ಕಳೆದ ಆರು ವರ್ಷಗಳಿಂದ ಕನ್ನಡ ಸಾಹಿತ್ಯದ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಾ ಬಂದಿರುವ ಬೆಂಗಳೂರಿನ ಈ ಹೊತ್ತಿಗೆ ಸಂಸ್ಥೆಯು, ಕಳೆದ ವರ್ಷದಿಂದ ಕಥಾ ಸ್ಪರ್ಧೆಗಳನ್ನೂ ಏರ್ಪಡಿಸುತ್ತ ಬಂದಿದೆ. ಈ ಬಾರಿ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಗಾಗಿ ಅಪ್ರಕಟಿತ ಕಥಾ ಸಂಕಲನಗಳನ್ನು ಆಹ್ವಾನಿಸಲಾಗಿತ್ತು. ಹಾಗೆಯೇ ೨೫ ವಯೋಮಿತಿಯ ಕಾಲೇಜು ವಿದ್ಯಾರ್ಥಿಗಳಿಗಾಗಿ ಕಥಾ ಸ್ಪರ್ಧೆಯನ್ನು ಏರ್ಪಡಿಸಲಾಗಿತ್ತು. ರಾಜ್ಯದ, ಹೊರ ರಾಜ್ಯಗಳ ಹಾಗು ವಿದೇಶದಲ್ಲಿರುವ ಕನ್ನಡಿಗರೂ ಈ ಹೊತ್ತಿಗೆ ಎರಡೂ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದಾರೆ. ಪ್ರಶಸ್ತಿಗಾಗಿ ಒಟ್ಟು ೨೬ ಅಪ್ರಕಟಿತ ಕಥಾ ಸಂಕಲನಗಳು ಬಂದಿದ್ದವು. ಖ್ಯಾತ ಸಾಹಿತಿ, ಶ್ರೀ. ಅಮರೇಶ ನುಗಡೋಣಿಯವರು ಈ ವಿಭಾಗದ ತೀರ್ಪುಗಾರರಾಗಿದ್ದರು. ಮತ್ತು ನಾಡಿನ ಹೆಸರಾಂತ ಕತೆಗಾರರಾದ ಶ್ರೀಮತಿ. ಸುನಂದಾ ಕಡಮೆ ಹಾಗು ಶ್ರೀ. ಕರ್ಕಿ ಕೃಷ್ಣಮೂರ್ತಿಯವರು ಕಾಲೇಜು ವಿದ್ಯಾರ್ಥಿಗಳ ವಿಭಾಗ ತೀರ್ಪುಗಾರರಾಗಿದ್ದರು ಎಂದು ತಿಳಿಸಲು ಹರ್ಷಿಸುತ್ತೇವೆ. ೧೦ ಮಾರ್ಚ್ ೨೦೧೯ರಂದು, ಬೆಂಗಳೂರಿನ ಕಪ್ಪಣ್ಣ ಅಂಗಳ ಸಭಾಂಗಣದಲ್ಲಿ, ಬೆಳಿಗ್ಗೆ ೧೦ರಿಂದ ಸಂಜೆ ೬.೩೦ರವರೆಗೆ ನಡೆಯಲಿರುವ ಈ ಹೊತ್ತಿಗೆಯ ‘ಹೊನಲು’ ಕಾರ್ಯಕ್ರಮದಲ್ಲಿ ವಿಜೇತರಿಗೆ ಪ್ರಶಸ್ತಿ ಹಾಗು ಬಹುಮಾನ ಪ್ರದಾನ ಮಾಡಲಾಗುವುದು.

ಎರಡೂ ವಿಭಾಗದ ಫಲಿತಾಂಶ ಈ ಕೆಳಗಿನಂತಿದೆ.

ಈ ಹೊತ್ತಿಗೆ ಕಥಾ ಪ್ರಶಸ್ತಿ:

(ಮಧುಸೂದನ ವೈ. ಎನ್)

ಬೆಂಗಳೂರಿನ ಶ್ರೀ. ಮಧುಸೂದನ ವೈ. ಎನ್ ಅವರ ಅಪ್ರಕಟಿತ ಕಥಾ ಸಂಕಲನ ‘ಕಾರೇಹಣ್ಣು’, ೨೦೧೯ರ ‘ಈ ಹೊತ್ತಿಗೆ ಕಥಾ ಪ್ರಶಸ್ತಿ’ಯನ್ನು ಪಡೆದುಕೊಂಡಿದೆ. ಪ್ರಶಸ್ತಿಯು ರೂ. ೧೦,೦೦೦ ನಗದು ಹಾಗು ಪ್ರಶಸ್ತಿ ಫಲಕವನ್ನೊಳಗೊಂಡಿದೆ.

ಕಾಲೇಜು ವಿದ್ಯಾರ್ಥಿಗಳ ವಿಭಾಗದಲ್ಲಿ:

(ಯಶಸ್ವಿನಿ)

ಮಂಗಳೂರು ವಿಶ್ವವಿದ್ಯಾಲಯದ ಮಂಗಳ ಗಂಗೋತ್ರಿಯಲ್ಲಿ, ಸಂಖ್ಯಾಶಾಸ್ತ್ರ ವಿಭಾಗದಲ್ಲಿ ದ್ವಿತೀಯ ವರ್ಷದ ಎಮ್.ಎಸ್.ಸಿ ಓದುತ್ತಿರುವ, ಯಶಸ್ವಿನಿ ಅವರು ಬರೆದ ಕಥೆ ‘ಜಲಜಗಂಧಿನಿ’ ಪ್ರಥಮ (ರೂ. ೫೦೦೦ ನಗದು ಹಾಗು ಪ್ರಮಾಣ ಪತ್ರ)

(ಪ್ರಸನ್ನ ವೆಂಕಟರಮಣ ಭಟ್)

ಶಿವಮೊಗ್ಗದ ಪಿ.ಇ.ಎಸ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ & ಮ್ಯಾನೇಜ್ಮೆಂಟ್ ಶಿಕ್ಷಣ ಸಂಸ್ಥೆಯಲ್ಲಿ ನಲ್ಲಿ ನಾಲ್ಕನೇ ವರ್ಷದ ಬಿ.ಇ ಓದುತ್ತಿರುವ, ಪ್ರಸನ್ನ ವೆಂಕಟರಮಣ ಭಟ್ ಅವರ ಕಥೆ ‘ಕಲ್ಕಿ’ ದ್ವಿತೀಯ (ರೂ. ೩೦೦೦ ನಗದು ಹಾಗು ಪ್ರಮಾಣ ಪತ್ರ)

(ವಿಘ್ನೇಶ್ ಹಂಪಾಪುರ)

ಹರಿಯಾಣ ರಾಜ್ಯದ ಅಶೋಕಾ ಯೂನಿವರ್ಸಿಟಿಯಲ್ಲಿ, ಇಂಗ್ಲಿಷ್ ಸಾಹಿತ್ಯ ವಿಭಾಗದಲ್ಲಿ ದ್ವಿತೀಯ ವರ್ಷದ ಬಿ.ಎ ಓದುತ್ತಿರುವ ವಿಘ್ನೇಶ್ ಹಂಪಾಪುರ ಅವರ ಕಥೆ ‘ತವರಿನ ನ್ಯಾಯ’ ತೃತೀಯ (ರೂ. ೨೦೦೦ ನಗದು ಹಾಗು ಪ್ರಮಾಣ ಪತ್ರ) ಬಹುಮಾನಗಳನ್ನು ಪಡೆದುಕೊಂಡಿದ್ದು,

(ವಿನಾಯಕ ಹೆಗಡೆ)

ಬೆಂಗಳೂರಿನ ಪದ್ಮಶ್ರೀ ಇನ್ಸ್ಟಿಟ್ಯೂಟ್ ಆಫ್ ಮ್ಯಾನೇಜ್ಮೆಂಟ್ & ಸೈನ್ಸಸ್ ಶಿಕ್ಷಣ ಸಂಸ್ಥೆಯಲ್ಲಿ ದ್ವಿತೀಯ ವರ್ಷದ M.Voc ಓದುತ್ತಿರುವ ವಿದ್ಯಾರ್ಥಿಯಾದ ವಿನಾಯಕ ಹೆಗಡೆ ಅವರ ‘ಹೊಸಾವತಾರ’ ಮೆಚ್ಚುಗೆ ಪಡೆದ ಕಥೆಯಾಗಿದೆ ಎಂದು ಈ ಹೊತ್ತಿಗೆಯ ಮ್ಯಾನೇಜಿಂಗ್ ಟ್ರಸ್ಟಿಯಾಗಿರುವ ಶ್ರೀಮತಿ ಜಯಲಕ್ಷ್ಮಿ ಪಾಟೀಲ್ ತಿಳಿಸಿರುತ್ತಾರೆ..

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ವಿಜೇತ ಕಥಾ ಸಂಕಲನ ‘ಕಾರೇಹಣ್ಣು’ ಕುರಿತು ತೀರ್ಪುಗಾರರಾದ ಶ್ರೀ. ಅಮರೇಶ ನುಗಡೋಣಿಯವರ ಟಿಪ್ಪಣಿ.

‘ಈ ಹೊತ್ತಿಗೆ ಕಥಾ ಪ್ರಶಸ್ತಿ’ ಸ್ಪರ್ಧೆಗಾಗಿ ಬಂದ ಕಥಾ ಸಂಕಲನಗಳ ಪೈಕಿ ನನಗೆ ಓದಲು 9 ಕಥಾ ಸಂಕಲನಗಳನ್ನು ಕೊಡಲಾಗಿತ್ತು.ಅವುಗಳನ್ನು ಓದಿ ‘ಕಾರೇಹಣ್ಣು’ ಕಥಾ ಸಂಕಲನವು ಪ್ರಶಸ್ತಿಗೆ ಅರ್ಹವಾಗಿದೆ- ಎಂದು ಭಾವಿಸಿದ್ದೇನೆ.

ಯಾವುದೇ ಪ್ರಶಸ್ತಿಗೆ ತೀರ್ಪುಗಾರರಾಗುವುದು ಮುಜುಗರದ ಸಂಗತಿ. ಒಂದು ತೋಟದಲ್ಲಿ ಅರಳಿ ನಿಂತ ಹೂಗಳಲ್ಲಿ ಒಂದು ಚೆಂದದ ಹೂವು – ಎಂದು ಎತ್ತಿಕೊಳ್ಳುವುದು ಕಷ್ಟದ ಸಂಗತಿ. ಎಲ್ಲವುಗಳಿಗೆ ಅವುಗಳದ್ದೇ ಚೆಲುವು ಇದ್ದೇ ಇರುತ್ತದೆ. ಚೆಲುವನ್ನು ಅಳೆಯುವುದು ಸರಳವಾದುದ್ದಲ್ಲ. 9 ಸಂಕಲನಗಳು ಹಾಗೆ ನೋಡಿದರೆ ಪ್ರಕಟಣೆಗೆ ಅರ್ಹವಾಗಿವೆ. ಪ್ರಶಸ್ತಿಗಾಗಿ ಆಯ್ಕೆ ಮಾಡುವಾಗ ಕೂದಲೆಳೆಯ ಅಂತರವನ್ನು ಗುರುತಿಸಿ ಒಂದನ್ನುಎತ್ತಿಕೊಳ್ಳುವುದು ಕಷ್ಟ. ಮನಸ್ಸು ಅಳುಕುತ್ತದೆ. ಆದರೂ ಸ್ಪರ್ಧೆಯಲ್ಲಿ ಆಯ್ಕೆ ಎನ್ನುವುದು ಇರುತ್ತದೆ. ಅದನ್ನು ಮಾಡಿದ್ದೇನೆ.

‘ಕಾರೇಹಣ್ಣು’ ಕಥಾ ಸಂಕಲನದ ಕತೆಗಳು ಓದುಗನನ್ನು ಆಕರ್ಷಿಸುತ್ತವೆ. ಕಥಾವಸ್ತುಗಳಲ್ಲಿ ಭಿನ್ನತೆಯಿದೆ. ಕತೆಗಳ ನಿರೂಪಣೆಯಲ್ಲಿ ದೃಶ್ಯಗಳು ಕಣ್ಣಿಗೆ ಒತ್ತಿ ನಿಲ್ಲುತ್ತವೆ. ನುಡಿ ಬಳಕೆಯಲ್ಲಿ ನಾಜೂಕುತನವಿದೆ. ಕತೆಯ ಒಡಲಿನಿಂದಲೇ ನುಡಿ ಮೂಡಿ ಬಂದಿದೆ. ಕಥೆಯನ್ನು ತೋರಿಸುವುಕೆ ಇದೆ.- ಕಥೆ ಹೇಳುವಿಕೆ ಇಲ್ಲ. ಅನಗತ್ಯ ಎನ್ನುವುದು ಅತಿ ಕಡಿಮೆಯಿದೆ. ಕತೆಗಳ ರಚನೆಯಲ್ಲಿ ಇಂತಹ ಹೊಸತನವಿದೆ. ಅದರಿಂದಲೇ ‘ಕಾರೇಹಣ್ಣು’ ಕಥಾ ಸಂಕಲನ ಪ್ರಶಸ್ತಿಗೆ ಆಯ್ಕೆಯಾಗಿದೆ.

ಈ 9 ಕಥಾ ಸಂಕಲನಗಳನ್ನು ಪ್ರಕಟಣೆಗೆ ಮುನ್ನ ಓದಿದ ಖುಷಿ ನನ್ನದು. ಇದಕ್ಕೆ ಅನುವು ಮಾಡಿಕೊಟ್ತ ಎಲ್ಲರಿಗೆ ವಂದನೆಗಳು.

ನಂಬುಗೆಯ
ಅಮರೇಶ ನುಗಡೋಣಿ