ನಮ್ಮ ಕೆಲ ಜನ ಎಷ್ಟೊಂದು ವಿಚಿತ್ರವಾಗಿರುತ್ತಾರೆ ಎನ್ನುವುದಕ್ಕೆ ಗೌಸ್ ಮತ್ತು ಖೈರುನ್ನೀಸಾಳ ನಿಶ್ಚಿತಾರ್ಥವೇ ಸಾಕ್ಷಿ. ತನ್ನ ಮಗಳನ್ನು ತಮ್ಮನಿಗೆ ಕೊಡಬೇಕೆಂದು ಗೌಸ್ ಅಕ್ಕ ನಿರ್ಧರಿಸಿದಳು. ಆತನೋ ಗಂಡನಾಗುವ ಸಾಧ್ಯತೆ ಇಲ್ಲದವನು. ಆತನ ನಡಿಗೆ, ಮಾತು ಮುಂತಾದವು ಹೆಂಗಸರ ಹಾಗೇ ಇದ್ದವು. ಅವನ ಸಹವಾಸವೂ ಹೆಣ್ಣುಮಕ್ಕಳ ಜೊತೆಗೇ ಇತ್ತು. ಕಂಡ ಕಂಡವರ ಮನೆಯಲ್ಲಿ ಕಲಬತ್ತಿನಲ್ಲಿ ಚಟ್ನಿ ಕುಟ್ಟೋದು ಮತ್ತು ಮಸಾಲೆ ಅರಿದು ಕೊಡೋದು ಎಂದರೆ ಆತನಿಗೆ ಎಲ್ಲಿಲ್ಲದ ಹುರುಪು..
‘ನೆನಪಾದಾಗಲೆಲ್ಲ’ ಸರಣಿಯ ಇಪ್ಪತೈದನೆಯ ಕಂತಿನಲ್ಲಿ ಅಂದಿನ ಸಮಾಜದಲ್ಲಿ ಜರಗಿದ ವಿಚಿತ್ರ ಘಟನೆಗಳನ್ನು ಹಂಚಿಕೊಂಡಿದ್ದಾರೆ ರಂಜಾನ್‌ ದರ್ಗಾ

 

ನಾವಿಗಲ್ಲಿಯ ನಮ್ಮ ಮನೆ ಎದುರಿಗಿನ ಸಂತ ಸೇನಾ ರಸ್ತೆ ‘ಎ ಪ್ಯಾಸೇಜ್ ಟು ನಾವಿಗಲ್ಲಿ’ ಎಂಬ ರೀತಿಯಲ್ಲಿತ್ತು. ಗಚ್ಚಿನಮಠ ಮತ್ತು ಮಠಪತಿ ಗಲ್ಲಿ ಕಡೆಗಳಿಂದ ಬರುವವರು, ಬೋಧರಾಚಾರಿ ದಡ್ಡಿಯಲ್ಲಿ ಕುಳ್ಳು ಹಚ್ಚಲು ಬರುವವರು, ಬಯಲುಕಡೆಗೆ ಹೋಗುವವರು, ದಡ್ಡಿಯಲ್ಲಿ ಹಾದು ಕಾಲೇಜಿಗೆ ಮತ್ತು ಲಿಂಗದ ಗುಡಿಯ ಕಡೆಗೆ ಹೋಗುವವರು, ಹಾಗೇ ಮುಂದೆ ಇದ್ದ ಅಮ್ರೆ (ಮಾವಿನತೋಪು) ಕಡೆಗಿನ ಕುರುಚಲು ಅಡವಿಗೆ ಎಮ್ಮೆ ಮೇಯಿಸಲು ಹೋಗುವ ಗೌಳಿಗರು, ನಾವಿಗಲ್ಲಿ ಮೂಲಕ ಹರಿತಾಬೂತ್ ಕಡೆಯಿಂದ ಮುಳ್ಳಗಸಿ ಮತ್ತು ಶಹಾಪೂರ ಅಗಸಿ ಕಡೆಗೆ ಹೋಗುವವರು. ಮುಳ್ಳಗಸಿಯ ಸಮಗಾರ ಗಲ್ಲಿಯಿಂದ ನಾವಿಗಲ್ಲಿಗೆ ಬಂದು, ಗಚ್ಚಿನಮಠದ ಮುಂದೆ ಹಾದು ವಿಜಯ ಟಾಕೀಜ (ಈಗಿನ ಅಮೀರ ಟಾಕೀಜ್) ಕಡೆಗೆ ಹೋಗುವವರು, ನಾವಿಗಲ್ಲಿಯಿಂದ ಸ್ವಲ್ಪ ದೂರದ ಲದ್ದಿಕಟ್ಟಿ ಹನುಮಂತ ದೇವರ ಗುಡಿಯ ಸುತ್ತಮುತ್ತಲಿನ ಪ್ರದೇಶಗಳಿಂದ ಕೂಡ ಹರಿತಾಬೂತ ಮಸೀದಿ ಹಿಂದಿನ ಪಾಯಖಾನೆಗಳಿಗೆ ಬರುವ ಹೆಣ್ಣುಮಕ್ಕಳು. ಚಂದಾಬಾವಡಿಯಿಂದ ಮುಂದಕ್ಕೆ ಬಂದು, ಹೋಟೆಲ್ ಮತ್ತು ನೀರಾ ಮಾರುವ ಅಂಗಡಿಯ ಮಧ್ಯದ ಸಂದಿಯಂಥ ದಾರಿಯುಳ್ಳ ವೆಂಕಟರಮಣ ಗಲ್ಲಿಯಲ್ಲಿ ಹಾಯ್ದು ಲಕ್ಷ್ಮೀವೆಂಕಟೇಶ್ವರ ದೇವಸ್ಥಾನದ ಎದುರಿನಿಂದ ಬರುವವರು. ಹೀಗೆ ಎಲ್ಲರಿಗೂ ಇದೊಂದೇ ಮಾರ್ಗವಾಗಿತ್ತು.

(ವೆಂಕಟರಮಣ ಗಲ್ಲಿ)

ಆ ವೆಂಕಟರಮಣ ಗಲ್ಲಿಯ ಒಂದಿಷ್ಟು ಘಟನೆಗಳು ನೆನಪಾಗುತ್ತಿವೆ. ಆ ಗಲ್ಲಿಯಲ್ಲೇ ಬ್ರಾಹ್ಮಣರ ಒಂದು ಚಿಕ್ಕ ತೋಟವಿತ್ತು. ಕೋಟೆಗೋಡೆಯ ಹಾಗೆ ಅದರ ಸುತ್ತೆಲ್ಲ ಮನೆಗಳಿದ್ದವು. ತೋಟದ ಮಾಲೀಕರ ಎರಡಂತಸ್ತಿನ ಮನೆ ತೋಟಕ್ಕೆ ಅಂಟಿಕೊಂಡೇ ಇತ್ತು. ಅಲ್ಲಿಂದ ನಮ್ಮ ಮನೆಗೆ ಐದು ನಿಮಿಷದ ದಾರಿ. ಆ ಮಾಲೀಕರ ಮಗಳ ನಿಶ್ಚಿತಾರ್ಥವಾಗಿತ್ತು ಅದೇಕೋ ಮದುವೆ ಮುರಿದುಬಿದ್ದಿತು. ಆ ಯುವತಿ ನೊಂದುಕೊಂಡು ಅಂದೇ ರಾತ್ರಿ ತಮ್ಮ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಳು! ಈ ದುರಂತ ಸಂಭವಿಸುವ ಸ್ವಲ್ಪದಿನಗಳ ಹಿಂದೆಯಷ್ಟೇ, ಇಲ್ಲಿಂದ ಸಮೀಪದಲ್ಲೇ, ಚಂದಾಬಾವಡಿ ಕಡೆ ಹೋಗುವ ರಸ್ತೆಯಲ್ಲಿ ಒಬ್ಬ ಯುವತಿಯ ಹೆಣವನ್ನು ನೋಡಿದ್ದೆ. ಆ ಯುವತಿ ಅಸ್ಪೃಶ್ಯ ಯುವಕನನ್ನು ಪ್ರೀತಿಸಿದ ಕಾರಣ ಆಕೆಯ ಮನೆಯವರು ಅವಳಿಗೆ ಬಹಳ ಹೊಡೆಯುವ ವೇಳೆ ಆಕೆ ಸತ್ತಳು ಎಂದು ಜನ ಮಾತನಾಡಿಕೊಳ್ಳುತ್ತಿದ್ದರು. ಚಟ್ಟದ (ಸಿದಿಗೆ) ಮೇಲೆ ಅಡ್ಡ ಮಲಗಿಸಿ ಮುಳ್ಳಗಸಿ ಮತ್ತು ಶಹಾಪೂರ ಅಗಸಿ ದಾಟಿ ಸುಡುಗಾಡದ ಕಡೆಗೆ ಒಯ್ಯುತ್ತಿದ್ದ ಆ ಯುವತಿಯ ಹೆಣ ಮರೆಯಲು ಬಹಳ ದಿನಗಳೇ ಹಿಡಿದವು. ಇವೆಂಥ ಜಾತಿಗಳು? ಅವರೇಕೆ ತಮ್ಮ ಮಗಳನ್ನು ಕೊಂದರು? ಮುಂತಾದ ಪ್ರಶ್ನೆಗಳು ತಲೆಯಲ್ಲಿ ತುಂಬಿಕೊಂಡಿದ್ದರಿಂದ ನೆನಪಾದಾಗಲೆಲ್ಲ ಮನದಲ್ಲಿ ಒಂದು ರೀತಿಯ ಸಂಕಟವಾಗಿ ಮುಖದ ಮೇಲೆ ವಿಷಾದದ ಛಾಯೆ ಮೂಡುತ್ತಿತ್ತು. ಹೆಣ ನೋಡಿದ ದಿನದಿಂದ ಒಂದೆರಡು ದಿನಗಳವರೆಗೆ ರಾತ್ರಿ ಭಯದಿಂದ ಮೈ ಬೆಚ್ಚಗಾಗುತ್ತಿತ್ತು.

(ಲದ್ದಿಕಟ್ಟಿ ಹನುಮಂತದೇವರ ಮಂದಿರ)

ವೆಂಕಟರಮಣ ಗಲ್ಲಿಯಲ್ಲಿ ನನ್ನ ಪ್ರಾಥಮಿಕ ಶಾಲಾ ಸಹಪಾಠಿ ಇದ್ದ. ಅವನಿಗೆ ಮರಗೂ ಎಂದು ಕರೆಯುತ್ತಿದ್ದೆವು. ಆತ ವಯಸ್ಸಿನಲ್ಲಿ ನನಗಿಂತ ದೊಡ್ಡವನಂತೆ ಕಾಣುತ್ತಿದ್ದ. ಆದರೆ ಮುಗ್ಧನಾಗಿದ್ದ. ಆತನ ತಂದೆ ಮೌನವಾಗಿದ್ದು, ಸಿಟ್ಟಿಗೆದ್ದವರ ಹಾಗೆ ಇರುತ್ತಿದ್ದ. ಆದರೆ ಪಾಪದ ಮನುಷ್ಯನಾಗಿದ್ದ. ಹೆಂಡತಿಯ ಕಾಟಕ್ಕೆ ಆತ್ಮಹತ್ಯೆ ಮಾಡಿಕೊಂಡ. ಮರಗೂನ ಶಾಲೆ ಅಲ್ಲಿಗೇ ನಿಂತಿತು.

ಸಂಬಂಧಿಕ ಸಹದೇವ ಎಂಬಾತ ಮರಗೂನ ಮನೆಯ ಹತ್ತಿರವೇ ಇದ್ದ. ಆತ ಕುಸ್ತಿಪಟುವಿನ ಹಾಗೆ ಕಾಣುತ್ತಿದ್ದ. ಆತನ ಸುಂದರ ಹೆಂಡತಿ ಸುಸಂಸ್ಕೃತ ಹೆಣ್ಣುಮಗಳು. ಅವಳೇನು ಅಷ್ಟೊಂದು ಕಲಿತವಳಾಗಿದ್ದಿಲ್ಲ. ಆದರೆ ಅವಳ ಸಹಜ ವ್ಯಕ್ತಿತ್ವ ವಿದ್ಯಾವಂತೆಯ ಹಾಗೆ ಇತ್ತು. ಆಕೆ ಇಳಕಲ್ ಸೀರೆ ಉಡುತ್ತಿದ್ದಿಲ್ಲ. ಯಾವುದೇ ಚಿತ್ತಾರಗಳಿಲ್ಲದ ತೆಳು ಬಣ್ಣದ ಮೆತ್ತನೆಯ ಸೀರೆಗಳು ಆಕೆಯ ಸರಳ ವ್ಯಕ್ತಿತ್ವಕ್ಕೆ ಮೆರುಗು ನೀಡಿದ್ದವು. ಆಕೆಯ ಗಂಡ ಒಬ್ಬ ವೇಶ್ಯೆಯ ಸಹವಾಸ ಮಾಡಿದ್ದ. ತಿಕೋಟೆಯ ಹಾಜಿ ಮಸ್ತಾನ ದರ್ಗಾದ ಉರುಸ್‌ನಲ್ಲಿ ನಾನು ಮೊದಲ ಬಾರಿಗೆ ಅವಳನ್ನು ನೋಡಿದೆ. ಅವರಿಬ್ಬರೂ ಕೂಡಿಯೆ ಬಂದಿದ್ದರು. ‘ಚೆಲುವಿ ಹೆಂಡತಿ ಬಿಟ್ಟು ಸೂಳಿ ಜೊತೆ ಹ್ಯಾಂಗ್ ತಿರಗತಾನ ನೋಡು’ ಎಂದು ಅಜ್ಜಿ ಬೇಸರ ವ್ಯಕ್ತಪಡಿಸಿದಳು. ನಾನು ಅವಳನ್ನೇ ನೋಡುತ್ತಿದ್ದೆ. ಸಹದೇವನ ಜೊತೆ ಆಕೆ ಬಹಳ ಖುಷಿಯಿಂದ ಹೋಗುತ್ತಿದ್ದಳು. ಸ್ವಲ್ಪ ದಪ್ಪಗಾಗಿ ಸಾದಗಪ್ಪ ಇದ್ದರೂ ಆಕರ್ಷಕವಾಗಿದ್ದಳು. ಅವಳ ಮುಖಕ್ಕೆ ಹೆಚ್ಚಿನ ಬೆಲೆಯ ಹೊಸ ಇಳಕಲ್ ಸೀರೆ ಒಪ್ಪುತ್ತಿತ್ತು. ಹಣೆಗೆ ಅಗಲವಾದ ಕುಂಕುಮ ಧರಿಸಿದ್ದಳು. ಒಂದೊಂದು ಕೈಯಲ್ಲಿ ಒಂದೊಂದು ಡಜನ್ ಹಸಿರು ಬಳೆಗಳಿದ್ದವು. ಮಣಿಕಟ್ಟಿನಿಂದ ಮೊಣಕೈವರೆಗೆ ಹಚ್ಚೆ ಹಾಕಿಕೊಂಡಿದ್ದಳು. ಉರುಸಲ್ಲಿ ಅವನಿಗೆ ಅನೇಕ ಪರಿಚಿತರು ಸಿಕ್ಕರೂ ಆತ ಗಲಿಬಿಲಿಗೊಳ್ಳದೆ ಅವರಿಗೆ ನಗುತ್ತ ನಮಸ್ಕಾರ ಮಾಡುತ್ತ ಅವಳ ಜೊತೆ ಮುಂದೆ ಮುಂದೆ ಸಾಗುತ್ತಿದ್ದ. ಅವನ ಹೆಂಡತಿಗೆ ಅವನ ಸಂಬಂಧದ ಬಗ್ಗೆ ಗೊತ್ತಿದ್ದೂ ಯಾರ ಜೊತೆಗೂ ಆ ಬಗ್ಗೆ ಮಾತನಾಡುತ್ತಿರಲಿಲ್ಲ. ತನ್ನ ದುಃಖವನ್ನು ಯಾರಿಗೂ ಹೇಳುತ್ತಿದ್ದಿಲ್ಲ. ಸಾಮಾಜಿಕವಾಗಿ ಮಂದಸ್ಮಿತಳಾಗೇ ಇರುತ್ತಿದ್ದಳು. ಯಾರ ಉಸಾಬರಿಗೆ ಹೋಗುತ್ತಿದ್ದಿಲ್ಲ.

ನಾವಿಗಲ್ಲಿಯಿಂದ ವೆಂಕಟರಮಣ ಗಲ್ಲಿ ದಾಟಿ ಮುಂದೆ ಹೋಗಿ ಚಂದಾಬಾವಡಿ ಕಡೆಯಿಂದ ಬರುವ ರಸ್ತೆಯ ತುಂಬ ಕಿರಾಣಿ ಅಂಗಡಿ, ಸ್ವೇಷನರಿ ಅಂಗಡಿ, ಹೊಟೇಲ್ ಮುಂತಾದವು ಇದ್ದವು. ಅಮ್ಮನ ಜೊತೆ ಆ ಕಡೆ ಹೋಗುವಾಗ ಸಹದೇವನ ಹೆಂಡತಿ ಸಿಕ್ಕರೆ ಮಾತನಾಡಿಸುತ್ತಿದ್ದಳು. ‘ಇಂಥ ಬಂಗಾರದಂಥ ಹುಡುಗಿಗೆ ಎಂಥ ಗಂಡ ಸಿಕ್ಕ’ ಎಂಬ ಅಮ್ಮನ ಸ್ವಗತ ಕೇಳಿಸಿಕೊಂಡಿದ್ದೆ.

ಸುಭಾಸ ನಾವಿ ಹೆಂಡತಿಯ ಬದುಕು ಇನ್ನೂ ಹೃದಯಸ್ಪರ್ಶಿಯಾಗಿತ್ತು. ಮಿತಭಾಷಿಯಾದ ಸುಭಾಸ ಕುಡಿತಕ್ಕೆ ಅಡಿಕ್ಟ್ ಆಗಿದ್ದ. ಆತನಿಗೆ ಅಷ್ಟೇನು ವಯಸ್ಸಾಗಿರಲಿಲ್ಲ. ಆದರೆ ಮುದಿಮುಖದಿಂದಾಗಿ ಹಾಗೆ ಕಾಣುತ್ತಿದ್ದ. ಆತನ ಸುಂದರ ಹೆಂಡತಿ ಸ್ವಲ್ಪ ಗಿಡ್ಡಗೆ ಇದ್ದು ಗುಣಸಾಗರಿಯಾಗಿದ್ದಳು. ಗಲ್ಲಿಯ ಜನ ಅವಳ ಕಷ್ಟದ ಬದುಕು ಕಂಡು ಮರುಗುತ್ತಿತ್ತು. ಮನೆಗೆಲಸ, ಎರಡು ಪುಟ್ಟ ಮಕ್ಕಳನ್ನು ಸಾಕುವುದರ ಜೊತೆಗೆ ಗಂಡನನ್ನು ನೋಡಿಕೊಳ್ಳುವುದು, ಅಂಗಡಿಗೆ ಹೋಗಿ ಮನೆಗೆ ಬೇಕಾದ ಸಾಮಾನು ತರುವುದು. ಹೀಗೆ ಅವಳು ಲುಟು ಲುಟು ಓಡುತ್ತ ಬೇಗ ಬೇಗ ಕೆಲಸಕಾರ್ಯಗಳನ್ನು ಮುಗಿಸುವುದರಲ್ಲೇ ತಲ್ಲೀನಳಾಗಿರುತ್ತಿದ್ದಳು. ಅವಳೆಂದರೆ ನನ್ನ ತಾಯಿಗೆ ಅಚ್ಚುಮೆಚ್ಚು. ಸಹದೇವನ ಹೆಂಡತಿಯ ಹಾಗೆ ಅವಳು ಕೂಡ ಎಂದೂ ತನ್ನ ನೋವನ್ನು ಹಂಚಿಕೊಳ್ಳಲಿಲ್ಲ. ಸಹದೇವನ ಹೆಂಡತಿ ದುಃಖಿಯಾಗಿದ್ದರೂ ಈ ರೀತಿಯ ಕಷ್ಟದ ಅವಸ್ಥೆ ಇರಲಿಲ್ಲ. ಇಂಥ ಜನಸಾಮಾನ್ಯರ ಅಸಾಮಾನ್ಯವಾದ ಸಂಯಮ, ದೈನಂದಿನ ಹೋರಾಟ ಮತ್ತು ಜೀವನದ ಬಗ್ಗೆ ಇರುವ ಕಾಳಜಿ ನನ್ನ ಬದುಕನ್ನು ರೂಪಿಸುವಲ್ಲಿ ಸಹಕಾರಿಯಾಗಿವೆ. ನನ್ನ ಬಾಲ್ಯದ ಈ ಮುಗ್ಧ ಜೀವಗಳು ನೆನಪಾದಾಗಲೆಲ್ಲ ಹೃದಯ ತುಂಬಿ ಬಂದು ಕಣ್ಣಲ್ಲಿ ಉಕ್ಕುತ್ತದೆ.

ನಮ್ಮ ಕೆಲ ಜನ ಎಷ್ಟೊಂದು ವಿಚಿತ್ರವಾಗಿರುತ್ತಾರೆ ಎನ್ನುವುದಕ್ಕೆ ಗೌಸ್ ಮತ್ತು ಖೈರುನ್ನೀಸಾಳ ನಿಶ್ಚಿತಾರ್ಥವೇ ಸಾಕ್ಷಿ. ತನ್ನ ಮಗಳನ್ನು ತಮ್ಮನಿಗೆ ಕೊಡಬೇಕೆಂದು ಗೌಸ್ ಅಕ್ಕ ನಿರ್ಧರಿಸಿದಳು. ಆತನೋ ಗಂಡನಾಗುವ ಸಾಧ್ಯತೆ ಇಲ್ಲದವನು. ಆತನ ನಡಿಗೆ, ಮಾತು ಮುಂತಾದವು ಹೆಂಗಸರ ಹಾಗೇ ಇದ್ದವು. ಅವನ ಸಹವಾಸವೂ ಹೆಣ್ಣುಮಕ್ಕಳ ಜೊತೆಗೇ ಇತ್ತು. ಕಂಡ ಕಂಡವರ ಮನೆಯಲ್ಲಿ ಕಲಬತ್ತಿನಲ್ಲಿ ಚಟ್ನಿ ಕುಟ್ಟೋದು ಮತ್ತು ಮಸಾಲೆ ಅರಿದು ಕೊಡೋದು ಎಂದರೆ ಆತನಿಗೆ ಎಲ್ಲಿಲ್ಲದ ಹುರುಪು. ನಮ್ಮ ಮನೆಯಲ್ಲಿ ಕೂಡ ಅನೇಕ ಸಲ ಹೀಗೆ ಬಂದು ಅಡುಗೆ ಮನೆ ಕೆಲಸ ಮಾಡಿಕೊಡುವುದು ಆತನಿಗೆ ಖುಷಿ ಕೊಡುತ್ತಿತ್ತು.

ಖೈರುನ್ನಿಸಾ ಆಗ 14 ವರ್ಷದವಳಿರಬಹುದು. ಸಾಯಂಕಾಲದ ಸಮಯ ಕಟ್ಟೆಯ ಮೇಲೆ ನಿಶ್ಚಿತಾರ್ಥ ಆಯಿತು. ಆ ಸಂದರ್ಭದಲ್ಲಿ ಏನೂ ಅರಿಯದ ಖೈರುನ್ನಿಸಾ ಬಹಳ ಖುಷಿ ಖುಷಿಯಾಗಿದ್ದಳು. ಅವಳನ್ನು ಮಲ್ಲಿಗೆ ಹೂಗಳಿಂದ ಸಿಂಗರಿಸಿದ್ದರು. ಅವಳ ಮುಗ್ಧ ನಗುವಿಗೆ ಹೆಂಗಳೆಯರ ಮುಸಿಮುಸಿ ನಗೆ ಮುಖಾಮುಖಿಯಾಗಿತ್ತು. ಅವಳ ದಷ್ಟಮುಷ್ಟ ಅಂಗಸೌಷ್ಟವದ ಮುಂದೆ ಗೌಸ್ ನರಪೇತಲನಾಗಿ ಕಾಣುತ್ತಿದ್ದ. ಇದೆಲ್ಲ ಅವನಿಗೆ ಹಿಂಸೆ ಅನಿಸುತ್ತಿರಬೇಕು. ಆತ ಅಕ್ಕನ ಮಾತು ಕೇಳಿ ಹೀಗೆ ಕುಳಿತಿರಬಹುದು. ಆ ಬಡಹುಡುಗಿಯ ಭವಿಷ್ಯ ಮುಂದೆ ಏನಾಯಿತೋ ನೆನಪಾಗುತ್ತಿಲ್ಲ.

(ಅರಕಿಲ್ಲಾ ಕಂದಕ)

ಉರುಸಲ್ಲಿ ಅವನಿಗೆ ಅನೇಕ ಪರಿಚಿತರು ಸಿಕ್ಕರೂ ಆತ ಗಲಿಬಿಲಿಗೊಳ್ಳದೆ ಅವರಿಗೆ ನಗುತ್ತ ನಮಸ್ಕಾರ ಮಾಡುತ್ತ ಅವಳ ಜೊತೆ ಮುಂದೆ ಮುಂದೆ ಸಾಗುತ್ತಿದ್ದ. ಅವನ ಹೆಂಡತಿಗೆ ಅವನ ಸಂಬಂಧದ ಬಗ್ಗೆ ಗೊತ್ತಿದ್ದೂ ಯಾರ ಜೊತೆಗೂ ಆ ಬಗ್ಗೆ ಮಾತನಾಡುತ್ತಿರಲಿಲ್ಲ. ತನ್ನ ದುಃಖವನ್ನು ಯಾರಿಗೂ ಹೇಳುತ್ತಿದ್ದಿಲ್ಲ.

ಬೋಧರಾಚಾರಿ ದಡ್ಡಿಗೆ ಹತ್ತಿಕೊಂಡಿದ್ದ ಮುನಸಿಪಾಲಿಟಿ ನಳದ ಎದುರಿಗೆ ಸ್ವಲ್ಪ ದೂರದಲ್ಲಿದ್ದ ಒಂದು ಮನೆಯಲ್ಲಿ ವಯಸ್ಸಾದ ದಂಪತಿಗೆ ಇದ್ದೊಬ್ಬ ಮಗನ ಮದುವೆಯ ಚಿಂತೆಯಾಗಿತ್ತು. ಮನೆತನದ ಕಾಯಕವಾದ ಕ್ಷೌರಿಕ ವೃತ್ತಿಯನ್ನೂ ಮಾಡದ ಆತ ಸದಾ ಮಂಕು ಬಡಿದವರ ಹಾಗೆ ಇರುತ್ತಿದ್ದ. ಅವನೊಬ್ಬ ಮನೋರೋಗಿ ಎಂದು ಗೊತ್ತಿದ್ದರೂ ಅವನ ಮದುವೆ ಮಾಡಿದರು. ಅಂದಿನ ದಿನಗಳಲ್ಲಿ ಅನೇಕ ಹೆಣ್ಣುಮಕ್ಕಳ ತಂದೆ ತಾಯಿಗಳಿಗೆ ತಮ್ಮ ಹೆಣ್ಣುಮಕ್ಕಳನ್ನು ಮದುವೆ ಮಾಡಿ ಕಳುಹಿಸುವುದೇ ದೊಡ್ಡ ತಲೆಭಾರವಾಗಿತ್ತು. ಇಂಥ ಮನೋರೋಗಿಗೂ ಮಗಳನ್ನು ಕೊಟ್ಟರು! ಮದುವೆಯಾದ ಮೇಲೆ ಸರಿ ಹೋಗುತ್ತಾನೆ ಎಂಬ ಹುಚ್ಚು ಕಲ್ಪನೆ ಅವರದಾಗಿತ್ತು. ಹರಕೆಯ ಕುರಿಯಂತಿದ್ದ ಆ ಹಳ್ಳಿಯ ಹುಡುಗಿ 15 ವರ್ಷದವಳಿರಬಹುದು. ಮದುವೆಯಾಗಿ ನಾಲ್ಕಾರು ತಿಂಗಳು ಕಳೆದವು. ಪರಿಸ್ಥಿತಿಯಲ್ಲಿ ಯಾವುದೇ ಬದಲಾವಣೆಯಾಗಲಿಲ್ಲ. ಕೊನೆಗೆ ತವರುಮನೆಗೆ ಹೋದವಳು ವಾಪಸ್ ಬರಲಿಲ್ಲ.

(ಘತ್ತರಗಿ ಭಾಗ್ಯಮ್ಮ ದೇವಿ)

ಅಂದಿನ ಕಾಲದಲ್ಲಿ ಸಾಮಾಜಿಕವಾಗಿ ವಿಚಿತ್ರ ನಡವಳಿಕೆ ಇತ್ತು. ಅದೇನೆಂದರೆ ಹುಡುಗಿ ಮೈನೆರೆದಳೆಂದರೆ ಅದನ್ನು ದೊಡ್ಡ ಸುದ್ದಿ ಮಾಡಲಾಗುತ್ತಿತ್ತು. ಅವಳನ್ನು ಒಂದು ಮೂಲೆಯಲ್ಲಿ ಕೂಡಿಸುತ್ತಿದ್ದರು. ಋತುಮತಿಯಾಗಿ 5, 9 ಅಥವಾ 11ನೇ ದಿನಕ್ಕೆ ಮೂಲೆಯಿಂದ ‘ಎಬ್ಬಿಸುವ’ ಅಥವಾ ‘ಮನೆಯಲ್ಲಿ ಕರೆದುಕೊಳ್ಳುವ’ ಕಾರ್ಯಕ್ರಮ ಮಾಡುತ್ತಿದ್ದರು. ‘ಅವಳು ದೊಡ್ಡವಳಾದಳು’ ಎಂಬುದನ್ನು ತಿಳಿಸುವ ರೀತಿಯಲ್ಲಿ ಮನೆಯೊಳಗೆ ಸಮಾರಂಭ ಏರ್ಪಡಿಸುತ್ತಿದ್ದರು. ಅವರಿಗೆ ಇಂಥ ಸಮಾರಂಭಗಳು ಅವಶ್ಯವಾಗಿದ್ದವು. ಋತುಮತಿ ಆದ ಕೂಡಲೇ ತಾಯಿ ತಂದೆಗಳಿಗೆ ಮಗಳ ಮದುವೆಯದೇ ಚಿಂತೆಯಾಗುತ್ತಿತ್ತು. ಹೀಗಾಗಿ 14, 15 ಅಥವಾ 16ನೇ ವಯಸ್ಸಾಗುವುದರೊಳಗಾಗಿಯೆ ಅನೇಕ ಹುಡುಗಿಯರ ಮದುವೆಯಾಗುತ್ತಿತ್ತು. ‘ನಮ್ಮ ಜಾತಿ, ಉಪಜಾತಿ ಮತ್ತು ಧರ್ಮಕ್ಕೆ ಸಂಬಂಧಿಸಿದವರು ತಮ್ಮ ಮಕ್ಕಳಿಗೆ ಕನ್ಯಾ ಹುಡುಕುತ್ತಿದ್ದರೆ ನಮ್ಮ ಮನೆಗೂ ನೋಡಲು ಬರಬಹುದು’ ಎಂಬುದು ಇಂಥ ಸಮಾರಂಭಗಳ ಆಶಯವಾಗಿತ್ತು. ಇದರ ಜೊತೆಗೆ ಮಗಳು ದೊಡ್ಡವಳಾದಳು ಎಂಬ ಖುಷಿಯೂ ಇರುತ್ತಿತ್ತು. ಮಗಳ ಶಾರೀರಿಕ ಮತ್ತು ಮಾನಸಿಕ ಬದಲಾವಣೆಯಾಗಿ ಗಾಂಭೀರ್ಯ ಎದ್ದು ಕಾಣುವಂಥ ವಾತಾವರಣದ ಸೃಷ್ಟಿ ಕೂಡ ಇಂಥ ಸಮಾರಂಭಗಳ ಮೂಲಕ ಆಗುತ್ತಿತ್ತು. ಇಂಥ ಆಚರಣೆಗಳೇ ನಮ್ಮ ಜನಸಮುದಾಯದ ಸೋಷಿಯಲ್ ಮೀಡಿಯಾ ಆಗಿದ್ದವು. ಆದರೆ ನಮಗೆಲ್ಲ ಬಾಲಕರಿಗೆ ಅಂಥವು ಖುಷಿ ಕೊಡುವ ಕ್ಷಣಗಳಾಗಿರುತ್ತಿದ್ದವು. ನಾವು ಅಂಥಲ್ಲೇ ಓಡಾಡುತ್ತ ಖುಷಿ ಪಡುತ್ತಿದ್ದೆವು. ಮನೆಯಲ್ಲಿ ಅವಳಿಗೆ ಹೂವಿನ ದಂಡೆ ಕಟ್ಟಿ ಸಿಂಗರಿಸಿ ಕೂಡಿಸಿದಾಗ ಆರತಿ ಬೆಳಗುವಾಗ ಅವಳು ಘತ್ತರಗಿ ಭಾಗಮ್ಮದೇವಿಯ ಹಾಗೆ ಕಾಣುತ್ತಿದ್ದಳು. ನಂತರ, ಅಕ್ಕಪಕ್ಕದ ಹೆಣ್ಣುಮಕ್ಕಳು ಕೂಡ ಆರತಿ ಬೆಳಗುತ್ತಿದ್ದರು. ಸಂಬಂಧಿಕರು, ನೆರೆಹೊರೆಯವರು ಸೀರೆ, ಹೂ ಹಣ್ಣುಗಳನ್ನು ಆ ಹುಡುಗಿಗೆ ಕೊಟ್ಟು, ಅರಿಷಿಣ ಕುಂಕುಮ ಹಚ್ಚಿ ಹಾರೈಸುತ್ತಿದ್ದರು. ಸೋದರತ್ತೆ ಸೋದರ ಮಾವ ಮುಂತಾದವರು ಜೊತೆಗೆ ಕೊಬ್ಬರಿ ಬೆಲ್ಲವನ್ನೂ ಕೊಡುತ್ತಿದ್ದರು. ನಂತರ ಅವಳ ಬ್ರೇನ್‌ವಾಷ್ ಆಗಿ ಪತಿಯ ಗುಲಾಮ ಆಗುವಂಥ ಸೋಬಾನೆ ಪದಗಳನ್ನು ಹೆಣ್ಣುಮಕ್ಕಳು ಸರಾಗವಾಗಿ ಹಾಡುತ್ತಿದ್ದರು. ಆ ಹುಡುಗಿ ತದೇಕ ಚಿತ್ತದಿಂದ ಆ ಹಾಡುಗಳನ್ನು ಕೇಳುತ್ತಿದ್ದಳು. ಅಂಥ ಒಂದು ಹಾಡಿನ ಸಾಲು ಇಂದಿಗೂ ಅರ್ಧಮರ್ಧ ನೆನಪಿದೆ. ‘ಕುರುಡನಿರಲಿ ಕುಂಟನಿರಲಿ ಗಂಟುಮೋರೆಯವನೇ ಇರಲಿ, ಪತಿಯೇ ದೇವರಮ್ಮಾ’ ಎಂದು ಮುಂತಾಗಿ ಆ ಹಾಡಿನ ತಿರುಳಿತ್ತು. ಆ ಎತ್ತರದ ಸುಂದರ ಗಂಭೀರ ಹುಡುಗಿಗೆ ಇವರು ಹಾಡುವಂಥ ಗಂಡ ಸಿಕ್ಕರೆ ಏನು ಗತಿ? ಎಂಬ ಪ್ರಶ್ನೆ ಮನದಲ್ಲಿ ಸುಳಿಯಿತು.

ಈಗ ಹೀಗೆ ಋತುಮತಿಯಾಗುವುದನ್ನು ಹಳ್ಳಿಗಳಲ್ಲೂ ಪ್ರಚಾರ ಮಾಡುತ್ತಿಲ್ಲ. ಏನಿದ್ದರೂ ರಕ್ತ ಸಂಬಂಧಿಗಳ ಮುಂದೆ ನಾಲ್ಕು ಗೋಡೆಗಳ ಮಧ್ಯೆಯೆ ನಡೆಯುವುದು. ಈಗಿನ ಹುಡುಗಿಯರು ಅಂಥ ಮನೆಯೊಳಗಿನ ಸಮಾರಂಭವನ್ನೂ ಇಷ್ಟಪಡುವುದಿಲ್ಲ. ಅದೆಲ್ಲ ಅವರಿಗೆ ನಾಚಿಕೆಯ ವಿಷಯವಷ್ಟೇ ಆಗಿರದೆ ಸಮಾಜ ಇನ್ನೂ ಅಧೋಮುಖಿ ಎಂಬ ಕಾರಣವೂ ಇದೆ.

ಒಂದು ಸಲ ಒಬ್ಬ ಬ್ರಾಹ್ಮಣ ಯುವಕ ಎಲ್ಲಿಂದಲೋ ನಮ್ಮ ಗಲ್ಲಿಗೆ ಬಂದಿದ್ದ. ಆಕೆಯ ತಂಗಿ ಪುಷ್ಪವತಿಯಾಗಿ ವರ್ಷ ಕಳೆದರೂ ಮದುವೆ ಆಗಿರಲಿಲ್ಲವಂತೆ. ಅದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದ. ನಮ್ಮ ಮನೆಗೂ ಬಂದ. ಅಮ್ಮ ಮನೆಯೊಳಗೆ ಕರೆದು ಆತನ ಕಷ್ಟವನ್ನು ವಿಚಾರಿಸಿದಳು. ಆತ ಬಳಸಿದ ಪುಷ್ಪವತಿ ಪದ ತಾಯಿಗೆ ಅರ್ಥವಾಗಲಿಲ್ಲ. ‘ದೊಡ್ಡವಳಾಗ್ಯಾಳೇನು’ ಎಂದು ಕೇಳಿ ತಿಳಿದುಕೊಂಡಳು. ಕಷ್ಟದಲ್ಲೂ ಕೂಡಿಸಿಟ್ಟ ಸವಾ ರೂಪಾಯಿ (ಒಂದು ರೂಪಾಯಿ ನಾಲ್ಕಾಣೆ) ಕೊಟ್ಟು ಕಳುಹಿಸಿದಳು.

ಮರಗೂನ ಮನೆಯ ಎದುರಿಗೆ ಒಂದು ಶ್ರೀಮಂತರ ಮನೆ ಇತ್ತು. ಆ ಮನೆಯ ಯಜಮಾನ ತೀರಿಹೋಗಿದ್ದ. ತಾಯಿ ಮಗ ಇಬ್ಬರೇ ಮನೆಯಲ್ಲಿದ್ದರು. ಮಗ ಉಡಾಳ ಆಗಿದ್ದ. ಆತನಿಗೆ ಈಜುವ ಹುಚ್ಚು. ಬೇಸಗೆ ರಜೆಯಲ್ಲಿ ಎಲ್ಲೆಂದರಲ್ಲಿ ಈಜಲು ಹೋಗುತ್ತಿದ್ದ. ವಿಜಾಪುರದ ಕಡು ಬೇಸಗೆ ಕಾರಣ ಹುಡುಗರು ನೀರಲ್ಲಿ ಇಳಿಯಲು ತವಕಿಸುತ್ತಿದ್ದರು. ನನಗೂ ಈಜುವ ಕುಬಿ ಇತ್ತು. ಆದರೆ ಎಲ್ಲೆಂದರಲ್ಲಿ ಈಜಲು ಹೋಗುತ್ತಿದ್ದಿಲ್ಲ. ಆದರೆ ಆತ ನೀರು ಕಂಡಲ್ಲಿ ಈಜುತ್ತಿದ್ದ. ಕಂದಕದ ನೀರು ಕಂಡರೂ ಈಜಲು ಇಳಿಯುತ್ತಿದ್ದ. ಚಾಬೂಕ್ ಸವಾರ ದರ್ಗಾದ ಕಡೆ ಕಲ್ಲು ತೆಗೆದು ಉಂಟಾದ ಗಣಿಗಳಲ್ಲಿ ನಿಂತ ನೀರಲ್ಲಿ ಕೂಡ ಈಜಲು ಹೋಗುತ್ತಿದ್ದ. ಅಲ್ಲಿ ಬೆಳೆದ ಅಂತರಗಂಗೆ, ಈಜಲು ಹೋದವರಿಗೆ ಭಯ ಹುಟ್ಟಿಸುವಂತಿತ್ತು. ಅವನ ತಾಯಿಗೆ ಅವನನ್ನು ಹುಡುಕುವುದೇ ದೊಡ್ಡ ಕೆಲಸವಾಗಿತ್ತು. ಇದ್ದೊಬ್ಬ ಮಗ ಎಲ್ಲಿ ಕಳೆದು ಹೋಗುತ್ತಾನೋ ಎಂಬ ಭಯ ಅವಳನ್ನು ಕಾಡುತ್ತಿತ್ತು. ಅವನನ್ನು ಹುಡುಕುತ್ತ ಬಾವಿ ಬಾವಿ ಸುತ್ತುತ್ತಿದ್ದಳು. ಕೆಲವೊಂದು ಸಲ ಆಕೆಯ ಮಗನಿಗೆ ಸಿಟ್ಟು ಬಂದು ತಾಯಿಯ ಕಡೆಗೆ ಕಲ್ಲುಬೀಸುತ್ತಿದ್ದ. ಒಂದು ಸಲ ತಾಯಿಗೆ ಕಲ್ಲು ಜೋರಾಗಿ ಬಡಿಯಿತು. ಆದರೂ ಅವಳು ಅವನನ್ನು ಕರೆದುಕೊಂಡು ಹೋಗುವವರೆಗೂ ಬಿಡಲಿಲ್ಲ. ಅದೇ ವೇಳೆಯಲ್ಲಿ ನಾನು ಬಾವಿಗೆ ಈಜಲು ಹೋಗುತ್ತಿದ್ದೆ. ಈ ಘಟನೆ ನನ್ನ ಕಣ್ಣ ಮುಂದೆಯೆ ನಡೆಯಿತು. ನಾನು ಬಾವಿಗೆ ಇಳಿಯಲಿಲ್ಲ. ಮನೆಗೆ ಹೋಗಿ ನನ್ನ ತಾಯಿಯನ್ನು ನೋಡಿದೆ.

ನಾವು ಬಾಲಕರಾಗಿದ್ದಾಗ ಯಾವುದೇ ಸಮರ್ ಕ್ಯಾಂಪ್ ಇರಲಿಲ್ಲ. ಬಾವಿಯಿಂದ ಬಾವಿಗೆ ಸುತ್ತುವುದೇ ನಮ್ಮ ಸಮರ್ ಕ್ಯಾಂಪ್ ಆಗಿತ್ತು. ತೋಟದ ಮಾಲಿಕರು ನಮಗೆ ಹೆದರಿಸಿ ಓಡಿಸುತ್ತಿದ್ದರು. ಆದರೂ ಅಲ್ಲಿ ಇಲ್ಲಿ ಈಜುತ್ತ ಹಸಿವು ತಾಳದಾದಾಗ ಕಣ್ಣು ಕೆಂಪಗೆ ಮಾಡಿಕೊಂಡು ಮನೆಗೆ ಬರುತ್ತಿದ್ದೆವು. ನಮಗೆ ಮುಕ್ತವಾದ ಬಾವಿ ಎಂದರೆ ತಾಸಬಾವಡಿ (ತಾಜಬಾವಡಿ). (ಆದರೆ ಹಿರಿಯರು ಜೊತೆಗಿಲ್ಲದ ಬಾಲಕರಿಗೆ ಈಜಲು ಬಂದ ದೊಡ್ಡವರು ಬೆದರಿಸುತ್ತಿದ್ದರು.) ಅಂಥ ದೊಡ್ಡ ಬಾವಿಯನ್ನು ಇಲ್ಲಿಯವರೆಗೆ ಎಲ್ಲಿಯೂ ನೋಡಿಲ್ಲ. ಅದರ ಅರ್ಧ ಸುತ್ತು ಕೂಡ ಈಜಲು ಆಗುತ್ತಿರಲಿಲ್ಲ. ಕೈ ಸೋಲುತ್ತಿದ್ದವು. ದೊಡ್ಡ ಹುಡುಗರು ಅದರ ಮಟ್ಟಿ ಬಾರಿಯ ಮೇಲಿಂದ ಜಿಗಿಯುತ್ತಿದ್ದರು. ಕೆಲವರು ಅಷ್ಟು ಎತ್ತರದಿಂದ ಸುರಂಗ ಹೊಡೆಯುತ್ತಿದ್ದರು. ಅಂದರೆ ತಲೆ ಕೆಳಗಾಗಿ ಜಿಗಿಯುತ್ತಿದ್ದರು. ಹಾಗೆ ಜಿಗಿದು ಬಾವಿಯಲ್ಲಿ ಬಹಳ ಆಳದವರೆಗೆ ಹೋಗುತ್ತಿದ್ದರು. ಸಣ್ಣ ಬಾವಿಗಳಲ್ಲಿ ನಾನು ಸುರಂಗ ಹೊಡೆಯುತ್ತಿದ್ದೆ. ಆದರೆ ತಾಜಬಾವಡಿಯಲ್ಲಿ ಹಾಗೆ ಸುರಂಗ ಹೊಡೆಯುವ ಧೈರ್ಯ ಮಾಡಲಿಲ್ಲ. ಆ ಎತ್ತರ ನನ್ನ ಶಕ್ತಿಗೆ ಮೀರಿದ್ದಾಗಿತ್ತು. ಅಷ್ಟು ಎತ್ತರದಿಂದ ಸುರಂಗ ಹೊಡೆಯುವವರನ್ನು ನೋಡಿ ತಲೆ ತಿರುಗಿದಂತಾಗುತ್ತಿತ್ತು.

(ತಾಜಬಾವಡಿ)

ಸಾದಾ ಜಿಗಿಯುವುದು ಮತ್ತು ಸುರಂಗ ಹೊಡೆಯುವುದರ ಜೊತೆಗೇ ಇನ್ನೂ ಎರಡು ರೀತಿಯಲ್ಲಿ ನೀರಿಗೆ ಜಿಗಿಯುತ್ತಿದ್ದೆವು. ಬಾವಿಯಲ್ಲಿ ಜಿಗಿದ ಕ್ಷಣವೇ ಕಾಲು ಮಡಚಿ ಮೊಣಕಾಲಗಳಿಗೆ ಕೈ ಕಟ್ಟಿ ದೇಹ ಮತ್ತು ತಲೆಯನ್ನು ಬಾಗಿಸಿ ಶರೀರವನ್ನು ಮುದ್ದಿ ಮಾಡಿಕೊಂಡು ಜಿಗಿದಾಗ ನೀರು ಬಹಳ ಮೇಲಕ್ಕೆ ಚಿಮ್ಮಿ ದೊಡ್ಡ ಶಬ್ದವಾಗುವುದು. ಆಗ ನಾವು ನೀರಲ್ಲಿ ಮುಳುಗಿದ ಕಾರಣ, ಚಿಮ್ಮಿದ ನೀರನ್ನು ನೋಡುವ ಭಾಗ್ಯ ನಮ್ಮದಾಗಿರದಿದ್ದರೂ ಆಗ ಹೊರಡುವ ಶಬ್ದದಿಂದ ನೀರು ಎಷ್ಟು ಎತ್ತರಕ್ಕೆ ಹಾರಿರಬಹುದು ಎಂಬುದನ್ನು ಊಹಿಸಲು ಅವಕಾಶ ಕಲ್ಪಿಸುತ್ತಿತ್ತು. ಇನ್ನೊಂದು ಪ್ರಕಾರದ ಜಿಗಿತ ಎಂದರೆ ಬಾವಿಗೆ ಬೆನ್ನು ಮಾಡಿ ಜಿಗಿಯುವುದು. ಮಹಾದೇವ ಭೋಸಲೆ ಬಾವಿಯಲ್ಲಿ ಒಮ್ಮೆ ಹಾಗೆ ಜಿಗಿಯಲು ಹೋಗಿ ಆಯತಪ್ಪಿ ಅಂಗಾತ ಬಿದ್ದೆ. ಆಗ ಚೆಟ್ ಎಂದು ಭಾರಿ ಶಬ್ದವಾಗಿ ಇಡೀ ಬೆನ್ನು ಭಯಂಕರವಾಗಿ ಉರಿಯ ತೊಡಗಿತು. ಬಾವಿಯಲ್ಲಿ ಈಜುತ್ತಿದ್ದ ವ್ಯಕ್ತಿಯೊಬ್ಬರು ಕೂಡಲೆ ನನ್ನನ್ನು ದಂಡೆಗೆ ಎಳೆದುಕೊಂಡು ಬಂದು ಚೆನ್ನಾಗಿ ಬೆನ್ನು ತಿಕ್ಕಿದರು. ಆಗ ಉರಿತ ಕಡಿಮೆಯಾಯಿತು.

ಮರಗೂನ ಮನೆಯಿಂದ ಮುಂದೆ ಬಂದು ಎಡಕಿನ ಮುಳವಾಡ ಓಣಿ ದಾಟಿ ಬಲಕ್ಕೆ ಹೊರಳಿದಾಗ ನಾವಿಗಲ್ಲಿ ಪ್ರಾರಂಭವಾಗುವುದು. ಅಲ್ಲಿ ನನ್ನ ಸಹಪಾಠಿ ಮುರಿಗೆಪ್ಪನ ಮನೆ ಇತ್ತು. ಆತನ ತಂದೆ ಪೊಲೀಸ್. ಅವರು ಒಂದುರೀತಿಯ ಮೌನವ್ರತ ಧರಿಸಿದವರಂತೆ ಇದ್ದರು. ಗೋವಾ ವಿಮೋಚನೆಗಾಗಿ ವಿಜಾಪುರದಿಂದ ಕಳುಹಿಸಿದ್ದ ಪೊಲೀಸ್ ಫೋರ್ಸ್‌ನಲ್ಲಿ ಅವರೂ ಒಬ್ಬರಾಗಿದ್ದರು. ಗೋವಾದಿಂದ ಬರುವಾಗ ಪೊಲೀಸರು ಬಂಗಾರ ಮುಂತಾದ ಬೆಲೆಯುಳ್ಳ ವಸ್ತುಗಳನ್ನು ದೋಚಿಕೊಂಡು ಬರುತ್ತಾರೆ ಎಂದು ಜನ ಆಡಿಕೊಳ್ಳುತ್ತಿದ್ದರು.

ಸೋಲಾಪುರ ಕಡೆಯಿಂದ ಸಾಲುಗಟ್ಟಲೆ ಬರುತ್ತಿದ್ದ ಹಸಿರು ಬಣ್ಣದ ನೂರಾರು ಮಿಲಿಟರಿ ಜೀಪುಗಳು ವಿಜಾಪುರ ಮೂಲಕವೇ ಗೋವಾಕ್ಕೆ ಹೋಗುತ್ತಿದ್ದವು. ಅವುಗಳನ್ನು ನೋಡಲು ಮುಳ್ಳಗಸಿ ಮತ್ತು ಶಹಾಪುರ ಅಗಸಿ ದಾಟಿ ಸೋಲಾಪುರ ರಾಷ್ಟ್ರೀಯ ಹೆದ್ದಾರಿಗೆ ನಾವು ಹುಡುಗರು ಹೋಗಿದ್ದೆವು. ಆಗ ಬಹಳ ಜನ ಮಿಲಿಟರಿ ಜೀಪು ಮತ್ತು ಸೈನಿಕರನ್ನು ನೋಡಲು ಬಂದಿದ್ದರು. ನಾವು ಹರ್ಷೋದ್ಗಾರಗಳೊಂದಿಗೆ ಸೈನಿಕರಿಗೆ ಕೈಬೀಸುತ್ತಿದ್ದೆವು. ಅವರೂ ನಮಗೆ ಖುಷಿಯಿಂದ ಕೈಬೀಸುತ್ತಿದ್ದರು.

ಮಿಲಿಟರಿ ಎಂದಾಗ ನೆನಪಾಯಿತು. ಸೈಫೂನ್ ಎಂಬ ಮಾಜಿ ಸೈನಿಕ ಸೋಲಾಪುರ ರಾಷ್ಟ್ರೀಯ ಹೆದ್ದಾರಿ ಮತ್ತು ಶಹಾಪೂರ ಅಗಸಿ ಮಧ್ಯದ ಕಟುಕರ ಓಣಿಯಿಂದ ಬಂದು, ನಾವಿಗಲ್ಲಿ ದಾಟಿ ಮುಂದೆ ಹೋಗುತ್ತಿದ್ದ. ಆತ ಸ್ವಲ್ಪ ಲೂಜ್ ಪಾರ್ಟಿ ಎಂದು ಅನಿಸುತ್ತಿತ್ತು. ಅದು ನಿಜವೂ ಆಗಿತ್ತು. ಭಾರತ ಸ್ವತಂತ್ರವಾದಾಗ ಆತ ಕಾಶ್ಮೀರ ಬಳಿಯ ಪಾಕಿಸ್ತಾನ ಗಡಿಯಲ್ಲಿನ ಸೈನಿಕರ ಶಿಬಿರಗಳಿಗೆ ಆಹಾರಧಾನ್ಯ ಪೂರೈಸುವ ಉಗ್ರಾಣದ ಸಿಬ್ಬಂದಿಯಾಗಿದ್ದ. ಆತ ಅಲ್ಲಿನ ಬಡವರಿಗೆ ಒಂದಿಷ್ಟು ಹಣ ಪಡೆದು ಧಾನ್ಯ ಕೊಡುವಾಗ ಸಿಕ್ಕಿಬಿದ್ದ. ಅವನಿಗೆ ಶಿಕ್ಷೆಯಾಯಿತು. ನಂತರ ಆತ ಊರಿಗೆ ಬಂದ. ಇದೆಲ್ಲ ಅದು ಹೇಗೋ ಜನರಿಗೆ ಗೊತ್ತಾಗಿ ಆತನನ್ನು ‘ಲಪೂಟ್ ಸೈಫೂನ್’ ಎಂದು ಕರೆಯುತ್ತಿದ್ದರು. ಜನ ಭ್ರಷ್ಟರನ್ನು ಎಷ್ಟೊಂದು ತಿರಸ್ಕಾರದಿಂದ ನೋಡುತ್ತಿದ್ದರು ಎನ್ನಲಿಕ್ಕೆ ಲಪೂಟ್ ಸೈಪೂನ್ ಪ್ರಸಂಗವೊಂದು ಉದಾಹರಣೆ. ಜನರು ತಿರಸ್ಕಾರದಿಂದ ನೋಡುತ್ತಾರೆ ಎಂಬುದು ಅವನಿಗೆ ಹೊಳೆಯದೆ ಇರಲಿಲ್ಲ. ಅಷ್ಟೇ ಅಲ್ಲ ‘ಲಪೂಟ್’ ಎಂದು ಕರೆಯುತ್ತಾರೆಂದೂ ಆತನಿಗೆ ಗೊತ್ತಾಗಿತ್ತು. ನಾನು ಜನಿಸುವ ಮೊದಲೇ ಈ ಘಟನೆ ಜರುಗಿತ್ತು. ಅದಾಗಲೆ ಅವನು ವಯಸ್ಸಾದವರಂತೆ ಕಾಣತ್ತಿದ್ದ. ಆದರೂ ಜನ ಅವನಿಗೆ ‘ಲಪೂಟ್ ಸೈಫೂನ್’ ಎಂದೇ ಆಡಿಕೊಳ್ಳುತ್ತಿದ್ದರು. ಅವನ ಡ್ರೆಸ್ ಪಠಾಣರ ಡ್ರೆಸ್ ಹಾಗೆ ವರ್ಣರಂಜಿತವಾಗಿತ್ತು. ಬಟನ್‌ಗಿಂತ ಸ್ವಲ್ಪ ದೊಡ್ಡದಾದ ಅರ್ಧಗೋಲಾಕಾರದ ಸ್ಟೀಲಿನ ಡಜನ್‌ಗೂ ಮಿಕ್ಕಿದ ಗುಂಡಿಗಳಿಂದ ಸಿಂಗರಿಸಿದ ಜಾಕೆಟ್ ತೊಟ್ಟಿರುತ್ತಿದ್ದ. ಸ್ವಲ್ಪ ಉದ್ದಾದ ಕೆಂಪನೆಯ ಕ್ಯಾಪಿಗೆ ಕರಿ ಜುಟ್ಟದಂಥ ನೂಲಿನ ಸೂಡು ಜೋತು ಬಿದ್ದಿರುತ್ತಿತ್ತು. ಬಂಗಾರ ವರ್ಣದ ಆತ ಹಿಂದೆ ಕೈಕಟ್ಟಿಕೊಂಡು ಸ್ವಲ್ಪ ಬಾಗಿ ನಡೆಯುತ್ತಿದ್ದ. ಕೈಯಲ್ಲಿ ಹೊಳೆಯುವ ಅರ್ಧಚಂದ್ರಾಕೃತಿಯ ಕೊಡಲಿ ಇರುತ್ತಿತ್ತು. ಅದರ ಹಿಡಿಕೆಯೂ ಸಿಂಗಾರಗೊಂಡಿತ್ತು. ಬಹುಶಃ ಅಪಮಾನಿಸುವ ಜನರನ್ನು ಅಂಜಿಸಲೆಂದೇ ಆ ಕೊಡಲಿಯನ್ನು ಹಿಡಿದುಕೊಂಡು ಹೋಗುತ್ತಿದ್ದ ಎಂದು ಅನಿಸುತ್ತಿತ್ತು. ಜನರು ಕೂಡ ಆತನಿಗೆ ಅಂಜುತ್ತಿದ್ದರು. ಆತ ಯಾರ ಕೂಡವೂ ಮಾತನಾಡುತ್ತಿದ್ದಿಲ್ಲ. (‘ಲಂಚವು ಅಪಮಾನಕರ’ ಎಂಬ ಸಾಮಾಜಿಕ ಪ್ರಜ್ಞೆಯ ಕಾಲದಲ್ಲಿ ಒಂದು ಸಣ್ಣ ತಪ್ಪು ಮಾಡಿ ಆತ ಅರೆಹುಚ್ಚನಾಗಿ ಬದುಕಿದ್ದನ್ನು ನೆನಪಿಸಿಕೊಂಡರೆ ಇಂದಿನ ಕಾಲದಲ್ಲಿ ತದ್ವಿರುದ್ಧ ಪರಿಸ್ಥಿತಿ ಇದೆ ಎಂಬುದು ಮನಸ್ಸಿಗೆ ಬಾರದೆ ಇರದು.)

ಸಂತ ಸೇನಾ ರಸ್ತೆಯ ಎಡಗಡೆಯ ಕೊನೆಯ ಚಾಳ ಸೀತಾರಾಮ ಪೈಲವಾನನದಾಗಿತ್ತು. ಆತನ ಇಬ್ಬರು ಗಂಡು ಮಕ್ಕಳಲ್ಲಿ ದೊಡ್ದವ ಲಾಠಿ ತಿರುಗಿಸುವುದರಲ್ಲಿ ನಿಷ್ಣಾತನಾಗಿದ್ದ. ಆತನ ಈ ವಿದ್ಯೆಗೆ ತಂದೆಯೆ ಗುರುವಾಗಿದ್ದ. ಸೀತಾರಾಮ ಸ್ವಲ್ಪ ದಾದಾ ಸ್ವಭಾವದವನ ಹಾಗೆ ಕಾಣುತ್ತಿದ್ದ. ನಾನು ಅವನಿಗೆ ಮಾಮಾ ಎಂದು ಕರೆಯುತ್ತಿದ್ದೆ. ಅವನ ಜೊತೆ ಸ್ವಲ್ಪ ಸಲಿಗೆ ಇತ್ತು. ಆತನ ಹೆಂಡತಿ ತನ್ನ ಚಾಳ ಬಿಟ್ಟು ಹೆಚ್ಚಾಗಿ ಹೊರಗೆ ಬರುತ್ತಿರಲಿಲ್ಲ. ಘನತೆ ಗೌರವದ ಹೆಣ್ಣುಮಗಳಾಗಿದ್ದಳು. ನಾನು ಒಂದೊಂದು ಸಲ ಆಡುತ್ತ ಅವರ ಚಾಳಲ್ಲಿ ಹೋಗುತ್ತಿದ್ದೆ. ಒಂದು ದಿನ ಆಕೆಯ ದೊಡ್ಡ ಮಗನನ್ನು ಕಾಣಲು ಅವರ ಮನೆಗೆ ಹೋದೆ. ಆಗ ಅವಳು ಕುಳ್ಳು ಹಚ್ಚಿದ ಒಲೆಯ ಮೇಲೆ ಸಾರು ತಯಾರು ಮಾಡುತ್ತಿದ್ದಳು. ಬೋಗುಣಿಯಲ್ಲಿ ಕುದಿಯುತ್ತಿರುವ ಒಂದು ಚಮಚೆ ಸಾರನ್ನು ತೆಗೆದುಕೊಂಡು ಉರಿಯುತ್ತಿದ್ದ ಕುಳ್ಳಿನ ಮೇಲೆ ಹಾಕಿ ಅದರ ವಾಸನೆ ತೆಗೆದುಕೊಂಡಳು. ನಾನು ಹಾಗೇಕೆ ಎಂದು ಕೇಳಿದೆ. ಹೀಗೆ ವಾಸನೆಯಿಂದ ಸಾರಿನ ರುಚಿ ಗುರುತಿಸುವುದಾಗಿ ತಿಳಿಸಿದಳು. ಅದರಿಂದ ಉಪ್ಪು ಖಾರ ಹೆಚ್ಚು ಕಡಿಮೆಯಾಗುವುದನ್ನು ಕೂಡ ತಿಳಿಯುವುದು ಎಂದು ಹೇಳಿದಳು! ಇಷ್ಟೆಲ್ಲ ಇದ್ದರೂ ಆಕೆಯ ಬದುಕಿನ ಸಾರ ನಿಸ್ಸಾರವಾಯಿತು. ಆಕೆಯ ಗಂಡ, ಸುಂದರ ಹೆಂಡತಿ, ಮಕ್ಕಳು ಮತ್ತು ಆಸ್ತಿಪಾಸ್ತಿ ಬಿಟ್ಟು ತನ್ನ ಪೈಲವಾನ್ ಗೆಳೆಯ ಅಲಿಯ 14 ವರ್ಷ ವಯಸ್ಸಿನ ಕಡುಗಪ್ಪು ಮಗಳೊಂದಿಗೆ ಕೊಲ್ಹಾಪುರಕ್ಕೆ ಓಡಿ ಹೋದ!

(ಚಿತ್ರಗಳು: ಸುನೀಲಕುಮಾರ ಸುಧಾಕರ)