ಕೊರೊನಾ ಜಾಗತಿಕ ಸೋಂಕನ್ನು ತಡೆಯುವ ನಿಟ್ಟಿನಲ್ಲಿ ಹೇರಿದ ಲಾಕ್ ಡೌನ್ ಸಾಂಸ್ಕೃತಿಕ ಕ್ಷೇತ್ರದ ಮೇಲೆ ಬಲವಾದ ಹೊಡೆತವನ್ನು ನೀಡಿತ್ತು. ಅದು ಅನೇಕ ಕಲಾವಿದರ ಬದುಕನ್ನೇ ಕಸಿದುಕೊಂಡಿತು. ಸಂಗೀತ ಮತ್ತು ಗೆಜ್ಜೆಗಳ ಧ್ವನಿಯು ಆನ್ ಲೈನ್ ನಲ್ಲಿ ಬಂಧಿಯಾಗಿಬಿಟ್ಟಿತು. ತಾಳಗಳಿಗೆ ಕಿವಿಯಾಗುವುದು ಸಾಧ್ಯವಾದರೂ ಪ್ರೋತ್ಸಾಹದ ಚಪ್ಪಾಳೆಗಳು ಶುಷ್ಕವಾಗಿ ಕೇಳಿಸಿದವು. ತಾಳ ಲಯ, ಹಾವ ಭಾವ, ಅಭಿನಯ, ಸಂಚಾರಿ ಎಂಬೆಲ್ಲ ವಿಚಾರಗಳನ್ನು ಮೊಬೈಲ್ ಎಂಬ ಪುಟ್ಟ ಸ್ಕ್ರೀನ್ ಗೆ ಸೀಮಿತವಾಗಿಸುವುದು ಎಷ್ಟು ಕಷ್ಟ! ಈ ಕಷ್ಟ ಈ ಬಾರಿಯಾದರೂ ಕಳೆದೀತೇ ಎಂಬ ನಿರೀಕ್ಷೆಯ ಬೆಳಕು.
ವಿಜಯದಶಮಿ ಹಬ್ಬದ ಸಂದರ್ಭವನ್ನು ನೆಪವಾಗಿಸಿಕೊಂಡು ಕೋಡಿಬೆಟ್ಟು ರಾಜಲಕ್ಷ್ಮಿ ಬರೆದ ಬರಹ ಇಲ್ಲಿದೆ.

ಲಾವಣ್ಯ ಇನ್ನೂ ವಿಜಯ ದಶಮಿ ಹಬ್ಬದ ಗುಂಗಿನಿಂದ ಹೊರಬಂದಿಲ್ಲ.
ಅವಳು ಭರತನಾಟ್ಯ ನೃತ್ಯಪಟು. ಕಳೆವರ್ಷವಿಡೀ ಒಂದು ಬಾರಿಯೂ ಕಣ್ಣಿನ ಅಂಚಿಗೆ ಕಾಡಿಗೆ ತೀಡಿ, ತುಟಿಗೆ ರಂಗು ಬಳಿದು ಸಂಭ್ರಮಿಸುವುದು ಸಾಧ್ಯವಾಗಿರಲಿಲ್ಲ. ಹಾಗೆ ನೋಡಿದರೆ ಕೋವಿಡ್ ಸೋಂಕಿನ ಭಯದಿಂದ ಕಲಾವಿದರ್ಯಾರೂ ಗೆಜ್ಜೆಗಳನ್ನು ಹೊರತೆಗೆಯುವುದು ಸಾಧ್ಯವಾಗಿರಲಿಲ್ಲ.

ಗೆಜ್ಜೆಯ ಸದ್ದು ಕೇಳದೇ ನಟರಾಜನೇ ಎರಡೂ ಕಾಲುಗಳನ್ನೂರಿ ಸುಮ್ಮನೇ ನಿಂತಂತೆ ಭಾಸವಾಗಿತ್ತು. ನೃತ್ಯ ತರಗತಿಗಳಲ್ಲಿ ಮೌನವೆಂಬುದು ಬೇಸರದ ಚಾದರ ಹೊದ್ದು ಮಲಗಿದಂತಿತ್ತು. ನಟುವಾಂಗದ ಸದ್ದು ಕೇಳದೇ, ಲಯಬದ್ಧವಾದ ಹೆಜ್ಜೆಗಳ ಧ್ವನಿ ಕೇಳದೇ ತರಗತಿಗಳ ಗೋಡೆ ಕಂಬಗಳು ಸತ್ವ ಕಳೆದುಕೊಂಡಂತೆ ಕಾಣಿಸುತ್ತಿದ್ದವು. ದಿನವಿಡೀ ಕಲರವದಿಂದ ತುಂಬಿರುತ್ತಿದ್ದ ತರಗತಿಗಳ ಕೆಂಪು ನೆಲದ ಮೇಲೆ ಧೂಳಿನ ಛಾಯೆ. ಧೂಳಿನ ಮೇಲೆ ಅಪರೂಪದ ಹೆಜ್ಜೆ ಗುರುತು ಕಂಡು ಮನಸ್ಸನ್ನು ನೋಯುತ್ತಿತ್ತು. ಆದರೆ ಈ ಬಾರಿ ವಿಜಯ ದಶಮಿಯು ಈ ನೋವಿನ ಗಾಯ ಮರೆಯುವಂತೆ ಮಾಡಿದೆ.

ಕಳೆದ ವರ್ಷವಿಡೀ, ಲಾವಣ್ಯ ಲಿಪ್ ಸ್ಟಿಕ್ ನ ಮುಚ್ಚಳವನ್ನು ಅದೆಷ್ಟು ಬಾರಿ ತೆರೆದು ಮುಚ್ಚಿದ್ದಳೋ ಗೊತ್ತಿಲ್ಲ. ಸುಖಾಸುಮ್ಮನೇ ಲಿಪ್ ಸ್ಟಿಕ್ ತೀಡಿಕೊಂಡು ಹಳೆಯ ನೃತ್ಯ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಿದ್ದಳು. ವೇದಿಕೆಗಳಲ್ಲಿ ಘಲಿರು ಘಲಿರು ಎನ್ನದೇ, ಗೆಜ್ಜೆಗಳು ಕಪಾಟುಗಳಲ್ಲಿ ಮೌನವಾಗಿರುವುದನ್ನು ನೋಡಿ ದುಃಖವೆನಿಸಿತ್ತು. ನಿಜ ಹೇಳಬೇಕೆಂದರೆ ಈ ಗೆಜ್ಜೆಯನ್ನೂ ಲಿಪ್ ಸ್ಟಿಕ್ ಅನ್ನೂ, ನೆತ್ತಿಯ ಮೇಲೆ ಬಿಗಿಯುವ ಸೂರ್ಯಚಂದ್ರರೆಂಬ ಆಭರಣವನ್ನೂ, ಜುಮುಕಿಯನ್ನೂ ತಾನು ಇಷ್ಟೊಂದು ಪ್ರೀತಿಸುತ್ತಿದ್ದೇನೆ ಎಂಬುದೇ ಆಕೆಗೆ ಗೊತ್ತಿರಲಿಲ್ಲ. ನೃತ್ಯಪ್ರದರ್ಶನದ ಸಂದರ್ಭದಲ್ಲಿ ಅತೀ ಕಡಿಮೆ ಆಭರಣ ಧರಿಸುವ ಫ್ಯಾಷನ್ ಜನಪ್ರಿಯವಾಗತೊಡಗಿದಾಗ, ಹಿರಿಯ ಕಲಾವಿದೆ ಕಲಾಮಂಡಲಂ ಉಷಾದಾತಾರ್ ಆಭರಣಗಳ ಕುರಿತು ಕೆಲವು ಮಾತುಗಳನ್ನು ಹೇಳಿದ್ದರು: ‘ಸಾಂಪ್ರದಾಯಿಕ ಆಭರಣಗಳ ಹಿಂದೆ ಕಾರಣಗಳು ವೈಜ್ಞಾನಿಕವಾಗಿ ಇರಬಹುದು ಅಥವಾ ಇಲ್ಲದೇ ಇರಬಹುದು. ಆದರೆ ಸೌಂದರ್ಯವನ್ನು ಗೌರವಿಸುವ ದೃಷ್ಟಿಯಿಂದ ಧರಿಸುವಂತಹವು. ನಮ್ಮೊಳಗೆ ಇರುವ ಕಲಾಜ್ಞಾನವನ್ನು ಗೌರವಿಸುವ ಸಂಕೇತವಾಗಿ ನೆತ್ತಿ ಮೇಲೆ ಸೂರ್ಯಚಂದ್ರರನ್ನು ಕಟ್ಟಿಕೊಳ್ಳುತ್ತೇವೆ. ಆಭರಣಗಳು ಬೇರೆಯವರ ನೋಟಕ್ಕಾಗಿಯಷ್ಟೇ ಇರುವಂಥದ್ದಲ್ಲ. ಕಲಾವಿದರ ಪಾಲಿಗೆ ಆಭರಣಗಳು ಕೇವಲ ಆಭರಣಗಳಷ್ಟೇ ಅಲ್ಲ’. ಅವರ ಮಾತುಗಳನ್ನು ನೆನಪು ಮಾಡಿಕೊಳ್ಳಲು ಮಾತ್ರವಲ್ಲ, ಮಾತುಗಳ ಮಹತ್ವವನ್ನು ಅರಿಯಲು ಲಾಕ್ ಡೌನ್ ಎಂಬ ಮೌನ ಅವಕಾಶ ಮಾಡಿಕೊಟ್ಟಿತ್ತು.

ಲಾಕ್ ಡೌನ್ ಕೇವಲ ಸಾಮಾಜಿಕ ಮೌನವನ್ನಷ್ಟೇ ತೋರಿಸಿಕೊಟ್ಟಿಲ್ಲ. ನಮ್ಮೊಳಗಿನ ಅನೇಕ ಏರುಪೇರುಗಳನ್ನೂ ತೋರಿಸಿಕೊಟ್ಟಿದೆ. ಮರದೊಳಗಿನ ಬೆಂಕಿಯಂತೆ, ಬೀಜದೊಳಗೆ ಅವಿತ ಆತ್ಮದಂತೆ ನಮ್ಮೊಳಗೆ ಹುದುಗಿರುವ ಅನೇಕ ವಿಚಾರಗಳನ್ನು ಅರಿತುಕೊಳ್ಳಲು ಈ ಲಾಕ್ ಡೌನ್ ಸಹಾಯ ಮಾಡಿದೆ ಎಂದು ಅವಳಿಗೆ ಅನೇಕ ಬಾರಿ ಅನಿಸಿದ್ದುಂಟು.

ಅನಿಸಿದ್ದುಂಟು ಎಂದರೆ ಆ ಭಾವನೆಯು ಸ್ಪಷ್ಟವಾದುದು ಈ ಬಾರಿಯ ವಿಜಯದಶಮಿಯಂದೇ. ನೃತ್ಯ ಸಂಸ್ಥೆಯ ವತಿಯಿಂದಲೇ ಈ ಬಾರಿ ಟೌನ್ ಹಾಲ್ ನಲ್ಲಿ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ನೃತ್ಯಗುರುಗಳೇ ಆ ಏರ್ಪಾಟು ಮಾಡಿದ್ದರು. ಪ್ರಾಯೋಜಕರು ದೊರೆಯದೇ ಇದ್ದರೂ, ಕಾರ್ಯಕ್ರಮಗಳು ನಡೆಯಬೇಕು ಮತ್ತು ಅದು ಕಲಾವಿದರಲ್ಲಿ ಹುಮ್ಮಸ್ಸು ತುಂಬ ಬೇಕು ಎಂಬುದು ಗುರುಗಳ ಆಶಯವಾಗಿತ್ತು. ಗೆಜ್ಜೆಗಳು ಘಲಿರೆನ್ನಬೇಕಾದರೆ ಆಶ್ರಯ, ಪೋಷಣೆಯು ಎಲ್ಲಿಂದಲೋ ಬರುವವರೆಗೆ ಕಾಯುವುದಕ್ಕಾಗುವುದಿಲ್ಲ ಎಂಬುದು ಅವರ ಧೋರಣೆಯಾಗಿತ್ತು. ಒಂದೂವರೆ ವರ್ಷದಿಂದ ಮಬ್ಬುಹಿಡಿದಂತಾಗಿದ್ದ ಮನಸ್ಸಿಗೆ ಉಲ್ಲಾಸ ಮೂಡಿಸಲು ಇದು ಸಹಾಯಕವಾಗಬಹುದು ಎಂದು ಅವರಿಗನಿಸಿತು. ಆ ಅನಿಸಿಕೆ ನಿಜವೇ ಆಯಿತು. ಕಾರ್ಯಕ್ರಮದ ದಿನಾಂಕ ಪ್ರಕಟವಾದ ಕೂಡಲೇ ಇಡೀ ನೃತ್ಯ ತರಗತಿ ಉಲ್ಲಾಸದಿಂದ ನರ್ತಿಸಲಾರಂಭಿಸಿತು. ಅಷ್ಟರವರೆಗೆ ಕೇಳುತ್ತಿದ್ದ ನಟ್ಟುವಾಂಗದ ಧ್ವನಿಯೇ ಬೇರೆ. ಆ ಬಳಿಕ ಕೇಳಿಸಿದ ಧ್ವನಿಯ ಖದರೇ ಬೇರೆ ಎಂಬಂತೆ ತರಗತಿಯಿಡೀ ಜೀವಕಳೆಯಿಂದ ತುಂಬಿತು. ಅಭ್ಯಾಸೀ ತಂಡಗಳು ಗುಂಪು ಗುಂಪಾಗಿ ಕುಂತಲ್ಲಿ ನಿಂತಲ್ಲಿ ತಾಲೀಮು ನಡೆಸಲಾರಂಭಿಸಿದತು.

ನೃತ್ಯಕಲಾವಿದೆ ಹಾಗೂ ಬರಹಗಾರ್ತಿಯಾಗಿರುವ ಗೀತಾ ಚಂದ್ರನ್ ಅವರ ಪ್ರಕಾರ, ನೃತ್ಯ ಕಲಾವಿದರಿಗೆ ಪ್ರದರ್ಶನಗಳೇ ಆತ್ಮವಿಶ್ವಾಸವನ್ನು ತುಂಬುತ್ತವೆ. ಸಂಗೀತ, ಚಿತ್ರಕಲೆ, ರಂಗಭೂ ಮಿಯ ಕಲಾವಿದರಿಗೂ ವೇದಿಕೆಗಳೇ ಆತ್ಮವಿಶ್ವಾಸವನ್ನುತುಂಬಲು ನೆರವಾಗುತ್ತವೆ. ಆದರೆ ಕೋವಿಡ್ ಸೋಂಕಿನ ಹರಡುವಿಕೆಯನ್ನು ತಡೆಯಲು ತೆಗೆದುಕೊಂಡ ಮುನ್ನೆಚ್ಚರಿಕೆಗಳು, ಕಲಾವಿದರ ಬದುಕನ್ನೇ ಕಸಿದುಕೊಂಡಿತು. ದೇವಸ್ಥಾನಗಳಲ್ಲಿ ಜಾತ್ರೆಗಳು, ಪೂಜಾದಿಗಳು ನಡೆಯದೇ ಇದ್ದುದರಿಂದ, ನಾದಸ್ವರ ಕಲಾವಿದರಂತಹ ಕಲಾವಿದರು ಹೇಗೆ ಬದುಕನ್ನು ತೂಗಿಸಿಕೊಂಡು ಹೋಗಬೇಕು? ಭಾರತದ ಕಲಾ ಕ್ಷೇತ್ರವು ಬಹಳ ವಿಸ್ತಾರವಾದುದರಿಂದ ಅದು ಅಸಂಘಟಿತವಾದ ಕ್ಷೇತ್ರವಾಗಿಯೇ ಉಳಿದಿದೆ. ಸರ್ಕಾರವೂ ಕಲಾವಿದರಿಗೆ ನೆರವಾಗುವ ಯೋಚನೆಯನ್ನು ಮಾಡಲಿಲ್ಲ…’ ಎಂದು ಅವರು ತಮ್ಮ ಬರಹವೊಂದರಲ್ಲಿ ಉಲ್ಲೇಖಿಸಿದ್ದಾರೆ.

‘ಸಂಗೀತ, ನೃತ್ಯ, ಕಲೆಗಳು ಅಪ್ರಯೋಜಕ ಎನ್ನುವಿರಾದರೆ, ಸಂಗೀತ ಕೇಳದೇ, ಕಾರ್ಯಕ್ರಮಗಳನ್ನು ನೋಡದೇ, ಚಿತ್ರಕಲೆಗಳ ಗೊಡವೆಗೇ ಹೋಗದೆ, ಪುಸ್ತಕದ ಪುಟ ತೆಗೆಯದೇ ಕ್ವಾರೆಂಟೈನ್ ಸಮಯವನ್ನು ಕಳೆಯಿರಿ ನೋಡೋಣ..’ ಎಂಬ ಸವಾಲಿನ ‘ಮೆಮೆ’ಯೊಂದು ಕಳೆದ ವರ್ಷ ವೈರಲ್ ಆಗಿತ್ತು. ತಮಾಷೆಯಂತೆ ಕಾಣುವ ಸವಾಲಿನ ಮೆಮೆಯ ಹಿಂದೆ ಏನೋ ಹುರುಳಿದೆಯಲ್ಲವೇ. ಆಶ್ರಯ, ಪೋಷಣೆಯನ್ನು ಬೇಡುವ ಕಲಾಕ್ಷೇತ್ರದ ಕುರಿತ ಉಡಾಫೆ ಇಂದು ನಿನ್ನೆಯದಲ್ಲ. ಅದು ಬದುಕಿಗೆ ತೀರಾ ಅಗತ್ಯವೇನೂ ಅಲ್ಲ ಎಂಬ ಭಾವನೆ ಅನೇಕರಲ್ಲಿದೆ. ಆದರೆ ಮಾನಸಿಕ ಸಾಂತ್ವನಕ್ಕೆ ಈ ಕಲಾಕ್ಷೇತ್ರವು ಬದುಕಿಗೆ ಎಷ್ಟು ಅನಿವಾರ್ಯ ಎಂಬುದು ಲಾಕ್ ಡೌನ್ ಸಂದರ್ಭದಲ್ಲಿ ಅರಿವಾಗಿದೆ. ಈ ವರ್ಷ ಗಣೇಶ ಚತುರ್ಥಿಯ ಸಂದರ್ಭದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಅವಕಾಶ ನೀಡುವಂತೆ ಕಲಾವಿದರ ಸಂಘಟನೆಗಳು ಸರ್ಕಾರವನ್ನು ಆಗ್ರಹಿಸಿದವು. ಕೊನೇ ಪಕ್ಷ, ನವರಾತ್ರಿಯ ಸಂದರ್ಭದಲ್ಲಿ ವೇದಿಕೆಗಳು ಸಿಂಗರಿಸಿಕೊಂಡು ಸಜ್ಜಾಗಿ ನಿಂತವು.

ಕಳೆದ ವರ್ಷವಿಡೀ, ಲಾವಣ್ಯ ಲಿಪ್ ಸ್ಟಿಕ್ ನ ಮುಚ್ಚಳವನ್ನು ಅದೆಷ್ಟು ಬಾರಿ ತೆರೆದು ಮುಚ್ಚಿದ್ದಳೋ ಗೊತ್ತಿಲ್ಲ. ಸುಖಾಸುಮ್ಮನೇ ಲಿಪ್ ಸ್ಟಿಕ್ ತೀಡಿಕೊಂಡು ಹಳೆಯ ನೃತ್ಯ ಪ್ರದರ್ಶನಗಳನ್ನು ನೆನಪಿಸಿಕೊಳ್ಳುತ್ತಿದ್ದಳು. ವೇದಿಕೆಗಳಲ್ಲಿ ಘಲಿರು ಘಲಿರು ಎನ್ನದೇ, ಗೆಜ್ಜೆಗಳು ಕಪಾಟುಗಳಲ್ಲಿ ಮೌನವಾಗಿರುವುದನ್ನು ನೋಡಿ ದುಃಖವೆನಿಸಿತ್ತು. 

ಬೆಂಗಳೂರಿನಲ್ಲಿ ಧೀಮಹಿ ನೃತ್ಯ ಸಂಸ್ಥೆಯನ್ನು ನಡೆಸುತ್ತಿರುವ, ಕಲಾವಿದೆ ಸೀತಾ ಕೋಟೆ ಈ ಬಾರಿ ಭರ್ಜರಿಯಾಗಿ ವಿಜಯದಶಮಿಯನ್ನು ಆಚರಿಸಿದರು. ಮಂಗಳೂರಿನ ಕಡಲ ದಂಡೆಯನ್ನು ನೋಡಲು ಬಂದಿದ್ದ ಅವರು ತಮ್ಮ ಸಂಭ್ರಮವನ್ನು ಹಂಚಿಕೊಂಡರು. ‘ಆನ್ ಲೈನ್ ನಲ್ಲಿಯೇ ಭರತನಾಟ್ಯ ತರಗತಿಗಳನ್ನು ನಡೆಸುತ್ತಿದ್ದರೂ, ಎಲ್ಲರೂ ಒಟ್ಟಾಗಿ ಸೇರಬೇಕು ಎಂಬ ತುಡಿತವೊಂದು ಕಳೆದ ವರ್ಷವಿಡೀ ಇತ್ತು. ಹಾಗೆ ನೋಡಿದರೆ ಲಾಕ್ ಡೌನ್ ಹೇರಿದ ಮೇಲೆಯೇ, ಹೀಗೆ ಒಟ್ಟಾಗಿ ಹಬ್ಬ ಮಾಡುವುದು ನಮ್ಮ ಹೃದಯಕ್ಕೆ ಎಷ್ಟೊಂದು ಮುಖ್ಯ ಎನ್ನುವುದು ನಮ್ಮಲ್ಲರಿಗೂ ಅರ್ಥವಾಗತೊಡಗಿದ್ದು, ವಿಜಯ ದಶಮಿ ಹಬ್ಬವೆಂದರೆ ನನಗೆ ತುಂಬ ಮುಖ್ಯವಾದ ಮತ್ತು ನಾನು ವೈಭವದಿಂದ ಆಚರಿಸುವ ಹಬ್ಬ. ಕಳೆದ ವರ್ಷ ಕೂಡ ಸಂಸ್ಥೆಯ ಕೆಲವು ಮಂದಿ ವಿದ್ಯಾರ್ಥಿ ವಿದ್ಯಾರ್ಥಿನಿಯರ ಜೊತೆಗೆ ಹಬ್ಬ ಆಚರಿಸಿದ್ದೆ. ಆದರೆ ಈ ಬಾರಿ ಮನಸ್ಸಿನಲ್ಲಿ ಏನೋ ಹಗುರ ಭಾವನೆಯಿದ್ದಂತಿತ್ತು’ ಎನ್ನುತ್ತಾ ಹಬ್ಬದ ಕತೆಯನ್ನು ಹೇಳಿಕೊಂಡರು.

ವಿಜಯದಶಮಿಯಂದು ನೃತ್ಯ ಗುರುಗಳಿಗೆ ಶಿಷ್ಯವರ್ಗದವರು ಏನಾದರೂ ಗುರುದಕ್ಷಿಣೆ ಕೊಟ್ಟುಅವರಿಂದ ಆಶೀರ್ವಾದ ಪಡೆಯುವುದು ವಾಡಿಕೆ. ಗೆಜ್ಜೆಗಳನ್ನು ಪೂಜಿಸುವುದು, ಒಳ್ಳೆಯ ವಿಚಾರಗಳನ್ನು ಬಿತ್ತರಿಸುವ ಕಾರ್ಯಕ್ರಮಗಳನ್ನು ಮಾಡುವುದು ಮತ್ತು ಹೊಸ ವಿದ್ಯಾರ್ಥಿಗಳು ಗುರುಕುಲವನ್ನು ಸೇರುವುದು ಅಂದಿನ ವಿಶೇಷತೆ. ಪುಟ್ಟ ಮಕ್ಕಳು ಕುತೂಹಲದ ಕಂಗಳಲ್ಲಿ ಸುತ್ತಲೂ ನೋಡುತ್ತ, ಹೆಜ್ಜೆಗೆಜ್ಜೆಗ ಳ ಸದ್ದಿನ ನಡುವೆ, ಹರಿವಾಣದಲ್ಲಿ ಹೂ-ಹಣ್ಣು ಪೂಜಾ ಸಾಮಗ್ರಿಯಿರಿಸಿಕೊಂಡು ನೃತ್ಯ ತರಗತಿಗಳನ್ನು ಸೇರಲು ಸರತಿಯಲ್ಲಿ ನಿಂತಿರುತ್ತಾರೆ. ಕಳೆದ ವರ್ಷ ಈ ಸರತಿಯ ಸಾಲುಗಳು ಅಪರೂಪವಾಗಿದ್ದವು. ಆದರೆ ಈವರ್ಷ ಮತ್ತೆ ಖುಷಿ ಮರುಕಳಿಸಿದೆ.

‘ಖುಷಿಯನ್ನು ಮರಳಿ ತರಲು ನಾವೂ ಪ್ರಜ್ಞಾಪೂರ್ವಕವಾದ ಪ್ರಯತ್ನ ಹಾಕಬೇಕಾಗುತ್ತದೆ. ಈ ಬಾರಿಯೂ ಸ್ವಲ್ಪ ಧೈರ್ಯ ಮಾಡಿ ವಿಜಯ ದಶಮಿ ಹಬ್ಬ ಮಾಡಿದೆವು. ಗುರುದಕ್ಷಿಣೆ ಕೊಡುವ ಮಕ್ಕಳಿಗೆ ಧೀಮಹಿ ನೃತ್ಯ ವಿದ್ಯಾಲಯದ ವತಿಯಿಂದ ಪುಟ್ಟ ಪುಟ್ಟಉಡುಗೊರೆ ಕೊಡುವ ಪದ್ಧತಿ ಇರಿಸಿಕೊಂಡಿದ್ದೇನೆ. ಈ ಬಾರಿ ಸೂರ್ಯ ಅಥವಾ ಚಂದ್ರನ ಪದಕವನ್ನು ದಾರದಲ್ಲಿ ಪೋಣಿಸಿ ಮಕ್ಕಳಿಗೆ ನೀಡಿದೆ. ಜುಮುಕಿ, ಮೂಗುಬಟ್ಟು, ಮುಂದಲೆ..ಹೀಗೆ ಪ್ರತೀ ವರ್ಷ ಪುಟಾಣಿ ಉಡುಗೊರೆ ನೀಡುವುದು ನನಗೂ ಇಷ್ಟ. ಗುರುಗಳು ಕೊಟ್ಟ ಕಾಣಿಕೆ ಎಂಬ ಭಕ್ತಿಯಿಂದ ಮಕ್ಕಳು ಅದನ್ನು ಜೋಪಾನ ಮಾಡುವುದನ್ನು ನೋಡಿದರೆ ಖುಷಿಯಾಗುತ್ತದೆ’ ಎಂದು ವಿದುಷಿ ಸೀತಾಕೋಟೆ ಹೇಳುತ್ತಾರೆ.

ಲಾಕ್ ಡೌನ್ ಸಂದರ್ಭದಲ್ಲಿ ನೃತ್ಯ ಮತ್ತು ಸಂಗೀತದ ಅಭ್ಯಾಸಗಳನ್ನು ಅನೇಕ ಸಂಸ್ಥೆಗಳು ಮುಂದುವರೆಸಿದವು. ಆನ್ ಲೈನ್ ಮಾಧ್ಯಮದಲ್ಲಿ ತರಗತಿಗಳನ್ನು ನಡೆಸುತ್ತ, ಸಾಧ್ಯವಿರುವ ಎಲ್ಲ ರೀತಿಯ ತಂತ್ರಜ್ಞಾನವನ್ನು ಬಳಸಿಕೊಂಡು ಕಲಾವಿದರ ಅಭ್ಯಾಸ ಪ್ರಕ್ರಿಯೆಯು ನಿಲ್ಲದಂತೆ ನೋಡಿಕೊಂಡರು. ಅನೇಕ ಕಲಾವಿದರು ಆನ್ ಲೈನ್ ನಲ್ಲಿ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಿದರು. ಕೊರೊನಾ ಸೋಂಕು ತಡೆಯುವ ನಿಟ್ಟಿನಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದಲೂ ಅನೇಕ ಕಾರ್ಯಕ್ರಮಗಳು ನಡೆದವು.

ಕಲಾವಿದರೇ ಕಲಾವಿದರಿಗಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದರು. ಉದಾಹರಣೆಗೆ ಎಡಿಎಎ (Assistance for Disaster Affected Artistes) ವತಿಯಿಂದ ಅನೇಕ ಸಂಗೀತ ಮತ್ತು ನೃತ್ಯ ಕಾರ್ಯಕ್ರಮಗಳನ್ನು ಆಯೋಜಿಸಿ, ಆ ಮೂಲಕ ಸಂಗ್ರಹಿಸಿದ ಸುಮಾರು 35 ಲಕ್ಷ ರೂಪಾಯಿ ಹಣವನ್ನು ಕಲಾವಿದರ ಕುಟುಂಬಗಳಿಗೆ ಆರು ತಿಂಗಳ ಕಾಲ ನೀಡಲಾಯಿತು. ಈ ಕಾರ್ಯಕ್ರಮದಲ್ಲಿ ತೊಡಗಿಸಿಕೊಂಡಿರುವ ತಾಳವಾದ್ಯ ಕಲಾವಿದ ಅನೀಶ್ ಪ್ರಧಾನ್ , ‘ ಕರ್ನಾಟಕ, ಮಹಾರಾಷ್ಟ್ರ, ಪಶ್ಚಿಮ ಬಂಗಾಳ, ಮಣಿಪುರ, ಕರ್ನಾಟಕ, ಅಸ್ಸಾಮ್, ಉತ್ತರ ಪ್ರದೇಶ, ರಾಜಸ್ಥಾನ ತೆಲಂಗಾಣ ಮತ್ತು ನವದೆಹಲಿಯ ಸುಮಾರು 100 ಕಲಾವಿದರ ಕುಟುಂಬಗಳಿಗೆ ಪ್ರತೀ ತಿಂಗಳು ಐದು ಸಾವಿರ ರೂಪಾಯಿಯಂತೆ ಆರು ತಿಂಗಳ ಕಾಲ ನೆರವು ನೀಡಲಾಗಿದೆ’ ಎನ್ನುತ್ತಾರೆ. ಇಂತಹ ಅನೇಕ ಕಾರ್ಯಕ್ರಮಗಳನ್ನು ಕಲಾವಿದರೇ ಸೇರಿಕೊಂಡು ಆಯೋಜಿಸಿದ್ದಾರೆ.

‘ಲಾಕ್ ಡೌನ್ ಹೇರುವುದು ಎಂದರೆ ಇದ್ದಕ್ಕಿದ್ದಂತೆಯೇ ನಮ್ಮ ಅನ್ನದ ಬಟ್ಟಲನ್ನು ಕವುಚಿ ಹಾಕಿಬಿಡುವುದು ಎಂದೇ ಅರ್ಥ. ಲಾಕ್ ಡೌನ್ ಘೋಷಣೆಯಾದ ಕೂಡಲೇ, ಎಲ್ಲ ಕಾರ್ಯಕ್ರಮಗಳನ್ನು ರದ್ದುಪಡಿಸಲಾಗುತ್ತದೆ. ಎಲ್ಲ ಕ್ಷೇತ್ರಗಳಲ್ಲಿ ಕೆಲಸ ಮಾಡುವವರ ಹೊಟ್ಟೆಪಾಡಿನ ಮೇಲೂ ಲಾಕ್ ಡೌನ್ ಪರಿಣಾಮ ಬೀರುತ್ತದೆ. ಆದರೆ ಲಾಕ್ ಡೌನ್ ತೆರವಾದ ಮೇಲೂ ಹಲವು ತಿಂಗಳ ಕಾಲ ಕಾರ್ಯಕ್ರಮಗಳನ್ನು ಆಯೋಜಿಸಲು ಅವಕಾಶ ದೊರೆಯಲಿಲ್ಲ. ಅವಕಾಶ ದೊರೆತ ಮೇಲೂ ಪ್ರಾಯೋಜಕರು ಸುಧಾರಿಸಿಕೊಂಡು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜಿಸುವಷ್ಟು ಸಬಲರಾಗುವವರೆಗೆ ಕಲಾವಿದರು ಕಾಯಬೇಕಾಗುತ್ತದೆ. ಅಲ್ಲಿಯವರೆಗೆ ಬದುಕು ಸಾಗಬೇಕಲ್ಲಾ…’-ದೇವಸ್ಥಾನದಲ್ಲಿ ವಾದ್ಯ ನುಡಿಸುವ ಪರಶುರಾಮಯ್ಯ ಅವರ ಮಾತಿದು.

ಅದಕ್ಕೇ ಈ ಬಾರಿಯ ವಿಜಯದಶಮಿಯು ಬಹಳ ಮುಖ್ಯವಾಗಿತ್ತು. ವಿಜಯ ದಶಮಿಯಂದು ಕಲಾವಿದರ ಮುಖದಲ್ಲಿ ಕೇವಲ ಹಬ್ಬದ ಸಂಭ್ರಮವಷ್ಟೇ ಇರಲಿಲ್ಲ. ಇಷ್ಟು ದಿನಗಳ ಅಗಲಿಕೆಯ ನೋವನ್ನು ಮರೆತು ನಗುವ ಪ್ರಯತ್ನವಿತ್ತು. ಆನ್ ಲೈನ್ ಕಾರ್ಯಕ್ರಮಗಳಲ್ಲಿ ಅಶರೀರವಾಣಿಯಂತೆ ಕೇಳಿಸುತ್ತಿದ್ದ ಚಪ್ಪಾಳೆಯನ್ನು ನೇರವಾಗಿ ಕೇಳುವ ತವಕವಿತ್ತು. ಚಪ್ಪಾಳೆ ತಟ್ಟುವ ಕಣ್ಣುಗಳನ್ನು ನೋಡುತ್ತ ಹೆಜ್ಜೆ ಹಾಕುವ ಹುಮ್ಮಸ್ಸಿತ್ತು.

ಹೀಗೆ ಕಳೆದು ಹೋದ ದಿನಗಳನ್ನು ನೆನಪು ಮಾಡಿಕೊಳ್ಳುವ ಅಣಕು ಕಾರ್ಯಕ್ರಮವನ್ನೇ ಮಂಗಳೂರಿನ ಸನಾತನ ನಾಟ್ಯಾಲಯದಲ್ಲಿ ನೃತ್ಯ ವಿದ್ಯಾರ್ಥಿನಿಯರು ಹೀಗೆ ಪ್ರಸ್ತುತಪಡಿಸಿದರು: ಅದೊಂದು ಕಾಲ್ಪನಿಕ ನೃತ್ಯ ಕಾರ್ಯಕ್ರಮದ ಗ್ರೀನ್ ರೂಮ್ ಎಂದುಕೊಳ್ಳೋಣ. ಅವಳು ಲೇಟಾಗಿ ಬಂದಳು. ಇವಳು ನೆತ್ತಿಬೊಟ್ಟು ಮರೆತು ಬಂದಳು. ಗುರುಗಳ ಬೈಗುಳಕ್ಕೆ ಹೆದರುತ್ತಲೇ ಮತ್ತೊಂದು ನೆತ್ತಿಬೊಟ್ಟು ಸಿಗಬಹುದೇ ಎಂದು ಕೇಳಿದಳು. ಗದರಿಬಿಡುವ ಗುರುಗಳ ಕೆಂಗಣ್ಣು. ಅಷ್ಟರಲ್ಲಿ ನಿರ್ದೇಶಕರು ಬಂದು,’ ನಿಮಗೆಲ್ಲ ತಿಂಡಿಯ ವ್ಯವಸ್ಥೆಯಾಗಿದೆ. ಎಲ್ಲರೂ ಬೇಗ ಬೇಗ ತಿಂಡಿ ತಿನ್ನಿ’ ಎಂದರು. ‘ಅಯ್ಯೋ ಲಿಪ್ ಸ್ಟಿಕ್ ಮತ್ತೆ ಹಾಕಿಕೊಂಡರೆ ಚೆನ್ನಾಗಿತ್ತು …’ ಎಂಬ ರಾಗ. ವೇದಿಕೆಯಲ್ಲಿ ಭಾಷಣಗಳೇ ಗಂಟೆಗಟ್ಟಲೆ ಸಾಗುತ್ತಿವೆ. ರಾತ್ರಿ ತಡವಾಗುತ್ತಾ ಬಂತು. ನಮ್ಮ ಕಾರ್ಯಕ್ರಮ ಯಾವಾಗ ನಡೆಯುತ್ತದೆ? ಅಥವ ಸಾಂಸ್ಕೃತಿಕ ಕಾರ್ಯಕ್ರಮ ಮೊಟಕು ಗೊಳಿಸಿ ಎಂದು ಸೂಚನೆ ಬರುವುದೇ? ಹಾಗಿದ್ದರೆ ನನ್ನ ನೃತ್ಯವೇ ಕ್ಯಾನ್ಸಲ್ ಆಗಬಹುದಾ… ಎಂಬೆಲ್ಲ ಚರ್ಚೆಗಳು. ಕಾದು ಕಾದು ದಣಿದುಹೋಗುವ ನೃತ್ಯಗಾರ್ತಿಯರು. ಅಷ್ಟರಲ್ಲಿ ನೃತ್ಯಕ್ಕಾಗಿ ವೇದಿಕೆ ಸಿದ್ಧವಾಗುವುದು. ಗುರುಗಳು ವೇದಿಕೆಯ ಬದಿಯಲ್ಲಿಯೇ ನಿಂತು ಸಂಜ್ಞೆಗಳನ್ನು ಮಾಡುತ್ತ ಮಾರ್ಗದರ್ಶನ ಮಾಡುವರು. ನೃತ್ಯವು ರಂಗೇರುತ್ತ ಹೋದಂತೆ ಎಲ್ಲರ ಮನದಲ್ಲಿಯೂ ಸಂತೃಪ್ತಿ. ಬಿರುಸು ಬೇಸರ, ನೋವು, ಸಿಟ್ಟು ಮಾಯವಾಗುತ್ತ ಸಂತೃಪ್ತಿಯ ತಿಳಿಗಾಳಿ ಸುಳಿದಾಡುವುದು. ನಿರ್ದೇಶಕರೋ ವೇದಿಕೆಯ ಮುಂಭಾಗದಲ್ಲಿ ನಿಂತು ಮೊಬೈಲ್ ನಲ್ಲೊಂದು ಫೋಟೋ ಸೆರೆ ಹಿಡಿದು ಹಿಗ್ಗಿದರು.

– ಎಂಬಲ್ಲಿಗೆ ಅಣಕು ಪ್ರದರ್ಶನ ಮುಗಿಯಿತು. ನಗುನಗುತ್ತ ಆರಂಭವಾದ ಪ್ರದರ್ಶನ. ಮುಕ್ತಾಯವಾಗುವ ವೇಳೆಗೆ ಗುರು ವಿದುಷಿ ಶಾರದಾಮಣಿಶೇಖರ್, ಶ್ರೀಲತಾ ನಾಗರಾಜ್, ನಿರ್ದೇಶಕರಾದ ಚಂದ್ರಶೇಖರ್ ಶೆಟ್ಟಿ ಹಾಗೂ ನೂರಾರು ವಿದ್ಯಾರ್ಥಿಗಳ ಕಣ್ಣಲ್ಲಿ ನೀರು. ಮೈಕ್ ಗಳು ಮೌನವಾಗಿದ್ದವು. ನೆನಪು, ಬೇಸರ, ನೋವು, ಖುಷಿಗಳೆಲ್ಲ ತುಂಬಿದ ಕಣ್ಣ ಹನಿಗಳು. ಕಾರ್ಯಕ್ರಮ ಹಾಗೆಯೇ ಮುಕ್ತಾಯವಾಯಿತು.
ಮಾತಿನ ಹಂಗೇಕೆ.