”ನನ್ನ ಮೊದಲ ‘ಕರ್ಮಭೂಮಿ’ ಸ್ಕಾಟ್ ಲ್ಯಾಂಡ್. ಇಲ್ಲಿನ ಜನರು ಇಂಗ್ಲೆಂಡನ್ನು ಬಹುತೇಕ ಭಾರತೀಯರಂತೆಯೇ ಒಳಗೊಳಗೇ ದ್ವೇಷಿಸುತ್ತಾರೆ. ಈ ಕಾರಣಕ್ಕೆ ಬ್ರಿಟಿಷರಿಂದ ದಬ್ಬಾಳಿಕೆಗೊಳಗೊಂಡ ಸ್ಕಾಟರಿಗೂ ನಮಗೂ ಒಂದು ಸಮಾನತೆಯಿದೆ. ಸ್ಕಾಟ್ ಲ್ಯಾಂಡ್ ಯು.ಕೆ. ಯ ಅವಿಭಾಜ್ಯ ಭಾಗವಾದರೂ ತಾವು ಬೇರೆಯಾಗಬೇಕೆನ್ನುವ ಕನಸು ಇಲ್ಲಿಯ ಜನರಿಗಿದೆ. ಜೊತೆಯಲ್ಲೇ ಪ್ರತ್ಯೇಕ ದೇಶವನ್ನು ಘೋಷಿಸಿಕೊಂಡರೆ ಎಲ್ಲಿ ತಮ್ಮ ವಾಣಿಜ್ಯ ಮಟ್ಟ ಕುಸಿಯುತ್ತದೋ ಎಂಬ ಆತಂಕದಲ್ಲಿ ಒಳಗೊಳಗೇ ಬುಸುಗುಡುತ್ತ ಬದುಕುತ್ತಿದ್ದಾರೆ”
ಡಾ.ಪ್ರೇಮಲತ ಬರೆಯುವ ಬ್ರಿಟನ್ ಬದುಕಿನ ಕಥನ.

 

ನಾವು ಸ್ಕಾಟ್ ಲ್ಯಾಂಡ್ ಗೆ ಹೋಗುತ್ತೇವೆಂದು ಹೇಳಿದಾಗ ಇಂಗ್ಲೆಂಡಿನಲ್ಲಿ ಕೇಳಿಬಂದ ಮೊದಲ ಪ್ರತಿಕ್ರಿಯೆ ‘ಅಬ್ಬಾ ಅಲ್ಲಿ ಭಾರೀ ಚಳಿ’ ಎಂಬುದು! “ಅದು ಇಂಗ್ಲೆಂಡಿಗಿಂತ ಬಡ ಪ್ರದೇಶ”, “ಜನರು ತುಂಬಾ ಒಳ್ಳೆಯವರು ಆದರೆ ಒರಟರು”, “ಇಂಗ್ಲೆಂಡಿನಲ್ಲಿಯೇ ಉತ್ತಮ ಅವಕಾಶಗಳಿರುವುದು ಆದರೆ ಸ್ಕಾಟ್ಲ್ಯಾಂಡ್ ಭಾರೀ ಸುಂದರ ಜಾಗ, ನೋಡಿಕೊಂಡು ಹಿಂತಿರುಗಿ ಬನ್ನಿ”, “ ಅಯ್ಯೋ ಹೌದಾ..?” ಈ ಬಗ್ಗೆ ಒಂದು ರೀತಿಯ ನಕಾರಾತ್ಮಕ ರಾಗಗಳೇ ಪ್ರತಿಯೊಬ್ಬರಿಂದಲೂ ಸಿಕ್ಕಿದ್ದು. ಹಾಗಾಗಿ ಇಂಗ್ಲೀಷರೇ ಚಳಿ ದೇಶ ಎಂದು ವರ್ಣಿಸಿದ ಸ್ಕಾಟ್ ಲ್ಯಾಂಡು ಹೇಗಿರುತ್ತದೋ ಎಂಬ ಅಧೈರ್ಯವಿತ್ತು.

ದಕ್ಷಿಣ ಭಾರತದಿಂದ ಬಂದ ನನಗೆ ಇಂಗ್ಲೆಡು ಕೂಡ ಭಾರೀ ಚಳಿಯ ದೇಶವಾಗಿಯೇ ಕಂಡಿತ್ತು!  ನಾವು ಇಂಗ್ಲೆಂಡಿಗೆ ಬಂದದ್ದು ಆಗಸ್ಟ್ ತಿಂಗಳಲ್ಲಿ. ಈ ದಿನಗಳಲ್ಲಿ ಸೂರ್ಯ ರಾತ್ರಿ ಒಂಭತ್ತಾದರೂ ಬೆಳಗುತ್ತಿದ್ದುದು ನನಗೆ ಆಶ್ಚರ್ಯದ ಸಂಗತಿಯಾಗಿತ್ತು. ಮುಂಜಾವಿನ ನಾಲ್ಕು ಗಂಟೆಗೆಲ್ಲ ಮತ್ತೆ ಹೊರಬರುತ್ತಿದ್ದ ಸೂರ್ಯನಿಗೆ ಪೂರ್ತಿ ಕೆಲಸ. ಆದರೆ ಕ್ರಮೇಣದ ತಿಂಗಳುಗಳಲ್ಲಿ ಬೆಳಕಿನ ಸಮಯ ಕಡಿಮೆಯಾಗಿ ಕತ್ತಲಿನದೇ ಕಾರುಬಾರು ಶುರುವಾಯಿತು. ಆಗೆಲ್ಲ ಸೂರ್ಯನ ಬೆಳಕಿಗೆ ತವಕಿಸುವಂತಾಗುತ್ತಿತ್ತು. ಬೆಳಕಿದ್ದರೂ ಶಾಖವಿರುತ್ತಿರಲಿಲ್ಲ. ಜೊತೆಗೆ ಹವಾಮಾನ ಎನ್ನುವುದು ಮಳೆ-ಗಾಳಿ-ಚಳಿ ಇವೆಲ್ಲದರ ಮಿಶ್ರಣವಾಗುತ್ತ ಹೋದಂತೆ ಈ ಪಶ್ಚಿಮ ದೇಶವನ್ನು ಯಾಕೆ ಚಳಿಯ ದೇಶವೆಂದು ಕರೆಯುತ್ತಾರೆಂದು ಅರಿವಾಗುತ್ತ ಹೋಗಿತ್ತು.  ಕೊನೆಗೊಂದು ದಿನ ನಾನು ಕಾಯುತ್ತಿದ್ದ ಸಮಯ ಬಂದೇ ಬಿಟ್ಟಿತು. ಆಗಸದಲ್ಲೆಲ್ಲ ಎಂತದ್ದೋ ವಿಚಿತ್ರ ಬಿಳಿ ಬಣ್ಣ, ಬಿಳಿ ಮೋಡಗಳು, ಕೈ-ಮೈ ಕೊರೆಯುವ ಚಳಿ ಶುರುವಾಯ್ತು. ನಂತರ ಒಂದೊಂದೇ ತುಣುಕು ಹಿಮ, ಹಿಂಜಿದ ಹತ್ತಿಯಂತೆ ಆಗಸದಿಂದ ನಿಧಾನಕ್ಕೆ ಕೆಳಗಿಳಿಯಿತು. ನೋಡ ನೋಡುತ್ತಿರುವಂತೆಯೇ ಸಾವಿರಾರು ತುಣುಕುಗಳು ವೇಗವಾಗಿ ಕೆಳಗಿಳಿಯತೊಡಗಿದವು. ಅರ್ಧ ಗಂಟೆ ಎನ್ನುವಷ್ಟರಲ್ಲಿ ಎಲ್ಲೆಲ್ಲಿಯೂ ಬಿಳಿಯ ‘ಸ್ನೋ’ ತುಂಬಿದ ರಸ್ತೆ-ಗಿಡ-ಛಾವಣಿಗಳು ಕಾಣತೊಡಗಿದವು. ಇಡೀ ಭೂಮಿಯನ್ನು ಬಿಳಿಯ ಹಿಮದ ಹೊದಿಕೆಯಲ್ಲಿ ಮುಚ್ಚಿದ ಸೃಷ್ಟಿಯ ಸೊಬಗನ್ನು ಬಾಯಿ ಬಿಟ್ಟು ನೋಡುವಂತಾಗಿತ್ತು. ಮನೆಯ ತುಂಬೆಲ್ಲ ಸಂಭ್ರಮಿಸಿ ಓಡಾಡಿದೆ. ಮನೆಯ ಬಾಗಿಲು ತೆರೆದು ಕೈಯೊಡ್ಡಿ ಬೀಳುತ್ತಿದ್ದ ಹಿಮವನ್ನು ಹಿಡಿದೆ. ಪುಟ್ಟ ಬಕೆಟ್ಟಿನಲ್ಲಿ ನೆಲದಲ್ಲಿ ಬಿದ್ದ ಹಿಮವನ್ನು ಮೊಗೆದು ತಂದು ಪರೀಕ್ಷಿಸಿದೆ. ಸ್ವಲ್ಪ ಹೊತ್ತಿನಲ್ಲೇ ಕರಗಿ ನೀರಾಗಿ ಹರಿಯುತ್ತಿದ್ದ ಹಿಮದಲ್ಲಿ ಮಗನನ್ನು ಆಡಲು ಬಿಟ್ಟೆ.

ಇದಾದ ನಂತರವೂ ಸತತವಾಗಿ ಹಲವು ದಿನಗಳು ತುಂಬಾ ಹಿಮ ಸುರಿದಿತ್ತು. ನಂತರವಷ್ಟೇ ಅದರ ಕಷ್ಟಗಳು ಗೊತ್ತಾಗಿದ್ದು. ಸ್ನೋ ಬಿದ್ದ ನಂತರದ ದಿನಗಳಲ್ಲಿ ಉಷ್ಣಾಂಶ ಹೆಚ್ಚಾಗದಿದ್ದರೆ ಉಸುಕಿನಂತಹ ಕೋಮಲ ಹಿಮ, ಶೀತಲ ಮಂಜು ಗಡ್ಡೆಯಾಗುತ್ತದೆ. ಹಾಗಾಗಿ ಅದರ ಮೇಲೆ ಕಾಲಿಟ್ಟರೆ ಜರ್ರೆಂದು ಜಾರುತ್ತಿದ್ದೆವು. ಸ್ನೋ ಅರೆಬರೆ ಕರಗಿದ್ದರೆ ‘ಕಸಕ್’ ಎಂದು ಕಾಲಡಿ ಸಿಗುತ್ತಿತ್ತು. ಕಾರುಗಳ ಚಕ್ರಗಳು ಈ ಹಿಮದ ಉಸುಕಿನಲ್ಲಿ ಸಿಲುಕಿ ‘ಗಿರ್ರೆಂದು’ ಗಿರಕಿ ಹೊಡೆದು ಜಾರುತ್ತಿದ್ದವು. ಇದೇ ಕಾರಣ ದೇಶದಾದ್ಯಂತ ಅನೇಕ ಅಪಘಾತಗಳಾಗುತ್ತಿದ್ದವು. ಶಾಲೆ-ಕಾಲೇಜುಗಳಿಗೆ ಮಕ್ಕಳು ತಲುಪಲಾಗದ ಕಾರಣ ರಜೆ ಘೋಷಿಸುತ್ತಿದ್ದರು. ರೈಲು- ವಿಮಾನ ಯಾನಗಳು ದಿನಗಟ್ಟಲೆ ಸ್ಥಗಿತಗೊಂಡಿದ್ದವು. ಮುಂಚೆ ಭಾರತದಲ್ಲಿದ್ದಾಗ ಗ್ರೀಟಿಂಗ್ ಕಾರ್ಡ್ ಮೇಲೆ ಹಿಮಾಚ್ಛಾದಿತ ಲ್ಯಾಂಡ್ ಸ್ಕೇಪನ್ನು ನೋಡಿ ಆಹಾ ಎಂತಹ ‘ಅದ್ಭುತ ರಮ್ಯ ದೃಶ್ಯ’ ಎಂದೆಲ್ಲ ಅಂದುಕೊಳ್ಳುತ್ತಿದ್ದ ನನಗೆ ನಿಧಾನವಾಗಿ ಈ ಸೌಂದರ್ಯ, ನಂತರದ ದಿನಗಳಲ್ಲಿ ತರುವ ತೊಂದರೆಗಳ ಬಗ್ಗೆ ಅರಿವಾಗುತ್ತ ಹೋಗಿತ್ತು. “ದೂರದ ಬೆಟ್ಟ ನುಣ್ಣಗೆ” ಅಂತಾರಲ್ಲ ಹಾಗೆ. ಈಗ ಬೆಟ್ಟದಲ್ಲೇ ಇದ್ದೇನೆ ಅಂದುಕೊಂಡಿದ್ದೆ!

ಯು.ಕೆ.ಯ ಶಾಪ ಎಂದರೆ ಈ ಚಳಿಗಾಲ. ಅಭಿವೃದ್ದಿ ಹೊಂದಿದ ದೇಶವಾದರೂ, ಚಳಿಗಾಲದಲ್ಲಿ ತಕ್ಕ ಹೀಟಿಂಗ್ ವ್ಯವಸ್ಥೆಯಿಲ್ಲದೆ ಹಲವರು ಸಾಯುತ್ತಾರೆ. ಹೆಚ್ಚುಹೆಚ್ಚು ಖಾಯಿಲೆಗಳಿಗೆ ತುತ್ತಾಗುತ್ತಾರೆ. ಗವ್ವೆನ್ನುವ ಕತ್ತಲು ತುಂಬಿದ ರಾತ್ರಿಗಳಲ್ಲಿ ವಿಮಾನ, ರೈಲು ಮಾರ್ಗ ಮತ್ತು ರಸ್ತೆಗಳ ಮೇಲೆ ಅಪಘಾತಗಳು ಸಂಭವಿಸುತ್ತವೆ. ಜನರು ನಡೆದಾಡುವಾಗ ಜಾರಿ ಬಿದ್ದು ಕೈ-ಕಾಲು ದವಡೆಗಳನ್ನು ಮುರಿದುಕೊಳ್ಳುತ್ತಾರೆ. ಚರಿತ್ರೆಯ ಪ್ರಕಾರ ಯುದ್ಧಗಳ ಸೋಲು –ಗೆಲುವಿನಲ್ಲೂ ಈ ಹಿಮದ ಪಾತ್ರವಿದೆ. ಬೆಳೆಗಳಿಗಾಗಿ-ಜಾನುವಾರಗಳ ಮೇವುಗಳಿಗೆ ಇವರು ವಿಷೇಶ ದಾಸ್ತಾನುಗಳನ್ನು ಮಾಡಿಕೊಳ್ಳುತ್ತಾರೆ. ಇವರ ಕುಡಿತಗಳಿಗೂ, ಬಟ್ಟೆಯ ರೂಪು ರೇಷೆಗಳನ್ನು ಈ ಚಳಿಗಾಲ ನಿರ್ಮಿಸಿದೆ. ಹಿಮದ ಕಾರಣ ಮನೆಯ ಮತ್ತು ಈ ದೇಶದ ಮನೆ-ಕಟ್ಟಡಗಳ ರೂಪು ರೇಷೆಗೆ, ವಿನ್ಯಾಸಕ್ಕೆ ಭಾರೀ ಅಡಕವನ್ನು ನಿರ್ಮಿಸಿಬಿಟ್ಟಿದೆ. ಈ ದೇಶವನ್ನು ಆಳುವವನು ಸೂರ್ಯನಲ್ಲ ಆದರೆ ಈ ಶೀತಲ ಮೈಯ ಹಿಮದ ರಾಣಿ!

ಅಲ್ಲದೇ ಚಳಿಗಾಲ ಬಂತೆಂದರೆ ಒಂದೇ ಸಮನೆ ದೇಶದಲ್ಲಿ ಫ್ಲೂ ಮಾರಿ ಕಾಣಿಸಿಕೊಳ್ಳುತ್ತಾಳೆ. ಕೆಮ್ಮು, ನೆಗಡಿ, ಜ್ವರ, ವಾಂತಿ ಬೇಧಿಗಳಂಥ ರೋಗಗಳು ಕಾಣಿಸಿಕೊಳ್ಳಲಾರಂಭಿಸುತ್ತವೆ. ಆಸ್ಪತ್ರೆಗಳು ವೈದ್ಯಾಲಯಗಳು ತತ್ತರಿಸುತ್ತವೆ. ಇವೆಲ್ಲ ಬೀಮಾರಿಗಳಿಗೂ ಚಳಿಗಾಲದ್ದೇ ಪ್ರೋತ್ಸಾಹ. ಈಗ ಚಳಿಗಾಲದ ಖಾಯಿಲೆಗಳನ್ನೂ ಪ್ರತಿ ವರ್ಷ ಅನುಭವಿಸದೆ ವಿಧಿಯಿಲ್ಲವಾಗಿದೆ. ಈ ಕಾಲದಲ್ಲಿ ಮಳೆಯೂ ,ಗಾಳಿಯೂ ಸೇರಿದರೆ ಮುಗಿದೇ ಹೋಯಿತು. ಒಂದು ಕೈಯಲ್ಲಿ ಬ್ಯಾಗು, ಇನ್ನೊಂದು ಕೈಯಲ್ಲಿ ಛತ್ರಿ ಹಿಡಿದರೆ, ಹಾರುವ ಬಟ್ಟೆಯನ್ನು ತಡೆಯಲು, ಚಳಿಗೆ ಸುರಿವ ಮೂಗನ್ನು ಒರೆಸಿಕೊಳ್ಳಲು ಮತ್ತೆರಡು ಕೈ ಇರಬಾರದೇ ಎಂದೆನಿಸದೇ ಇರುವುದಿಲ್ಲ. ಚಳಿಗಾಲದ ದೊಡ್ಡ ಕಷ್ಟ ಚಳಿಯಲ್ಲ, ಬದಲಿಗೆ 24 ಗಂಟೆಗಳ ಮಬ್ಬುಕತ್ತಲೆ ಮತ್ತು ಕತ್ತಲೆ. ಈ ಕತ್ತಲೆ ತರುವ ಖಿನ್ನತೆ, ಸೂರ್ಯನಿರುವ ದೇಶಗಳಿಂದ ಬರುವ ನಮ್ಮಂತವರೇ ಅಲ್ಲದೆ ಇಲ್ಲಿಯೇ ಇರುವ ಸ್ಥಳೀಯರೂ ಸೀಸನಲ್ ಅಫೆಕ್ಟೀವ್ ಡಿಸಾರ್ಡರ್ ತುತ್ತಾಗುತ್ತಾರೆ.

ಯು.ಕೆ.ಯ ಶಾಪ ಎಂದರೆ ಈ ಚಳಿಗಾಲ. ಅಭಿವೃದ್ದಿ ಹೊಂದಿದ ದೇಶವಾದರೂ, ಚಳಿಗಾಲದಲ್ಲಿ ತಕ್ಕ ಹೀಟಿಂಗ್ ವ್ಯವಸ್ಥೆಯಿಲ್ಲದೆ ಹಲವರು ಸಾಯುತ್ತಾರೆ. ಹೆಚ್ಚುಹೆಚ್ಚು ಖಾಯಿಲೆಗಳಿಗೆ ತುತ್ತಾಗುತ್ತಾರೆ. ಗವ್ವೆನ್ನುವ ಕತ್ತಲು ತುಂಬಿದ ರಾತ್ರಿಗಳಲ್ಲಿ ವಿಮಾನ, ರೈಲು ಮಾರ್ಗ ಮತ್ತು ರಸ್ತೆಗಳ ಮೇಲೆ ಅಪಘಾತಗಳು ಸಂಭವಿಸುತ್ತವೆ. ಜನರು ನಡೆದಾಡುವಾಗ ಜಾರಿ ಬಿದ್ದು ಕೈ-ಕಾಲು ದವಡೆಗಳನ್ನು ಮುರಿದುಕೊಳ್ಳುತ್ತಾರೆ.

ಮಿಕ್ಕ ಜನರು ವಿಧಿಯಿಲ್ಲದೆ ಚಳಿಗೂ, ಬಿಸಿಲಿಗೂ ತಮ್ಮ ದೇಹವನ್ನು ಹೊಂದಿಸಿಕೊಳ್ಳುತ್ತಾರೆ. ಸಹಸ್ರಾರು ವರ್ಷಗಳಿಂದ ಇಲ್ಲಿ ನೆಲೆಸಿರುವ ಜನರ ಮೈಯಲ್ಲಿ ಅದಕ್ಕಾಗಿ ವಿಶೇಷ ಅನುವಂಶಿಕ ಜೀನುಗಳಿರುವುದು ನಿಜ. ಈ ಚಳಿಗಾಲದ ಜಂಜಾಟದಲ್ಲಿ ಕೂಡ ಹಲವು ಬಿಳಿಯರು ಎಂದಿನಂತೆ ಬೆಳಗಿನ ವ್ಯಾಯಾಮಕ್ಕೂ, ಕೆಲಸಕ್ಕೂ ಅಲ್ಪವೇ ಬಟ್ಟೆಗಳಲ್ಲಿ ಹೋಗುವುದನ್ನು ನೋಡಿದರೆ ಅಚ್ಚರಿಯಾಗುತ್ತದೆ. ಚಳಿಗಾಲವೆಂದರೆ ಇಲ್ಲಿನ ಜನರೂ ಮೂಗು ಮುರಿಯುತ್ತಾರಾದರೂ, ಹಿಮ ಬೀಳುತ್ತದೆಂದರೆ ಇವರಲ್ಲಿ ಎಲ್ಲಿಲ್ಲದ ಸಡಗರ, ಉದ್ವಿಗ್ನತೆ, ಸಂಭ್ರಮ, ಚಟುವಟಿಕೆ ಎಲ್ಲ ಕಾಣಿಸಿಕೊಳ್ಳುತ್ತದೆ. ಮಕ್ಕಳು ರಸ್ತೆಗೆ ಬಿದ್ದ ಹಿಮದಲ್ಲಿ ಸ್ನೋಮ್ಯಾನ್ ಮಾಡುತ್ತಾರೆ, ಹಿಮದ ಗಡ್ಡೆಯ ಚೆಂಡನ್ನು ಕಟ್ಟಿ ಒಬ್ಬರ ಮೇಲೊಬ್ಬರು ತೂರುತ್ತಾರೆ, ಸ್ನೋ ಸ್ಲೆಡ್ಜ್ ಗಳ ಮೇಲೆ ಕುಳಿತು ದಿಬ್ಬಗಳ ಮೇಲಿಂದ ಜಾರುತ್ತಾರೆ. ಮನುಷ್ಯ ಪ್ರಕೃತಿಯ ಈ ಬದಲಾವಣೆಯನ್ನು ಸಂತೋಷಕ್ಕಾಗಿ ಹೇಗೆ ಪಳಗಿಸಿಕೊಂಡು ಬದುಕುತ್ತಾನೆ ಎಂಬುದನ್ನು ನೋಡಲು ಸಂತೋಷವಾಗುತ್ತದೆ. ಬದುಕಲ್ಲಿ ಮಾಗುವುದು, ಅನುಭವದಿಂದ ಕಲಿಯುವುದು ಎಂದರೆ ಇದೇ ಏನೋ?

ಮುಂದಿನ ವರ್ಷಗಳಲ್ಲಿ ಚಳಿಗಾಲ ಎಂದರೆ ಒತ್ತಟ್ಟು ಚಿತ್ರಣ ಸಿಗಲು ಶುರುಮಾಡಿತು. ಮನಸ್ಸು ಇವತ್ತಿನ ದಿನಗಳಲ್ಲಿ ಅದಕ್ಕೆ ಬೇಕಾದ ಪೂರ್ಣ ಪ್ರಮಾಣದ ಸಿದ್ಧತೆಗಳನ್ನು ಮಾಡಬೇಕಾದ ಕಡೆ ಗಮನ ಕೊಡುವುದನ್ನು ಕಲಿತಿದೆ. ಚಳಿಗೆ ಇನ್ನೂ ಕುಖ್ಯಾತಿಯನ್ನು ಪಡೆದ ಈ ಸ್ಕಾಟ್ ಲ್ಯಾಂಡಿನಲ್ಲಿ ಹಿಮ ಮತ್ತೂ ಹೆಚ್ಚಾಗಿ ಬೀಳುತ್ತಿತ್ತು. ಗಾಳಿ-ಮಳೆಗೂ ಬರವಿರಲಿಲ್ಲ. ಬರೋಬ್ಬರಿ ಆರು ವರ್ಷಗಳ ಕಾಲ ನಾವು ಇಲ್ಲಿದ್ದೆವು. ಭಾರತದಲ್ಲಿದ್ದಾಗ ‘ಬ್ರೇವ್ ಹಾರ್ಟ್’ ಎನ್ನುವ ಮೆಲ್ ಗಿಬ್ಸನ್ನಿನ ಹಾಲಿವುಡ್ಡಿನ ಸಿನಿಮಾ ನೋಡಿದ್ದೆ. ಇದರಲ್ಲಿನ ಅಸಲು ಹೀರೋ ಸ್ಕಾಟ್ ಲ್ಯಾಂಡಿನ ‘ವಿಲಿಯಂ ವ್ಯಾಲೇಸ್’. ಅವನ ತವರೂರಾದ ಸ್ಟೆರಲಿಂಗ್ ಎನ್ನುವ ನಗರಕ್ಕೆ ಬಂದಿದ್ದೆವು. ಈ ಊರಿನಲ್ಲಿ ಆತನಿಗಾಗಿ ಕಟ್ಟಿಸಿದ ಎತ್ತರದ ಸ್ಮಾರಕವಿದೆ. ರಾಜರುಗಳು ಆಳಿದ ಕ್ಯಾಸಲ್ ಇದೆ. ಯುದ್ಧ ಕಂಡ ರಣಭೂಮಿಯಿದೆ. ಐತಿಹಾಸಿಕ ಪ್ರಸಿದ್ಧ ಸ್ಥಳಕ್ಕೇ ನಾವು ಹೊರಟು ಬಂದಿದ್ದೆವು.

ವಿಲಿಯಂ ವ್ಯಾಲೇಸ್ ಸ್ಕಾಟರು ಆರಾಧಿಸುವ ಕಡು ಶೂರ. ಈ ವ್ಯಕ್ತಿ ಇಂಗ್ಲೀಷರ ವಿರುದ್ಧ ಯುದ್ಧದಲ್ಲಿ ಘೋರವಾಗಿ ಹೋರಾಡಿ ಜಯಗಳಿಸಿದ್ದು 1297 ರಲ್ಲಿ, ಈ ಸ್ಟೆರ್ಲಿಂಗ್ ನಗರದ ಸೇತುವೆಯ ಬಳಿಯಲ್ಲಿ. ಯಾವ ರಾಜನೂ ಆಗಿರದಿದ್ದ ಈತನಿಗೆ ಕೊನೆಗೆ ನೈಟ್ ಹುಡ್ ಸಿಗುತ್ತದಾದರೂ ಆತನನ್ನು ಕೆಲವು ರಾಷ್ಟ್ರದ್ರೋಹಿ ಸ್ಕಾಟರ್ ನೆರವಿನಿಂದಲೇ ಇಂಗ್ಲಿಷರು ಸೆರೆ ಹಿಡಿಯುತ್ತಾರೆ. ಮೊದಲು ಅರೆಬರೆ ನೇಣುಹಾಕಿ, ನಂತರ ಕುದುರೆಗಳ ಕಾಲಿಗೆ ಕಟ್ಟಿ ಎಳೆಸಿ ದೇಹವನ್ನು ನಾಲ್ಕು ಭಾಗವನ್ನಾಗಿ ಮಾಡಿ, ಆತನ ತಲೆಯನ್ನು ಕಡಿದು ಕೋಟೆಯ ಬಾಗಿಲಿಗೆ ನೇತು ಹಾಕಿ, ವ್ಯಾಲೇಸನ ಅಂಗಾಂಗಗಳನ್ನು ಇಡೀ ದೇಶದ ಎಲ್ಲೆಡೆ ಕಳಿಸಿ ಜನರಲ್ಲಿ ಭಯ ತರಿಸಲು ಪ್ರಯತ್ನಿಸಿದ್ದರೆಂದರೆ ವಿಲಿಯಂ ವ್ಯಾಲೇಸನು ಇಂಗ್ಲಿಷರಿಗೆ ಎಂತಹ ದೊಡ್ಡ ಸಿಂಹ ಸ್ವಪ್ನವಾಗಿದ್ದ ಎಂದು ವಿಷಯ ಮನದಟ್ಟಾಗುತ್ತದೆ. ಆಗಿನಿಂದಲೂ ಸ್ಕಾಟರಿಗೆ ಈತನೇ ಸೂಪರ್ ಹೀರೋ ಆಗಿದ್ದಾನೆ. ಈತ ಉಪಯೋಗಿಸಿದ ಕತ್ತಿ ಅದೆಷ್ಟು ದೊಡ್ಡದಾಗಿದೆಯೆಂದರೆ ಅದನ್ನು ಎತ್ತುವುದು ಕೂಡ ಇವತ್ತಿನ ತಲೆಮಾರುಗಳಿಗೆ ಅಸಾಧ್ಯವೆನ್ನಿಸುತ್ತದೆ. ಇಂತಹ ಯೋಧನ ಊರಿಗೆ ನಾವು ಬಂದು ತಲುಪಿದಾಗ ಬೆಳಗಿನ ಜಾವ.
ನೆಲದ ಅಂತಸ್ತಿನಲ್ಲಿದ್ದ ಮನೆಯ ಮುಂದಿನ ಕಾರು ಪಾರ್ಕಿನಲ್ಲಿಯೇ ನಮಗೆ ಅಚ್ಚರಿ ಕಾದಿತ್ತು. ಚೆಂಗ ಚೆಂಗನೆ ನೆಗೆವ ಮೊಲಗಳಿದ್ದವು ಅಲ್ಲಿ. ಮನೆಯ ಹಾಲಿನಲ್ಲಿ ಕುಳಿತರೆ ಹಿಂದೆ ಹರಿಯುತ್ತಿದ್ದ ತೊರೆಯಲ್ಲಿ ಹಂಸಗಳು ದಂಡು ತೇಲುತ್ತಿದ್ದವು. ಮೈದಾನಗಳಲ್ಲಿ ಕಾಣಸಿಗುತ್ತಿದ್ದ ಜಿಂಕೆಗಳು ಮನಸ್ಸಿಗೆ ಮುದಕೊಡುತ್ತಿದ್ದವು. ಇಂಗ್ಲೆಂಡು ಕಣ್ಮರೆಯಾಗುತ್ತಿದ್ದಂತೆ ಚೆಲುವ ನಾಡಾದ ಸ್ಕಾಟ್ ಲ್ಯಾಂಡಿನ ಸೌಂದರ್ಯ ಡಣಾ ಡಾಳಾಗಿ ಕಣ್ತೆರೆದುಕೊಳ್ಳುತ್ತದೆ. ಈ ನಾಡಿನ ತುಂಬೆಲ್ಲ ನದಿಗಳು. ಇವನ್ನು ಸ್ಕಾಟರು ‘ಲಾಕ್’ ಗಳೆಂದು ಕರೆಯುತ್ತಾರೆ. ಅಂತೆಯೇ ಉತ್ತರ ಸ್ಕಾಟ್ ಲ್ಯಾಂಡನ್ನು ‘ಹೈ ಲ್ಯಾಂಡ್’ ಎಂದೂ ಅಲ್ಲಿನ ಪರ್ವತಗಳನ್ನು ‘ಬೆನ್’ ಗಳೆಂದೂ ಕರೆಯುತ್ತಾರೆ. ತಮ್ಮದೇ ಭಾಷೆ, ಉಡುಗೆ, ಅಡುಗೆ, ಸಂಪ್ರದಾಯಗಳು, ಕುಣಿತ, ಸಂಗೀತ, ನರ್ತನ ಎಲ್ಲವನ್ನೂ ಹೊಂದಿರುವ ಇವರ ಇಂಗ್ಲೀಷಿನ ಉಚ್ಛಾರಣೆ ನಮ್ಮ ಧಾರವಾಡ, ಬಿಜಾಪುರದ ಕನ್ನಡದವರಂತೆಯೇ ಅತ್ಯಂತ ಭಿನ್ನವಾದುದು.

(ಬ್ಯಾಗ್ ಪೈಪರ್ )

ಇಂಗ್ಲೆಂಡಿನಲ್ಲಿ ವೃತ್ತಿಪರ ತಯಾರಿ ನಡೆಸಿದರೂ ನನ್ನ ಮೊದಲ ‘ಕರ್ಮಭೂಮಿ’ ಸ್ಕಾಟ್ ಲ್ಯಾಂಡ್. ಇಲ್ಲಿನ ಜನರು ಇಂಗ್ಲೆಂಡನ್ನು ಬಹುತೇಕ ಭಾರತೀಯರಂತೆಯೇ ಒಳಗೊಳಗೇ ದ್ವೇಷಿಸುತ್ತಾರೆ. ಈ ಕಾರಣಕ್ಕೆ ಬ್ರಿಟಿಷರಿಂದ ದಬ್ಬಾಳಿಕೆಗೊಳಗೊಂಡ ಸ್ಕಾಟರಿಗೂ ನಮಗೂ ಒಂದು ಸಮಾನತೆಯಿದೆ. ಸ್ಕಾಟ್ ಲ್ಯಾಂಡ್ ಯು.ಕೆ. ಯ ಅವಿಭಾಜ್ಯ ಭಾಗವಾದರೂ ತಾವು ಬೇರೆಯಾಗಬೇಕೆನ್ನುವ ಕನಸು ಇಲ್ಲಿಯ ಜನರಿಗಿದೆ. ಜೊತೆಯಲ್ಲೇ ಯುನೈಟೆಡ್ ಕಿಂಗ್ಡಮ್ ನಿಂದ ಬೇರೆಯಾಗಿ ಪ್ರತ್ಯೇಕ ದೇಶವನ್ನು ಘೋಷಿಸಿಕೊಂಡರೆ ಎಲ್ಲಿ ತಮ್ಮ ವಾಣಿಜ್ಯ ಮಟ್ಟ ಕುಸಿಯುತ್ತದೋ ಎಂಬ ಆತಂಕದಲ್ಲಿ ಒಳಗೊಳಗೇ ಬುಸುಗುಡುತ್ತ ಬದುಕುತ್ತಿದ್ದಾರೆ. ಇಂಗ್ಲೆಂಡಿನ ಆಡಳಿತಕ್ಕೆ ಸ್ಕಾಟರದು ಸದಾ ಧಿಕ್ಕಾರದ ಭಾವ. ಇಲ್ಲಿನ ನೋಟುಗಳ ಮೇಲೆ ಇಂಗ್ಲೆಂಡಿನ ರಾಣಿಯ ಚಿತ್ರದ ಬದಲು ಸ್ಕಾಟ್ ಲ್ಯಾಂಡಿನ ರಾಣಿಯ, ಕವಿಗಳ ಚಿತ್ರವನ್ನು ಹಾಕಿಕೊಂಡು ಬೇರೆಯದೇ ಸ್ಕಾಟ್ಟಿಷ್ ಪೌಂಡು ಗಳನ್ನು /ಹಣವನ್ನು ಚಲಾವಣೆಯಲ್ಲಿರಿಸಿಕೊಂಡಿದ್ದಾರೆ. ಇದಕ್ಕೆ ಕಾರಣಗಳಿಲ್ಲದಿಲ್ಲ.

15 ನೇ ಶತಮಾನದಲ್ಲಿ ಸ್ಕಾಟರ ರಾಜನಾಗಿದ್ದ ಐದನೇ ಜೇಮ್ಸ್ ನ ಮಗಳಾಗಿ 1542 ರಲ್ಲಿ ಹುಟ್ಟಿದ ಮೇರಿ ಎಂಬ ರಾಜಕುಮಾರಿ ತನ್ನ ಆರನೇ ದಿನದಲ್ಲಿ ತಂದೆಯನ್ನು ಕಳೆದುಕೊಂಡು ಸ್ಕಾಟರ ರಾಣಿಯೆನಿಸಿಕೊಂಡವಳು. ಆದರೆ ಬಹುತೇಕ ವರ್ಷ ಆಕೆ ಬದುಕಿದ್ದು ಫ್ರಾನ್ಸ್ ದೇಶದಲ್ಲಿ . ಮದುವೆಯಾದದ್ದು ಫ್ರಾನ್ಸಿನ ರಾಜನನ್ನು. ಆ ಕಾಲದಲ್ಲಿ ಈ ಬಗೆಯ ರಾಜ ಮನೆತನದ ಮದುವೆಗಳು ಸ್ಕಾಟರು, ಇಂಗ್ಲಿಷರು ಮತ್ತು ಫ್ರಾನ್ಸಿನ ರಾಜಮನೆತನಗಳಲ್ಲಿ ಸರ್ವೇ ಸಾಮಾನ್ಯವಾಗಿತ್ತು. ಮೇರಿ ಫ್ರಾನ್ಸಿನಲ್ಲಿದ್ದ ಕಾಲದಲ್ಲಿ ಅವಳ ಹೆಸರಲ್ಲಿ ಪಾಳೇಗಾರರು ಸ್ಕಾಟ್ ಲ್ಯಾಂಡನ್ನು ಆಳುತ್ತಿದ್ದರು. 1560 ರಲ್ಲಿ ಗಂಡನನ್ನು ಕಳೆದುಕೊಂಡ ಮೇರಿ ತವರೂರಿಗೆ ಮರಳಿ ತನ್ನ ಸಂಬಂಧಿಯೊಬ್ಬನನ್ನು ಮದುವೆಯಾದಳು. 1567 ರಲ್ಲಿ ಈತನೂ ಕೊಲೆಗೀಡಾದ. ಈ ಗಲಭೆಯಲ್ಲಿ ಮೇರಿ ಪ್ರಾಣವನ್ನು ಉಳಿಸಿಕೊಳ್ಳಲು ತನ್ನ ಒಂದು ವರ್ಷದ ಮಗನೊಂದಿಗೆ ತನ್ನ ಕಸಿನ್ ಆದ ಇಂಗ್ಲೆಂಡಿನ ರಾಣಿ ಎಲಿಝಬೆತ್ ಳ ಸಹಾಯ ಕೋರಿ ಇಂಗ್ಲೆಂಡಿಗೆ ಬಂದಳು.

ರಾಣಿ ಎಲಿಝೆಬೆತ್ ಇಂಗ್ಲೆಂಡಿನ ಅರಸಿಯಾಗುವ ಮುನ್ನ ಆ ಪಟ್ಟಕ್ಕೆ ಅರ್ಹಳೇ ಎನ್ನುವ ಬಗ್ಗೆ ಪ್ರಶ್ನಿಸಿಸಲಾಗಿತ್ತು. ಹಲವು ಕ್ಯಾಥೊಲಿಕ್ ಇಂಗ್ಲೀಷರ ಪ್ರಕಾರ ಸ್ಕಾಟರ ಮೇರಿಯೇ ಸರಿಯಾದ ರಾಜ ವಂಶದ ರಕ್ತವನ್ನು ಹೊಂದಿದ ವ್ಯಕ್ತಿಯಾಗಿದ್ದಳು. ಹಾಗಾಗಿ ಮೇರಿಯ ಆಗಮನ ಹೊಸ ಕ್ರಾಂತಿ ಮತ್ತು ದಂಗೆಗೆ ಇಂಬುಗೊಟ್ಟಿತು. ಇವರೆಲ್ಲ ಸೇರಿ ತನ್ನ ಅರಸೊತ್ತಿಗೆಗೆ ಎಲ್ಲಿ ಕಂಟಕ ತರುತ್ತಾರೋ ಎಂಬ ಕಾರಣಕ್ಕೆ ಇಂಗ್ಲೆಂಡಿನ ರಾಣಿ ಎಲಿಝಬೆತ್ ಮೇರಿಯನ್ನು ಹದಿನೆಂಟೂವರೆ ವರ್ಷ ಜೈಲಿನಲ್ಲಿರಿಸಿದಳು. ಕೊನೆಗೆ 1586 ರಲ್ಲಿ ಮೇರಿಯ ಶಿರಚ್ಛೇದನ ಮಾಡಿಸಿ ಘೋರ ಕಳಂಕಿಣಿಯಾದದ್ದನ್ನು ಇತಿಹಾಸ ಸಾರಿ ಹೇಳುತ್ತದೆ.

ಸ್ಕಾಟ್ ಲ್ಯಾಂಡ್ ಯು.ಕೆ. ಯ ಅವಿಭಾಜ್ಯ ಭಾಗವಾದರೂ ತಾವು ಬೇರೆಯಾಗಬೇಕೆನ್ನುವ ಕನಸು ಇಲ್ಲಿಯ ಜನರಿಗಿದೆ. ಜೊತೆಯಲ್ಲೇ ಯುನೈಟೆಡ್ ಕಿಂಗ್ಡಮ್ ನಿಂದ ಬೇರೆಯಾಗಿ ಪ್ರತ್ಯೇಕ ದೇಶವನ್ನು ಘೋಷಿಸಿಕೊಂಡರೆ ಎಲ್ಲಿ ತಮ್ಮ ವಾಣಿಜ್ಯ ಮಟ್ಟ ಕುಸಿಯುತ್ತದೋ ಎಂಬ ಆತಂಕದಲ್ಲಿ ಒಳಗೊಳಗೇ ಬುಸುಗುಡುತ್ತ ಬದುಕುತ್ತಿದ್ದಾರೆ.

‘ಕಾಲಾಯ ತಸ್ಮೈನಮಃ’- ಎನ್ನುವಂತೆ ಮೇರಿಯನ್ನು ಕೊಂದ, ಮಕ್ಕಳಿರದಿದ್ದ ಎಲಿಝಬೆತ್ ಳ ಕಾಲದ ನಂತರ ಮೇರಿಯ ಒಬ್ಬನೇ ಮಗ ಆರನೇ ಜೇಮ್ಸ್, ರಾಜನಾಗಿ ಇಂಗ್ಲೆಂಡನ್ನೂ, ಸ್ಕಾಟ್ ಲ್ಯಾಂಡ್ ಅನ್ನೂ ಒಟ್ಟಿಗೆ ಆಳಿದ. ಇದೀಗ ಇವರಿಬ್ಬರು ರಾಣಿಯರ ಗೋರಿಗಳು ಎದುರು ಬದುರಾಗಿ ವೆಸ್ಟ್ ಮಿನ್ ಸ್ಟರ್ ಅಬ್ಬಿಯಲ್ಲಿ ಕಾಣಸಿಗುತ್ತವೆ. ಬ್ರಿಟಿಷರ ಇತಿಹಾಸದ ಕತೆಗಳು ಘನಘೋರವಾದವು. ಅಲ್ಲಿಂದ ಮುಂದೆಯೂ ಹಲವು ಹತ್ತು ಕದನ, ಕಲಹಗಳು ನಡೆದು ಕೊನೆಗೆ ಸ್ಕಾಟ್ ಲ್ಯಾಂಡ್ ಒಲ್ಲದ ಮನಸ್ಸಿನಿಂದ 1707 ರಲ್ಲಿ ಇಂಗ್ಲೆಂಡಿನ ಜೊತೆ ವಿಲೀನವಾಯ್ತು. ಈ 311 ವರ್ಷಗಳಲ್ಲಿ ಅಸಮಾಧಾನ, ರಾಜಕೀಯ ಒಡಕುಗಳಿಲ್ಲದೆ ಇವೆರಡೂ ದೇಶಗಳು ಶಾಂತವಾಗಿ ಬದುಕಿದ ದಿನಗಳಿಲ್ಲ. ನಾವು ಇಲ್ಲಿಗೆ ಬಂದ ಮೊದಲಲ್ಲಿ ಎಡಿನ್ಬರೋ, ಗ್ಲಾಸ್ಗೋ ಇತ್ಯಾದಿ ಸ್ಥಳಗಳಿಗೂ ನಾವು ನಮ್ಮ ಪ್ರವಾಸ ವಿಸ್ತರಿಸಿದೆವು. ಪ್ರವಾಸದ ಗೈಡ್ ‘ಇಂಗ್ಲೆಂಡಿನ ಇಂದಿನ ರಾಣಿ ಎಂತ ಕೊಳಕಿಯೆಂದೂ, ತಿಂಗಳಾದರೂ ಸ್ನಾನ ಮಾಡುವುದಿಲ್ಲವೆಂದೂ’ ಜೋಕುಗಳನ್ನು ಮಾಡುತ್ತ ಆಗಾಗ ಇಂಗ್ಲಿಷರ ತೇಜೋವಧೆಯಲ್ಲಿ ತೊಡಗಿಕೊಂಡಾಗ ನಮಗೆ ಆಶ್ಚರ್ಯದ ಜೊತೆಗೆ ನಗು. ಸ್ಕಾಟ್ ಲ್ಯಾಂಡಿನ ಜನರು ಇಂಗ್ಲಿಷನ್ನು ಮಾತನಾಡುವುದನ್ನು ಕೇಳಲು ಎರಡು ಕಿವಿ ಸಾಲದು. ಪದಗಳನ್ನು ಎಳೆದೆಳೆದು ರಾಗವಾಗಿ ಇಂಗ್ಲಿಷಿನಲ್ಲಿ ಮಾತನಾಡುವುದನ್ನು ಕೇಳಲು ನನಗೆ ತುಂಬಾ ಇಷ್ಟ. ಆದರೆ ಕೆಲವೊಮ್ಮೆ ಅರ್ಥವಾಗುವುದು ಕಷ್ಟವಾಗುತ್ತಿತ್ತು. ಹೆಡ್ (ತಲೆ) ಎನ್ನಲು ‘ಹೀಡ್’ ಎನ್ನುತ್ತಾರೆ. ಲಿಟ್ಲ್ (ಸ್ವಲ್ಪ) ಎನ್ನಲು ‘ವೀ’ ಎನ್ನುತ್ತಾರೆ. ಇವರು ಸಿಕ್ಸ್ (ಆರು) ಎಂದರೆ ಅದು ‘ಸೆಕ್ಸ್’ ಎಂಬಂತೆ ಕೇಳಿಸುತ್ತದೆ. ಸ್ಕಾಟ್ ಲ್ಯಾಂಡಿನ ಪ್ರಾಂತ್ಯದಿಂದ ಪ್ರಾಂತ್ಯಕ್ಕೆ ಮತ್ತೆ ಉಚ್ಛಾರಣೆಯ ವ್ಯತ್ಯಾಸಗಳಿವೆ. ಉದಾಹರಣೆಗೆ ಎಡಿನ್ಬರೋದವರದು ಒಂದು ಬಗೆಯ ಉಚ್ಛಾರಣೆಯಾದರೆ ಗ್ಲಾಸ್ಗೋ ನವರದು ಇನ್ನೊಂದು ಬಗೆಯದು!

(ವಿಲಿಯಂ ವ್ಯಾಲೇಸ್ ಪ್ರತಿಮೆ)

ಯು.ಕೆ.ಯ ಉತ್ತರಭಾಗದ ಈ ಸ್ಕಾಟ್ ಲ್ಯಾಂಡಿನ ಜನರನ್ನು ‘ಹೈಲ್ಯಾಂಡರ್ಸ್’ ಎಂದು ಕರೆಯುತ್ತಾರೆ. ಇಂಗ್ಲಿಷರು ಒಂದೊಮ್ಮೆ ಇವರನ್ನು ‘ಪ್ರಾಣಿ’ಗಳೆಂದೇ ಸಂಬೋಧಿಸುತ್ತಿದ್ದರಂತೆ. ಸ್ಕಾಟರ ಮತ್ತು ಇಂಗ್ಲಿಷರ ಚರ್ಮದ ಬಣ್ಣ ಒಂದೇ ಆದರೂ ಮುಖ ಚಹರೆ ಇಂಗ್ಲಿಷರಿಗಿಂತ ಅಲ್ಪ ಭಿನ್ನವಾಗಿವೆ. ತಮ್ಮ ಸಂಪ್ರದಾಯಗಳ ಬಗ್ಗೆ ಇವರಿಗೆ ಎಲ್ಲಿಲ್ಲದ ಹೆಮ್ಮೆ, ವ್ಯಾಮೋಹ. ಇವರಲ್ಲಿ ಎಷ್ಟೋ ಮಂದಿ ಲಂಡನ್ ಮಹಾನಗರಿಯನ್ನು ನೋಡಿಯೂ ಇಲ್ಲ. ತಮ್ಮದೇ ದೇಶ, ಭೂಭಾಗವೇ ಇವರಿಗೆ ಸರ್ವಸ್ವ. ಬರೇ ಐದು ಜನರಿದ್ದರೆ ಐವತ್ತು ಜನರನ್ನು ಸದೆಬಡಿಯುವಂತ ಶೌರ್ಯವಂತರು ಎಂದೇ ಇವರಿಗೆ ಹೆಸರು. ನಮ್ಮಲ್ಲಿ ಗೆರಿಲ್ಲ ಯುದ್ಧ ಮಾಡುವ ಜನರಂತೆ ಇವರು ತಮ್ಮದೇ ಯುದ್ಧಕಲೆಯಿಂದ ಇಂಗ್ಲಿಷರನ್ನು ಬಗ್ಗು ಬಡಿದ ಜನ. ಆದರೆ ಸ್ಕಾಟ್ ಲ್ಯಾಂಡಿನ ಜನಸಂಖ್ಯೆ ಬಹಳ ಕಡಿಮೆ. ಭೂಭಾಗವೂ ಅಷ್ಟೇ ಕಡಿಮೆ. ಅದರಲ್ಲೂ ಉಳುಮೆ ಮಾಡಬಲ್ಲ ಭೂಬಾಗವಂತೂ ಇನ್ನೂ ಕಡಿಮೆ. ಸ್ಕಾಟ್ ಲ್ಯಾಂಡಿನ ಉತ್ತರಕ್ಕೆ ಹೋದಂತೆಲ್ಲ ಅಪರಿಮಿತ ಸುಂದರವಾದ ನದಿಗಳು, ಕಣಿವೆಗಳು, ಬೆಟ್ಟಗಳು, ಪರ್ವತ ಶ್ರೇಣಿಗಳು ಶುರುವಾಗುತ್ತವೆ. ವರ್ಷವಿಡೀ ಹಿಮತುಂಬಿದ ಶಿಖರಗಳಿರುವ ಪರ್ವತಗಳಿವೆ ಅಲ್ಲಿ. ಉತ್ತರದ ಸಮುದ್ರದಲ್ಲಿ ತೈಲವೂ ಸಿಕ್ಕಿರುವ ಕಾರಣ ಸ್ಕಾಟರ ವಾಣಿಜ್ಯ ಮಟ್ಟ ಸುಧಾರಿಸಿದೆ. ಸ್ಕಾಟರು ಒರಟಾದರೂ ಮನಸ್ಸು ಬಹಳ ಒಳ್ಳೆಯದು ಎನ್ನುವ ಪ್ರತೀತಿಯಿದೆ. ಇಲ್ಲಿದ್ದ ಆರು ವರ್ಷಗಳಲ್ಲಿ ಅದು ನಮ್ಮ ಅನುಭವಕ್ಕೂ ಬಂದಿದೆ.

ಸಾಂಪ್ರದಾಯಿಕ ಮೋಟು ಲಂಗ ಹಾಕುವ ಸ್ಕಾಟ್ ಲ್ಯಾಂಡಿನ ಗಂಡಸರು ಇಡೀ ಪ್ರಪಂಚದಲ್ಲಿ ಪ್ರಸಿದ್ಧರು. ಇತ್ತೀಚೆಗಿನ ದಿನಗಳಲ್ಲಿ ಮದುವೆ ಇನ್ನಿತರ ಆಚರಣೆಗಳಲ್ಲಿ, ಸ್ಕಾಟ್ ಲ್ಯಾಂಡಿನ ಪ್ರಾತಿನಿಧಿಕ ಸಮಾರಂಭಗಳಲ್ಲಿ ಮಾತ್ರ ಈ ಟಾರ್ಟನ್ನಿನ ‘ತುಂಡು ಲಂಗ’ ಗಳನ್ನು ಕಾಣಬಹುದು. ತಮ್ಮ ಪರಂಪರೆಯಲ್ಲಿ ಶತಮಾನಗಳ ಹಿಂದೆ ಆಡುತ್ತಿದ್ದ ಕ್ರೀಡೆಗಳನ್ನು ಮರೆಯಬಾರದೆಂಬ ಉದ್ದೇಶದಿಂದ ವರ್ಷಕ್ಕೊಮ್ಮೆಯಂತೆ ಇಂದಿಗೂ ಆ ಕ್ರೀಡೆಗಳಲ್ಲಿ ತೊಡಗಿಸಿಕೊಂಡು ಸಂಭ್ರಮಿಸುತ್ತಾರೆ. ತಮ್ಮ ಶಕ್ತಿಯನ್ನು ತೋರಿಸಲು ಗೆರಿಲ್ಲಾ ಶೈಲಿಯಲ್ಲಿ ಮರದ ದಿಮ್ಮಿಗಳನ್ನು ಎಸೆಯುವುದು, ದೊಡ್ಡ ಕಲ್ಲುಗಳನ್ನು ಎತ್ತುವುದು, ಬೇಟೆಗಳಲ್ಲಿ ಉಪಯೋಗಿಸುತ್ತಿದ್ದ ಕಲೆಗಳನ್ನು ಪ್ರದರ್ಶಿಸುವುದನ್ನೆಲ್ಲ ಮಾಡುತ್ತಾರೆ. ಸ್ಕಾಟ್ ಲ್ಯಾಂಡಿನ ರಾಜಧಾನಿ ಎಡಿನ್ಬರೋ ನಗರವನ್ನು ಪ್ರವೇಶಿಸಿದರೆ ಯಾವುದೋ ಕೋಟೆ ಕೊತ್ತಲಗಳ, ಚಾರಿತ್ರಿಕ ನಗರವನ್ನು ಪ್ರವೇಶಿಸಿದ ಅನುಭವವಾಗುತ್ತದೆ. ಜೊತೆಗೆ ಇಡೀ ದಿನ ‘ಬ್ಯಾಗ್ ಪೈಪರ್’ ವಾದನದ ಇಂಪು ನಗರದ ಪ್ರಧಾನ ಸ್ಥಳಗಳಲ್ಲಿ ಕೇಳುತ್ತದೆ. ಸ್ಕಾಟ್ ಲ್ಯಾಂಡಿನಲ್ಲಿ ನಮ್ಮದೇ ಆದ ಭಾರತೀಯ ಸಮುದಾಯದ ಪರಿಚಯವಾಗಿತ್ತು. ಇದರಿಂದ ಮೊದಲ ಬಾರಿಗೆ ನಮಗೆ ಅಲ್ಪಮಟ್ಟಿಗೆ ಸಾಮಾಜಿಕವಾಗಿ ತೊಡಗಿಕೊಳ್ಳುವ ಅವಕಾಶಗಳು ತೆರೆದುಕೊಂಡವು. ಸ್ಕಾಟ್ ಲ್ಯಾಂಡ್ ನಲ್ಲಿ ಜನರು ಕಡಿಮೆಯಿರುವ ಕಾರಣ ಇಲ್ಲಿಗೆ ಬರುವ ದುಡಿಯುವ ಜನರನ್ನು ಸಮಾಜ ಮತ್ತು ಸರ್ಕಾರ ಇಲ್ಲಿಯೇ ಉಳಿಸಿಕೊಳ್ಳಲು ನೋಡುತ್ತದೆ. ಅಲ್ಪ ಸಂಖ್ಯಾತ ಭಾರತೀಯ ಸಮುದಾಯಗಳು ಒಟ್ಟುಗೂಡಿ ಹಬ್ಬ ಹರಿದಿನಗಳನ್ನು ಆಚರಿಸಲು ಹಣ ಸಹಾಯವನ್ನೂ ಅಲ್ಲಿನ ಸರ್ಕಾರ ನೀಡುತ್ತದೆ. ಇದನ್ನೆಲ್ಲ ನೋಡಿ ನಮ್ಮ ಮನಸ್ಸು ತುಂಬಿ ಬಂದದ್ದು ಸುಳ್ಳಲ್ಲ. ಸ್ಕಾಟ್ ಲ್ಯಾಂಡಿನ ಚಳಿ ನಮ್ಮ ಅರಿವಿಗೆ ಬಂದರೂ ಬದುಕು ಇಲ್ಲಿ ಇನ್ನೂ ಹೆಚ್ಚು ಸಹ್ಯವಾಗುತ್ತ ಹೋಗಿದೆ.

ಸ್ಕಾಟ್ ಲ್ಯಾಂಡಿನ ಮೊದಲ ದಿನಗಳಲ್ಲೇ ನಮ್ಮ ಮನೆಯ ಮೇಲಿದ್ದ ಅರವತ್ತರ ಒಂಟಿ ವೃದ್ದನೊಬ್ಬ ತಾನಾಗೇ ನಮ್ಮ ಮನೆಯ ಬಾಗಿಲು ತಟ್ಟಿ ಮಾತನಾಡಿಸಿದ. ಭಾರತದ ಅಡುಗೆಯನ್ನು ಮನಸಾ ಹೊಗಳಿ ತಾನು ಭಾರತೀಯ ಅಡುಗೆ ಮಾಡಲೆಂದು ಚಕ್ಕೆ, ಲವಂಗ, ದಾಲ್ಚಿನ್ನಿ, ಏಲಕ್ಕಿ ಎಲ್ಲವನ್ನು ಜಾಸ್ತಿ ಖರೀದಿ ಮಾಡಿ ಮುಗಿಸಲಾಗುತ್ತಿಲ್ಲವೆಂದು ಹೇಳಿ ಆ ಎಲ್ಲ ಭಾರತೀಯ ಮಸಾಲೆಗಳನ್ನು ತಂದು ನಮಗೆ ನೀಡಿದ.  ‘ಬ್ರಿಟಿಷರು ಭಾರತಕ್ಕೆ ಬಂದದ್ದೇ ನಮ್ಮ ಮಸಾಲೆಯ ಪದಾರ್ಥಗಳನ್ನೆಲ್ಲ ಲೂಟಿ ಮಾಡಲು’ ಎಂದೆಲ್ಲ ಓದಿದ್ದ ನನ್ನ ಬಾಲ್ಯದ ಪಠ್ಯ ನನಗೆ ತಟ್ಟನೆ ನೆನಪಿಗೆ ಬಂದಿತ್ತು. ಈಗ ಅವೇ ಮಸಾಲೆ ಪದಾರ್ಥಗಳು ನಮ್ಮ ಮತ್ತು ಆ ವೃದ್ಧನ ಸ್ನೇಹಕ್ಕೆ ನಾಂದಿ ಹಾಡಿದ್ದವು!

(ಮುಂದುವರೆಯುವುದು)