“ಟೆರೇಸಿನ ಮೇಲೆ ತನ್ನ ಉದ್ವಿಗ್ನ ಕಥೆಗಳನ್ನು ಹೇಳುತ್ತಿದ್ದ ನಕುಲನ ಭುಜದ ಮೇಲೆ ಹಾರುತ್ತಿದ್ದ ನೀಳಕೂದಲು, ಕೆಳಗಿಂದ ಕೇಳುತ್ತಿದ್ದ ಮಕ್ಕಳ ಕೇಕೆ, ಮುಳಗುತ್ತಿರುವ ಸೂರ್ಯನನ್ನು ಹಿಂದಿಕ್ಕಿ ಕೆಂಪು ಬೆಳಕಿನಲ್ಲಿ ಪೂರ್ವದ ಕಡೆ ಹಾರುತ್ತಿರುವ ಹೆಸರು ಗೊತ್ತಿಲ್ಲದ ಹಕ್ಕಿಗಳ ಹಸಿವು ಬಾಯಾರಿಕೆ, ಬಣ್ಣಬಣ್ಣದ ರೆಕ್ಕೆಗಳ ಮೈಥುನದ ಆಸೆಗಳು, ಮೆಲ್ಲಗೆ ಪೂರ್ವದ ಕಡೆಯಿಂದ ಉದಯಿಸುತ್ತಿರುವ ಚಂದ್ರನ ಬೆಳಕ ಜೊತೆಯಲ್ಲೇ ಬೀಸಿ ಬರುತ್ತಿರುವ ತಂಗಾಳಿ…”
ಎಳೆ ವಯಸ್ಸಿನಲ್ಲೇ ತೀರಿಹೋದ ಬರಹಗಾರ್ತಿ ನಾಗಶ್ರೀ ಶ್ರೀರಕ್ಷ ಹುಟ್ಟಿದ ದಿನ ನಿನ್ನೆ ಶನಿವಾರ. ಅವರ ನೆನಪಿನಲ್ಲಿ ಈ ಕಥೆ ನಿಮ್ಮ ಈ ಭಾನುವಾರದ ಓದಿಗೆ.

 

ಕಡಲಿಗೂ ಆಕಾಶಕ್ಕೂ ನಡುವಲ್ಲಿ ಪ್ರೇಮದ ಬಣ್ಣಗಳು ಆಗಷ್ಟೇ ಆರಂಭಗೊಂಡು, ಆ ಎಲ್ಲ ಬಣ್ಣಗಳು ನಾಚುತ್ತಾ ಅಂಜುತ್ತಾ ಒಂದರೊಳಗೊಂದು ಕಲಸಿಹೋಗಲು ಹವಣಿಸುತ್ತಿದ್ದವು. ಕಡಲ ಮೇಲಣ ಆಕಾಶದಲ್ಲಿ ವಿದಾಯ ಹೇಳುವಂತಿದ್ದ ಮೋಡಗಳು ಕತ್ತಲಲ್ಲಿ ಒಂದಾಗಲು ತವಕಿಸುತ್ತಿದ್ದವು. ಕಡಲ ಸಂಜೆಯ ಸಂಗೀತ ಮುಗಿದು ಇರುಳಿನ ಮೊದಲ ಪ್ರಹರದ ಪ್ರೇಮಸಂಚುಗಳನ್ನು ಆಗಲೇ ಬಲ್ಲವೇನೋ ಎಂಬಂತೆ ಅಲೆಗಳು ಉಕ್ಕಿ ತಟವನ್ನು ಸುಮ್ಮನೆ ಮುಟ್ಟಿ ಧಾವಂತದಲ್ಲಿ ಹಿಂದೆ ಓಡುತ್ತಿದ್ದವು. ಮಿದುಳೊಳಗೆ ಸಂಜೆಗತ್ತಲ ರಾಗದ ತುಣುಕೊಂದನ್ನು ಸಿಲುಕಿಸಿಕೊಂಡು ಗೌತಮಿ ತನ್ನ ಗಂಡ ಮತ್ತು ನಕುಲ ಚೆಂಡಾಟ ಮುಗಿಸಿ ಆಯಾಸಗೊಂಡು ತನ್ನೆಡೆಗೆ ಮರಳಿ ಬರುತ್ತಿರುವುದನ್ನು ಮರಳಲ್ಲಿ ಮೈಚಾಚಿ ನೋಡುತ್ತಿದ್ದಳು.

ಎರಡು ಎಳೆಗರುಗಳಂತೆ ಆಡಿಕೊಂಡು ಬರುತ್ತಿರುವ ಇಬ್ಬರು ಗಂಡಸರು. ಅವರೀರ್ವರಲ್ಲಿ ‘ಅವನ ಬಿಟ್ಟು ಇವನ ಬಿಟ್ಟು ಅವನ್ಯಾರು?..’ ಅವಳು ಎಂದಿನಂತೆ ತಲೆಯೊಳಗೆ ತುಂಟತುಂಟವಾಗಿ ಪದಗಳನ್ನು ಕವಡೆಗಳಂತೆ ಎಸೆಯುತ್ತ ತನ್ನೊಳಗೆ ಯಾಕೆ ಹೀಗೆಲ್ಲ ಮೋಹಗಳು ಏಳುತ್ತಿವೆಯೆಂಬುದನ್ನು ಅರ್ಥ ಮಾಡಿಕೊಳ್ಳಲು ಹವಣಿಸುತ್ತಿದ್ದಳು. ಅವಳ ಒಡಲಲ್ಲಿ ಏನೋ ಒಂದು ಅರಿಯದ ನದಿಯೊಂದು ಹರಿದು ‘ಈ ಕಡಲು ಗಂಡಸಾ…? ಹೆಂಗಸಾ….? ಈ ಕಡಲು ಹೆಂಗಸಾ…..? ಗಂಡಸಾ….?’ ಎಂದು ತಲೆಯೊಳಗೆ ಪ್ರಶ್ನೆಯೊಂದು ಕುಣಿಯುತ್ತಿತ್ತು. ಮುಳುಗುತ್ತಿರುವ ಸೂರ್ಯನ ಬೆಳಕಲ್ಲಿ ಬೆವರಿ ಹೊಳೆಯುತ್ತಾ ಬರುತ್ತಿರುವ ಅವರಿಬ್ಬರನ್ನು ಅವಳು ತಾಯಿಯಂತೆ ಕಣ್ಣಲ್ಲೇ ತಬ್ಬಿಕೊಂಡು ಕಾಯುತ್ತಿದ್ದಳು.

ನಕುಲ ಮರಳು ಅಂಟಿಕೊಂಡ ಚೆಂಡನ್ನು ಎದೆಯ ಮೇಲೆ ಒತ್ತಿಹಿಡಿದು, ಇನ್ನೊಂದು ಕೈಯನ್ನು ಅವಳ ಗಂಡನ ಹೆಗಲಲ್ಲಿ ಜೋತು ಬೀಳಿಸಿಕೊಂಡು ನಗುತ್ತ ಬರುತ್ತಿದ್ದ.

ಒಬ್ಬ ಮಾಟಗಾರ ಜ್ಯೋತಿಷಿಯಂತೆ ಅವನ ಕಳ್ಳ ಕಣ್ಣುಗಳು ಮಿಂಚುತ್ತಿತ್ತು.

“ಎಷ್ಟು ಅಮಾಯಕ ಹೆಂಗಸರನ್ನು ಈ ಕಳ್ಳಕಣ್ಣುಗಳಿಂದ ನಿನ್ನ ಕಡಲೊಳಗೆ ಮುಳುಗಿಸಿಬಿಟ್ಟಿದ್ದೀಯಾ ಸನ್ಯಾಸಿಯೇ?” ಎಂದು ಒಮ್ಮೆ ಕೇಳಿದ್ದಳು.

“ಕಡಲು ಗಂಡಲ್ಲ ಮಾರಾಯ್ತಿ, ಹೆಣ್ಣು; ನಾವು ಗಂಡಸರು ಏನಿದ್ದರೂ ಮುಳುಗಲೆಂದೇ ಹುಟ್ಟಿಕೊಂಡವರು. ಅದಕ್ಕೇ ನಾನು ಮದುವೆಯಾಗದೇ ಉಳಿದಿರುವುದು., ನಿನ್ನ ಗಂಡನನ್ನೇ ನೋಡು, ಪಾಪ! ಎಷ್ಟು ಒಳ್ಳೆಯವನು, ಆದರೆ ಎಷ್ಟೊಂದು ಕನ್ ಫ್ಯೂಸ್ ಡ್ ಗಂಡಸು. ಕೊನೆಗೂ ಸೂರ್ಯನಂತೆ ಗಂಡಸು ಒಂಟಿಒಂಟಿ”, ಎಂದು ಆತ ಇಂತದ್ದೇ ಒಂದು ಇಳಿ ಸಂಜೆಯಲ್ಲಿ ಅವಳ ಮನೆಯ ಟೆರೇಸಿನ ಮೇಲೆ ಕೆಳಗೆ ಆಡುವ ಮಕ್ಕಳನ್ನು ನೋಡುತ್ತಾ ಸಿಗರೇಟು ಹಚ್ಚಿ ಆಕಾಶಕ್ಕೆ ಹೊಗೆ ಬಿಟ್ಟಿದ್ದ. ಆತ ಯಾಕೋ ತನ್ನ ಕಣ್ಣಿಗೆ ಕಣ್ಣುಕೊಡದೆ ಎತ್ತಲೋ ನೋಡಿಕೊಂಡು ವೇದಾಂತದ ಮಾತುಗಳನ್ನು ಹೇಳುವಾಗ, ಅದ್ಭುತ ಕಥೆಗಾರನಂತೆ ನಿಜದ ನೋವುಗಳನ್ನು ಮರೆಯಲೆಂದು, ಆ ಕ್ಷಣಕ್ಕೆ ತನಗೆ ಬೇಕಾದಂತಹ ಲೋಕವೊಂದನ್ನು ಸೃಷ್ಟಿಸಿಕೊಳ್ಳುತ್ತಿದ್ದಾನೆ ಅನ್ನಿಸಿ ಗೌತಮಿಗೆ ನಗು ಬಂದು ಪಾಪ ಅನ್ನಿಸುತ್ತಿತ್ತು.

******

“ಏಯ್ ನಿಂಗೆ ವಿಷಯ ಗೊತ್ತಾ? ನಕುಲನಿಗೆ ಅಪ್ಪ ಇಲ್ಲ ಗೊತ್ತಾ?….”

ಗೌತಮಿಯ ಗಂಡ ಬಹುದೊಡ್ಡ ಸತ್ಯವೊಂದನ್ನು ಅವಳೊಬ್ಬಳಿಗೆ ಮಾತ್ರ ಒಪ್ಪಿಸುವಂತೆ ಅವಳ ಕಿವಿಯ ಓಲೆಯನ್ನು ಮುಟ್ಟಿ ತಡವಿಕೊಂಡು ಹೇಳಿದಾಗ ಅವಳಿಗೆ ಸಣ್ಣಗೆ ನಗು ಬಂದಿತ್ತು.

“ಅಪ್ಪ ಇಲ್ಲದೆ ಮಗು ಹುಟ್ಟುವುದಿಲ್ಲ ಮಗೂ, ಅಪ್ಪ ಇರಬಹುದು ಆದರೆ ಅಪ್ಪ ಯಾರೆಂದು ನಕುಲನಿಗೆ ಗೊತ್ತಿರಲಾರದು ಅಷ್ಟೆ, ಅದೇನೂ ದೊಡ್ಡ ವಿಷಯವಲ್ಲ ಬಿಡು”, ಎಂದು ನಗುತ್ತಾ ತೇಲಿಸಲು ನೋಡಿದ್ದಳು.

ಅವನನ್ನು ವಿರೋಧಿಸಿ ಮಾತನಾಡುವಾಗಲೆಲ್ಲ ಅವನನ್ನು ಗೌತಮಿ ‘ಮಗೂ’ ಎಂದೇ ಸಂಭೋಧಿಸುತ್ತಿದ್ದಳು. ಏನೂ ಅರಿಯದ ಮಗುವಿನಂತಹ ಗಂಡನನ್ನು ಹೇಗೆ ಅಕ್ಕರೆಗೈಯುತ್ತಲೇ ಪ್ರೌಢನನ್ನಾಗಿಸಬೇಕು ಎಂದೂ ಕಲಿತುಬಿಟ್ಟಿದ್ದಳು.

ಅವಳು ಹಾಗೆಯೇ .

ತಾಳಿಕೊಳ್ಳಲು ಅಸಾಧ್ಯವಾದದ್ದು ಏನಾದರೂ ಪ್ರಖಾಂಡವಾದದ್ದು ಧುತ್ತೆಂದು ಎದುರಾದಾಗ ನಕ್ಕು ತೇಲಿಸುತ್ತಿದ್ದಳು. ಗಂಡ, ಸಹಸ್ರಮಾನದ ವರ್ಷ ಮುಗಿಯುವುದರೊಳಗೆ ಮಗು ಬೇಕೇ ಬೇಕೆಂದು ಮಗು ಮಾಡಲು ಬಂದಾಗಲೂ ಕೂಡಾ “ಹೀಗೆಲ್ಲ ತಯಾರಿ ಮಾಡಿ ಕ್ಯಾಲೆಂಡರು ನೋಡಿ ಮಗು ಮಾಡಿಕೊಳ್ಳಲು ಇದೇನು ಪ್ರಯೋಗಾಲಯವೇ? ಪ್ರತಿ ದಿನದ ಉತ್ಸಾಹದಲ್ಲಿ ಅದು ಒಂದು ದಿನ ಇದ್ದಕ್ಕಿದ್ದಂತೆ ಸಂಭವಿಸಬೇಕು, ಅದರಲ್ಲೊಂದು ಅಚ್ಚರಿ ಇರಬೇಕು”, ಎಂದು ತಪ್ಪಿಸಿಕೊಂಡಿದ್ದಳು.

“ಅಚ್ಚರಿಗೆ ಕಾಯುತ್ತಾ ಅದು ಒಂದು ದಿನ ಇದ್ದಕ್ಕಿದ್ದಂತೆ ಸಂಭವಿಸಿದರೆ ನಕುಲನ ತಾಯಿಗೆ ಆದ ಹಾಗೆ ಆಗಬಹುದು. ಆಗ ಅಚ್ಚರಿಗೊಳ್ಳುವ ಸರದಿ ನನ್ನದಾಗಲೂಬಹುದು”, ಎಂದು ಗಂಡ ನಗೆಯಾಡಿದ್ದ.

ಈತನ ಎಂದೆಂದಿಗೂ ಮಾಯದ ನಗೆ, ಎಂತಹ ಉರಿಕೋಪ, ಆನಂದವನ್ನೂ ಒಂದಿಷ್ಟೂ ಬಿಟ್ಟುಕೊಡದ ಸದ್ದಿಲ್ಲದ ನಗೆ!!

“ಒಂದು ಸಲವಾದರೂ ಕೋಪ ಮಾಡಿಕೋ ಮಗುವೇ, ನಿನ್ನ ನಗು ಚೂರಿಯಂತೆ ಇರಿಯುತ್ತದೆ”, ಅಂದಿದ್ದಳು.

“ನಾನು ಓದಿರುವುದು ನಿನ್ನ ಹಾಗೆ ಸಾಹಿತ್ಯವಲ್ಲ ಮಾರಾಯ್ತಿ. ನಿನಗೆ ಅಳುವ, ನಗುವ, ತಲೆಯೆಲ್ಲ ಕೆದರಿಕೊಂಡು ಜಗಳವಾಡುವ ಗಂಡ ಬೇಕಿದ್ದರೆ ಕಥೆ ಬರೆಯುವ ನಕುಲನಂತವನನ್ನು ಕಟ್ಟಿಕೊಳ್ಳಬೇಕಿತ್ತು. ಆದರೆ ಹಾಗಾಗಿದ್ದರೆ ನೀನು ಹಗಲೂ ರಾತ್ರಿಯೂ ಆತನ ಅಬ್ಬೇಪಾರಿ ಕಥೆಗಳನ್ನು ಕೇಳುತ್ತಾ ಕೂರಬೇಕಾಗಿತ್ತು”, ಅಂತ ತಣ್ಣನೆ ಅಂದು ಅವಳ ಕಿವಿಯ ಓಲೆಗೆ ಬೆರಳ ತುದಿ ತಾಗಿಸಿದ್ದ.

ಹಾಗೆ ತಾಗಿಸಿದರೆ ಅವನು ಇನ್ನೇನೋ ಕಥೆ ಹೇಳ ಹೊರಟಿದ್ದಾನೆಂದು ಅರ್ಥ. ಅದರಲ್ಲೂ ನಕುಲನ ಕುರಿತೇ ಹೇಳದೇ ಉಳಿದಿರುವ ಕಥೆಗಳು!

“ಆಯ್ತು ಹೇಳು ಮಗೂ, ಬಹುಶಃ ನಿನ್ನ ಗೆಳೆಯನ ಕಥೆ ಹೇಳದಿದ್ದರೆ ನಿನ್ನ ತಲೆ ಸಿಡಿದು ಹೋಗುವ ಹಾಗಿದೆಯಲ್ಲಾ! ಅಪ್ಪ ಇಲ್ಲದೆ ನಕುಲ ಹೇಗೆ ಹುಟ್ಟಿದ ಹೇಳಿ ಬಿಡು”, ಎಂದು ಆಕೆ ಗಂಡನ ಕಣ್ಣಿಗೆ ಕಣ್ಣಿಟ್ಟು ಕೇಳಿದ್ದಳು.

“ನೀನು ಇಷ್ಟು ಅಭಿಮಾನ ಪಡುವ, ಕಥೆಗಾರ ನಕುಲನ ಅಸಲಿಯತ್ತಿನ ಕಥೆ ಇಷ್ಟೇ”, ಎಂದು ಆತ ನಿರುಮ್ಮಳವಾಗಿ ಕಥೆ ಹೇಳಿ ಮುಗಿಸಿದ್ದ.

“ಬಾ ಮಲಗುವಾ, ಈವತ್ತು ಕ್ಯಾಲಂಡರಿನ ಪ್ರಕಾರ ಬಹಳ ಫಲವತ್ತಾದ ದಿನ”, ಎಂದು ಮಲಗಲು ಆಹ್ವಾನಿಸಿದ್ದ.

ಗೌತಮಿ ಕೊಂಚ ವಿಹ್ವಲಗೊಂಡು ಹೆಗಲ ಮೇಲಿದ್ದ ಗಂಡನ ಕೈಯನ್ನು ನಯವಾಗಿ ತಳ್ಳಿ ತನ್ನ ಎಂದಿನ ಸಂಗೀತ ಲೋಕದೊಳಕ್ಕೆ ಹೊಕ್ಕಿದ್ದಳು. ಗಂಡೂ ಅಲ್ಲದ ಹೆಣ್ಣೂ ಅಲ್ಲದ ಧ್ವನಿಯುಳ್ಳ ಹಾಡುಗಾರನೊಬ್ಬ ಅವಳ ಒಡಲಿಗೆ ಜೀವ ತುಂಬುವಂತೆ ಹಾಡುತ್ತಿದ್ದ.

“ಯಾಕೆ ಯಾವ ಹಾದರದ ಕಥೆಯೂ ತನಗೆ ಹಾದರದ ಕಥೆಯಂತೆ ಅನಿಸುವುದಿಲ್ಲ, ಯಾಕೆ ಎಲ್ಲವೂ ಹೆಸರಿಲ್ಲದ ಒಂದು ಅನಾಥ ಅನುರಾಗದ ಅಲೆಯಂತೆ ಕೇಳಿಸುತ್ತದೆ?!”, ಎಂದು ಆ ಸಂಗೀತದ ನಡುವೆ ಅವಳು ಯೋಚಿಸಿದ್ದಳು.

ನಕುಲನ ತಾಯಿ ಬಸಿರಾಗಿದ್ದು ಅವಳ ಅಕ್ಕನ ಗಂಡನಿಗಂತೆ. ಆತನಿಗೆ ಆಕೆಯ ಅಪ್ಪನ ಪ್ರಾಯವಾಗಿತ್ತಂತೆ. ಅಕ್ಕನ ನಾಲ್ಕನೇ ಹೆರಿಗೆಯ ಬಾಣಂತನದಲ್ಲಿ ಉಳಿದ ಮಕ್ಕಳನ್ನು ನೋಡಿಕೊಳ್ಳಲು ಹೋದವಳು ಅಕ್ಕನ ಗಂಡನಿಂದ ಬಸಿರಾಗಿದ್ದಳು. ಇದೆಲ್ಲ ಗೊತ್ತಾಗುವ ಹೊತ್ತಿಗೆ ನಕುಲ ಬೆಳೆದು ಕಥೆಗಾರನಾಗಿದ್ದ. ಹುಟ್ಟಿಸಿದ ದೊಡ್ಡಪ್ಪ ತೀರಿಕೊಂಡು, ದೊಡ್ಡಮ್ಮನೂ ತೀರಿಕೊಂಡು, ನಡು ವಯಸ್ಕ ಅಮ್ಮ ಬಣ್ಣವಿಲ್ಲದ ಸೀರೆ ಉಟ್ಟುಕೊಂಡು ಮನೆಯ ಕಾವಿ ಸಿಮೆಂಟಿನ ನೆಲದ ಮೇಲೆ ಯೋಗಿನಿಯಂತೆ ಹೊಯ್ದಾಡುತಿದ್ದಳಂತೆ.

ನಕುಲನ ತಾಯಿಯ ಹಾದರದ ಕಥೆಯನ್ನು, ಅವನ ಅನಾಥ ಪ್ರಜ್ಞೆಯನ್ನು, ಅವಳ ಗಂಡ ಮೂರೇ ಸಾಲುಗಳಲ್ಲಿ ಹೇಳಿ ಮುಗಿಸಿ ನಿದ್ದೆ ಹೋಗಿದ್ದ. ಯಾವುದು ಹಾದರ? ಯಾವುದು ಸಂಸಾರ? ಯಾವುದು ಕಾಮ? ಯಾವುದು ಸಂಸ್ಕಾರ? ಒಂದೂ ಗೊತ್ತಾಗದಂತೆ ಆಕೆ ಆ ಹಾಡುಗಾರನ ಅನಾಥ ಆತ್ಮದಂತೆ ಕೇಳಿಸುತ್ತಿದ್ದ ಸಂಗೀತದೊಳಕ್ಕೆ ಮುಳುಗಿಹೋಗಿದ್ದಳು. ವಿಲಂಬಿತ ಕಾಲದ ಹಾಡಿಗೆ ಆ ಇರುಳು ಶುರುವಾಗಿ ಹಾಡುಗಾರನ ಕೊನೆಯ ಧೃತ್ ತುಣುಕುಗಳು ನೆಲದ ಮೇಲೆ ಚೆಲ್ಲುವಾಗ ಅವಳಿಗೆ ನಿದ್ದೆ ಬಂದಿತ್ತು. ಆಮೇಲಿನ ನಿಶ್ಯಬ್ಧ, ಎಲ್ಲವನ್ನೂ ಮರೆಸಿದ ಬೆಳಗು. ಎದ್ದಾಗ ಸುಖ ನಿದ್ರೆಯಲ್ಲಿ ಮಗುವಂತೆ ನಗುತ್ತಿದ್ದ ಗಂಡನನ್ನು ನೋಡಿ ಬೆಳಗಿನ ರಾಗದ ಹಾಡೊಂದನ್ನು ಹಚ್ಚಿಟ್ಟು, ದಿಂಬನ್ನು ಒದ್ದೆ ಮಾಡುತ್ತಿದ್ದ ತನ್ನ ಜೊಲ್ಲನ್ನು ಒರೆಸಿಕೊಂಡು ಮತ್ತೆ ನಿದ್ದೆ ಹೋಗಿದ್ದಳು.

******

ಟೆರೇಸಿನ ಮೇಲೆ ಆ ದಿನದ ಸೂರ್ಯನ ಕೊನೆಯ ಕಿರಣಗಳು ಇನ್ನು ಅಲ್ಲಿಗೆ ಮರಳಿ ಬರುವುದಿಲ್ಲವೇನೋ ಎಂಬಂತೆ ಭ್ರಮೆ ಹುಟ್ಟಿಸಿ ಅಲ್ಲಿಂದ ಹೊರಟು ಹೋಗಲು ಹವಣಿಸುತ್ತಿದ್ದವು.

“ಗಂಡಸಿನ ಜನ್ಮ ತೀರಾ ಕೆಟ್ಟದು ಮಾರಾಯ್ತಿ, ಅದು ಒಂಥರಾ ಹರಕೆಯ ಒಂದು ಹಳೆಯ ಡಬ್ಬವಿದ್ದಂತೆ.; ಯಾರು ಯಾರೋ ಪೇರಿಸಿಟ್ಟ ಕೆಲಸಕ್ಕೆ ಬಾರದ ಚಿಲ್ಲರೆ ನಾಣ್ಯಗಳನ್ನು ಹೊಟ್ಟೆಯೊಳಗೆ ಅಲ್ಲಾಡಿಸಿಕೊಂಡು ಹಲವು ಸದ್ದುಗಳನ್ನು ಕೇಳಿಸಿಕೊಂಡು ತಾನೊಂದು ಸಂಕಟದ ಮೂಟೆ ಎಂಬಂತೆ ಒದ್ದಾಡುತ್ತದೆ; ಅದೆಲ್ಲ ಬಿಟ್ಟು ಕಡಲಿನಂತಿರುವ ನಿನ್ನಂತಹವಳೊಬ್ಬಳ ಮಡಿಲಲ್ಲಿ ಮುಖ ಹುದುಗಿಸಿದರೆ ಅವನು ರಿಪೇರಿ ಆಗುತ್ತಾನೆ”, ನಕುಲ ಗೌತಮಿಗೆ ಅಚ್ಚರಿಯಾಗುವಂತೆ ಸಡಿಲಗೊಳ್ಳುತ್ತಿದ್ದ. ಮುಳುಗುತ್ತಿರುವ ಸೂರ್ಯನ ಬೆಳಕಲ್ಲಿ ಹೊಳೆಯುತ್ತಿರುವ ಅವಳ ಮುಖದಲ್ಲಿ ತನಗೆ ಇದುವರೆಗೆ ಸಿಗದಿರುವ ಬೆಳಕೊಂದನ್ನು ಹುಡುಕಲು ನೋಡುತ್ತಿದ್ದ. ತನಗೆ ಮೊದಲೇ ಗೊತ್ತಿದ್ದ ಸರಳ ಸತ್ಯವನ್ನು ಬಾಯಿಪಾಠ ಒಪ್ಪಿಸುತ್ತಿರುವ ಹುಡುಗನಂತೆ ಅವಳಿಗೆ ಕಾಣುತ್ತಿದ್ದ.

ಅವನ ಮೇಲೆ ಎದೆಹಾಲಿನಂತಹ ಪ್ರೀತಿ ತೊಟ್ಟಿಕ್ಕಿದ್ದಂತೆನಿಸಿ ಒಂದು ಕ್ಷಣ ಕಸಿವಿಸಿಗೊಂಡಿದ್ದಳು.

“ಗೌತಮಿ, ನಿಜ ಹೇಳುತ್ತೇನೆ, ನಿನ್ನ ಗಂಡನಿಗೆ ನನ್ನ ಸಂಕಟಗಳ ಕಥೆಗಳನ್ನು ನಿನ್ನೊಡನೆ ಹೇಳಲು ನಾನೇ ಹೇಳಿದ್ದು; ಯಾಕೋ ನೇರವಾಗಿ ನಿನ್ನಲ್ಲಿ ಹೇಳಲು ನನಗೆ ಧೈರ್ಯ ಇರಲಿಲ್ಲ, ಈಗ ಹೇಳು, ನಿನಗೆ ನನ್ನ ಮೇಲಿರುವುದು ಕಥೆಗಾರ ಅಂತ ಗೌರವನಾ? ಅನಾಥ ಅಂತ ಅನುಕಂಪನಾ? ಅಥವಾ ಗಂಡಸು ಅಂತ ಮೋಹನಾ? ಏನಾದರೂ ಹೇಳು ಆದರೆ ನಿಜ ಹೇಳು”, ನಕುಲ ಆಕಾಶದ ಕೊನೆಯಲ್ಲಿ ಆಗ ತಾನೇ ಮುಳುಗಿಹೋದ ಸೂರ್ಯನನ್ನು ಹುಡುಕುತ್ತಿರುವವನಂತೆ ಕಣ್ಣಲ್ಲಿ ಕಣ್ಣಿಟ್ಟು ಭುಜ ಏರಿಸುತ್ತಾ ಕೇಳುತ್ತಿದ್ದ. ಅವನ ಉದ್ವಿಗ್ನ ಕಣ್ಣುಗಳು, ಭುಜದ ಮೇಲೆ ಹಾರಾಡುತ್ತಿದ್ದ ನೀಳಮುಡಿ, ತಾನೇ ಕೊಂದ ತಾಯಿಗೆ ಜೀವಕೊಟ್ಟ ಪುರಾಣದ ಪರಶುರಾಮ ತಾನೇ ಅನ್ನುವಂತೆ ಆತ ಆ ಸಂಜೆ ಹೊಳೆಯುತ್ತಿದ್ದ .

ಗೌತಮಿ ಯಾಕೋ ಅಧೀರಳಾಗುತ್ತಿದ್ದಳು.

“ನನಗೆ ನಿನ್ನ ಮೇಲಿರುವುದು ಏನು ಅಂತ ಟೀ ಕುಡಿದಾದ ಮೇಲೆ ಹೇಳುತ್ತೇನೆ, ಈಗ ಟೀ ಮಾಡಿಕೊಂಡು ಬರುತ್ತೇನೆ”, ಎಂದು ಟೆರೇಸಿನಲ್ಲಿ ಆತನನ್ನು ಬೇಕಂತಲೇ ಒಂಟಿಯಾಗಿರಲು ಬಿಟ್ಟು ಒಲೆಯ ಮುಂದೆ ನಿಂತಿದ್ದಳು.

ಸ್ಟೌವ್ವಿನ ನೀಲ ಉರಿಯನ್ನು ಬೇಕಂತಲೇ ಸಣ್ಣಗಿಟ್ಟು, ಕುದಿಯುತ್ತಾ ಕದಡುತ್ತಿರುವ ನೀರಲ್ಲಿ ಟೀ ಪುಡಿ ಉದುರಿಸಿ ಬದಲಾಗುತ್ತಿರುವ ನೀರಿನ ಬಣ್ಣಗಳನ್ನು ಸುಮ್ಮನೆ ನೋಡುತ್ತಿದ್ದಳು. ಯಾಕೋ ಕಸಿವಿಸಿಯಾಗಿ ಹಾಲ್ ಗೆ ತೆರಳಿ ಅದೇ ಹಾಡುಗಾರನ ಸಂಜೆಯ ರಾಗವೊಂದನ್ನು ಹಚ್ಚಿಟ್ಟರೆ ಆ ಸಂಜೆಯ ರಾಗವೂ ಅವಳೊಳಗೆ ನಡೆಯುತ್ತಿರುವುದನ್ನು ಹಾಡಿನಲ್ಲಿ ಹೇಳಲಾಗದೇ ತಳಮಳಿಸುತ್ತಿರುವಂತ್ತಿತ್ತು. ತಟ್ಟನೆ ಗ್ಯಾಸಿನ ಉರಿ ಹೆಚ್ಚಿಸಿ ಟೀ ಪುಡಿ ಕುದಿಸಿ ಹಾಲು ಸಕ್ಕರೆ ಸೇರಿಸಿ ಲೋಟಕ್ಕೆ ಸುರಿದಳು.

ಟೀ ಹಿಡಿದುಕೊಂಡು ಟೆರೇಸಿಗೆ ಬಂದಾಗ ಒಣ ಹಾಕಿದ ಒಗೆದ ಬಟ್ಟೆಗಳು ಗಾಳಿಯಲ್ಲಿ ಹಾರಾಡುತ್ತಿದ್ದವು. ನಕುಲನೂ ಒಣ ಹಾಕಿದ್ದ ಅಂಗಿಯೊಂದರಂತೆ ನಸುಗತ್ತಲಲ್ಲಿ ಗಾಳಿಗೆ ಹೊಯ್ದಾಡುತ್ತಿದ್ದ. ಅವಳಿಗೆ ಯಾಕೋ ಗಾಳಿಯಲ್ಲಿ ಹಾರುತ್ತಿರುವ ಆತನ ಮುಡಿಯ ಮೇಲೆ ಕೈಯ್ಯಾಡಿಸಬೇಕು ಅನ್ನಿಸಿ ಹತ್ತಿರಕ್ಕೆ ಹೋದಂತೆ ಆತ ಬೆಚ್ಚಿ ತಿರುಗಿದ್ದ.

ಗೌತಮಿ ಆತನ ಕೈಗೆ ಟೀ ಕೊಟ್ಟು “ಏನು ನಡೀತು ಮಗೂ?” ಎಂದು ಕೇಳಿದ್ದಳು.

“ನೋಡು ಗೌತಮಿ, ನಾನು ಮಗುವೂ ಅಲ್ಲ, ಹಸುಳೆಯೂ ಅಲ್ಲ, ನಾನೂ ಒಬ್ಬ ಗಂಡಸೇ, ನಿನ್ನ ಗಂಡನೂ ಒಬ್ಬ ಗಂಡಸೇ, ನನ್ನ ದೊಡ್ಡಪ್ಪನೂ ಒಂದು ಗಂಡಸೇ, ನಮಗೆಲ್ಲ ಜನ್ಮ ಸಾರ್ಥಕವಾಗುವುದು ನಮ್ಮ ಅಭದ್ರತೆಯ ಬೀಜ ಹೆಂಗಸೊಬ್ಬಳ ಒಡಲೊಳಗೆ ಬಿತ್ತನೆಗೊಂಡು ತೆನೆಯೊಡೆದು ಹೊರಬಂದಾಗಲೇ, ಉಳಿದುದೆಲ್ಲ ಬರೀ ಸುಳ್ಳು. ನಿಮಗೆ ಹೆಂಗಸರಿಗೆ ಹಾಗಲ್ಲ. ಅದು ಕ್ರಿಯೆಯಲ್ಲ. ಅದೊಂದು ಬದುಕು. ನನ್ನಮ್ಮ ಈಗಲೂ ತೀರಿಹೋದ ದೊಡ್ಡಪ್ಪನಿಗೆ ಹಂಬಲಿಸುತ್ತ ಸಿಮೆಂಟು ನೆಲದಲ್ಲಿ ಬದುಕುತ್ತಿರುವಳಲ್ಲಾ, ನನ್ನ ದೊಡ್ಡಮ್ಮ ಮೋಸ ಮಾಡಿದ ದೊಡ್ಡಪ್ಪನನ್ನು ದ್ವೇಷಿಸುತ್ತಲೇ ಒಂದು ಜನ್ಮ ಕಳೆದಳಲ್ಲಾ, ಇದನ್ನೇ ಯೋಚಿಸುತ್ತಿದ್ದೆ. ನಿನ್ನ ಬಗ್ಗೆಯೂ ಹೀಗೇ ಯೋಚಿಸುತ್ತಿದ್ದೆ. ಆದರೆ ನೀನೊಬ್ಬಳು ಮಾತ್ರ ಕಡಲಿನಂತೆ ನನಗೆ ಲವಲೇಶವೂ ಅರ್ಥವಾಗುತ್ತಿಲ್ಲ!!”

ನಕುಲ ದಂಗು ಬಡಿದವನಂತೆ ಬಡಬಡಿಸುತ್ತಿದ್ದ. ಆತನ ಸಿಗರೇಟಿನ ಬೂದಿ ಕೆಳಕ್ಕೆ ಬೀಳದೆ ತುದಿಯಲ್ಲಿ ಹಾಗೇ ಅಂಟಿಕೊಂಡು ನಿಂತಿತ್ತು. ಮಕ್ಕಳ ಕೇಕೆ, ರೊಂಯ್ಯನೆ ಬೀಸುವ ಗಾಳಿಯ ಸದ್ದು, ಮನೆಗೆ ವಾಪಾಸು ತೆರಳುತ್ತಿದ್ದ ಹಕ್ಕಿಗಳ ಸದ್ದು ಜೋರಾಗಿ ಕೇಳಿಸುತ್ತಾ ಮೆಲ್ಲನೆ ಕತ್ತಲಾಗುತ್ತಿತ್ತು.

ಅವನು ಆ ತಣ್ಣಗಿನ ಗಾಳಿಯಲ್ಲೂ ಸಣ್ಣಗೆ ಬೆವರುತ್ತಿದ್ದ.

“ಕಥೆ ಬೇರೆ ನಿಜ ಬೇರೆ” ಎಂದು ಆತ ಏನೇನೋ ಹೇಳಲು ಹೊರಟಿದ್ದ.

“ಕಥೆಯೂ ಸುಳ್ಳು, ನಿಜವೂ ಸುಳ್ಳು, ಎಲ್ಲ ಆಗುವುದು ಮನಸಿನಲ್ಲಿ”, ಎಂದು ಆಕೆಯೂ ಏನೋ ಹೇಳುತ್ತಿದ್ದಳು.

“ಇಲ್ಲ ದೊಡ್ಡಪ್ಪನನ್ನು ಮನಸಿನಿಂದ ಸಾಯಿಸಿ ಆ ಜಾಗದಲ್ಲಿ ಅಪ್ಪನಂತವನೊಬ್ಬನನ್ನು ಸ್ಥಾಪಿಸಿಕೊಳ್ಳಬೇಕು” ಎಂದು ಆತ ಬಡಬಡಿಸುತ್ತಿದ್ದ.

“ಅಲ್ಲ ಮಾರಾಯ, ನಿನ್ನ ದೊಡ್ಡಪ್ಪ ಒಂದು ವೇಳೆ ನಿನ್ನ ಅಮ್ಮನನ್ನು ಕೂಡಿರದಿದ್ದರೆ ಈ ಗೋಧೂಳಿ ಸಮಯದಲ್ಲಿ ನನ್ನೊಡನೆ ಮಾತನಾಡಲು ನೀನೂ ಇರುತ್ತಿರಲಿಲ್ಲ, ಬರೆಯಲು ನಿನಗೆ ಕಥೆಗಳೂ ಸಿಗುತ್ತಿರಲಿಲ್ಲ”, ಎಂದು ಆಕೆ ಆತನನ್ನು ಬೇಕಂತಲೇ ಛೇಡಿಸುತ್ತಿದ್ದಳು.

“ಹೇ ಗೌತಮಿ ನೀನು ಜಾಣೆ, ನೀನು ಏನು ಹೇಳಲು ಹೊರಟಿದ್ದೀಯಾ ಎಂದು ನನಗೆ ಅರಿವಾಗುತ್ತಿದೆ”, ಎಂದು ಆತನೂ ಆಟವೊಂದಕ್ಕೆ ಸಜ್ಜಾಗುತ್ತಿರುವವನಂತೆ ಗೆಲುವುಗೊಳ್ಳುತ್ತಿದ್ದ. ಇನ್ನೇನು ಅವನ ಭುಜಕ್ಕೆ ಭುಜ ತಾಕಿಸಿ ಹಾರುತ್ತಿರುವ ಅವನ ಮುಡಿಗೆ ಅವಳು ಕೈಸೋಕಿಸಬೇಕು ಎನ್ನುವಷ್ಟರಲ್ಲಿ ಅವನು ಒಮ್ಮೆಲೆ ಅವಳತ್ತ ತಿರುಗಿ ನೋಡಿದ್ದ.

ಟೆರೇಸಿನ ಮೇಲೆ ಒಣ ಹಾಕಿದ ಬಟ್ಟೆಗಳು ಹಾರುತ್ತಿದ್ದವು. ಅವನ ಕಣ್ಣುಗಳನ್ನು ನೋಡಿ ಅವಳ ಮಮತೆಯ ಕಟ್ಟೆಯೊಡೆದು ಕೂದಲ ಮೇಲೆ ಕೈಯ್ಯಾಡಿಸುವಾಗ ಮೆಲ್ಲಗೆ ಮಳೆ ಹನಿಯುತ್ತಿತ್ತು…

‘ನಕುಲ’ ಎಂದು ನವಿರಾಗಿ ಉಸುರಿ ದೊಡ್ಡ ನಿಟ್ಟುಸಿರು ಬಿಟ್ಟಳು. ಆಕಾಶದ ಬಣ್ಣಗಳನ್ನು ಯಾರೋ ಕಲಸಿದಂತೆ ತಣ್ಣಗೆ ಗಾಳಿ ಬೀಸುತ್ತಿತ್ತು. ಅವಳು ಹಾರುವ ಕೂದಲನ್ನು ಒಟ್ಟು ಸೇರಿಸಿ ಎದ್ದು ಎರಡು ಹೆಜ್ಜೆ ನಡೆಯುವಾಗ ಗಂಡ ಕೆಳಗೆ ಕಾರು ನಿಲ್ಲಿಸಿದ ಸದ್ದು ಕೇಳಿಸಿತ್ತು.

ನಕುಲ ಆಕಾಶದಲ್ಲಿ ಬೆಳಗುತ್ತಿದ್ದ ನಕ್ಷತ್ರಗಳ ಕೆಳಗೆ ಇನ್ನೊಂದು ಸಿಗರೇಟು ಹಚ್ಚಿದ್ದ.

ಬಾಗಿಲು ತೆಗೆದು ಶೂ ಬಿಚ್ಚಿಟ್ಟು ಒಳಗೆ ಬಂದ ಗಂಡ, “ಎಲ್ಲಿ ಖ್ಯಾತ ಕಥೆಗಾರರು?” ಎಂದು ಕೇಳಿದ್ದ.

“ಟೆರೇಸಿನ ಮೇಲೆ ನಕ್ಷತ್ರಗಳ ಕೆಳಗೆ ಸಿಗರೇಟು ಸುಡುತ್ತಿದ್ದರು, ಟೀ ಕೊಟ್ಟು ಬಂದೆ”, ಎಂದಷ್ಟೇ ಉತ್ತರಿಸಿ ಅವಳು ಗಂಡನ ಕೊರಳಿಗೆ ಜೋತು ಬಿದ್ದಳು.

ಸಂಜೆಯಾದರೂ ಗಂಡನ ಕೊರಳಲ್ಲಿ ಹಾಗೇ ಉಳಿದಿರುವ ಬೆಳಗ್ಗೆ ಹಚ್ಚಿದ್ದ ಸೆಂಟಿನ ಪರಿಮಳ.

(ಇಲ್ಲಸ್ಟ್ರೇಷನ್‌ ಕಲೆ: ರೂಪಶ್ರೀ ಕಲ್ಲಿಗನೂರ್‌)

ಇದೆಲ್ಲ ಗೊತ್ತಾಗುವ ಹೊತ್ತಿಗೆ ನಕುಲ ಬೆಳೆದು ಕಥೆಗಾರನಾಗಿದ್ದ. ಹುಟ್ಟಿಸಿದ ದೊಡ್ಡಪ್ಪ ತೀರಿಕೊಂಡು, ದೊಡ್ಡಮ್ಮನೂ ತೀರಿಕೊಂಡು, ನಡು ವಯಸ್ಕ ಅಮ್ಮ ಬಣ್ಣವಿಲ್ಲದ ಸೀರೆ ಉಟ್ಟುಕೊಂಡು ಮನೆಯ ಕಾವಿ ಸಿಮೆಂಟಿನ ನೆಲದ ಮೇಲೆ ಯೋಗಿನಿಯಂತೆ ಹೊಯ್ದಾಡುತಿದ್ದಳಂತೆ.

“ನೀನು ನನ್ನ ಎಷ್ಟು ಪ್ರೀತಿಸುತ್ತೀಯಾ?” ಕೇಳಿದ್ದಳು.

“ಏಳು ಆಕಾಶದಷ್ಟು….. ಏಳು ಕಡಲಿನಷ್ಟು….. ಏಳು ಪಾತಾಳದಷ್ಟು….” ಆತ ಗೌತಮಿಯ ಕಿರಿದಾದ ಹಣೆಯನ್ನು ತನ್ನ ತುಟಿಗೆ ಒತ್ತಿ ಚುಂಬಿಸಿದ್ದ.

ಅವಳಿಗೆ ಯಾಕೋ ಸದ್ದಿಲ್ಲದೆ ಗಂಟೆಗಟ್ಟಲೆ ಅಳಬೇಕು ಅನ್ನಿಸುತ್ತಿತ್ತು.

ಆ ದಿನ ಸ್ನಾನದ ಕೋಣೆಯಲ್ಲಿ ಬಿಸಿ ನೀರಿನ ಷವರನ್ನು ಜೋರಾಗಿ ಸುರಿಯಲು ಬಿಟ್ಟು ತಣ್ಣನೆಯ ನೆಲದಲ್ಲಿ ಅಂಗಾತ ಮಲಗಿ ಈ ಇಬ್ಬರು ಗಂಡಸರನ್ನು ನೆನೆದು ಗಂಟೆಗಟ್ಟಲೆ ಅತ್ತಿದ್ದಳು. ಕೆಂಪುಕೆಂಪಾಗಿ ಮೈ ಒರೆಸಿ ಹೊರ ಬಂದಾಗ ಅವರಿಬ್ಬರು ಹಳೆಯ ಕಾಲದ ಗೆಳೆಯರಂತೆ ನಡುವೆ ತಾನೇನೂ ಅಲ್ಲವೆಂಬಂತೆ ರಮ್ಮಿ ಆಡುತ್ತಿದ್ದರು.

ನಕುಲನ ಕೈಯಲ್ಲಿ ಉರಿಯುತ್ತಿರುವ ಸಿಗರೇಟು. ಗಂಡ ಇಸ್ಪೀಟಿನ ಎಲೆಗಳನ್ನು ಕಲಸುತ್ತಿದ್ದ.

“ಇನ್ನೊಮ್ಮೆ ಟೀ ಮಾಡಲಾ?” ಗೌತಮಿ ಕೇಳಿದ್ದಳು.

“ಇದು ಟೀಯ ಹೊತ್ತಲ್ಲ, ಕೆಂಪು ದ್ರಾಕ್ಷಾರಸದ ಸಮಯ” ನಕುಲ ನಕ್ಕಿದ್ದ.

ಅದಕ್ಕೆ ಕಾಯುತ್ತಿದ್ದಂತೆ ಗಂಡ ಪುಸ್ತಕದ ಕವಾಟದ ಮೂಲೆಯಲ್ಲಿ ಅಡಗಿಸಿಟ್ಟಿದ್ದ ದ್ರಾಕ್ಷಾರಸದ ಬಾಟಲನ್ನು ಹೊರತೆಗೆದಿದ್ದ.

ಎಂದೂ ಕುಡಿಯದ ಗಂಡ ಯಾವತ್ತೋ ಒಮ್ಮೆ ಬರುವ ಜೀವದ ಗೆಳೆಯನಿಗಾಗಿ ತಂದಿಡುತ್ತಿದ್ದ ದ್ರಾಕ್ಷಾರಸದ ಬಾಟಲು.

ಒಂದು ಸಲ ತಾನೂ ರುಚಿ ನೋಡಬೇಕೆಂದು ಗೌತಮಿ ಎಷ್ಟು ಅವಲತ್ತುಕೊಂಡರೂ ಕುಡಿಯಲು ಬಿಡದೆ ಸತಾಯಿಸುತ್ತಿದ್ದ.

ಗೌತಮಿಗೆ ಯಾಕೋ ಈವತ್ತು ತಾನು ನಕುಲನ ಜೊತೆ ಕುಡಿಯಲೇಬೇಕು ಅನ್ನಿಸಿತ್ತು.

ಅಚ್ಚರಿಯಾಗುವಂತೆ ಗಂಡ ಅವಳಿಗೂ ಒಂದು ಗ್ಲಾಸಲ್ಲಿ ದ್ರಾಕ್ಷಾರಸ ಸುರಿದು ಕೈಗಿತ್ತ. ಇನ್ನೊಂದು ಗ್ಲಾಸನ್ನು ನಕುಲನಿಗೆ ಕೊಟ್ಟು ಆಟ ನಿಲ್ಲಿಸಿದ ಜೂಜುಗಾರನಂತೆ ಇಸ್ಪೀಟಿನ ಎಲೆಗಳನ್ನು ಟೇಬಲ್ಲಿನ ಮೇಲೆ ಸುರಿದು “ಮೊದಲು ದ್ರಾಕ್ಷಾರಸ ಆನಂತರ ಜೂಜು”, ಎಂದು ನಕ್ಕಿದ್ದ. ಗೌತಮಿ ನಾಲಿಗೆ ತುದಿಗೆ ದ್ರಾಕ್ಷಾರಸವನ್ನು ಕೊಂಚ ತಾಗಿಸಿ ರುಚಿನೋಡಿ ಬಾಯೊಳಕ್ಕೆ ತೆಗೆದುಕೊಂಡು ಬಾಯ ನಾನಾ ಮೂಲೆಗಳಿಗೆ ಅದನ್ನು ಹರಿದಾಡಿಸಿ ನಿರುಮ್ಮಳಗೊಂಡು ಗಂಟಲಿಗೆ ಇಳಿಸಿದ್ದಳು.

ಮೊದಲ ಸಲವಾದರೂ ನುರಿತ ರುಚಿಗಾರ್ತಿಯಂತೆ ಆಕೆ ಆ ಕೆಂಪುದ್ರವವನ್ನು ಒಡಲೊಳಕ್ಕೆ ಇಳಿಸುತ್ತಿರುವುದನ್ನು ಆ ಗಂಡಸರಿಬ್ಬರು ಅವಕ್ಕಾಗಿ ನೋಡಿದ್ದರು.

******

ಗೌತಮಿಗೆ ಕಡಲ ಕತ್ತಲಲ್ಲಿ ಒಬ್ಬಳೇ ಹೆದರಿಕೆಯಾಗುತ್ತಿತ್ತು. ಅವರಿಬ್ಬರು ಆಟದ ನಡುವೆ ಮತ್ತೆ ಅವಳೊಬ್ಬಳನ್ನೇ ಬಿಟ್ಟುಹೋಗಿರುವಂತೆ ಅನಿಸಿ ಮೈನಡುಗಿತ್ತು. ಇಬ್ಬರನ್ನೂ ಕೂಗಿ ಕರೆದರೆ ಅಲ್ಲೆಲ್ಲೂ ಕಾಣಿಸಲಿಲ್ಲ. ಇರುಳ ಸಂಗೀತದಂತೆ ಕೇಳಿಸುತ್ತಿದ್ದ ಕಡಲ ಮೇಲಿನ ಗಾಳಿ ಇದೀಗ ಒಂದು ಧೀರ್ಘ ಅಳುವಿನಂತೆ ಸುಯ್ಯಲಿಡುತ್ತಿತ್ತು. ಗೌತಮಿ ಕಡಲಿನ ಇರುಳ ಸದ್ದಿಗೆ ಕಿವಿಗೊಟ್ಟು ಕಣ್ಣು ಮುಚ್ಚಿಕೊಂಡು ಕೇಳಲು ತೊಡಗಿದಳು. ಟೆರೇಸಿನ ಮೇಲೆ ತನ್ನ ಉದ್ವಿಗ್ನ ಕಥೆಗಳನ್ನು ಹೇಳುತ್ತಿದ್ದ ನಕುಲನ ಭುಜದ ಮೇಲೆ ಹಾರುತ್ತಿದ್ದ ನೀಳಕೂದಲು, ಕೆಳಗಿಂದ ಕೇಳುತ್ತಿದ್ದ ಮಕ್ಕಳ ಕೇಕೆ, ಮುಳಗುತ್ತಿರುವ ಸೂರ್ಯನನ್ನು ಹಿಂದಿಕ್ಕಿ ಕೆಂಪು ಬೆಳಕಿನಲ್ಲಿ ಪೂರ್ವದ ಕಡೆ ಹಾರುತ್ತಿರುವ ಹೆಸರು ಗೊತ್ತಿಲ್ಲದ ಹಕ್ಕಿಗಳ ಹಸಿವು ಬಾಯಾರಿಕೆ, ಬಣ್ಣಬಣ್ಣದ ರೆಕ್ಕೆಗಳ ಮೈಥುನದ ಆಸೆಗಳು, ಮೆಲ್ಲಗೆ ಪೂರ್ವದ ಕಡೆಯಿಂದ ಉದಯಿಸುತ್ತಿರುವ ಚಂದ್ರನ ಬೆಳಕ ಜೊತೆಯಲ್ಲೇ ಬೀಸಿ ಬರುತ್ತಿರುವ ತಂಗಾಳಿ….

ಸುಧೀರ್ಘ ಜೊಂಪಿನಿಂದ ಎದ್ದವಳಂತೆ ಕಣ್ಣುಬಿಟ್ಟ ಗೌತಮಿಗೆ ಗಂಡನ ಹೆಗಲಿಗೆ ಆತುಕೊಂಡು ಕಡಲ ನೀರಿಂದ ಎದ್ದು ಬರುತ್ತಿರುವ ನಕುಲ ಚಂದ್ರನ ಬೆಳಕಿನಲ್ಲಿ ಕಾಣಿಸಿಕೊಂಡ.

“ಹೇ, ಇವನು ಕಡಲ ನೀರನ್ನು ಸೀಳಿಕೊಂಡು ಮುಂದೆ ಈಸುತ್ತ ಸಾಯಲು ಹೊರಟಿದ್ದ. ಅವನನ್ನು ಬದುಕಿಸಲು ಹೆಣಗುತ್ತಿದ್ದ ನನ್ನನ್ನೂ ಸಾಯಿಸುತ್ತಿದ್ದ, ತಥ್ ಇವನು ಇನ್ನು ಸ್ವಲ್ಪ ಹೋಗಿಬಿಟ್ಟಿದ್ದರೆ ಈ ಕಡಲು ಎರಡು ಹೆಣಗಳನ್ನು ನೋಡಬೇಕಿತ್ತು”.

ಗೌತಮಿಯ ಗಂಡ ತೀರಾ ರೇಗಿಕೊಂಡು ಕಡಲಿನಿಂದ ಎದ್ದು ಬರುತ್ತಿದ್ದ.

ಅವನ ಹಿಂದೆ ಅರೆಜೀವದಂತೆ ನಡೆದು ಬರುತ್ತಿದ್ದ ನಕುಲ ತೀರಾ ಇಳಿದು ಹೋಗಿದ್ದ.

ಆ ಚಂದ್ರನ ಬೆಳಕಿನಲ್ಲಿ ಅವನ ಕಣ್ಣುಗಳಲ್ಲಿ ಸಾವು ಇಣುಕಿದಂತನಿಸಿ ಮಾಯವಾಗುತ್ತಿತ್ತು.

“ನೀನು ರೂಮಿಗೆ ಹೋಗು, ಕಡಲಲ್ಲಿ ಸಾಯಲು ಹೊರಟಿದ್ದ ಈ ಕಥೆಗಾರನನ್ನು ನಾನು ವಿಚಾರಿಸಿಕೊಳ್ಳುತ್ತೇನೆ.”

ಗೌತಮಿ ಎಲ್ಲಿಲ್ಲದ ಧೈರ್ಯ ತಂದುಕೊಂಡು ಗಂಡನನ್ನು ಕಳಿಸಿದ್ದಳು. ಆತ ತಲೆಯನ್ನು ಜೋರಾಗಿ ಅಲ್ಲಾಡಿಸಿಕೊಂಡು ಕತ್ತಲಲ್ಲಿ ಮರೆಯಾಗಿದ್ದ. ನಕುಲ ಏನೂ ಹೇಳದೆ ಸಿಗರೇಟೊಂದನ್ನು ಹಚ್ಚಿಕೊಂಡು ಪಕ್ಕದಲ್ಲಿ ಕುಳಿತುಕೊಂಡ.

“ಯಾಕೆ ಸಾಯಲು ಹೊರಟಿದ್ದೆ ಮಗೂ”, ಎಂದು ಕೇಳಿದಳು.

“ಸಾಯಲು ಹೊರಟಿದ್ದಲ್ಲ, ಸುಮ್ಮನೆ ಕಡಲಿನ ನೀರನ್ನು ಸೀಳಿಕೊಂಡು ಸೂರ್ಯನ ಹಿಂದೆ ಹೋಗಬೇಕು ಅಂತ ಅನಿಸುತ್ತಿತ್ತು. ಅಮ್ಮನೂ ಅಷ್ಟೇ ಯಾರಿಗೂ ಎಲ್ಲಿಗೂ ಅಂತ ಹೇಳದೆ ಅಡಿಕೆ ತೋಟದ ಬೇಲಿ, ಸೊಪ್ಪಿನ ಗುಡ್ಡವನ್ನು ದಾಟಿ ಎಲ್ಲಿಗೋ ಹೋಗುತ್ತಿದ್ದಳು. ಇಂತಹದೇ ಕತ್ತಲಲ್ಲಿ ಎಲ್ಲಿಂದಲೋ ವಾಪಾಸು ಬಂದು ಮನೆಯ ಹೊಸ್ತಿಲಲ್ಲಿ ಒಬ್ಬಂಟಿಯಾಗಿ ಕುಳಿತಿರುತ್ತಿದ್ದಳು. ಆಗ ನಾನು ಇನ್ನೂ ಹೈಸ್ಕೂಲು ಹುಡುಗ. ಒಂದೊಂದು ಸಲ ಬೇಕೆಂದೇ ಅವಳು ಹೋದ ವಿರುದ್ಧ ದಿಕ್ಕಿನಲ್ಲಿ ಅವಳನ್ನು ಹುಡುಕಿಕೊಂಡು ನಾನೂ ಹೊರಟು ಹೋಗುತ್ತಿದ್ದೆ. ನಾವಿಬ್ಬರೂ ಒಬ್ಬರಿಗೊಬ್ಬರು ಸಿಗಲೇಬಾರದು, ಇಲ್ಲಿಗೆ ಬರಲೇ ಬಾರದೆಂದುಕೊಂಡು ನಡೆಯುತ್ತಿದ್ದೆವು. ನಮಗಿಬ್ಬರಿಗೂ ನಾವು ಬದುಕುತ್ತಿದ್ದ ಜಾಗದಲ್ಲಿ ಇರುವುದು ಅಸಹ್ಯ ಅನ್ನಿಸುತ್ತಿತ್ತು. ಆದರೆ ಎಲ್ಲೂ ಹೋಗಲಾರದೆ ಅಸಹಾಯಕರಾಗಿ ಮರಳಿ ಬಂದು ಹೊಸ್ತಿಲಲ್ಲಿ ಕೂರುತ್ತಿದ್ದೆವು. ಇವತ್ತೂ ಹಾಗೇ, ಬದುಕು ಅಸಹ್ಯ ಅನಿಸುತ್ತಿತ್ತು. ಅದಕ್ಕೇ ಹೊರಟಿದ್ದೆ. ನಿನ್ನ ಗಂಡ ಬಂದು ತಡೆಯದಿದ್ದರೆ ಹೊರಟೇ ಹೋಗುತ್ತಿದ್ದೆನೇನೋ”.

ನಕುಲ ಸಾಯಲು ಹೊರಟ ನಿಜವನ್ನು ಇನ್ಯಾರದೋ ಕಥೆ ಎನ್ನುವಂತೆ ಕಡಲ ಮೇಲೆ ಹಾಲಬೆಳದಿಂಗಳಲ್ಲಿ ತಣ್ಣಗೆ ಹೇಳುತ್ತಿದ್ದ. ತನ್ನದೇ ಸಾವಿನ ಸಂಗತಿಯನ್ನು ಹೇಳುವಾಗಲೂ ಹೊಳೆಯುತ್ತಿರುವ ಅವನ ಮಾಟಗಾರನಂತಹ ಕಣ್ಣುಗಳು!

“ನನ್ನನ್ನು ಈ ಹೊತ್ತಲ್ಲಿ ಹೀಗೆ ನೋಡಿದರೆ ನಿನಗೆ ಏನನಿಸುತ್ತದೆ ಗೌತಮಿ?” ಅವನು ತಟ್ಟನೇ ಕೇಳಿದ್ದ.

“ತಾನೂ ಕಡಲಲ್ಲಿ ಮುಳುಗಿ ಸಾಯುವುದಲ್ಲದೆ ನನ್ನ ಗಂಡನನ್ನೂ ಸಾಯಿಸಲು ಹೊರಟ ಕೊಲೆಗಾರನಂತೆ ಕಾಣುತ್ತಿರುವೆ”, ಎಂದು ಹೇಳಬೇಕನಿಸಿತ್ತು ಅವಳಿಗೆ.

ಆದರೆ ಹೇಳಲಿಲ್ಲ.

“ತುಂಬ ಪಾಪ ಅನ್ನಿಸುತ್ತದೆ”, ಎಂದು ಅವನ ಮುಡಿಯಲ್ಲಿ ಕೈಯ್ಯಾಡಿಸಿದಳು.

“ನಿನ್ನ ಗಂಡ ಸಿಟ್ಟಲ್ಲಿ ಹೋದ ಮೇಲೆ ನೀನೂ ನನ್ನ ಹಾಗೆ ಒಂಟಿ ಅನಿಸುತ್ತದೆ, ನೀವಿಬ್ಬರು ಜೊತೆಯಲ್ಲಿದ್ದಾಗ ರತಿಮನ್ಮಥರ ಹಾಗೆ ಕಾಣಿಸುತ್ತಿದ್ದಿರಿ”, ಅವನೂ ಸುಮ್ಮಸುಮ್ಮನೆ ಅವರಿಬ್ಬರನ್ನು ಹೊಗಳಲು ನೋಡುತ್ತಿದ್ದ.

“ಗೌತಮಿ ನೀನು ಯಾವತ್ತಾದರೂ ಹಳ್ಳಿಯ ಕಡೆ ಕಾಡು ಪ್ರಾಣಿಗಳು ಗದ್ದೆಗೆ ನುಗ್ಗದ ಹಾಗೆ ನಿಲ್ಲಿಸಿರುವ ಬೆದರುಬೊಂಬೆಗಳನ್ನು ನೋಡಿದ್ದೀಯಾ?” ಅವನು ಕೇಳಿದ್ದ.

‘ಹೌದು, ಯಾಕೀಗ?’

“ನನ್ನ ನೋಡಿದರೂ ಬೆದರುಬೊಂಬೆಯ ಹಾಗೆಯೇ ಕಾಣಿಸುತ್ತೇನಲ್ಲಾ?” ಅವನು ಕೇಳಿದ್ದ

“ಹೌದು ಲೋಕದ ಬಹುತೇಕ ಗಂಡಸರು ಬೆದರುಬೊಂಬೆಗಳೇ. ಆದರೆ ಒಂದೇ ಒಂದು ವ್ಯತ್ಯಾಸವೆಂದರೆ ಅವರು ರಕ್ತಮಾಂಸಗಳಿಂದ ತುಂಬಿಕೊಂಡಿರುತ್ತಾರೆ ಆದರೆ ಬೆದರುಬೊಂಬೆಗಳ ಒಳಗೆ ಹುಲ್ಲು ತುಂಬಿಸಿರುತ್ತಾರೆ”. ಎಂದು ಹೇಳಬೇಕೆಂದುಕೊಂಡಳು.

ಆದರೆ ಹೇಳಲಿಲ್ಲ.

“ನಿನಗೆ ಯಾಕೋ ಮರುಳು”, ಎಂದು ಅವನ ಮೂಗು ಹಿಂಡಿದಳು.

“ನೀನು ಬೆದರುಗೊಂಬೆಯಲ್ಲ, ನನ್ನ ಕಥೆಗಾರ”. ಎಂದಳು.

ಅವನು ಯಾಕೋ ಏನೋ ಮಾತಾಡಲಿಲ್ಲ

“ನಕುಲ, ಯಾಕೋ ಗೊತ್ತಿಲ್ಲ ಈ ರಾತ್ರಿಯ ಅಲೆಗಳಿಗೆ ಮತಿಭ್ರಮಣೆಯಾಗುತ್ತಿದೆ ನನಗೆ”, ಎಂದಳು.

ಅವನು ಅವಳ ಹತ್ತಿರಕ್ಕೆ ಸರಿದು ಮೇಲೆ ಬೆಳದಿಂಗಳಲ್ಲಿ ಬೆಳಗುತ್ತಿರುವ ಆಕಾಶ ನೋಡುತ್ತಿದ್ದ.

ಅವಳಿಗೆ ಯಾಕೋ ಅವನ ನಿಶ್ಚಲ ಕಣ್ಣುಗಳನ್ನು ನೋಡಿ ಭಯವಾಗುತ್ತಿತ್ತು.

“ನಿನ್ನ ಅಮ್ಮ ಊರಲ್ಲಿ ಒಬ್ಬರೇ ಇರುತ್ತಾರಲ್ಲಾ? ಅವರಿಗೆ ಯಾವತ್ತೂ ಭಯವಿಲ್ಲವಾ?” ಅವಳು ಸುಮ್ಮನೆ ಕೇಳಿದ್ದಳು.

“ಆಗುತ್ತಿರಬಹುದು ಅನಿಸುತ್ತದೆ, ಹೆಂಗಸರ ಭಯ ಮತ್ತು ಮತಿಭ್ರಮಣೆ ನಡುವೆ ಬದುಕುವುದೇ ಗಂಡಸರ ಬಾಳು”

ನಕುಲ ಇನ್ನೊಂದು ಸಿಗರೇಟು ಹಚ್ಚಿದ್ದ.

“ಹೇಯ್ ನಕುಲ ಇವತ್ತು ನಿನ್ನ ಸಿಗರೇಟಿನ ಪರಿಮಳವೂ ಎಷ್ಟು ಹಿತವಾಗಿ ಮೂಗಿನೊಳಕ್ಕೆ ಹರಡುತ್ತಿದೆ ನನಗೂ ಸೇದಬೇಕನ್ನಿಸುತ್ತಿದೆ”, ಎಂದುಕೊಂಡವಳು ಏನೂ ಹೇಳದೆ ಅವನ ಭುಜಕ್ಕೆ ಒರಗಿಕೊಂಡಳು.

“ಗೌತಮಿ ನಿನ್ನ ಮುಡಿಗೂ ನನ್ನ ಅಮ್ಮನದೇ ಕೂದಲಿನ ಪರಿಮಳ, ಯಾಕೋ ಅವಳನ್ನೂ ಕಡಲು ನೋಡಲು ಇಲ್ಲಿಗೆ ಕರೆದುಕೊಂಡು ಬರಬೇಕಿತ್ತು ಅನ್ನಿಸುತ್ತಿದೆ”, ಅವನು ಅವಳ ಮಡಿಲಲ್ಲಿ ಮುಖ ಹುದುಗಿಸಿ ಅವಳ ಮೊಣಗಂಟಿಗೆ ಅಂಟಿಕೊಂಡಿದ್ದ ಕಪ್ಪುದಾರದ ಜೊತೆ ಬೆರಳಿಂದ ಆಟವಾಡಲು ತೊಡಗಿದ.

ಅವಳು ಅವನ ತಲೆ ನೀವುತ್ತಿದ್ದಳು.

“ನಿನ್ನ ಹಳ್ಳಿಹೊಳೆಯ ಗದ್ದೆಯಲ್ಲಿ ನಿಂತಿರುವ ನೀರು, ಬೆಳದಿಂಗಳಲ್ಲಿ ಎದ್ದು ನಿಂತಿರುವ ಸೊಪ್ಪಿನ ಬೆಟ್ಟ ನೋಡಬೇಕು”, ಎನ್ನುತ್ತ ಅವನ ಕೈ ಬೆರಳುಗಳನ್ನು ತನ್ನ ಕಾಲಿಂದ ಎತ್ತಿಕೊಂಡು ತನ್ನ ಕೈ ಬೆರಳುಗಳಿಗೆ ಕೋಸಿಕೊಂಡು ಅವಳ ತಣ್ಣಗಿನ ಮೂಗನ್ನು ಅವನ ಮೂಗಿಗೆ ಸವರಿದಳು.

ಅವನು ಬೆಚ್ಚಗಿದ್ದ.

ಹುಣ್ಣಿಮೆಯ ಬೆಳಕಿಗೆ ಉನ್ಮತ್ತವಾಗಿದ್ದ ಕಡಲ ಅಲೆಗಳು ಅವರ ಕಾಲನ್ನು ಸವರುತ್ತಿದ್ದವು.

“ಈಗ ಹೇಳು ಈ ಕಡಲು ಗಂಡಸಾ ಹೆಂಗಸಾ….. ಈ ಕಡಲು ಗಂಡಸಾ ಹೆಂಗಸಾ……” ಅವನು ಕೇಳಿದ್ದನ್ನೇ ಮತ್ತೆ ಮತ್ತೆ ಕೇಳುತ್ತಿದ್ದ.

ಆಗಸದಿಂದ ಉಕ್ಕಿದಂತೆ ಅಲೆಗಳು ನೆಲಕ್ಕೆ ಹೊರಳಿ ವಾಪಾಸು ಹೋಗುತ್ತಿದ್ದವು.

ನೆತ್ತಿಯ ಮೇಲೆ ಪೂರ್ಣಚಂದ್ರ ತಲುಪಿದಾಗ ಇರುಳಿನ ಕಡಲು ಇನ್ನೂ ಜೋರಾಗಿ ಅಬ್ಬರಿಸುತ್ತಿತ್ತು.

ಒಳಗಿನ ಎಲ್ಲವನ್ನೂ ಹೊರಕ್ಕೆ ತಂದು ಮತ್ತೆ ಒಳಕ್ಕೆ ಹೊರಟು ಹೋಗುತ್ತಿತ್ತು.

ಅಯ್ಯೋ ದೇವರೇ ಈ ಇರುಳು ಇನ್ನು ಸ್ವಲ್ಪ ಹೊತ್ತಲ್ಲಿ ಮುಗಿದೇ ಹೋಗುತ್ತದಲ್ಲಾ ಎಂಬಂತೆ ಅವಳು ನಕ್ಷತ್ರಗಳನ್ನು ಎಣಿಸುತ್ತಿದ್ದಳು.


ದೂರದಲ್ಲಿ ಒಂದು ಹಳೆಯ ಹಾಡನ್ನು ಹಾಡುತ್ತಾ ಅವಳ ಗಂಡ ಆ ಹುಣ್ಣಿಮೆಯ ಚಂದ್ರಿಕೆಯಲ್ಲಿ ಅವರ ಕಡೆ ನಡೆದು ಬರುವುದು ಕಾಣಿಸುತ್ತಿತ್ತು.