ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್.
ಡಾ. ವಿನತೆ ಶರ್ಮ ಬರೆಯುವ ಆಸ್ಟ್ರೇಲಿಯಾ ಪತ್ರ

ಆಸ್ಟ್ರೇಲಿಯಾದ ಕೇಂದ್ರ ಸರಕಾರದ ವತಿಯಿಂದ ಈ ವರ್ಷದ ಬಜೆಟ್ ಪ್ರಕಟವಾಗಿದೆ. ಕೇಂದ್ರೀಯ ಹಣಕಾಸು ಮಂತ್ರಿಗಳು ಮೊನ್ನೆ ಮಂಗಳವಾರ ಹಂಚಿಕೊಂಡ ವಿವರಗಳು ಇನ್ನೂ ಬಿಸಿಬಿಸಿಯಾಗಿಯೆ ಚರ್ಚಿತವಾಗುತ್ತಿವೆ. ಎಲ್ಲರೂ ಮುಖ್ಯವಾಗಿ ಮಾತನಾಡುತ್ತಿರುವುದು ವಸತಿ ಬಾಡಿಗೆ ವಿಷಯದಲ್ಲಿ ಸಿಕ್ಕಿರುವ ಸಹಾಯ. ಆದರೆ ಎಲ್ಲರಿಗೂ ಇದು ಲಭ್ಯವಾಗಿಲ್ಲ ಎನ್ನುವುದು ಕೂಡ ಜನರ ಬಾಯಿಗೆ ಆಹಾರವಾದ ವಿಷಯವಾಗಿದೆ. ಉಳಿದಂತೆ ಗಮನಾರ್ಹವಾದ ಜನಪರ ಸಹಾಯವಾಗಿರುವುದು ದಿನನಿತ್ಯ ಜೀವನ ವೆಚ್ಚದ ವಿಷಯದಲ್ಲಿ, ಆರೋಗ್ಯಸೇವೆ ಮತ್ತು ಪರಿಸರ-ಸ್ನೇಹಿ ಇಂಧನ ವಿಷಯಗಳಲ್ಲಿ.

ಹೋದ ವರ್ಷದಿಂದಲೂ ಆಸ್ಟ್ರೇಲಿಯಾದ ಮುಖ್ಯ ನಗರಗಳಲ್ಲಿ ವಸತಿ ಕೊರತೆ ಸಮಸ್ಯೆ ಜನರನ್ನು, ರಾಜ್ಯ ಸರಕಾರಗಳನ್ನು ಕಾಡುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಜಲಪ್ರವಾಹ ಇತ್ಯಾದಿ ಕಾರಣಗಳಿಂದ ನಗರಗಳಿಗೆ ಜನರ ವಲಸೆ ಹೆಚ್ಚಾಗಿದ್ದು ವಸತಿಗಳ ಕೊರತೆಯುಂಟಾಯ್ತು ಎಂದು ಕೆಲವರು ವಾದಿಸಿದರೆ ಅದು ಹುರುಳಿಲ್ಲದ ವಾದವೆಂದು ಸರಕಾರಗಳು ಹೇಳುತ್ತಿವೆ. ಕಳೆದ ಒಂದು ದಶಕದಿಂದ ಮನೆಸಾಲದ ಮೇಲೆ ಕೇಂದ್ರೀಯ ರಿಸರ್ವ್ ಬ್ಯಾಂಕ್ ಹೆಚ್ಚುವರಿ ಬಡ್ಡಿಯನ್ನು ವಿಧಿಸಿರಲಿಲ್ಲ. ಹೋದ ವರ್ಷದಿಂದ ಕ್ರಮೇಣ ಹನ್ನೆರೆಡು ಬಾರಿ ಬಡ್ಡಿದರವನ್ನು ಹೆಚ್ಚಿಸಲಾಗಿದೆ. ಸ್ವಂತ ಮನೆಯಲ್ಲಿ ವಾಸ ಮಾಡುತ್ತಿರುವ ಮಾಲೀಕರಿಗೂ ಹಾಗೂ ತಮ್ಮ ಮನೆಗಳನ್ನು ಬಾಡಿಗೆ ಕೊಟ್ಟಿರುವ ಮಾಲೀಕರಿಗೂ ಕಷ್ಟವಾಗಿದೆ. ಏಕೆಂದರೆ ಬಡ್ಡಿ ಹೆಚ್ಚಾದರೂ ಸಂಬಳ ಮಾತ್ರ ಹಾಗೆಯೇ ಇದೆ. ತಿಂಗಳಿಗೆ ಮುನ್ನೂರರಿಂದ ಐನೂರು ಡಾಲರ್ ಹೆಚ್ಚುವರಿ ಮನೆಸಾಲದ ಬಡ್ಡಿ ಕಟ್ಟುವುದಾದರೆ ಅದಕ್ಕೆ ಒದಗಿಸಿಕೊಳ್ಳಬೇಕಲ್ಲವೇ? ಬಾಡಿಗೆ ಕೊಟ್ಟಿರುವವರು ಬಾಡಿಗೆ ಹೆಚ್ಚಿಸಿದ್ದಾರೆ. ಈ ದೇಶದಲ್ಲಿ ಸಂಬಳ ಬರುವುದು ಪ್ರತಿ ಎರಡು ವಾರಕ್ಕೊಮ್ಮೆ. ಮನೆ ಬಾಡಿಗೆ, ದಿನಸಿ, ತರಕಾರಿ, ಇತ್ಯಾದಿಗಳ ಕೊಳ್ಳುವಿಕೆ ಎಲ್ಲವೂ ವಾರಕ್ಕೊಮ್ಮೆ. ನಿಧಾನವಾಗಿ ವಾರದ ವಸತಿ ಬಾಡಿಗೆ, ದಿನನಿತ್ಯ ಜೀವನದ ಖರ್ಚು ಎಲ್ಲವೂ ಗಗನಕ್ಕೇರಿದೆ.

ವರ್ಷದ ಆರಂಭದಲ್ಲಿ ಸಹೋದ್ಯೋಗಿಯೊಬ್ಬರು ಮಾತನಾಡುತ್ತಾ ಮಗಳು ತಮ್ಮೊಡನೆ ವಾಸಿಸಲು ಬಂದಿದ್ದಾಳೆ ಎಂದರು. ನಗರ ಕೇಂದ್ರದಲ್ಲಿ ಅವಳು ತನ್ನಿಬ್ಬರು ಸ್ನೇಹಿತೆಯರೊಂದಿಗೆ ಹಂಚಿಕೊಂಡು ವಾಸಿಸುತ್ತಿದ್ದ ಫ್ಲಾಟ್ ಬಾಡಿಗೆ ವಾರಕ್ಕೆ ನೂರು ಡಾಲರ್ ಹೆಚ್ಚಾಯ್ತು. ಒಬ್ಬಳು ಕೆಲಸ ಬದಲಾಯಿಸಿದಳು. ಉಳಿದ ಇಬ್ಬರಿಗೆ ಬಾಡಿಗೆ ಹೊರೆಯಾಯ್ತು. ಇತ್ತೀಚೆಗೆ ವಿದ್ಯಾರ್ಥಿನಿಯೊಬ್ಬಳು ಹೇಳಿದಂತೆ ಯೂನಿವರ್ಸಿಟಿಯ ಸಹಪಾಠಿಯೊಬ್ಬರು ತಮ್ಮ ಕಾರಿನಲ್ಲಿ ಬದುಕುತ್ತಿದ್ದರಂತೆ. ರಾತ್ರಿ ಸಮಯ ರಸ್ತೆ ಬದಿಯಲ್ಲಿ ಕಾರನ್ನು ನಿಲ್ಲಿಸಿಕೊಂಡಿರುವುದು, ಒಳಗೆ ಮುದುರಿಕೊಂಡು ಮಲಗುವುದು. ಬೆಳಿಗ್ಗೆ ಎದ್ದು ಯೂನಿವರ್ಸಿಟಿಗೆ ಬಂದು ಅಲ್ಲಿದ್ದ ಟಾಯ್ಲೆಟ್, ಶವರ್ ಸೌಲಭ್ಯಗಳನ್ನು ಬಳಸಿಕೊಂಡು, ಕೆಫೆಯಲ್ಲಿ ವಿದ್ಯಾರ್ಥಿಗಳಿಗೆ ಸಿಕ್ಕುವ ರಿಯಾಯ್ತಿ ದರದಲ್ಲಿ ಕಾಫಿ, ಸ್ಯಾಂಡ್ವಿಚ್ ಮತ್ತು ಉಚಿತ ಹಣ್ಣು ಪಡೆಯುವುದು. ದಿನಪೂರ್ತಿ ಯೂನಿವರ್ಸಿಟಿ ಕಟ್ಟಡದೊಳಗೇ ಇದ್ದುಕೊಂಡು ಒಂದಷ್ಟು ವ್ಯಾಸಂಗ, ನಿದ್ದೆ ಮಾಡುವುದು. ರಾತ್ರಿ ಪುನಃ ಕಾರಿಗೆ ವಾಪಸ್. ಪ್ರಜೆಗಳಿಗೆ ಸರಕಾರದ ವಿವಿಧ ಯೋಗಕ್ಷೇಮ ವ್ಯವಸ್ಥೆಗಳಿಂದ ಹಣ ಸಹಾಯವಿದೆಯಲ್ಲಾ ಎಂದರೆ ಇದೆ, ಆದರೆ ಅದು ಸಾಲುವುದಿಲ್ಲ.

ಸರಕಾರದ ವತಿಯಿಂದ ಕಾಮನ್ವೆಲ್ತ್ ಬಾಡಿಗೆ ಸಹಾಯ ಎನ್ನುವ ವ್ಯವಸ್ಥೆಯೂ ಇದೆ. ಇದರ ಪ್ರಯೋಜನ ಪಡೆಯುತ್ತಿರುವವರು ಒಂದು ಮಿಲಿಯನ್ ಜನರಿಗೂ ಹೆಚ್ಚು. ಆದರೆ ಅದರಿಂದ ಸಿಗುವ ಹಣ ವಾರದ ಬಾಡಿಗೆ ಕಟ್ಟಲು ಸಾಲುವುದಿಲ್ಲ ಎಂದು ಅನೇಕರು ವಸತಿ ಹೀನರಾಗಿದ್ದಾರೆ. ಇವರ ರಕ್ಷಣೆಗೆ ಬಂದಿರುವುದು ಈಗಿನ ಬಜೆಟ್ ಘೋಷಣೆ – ಆ ಸಹಾಯ ಸೆಪ್ಟೆಂಬರ್ ತಿಂಗಳಿಂದ 15% ಜಾಸ್ತಿಯಾಗಲಿದೆ. ಇದರಿಂದ ಒಬ್ಬ ವ್ಯಕ್ತಿಗೆ ಸುಮಾರು ಒಂದು ವಾರಕ್ಕೆ ಇನ್ನೂರು ಡಾಲರ್ ತನಕ ಬಾಡಿಗೆ ಸಹಾಯ ಸಿಗಲಿದೆ. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಒಂದು ರೂಮ್ ಬಾಡಿಗೆ ವಾರಕ್ಕೆ ಇನ್ನೂರೈವತ್ತು ಡಾಲರ್ ಇದೆ ಎಂದು ಆ ವಿದ್ಯಾರ್ಥಿನಿ ಹೇಳಿದಳು. ಅದರೊಂದಿಗೆ ನೀರು, ವಿದ್ಯುಚ್ಛಕ್ತಿ, ಫೋನ್, ಆಹಾರ, ಆರೋಗ್ಯ, ಬಟ್ಟೆ, ಸಾರ್ವಜನಿಕ ಸಾರಿಗೆ ಖರ್ಚು ಇತ್ಯಾದಿಗಳನ್ನು ಲೆಕ್ಕ ಹಾಕಿದರೆ ಒಬ್ಬ ವ್ಯಕ್ತಿ ಬದುಕಲು ತಿಂಗಳಿಗೆ ಸುಮಾರು ಒಂದೂವರೆ ಸಾವಿರ ಡಾಲರ್ ಬೇಕು. ಉದ್ಯೋಗದಲ್ಲಿ ಇರದಿದ್ದರೆ ಸಂಪೂರ್ಣವಾಗಿ ಸರಕಾರದ ಯೋಗಕ್ಷೇಮ ಹಣಸಹಾಯ ವ್ಯವಸ್ಥೆಗೆ ಶರಣಾಗಬೇಕು. ಹಾಸಿಗೆ ಕೊಟ್ಟರೂ, ಇದ್ದರೂ ಅದರಲ್ಲಿ ಪೂರ್ತಿಯಾಗಿ ಕಾಲು ಚಾಚಲು ಆಗುವುದಿಲ್ಲ.

ಕಾರಿನಲ್ಲಿ ಮಲಗುತ್ತಿದ್ದ ಆ ವಿದ್ಯಾರ್ಥಿಯ ಅವಸ್ಥೆ ನೋಡಲಾಗದೆ ಈ ವಿದ್ಯಾರ್ಥಿನಿ ತನ್ನ ಮನೆಯಲ್ಲಿ ಆಶ್ರಯ ನೀಡಿದ್ದಾಳಂತೆ. ಪುಣ್ಯ ಬರಲಿ ಆಕೆಗೆ.

ವಾಪಸ್ ಬಜೆಟ್ ಕಥೆಗಳಿಗೆ ಬರೋಣವಂತೆ. ಕೋವಿಡ್-19 ರ ದೆಸೆಯಿಂದ ಕುಸಿದಿದ್ದ ಚಿಕ್ಕಪುಟ್ಟ ಮತ್ತು ಮಧ್ಯಮ ವರ್ಗದ ವಾಣಿಜ್ಯ ಸಂಸ್ಥೆಗಳಿಗೆ ಸಹಾಯ ಸಿಕ್ಕಿದೆ. ಲಭ್ಯವಿರುವ ಇಪ್ಪತ್ತು ಸಾವಿರ ಡಾಲರ್ ಹಣದಲ್ಲಿ ಅವರುಗಳು ತಮ್ಮ ವ್ಯಾಪಾರಕ್ಕೆ ಸಂಬಂಧಿಸಿದ ವಸ್ತುಗಳನ್ನು ಕೊಳ್ಳಬಹುದು. ಅಂದರೆ ರೆಫ್ರಿಜಿರೇಟರ್, ದೊಡ್ಡ ದೊಡ್ಡ ಕೈಗಾರಿಕಾ-ಮಟ್ಟದ ಉಪಕರಣಗಳು ಇತ್ಯಾದಿ. ಈ ವಸ್ತುಗಳು ಪರಿಸರ-ಸ್ನೇಹಿ ಮತ್ತು ಇಂಧನ-ಸ್ನೇಹಿಯಾಗಿರಬೇಕು ಎಂಬ ಷರತ್ತು ಇದೆ. ಒಳ್ಳೆಯದಾಯ್ತು.

ಬಜೆಟ್ ಕೊಟ್ಟಿರುವ ಬೇರೆ ಸಹಾಯಗಳು ಏನೆಂದರೆ ಏಕಪೋಷಕ ಕುಟುಂಬಕ್ಕೆ ಅವರ ಮಗು ಹದಿನಾಲ್ಕು ವರ್ಷ ಪೂರೈಸುವ ತನಕ ಪೋಷಕ ಹಣಸಹಾಯ, ಉದ್ಯೋಗದ ಬೇಟೆಯಲ್ಲಿರುವವರಿಗೆ ಕೊಡುವ ಧನಸಹಾಯದಲ್ಲಿ ಏರಿಕೆ, ಮತ್ತು ಆರೋಗ್ಯಸೇವೆಯಲ್ಲಿ ಹೆಚ್ಚುವರಿ ಹಣಹೂಡಿಕೆ.

ಆರೋಗ್ಯಸೇವೆಯಲ್ಲಿ ಹೆಚ್ಚುವರಿ ಹಣಹೂಡಿಕೆ ಎನ್ನುವುದು ಜರೂರು ವಿಷಯ ಮತ್ತು ತುರ್ತಾಗಿ ಬೇಕಿರುವ ಸಹಾಯ. ಹದಿನಾರು ವರ್ಷ ತುಂಬಿದ ವ್ಯಕ್ತಿ ಒಬ್ಬ ಡಾಕ್ಟರ್ ಬಳಿ 10 ರಿಂದ 15 ನಿಮಿಷ ಕಾಲದ ಒಂದು ಭೇಟಿಗೆ ಹೋದರೆ ನಮಗೆ ತಗುಲುವ ರಿಯಾಯ್ತಿ ಖರ್ಚು ನಲವತ್ತು ಡಾಲರ್. ಆಸ್ಟ್ರೇಲಿಯನ್ ಮಧ್ಯಮ ಆದಾಯ ಜನರಿಗೆ ಇದು ದೊಡ್ಡ ಹೊರೆ. ಇದನ್ನು ತಟ್ಟಿಕೊಳ್ಳಲಾರದೆ ಎಷ್ಟೋಮಂದಿ ವೈದ್ಯರ ಬಳಿ ಹೋಗುವುದೇ ಇಲ್ಲ. ತಮಗಿರುವ ರೋಗ-ರುಜಿನಗಳನ್ನು ಹಾಗೆಯೆ ಅನುಭವಿಸುತ್ತ ಅವುಗಳಿನ್ನೂ ಉಲ್ಬಣಿಸಿ ಅವು ಮುಂದೆ ತೀವ್ರ ಕಾಯಿಲೆಗಳಾಗುವ ಸಂಭವವಿದ್ದೇ ಇದೆ. ಬಹುಕಾಲದಿಂದಲೂ ಸಾರ್ವಜನಿಕ ಆರೋಗ್ಯಸೇವೆಯನ್ನು ಸಂಪೂರ್ಣವಾಗಿ ಉಚಿತಗೊಳಿಸಿ ಎಂದು ಜನರು ಹೇಳುತ್ತಲೇ ಬಂದಿದ್ದಾರೆ. ದೇಶದ ರಕ್ಷಣೆ ವಿಷಯದಲ್ಲಿ ಹೂಡುವ ಹಣದ ಕೆಲವಂಶ ಸಾರ್ವಜನಿಕ ಆರೋಗ್ಯ ಸೇವೆಗೆ ಒದಗಿದರೆ ಅದು ದೇಶದ ಪ್ರಗತಿಯನ್ನು ಸೂಚಿಸುತ್ತದೆಯೆಂದು ನನ್ನ ನಿಲುವು.

ಆಸ್ಟ್ರೇಲಿಯಾ ದೇಶಕ್ಕೆ ‘ಶ್ರೀಮಂತ ದೇಶ’ವೆಂಬ ಹೆಸರಿದೆ. ಈ ಶ್ರೀಮಂತಿಕೆಯಲ್ಲಿ ಸಾಮಾನ್ಯ ಜನರು ಹೇಗಿದ್ದಾರೆ ಎನ್ನುವ ಪ್ರಶ್ನೆ ಜನರಿಗೆ ಮತ್ತು ರಾಜಕೀಯ ಪಕ್ಷಗಳಿಗೆ ಸದಾ ಎಚ್ಚರಿಕೆ ಗಂಟೆಯಂತೆ. 2022ರಲ್ಲಿ ಆಸ್ಟ್ರೇಲಿಯನ್ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್ ಹೇಳಿರುವಂತೆ ಮಧ್ಯಮ ವರಮಾನದ ಗುಂಪಿನಡಿಯಲ್ಲಿ ಬರುವ ಒಬ್ಬ ಆಸ್ಟ್ರೇಲಿಯನ್ ಪ್ರಜೆಯ ವಾರ್ಷಿಕ ವರಮಾನವು 65,000 ಡಾಲರ್. ಈ ಮಧ್ಯಮ ರೇಖೆಯ ಕೆಳಗೆ ಬರುವುದು ಅರೆಕಾಲಿಕ ಉದ್ಯೋಗಸ್ಥರು; ಮೇಲಿನ ಗುಂಪಿನಲ್ಲಿರುವವರು ಸುಮಾರು 80,000 ಡಾಲರ್ ವರಮಾನವುಳ್ಳವರು. ಈ ಮಧ್ಯಮ ವರಮಾನಕ್ಕೆ ಸರಕಾರವು ವಿಧಿಸುವ ವಾರ್ಷಿಕ ಕಡ್ಡಾಯ ತೆರಿಗೆ 30% ಭಾಗವನ್ನು ಕಳೆದಾದ ನಂತರ ಮೇಲೆ ಹೇಳಿದ ಗಳಿಕೆ ಕೈಗೆಟಕುವುದು. ಅಂದರೆ ತಿಂಗಳಿಗೆ ಸರಿಸುಮಾರು ಆರು ಸಾವಿರ ಗಳಿಸಿದರೆ ಅದರಲ್ಲಿ ತಿಂಗಳ ಬಾಡಿಗೆ ಅಥವಾ ಮನೆಸಾಲ ಪಾವತಿ ಸುಮಾರು 2,200 ಡಾಲರ್ ಇರುತ್ತದೆ. ಉಳಿದ ನಾಲ್ಕು ಸಾವಿರದಲ್ಲಿ ಬೇರೆಲ್ಲವನ್ನೂ ತೂಗಿಸಬೇಕು. ನಾಲ್ಕು ಜನರಿರುವ ಒಂದು ಕುಟುಂಬಕ್ಕೆ ಪ್ರತಿವಾರದ ಆಹಾರಕ್ಕೆ (ಫುಡ್ ಬಿಲ್) ತಗುಲುವುದು ಸರಾಸರಿ 300 ಡಾಲರ್ ಅಂದರೆ ತಿಂಗಳಿಗೆ 1,200. ಇದಾದನಂತರ ಕಾರಿಗೆ ಪೆಟ್ರೋಲ್ ಇಲ್ಲವೇ ಸಾರ್ವಜನಿಕ ಬಸ್/ಟ್ರೇನ್, ಮಕ್ಕಳ ಓದು, ಮತ್ತೆಲ್ಲಾ ತಿಂಗಳ ಖರ್ಚುಗಳು ಎಂದಿಗೂ ಅತ್ತಇತ್ತ ಅಲ್ಲಾಡುವುದಿಲ್ಲ. ನಮ್ಮ ಮಹಿಳಾ ನಡಿಗೆ ಗುಂಪಿನ ಸದಸ್ಯೆಯೊಬ್ಬರು ಹೇಳಿದಂತೆ ಪ್ರತಿವಾರವೂ ಹೇಗೆ ಎಲ್ಲಿ ಮನೆಖರ್ಚು ಕಡಿಮೆ ಮಾಡಬಹುದು ಎನ್ನುವ ಪ್ರಶ್ನೆ ಮಧ್ಯಮ ವರಮಾನ ಜನರ ಪ್ರತಿದಿನದ ಪ್ರಶ್ನೆ. ಇಲ್ಲಿಯವರೆಗೂ ಯಾವುದೇ ಸರಕಾರದ ಬಜೆಟ್ ಈ ಪ್ರಶ್ನೆಗೆ ಸಮರ್ಪಕವಾದ ಉತ್ತರವನ್ನು ಕೊಟ್ಟಿಲ್ಲ ಎನ್ನುವುದು ಸೂರ್ಯಪ್ರಭೆಯಂತೆ ನಿತ್ಯಸತ್ಯದ ಮಾತು.