ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ…. ಅಲ್ಲೇನೋ ಎಲ್ಲೂ ಯಾವ ಆತಂಕವೂ ಕಾಣಲಿಲ್ಲ. ದಾರಿಯುದ್ದಕ್ಕೂ ಹೊಲಗಳಲ್ಲಿ ಪೈರು ಬೆಳೆದು ನಿಂತಿತ್ತು.
ನೆನ್ನೆಯಷ್ಟೇ ಬಿಡುಗಡೆಯಾದ ಡಾ. ಜೆ.ಎಸ್.ಕುಸುಮಗೀತ ಅನುವಾದಿಸಿದ ಹಿಮಾಂಶು ಜೋಷಿಯವರ “ಒಂದು ಅರ್ಥಪೂರ್ಣ ಸತ್ಯ”, ಕಥಾ ಸಂಕಲನದಿಂದ ಒಂದು ಕತೆ “ಈಬಾರಿ” ನಿಮ್ಮ ಓದಿಗೆ

 

ಸತ್ಯ ಮತ್ತು ಸತ್ಯದ ನಡುವೆಯೂ ಒಂದು ಅಂತರವಿರುತ್ತದೆ. ಇದೇ ಅಂತರ ಒಮ್ಮೊಮ್ಮೆ ಎಷ್ಟು ದೊಡ್ಡ ಸಮಸ್ಯೆ ತಂದೊಡ್ಡುತ್ತದೆ!

ಅತಿಮಾಳ ಫೋನ್ ಬಂದಿತ್ತು ನೆನ್ನೆ ಅಮೆರಿಕಾದಿಂದ. ಅದೆಷ್ಟು ಗಾಬರಿ ಇತ್ತು ಅವಳ ದನಿಯಲ್ಲಿ!

“ಕ್ಷಮಿಸಿ ಅಣ್ಣ! ನಿಮ್ಮನ್ನು ನಿದ್ದೆಯಿಂದ ಎಬ್ಬಿಸುತ್ತಿದ್ದೀನಿ. ಈಗ ಅಲ್ಲಿ ರಾತ್ರಿ ಮೂರುಗಂಟೆ ಆಗಿರಬಹುದಲ್ಲವಾ! ನೀವು ಮಲಗಿರಬಹುದು. ಅವೇಳೆಯಲ್ಲಿ ಎಬ್ಬಿಸಿದ್ದಕ್ಕೆ…..!”

“ಅರೆ, ನಾನು ಏಳುವ, ನೀನು ಎಬ್ಬಿಸುವ ಮಾತು ಬಿಡು….. ಅದೇನು ಅಂತ ಹೇಳಾದರೂ ಹೇಳು. ನೀನು ಇಷ್ಟೇಕೆ ಗಾಬರಿಗೊಂಡಂತೆ ಇದ್ದೀಯ? ಅಲ್ಲಿ ಎಲ್ಲ ಕ್ಷೇಮ ತಾನೆ!”

“ಇಲ್ಲಿ ಎಲ್ಲ ಸರಿಯಾಗಿದೆ ಅಣ್ಣ! ಅಲ್ಲಿಯ ಚಿಂತೆ ನನ್ನನ್ನು ಕಿತ್ತು ತಿನ್ನುತ್ತಿದೆ. ನೆನ್ನೆಯಿಂದ ಎಷ್ಟು ಸಲ ಅಪ್ಪನಿಗೆ ಫೋನ್ ಮಾಡಿದೆ, ಆದರೆ ಪ್ರತಿ ಸಲವೂ `ಎಂಗೇಜ್ಡ್’ ಬರ್ತಾ ಇದೆ.”

“ಆದರೆ ಇದರಲ್ಲಿ ಆತಂಕಪಟ್ಟುಕೊಳ್ಳುವುದೇನಿದೆ? `ಎಂಗೇಜ್ಡ್’ ಆಗಿರಲೂ ಬಹುದು….”

“ಹಾಗಾದರೇನು ಇಡೀ ಹಗಲೂ-ರಾತ್ರಿ `ಎಂಗೇಜ್ಡ್’ ಇರುತ್ತಾ? ಅಪ್ಪ-ಅಮ್ಮ ಇಬ್ಬರೇ ಇರುವರಲ್ಲವೇ? ಸಾಮಾನ್ಯವಾಗಿ ಅವರ ಫೋನ್ ಸುಮ್ಮನೆ ಹಾಗೇ ಉಪಯೋಗಿಸದೇ ಬಿದ್ದಿರುತ್ತದೆ. ಅಲ್ಲಿ ಮೀರಾ ಇದ್ದಿದ್ದರೆ ಆಗ ಅರ್ಥ ಮಾಡಿಕೊಳ್ಳಬಹುದಿತ್ತು…. ಆದರೆ ಈಗ ಇದು…. ಇದು….?” ಹೇಳುತ್ತಾ ಹೇಳುತ್ತಾ ಅವಳು ಹಾಗೆಯೇ ನಿಲ್ಲಿಸಿ ಬಿಡುತ್ತಾಳೆ.

“ಅರೆ, ಅತಿ, ನಿನಗೇನು ತಾನೇ ಹೇಳಲಿ. ಅಯ್ಯೋ ರಾಮ, `ಎಂಗೇಜ್ಡ್’ ಆಗಿಲ್ಲದಿದ್ದರೆ ಕೆಟ್ಟು ಹೋಗಿರಬಹುದು! ಇದೇನು ನಿಮ್ಮ ವಾಷಿಂಗ್ಟನ್ ಅಥವಾ ನ್ಯೂಯಾರ್ಕ್ ಅಲ್ಲವಲ್ಲ! ಇಲ್ಲಂತೂ ದಿನಬೆಳಗೂ ರಸ್ತೆಗಳಲ್ಲಿ ಅಗೆಯುವ ಕೆಲಸ ನಡೆಯುತ್ತಲೇ ಇರುತ್ತದೆ. ಕೇಬಲ್ ಫಾಲ್ಟ್ ಆಗುವುದು ಸರ್ವೇ ಸಾಮಾನ್ಯ.” ನಾನು ಶಾಂತದನಿಯಲ್ಲಿ ಹೇಳುತ್ತೇನೆ.

ಕಾರಣವಿಲ್ಲದೆ ಗಾಬರಿ ಆಗುವುದು ಅತಿಮಾಳ ಸ್ವಭಾವ, ನನಗೆ ಗೊತ್ತು. ಕಳೆದ ಬಾರಿ ಎರಡು ದಿನಗಳ ಮಟ್ಟಿಗೆ ದೊಡ್ಡಪ್ಪ ಮೀರತ್ ಗೆ ಹೋಗಿದ್ದಾಗಲೂ ಅವಳು ಹೀಗೇ ಗಾಬರಿಗೊಂಡಿದ್ದಳು. ಗಂಟಲಿನಿಂದ ಸರಿಯಾಗಿ ದನಿಯೂ ಹೊರಡುತ್ತಿರಲಿಲ್ಲ!

“ನಾನು ನಿಮಗೆ ಹೇಗೆ ತಿಳಿಸಿ ಹೇಳಲಿ ಅಣ್ಣಾ….! ಕಳೆದ ವಾರವಷ್ಟೇ ದೆಹಲಿಯಿಂದ ಕೃಷ್ಣಾ ಖರ್ ಬಂದಾ ನ್ಯೂಜರ್ಸಿಗೆ ಬಂದಿದ್ದಳು, ತನ್ನ ಚಿಕ್ಕಮ್ಮನನ್ನು ನೋಡಲು. ಸೌತ್ ದೆಹಲಿಯಲ್ಲಿ ದಿನಬೆಳಗೂ ವೃದ್ಧರ ಕೊಲೆಗಳಾಗುತ್ತಿರುತ್ತವೆ ಎಂದು ಹೇಳುತ್ತಿದ್ದಳು. ಮನೆಕೆಲಸದ ಆಳುಗಳೋ ಅಥವಾ ಕಳ್ಳಕಾಕರೋ ಬಂದು ಕತ್ತುಹಿಸುಕಿ ಹೋಗುತ್ತಾರೆ. ದಿನವೂ ದೆಹಲಿಯ ದಿನಪತ್ರಿಕೆಗಳಲ್ಲಿ ಇಂತಹ ವಾರ್ತೆಗಳು ಬರುತ್ತಿರುತ್ತವೆ. ಈಗಂತೂ ಇಂತಹ ಸಂಗತಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ…. ನಾನು ಕಳೆದ ಬಾರಿಯೇ ಫೋನ್ನಲ್ಲಿ ಅಮ್ಮನಿಗೆ ಹೇಳಿದ್ದೆ – ಕೆಲಸದಾಳನ್ನು ಕಳುಹಿಸಿಬಿಡು ಹಾಗೂ ಕಾನ್ಪುರದಿಂದ ಶೀಲೂ ಚಿಕ್ಕಮ್ಮನನ್ನು ಕರೆಸಿಕೊ… ವಿಧವೆ, ಎರಡು ಹೊತ್ತು ಊಟಕ್ಕಿಂತ ಇನ್ನೇನು ಬೇಕು ಅವರಿಗೆ! ಎಂದು.”

“ಓಹೋ, ಹಾಗಾದರೆ ಮನೆ ಆಳನ್ನು ದೊಡ್ಡಮ್ಮ ಕೆಲಸದಿಂದ ತೆಗೆದಿಲ್ಲ. ಅವನು ಅವರ ಕತ್ತು ಹಿಸುಕಿ ನಾಪತ್ತೆಯಾಗಿದ್ದಾನೆ ಅಲ್ವಾ?” ಸ್ವಲ್ಪ ನಕ್ಕು ನಾನು ಉತ್ತರಿಸುತ್ತೇನೆ.

ಇದರಿಂದ ಅವಳು ಇನ್ನಷ್ಟು ಸಿಡಿಮಿಡಿಗೊಳ್ಳುತ್ತಾಳೆ. “ಛೆ…. ನಿಮಗ್ಯಾಕೆ ಅರ್ಥವಾಗುವುದಿಲ್ಲ! ವಯಸ್ಸಾದ ತಂದೆ-ತಾಯಿಗಳು ಇಬ್ಬರೇ ಇದ್ದಾರೆ” ಅವಳ ದನಿ ಭಾರವಾಗುತ್ತದೆ, “ನಾನು ಇಲ್ಲಿದ್ದೀನಿ – ಸಾವಿರಾರು ಮೈಲಿಗಳಾಚೆ, ಅಮೆರಿಕದಲ್ಲಿ! ಇನ್ಯಾರಿದ್ದಾರೆ ನಮಗೆ! ನಿಮ್ಮಗಳ ಮೇಲೆ ಭರವಸೆ ಇಟ್ಟು ತಾನೇ ಅವರನ್ನು ಅಲ್ಲಿ ಬಿಟ್ಟಿರುವುದು…. ನಾನು ಎಷ್ಟು ಬಾರಿ ಹಟ ಮಾಡಿದ್ದೀನಿ! ಗ್ರೀನ್ಕಾರ್ಡ್ ಸಹ ಮಾಡಿಸಿಟ್ಟಿದ್ದೀನಿ! ಈ ಮಣ್ಣಿನ ಮನೆಯ ಮೇಲೆ ಅವರಿಗದೇನು ವ್ಯಾಮೋಹವೋ ಗೊತ್ತಿಲ್ಲ! ನಾನು ಯಾವಾಗ ಹಟ ಮಾಡಿದಾಗಲೂ ಅಪ್ಪ `ಇಮೋಷನಲ್’ ಆಗಿಬಿಡುವರು….”

(ಹಿಮಾಂಶು ಜೋಷಿ)

ನಾನು ಬೆಳಿಗ್ಗೆ ಸ್ವತಃ ವಸಂತವಿಹಾರ್ ಗೆ ಹೋಗಿ ಪತ್ತೆ ಮಾಡುವುದಾಗಿ ಆಶ್ವಾಸನೆ ಕೊಟ್ಟು ನಾಳೆ ರಾತ್ರಿ ಮತ್ತೆ ಫೋನ್ ಮಾಡಲು ಅವಳಿಗೆ ಹೇಳುತ್ತೇನೆ.
“ಇಲ್ಲ, ಇಲ್ಲ ಅಣ್ಣಾ! ರಾತ್ರಿಯವರೆಗೆ ತುಂಬಾ ತಡವಾಗಿ ಬಿಡುತ್ತದೆ, ನಾನು ನಾಲ್ಕಾರು ಗಂಟೆಗಳ ನಂತರ ಮತ್ತೆ ಫೋನ್ ಮಾಡುತ್ತೀನಿ.”

ಫೋನ್ ಇಟ್ಟ ನಂತರ ನಾನು ವಸಂತವಿಹಾರ್ ನಂಬರಿಗೆ ಫೋನ್ ಮಾಡುತ್ತೇನೆ.

ನಾನೂ ಈಚಿನ ಮೂರು ನಾಲ್ಕು ದಿನಗಳಿಂದ ಫೋನ್ ಮಾಡಿಲ್ಲ. ದೊಡ್ಡಮ್ಮನ ಕಡೆಯಿಂದಲೂ ಫೋನ್ ಬರಲಿಲ್ಲ.

ಫೋನ್ ಸಿಗದಿದ್ದಾಗ ನಿಜವಾಗಿಯೂ ಮನಸ್ಸಿನಲ್ಲಿ ಆತಂಕ ಮೂಡುತ್ತದೆ, ಅತಿಮಾ ಹೇಳುತ್ತಿದ್ದುದು ನಿಜವಲ್ಲ ತಾನೇ!

ಬೆಳಗಾಗುತ್ತಿದ್ದಂತೆಯೇ ನಾನು ವಸಂತವಿಹಾರ್ ತಲುಪುತ್ತೇನೆ.

ಹೊರಗಿನಿಂದಲೇ ಸ್ಥಿತಿ ಏನು ಎಂಬುದು ತಿಳಿದುಬಿಡುತ್ತದೆ.

ಮನೆಯ ಮುಂದಿದ್ದ ಯೂಕಲಿಪ್ಟಸ್ ಮರ ಬಿರುಗಾಳಿಯಿಂದ ಕೆಳಗೆ ಬಿದ್ದಿದೆ – ನಡುರಸ್ತೆಯಲ್ಲಿ ಹೆಬ್ಬಾವಿನಂತೆ. ಅದರೊಂದಿಗೇ ಟೆಲಿಫೋನ್ ತಂತಿಗಳು ಸುತ್ತಿಕೊಂಡಿದ್ದ ಕಂಬವೂ.

ಒಳಗೆ ದೊಡ್ಡಮ್ಮ ದೇವರ ಮನೆಯಲ್ಲಿ ವಿಷ್ಣುಸಹಸ್ರನಾಮ ಜಪ ಮಾಡುತ್ತಾ ಕುಳಿತಿದ್ದಾರೆ ಮತ್ತು ದೊಡ್ಡಪ್ಪ ಬೆಳಗಿನ ದಿನಪತ್ರಿಕೆ ಓದುತ್ತಿದ್ದಾರೆ. ತುಂಬಾ ತನ್ಮಯತೆಯಿಂದ ಕೆಲವು ಸಮಾಚಾರಗಳನ್ನು ಹುಡುಕುತ್ತಾ.

ನನ್ನನ್ನು ನೋಡುತ್ತಿದ್ದಂತೆಯೇ ಅವರ ಮುಖ ಅರಳುತ್ತದೆ.

“ದಿನವೂ ದೆಹಲಿಯ ದಿನಪತ್ರಿಕೆಗಳಲ್ಲಿ ಇಂತಹ ವಾರ್ತೆಗಳು ಬರುತ್ತಿರುತ್ತವೆ. ಈಗಂತೂ ಇಂತಹ ಸಂಗತಿಗಳು ಸರ್ವೇಸಾಮಾನ್ಯವಾಗಿ ಬಿಟ್ಟಿವೆ…. ನಾನು ಕಳೆದ ಬಾರಿಯೇ ಫೋನ್ನಲ್ಲಿ ಅಮ್ಮನಿಗೆ ಹೇಳಿದ್ದೆ – ಕೆಲಸದಾಳನ್ನು ಕಳುಹಿಸಿಬಿಡು ಹಾಗೂ ಕಾನ್ಪುರದಿಂದ ಶೀಲೂ ಚಿಕ್ಕಮ್ಮನನ್ನು ಕರೆಸಿಕೊ… ವಿಧವೆ, ಎರಡು ಹೊತ್ತು ಊಟಕ್ಕಿಂತ ಇನ್ನೇನು ಬೇಕು ಅವರಿಗೆ! ಎಂದು.”

“ಅರೆ ಭೀರೂ, ನೀನು! ಇಷ್ಟು ಬೆಳಬೆಳಿಗ್ಗೆ!”

“ಹೌದು ದೊಡ್ಡಪ್ಪ, ನೆನ್ನೆ ರಾತ್ರಿ ಅತಿಮಾಳ ಫೋನ್ ಬಂದಿತ್ತು. ಎರಡು ದಿನಗಳಿಂದಲೂ `ಟ್ರೈ’ ಮಾಡುತ್ತಿದ್ದೀನಿ, ಮನೆಯ ಫೋನ್ ಸಿಗುತ್ತಿಲ್ಲ ಎಂದು ಹೇಳುತ್ತಿದ್ದಳು…. ಬಹುಶಃ ಅದಕ್ಕೇ ಸ್ವಲ್ಪ ಗಾಬರಿ ಆದಂತಿದ್ದಳು….”

ಅರೆ, ಅವಳಂತೂ ಸುಮ್ಮಸುಮ್ಮನೆ ಗಾಬರಿ ಮಾಡಿಕೊಳ್ಳುತ್ತಾಳೆ, ತನ್ನ ತಾಯಿ ಹಾಗೇ ಅಲ್ಲವಾ, ನೂರಕ್ಕೆ ನೂರರಷ್ಟು!” ಅವರು ನಸುನಗುತ್ತಾ ಹೇಳುತ್ತಾರೆ, “ಭಾರತದಲ್ಲಿ ಭಾರಿ ಹೊಡೆದಾಟ ಬಡಿದಾಟ ನಡೆದಿದೆ. ಇಡೀ ದೇಶ ರಕ್ತದಿಂದ ತೊಯ್ದು ಹೋಗುತ್ತಿದೆ ಎಂದು ಅಲ್ಲಿ ಎಲ್ಲರಿಗೂ ಅನ್ನಿಸಿದೆಯಂತೆ…. ನಾನು ಕಳೆದ ತಿಂಗಳು ತಾನೆ ಶ್ಯಾಮಾಳ ಮದುವೆಗಾಗಿ ಅಮೃತಸರಕ್ಕೆ ಹೋಗಿದ್ದೆ…. ಅಲ್ಲೇನೋ ಎಲ್ಲೂ ಯಾವ ಆತಂಕವೂ ಕಾಣಲಿಲ್ಲ. ದಾರಿಯುದ್ದಕ್ಕೂ ಹೊಲಗಳಲ್ಲಿ ಪೈರು ಬೆಳೆದು ನಿಂತಿತ್ತು. ತುಂಬಿದ ತೆನೆಗಳು ಕಂಗೊಳಿಸುತ್ತಿದ್ದವು. ಗಿರಣಿ ಕಾರ್ಖಾನೆಗಳಲ್ಲಿ ಮಾಮೂಲಿನಂತೆ ಕೆಲಸ ಸಾಗುತ್ತಿತ್ತು. ರಸ್ತೆಗಳಲ್ಲೂ ಜನರ ಓಡಾಟ ಎಂದಿನಂತಿತ್ತು. ಅಂಗಡಿಗಳಲ್ಲಿ ಸಾಮಾನುಗಳ ವ್ಯಾಪಾರ ನಡೆಯುತ್ತಿತ್ತು. ಶಾಲೆಗಳಲ್ಲಿ ಮಕ್ಕಳ ಓದು ಸಾಗುತ್ತಲಿತ್ತು….” ಸ್ವಲ್ಪ ಯೋಚಿಸಿ ಮತ್ತೆ ಅವರು ಹೇಳುತ್ತಾರೆ, “ಈ ನಮ್ಮ ಅತ್ತೀ ಅಂತೂ ತಲೆಯ ಮೇಲೆ ಬೆಟ್ಟ ಹೊತ್ತುಕೊಂಡಂತಾಡುತ್ತಾಳೆ. ಒಮ್ಮೆ ಫೋನ್ ಸಿಗದಿದ್ದರೆ ಅವಳ ಕೈಕಾಲು ಬಿದ್ದು ಹೋಗುತ್ತವೆ.”

“ದೂರ ಇರುವುದರಿಂದ ಹೆಚ್ಚು ಚಿಂತೆ ಆಗುತ್ತೆ ದೊಡ್ಡಪ್ಪ.”

“ಅಯ್ಯೋ ದೇವರೇ, ಇವರಿಗೆ ತಿಳಿಯುವುದಿಲ್ಲ!” ಇಷ್ಟರಲ್ಲಿ ದೊಡ್ಡಮ್ಮ ದೇವರ ಮನೆಯಿಂದ ಹೊರಗೆ ಬರುತ್ತಾರೆ. “ನಮಗೆ ಇವಳೇ ಮಗಳು, ಇವಳೇ ಮಗ! ಇವಳು ಮಾಡುವಷ್ಟು ಸೇವೆ ಶ್ರವಣಕುಮಾರ ಸಹ ಮಾಡಿರಲಾರ, ತನ್ನ ತಂದೆತಾಯಿಯರಿಗೆ. ಇಲ್ಲಿ ಬಂದಾಗ ಅವಳು ನನಗೆ ನೆಲದ ಮೇಲೆ ಕಾಲಿಡಲೂ ಬಿಡುವುದಿಲ್ಲ. `ಅಪ್ಪ, ತಗೋ ಈ ಮಾತ್ರೆ ತಿನ್ನು…. ಅಮ್ಮ, ನಿನಗೆ ಈ ಮಶೀನು ತಂದಿದ್ದೀನಿ, ತಲೆ ಮಾಲಿಶ್ ಮಾಡಿಕೊಳ್ಳಲು’ ಪ್ರತಿವಾರವೂ ಪತ್ರ ಬರೆಯುವಳು… ತಪ್ಪದೆ… ನೀನೇ ನೋಡು, ಈ ಕಪಾಟು ಔಷಧಿಗಳಿಂದ ಹೇಗೆ ತುಂಬಿ ಹೋಗಿದೆ. ಎಲ್ಲೆಲ್ಲಿಂದ ಸಂಗ್ರಹಿಸಿ ತರುತ್ತಾಳೋ ಗೊತ್ತಿಲ್ಲ! ಎಲ್ಲಾ ಕೊಳೆಯುತ್ತಾ ಬಿದ್ದಿವೆ….!”

ಆಳು ಚಹಾ ಮಾಡಿ ತಂದಾಗ ಈ ಬಾರಿ ನಾನು ದುರುಗುಟ್ಟಿ ಅವನ ಕಡೆಗೆ ನೋಡುತ್ತೇನೆ – ಹದಿನೆಂಟು ಹತ್ತೊಂಬತ್ತು ವರ್ಷದವನು… ಕಟ್ಟುಮಸ್ತಾದ ಶರೀರ…. ಮತ್ತೆ ನಾನು ಅವನ ಬಲಿಷ್ಠ ಕೈಗಳತ್ತ ಕಣ್ಣಾಡಿಸುತ್ತೇನೆ. ದೊಡ್ಡ ದೊಡ್ಡ ಕಣ್ಣುಗಳತ್ತಲೂ.

ಇದೇ ಮೊದಲ ಬಾರಿ ಈ ದಿನ ಅವನತ್ತ ಏಕೆ ಈ ದೃಷ್ಟಿಯಿಂದ ನೋಡುತ್ತಿದ್ದೇನೋ ಗೊತ್ತಿಲ್ಲ. ನನ್ನ ಬಗ್ಗೆ ನನಗೇ ವಿಷಾದವೂ ಆಗುತ್ತಿದೆ! ನಾನು ಹೀಗೆ ಯೋಚಿಸಬಾರದು!

“ಈ ಮೊದಲು ನೀನು ಎಲ್ಲಿದ್ದೆಯಪ್ಪಾ?” ಅವನನ್ನು ಕೇಳುತ್ತೇನೆ.

“ಸ್ವಾಮಿ, ಫತೇಪುರಿಯಲ್ಲಿ, ಚಾಂದನಿಚೌಕ್ ನಲ್ಲಿ, ರಾಮಸೂರತ್ ಢಾಬಾದಲ್ಲಿ!”

“ಪಿಕ್ ಪಾಕೆಟ್ ನವರ ಜತೆಗಿರಲಿಲ್ಲ ತಾನೆ?” ನಾನು ಹೇಳಿದ ಮಾತು ಬಹುಶಃ ಅವನಿಗೆ ಅರ್ಥವಾಗಿಲ್ಲ. ಅವನು ನನ್ನ ಮುಖವನ್ನು ನೋಡುತ್ತಾನೆ.
ಇಷ್ಟರಲ್ಲಿ ದೊಡ್ಡಮ್ಮ ತಿಂಡಿ ತಟ್ಟೆಯನ್ನು ತಾನೇ ತರುತ್ತಾರೆ.

“ಅತ್ತೀ ಫೋನ್ ಈಗೇನಾದರೂ ಬಂದರೆ, ಎಲ್ಲ ಸರಿಯಾಗಿದೆ ಅಂತ ಹೇಳಿಬಿಡು ಭೀರೂ. ನಾಳೆ ಹೊತ್ತಿಗೆ ಫೋನ್ ಸಹ ಸರಿಯಾಗುತ್ತೆ.” ದೊಡ್ಡಮ್ಮ ಅಲ್ಲೇ ಹತ್ತಿರದಲ್ಲಿದ್ದ `ಮೋಢಾ’ ಮೇಲೆ ಕುಳಿತುಕೊಳ್ಳುವರು. ಮಂಡಿಕೀಲುನೋವು, ಆದ್ದರಿಂದ ಹೆಚ್ಚು ಹೊತ್ತು ನಿಲ್ಲಲಾರರು.

“ಈ ಪತ್ರಿಕೆಗಳವರಂತೂ ಜೀವ ತೆಗೆದುಬಿಡುತ್ತಾರೆ. ಹತ್ತು ಹದಿನೈದು ಜನರ ಸಾವಿನ ಸುದ್ದಿ ಪ್ರಕಟಿಸದೇ ಇರುವ ದಿನವೇ ಇಲ್ಲ. ಈ ಸುದ್ದಿಗಳೇ ದೇಶ-ವಿದೇಶಗಳಿಗೆ ಹೋಗುತ್ತವೆ…. ವಿದೇಶಗಳಲ್ಲಿರುವ ಭಾರತೀಯರಿಗೆ ಇಲ್ಲಿ ಭಾರತದಲ್ಲಿ ಏನೇನು ನಡೆದು ಹೋಗುತ್ತಿದೆಯೋ ಅನ್ನಿಸುತ್ತದೆ….”

ಏನೋ ಯೋಚಿಸುತ್ತಾ ದೊಡ್ಡಪ್ಪ ಮಾತು ಮುಂದುವರಿಸುತ್ತಾರೆ. “ಕಳೆದ ವರ್ಷ ಇಂಥ ದುರ್ಘಟನೆಗಳಲ್ಲಿ ಅಮೆರಿಕದಲ್ಲಿ ಸಾವಿರಾರು ಜನ ಸತ್ತಿದ್ದರು ಎಂದು ಈಗ ಹಿಂದಿನ ವಾರವಷ್ಟೆ ಇಂಗ್ಲಿಷ್ ಪತ್ರಿಕೆಯಲ್ಲಿ ಬಂದಿತ್ತು. ನಮ್ಮಲ್ಲಿ ಹಣಕ್ಕಾಗಿ ಅಥವಾ ಮತ್ಯಾವುದೋ ಕಾರಣಕ್ಕಾಗಿ ಜನರ ಹತ್ಯೆ ಮಾಡುತ್ತಾರೆ…. ಆದರೆ ಅಲ್ಲಿ ಏನೂ ಮಾತಿಲ್ಲದೆ, ಹೀಗೇ ಕೂತುಕೂತಂತೆ ಕೊಂದು ಹಾಕಿದ ಪ್ರಸಂಗಗಳು ಎಲ್ಲಕ್ಕಿಂತ ಹೆಚ್ಚು ಎಂದು ಹೇಳುತ್ತಾರೆ. ತಿಂದು ತಿಂದು ಆ ಜನರು ಹುಚ್ಚರಾಗಿರುವಂತೆ ಕಾಣುತ್ತದೆ!”

ನಾನು ಹೊರಟು ನಿಂತಾಗ ದೊಡ್ಡಮ್ಮ ಒಳಗಿನಿಂದ ಒಂದು ಸ್ವೆಟರ್ ತೆಗೆದುಕೊಂಡು ಬರುತ್ತಾರೆ. “ಅತ್ತಿ ನಿನಗಾಗಿ ಕಳುಹಿಸಿದ್ದಾಳೆ, ಇನ್ನೇನು ಛಳಿಗಾಲ ಬರುತ್ತೆ…. ಉಪಯೋಗಕ್ಕೆ ಬರುತ್ತದೆ….”

ದೊಡ್ಡಪ್ಪ-ದೊಡ್ಡಮ್ಮ ನನ್ನ ಸ್ವಂತದವರೇನೂ ಅಲ್ಲ, ದೂರದವರು. ನಮ್ಮ ಊರಿನವರಷ್ಟೆ. ಲೋದಿರೋಡ್ ನಲ್ಲಿ ನಾವು ಅಕ್ಕಪಕ್ಕದ ಮನೆಯಲ್ಲಿರುತ್ತಿದ್ದೆವು. ಅದೇ ಆತ್ಮೀಯ ಸಂಬಂಧ ಇಂದಿಗೂ ಹಾಗೇ ಉಳಿದಿದೆ.

************

ಸಂಜೆ ಅತಿಮಾಳ ಫೋನ್ ಬಂದಾಗ, “ನೀನು ಸುಮ್ಮನೆ ಹೀಗೇ ಗಾಬರಿಗೊಳ್ಳುತ್ತೀ. ದೊಡ್ಡಪ್ಪ-ದೊಡ್ಡಮ್ಮ ಎಲ್ಲ ಚೆನ್ನಾಗಿದ್ದಾರೆ. ಏನೇ ಆಗಲಿ ಇಲ್ಲಿನ ಪರಿಸ್ಥಿತಿ ಅಷ್ಟೇನೂ ಕೆಟ್ಟಿಲ್ಲ” ಎಂದು ಸಿಡುಕುತ್ತೇನೆ.

“ಅಣ್ಣಾ, ಅವರನ್ನು ಯಾಕೆ ಇಲ್ಲಿಗೆ ಬರಲು ಹೇಳುವುದಿಲ್ಲ? ಇಲ್ಲಿ ಎಷ್ಟು ಸುರಕ್ಷತೆ ಇದೆ. ಅಲ್ಲಿಯ ಈಗಿನ ವಾತಾವರಣವಂತೂ ವಿಚಿತ್ರವಾಗಿದೆ. ದಿನಬೆಳಗೂ ಅಲ್ಲಿ ಎಷ್ಟು ಜನ ಸಾಯುತ್ತಿದ್ದಾರೆ – ಸುದ್ದಿ ಕೇಳಿ ಕೇಳಿ ಹೃದಯ ಕಂಪಿಸುತ್ತದೆ. ನಾಚಿಕೆಯಿಂದ ತಲೆ ತಗ್ಗಿಸುವಂತಾಗಿದೆ.”

ಕೊಂಚ ತಡೆದು ಅವಳು ಮತ್ತೆ ಹೇಳುತ್ತಾಳೆ, ಅಕಸ್ಮಾತ್ ಏನೋ ನೆನಪು ಬಂದವಳಂತೆ.

“ಅದು ಸರಿ, ಅಣ್ಣಾ! ಕೆಲಸದ ಆಳನ್ನು ಕಳುಹಿಸಿಬಿಟ್ಟರೋ ಇಲ್ಲವೋ….?”

“ಇಲ್ಲ, ಇನ್ನೂ ಅಲ್ಲೇ ಇದ್ದ. ಕಳೆದ ಬಾರಿ ನಾನು ಹೋಗಿದ್ದಾಗ ದೊಡ್ಡಮ್ಮ ಹೇಳುತ್ತಿದ್ದರು – ಎರಡು ಸಲ ಓಡಿಸಿದ್ದೇವೆ, ಎಲ್ಲ ಲೆಕ್ಕ ಚುಕ್ತಾ ಮಾಡಿ. ಆದರೆ ಅದೇ ರಾತ್ರಿ ಅವನು ವಾಪಸ್ಸು ಬಂದಿದ್ದ. `ನೀವು ಒಂಟಿ ಇದ್ದೀರಿ, ಇಷ್ಟು ವಯಸ್ಸಾದವರು ನಾನು ಹೊರಟು ಹೋದ ಮೇಲೆ ನಿಮ್ಮ ಸೇವೆ ಯಾರು ಮಾಡುವರು?’ ಎಂದು ಅವರಿಗೆ ಹೇಳುತ್ತಿದ್ದನಂತೆ.”

“ಅಯ್ಯೋ ದೇವರೇ!” ಅವಳು ಫೋನ್ನಲ್ಲಿ ಚೀರಿಕೊಂಡಳು. “ಅವನು ಹೀಗೆ ಹೇಳುವುದರ ಹಿಂದೆ ಖಂಡಿತ ಏನೋ ರಹಸ್ಯವಿರಬೇಕು. ಒಂದಲ್ಲ ಒಂದು ದಿನ ನಿಶ್ಚಯವಾಗಿಯೂ ಅವನು ಏನೋ ಮಾಡಿ ಬಿಡುತ್ತಾನೆ!”

ಅವಳು ಫೋನ್ ಇಟ್ಟು ಬಿಡುತ್ತಾಳೆ.

************

(ಡಾ. ಜೆ.ಎಸ್.ಕುಸುಮಗೀತ )

ಇನ್ನೂ ಒಂದು ವಾರವೂ ಕಳೆದಿರಲಿಲ್ಲ. ಅಷ್ಟರಲ್ಲಿ ಅರ್ಧರಾತ್ರಿ ಮತ್ತೆ ಫೋನ್ ಬಂತು, ಈ ಬಾರಿ ನ್ಯೂಜರ್ಸಿಯಿಂದಲ್ಲ, ನವದೆಹಲಿಯ ವಸಂತವಿಹಾರ್ ನಿಂದ. ದೊಡ್ಡಪ್ಪನ ಗಾಬರಿ ತುಂಬಿದ ನಡುಗುವ ದನಿ – “ನ್ಯೂಜರ್ಸಿಯಿಂದ ಅತ್ತಿ ಪಕ್ಕದ ಮನೆ ಆ್ಯನಿ ಫೋನ್, ಭೀರೂ…!”

“ಎಲ್ಲ ಕ್ಷೇಮ ತಾನೇ….?”

“ಏನು ಹೇಳಲಿ ಮಗು… ಏನು ಹೇಳಲಿ…?” ಅವರ ದನಿ ಕಂಪಿಸುತ್ತಿದೆ. “ಆ್ಯನಿ ಹೇಳುತ್ತಿದ್ದಳು-ನೆನ್ನೆ ರಾತ್ರಿ ನ್ಯೂಯಾರ್ಕ್ ನಿಂದ ನ್ಯೂಜರ್ಸಿಗೆ ವಾಪಸಾಗುವಾಗ ಕೆಲವು ಅಪರಿಚಿತರು ಅತ್ತಿಯ ಹತ್ಯೆ ಮಾಡಿಬಿಟ್ಟಿದ್ದಾರೆ, ಸಾಮಾನುಗಳೆಲ್ಲ ಕಾರಿನಲ್ಲಿ ಹೇಗಿದ್ದವೋ ಹಾಗೇ ಬಿದ್ದಿವೆ…! ಹಾಗಾದರೆ ಹಂತಕರು…. ಹತ್ಯೆ ಏಕೆ ಮಾಡಿದರು…. ಪೋಲೀಸರು ತನಿಖೆ ನಡೆಸುತ್ತಿದ್ದಾರೆ…. ಮತ್ತೆ…. ಮ…ತ್ತೆ….!”

ಗಂಟಲು ಬಿಗಿದು ಬರುತ್ತದೆ. ಅವರ ಶಿಥಿಲವಾದ ಕೈಯಿಂದ ರಿಸೀವರ್ ಧಡಾರನೆ ಕೆಳಗೆ ಬೀಳುತ್ತದೆ!

 

(ಪುಸ್ತಕ: “ಒಂದು ಅರ್ಥಪೂರ್ಣ ಸತ್ಯ”,(ಆಯ್ದ ಹಿಂದಿ ಸಣ್ಣ ಕತೆಗಳು) ಕಥಾ ಸಂಕಲನ, ಲೇಖಕರು (ಮೂಲ): ಹಿಮಾಂಶು ಜೋಷಿ, ಅನುವಾದಕರು: ಡಾ. ಜೆ.ಎಸ್.ಕುಸುಮಗೀತ,  ಪ್ರಕಾಶಕರು: ನವಕರ್ನಾಟಕ ಪಬ್ಲಿಕೇಷನ್ಸ್, ಬೆಲೆ:125/-)