಬಿದ್ದ ಎಲ್ಲ ಸೆಗಣಿ ಹೆಕ್ಕಿ ಹಳೆಯ ವಿದ್ಯಾರ್ಥಿಗಳು ಹಾಡು ಹೇಳುತ್ತ ಸಾರಿಸಲು ಶುರು ಮಾಡಿದ್ದಾರೆ. `ದಶಮಿಚ ಫೂಲಗೋ ಮಗೇಲ್ ಬೈಣ ರೂಪಾಗೋ’ ಎಂದು ಒಬ್ಬೊಬ್ಬರ ಹೆಸರು ಹೇಳುತ್ತ ಮುಂದುವರೆಯುವ ಕುಣಬಿಗಳ ಸಾಂಪ್ರದಾಯಿಕ ಹಾಡು ಶ್ರಮ ಸಂಸ್ಕೃತಿಯನ್ನು ಎತ್ತಿ ಹಿಡಿಯುತ್ತದೆ. ರಾಧಕ್ಕೋರು ಕೂಡ ಮಕ್ಕಳ ಜೊತೆ ಹಾಡುತ್ತ ಹಿಡಿಯನ್ನು ತಿರುಗಿಸುತ್ತ ಮಣ್ಣಿನಂಗಳಕ್ಕೆ ಸಗಣಿಯ ಮೆತ್ತುತ್ತ ಖುಷಿಯನ್ನು ಹೆಚ್ಚಿಸುತ್ತಿದ್ದಾರೆ. ಮಕ್ಕಳ ಖುಷಿ ಕಂಡು ಸಗಣಿಯೂ ತನ್ನ ವಾಸನೆ ಮರೆತಂತಿದೆ. ಧ್ವಜದ ಕಟ್ಟೆ ಹಾಗೂ ಕಂಬಗಳು ಏಳನೇ ವರ್ಗದವರ ಕೈ ಸ್ಪರ್ಷಕ್ಕೆ ಪುಳಕಗೊಂಡು ಬಿಳಿ ಬಣ್ಣ ಮೆತ್ತಿಕೊಂಡಿದೆ.

ಆರನೆಯ ವರ್ಗದ ನಾಗವೇಂದ್ರ ಹಾಗೂ ಅವನ ಗೆಳೆಯರು ಶಾಲೆಯ ಆವರಣದಲ್ಲಿರುವ ಮಾವಿನ ಮರದ ಎಲೆಯನ್ನು ಹೊತ್ತು ತರುತ್ತಿದ್ದಾರೆ. ಶಾಲೆಯ ಸುತ್ತ ಮಾವಿನ ತೋರಣ ಹಾಕುವ ಅವರ ಯೋಜನೆಗೆ ರಾಧಕ್ಕೋರು ಬೆಂಬಲ ವ್ಯಕ್ತಪಡಿಸಿದ್ದಾರೆ. ಆರನೆಯ ವರ್ಗದ ಕನ್ನಡ ವಿಷಯದಲ್ಲಿ ಇರುವ `ಮಲ್ಲಜ್ಜನ ಮಳಿಗೆ’ ಎಂಬ ಪಾಠದ ರೀತಿಯಲ್ಲಿ ಇರುವ ಅಂಗಡಿಯಂತೆ ಒಂದೇ ಒಂದು ಅಂಗಡಿ ಅಣಶಿಯಲ್ಲಿಯೂ ಇದೆ. ಅಲ್ಲಿ ತೋರಣ ಕಟ್ಟಲು ಬೇಕಾದ ಸುತ್ಲಿ ಬಳ್ಳಿಯೂ ಸಿಗುತ್ತದೆ. ಬಣ್ಣದ ಕಾಗದಗಳು ಸಿಗುತ್ತವೆ. ಎಲ್ಲ ಒಂದೇ ಅಂಗಡಿಯಲ್ಲಿ ಲಭ್ಯ. ಆ ರಾಮಚಂದ್ರ ಕಾಜೂಗಾರನ ಅಂಗಡಿ ಅಣಶಿಯಲ್ಲಿಯೇ ಫೇಮಸ್. ಅಲ್ಲಿ ಸಿಗುವ ಬಣ್ಣದ ಕಾಗದಗಳು ಕೂಡ ಮೂರೇ ಬಣ್ಣದಲ್ಲಿ ಸಿಕ್ಕಿ ಸುತ್ತಲೂ ಪರಪರೆ ಹಚ್ಚಲು ಸಾಕಾಗದೆ ಚೂರು ಬೇಜಾರಾಗಿದೆ. ಮಕ್ಕಳ ಬೇಜಾರಿಗೆ ರಾಧಕ್ಕೋರು ಒಂದು ಪರಿಹಾರ ಸೂಚಿಸಿದ್ದಾರೆ. ಅಣಶಿಯ ಮೂಲಕ ಹಾದುಹೋಗುವ ಸಹೇಲಿ ಟೇಂಪೋದ ಮಾಲೀಕ ಹಾಗೂ ಚಾಲಕ ಅನ್ವರ ಬಯ್ಯಾನಿಗೆ ಹೇಳಿದರೆ ಅವನು ತಂದು ಮುಟ್ಟಿಸುತ್ತಾನೆಂಬ ನಂಬಿಕೆ ಇದೆ. ದಾಂಡೇಲಿಯಿಂದ ಉಳವಿ ಮಾರ್ಗವಾಗಿ ಅಣಶಿಯಿಂದ ಕಾರವಾರಕ್ಕೆ ಹಾದು ಹೋಗುವಾಗ ನಡುವೆ ಸಿಕ್ಕ ಹಳ್ಳಿಗರಿಗೆ ಅವಶ್ಯವಿದ್ದ ಕೆಲವು ಸಾಮಾನು, ಔಷಧಿಗಳನ್ನು ಅವನೇ ತಂದುಕೊಡುತ್ತಾನೆ. ಅವನ ಈ ಸೇವೆ ಮಕ್ಕಳಿಗೆ ಬಣ್ಣ ಬಣ್ಣದ ಕಾಗದ ತಂದು ಕೊಡುವಲ್ಲಿಯವರೆಗೆ ಮುಂದುವರೆದಿದೆ. ಏಳನೆಯ ವರ್ಗದ ಹುಡುಗಿಯರೆಲ್ಲ ಕಾಗದವನ್ನು ಮಡಚಿ ಚಂದವಾಗಿ ಕತ್ತರಿಸುತ್ತಿದ್ದಾರೆ. ರಾಧಕ್ಕೋರು ಅವರಿಗೆ ಪರಪರೆ ಕತ್ತರಿಸುವ ವಿಧಾನ ಹೇಳಿಕೊಟ್ಟಿದ್ದಾರೆ. ಇನ್ನು ಕೆಲವು ಹುಡುಗಿಯರು ಕಂಬಕ್ಕೆ ದಾರವನ್ನು ಕಟ್ಟಿ ಅಡುಗೆಯವರು ಮಾಡಿಕೊಟ್ಟ ಮೈದಾ ಹಿಟ್ಟಿನ ಅಂಟನ್ನು ನಾಜೂಕಾಗಿ ಬಣ್ಣದ ಹಾಳೆಗೆ ಹಾಕಿ ಕಟ್ಟಿದ ದಾರಕ್ಕೆ ಅಂಟಿಸುತ್ತಿದ್ದಾರೆ. ಎಂತಹ ಮರವನ್ನಾದರು ಕ್ಷಣ ಮಾತ್ರದಲ್ಲಿ ಮೇಲೇರುವ ಪ್ರಜ್ವಲ್ ಹಾಗು ಪ್ರವೀಣ ನೆಟ್ಟ ಕಂಬ ಹತ್ತುವುದರಲ್ಲೂ ಮುಂದೆ. ಕಂಬದ ತುದಿಯವರೆಗೂ ಹತ್ತಿ ಪರಪರೆಯ ದಾರ ಕಟ್ಟುವರು. ಹೆಡ್ ಬಾಯೋರು `ನಿಧಾನ ಹತ್ತು, ನಿಧಾನ’ ಎಂದು ಹೆದರಿಕೆಯನ್ನು ಹೊತ್ತಿದ್ದಾರೆ. ಆದರೆ ರಾಧಕ್ಕೋರು ಮಕ್ಕಳ ಮರ ಹತ್ತುವ ಕೌಶಲ್ಯ ಹತ್ತಿರದಿಂದ ಕಂಡವರು. ಖಂಡಿತ ಅವರು ಬೀಳಲಾರರು ಎಂಬ ನಂಬಿಕೆ ಅವರಿಗಿದೆ. ಅಷ್ಟೇ ಅಲ್ಲ, ಅನೇಕ ಸಲ ಮರ ಹತ್ತುವ ಆಟವನ್ನು ಕೂಡ ರಾಧಕ್ಕೋರು ಮಕ್ಕಳಿಗೆ ಆಡಿಸಿದ್ದಿದೆ. ಹುಡುಗಿಯರು ಪರಪರೆ ಅಂಟಿಸಿದ ದಾರವೀಗ ಕಂಬದ ತುದಿಯೇರಿ ನಗುತ್ತಿದೆ. ಮಕ್ಕಳ ಕಣ್ಣಲ್ಲಿ ಆಕಾಶಕ್ಕೊಂದು ತೂಗುಸೇತುವೆ ಕಟ್ಟಿದ ರೀತಿಯಲ್ಲಿ ಅದು ಕಂಡು ಹಾರಿ ಹಾರಿ ಕುಣಿಯುತ್ತಿದ್ದಾರೆ. ಪರಪರೆಯ ಚಪ್ಪರ ಶಾಲೆಗೊಂದು ಹೊಸ ಮೆರಗು ತಂದಿದೆ. ಸಣ್ಣ ಗಾಳಿ ಬಂದಾಗ ಪರಪರೆಯು ಅಲುಗಿ ಪಿಸುಮಾತನಾಡುತ್ತದೆ. ಇದೆಲ್ಲ ಸಡಗರ ತನ್ನಿಂದ ಎಂದು ಧ್ವಜದ ಕಟ್ಟೆಯೂ ಜಂಭ ತೋರುತ್ತಿದೆ.

ಶಾಲೆಯ ಚಿತ್ರ ಕಲಾವಿದರ ಕೈಯಲ್ಲೀಗ ಬಿಳಿ ಬಣ್ಣದ ಶೇಡಿಯ ಗಟ್ಟಿಗಳು. ಶೇಡಿಯನ್ನು ನೀರಿನಲ್ಲಿ ಕಲಿಸಿ ಅಡಿಕೆ ಸಿಪ್ಪೆಯ ಸಹಾಯದಿಂದ ಗೆರಕಿ( ನಾಲ್ಕು ರೇಖೆ ಒಂದೇ ಬಾರಿ ಮೂಡಿಸಲು ತಯಾರಿಸಿಕೊಂಡ ಬೆರಳಿನಾಕಾರದಂತೆ ಕಾಣುವ ಬ್ರಷ್) ತಯಾರಿಸಿಕೊಂಡು ಅಂಗಳದ ತುಂಬ ಹಲಿ ಹಾಕುತ್ತಿದ್ದಾರೆ. ಯಾವುದೇ ಖರ್ಚಿಲ್ಲದೇ ಅಣಶಿಯಲ್ಲಿ ಸಿಗುವ ಶೇಡಿಯಿಂದ(ಒಂದು ರೀತಿಯ ಬಿಳಿ ಮಣ್ಣು) ಮಕ್ಕಳು ಚಿತ್ರ ರಚಿಸುತ್ತಿದ್ದಾರೆ. ಅದು ಒಣಗಿದ ನಂತರ ಬಿಳಿ ಬಣ್ಣ ಅಚ್ಚಾಗಿ ಕಂಡು ಹಲಿ(ರಂಗೋಲಿ) ಎದ್ದು ಕಾಣುತ್ತದೆ. ರಾಧಕ್ಕೋರು ಈ ಹಿಂದೆಯೇ ಹಲಿ ತೆಗೆಯುವ ವಿಧಾನ ಕಲಿಸಿದ್ದಾರೆ. ಟಾಟಾ ಫೆಲೋಶಿಫ್ ಪಡೆದ ಹೊನ್ನಾವರದ ಹನುಮಿ ಗೌಡ ಶೇಡಿ ಬಳಸಿ ಚಂದದ ಚಿತ್ರ ತೆಗೆಯುತ್ತಾರೆ. ಅವರ ಜಾನಪದ ಕಲೆಗೆ ಹಲವಾರು ಪ್ರಶಸ್ತಿ ಅವರನ್ನು ಅರಸಿ ಬಂದಿದೆ. ಹನುಮಿಯವರಿಂದ ಹಲಿ ತೆಗೆಯುವುದನ್ನು ಕಲಿತ ರಾಧಕ್ಕೋರು ಅಣಶಿ ಶಾಲೆಯ ಎಲ್ಲ ಮಕ್ಕಳಿಗೆ ಹಲಿ ತೆಗೆಯುವುದನ್ನು ಕಲಿಸಿದ್ದಾರೆ. ಮಕ್ಕಳ ಕಲಿಕೆಯ ಫಲವೀಗ ಜನವರಿ ಇಪ್ಪತ್ತೈದರಿಂದಲೇ ದಾಖಲಾಗುತ್ತಿದೆ. ಶಾಲೆಯ ಚಿಟ್ಟಿ ಮೇಲೆ ಹಲಿ ಮೈ ಅರಳಿಸಿಕೊಂಡು ಕಣ್ಣು ಹೊಡೆಯುತ್ತಿದೆ.

ಗಣರಾಜ್ಯ ದಿನಾಚರಣೆಯ ಪೂರ್ವಭಾವಿ ತಯಾರಿ, ಮಕ್ಕಳ ಉತ್ಸಾಹ ನೋಡಲು ಬಂದ ಗ್ರಾಮ ಪಂಚಾಯತಿಯ ಪಿ.ಡಿ.ಓ ಎನ್.ಆರ್.ಅಕ್ಕಿ ಸಾಹೇಬರು ಖುಷಿಗೊಂಡು ಜಾನಪದ ಕಲೆ ಬಿಡಿಸಿದ ಮಕ್ಕಳಿಗೆ ಬಹುಮಾನ ಘೋಷಿಸಿದ್ದಾರೆ. ಶಾಲೆಯ ಕೆಲವು ಮಕ್ಕಳು ಕಳೆದ ಒಂದು ವಾರದಿಂದ ತಮ್ಮಷ್ಟಕ್ಕೆ ತಾವೇ ಗುಣುಗುಡುತ್ತ ಭಾಷಣ ಬಾಯಿಪಾಠ ಮಾಡುವ ತುರ್ತಿನಲ್ಲಿದ್ದಾರೆ. ಗಟ್ಟು ಹಾಕಿದಷ್ಟೂ ಹೊತ್ತು ಸರಿ ಹೇಳಿ ಮಾರನೆಯ ದಿನ ಮತ್ತೆ ಕೇಳಿದರೆ ತಪ್ಪುವ ಮೂರನೇ ವರ್ಗದ ಆಯೇರಾಳ ಉರ್ದು ಭಾಷಣ ಕೇಳಿದಷ್ಟು ನಗು ಹುಟ್ಟಿಸುತ್ತದೆ. ಶಾಲೆಯ ಪ್ರಸಿದ್ಧ ಗಾಯಕರು ಸಂಗೀತ ವಿದ್ವಾಂಸರಂತೆ ದೇಶಭಕ್ತಿಗೀತೆ ಹೊಸಬಗೆಯಲ್ಲಿ ಹಾಡಲು ತಾಲೀಮು ನಡೆಸಿದ್ದಾರೆ.

ಇಂತಹ ಹಬ್ಬಗಳಲ್ಲಂತೂ ಮಕ್ಕಳು ಶಾಲೆಗೆ ಬರುವ ಸನ್ನಿವೇಶವಂತೂ ಮರೆಯಲಾಗದು. ಸಂಕ್ರಾಂತಿ ಕಳೆದರೂ ಚಳಿ ಕಡಿಮೆಯಾಗದ ಹೊತ್ತು ಇದು. ಶಾಲೆಗೆ ಆರು ಕಿ.ಮೀ ನಡೆದು ಬರುವ ಮಕ್ಕಳು, ಎರಡು ಕಿ.ಮೀ ಮಣ್ಣಿನ ರಸ್ತೆಯಲ್ಲಿ ನಡೆದು ನಂತರ ಮುಖ್ಯ ರಸ್ತೆಗೆ ಬಂದು ಬೆಳಿಗ್ಗಿನ ಬಸ್ ಹತ್ತಿ ಶಾಲೆಗೆ ಬರುವ ಮಕ್ಕಳಿಗೆಲ್ಲ ಬೆಳಕು ಹರಿದು ಬಿಡಬಹುದೆಂದು ರಾತ್ರಿ ಸರಿ ನಿದ್ದೆಯೇ ಬಾರದು. ರಾಧಕ್ಕೋರು ತರಗತಿಯಲ್ಲಿ ಓದಿದ `ಎಲ್ಲರು ಸರಿಯಾಗಿ 7-30 ಕ್ಕೆ ಬರಬೇಕು’ ಎಂಬ ನೋಟಿಸು ಕನಸಲ್ಲೂ ನಕ್ಕಂತೆ ಕಾಣುವುದು. ಅಮ್ಮ ಹಚ್ಚಿದ ಒಲೆಯಲ್ಲಿ ಕರಗುವ ಕಟ್ಟಿಗೆ ತುಂಡುಗಳ ಸದ್ದು ಅಲಾರಾಂ ಆಗಿ ಮಕ್ಕಳನ್ನು ಎಬ್ಬಿಸಿವೆ. ವಿದ್ಯುತ್ ಸಂಪರ್ಕವಿಲ್ಲದ ಇಲ್ಲಿನ ಕೆಲ ಊರುಗಳಲ್ಲಿ ಒಂದೇ ಚಿಮಣಿಯಿರುವ ಕುಟುಂಬಗಳಲ್ಲಿ ಹೀರೋಗಳಂತೆ ತಯಾರಾಗುವ ಕನಸು ಕಂಡ ಮಕ್ಕಳು ಕತ್ತಲೆಯ ಗವಿಯಲ್ಲಿ ಒಂದು ಕಾಲಿಗೆ ನೀಲಿ, ಇನ್ನೊಂದು ಕಾಲಿಗೆ ಕರಿ ಬಣ್ಣದ ಸಾಕ್ಸ ಧರಿಸಿ ಬರುವ ಪ್ರಸಂಗಗಳು, ದೂರದೂರಿನಿಂದ ನಡೆದು ಬರಲಾಗದೆ ಅಣಶಿಯಲ್ಲಿ ಸಂಬಂಧಿಕರ ಮನೆಯಲ್ಲಿ ಒಂದು ದಿನದ ಮಟ್ಟಿಗೆ ಉಳಿದುಕೊಳ್ಳಲು ವ್ಯವಸ್ಥೆ ಮಾಡಿಕೊಂಡವರು, ರಾತ್ರಿ, ಕೈಯಲ್ಲಿ ಒತ್ತಿ ಒತ್ತಿ ಗರಿಮುರಿಯಾದ ಸಮವಸ್ತ್ರ ಮತ್ತೆ ಮುದ್ದೆಯಾಗಿ ಉಸಿರುಗಟ್ಟಿ ಬಾಡಿದ ಘಟನೆಗಳು, ಎರಡನೆಯ ಸೆಮಿಸ್ಟರ್‌ಗೆ ಕೊಟ್ಟ ಸಮವಸ್ತ್ರ ಇನ್ನೂ ಹೊಲಿಸಿಕೊಳ್ಳಲಾಗದೆ ಹಳೆಯದನ್ನೆ ಹಾಕಿ ಬಂದ ಮಕ್ಕಳ ನೋವು ದೊಡ್ಡ ತರಗತಿಯವರು ಬಾರಿಸುತ್ತಿದ್ದ ಶಾಲೆಯ ಬ್ಯಾಂಡ್ ಸೆಟ್ಟಿನ ಖುಷಿ, ಶಬ್ದಕ್ಕೆ ಹೆದರಿ ಮರದಿಂದ ಮರಕ್ಕೆ ಬಳ್ಳಿಗಳ ಹಿಡಿದು ಹಾರುವ ಮಂಗಗಳ ಹಗ್ಗ ಜಗ್ಗಾಟ, ಮಂಗನ ಕಂಡೊಡನೆ ಕರ್ನಾಟಕದ ಕೆಲವು ಅರಣ್ಯ ಇರುವ ಊರಲ್ಲಿ ಹರಡುತ್ತಿರುವ ಮಂಗನ ಕಾಯಿಲೆ ಹಾಗೂ ಅದರಿಂದಾಗಿ ಜನ ಸತ್ತುಹೋಗಿರುವುದೆಲ್ಲ ರಾಧಕ್ಕೋರಿಗೆ ನೆನಪಾಗಿ `ಅಣಶಿ ಸುರಕ್ಷಿತವಾಗಿರಲಿ’ ಎಂದು ಊರಿನ ಸಿದ್ದೇಶ್ವರನಿಗೆ ಅರ್ಪಿಸಿದ ಒಂದು ಬೇಡಿಕೆ, ಕಾಡಿನ ನೀರವತೆ ಮೀರಿ ಅರಣ್ಯ ಇಲಾಖೆಯವರ ಆಫೀಸಿನ ಮೈಕೋದಲ್ಲಿ ಕೇಳಿ ಬರುವ `ಹಿಂದ್ ದೇಶಕೆ ನಿವಾಸಿ ಸಭಿ ಜನ ಏಕ ಹೈ’ ಎಂಬ ಹಾಡು, ಧ್ವಜ ಹಾರಿಸಲು ಈ ಬಾರಿ ಸೀರೆಗೆ ಸ್ಪೇಷಲ್ ಇಸ್ತ್ರಿ ಕುಂಬಾರವಾಡಾದಿಂದ ಮಾಡಿಸಿಕೊಂಡು ಬಂದ ಎಸ್.ಡಿ.ಎಮ್.ಸಿ ಅಧ್ಯಕ್ಷೆ, ತಾವು ಕಟ್ಟಿದ ಧ್ವಜ ಹಾರುವವರೆಗೂ ಆತಂಕದಲ್ಲಿರುವ ರಾಧಕ್ಕೋರು, ಧ್ವಜ ಹಾರಿದ ಕೂಡಲೇ ರಾಷ್ಟ್ರಗೀತೆ ಪಟ್ ಅಂತ ಹಾಡಬೇಕು ಎಂದು ತಲೆಯಲ್ಲಿ ತುಂಬಿಕೊಂಡ ಶಾಲೆಯ ಮುಖ್ಯಮಂತ್ರಿ, ಅಧ್ಯಕ್ಷೆ ಧ್ವಜ ಕಟ್ಟೆಯ ಮುಂದೆ ಬಂದು ನಿಲ್ಲುವ ಮುನ್ನವೇ ಗಡಿಬಿಡಿಯಲ್ಲಿ `ಹಿಲೋ ಮತ್’ ಎಂದ ಪ್ರಭಾತಫೇರಿಗೆ ಹೊರಡುವ ತಂಡದ ನಾಯಕನ ಆದೇಶಕ್ಕೆ ನಕ್ಕ ಮಕ್ಕಳ ಖುಷಿ, ಧ್ವಜಾರೋಹಣದ ನಂತರ ಕೊಡುವ ಚಾಕೋಲೇಟ್ ಆಸೆ, ಕೆಲವರಿಗೆ ಅರಣ್ಯ ಇಲಾಖೆಯವರು, ಗ್ರಾಮ ಪಂಚಾಯತಿಯವರು ಕೊಡುವ ಬೂಂಧಿ ಲಾಡು ಬಾಯಲ್ಲಿ ನೀರು, ದಾರಿಯುದ್ದಕ್ಕೂ ಮಕ್ಕಳ ಚಡ್ಡಿಕಿಸೆಯಲ್ಲಿ ಸದ್ದಿಡುವ ಚಾಕಲೇಟ್ ರ್ಯಾಪರ್, ಪದೇ ಪದೇ ಮುಟ್ಟಿ `ಬಿದ್ದಿಲ್ಲ ತಾನೇ’ ಎಂದು ನೋಡಿಕೊಳ್ಳುವ ಮಕ್ಕಳ ಹೂವಿನಂತಹ ಕೈಗಳು.. ಹೀಗೆ ವಿಧವಿಧದ ಚಿತ್ರಗಳು.. ಊರಿನ ತುಂಬ ಬಣ್ಣಗಳು.. ಎಲ್ಲರೆದೆಯಲ್ಲಿ ಜನವರಿ ಇಪ್ಪತ್ತಾರರ ಸಂತಸಗಳು.. ಬನ್ನಿ, ನಾವು ಸೇರಿಕೊಳ್ಳೋಣ `ಈ-ಸ್ಕೂಲಿ’ನೊಳಗೆ.

(ಪುಸ್ತಕ ಬಿಡುಗಡೆ ಸಮಾರಂಭ-  ಸ್ಥಳ: ಬಿ.ಎಂ.ಶ್ರೀ. ಕಲಾಭವನ, ಬೆಂಗಳೂರು, 14/01/2023 ಶನಿವಾರ, ಸಂಜೆ 4:30ಕ್ಕೆ)