ತುಳಿತಕ್ಕೆ ಒಳಗಾದ ಜನ ಸಮುದಾಯಗಳಲ್ಲಿ ಅರಿವಿನ ದೀಪ ಹಚ್ಚುವ, ನ್ಯಾಯಬದ್ಧವಾದ ಜೀವಿಸುವ ಹಕ್ಕುಗಳನ್ನು ಕೇಳುವ ಹೋರಾಟಗಳಿಗೆ ಅವರನ್ನು ಅಣಿಮಾಡುವ ಉದ್ದೇಶದಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳನ್ನು ಮುನ್ನಡೆಸುವ ಸಾಮೂಹಿಕ ನಾಯಕತ್ವದ ಹೊಣೆಯನ್ನು ಕವಿ ಸಿದ್ಧಲಿಂಗಯ್ಯ ಅವರು ಸಮರ್ಥವಾಗಿಯೇ ನಿರ್ವಹಿಸಿದ್ದರು.
ಡಾ. ಸಿದ್ಧಲಿಂಗಯ್ಯ ಅವರ ಕುರಿತು ಲೇಖಕ ಕೆ.ವೈ. ನಾರಾಯಣ ಸ್ವಾಮಿ ಬರೆದ ಲೇಖನ.

 

ಕವಿ ಸಿದ್ಧಲಿಂಗಯ್ಯ ತೀರಿಕೊಂಡಿದ್ದಾರೆ. ಕನ್ನಡ ಕಾವ್ಯಕ್ಕೆ ಗುಡುಗಿನ ಸಪ್ಪಳವನ್ನು ಹಾಗೂ ಮಿಂಚಿನ ಶಕ್ತಿಯನ್ನು ಪರಿಚಯಿಸಿದ ಏಕಲವ್ಯ ಪ್ರತಿಭೆ ಈಗ ವಿರಮಿಸಿದ್ದಾರೆ. ಕನ್ನಡ ಕಾವ್ಯ ಭಾಷೆಯ ಶತಮಾನಗಳ ಮೈಲಿಗೆಯನ್ನು ತೊಳೆದವರು ಎಂಬ ಕೃತಜ್ಞತೆಯನ್ನು ಹೊತ್ತು ಬೆಳದಿಂಗಳ ಬೆಟ್ಟವನ್ನು ಹತ್ತಿ ಕಾಲದೂರಿನ ಕಣಿವೆಯಲ್ಲಿ ಮರೆಯಾಗಿದ್ದಾರೆ.

ಸಿದ್ಧಲಿಂಗಯ್ಯ ಅವರು ಮಾಗಡಿ ತಾಲೋಕಿನ ಹಳ್ಳಿಯ ದಲಿತ ಕುಟುಂಬದಲ್ಲಿ ಹುಟ್ಟಿ ಬೆಂಗಳೂರಿನ ಸ್ಲಮ್ಮಿನಲ್ಲಿ ಬಾಲ್ಯ ಮತ್ತು ಯೌವನವನ್ನು ಕಡು ಬಡತನದಲ್ಲಿ ಕಳೆದವರು. ಸ್ವಾತಂತ್ರ್ಯಾನಂತರದಲ್ಲಿ ಹುಟ್ಟಿದ ಮೊದಲ ತಲೆಮಾರಿನ ದಲಿತ ಯುವಕರಲ್ಲಿ ಪವಾಡವೆಂಬಂತೆ ಸಾವಿರದಲ್ಲಿ ಯಾರೋ ಒಬ್ಬರು ಅಕ್ಷರ ಕಲಿತವರಲ್ಲಿ ಕವಿ ಸಿದ್ಧಲಿಂಗಯ್ಯನವರೂ ಒಬ್ಬರು. ಎಪ್ಪತ್ತರ ದಶಕ ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಮಹತ್ವದ ಕಾಲಘಟ್ಟ.  ಸ್ವಾತಂತ್ರ್ಯಾನಂತರದ ಭಾರತದ ಪ್ರಜಾಪ್ರಭುತ್ವದಲ್ಲಿ ಸಂವಿಧಾನ ನೀಡಿದ್ದ ಭರವಸೆಗಳು ಕಣ್ಮುಂದೆಯೇ ಹುಸಿಯಾಗುವುದನ್ನು ನೋಡಿ ಸಹನೆಯ ಕಟ್ಟೆ ಒಡೆದ ಕಾಲ. ಕೆಳ ಮತ್ತು ತಳ ಸಮುದಾಯಗಳ ಮೊದಲ ತಲೆಮಾರಿನ ಅಕ್ಷರಸ್ಥ ಯುವಜನರಲ್ಲಿ ತಮ್ಮ ಸಮುದಾಯಗಳಿಗೆ ಜಾತಿಯಾಧಾರದಲ್ಲಿ ನಡೆಯುತ್ತಿರುವ ವಂಚನೆಗಳು ಅರಿವಿಗೆ ಬಂದ ಕಾಲ.

ದಲಿತ ಸಮುದಾಯಗಳು ಅನುಭವಿಸುತ್ತಿರುವ ಅನ್ಯಾಯಗಳನ್ನು ಅರ್ಥಮಾಡಿಕೊಳ್ಳಲು ಆಗ ಅಂಬೇಡ್ಕರ್, ಮಾರ್ಕ್ಸ್‌, ಲೋಹಿಯ ಪೆರಿಯಾರ್ ಹಾಗೂ ಕುವೆಂಪು ಅವರ ಚಿಂತನೆಗಳು ನೆರವಾದವು. ಹಾಗೆ ಅರ್ಥಮಾಡಿಕೊಂಡು ಅಸ್ಪೋಟಿಸಿದ ಕಾಲ. ಇಂತಹ ಸನ್ನಿವೇಶದಲ್ಲಿ ನಡೆದ ಬೂಸ ಚಳುವಳಿ ಸೃಷ್ಟಿಸಿದ ದಲಿತ ಸಮುದಾಯದ ಕಲ್ಚರಲ್ ಐಕಾನ್ ಸಿದ್ಧಲಿಂಗಯ್ಯ ಅವರು.

ಹೊಲೆಮಾದಿಗರ ಹಾಡಿನಿಂದ ಸಿದ್ಧಲಿಂಗಯ್ಯ ಕವಿಯಾಗಿ ಕರ್ನಾಟಕದಲ್ಲಿ ಹೆಸರಾದರು. ನಾಡಿನ ಮೂಲೆ ಮೂಲೆಯಲ್ಲಿ ಸಿದ್ಧಲಿಂಗಯ್ಯನವರು ಕವಿತೆಯ ಸಾಲುಗಳು ಬೀದಿಗಳಲ್ಲಿ ಹುತ್ತಬಿಟ್ಟು ಹೊರಬಂದ ನಾಗರಗಳ ಹಾಗೆ ಹರಿದಾಡಿ ಪ್ರತಿಭಟಿಸುವ ಹೊಸ ವಿಧಾನವನ್ನು ಪರಿಚಯ ಮಾಡಿಕೊಟ್ಟವು. ಕನ್ನಡ ಭಾಷೆಯ ಇತಿಹಾಸದಲ್ಲಿ ಹೀಗೆ ಒಂದೇ ಸಂಕಲನದಿಂದ ಕವಿ ಪ್ರಸಿದ್ಧಿಯನ್ನು ಪಡೆದರೆ ಕಾವ್ಯವು ಲಕ್ಷಾಂತರ ಜನರನ್ನು ತಲುಪಿದ್ದು ಇದೇ ಮೊದಲು. ತುಳಿತಕ್ಕೆ ಒಳಗಾದ ಜನ ಸಮುದಾಯಗಳಲ್ಲಿ ಅರಿವಿನ ದೀಪ ಹಚ್ಚುವ, ನ್ಯಾಯಬದ್ಧವಾದ ಜೀವಿಸುವ ಹಕ್ಕುಗಳನ್ನು ಕೇಳುವ ಹೋರಾಟಗಳಿಗೆ ಅವರನ್ನು ಅಣಿಮಾಡುವ ಉದ್ದೇಶದಿಂದ ಹುಟ್ಟಿಕೊಂಡ ದಲಿತ ಸಂಘರ್ಷ ಸಮಿತಿ ಮತ್ತು ಬಂಡಾಯ ಸಾಹಿತ್ಯ ಸಂಘಟನೆಗಳನ್ನು ಮುನ್ನಡೆಸುವ ಸಾಮೂಹಿಕ ನಾಯಕತ್ವದ ಹೊಣೆಯನ್ನು ಕವಿ ಸಿದ್ಧಲಿಂಗಯ್ಯ ಅವರು ಸಮರ್ಥವಾಗಿಯೇ ನಿರ್ವಹಿಸಿದ್ದರು.

ದೇವರಾಜ ಅರಸು ಅವರ ಆಡಳಿತ ಹಿಂದುಳಿದ ವರ್ಗಗಳಿಗೆ ನೀಡಿದ ರಾಜಕೀಯ ಪ್ರಾತಿನಿಧ್ಯ ಹಾಗೂ ದಲಿತ ಚಳುವಳಿಯ ಪ್ರಭಾವಗಳು ಕರ್ನಾಟಕದಲ್ಲಿ ಜಾತಿಗಳ ಅಹಂಕಾರವನ್ನು ಮುರಿಯುವುದು ಖಚಿತವೆಂದು ಅಂದಿಗೆ ಕಣ್ಣು ಬಿಡುತ್ತಿದ್ದ ನಾವೆಲ್ಲಾ ನಂಬಿದ್ದೆವು. ಆದರೆ ಸಾವಿರಾರು ವರ್ಷಗಳಿಂದ ಅಧಿಕಾರವನ್ನು ತಮ್ಮ ಹಿಡಿತದಲ್ಲಿಟ್ಟುಕೊಳ್ಳುವ ಪಟ್ಟುಗಳನ್ನು ಕಲಿತ ಮೇಲ್ವರ್ಗಗಳು ಈಗ ಚಳವಳಿಗಳನ್ನು ಹೊರಗಿಂದ ಎದುರಿಸಲಾರದೆ ಒಳಗಿಂದ ಬೇರುಕೊಯ್ಯುವ ಕಾರ್ಯಕ್ಕೆ ಕೈ ಹಾಕಿದವು. ವಿದ್ಯಾವಂತ ಶೋಷಿತರನ್ನು ತಲುಪಿದ್ದ ದಲಿತ ಚಳುವಳಿ ಇನ್ನೊಂದು ದಶಕ ಎಪ್ಪತ್ತರ ಹುಮ್ಮಸಿನಿಂದಲೇ ಮುನ್ನಡೆದಿದ್ದರೆ ಹಳ್ಳಿ ಹಳ್ಳಿಗಳಲ್ಲಿನ ಎಲ್ಲಾ ಶೋಷಿತರನ್ನು ಎಚ್ಚರಿಸುವ ಮೂಲಕ ಅಂಬೇಡ್ಕರ್ ಕನಸಿದ್ದ ದಲಿತ ಪ್ರಭುತ್ವ ಸಾಕಾರವಾಗುವುದು ಸಾಧ್ಯವಿತ್ತು. ಆದರೆ ಆಗಲಿಲ್ಲ. ಹಾಗೆ ಆಗಲು ಸನಾತನಿ ಜಾತಿಗರ ದೂರದೃಷ್ಟಿಯ ಹುನ್ನಾರಗಳು ಬಿಡಲೂ ಇಲ್ಲ. ದಲಿತ ಸಂಘರ್ಷ ಸಮಿತಿಯ ವಿಘಟನೆಯೂ ಕರ್ನಾಟಕ ಸಾಂಸ್ಕೃತಿಕ ಚರಿತ್ರೆಯಲ್ಲಿ ಸೇರಿ ಹೋಯಿತು.

ಸಿದ್ಧಲಿಂಗಯ್ಯನವರು ಆರಂಭದಲ್ಲಿ ರಚಿಸಿದ ಹಾಡುಗಬ್ಬಗಳು ಶೋಷಿತರ ಬದುಕಿನ ಅನೇಕ ಒಳಾವರಣಗಳನ್ನು ಕನ್ನಡ ಕವಿತೆಯ ಲೋಕಕ್ಕೆ ಪರಿಚಯಿಸಿತು. ಮುಖ್ಯವಾಗಿ ಜಾತಿ ಮತ್ತು ಧರ್ಮಾಧಾರಿತವಾಗಿ ನಿರ್ವಹಣೆಗೊಳ್ಳುತ್ತಿರುವ ಪ್ರಭುತ್ವಗಳು ತಳಲೋಕ ಸಮುದಾಯಗಳನ್ನು ಹಿಂಸೆಗೆ ಒಡ್ಡಿರುವ ಮಾದರಿಗಳನ್ನು ರೂಪಕಗಳಾಗಿ ತಮ್ಮ ಕವಿತೆಗಳ ಮೂಲಕ ಅಭಿವ್ಯಕ್ತಿಸಿದರು. ಕನ್ನಡದ ಓದುಗ ಲೋಕ ಸಿದ್ಧಲಿಂಗಯ್ಯನವರ ಕವಿತೆಗಳಲ್ಲಿ ಕಾಣುವ ಆಕ್ರೋಶದ ಹಿನ್ನೆಲೆಯಲ್ಲಿ ಮಡುಗಟ್ಟಿಕೊಂಡ ನಿರಂತರ ದುಃಖ ಮತ್ತು ವಿಷಾದವನ್ನು ಅರ್ಥಮಾಡಿಕೊಂಡಿತ್ತು. ಸಿದ್ಧಲಿಂಗಯ್ಯನವರು ಪ್ರಾರಂಭಿಸಿದ ಜನರ ಆಡುನುಡಿಯ ಹೊಸನುಡಿಗಟ್ಟುಗಳನ್ನು ಕಾವ್ಯವೆಂದು ಪರಿಣಿಸಿದ್ದು ಕನ್ನಡ ಸೃಜನಶೀಲತೆಯು ಪಡೆದುಕೊಂಡ ಮಾನವೀಯತೆಯ ವಿಸ್ತರಣೆಯಾಗಿತ್ತು.

ದಲಿತ ಮತ್ತು ಬಂಡಾಯ ಚಳುವಳಿಗಳು ಎತ್ತಿದ ಸಾಮಾಜಿಕ ನ್ಯಾಯದ ಪ್ರಶ್ನೆಗಳಿಂದ ಎಲ್ಲ ಸಾಮಾಜಿಕ ಜಾತಿಗಳಲ್ಲಿ  ಆತ್ಮಾವಲೋಕನದ ಪ್ರಕ್ರಿಯೆ ಆರಂಭವಾಯಿತು. ಇದರ ಪರಿಣಾಮವಾಗಿ ದಲಿತರಲ್ಲದ ಸಾವಿರಾರು ಯುವ ಜನರು ಕೂಡ ಬಂಡಾಯ ಹಾಗೂ ದಲಿತ ಚಳವಳಿಗಳಲ್ಲಿ ಸಕ್ರಿಯವಾಗಿ ಭಾಗಿಯಾದರು. ಇದು ಅವರಿಗೆ ಒಂದು ಬಗೆಯ ಪ್ರಾಯಶ್ಚಿತದ ಕ್ರಿಯೆಯಾಗಿಯೂ ಕಂಡಿರಬಹುದು. ಆದರೆ ದುರಂತವೆಂದರೆ ಈ ಮಾನವೀಕರಣ ಪ್ರಯೋಗ ಮುಂದುವರೆಯದೇ ಹೋದ ಕಾರಣದಿಂದ ಪ್ರಚಲಿತ ಸಾಮಾಜಿಕ ವಾಸ್ತವವನ್ನು ನಾವು ಎದುರುಗೊಳ್ಳಬೇಕಾದ ಸಂದರ್ಭ ಸೃಷ್ಠಿಯಾಗಿದೆ.

ನಾಡಿನ ಮೂಲೆ ಮೂಲೆಯಲ್ಲಿ ಸಿದ್ಧಲಿಂಗಯ್ಯನವರು ಕವಿತೆಯ ಸಾಲುಗಳು ಬೀದಿಗಳಲ್ಲಿ ಹುತ್ತಬಿಟ್ಟು ಹೊರಬಂದ ನಾಗರಗಳ ಹಾಗೆ ಹರಿದಾಡಿ ಪ್ರತಿಭಟಿಸುವ ಹೊಸ ವಿಧಾನವನ್ನು ಪರಿಚಯ ಮಾಡಿಕೊಟ್ಟವು. 

ಜ್ಞಾನ ಮತ್ತು ಅಧಿಕಾರಗಳನ್ನು ಸ್ವಾತಂತ್ರ್ಯ ಪೂರ್ವದಲ್ಲಿ ನೇರವಾಗಿ ತಮ್ಮ ಅಧೀನದಲ್ಲಿ ಇಟ್ಟುಕೊಂಡು ಸಾಮಾಜಿಕ ಅಸಮಾನತೆಗಳನ್ನು ಪೋಷಿಸಿಕೊಂಡು ಬಂದಿದ್ದ ಪುರೋಹಿತಶಾಹಿ, ಸ್ವಾತಂತ್ರ್ಯಾನಂತರದಲ್ಲಿ ಪರೋಕ್ಷವಾಗಿ ತನ್ನ ಕಾರ್ಯಾಚರಣೆಯನ್ನು ಮುಂದುವರೆಸಿತ್ತು. ಕುವೆಂಪು ಅವರಿಂದ ಉದ್ಘಾಟಿಸಿಲ್ಪಟ್ಟ ಶೂದ್ರ ಮತ್ತು ದಲಿತ ಪ್ರಜ್ಞೆಯ ಜಾಗೃತಿಯ ಪ್ರಕ್ರಿಯೆಯು ದಲಿತ ಮತ್ತು ಬಂಡಾಯ ಚಳವಳಿಗಳಿಂದ ಸೋಷಿಯಲ್ ಆಕ್ಷನ್ ಆಗಿ ಪರಿವರ್ತನೆಗೊಂಡಿತ್ತು. ಈ ಎಚ್ಚರದ ನಡೆಯಿಂದ ಭಯಗೊಂಡ ಸನಾತನವಾದ ರಾಜಕೀಯ ಹಿತಾಸಕ್ತಿಗಳು ಈ ಜಾಗೃತಿ ಪ್ರಸರಣವನ್ನು ತುಂಡುಮಾಡುವ ಸಲುವಾಗಿಯೇ ದಲಿತ ಎಚ್ಚರದ ಮುಖವಾಣಿಯಾಗಿದ್ದ ಸಿದ್ಧಲಿಂಗಯ್ಯ ಅವರನ್ನು ತನ್ನ ತೆಕ್ಕೆಗೆ ಸೆಳೆದುಕೊಂಡಿತ್ತು.  ಪ್ರಭುತ್ವಗಳು ಹಾಗೂ ತಾರತಮ್ಯಗಳನ್ನು ಪೋಷಿಸುವ ಧಾರ್ಮಿಕ ಯಾಜಮಾನ್ಯಗಳು ಹೇಗೆ ಕೆಳವರ್ಗದಲ್ಲಿ ಕಾಣಿಸಿಕೊಳ್ಳುವ ಸೃಜನಶೀಲತೆಯನ್ನು ನಾಶಪಡಿಸುತ್ತವೆ ಎನ್ನುವ ಸಾರ್ವತ್ರಿಕ ಸತ್ಯವನ್ನು ತಮ್ಮ ಏಕಲವ್ಯ ಎನ್ನುವ ನಾಟಕದಲ್ಲಿ ಬಯಲುಗೊಳಿಸಿದ್ದರು. ಆದರೆ ಏಕಲವ್ಯ ನಾಟಕದಲ್ಲಿ ಯಾವ ಶಕ್ತಿಗಳ ವಿರುದ್ಧ ಎಚ್ಚರ ಮೂಡಿಸಲು ಕವಿ ಸಿದ್ಧಲಿಂಗಯ್ಯ ಪ್ರಯತ್ನಿಸಿದ್ದರೋ ಅಂತಹದೇ ಆಧುನಿಕ ರಾಜಕೀಯ ಶಕ್ತಿಗಳ ಕೈಯಲ್ಲಿ ತಾವೇ ಏಕಲವ್ಯನಾಗಿ ಹೋದದ್ದು ಚಾರಿತ್ರಿಕ ವ್ಯಂಗ್ಯವಾಗಿದೆ.

ನಾನು ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಎಂ.ಎ. ಕಲಿಯುವ ಕಾಲಕ್ಕೆ ಸಿದ್ಧಲಿಂಗಯ್ಯವನರು ಕನ್ನಡ ವಿಭಾಗದ ಅಧ್ಯಾಪಕರಾಗಿಯೂ ವಿಧಾನ ಪರಿಷತ್ತಿನ ಸದಸ್ಯರಾಗಿದ್ದರು. ಅವರ ತರಗತಿಗಳಿಂದ ಕಲಿತದ್ದಕ್ಕಿಂತ ಅವರ ಭಾಷಣಗಳಿಂದ ಕಲಿತದ್ದೇ ಹೆಚ್ಚು. ತೊಂಬತ್ತರ ನಂತರದಲ್ಲಿ  ಪ್ರಭುತ್ವ ಮತ್ತು ಪುರೋಹಿತಶಾಹಿಯ ಕುರಿತು ಅವರ ದೃಷ್ಟಿಕೋನ ಬದಲಾಗಿತ್ತು. ಮೇಲ್ವರ್ಗಗಳ ಉದಾರವಾದಿಗಳ ಭಾಷೆಯಲ್ಲಿ ಮಾತನಾಡುವುದನ್ನು ಅವರು ಅಭ್ಯಾಸ ಮಾಡುತ್ತಿದ್ದರು.  ಕವಿತೆಗಳಲ್ಲಿ ಪ್ರೇಮವನ್ನು ಹುಡುಕುತ್ತಿದ್ದರು. ಮಾತಿನಲ್ಲಿ ಹಾಸ್ಯವನ್ನು ಬಳಸುವುದರ ಮೂಲಕ ಕೇಳುಗರನ್ನು ನಗೆಯಲ್ಲಿ ತೇಲಿಸುವ ಲಘುಮಾತಿನ ಶೈಲಿಯನ್ನು ಬೆಳೆಸಿಕೊಂಡಿದ್ದರು. ತಾವು ಹೊಸದಾಗಿ ರೂಪಿಸಿಕೊಳ್ಳುತ್ತಿದ್ದ ವ್ಯಕ್ತಿತ್ವವನ್ನು ನಿಭಾಯಿಸುವ ವಿಧಾನವಾಗಿಯೂ ಹಾಸ್ಯವನ್ನು ಅವರು ಬಳಸಿಕೊಂಡಂತೆ ಕಾಣುತ್ತಿತ್ತು. ಆದರೆ ಸಿದ್ಧಲಿಂಗಯ್ಯನವರ ಬದುಕಿನ ಈ ಸ್ಥಿತ್ಯಂತರಗಳ ನಡುವೆ ಅವರ ಎಪ್ಪತ್ತರ ದಶಕದ ಬರಹಗಳು ಕವಿಯನ್ನು ಮೀರಿ ತಮ್ಮ ಪ್ರಭಾ ವಲಯನ್ನು ವಿಸ್ತರಿಸುತ್ತಾ ಬಂದದ್ದು ಅಚ್ಚರಿಯ ಸಂಗತಿಯಾಗಿದೆ.

ಹೊಲೆಮಾದಿಗರ ಹಾಡಿನ ಸಾಮಾಜಿಕ ವಾಸ್ತವಗಳು ಇಂದಿಗೂ ಕರ್ನಾಟಕದ ಹಳ್ಳಿಗಳಲ್ಲಿ ಜೀವಂತವಿರುವುದು ಪತ್ರಿಕೆಗಳಲ್ಲಿ ವರದಿಯಾಗುವುದನ್ನು ಗಮನಿಸುತ್ತಾ ಬಂದಿದ್ದೇವೆ. ಹೊಸ ತಲೆಮಾರಿನ ಯುವಕರು ಅನ್ಯಾಯವನ್ನು ಪ್ರತಿಭಟಿಸಲು ಇಂದಿಗೂ ಸಿದ್ಧಲಿಂಗಯ್ಯ ಅವರ ಕವಿತೆಗಳಿಂದ ಸ್ಪೂರ್ತಿ ಪಡೆಯುತ್ತಲೇ ಇದ್ದಾರೆ. ಮುಂದಿನ ಕಾಲದಲ್ಲಿಯೂ ಶೋಷಣೆಯ ಜಗತ್ತು ಇರುವವರೆಗೂ ಸಿದ್ಧಲಿಂಗಯ್ಯನವರ ಆರಂಭಿಕ ಕವಿತೆಗಳ ಪ್ರಸ್ತುತತೆ ಹೀಗೆಯೇ ಮುಂದುವರೆಯುವುದರಲ್ಲಿ ಸಂಶಯವಿಲ್ಲ.

ಸಿದ್ಧಲಿಂಗಯ್ಯನವರು ಕಡು ಬಡತನದಿಂದ ಹಿಡಿದು ಅತ್ಯಂತ ಸುಖೀ ಜೀವನದ ಅನುಭವವನ್ನು ಪಡೆದವರು. ಆದರೆ ಅವರ ಸೃಜನಶೀಲ ಶಕ್ತಿಯ ಜೀವ ಕೇಂದ್ರ ಹೊಲಗೇರಿಯ ಬದುಕಿನಲ್ಲಿಯೇ ಇತ್ತು ಎಂಬುದಕ್ಕೆ ಅವರು ತಮ್ಮ ಹಾಸ್ಯಕ್ಕೆ ಹೆಕ್ಕಿತರುತಿದ್ದ ಪ್ರಸಂಗಗಳು ಕೆಳಜಾತಿಗಳ ಆವರಣಕ್ಕೆ ಸಂಬಂಧಿಸಿದ್ದವೇ ಆಗಿರುತ್ತಿದ್ದವು. ಅವರೇ ಬರೆದುಕೊಂಡ ‘ಊರುಕೇರಿ’ ಎಂಬ ಆತ್ಮಕಥನವೂ ಕೂಡ ವ್ಯಕ್ತಿ ವಿಕಾಸದ ಘಟ್ಟಗಳನ್ನು ದಾಟಿ ಕೆಳಜಾತಿಗಳ ಸಾಮುದಾಯಿಕ ಬದುಕಿನ ಸಾಂಸ್ಕೃತಿಕ ದಾಖಲೆಯಾಗಿ ಪರಿವರ್ತನೆಯಾಗಿರುವುದು ಕೂಡ ಇದೇ ಕಾರಣದಿಂದ ಎಂದು ನನಗೆ ಅನ್ನಿಸಿದೆ.

ಎಂಬತ್ತರ ದಶಕದಲ್ಲಿ ತಮ್ಮ ಸಂಶೋಧನೆಗಾಗಿ ಜನಪದ ಸಂಸ್ಕೃತಿಯನ್ನು ಅಭ್ಯಾಸ ಮಾಡಿದ ಬಳಿಕ ಅವರು ಜೀವನವನ್ನು ನೋಡುವ ಕ್ರಮ ಬದಲಾಗಿದೆ ಎನ್ನುವುದಕ್ಕೆ ಅವರ ತೊಂಬತ್ತರ ದಶಕದ ನಂತರದ ಬರಹಗಳಲ್ಲಿ ಸಾಕಷ್ಟು ಪುರಾವೆಗಳು ದೊರೆಯುತ್ತವೆ.

ಸಿದ್ಧಲಿಂಗಯ್ಯನವರ ಬದುಕು ನಡವಳಿಕೆ ಅವರನ್ನು ಪ್ರೀತಿಸಿದ ಗೌರವಿಸಿದ ಅವರ ಗೆಳೆಯರಿಗೆ ಶಿಷ್ಯರಿಗೆ ಒಗಟಿನಂತೆ ಕಂಡಿದ್ದು ನಿಜವಾದರೂ ಅವರ ಒಡನಾಟದಲ್ಲಿ ಯಾರನ್ನು ನೋಯಿಸಿದ ಒಂದು ಘಟನೆಯೂ ನನಗೆ ನೆನಪಿಗೆ ಬರುತ್ತಿಲ್ಲ. ಎಂಬತ್ತರ ದಶಕದ ನಂತರ ಕಾಲೇಜುಗಳಿಗೆ ಬಂದ ನನ್ನಂತವರಿಗೆ ಸಿದ್ಧಲಿಂಗಯ್ಯನವರು ತೆಗೆದುಕೊಂಡು ಹಲವು ನಿರ್ಣಯಗಳು ನಿರಾಶೆಗೊಳಸಿದ್ದವು. ನನ್ನ ವಾರಿಗೆಯ ಅನೇಕ ಬರಹಗಾರರು ಅವರನ್ನು ಕಟುವಾಗಿ ವಿಮರ್ಶೆ ಮಾಡಿದ್ದು ಉಂಟು. ಆ ಸುದ್ದಿ ಅವರ ಕಿವಿಗೆ ಬಿದ್ದರೂ ಅದನ್ನು ಅವರು ಕಹಿಯಾಗಿ ಸ್ವೀಕರಿಸಿದವರಲ್ಲ. ಮತ್ತೆ ಭೇಟಿಯಾದಾಗ ಅದೇ ಆಪ್ತತೆಯಿಂದ ಕುಶಲ ಕೇಳುತ್ತಿದ್ದರು.


ಅವರ ಈ ನಿರ್ಲಿಪ್ತ ಮನಸ್ಥಿತಿ ಇಂದಿಗೂ ನನ್ನನ್ನು ಕಾಡುತ್ತಿರುವ ಸಂಗತಿಯಾಗಿದೆ. ಬೈದವರನ್ನು ಬಂಧುಗಳೆಂದು ಪರಿಗಣಿಸುವ ಬಸವಣ್ಣನವರ ತತ್ವವನ್ನು ನಿಷ್ಠೆಯಿಂದ ಪಾಲಿಸಿದಂತಿತ್ತು ಅವರ ನಡವಳಿಕೆ. ಎದುರಿಗೆ ಸಿಕ್ಕ ಎಲ್ಲರನ್ನೂ ಪ್ರೀತಿಯಿಂದ  ಮಾತನಾಡಿಸುವ ಮೂಲಕ ಸಂತೈಸುವ ಗುಣವನ್ನು ಮೈಪಡೆದುಕೊಂಡಿದ್ದರು. ದನಿ ಹಾಗೂ ದೇಹಭಾಷೆಯ ಮೂಲಕ ಮಾತುಗಾರಿಕೆಯನ್ನು ಪರ್ಫಾಮೆನ್ಸ್‌ನ ಹಂತಕ್ಕೆ ಎತ್ತರಿಸಿದ ಕೀರ್ತಿ ಸಿದ್ಧಲಿಂಗಯ್ಯ ಅವರಿಗೆ ಅಲ್ಲಬೇಕು. ಸಿದ್ಧಲಿಂಗಯ್ಯನವರ ನಿರ್ಗಮನದಿಂದ ಕನ್ನಡ ಸಾಂಸ್ಕೃತಿಕ ಲೋಕ ಬರಿದಾದರೂ ಅವರ ಕಾವ್ಯ ಮತ್ತು ಬರಹಗಳು ನಮ್ಮ ಮುಂದಿನ ಪಯಣಕ್ಕೆ ಜೊತೆಯಾಗಿ ಬರಲಿವೆ.