ನೂರಾರು ಪ್ರಶ್ನೆಗಳೊಂದಿಗೆ, ಮಗ್ಗಲು ಬದಲಿಸುವ ಬದುಕಿನ ಬದುವಿನಲ್ಲಿ ಹುಡುಕಾಟ ತೀವ್ರಗೊಂಡ ನೆಲೆಯಲ್ಲಿ ಆಧ್ಯಾತ್ಮದ ಗವಿಯೊಳಗೆ ಬೆಳಕು ಕಾಣಲು ಹಂಬಲಿಸಿ, ಬದುಕನ್ನು ಭಿನ್ನ ಪಾತಾಳಿಯಲ್ಲಿ ಕಾಣುವ ಹಠಕ್ಕೆ ಬಿದ್ದವನಿಗೆ ಈ ಕವಿತೆಗಳ ಕಡೆ ಅದೇನೋ ತದೇಕ ಸೆಳೆತ ಮತ್ತು ದಿನದಿಂದ ದಿನಕ್ಕೆ ಎಲ್ಲರಿಂದಲೂ ಬಹುದೂರ ಸಾಗುತ್ತಿದ್ದೇನೆ ಅನಿಸಿದರೂ; ನನಗೆ ನಾನು ತುಂಬಾ ಹತ್ತಿರವಾಗುತ್ತಿದ್ದೇನೆ ಎಂದೆನಿಸಿದೆ. ದ್ರುತಗತಿಯ ಹಾದಿ ತುಳಿಯದೇ ಒಂದೊಂದಾಗಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಸುಮ್ಮನೆ ಕಾಯಬೇಕು. ಕಾಲವನ್ನು ಪಳಗಿಸುವ, ಕಾಲವೇ ನಮಗೆ ಸಹಕರಿಸುವ ಕವಿತೆಗೆ ಕಾಯುವುದು ಕವಿಯ ಬದುಕಿನ ಕಾಯಕ.
ಕಾವ್ಯ ತಮ್ಮನ್ನು ಕೈ ಹಿಡಿದು ನಡೆಸುವ ಪರಿಯ ಕುರಿತು ಬರೆದಿದ್ದಾರೆ ಸುಮಿತ್‌ ಮೇತ್ರಿ

ಏನು ಹೇಳಬೇಕು, ಹೇಳಿ? ಇಲ್ಲಿ ಎಲ್ಲಾ ಗೊತ್ತಿರೋದೆ ಇದೆ. ತುಂಬಾ ಬಾರಿ ಹೀಗೆ ಅನ್ನಿಸಿ ಸುಮ್ಮನಾಗಿ ಬಿಡುತ್ತೇನೆ. ಈಗತಾನೇ ಅರಳಿದ ಪುಷ್ಪದೆಸಳಿನ ನೆತ್ತಿಸವರುವ ಮುಂಜಾನೆಯ ಎಳೆ ಬೆಳಕು, ಒಣಗಿದ ಎಲೆಯಂತೆ ಹಗುರಾಗಿ ಗಾಳಿಯೊಂದಿಗೆ ತೇಲುವಾಗಲೇ, ‘ಹಂಸ’ವಿರುವುದೇ ಒಂದು ದಿನ ಹಾರಿ ಹೋಗುವುದಕ್ಕೆಂದು ಗೊತ್ತಿದ್ದು, ಬದುಕೆ ಒಂದು ಭ್ರಮೆಯಂದು ಭಾವಿಸಿ ಬಾನಂಚಿನ ತಾರೆಗಳನ್ನು ನೋಡುತ್ತಾ ದಿನಗಳನ್ನು ಕಳೆದಿದ್ದೀನೆ. ಈ ಮಂಡಲದಲ್ಲಿ ಜೀವಿಸಲು ಯೋಗ್ಯವಿರುವ ಒಂದೇ ಒಂದು ಶಹರದ ಕಿಟಕಿಯಿಂದ ಕಣ್ಣೆಸೆದು ಸುಮ್ಮನೆ ಮುಕ್ತಿಗಾಗಿ ಹಂಬಲಿಸುವುದರಲ್ಲಿ ಯಾವ ಅರ್ಥವಿಲ್ಲ ಎಂದೆನಿಸಿದೇನೋ ನಿಜ, ಆದರೆ ಮನುಷ್ಯ ಕೇಂದ್ರಿತ ದರ್ಶನವನ್ನು ಮೀರಿ, ಲೋಕವನ್ನು ಅನುಭವಿಸುವ ಹೊಯ್ದಾಟದ ಮಬ್ಬಿನಲ್ಲಿರುವಾಗಲೇ ಕಾವ್ಯ ನನ್ನನ್ನು ಕೈಹಿಡಿದು ನಡೆಸಿದೆ. ಮನಸ್ಸು ಕನ್ನಡಿಯಂತಿಟ್ಟುಕೊಳ್ಳಬೇಕು. ಅದು ಏನನ್ನೂ ಸ್ವೀಕರಿಸುವುದಿಲ್ಲ, ಅಲ್ಲದೇ ಏನನ್ನೂ ತಿರಸ್ಕರಿಸುವುದೂ ಇಲ್ಲ. ಅದು ಏನಿದ್ದರೂ ಗ್ರಹಿಸುವ ಮತ್ತು ಯಾವುದನ್ನೂ ಕೂಡಿಟ್ಟುಕೊಳ್ಳದ ದ್ರವ್ಯ.

ಇಂತಹ ಮಂಪರಿನಲ್ಲಿ ಇಡೀ ದಿನ ಮಾತು ಮರೆತು ಸುಮ್ಮನಿದ್ದ ನಾನು, ಏಕ್ದಮ್ ನಟ್ಟನಡುರಾತ್ರಿ ಎದ್ದು ಕೂತಿದ್ದೇನೆ. ಮನಸ್ಸೆಂಬ ಮಿಡತೆ ಕಿಟಿಕಿಟಿಕಿಟಿ ಸುರುವಿಟ್ಟಿದೆ. ಈ ಲೋಕದ ಉಪದ್ವ್ಯಾಪಗಳಿಗೆ ಕಿವುಡಾಗಿ, ಕುರುಡಾಗಿ, ಮೂಕಾಗಿ ಬೌದ್ಧಿಕಸಂಕಟ ಹಾಗೂ ಭಾವತುಡಿತಗಳನ್ನು ಅನುಭವಿಸುವ‌, ಅಭಿವ್ಯಕ್ತಪಡಿಸುವ ಸ್ಥಿತಪ್ರಜ್ಞೆಯನ್ನು ಕಾಯ್ದುಕೊಳ್ಳುವುದೇ ಒಂದು ವ್ಯಂಜಿಸಲಾಗದ ಸಂಗತಿ ಎಂದೆನಿಸಿದೆ. ಇಂತಹ ಸಂಕೀರ್ಣ ಹೆಣೆಗೆಯಲ್ಲಿ ರೂಪುಗೊಳ್ಳುವ ಕಾವ್ಯಸಂವಿಧಾನದ ಹೊಸ ಸಾಧ್ಯತೆಗಳಿಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ ಕವಿತೆ ಒಂದು ಸಾಧನೆಯ ಜೀವನಮಾರ್ಗ ಎಂದು ನಂಬಿದ್ದೇನೆ.

ಕರುಳಕುಡಿ ಒಂದಾಗಿ ಜಿಬುಕುವ
ತಾಯ ಮೊಲೆಯಂತೆ
ನಿನ್ನ ಕ ವಿ ತೆ

ಕಾಯುತ್ತೇನೆ…
ಕಾಯುತ್ತಲೇ ಇರುತ್ತೇನೆ

– ಎಂಬ ಕಾವ್ಯದ ಚಡಪಡಿಕೆಯೊಂದಿಗೆ ಜೀವಿಸುತ್ತಿದ್ದೇನೆ. ಸಂಬಂಧಗಳಲ್ಲಿ ಕಾಣುವ ಅನನ್ಯತೆಯನ್ನು ಒಂಟಿತನದಲ್ಲಿ ಹುಡುಕುವ ನಿಟ್ಟಿನಲ್ಲಿ, ಲೋಕದೊಂದಿಗೆ ಮಾತು ಬಿಟ್ಟು, ಕಾಲದೊಂದಿಗಿನ ಗುದಮುರಿಗಿಗಿಳಿದ ಅಂಗಳದಲ್ಲಿ ಸಮಯ ಸರಿದೂಗಿಸಲು ಎಷ್ಟೊಂದು ಸಂಬಂಧಗಳು ಮೂಕವಾದವು, ನಾನು ಮೂಕನಾಗಿ ಉಳಿದೆ. ಅತಿಯಾದ ಬಹಿರ್ಮುಖಿಯಿಂದಾಗಿ ಶಕ್ತಿ ಸೋರಿ ಸೊರಗಿ ಹೋಗುವ ಭಯಕ್ಕೆ ಧ್ಯಾನಸ್ಥವಾಗಿರೋ ಕಾರಣಕ್ಕೆ ಸ್ಥಿತಪ್ರಜ್ಞೆ ಕಾಪಾಡಿಕೊಳ್ಳಲು ಸಾಧ್ಯವಾಗಿದೆ. ಲೋಕದ ಅಗತ್ಯಕ್ಕಿಂತ ಹೆಚ್ಚು ಹೇಳುವುದು ಮೂರ್ಖತನ ಎಂದೆನಿಸಿದೆ. ಒಂದು ಮಿತಿಯಲ್ಲಿ ಅನಾವರಣಗೊಂಡಷ್ಟು ಜಗತ್ತು ನಮ್ಮ ಇರುವಿಕೆ ಕುರಿತು ವಿಸ್ಮಯಗೊಳ್ಳುವುದು. ಅತಿಯಾದ ಲೌಕಿಕ ಕೀರ್ತಿ ಇಲ್ಲವೆ ಪ್ರತಿಷ್ಠೆಗೆ ಬೆನ್ನು ಹಾಕಿ, ಸುಮ್ಮನೆ ನಾನು ನಾನಾಗಿ, ಮೂಕಾಗಿ ಮೌನದ ಗವಿಯ ಗರ್ಭದ ಕಡೆ ಸಾಗಿದೆ. ಸೋಜಿಗ ಅನಿಸಬಹುದು ತುಂಬಾ ಬಾರಿ ನನಗೆ ನಾನೇ ಹೀಗೆ ಹೇಳಿಕೊಂಡಿದ್ದೇನೆ: “ವಿನಾಶ ಸದ್ದು ಮಾಡುತ್ತೆ ಆದರೆ ಸೃಷ್ಟಿ ಮಾತ್ರ ಸದ್ದಿಲ್ಲದೆ!” ಇದೇ ಧ್ಯಾನಸ್ಥ ಸ್ಥಿತಿಯ ಶಕ್ತಿ. ಸ್ಥಿತಪ್ರಜ್ಞೆ ಕಾಪಾಡಿಕೋ… ಸದ್ದಿಲ್ಲದೆ ಬೆಳೆ. ನೆಮ್ಮದಿಯಿಂದ ಬದುಕು. ಇದು ಎಲ್ಲರಿಗೂ ಒಳ್ಳೆಯದೇ ಎಂದನಿಸಿ ಕಾವ್ಯದೊಂದಿಗೆ ಜೀವಿಸಿದ್ದೇನೆ.

ಈ ಸ್ಥೂಲ ವಿಭ್ರಜಮಾನ ಪಯಣದಲಿ
ಈಜು ಬಿದ್ದ ಗೋಚರಾತೀತ – ಅಗೋಚರಾತೀತ
ಮಹಾಶೂನ್ಯದ ಮಹಾಶೂನ್ಯತ್ವ ಮಹಾಸಾಗರದಲಿ
ಪ್ರತಿಯೊಬ್ಬರೂ ಒಂಟಿ!

ಒಂದಕ್ಕಿಂತ ಒಂದು ಎಷ್ಟೇ ಅಗಾಧವೆನಿಸಿದರೂ ಅದಕ್ಕೂ ಮೀರಿದ ಅಗಾಧವಾದದ್ದನ್ನು ಅಗೋಚರ ನೆಲೆಯಲ್ಲಿ ಕಲ್ಪಿಸಿ ಸ್ತಬ್ಧವಾಗಿಸಿದೆ. ಸದಾಕಾಲ ಜೀವನದ ಎಲ್ಲ ಚಹರೆಯನ್ನು ಉತ್ಕಟವಾಗಿ ಸ್ಪಂದಿಸುತ್ತ, ಇನ್ನಷ್ಟು ಮತ್ತಷ್ಟು ಸಂಕೀರ್ಣವಾದ ದಿನಗಳಿಗೆ ತೆರೆದುಕೊಳ್ಳುವ ನಿಟ್ಟಿನಲ್ಲಿ, ಸುರಕ್ಷಿತ ಎನಿಸಿದ ಆವರಣದಲ್ಲಿರಲು ಬಯಸದೇ ಎಲ್ಲಾ ವರ್ತುಲಗಳಾಚೆ ಬಂದು ಒಂಟಿಯಾಗಿ ಅಂತರಂಗದ ಅಳಲುಗಳಿಗೆ ಎದೆ ಒಡ್ಡಿಕೊಂಡ ರೂಪಕಗಳಂತೆ ಈ ಕಾವ್ಯತಂದ್ರಿಯಲ್ಲಿ ಮುಳುಗಿ ಹೋಗಿದ್ದೇನೆ. ಮಾಯಾ ಬಜಾರಿನಿಂದ ತಪ್ಪಿಸಿಕೊಂಡು, ಎಲ್ಲವನ್ನೂ ಜೀರ್ಣಿಸಿಕೊಂಡು, ಒಂದೊಂದೇ ಹೆಜ್ಜೆಯಿಟ್ಟು ಪಯಣ ಆರಂಭಿಸಿ ಅಲ್ಲಿಂದ ಇಲ್ಲಿಗೆ ಬಂದು ತಲುಪಿದ್ದೇನೆ ನಿಜಾ ಆದರೆ ಎಲ್ಲಿಂದ ಬಂದೆ ಎಂದರೆ ಉತ್ತರವಿಲ್ಲ! ಕವಿತೆ ಮಾತ್ರ ನನ್ನನ್ನು ಕೈಹಿಡಿದು ನಡೆಸಿದೆ. ನನಗೆ ಗೊತ್ತಿರುವ ಅಭಿವ್ಯಕ್ತಿ ಮಾಧ್ಯಮ ಸಹ ಕಾವ್ಯ ಎಂದು ಬಲವಾಗಿ ಅನಿಸಿದೆ.

ಯಾರದೋ ಹೆಸರ ಮೇಲೆ
ಅಚ್ಚಾಗುವ ಪ್ರಾರ್ಥನೆಯ
ಕಾವ್ಯವೇ

ಸುಮ್ಮನೆ
ಪ್ರಾಪಂಚಿಕನನ್ನಾಗಿಸಬೇಡ

-ಎಂದು ಹಲುಬಿ ನೋವಿನ ಅಗ್ಗಿಷ್ಟಿಕೆಯ ಹಬೆಯೆಂದರೆ ಆತ್ಮದ ಆಳದಿಂದ ಬಂದ ಹೇವರಿಕೆಯ ಹೊಗೆಯಂತೆ ಯಾವುದರ ಬಗೆಗೂ ತಕರಾರುಗಳನ್ನು ಉಳಿಸಿಕೊಂಡಿಲ್ಲ. ನೂರಾರು ಪ್ರಶ್ನೆಗಳೊಂದಿಗೆ, ಮಗ್ಗಲು ಬದಲಿಸುವ ಬದುಕಿನ ಬದುವಿನಲ್ಲಿ ಹುಡುಕಾಟ ತೀವ್ರಗೊಂಡ ನೆಲೆಯಲ್ಲಿ ಆಧ್ಯಾತ್ಮದ ಗವಿಯೊಳಗೆ ಬೆಳಕು ಕಾಣಲು ಹಂಬಲಿಸಿ, ಬದುಕನ್ನು ಭಿನ್ನ ಪಾತಾಳಿಯಲ್ಲಿ ಕಾಣುವ ಹಠಕ್ಕೆ ಬಿದ್ದವನಿಗೆ ಈ ಕವಿತೆಗಳ ಕಡೆ ಅದೇನೋ ತದೇಕ ಸೆಳೆತ ಮತ್ತು ದಿನದಿಂದ ದಿನಕ್ಕೆ ಎಲ್ಲರಿಂದಲೂ ಬಹುದೂರ ಸಾಗುತ್ತಿದ್ದೇನೆ ಅನಿಸಿದರೂ; ನನಗೆ ನಾನು ತುಂಬಾ ಹತ್ತಿರವಾಗುತ್ತಿದ್ದೇನೆ ಎಂದೆನಿಸಿದೆ. ದ್ರುತಗತಿಯ ಹಾದಿ ತುಳಿಯದೇ ಒಂದೊಂದಾಗಿ ಕಳಚಿಕೊಳ್ಳುವ ನಿಟ್ಟಿನಲ್ಲಿ ಸಾಗುತ್ತಿದ್ದೇನೆ. ಸುಮ್ಮನೆ ಕಾಯಬೇಕು. ಕಾಲವನ್ನು ಪಳಗಿಸುವ, ಕಾಲವೇ ನಮಗೆ ಸಹಕರಿಸುವ ಕವಿತೆಗೆ ಕಾಯುವುದು ಕವಿಯ ಬದುಕಿನ ಕಾಯಕ.

ಓದು ಬರೆಹ ಅಂದ ತಕ್ಷಣವೇ ಹೀಗೆ…
ನಾವೆಲ್ಲರೂ ಓದು ಬರೆಹ ಸಾಮಾನ್ಯವಾಗಿ ಮನಸ್ಸಿನಿಂದ. ಬಹಳವೆಂದರೆ ಮನಸ್ಸುಗೊಟ್ಟು, ಅಲ್ಲವೆ? ಧ್ಯಾನಸ್ಥರಾಗುವುದು ಅಪರೂಪ. ಧ್ಯಾನಸ್ಥರಾಗುವುದು ಸಾಧನೆಯಿಂದ ಮಾತ್ರ. ಆ ಓದು ಬರೆಹ ಅದು ಬೇರೆಯೇ ಬಗೆಯಲ್ಲಿ ಇರುತ್ತದೆ.

ಕೇಳುತಲಿದೆ
ದೂರದಲಿ ಯಾರೋ ಹಿತವರ ದನಿ
ಈ ನೆಲ ನಿನ್ನದಲ್ಲ
ಈ ಊರು ನಿನ್ನದಲ್ಲ
ಈ ಜನರೂ ನಿನ್ನವರಲ್ಲ

ಕಣ್ಣಗಲಿಸಿ
ನೋಡುತಲೇ ಇದ್ದೇನೆ
ಒಂದೇ ಸವನೆ
ಇದೇ ಮಣ್ಣಲ್ಲಿ ಮಣ್ಣಾಗಲು
ಅಂಗೈಯಲಿ ಬರೆದ ಮಲ್ಲನ ಹೆಸರು
ಬೆವರಿನಲಿ ಹಸಿರಾಗಿದೆ
ಯಾರೋ ನಗುತ್ತಲೇ ಇದ್ದಾರೆ
ಸದಾ…

ತಾಯಿ ಮಡಿಲಂತಿರುವ, ತೊಟ್ಟಿಲಲ್ಲಿ ಮಲಗಿರುವ ಕೂಸಿನ ನಗುವಿನಂಥ ಮಧುರ ನೆಲ ‘ಹಲಸಂಗಿ’ಯ ಬಗ್ಗೆ ಭಾವುಕತೆ ಇದೆಯಾದರೂ ಅದು ನನ್ನ ದೌರ್ಬಲ್ಯವಲ್ಲ; ಬದಲಿಗೆ ಎನ್ನದೆಯಲ್ಲಿ ತುಂಬಿಕೊಂಡ ಜೀವವಾಯುವಿನ ಹಾಗೆ ಒಂದು ಅನಿರ್ವಚನೀಯ ಶಕ್ತಿ ಮಾರ್ಪಡಾಗುವ ಬಗೆಯ ಚೆಲುವು ಅನ್ಯಾದೃಶ. ಮುಗಿಸುವ ಮುನ್ನ ಊರು ನೆನಪಾಗುತ್ತದೆ… ಮಧುರಚೆನ್ನರು ಕೈ ಮಾಡಿ ಕರೆದ ಹಾಗೆ ಅನಿಸುತ್ತದೆ… ಕಣ್ಣುಗಳು ಮಂಜಾಗಿ, ಎದೆ ತುಂಬಿ ಹಾಡು ಪ್ರಾರ್ಥನೆಯಾಗಿ ಹರಿಯುತ್ತದೆ. ಪ್ರಾರ್ಥನೆ ಕಾವ್ಯವಾಗಿ; ಕಾವ್ಯ ನನ್ನ ಉಸಿರಾಗಿದೆ.