ಇಂದು ಕನ್ನಡದ ಹಿರಿಯ ವಿಮರ್ಶಕ  ಕೀರ್ತಿನಾಥ ಕುರ್ತಕೋಟಿಯವರು ನಿಧನ ಹೊಂದಿದ ದಿನ. ೨೦೦೩ ನೇ ಇಸವಿಯಂದು ಇದೇ ದಿನ ಅವರು ತೀರಿಕೊಂಡಿದ್ದರು. ಇನ್ನೊಂದು ಬೇಸರದ ವಿಷಯವೆಂದರೆ ಇದೇ ದಿನದಂದು ಅವರ ಪತ್ನಿ ಸರಸ್ವತಿಯವರೂ ಸಹ ನಿಧನ ಹೊಂದಿದರು.

(ಎ.ಎನ್. ಮುಕುಂದ)

ಅಂದು ನಾನು ಕನ್ನಡದ ಕೀರ್ತಿ ಎಂದೇ ಹೆಸರಾದ ಕೀರ್ತಿನಾಥ ಕುರ್ತಕೋಟಿಯವರ ಮನೆಗೆ ಹೋದಾಗ ಡಿ ಆರ್ ನಾಗರಾಜ್ ಕೀರ್ತಿಯವರ ಬಗ್ಗೆ ಹೇಳಿದ ಮಾತೊಂದು ಪದೇ ಪದೇ ನೆನಪಾಗುತ್ತಿತ್ತು: ಹಸ್ತ ಸಾಮುದ್ರಿಕನ ಮುಂದೆ ಜ್ಯೋತಿಷ್ಯಕ್ಕಾಗಿ ಕೈಗಳು ಚಾಚಿ ನಿಂತಂತೆ ಅಲ್ಲಿ ಕವಿ ಸಮೂಹ ಕಾದು ನಿಂತಿದೆ… ಕುರ್ತಕೋಟಿಯವರು ಬೆಂಗಳೂರಿನ ಅವರ ಬಂಧುಗಳ ಮನೆಯಲ್ಲಿ ನಿಗದಿತ ಸಮಯಕ್ಕೆ ಸರಿಯಾಗಿ ತುಂಬಾ ಉತ್ಸಾಹದಿಂದ ನನ್ನನ್ನು ಎದುರು ನೋಡುತ್ತಿದ್ದರು. ಭೇಟಿಯಾದೊಡನೆ ನನ್ನ ಪ್ರವರ ಬಿಚ್ಚಿಡುವ ಬದಲು ನಾನು ಸ್ವಲ್ಪ ದಿನದ ಹಿಂದೆ ತೆಗೆದಿದ್ದ ಗಿರೀಶ ಕಾರ್ನಾಡರ ಫೋಟೊ ತೋರಿಸಿದೆ.         ನೋಡಿದ ಕೂಡಲೆ ಕೀರ್ತಿಯವರು ನಗುನಗುತ್ತಾ ಖರೇ ಅಂದ್ರು ಗಿರೀಶನಿಗಿಂತ ನಾನ ಹೆಚ್ಚು ಛಂದ ಎಂದರು. ನಾನೊಮ್ಮೆ ಅವರ ಮುಖವನ್ನು ದಿಟ್ಟಿಸಿ ನೋಡಿದೆ. ಮುಖಕ್ಷೌರವೂ ಮಾಡಿಕೊಂಡಿರದ, ಬಾಯಿಂದ ಕವಳದ ರಸ ಒಸರಿಸುತ್ತಿರುವ ಕೀರ್ತಿಯವರಿಂದ ತಮ್ಮ ರೂಪದ ಬಗ್ಗೆ ಬಂದ ಆತ್ಮವಿಶ್ವಾಸದ ಮಾತು ಇದಾಗಿತ್ತು. ನಾನು ಫ಼ೋಟೋ ತೆಗೆಯುವಾಗ ಲೇಖಕರನ್ನು ಮಾತನಾಡಿಸಲು ಸಾಮಾನ್ಯವಾಗಿ ನನ್ನ ಜೊತೆಯಲ್ಲಿರುತ್ತಿದ್ದ ಉಮಾ ಅಂದು ಬಂದಿರಲಿಲ್ಲ. ಹಾಗಾಗಿ ನಾನು ಕೊಂಚ ಆತಂಕದಲ್ಲಿದ್ದೆ. ಆದರೆ ಕೀರ್ತಿಯವರು ಕವಳ ಜಗಿಯುತ್ತ ತಮ್ಮ ಎಂದಿನ ಸಹಜ ಲವಲವಿಕೆಯಲ್ಲಿ ಯಾವ ಅಳುಕಿಲ್ಲದೆ ಕ್ಯಾಮೆರಾ ಎದುರಿಸಿದರು.

(ಎ.ಎನ್. ಮುಕುಂದ ಅವರ ‘ಮುಖಮುದ್ರೆ’ ಪುಸ್ತಕದಿಂದ.ಈ ಪುಸ್ತಕವನ್ನು ನವ ಕರ್ನಾಟಕ ಪುಸ್ತಕದಂಗಡಿಯ ಮಳಿಗೆಗಳಿಂದ ಕೊಳ್ಳಬಹುದು. ಅಥವಾ [email protected] ಈ ಮೇಲ್ ವಿಳಾಸಕ್ಕೆ ಬರೆದು ತರಿಸಿಕೊಳ್ಳಬಹುದು)