ಇಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ.
ಎ.ಎನ್. ಪ್ರಸನ್ನ ಹೊಸ ಕಾದಂಬರಿ “ಅಲೆಗಳು” ಗೆ ಎಂ.ಎಸ್. ಆಶಾದೇವಿ ಬರೆದ ಮುನ್ನುಡಿ

ಎ. ಎನ್. ಪ್ರಸನ್ನ ಅವರ ಕಾದಂಬರಿ ʻಅಲೆಗಳು’, ಮನೋಅಲೆಗಳನ್ನು ಅವುಗಳ ಶಬ್ದ, ವಾಸನೆ ಮತ್ತು ಬಣ್ಣಗಳಲ್ಲಿ ಹಿಡಿಯಲು ಹವಣಿಸುತ್ತದೆ. ಈ ಕಾದಂಬರಿ ನಮ್ಮ ಸಾಮಾಜಿಕ ಸಂದರ್ಭಗಳಲ್ಲಿನ ಪಲ್ಲಟಗಳನ್ನು ದಾಖಲಿಸುತ್ತದೆ ಎನ್ನುವ ಕಾರಣಕ್ಕಾಗಿಯೂ ಮುಖ್ಯ. ಕಾಲದ ಚಲನೆಯನ್ನು ವಸ್ತುನಿಷ್ಠವಾಗಿ ಗ್ರಹಿಸುವುದು ಬಲು ದೊಡ್ಡ ಸವಾಲು. ಗಂಡು ಹೆಣ್ಣಿನ ಸಂಬಂಧವೂ ಸೇರಿದಂತೆ ಹಲವು ಹೊಸ ವಿನ್ಯಾಸಗಳು, ಆಶಯಗಳು ಚಾಲ್ತಿಗೆ ಬರುತ್ತಿರುವ ಕಾಲ ಇದು. ಇವು ಈ ತನಕ ಇದ್ದೇ ಇರಲಿಲ್ಲ ಎಂದಲ್ಲ. ಆದರೆ ಅವು ಒಳದಾರಿಗಳಾಗಿದ್ದವು, ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾದವಾಗಿದ್ದವು, ಅವುಗಳ ಬಗೆಗೆ ಸ್ಪಷ್ಟವಾದ, ಅಧಿಕೃತವಾದ ನಿಲುವು ತಳೆಯುವುದು ಸುಲಭವಾಗಿರಲಿಲ್ಲ. ಗಂಡು ಹೆಣ್ಣಿನ ಸಂಬಂಧದ ಆಯಾಮಗಳಲ್ಲಿ ಹೊಸದೆನ್ನುವುದು, ಇಂದು ಮಾತ್ರ ಘಟಿಸುವುದೆನ್ನುವುದು ಯಾವುದೂ ಇಲ್ಲ, ನಿಜ. ಆದರೆ, ಅವುಗಳನ್ನು ಸಮುದಾಯ ಎದುರಾಗುವ ಮತ್ತು ಒಳಗಾಗುವ ಬಗೆಗಳು ಮಾತ್ರ ಬದಲಾಗುತ್ತಿವೆ. ಈ ಬದಲಾವಣೆಯು ಸಮುದಾಯದ ಸ್ವರೂಪದಲ್ಲಿಯೇ ಬದಲಾವಣೆಗಳನ್ನು ತಂದು ಬಿಡುತ್ತದೆ. ಈ ದೃಷ್ಟಿಯಿಂದ ಈ ಕಾದಂಬರಿ ಕುತೂಹಲಕರವಾಗಿದೆ.

(ಎ.ಎನ್. ಪ್ರಸನ್ನ)

ʻಅಲೆಗಳುʼ ಕಾದಂಬರಿಗೆ ಇತರ ಕೆಲವು ಕೇಂದ್ರಗಳಿವೆ ಎನ್ನುವುದು ನಿಜ. ಆದರೆ ಗಂಡು ಹೆಣ್ಣಿನ ಸಂಬಂಧದ ವಿನ್ಯಾಸವೇ ಇದರ ಮೂಲಕೇಂದ್ರ. ಈ ಕೃತಿಯನ್ನು ಹೀಗೆ ನೋಡುವುದೇ, ನೋಡಬೇಕಾದ್ದೇ ಇದಕ್ಕೆ ಸಲ್ಲಿಸುವ ನ್ಯಾಯ ಎಂದು ನಾನಂತೂ ನಂಬುತ್ತೇನೆ. ಏಕಂದರೆ, ಕಾದಂಬರಿಯ ನಾಯಕ ʻಗೋವಿಂದಪ್ಪ’ನವರನ್ನು ಕೇಂದ್ರವಾಗಿಸಿಕೊಂಡು ಇದನ್ನು ಚರ್ಚಿಸುವ ಸಾಧ್ಯತೆಯೂ ದಟ್ಟವಾಗಿಯೇ ಇದೆ. ಗೋವಿಂದಪ್ಪ ಮಧ್ಯವಯಸ್ಸಿನ ಗಂಡಿನ ತಾಕಲಾಟಗಳು, ಸವಾಲುಗಳು, ತನಗೆ ತಾನೇ ಆರೋಪಿಸಿಕೊಳ್ಳುವ ಮತ್ತು ಅದರಿಂದ ಹೊರಬರಲು ಯತ್ನಿಸುವ ಸಂಗತಿಗಳು, ತನ್ನ ಬದುಕು ಮತ್ತು ವ್ಯಕ್ತಿತ್ವವನ್ನು ತಾನೇ ಮೌಲ್ಯಮಾಪನ ನಡೆಸಿಕೊಳ್ಳಲು ನಡೆಸುವ ಪ್ರಯತ್ನಗಳು ಈ ಎಲ್ಲವನ್ನೂ ಕಾದಂಬರಿ ದಟ್ಟವಾಗಿಯೇ ಚಿತ್ರಿಸುತ್ತದೆ. ಆದರೆ ಈ ಎಲ್ಲ ಪ್ರಕ್ರಿಯೆಯೊಂದಿಗೆ ಅಭಿನ್ನವಾಗಿ ಬೆಸೆದುಕೊಂಡಿರುವ ಗಂಡು ಹೆಣ್ಣಿನ ಪ್ರಶ್ನೆಯು ಕಾದಂಬರಿಯನ್ನು ಇನ್ನೂ ಹೆಚ್ಚು ಸಮಕಾಲೀನಗೊಳಿಸುತ್ತದೆ. ಅದನ್ನೆ ಕೇಂದ್ರವಾಗಿಸಿಕೊಂಡು ಮಿಕ್ಕದ್ದನ್ನು ಅದರ ಅಕ್ಕಪಕ್ಕ ಇಟ್ಟಾಗ ಕಾದಂಬರಿಗೆ ಬೇರೊಂದೇ ಪರಿಪ್ರೇಕ್ಷ್ಯ ಲಭ್ಯವಾಗುತ್ತದೆ.

ಗೋವಿಂದಪ್ಪನವರ ಸಮಾಧಾನಿ, ಸಾಮಾನ್ಯ ಮಧ್ಯಮ ವರ್ಗದ ಕುಟುಂಬದ ಚಿತ್ರಣವು ನಿಧಾನವಾಗಿ ಬಿಕ್ಕಟ್ಟುಗಳನ್ನು ಎದುರಿಸುತ್ತಾ ಹೋಗುವುದು, ಅದಕ್ಕೆ ಗೋವಿಂದಪ್ಪನವರ ಅನಾರೋಗ್ಯ ಮೊದಲ ಕಾರಣವಾಗುತ್ತದೆ. ಸಹಜವಾಗಿಯೇ ಇದು ಆತಂಕ ತಲ್ಲಣಗಳನ್ನು ಸೃಷ್ಟಿಸುತ್ತದೆ. ಸ್ವತಃ ಗೋವಿಂದಪ್ಪನವರಿಗೂ ಇದು ಆತಂಕದ ವಿಷಯವೇ ಆದರೂ ಆತ ಅದನ್ನು ಪಕ್ಕಕ್ಕಿಡಲು ನಡೆಸುವ ಪ್ರಯತ್ನಗಳ ಹಿಂದಿನ ಕಾರಣಗಳನ್ನು ನಾವು ಸುಲಭವಾಗಿ ಊಹಿಸಬಹುದು. ಮನೆಯ ಆರ್ಥಿಕ ಆಧಾರ ಸ್ತಂಭವಾದ ತನಗೇ ಭೀಕರವಾದ ಕಾಯಿಲೆ ಬಂದು ಬಿಟ್ಟರೆ ಎನ್ನುವ, ಭಯಾನಕವಾದ ಕಾಯಿಲೆ ಏನಾದರೂ ಬಂದಿದ್ದರೆ ಅದನ್ನು ಎದುರಿಸುವುದು ಹೇಗೆ ಎನ್ನುವ ಆತಂಕಗಳು ಆತನನ್ನು ಕಾಡುತ್ತಿದ್ದಿರಬೇಕು. ಆದರೆ ಇಂಥ ಹೊತ್ತಿನಲ್ಲೂ ಆತನ ವ್ಯಕ್ತಿತ್ವದ ಮಾನವೀಯ ಗುಣ ಕಣ್ಮರೆಯಾಗದೇ ಉಳಿಯುತ್ತದೆ. ವಿದ್ಯಾ ಎನ್ನುವ ಮಹಿಳೆಗೆ, ಆಕೆ ತನ್ನ ಕೆಲಸದಲ್ಲಿ ಎದುರಿಸುತ್ತಿದ್ದ ಸವಾಲುಗಳನ್ನು ಎದುರಿಸಲು ಬೇಕಾದ ಸಹಾಯ ಮಾಡಲು ಈತ ಸ್ವಇಚ್ಚೆಯಿಂದಲೇ ಮುಂದಾಗುತ್ತಾನೆ. ಆಕೆಯ ಬಗೆಗಿನ ಯಾವ ಆಕರ್ಷಣೆಯೂ ಇಲ್ಲಿಲ್ಲ. ಆಕೆಗಾದರೂ ಯಾರಾದರೂ ತನಗೆ ಸರಿಯಾಗಿ ಕೆಲಸದ ವಿಧಾನವನ್ನು ಹೇಳಿಕೊಟ್ಟರೆ ಸಾಕು ಎನ್ನುವ ಅನಿವಾರ್ಯತೆ. ತನ್ನ ಸುದೀರ್ಘ ವೃತ್ತಿ ಸೇವಾವಧಿಯಲ್ಲಿ ಗೋವಿಂದಪ್ಪನಿಗೆ ಇಂಥ ಸಂದರ್ಭಗಳಲ್ಲಿ ಹುಟ್ಟಬಹುದಾದ ಪುಕಾರುಗಳನ್ನು ಕುರಿತ ಸ್ಪಷ್ಟ ಅರಿವಿದೆ. ಆದರೂ ಆತನೂ ಆಕೆಯೂ ಈ ಸಾಧ್ಯತೆಯನ್ನು ಎದುರಿಸಲು ಮುಂದಾಗುವ ಕ್ರಿಯೆಯೇ ಇಡೀ ಕಾದಂಬರಿಯ ಆಗು ಹೋಗುಗಳನ್ನು ನಿರ್ಧರಿಸುತ್ತದೆ. ಕಷ್ಟದಲ್ಲಿರುವ ಹೆಣ್ಣುಮಗಳೊಬ್ಬಳಿಗೆ ಗಂಡೊಬ್ಬ ಸಹಾಯ ಮಾಡುವುದು ಅವರಿಬ್ಬರ ನಡುವಿನ ಅಫೇರ್ ಎನ್ನುವ ನಿರೀಕ್ಷಿತ ಆಯಾಮವನ್ನು ಬಹುಬೇಗ ಪಡೆದುಕೊಳ್ಳುತ್ತದೆ. ಎರಡೂ ಕುಟುಂಬಗಳಲ್ಲಿ ಅದರಲ್ಲೂ ವಿದ್ಯಾಳ ಕುಟುಂಬದಲ್ಲಿನ ವಿಪ್ಲವಗಳು ಯಾವುದೇ ಮಧ್ಯಮವರ್ಗದ ಕುಟುಂಬದಲ್ಲಿ ತೀರಾ ಸಹಜ. ಆದರೆ ಈ ಸನ್ನಿವೇಶವನ್ನು ಎದುರಿಸುವ ಬಗೆಗಳು ಸ್ಥಾಪಿತ ಚೌಕಟ್ಟುಗಳನ್ನು ಮೀರಲು ಇನ್ನಿಲ್ಲದ ಪ್ರಯತ್ನ ನಡೆಸುತ್ತವೆ. ವಿದ್ಯಾಳ ತಂದೆ ಇದನ್ನು ಆದಷ್ಟು ಸಹಜವಾಗಿಯೇ ನಿಭಾಯಿಸಲು ಪ್ರಯತ್ನಿಸುತ್ತಾರೆ. ಸಾಮಾನ್ಯವಾಗಿ ಅಪ್ಪಂದಿರು ಗಂಡಾಳಿಕೆಯ ರಕ್ಷಕರ ಹಾಗೆ ವರ್ತಿಸುವುದೇ ಹೆಚ್ಚು. ಆದರೆ ಇಲ್ಲಿನ ವಿದ್ಯಾಳ ತಂದೆ ಮಾತ್ರ ವಿವೇಕಿಯ ಹಾಗೆ ವರ್ತಿಸುತ್ತಾರೆ. ಹೆಂಡತಿಗೆ, ನಾವು ಎಲ್ಲವನ್ನೂ ಹಾಗೆ ನೋಡಬಾರದು ಎನ್ನುವ ಬುದ್ಧಿಮಾತನ್ನೂ ಹೇಳುತ್ತಾರೆ. ಆದರೆ ತಾಯಿಯ ಆತಂಕ ಮಾತ್ರ ಕಡಿಮೆಯಾಗುವುದಿಲ್ಲ. ಗೋವಿಂದಪ್ಪ ಮನೆಗೆ ಬಂದಾಗ ಯಾವ ಎಗ್ಗೂ ಇಲ್ಲದೆ ಆಕೆ ತನ್ನ ಮಗಳ ಮತ್ತು ಗೋವಿಂದಪ್ಪನವರ ಸಂಬಂಧವನ್ನು ಕುರಿತು ಲೋಕ ಏನೆಲ್ಲ ಮಾತನಾಡಿಕೊಳ್ಳುತ್ತಿದೆ ಎನ್ನುವ ತನ್ನೊಳಗಿನ ಮಾತನ್ನು ಲೋಕದ ಬಾಯಿಗೆ ತುರುಕಿ ಕೇಳುತ್ತಾಳೆ. ವಿದ್ಯಾ ಕಕ್ಕಾಬಿಕ್ಕಿಯಾದರೆ, ಅಷ್ಟು ಹೊತ್ತಿಗೆ ಬರುವ ತಂದೆ ಸಂದರ್ಭವನ್ನು ಸಂಭಾಳಿಸಲು ನೋಡುತ್ತಾರೆ. ಈ ಪ್ರಕ್ರಿಯೆಯೇ ಪಲ್ಲಟಗಳ ಸೂಚನೆ. ಸಣ್ಣದಾಗಿ ಮನಸ್ಥಿತಿಯಲ್ಲಿ ಆಗುತ್ತಿರುವ ಬದಲಾವಣೆಯೂ ಮುಖ್ಯವೆಂದೇ ನಾವು ಪರಿಗಣಿಸಬೇಕು.

ಈ ಎಲ್ಲವೂ ಗೋವಿಂದಪ್ಪ ಮತ್ತು ವಿದ್ಯಾರಲ್ಲಿ ತರುತ್ತಿರುವ ಆಂದೋಳನದ ಸ್ವರೂಪವೇನು? ಅವರಲ್ಲಿ ಪರಸ್ಪರ ಬಗ್ಗೆ ಇರುವ ಆರ್ದ್ರತೆಗೆ, ಕಾಳಜಿಗೆ ಯಾವ ಹೆಸರು ಕೊಡಬಹುದು? ಲೋಕವೇ ನಿರ್ಧರಿಸಿದ್ದಾದ ಮೇಲೆ ಅದನ್ನು ಬದಲಾಯಿಸುವ ಪ್ರಯತ್ನವು ವ್ಯರ್ಥವೆ? ಆದರೂ ಇಬ್ಬರೂ ತೋರಿಸುವ ಪ್ರಬುದ್ಧತೆ ಅನೇಕ ದುರಂತಗಳನ್ನು ತಪ್ಪಿಸುತ್ತದೆ. ತನ್ನನ್ನು ಕಾಡುವ ಅನಾರೋಗ್ಯದ ಜೊತೆಯಲ್ಲಿಯೇ ಸಮಾಜದ ಅನಾರೋಗ್ಯದ ಬಗೆಗೂ ಇವರಿಬ್ಬರೂ ತಲೆಕೆಡಿಸಿಕೊಳ್ಳಬೇಕಾದ ಸಂದರ್ಭ ಎದುರಾಗುತ್ತದೆ. ಆಫೀಸಿನ ಸಹೋದ್ಯೋಗಿಗಳ ಸಹಜ ಪ್ರತಿಕ್ರಿಯೆಯ ಬಗೆಗೂ ಅವರು ತಲೆಕೆಡಿಸಿಕೊಳ್ಳುವುದಿಲ್ಲ. ಯಾವುದು ಇವರಿಬ್ಬರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡಬಹುದೋ ಅದನ್ನು ಇವರಿಬ್ಬರೂ ಎದುರಿಸುವ ಬಗೆ ಪಲ್ಲಟಗಳನ್ನು ಕುರಿತಂತೆ ನಮ್ಮಲ್ಲಿ ಆಶಾಭಾವನೆಯನ್ನು ಹುಟ್ಟಿಸುತ್ತದೆ. ನಿಜ, ಲೋಕ ಆಕ್ಷೀಪಿಸಬಹುದಾದ ಸಂಬಂಧದ ಸ್ವರೂಪ ಇಲ್ಲಿಲ್ಲ ಎನ್ನುವ ನೈತಿಕತೆ ಇವರ ಘನತೆಗೆ ಕಾರಣವಿರಬಹುದು. ಆದರೆ ಅದಿದ್ದರೂ ಇವರಿಬ್ಬರ ನಡವಳಿಕೆ ಹೀಗೇ ಇರುತ್ತಿತ್ತು ಎನ್ನುವುದಕ್ಕೆ ಸಾಕ್ಷಿಯನ್ನು ಕಾದಂಬರಿಯಲ್ಲಿನ ಇವರಿಬ್ಬರ ಪಾತ್ರ ಚಿತ್ರಣ ಸ್ಪಷ್ಟಪಡಿಸುತ್ತದೆ.

 

ಈ ಎಲ್ಲ ಪ್ರಕ್ರಿಯೆಯೊಂದಿಗೆ ಅಭಿನ್ನವಾಗಿ ಬೆಸೆದುಕೊಂಡಿರುವ ಗಂಡು ಹೆಣ್ಣಿನ ಪ್ರಶ್ನೆಯು ಕಾದಂಬರಿಯನ್ನು ಇನ್ನೂ ಹೆಚ್ಚು ಸಮಕಾಲೀನಗೊಳಿಸುತ್ತದೆ. ಅದನ್ನೆ ಕೇಂದ್ರವಾಗಿಸಿಕೊಂಡು ಮಿಕ್ಕದ್ದನ್ನು ಅದರ ಅಕ್ಕಪಕ್ಕ ಇಟ್ಟಾಗ ಕಾದಂಬರಿಗೆ ಬೇರೊಂದೇ ಪರಿಪ್ರೇಕ್ಷ್ಯ ಲಭ್ಯವಾಗುತ್ತದೆ.

ಮನೆಗೆ ಬಿಡುತ್ತೇನೆ ಸ್ಕೂಟರಿನಲ್ಲಿ ಕೂತ್ಕೊಳಿ ಎಂದು ಗೋವಿಂದಪ್ಪ ಹೇಳಿದಾಗ ಅವರ ಸ್ಕೂಟರಿನಲ್ಲಿ ಹೋಗುವುದು ಸರಿಯೇ ಎನ್ನುವ ಆಲೋಚನೆ ಅವಳನ್ನು ಕಾಡುತ್ತದೆ, ಸುಮ್ಮನೇ ನಿಂತ ಅವಳನ್ನು ಉದ್ದೇಶಿಸಿ “ಕೂತ್ಕೊಳಿ ಪರವಾಗಿಲ್ಲ, ಸುಮ್ನೆ ಯೋಚನೆ ಮಾಡಿದ್ರೆ ಪ್ರಯೋಜನವಿಲ್ಲ” ಎಂದು ಗೋವಿಂದಪ್ಪ ಹೇಳುತ್ತಾರೆ. ಅವಳಿಗೆ ಟ್ಯೂಷನ್ ಮಾಡುತ್ತಿದ್ದುದರ ಬಗ್ಗೆ ಅವರು ಧೃಡವಾಗಿ ಹೇಳಿದಾಗ ಅವಳಲ್ಲೂ ಆತ್ಮವಿಶ್ವಾಸ ಕುದುರುತ್ತದೆ.

ನನ್ನ ಗಮನವಿರುವುದು, ಗಂಡಾಳಿಕೆಯಲ್ಲಿ ಬಿಡುಗಡೆ ಇಬ್ಬರಿಗೂ ಬೇಕು ಎನ್ನುವ ಸತ್ಯವನ್ನು ಈ ಕೃತಿ ಪ್ರತಿಪಾದಿಸುತ್ತಿರುವ ಪರಿಯ ಬಗ್ಗೆ. ಅದಕ್ಕೆ ಬೇಕಾದ ಮನೋತಯಾರಿಯನ್ನು ವಿದ್ಯಾ ಮತ್ತು ಗೋವಿಂದಪ್ಪ ಇಬ್ಬರೂ ನಿಧನಿಧಾನವಾಗಿ ಪ್ರಜ್ಞಾಪೂರ್ವಕವಾಗಿಯೂ ಅಪ್ರಜ್ಞಾಪೂರ್ವಕವಾಗಿಯೂ ಸಾಧಿಸಿಕೊಳ್ಳುತ್ತಾ ಹೋಗುತ್ತಾರೆ. ಅದು ಅವರಿಬ್ಬರ ವೈಯಕ್ತಿಕ ಸಂಗತಿಯೆಷ್ಟೋ ಅಷ್ಟೇ ಅದು ಸಾರ್ವಜನಿಕವಾದುದೂ ಹೌದು. ಲೋಕವನ್ನು ಎದುರಿಸುವ ಮುನ್ನ ತಮ್ಮನ್ನು ತಾವು ಎದುರಿಸಿ, ಆ ಯುದ್ಧವನ್ನು ಕಾದಬೇಕಲ್ಲ, ಅದನ್ನು ಇಬ್ಬರೂ ಮಾಡುತ್ತಾರೆ. ಅದು ಸುಲಭದ್ದಲ್ಲ ನಿಜ. ಆದರೆ ಹೊಸದನ್ನು, ಸಕಾರಣವಾದುದನ್ನು, ನನ್ನ ಆಯ್ಕೆಯಾಗಿರುವುದನ್ನು, ನನ್ನ ಬುದ್ಧಿಭಾವಗಳು ಒಪ್ಪುವುದನ್ನು, ಲೋಕ ಒಪ್ಪದಿದ್ದರೂ ಪಡೆಯಲು ಕಷ್ಟಪಡಬೇಕಾದ ಸಾಮಾಜಿಕ ಚೌಕಟ್ಟು, ಅದನ್ನು ಮೌಲ್ಯವಾಗಿಸಿಕೊಂಡಿರುವ ವಾಸ್ತವ ಎರಡೂ ನಮ್ಮಲ್ಲಿ ಎಂದಿನಿಂದಲೂ ಮಾನವ ನಾಗರಿಕತೆಯ ಸವಾಲೇ ಆಗಿದೆ. ಅದನ್ನು ಮಜಲಿ ಮಜಲಾಗಿಯೇ ನಾವು ಪರಿಹರಿಸಿಕೊಳ್ಳಬೇಕು. ಅದು ಇಬ್ಬಾಯ ಖಡ್ಗದ ದಾರಿ, ವ್ಯಷ್ಟಿ ಮತ್ತು ಸಮಷ್ಟಿ ಎರಡರಲ್ಲೂ ಬಗೆಹರಿಯಬೇಕಾದ ಸಂಗತಿ ಇದು. ಇದನ್ನು ಗೋವಿಂದಪ್ಪ ಮತ್ತು ವಿದ್ಯಾ ಇಬ್ಬರೂ ನಿಭಾಯಿಸುತ್ತಾರೆ. ಗೋವಿಂದಪ್ಪನವರಿಗೆ ಅನಾರೋಗ್ಯವೂ ಒಂದು ಕಾರಣವಿದ್ದಿರಬಹುದು. ಇನ್ನೆಷ್ಟು ಕಾಲವೋ, ಈಗಲಾದರೂ ಸಮಾಜದ ಬಿಸಾತಿಲ್ಲದೆ ಬದುಕಬೇಕಲ್ಲವೆ ಎನ್ನುವ ಮನೋಒತ್ತಾಸೆಯೂ ಇಲ್ಲಿರಬಹುದು. ಅದೇನೇ ಇದ್ದರೂ ತಮ್ಮ ತಮ್ಮ ಕುಟುಂಬಗಳನ್ನು ಹಾಗೆಯೇ ಹೊರಲೋಕವನ್ನು ಎದುರಿಸಲು ಬೇಕಾದ ಮನೋಬೌದ್ಧಿಕ ತಯಾರಿಗೆ ಒಬ್ಬರಿಗೆ ಇನ್ನೊಬ್ಬರು ನೀಡುವ ಬೆಂಬಲ ಮುಖ್ಯವಾದುದು. ಹಾಳಾಗಿ ಹೋಗಲಿ ಎಂದು ಇಬ್ಬರೂ ದೂರ ಸರಿಯುವುದು ಎಷ್ಟು ಹೊತ್ತಿನ ಮಾತು? ಮತ್ತು ಲೋಕ ಬಯಸುವುದಾದರೂ ಇದನ್ನೇ ಅಲ್ಲವೆ?

ಮುಂದೊಂದು ದಿನ ಗೋವಿಂದಪ್ಪನವರು ವಿದ್ಯಾ ಸಿದ್ಧ ಮಾಡಿದ ಫೈಲನ್ನು ಬಾಸ್ ತುಂಬಾ ಮೆಚ್ಚಿಕೊಂಡದ್ದನ್ನು ಹೇಳಿದಾಗ ಇಬ್ಬರಿಗೂ ಆದ ಆನಂದ, ತಮ್ಮ ಪ್ರಯತ್ನವು ಕೈಗೂಡಿದ ಹೆಮ್ಮೆ ಎಲ್ಲವನ್ನೂ ಇಬ್ಬರೂ ಮುಕ್ತವಾಗಿ ಹಂಚಿಕೊಳ್ಳುತ್ತಾರೆ. ಎಲ್ಲಾ ನಿಮ್ಮಿಂದ ಎಂದು ವಿದ್ಯಾ ಹೇಳಿಯೂ ಅಲ್ಲಿ ಹೇಳಬೇಕಾದ ಅಗತ್ಯವಿಲ್ಲ ಎನ್ನುವುದರ ಜೊತೆಗೇ ಮಾತಿಗೆ ಮೀರಿದ್ದು ಇನ್ನೇನೋ ಇದೆ ಎನ್ನುವುದೂ ಇಬ್ಬರ ಅನುಭವಕ್ಕೂ ಬರುತ್ತದೆ. ಇದು ಗುರು ಶಿಷ್ಯರ ಸಂಬಂಧವೋ, ಸಹೋದ್ಯೋಗಿಗಳ ಸಂಬಂಧವೋ, ಹೆಸರಿಲ್ಲದ, ಹೆಸರಿಡಲಾಗದ ಗಂಡು ಹೆಣ್ಣಿನ ಅನುಬಂಧವೋ, ಎಲ್ಲವೂ ಅವರವರ ಭಾವಕ್ಕೆ ಎನ್ನುವಷ್ಟು ಮುಕ್ತವಾಗಿ ಚಿತ್ರಿತವಾಗಿದೆ. ಸುಂದರವಾಗಿ ಅರಳಿದ ಹೂವಿನಷ್ಟು ಸುಂದರ ಈ ಸಂಬಂಧ.

(ಡಾ. ಎಂ.ಎಸ್. ಆಶಾದೇವಿ)

ಲ್ಲಿಂದ ಮುಂದಿನ ಗೋವಿಂದಪ್ಪನವರ ಸಂಬಂಧವು ವಿಸ್ತಾರಗೊಳ್ಳುತ್ತಾ ಹೋಗುತ್ತದೆ. ಅದಕ್ಕೆ ಈ ಸಂಬಂಧ ಎಷ್ಟು ಕಾರಣ ಎನ್ನುವುದು ಕಾದಂಬರಿಯಲ್ಲಿ ಎಲ್ಲೂ ಪ್ರಸ್ತಾಪವಾಗುವುದಿಲ್ಲ. ಆದರೆ, ವೈದ್ಯರ ಹತ್ತಿರ ಹೋದ ಗೋವಿಂದಪ್ಪನವರಿಗೆ ಇನ್ನಿರುವುದು ಎರಡೋ ಮೂರೋ ವರ್ಷವೋ ಎನ್ನುವುದು ತಿಳಿದಾದ ಮೇಲೆ, ಗೋವಿಂದಪ್ಪನವರು ಬಲುಬೇಗ ಅದನ್ನು ಸತ್ಯವಾಗಿ ಒಪ್ಪಿಕೊಂಡದ್ದೇ ಹಕ್ಕಿಯಂತೆ ಹಗುರವಾಗುತ್ತಾ ಹೋಗುವುದು ಮಾತ್ರ ನಮ್ಮಲ್ಲಿ ಬೆರಗನ್ನೂ ಸಂತೋಷವನ್ನೂ ಉಂಟುಮಾಡುತ್ತದೆ. ಸಾವನ್ನು ಘನತೆಯಿಂದ ಒಪ್ಪುವುದು ಹುಲುಮಾನವರಿಗೆ ಅಸಾಧ್ಯ ಎನ್ನುವ ನಮ್ಮ ರೂಢಿಗತ ನಂಬಿಕೆಯನ್ನೇ ಗೋವಿಂದಪ್ಪ ತಿರುವುಮುರುವು ಮಾಡುತ್ತಾರೆ. ಆದಷ್ಟೂ ಸಮಾಜಮುಖಿ ಕೆಲಸಗಳನ್ನು ಮಾಡುತ್ತಾ, ಸ್ಕೂಲಿನ ಹುಡುಗರೊಂದಿಗೆ ಪ್ರತಿನಿತ್ಯ ಕೆಲವು ಸಮಯ ಕಳೆಯುತ್ತಾ ಬದುಕನ್ನು ತಮ್ಮೊಳಗೆ ಆವಾಹಿಸಿಕೊಳ್ಳಲು ಪ್ರಯತ್ನ ನಡೆಸುತ್ತಾ ಹೋಗುತ್ತಾರೆ.

ಕೊನೆಗೂ ಹೇಳಬಹುದಾದ ಮಾತೆಂದರೆ ಇದೊಂದು ವಿಕಾಸಶೀಲ ಪ್ರಕ್ರಿಯೆಯ ಕಾದಂಬರಿ ಎನ್ನುವುದು. ಘನಮಹಿಮರ ವಿಕಾಸ, ಘನತೆಯನ್ನು ಜನಸಾಮಾನ್ಯರಲ್ಲೂ ಗುರುತಿಸುವ ಪ್ರಯತ್ನವು ಇಲ್ಲಿ ನಿರೀಕ್ಷೆಗೂ ಮೀರಿದ ಯಶಸ್ಸನ್ನು ಕಂಡಿದೆ. ಆದ್ದರಿಂದಲೇ ಈ ಕಾದಂಬರಿ ಕನ್ನಡದಲ್ಲಿ ಅಪರೂಪದ ಕಾದಂಬರಿಗಳ ಸಾಲಿಗೆ ಸೇರುತ್ತದೆ. ಮ್ಯಾಜಿಕಲ್ ರಿಯಲಿಸಂ ಪ್ರಸನ್ನ ಅವರಿಗೆ ಬಲು ಆಪ್ತವಾದುದು. ಅದರೊಂದಿಗೆ ವಾಸ್ತವವಾದವನ್ನು ಬೆರೆಸಿಕೊಂಡಂತಿರುವ ಈ ಕಾದಂಬರಿ ಕನ್ನಡಕ್ಕೆ ದಕ್ಕಿದ ಹೊಸ ನೋಟ ಮತ್ತು ನಿಲುವು. ಟಾಲ್ ಸ್ಟಾಯ್ ಮತ್ತು ಕುರುಸೋವಾನಿಂದ ಪ್ರಭಾವಿತವಾದುದು ಎಂದು ಪ್ರಸನ್ನ ದಾಖಲಿಸುತ್ತಾರೆ. ಅದರ ಅಗತ್ಯವೇನೂ ನನಗೆ ಕಾಣಿಸುವುದಿಲ್ಲ. ನಿಜವೆಂದರೆ, ಅವರಿಬ್ಬರಷ್ಟೇ ನನಗೆ ಇಲ್ಲಿ ಲಂಕೇಶರೂ ಕಾಣಿಸುತ್ತಾರೆ! ಕಲಾಪಠ್ಯವೆನ್ನುವುದು, ಹಲವರದ್ದನ್ನು ಒಬ್ಬರು ಬರೆಯುವುದು ಎನ್ನುವ ಸಿದ್ಧಾಂತವೂ ಚಾಲ್ತಿಯಲ್ಲಿ ಇದೆಯಷ್ಟೇ.

ಈ ಕೃತಿಯ ಓದು ನನಗೆ ಕೊಟ್ಟಷ್ಟೇ ಸಂತೋಷವನ್ನು ಎಲ್ಲರಿಗೂ ಕೊಡುತ್ತದೆ ಎನ್ನುವ ನಂಬಿಕೆ ನನಗಿದೆ. ಸದಾ ಕ್ರಿಯಾಶೀಲರಾದ ಪ್ರಸನ್ನ ಅವರ ಈ ಹೊಚ್ಚ ಹೊಸ ಸೃಷ್ಟಿಗಾಗಿ ಅವರನ್ನು ಅಭಿನಂದಿಸುತ್ತೇನೆ.

(ಕೃತಿ: ಅಲೆಗಳು (ಕಾದಂಬರಿ), ಲೇಖಕರು: ಎ.ಎನ್.‌ ಪ್ರಸನ್ನ, ಪ್ರಕಾಶಕರು: ವಸಂತ ಪ್ರಕಾಶನ, ಬೆಲೆ: 175/-)