ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು ಹೋಲಿಸಿ ನೋಡುವ, ಸಾಮಾನ್ಯದೊಳಗೇ ಇರುವ ಅಸಾಮಾನ್ಯವನ್ನು ಕುರಿತ ಸೂಚನೆಗಳನ್ನು ಮತ್ತಷ್ಟು ಆಳವಾಗಿಸಿ, ಹಿಗ್ಗಿಸಿ ನೋಡುತ್ತ ಸಂತೋಷಪಡುವ ಅವಕಾಶವನ್ನು ಒದಗಿಸುತ್ತವೆ ಕಥೆಗಳು.
ಎ.ಎನ್. ಪ್ರಸನ್ನ ಅವರ ಆಯ್ದ ಕತೆಗಳ ಸಂಕಲನಕ್ಕೆ ಪ್ರೊ. ಓ.ಎಲ್. ನಾಗಭೂಷಣಸ್ವಾಮಿಯವರು ಬರೆದ ಮಾತುಗಳು

 

ಹಿರಿಯ ಕಥೆಗಾರ ಎ.ಎನ್. ಪ್ರಸನ್ನ ಅವರ ಆಯ್ದ ಕಥೆಗಳ ಸಂಕಲನದೊಂದಿಗೆ ಓದುಗನಾಗಿ ನನ್ನ ಕೆಲವು ಮಾತುಗಳನ್ನು ಸೇರಿಸುವ ಅವಕಾಶ ದೊರೆತಿದೆ. ಪ್ರಸನ್ನ ಅವರು ತೋರಿರುವ ಈ ವಿಶ್ವಾಸಕ್ಕೆ ಕೃತಜ್ಞ. ಸುಮಾರು ಐವತ್ತು ವರ್ಷ, 1970 ರಿಂದ 2018ರವರೆಗೆ ಪ್ರಸನ್ನ ಅವರು ಬರೆದ ಕಥೆಗಳಲ್ಲಿ ಹದಿನಾರು ರಚನೆಗಳು ಸೇರಿ ಈ ಸಂಕಲನ ರೂಪುಗೊಂಡಿದೆ. ಪ್ರಸನ್ನ ಅವರ ಕಥೆಗಳನ್ನು ಓದುತ್ತ ಬಂದವರಿಗೆ ಅವರ ಮುಖ್ಯ ಕಥೆಗಳೆಲ್ಲ ಒಂದೆಡೆ ದೊರೆಯುವಂತಾಗಿದೆ, ಓದುಗರು ತಾವು ಮೆಚ್ಚಿದ ಕಥೆಗಳನ್ನು ಮತ್ತೊಮ್ಮೆ ಓದುತ್ತ ಹಿಂದೆ ಓದಿ ಪಟ್ಟ ಸಂತೋಷವನ್ನು ಮರಳಿ ಅನುಭವಿಸುತ್ತ ತಮ್ಮ ಓದಿನ ಅನುಭವವನ್ನು ಮತ್ತೆ ಕೆದಕಿ ನೋಡಿಕೊಳ್ಳುವ ಅವಕಾಶ ದೊರೆತಿದೆ. ಜೊತೆಗೇ ಈ ಸಂಕಲನ ಪ್ರಸನ್ನ ಅವರು ಕಥೆಗಾರರಾಗಿ ಹೇಗೆ ಬೆಳೆದಿದ್ದಾರೆ, ಅವರ ಕಥೆಗಾರಿಕೆಯಲ್ಲಿ ಏನೇನು ಬದಲಾವಣೆಗಳಾಗಿವೆ ಎಂಬಂಥ ಕುತೂಹಲಕ್ಕೂ ಉತ್ತರ ದೊರೆಯುತ್ತದೆ. ಇನ್ನೊಂದು ಸಂಗತಿ ಎಂದರೆ ಕಥೆಗಳನ್ನು ವಿವರವಾಗಿ ಅಭ್ಯಾಸ ಮಾಡುವವರಿಗೆ ಕಳೆದ ಐವತ್ತು ವರ್ಷಗಳ ಕನ್ನಡ ಕಥೆಯ ಒಂದು ಟಿಸಿಲು ಈ ಒಬ್ಬ ಕಥೆಗಾರರಲ್ಲಿ ಹೇಗೆ ಪಲ್ಲವಿಸಿದೆ ಎಂದು ತಿಳಿಯುವ ಅನುಕೂಲ ಒದಗಿದೆ.

ಇದೀಗ ಈ ಕಥೆಗಳನ್ನು ಓದುತ್ತ ಪ್ರಸನ್ನ ಅವರು ಕಥೆಗಳಲ್ಲಿ ಕಟ್ಟಿಕೊಟ್ಟಿರುವ ಲೋಕ ಎಂಥದು ಅನ್ನುವ ಕುತೂಹಲದಿಂದ ಓದಿದೆ. ಈ ಕಥೆಗಳಲ್ಲಿ ನಾವು ನಮ್ಮ ನಿಮ್ಮಂಥ ಸಾಮಾನ್ಯ ಜನರ ಸಾಮಾನ್ಯ ಲೋಕದಲ್ಲಿ ಅಡ್ಡಾಡುತ್ತೇವೆ, ನಮ್ಮ ನಿಮ್ಮಂಥ ಪಾತ್ರಗಳನ್ನೇ ಭೇಟಿಮಾಡುತ್ತೇವೆ. ಪ್ಯಾರಾಸೈಟ್ ಎಂಬ 1973ರಲ್ಲೇ ಬರೆದ ಕಥೆಯಲ್ಲಿ ‘ಇನ್ನೂರು ಮುನ್ನೂರು ಅಡಿ ದೂರದಲ್ಲಿ ತಮ್ಮ ತಮ್ಮಲ್ಲೆ ನಿರತರಾದ ಜನಗಳು, ನೆರಳುಗಳು’ ಎಂಬ ಮಾತು ಗಮನ ಸೆಳೆಯಿತು. ಹಾಗೆಯೇ 2017ರಲ್ಲಿ ರಚನೆಗೊಂಡ ಪ್ರತಿಫಲನ ಕಥೆಯಲ್ಲಿ ‘ತಮ್ಮ ಸ್ವಂತ ಬದುಕಿನ ಕ್ಷೇಮದ ಪರಿಧಿಯ ಆಚೆ ಕಿವಿ-ಕಣ್ಣುಗಳು ಕೆಲಸ ಮಾಡುವುದು ಕಡಿಮೆಯೇ.. ದೈನಂದಿನ ಆಗು-ಹೋಗುಗಳು… ಏನೂ ಉಳಿಸದೆ ಸುಮ್ಮನೆ ಹೀಗೆ ಬಂದು ಹಾಗೆ ಹಾರಿಹೋಗುವಂಥವು’ ಎಂಬ ಮಾತು ಹಿಡಿದು ನಿಲ್ಲಿಸಿತು. ಇದು ದಿನ ನಿತ್ಯದ ಶ್ರೀಸಾಮಾನ್ಯ ಲೋಕದ ಲಕ್ಷಣ ನಿರೂಪಣೆಯಂತಿವೆ. ಲೋಕವೆಂಬ ಪದದ ಅರ್ಥವೇ ‘ನಮ್ಮ ಕಣ್ಣಿಗೆ ಕಾಣುವಷ್ಟು’ ‘ನಮ್ಮ ಕಣ್ಣಳತೆಗೆ ದೊರೆಯುವಷ್ಟು’ ಎಂದಲ್ಲವೇ!

(ಎ.ಎನ್. ಪ್ರಸನ್ನ)

ಈ ಸಾಮಾನ್ಯ ಲೋಕದಲ್ಲಿ ವೈವಿಧ್ಯಮಯ ಜನರಿದ್ದಾರೆ: ಗುಮಾಸ್ತ, ಮಧ್ಯಮದರ್ಜೆ ಅಧಿಕಾರಿ, ಪೋಸ್ಟ್ ಮಾಸ್ಟರು, ಪಾರಿವಾಳ ಸಾಕುವವರ ಲೋಕ, ನಿವೃತ್ತರು, ಪ್ರಿಂಟಿಂಗ್ ಪ್ರೆಸ್ಸಿನ ಮಾಲಕ, ಹೋಟೆಲ್ ಯಜಮಾನ, ಆಟೋ ಡ್ರೈವರ್, ಬಾಂಬೆ ಶೋ ನಡೆಸುವಾತ ಹೀಗೆ… ಒಂದೇ ಥರ ಅನ್ನಿಸುವ ಹೆಂಡತಿಯರ ಪಾತ್ರಗಳು, ಸರಸೂ, ಅಶ್ವಿನಿಯರಂಥ ಧೀರ ತಾಯಂದಿರು, ಸ್ವಾಭಿಮಾನೀ ಮಹಿಳೆಯರು, ಲೋಕದ ಬಗ್ಗೆ ನಿರ್ಭೀತರಾಗಿ ಸಂಬಂಧಗಳನ್ನು ರೂಢಿಸಿಕೊಳ್ಳುವ ನಿಂಗಿಯಂಥ ಗಾರೆ ಕೂಲಿ ಕೆಲಸದವಳು ಇಂಥ ದಿಟ್ಟ ಹೆಣ್ಣುಗಳೂ ಇದ್ದಾರೆ. ಆಯಾ ಕಥೆ ಓದುವಾಗ ಅಲ್ಲಿನ ಸಾಮಾನ್ಯರೆಲ್ಲ ತಮ್ಮ ಇನ್ನೂರಡಿ ಲೋಕದಲ್ಲಿ ಅಸಾಮಾನ್ಯರಾಗಿಯೇ ಕಾಣುತ್ತಾರೆ. ಪರಿಮಿತವಾಗಿರುವ ಲೋಕಾಂತರಂಗದಲ್ಲಿ ಎಲ್ಲರೂ ಅಸಾಮಾನ್ಯರೇ ಅಲ್ಲವೇ! ನಾವು ಸಾಮಾನ್ಯರೆಂದು ಯಾವ ಸಾಮಾನ್ಯರೂ ಒಪ್ಪುವುದೇ ಇಲ್ಲ!

ಪ್ರಸನ್ನ ಅವರ ಕಥೆಗಳ ಲೋಕದ ವಿಶೇಷವಿರುವುದು ಮೂರು ಸಂಗತಿಗಳಲ್ಲಿ ಎಂದು ನನಗೆ ತೋರುತ್ತದೆ. ಮೊದಲನೆಯದು ಒಂದು ಸ್ವಲ್ಪ ಹೀಗೋ ಹಾಗೋ ಹೊರಳಿದರೆ ಸಾಕು, ನಾವು ‘ನಿಜ’ ಅಂದುಕೊಂಡಿರುವುದಕ್ಕಿಂತ ಭಿನ್ನವಾದ ಕಲ್ಪನೆಯ, ಮಾಯೆಯ ಲೋಕಕ್ಕೆ ಹೊಕ್ಕುಬಿಡುತ್ತೇವೆ. ಅದು ನಮ್ಮೊಳಗೆ ಬಚ್ಚಿಟ್ಟುಕೊಂಡಿರುವ ಇನ್ನೊಂದು ಲೋಕ ನಮ್ಮ ಕಣ್ಣೆದುರಿಗೇ ಕಂಡು ಕಾಣುತ್ತಿರುವುದೇ ನಿಜ ಅನಿಸಿಬಿಡುವ ಮಾಯೆಯಂಥ ವಾಸ್ತವ. ಹೊರಗೆ ಕಾಣಿಸಿದಂತೆನಿಸುವ ಒಳಗಿನ ಲೋಕವನ್ನೂ ನಾವು ಯಾವುದನ್ನು ವಾಸ್ತವ ಬದುಕು ಅನ್ನುತ್ತೇವೋ ಅದನ್ನೂ ಸಂದು ಕಾಣದಂತೆ ನೇಯುತ್ತಾರೆ ಪ್ರಸನ್ನ ಅವರು. ಆಲಿಸ್ ಇನ್ ವಂಡರ್ಲ್ಯಾಂಡ್ ಕಥೆಯಲ್ಲಿ ಆಲಿಸ್ ಎಂಬ ಹುಡುಗಿ ಕನ್ನಡಿಯ ಒಳಹೊಕ್ಕು ಇನ್ನೊಂದು ಲೋಕಕ್ಕೆ ಹೊಗುತ್ತಾಳೆ. ಪ್ರಸನ್ನ ಅವರ ಕಥೆಗಳಲ್ಲಿ ಹೋಟೆಲ್ ಕಥೆಯ ಹಾಗೆ ಮಸಾಲೆ ವಾಸನೆಯೊ, ಬಾಂಬೆ ಶೋ ಕಥೆಯ ಹಾಗೆ ಆಟ ತೋರಿಸುವ ಪೆಟ್ಟಿಗೆಯೋ, ನಿನ್ನೆ ಇಂದಿನ ನಡುವೆ ಕಥೆಯಲ್ಲಿನ ಹಾಗೆ ರೂಮಿನೊಳಗೆ ಸುಳಿದಾಡುವ ಗಾಳಿಯೋ, ಮುಂಗಾರು ಕಥೆಯಲ್ಲಿನ ಹಾಗೆ ಹೆಣ ಸಾಗಿಸುವ ವ್ಯಾನು, ಫೋಟೋಗ್ರಫಿಗಳೋ, ಅಪ್ಪ ಮಗ ಕಥೆಯ ಹಾಗೆ ಬಾಗಿಲ ಬಡಿತದ ಸದ್ದೋ.. ಇಂಥ ಏನೋ ಒಂದು ಮಾಮೂಲು ಸಂಗತಿ ಸಾಮಾನ್ಯವು ಅಸಾಮಾನ್ಯ ಮಾಯಾ ಕಲ್ಪನಾಲೋಕಕ್ಕೆ ಕಥೆ ಹೊರಳುವಂತೆ ಮಾಡುವುದು ಕಾಣುತ್ತದೆ.

ಎರಡನೆಯದಾಗಿ ಈ ಅಸಾಮಾನ್ಯ ಮಾಯಾ ಲೋಕದ ವರ್ಣನೆಯಲ್ಲಿ ಪ್ರಸನ್ನ ಅವರ ಭಾಷೆ ಕಾವ್ಯದ ಸ್ಪರ್ಶವನ್ನು ಪಡೆದು ಕಾಮನಬಿಲ್ಲಾಗುತ್ತದೆ. ‘ಪಾರಿವಾಳಗಳು ಕಥೆಯಲ್ಲಿ’ ಬರುವ ಈಜಿನ ವರ್ಣನೆ ನೋಡಿ:

ಮಧ್ಯಾಹ್ನದ ಉರಿ ಬಿಸಿಲಲ್ಲಿ ಕಣ್ಣು ಕುಕ್ಕುವಂತೆ ಮಿರುಗುತ್ತಿದ್ದ ಅಲೆಗಳನ್ನು ಅತ್ತಿತ್ತ ಒತ್ತರಿಸಿ ಈಜಿ ದಡಕ್ಕೆ ಬಂದರೆ ಮೈಗೆಲ್ಲ ರೆಕ್ಕೆ ಮೂಡಿ ಮೇಲೆಲ್ಲೋ ಹಾರಾಡಿದ ಹಾಗೆ. ತೊಟ್ಟಿಕ್ಕುತ್ತಿದ್ದ ನೀರು ನೋಡ ನೋಡುತ್ತಲೆ ಮಾಯವಾಗಿ ಬಿಸಿಲಿನ ಝಳ ಚರ್ಮದೊಳಕ್ಕೆ ನುಗ್ಗಲು ಹವಣಿಸಿ ಚುಚ್ಚುತ್ತಿದ್ದರೂ ಒಳಗೆ ಗೆಲುವಿನ ಲಹರಿ. ಅಂಗಾಲುಗಳಿಗೆ ಕುದಿಯುವ ಮರಳಿನ ಕಚಗುಳಿ.

ಇಂಥ ವರ್ಣನೆಗಳು ಧಾರಾಳವಾಗಿ ಸಿಗುತ್ತವೆ ಈ ಕಥೆಗಳಲ್ಲಿ. ಬರಿಯ ವರ್ಣನೆಗಳಾಗಿಯಷ್ಟೇ ಉಳಿದಿದ್ದರೆ ಇಂಥ ಬರಹ ಕೇವಲ ರುಚಿಯ ಬರವಣಿಗೆಯಷ್ಟೇ ಆಗುತ್ತಿತ್ತು.

‘ನಿನ್ನೆ ಇಂದಿನ ನಡುವೆ’ ಕಥೆಯಲ್ಲಿ ಬರುವ ಈ ವರ್ಣನೆ ನೋಡಿ:

ಮಂಜುಳಾ ಕಣ್ಣು ಹೊಳೆಸಿ ಸಣ್ಣಗೆ ಚಪ್ಪಾಳೆ ತಟ್ಟಿದಳು. ಅವಳ ಹುಬ್ಬಿನ ಮೇಲೆ ಹಬ್ಬ ಮೂಡಿದ್ದು ಕಂಡು ಕೃಷ್ಣಮೂರ್ತಿ ತನಗೇ ತಿಳಿಯದ ಹಾಗೆ ಸಣ್ಣಗೆ ಶಿಳ್ಳೆ ಹಾಕಿದ. ದಿಢೀರನೆ ಇಬ್ಬರ ಕಣ್ಣುಗಳಲ್ಲೂ ಹಠಾತ್ ಹೊಳಪು ಹುಟ್ಟಿ, ಹೊರಗೆ ಇಣುಕಿ, ಗಲ್ಲಕ್ಕಿಳಿದು ನಂತರ ತುಟಿಗಳ ತನಕ ಹಬ್ಬಿ, ನಸುನಗು ಹೊಮ್ಮಿದ್ದು ಯಾವಾಗೆಂದು ಅವರ ಪರಿವೆಗೆ ಬಾರದ ಸಂಗತಿಯಾಗಿತ್ತು.. ಅವರಿಗೆ ಲಭ್ಯವಾಗಿದ್ದ ಆ ರೂಮೊಳಗೆ ಗಾಳಿ ಎಂದಿನಿಂದಲೂ ಇರುವ ದೇಶ-ಪ್ರದೇಶಗಳ ಸಾರವನ್ನು ಹೀರಿಕೊಂಡದ್ದು, ಎಲ್ಲ ಜನ-ಮನದ ಒಳಹೊರಗಿನಲ್ಲಿ ಸುತ್ತಿ ಸುಳಿದು ವಿವಿಧ ಭಾವ ಸ್ತರಗಳ ಬುಡವನ್ನು ಸ್ಪರ್ಶಿಸಿದ್ದು, ನೆಲ-ಜಲಗಳ ಮಿಡಿತವನ್ನು ಅರಿತದ್ದು, ಇತಿಹಾಸದ ಕೋಟೆ-ಕೊತ್ತಲಗಳಲ್ಲಿ ಅಡಗಿದಂಶಗಳನ್ನು ಜೋಪಾನವಾಗಿ ಹೊತ್ತು ತಂದದ್ದು, ಗಿರಿ-ಶಿಖರಗಳೆತ್ತರಕ್ಕೆ ತಲೆ ಎತ್ತಿ ಸಂಭ್ರಮಿಸಿದ್ದು, ಯೋಗಿ-ಭೋಗಿಗಳನ್ನು ಅವರ ನೆಲೆಯಲ್ಲೆ ಕಂಡದ್ದು, ಹಾಡುವವರ ಲಯಕ್ಕೆ ತಲೆದೂಗಿದ್ದು, ನರ್ತಿಸುವರ ಲಾಸ್ಯಕ್ಕೆ ಬೆರಗಾದದ್ದು, ಬಣ್ಣದ ಕುಂಚಗಳ ಅಂಚನ್ನು ಮೃದುವಾಗಿ ನೇವರಿಸಿದ್ದು, ಬನವಾಸಿಗೆ-ಗದಗಿಗೆ ನಮಿಸಿದ್ದು- ಹೀಗೆಯೇ ಇನ್ನಷ್ಟು ಮತ್ತಷ್ಟು, ಮೊಗೆದಷ್ಟು…. ಇವೆಲ್ಲವನ್ನೂ ಪದರು-ಪದರುಗಳಲ್ಲಿ ಒಳಗೊಂಡು ಸುಳಿದಾಡುತ್ತಿತ್ತು ಆ ರೂಮಿನೊಳಗಿನ ಗಾಳಿ. ಇದಕ್ಕೆಲ್ಲ ಸಾಕ್ಷಿ ಅಲ್ಲಿದ್ದ ಕುರ್ಚಿ, ಮೇಜು, ಕಪಾಟು, ಕನ್ನಡಿ, ಬಾಚಣಿಕೆ, ಹೇರ್ ಪಿನ್ನು, ಪೌಡರು ಇತ್ಯಾದಿ ಜೊತೆ ಅಟ್ಟದ ಮೇಲಿನ ತಾತನ ಕಾಲದ ಅಂದು ಇಂದಿಗೆ ಕೊಂಡಿಯಾಗಿದ್ದ ವಸ್ತುಗಳು.

ಆಯಾ ಕಥೆ ಓದುವಾಗ ಅಲ್ಲಿನ ಸಾಮಾನ್ಯರೆಲ್ಲ ತಮ್ಮ ಇನ್ನೂರಡಿ ಲೋಕದಲ್ಲಿ ಅಸಾಮಾನ್ಯರಾಗಿಯೇ ಕಾಣುತ್ತಾರೆ. ಪರಿಮಿತವಾಗಿರುವ ಲೋಕಾಂತರಂಗದಲ್ಲಿ ಎಲ್ಲರೂ ಅಸಾಮಾನ್ಯರೇ ಅಲ್ಲವೇ! ನಾವು ಸಾಮಾನ್ಯರೆಂದು ಯಾವ ಸಾಮಾನ್ಯರೂ ಒಪ್ಪುವುದೇ ಇಲ್ಲ!

ಈ ವರ್ಣನೆ ಮಾತು ಸಾಮಾನ್ಯ ಮನುಷ್ಯರ ಬದುಕಿನ ಸಾಮಾನ್ಯ ಬದುಕಿನ ಪ್ರತಿಯೊಂದೂ ಗಳಿಗೆಯಲ್ಲಿ ಚರಿತ್ರೆ, ಸಂಸ್ಕೃತಿ, ಇಡೀ ವಿಶ್ವದ ವ್ಯಾಪಾರ ಅಡಗಿರುತ್ತದೆ ಅನ್ನುವುದನ್ನು ಸೂಕ್ಷ್ಮವಾಗಿ ತೋರುವಂತಿದೆ. ಇಂಥ ಅಗಾಧ ಸತ್ಯ ಪಾತ್ರಗಳಿಗೆ ಎಷ್ಟೋ ಬಾರಿ ಹೊಳೆಯದಿದ್ದರೂ ಕತೆಗಾರರಿಗೆ, ಅವರ ಕಥನದ ಮೂಲಕ ಓದುಗರಿಗೆ ಹೊಳೆಯುತ್ತದೆ. ನಿನ್ನೆ ಇಂದುಗಳ ನಡುವೆ ಎಂಬ ಈ ಕಥೆ ಸ್ವಲ್ಪ ಇದೇ ಥರದ್ದು ಎಂದು ನನಗೆ ಅನಿಸಿದ ‘ಆ ಊರಿನಲ್ಲಿ’ ಕಥೆಗಿಂತ ಹೆಚ್ಚು ಇಷ್ಟವಾಯಿತು.

ಮೂರನೆಯ ಸಂಗತಿ ಎಂದರೆ ಸಾಮಾನ್ಯ ಜಗತ್ತನ್ನು ವರ್ಣಿಸುವಾಗ ಪ್ರಸನ್ನ ಅವರು ಸಣ್ಣ ಪುಟ್ಟ ವಸ್ತು, ಸಂಗತಿಗಳಿಗೆ ಗಮನಕೊಡುತ್ತ ಅವು ಕಥನದಲ್ಲಿ ಹೊಳೆದು ಕಾಣುವಂತೆ ಮಾಡುತ್ತಾರೆ. ‘ಅಪ್ಪ ಮಗ’ ಕಥೆಯಲ್ಲಿ ಬರುವ ಪೋಸ್ಟ್ ಆಫೀಸಿನ ವರ್ಣನೆ, ಭೇಟಿ ಕಥೆಯಲ್ಲಿ ಶೇಖರನು ಆಫೀಸಿನ ವ್ಯವಹಾರದಲ್ಲಿ ಮುಳುಗಿ ‘ದೊಡ್ಡ ಜನರೇಟರಿನಂತೆ ಕಂಡ’ ಎಂಬ ವರ್ಣನೆ, ‘ಪಾರಿವಾಳಗಳು’ ಕಥೆಯಲ್ಲಿ ಬರುವ ಪಾರಿವಾಳಗಳ ಮತ್ತು ಜನಗಳ ವರ್ಣನೆ, ‘ಹೋಟೆಲ್’ ಕಥೆಯಲ್ಲಿ ಬರುವ ಬೆಳಗಿನ ಜಾವದ ಬಸ್ಸ್ಟಾಂಡಿನ ವರ್ಣನೆ ಇಂಥವು ಪ್ರತಿ ಕಥೆಯಲ್ಲೂ ಓದುಗರಿಗೆ ಎದುರಾಗುತ್ತವೆ.
ಈ ಇಡೀ ಸಂಕಲನದಲ್ಲಿ ನನಗೆ ‘ಪಾರಿವಾಳಗಳು’ ಕಥೆ ಬಹಳ ಇಷ್ಟವಾಯಿತು. ಇದು ಸಣ್ಣಕಥೆಯ ಅವಕಾಶದಲ್ಲಿ ಅಡಗಿ ಕುಳಿತ ಕಾದಂಬರಿ ಅನ್ನಿಸುತ್ತದೆ. ಪಾರಿವಾಳಗಳ ಲೋಕ ಮತ್ತು ಮನುಷ್ಯ ಲೋಕಗಳ ವೈರುಧ್ಯ, ರಂಗಯ್ಯ-ಶಿವಕುಮಾರ್, ರಂಗಯ್ಯ-ಲಕ್ಕವ್ವ, ರಂಗಯ್ಯ-ಮಲ್ಲಪ್ಪ, ರಂಗಯ್ಯ ಶಂಕ್ರು- ರಂಗಯ್ಯ ಹೀಗೆ ಜೋಡಿ ಜೋಡಿಗಳಾಗಿ ಮನುಷ್ಯ ಮನಸಿನ ಹೊರಳು, ಸಿಕ್ಕು, ಗೋಜಲು, ಭಾವಾವೇಶಗಳ ಚಿತ್ರಣ ಮನಸ್ಸು ತುಂಬುತ್ತದೆ. ಮಿಕ್ಕ ಕಥೆಗಳ ಹಾಗೆ ಈ ಕಥೆ ಇನ್ನೂರಡಿಗಳ ಮಿತಿಯನ್ನು ಮೀರಿದ್ದು ಈ ಕಥೆಯಲ್ಲಿ ಓದುಗರಿಗೆ ದೊರೆಯುತ್ತದೆ.

ನನಗೆ ಇಷ್ಟವಾದ ಮತ್ತೊಂದು ಕಥೆ ಹಚ್ಚೆ. ಇದರಲ್ಲಿ ಸಾಮಾನ್ಯವಾಗಿ ನವ್ಯಕಥೆಗಳಲ್ಲಿ ಕಾಣದಂಥ ದುಡಿಮೆಗಾರರ ಲೋಕದ ವರ್ಣನೆ ಇದೆ. ದುಡಿಯುವ ಜನರ ಮನಸ್ಥಿತಿ, ಅವರ ಮನೋಲೋಕ, ಸಂಶಯ, ಅಗಾಧ ಪ್ರೀತಿ, ವಿಶ್ವಾಸ, ನೀತಿಯನ್ನು ಮೀರುವ ಛಾತಿ ಇವೆಲ್ಲವೂ ಸಾವಕಾಶವಾಗಿ ಚಿತ್ರಣಗೊಂಡಿವೆ. ಆಟೋ ಡ್ರೈವರು, ಮನೆ ಕಟ್ಟುವ ಮೇಸ್ತ್ರಿ, ಕೂಲಿಗಳ ಲೋಕ ಇದು. ಆರ್ ಸಿ ಸಿ ಹಾಕುವ ವರ್ಣನೆ, ಟೆಂಟ್ ಸಿನಿಮಾದ ವರ್ಣನೆ, ಹಚ್ಚೆ ಹಾಕುವ ವಿವರ ಇಂಥವು ಮನಸಿನಲ್ಲಿ ಉಳಿಯುತ್ತವೆ. ಇಡೀ ಕಥೆಯಲ್ಲಿ ಅಚ್ಚರಿ ಹುಟ್ಟಿಸುವ ಸಂಗತಿ ಎಂದರೆ. ಗೆಳೆಯರು ಪರಸ್ಪರ ಹೆಸರನ್ನು ಹಚ್ಚೆ ಹಾಕಿಸಿಕೊಳ್ಳುವುದು, ಮತ್ತು ಇಬ್ಬರನ್ನೂ ಬಯಸುವ ನಿಂಗಿ ಜೋಡಿ ಹೂಗಳ ಹಚ್ಚೆ ಹಾಕಿಸಿಕೊಳ್ಳುವುದು ಸಂಕೇತಿಕವಾಗಿ ಚಿತ್ರಣಗೊಂಡರು ಕಥೆಯ ಕೊನೆಗೆ ವಾಸ್ತವವೇ ಆಗುತ್ತದೆ. ನಿಂಗಿಯ ಪಾತ್ರ ಈ ಸಂಕಲನದ ಮಿಕ್ಕ ಪಾತ್ರಗಳಿಗಿಂತ ಬೇರೆಯಾಗಿ ನಿಲ್ಲುತ್ತದೆ. ಇದೂ ಕೂಡ ಕಾದಂಬರಿಯಾಗಿ ಬೆಳೆಯಬಹುದಾದ ಕಥೆ ಅನಿಸುತ್ತದೆ.

ಪ್ರಸನ್ನ ಅವರ ಕಥೆಗಳ ರಚನೆಯಲ್ಲಿ ಸಮಾನವಾದೊಂದು ವಿನ್ಯಾಸವೂ ಕಾಣುತ್ತದೆ. ಸಾಮಾನ್ಯ ಮನುಷ್ಯ ಪಾತ್ರದ ಸಾಮಾನ್ಯ ದಿನಚರಿ ಅರಿವೇ ಆಗದಂತೆ ಮತ್ತೊಬ್ಬ ಮನುಷ್ಯನಿಂದಲೋ ಅಕಸ್ಮಾತ್ ಸಂಭವಿಸುವ ಘಟನೆಯಿಂದಲೋ ಯಾವುದೋ ವಸ್ತುವಿನಿಂದ ಮಾಯಾ ಕಲ್ಪನಾ ಲೋಕಕ್ಕೆ ತಟ್ಟನೆ ಹೊರಳುತ್ತದೆ. ಆ ಪಾತ್ರ, ಕೆಲವೊಮ್ಮೆ ಅದರ ಜೊತೆಗಾರ ಪಾತ್ರ ತರ್ಕಕ್ಕೆ ಮೀರಿದ, ಅವಾಸ್ತವ ಅನಿಸುವಂಥ ಅನುಭವಗಳನ್ನೂ ಸಹಜವಾಗಿ, ಸಲೀಸಾಗಿ ಅನುಭವಿಸುತ್ತಾರೆ. ಬದುಕಿನ ಬಗ್ಗೆ ಮತ್ತೆ ತಮ್ಮ ಬಗ್ಗೆ ಹೊಸದೆನಿಸುವಂಥ ತಿಳಿವು ಪಡೆಯುತ್ತಾರೆ. ಮತ್ತೆ ತಮ್ಮ ಪರಿಚಿತ ವಾಸ್ತವಕ್ಕೆ ಮರಳುತ್ತಾರೆ. ಈ ವಿನ್ಯಾಸಕ್ಕೆ ತಳಹದಿಯಾಗಿ ಕುತೂಹಲ ಕೆರಳಿಸುವ, ಮುಂದೇನು ಎಂದು ಕುತೂಹಲ ಕೆರಳಿಸುವ ‘ಕಥೆ’ಯ ಅಂಶವೂ ಇರುತ್ತದೆ. ಆದರದು ಬಹಳ ಮುಖ್ಯವೇನೂ ಅಲ್ಲ.

‘ಆಗಮನ’ ಕಥೆಯಲ್ಲಿ ಅಪರೂಪದ ತಾಯಿಯೊಬ್ಬಳು ಎದುರಾಗುತ್ತಾಳೆ. ತಾಯಿಯ ವಾತ್ಸಲ್ಯ, ಹೆಣ್ಣಿನ ಮರ್ಯಾದೆಯನ್ನು ಕಾಪಾಡುವ ಧೈರ್ಯ, ಛಲ, ತನ್ನ ಮಗನೇ ಅತ್ಯಾಚಾರಿಯೆಂದು ತಿಳಿದಾಗ ಅವಳಿಗಾಗುವ ಅಸಾಧ್ಯ ನೋವು, ಹತಾಶೆ ಸಿಟ್ಟು ಇವೆಲ್ಲ ಮನಸ್ಸನ್ನು ತುಂಬುತ್ತವೆ. ಪರಿಣತ ಓದುಗರಿಗೆ ‘ಆಗಮನ’ ಕಥೆಯ ಅರ್ಧ ಭಾಗಕ್ಕೆ ಬರುವಷ್ಟು ಹೊತ್ತಿಗೆ ಇದು ಹೀಗೇ ಮುಗಿಯುತ್ತದೆಂಬ ಸುಳಿವು ಸಿಕ್ಕಿಬಿಡುತ್ತದೆ. ರಚನೆಯ ವಿನ್ಯಾಸದ ದೃಷ್ಟಿಯಿಂದ ‘ಪ್ರತಿಫಲನ’ ಕಥೆಯ ನಾಯಕಿ ಕೂಡ ಅಪರೂಪದವಳು. ಅತ್ಯಾಚಾರಕ್ಕೆ ಗುರಿಯಾದವಳೂ ಹೌದು, ಅತ್ಯಾಚಾರದ ವಿಚಾರಣೆ ನಡೆಸುವ ಅಧಿಕಾರಿಯೂ ಹೌದು. ಅವಳ ಖಾಸಗಿ ಬದುಕು, ಊರು, ನೆನಪುಗಳೆಲ್ಲ ಸೇರಿ ಒಳಗೊಳಗೇ ಹೆಣ್ಣಿನ ದೌರ್ಬಲ್ಯವನ್ನು ವಿಚಾರಣೆ ನಡೆಸುವ ಅಧಿಕಾರಿಯಾಗಿ ನಿಷ್ಠುರ ಚತುರ ಅಧಿಕಾರಿಯಾಗಿಯೂ, ತನ್ನ ಮಗಳನ್ನು ಉಳಿಸಿಕೊಳ್ಳುವಾಗ ಹೆಣ್ಣುತನದ ಸ್ವಾತಂತ್ರ್ಯ ಕಾಪಾಡಿಕೊಳ್ಳುವವಳಾಗಿಯೂ, ಅತ್ಯಾಚಾರಿಯ ಮಗಳನ್ನು ತನ್ನ ಮಗಳಿಗೆ ಇವಳು ನಿನ್ನ ಸಹೋದರಿ ಎಂದು ಪರಿಚಯಿಸುವ ತಾಯ್ತನವುಳ್ಳವಳೂ ಆಗಿದ್ದಾಳೆ. ‘ಆಗಮನ’ ಕಥೆಯ ತಾಯಿಯ ಪಾತ್ರಕ್ಕಿಂತ ಸಂಕೀರ್ಣವಾದ, ಮನಸ್ಸು ತುಂಬುವ ಪಾತ್ರವಾಗಿ ಬೆಳೆದಿದ್ದಾಳೆ.

ಪ್ರಸನ್ನ ಅವರ ಈ ಕಥೆಗಳನ್ನು ಓದುತ್ತ ಇವೆಲ್ಲ ದೇಶಾತೀತ ಕಥೆಗಳು ಅನ್ನಿಸುತ್ತವೆ. ಇಲ್ಲಿನ ಯಾವ ಕಥೆಯೂ ನಿರ್ದಿಷ್ಟವಾಗಿ ಇಂಥದೇ ಊರಿನಲ್ಲಿ ನಡೆದವಲ್ಲ. ಇದಕ್ಕೆ ಕಾರಣವಿದೆ. ಏನೆಂದರೆ, ನಾವು ಮಧ್ಯಮವರ್ಗ ಎಂದು ಗುರುತಿಸುವ ವರ್ಗಕ್ಕೆ ಸೇರಿದ, ಸಾಮಾನ್ಯರೆಂಬ ವರ್ಣನಗೆ ಗುರಿಯಾಗುವ ಜನರ ಬದುಕನ್ನು ಕುರಿತ ಕಥೆಗಳು ಇವು. ಎಲ್ಲ ದೇಶದಲ್ಲೂ ಸುಮಾರಾಗಿ ಹೀಗೇ ಇದ್ದೀತು. ಆದರೆ, ಕಾಲ ಮಾತ್ರ ಭಿನ್ನ. ಈ ಸಂಕಲನದ ಮೊದಲ ಎರಡು ಕಥೆಗಳಲ್ಲಿ ಬರುವ ಹೆಣ್ಣು ಪಾತ್ರಗಳಿಗೂ ಕೊನೆಯ ಕಥೆಯಲ್ಲಿ ಬರುವ ಅಶ್ವಿನಿಯ ಪಾತ್ರಕ್ಕೂ ಗಮನಾರ್ಹವಾದ ವ್ಯತ್ಯಾಸಗಳಿವೆ. ಆದರೂ ಈ ಎಲ್ಲ ಕಥೆಗಳು ಈಗ ಬಲು ಮಟ್ಟಿಗೆ ಸುಳಿವು ಉಳಿಸದಂತೆ ಮರೆಯಾಗಿರುವ, ಅಥವಾ ವೇಗವಾಗಿ ಕಣ್ಮರೆಯಾಗುತ್ತಿರುವ ಮಧ್ಯಮವರ್ಗದ ಬದುಕಿನ ವಿವರಗಳಾಗಿ ಕಂಡೀತು.

ಕಳೆದ ಇಪ್ಪತ್ತು ವರ್ಷಗಳಲ್ಲಿ ಮಧ್ಯಮ ವರ್ಗದಲ್ಲೇ ಆಗಿರುವ ಬದಲಾವಣೆಗಳನ್ನು ಕಂಡವರಿಗೆ ಈ ಕಥೆಗಳು ಇಪ್ಪತ್ತನೆಯ ಶತಮಾನದ ಕೊನೆಯ ಮೂರು ದಶಕಗಳ ಶ್ರೀಸಾಮಾನ್ಯ ಬದುಕಿನ ಸಾಹಿತ್ಯಕ, ಕಾವ್ಯಾತ್ಮಕ ದಾಖಲೆಗಳಾಗಿ ಕಾಣಬಹುದು. ಇದು ಕಥೆಗಳ ಮಿತಿಯಲ್ಲ, ಓದುಗರಿಗೆ ದೊರೆಯುವ ಅವಕಾಶ. ಇಂದಿನ ಬದುಕನ್ನು ಅಂದಿನ ಬದುಕನ್ನು, ಇಂದಿನ ಮನೋಧರ್ಮವನ್ನು ಅಂದಿನ ಮನೋಧರ್ಮವನ್ನು ಹೋಲಿಸಿ ನೋಡುವ, ಸಾಮಾನ್ಯದೊಳಗೇ ಇರುವ ಅಸಾಮಾನ್ಯವನ್ನು ಕುರಿತ ಸೂಚನೆಗಳನ್ನು ಮತ್ತಷ್ಟು ಆಳವಾಗಿಸಿ, ಹಿಗ್ಗಿಸಿ ನೋಡುತ್ತ ಸಂತೋಷಪಡುವ ಅವಕಾಶವನ್ನು ಒದಗಿಸುತ್ತವೆ ಈ ಕಥೆಗಳು.

ಪ್ರಸನ್ನ ಅವರು ತಮ್ಮ ಆಯ್ದ ಕಥೆಗಳನ್ನು ಮತ್ತೊಮ್ಮೆ ಓದುವ ನನ್ನ ಪ್ರತಿಕ್ರಿಯೆಯನ್ನು ತಿಳಿಸುವ ಅವಕಾಶ ಒದಗಿಸಿಕೊಟ್ಟಿದ್ದಾರೆ. ಅವರಿಗೆ ಮತ್ತೊಮ್ಮೆ ನಮಸ್ಕಾರ.