ಚಾಲಕ ಖಾನ್ ಅಲ್ಲಿಂದ ಒಂದು ಗಂಟೆ ಐದು ನಿಮಿಷಗಳ ಪ್ರಯಾಣದಲ್ಲಿ ತಲುಪಿಸಿದ್ದು ನೀರ್ದೇವನ ಪಾದಕ್ಕೆ. ಒಂದು ಬದಿ ಪ್ರಪಾತ ಮತ್ತೊಂದು ಬದಿ ಸಮುದ್ರ… ನಡುವೆ ಈ ನೀರ್ಮಕ್ಕಳ ಕಾಯ್ವ ದೇವನ ಪಳಿಯುಳಿಕೆ. ಸೂರ್ಯ ಮುಳುಗುತ್ತಿದ್ದ, ಬಂದಿದ್ದವರು ವಿಧವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜೋರು ಗಾಳಿ, ತಂಪು ಸಮಯ ಸಮುದ್ರ ನೋಡುತ್ತಾ ಕೂರಲು ಒಂಟಿ ನಿಂತ ಸಣ್ಣ ಬಂಡೆ. ಅದೆಷ್ಟು ಚಂದಿತ್ತು ಅಲ್ಲಿ ಕೂತು ಇಹಪರವನ್ನು ಮರೆತಿದ್ದು. ಸಾಯಂಕಾಲ 6 ಗಂಟೆಯ ನಂತರ ಅಲ್ಲಿ ಇರಲು ಬಿಡುವುದಿಲ್ಲ.
ಕಂಡಷ್ಟೂ ಪ್ರಪಂಚ ಪ್ರವಾಸ ಅಂಕಣದಲ್ಲಿ ಗ್ರೀಸ್‌ ಪ್ರವಾಸದ ಅನುಭವಗಳನ್ನು ಹಂಚಿಕೊಂಡಿದ್ದಾರೆ ಅಂಜಲಿ ರಾಮಣ್ಣ ಬರಹ

ಅವನು ಅಲೆಕ್ಸ್ ನಾನು ಅಥೀನಾ ಎಂದು Mills & Boon ಸರಣಿಯಿಂದ ಕದ್ದಿಟ್ಟೂಕೊಂಡಿದ್ದ ಕನಸು ಕಾಣುತ್ತಿದ್ದ ದಿನಗಳಿಂದ ವರ್ತಮಾನ ಎನ್ನುವ ಹರೆಯದವರೆಗೂ ಗ್ರೀಸ್ ದೇಶವನ್ನು ಒಮ್ಮೆ ಕಂಡು ಬರಬೇಕು ಎನ್ನುವ ಆಸೆ ಬಲವಾಗಿ ಇತ್ತು. ಮನಸು ಇರುವಲ್ಲಿ ಕಾಲ ಮಾಸುವುದಿಲ್ಲ ಎನ್ನುತ್ತೀವಲ್ಲ ಅದಕ್ಕೇ ಇರಬೇಕು ಅವಕಾಶ ಸಿಕ್ಕಿತು. ಹೊರಟು ನಿಂತೆ.

ವಿಮಾನ ನಿಲ್ದಾಣದಿಂದ ಹೊರಬಂದು ಹೋಗಬೇಕಿದ್ದ ಜಾಗಕ್ಕೆ ಬಸ್ಸಿನಲ್ಲಿ ಕುಳಿದೆ. ಅಷ್ಟರಲ್ಲಿ ಐದಾರು ಗಂಟೆಗಳ ಅಥೆನ್ಸ್ ಕಂಡಿದ್ದೆ. ಒಂದು ಗಂಟೆಯ ಕಾಲದಲ್ಲಿ ಕಿಟಕಿಯಿಂದ ಕಂಡ ಅಥೆನ್ಸ್ ಟ್ರಾಫಿಕ್‌ನಲ್ಲಿ 4 ಮುಷ್ಠಿ ಬೆಂಗಳೂರು, ಹವಾಮಾನದಲ್ಲಿ ಕಾಲು ಮುಷ್ಠಿ ಮಡಿಕೇರಿ, ಜನರ ಸ್ವಭಾವದಲ್ಲಿ ಇಪ್ಪತ್ತು ಮೇಲೆ ಇನ್ನೂ ಇಪ್ಪತ್ತು ಮುಷ್ಠಿ ಉತ್ತರ ಭಾರತ, ಸ್ವಚ್ಛತೆ ಮತ್ತು ಪರಿಸರದಲ್ಲಿ ಒಂದಾರು ಮುಷ್ಠಿ ದೆಹಲಿಯ ಹಾಗೆ ಕಂಡಿತು. ಅಂದಹಾಗೆ Athens where roads are used as Canvas ಅಂತಾರೆ ಇಲ್ಲಿ. ನಾಳೆಗಳು ಎಂದೂ ಬೇರೆಯೇ ತಾನೇ, ಇನ್ನೂ ಪ್ರಯಾಣ ದೊಡ್ಡದಿದೆಯಲ್ಲ!

ಬೆಕ್ಕುಗಳು ಅಪಶಕುನ ಎನ್ನುವವರು Greece ಮತ್ತು Israel ಪ್ರವಾಸ ಮಾಡಲಾಗದು. ಎರಡು ಪಾದಗಳ ನಡುವೆ ಅರಿವಿಲ್ಲದಂತೆ ಬಂದು ಕೂರುತ್ತವೆ ರಸ್ತೆ ಭರ್ತಿ ಓಡಾಡುವ ಅವುಗಳು. ಎಲ್ಲೆಲ್ಲೂ ಸಿಗುವ ಮೀನುಗಳನ್ನು ತಿಂದು ದಷ್ಟಪುಷ್ಟತೆ ಎನ್ನುವುದಕ್ಕೆ ರೂಪದರ್ಶಿಗಳಂತೆ ಇರುವ ಮಿಯಾಂವ್‌ಗಳು ಇಷ್ಟ ಪಡುವವರಿಗಂತೂ ಖುಷಿ ಕೊಡುತ್ತವೆ.

Temple of Athena, Acropolis ಇದರ ಬಳಿ ಇರುವ ಕುಕಾಕಿ ಎನ್ನುವ ಏರಿಯಾದಲ್ಲಿ ನಾನು ಉಳಿದುಕೊಂಡಿದ್ದ Constantine ಎನ್ನುವ ಅಪಾರ್ಟ್ಮೆಂಟ್ ಇದ್ದದ್ದು. ಬಾಲ್ಕನಿಯಿಂದ ಆ‍ಯ್ಕ್ರೊಪೊಲಿಸ್‌ನ ಒಂದು ಭಾಗ ಕಾಣುತ್ತಿತ್ತು. ಅಪಾರ್ಟ್ಮೆಂಟಿನಿಂದ ಕೆಳಗಿಳಿದು ಎಡಕ್ಕೆ ತಿರುಗಿ ಅದನ್ನೇ ನೋಡುತ್ತಾ ಏರು ರಸ್ತೆಯಲ್ಲಿ ನಡೆದುಕೊಂಡು ಹೋಗಿ ಎಡಕ್ಕೆ ತಿರುಗಿದರೆ ಟಿಕೆಟ್ ತೆಗೆದುಕೊಳ್ಳುವ ಜಾಗ ತಲುಪುವಂತಿತ್ತು. ಪ್ರವಾಸಿಗರು ಹೀಗೆ ಆ‍ಯ್ಕ್ರೋಪೊಲಿಸ್ ಕಾಣುವಂತಹ ಜಾಗದಲ್ಲಿ ಇರಬೇಕು ಎಂದರೆ ಹೆಚ್ಚಿನ ಹಣ ತೆತ್ತಬೇಕಿರುತ್ತದೆ. ಅದರ ಎದುರೇ ಗ್ರೀಕರ ಪುರಾಣ, ಇತಿಹಾಸ, ವರ್ತಮಾನ ಎಲ್ಲವನ್ನೂ ವಿವರಿಸುವ ವಸ್ತು ಸಂಗ್ರಹಾಲಯ ಇದೆ. 7 ಯೂರೋ ದರದ ಟಿಕೆಟ್ ಕೊಂಡು ಒಳಕ್ಕೆ ಹೋಗಬೇಕು. Acropolis ಬಳಿಯಲ್ಲಿ ಚಿತ್ರ ಬಿಡಿಸಿಕೊಡುವ ಕಲಾವಿದರು, ಫೋಟೋ ತೆಗೆಯುವವರು, ಮೋಸ ಮಾಡುವವರು ಎಲ್ಲರೂ ಸಿಗುತ್ತಾರೆ. ಒಬ್ಬಾಕೆ ತಂತಿಯನ್ನು ತಿರುವಿ ಮುರುವಿ ಗ್ರೀಕ್ ಭಾಷೆಯಲ್ಲಿ ನನ್ನ ಹೆಸರನ್ನು ಮಾಡಿಕೊಟ್ಟಳು. ದಿನವಿಡೀ ಕತ್ತಿಗೆ ತೂಗಿಕೊಂಡಿದ್ದೆ. ಅವಳ ಹೆಸರನ್ನು ನಾ ಕೇಳಲಿಲ್ಲ. ಹೇಗೂ ಇಲ್ಲಿ ಹೆಸರೂ ನನ್ನದಲ್ಲವಲ್ಲ ಎನಿಸಿತು.

ಅಲ್ಲೊಂದು ಟ್ಯಾಕ್ಸಿ ನಿಲ್ದಾಣವಿತ್ತು. Temple of Poseidonಗೆ ಹೋಗಲು ಎಷ್ಟು ರೇಟ್ ಎಂದು ಕೇಳಿದೆ. ಬಸ್ಸಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರಕ್ಕೆ ಹೋದರೆ ಎಷ್ಟು ಹಣ ಆಗುವುದೋ ಅಷ್ಟು ಯೂರೋ ಎಂದು ಹೇಳಿದ. ಉಸಿರು ಸಿಕ್ಕಿಸಿಕೊಂಡು ನಿಂತುಕೊಂಡೆ. ದಾರಿಪಟವನ್ನು ಪರೀಕ್ಷಿಸೋಣ ಎಂದರೆ ನನ್ನ ಬಳಿ ಇಂಟರ್ನೆಟ್ ಇರಲಿಲ್ಲ. ಏನು ಮಾಡೋದು ಎಂದು ಯೋಚಿಸುತ್ತಿರುವಾಗಲೇ ನಾಲ್ಕಾರು ಚಾಲಕರು ಬೇರೆ ಬೇರೆ ದರದಲ್ಲಿ ಕರೆದುಕೊಂಡು ಹೋಗುವುದಾಗಿ ಆಫರ್ ನೀಡುತ್ತಾ ಹೋದರು. ಕೊನೆಗೂ ಒಂದು ಟ್ಯಾಕ್ಸಿ ನನ್ನ ಬಡ್ಜೆಟ್‌ಗೆ ಸರಿ ಹೊಂದಿತು.

ಚಾಲಕ ಖಾನ್ ಅಲ್ಲಿಂದ ಒಂದು ಗಂಟೆ ಐದು ನಿಮಿಷಗಳ ಪ್ರಯಾಣದಲ್ಲಿ ತಲುಪಿಸಿದ್ದು ನೀರ್ದೇವನ ಪಾದಕ್ಕೆ. ಒಂದು ಬದಿ ಪ್ರಪಾತ ಮತ್ತೊಂದು ಬದಿ ಸಮುದ್ರ… ನಡುವೆ ಈ ನೀರ್ಮಕ್ಕಳ ಕಾಯ್ವ ದೇವನ ಪಳಿಯುಳಿಕೆ. ಸೂರ್ಯ ಮುಳುಗುತ್ತಿದ್ದ, ಬಂದಿದ್ದವರು ವಿಧವಿಧ ಭಂಗಿಯಲ್ಲಿ ಫೋಟೊ ತೆಗೆಸಿಕೊಳ್ಳುತ್ತಿದ್ದರು. ಜೋರು ಗಾಳಿ, ತಂಪು ಸಮಯ ಸಮುದ್ರ ನೋಡುತ್ತಾ ಕೂರಲು ಒಂಟಿ ನಿಂತ ಸಣ್ಣ ಬಂಡೆ. ಅದೆಷ್ಟು ಚಂದಿತ್ತು ಅಲ್ಲಿ ಕೂತು ಇಹಪರವನ್ನು ಮರೆತಿದ್ದು. ಸಾಯಂಕಾಲ 6 ಗಂಟೆಯ ನಂತರ ಅಲ್ಲಿ ಇರಲು ಬಿಡುವುದಿಲ್ಲ. ಹೊರಟು ಬರುವಾಗ ಚಾಲಕ ಖಾನ್ ತಿರಮಿಸು ಐಸ್‌ಕ್ರೀಮ್ ತಿನ್ನಲು ಸಲಹೆ ನೀಡಿದ. ಐಸ್‌ಕ್ರೀಮ್ ತಿಂದು ಉಳಿದುಕೊಂಡಿದ್ದ ಜಾಗದ ಸುತ್ತಮುತ್ತಾ ನಡೆದು ಬರುವಾಗ ತಿಳಿದದ್ದು ಎಲ್ಲಾ ಅಂಗಡಿ ಮುಂಗಟ್ಟುಗಳು 8 ಗಂಟೆಗೆ ಬಾಗಿಲು ಹಾಕುವ ವಿಷಯ. ಹೊಟೇಲ್‌ಗಳು 10 ಗಂಟೆಗೆ ‘Door Close’ ಎನ್ನುತ್ತವೆ. ಅಲ್ಲಿ ಟರ್ಕಿ ದೇಶದವರು ನಡೆಸುವ ಅಂಗಡಿಗಳು ಮಾತ್ರ 12 ಗಂಟೆಗಳವರೆಗೂ ತೆರೆದಿರುತ್ತವೆ.

ಮಲಗುವಾಗ ಕೈಯಲ್ಲಿ ಹಿಡಿದಿದ್ದ ಪುಸ್ತಕ ಡಾ.ವಿರೂಪಾಕ್ಷ ದೇವರ ಮನೆಯವರು ಬರೆದಿರುವ ಪುಸ್ತಕ ‘ನೀನು ಒಂಟಿಯಲ್ಲ’. ಕುಡುಕ ತಾಯ್ತಂದೆಯರ ಮಕ್ಕಳು ಅನುಭವಿಸುವ ಯಾತನೆ ಕರುಳಿನ ಕಣ್ಣಲ್ಲಿ ನೀರಾಗಿ ಹರಿಯುತ್ತವೆ. ಹೌದು, ಯಾವ ಊರು ಯಾವ ದೇಶಕ್ಕೆ ಬಂದರೂ, ಅಂತರ್ಜಾಲ etc etc ಹೀಗೆ ಏನೇ ಇದ್ದರೂ ಒಂದಾದರೂ ಕನ್ನಡ ಪುಸ್ತಕವನ್ನು ಜೊತೆಯಲ್ಲಿ ತಂದಿರುತ್ತೇನೆ. ಇಲ್ಲದಿದ್ದಲ್ಲಿ ಎರಡು ದಿನಕ್ಕೆ ಹೋಂ sickness ಆಗಿಬಿಡುತ್ತೆ. ಕನ್ನಡ ಪುಸ್ತಕ, ಅಕ್ಷರಗಳನ್ನು ನೋಡುತ್ತಿದ್ದರೆ ಹೊಟ್ಟೆತೊಳೆಸು ಸ್ವಲ್ಪ ಹದ್ದುಬಸ್ತಿನಲ್ಲಿ ಇರತ್ತೆ. ನಿಜ ಹೀಗೆಲ್ಲಾ ಹೇಳಿದರೆ ‘ಅತೀ ಅತೀ’ ಎನ್ನಿಸದೆ ಇರದು.. ಆದರೆ ಇದು ನನ್ನ ಅನುಭವ. ಎಲ್ಲಾ ಅನುಭವಕ್ಕೂ ಇರುವುದು ಏಕಮುಖವೇ ಎಂದು ಅಲೆದಾಟ ಪಾಠ ಕಲಿಸಿದೆ.

ಅಥೆನ್ಸ್‌ನಲ್ಲಿ ತಿನ್ನಲೇಬೇಕಾದದ್ದು ಎಂದರೆ ಬಕ್ಲಾವ ಮತ್ತು ಖನಾಫೆ ಗಿಬ್ನೆ ಎನ್ನುವ ಸಿಹಿಗಳು (ವೈಯಕ್ತಿಕವಾಗಿ ನನಗೆ ಈ ತಿನಿಸುಗಳು ಇಸ್ರೇಲಿನಲ್ಲಿ ಹೆಚ್ಚು ಸ್ವಾದಿಷ್ಟ ಎನಿಸಿತು) ಮತ್ತು koulouri ಅಂತ ಎಳ್ಳು ಮೆತ್ತಿ ಹ್ಯಾಂಡ್ ಬ್ಯಾಗ್ ರೂಪದಲ್ಲಿ, ಕೆಂಡದಲ್ಲಿ ಸುಟ್ಟ ಬ್ರೆಡ್. ಅದರೊಳಗೆ ನಮಗೆ ಬೇಕಾದ ತರಕಾರಿ ಅಥವಾ ಮಾಂಸ ಹಾಕಿ ಬೇಕೆನಿಸಿದ ಮಸಾಲೆ ಬೆರೆಸಿ ಕೊಡುತ್ತಾರೆ. ಚೆನ್ನಾಗಿತ್ತು. €2.5 ಇದರ ಬೆಲೆ. ಬೆಳಗೆದ್ದು ಎಳ್ಳು ಜೀರಿಗೆ ಬೆಳೆಯೋಳಿಗೆ ಸಲಾಮು ಹಾಕಿ ಹೊರಟಿದ್ದು ಆಕಾಶದೇವನ ಸ್ಥಳಕ್ಕೆ.

Zeus ಗ್ರೀಕರ ಪುರಾಣದಲ್ಲಿ ಆಕಾಶ ದೇವ. ಅವನಿಗೆ ದೇವಸ್ಥಾನವಿತ್ತು. ಈಗ ಅದು ಪಳಿಯುಳಿಕೆ. ನಿಂತು ಫೋಟೋ ತೆಗೆಸಿಕೊಳ್ಳಲು ಇರಿಸಿರುವ ವಿಗ್ರಹ. ಅದರ ಗೇಟ್‌ನಲ್ಲಿ ಸಿಕ್ಕಿದ್ದು ಮತ್ತೊಬ್ಬ ಖಾನ್. ಈತ ತನ್ನನ್ನು ಆಸ್ಟ್ರೇಲಿಯಾದಲ್ಲಿ ಹುಟ್ಟಿರುವ ಗ್ರೀಕ್ ಎಂದು ಪರಿಚಯಿಸಿಕೊಂಡ. 20ವರ್ಷಗಳ ಹಿಂದೆ ನುಸುಳುಕೋರನಾಗಿ ಇಲ್ಲಿಗೆ ಬಂದಿದ್ದಾನೆ. “Zeus ದೇವರನ್ನು ನಂಬಿ ಬಂದೆ. ಅವನೇ ನನ್ನ ತಂದೆ ಎನ್ನುತ್ತಾನೆ”. Zeus Temple ಮುಂದೆ ಹರ್ಕ್ಯುಲಸ್‌ನ ಪೋಷಾಕು ಧರಿಸಿ ಹೊಟ್ಟೆ ಪಾಡು ನೋಡಿಕೊಳ್ಳುತ್ತಿದ್ದಾನೆ.

ಹಾಂ, ಹಿಂದಿನ ದಿನ ಆಕ್ರೋಪೊಲಿಸ್‌ನ ಬಳಿ ಸಿಕ್ಕಿದ್ದವ ಮುನೀರ್, 39 ವಯಸ್ಸಿನವ, 19 ವರ್ಷಗಳ ಹಿಂದೆ ಬಾಂಗ್ಲಾ ದೇಶದಿಂದ ನುಸುಳುಕೋರ (illegal immigrant) ಆಗಿ ಈ ದೇಶಕ್ಕೆ ಬಂದೆ ಎಂದು ಹೇಳಿಕೊಂಡ. ಸಮುದ್ರದ ಮೂಲಕ ಹಡಗಿನ housekeeping ಗುಂಪಿನಲ್ಲಿ ಪ್ರಯಾಣಿಸಿ, ಹಾಗೇ ಮುಂದಕ್ಕೆ ಬಂದು ಅಥೆನ್ಸ್ ತಲಪಿದನಂತೆ. ಅವನ ದೇಶದಲ್ಲಿ ತಂದೆ ತಾಯಿ ಕುಟುಂಬ ಇದೆ. ಫೋನ್ ಮಾಡಲು ಆಗೋಲ್ಲ. ಪದೇ ಪದೇ sim ಬದಲಿಸುತ್ತಾನೆ. Email ರೀತಿಯ ಸೌಲಭ್ಯ ಹೊಂದಲು ಸಾಧ್ಯವಿಲ್ಲ. ಯಾವುದೇ ದಾಖಲೆಗಳು ಇಲ್ಲ, ಅದಕ್ಕೇ ಇವನಿಗೆ ಹಿಂದಿರುಗಿ ಹೋಗಲು ಆಗೋಲ್ಲ. ಇಲ್ಲಿಯೇ ಸಣ್ಣ ಪುಟ್ಟ ಸಾಮಾನು ಮಾರಿಕೊಂಡು, ಅಂಗಡಿಯೊಂದರ ಪಡಸಾಲೆಯಲ್ಲಿ ಮಲಗಿ ಜೀವನ ನಡೆಸುತ್ತಿದ್ದಾನೆ. ಮನಸ್ಸು ಚುರ್ ಅಂತು. ಅದಕ್ಕೆ 3 ಯೂರೋ ಕೊಟ್ಟು ಆತನ ಬಳಿಯಲ್ಲಿ ತಲೆಗೆ ಹಾಕಿಕೊಳ್ಳುವ ತಾಮ್ರದ ಬ್ಯಾಂಡ್ ಒಂದನ್ನು ಕೊಂಡೆ. “ಈ ಮಾರಾಟದಿಂದ ಬರುವ ದುಡ್ಡು ಸಾಕಾಗುತ್ತಾ?” ಎನ್ನುವ ನನ್ನ ಪ್ರಶ್ನೆಗೆ ಅವನು ಕೇಳಿದ್ದು “ಒಬ್ಬನಿಗೆ ಇನ್ನೆಷ್ಟು ಬೇಕು” ಹೂಂ, ನಿಜ, ಉಸಿರಾಡುವುದೂ ಬದುಕು ಆಗಿರಬಲ್ಲುದು ತಾನೆ?!

ಒಬ್ಬಾಕೆ ತಂತಿಯನ್ನು ತಿರುವಿ ಮುರುವಿ ಗ್ರೀಕ್ ಭಾಷೆಯಲ್ಲಿ ನನ್ನ ಹೆಸರನ್ನು ಮಾಡಿಕೊಟ್ಟಳು. ದಿನವಿಡೀ ಕತ್ತಿಗೆ ತೂಗಿಕೊಂಡಿದ್ದೆ. ಅವಳ ಹೆಸರನ್ನು ನಾ ಕೇಳಲಿಲ್ಲ. ಹೇಗೂ ಇಲ್ಲಿ ಹೆಸರೂ ನನ್ನದಲ್ಲವಲ್ಲ ಎನಿಸಿತು.

Polygnotou Street ಎನ್ನುವ ಸೊಟ್ಟಂಪಟ್ಟ ದೊಡ್ಡ ಗಲ್ಲಿಯಲ್ಲಿ ತುಂಬಾ ಹೋಟೆಲುಗಳಿವೆ. ಕೂರಲು ಅಲ್ಲಲ್ಲಿ ಜಗಲಿಗಳೂ ಇವೆ. ಸುಮ್ಮನೆ ಕೂತಿದ್ದೆ. ಎಡಕ್ಕೆ ನೋಡಿದಾಗ Melina Mecouri Foundation Museum ಎನ್ನುವ ಬೋರ್ಡ್ ಕಣ್ಣಿಗೆ ಬಿತ್ತು. ಮ್ಯೂಸಿಯಂಗಳಿಗೆ ಹೋಗುವುದು ನನ್ನಿಷ್ಟದ ಪ್ರವಾಸ. ಮೊದಲೇ ಪತ್ತೆ ಮಾಡಿ ಬರೆದಿಟ್ಟುಕೊಂಡಿರುತ್ತೇನೆ. ಆದರೆ ಈ ಮ್ಯೂಸಿಯಮ್ ಬಗ್ಗೆ ಮಾಹಿತಿ ಎಲ್ಲೂ ಸಿಕ್ಕಿರಲಿಲ್ಲ. ಉತ್ಸಾಹ ಓಡಿ ಬಂತು. ಝರ್ ಅಂತ ಎದ್ದು ಅಲ್ಲಿನ ಬಾಗಿಲ ಬಳಿಗೆ ಹೋದೆ. ಒಳಗೆ ಹೋಗಲು ಟಿಕೆಟ್ ದರ €2 ಅಂತಿತ್ತು. ಹಣ ಇರಲಿಲ್ಲ. Card ನಲ್ಲಿ ಕೊಡಲೇ ಎಂದು ಕೇಳಿದೆ. ಇಲ್ಲಿಗೆ ಪ್ರವಾಸಿಗರು ಬರುವುದೇ ಕಡಿಮೆ. ಎರಡೇ ಯುರೋಗೆ ಯೋಚನೆ ಮಾಡಬೇಡ. ಒಳಗೆ ಬಾ ಎಂದು, ಉಚಿತವಾಗಿ ಸಂಗ್ರಹಾಲಯ ತೋರಿಸಿ, ಗ್ರೀಕ್ ಭಾಷೆಯ ಚಿತ್ರಪುಸ್ತಿಕೆ ಒಂದನ್ನು ಉಡುಗೊರೆ ಕೊಟ್ಟು, ಫೋಟೋಗಾಗಿ ನಕ್ಕು ಬೀಳ್ಕೊಟ್ಟಳು ಕ್ಯಾಥೆರಿನ್.

Melina Mecouri ಮೂಲತಃ ರಂಗನಟಿಯಾಗಿದ್ದವಳು. ತನ್ನ ಸೌಂದರ್ಯದಿಂದಲೇ ಗ್ರೀಕ್ ಚಿತ್ರರಂಗವನ್ನೂ ತನ್ನದಾಗಿಸಿಕೊಂಡಿದ್ದವಳನ್ನು ಬಣ್ಣಬಣ್ಣದ ಗಾಳಿಮಾತುಗಳೂ ಸುತ್ತಿಕೊಂಡಿದ್ದವು. ಆಶ್ರಯರಹಿತ ಮಕ್ಕಳಿಗಾಗಿ ಸಂಸ್ಥೆಯನ್ನು ಕಟ್ಟಿ, ಸಾಕಷ್ಟು ಸಮಾಜಮುಖಿ ಕೆಲಸಗಳನ್ನು ಮಾಡಿ ಸೈ ಎನಿಸಿಕೊಂಡಿದ್ದವಳು 80ರ ದಶಕದಲ್ಲಿ ಮಂತ್ರಿಯಾಗಿದ್ದಳು. ಇನ್ನೂ ಕಣ್ಣು ಬಿಟ್ಟಿರದ ಪುರಾತತ್ವ ಶಾಸ್ತ್ರದ ಮಹತ್ವ ತಿಳಿದು ಆ ಶಾಖೆಯ ಮಂತ್ರಿಮಂಡಲವನ್ನು ಅಭಿವೃದ್ಧಿಪಡಿಸಿದ Melina Mecouriಯನ್ನು ಈ ದಿನ ಗ್ರೀಸ್‌ನ ಪುರಾಣ, ಇತಿಹಾಸಗಳು ಜಗತ್ತನ್ನು ಸೆಳೆಯುತ್ತಿವೆ ಎಂದರೆ ಆಕೆಯೇ ಕಾರಣ ಎಂದು ನೆನೆಯುತ್ತಾರೆ ಅಲ್ಲಿನ ಕ್ಷೇತ್ರ ಪರಿಣಿತರು. ಆಕೆ ತೀರಿಕೊಂಡ ಸುಮಾರು ವರ್ಷಗಳ ಕಾಲ ಈಗ ಸಂಗ್ರಹಾಲಯ ಇರುವ ಅವಳ ಮನೆ ಖಾಲಿ ಬಿದ್ದಿತ್ತಂತೆ. ನಂತರ ಆಕೆಯ ಸಹೋದರರು ಅವಳ ಸಾಧನೆಯನ್ನು ಜನ ನೆನೆಯಲಿ ಎನ್ನುವ ಉದ್ದೇಶದಿಂದ ಈ ಮ್ಯೂಸಿಯಮ್ ಮಾಡಿದ್ದಾರೆ. ಇಲ್ಲಿನ ಆದಾಯವೆಲ್ಲಾ ಆಕೆ ಮಾಡುತ್ತಿದ್ದ ಸಮಾಜ ಸೇವೆಗೆ ವಿನಿಯೋಗಿಸಲಾಗುತ್ತಿದೆ.

ಡಿಮಿಟ್ರಿಸ್ ಎನ್ನುವ ಚಾಲಕ ಟ್ಯಾಕ್ಸಿಯಲ್ಲಿ ಊರು ಸುತ್ತಿಸುವಾಗ ತೋರಿಸಿದ್ದು ಗ್ರೀಸ್ ದೇಶದ ಅಧ್ಯಕ್ಷರ ಮನೆ. ಅವರ ಮನೆಯ ಮುಂದೆ ಗಂಟೆಗೊಮ್ಮೆ ನಡೆಯುತ್ತೆ Changing of Guards. ಬಿಸಿಲು ಚಳಿ ಮಳೆಯಲ್ಲಿ ಅಲ್ಲಾಡದೆ ಸಿಡುಕು ಮೋರೆಯಲ್ಲಿ, ಭಾರವಾದ ಶೂಜ಼್ ಮತ್ತು ದಪ್ಪವಿರುವ ಖಾಕಿ ಸಮವಸ್ತ್ರ ಹಾಗೂ ಉದ್ದ ಇರುವ ಉಣ್ಣೆ ಟೊಪ್ಪಿಗೆಯನ್ನು ಹಾಕಿಕೊಂಡು ನಿಂತಿರಬೇಕಾದ ಯುವಕರನ್ನು ನೋಡಿದಾಗ ಈಗಿನ ಕಾಲಘಟ್ಟದಲ್ಲಿ ಇಂತಹ ಪದ್ಧತಿಗಳು ಯಾವ ಸುಖಕ್ಕೆ ಇದಕ್ಕೇನು ಅರ್ಥ ಎನ್ನಿಸುತ್ತೆ ಆದರೆ ಪ್ರವಾಸೋದ್ಯಮ ಎಂದರೆ ಚಿತ್ರರಂಗದ ಹಾಗೆ, ತಾಯಿ ಕೂಸಿಗೆ ಎದೆ ಹಾಲು ಕುಡಿಸುವ ಸಹಜ ಕ್ರಿಯೆಯನ್ನೂ ವೈಭವೀಕರಿಸಬೇಕು ಆಗಲೇ ಲಾಭ.

ಅಥೆನ್ಸ್‌ನ Philoppapau Hill ಇಲ್ಲಿ ಪ್ರತೀ ವರ್ಷ ಮೇ ತಿಂಗಳಿನಿಂದ ಸೆಪ್ಟೆಂಬರ್‌ವರೆಗೂ ಪ್ರತೀ ಬುಧವಾರದಿಂದ ಶುಕ್ರವಾರ ರಾತ್ರಿ 9.30ರವರೆಗೂ ಹಾಗೂ ಶನಿವಾರ ಮತ್ತು ಭಾನುವಾರಗಳಂದು ರಾತ್ರಿ 10.30ರವರೆಗೂ ಆ ದೇಶದ ಜಾನಪದ ಸಂಗೀತ, ನೃತ್ಯ, ನಾಟಕ ಇವುಗಳ ಪ್ರದರ್ಶನ ಇರುತ್ತದೆ. ವಿಶೇಷ ಎಂದರೆ ಪ್ರತೀ ಪ್ರದರ್ಶನದಲ್ಲೂ 75 ಹೊಸ ಕಲಾವಿದರು ಇರುತ್ತಾರೆ. ಒಬ್ಬ ಕಲಾವಿದನಿಗೆ ಒಂದೇ ಅವಕಾಶ. ಕಲಾ ತರಬೇತಿ ಶಿಬಿರಗಳೂ ನಡೆಯುತ್ತವೆ ಎನ್ನುವ ಮಾಹಿತಿಯನ್ನು ನೀಡಿದ್ದು ಚಾಲಕ ಮಾರ್ಗದರ್ಶಿ ಡಿಮಿಟ್ರಿಸ್. ನಾನಲ್ಲಿದ್ದ ಅವಧಿ ಬೇರೆಯದು ಹಾಗಾಗಿ ಇದರ ಅನುಭವ ಆಗಲಿಲ್ಲ.

ಅಥೀನಾ ದೇವತೆಗೆ ತೋರುವ ಗೌರವವಾಗಿ 6ನೆಯ ಶತಮಾನದಲ್ಲಿ ಆರಂಭವಾಯ್ತು Panathenaic Games ಅರ್ಥಾತ್ ಈಗಿನ ಒಲಂಪಿಕ್ಸ್ ಕ್ರೀಡೆಗಳು. ಜಗತ್ತಿನ ಅತೀ ಪುರಾತನ ಕ್ರೀಡಾಂಗಣ Panathenaic Stadium ಇಲ್ಲಿದೆ. ವಿಶೇಷತೆ ಎಂದರೆ ಸಂಪೂರ್ಣ ಕ್ರೀಡಾಂಗಣ, ನೆಲಹಾಸು, ಕುಳಿತುಕೊಳ್ಳಲು ಮಾಡಿರುವ ಜಗಲಿ ಎಲ್ಲವೂ ಅಮೃತಶಿಲೆಯದ್ದು. ಅದರ ಎದುರು ಒಲಂಪಿಕ್ಸ್ ನೆನಪಿನಲ್ಲಿ ಪ್ಲಾಸ್ಟಿಕ್‌ನಲ್ಲಿ ಮಾಡಿರುವ ಆಧುನಿಕ ಶಿಲ್ಪವೊಂದು ಇದೆ. ಮುಂದೆ ಕಂಡಿದ್ದು ಅಥೆನ್ಸ್‌ನ Syntagma square. ಹೊಟ್ಟೆ ತುಂಬಿಸಿಕೊಂಡು ಅತ್ತಿತ್ತ ನೋಡುತಿರು, ಅತ್ತು ಹೊರಳಾಡದೆ ಎಂದುಕೊಳ್ಳುತ್ತಿರುವಾಗ ತೆರೆದುಕೊಂಡಿದ್ದು ಮತ್ತೊಂದು ಮಾಹಿತಿಪೂರ್ಣ ಅನುಭವ.

Falun Dafa (Falun Gong) ಇದೊಂದು ಅಧ್ಯಾತ್ಮದ ಮಾರ್ಗ. ಚೀನಾ ದೇಶದ್ದು. ಸತ್ಯ, ಕರುಣೆ ಮತ್ತು ಸಹಿಷ್ಣುತೆ ಇದರ ಮೂಲಭೂತ ತತ್ವ. 1992ರಲ್ಲಿ Master Li Hongzhi ಎನ್ನುವವರು ಆರಂಭಿಸಿದ ಈ ಪಂಥವನ್ನು ಚೀನಾ ದೇಶದ ಕಮ್ಯುನಿಸ್ಟ್ ಸರ್ಕಾರ ಮೊದಲಿನಿಂದಲೂ ವಿರೋಧಿಸುತ್ತಿದೆ. ಕೇವಲ ಏಳು ವರ್ಷಗಳಲ್ಲಿ ನೂರು ಮಿಲಿಯನ್ ಜನರು ಈ ಮಾರ್ಗದ ಅನುಯಾಯಿಗಳಾಗಿದ್ದರು ಎನ್ನಲಾಗುತ್ತದೆ.

ಜುಲೈ 1999ರಲ್ಲಿ ಚೀನಾ ದೇಶದ ಸರ್ಕಾರ ಈ ಮಾರ್ಗದವರನ್ನು ನಾಶ ಮಾಡಲು ನಿರ್ಧರಿಸಿ ಅವರಿಂದ ಉದ್ಯೋಗ, ಮನೆ ಸವಲತ್ತುಗಳನ್ನು ಕಿತ್ತುಕೊಂಡು ಗೃಹಬಂಧನದಲ್ಲಿ ಇರಿಸಲಾಗುತ್ತಿತ್ತು. ಇದರ ವಿರುದ್ಧ ಬೇರೆ ದೇಶಗಳಲ್ಲಿನ ಈ ಪಂಥದ ನಂಬಿಕಸ್ಥ ಜನ, ಚೀನಿಯರು, ಅಲ್ಲದವರು Falun Dafaವನ್ನು ಬೆಂಬಲಿಸಲು ತಮ್ಮದೇ ಸಂಘಟನೆ ಮಾಡಿಕೊಂಡಿದ್ದಾರೆ. ಗ್ರೀಸ್ ದೇಶದಲ್ಲಿ ಅವರದ್ದೇ ಒಂದು music band ಮಾಡಿಕೊಂಡಿದ್ದಾರೆ. ಅದರ ಹೆಸರು The Europian Tian Guo Marching Band.

Syntagma squareನಲ್ಲಿ ಹೀಗೆ ಮಾರ್ಚ್ ಮಾಡುತ್ತಿದ್ದರು. ಅವರ ತಂಡದ ನಡುವೆ ತೂರಿಕೊಂಡು ಮಾತನಾಡಿಸುತ್ತಾ ನಾನೊಂದಷ್ಟು ದೂರ ನಡೆದೆ. ವೀಡಿಯೋ, ಫೋಟೊ ಎಲ್ಲಾ ತೆಗೆದುಕೊಂಡೆ. ಆ ದಿನ Falun Dafa ನೆನಪಾದಾಗಲೆಲ್ಲಾ ‘ಮರೆಯಬೇಡ ಮನವೆ ನೀನು ಹರಿಯ ಚರಣವಾ….. ಅರುಣ, ಕಿರಣ ಚರಣ ಶರಣ ಪಾತಕ ಪಾವನಾ…’ ಎನ್ನುವ ದಾಸರ ಸಾಲುಗಳನ್ನು ಗುನುಗಿಕೊಳ್ಳುತ್ತಿದ್ದೆ. ಕಾರಣವೇ ತಿಳಿಯಲಿಲ್ಲ. ವಿನಾಕಾರಣವೂ ಒಂದು ಕಾರಣವೇ ತಾನೆ? ಬೆಳಿಗ್ಗೆ ಬೇಗ ಏಳಬೇಕು ಮತ್ತೆಲ್ಲೋ ಹೋಗಬೇಕಿದೆಯಲ್ಲಾ… (ಸಶೇಷ)