ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು. ಇದು ಅತಿಶಯೋಕ್ತಿ ಅನಿಸುವುದಿಲ್ಲ. ಅಮ್ಮನಿಲ್ಲದ ಮನೆಯನ್ನು ಮನೆ ಎಂದು ಕಲ್ಪಿಸಿಕೊಳ್ಳಲು ನನಗಾದರೂ ಇಲ್ಲಿಯವರೆವಿಗೆ ಸಾಧ್ಯವಾಗಿಲ್ಲ. ಬಹುಶಃ ಎಲ್ಲರ ಅಭಿಮತವೂ ಇದೇ ಆಗಿದೆ ಅನಿಸುತ್ತದೆ ನನಗೆ. ಇಂತಹಾ ಹೆಣ್ಣಿಗೆ ಸಾಯಿ ಅಂದುಬಿಟ್ಟರೆ ಹಿಂದು ಮುಂದು ಯೋಚಿಸದೆ ಸಾಯಲಿಕ್ಕಾಗುತ್ತದಾ?!
ಆಶಾ ಜಗದೀಶ್ ಅಂಕಣ

 

ಬದುಕು ಕ್ಷಣಿಕ ನಿಜ. ಆದರೆ ಇಷ್ಟೊಂದು ಕ್ಷಣಿಕವಾ…. ಎನಿಸಿ ಮನಸ್ಸು ಗದ್ಗದಿತವಾಗುತ್ತಿದೆ. ಭೂಮಿಯ ತುಂಬೆಲ್ಲಾ ಇರುವುದು ನೆನಪುಗಳೇ. ಯಾರು ಹುಟ್ಟಿದ್ದು, ಯಾರು ಇದ್ದದ್ದು ಮತ್ತು ಯಾರು ಎದ್ದು ಹೋದದ್ದು ಎಂಬೆಲ್ಲ ಹೆಸರುಗಳ ಹೊತ್ತ ನಿಶ್ಚಲ ಮರದ ಎಲೆಗಳು… ಮತ್ತು ನಾವದನ್ನು ನಮ್ಮ ಶಕ್ತಿ ಇದ್ದಷ್ಟೂ ಅಲುಗಿಸುತ್ತೇವೆ, ಹೂ ಹಣ್ಣು ಎಲೆಗಳೆಂದು ಕೀಳುತ್ತೇವೆ, ಶಕ್ತಿ ತೀರಿದ ದಿನ ನಿಶ್ಚಲ ಮರ ಮತ್ತು ನಾವೂ ಅದರದೊಂದು ಎಲೆ. ಅದೂ ನಮ್ಮದೇ ಹೆಸರಿರುವ ಎಲೆ… ಮತ್ತಾರೋ ಬರುತ್ತಾರೆ ಮರವನ್ನು ಅಲುಗಿಸುತ್ತಾರೆ. ಯಾವ ಎಲೆ ಉದುರಿ ಮಣ್ಣಾಗುತ್ತದೋ ಯಾವ ಎಲೆ ಉಳಿದು ನಿಲ್ಲುತ್ತದೋ…

“ಒಂದು ಭೇಟಿ ಇಲ್ಲ
ತಳ ತೂತು ಬೀಳುವಷ್ಟು
ಮುಗಿದು ಖಾಲಿಯಾಗುವಷ್ಟು
ಮಾತುಗಳಾದರೂ ನಮ್ಮ ನಡುವೆ
ಹಾದು ಹೋಗಲಿಲ್ಲ
ಆದರಿವತ್ತು ಮನಸ್ಸು
ಸುಮ್ಮನೇ ಅಳುತ್ತಿದೆ
ನೀವು ಕಾವಿಟ್ಟ ಮುತ್ತುಗಳು
ಒಡೆದಂತೆ

ಎರಡು ತೀರಗಳು
ಒಂದಾಗಲು ಬರಸೆಳೆದು
ತಬ್ಬಿ ನಿಲ್ಲಬೇಕೆನ್ನುವುದು
ಎಷ್ಟು ಹಾಸ್ಯಾಸ್ಪದ
ಮತ್ತು

ನೀವು ಇರಬೇಕಿತ್ತು
ಎಂದು ಹಲುಬುವುದನ್ನು ಮಾತ್ರ
ನಮ್ಮ ಪಾಲಿಗುಳಿಸಿ…

ನಿಶಿದ್ಧ ಕನಸುಗಳು ಜೀಕಾಡುತ್ತವೆ”

(ಜಿ.ಕೆ.ರವೀಂದ್ರಕುಮಾರ್)

ಸೂತಕದ ಮನೆಯಿಂದ ದುಃಖವನ್ನು ಬರೆದಂತೆನಿಸುತ್ತಿದೆ ಯಾಕೋ…. “ಕಾವ್ಯಕೇಳಿ”ಯ ಹಿರಿಯಣ್ಣ ಜಿ.ಕೆ.ರವೀಂದ್ರಕುಮಾರರು ಹೇಳದೆ ಕೇಳದೆ ತಮ್ಮೆಲ್ಲ ಆಪ್ತರನ್ನು ಬಿಟ್ಟು ಆಘಾತ ಉಂಟುಮಾಡಿ ಎದ್ದುಹೋಗಿಬಿಟ್ಟಿದ್ದಾರೆ. ಇದು ತೀವ್ರ ಯಾತನಾಮಯ. ಒಂದೊಳ್ಳೆ ಕವಿ ಸಹೃದಯ ವಿಮರ್ಶಕ, “ತಾರಸೀ ಮಲ್ಹಾರ”ದ ನಾಯಕ ತಮ್ಮ ಕಿರುಬೆರಳ ಹಿಡಿದು ನಡೆಯುತ್ತಿದ್ದವರೆಲ್ಲರನ್ನೂ ಅನಾಥರನ್ನಾಗಿಸಿ ಹೊರಟುಬಿಟ್ಟಿದ್ದಾರೆ…

ಕಾವ್ಯಲೋಕವೇ ದಂಗಾಗಿದೆ… ದುಃಖದಲ್ಲಿ ಮುಳುಗಿದೆ… ತನಗಾದ ನಷ್ಟಕ್ಕೆ ಮರುಗುತ್ತಿದೆ… ಈ ಸಾವಾದರೂ ಒಳ್ಳೆಯವರನ್ನೇ ಏಕೆ ಆರಿಸಿಕೊಳ್ಳುತ್ತದೆ… ಅವರ ನಿಲ್ದಾಣ ಬರುವ ಮುಂಚೆಯೇ ದುಷ್ಟ ಕಂಡಕ್ಟರನಂತೆ ಅವಸರ ಮಾಡಿ ಏಕೆ ಇಳಿಸಿಬಿಡುತ್ತದೆ….

“ಅವನೊಂದು ಕಣ್ಣು ಅವನೊಂದು ಪಥ
ಅವನೆಲ್ಲಿಗೋ ಓಡುತ್ತಿದ್ದಾನೆ ಹಿಂಡು ಕಟ್ಟಿಕೊಂಡು
ಸಂದುವನೋ ನಂದುವನೋ
ಅವನೊಂದು ಕಣ್ಣು ಅವನೊಂದು ಪಥ

ಓಟಕ್ಕೆ ತಪ್ಪಿಸಿಕೊಂಡವರು ಅಪ್ಪಾಲೆ ತಿಪ್ಪಾಲೆ
ಓಡುತ್ತ ಸುತ್ತುತ್ತ
ಕಣ್ಣಿಗೆ ಕಣ್ಣು ಪಥಕ್ಕೆ

ಪಥಗಳಲಿ ಹುಟ್ಟಿಕೊಂಡವರು
ಸಾವಿರ ದಿಕ್ಕು ಸಾವಿರ ಪಥ
ಕಣ್ಣು ಬಾಣ ಕಾಲು ರಥ

ಯಾರ ಕಣ್ಣು ತಗುಲಿತ್ತೋ
ಯಾರ ಪಥ ತಿಳಿಯಿತೋ
ಎನ್ನುತ್ತಲೇ ಮುಗಿಯಿತೋ

ಹೊತ್ತಿಕೊಂಡಂತೆ ದಿಕ್ಕು
ಅಡ್ಡ ಹಾರಿದ ಹಕ್ಕಿ”

(ಜಿ.ಕೆ.ರವೀಂದ್ರಕುಮಾರ್)

ಅವರ ಕವಿತೆ ಅವರಿಗೇ ಅನ್ವರ್ಥವಾಯಿತೇ…. ಹನಿಗಣ್ಣಿಂದ ಅವರನ್ನು ನೆನೆಯುತ್ತಾ ಮುಂದುವರೆಯುತ್ತೇನೆ….

ಪ್ರಸ್ತುತ ಉಡುಪಿಯಲ್ಲಿ ನೆಲೆಸಿರುವ ಪೂರ್ಣಿಮಾ ಸುರೇಶ್ ಕಿರುತೆರೆ, ಚಲನಚಿತ್ರ, ನಾಟಕ, ಸಂಘಟನೆ, ಕವಿತೆ ಎಂದೆಲ್ಲ ಸಕ್ರಿಯರಾಗಿರುವ ಬಹುಮುಖ ಪ್ರತಿಭೆ. ಇವರ ಕವಿತೆಗಳೂ ಇವರ ಬಹುಮುಖ ಪ್ರತಿಭೆಯ ಪ್ರತಿಫಲವೂ ಹೌದು. ಮತ್ತೊಂದು ಕ್ಷೇತ್ರದ ಅನುಭವ ತಂದು ಕೊಡುವ ಹೊಸ ಆಯಾಮಗಳನ್ನು ಇವರ ಕವಿತೆಗಳಲ್ಲಿ ಗಮನಿಸಬಹುದು. ಅದರಲ್ಲೂ ರಂಗಭೂಮಿಯ ಸೂಕ್ಷ್ಮತೆ, ತೀವ್ರತೆ ಇವರ ಕವಿತೆಗಳಿಗೆ ದಕ್ಕುವುದೇ ಒಂದು ಚಂದ. ಇಲ್ಲಿ ಅವರ ಇತ್ತೀಚಿನ ಒಂದು ಪದ್ಯವಿದೆ.

ಗಂಡು ಹುಡುಗ ಆಗಬಾರದಿತ್ತೇ!
ಆ ನಿಡುಸುಯ್ಲು
ಹರಿತ ಚೂರಿಯಾಗಿ
ಮರ್ಮವನ್ನು ಇರಿಯುತ್ತಿತ್ತು
ಪಾದದ ಕೆಳಗಿನ ಮಣ್ಣ
ಜಾರದಂತೆ ಒತ್ತಿಟ್ಟುಕೊಳ್ಳಬೇಕು
ನೆಟ್ಟ ನೋಟದಿಂದ ನೋಡುತ್ತಿದ್ದೆ
-ನೀವು ನೆನಪಾಗುತ್ತೀರಿ

ನಿನ್ನ ಮಗಳು ದೊಡ್ಡವಳಾದಳೇ
ಒಳಕೋಣೆಗೆ ಸರಿಸಿಡು ಒಳಗೇ ಇರಲಿ
ನೋವು ಎದೆಯಾಳಕೆ ಬಸಿದು
ಒಡಲನುರಿಸಿ ಸಾಗುತ್ತಿದೆ
ಲಾವಾರಸ ಬಸಿದಿಟ್ಟುಕೊಳ್ಳಬೇಕು
ಹರಿದ ದೃಷ್ಟಿಯಿಂದ ಕಾಣುತ್ತಿದ್ದೆ
-ನೀವು ನೆನಪಾಗುತ್ತೀರಿ

ನೀನೀಗ ಅವನ ಹೆಂಡತಿ ನೆನಪಿರಲಿ!
ಅವನ ಹೆಜ್ಜೆಯ ಹಣೆಗೊತ್ತಿ ನಡೆ
ಸರ್ರನೆ ಜಾರಿ ಬಿದ್ದಿದ್ದೆ
ನನ್ನೊಳಗಿನಾಕೆಗೆ ಆತ್ಮಶಕ್ತಿ ತುಂಬಬೇಕು
ಇರಿವ ಕಣ್ಣಿಂದ ಕಂಡೆ
-ನೀವು ನೆನಪಾಗುತ್ತೀರಿ

ಮಂಗಳಕಾರ್ಯ ಮುಟ್ಟಾಗಿರುವೆ
ಹೊರಗೆ ನಿಲ್ಲು
ಹೆಣ್ತನ ಛೇಡಿಸಿತು
ಈ ಹೆಣ್ಣನ್ನು ಹಿಡಿದೆತ್ತಬೇಕು
ಅಪಮಾನಿತ ನಯನಗಳು
ಉರಿಯುತ್ತಿದ್ದವು
-ನೀವು ನೆನಪಾಗುತ್ತೀರಿ

ಅವಮಾನದ ಗಾಯ
ತಿರಸ್ಕೃತರಾಗುವ ನೋವು
ನೀವು ಉಂಡು, ಸೆಟೆದು ನಿಂತವರಲ್ಲವೇ!
ಶತಮಾನದ ಸಂಕೋಲೆ
ತುಕ್ಕು ಹಿಡಿದು ವಿಷವಾಗಿದೆ
ಅಪಮಾನದ ಬೂದಿಯಿಂದ
ಹೊಸ ಹುಟ್ಟನ್ನು
ಪಡೆದು ನಡೆದಾಡಬೇಕು

-ಇದೋ ಹೆಜ್ಜೆ ಎತ್ತಿಟ್ಟಿದ್ದೇವೆ
ಓ ಸಂವಿಧಾನ ಶಿಲ್ಪಿಯೇ
ನೀವು ನಮ್ಮೊಳಗಿದ್ದೀರಿ…

(ಪೂರ್ಣಿಮಾ ಸುರೇಶ್)

ಸಮಾಜ ಎಷ್ಟೆಲ್ಲ ಸ್ಥಿತ್ಯಂತರಕ್ಕೊಳಪಟ್ಟಿದ್ದರೂ ಇಂದಿಗೂ ತನ್ನ ಮೂಲಭೂತವಾದಿತನವನ್ನು ಸಂಪೂರ್ಣ ಬಿಟ್ಟುಕೊಟ್ಟಿಲ್ಲ. ಹೆಣ್ಣು ಮತ್ತು ಗಂಡನ್ನು ಕಾಣುವ ಮತ್ತು ಸ್ವೀಕರಿಸುವ ದೃಷ್ಟಿಯಿಂದಲೂ….

(ಪೂರ್ಣಿಮಾ ಸುರೇಶ್)

ಹೆಣ್ಣೂ ಹೆಣ್ಣನ್ನು ನೋಡಬೇಕಾದ ದೃಷ್ಟಿಯೂ ಸಾಕಷ್ಟು ಸರಿಯಾಗಬೇಕಿದೆ. ತಮ್ಮ ಈ ಕವಿತೆಯಲ್ಲಿ ಸಮಾಜದ ಅಷ್ಟೂ ನೋಟ, ಗ್ರಹಿಕೆಯನ್ನು ಯಥಾವತ್ ಚಿತ್ರಿಸುವ ಪೂರ್ಣಿಮ ಕೊನೆಯಲ್ಲಿ ಭರವಸೆಯ ತಿರುವಿಗೆ ಕವಿತೆಯನ್ನು ತಂದು ನಿಲ್ಲಿಸುವುದು ತರ್ಕಬದ್ಧವಾಗಿಯಷ್ಟೇ ಅಲ್ಲದೆ ಲಾಲಿತ್ಯಪೂರ್ಣವಾಗಿಯೂ ಇದೆ. ಕವಿತೆ ಎನ್ನುವುದೇ ಭಾಷೆಯೊಂದರ ಸೌಂದರ್ಯ ಸಾಧನ. ಅಲ್ಲದೇ ಹೋದರೆ ಅದೊಂದು ಅರೆಬೆಂದ ಗದ್ಯದ ನಕಲುಪ್ರತಿಯಾಗಿಬಿಡುತ್ತದೆ ಅಷ್ಟೇ.

ಅವಮಾನದ ನೋವು ಎದ್ದು ನಿಲ್ಲುವ ಶಕ್ತಿಯಾಗಿ ಮಾರ್ಪಾಟಾದ ಮಾದರಿಯನ್ನು ಮುಂದಿಟ್ಟುಕೊಂಡು ಸಾತ್ವಿಕ ಛಲವನ್ನು ಎದೆಯಲ್ಲಿ ತುಂಬಿಸಿಕೊಳ್ಳಬೇಕೆನ್ನುವ ಆಶಯವೇ ಇಲ್ಲಿ ಹೆಚ್ಚು ಶಕ್ತಿಶಾಲಿ. ನಮಗೆ ನಮಗಿಂತಲೂ ದೊಡ್ಡ. ಶತ್ರುವಾಗಲೀ ಪ್ರತಿಸ್ಫರ್ಧಿಯಾಗಲೀ ಇರಲಿಕ್ಕೆ ಸಾಧ್ಯವೇ ಇಲ್ಲ. ನಮ್ಮನ್ನು ನಾವು ಗೆದ್ದರೆ ಸಾಕು. ಈ ಕವಿತೆಯಲ್ಲಿನ ಆ ಧ್ವನಿ ಬಹಳ ಸಶಕ್ತವಾಗಿದೆ.

ನಾವೆಲ್ಲ ಸಾಮಾಜಿಕ ಜಾಲತಾಣಗಳಲ್ಲಿ ಅತ್ಯಂತ ಹೆಚ್ಚು ಸಕ್ರಿಯರಾಗಿರುವ ಈ ಕಾಲದಲ್ಲಿ ಫೇಸ್ ಬುಕ್ಕಿನಿಂದಲೇ ಹಲವಾರು ಕವಿಗಳ ಉದಯವೂ ಆಗುತ್ತಿದೆ. ಜೊಳ್ಳೂ ಇರಬಹುದು.. ಆದರೆ ದೃಢವಾದ ಕಾಳುಗಳೂ ಸಿಗುತ್ತಿವೆ ಎನ್ನುವುದು ಸಂತೋಷದ ವಿಷಯ. ಹೀಗೆ ಫೇಸ್ ಬುಕ್ಕಿನಿಂದ ನನಗೆ ಪರಿಚಯವಾದ ಕಾದಂಬಿಬನಿಯವರು ತಮ್ಮ ವಿಶಿಷ್ಟ ಕವಿತೆಗಳಿಂದ ಕಾವ್ಯ ಲೋಕವನ್ನು ಸೆಳೆಯುತ್ತಿರುವವರು. ಅವರ ಕಾವ್ಯಕ್ಕೊಂದು ಪ್ರಾಮಾಣಿಕ ದನಿಯಿದೆ, ಆಧುನಿಕ ಸ್ಪರ್ಷವಿದೆ, ತೀವ್ರತೆಯಿದೆ. ಇಲ್ಲಿರುವ ಅವರ ಕವಿತೆ ಹೆಣ್ಮನದ ಕಾರಣಕ್ಕಾಗಿಯೂ ನನಗಿಷ್ಟವಾದೊಂದು ಕವಿತೆ…

“ಹೀಗೆ ಸಾಯಿ ಎಂದರೆ
ಹೇಗೆ ಸಾಯುವುದು ಹಠಾತ್ತನೆ

ಮರಣಕೆ ಬಂದವರು ನಕ್ಕಾರು
ಮನೆಯ ಕಸ ಗುಡಿಸಿಲ್ಲ
ಅಡುಗೆ ಮನೆ ಕಂಡು ಹೇಸಿಯಾರು
ಪಾತ್ರೆ ತೊಳೆದಾಗಿಲ್ಲ
ಬಟ್ಟೆ ಒಗೆದಿಲ್ಲ ನೆಲ ಒರೆಸಿಲ್ಲ
ಸ್ವಚ್ಛಗೊಳಿಸಿಲ್ಲ ಬಚ್ಚಲು,ಕಕ್ಕಸ್ಸು
ಗಿಡಗಳಿಗೆ ನೀರುಣಿಸಿಲ್ಲ
ಬೆಕ್ಕು ನಾಯಿಗೂ ಊಟ ಹಾಕಿಲ್ಲ
ನಾಳಿನ ತಿಂಡಿಯ ಕುರಿತು ಇನ್ನೂ ಯೋಚಿಸಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಮನೆಗೆ ಬಂದೊಡನೆ ಪತಿ ಸುತರಿಗೆ
ಮನೆಯೊಡತಿಯ ಹುಡುಕುವ
ಅಭ್ಯಾಸ ಮೊದಲಿಲ್ಲ
ನುಗ್ಗುವರು ಅಡುಗೆಕೋಣೆಗೆ
ಅಡುಗೆ ಇನ್ನೂ ಮುಗಿದಿಲ್ಲ
ಹಸಿದವರ ಮುನಿಸು ನಿಮಗೆ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಮಗಳ ಬಾಣಂತನ ಮಾಡಿಲ್ಲ
ಮೊಮ್ಮಗುವ ಬೆಳೆಸಿ ಕೊಟ್ಟಿಲ್ಲ
ಮಗನ ಸಿಇಟಿ ಇನ್ನೂ ಮುಗಿದಿಲ್ಲ
ಗಂಡನನು ರೊಟೀನ್ ಚೆಕಪ್ಪಿಗೆ
ಕರೆದೊಯ್ಯುವ ದಿನಾಂಕ ಸನಿಹವಿಲ್ಲ
ಹೇಗೆ ಸಾಯುವುದು ಹಠಾತ್ತನೆ

ಗೃಹಿಣಿಯ ಅಗತ್ಯ
ಇನ್ನೂ ಮುಗಿದಂತಿಲ್ಲ
ಈಗೀಗ ಮನೆಗೆಲಸಕೆ
ಜನ ಸಿಗುವುದೂ ಇಲ್ಲ
ವಯಸ್ಸಾದ ಪತಿ ಮರು
ಮದುವೆಯಾಗುವರೋ ತಿಳಿದಿಲ್ಲ
ಹೇಗೆ ಸಾಯುವುದು ಹಠಾತ್ತನೆ”

(ಕಾದಂಬಿನಿ ರಾವಿ)

(ಕಾದಂಬಿನಿ ರಾವಿ)

ಈ ಕವಿತೆ ಅದೆಷ್ಟು ಚಂದ… ಒಮ್ಮೊಮ್ಮೆ ಸುಮ್ಮನೇ ನನ್ನ ಪುಟ್ಟ ಮಗಳ ಮುಂದೆ ಮಲಗಿದಂತೆ ಮಾಡಿ ಅವಳು ಏನು ಮಾಡಬಹುದೆಂದು ಕಾಯುತ್ತಿರುತ್ತೇನೆ. ಅವಳು ನನ್ನನ್ನು ಏಳಿಸಲು ಏನೇನೆಲ್ಲ ಮಾಡಿ ಕೊನೆಗೆ ಅಳಲು ಶುರುಮಾಡುತ್ತಾಳೆ. ಆಗೆಲ್ಲಾ ನನಗೆ ಸುಮ್ಮನೆ ಒಂದು ಯೋಚನೆ ಮೂಡಿ ಆರುತ್ತದೆ. ಒಂದು ವೇಳೆ ಯಾರೂ ಇಲ್ಲದಿರುವಾಗ, ನಾವಿಬ್ಬರೇ ಇದ್ದಾಗ, ನನಗೇನಾದರೂ ಆಗಿ ಸತ್ತೇ ಹೋದರೆ… ನನ್ನ ಪುಟ್ಟ ಮಗು ಎಷ್ಟೆಲ್ಲ ಭಯ, ಗಾಬರಿ, ದುಃಖದಿಂದ ಅಳಬಹುದು ಅನಿಸಿ… ಅಲ್ಲಿಂದ ಮುಂದೆ ಯೋಚಿಸಲೇ ಆಗುವುದಿಲ್ಲ. ಭಗವಂತ ಯಾವುದೇ ಕಾರಣಕ್ಕೂ ಹಾಗೆ ನನ್ನನ್ನು ಕರೆದೊಯ್ಯಬೇಡವೆಂದು ಅಳುತ್ತಾ ಒಂದೇ ಪ್ರಾರ್ಥಿಸುತ್ತೇನೆ. ಎಷ್ಟೇ ಆಗಲಿ ನಾನು ಸಾಮಾನ್ಯರಲ್ಲಿ ಸಾಮಾನ್ಯ ತಾಯಿ. ನನಗೆ ಬೇಕಾಗಿರುವುದು ನನ್ನ ಮಗುವಿನ ಸಂತೋಷವೇ ಹೊರತು, ದುಃಖವಲ್ಲ. ಅರೆ… ಇದೇ ಹೊತ್ತಿನಲ್ಲಿ ನನಗಾಗಿ ನಾನು ಬದುಕಬೇಕೆಂಬುದನ್ನು ಮರೆತು ಎಷ್ಟು ದಿನವಾಯಿತು!? ಅಂತಲೂ ಅನಿಸಿ ಚಕಿತಗೊಳ್ಳುತ್ತೇನೆ…

ಹೆಣ್ಣು ಪ್ರತಿಯೊಂದು ಅವಸ್ಥೆಯನ್ನೂ ಬದಲಾವಣೆಯ ಗುರುತರ ರೂಪಾಂತರಕ್ಕೊಳಗಾಗಿಯೇ ಧರಿಸುವುದು.. ಹಾಗಾಗಿಯೇ ಅವಳು ಆ ಎಲ್ಲ ಅವಸ್ಥೆಯಲ್ಲೂ ತೀವ್ರವಾಗಿ ಬದುಕುತ್ತಾಳೆ. ಗಂಡು ಕ್ಷುಲ್ಲಕ ಎಂದುಕೊಳ್ಳುವ ಅಥವಾ ಅವನ ಗಮನಕ್ಕೂ ಬಾರದೇ ಹೋಗಿಬಿಡುವ ಅವೆಷ್ಟೋ ವಿಚಾರಗಳು ಹೆಣ್ಣಿನ ಪಾಲಿಗೆ ತಲೆ ಹೋಗುವಂತವು. ಎಲ್ಲಿಗಾದರೂ ಹೋಗಬೇಕೆಂದರೆ ಗಂಡಸು ಸುಮ್ಮನೇ ತಯಾರಾಗಿ ಹೋಗಿ ಗಾಡಿ ಸ್ಟಾರ್ಟ್ ಮಾಡಿ, ಅವಳಿಗಾಗಿ ಅವಸರಿಸುತ್ತಾ, ನಿಂದು ಮುಗಿಯುವುದಿಲ್ಲ ಎಂದು ಗೊಣಗುತ್ತಾ ಹಾರ್ನ್ ಮಾಡತೊಡಗುತ್ತಾನೆ. ಆದರೆ ಹೆಣ್ಣಿಗೆ ಹಾಗಲ್ಲ, ಸಿಂಕಿನಲ್ಲಿನ ಪಾತ್ರೆಗಳನ್ನು ತೊಳೆದಿಡಬೇಕು, ಗ್ಯಾಸ್ ಒರೆಸಿಡಬೇಕು, ರೆಗ್ಯುಲೇಟರ್ ಆಫ್ ಆಗಿದೆಯಾ ಇಲ್ಲವಾ ನೋಡಬೇಕು, ಬಂದ ಮೇಲಿನ ಅಡುಗೆಗೊಂದು ಪುಟ್ಟ ತಯಾರಿ, ವಸ್ತುಗಳನ್ನು ಆಯಾ ಸ್ಥಳದಲ್ಲಿಟ್ಟು, ಮನೆ ಗುಡಿಸಿ ಹೊರಡಬೇಕು, ಬರುವಾಗ ಯಾರಾದರೂ ಮನೆಗೆ ಬಂದರೆ ಆಡಿಕೊಳ್ಳಬಾರದಲ್ಲ, ಅತ್ತೆಗೆ ಸಪ್ಪೆ ಸಾರು, ಮಾವನಿಗೆ ಶುಗರ್ ಲೆಸ್ ಟೀ, ಮಕ್ಕಳಿಗೆ ಸಂಜೆಯ ಸ್ನಾಕ್ಸ್… ಇದೆಲ್ಲ ಮುಗಿದ ನಂತರ ಯಾವ ಸೀರೆ, ಎಂತಹ ಬ್ಲೌಸು, ಮ್ಯಾಚಿಂಗ್ ನೇಲ್ ಪಾಲೀಶ್, ಮ್ಯಾಟ್ ಲಿಪ್ಸ್ಟಿಕ್, ಡ್ರೆಸ್ ಥೀಮ್ ಏನಾದರೂ ಇದೆಯಾ, ಇಲ್ಲವಾ, ಕ್ಲಾಸಿ ಡ್ರೆಸ್ ತೊಟ್ಟರೆ ಹೇಗೆ …. ಸಾವಿರ ಸಾವಿರ ತಲೆಬಿಸಿಗಳು. ನೋಡುವವರ ಮೆಚ್ಚುವವರ ನಿರೀಕ್ಷೆಗಳು ಆಮಿಷಗಳಾಗುತ್ತವೆ, ಇಲ್ಲ ಎನ್ನಲಾಗುವುದಿಲ್ಲ. ಆದರೆ ಅವಳು ಚಂದ ಕಾಣ ಬಯಸುವುದು ಅವಳದೇ ತೃಪ್ತಿಗಾಗಿಯೂ.

ಖ್ಯಾತ ಹಾಲಿವುಡ್ ನಟಿ ಮರ್ಲಿನ್ ಮನ್ರೋ ತಾನು ಸತ್ತ ನಂತರ ತನ್ನ ದೇಹವನ್ನು ಬೇರೆ ಯಾರಾದರೂ ಬಂದು ನೋಡುವ ಮುನ್ನ ನೀನು ಬಂದು ಸುಂದರವಾಗಿ ಮೇಕಪ್ ಮಾಡಬೇಕು ಎಂದು ತನ್ನ ಮೇಕಪ್ ಮ್ಯಾನಿಗೆ ಹೇಳಿದ್ದಳಂತೆ. ನಂತರ ಅವಳ ಅಕಾಲಿಕ ಮರಣವಾದಾಗ ಆ ನಿಷ್ಠಾವಂತ ಮೇಕಪ್ ಮ್ಯಾನ್ ಅದನ್ನು ಚಾಚೂ ತಪ್ಪದೆ ಪಾಲಿಸಿದನಂತೆ. ಸತ್ತ ನಂತರವೂ ತಾನು ಚಂದವೇ ಕಾಣಿಸಬೇಕು ಎನ್ನುವುದು ಅವಳ ಅಭೀಪ್ಸೆಯಾಗಿತ್ತು. ಮತ್ತೆ ಇತರರೆದುರೂ ಸಹ ಚಂದ ಕಾಣಿಸಬೇಕು ಎಂದು ನಟಿಯಾದವಳಿಗೆ ಮಾತ್ರ ಅನಿಸಬೇಕಿಲ್ಲ. ಸಾಮಾನ್ಯ ಹೆಣ್ಣಿಗೂ ಹಾಗೇ ಅನಿಸುತ್ತದೆ.

ಹೆಣ್ಣು ತನ್ನ ಮನೆಯ, ಇರುವ ಪರಿಸರದ ಸೌಂದರ್ಯವನ್ನು ಹೆಚ್ಚಿಸುವ ರೀತಿಯಲ್ಲೇ ತನ್ನಿರುವಿಕೆಯಿಂದಲೇ ಆ ಪರಿಸರಕ್ಕೊಂದು ಸೌಂದರ್ಯ ದಕ್ಕುವಂತೆ ಮಾಡಬಲ್ಲವಳು. ಅದೇ ವೇಳೆ ತನ್ನ ಒಳಗಿನಲ್ಲೂ ಸೌಂದರ್ಯದ ಚಿಲುಮೆ ಬತ್ತದಿರುವಂತೆ ಕಾಪಿಟ್ಟುಕೊಳ್ಳಬಲ್ಲವಳು. ಇದೊಂದು ಮಾತು, ಯಾರಿಗಾದರೂ ಗೊತ್ತಿರಬಹುದು… ಗಂಡು ಕಟ್ಟಡವನ್ನು ಕಟ್ಟುತ್ತಾನೆ, ಹೆಣ್ಣು ಅದನ್ನು ಮನೆಯನ್ನಾಗಿ ಮಾಡುತ್ತಾಳೆ ಎಂದು. ಇದು ಅತಿಶಯೋಕ್ತಿ ಅನಿಸುವುದಿಲ್ಲ. ಅಮ್ಮನಿಲ್ಲದ ಮನೆಯನ್ನು ಮನೆ ಎಂದು ಕಲ್ಪಿಸಿಕೊಳ್ಳಲು ನನಗಾದರೂ ಇಲ್ಲಿಯವರೆವಿಗೆ ಸಾಧ್ಯವಾಗಿಲ್ಲ. ಬಹುಶಃ ಎಲ್ಲರ ಅಭಿಮತವೂ ಇದೇ ಆಗಿದೆ ಅನಿಸುತ್ತದೆ ನನಗೆ.

ಇಂತಹಾ ಹೆಣ್ಣಿಗೆ ಸಾಯಿ ಅಂದುಬಿಟ್ಟರೆ ಹಿಂದು ಮುಂದು ಯೋಚಿಸದೆ ಸಾಯಲಿಕ್ಕಾಗುತ್ತದಾ?! ಖಂಡಿತಾ ಸಾಧ್ಯವೇ ಇಲ್ಲ. ಯಾವ ಹೆಣ್ಣೂ ಹಾಗೆ ಸಾಯಲು ಇಚ್ಛಿಸಲಾರಳು.

ಇನ್ನು ಏನೇನೋ… ಹೀಗೆಲ್ಲ ಯೋಚಿಸುವಂತೆ ಮಾಡಿದ ಶ್ರೇಯ ಕಾದಂಬಿನಿಯವರ ಈ ಕವಿತೆಗೆ ಸಲ್ಲುತ್ತದೆ. ಅವರ “ಹಲಗೆ ಮತ್ತು ಮೆದು ಬೆರಳು” ಮತ್ತು “ಕಲ್ಲೆದೆಯ ಮೇಲೆ ಕೂತ ಹಕ್ಕಿ” ಎರಡೂ ಸಂಕಲನಗಳೂ ಬಹಳ ಚಂದದ ಪುಸ್ತಕಗಳು. ಸಮಕಾಲೀನ ಕವಯಿತ್ರಿಯರ ಸಾಲಿನಲ್ಲಿ ಗಮನಾರ್ಹ ಕವಿತೆಗಳನ್ನು ಬರೆಯುತ್ತಿರುವ ಕವಯಿತ್ರಿ ಕಾದಂಬಿನಿ ರಾವಿ.

ಅವಮಾನದ ನೋವು ಎದ್ದು ನಿಲ್ಲುವ ಶಕ್ತಿಯಾಗಿ ಮಾರ್ಪಾಟಾದ ಮಾದರಿಯನ್ನು ಮುಂದಿಟ್ಟುಕೊಂಡು ಸಾತ್ವಿಕ ಛಲವನ್ನು ಎದೆಯಲ್ಲಿ ತುಂಬಿಸಿಕೊಳ್ಳಬೇಕೆನ್ನುವ ಆಶಯವೇ ಇಲ್ಲಿ ಹೆಚ್ಚು ಶಕ್ತಿಶಾಲಿ. ನಮಗೆ ನಮಗಿಂತಲೂ ದೊಡ್ಡ. ಶತ್ರುವಾಗಲೀ ಪ್ರತಿಸ್ಫರ್ಧಿಯಾಗಲೀ ಇರಲಿಕ್ಕೆ ಸಾಧ್ಯವೇ ಇಲ್ಲ.

ಶಿರಸಿಯಲ್ಲಿ ಸರ್ಕಾರಿ ಶಾಲೆಯ ಶಿಕ್ಷಕಿಯಾಗಿ ಕೆಲಸ ಮಾಡುತ್ತಿರುವ ಶೋಭಾ ಹಿರೇಕೈ ರವರು ಕಥನಾತ್ಮಕ ಶೈಲಿಯ ಸುಂದರ ಕವಿತೆಗಳನ್ನು ಬರೆದು ಸೈ ಎನಿಸಿಕೊಂಡವರು. ಇತ್ತೀಚೆಗೆ “ಅವ್ವ ಮತ್ತು ಅಬ್ಬಲಿಗೆ” ಎನ್ನುವ ತಮ್ಮ ಚೊಚ್ಚಲ ಕವನ ಸಂಕಲನವನ್ನು ಹೊರತರುವ ಮೂಲಕ ಕಾವ್ಯ ಜಗತ್ತಿಗೆ ಅಧಿಕೃತವಾಗಿ ಅಡಿ ಇಟ್ಟಿದ್ದಾರೆ. ಇಲ್ಲಿ ಅವರದೊಂದು ಚಂದದ ಕವಿತೆ ಇದೆ ನೋಡಿ…

“ಅವರಂತೆ ತಣ್ಣೀರಲ್ಲಿ ಮಿಂದು
ನಲವತ್ತೊಂದನೇ ದಿನದ
ವ್ರತ ಮುಗಿಸಿ
ಆ ಕೋಟೆ ಕೊತ್ತಲಗಳ ದಾಟಿ
ಬೆಟ್ಟವೇರಿ ಗುಡ್ಡವಿಳಿದು, ಕಣ್ಗಾವಲ ತಪ್ಪಿಸಿ
ನಿನ್ನ ಬಳಿ ನಡೆದೇ
ಬಂದೆನೆಂದು ಇಟ್ಟುಕೋ
ಹೆಚ್ಚೆಂದರೆ ನಾನಲ್ಲಿ
ಏನು ಮಾಡಿಯೇನು?

ಬಾಲಕನಾಗಿಹೆ ಅಯ್ಯಪ್ಪ ಈ
ಹಾಡು ಕೇಳಿ ಕೇಳಿ
ಇತ್ತೀಚೆಗೆ ನಿನ್ನ ಹಳೆಯದೊಂದು
ಪಟ ನೋಡಿದ ಮೇಲೆ
ನನ್ನ ಮಗನಿಗೂ ನಿನಗೂ
ಯಾವ ಫ಼ರಕ್ಕೂ ಉಳಿದಿಲ್ಲ ನೋಡು

ಎಷ್ಟು ವರುಷ ನಿಂತೇ ಇರುವೆ
ಬಾ ಮಲಗಿಕೊಂಡು ಎಂದು
ಮಡಿಲ ಚೆಲ್ಲಿ
ನನ್ನ ಮುಟ್ಟಿನ ಕಥೆಯ
ನಡೆಯುತ್ತಿರುವ ಒಳ ಯುದ್ಧಗಳ ವ್ಯಥೆಯ
ನಿನಗೆ ಹೇಳಿಯೇನು
ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೋಡು
ಹುಳಿಯಾಗಿದೆಯೇನೋ… ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು

ದೃಷ್ಟಿ ತೆಗೆದು ನೆಟಿಕೆ ಮುರಿದು
ಎದೆಗೊತ್ತಿಕೊಂಡು ಹಣೆಗೊಂದು ಮುತ್ತಿಕ್ಕಿ
ಥೇಟ್ ನನ್ನ ಮಗನಂತೇ ಎನ್ನುತ
ಹದಿನೆಂಟನೆ ಕೊನೆಯ ಮೆಟ್ಟಿಲ
ಕೆಳಗಿಳಿದ ಮೇಲೂ…
ಮತ್ತೊಮ್ಮೆ ಮಗದೊಮ್ಮೆ ನಿನ್ನ
ತಿರು ತಿರುಗಿ ನೋಡಿಯೇನು

ಈಗ ಹೇಳು
ನನ್ನ ಮುಟ್ಟು ನಿನಗೆ ಮೈಲಿಗೆಯೇನು?!”

(ಶೋಭಾ ಹಿರೇಕೈ)

ಮುಟ್ಟು ಮೈಲಿಗೆ ಎನ್ನುವ ಹೆಸರಿನಲ್ಲಿ ಸಮಾಜ ಅವಳಿಗೆ ಅದನ್ನು ಕಲಿಸಲು ಹೊರಡುವ ಪರಿ ಭಯಾನಕ. ಅದಕ್ಕಾಗಿ ಇಲ್ಲದ ಪುರಾಣ, ಸಂಪ್ರದಾಯ, ಆಚಾರ, ವಿಚಾರ, ಕಂದಾಚಾರಗಳೂ ಎದ್ದು ಕೂರುತ್ತವೆ. ನಾಲ್ಕಕ್ಷರ ಕಲಿತು ಏನು ಏಕೆ ಹೇಗೆ ಎಂದು ಕೇಳುವ ಮಟ್ಟಕ್ಕೇನಾದರೂ ಅವಳು ಬೆಳೆದುಬಿಟ್ಟರೆ ಹತ್ತಿಕ್ಕುವ ವಿವಿಧ ಶಕ್ತಿಗಳು ಒಂದಾಗಿ ಬೇಕಾದರೂ ತಮ್ಮ ಶಕ್ತಿ ಪ್ರದರ್ಶನ ಮಾಡಿಬಿಡುತ್ತವೆ. ಸಮಾಜದ ಕಟ್ಟ ಕಡೆಯ ಹೆಣ್ಣುಮಗಳಿಗೆ ಸಿಗದ, ಎಲ್ಲೋ ಕೆಲವರಿಗೆ ಸಿಕ್ಕ ಬಿಡುಗಡೆಯನ್ನು ಸಾಮಾನ್ಯೀಕರಿಸುವುದಾಗಲೀ ಸರ್ವಮಾನ್ಯಗೊಳಿಸಲಿಕ್ಕಾಗಲೀ ಸಾಧ್ಯವಿಲ್ಲ.

ಅಯ್ಯಪ್ಪ ಜನಿಸಲು ಹರಿ ಹೆಣ್ಣಿನ ರೂಪ ಧರಿಸಿ ಹರನನ್ನು ಕೂಡಿದನಂತೆ. ಹಾಗಾದರೆ ಹೆಣ್ಣಿನ ವಾಸನೆ ಕಂಡರಾಗದ ಶಿಶುವಿಗೆ ಜನ್ಮ ನೀಡಲು ಹರಿಗೆ ಹೆಣ್ಣಿನ ರೂಪದ ಅವಶ್ಯಕತೆ ಬಿದ್ದದ್ದಾದರೂ ಏಕೆ? ಮುಟ್ಟಾಗುವ ಗರ್ಭವೇ ಏಕೆ ಬೇಕಾಯ್ತು?

ಸಂಪ್ರದಾಯ ಸಂಸ್ಕೃತಿಯನ್ನು ಗೌರವಿಸುವ ಮತ್ತೊಂದು ಕೊಂಡಿಗೆ ತಲುಪಿಸುವ ಅಘೋಶಿತ ಹೊಣೆಯನ್ನು ಸಮಾಜದ ಮನಸ್ಸನ್ನು ಅರಿತವರಂತೆ ಹೊರುತ್ತಾಳೆಂದ ಮಾತ್ರಕ್ಕೆ ಆ ಸಂಪ್ರದಾಯ ಕಲುಷಿತಗೊಳ್ಳಬೇಕಿಲ್ಲವಲ್ಲ. ಮನುಷ್ಯ ಹುಟ್ಟಿದ ನಂತರವೇ ಸಂಪ್ರದಾಯ ಹುಟ್ಟಿರುವುದೇ ವಿನಃ. ಸಂಪ್ರದಾಯ ಹುಟ್ಟಿದ ನಂತರ ಮನುಷ್ಯ ಹುಟ್ಟಿದ್ದಲ್ಲ. ಸ್ತ್ರೀಯೇ ಪ್ರಕೃತಿ. ಪ್ರಕೃತಿ ಎಂದು ಯಾವುದನ್ನು ಕರೆಯುತ್ತೇವೆ ಹಾಗಾದರೆ… ಯಾವುದು ಸಹಜವೋ ಅದು.
ಹಾಗಾದರೆ ಋತುಸ್ರಾವವೂ ಸಹಜವೇ. ಹೀಗಿರುವಾಗ ಅದು ಮೈಲಿಗೆಯಾದದ್ದು ಹೇಗೆ…. (ಅದನ್ನು ಮುಟ್ಟು ಎನ್ನುವ ಹೆಸರಿಟ್ಟು ಕರೆದ ಪುಣ್ಯಾತ್ಮ/ಪುಣ್ಯಾತ್ಗಿತ್ತಿ ಯಾರೋ…).

ಇಂದಿಗೂ ಆ ದಿನಗಳಲ್ಲಿ ಮನೆಯೊಳಗಿನ ದೇವರ ಕೋಣೆಗೆ ಹೋಗಲಿಕ್ಕೂ ಎಂಥದೋ ಅಂಜಿಕೆ ಕಾಡುತ್ತದೆ ನನಗೆ. ಸುಮ್ಮನೇ ಮನಸ್ಸನ್ನಾವರಿಸುವ ಅಕಾರಣ ತಪ್ಪಿತಸ್ಥ ಭಾವನೆ ಕಾಡುತ್ತದೆ. ಈ ಎಲ್ಲಕ್ಕೂ ಸಮಾಜವನ್ನೇ ಹೊಣೆ ಮಾಡಬೇಕೆನಿಸುತ್ತದೆ ನನಗೆ. ಯಾಕೆ ಮಾಡಬಾರದು…! ಇದು ನನ್ನ ಮನಸಲ್ಲಿ ಬೇರೂರಿ ಬೆಳೆಯಲು ಕಾರಣವೇ ಸಮಾಜ….

ಹೀಗೆ ಏನೆಲ್ಲ ಮಾತುಗಳನ್ನು ಒಟ್ಟು ಮಾಡಿ ಸಾಂದ್ರಗೊಳಿಸಿ ಕೆಲವೇ ಅಕ್ಷರಗಳ ಅಚ್ಚಿಗಿಳಿಸಿಟ್ಟಿರುವಂತೆ ಹೆಣ್ಮನದ (ಹೆಣ್ಣು ಗಂಡೆನ್ನುವ ಪ್ರತ್ಯೇಕತೆಯನ್ನು ಮೀರಿ…) ಎದೆ ಕದ ತಟ್ಟಿಬಿಡುತ್ತದೆ ಈ ಕವಿತೆ.

“ಹುಲಿ ಹಾಲನುಂಡ ನಿನಗೆ
ತಾಯ ಹಾಲ ರುಚಿ ನೋಡು
ಹುಳಿಯಾಗಿದೆಯೇನೋ… ಎನ್ನುತ್ತಲೇ
ತೇಗಿಸಲು ಬೆನ್ನ ನೀವಿಯೇನು”

ಎನ್ನುವಾಗಲಂತೂ ಹೆಣ್ಣಾದವಳ ಕೈಗೆ ಹರಿ ಹರ ಬ್ರಹ್ಮಾದಿ ತ್ರಿಮೂರ್ತಿಗಳು ಸಿಕ್ಕರೂ ಮಡಿಲಲ್ಲಿ ಲಾಲಿಸಿ ಮಮತೆಯ ರುಚಿ ಉಣಿಸಿಬಿಡುತ್ತಾಳೇನೋ ಅನಿಸಿಬಿಟ್ಟಿತು. ಅದರಲ್ಲೂ ಶಿಶುಗಳಿಗೆ ತೇಗಿಸುವುದು ಒಂದು ಅನಿವಾರ್ಯ ಕ್ರಿಯೆ ಮತ್ತು ಅದ್ಭುತ ಕಲೆಯೂ ಸಹ. ಕಾರಣ ಆ ಎಳೆ ಗುಬ್ಬಿ ಮರಿಯಂತಾ ಶಿಶುಗಳನ್ನು ಮುಟ್ಟಲೂ ಭಯವಾಗುವಾಗ ಹೆಗಲ ಮೇಲೆ ಮಲಗಿಸಿಕೊಂಡು ತೇಗಿಸುವುದು ಯಾರಾದರೂ ಮಾಡುತ್ತಾರೆಂದರೆ ಅವಳು ತಾಯಿಯೇ ಆಗಿರಬೇಕು… ಅವಳಿಗೆ ಎರೆಡು ವಿಷಯ ಗೊತ್ತು, ಒಂದು ನನ್ನ ಮಗುವಿಗೆ ಸ್ವಲ್ಪವೂ ನೋವಾಗಬಾರದು, ಮತ್ತೊಂದು ನನ್ನ ಮಗು ಆರೋಗ್ಯವಾಗಿರಬೇಕು. ಇದಕ್ಕಿರುವುದು ಒಂದೇ ದಾರಿ. ಅದು ಈ ಕೆಲಸವನ್ನು ನಾನೇ ಮಾಡಬೇಕು.

ಓಹ್… ಈ ಕವಿತೆ ಬಹಳ ಕಾಡಿತು. ಎಂದೇ ಇಷ್ಟೆಲ್ಲ ಹೇಳಿದೆ…

ಕಾಡುವ ಕವಿತೆಗಳನ್ನು ಬರೆಯುವ ಮತ್ತೊಬ್ಬ ಕವಯಿತ್ರಿ ರೂಪಶ್ರೀ ಕಲ್ಲಿಗನೂರು. ಪತ್ರಿಕೋದ್ಯಮ, ಇಲ್ಲಸ್ಟ್ರೇಸನ್ಸ್, ಚಿತ್ರಗಳು, ಸಾಹಿತ್ಯ ಮತ್ತು ಅವಿಭಾಜ್ಯ ಅಂಗವೆಂಬಂತೆ ಕವಿತೆಗಳೊಂದಿಗೆ ಒಡನಾಡುವ ಬಹುಮುಖ ಪ್ರತಿಭೆ ರೂಪಶ್ರೀ ಸಧ್ಯ ಬೆಂಗಳೂರಿನ ವಾಸಿ ಮತ್ತು ಕೆಂಡಸಂಪಿಗೆಯಲ್ಲಿ ಕೆಲಸ ಮಾಡುತ್ತಾರೆ.
ಇವರ “ಭವಿಷ್ಯತ್ತಿನ ಮಾತುಕತೆ” ಎನ್ನುವ ಈ ಕವಿತೆ ಹಿರಿಯರ ಹಳಹಳಿಕೆಯಷ್ಟೇ ಹೊಸ ಪೀಳಿಗೆಯ ಕಳವಳವೂ ಆಗಿರುವುದು ವಾಸ್ತವದ ಗಂಭೀರತೆಯನ್ನು ತೋರಿಸಿಕೊಡುತ್ತಿದೆ.

“ಅಮ್ಮನಂಥ ಅಗಾಧ ಹೆಮ್ಮರ
ಸುಲಭಕ್ಕೆ ಸೋತು ಬಗ್ಗುವುದಲ್ಲ
ಆಕ್ರಮಣ, ಅತಿಕ್ರಮಣ ಇನ್ನೇನು ಮುಗಿಲು ಮುಟ್ಟಲಿದೆ
ಕೊರೆದು ಬಗೆದು, ವಿಕಾರಗೊಂಡಿರುವ
ಅದರ ದೇಹ ಛಿದ್ರಛಿದ್ರವಾಗಲಿದೆ
ಅಲ್ಲಿ ಹುಲ್ಲು ಸಹ ಹುಟ್ಟಲಾರದು

ಹೂ ಹಣ್ಣುಗಳೆಲ್ಲ ಕಾಲಕ್ಕೆ ಕಾದು
ಮಾಗುವಂತಿಲ್ಲ ಈಗ
ಇವರೋ, ಅವರೋ, ಯಾರು ಬಂದಾಗಲೂ
ಫಲ ಕೊಡಬೇಕಷ್ಟೇ!
ಮದ್ದುಗಳಿವೆ ಅವರಲ್ಲಿ, ಇಲ್ಲವೆನ್ನಲಾಗದು
ಕಾಲ ಮೂಡುವ ಮುನ್ನವೇ ದೇಹ ಮಾಗಲಿದೆ
ಹೆತ್ತ ನೋವಾರುವ ಮುನ್ನವೇ, ಮತ್ತೆ
ಗರ್ಭ ಹೊತ್ತು ನಿಲ್ಲಬೇಕು
ಹಡೆಹಡೆದು ಒಡಲ ಚೀಲವೇ
ಹರಿದು ಹೋಗುವವರೆಗೂ ಹೆರಬೇಕು”

(ರೂಪಶ್ರೀ ಕಲ್ಲಿಗನೂರು)

ಇಥಲೀನ್ ಮತ್ತು ಸಸ್ಯ ಹಾರ್ಮುನುಗಳನ್ನು ಬಳಸಿ ಹುಣ್ಣುಗಳ ಮಾಗುವಿಕೆಯ ನೈಜ ಪ್ರಯಾಣವನ್ನೇ ಹಾಳುಗೆಡವಿ, ರಾತ್ರಿ ಕಳೆದು ಬೆಳಗಾಗುವ ಹೊತ್ತಿಗೆ ಮಾಗಿಸಿಬಿಡುತ್ತೇವೆ. ಕಾರಣ ನಮ್ಮ “ಮಾರುಕಟ್ಟೆ” ಮಾಲನ್ನು ಕೇಳುತ್ತದೆ. ವ್ಯವಹಾರಕ್ಕಿಂತ ದೊಡ್ಡದಲ್ಲ ಪ್ರಕೃತಿ! ಗರ್ಭ ಹರಿದು ಚೂರಾಗುವವರೆಗೂ ಹೆತ್ತು ಹಾಲು ಕೊಡಬೇಕು ಹಸು, ಯಾರದೋ ಗರ್ಭವನ್ನು ಹೊರಲಿಕ್ಕು ಇಲ್ಲಿ ಕೈತುಂಬ ತೆರುತ್ತಾರೆ ತೆರ. ದುಗ್ಗಾಣಿಯೆಂಬ ಹುಚ್ಚುಕುದುರೆಯ ಸವಾರರಿಗೆ ಯಾವ ಟ್ರಾಫಿಕ್ ರೂಲ್ಸುಗಳ ಭಯವಿಲ್ಲ.

“ನಿಶ್ಯಬ್ದವನ್ನು ಜೀವಂತ ಸುಟ್ಟ ಇಲ್ಲಿನ
ಕೋಗಿಲೆಗಳ ಹಾಡು ಇತಿಹಾಸ ಸೇರಲಿದೆ
ಹಕ್ಕಿಗಳ ಗೂಡು ಹರಾಜಿಗಿಡಲಾಗಿದೆ
ಹೂವು ದುಂಬಿಗಿಲ್ಲ; ಹಣ್ಣು ಹಕ್ಕಿಗಲ್ಲ

ಮರಕ್ಕೆ ಸಾವಿರ ಬೇಲಿಯ ಆಕ್ರಮಣ
ಆಗಸವನ್ನಿನ್ನು ಅಪಾರ ಅನುಭವಿಸಲಾಗದು
ಗಾಳಿ-ಬೆಳಕು ಕಿಂಡಿ ಹಾಯ್ದು ಒಳಬರಬಹುದು
ಕೆಳಗೆ ಪಾರ್ಕಿಂಗ್ ಲಾಟ್ ನಿರ್ಮಾಣ ಹಂತದಲ್ಲಿದೆ
ಮರದ ನೆಳಲಿಗಿನ್ನು ಬಡವನ ಪೊರೆವ ಅಧಿಕಾರವಿಲ್ಲ

ಎದೆ ಬಗೆಯುವಾಗ ಸಿಕ್ಕ ಬೇರುಗಳಿಗೆ ಮರಣ ಪ್ರಾಪ್ತಿ
‘ಛೀ ಛೀ… ಎಷ್ಟು ಬಿಸ್ಲು!
ಮಳಿಗಾಲದಾಗ ಹನಿ ನೀರೂ ಸಿಗವಲ್ದು’
ಕಾಡು ಕಡಿದು ಕಾರು ಕೊಂಡಾತನೊಬ್ಬ
ನಡುಬೀದಿಯಲ್ಲಿ ನಿಂತು ಅರಚುತ್ತಿದ್ದಾನೆ
ಗಂಜಿ ಹಾಕಿದ ಅವನ ಬಿಳಿ ಬಟ್ಟೆಗೆ
ಒಣಭೂಮಿಯ ಮೇಲ್ಮಣ್ಣು ಮೋಹಕಗೊಂಡು ಮುತ್ತಿಕ್ಕುತ್ತಿದೆ

‘ವಜ್ರದ್ಹರಳಿನ ಗಡಿಯಾರದಲ್ಲಿ ಸಮಯ ಹೇಗಿದೆ?’
ದಾರಿ ಹೋಕನೊಬ್ಬ ಅವನನ್ನು ಪ್ರಶ್ನಿಸಿದ್ದಾನೆ
ಮತ್ತು ಉತ್ತರಕ್ಕೂ ಕಾಯದೇ ಮುನ್ನಡೆದಿದ್ದಾನೆ
ಠಾರಿಲ್ಲದ ಅವನೂರ ಹಾದಿಯಲ್ಲಿ ಕೆಟ್ಟುನಿಂತ ಕಾರು
ತೆಗ್ಗುದಿಣ್ಣೆಗಳಿಗಂಜಿ ಮಿಕಿಮಿಕಿ ನೋಡುತ್ತಿದೆ”
(ಭವಿಷ್ಯತ್ತಿನ ಮಾತುಕತೆ- ರೂಪಶ್ರೀ ಕಲ್ಲಿಗನೂರು)

ಕೂತ ಕೊಂಬೆಯನ್ನು ಕಡಿದು ಬಿದ್ದೆನೆಂದು ಹಲುಬುವ ಮನುಷ್ಯನದು ಯಾವ ಮಟ್ಟಿಗಿನ ಮೂರ್ಖತನ! ಆಧುನಿಕತೆ ರಚನಾತ್ಮಕವಾಗಿ ಬರಬೇಕೇ ಹೊರತು ಕಾಲನ ಕಾಲ್ತುಳಿತದಂತೆ ಅಲ್ಲ ಎನ್ನುವ ಆಶಯ ಹೊತ್ತಿರುವ ಈ ಕವಿತೆ ವಿಡಂಬನಾತ್ಮಕವಾಗಿ ಇನ್ನಾದರೂ ಎಚ್ಚೆತ್ತುಕೊಳ್ಳದೇ ಹೋದರೆ ಮುಂದಿನ ಪರಿಣಾಮ ಘೋರವಾಗಿರುತ್ತದೆ ಎನ್ನುವುದನ್ನು ಪರೋಕ್ಷವಾಗಿ ಹೇಳುತ್ತದೆ.

(ಮುಂದುವರಿಯುತ್ತದೆ)