ಬಳ್ಳಾರಿಯ ಕಡಕ್ ಭಾಷೆಯಲ್ಲಿ ಮಾತನಾಡುವ ಸಾಹಿತಿ ಕುಂ.ವೀರಭದ್ರಪ್ಪ ಅವರು, ಪ್ರತಿಭಟನೆ, ಪ್ರಶ್ನಿಸುವ ಮನೋಭಾವವನ್ನು ಇಷ್ಟಪಡುವವರು. ಸ್ವಭಾವಕ್ಕೆ ತಕ್ಕಂತೆ ಬಂಡಾಯವನ್ನು ಮೆಚ್ಚಿಕೊಂಡು ಸಾಹಿತ್ಯ ಕೃಷಿ ಮಾಡಿದ ಅವರು ಬರೆದ ‘ಅರಮನೆ’ ಕಾದಂಬರಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕಾರ ಸಂದಿದೆ. ಲವಲವಿಕೆ, ಜೀವನಪ್ರೀತಿಯ ಜೊತೆಗೆ ಸಾಮಾಜಿಕ ಆಗುಹೋಗುಗಳ ಬಗ್ಗೆ ಸದಾ ಪ್ರತಿಕ್ರಿಯಿಸುತ್ತಿರುವವರು. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು.

ಕತೆಗಾರ ಹಾಗೂ ಕಾದಂಬರಿಕಾರ ಕುಂ.ವೀರಭದ್ರಪ್ಪ ಅವರು ಬಳ್ಳಾರಿ ಸೀಮೆಯವರು. ಓದು ಅವರ ಜೀವಾಳ. ತೆಲುಗು ಸಾಹಿತ್ಯದ ಕುರಿತು ಅರಿವಿರುವುದರಿಂದ ಕನ್ನಡ ಮತ್ತು ತೆಲುಗು  ಭಾಷೆಗಳ ಕುರಿತು ವಿಮರ್ಶಾತ್ಮಕವಾಗಿ ಮಾತನಾಡಬಲ್ಲವರು  ‘ಎಲುಗನೆಂಬ ಕೊರಚನೂ ಚವುಡನೆಂಬ ಹಂದಿಯೂ’, ’ಕತ್ತಲಿಗೆ ತ್ರಿಶೂಲ ಹಿಡಿದ ಕತೆ’ಗಳು ಸಾಹಿತ್ಯ ಲೋಕದ ಗಮನ ಸೆಳೆದವು. ಅವರು ಬರೆದ ಕತೆ, ಕಾದಂಬರಿಗಳು ಚಲನಚಿತ್ರಗಳಾಗಿ ಹೊಸ ಪ್ರೇಕ್ಷಕರನ್ನು ತಲುಪಿವೆ. ಇತ್ತೀಚೆಗೆ ಅವರಿಗೆ ಜೀವಬೆದರಿಕೆಯ ಪತ್ರ ಬಂದಿರುವ ಹಿನ್ನೆಲೆಯಲ್ಲಿ ಅವರೊಡನೆ ಒಂದಿಷ್ಟು ಹೊತ್ತು ಮಾತನಾಡಿದಾಗ ಕನ್ನಡ ಸಾಹಿತ್ಯ ಲೋಕದ ಕುರಿತು ಅನೇಕ ವಿಷಯಗಳನ್ನು ಹಂಚಿಕೊಂಡರು. ‘ನಾನೀಗ ನಮ್ಮ ಮನೆಗೆ ಸಿಸಿಟಿವಿ ಕ್ಯಾಮೆರಾ ಹಾಕಿಸುತ್ತಿದ್ದೇನೆ. 50 ಸಾವಿರ ರುಪಾಯಿ ಖರ್ಚು ಮಾಡಿ ಈ ವ್ಯವಸ್ಥೆ ಮಾಡಿಕೊಳ್ಳಬೇಕಾಯಿತು. ನಮ್ಮ ಮನೆಗೆ ಬರುವವರನ್ನು ಸಂಶಯದಿಂದ ನೋಡಬೇಕಾಗಿದೆ. ‘ಹುಶಾರು ಸಾರ್’ ಎಂದು ಸಲಹೆ ಮಾಡುವವರು ಹೆಚ್ಚಾಗಿದ್ದಾರೆ. ಕುಟುಂಬದ ಸದಸ್ಯರು ಆತಂಕಗೊಂಡಿದ್ದಾರೆ’ ಎನ್ನುತ್ತ ಅವರು ಮಾತು ಶುರು ಮಾಡಿದರು.

ಸಾಹಿತ್ಯದಿಂದ ಸಾಮಾಜಿಕ ಬದಲಾವಣೆ ಸಾಧ್ಯವೇ ಎಂಬ ಚರ್ಚೆ ಬಹುಕಾಲದಿಂದ ನಡೆದು ಬಂದಿದೆ. ಕಾಲಕಾಲಕ್ಕೆ ಅದರ ಉತ್ತರಗಳು ಬದಲಾಗುತ್ತಿದ್ದವು. ಈ ಸಂದರ್ಭದಲ್ಲಿ ಈ ಪ್ರಶ್ನೆಯನ್ನು ಹೇಗೆ ಸ್ವೀಕರಿಸಬಹುದು ?

ಯಾವಕಾಲಕ್ಕೂ ಸಾಹಿತ್ಯದಿಂದ ಮಹತ್ವದ ಬದಲಾವಣೆ ಏನೂ ಘಟಿಸಲಿಲ್ಲ. ಹನ್ನೆರಡನೇ ಶತಮಾನದಲ್ಲಿ ಶರಣ ಸಾಹಿತ್ಯವು ಸಾಮಾಜಿಕ ಚಳವಳಿಯ ರೂಪದಲ್ಲಿ ಹೊಮ್ಮಿದ್ದರಿಂದ ಬದಲಾವಣೆಗಳು ಸಾಧ್ಯವಾಯಿತು. ಮಧ್ಯಂತರ ಕಾಲದ ಹಳೆಗನ್ನಡ ಸಾಹಿತ್ಯ ಜನರಿಂದ ದೂರವೇ ಉಳಿಯಿತು. ಅಂಡಯ್ಯನ ಕಾಲದಲ್ಲಿ ಸಾಹಿತ್ಯ ಕ್ಷೇತ್ರವು ಪಂಡಿತರಿಗೆ ಸೀಮಿತವಾಗಿದ್ದುದನ್ನು ಅವನು ಹೇಳಿದ್ದ. ಆದರೆ ಜಾನಪದ ಸಾಹಿತ್ಯ ಜನರೊಡನೆ ಬೆರೆಯುತ್ತ, ಜನರ ಬವಣೆಯನ್ನೇ ಹೂರಣವಾಗಿಸಿಕೊಂಡಿತು. ಆಧುನಿಕ ಸಾಹಿತ್ಯ ಮತ್ತು ನವೋದಯ ಸಾಹಿತ್ಯವಂತೂ ವೈಟ್ ಕಾಲರ್ ಲಿಟರೇಚರ್ ಎಂಬ ಶೀರ್ಷಿಕೆ ಅಂಟಿಸಿಕೊಂಡುಬಿಟ್ಟಿತು. ಹಾಗೆ ನೋಡಿದರೆ, ಪ್ರಗತಿಪರರು ಚಳವಳಿಗೂ ಸಾಹಿತ್ಯಕ್ಕೂ ಸಂಬಂಧ ಕಲ್ಪಿಸಿದರು. ಆದರೆ ಮತ್ತೆ ನವ್ಯರು ವ್ಯಕ್ತಿಕೇಂದ್ರಿತವಾಗಿ ಜನರ ಬವಣೆಗಳಿಂದ ದೂರವೇ ಉಳಿದುಬಿಟ್ಟರು. ನವ್ಯೋತ್ತರ ಸಾಹಿತ್ಯವು ಸಮಾಜದ ಕಟ್ಟ ಕಡೆಯ ವರ್ಗಗಳಿಂದ ಆವಿರ್ಭವಿಸಿದ ಸಾಹಿತ್ಯ. ಅಲ್ಲೀವರೆಗೆ ಅಕಾಡೆಮಿಕ್ ಆಗಿ ಸೀಮಿತವಾಗಿದ್ದ ಸಾಹಿತ್ಯ ನವ್ಯೋತ್ತರ ಕಾಲದಲ್ಲಿ ನಾನ್ ಅಕಾಡೆಮಿಕ್ ಆಗಿ ವಿಸ್ತಾರವಾದುದರಿಂದ ಅಲ್ಲಿ ಜನರ ಪ್ರಾತಿನಿಧಿಕ ಧ್ವನಿಯನ್ನು ನಾವು ಸಮರ್ಥವಾಗಿ ಗುರುತಿಸಬಹುದು.
ರೈತ ಚಳವಳಿಗಳು, ಪವಾಡ ಪುರುಷರ ವಿರುದ್ಧ ನಡೆದ ಚಳವಳಿಗಳೇ ನಮ್ಮನ್ನು ರೂಪಿಸಿದವು. ಸಮಾಜದ ಜೊತೆಗೆ ನಿಕಟ ಸಂಬಂಧ ಇಟ್ಟುಕೊಂಡು, ಜಾತಿ ಮತ್ತು ವರ್ಗ ವ್ಯವಸ್ಥೆಯನ್ನು ವಿರೋಧಿಸಿ ಸಮಾಜದ ಪರವಾಗಿ ಬರೆಯಲು ಶುರು ಮಾಡಿದೆವು. ಆದರೆ ಇತ್ತೀಚೆಗೆ ಸಾಹಿತ್ಯವೆಂಬುದು ಸಮಾಜದಿಂದ ಬಹಳ ದೂರ ಸರಿದಿದೆ. ಕಂಬಾಲಪಲ್ಲಿ ಘಟನೆ ನಡೆದಾಗ, ದಲಿತರ ಮೇಲೆ ದೌರ್ಜನ್ಯ ನಡೆದಾಗ ಮಾತ್ರ ಪ್ರತಿಕ್ರಿಯಿಸುವುದನ್ನು ಕಾಣುತ್ತೇವಷ್ಟೇ. ವ್ಯವಸ್ಥೆಯ ವಿರುದ್ಧ ಸಿಡಿದೇಳುವ ಬರಹಗಳಿಲ್ಲ. ಪ್ರತಿಭಟನೆಗಾಗಿ ಆಡುವ ಮಾತುಗಳು ಪಟಾಕಿಗಳಾಗ್ತಿವೆ.

ಆದರೆ ಬೆದರಿಕೆಯ ಪತ್ರ ಬರೆಯುವಷ್ಟರಮಟ್ಟಿಗೆ, ಸಮಾಜದಲ್ಲಿ ಒಬ್ಬ ಸಾಹಿತಿಯದ್ದು ಮುಖ್ಯಧ್ವನಿ ಎಂದಾಯಿತು..

ಹಾಗೆನ್ನುವುದಕ್ಕಾಗುವುದಿಲ್ಲ. ನಮ್ಮ ಕತೆ ಕಾದಂಬರಿಗಳನ್ನು ಓದಿದವರು ಇಂತಹ ಪತ್ರ ಬರೆಯಲಿಲ್ಲ. ಒಂದು ಬೆದರಿಕೆ ಪತ್ರ ಬರೆಯುತ್ತಿದ್ದಾರೆ ಎಂದರೆ ಅವರು ಯಾವತ್ತೂ ಸಾಹಿತ್ಯ ಓದಿಲ್ಲ ಎಂದೇ ಅರ್ಥ. ಅವರೆಂದಾದರೂ ಸಾಹಿತ್ಯ ಓದಿದ್ರೆ ಬೆದರಿಸಬೇಕು ಎಂದು ಅವರಿಗೆ ಅನಿಸುತ್ತಲೇ ಇರಲಿಲ್ಲ. ಸಾಹಿತ್ಯವನ್ನು ಓದುವ ಮಾತು ಹಾಗಿರಲಿ, ಈಗ ಸಾಹಿತಿಗಳನ್ನು ಸಾಹಿತಿಗಳೆಂದು ಕರೆಯದೇ, ಬುದ್ಧಿಜೀವಿಗಳೆಂದು ಕರೆಯುತ್ತಿದ್ದಾರೆ. ಬುದ್ಧಿಜೀವಿ ಮತ್ತು ಎಡಪಂಥೀಯರು ಎಂಬುದು ಅವಮಾನಕರ ಪದವಾಗಿ, ಬೈಗುಳದ ಪದವಾಗಿ ಮಾರ್ಪಾಡು ಆಗಿರುವುದೇ ಬೇಸರದ ವಿಷಯ. ಉದಾಹರಣೆಗೆ ರಾಜೇಂದ್ರ ಚೆನ್ನಿಯವರಂತಹವರು ಬರೆದ ವಿಮರ್ಶೆಯ ಬರಹವನ್ನು ಯಾರೂ ಓದದೇ, ಅವರ ಭಾಷಣಗಳನ್ನಷ್ಟೇ ಕೇಳಿ, ಪ್ರತಿಕ್ರಿಯಿಸುತ್ತಾರೆ. ಇವನೊಬ್ಬ ಸಾಹಿತಿ ಇರಬಹುದೆಂದು ಸಂದೇಹಿಸುತ್ತಾರೆಯೇ ವಿನಃ, ಕೊಲ್ಲುವ ಮಾತಾಡುವ ಜನರು ಸಾಹಿತ್ಯವನ್ನು ಎಂದೂ ಸ್ಪರ್ಶಿಸಿರುವುದಿಲ್ಲ. ಮತ್ತೊಂದು ಉದಾಹರಣೆ ಕೊಡುವುದಾದರೆ, ಭಗವದ್ಗೀತೆಯ ಪರವಾಗಿ ಇರುವವರು ಭಗವದ್ಗೀತೆಯನ್ನು ಓದಿರುವುದಿಲ್ಲ. ಶ್ರೀ ರಾಮ ಸೇನೆಯನ್ನು ಕಟ್ಟಿಕೊಂಡಿರುವ ಪ್ರಮೋದ್ ಮುತಾಲಿಕ್ ಅವರು ಎಂದಾದರೂ ರಾಮಾಯಣವನ್ನು ಓದಿದ್ದಾರೆ ಎನ್ನುವುದಕ್ಕಾಗುತ್ತದೆಯೇ. ಹಾಗಾಗಿ, ಸಾಕಷ್ಟು ಓದುವಿಕೆ ಇಲ್ಲದೇ ಇರುವವರು ವಹಿಸುವ ಇಂತಹ ಮುಖಂಡತ್ವ ಅಪಾಯಕಾರಿ.

ತೆಲುಗಿನಲ್ಲಿಯೂ ಚಳವಳಿಗಳು ಪ್ರಬಲವಾಗಿದ್ದವು. ನೀವು ಆ ಭಾಷೆಯಲ್ಲಿಯೂ ಹೆಚ್ಚು ಪ್ರಭುತ್ವ ಹೊಂದಿದ್ದೀರಿ. ಅಲ್ಲಿನ ಪರಿಸ್ಥಿತಿ ಬಗ್ಗೆ ಹೇಳಬಹುದಾ ?

ಬೇರೆ ರಾಜ್ಯಗಳಿಗೆ ಹೋಲಿಸಿದರೆ ಅಪಾಯಕಾರೀ ಸಾಮಾಜಿಕ ಪರಿಸ್ಥಿತಿ ಇರುವುದು ಕರ್ನಾಟಕದಲ್ಲಿಯೇ. ಆಂಧ್ರಪ್ರದೇಶದಲ್ಲಿಲ್ಲ. ಅಲ್ಲಿ ಪ್ರಖರವಾಗಿರುವ ಕ್ರಾಂತಿಕಾರಕ ಸಾಹಿತ್ಯ ಸೃಷ್ಟಿಯಾಯಿತು. ಕೆಲವೊಮ್ಮೆ ಅವು ಜಾಳು ಜಾಳಾಗಿವೆ ಅನಿಸಿದರೂ, ಅವುಗಳ ಕೇಂದ್ರ ಜನರಾಗಿದ್ದರು. ಜನರಬವಣೆಗಳ ಪರವಾಗಿ ಮಾತನಾಡಿತು. ಅಲ್ಲಿ ಬಂಡಾಯ ಬರಹಗಾರರು ಒಟ್ಟಾಗಿದ್ದರು. ಬರಹಗಾರರೆಲ್ಲ ಸೇರಿ ಕಟ್ಟಿಕೊಂಡ ‘ವಿರಸಂ’ ಎಂಬ ಸಂಘಟನೆ ಸಕ್ರಿಯವಾಗಿ ಜಮೀನ್ದಾರಿ ವ್ಯವಸ್ಥೆ, ಆಡಳಿತಶಾಹಿ ವ್ಯವಸ್ಥೆ ವಿರುದ್ಧ ನಿಂತು, ಅಂತಹುದೇ ಸಾಹಿತ್ಯ ಸೃಷ್ಟಿಯಾಯಿತು. ಪ್ರಭುತ್ವದಿಂದ ಆಗುತ್ತಿರುವ ತೊಂದರೆಗಳ ಕುರಿತು, ಬೀದಿ ಬದಿಯಲ್ಲಿ ಹಾಡುಗಳನ್ನು ಹಾಡುತ್ತ, ವ್ಯವಸ್ಥೆಯ ಹುಳುಕುಗಳನ್ನು ಎತ್ತಿಹಿಡಿಯುತ್ತಿದ್ದರು.

ಹಾಗಂತ ಅಲ್ಲಿ ಜನಪರ ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ನಡೆದಿಲ್ಲ ಎನ್ನುವಂತಿಲ್ಲ. ಪದಗಳನ್ನು ಹಾಡಿ, ತೆಲಂಗಾಣ ಉದಯಕ್ಕೆ ಕಾರಣಳಾದ ಹೋರಾಟಗಾರ್ತಿ ಬೆಲ್ಲಿ ಲಲಿತಾ ಕೊಲೆಯಾದದ್ದನ್ನು ಕಂಡಿದ್ದೇವೆ. ಆದರೆ ಅಲ್ಲಿ ಬಂಡಾಯ ಸಾಹಿತಿಗಳ ನಡುವೆ ಒಗ್ಗಟ್ಟಿತ್ತು. ಆದ್ದರಿಂದ ‘ಜಗದ್ಗುರು ವಸ್ತುನ್ನಾರು ಜಾಗೃತಾ’ ಎಂದು ಅವರು ಬರೆಯುವುದು ಸಾಧ್ಯವಾಯಿತು. ಇಲ್ಲಿ ಈಗ ಹಾಗೆ ಹೇಳುವುದು ಸಾಧ್ಯವೇ ? ಧ್ವನಿಯನ್ನು ಹತ್ತಿಕ್ಕುವ ಪ್ರಯತ್ನಗಳು ಸದಾ ನಡೆದಿವೆ. ಆದರೆ ಹತ್ತಿಕ್ಕುವ ಪ್ರಯತ್ನವನ್ನು ಎಷ್ಟರ ಮಟ್ಟಿಗೆ ಮೆಟ್ಟಿ ನಿಲ್ಲುತ್ತೇವೆ ಎನ್ನುವುದೇ ಮುಖ್ಯ.

ಕರ್ನಾಟಕದಲ್ಲಿ ಸಾಹಿತಿಗಳ ನಡುವೆ ಸಂಘಟನಾತ್ಮಕ ಒಗ್ಗಟ್ಟಿಲ್ಲವೆಂದೇ ?

ಹೌದು. ತೆಲುಗಿನ ಉದಾಹರಣೆಯನ್ನೇ ಮುಂದುವರೆಸುವುದಾರೆ, ಆಂಧ್ರಪ್ರದೇಶದಲ್ಲಿ ಪ್ರಶಸ್ತಿಗಳನ್ನು ವಿರೋಧಿಸಿದ ದೊಡ್ಡ ಬಳಗವೇ ಅಲ್ಲಿದೆ. ಆದರೆ ಕರ್ನಾಟಕದಲ್ಲಿ ಪ್ರಶಸ್ತಿಗಳೆಂದರೆ ಸಾಹಿತಿಗಳು ಅವುಗಳಿಗಾಗಿ ಎಷ್ಟೊಂದು ಅಸೆಪಡುತ್ತಾರೆ. ಒಂದು ಬಾರಿ ಸರ್ಕಾರದ ಆಸೆ ಆಮಿಷಗಳಿಗೆ ಬಲಿಯಾದರೆ ಲೇಖಕರಾದ ನಾವು, ನಮ್ಮ ಮೂಲ ಸತ್ವವನ್ನೇ ಕಳೆದುಕೊಂಡು ಬಿಡುತ್ತೇವೆ. ಇತ್ತೀಚೆಗೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟವಾಯಿತು. ಆ ಪಟ್ಟಿಯಲ್ಲಿ ಐದಾರು ಜನರು ಪ್ರಗತಿಪರರ ಹೆಸರಿದೆ. ಅವರೆಲ್ಲ ತಲೆಬಾಗಿ ಶಾಲು ಹಾಕಿಸಿಕೊಂಡು ಪ್ರಶಸ್ತಿ ತೆಗೆದುಕೊಳ್ಳುವ ಉತ್ಸಾಹದಲ್ಲಿದ್ದಾರೆ.

ಕರ್ನಾಟಕದಲ್ಲಿ ಸರ್ಕಾರದಿಂದ ಲೇಖಕರು ಮತ್ತು ಸಾಹಿತಿಗಳಿಗೆ ಸಿಗುವಷ್ಟು ಸೌಲಭ್ಯಗಳು, ಪ್ರಶಸ್ತಿಗಳು, ಪುರಸ್ಕಾರಗಳು ಬೇರೆ ರಾಜ್ಯದಲ್ಲಿ ಸಿಗುವುದಿಲ್ಲ. ಇಲ್ಲಿರುವ ಪಂಪ ಪ್ರಶಸ್ತಿ, ಕನಕ ಪ್ರಶಸ್ತಿ, ಮತ್ತೊಂದು ಮಗದೊಂದು ಎಲ್ಲವೂ ಭಾರೀ ಮೊತ್ತದ್ದಾಗಿವೆ. ವಿಪರ್ಯಾಸವೆಂದರೆ ಲಕ್ಷಾಂತರ ರೂಪಾಯಿ ಪೆನ್ಶನ್ ಬರುವವರೇ ಇಂತಹ ಪ್ರಶಸ್ತಿ ಪುರಸ್ಕಾರಗಳಿಗೆ ತಲೆಬಾಗುತ್ತಾರಲ್ಲ. ಪ್ರತಿಭಟನಾತ್ಮಕವಾಗಿ ಪ್ರಶಸ್ತಿಗಳನ್ನು ತಗೆದುಕೊಳ್ಳುವುದಿಲ್ಲ ಎನ್ನುವವರಿಲ್ಲ. ಆದ್ದರಿಂದ ಆಯಾ ಸಂದರ್ಭದಲ್ಲಿ ಪ್ರತಿಭಟನೆಗಳ ಅಗತ್ಯವಿದ್ದಾಗ, ನಾವು ಪ್ರತಿಭಟನೆಗಳನ್ನು ದಾಖಲಿಸುವ ಸ್ವಾತಂತ್ರ್ಯವನ್ನು ಉಳಿಸಿಕೊಳ್ಳಬೇಕು. ನಾನು ಆಳ್ವಾಸ್ ನುಡಿಸಿರಿಯಲ್ಲಿ ಉಪನ್ಯಾಸ ಮಾಡುವಾಗ, ತೋಳಿಗೆ ಕಪ್ಪು ಪಟ್ಟಿ ಕಟ್ಟಿ, ‘ಮೋಹನ್ ಆಳ್ವಾ ಅವರೇ, ನೀವು ತಪ್ಪು ಮಾಡುತ್ತಿದ್ದೀರಿ’ ಎಂದು ಹೇಳಿ ನನ್ನ ಪ್ರತಿಭಟನೆಯನ್ನು ದಾಖಲಿಸಿಯೇ ಮಾತುಗಳನ್ನು ಮುಂದುವರೆಸಿದ್ದೆ.
ಇದನ್ನೆಲ್ಲ ಬದಿಗಿಟ್ಟು, ಟಿಎ ಡಿಎ ತೆಗೆದುಕೊಂಡು ಓಡಾಡುವ ‘ಟಾಡಾ’ ಸಾಹಿತಿಯಾಗಿ, ಬರವಣಿಗೆ ಮಾಡುವುದರಲ್ಲಿ ಏನರ್ಥವಿದೆ. ನಮ್ಮಲ್ಲಿ ಸಾಹಿತ್ಯಿಕವಾಗಿ ಸಂಘಟನೆಯಿಲ್ಲ ಎಂಬುದು ನೂರಕ್ಕೆ ನೂರರಷ್ಟು ನಿಜ. ಸರ್ಕಾರವು ಗ್ರಂಥಾಲಯಕ್ಕೆಂದೇ ಪ್ರಕಾಶಕರಿಂದ ಪುಸ್ತಕಗಳ 300 ಪ್ರತಿ ತಗೊಳತ್ತೆ. ಬೇರೆ ರಾಜ್ಯಗಳಲ್ಲಿ ಈ ರೀತಿ ಸರ್ಕಾರವು ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ತಗೆದುಕೊಳ್ಳುವುದಿಲ್ಲ. ಒಟ್ಟಿನಲ್ಲಿ ಸರ್ಕಾರದಿಂದ ನಿರಂತರ ಲಾಭ ಬರುತ್ತಿರುವುದನ್ನು ನಿರೀಕ್ಷಿಸುವ ಈ ಸಂದರ್ಭದಲ್ಲಿ ಸಾಹಿತ್ಯ ಹೇಗೆ ಜನರ ಪರವಾಗಿ, ಹೋರಾಟದ ಆತ್ಮವನ್ನೊಳಗೊಂಡು ಬೆಳೆಯುತ್ತದೆ.

ಪ್ರತಿಭಟನಾತ್ಮಕ ಸಾಹಿತ್ಯ ಸೃಷ್ಟಿಯಾಗುತ್ತಿಲ್ಲ ಎನಿಸುತ್ತಿದೆಯೇ..

ಹೌದು. ಅತ್ಯುತ್ತಮ ಸಾಹಿತಿಗಳು 70, 80ರ ವೃದ್ಧರು ಮೈ ಚಳಿಬಿಟ್ಟು ವಾಯುವಿಹಾರ ಮಾಡುವ ಪಾರ್ಕ್ಗಳಂತಹ ಬಹಳ ಸುಂದರವಾದ ಬರಹ ಬರೆಯುತ್ತಿದ್ದಾರೆ. ಅವರದು ಬಹಳ ಪರಿಶುದ್ಧವಾದ ಸಾಹಿತ್ಯ. ಆದರೆ ನಮಗೆ ನಿಜಕ್ಕೂ ಬೇಕಾಗಿರುವುದು ದಟ್ಟವಾದ ಕಾಡುಗಳು, ಕುರುಚಲು ಗಿಡಗಳ ಸಾಹಿತ್ಯವೇ ಹೊರತು, ಪಾರ್ಕ್ಗಳಂತಹ ಒಪ್ಪ ಓರಣದ ಸಾಹಿತ್ಯ ಅಲ್ಲ. ಉಪದ್ರವಿ ಸಾಹಿತಿಗಳು ಬೇಕೇ ಹೊರತು ನಿರುಪದ್ರವಿ ಸಾಹಿತಿಗಳು ಬೇಡ. ವ್ಯವಸ್ಥೆಯನ್ನು ಪ್ರಶ್ನಿಸುವವರು ಬೇಕು. ‘ಅರಸು ರಾಕ್ಷಸ, ಮಂತ್ರಿಯೆಂಬುವ ಮೊರೆವ ಹುಲಿ, ಪರಿವಾರ ಹದ್ದಿನ ನೆರವಿ, ಬಡವರ ಬಿನ್ನಪವ ನಿನ್ನಾರು ಕೇಳುವರು, ಉರಿ ಉರಿವುತಿದೆ ದೇಶ ನಾವಿನ್ನಿರಲು ಬಾರದೆನುತ್ತ ಜನ ಬೇಸರದ ಬೇಗೆಯಲಿರದಲೇ ಭೂಪಾಲ ಕೇಳೆಂದ’ ಎಂದು ಕುಮಾರವ್ಯಾಸ ಬರೆದ. ಪಂಪ, ರಾಘವಾಂಕರೂ, ‘ಜನರ ಪರವಾಗಿ ಬರವಣಿಗೆಯಿರಬೇಕು’ ಎಂದಿದ್ದರು.ಕುವೆಂಪು ಇನ್ನಷ್ಟು ಬಿಡುಬೀಸಾಗಿ ವೈದಿಕ ವ್ಯವಸ್ಥೆಯ ವಿರುದ್ಧ ಬರೆದರು ಎಂಬುದನ್ನು ನಾವು ಮರೆಯಬಾರದು.

ಈ ಪಂಥಗಳ ಗಲಾಟೆಯ ನಡುವೆ ಹೊಸತಲೆಮಾರಿನ ಬರಹಗಾರರು ಎದುರಿಸುತ್ತಿರುವ ಗೊಂದಲವನ್ನೂ ಗಮನಿಸಬೇಕಲ್ಲವೇ?

ಗೊಂದಲ ಮಾಡಿಕೊಳ್ಳುವ ಅವಶ್ಯಕತೆಯಿಲ್ಲ. ‘ಬೇಲಿಯಲ್ಲಿರುವ ಮುಳ್ಳುಗಳ ಮೇಲಿರುವ ಸಿಟ್ಟಿಗೆ ಬೇಲಿಗೆ ಬೆಂಕಿ ಹೆಚ್ಚಬೇಡ’ ಎಂದು ಗಾಲಿಬ್ ಹೇಳುತ್ತಾನೆ. ಅದರಲ್ಲೊಂದು ಹೂವಿದ್ದರೂ ಅದು ಮುಖ್ಯ ಅಲ್ಲವೇ. ಲೇಖಕ ಮತ್ತು ಮನುಷ್ಯನಲ್ಲಿರುವ ‘ಸದ್ಗುಣ’ ಬಹಳ ಮುಖ್ಯವಾದುದು. ಮಾನವೀಯತೆ ಇಲ್ಲದೆ ಏನನ್ನೂ ಬರೆಯುವುದು ಸಾಧ್ಯವಿಲ್ಲ. ಹಾಗಾಗಿ ಹೊಸತಲೆಮಾರಿನವರಷ್ಟೇ ಅಲ್ಲ, ನಾವ್ಯಾರೂ, ಯಾರನ್ನೂ ಸಾರಾಸಗಟಾಗಿ ತಿರಸ್ಕರಿಸುವುದು ಸರಿಯಲ್ಲ ಲೇಖಕರು ಎಲ್ಲಾ ಮೂಲದಿಂದ ಕಲಿಯುತ್ತಿರಬೇಕು ಎಂಬುದು ನನಗೂ ಅನ್ವಯವಾಗುತ್ತದೆ ತಾನೇ. ಯಾವುದು ಸ್ವೀಕಾರಾರ್ಹ,ಯಾವುದು ಸ್ವೀಕಾರಾರ್ಹ ಅಲ್ಲ ಎಂಬುದು, ನಮ್ಮ ನೈತಿಕ ಪ್ರಜ್ಞೆಗೆ ಸಂಬಂಧಿಸಿದ್ದು. ಓದಿನ ಬಳಿಕ ಅಯ್ಕೆಗಳು ನಮ್ಮದಾಗಿರಬೇಕು. . ಅದ್ದರಿಂದಲೇ ಭೈರಪ್ಪನವರು ಏನು ಬರೆದಿದ್ದಾರೆ ಎಂದು ಓದುತ್ತೇನೆ. ನಾನು ವಿಶ್ವೇಶ್ವರ ಭಟ್ಟರ ಬರಹಗಳ ಅಭಿಮಾನಿ. ಸಾರಾಸಗಟಾಗಿ ಬರಹಗಳನ್ನು ತೆಗೆದು ಹಾಕದೇ, ಅವರನ್ನು ನಾನು ಓದುತ್ತೇನೆ. ಓದುವಿಕೆಯಲ್ಲಿ ಮಡಿವಂತಿಕೆ ಇರಬಾರದು.
ಈ ಗಲಾಟೆ ಗೊಂದಲಗಳ ನಡುವೆಯೇ ನಾವು ಬದುಕುತ್ತಿದ್ದೇವೆ. ಸಿನಿಮಾ ನೋಡುತ್ತಿದ್ದೇವೆ. ಬದುಕನ್ನು ಅದಮ್ಯವಾಗಿ ಪ್ರೀತಿಸುತ್ತಾ ಬಾಳುತ್ತಿದ್ದೇವೆ. ಕ್ರಿಕೆಟ್ ನೋಡ್ತೇವೆ. ಸಂಗೀತ ಕೇಳ್ತೇವೆ. ಹೋರಾಟವನ್ನೂ ಮಾಡುತ್ತೇವೆ. ಈ ಎಲ್ಲ ಆಸಕ್ತಿಯನ್ನು ಅರಳಿಸಿದ್ದು ಓದು. ಓದು ನಮ್ಮ ಬದುಕಿನ ಅಂತರ್ಜಲವಿದ್ದಂತೆ. ಅದು ನಮ್ಮನ್ನು ಕೈ ಹಿಡಿದು ಮುನ್ನಡೆಸುತ್ತದೆ.ಓದದೇ ಇದ್ದರೆ ನಮ್ಮ ಅಸ್ತಿತ್ವವೇ ಇರಲ್ಲ.

ಪ್ರಸ್ತುತ ನೀವು ಹೊಸದೇನು ಬರೆಯುತ್ತಿದ್ದೀರಿ ?

ವಿಶ್ವಸುಂದರಿ ಅಂತ ಒಂದು ಹೊಸ ಕಿರು ಕಾದಂಬರಿಯನ್ನು ಬರೆದಿದ್ದೇನೆ. ಪ್ರಕಟಣೆಗೆ ಸಿದ್ಧವಾಗಿದೆ. ಎನ್ಕೌಂಟರ್ ಎಂಬ ಪುಸ್ತಕ ಬರೆದಾಗ, ಅದಕ್ಕಾಗಿ ಹಿನ್ನೆಲೆಯಲ್ಲಿ ತುಂಬಾ ಕೆಲಸ ಮಾಡಿದ್ದೆ. ನಕ್ಸಲ್ ಜೀವನ ಶೈಲಿಯನ್ನು ಅರಿಯಲು, ಆಂಧ್ರದಲ್ಲಿ 15 ಸಾವಿರ ಕಿಲೊಮೀಟರ್ ಪ್ರವಾಸ ಮಾಡಿದ್ದೇನೆ. ನಕ್ಸಲೈಟ್ಗಳನ್ನು ಭೇಟಿ ಮಾಡಿ ಮಾತನಾಡಿದ್ದೇನೆ. 30 ವರ್ಷಗಳ ಹಿಂದೆ ನಡೆದ ಎನ್ಕೌಂಟರ್ ಬಗ್ಗೆ ಕಾದಂಬರಿ ಬರೆದೆ. ಒಂದುರೀತಿಯಲ್ಲಿ ಅದನ್ನು ಡಾಕ್ಯುಮೆಂಟೇಶನ್ ಎನ್ನಬಹುದು. ನಲ್ಲಮಲ ಅರಣ್ಯದಲ್ಲಿ ನಕ್ಸಲ್ರನ್ನು ಭೇಟಿಯಾಗಿ ಮಾತನಾಡಿಸಿದ್ದೇನೆ. ಕಾದಂಬರಿ ಬರೆಯಲು ಇಷ್ಟೊಂದು ಸಕ್ರಿಯವಾಗಿದ್ದಾಗ, ಜೀವನವೂ ಲವಲವಿಕೆಯಿಂದ ಕೂಡಿರುತ್ತದೆ. ನಮ್ಮ ಬರಹಕ್ಕೆ ಪೂರಕವಾಗಿ ಇಮ್ಯಾಜಿನೇಷನ್, ಕಲ್ಟಿವೇಷನ್ ಮತ್ತು ಅಬ್ಸರ್ವೇಷನ್ ಇಲ್ಲದೇ ಇದ್ರೆ ಬರಹಗಳು ಖಾಲಿಯಾಗಿಬಿಡುತ್ತವೆ. ಹೀಗೆ ಬರೆಯುತ್ತಿರುವುದರಿಂದಲೇ 70 ವರ್ಷವಾದರೂ ಯುವಕರಷ್ಟೇ ಲವಲವಿಕೆಯಿಂದ ಇದ್ದೇನೆ ನಾನು.

ಯುವಜನರು ಖುಷಿಯಾಗಿಲ್ಲ, ಲವಲವಿಕೆಯಿಂದ  ಇಲ್ಲ ಎನ್ನುತ್ತೀರ ?

ಈಗಿನ ಮಕ್ಕಳೋ ಸಂತೋಷವಾಗಿಯೇ ಇರಲ್ಲ ಎಂದು ಬೇಸರವಾಗುತ್ತದೆ. ಅವರಿಗೆ ನಾವು ಕೊಡುವ ಶಿಕ್ಷಣ, ಅವರು ಕಟ್ಟಿಕೊಳ್ಳುವ ಜೀವನ ಶೈಲಿಯೇ ಹಾಗಿದೆ. ಮೊಬೈಲ್ನಲ್ಲಿ ಎಷ್ಟೊಂದು ಮುಳುಗಿಹೋಗುತ್ತಾರೆ ಎಂದರೆ ಅವರು ಮುಕ್ತವಾಗಿ ನಗೋದೂ ಇಲ್ಲ, ತೀವ್ರವಾಗಿ ಅಳೋದೂ ಇಲ್ಲ. ಹಿರಿಯರು ಸತ್ತರೆ ಕರ್ಚೀಪ್ ಇಟ್ಟುಕೊಂಡು ಮೌನವಾಗಿದ್ದು ಹೊರಟು ಹೋಗ್ತಾರೆ. ಅವರ ಭಾವನೆಗಳು ಸ್ಫೋಟವಾಗುವುದೇ ಇಲ್ಲ. ಅದರ ಮೌಲ್ಯವನ್ನೂ ಅರಿಯುವುದು ಅವರಿಂದ ಸಾಧ್ಯವಾಗುತ್ತಿಲ್ಲವಲ್ಲ ಎಂದು ಬೇಸರವಾಗುತ್ತದೆ. ದಾಂಪತ್ಯದಲ್ಲಿಯೂ ಖುಷಿಯನ್ನು ಕಾಣುತ್ತಿಲ್ಲ. ಆದ್ದರಿಂದ ಬರೀ ವೀಕೆಂಡ್ ಪ್ರವಾಸ ಮಾಡುವುದನ್ನು ಇಷ್ಟಪಡುತ್ತಾರೆ. ಅವರನ್ನು ತಿದ್ದುವುದಕ್ಕೆ ಸಮಾಜವೂ ಅವಕಾಶಗಳನ್ನು ಸೃಷ್ಟಿ ಮಾಡುತ್ತಿಲ್ಲ. ಸರಿಪಡಿಸಬಹುದಾದ ಅನೇಕ ನ್ಯೂನತೆಗಳ ಬಗ್ಗೆ ಯಾರೂ ತಲೆಕೆಡಿಸಿಕೊಳ್ಳುತ್ತಿಲ್ಲವಲ್ಲ…


ಹಿರಿಯರು ಮೌನವಾಗಿದ್ದಾರೆ. ಅವರಿಗೆ ಭ್ರಮನಿರಸನವಾಗಿದೆಯೇನೊ.ಆದರೂ ಕೆಲವರಷ್ಟೇ ಸಕ್ರಿಯವಾಗಿ, ಪ್ರತಿಕ್ರಿಯಿಸುತ್ತ ಚುರುಕಾಗಿರುತ್ತಾರೆ. ಸೈದ್ಧಾಂತಿಕವಾಗಿ, ಸಾಹಿತ್ಯಿಕವಾಗಿ ಮಾತನಾಡಿದರೆ ಯಾರಿಗೂ ಅರ್ಥವಾಗುವುದಿಲ್ಲ. ನಾವು ಕಪಾಳಕ್ಕೆಹೊಡೆದ ಹಾಗೆ ಮಾತನಾಡುವುದರಿಂದ, ಸ್ವಲ್ಪ ಪ್ರತಿಕ್ರಿಯಿಸುತ್ತಾರೆ. ಆದರೂ ಯುವಜನರು ಬದುಕನ್ನು ಆಸ್ವಾದಿಸಬೇಕು. ಖುಷಿಪಡುವುದನ್ನು ಕಲಿಯಬೇಕು ಎಂದು ಅನೇಕ ಸಾರಿ ಅಂದುಕೊಳ್ಳುತ್ತೇನೆ.