ಕರ್ನಾಟಕದ ತುಂಬ ನಡೆಯುತ್ತಿರುವ ಅಂಧಾದುಂಧಿ ಮೈನಿಂಗ್ ಮತ್ತು ಅದಿರು ಮಾರಾಟದ ವಿರುದ್ಧ, ಹೋದವರ್ಷದ ಒಂದು ದಿನ, ಕರ್ನಾಟಕದ ಪತ್ರಕರ್ತರೂ ಲೇಖಕರೂ ಚಿಂತಕರೂ ರೈತನಾಯಕರೂ ದಲಿತ ಚಳುವಳಿಗಾರರೂ ಎಲ್ಲ ಸೇರಿ ಒಂದು ಅಧ್ಯಯನ ಪ್ರವಾಸವನ್ನು ಕೈಗೊಂಡರು. ಈ ತಂಡವು ಚಿಕ್ಕನಾಯಕನಹಳ್ಳಿ ಇತ್ಯಾದಿ ಮುಗಿಸಿ ಹೊಸಪೇಟೆಗೆ ಬಂದು ವಸತಿ ಮಾಡಿತು. ಕೊನೆಯ ದಿನ ಬಳ್ಳಾರಿ ಜಿಲ್ಲೆಯ ಸೊಂಡೂರು ಭಾಗದಲ್ಲಿ ಪರಿಶೀಲನೆ ನಡೆಸುವುದೆಂದೂ ಮತ್ತು ಸಂಜೆಗೆ ಗಣಿಧಣಿಗಳಿರುವ ಬಳ್ಳಾರಿಯಲ್ಲಿ ಒಂದು ಪ್ರತಿಭಟನಾ ರ್ಯಾಲಿ ಮತ್ತು ಸಾರ್ವಜನಿಕ ಸಭೆ ಹಮ್ಮಿಕೊಳ್ಳುವುದೆಂದೂ ಏರ್ಪಾಡಾಗಿತ್ತು. ನಾವು ಕೆಲವು ಗೆಳೆಯರು ಬೆಂಗಳೂರಿನಿಂದ ಬಂದಿದ್ದ ಈ ತಂಡವನ್ನು ಹೊಸಪೇಟೆಯಲ್ಲಿ ಕೂಡಿಕೊಂಡು, ಸೊಂಡೂರಿಗೆ ಹೊರಟೆವು. ಸೊಂಡೂರು, ಗಣಿಗಾರಿಕೆಯ ಆಳವಾದ ಗಾಯಗಳಿರುವ ಪ್ರದೇಶವಾಗಿದೆ.

ಹೊರಡುವ ಮುನ್ನ ಪರಸ್ಪರರು ಪರಿಚಯ ಮಾಡಿಕೊಳ್ಳುವಾಗ, ನನ್ನ ಹೆಸರನ್ನು ಕೇಳಿದ ಕೂಡಲೆ ಸತ್ಯವ್ರತ ಅವರು, ನನ್ನ ಸಮೀಪಕ್ಕೆ ಬಂದು, ‘ನೀವು ತರೀಕೆರೆಯವರಲ್ಲವೇ, ಕ್ಷಮಿಸಬೇಕು, ನಿಮ್ಮಿಂದ ನಾನು ಚಂದಾ ಪಡೆದೆ. ಆದರೆ ಪತ್ರಿಕೆ ಕಳಿಸಲಿಲ್ಲ. ಅದನ್ನು ನಿಯಮಿತವಾಗಿ ತರಲು ನಮ್ಮಿಂದ ಆಗುತ್ತಿಲ್ಲ’ ಎಂದು ವಿಷಾದ ಸೂಚಿಸಿದರು. ನನಗೆ ತಟ್ಟನೆ ಏನೂ ನೆನಪಾಗಲಿಲ್ಲ. ‘ಸಾರ್, ನಿಮ್ಮದು ಯಾವ ಪತ್ರಿಕೆ?’ ಎಂದು ಕೇಳಿದೆ. ‘ಒಲವು’ ಎಂದರು. ನನಗೆ ನಿಧಾನವಾಗಿ ಹೊಳೆಯತೊಡಗಿತು. ಸತ್ಯವ್ರತ ಅವರು ಅಂತರ್‌ಜಾತಿ-ಅಂತರಧರ್ಮೀಯ ವಿವಾಹಿತರ ಸಂಘಟನೆಯಾದ ‘ಮಾನವಮಂಟಪ’ಕ್ಕೆ ಅಧ್ಯಕ್ಷರು. ವಿನೋಬಾಭಾವೆಯವರ ಭೂದಾನ ಚಳುವಳಿಯ ಕರ್ನಾಟಕದ ಹೀರೋ ಆಗಿದ್ದ ಅವರು, ಭಾವೆಯವರ ಜತೆ ಬಂದಿದ್ದ ಗುಜರಾತಿನ ಲಕ್ಷ್ಮಿಯವರನ್ನು ಲಗ್ನವಾಗಿದ್ದರು. ಅವರು ನಟರಾಜ ಹುಳಿಯಾರ್ ಜತೆಗೂಡಿ, ಜಾತಿಧರ್ಮಗಳ ಗಡಿದಾಟಿ ಒಲವಿಗಾಗಿ ಒಂದಾದವರ ಅನುಭವ, ಕಷ್ಟಸುಖ ಹಾಗೂ ವಿಚಾರಗಳನ್ನು ಹಂಚಿಕೊಳ್ಳುವ ‘ಒಲವು’ ಎಂಬ ಪತ್ರಿಕೆಯನ್ನು ಹೊರಡಿಸುತ್ತಿದ್ದರು. ಅದು ಯಾವಾಗಲೋ ಒಮ್ಮೆ ಕಾಣಿಸಿಕೊಂಡು, ಅಂತರ್‌ಜಾತಿ ವಿವಾಹಿತರಂತೆ ಅದೃಶ್ಯವಾಗುವ ಹವ್ಯಾಸ ಇರಿಸಿಕೊಂಡಿತ್ತು. ಇದರಿಂದ ನನಗೆ ಚಂದಾ ಕೊಟ್ಟಿದ್ದೇ ಮರೆತುಹೋಗಿತ್ತು. ಆದರೆ ೪೦ ರೂ. ಚಂದಾ ಸ್ವೀಕರಿಸಿದ್ದ ಸತ್ಯವ್ರತ ಮಾತ್ರ, ಸಂಪಾದಕನಾಗಿ ಸತ್ಯವಾಕ್ಯದ ಪರಿಪಾಲನೆ ಮಾಡಲಿಲ್ಲವಲ್ಲ ಎಂಬಂತೆ ಪರಿತಪಿಸಿದರು. ಇಷ್ಟು ಸಣ್ಣವಿಷಯವನ್ನು ಈ ಹಿರಿಯರು ನೆನಪಿನಲ್ಲಿಟ್ಟುಕೊಂಡು, ತಪ್ಪಿತಸ್ಥ ದನಿಯಲ್ಲಿ ನಿವೇದಿಸಿಕೊಳ್ಳುವುದು ಸೋಜಿಗ ಹುಟ್ಟಿಸಿತು. ಇದು ಈ ತಲೆಮಾರಿನ ಬಹುತೇಕ ಗಾಂಧಿವಾದಿಗಳಲ್ಲಿದ್ದ ಸಣ್ಣಸಂಗತಿಗೂ ಗಮನಕೊಡುವ ಮತ್ತು ಆಡಿದ ಮಾತಿಗೆ ನಡೆದುಕೊಳ್ಳುವ ಸತ್ಯನಿಷ್ಠುರತೆಯ ಸಂಕೇತದಂತೆ ಇತ್ತು.

‘ಸತ್ಯವ್ರತ’-ಹೆಸರಿನಲ್ಲಿ ಒಂದು ಬಗೆಯ ಆಡಂಬರವೂ ಇದೆ. ಆತ್ಮವಿಶ್ವಾಸವೂ ಇದೆ. ಇಂತಹ ಹೆಸರನ್ನು ಇಟ್ಟುಕೊಳ್ಳಲು ಧೈರ್ಯಬೇಕು. ಸತ್ಯವ್ರತರು ಈ ಹೆಸರನ್ನು ಸತ್ಯವನ್ನು ಒಂದು ವ್ರತದಂತೆ ಪಾಲಿಸುತ್ತಿದ್ದ ಗಾಂಧೀಜಿಯಿಂದಲೇ ಪಡೆದುಕೊಂಡಿರಬಹುದು. ಕಾರಣ, ಗಾಂಧಿಯವರಿಗೆ ಸತ್ಯವೆನ್ನುವುದು ಬಹಳ ಪ್ರಿಯವಾದ ಶಬ್ದವಾಗಿತ್ತು. ಅವರು ತಮ್ಮ ಬಾಲ್ಯದಲ್ಲಿ ಸತ್ಯಹರಿಶ್ಚಂದ್ರನ ನಾಟಕವನ್ನು ನೋಡಿಯೋ ಕತೆ ಕೇಳಿಯೊ ಪ್ರಭಾವಿತರಾಗಿ, ಅದನ್ನೊಂದು ಮೌಲಿಕ ಪರಿಕಲ್ಪನೆಯನ್ನಾಗಿ ರೂಪಿಸಿಕೊಂಡವರು. ಅವರ ಆತ್ಮಕತೆ ಹೆಸರು ಕೂಡ ‘ಸತ್ಯದೊಂದಿಗೆ ನನ್ನ ಪ್ರಯೋಗಗಳು’ ಎಂದಿದೆಯಷ್ಟೆ. ಆದರೆ ಆಧುನಿಕ ತತ್ವಶಾಸ್ತ್ರದ ಚಿಂತನೆಗಳು ಸತ್ಯವೆಂಬುದು ಒಂದು ಅಬ್ಸಲೂಟ್‌ವ್ಯಾಲ್ಯೂ ಇರುವ ಪರಿಕಲ್ಪನೆಯಲ್ಲ. ಅದು ಅವರವರ ಅನುಭವಕ್ಕೆ ಬಂದ ಸಾಪೇಕ್ಷ (ರಿಲೇಟಿವ್) ವಾಸ್ತವ ಮಾತ್ರ ಎಂದು ಹೇಳುತ್ತವೆ. ಇದು ನಿಜ. ಆದರೆ ಈ ಕೆಲವು ಗಾಂಧಿವಾದಿಗಳು ಸತ್ಯದ ಪರಿಕಲ್ಪನೆಯನ್ನು ತಮ್ಮ ಬದುಕಿನಲ್ಲಿ ಪ್ರಯೋಗವಾಗಿ ಅಳವಡಿಸಿಕೊಂಡು, ಅದನ್ನೊಂದು ನೈತಿಕ ಮೌಲ್ಯವನ್ನಾಗಿ ಮಾಡಿಕೊಂಡರು. ಅನೇಕ ಸಲ ಇದಕ್ಕಾಗಿ ತಮ್ಮನ್ನೂ ಕಷ್ಟಕ್ಕೆ ಈಡುಮಾಡಿಕೊಂಡಿರುವರು. ಇತರರಿಗೂ ಕಷ್ಟಕೊಟ್ಟಿರುವರು. ಇಂತಹ ಸತ್ಯವ್ರತಿಗಳಲ್ಲಿ ಸಾಮಾನ್ಯವಾಗಿ ನಾನೇ ಸರಿತನದ ಭಾವವಿರುತ್ತದೆ. ಆದರೆ ಅದಕ್ಕೊಂದು ಸಾರ್ವಜನಿಕ ಹಿತದ ಆಯಾಮವೂ ಇರುತ್ತದೆ.

ಕುಳ್ಳಗೆ ಬೆಳ್ಳಗೆ ಗಾಳಿಬಂದರೆ ಹಾರಿಹೋಗುವಂತೆ ತೆಳ್ಳಗೆ ಇದ್ದ ಸತ್ಯವ್ರತರನ್ನು ನಾನು ನೋಡಿದ್ದು ಅದೇ ಮೊದಲು. ಬಿಳಿಯ ಖಾದಿ ಜುಬ್ಬದ ಮೇಲೆ ಗುಂಡಿಗಳಿರುವ ಕೆನೆಬಣ್ಣದ ಉಲ್ಲನ್ ಸ್ವೆಟರನ್ನು ಧರಿಸಿದ್ದ ಈ ಅಜ್ಜ, ನಾಡಿನ ಸಂಪತ್ತು ಕೊಳ್ಳೆಹೋಗುತ್ತಿದೆ. ಅದನ್ನು ತಡೆಯಬೇಕು ಎಂದುಕೊಂಡು ತರುಣರೇ ತುಂಬಿಕೊಂಡಿದ್ದ ತಂಡದಲ್ಲಿ ಬಂದಿದ್ದರು. ಅವರ ಜತೆ ಹಿರಿಯ ಮಾರ್ಕ್ಸ್ ವಾದಿ ಚಿಂತಕ ಜಿ. ರಾಮಕೃಷ್ಣ ಅವರೂ ಇದ್ದರು. ಮಾರ್ಕ್ಸ್‌ವಾದಿಗಳಿಗೆ ಗಾಂಧಿಚಿಂತನೆಯ ಮೇಲೆ ಅವರದ್ದೇ ಆದ ಟೀಕೆ ಟಿಪ್ಪಣಿಗಳಿವೆ. ಆದರೆ ಇಲ್ಲಿ ಎರಡೂ ಧಾರೆಯ ಚಿಂತಕರು ಒಂದೇ ಸೀಟಿನಲ್ಲಿ ಕುಳಿತು ಒಂದು ಉದ್ದೇಶಕ್ಕಾಗಿ ರಾಜ್ಯವನ್ನೆಲ್ಲ ತಿರುಗಾಡುತ್ತಿದ್ದರು. ತಂಡದಲ್ಲಿದ್ದ ಪ್ರಸಿದ್ಧ ಬರಹಗಾರರೆಲ್ಲ ಒಂದು ಎರಡು ದಿನಕ್ಕೆ ಕಳಚಿಕೊಂಡರೂ, ಇವರಿಬ್ಬರು ಮಾತ್ರ ಹುಡುಗರ ಜತೆ ಹಠಹಿಡಿದು, ಮೈನಿಂಗ್ ಧೂಳಿನಲ್ಲಿ ಕೆಂಪಾಗಿ, ತಗ್ಗುಬಿದ್ದ ರಸ್ತೆಗಳಲ್ಲಿ ಮೈನೋಯಿಸಿಕೊಂಡು ಪ್ರಯಾಣಿಸಿ ಬಳ್ಳಾರಿ ತನಕ ಬಂದಿದ್ದರು.

ಭೂದಾನ ಚಳುವಳಿಚಿತ್ರದುರ್ಗ ಜಿಲ್ಲೆಯವರಾದ ಸತ್ಯವ್ರತ ಅವರ ಮೂಲ ಹೆಸರು ಕೊಂಡಾಚಾರ್ ಅಂತೆ. ೨೦ನೇ ಶತಮಾನದ ಮೊದಲಲ್ಲಿ ಗಾಂಧಿಯವರ ವ್ಯಕ್ತಿತ್ವಕ್ಕೋ ಅವರ ಚಳುವಳಿಗಳಿಗೂ ಮರುಳಾಗಿ ತಾರುಣ್ಯದಲ್ಲಿ ಅನೇಕರು ತಮ್ಮನ್ನು ಗಾಂಧಿಚಳುವಳಿಗೆ ಸಮರ್ಪಿಸಿಕೊಂಡರು. ಅವರ ಪೈಕಿ ಸತ್ಯವ್ರತರೂ ಒಬ್ಬರು. ಸಂಸ್ಕೃತ ಮತ್ತು ಇಂಗ್ಲಿಷಿನಲ್ಲಿ ಅಪಾರ ವಿದ್ವತ್ತಿದ್ದ ಸತ್ಯವ್ರತ, ಕರ್ನಾಟಕದ ಸರ್ವೋದಯ ಸಂಘದ ಅಧ್ಯಕ್ಷರು. ವಿನೋಬಾಬಾವೆಯವರ ಭೂದಾನ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದವರು. ವಿನೋಬಾ ಅವರ ಭೂದಾನ ಚಳುವಳಿಯ ಮಿತಿ ಮತ್ತು ಸೋಲುಗಳ ಬಗ್ಗೆ ಕನ್ನಡದಲ್ಲಿ ಸಾಕಷ್ಟು ರಾಜಕೀಯ ಚರ್ಚೆಗಳಾಗಿವೆ. ಆದರೂ ಈ ತಲೆಮಾರಿನ ಗಾಂಧಿವಾದಿಗಳು ಜನಹಿತ ಎಂದು ತಮಗೆ ತೋರಿದ ಎಲ್ಲ ಬಗೆಯ ಆಂದೋಲನಗಳಲ್ಲಿ ದೈಹಿಕವಾಗಿ ಮಾನಸಿಕವಾಗಿ ತೊಡಗಿಸಿಕೊಳ್ಳುತ್ತಿದ್ದರು. ಬ್ರಿಟಿಷರು ಹೋದ ಬಳಿಕ ಅವರು ಮಾಡುತ್ತಿದ್ದ ಹೋರಾಟವು ದೇಶೀಯ ಬ್ರಿಟೀಷರ ವಿರುದ್ಧವಾಗಿದ್ದರಿಂದ, ಅವರಿಗೆ ವಿರಾಮವೆಂಬುದೇ ಇರಲಿಲ್ಲ. ಮಾತ್ರವಲ್ಲ, ವಿದೇಶಿಗರಾದ ಬ್ರಿಟಿಷರಿಗಿಂತ ಅಧಿಕಾರದ ಹಿಡಿದು ಕುಳಿತಿರುವ ನಮ್ಮವರೇ ಭ್ರಷ್ಟರಾಗಿರುವುದು, ಹಿಂಸಕರಾಗಿರುವುದು, ಅವರಿಗೆ ಅತೀವ ವಿಷಾದವನ್ನು ಉಂಟುಮಾಡಿತ್ತು. ಈ ವಿಷಾದಕರ ವೇದನೆಯ ಪರಿಯನ್ನು ಕೋಚೆಯವರ ‘ಬೇಡಿಕಳಚಿತು, ದೇಶ ಒಡೆಯಿತು’ ‘ಹಿಂತಿರುಗಿ ಬರಲಿಲ್ಲ’ ಮುಂತಾದ ಕಾದಂಬರಿಗಳಲ್ಲಿ ಕಾಣಬಹುದು. ಸತ್ಯವ್ರತ, ಎಚ್. ಎಸ್. ದೊರೆಸ್ವಾಮಿ, ಪೊನ್ನಮ್ಮಾಳ್ ಮುಂತಾದವರೆಲ್ಲ ಎಮರ್ಜನ್ಸಿಯ ಟೈಮಲ್ಲಿ ಜೈಲಿಗೆ ಹೋಗಿದ್ದು ಈ ಕಾರಣಕ್ಕೆ ಸಹಜವಾಗಿದೆ. ಈ ಕೆಲವು ಗಾಂಧಿವಾದಿಗಳು ತಮಗೆ ಕೆಟ್ಟದ್ದು ಎನಿಸಿದ ಘಟನೆ ನಡೆದೆಡೆ ತಪ್ಪದೇ ಹಾಜರಾಗುವವರು. ಅಲ್ಲಿದ್ದ ಊಟವನ್ನೇ ಉಂಡು, ಸಿಕ್ಕ ಜಾಗದಲ್ಲಿ ಮಲಗಿ, ಜನರೊಂದಿಗೆ ಜಾಥಾ ಹೋಗಿ ಮನೆಗೆ ಮರಳುವವರು.ಅಧಿಕಾರಸ್ಥರ ಎದುರು ಪರಿಣಾಮ ಲೆಕ್ಕಿಸದೆ ಸೆಟೆದುನಿಂತು ಕಟುವಾಗಿ ಮಾತಾಡುವ ಧೀರತನ ತೋರುವವರು. ಜಾತಿಭೇದ ಅಸ್ಪೃಶ್ಯತೆಯನ್ನು ಒಪ್ಪದವರು. ಧರ್ಮದ ಹೆಸರಲ್ಲಿ ಹುಟ್ಟುವ ಎಲ್ಲ ಬಗೆಯ ಮೂಲಭೂತವಾದ ಮತ್ತು ಕೋಮುವಾದಗಳ ವಿರುದ್ಧ ಸೆಣಸುವವರು. ನಾಡಿನ ಸಮಸ್ತ ಜನರಿಗೆ ಸೇರಿದ ಸಂಪತ್ತನ್ನು ಕೆಲವರು ಕಬಳಿಕೆ ಮಾಡಿಕೊಳ್ಳುವುದರ ವಿರುದ್ಧ ನಿಲ್ಲುವವರು. ಇವರನ್ನು ಗಾಂಧಿವಾದದ ಜಾತ್ಯಾತೀತ ಸಮಾಜವಾದಿ ರೂಪಾಂತರದ ಮಾದರಿಗಳು ಎನ್ನಬಹುದು. ಈ ಮಾದರಿಯನ್ನು ಎಚ್. ಎಸ್. ದೊರೆಸ್ವಾಮಿ, ಪೊನ್ನಮ್ಮಾಳ್, ಸತ್ಯವ್ರತ, ಕೋಚೆ, ಜಿ. ರಾಮಕೃಷ್ಣ ಮುಂತಾದವರ ಜೀವನದಲ್ಲಿ ನೋಡಬಹುದು. ಕರ್ನಾಟಕದಲ್ಲಿ ಇನ್ನೊಂದು ನಮೂನೆಯ ಗಾಂಧಿವಾದಿಗಳಿದ್ದಾರೆ. ಇವರಲ್ಲೂ ಈ ದಿಟ್ಟತನ ಸರಳತೆಗಳಿವೆ. ಪ್ರತಿಭಟನ ಪ್ರಜ್ಞೆಯಿದೆ. ಆದರೆ ಖಾಸಗಿಯಾಗಿ ಮಾತಾಡುತ್ತ ಒಂದು ಚೂರು ಚರ್ಮ ಗೆಬರಿದರೆ, ಒಳಗೆ ರಕ್ತನಾಳಗಳಲ್ಲಿ ಜೀವಂತವಾಗಿ ಹರಿದಾಡುವ ಜಾತಿನಿಷ್ಠೆ, ಸನಾತನವಾದಗಳು ದರ್ಶನ ಕೊಡುತ್ತವೆ.

ನನಗೆ ಕಾಡುತ್ತಿದ್ದ ಪ್ರಶ್ನೆಯೆಂದರೆ, ಶತಮಾನದ ಅಂಚಿನಲ್ಲಿರುವ ಸತ್ಯವ್ರತರಂತಹ ಹಿರಿಯರು ತಮ್ಮ ವಯಸ್ಸು, ಕಾಯಿಲೆ, ಬಡತನಗಳ ನಡುವೆಯೇ ಯಾಕೆ ಇಂತಹ ಆಂದೋಲನಗಳಲ್ಲಿ ಭಾಗವಹಿಸುತ್ತಿರುವರು? ಅವರ ಒಳಗೇ ಇನ್‌ಬಿಲ್ಟಾಗಿರುವ ಸಾರ್ವಜನಿಕ ಹೊಣೆಗಾರಿಕೆಯ ತಳಮಳದ ಪ್ರಜ್ಞೆಯಿಂದಲೊ ಅಥವಾ ಇಂತಹ ಪುಣ್ಯಕೋಟಿಗಳು ಕೂಡ ಆಕ್ರೋಶಗೊಂಡು ಕೊಂಬು ಹಾಯಿಸುವಷ್ಟು ನಮ್ಮ ವ್ಯವಸ್ಥೆ ಜನದೂರ ಆಗಿರುವುದರಿಂದಲೊ? ನಮ್ಮಲ್ಲಿ ಕೆಲವು ಆಢ್ಯರು ಅಕ್ರಮವಾಗಿ ರೊಕ್ಕವನ್ನು ಗಳಿಸಿ ಅದರ ರಾಶಿಯ ಮೇಲೆ ಕೂತು, ಆ ರೊಕ್ಕವನ್ನು ಚುನಾವಣೆಗಳಲ್ಲಿ ಸುರಿದು ಗೆದ್ದು ಅಧಿಕಾರ ಹಿಡಿದು, ಜನರನ್ನು ಭ್ರಷ್ಟರನ್ನಾಗಿಸಿರುವುದು-ಇದನ್ನೆಲ್ಲ ಕಂಡು ಇವರು ರೋಸಿಹೋಗಿದ್ದಾರೆ ಅನಿಸಿತು. ಇದರ ಜತೆ ಈ ಪ್ರತಿಭಟನೆ ಸಾಂಕೇತಿಕವಾದದ್ದು, ಇದು ವಾಸ್ತವದಲ್ಲಿ ಏನನ್ನೂ ಬದಲಾಯಿಸದು ಎಂಬ ಒಂದು ಬಗೆಯ ಹತಾಶೆ ಕೂಡ ಅವರಲ್ಲಿದ್ದಂತೆ ಇತ್ತು.

ಈ ಹತಾಶೆ ಆಕ್ರೋಶಗಳು ಅನೇಕ ರೀತಿಯಲ್ಲಿ ಆಗಾಗ್ಗೆ ಹೊರಹೊಮ್ಮುತ್ತಿದ್ದವು. ಮಾತಾಡಿದರೆ ಪಕ್ಕದವರಿಗೆ ಕೇಳಿಸದಷ್ಟು ಮೆಲುದನಿಯ ತಣ್ಣನೆಯ ಸತ್ಯವ್ರತ ಅವರು ಆಸ್ಫೋಟನೆಗೊಳ್ಳುತ್ತಿದ್ದರು. ನಮಗೆ ಸೊಂಡೂರು ಸುತ್ತಲಿನ ಮೈನಿಂಗ್ ಚಟುವಟಿಕೆಗಳನ್ನು ತೋರಿಸಲು ಲಕ್ಷ್ಮೀಪುರದ ಒಬ್ಬ ರೈತನನ್ನು ನಿಯೋಜಿಸಲಾಗಿತ್ತು. ಅವನು ಮಹಾ ಬಾಯಿಬಡುಕ. ಬೇಕಾದ್ದು ಬೇಡವಾದ್ದು ಎಲ್ಲವನ್ನೂ ಭಾಷಣ ಮಾಡುವ ಭಂಗಿಯಲ್ಲಿ ಹೇಳುತ್ತ ತಲೆ ತಿನ್ನುತ್ತಿದ್ದನು. ಅವನ ಕಿರಿಚಾಟ ನಿಲ್ಲಿಸುವುದು ಹೇಗೆಂದು ತಿಳಿಯದೆ ಎಲ್ಲರೂ ಸೌಜನ್ಯಕ್ಕೆ ಕೇಳುತ್ತ ಇದ್ದರು. ಅವನ ಮಾತುಕತೆಯಲ್ಲಿ ಒಂದು ಬಗೆಯ ನಾಟಕೀಯತೆ ಇತ್ತು. ಆಮೇಲೆ ಗೊತ್ತಾಗಿದ್ದು ಅವನೂ ಅನೇಕ ಮೈನಿಂಗ್ ಮಾಲಿಕರ ಜತೆ ಶಾಮೀಲಾಗಿದ್ದು, ನಂತರ ಪಾಲಿನಲ್ಲಿ ತತ್ವಾರವಾಗಿ ವೈಮನಸ್ಸಿನಿಂದ ಹೊರಬಂದಿದ್ದನೆಂದು. ಅವನು ಅನೇಕ ಗಣಿಗಾರಿಕೆಯ ಜಾಗಗಳು ಬಂದರೂ ಅಲ್ಲಿ ಬಸ್ಸು ನಿಲ್ಲಿಸದೆ, ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದನು.

ನಾವು ಈ ಸುತ್ತಾಟ ಮುಗಿಸಿ ಬಳ್ಳಾರಿ ತಲುಪಬೇಕಿತ್ತು. ಕಾರಣ, ಅಲ್ಲಿ ರ್‍ಯಾಲಿ ಮತ್ತು ಸಾರ್ವಜನಿಕ ಸಭೆಗೆ ಜನ ಕಾಯುತ್ತಿದ್ದರು. ನಮಗೆ ಊಟವೂ ಆಗಿರಲಿಲ್ಲ. ಆದರೆ ಆತ ಬಸ್ಸನ್ನು ಸೊಂಡೂರು ಬೆಟ್ಟದ ಮೇಲಿರುವ ಪ್ರಸಿದ್ಧ ಕುಮಾರಸ್ವಾಮಿ ದೇವಸ್ಥಾನದ ಬಳಿಗೆ ಕರೆದೊಯ್ದನು. ಅಲ್ಲಿ ಬಸ್ಸುನಿಲ್ಲಿಸಿ, ದೇವರ ಮಹಿಮೆಯನ್ನು ಬಣ್ಣಿಸುತ್ತ, ಎಲ್ಲರೂ ಇಳಿಯಬೇಕೆಂದೂ ಹತ್ತು ನಿಮಿಷದಲ್ಲಿ ದೇವರ ದರ್ಶನ ಮಾಡಿ, ನಂತರ ಮುಂದುವರೆಯಬೇಕೆಂದು ಕೇಳಿಕೊಂಡನು. ಅತಿಪ್ರಾಚೀನವೂ ಸುಂದರವೂ ಆದ ಆ ಗುಡಿಯನ್ನು ನಾನು ಹಲವು ಬಾರಿ ನೋಡಿರುವೆ. ಆದರೂ ಈಗ ಇಳಿಯಲು ಅವಕಾಶ ಸಿಕ್ಕರೆ ಮತ್ತೊಮ್ಮೆ ನೋಡಬೇಕೆಂದು ಅನಿಸುತ್ತಿತ್ತು. ಆದರೆ ಸತ್ಯವ್ರತರಿಂದ ಇದ್ದಕ್ಕಿದ್ದಂತೆ ಗುಡುಗು ಕೇಳಿಬಂತು. “ಏ ಬೇಕೂಫ, ನಾನು ಆಗಲಿಂದ ನೋಡ್ತಾ ಇದ್ದೇನೆ. ಗಣಿಗಾರಿಕೆ ಆಗಿರುವ ಜಾಗ ತೋರಿಸು ಅಂದರೆ ಗುಡಿಗೆ ಕರಕೊಂಡು ಬಂದಿದಾನೆ. ನಾವೇನು ಪೂಜೆಗೆ ಬಂದ ಭಕ್ತರೇ? ಟೂರ್ ಬಂದಿರೋ ಸ್ಕೂಲ್ ಹುಡುಗರೇ? ಇಲ್ಲಿ ಆಗಿರುವ ಅನ್ಯಾಯ ನೋಡೋಕೆ ಬಂದವರು. ಇಲ್ಲದ್ದೆಲ್ಲ ಒದರಬೇಡ. ಹತ್ತು ಬಸ್ಸು. ಗಣಿಗಾರಿಕೆಯ ಜಾಗಕ್ಕೆ ಕರೆದುಕೊಂಡು ನಡಿ” ಎಂದು ಆವಾಜ್ ಹಾಕಿದರು. ಮುಂದೆ ಎಲ್ಲ ಕಾರ್ಯಕ್ರಮಗಳು ಸುಸೂತ್ರವಾಗಿ ಸಕಾಲದಲ್ಲಿ ನಡೆದವು. ದಾಕ್ಷಿಣ್ಯಕ್ಕೆ ಬಸುರಾಗದೆ, ಅನಿಸಿದ್ದನ್ನು ನೇರವಾಗಿ ಹೇಳುವ ನೈತಿಕ ಶಕ್ತಿಯನ್ನು ಈ ಜನ ಎಲ್ಲಿಂದ ಪಡೆದುಕೊಂಡರೊ ಏನೋ? ಹೀಗೆ ಗುಟುರು ಹಾಕಬಲ್ಲವರು ‘ಒಲವು’ ಪತ್ರಿಕೆಯನ್ನು ಸಂಪಾದಿಸುತ್ತಾರೆ!

ಶರಾವತಿಯ ಕೊಳ್ಳಕ್ಕೆ ಹೋಗಲು ನಿರಾಕರಿಸಿದ ಗಾಂಧೀಜಿಯವರು ಸೊಂಡೂರಿಗೆ ಬಂದಾಗ ಇಲ್ಲಿನ ಚೆಲುವಿಗೆ ಮಾರುಹೋಗಿ ಇದನ್ನು ದಕ್ಷಿಣದ ಕಾಶ್ಮೀರ ಎಂದು ಕರೆದಿದ್ದರು. ಆದರೆ ಈಗಿನ ಸೊಂಡೂರು, ಈಗಿನ ಕಾಶ್ಮೀರದಂತೆಯೇ ಈಗ ಪಕ್ಕಾ ರಣರಂಗವಾಗಿದೆ. ನನಗೆ ಗುಡಿಯ ಸೌಂದರ್ಯವನ್ನು ನೋಡಲು ನಿರಾಕರಿಸಿ, ಇಲ್ಲಿನ  ಗಣಿ ಮಾಲೀಕರು ಸುಂದರವಾದ ಸೊಂಡೂರು ಬೆಟ್ಟಗಳ ವನರಾಶಿಯನ್ನು ಮನಸೋ ಇಚ್ಛೆ ಅಗೆದು, ಹಂದಿ ಗೂರಾಡಿದ ಹಿತ್ತಲಿನಂತೆ, ಮಾಡಿರುವ ವಿಕಾರಗುಂಡಿಗಳ ಕಟುವಾಸ್ತವವನ್ನು ನೋಡಲು ಬಯಸಿದ ಸತ್ಯವ್ರತರ ಹಠಮಾರಿತನ, ಗಾಂಧಿ ಜೀವನದಲ್ಲಿ ಬರುವ ಒಂದು ಪ್ರಸಂಗವನ್ನು ನೆನಪಿಸಿತು. ಆ ಪ್ರಸಂಗ ಗಾಂಧಿಯವರ ಕಾರ್ಯದರ್ಶಿಯಾಗಿದ್ದ ಕಾಕಾ ಕಾಲೇಲ್ಕರ್ ಅವರು ಭಾರತದ ನದಿಗಳ ಮೇಲೆ ಬರೆದ ಅಪೂರ್ವ ಕೃತಿ ‘ಜೀವನಲೀಲೆ’ಯಲ್ಲಿ ಬಂದಿದೆ. ಗಾಂಧಿಯವರು ಸತ್ಯಾಗ್ರಹ ಚಳುವಳಿಗೆ ವಂತಿಗೆ ಸಂಗ್ರಹಿಸುತ್ತ, ತಮ್ಮ ಚಳುವಳಿಗೆ ಜನಬೆಂಬಲ ಪಡೆಯುತ್ತ, ತಿರುಗಾಟ ಮಾಡಿಕೊಂಡು ಶಿವಮೊಗ್ಗ ಜಿಲ್ಲೆಯ ಸಾಗರದಲ್ಲಿ ಬಿಡಾರ ಮಾಡುತ್ತಾರೆ. ಆಗ ಕಾಲೇಲ್ಕರ್ ಸಮೀಪ ಬಂದು ಅಳುಕುತ್ತ ಕೇಳುತ್ತಾರೆ: “ಬಾಪೂ, ಇಲ್ಲೇ ಶರಾವತಿ ಅಂತ ನದಿ ಹರಿಯುತ್ತಂತೆ. ಅದು ಸಾವಿರ ಅಡಿಯಿಂದ ಕೆಳಗೆ ಬಿದ್ದು ಸುಂದರವಾದ ಧಭಧಭೆ ಉಂಟಾಗಿದೆಯಂತೆ. ನೋಡಿಕೊಂಡು ಬರೋಣವೇ?;” ರುಮ್ಮನೆ ಸಿಟ್ಟುಬಂದು  ಗಾಂಧಿ  ಸಿಡುಕುತ್ತಾರೆ: “ನೀವೆಲ್ಲ ಬಂದಿರುವುದು ಟೂರಿಗೂ ಚಳುವಳಿಗೊ? ನಾನು ಇದಕ್ಕೆಲ್ಲ ಬರಲಾರೆ. ನಿಮಗೆ ಇಷ್ಟವಿದ್ದರೆ ಹೋಗಿಬನ್ನಿ;” ಸತ್ಯವ್ರತರು ತಮ್ಮ ಗುರು ಗಾಂಧಿಗಿಂತಲೂ ಜಿಪುಣರು. ಗುಡಿಯನ್ನು ನೋಡಲು ತಾವೂ ಇಳಿಯಲಿಲ್ಲ. ಬಸ್ಸಿನಲ್ಲಿದ್ದವರಿಗೂ ಇಳಿಯಗೊಡಲಿಲ್ಲ.

ಇಂತಹ ಹಠಮಾರಿ ಹಿರಿಯ, ಮೊನ್ನೆ (೧೪.೦೩.೨೦೦೯) ತಮ್ಮ ೭೯ನೇ ವಯಸ್ಸಿನಲ್ಲಿ ತಣ್ಣಗೆ ತೀರಿಕೊಂಡರು. ಇದನ್ನು ಗಾಂಧಿಯುಗದ ಕೊನೆಯ ಕೊಂಡಿಗಳಲ್ಲಿ ಒಂದು ಕಳಚಿಹೋಯಿತು ಎಂದು ಬಣ್ಣಿಸಲೇ? ಬಸ್ಸಿನಲ್ಲಿ ಹುಡುಗರು ಹಾಡುತ್ತಿದ್ದ ಕ್ರಾಂತಿಗೀತೆಗಳಿಗೆ ಚಪ್ಪಾಳೆ ತಟ್ಟುತ್ತ ನಲಿಯುತ್ತಿದ್ದ ಈ ತಾತನನ್ನೂ, ಈ ತಾತನ ಸುತ್ತುವರೆದು ತಮ್ಮ ಸಮಕಾಲೀನ ಗೆಳೆಯನೊ ಎಂಬಂತೆ ವ್ಯವಹರಿಸುತ್ತಿದ್ದ ಹುಡುಗರನ್ನೂ ನೆನೆದರೆ, ಕೊಂಡಿಗಳು ಹಾಗೆ ಕಳಚಿಬಿಡುತ್ತವೆ ಎಂದು ಅನಿಸುವುದಿಲ್ಲ. ಕುಸುಮಬಾಲೆ ಹೇಳುವಂತೆ ‘ಸಂಬಂಜ’ ಅನ್ನೋದು ದೊಡ್ಡದು!

[ಚಿತ್ರಗಳು: ಲೇಖಕರು ಮತ್ತು ಸಂಗ್ರಹದಿಂದ]