ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ ಮಾತು ಆರಂಭಿಸಿದೆ. ಯಾಕೆಂದರೆ ಮಕ್ಕಳಿಗೆ ಕಥೆಗಳು ಹಿಡಿಸಿದಷ್ಟು ಸಿದ್ಧಾಂತಗಳು ಹಿಡಿಸುವುದಿಲ್ಲ. ಸರಿ ಕಥೆ ಕೇಳ್ರಿ ಎಂದು ‘ಹಿಂದೊಮ್ಮೆ’ ಎಂದು ಶುರುಮಾಡಿದೆ. ಎಷ್ಟು ಹಿಂದಿನದು ಎಂದು ನನಗೂ ಗೊತ್ತಿರಲಿಲ್ಲ.
ಎನ್.ಸಿ. ಮಹೇಶ್‌ ಬರೆಯುವ ‘ರಂಗ ವಠಾರʼ ಅಂಕಣ ಇನ್ನು ಪ್ರತಿ ಗುರುವಾರ

 

‘ರಂಗಪುರ ವಿಹಾರʼದಲ್ಲಿ ಕೈಶಿಕಿ, ಆರಭಟೀ…

ಉದ್ಯೊಗಗಳನ್ನ ನಾನೇ ಬದಲಿಸುತ್ತಿದ್ದೆನೊ ಅಥವಾ ಉದ್ಯೋಗಗಳೇ ನನ್ನನ್ನ ಬದಲಿಸುತ್ತಿದ್ದವೊ ಖಚಿತವಾಗಿ ನಿರ್ಧರಿಸಿ ಹೇಳುವುದು ಕಷ್ಟ. ಹೊಸ ಕಾಲೇಜು ಪ್ರವೇಶಿಸಿ ಪಾಠ ಹೇಳಲು ಆರಂಭಿಸಿದಾಗ ಅಲ್ಲೂ ನನ್ನ ಗುರುತು ಪತ್ತೆ ಹಚ್ಚಿದ ಕೆಲವರು ‘ನೀವು ರಂಗಭೂಮೀಲಿ ತೊಡಗಿಸಿಕೊಂಡಿದ್ದೀರಿ ಅಲ್ವೇ..?’ ಎಂದು ಕೈ ಕುಲುಕಿ ಕೇಳಲು ಆರಂಭಿಸಿದರು. ಇಂಥ ಪ್ರಶ್ನೆಗೆ ಉತ್ತರಿಸುವುದು ಕಷ್ಟದ ಸಂಗತಿ. ಇಲ್ಲ ತೊಡಗಿಸಿಕೊಂಡಿಲ್ಲ ಎನ್ನಲು ಸಾಧ್ಯವಿಲ್ಲ. ಹಾಗೇ ಹೌದು ತೊಡಗಿಸಿಕೊಂಡಿದ್ದೇನೆ ಎನ್ನಲೂ ಧೈರ್ಯ ಬರುವುದಿಲ್ಲ. ಯಾಕೆಂದರೆ ಅಂಥಾ ಗಮನಾರ್ಹ ಕೆಲಸ ಏನೂ ನನ್ನಿಂದ ಆಗಿರುವುದಿಲ್ಲ ಎಂದು ನನಗೇ ತಿಳಿದಿದೆ. ಆದರೂ ಕೇಳುಗರ ಪ್ರಶ್ನೆಗೆ ನಗುತ್ತ ಅನುಮಾನದ ಭಂಗಿಯಲ್ಲೇ ಹು ಅಂದಂತೆಯೂ ಉಹುಂ ಅಂದಂತೆಯೂ ತಲೆ ಆಡಿಸುವುದನ್ನ ರೂಢಿಸಿಕೊಂಡಿದ್ದೇನೆ.

ಬೆಂಗಳೂರು ನಗರದ ಒಂದು ಪುಟ್ಟ ಭಾಗದ ಒಂದು ಜನವರ್ಗ ನನ್ನನ್ನ ಗುರುತಿಸುತ್ತಿದ್ದಾರೆಂದರೆ ಅದಕ್ಕೆ ಕಾರಣ ನಮ್ಮ ನಾಟಕ ತಂಡ ಮತ್ತು ನಾವು ಮಾಡಿರುವ ಕೆಲವು ಪ್ರಯೋಗಗಳು ಅಂದುಕೊಂಡಿದ್ದೇನೆ. ಜನ ನಮ್ಮ ತಂಡದ ಪ್ರಯೋಗಳನ್ನ ನೋಡಲು ಬಂದಿರುತ್ತಾರೆ, ಆಗೆಲ್ಲೋ ನನ್ನನ್ನ ಕಂಡು ಗುರುತು ಇಟ್ಟುಕೊಂಡಿರುಬಹುದು ಅಂದುಕೊಂಡಿದ್ದೇನೆ.

ನಂತರ ನಾನು ರಂಗಭಮೀಲಿ ತೊಡಗಿಸಿಕೊಂಡಿದ್ದೇನೆ ಅನ್ನುವುದು ಅದು ಹೇಗೋ ಕಾಲೇಜಿನಲ್ಲಿ ಪ್ರಚಾರವಾಯಿತು. ‘ಹೌದೇ..?’ ಎಂದು ಕೆಲವು ಸಿಬ್ಬಂದಿ ನನ್ನ ಬಳಿ ಕೇಳಿದರು. ಏನು ಹೇಳಲೂ ಮತ್ತೆ ನನ್ನಲ್ಲಿ ದ್ವಂದ್ವ.

ಕಾಲೇಜಿನಲ್ಲಿ ಪ್ರತಿ ಡಿಪಾರ್ಟ್ ಮೆಂಟು ಅಂತರಶಿಸ್ತೀಯ ಕೋರ್ಸ್ ವೊಂದನ್ನ ಆರಂಭಿಸಬೇಕು. ಇದು ನಿಯಮ. ‘ಹೇಗೂ ರಂಗಭೂಮೀಲಿ ಇದ್ದೀರಲ್ವಾ..? ವಾರಕ್ಕೊಂದು ಕ್ಲಾಸ್ ಆರಂಭಿಸಿ’ ಅಂದರು ವಿಭಾಗದ ಹೆಡ್ಡು. ಅವರಿಗೆ ರಂಗಭೂಮಿಯ ಬಗ್ಗೆ ಅಕ್ಕರೆಯೇನೂ ಇರಲಿಲ್ಲ. ಆದರೆ ಅಂತರಶಿಸ್ತೀಯ ಕ್ಲಾಸ್ ತೆಗೆದುಕೊಳ್ಳಲು ಒಬ್ಬರನ್ನ ಹೊಂದಿಸಿ ತಾವು ನಿರಾಳವಾಗಬೇಕಿತ್ತು. ಇದು ನನಗೆ ಗೊತ್ತಿತ್ತು. ನಾನೇನೂ ರಂಗಭೂಮಿಯನ್ನ ಶಾಸ್ತ್ರೀಯವಾಗಿ ಅಧ್ಯಯನ ಮಾಡಿದವನಲ್ಲ. ಆದರೆ ಚಿಕ್ಕವನಿದ್ದಾಗಿನಿಂದಲೂ ನಾಟಕಗಳನ್ನ ನೋಡುತ್ತಲೇ ಬೆಳೆದವನು. ನನ್ನ ಅಜ್ಜ ಹಳ್ಳೀಲಿ ನಾಟಕಗಳನ್ನ ಕಲಿಸುವ ಮೇಷ್ಟ್ರಾಗಿದ್ದರು. ಅವರು ಲೆಗ್ ಹಾರ್ಮೋನಿಯಂ ನುಡಿಸುತ್ತ ಹಳ್ಳಿಗರಿಗೆ ಹೇಳಿಕೊಡುತ್ತಿದ್ದ ಹಾಡು ಮತ್ತು ಆ ಹಳ್ಳಿಗರು ಅದನ್ನ ಎಂಜಾಯ್ ಮಾಡುತ್ತಿದ್ದ ರೀತಿಯನ್ನ ತುಂಬ ಹತ್ತಿರದಿಂದ ಕಂಡವನು. ನಂತರದಲ್ಲಿ ನಾಟಕದ ಬಗೆಗೆ ಗೀಳು ಹಾಗೇ ಮುಂದುವರೆದು ಪೌರಾಣಿಕ ನಾಟಕಗಳನ್ನ ಹೊರತುಪಡಿಸಿದ, ಆಧುನಿಕ ಸಂವೇದನೆಗಳಿಗೆ ಒತ್ತುಕಲ್ಪಿಸಿದ ನಾಟಕಗಳನ್ನ ನೋಡುತ್ತ ಕೊಂಚ ಪ್ರಭಾವಿತನಾದವನು. ನಂತರ ನಾಟಕ ತಂಡ ಕಟ್ಟಿದ್ದಾಯಿತು. ಅದಕ್ಕೆ ನಾಟಕಗಳು ಎಂಬ ರಚನೆಗಳನ್ನ ಬರೆಯುವ ಸಾಹಸ ಮಾಡಿ ಪ್ರಯೋಗಿಸಿದ್ದೂ ಆಯಿತು.

ಆದರೆ ಅದು ನಾಟಕದ ಬಗ್ಗೆ ಪಾಠ ಹೇಳುವ ಹಂತಕ್ಕೆ ನನ್ನನ್ನ ಕೊಂಡೊಯ್ಯುತ್ತದೆ ಎಂದು ನಾನು ನಿರೀಕ್ಷಿಸಿರಲಿಲ್ಲ. ಹೆಡ್ಡಿನ ಹೆಡ್ಡು ಸರಿ ಇಲ್ಲ ಎಂದು ಮೊದಲೇ ತಿಳಿದಿದ್ದ ನಾನು ನಾಟಕದ ಬಗ್ಗೆ, ಅದರ ಹಿನ್ನೆಲೆ, ಅದರ ಇಂದಿನ ಸ್ವರೂಪ – ಈ ಬಗ್ಗೆ ಪಾಠ ಹೇಳಲು ಹಿಂಜರಿಯುತ್ತಲೇ ಒಪ್ಪಿಕೊಂಡೆ. ಕೋರ್ಸ್ ಗೆ ಒಂದು ಹೆಸರು ಕೊಡಬೇಕಲ್ಲ. ಸರಿ ಅಂತಂದು ‘ರಂಗಪುರ ವಿಹಾರ’ ಅಂತ ಇಟ್ಟೆ.

‘ಇದೇನು ಹೀಗಂದ್ರೆ?’ ಎಂದು ಹೆಡ್ಡು ಕೇಳಿದರು. ‘ರಂಗ ಎನ್ನುವ ಪುರದಲ್ಲಿ ಸ್ಟೂಡೆಂಟ್ಸ್ ನ ವಿಹಾರ ಕರೆದುಕೊಂಡು ಹೋಗುತ್ತೇನೆ. ಸೊ ಹಾಗಾಗಿ’ ಅಂತ ಹೇಳಿದೆ. ಹೆಡ್ಡು ‘ನೋ ನೋ..’ ಎಂದು ತಲೆ ಆಡಿಸಿದರು. ‘ಅಯ್ಯಯ್ಯೋ ಮಕ್ಕಳಿಗೆ ಅವೆಲ್ಲ ಅರ್ಥವಾಗಲ್ಲ. ಆಮೇಲೆ ಕೋರ್ಸ್ ಗೆ ಯಾರೂ ಎನ್ರೋಲ್ ಆಗೋದೇ ಇಲ್ಲ. ನಮ್ಮ ಡಿಪಾರ್ಟ್ ಮೆಂಟ್ ಕೋರ್ಸ್ ಖಾಲಿ ಬಿದ್ದೊಗುತ್ತೆ’ ಅಂದರು. ಹೌದೇ ಎಂದು ನಾನು ಕೇಳಿಕೊಳ್ಳುವ ಹೊತ್ತಿಗೆ ಕೋರ್ಸ್ ಭರ್ತಿ ಆಗಿತ್ತು. ನಾನು ಹೆಡ್ಡಿನ ಕಡೆಗೆ ನೋಡದೆ ನಕ್ಕಿದೆ.

ನಡುಮಧ್ಯೆ ಇದೇನೋ ಹೊಸ ಕೋರ್ಸ್ ಆರಂಭವಾಗ್ತಿದೆ ಎಂದು ತಿಳಿದುಕೊಂಡ ಫ್ಯಾಕಲ್ಟಿ ಗುಪ್ತಚರ ಇಲಾಖೆಯವರು ಮಾಡುವ ಕೆಲಸವನ್ನ ತಾವು ಮಾಡಿ ನನ್ನ ಬಳಿ ಬಂದು ‘ಸರ್ ಆಕ್ಚುವಲಿ ನಾಟಕ ಅಂದರೆ ಏನು ಸರ್..?’ ಅಂತ ಕೇಳಿದರು.

ಸದಾ ಬೀಡುಬೀಸಾಗಿ ಮತ್ತು ತಮಾಷೆಯಾಗಿ ಇರುವ ನಾನು ಅವರ ಪ್ರಶ್ನೆಗೆ ತಮಾಷೆಯಾಗೇ ಉತ್ತರಿಸೋಣ ಅಂದುಕೊಂಡರೆ ಹೆಡ್ಡು ಅಲ್ಲೇ ಇದ್ದರು. ಸರಿ ಅಂತಂದು ನಮ್ಮ ಬುದ್ಧಿಜೀವಿಗಳ ಧಾಟಿಯನ್ನ ಕೊಂಚ ಆವಾಹಿಸಿಕೊಂಡು ‘ನಾಟಕ ಅಂದರೆ ನಮ್ಮದೇ ಬದುಕಿನ ಬಿಂಬಕ್ಕೆ ಕುಸುರಿ ಕೆಲಸ ಮಾಡುವುದರ ಜೊತೆಗೆ ಪಾಲಿಶ್ ಕೂಡ ಮಾಡಿ ಬೊಂಬೆಗಳ ಹಾಗೆ ಸಿದ್ಧಮಾಡಿದ ನಟ ನಟಿಯರನ್ನ ರಂಗದ ಮೇಲೆ ಬಿಟ್ಟು ಕೀ ಕೊಡುವ ಕ್ರಿಯೆ ಇದ್ಯಲ್ಲ.. ಅದು ನಾಟಕ’ ಅಂದೆ.

ಉತ್ತರ ಕೇಳಿಸಿಕೊಂಡವರು ಹುಬ್ಬೇರಿಸಿದರು. ಮತ್ತೆ ನನ್ನ ಕೈ ಸೆಳೆದುಕೊಂಡು ಕುಲುಕಿದರು. ನನ್ನ ಉತ್ತರಕ್ಕೆ ನನಗೇ ಆಶ್ಚರ್ಯವಾಗಿತ್ತು.

ಬರೀ ಇಷ್ಟು ಹೇಳಿದರೆ ಸಾಕೆ? ಪಾಠ ಹೇಳುವುದು ನಿಜವಾಗಿಯೂ ಚಾಲೆಂಜಿಂಗ್. ಅದರಲ್ಲೂ ನಾಟಕವನ್ನ ಶಾಸ್ತ್ರೀಯವಾಗಿ ಅಧ್ಯಯನ ಮಾಡದ ನನ್ನಂಥವನು ನಾಟಕದ ಬಗ್ಗೆ ಪಾಠಕ್ಕೆ ನಿಲ್ಲುವುದು ನಿಜಕ್ಕೂ ದೊಡ್ಡ ಚಾಲೆಂಜಿಂಗ್. ಆದರೆ ಒಪ್ಪಿಕೊಂಡದ್ದು ಆಗಿತ್ತು.

ಸರಿ ಅಂತಂದು ನಾನು ವಿವರಿಸಬೇಕಿರುವ ಕಂಟೆಂಟನ್ನ ವಿಭಾಗಿಸಿಕೊಂಡೆ. ರಂಗಭೂಮಿಯ ಬಗ್ಗೆ ನನ್ನ ಬಳಿ ಇದ್ದ ಪುಸ್ತಕಗಳನ್ನೆಲ್ಲ ತಡಕಾಡಿ ಕಣ್ಣು ಹಾಯಿಸುತ್ತ ನೋಟ್ಸ್ ಮಾಡಿಕೊಳ್ಳಲು ಆರಂಭಿಸಿದೆ. ಎಲ್ಲ ಬರೀ ಥಿಯರಿಯೇ ಆಗಬಾರದು, ಪ್ರಾಕ್ಟಿಕಲ್ ಬಗ್ಗೆಯೂ ಹೇಳಬೇಕು. ಯಾಕೆಂದರೆ ನಾಟಕ ಅನ್ನುವುದು ಕಟ್ಟಕಡೆಗೆ ರಂಗದ ಮೇಲೆ ನಡೆಯುವ ಕ್ರಿಯೆ. ಅದನ್ನ ಕಾಳಿದಾಸ ‘ಚಕ್ಷು ಯಜ್ಞ’ ಎಂದೇ ಕರೆದಿದ್ದಾನೆ.

ಪ್ರಾಕ್ಟಿಕಲ್ ಆಗಿ ವಸ್ತುಸ್ಥಿತಿ ಹೇಗಿದೆ ಎಂದು ನಮ್ಮ ತಂಡವನ್ನೂ ಒಳಗೊಂಡಂತೆ ಬೆಂಗಳೂರಿನ ಕೆಲವು ರಂಗತಂಡಗಳಲ್ಲಿ ಪರಿಸ್ಥಿತಿ ಹೇಗಿದೆ ಎಂದು ಹೇಳುವಷ್ಟರ ಮಟ್ಟಿಗೆ ನನ್ನಲ್ಲಿ ತಿಳುವಳಿಕೆ ಇತ್ತು. ಆದರೆ ನಾನು ಹೇಳುವುದೇ ಪ್ರಾಕ್ಟಿಕಲ್ ಆಗಿರಬೇಕಿಲ್ಲ. ತಾಲೀಮುಗಳು ಸರಿಯಾಗಿ ನಡೆಯುವ, ತುಂಬ ಶಿಸ್ತಿನಿಂದ ಕೂಡಿರುವ ಸನ್ನಿವೇಶಗಳೂ ಇವೆ. ಅವು ಬೇರೆ ಶಿಸ್ತಿಗೆ ಒಳಪಟ್ಟಿರುವಂಥವು. ಅಭಿನಯವನ್ನ ಶಾಸ್ತ್ರೀಯವಾಗೋ ಅಥವಾ ಒಂದು ಅಕಡಮಿಕ್ ಶಿಸ್ತಿನಲ್ಲಿ ಕಲಿಸುವ ಶಾಲೆಗಳಲ್ಲಿ ಈ ಶಿಸ್ತು ರೂಢಿಯಲ್ಲಿ ಇರುತ್ತದೆ. ಆದರೆ ಬೆಂಗಳೂರಿನ ಒಂದು ಭಾಗದಲ್ಲಿರುವ ರಂಗತಂಡಗಳಲ್ಲಿ ತಾಲೀಮುಗಳು ಹೇಗೆ ನಡೆಯುತ್ತವೆ, ಅವರ ಬದ್ಧತೆ, ಅವರುಗಳು ನಾಟಕಗಳನ್ನ ಪ್ರಯೋಗಕ್ಕೆ ಆರಿಸಿಕೊಳ್ಳುವ ಕ್ರಮ, ರಂಗಮಂದಿರಗಳನ್ನ ಬುಕ್ ಮಾಡಲು ಇರುವ ಸಮಸ್ಯೆಗಳು ಇತ್ಯಾದಿಗಳ ಬಗ್ಗೆ ನನಗೆ ತಿಳಿದೇ ಇತ್ತು. ಆದರೆ ನನ್ನ ಪ್ರಶ್ನೆ ಇದ್ದದ್ದು ‘ಇಷ್ಟು ಹೇಳಿದರೆ ಸಾಕೆ..? ಇಷ್ಟು ಏನನ್ನು ಕಟ್ಟಿಕೊಡಬಲ್ಲುದು..?’ ಎಂಬುದು.

ಇರಲಿ ತೀರಾ ತಲೆ ಕೆಡಿಸಿಕೊಳ್ಳುವುದು ಬೇಡ ಅನಿಸಿ ಸಿದ್ಧವಾಗಲು ಆರಂಭಿಸಿದೆ. ಹಿಂದೊಮ್ಮೆ ರಘುನಂದನ್ ಸರ್ ಜೊತೆ ಹೀಗೇ ನಾಟಕದ ಬಗ್ಗೆ ಚರ್ಚಿಸುವಾಗ ಅವರು ನನಗೆ ಪೀಟರ್ ಬ್ರೂಕ್ ನ ‘ದಿ ಎಂಪ್ಟಿ ಸ್ಪೇಸ್’ ಪುಸ್ತಕ ಓದು ಮಾರಾಯ. ನನ್ನ ಹತ್ರ ಸಾಪ್ಟ್ ಕಾಪಿ ಇದೆ ಕಳಿಸ್ತೀನಿ’ ಅಂತಂದು ಕಳಿಸಿದ್ದರು. ಆ ಪ್ರತಿ ನನ್ನ ಬಳಿ ಇತ್ತು. ಪ್ರಿಂಟ್ ತೆಗೆದುಕೊಂಡು ಇಟ್ಟುಕೊಂಡಿದ್ದೆ. ಈಗ ಉಪಯೋಗಕ್ಕೆ ಬರುತ್ತಿದೆ ಅಂದುಕೊಂಡು ನೋಟ್ಸ್ ಮಾಡಿಕೊಳ್ಳಲು ಮುಂದಾದೆ.

‘ಒಂದು ಖಾಲಿ ಜಾಗವನ್ನ ನಾನು ಖಾಲಿರಂಗಸ್ಥಳ ಎಂದು ಪರಿಗಣಿಸಿಕೊಳ್ಳುತ್ತೇನೆ. ಒಬ್ಬ ವ್ಯಕ್ತಿ ಹೋಗಿ ಅಲ್ಲಿ ನಿಲ್ಲುತ್ತಾನೆ. ಮತ್ತು ಅವನನ್ನ ಕೆಲವರು ನೋಡುತ್ತಾರೆ. ರಂಗದಲ್ಲಿ ಚಟುವಟಿಕೆ ಆರಂಭಗೊಳ್ಳಲು ಇಷ್ಟು ಸಾಕು’ ಎನ್ನುವ ಪೀಟರ್ ಬ್ರೂಕ್ ಥಿಯೇಟರನ್ನ ನಾಲ್ಕು ಬಗೆಯಲ್ಲಿ ವಿಂಗಡಿಸುತ್ತಾನೆ. ಅದು ದಿ ಡೆಡ್ಲಿ ಥಿಯೇಟರ್, ದಿ ಹೋಲಿ ಥಿಯೇಟರ್, ದಿ ರಫ್ ಥಿಯೇಟರ್ ಹಾಗೂ ದಿ ಇಮ್ಮಿಡಿಯೇಟ್ ಥಿಯೇಟರ್. ಒಂದೊಂದು ಬಗೆಯನ್ನೂ ಆತ ಸವಿಸ್ತಾರವಾಗಿ ವಿವರಿಸುತ್ತಾನೆ.

ಆದರೆ ಅವನ್ನೆಲ್ಲ ಓದುತ್ತ ಓದುತ್ತ ನನಗೆ ಅನಿಸಿದ್ದು- ಈಗ ನಾನು ಪಾಠ ಹೇಳಲಿರುವ ಮಕ್ಕಳಿಗೆ ಈ ಎಲ್ಲ ಬಗೆಗಳ ಬಗ್ಗೆ ಹೇಳಿದರೆ ಅರ್ಥವಾಗುತ್ತದೆಯೇ? ಎಲ್ಲಕ್ಕಿಂತ ಮಿಗಿಲಾಗಿ ಹೆಡ್ಡಿನ ಹೆಡ್ಡಿನೊಳಗೆ ಹೋಗುತ್ತದೆಯೇ..?

ಈ ಎಲ್ಲ ನನ್ನ ಓದಿಗೆ ಇರಲಿ ಅಂದುಕೊಂಡು ಪಾಠ ಮಾಡುವಾಗ ನಾನು ಸದಾ ಯೋಚಿಸುವಂತೆ ಯಾವುದು ಸದಾ ರೀಚಬಲ್ ಕಂಟೆಂಟ್ ಮತ್ತು ಯಾವುದು ಅಲ್ಲ… ಮತ್ತು ಸುಲಭವಾಗಿ ರೀಚಬಲ್ ಅಲ್ಲದ ಕಂಟೆಂಟನ್ನ ತಲುಪಿಸಲು ಅದನ್ನ ಹೇಗೆ ಸರಳೀಕರಿಸಿ ಮತ್ತು ಮಸಾಲೆ ಬೆರೆಸಿ ಹೇಳಬೇಕು ಎಂದು ಸಿದ್ಧವಾಗಲು ಶುರುಮಾಡಿದೆ.

ಯಾವುದೇ ಒಂದು ಪ್ರಕಾರದ ಬಗ್ಗೆ ತಿಳಿಯಬೇಕಿದ್ದರೆ ಅದರ ಹಿನ್ನೆಲೆ ಕೊಂಚವಾದರೂ ಅರಿವಿರಬೇಕಲ್ಲ..? ಈ ರಂಗದ ಕಾನ್ಸೆಪ್ಟ್ ಹುಟ್ಟಿಕೊಂಡದ್ದು ಹೇಗೆ ಮತ್ತು ಎಲ್ಲಿಂದ? ಗ್ರೀಕ್ ಮತ್ತು ರೋಮನ್ ಪರಿಕಲ್ಪನೆಗಳ ಬಗ್ಗೆ ಅಕ್ಷರ ಸರ್ ಅಧ್ಯಯನ ಮಾಡಿ ಬರೆದಿದ್ದದ್ದು ಗೊತ್ತಿತ್ತು. ಅಷ್ಟು ಡೀಟೆಲ್ಸ್ ಹೇಳಿದರೆ ಸ್ಟೂಡೆಂಟ್ಸ್ ಏನು ಮಾಡಬಹುದು ಎಂಬ ಅಂದಾಜು ನನ್ನಲ್ಲಿ ಇದ್ದಿತಾದ್ದರಿಂದ ನಾನು ನೇರವಾಗಿ ಭಾರತೀಯ ಸಂದರ್ಭಕ್ಕೆ ಶಿಪ್ಟ್ ಆಗಿ ನಾಟ್ಯಶಾಸ್ತ್ರದಲ್ಲಿ ಉಲ್ಲೇಖವಾಗಿರುವ ಕಥೆಯಿಂದ ಮಾತು ಆರಂಭಿಸಿದೆ. ಯಾಕೆಂದರೆ ಮಕ್ಕಳಿಗೆ ಕಥೆಗಳು ಹಿಡಿಸಿದಷ್ಟು ಸಿದ್ಧಾಂತಗಳು ಹಿಡಿಸುವುದಿಲ್ಲ. ಸರಿ ಕಥೆ ಕೇಳ್ರಿ ಎಂದು ‘ಹಿಂದೊಮ್ಮೆ’ ಎಂದು ಶುರುಮಾಡಿದೆ. ಎಷ್ಟು ಹಿಂದಿನದು ಎಂದು ನನಗೂ ಗೊತ್ತಿರಲಿಲ್ಲ.

ಅದೊಂದು ಕಾಲದಲ್ಲಿ ವೇದಗಳನ್ನ ಒಂದು ವರ್ಗ ಅಧ್ಯಯನ ಮಾಡುವ ಹಾಗಿರಲಿಲ್ಲ. ಹಾಗಾಗಿ ನಾಲ್ಕು ವೇದಗಳ ಸಾರವನ್ನ ಕ್ರೋಢೀಕರಿಸಿ ಐದನೆಯ ವೇದವನ್ನ ಸೃಷ್ಟಿಸಿಕೊಡು ಎಂದು ಬ್ರಹ್ಮನನ್ನ ಕೇಳಿಕೊಂಡಾಗ ಆತ ನಾಟ್ಯವೇದವನ್ನ ಐದನೆಯ ವೇದವಾಗಿ ಸೃಷ್ಟಿಸಿದನಂತೆ. ಇದನ್ನ ಇಂದ್ರ ಭರತ ಮುನಿಗೆ ಬೋಧಿಸಿದನಂತೆ. ಭರತ ತನ್ನ ನೂರು ಮಕ್ಕಳಿಗೆ ಇದನ್ನ ಬೋಧಿಸಿದನಂತೆ. ಹೀಗೆ ನಾಟ್ಯವೇದ ಚಾಲ್ತಿಗೆ ಬಂದಿತಂತೆ. ಇದನ್ನ ಬಳಸಿ ಭರತನಿಗೆ ಒಂದು ಪ್ರಯೋಗ ಸಿದ್ಧಮಾಡಲು ಸೂಚಿಸಿದಾಗ, ಮತ್ತು ಹಾಗೆ ಪ್ರಯೋಗ ಸಿದ್ಧಗೊಂಡ ಮೇಲೆ ಬ್ರಹ್ಮ ಅದನ್ನ ನೋಡಿ ‘ಮುಂಚಿನ ಪ್ರಕಾರಗಳನ್ನ ಬಿಟ್ಟು ಕೈಶಿಕೀ ಬಗೆ ಬಳಸಿ ಆಡಿ’ ಎಂದು ಸೂಚನೆ ಕೊಟ್ಟನಂತೆ’. ಹೀಗೊಂದು ಕತೆ ಇದೆ.

ಇಷ್ಟನ್ನ ಹೇಳಿ ನನ್ನ ಸ್ಟೂಡೆಂಟ್ಸ್ ಕಣ್ಣುಗಳನ್ನ ತಡಕಾಡಲು ನೋಡಿದೆ. ನಿರ್ಭಾವುಕ ಕಣ್ಣುಗಳು. ಯಾವುದೋ ಒಂದು ಕೋರ್ಸ್; ಅದು ರಂಗವಾದರೇನು.. ಪುರವಾದರೇನು.. ಬ್ರಹ್ಮ ಹೇಳಿದರೇನು… ಭರತ ಮುಂದುವರೆದರೇನು ಎಂಬಂತೆ ಕೂತಿದ್ದರು. ಇನ್ನು ಕೆಲವರು ನಾನು ಕ್ಲಾಸ್ ತೆಗೆದುಕೊಳ್ಳುತ್ತೇನೆ ಎಂದು ಕೋರ್ಸ್ ಗೆ ಸೇರಿಕೊಂಡಿದ್ದರು. ಯಾಕೆಂದರೆ ನಾನು ಅಷ್ಟು ಸ್ಟ್ರಿಕ್ಟ್ ಅಲ್ಲ, ಮಿಕ್ಕವರಂತೆ ಹುಚ್ಚುಹುಚ್ಚಾಗಿ ಬೈಯೋದಿಲ್ಲ… ನೋಡಿ ನಿಮಗೇ ಬಿಟ್ಟದ್ದು ಎಂದು ಬಿಟ್ಟುಬಿಡುವ ಉದಾರಿ ಎಂದು ತಿಳಿದಿದ್ದ ಕೆಲವರು ನಾನು ಹುಟ್ಟು ಹಾಕಿದ ಕೋರ್ಸ್ ಗೆ ನೋಂದಣಿ ಮಾಡಿಕೊಂಡಿದ್ದರು.

ನಾಟಕದ ಬಗೆಗೆ ಗೀಳು ಹಾಗೇ ಮುಂದುವರೆದು ಪೌರಾಣಿಕ ನಾಟಕಗಳನ್ನ ಹೊರತುಪಡಿಸಿದ, ಆಧುನಿಕ ಸಂವೇದನೆಗಳಿಗೆ ಒತ್ತುಕಲ್ಪಿಸಿದ ನಾಟಕಗಳನ್ನ ನೋಡುತ್ತ ಕೊಂಚ ಪ್ರಭಾವಿತನಾದವನು. ನಂತರ ನಾಟಕ ತಂಡ ಕಟ್ಟಿದ್ದಾಯಿತು.

ಇಂಥವರ ಕಣ್ಣುಗಳಲ್ಲಿ ಇದ್ದದ್ದು ಕೇವಲ ಟಿಕ್ ಟಾಕ್ ಗೆ ಕಣ್ಣು ತುಟಿ ಅಲುಗಿಸುವುದೇ ಅಭಿನಯ ಎಂಬ ಕಲ್ಪನೆ. ಇವರಿಗೆ ನಾನು ಕೈಶಿಕಿ ಪ್ರಯೋಗವೆಂದರೆ ಹೀಗೆ ಮತ್ತು ಆರಭಟೀ ಪ್ರಯೋಗವೆಂದರೆ ಹೀಗೆ.. ನಾಟ್ಯಶಾಸ್ತ್ರಕ್ಕೂ ಮೊದಲು ಒಂದು ಗ್ರಾಮ್ಯರಂಗ ಎನ್ನುವುದು ಚಾಲ್ತಿಯಲ್ಲಿ ಇತ್ತಂತೆ ಎಂದು ಶುರುಮಾಡಿದರೆ ಹೇಗೆ ಎಂದು ಯೋಚಿಸುತ್ತಿದ್ದಂತೆಯೇ ಭಯವಾಗಿ ನಾನು ಮತ್ತೆ ಶಿಪ್ಟ್ ಆಗಬೇಕಾಯಿತು.

ಕನ್ನಡ ವೃತ್ತಿರಂಗಭೂಮಿಯಲ್ಲಿ ಒಂದು ಮೈಲಿಗಲ್ಲು ಸ್ಥಾಪಿಸಿದ ಗುಬ್ಬಿ ಕಂಪನಿಯ ಬಗ್ಗೆ ಮಾತು ಆರಂಭಿಸಿದೆ. ಗುಬ್ಬಿ ವೀರಣ್ಣನವರ ಹೇಳಲು ಆರಂಭಿಸಿದೆ. ಕಾಲಾ ಪಿಲ್ಲಣ್ಣನವರ ಸಂಗೀತ ಪ್ರಜ್ಞೆಯ ಬಗ್ಗೆ ಹೇಳಿದೆ. ಸ್ಟೂಡೆಂಟ್ಸ್ ಕಣ್ಣುಗಳಲ್ಲಿ ಚೂರು ಬೆಳಕು ಕಂಡಿತು. ಸರಿ ಅಂತಂದು ಮೈಸೂರು ಮಹಾರಾಜರು ಆರಂಭಿಸಿದ ನಾಟಕ ಕಂಪನಿ, ಕೆ. ಹಿರಣ್ಣಯ್ಯನವರ ಮಿತ್ರ ಮಂಡಳಿ, ಪೀರ್ ಸಾಹೇಬರು, ವರದಾಚಾರ್, ಸುಬ್ಬಯ್ಯನಾಯ್ಡು.. ಬಗ್ಗೆ ಚುಟುಕಾಗಿ ಮಾತು ಆರಂಭಿಸಿದೆ. ವಿಹಾರ ಅಂದಮೇಲೆ ಸುತ್ತಾಡಿಸಿಕೊಂಡು ಬರಲೇಬೇಕಲ್ಲ. ಆದರೆ ಈ ಎಲ್ಲರ ರಂಗದ ಸಾಧನೆಗಳು ಮತ್ತು ಅವರ ಕಂಪನಿಯ ಮಾಸ್ಟರ್ ಪೀಸ್ ನಾಟಕಗಳ ಬಗ್ಗೆ ಹೇಳುವಾಗ ಆರಂಭದಲ್ಲಿ ಗೆಲುವಾಗಿದ್ದ ಸ್ಟೂಡೆಂಟ್ಸ್ ಮತ್ತೆ ತಮ್ಮ ಕಣ್ಣುಗಳಲ್ಲಿನ ದೀಪದ ಕಾಂತಿ ಕುಂದಿಸಿಕೊಂಡರು.

ಮತ್ತೆ ಅದು ಜೋರು ಪ್ರಕಾಶಿಸುವಂತೆ ಮಾಡಬೇಕಿರುವುದು ನನ್ನದೇ ಕೆಲಸವಾದ್ದರಿಂದ ನಾನು ‘ಸುಬ್ಬಯ್ಯ ನಾಯ್ಡುಗಳು ಯಾರು ಗೊತ್ತಲ್ಲ..? ಟಾಕಿಂಗ್ ಸ್ಟಾರ್ ಅಂತ ಬಿರುದಾಂಕಿತ ಸೃಜನ್ ಇದಾರಲ್ಲ- ಅದೇ ಮಜಾ ವಿತ್ ಸೃಜಾ… ಆ ಸೃಜನ್ ಅವರ ತಾತ. ಸುಬ್ಬಯ್ಯನಾಯ್ಡು ಅವರ ಮಗ ವರ್ಸಟೈಲ್ ಆಕ್ಟರ್ ಲೋಕೇಶ್..’ ಎನ್ನುತ್ತಿದ್ದಂತೆ ದೀಪದ ಪ್ರಕಾಶ ಹೆಚ್ಚಿತು.

ಆದರೆ ಎಷ್ಟೂಂತ ಕೇಳಿಸಿಕೊಂಡಾರು..? ‘ಸರ್ ಸಾಕು… ಇನ್ನು ಪ್ರಾಕ್ಟಿಕಲ್ ಕ್ಲಾಸ್ ಇರಲಿ’ ಅಂದರು. ಸರಿ ಅಂತಂದು ಪ್ರಾಯೋಗಿಕವಾಗಿ ಏನು ಮಾಡಿ ಇವರಿಗೆ ರಂಗದ ಬಗ್ಗೆ ಪ್ರಾಥಮಿಕ ಕಲ್ಪನೆ ತರಿಸಬಹುದು ಎಂದು ಯೋಚಿಸಿದೆ. ಒಂದು ಪುಟ್ಟ ಪ್ರಯೋಗ ಮಾಡಿಸೋಣ ಅನಿಸಿತು. ರಂಗದ ಮೇಲೆ ಶಿಸ್ತು ಮತ್ತು ಪ್ರೆಸೆನ್ಸ್ ಹೇಗಿರಬೇಕು ಮತ್ತು ಹೇಗಿರುತ್ತದೆ ಎಂದು ಅರ್ಥೈಸೋಣ ಅಂದುಕೊಂಡೆ. ಗ್ರೀಕ್ ನಾಟಕಗಳ ಭಾಗಗಳನ್ನ ತೆಗೆದುಕೊಂಡು ಪಾತ್ರ ವಿಂಗಡಣೆ ಮಾಡಿ ಮಾತಿನ ಬಗೆ ಹೇಳಿಕೊಡೋಣ ಅಂದುಕೊಂಡರೆ ಎಲ್ಲಿ ಸ್ಟೂಡೆಂಟ್ಸ್ ಹೆದರುತ್ತಾರೊ ಅನಿಸಿತು.

ಸರಿ ಬೇಡ ಅಂದುಕೊಂಡು ಬೇರೇನು ಮಾಡಬಹುದು ಎಂದು ಯೋಚಿಸಿದೆ. ಕೋರ್ಸ್ ಗೆ ಸೇರಿದ್ದ ಹುಡುಗಿಯರಲ್ಲಿ ಒಬ್ಬಳು ಕವಯತ್ರಿ ಇದ್ದಳು. ಅವಳ ಒಂದು ಪೊಯಟಿಕ್ ಪ್ರೋಸ್ ಆ ವರ್ಷದ ಕಾಲೇಜಿನ ಮ್ಯಾಗಝೀನ್ ನಲ್ಲಿ ಪ್ರಿಂಟಾಗಿತ್ತು. ನಾನು ಅದನ್ನ ಓದಿದ್ದ ನೆನಪಿದ್ದರಿಂದ ಅದನ್ನ ತರಿಸಿಕೊಂಡು ಆ ಪುಟ್ಟ ಬರಹಕ್ಕೆ ರಂಗರೂಪ ಕಲ್ಪಿಸುವ ಬಗೆ ಹೇಳಿಕೊಟ್ಟರಾಯಿತು ಎಂದು ಯೋಚಿಸಿದೆ.

ಕಾಲೇಜಿನ ಮ್ಯಾಗಝೀನ್ ವಿಭಾಗದಲ್ಲಿ ಹೆಡ್ಡಿನ ಟೇಬಲ್ ಮೇಲೆ ಇತ್ತು. ‘ಹೋಗಿ ತಗೊಂಡು ಬಾಮ್ಮ’ ಅಂದೆ. ಆ ಕವಯತ್ರಿ ಖುಷಿಯಿಂದ ಓಡಿದಳು. ಆದರೆ ಅಲ್ಲಿ ಹೆಡ್ಡು ಅವಳನ್ನ ಹಿಡಿದುಕೊಂಡು ವಿಚಾರಣೆ ಆರಂಭಿಸಿದ್ದಾರೆ. ‘ಇದೇನಕ್ಕಂತೆ..? ಇದರಲ್ಲೇನ್ಮಾಡ್ತಾರಂತೆ..? ನಾಟಕದ ಬಗ್ಗೆ ಕಲಿಸಿ ಅಂದರೆ ಈ ಮ್ಯಾಗಝೀನ್ ತೆಗೆದುಕೊಂಡು ನಿಮಗೆ ತೋರಿಸ್ತಾ ಕೂರ್ತಾರಂತಾ…?’ ಇತ್ಯಾದಿ. ಕವಯತ್ರಿ ಹೆಡ್ಡಿನ ಇಕ್ಕಳದಲ್ಲಿ ನಲುಗಿ ಹೋಗಿ ಹೇಗೋ ತಪ್ಪಿಸಿಕೊಂಡು ಬಂದು ‘ಸರ್ ಹೀಗೀಗೆ ..’ ಎಂದು ವಿವರಿಸಿದಳು.

ನಾನು ನಕ್ಕು ಕೆಲಸ ಆರಂಭಿಸಿದೆ. ಎಲ್ಲರನ್ನೂ ಒಗ್ಗೂಡಿಕೊಂಡು ಬೆಂಚುಗಳನ್ನ ಎತ್ತಿ ಹಿಂದಕ್ಕೆ ಸರಿಸಲು ತಿಳಿಸಿ ನಂತರ ಕೆಲವು ಥಿಯೇಟ್ರಿಕಲ್ ಎಕ್ಸರ್ ಸೈಸ್ ಗಳನ್ನ ಮಾಡಿಸಿದೆ. ಎಲ್ಲರೂ ನನ್ನ ಸೂಚನೆಗಳನುಸಾರ ಬಾಗಿ ದೇಹದ ಬಿಗುವನ್ನ ಕೊಂಚ ಸಡಿಲಿಸಿದರು. ನಂತರ ಸರ್ಕಲ್ ಮಾಡಿ ಹುಡುಗಿ ಬರೆದಿದ್ದ ಪ್ಯಾಸೇಜನ್ನ ಡ್ರಮಾಟಿಕ್ ಆಗಿ ಓದುವುದು ಹೇಗೆ ಎಂದು ಓದಿ ತೋರಿಸಿದೆ. ಮತ್ತು ಅದನ್ನ ಓದುವಾಗಲೇ ಹೇಗೆ ಪಾತ್ರಗಳನ್ನ ಸೃಷ್ಟಿಸಿಕೊಳ್ಳಲು ಸಾಧ್ಯತೆಗಳಿವೆ ಎಂದು ತಿಳಿಸಿದೆ. ಎಲ್ಲರ ಕಣ್ಣುಗಳಲ್ಲಿ ದೀಪಗಳು ಜಗ್ಗನೆ ಮತ್ತೆ ಹೊತ್ತಿಕೊಳ್ಳಲು ಆರಂಭಿಸಿದವು. ಅದರಲ್ಲೂ ಕವಯತ್ರಿಯ ಕಣ್ಣುಗಳಲ್ಲಿ ದೀಪದ ಬೆಳಗಲು ಜೋರು ಇತ್ತು. ತಾನು ಬರೆದ ಪ್ಯಾಸೇಜನ್ನ ರಂಗದಲ್ಲಿ ಹೀಗೆಲ್ಲ ಬಳಸಿಕೊಳ್ಳಬಹುದೆ ಎಂಬ ಅಚ್ಚರಿ ಆಕೆಯ ಕಣ್ಣುಗಳಲ್ಲಿ ಇತ್ತು.

ನಂತರ ಪಾತ್ರ ವಿಭಾಗಿಸಿ ಹಂಚಿದೆ. ಪಾತ್ರ ಅಂದರೆ ಮನುಷ್ಯರು ಮಾತ್ರವೇ ಪಾತ್ರವಾಗಬೇಕಿಲ್ಲ. ರಂಗಪರಿಕರಗಳೂ ಪಾತ್ರಗಳಾಗಬಹುದು. ಅದನ್ನ ನಟ ನಟಿಯರೇ ನಿರ್ವಹಿಸಬಹುದು. ಮಾತುಗಳು ದಕ್ಕಿಸಿಕೊಟ್ಟರೆ ಮಾತೂ ಆಡಬಹುದು ಎಂದು ವಿವರಿಸಿ ಹೇಗೆ ಅಂತಲೂ ತೋರಿಸಿದೆ. ‘ನೀನು ಮರವಾಗು, ನೀನು ಹಂಸವಾಗು, ನೀನು ಬಂಡೆಯಾಗು ಮತ್ತು ಮಾತಾಡು..’ ಎಂದು ಮಾತು ಸೇರಿಸಿಕೊಟ್ಟೆ.
ಅವರಿಗೆಲ್ಲ ಇದು ಹೊಸತಾದ್ದರಿಂದ ಕೊಂಚ ಉತ್ಸಾಹದಲ್ಲೇ ತಮ್ಮನ್ನ ತೊಡಗಿಸಿಕೊಂಡರು. ಮತ್ತು ನಾನು ಹೇಳಿದ್ದೆಲ್ಲವನ್ನೂ ತುಂಬ ಶ್ರದ್ಧೆಯಿಂದಲೇ ಮಾಡಿದರು. ಸಿನಿಮಾಗಳನ್ನ ನೋಡಿ ಆ್ಯಕ್ಟಿಂಗ್ ಅಂದರೆ ಇಷ್ಟೇ ಎಂದು ತಿಳಿದುಕೊಂಡಿದ್ದವರು ರಂಗದ ಸಾಧ್ಯತೆ ಕಂಡು ಕಣ್ಣು ಅರಳಿಸಿದರು.

‘ಸರಿ ಇದನ್ನ ಮುಂದಿನ ವಾರ ಪಾಲಿಶ್ ಮಾಡೋಣ…’ ಅಂತಂದು ಕ್ಲಾಸ್ ಮುಗಿಸಿದೆ. ಎಲ್ಲರೂ ಉತ್ಸುಕರಾಗೇ ಇದ್ದರು. ಆದರೆ ಹೆಡ್ಡಿನ ಹೆಡ್ನಲ್ಲಿ ಆ ಹೊತ್ತಿಗೆ ಅಹಂಕಾರ ತಲೆ ಎತ್ತಿತ್ತು. ತಾನು ಅವಕಾಶ ಕಲ್ಪಿಸಿದ ಕೋರ್ಸ್… ತನ್ನನ್ನ ಒಮ್ಮೆಯೂ ಗೌರವಾನ್ವಿತ ಭಾವದಲ್ಲಿ ಕ್ಲಾಸಿಗೆ ಆಹ್ವಾನಿಸಿ ‘ಹೀಗೀಗೆ ನಡೀತಿದೆ..’ ಎಂದು ಎಲ್ಲರ ಸಮ್ಮುಖದಲ್ಲಿ ವರದಿ ಒಪ್ಪಿಸಬಹುದು ಎಂದು ಅವರು ನಿರೀಕ್ಷಿಸಿದಂತೆ ಇತ್ತು. ನಾನು ಆ ಯಾವುದನ್ನೂ ಮಾಡಲಿಲ್ಲ. ಯಾಕೆಂದರೆ ಹೆಡ್ಡಿಗೆ ರಂಗದ ಬಗ್ಗೆ ಮತ್ತು ಅದರ ಸಾಧ್ಯತೆಗಳ ಬಗ್ಗೆ ತಲೆಬುಡ ಗೊತ್ತಿಲ್ಲ ಎಂಬುದನ್ನು ನಾನು ತುಂಬ ಹಿಂದೆಯೇ ಕಂಡುಕೊಂಡಿದ್ದೆ. ಮಿಡಲ್ ಸ್ಕೂಲ್ ಮಕ್ಕಳು ಮಾತಾಡುವಂತೆ ಆಡುವ, ಊರಗಲ ಉದ್ದೇಶರಹಿತವಾಗಿ ನಕ್ಕು ಪಕ್ಕದವರನ್ನ ಬೆಚ್ಚಿಸುತ್ತಿದ್ದ ಅವರು ಬೇರೆಯವರು ನಾಟಕ ಕಟ್ಟಿದ ನಂತರ ತಾವು ತಾವೇ ಬಂದು ಕೂತು ನೋಡಿ ಸೂಚಿಸುತ್ತಿದ್ದ ತಿದ್ದುಪಡಿಗಳು ತಲೆಯನ್ನ ಗೋಡೆಗೆ ಘಟ್ಟಿಸಿಕೊಳ್ಳವಂತೆ ಇದ್ದವು. ನನಗೆ ನನ್ನ ಹಣೆಯ ಬಗ್ಗೆ ವಿಪರೀತ ಕಾಳಜಿ ಇದ್ದದ್ದರಿಂದ ನಾನು ನನ್ನಷ್ಟಕ್ಕೆ ಇದ್ದೆ. ಮತ್ತು ಮಕ್ಕಳಿಗೆ ನಾಟಕದಲ್ಲಿ ನನಗೆ ತಿಳಿದಿರುವ ಸಾಧ್ಯತೆಗಳ ಬಗ್ಗೆ ತಿಳಿಸುತ್ತ ಇದ್ದೆ.

ಆದರೆ ಹೆಡ್ಡು ಸುಮ್ಮನಿರಲಿಲ್ಲ. ಅವರು ಹಿಂದಿನಿಂದ ಕೆಲಸ ಆರಂಭಿಸಿದರು. ಅಂತರಶಿಸ್ತೀಯ ಕೋರ್ಸ್ ಗಳ ಕಮಿಟಿ ಹೆಡ್ ಗೆ ನನ್ನ ವಿರುದ್ಧ ಗೊತ್ತಾಗದಂತೆ ದೂರು ಕೊಟ್ಟರು. ‘ಏನೇನೋ ಅನಗತ್ಯಗಳನ್ನೆಲ್ಲ ಮಾಡಿಸುತ್ತಿದ್ದಾನೆ ವಿಚಾರಿಸಿ..’ ಅಂದರು. ನಾನು ಮುಂದಿನ ವಾರ ಕ್ಲಾಸ್ ತೆಗೆದುಕೊಳ್ಳುತ್ತಿದ್ದ ವೇಳೆ ಕಮಿಟಿಯವರು ಬಂದರು. ನನ್ನನ್ನ ಕ್ಲಾಸಿನಿಂದ ಹೊರಗೆ ಕಳಿಸಿ ನಾಟಕ ಕಲೀತಿದ್ದ ಮಕ್ಕಳಿಂದ ಅಭಿಪ್ರಾಯಗಳನ್ನ ಹೆಕ್ಕಲು ಆರಂಭಿಸಿದರು. ಫಾರ್ಮಾಲಿಟಿಗೆ ಒಂದು ಫಾರ್ಮ್ ತಂದು ಅದರಲ್ಲಿ ಕ್ಲಾಸಿನ ಬಗ್ಗೆ ಆಬ್ಜೆಕ್ಟಿವ್ ಪ್ರಶ್ನೆಗಳನ್ನ ಕೇಳಿ ಉತ್ತರ ಬರೆಸಿಕೊಂಡರು.

ಹುಡುಗ ಹುಡುಗಿಯರು ನಾನು ರಂಗದ ಪಾಠ ಮಾಡುತ್ತಿರುವ ವಿಧಾನ, ಹೇಳಿಕೊಡುತ್ತಿರುವ ತಂತ್ರಗಳು, ವಿನ್ಯಾಸದ ಪರಿಕಲ್ಪನೆ ಮತ್ತು ಕೊಟ್ಟಿರುವ ಸ್ವಾತಂತ್ರದ ಬಗ್ಗೆ ತುಂಬ ಮೆಚ್ಚುಗೆಯಿಂದ ಮಾತಾಡಿದ್ದು ನಂತರ ನನಗೆ ಗೊತ್ತಾಯಿತು. ಕಮಿಟಿಯವರು ಬಾಯಿ ಮುಚ್ಚಿಕೊಂಡು ಹೋದರು.

ಅವರು ಹೋದ ಮೇಲೆ ಸ್ಟೂಡೆಂಟ್ಸ್ ನನ್ನ ಬಳಿ ಬಂದು ‘ಏನಾಯ್ತು ಸರ್..? ಇದೆಲ್ಲ ಏನು ಮತ್ತು ಯಾಕೆ..?’ ಎಂದು ಕೇಳಿದರು.

ನಾನು ನಕ್ಕು ಹೇಳಿದೆ- ‘ಇದೆಲ್ಲ ಕಾಮನ್. ಭಾರತೀಯ ರಂಗಭೂಮೀಲಿ ಎರಡು ತರದ ಶೈಲಿಗಳನ್ನ ಗುರುತಿಸ್ತಾರೆ. ಅದರಲ್ಲಿ ಒಂದು ಕೈಶಿಕೀ ಬಗೆ. ನಾವೀಗ ಮಾಡ್ತಿದ್ದೀವಲ್ಲ ಪ್ರಯೋಗ… ಹಾಗೇ ಇರುತ್ತದೆ. ಶೃಂಗಾರ, ನವಿರುಭಾವ, ಆಲಂಕಾರಿಕ ಅಭಿನಯ ಅಂತ ಇರುತ್ತೆ. ಆದರೆ ಇದಕ್ಕೆ ಹೊರತಾದದ್ದು ಮತ್ತೊಂದು ಇದೆ. ಅದನ್ನ ‘ಆರಭಟೀ..’ ಅಂತ ಕರೀತಾರೆ. ಅದರಲ್ಲಿ ಹೆಚ್ಚು ಗೌಜು, ಗದ್ದಲ, ಮಂತ್ರ ತಂತ್ರ, ಒಟ್ಟಿನಲ್ಲಿ ‘ಅನಾಗರೀಕ’ ರೀತಿ ಇರುತ್ತೆ ಅಂತ ಹೇಳ್ತಾರೆ. ಈಗ ನಡೀತಲ್ಲ… ಅದು ಆರಭಟೀ ಪ್ರಯೋಗ… ಇದರ ಹಿಂದಿರುವ ಶಕ್ತಿ ಯಾವುದು ಅಂತ ನನಗೆ ಗೊತ್ತು.. ನೀವ್ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಕಮಾನ್..’ ಅಂದೆ..


ಎಲ್ಲರೂ ಒಟ್ಟಾಗಿ ನಿಂತು ಮತ್ತೆ ಕೈಮುಗಿದು ‘ಆಂಗಿಕಂ ಭುವನಂಯಸ್ಯ….’ ಆರಂಭಿಸಿದರು. ನಾನು ಹೆಡ್ಡಿನ ಆರಭಟೀ ಬಗ್ಗೆ ಒಳಗೊಳಗೇ ನಗುತ್ತಿದ್ದೆ…