ಇಂಥ ಅನುಭವಗಳಿಂದಾಗಿ ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ.
ರಂಜಾನ್ ದರ್ಗಾ ಬರೆಯುವ ಆತ್ಮಕತೆ ನೆನಪಾದಾಗಲೆಲ್ಲ ಸರಣಿಯ 40ನೆಯ ಕಂತು ಇಲ್ಲಿದೆ.

1962ರಲ್ಲಿ ನಾನು ಐದನೆಯ ಇಯತ್ತೆಯಲ್ಲಿ ಓದುತ್ತಿದ್ದ ನೆನಪು. ಆಗ ಎಂ.ಎಲ್.ಎ. ಚುನಾವಣೆ ಸಂದರ್ಭ ಒಂದು ಸಲ ಸ್ವತಂತ್ರವಾಗಿ ಚುನಾವಣೆಗೆ ನಿಂತು ಗೆದ್ದ ಡಾ|| ಬಿ.ಕೆ. ನಾಗೂರ ಮತ್ತೆ ಚುನಾವಣೆಗೆ ಸ್ಪರ್ಧಿಸಿದ್ದರು. ಚುನಾವಣಾ ಚಿಹ್ನೆ ತಕ್ಕಡಿ ಇತ್ತು. ಅವರ ಚುನಾವಣಾ ಪ್ರಚಾರ ಸಭೆ ಆಕರ್ಷಕವಾಗಿರುತ್ತಿತ್ತು.

(ಡಾ|| ಬಿ.ಕೆ. ನಾಗೂರ)

ಅವರು ಸರ್ದಾರ ಡಾ|| ಬಿ.ಕೆ. ನಾಗೂರ ಎಂದು ಬರೆದುಕೊಳ್ಳುತ್ತಿದ್ದರು. ಆಯುರ್ವೇದ ಡಾಕ್ಟರ್ ಎಂಬ ನೆನಪು. ಅವರಿಗೆ ‘ಸರ್ದಾರ’ ಎಂಬ ಬಿರುದು ಯಾರು ಕೊಟ್ಟರೊ ಗೊತ್ತಿಲ್ಲ. ಅದೇನೇ ಇದ್ದರೂ ಅವರೊಬ್ಬ ಅದ್ಭುತ ಭಾಷಣಕಾರರಾಗಿದ್ದರು. ಆ ಕಾಲದಲ್ಲಿ ಯಾರ ಭಾಷಣ ಎಲ್ಲಿ ನಡೆಯುವುದು ಎಂಬುದನ್ನು ಟಾಂಗಾಗಳಲ್ಲಿ ಕುಳಿತು ಮೈಕ್ ಕಟ್ಟಿಕೊಂಡು ಊರ ತುಂಬ ಪ್ರಚಾರ ಮಾಡುತ್ತಿದ್ದರು. ಹೀಗಾಗಿ ಯಾರ ಭಾಷಣ ಯಾವ ಸ್ಥಳದಲ್ಲಿ ಇರುತ್ತದೆ ಎಂಬುದು ತಿಳಿದು ಬರುತ್ತಿತ್ತು. ಅವರ ಭಾಷಣ ಕೇಳಲು ಸಾಯಂಕಾಲ ಶಾಲೆ ಬಿಟ್ಟ ಕೂಡಲೆ ಓಡಿಹೋಗುತ್ತಿದ್ದೆ.

ವಿಜಾಪುರ ಗಾಂಧೀಚೌಕ ಸಮೀಪದ ಹೈಕ್ಲಾಸ್ ಚೌಕ, ಸಿದ್ಧೇಶ್ವರಗುಡಿ ಮುಂದೆ, ವಿವಿಧ ಓಣಿಗಳಲ್ಲಿ ಚುನಾವಣಾ ಪ್ರಚಾರ ಭಾಷಣಗಳು ನಡೆಯುತ್ತಿದ್ದವು.

ಆ ಕಾಲದಲ್ಲಿ ‘ಕಾಂಗ್ರೆಸ್‌ನಿಂದ ಕತ್ತೆಗಳು ನಿಂತರೂ ಆರಿಸಿ ಬರುತ್ತವೆ’ ಎಂಬ ಮಾತು ಜನಜನಿತವಾಗಿತ್ತು. ಗಾಂಧಿ, ನೆಹರೂ ಪ್ರಭಾವ, ಸ್ವಾತಂತ್ರ್ಯ ಹೋರಾಟದ ಹಿನ್ನೆಲೆ, ನಾಯಕರಲ್ಲಿ ಇನ್ನೂ ಉಳಿದುಕೊಂಡಿದ್ದ ಪಾಪಪ್ರಜ್ಞೆ ಮುಂತಾದ ಕಾರಣಗಳಿಂದಾಗಿ ಜನ ಕಾಂಗ್ರೆಸ್‌ಗೆ ಮತ ಚಲಾಯಿಸುವುದು ಸಹಜವಾಗಿತ್ತು. ಅಂಥ ಪ್ರತಿಕೂಲ ವಾತಾವರಣದಲ್ಲಿಯೂ ತಕ್ಕಡಿ ಚಿಹ್ನೆ ಇಟ್ಟುಕೊಂಡು ಬರಿ ಭಾಷಣದ ಪ್ರಭಾವದಿಂದ 1957ರ ಚುನಾವಣೆಯಲ್ಲಿ ಶಾಸಕರಾಗಿ ಆರಿಸಿ ಬಂದ ಕೀರ್ತಿಗೆ ಡಾ|| ಬಿ.ಕೆ. ನಾಗೂರ ಭಾಜನರಾದರು. ಇದೇ ಸಂದರ್ಭದಲ್ಲಿ ಸುಗಂಧಿ ಮುರಿಗೆಪ್ಪ ಅವರು ಕೂಡ ಸ್ವತಂತ್ರವಾಗಿ ನಿಂತು ಸಂಸದರಾಗಿ ಆರಿಸಿ ಬಂದಿದ್ದರು.

1962ರ ಚುನಾವಣೆಯಲ್ಲಿ ನಾಗೂರ ಸೋತರು. ಎಲ್ಲಿ ನೋಡಿದಲ್ಲಿ ನಾಗೂರ ಡಾಕ್ಟರ್‌ರ ಭಾಷಣ ಕೇಳಲು ಜನಜಂಗುಳಿ ಸೇರುತ್ತಿತ್ತು. ಅವರಿಗೆ ಜೋಡಿಯಾಗಿ ಕುರುಕ್ಷೇತ್ರ ಪತ್ರಿಕೆಯ ಬಾಬುರೆಡ್ಡಿ ತುಂಗಳ ಇದ್ದರು. ಅವರಿಬ್ಬರು ಸೇರಿದರಂತೂ ಜನರು ಹುಚ್ಚೆದ್ದು ಸೇರುತ್ತಿದ್ದರು. ಅವರಿಬ್ಬರ ತೀಕ್ಷ್ಣ ಮಾತುಗಳಿಂದ ಜನ ರೋಮಾಂಚನಗೊಳ್ಳುತ್ತಿದ್ದರು. ಕಾಂಗ್ರೆಸನ್ನು ಹಿಗ್ಗಾಮುಗ್ಗಾ ಟೀಕಿಸಿದಾಗ ಜನ ಭಾರಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲೆಡೆ ಸಭೆ ಸೇರುವ ಸಭಿಕರು ಮತ ಚಲಾಯಿಸಿದರೂ ನಾಗೂರ ಡಾಕ್ಟರ್ ಮತ್ತೆ ಆರಿಸಿ ಬರಬಹುದಿತ್ತು. ಆದರೆ ವಿಜಾಪುರ ಮತದಾರ ಎಂದೂ ಒಂದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಓಟು ಹಾಕಿದವನಲ್ಲ. ಹಾಗೆ ಎರಡು ಮೂರು ಬಾರಿ ಆಯ್ಕೆಯಾದವರು ಒಂದಿಬ್ಬರು ಇರಬಹುದು.

ಡಾಕ್ಟರ್ ಸೋತರೂ ಅವರ ರುಬಾಬಿನಲ್ಲಿ ಕೊರತೆಯಾಗಲಿಲ್ಲ. ಅವರು ಶಿಸ್ತಿನ ಸಿಪಾಯಿಯ ಹಾಗೆ ಇದ್ದರು. ಆಗಿನ ಕಾಲದಲ್ಲಿ ವಿಜಾಪುರದ ಶ್ರೀಮಂತರಾಗಲಿ ಬಡವರಾಗಲಿ ನಡೆದುಕೊಂಡು ಹೋಗುವುದು ಸಹಜವಾಗಿತ್ತು. ನಾಗೂರ ಡಾಕ್ಟರ್ ನೀಟಾಗಿ ಡ್ರೆಸ್ ಮಾಡಿಕೊಂಡು, ಬಂಗಾರಬಣ್ಣದ ಕನ್ನಡಕ ಹಾಕಿಕೊಂಡು ಬಿಗಿಯಾಗಿ ಸುತ್ತಿದ ಉದ್ದನೆಯ ಛತ್ರಿಯನ್ನು ಹಿಡಿದುಕೊಂಡು ಸ್ಪೀಡಾಗಿ ಹೋಗುವುದನ್ನು ನೋಡುವುದು ಆಕರ್ಷಕವಾಗಿತ್ತು. ಅವರ ಮಾತು ಕೂಡ ಅಷ್ಟೇ ಖಡಕ ಆಗಿತ್ತು.

ಅವರು ‘ನಿರ್ಭಯ’ ಹೆಸರಿನ ವಾರ ಪತ್ರಿಕೆ ತೆಗೆಯುತ್ತಿದ್ದರು. ಅದನ್ನು 25 ವರ್ಷ ನಡೆಸಿದರು. ಆ ಕಾಲದಲ್ಲಿ ಅದು ಬಹಳ ಜನಪ್ರಿಯ ಪತ್ರಿಕೆಯಾಗಿತ್ತು. ಅದರಲ್ಲಿ ಅವರದೇ ಆದ ಒಂದು ಅಂಕಣ ಇರುತ್ತಿತ್ತು. ಸೆಟ್ರು ಮತ್ತು ಭಟ್ರು ಫೋನಲ್ಲಿ ಸಂಭಾಷಿಸುವ ವೈಖರಿ ಅದ್ಭುತವಾಗಿತ್ತು. ಆ ಸಂಭಾಷಣೆಯಲ್ಲಿ ಆ ಕಾಲದ ಸಮಾಜೋರಾಜಕೀಯ ನ್ಯೂನತೆಗಳ ಅನಾವರಣವಾಗುತ್ತಿತ್ತು. ಅವರು ಸ್ವಾತಂತ್ರ್ಯ ಹೋರಾಟಗಾರರೂ ಆಗಿದ್ದರು ಎಂದು ಕೇಳಿದ್ದೇನೆ. ಹೈದರಾಬಾದ ವಿಮೋಚನೆಯ ನಂತರ ‘ಹದಗೆಟ್ಟ ಹೈದ್ರಾಬಾದ’ ಎಂಬ ನಾಟಕವನ್ನೂ ಬರೆದಿದ್ದರು.

ಇಂಥ ಅನುಭವಗಳಿಂದಾಗಿ ನನಗೆ ಬಾಲ್ಯದಲ್ಲೇ ರಾಜಕೀಯ ಪ್ರಜ್ಞೆ ಮೂಡತೊಡಗಿತು. ಆಗ ಎಲ್ಲ ರಾಜಕೀಯ ಪಕ್ಷದವರು ತಮ್ಮ ಚುನಾವಣಾ ಚಿಹ್ನೆಗಳುಳ್ಳ ಬಿಲ್ಲೆಗಳನ್ನು ಚುನಾವಣಾ ಭಾಷಣದ ಸಂದರ್ಭದಲ್ಲಿ ಹಂಚುತ್ತಿದ್ದರು. ಕಾಂಗ್ರೆಸ್ ಚಿಹ್ನೆ ನೊಗಹೊತ್ತ ಜೋಡೆತ್ತು ಇದ್ದರೆ, ಜನಸಂಘದ್ದು ಅಲ್ಲಾವುದ್ದೀನ ಚಿರಾಗದಂಥ ದೀಪದ ಚಿಹ್ನೆಯಾಗಿತ್ತು. ಸ್ವತಂತ್ರ ಪಕ್ಷದ್ದು ನಕ್ಷತ್ರ ಆಗಿತ್ತು. ಈ ಪ್ಲ್ಯಾಸ್ಟಿಕ್ ಅಥವಾ ತಗಡಿನ ಬಿಲ್ಲೆಗಳನ್ನು ಸಂಗ್ರಹಿಸುವುದಕ್ಕಾಗಿ ನಾವು ಹುಡುಗರು ಎಲ್ಲ ಪಕ್ಷಗಳ ಚುನಾವಣಾ ಸಭೆಗಳಿಗೆ ಹೋಗುತ್ತಿದ್ದೆವು. ಅವರ ಭಾಷಣಗಳನ್ನು ನಾನಂತೂ ತದೇಕಚಿತ್ತದಿಂದ ಕೇಳುತ್ತಿದ್ದೆ. ಜಗನ್ನಾಥರಾವ ಜೋಷಿ ಜನಸಂಘದ ಅಭ್ಯರ್ಥಿ ಡಾಕ್ಟರ್ ಮಹೀಂದ್ರಕರ ಅವರ ಪರವಾಗಿ ಭಾಷಣ ಮಾಡಲು ಬಂದಿದ್ದರು. ನಾವದಗಿ ಎಂಬ ದೊಡ್ಡ ವ್ಯಾಪಾರಿ ಕಾಂಗ್ರೆಸ್ ಪಕ್ಷದಿಂದ ಚುನಾವಣೆಗೆ ನಿಂತಾಗ ನಿಜಲಿಂಗಪ್ಪನವರು ಬಂದಿದ್ದರು. ಹೀಗೆ ಪ್ರಾಥಮಿಕ ಶಾಲೆಯಿಂದ ಹಿಡಿದು ಕಾಲೇಜುವರೆಗೆ ಅನೇಕ ನಾಯಕರ ಭಾಷಣ ಕೇಳಿದೆ. ಆದರೆ ವಿಜಾಪುರದ ರೇಡಿಯೋ ಮೈದಾನದಲ್ಲಿ ಕಮ್ಯುನಿಸ್ಟ್ ಪಕ್ಷದ ರಾಷ್ಟ್ರೀಯ ನಾಯಕ ಸಿ. ರಾಜೇಶ್ವರರಾವ್ ಅವರು ಮಾತನಾಡಿದ್ದು ಮನಸ್ಸಿನ ಮೇಲೆ ಬಹಳ ಪರಿಣಾಮ ಬೀರಿತು.

(ಲೋಹಿಯಾ)

ಬಿಹಾರ ಮುಂತಾದ ಕಡೆಗಳಲ್ಲಿ ಇಲಿ ತಿನ್ನುವ ಮೂಷಾಹಾರಿಗಳು ಇದ್ದಾರೆ. ದೇಶದಲ್ಲಿ ಬಡತನ ನಿವಾರಣೆಯಾಗದೆ ಹೀಗೇ ಮುಂದುವರಿದರೆ ಬಡವರು ಇಲಿ ತಿನ್ನುವ ಪರಿಸ್ಥಿತಿ ಬರುತ್ತದೆ ಎಂದು ಹೇಳುತ್ತ ಬಡವರ ಕಷ್ಟದ ಬದುಕಿನ ಬಗ್ಗೆ ಹೃದಯಸ್ಪರ್ಶಿಯಾಗಿ ಮಾತನಾಡಿದರು. ಅಂಥ ಒಬ್ಬ ದೊಡ್ಡ ಮನುಷ್ಯನ ಮಾತು ಕೇಳಲು ಐವತ್ತು ಜನರೂ ಇದ್ದಿದ್ದಿಲ್ಲ. ಅವರ ಪರಿಣಾಮಕಾರಿ ಮಾತುಗಳಿಂದ ರೋಮಾಂಚನಗೊಂಡ ನನಗೆ ಜನ ಕಡಿಮೆ ಇರುವುದಕ್ಕೆ ಬೇಸರವಾಯಿತು.

ನಾನು ಬಹಳ ದಿನಗಳವರೆಗೆ ಅವರ ಮಾತಿನ ಗುಂಗಿನಲ್ಲೇ ಇದ್ದೆ. ಬಡವರ ಬಗ್ಗೆ ಇಷ್ಟೊಂದು ಹಚ್ಚಿಕೊಂಡು ಮಾತನಾಡುವ ನಾಯಕರೂ ಇದ್ದಾರಲ್ಲ ಎಂಬ ಆಶಾಭಾವ ಮೂಡತೊಡಗಿತು.

1969ರ ಒಂದು ದಿನ. ಆಗ ನಾನು ವಿಜಾಪುರದಲ್ಲಿ ಪಿ.ಯು.ಸಿ. ವಿದ್ಯಾರ್ಥಿ. ಬೆಂಗಳೂರಿನ ಲಾಲ್‌ಬಾಗ್ ಗಾಜಿನಮನೆಯಲ್ಲಿ ನಡೆದ ಕಾಂಗ್ರೆಸ್ ಸಭೆಯಲ್ಲಿ ಭಿನ್ನಾಭಿಪ್ರಾಯ ತಲೆದೋರಿ ಕಾಂಗೆಸ್ ಇಬ್ಭಾಗವಾದ ಸುದ್ದಿ ಎಲ್ಲೆಡೆ ಹಬ್ಬಿತ್ತು. ಭಾರತ ರಾಷ್ಟ್ರೀಯ ಕಾಂಗ್ರೆಸ್ ತನ್ನ ಭಾರಕ್ಕೆ ತಾನೇ ಕುಸಿದಿತ್ತು. ಸಿಂಡಿಕೇಟ್ ಮತ್ತು ಇಂಡಿಕೇಟ್ ಎಂದು ಎರಡು ಭಾಗಗಳಾದವು. ಸಿಂಡಿಕೇಟ್‍ಗೆ (ಕಾಂಗ್ರೆಸ್ ಓಲ್ಡ್ -ಸಂಸ್ಥಾ ಕಾಂಗ್ರೆಸ್) ಎಸ್. ನಿಜಲಿಂಗಪ್ಪನವರು ನಾಯಕರಾದರೆ, ಇಂಡಿಕೇಟ್‌ಗೆ (ಕಾಂಗ್ರೆಸ್ ಇಂದಿರಾ) ಇಂದಿರಾಗಾಂಧಿ ಅವರು ನಾಯಕಿಯಾಗಿದ್ದರು.

ಅವರಿಬ್ಬರು ಸೇರಿದರಂತೂ ಜನರು ಹುಚ್ಚೆದ್ದು ಸೇರುತ್ತಿದ್ದರು. ಅವರಿಬ್ಬರ ತೀಕ್ಷ್ಣ ಮಾತುಗಳಿಂದ ಜನ ರೋಮಾಂಚನಗೊಳ್ಳುತ್ತಿದ್ದರು. ಕಾಂಗ್ರೆಸನ್ನು ಹಿಗ್ಗಾಮುಗ್ಗಾ ಟೀಕಿಸಿದಾಗ ಜನ ಭಾರಿ ಚಪ್ಪಾಳೆ ತಟ್ಟುತ್ತಿದ್ದರು. ಎಲ್ಲೆಡೆ ಸಭೆ ಸೇರುವ ಸಭಿಕರು ಮತ ಚಲಾಯಿಸಿದರೂ ನಾಗೂರ ಡಾಕ್ಟರ್ ಮತ್ತೆ ಆರಿಸಿ ಬರಬಹುದಿತ್ತು. ಆದರೆ ವಿಜಾಪುರ ಮತದಾರ ಎಂದೂ ಒಂದೇ ಪಕ್ಷಕ್ಕೆ ಅಥವಾ ವ್ಯಕ್ತಿಗೆ ಓಟು ಹಾಕಿದವನಲ್ಲ.

ಕಾಂಗ್ರೆಸ್ ನಾಯಕರಲ್ಲಿ ಭಿನ್ನಾಭಿಪ್ರಾಯ ತಾರಕಕ್ಕೇರಿದ್ದಕ್ಕೆ ರಾಷ್ಟ್ರಪತಿ ಚುನಾವಣೆ ಕಾರಣವಾಗಿತ್ತು. 1969ರಲ್ಲಿ ರಾಷ್ಟ್ರಪತಿ ಝಾಕೀರ್ ಹುಸೇನ್ ಅವರ ನಿಧನದ ನಂತರ ನಡೆದ ರಾಷ್ಟ್ರಪತಿ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಇಂದಿರಾ ವಿರೋಧಿ ಸಂಸ್ಥಾ ಕಾಂಗ್ರೆಸ್ ಜೊತೆಗಿದ್ದ ಎನ್. ಸಂಜೀವರೆಡ್ಡಿ ಅವರು ಕಾಂಗ್ರೆಸ್ ಪಕ್ಷದ ಅಧಿಕೃತ ಅಭ್ಯರ್ಥಿಯಾದರು. ಇಂದಿರಾ ಗಾಂಧಿಯವರ ಸಲಹೆ ಮೇರೆಗೆ ಉಪ ರಾಷ್ಟ್ರಪತಿ ವಿ.ವಿ. ಗಿರಿ ಅವರು ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿದರು. ಆತ್ಮಸಾಕ್ಷಿಯಂತೆ ಮತ ಚಲಾಯಿಸಲು ಇಂದಿರಾ ಗಾಂಧಿ ಅವರು ಕಾಂಗ್ರೆಸ್ ಎಂ.ಪಿ. ಮತ್ತು ಎಂ.ಎಲ್.ಎ ಗಳಿಗೆ ಕರೆನೀಡಿದರು. ಇದರ ಪರಿಣಾಮಗಾಗಿ ವಿ.ವಿ. ಗಿರಿ ರಾಷ್ಟ್ರಪತಿಗಳಾದರು.

(ಇಂದಿರಾ ಗಾಂಧಿ)

ಇಂದಿರಾ ಗಾಂಧಿ ಅವರು ಲಾಲ್‌ಬಾಗ್ ಗ್ಲಾಸ್‌ಹೌಸ್ ಸಭೆ ಮುಗಿಸಿಕೊಂಡು ದೆಹಲಿಗೆ ಹೋದ ನಂತರ ಬ್ಯಾಂಕ್ ರಾಷ್ಟ್ರೀಕರಣ ಮತ್ತು ರಾಜಧನ ರದ್ಧತಿ ಘೋಷಿಸಿದರು. (ಮುಂದೆ 1971ರಲ್ಲಿ ಸಂವಿಧಾನಕ್ಕೆ 26ನೇ ತಿದ್ದುಪಡಿ ಮಾಡಿದ ನಂತರ ರಾಜಧನ ರದ್ಧತಿ ಜಾರಿಗೆ ಬಂದಿತು.) ಇಂದಿರಾ ಗಾಂಧಿಯವರ ಈ ಎರಡು ಘೋಷಣೆಗಳು ಶ್ರೀಮಂತರಲ್ಲಿ ಭಯವನ್ನೂ ಬಡವರಲ್ಲಿ ಭರವಸೆಯನ್ನೂ ಹುಟ್ಟಿಸಿದವು.

ಇಂದಿರಾ ಗಾಂಧಿ ಈ ಘೋಷಣೆ ಮಾಡಿದ ಸಂದರ್ಭದಲ್ಲಿ ವಿಜಾಪುರದ ಗಾಂಧೀ ಚೌಕಿನಿಂದ ಲಕ್ಷ್ಮೀ ಗುಡಿಯ ಕಡೆಗೆ ಹೋಗುವಾಗ ಜನ ಗುಂಪುಗುಂಪಾಗಿ ಮಾತನಾಡುತ್ತಿದ್ದರು. ಬ್ರಾಹ್ಮಣ ಹಿರಿಯರ ಗುಂಪೊಂದು ‘ಇಂದಿರಾ ಗಾಂಧಿ ಕಮ್ಯುನಿಸ್ಟ್’ ಎಂದು ಮಾತನಾಡುತ್ತಿದ್ದರು. ಇನ್ನು ನಮಗೆ ಉಳಿಗಾಲ ಇಲ್ಲ ಎಂಬ ರೀತಿಯಲ್ಲಿ ಅವರ ಮಾತುಕತೆ ನಡೆದಿತ್ತು. ಇವರು ಇಂದಿರಾ ಗಾಂಧಿಗೇ ಕಮ್ಯುನಿಸ್ಟ್ ಎನ್ನಬೇಕಾದರೆ ನಿಜವಾದ ಕಮ್ಯುನಿಸ್ಟ್ ಹೇಗಿರುತ್ತಾರೆ ಎಂದು ತಿಳಿದುಕೊಳ್ಳುವ ಆಸಕ್ತಿ ಮೂಡಿತು. ಹೊರಳಿ ಕಮ್ಯುನಿಸ್ಟ್ ಪಾರ್ಟಿ ಕಚೇರಿ ಹುಡುಕುತ್ತ ಭಾರತ ಕಮ್ಯುನಿಸ್ಟ್ ಪಕ್ಷದ ಕಚೇರಿಗೆ ಹೋದೆ. ಅದೊಂದು ಅವಿಸ್ಮರಣೀಯ ಘಟನೆ.

ಸಿಂಡಿಕೇಟ್‌ನಲ್ಲಿ ಜಮೀನುದಾರರು, ದೊಡ್ಡವ್ಯಾಪಾರಿಗಳು, ಶ್ರೀಮಂತರು ಮತ್ತು ಮೇಲ್ಜಾತಿಗಳ ಬಹುಪಾಲು ಹಳೆ ಕಾಂಗ್ರೆಸ್ ನಾಯಕರು ತುಂಬಿದ್ದರು. ಮೂರು ವರ್ಷಗಳ ನಂತರ ನಡೆದ ಸಾರ್ವತ್ರಿಕ ಚುನಾವಣೆಯಲ್ಲಿ ಸಂಪತ್ತುಳ್ಳವರು ಮತ್ತು ವಯಸ್ಸಾದವರು ಸಂಸ್ಥಾ ಕಾಂಗ್ರೆಸ್ ಅಭ್ಯರ್ಥಿಗಳಾದರು. ಇಂದಿರಾ ಕಾಂಗ್ರೆಸ್‌ನಲ್ಲಿ ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಮುಂತಾದ ಮೂಲಗಳಿಂದ ಬಂದ ಯುವ ರಾಜಕಾರಣಿಗಳು ಅಭ್ಯರ್ಥಿಗಳಾದರು.

ಚುನಾವಣೆಯ ದಿನ ವಿಜಾಪುರದ ಹಳ್ಳಿಯೊಂದರಲ್ಲಿ ನಡೆದ ಘಟನೆಯೊಂದು ನೆನಪಿಗೆ ಬರುತ್ತದೆ. ಆಗ ಹತ್ತಿ ಬಿಡಿಸುವ ಕಾಲವಾಗಿತ್ತು. ಜಮೀನುದಾರರು ಚುನಾವಣೆಯ ಹಿಂದಿನ ದಿನ ಆ ಹಳ್ಳಿಯಲ್ಲಿ ಘೋಷಣೆ ಮಾಡಿದ್ದು ಬಹಳ ಹೊಸದಾಗಿತ್ತು. ಚುನಾವಣೆ ದಿನ ಬೆಳಿಗ್ಗೆ 6 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಇಡೀ ದಿನ ತಮ್ಮ ಹೊಲಗಳಲ್ಲಿ ಹತ್ತಿ ಬಿಡಿಸಿಕೊಂಡು ಹೋಗಬಹುದೆಂದು ಘೋಷಿಸಿದರು. ಆದರೆ ಹಳ್ಳಿಗರು ಹತ್ತಿಯ ಆಸೆಗಾಗಿ ಮತ ಚಲಾಯಿಸುವುದನ್ನು ಬಿಡಲಿಲ್ಲ. ಸರದಿಯಲ್ಲಿ ನಿಂತು ಇಂದಿರಾ ಕಾಂಗ್ರೆಸ್‍ಗೆ ಮತ ಚಲಾಯಿಸಿದರು. ಇಂದಿರಾ ಮತ್ತೆ ಪ್ರಧಾನಿಯಾಗಿ ರಾರಾಜಿಸಿದರು. ಇದು ಒಂದು ರೀತಿಯಿಂದ ಅದು ಬಡವರ ಮತ್ತು ದಲಿತರ ವಿಜಯವಾಗಿತ್ತು.

 (ಡಿ. ದೇವರಾಜ ಅರಸು)

ದೇವರಾಜ ಅರಸು ಅವರು 23.03.1972ರಂದು ಕರ್ನಾಟಕದ ಮುಖ್ಯಮಂತ್ರಿಯಾದರು. 31.12.1977ರ ವರೆಗೆ ಅಂದರೆ ಅವಧಿ ಮುಗಿಯುವವರೆಗೆ ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದಲ್ಲಿ ಅರಸು ಮುಖ್ಯಮಂತ್ರಿಯಾದ ಸಂದರ್ಭದಲ್ಲಂತೂ ಶ್ರೀಮಂತ ಜಾತಿಗಳ ಹುಟ್ಟಡಗಿ ಹೋಗಿತ್ತು. ‘ಉಳುವವನೇ ಭೂಮಿಯ ಒಡೆಯ’ ಎಂಬುದು ಕಾರ್ಯಗತವಾಗುತ್ತಿತ್ತು. ಬಿ. ಸುಬ್ಬಯ್ಯಶೆಟ್ಟಿ ಅವರನ್ನು ದೇವರಾಜ ಅರಸು ಅವರು 1973ರಲ್ಲಿ ಭೂ ಸುಧಾರಣಾ ಸಚಿವರಾಗಿ ನೇಮಿಸಿದರು. ಸುಬ್ಬಯ್ಯಶೆಟ್ಟಿ ಅವರು ಭಂಟ ಸಮಾಜಕ್ಕೆ ಸೇರಿದ ಜಮೀನುದಾರಿ ಮನೆತನದವರು. ‘ವಜ್ರಗಳನ್ನು ಕಟ್ ಮಾಡಲು ವಜ್ರವೇ ಬೇಕು’ ಎಂದು ದೇವರಾಜ ಅರಸು ಅವರು ಸುಬ್ಬಯ್ಯಶೆಟ್ಟರ ಬಗ್ಗೆ ಅಭಿಮಾನದಿಂದ ಹೇಳುತ್ತಿದ್ದರು. ಈ ಸಚಿವ ಹುದ್ದೆ ದೇಶದ ಬೇರೆ ಯಾವ ರಾಜ್ಯಗಳಲ್ಲೂ ಇರಲಿಲ್ಲ. ಕರ್ನಾಟಕದಲ್ಲಿ ಭೂ ಸುಧಾರಣೆ ಬಡವರಲ್ಲಿ ಭರವಸೆ ಮೂಡುವ ರೀತಿಯಲ್ಲಿ ಜಾರಿಯಾಯಿತು. 20 ಅಂಶಗಳ ಕಾರ್ಯಕ್ರಮ ಜಾರಿಗೊಳಿಸುವಲ್ಲಿ ಅರಸು ಸರ್ಕಾರ ತಲ್ಲೀನವಾಗಿತ್ತು. ಒಟ್ಟು 40 ಸಾವಿರ ಗೇಣಿದಾರರು ಭೂಮಾಲೀಕರಾಗುವ ಮೂಲಕ ಕರ್ನಾಟಕದಲ್ಲಿ ಇತಿಹಾಸ ಸೃಷ್ಟಿಯಾಯಿತು. ದಲಿತರಷ್ಟೇ ಅಲ್ಲದೆ ಹಿಂದುಳಿದವರು, ಇತರೆ ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಹೊಸ ಕನಸುಗಳೊಂದಿಗೆ ರಾಜಕೀಯ ಪ್ರವೇಶ ಮಾಡಿದರು. ಅನೇಕರು ಮಂತ್ರಿಗಳಾದರು, ಪಕ್ಷದ ಮತ್ತು ಸರ್ಕಾರದ ವಿವಿಧ ಹುದ್ದೆಗಳಲ್ಲಿ ತಮ್ಮ ಪಾಲು ಪಡೆದರು.

ಸಂಸ್ಥಾಕಾಂಗ್ರೆಸ್, ಜನಸಂಘ ಮುಂತಾದ ಪಕ್ಷಗಳು ಕಾಂಗ್ರೆಸ್ ಸರ್ಕಾರ ಉರುಳಿಸುವಲ್ಲಿ ತಲ್ಲೀನವಾಗಿದ್ದವು. ಆ ಎಲ್ಲ ವಿರೋಧ ಪಕ್ಷಗಳಿಗೆ ಪೂರಕವಾದ ಜಯಪ್ರಕಾಶ ನಾರಾಯಣರ ‘ಸಮಗ್ರಕ್ರಾಂತಿ’ ಹೆಸರಿನ ಚಳವಳಿ, ಜೆ.ಪಿ. ಚಳವಳಿ ಎಂದು ಪ್ರಸಿದ್ಧವಾಯಿತು.

1964ರಲ್ಲೇ ಭಾರತ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಐ)ದಿಂದ ಬೇರ್ಪಟ್ಟು ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷ (ಸಿ.ಪಿ.ಎಂ) ಅಸ್ತಿತ್ವಕ್ಕೆ ಬಂದಿತ್ತು. ಅಂದಿನ ಜನಸಂಘ (ಇಂದಿನ ಬಿ.ಜೆ.ಪಿ), ಸಂಸ್ಥಾ ಕಾಂಗ್ರೆಸ್, ಸಮಾಜವಾದಿ ಮುಂತಾದ ಪಕ್ಷಗಳ ಕಾಂಗ್ರೆಸ್ ವಿರೋಧಿ ಹೋರಾಟಕ್ಕೆ ಸಿ.ಪಿ.ಎಂ. ಕೂಡ ಕೈ ಜೋಡಿಸಿತು.

(ಜಯಪ್ರಕಾಶ್‌ ನಾರಾಯಣ)

ಸಿ.ಪಿ.ಐ. ಪಕ್ಷ ಪಾರ್ಲಿಮೆಂಟ್ ಒಳಗಡೆ ಕಾಂಗ್ರೆಸ್ ವಿರುದ್ಧ ಹೋರಾಡುತ್ತಿತ್ತು. ಆದರೆ ಪಾರ್ಲಿಮೆಂಟ್ ಹೊರಗಡೆ ದೇಶವ್ಯಾಪಿ ಪಸರಿಸಿದ ಜೆ.ಪಿ. ಚಳವಳಿಯ ವಿರುದ್ಧ ಹೋರಾಡುತ್ತಿತ್ತು.

ಈ ಚಳವಳಿಯಿಂದಾಗಿ ಅರಾಜಕತೆಯುಂಟಾಗಿ ಕೋಮುವಾದಿಗಳು ಅಧಿಕಾರಕ್ಕೆ ಬರುತ್ತಾರೆ ಎಂಬುದು ಸಿ.ಪಿ.ಐ. ತರ್ಕವಾಗಿತ್ತು. ನಾನಂತು 1969ರಲ್ಲೇ ಭಾರತ ಕಮ್ಯುನಿಸ್ಟ್ ಪಕ್ಷಕ್ಕೆ ಮನಸೋತು ಮುಂದೆ ಸ್ವಲ್ಪೇ ವರ್ಷಗಳಲ್ಲಿ ಪಕ್ಷದ ಸದಸ್ಯ ಆಗುವಷ್ಟು ವಿಶ್ವಾಸ ಗಳಿಸಿದ್ದೆ. ಪಕ್ಷದ ಸದಸ್ಯತ್ವ ಸಿಗುವುದೆಂದರೆ ನೊಬೆಲ್ ಪ್ರಶಸ್ತಿ ಸಿಕ್ಕಂತೆ ಅನಿಸಿತು. ನನ್ನ ಕಳಕಳಿ, ಪ್ರಾಮಾಣಿಕತೆ ಮತ್ತು ಪಕ್ಷದ ನಿಷ್ಠೆಗೆ ಸಂದ ಗೌರವ ಎಂಬ ಹೆಮ್ಮೆ ನನಗಾಯಿತು. ನಮಗೆಲ್ಲ ಆರ್.ಎಸ್.ಎಸ್.ನವರು ಕಾಡುತ್ತಲೇ ಇದ್ದರು. ಹಲ್ಲೆ ಮಾಡಲು ಕೂಡ ಯತ್ನಿಸುತ್ತಿದ್ದರು.

1974ನೇ ಜೂನ್ 5ರಂದು ಜಯಪ್ರಕಾಶ ನಾರಾಯಣ ಅವರು ಪಟ್ನಾದಲ್ಲಿ ಸಂಪೂರ್ಣ ಕ್ರಾಂತಿಗೆ ಕರೆ ನೀಡಿದರು. ಮುಂದೆ ಈ ಚಳವಳಿ ದೇಶಾದ್ಯಂತ ಬೆಳೆದು ಜೆ.ಪಿ. ಚಳವಳಿ ಎಂದು ಪ್ರಸಿದ್ಧವಾಯಿತು.

ಆರ್.ಎಸ್.ಎಸ್. ಫ್ಯಾಸಿಸ್ಟ್ ಎಂದು ಜೆ.ಪಿ. 1968ರಲ್ಲಿ ಟೀಕಿಸಿದ್ದರು. ಆದರೆ ಈ ಜೆ.ಪಿ. ಚಳವಳಿಯ ಸಂದರ್ಭದಲ್ಲಿ ಆರ್.ಎಸ್.ಎಸ್. ಫ್ಯಾಸಿಸ್ಟ್ ಎಂದರೆ ನಾನೂ ಫ್ಯಾಸಿಸ್ಟ್ ಎಂದು ಘೋಷಿಸಿದರು! ಅಲ್ಲದೆ ತಾವು ಹೊಸ ಸರ್ಕಾರದಲ್ಲಿ ಯಾವುದೇ ಪಾತ್ರ ವಹಿಸುವುದಿಲ್ಲ ಎಂದು ತಿಳಿಸಿದರು. ಒಂದು ಸಂದರ್ಭದಲ್ಲಿ ಬಂಡೇಳಲು ಸೈನ್ಯಕ್ಕೆ ಕರೆನೀಡಿದರು. ಆ ಸಂದರ್ಭದಲ್ಲಿ ನಾನು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಭಾಷಾವಿಜ್ಞಾನದ ವಿದ್ಯಾರ್ಥಿಯಾಗಿದ್ದೆ. ವಿಶ್ವವಿದ್ಯಾಲಯದಲ್ಲಿ ಇತರ ಗೆಳೆಯರ ಸಹಾಯದೊಂದಿಗೆ ಎ.ಐ.ಎಸ್.ಎಫ್. ವಿದ್ಯಾರ್ಥಿ ಸಂಘಟನೆ ಆರಂಭಿಸಿದೆ. ಆ ಸಂದರ್ಭದಲ್ಲಿ ಸರಜೂ ಕಾಟಕರ ಕನ್ನಡ ಎಂ.ಎ. ವಿದ್ಯಾರ್ಥಿಯಾಗಿದ್ದ. ಆತ ಕರ್ಮವೀರಕ್ಕಾಗಿ ನಾನೂ ಸೇರಿದಂತೆ ನಾಲ್ಕು ಯುವಜನರ ಸಂದರ್ಶನ ಮಾಡಿದ. ಆ ಸಂದರ್ಶನದಲ್ಲಿ ‘ಜೆ.ಪಿ. ಬಂಧನ ಅಗತ್ಯ’ ಎಂದು ಹೇಳಿದ್ದೆ. ಅದೇ ಶೀರ್ಷಿಕೆಯಲ್ಲಿ ನನ್ನ ಭಾವಚಿತ್ರದೊಂದಿಗೆ ಸಂದರ್ಶನ ಪ್ರಕಟವಾಯಿತು. ಕಾಂಗ್ರೆಸ್ ಸೋಲಿಸಲು ಪಣ ತೊಟ್ಟ ಜೆ.ಪಿ., ಅಧಿಕಾರದ ಚುಕ್ಕಾಣಿ ಹಿಡಿಯಲು ಸಿದ್ಧರಿಲ್ಲದಿರುವಾಗ ಮೇಲ್ಜಾತಿಯವರು, ಕೋಮುವಾದಿಗಳು ಮತ್ತು ಬಂಡವಾಳಶಾಹಿಗಳು ಆ ಸ್ಥಾನವನ್ನು ತುಂಬುತ್ತಾರೆ ಎಂಬುದು ನನ್ನ ಮುಖ್ಯ ವಾದವಾಗಿತ್ತು. ಅಲ್ಲದೆ ಸೈನ್ಯಕ್ಕೆ ಬಂಡೇಳಲು ಹೇಳುವುದು ದೇಶದ್ರೋಹ ಎನಿಸಿತು. ಅದಕ್ಕಾಗಿಯೆ ಜೆ.ಪಿ. ಬಂಧನ ಅಗತ್ಯ ಎಂದು ಹೇಳಿದ್ದೆ. ಆಗ ದುಷ್ಕರ್ಮಿಗಳು ನನ್ನ ಮೇಲೆ ಹಲ್ಲೆ ಮಾಡಲು ಪ್ರಯತ್ನಿಸಿದ್ದರಿಂದ ನಾನು ಕೆಲ ದಿನ ಅವರಿವರ ಕೋಣೆಗಳಲ್ಲಿ ಇರಬೇಕಾಯಿತು.

(ಕಾರ್ಲ್ ಮಾರ್ಕ್ಸ್‌)

ಸೈನಕ್ಕೆ ಬಂಡೇಳುವ ಕರೆ ಮುಂತಾದ ಕಾರಣಗಳಿಂದ ಒಂದು ರೀತಿಯ ಅರಾಜಕ ಸ್ಥಿತಿ ನಿರ್ಮಾಣವಾಗುವ ಸಂದರ್ಭ ಬಂದೊದಗಿತು. ಏತನ್ಮಧ್ಯೆ ಇಂದಿರಾ ಗಾಂಧಿ ಅವರು 1971ರ ಚುನಾವಣೆಯಲ್ಲಿ ಚುನಾವಣಾ ದುಷ್ಕೃತ್ಯ ಎಸಗಿದ ಕಾರಣ ಸಂಸತ್ ಸದಸ್ಯತ್ವ ಕಳೆದುಕೊಂಡಿದ್ದು ಮುಂದೆ ಆರುವ ವರ್ಷಗಳವರೆಗೆ ಚುನಾವಣೆಗೆ ಸ್ಪರ್ಧಿಸುವ ಹಾಗಿಲ್ಲ ಎಂದು 1975ನೇ ಜೂನ್ 12ರಂದು ಅಲಹಾಬಾದ ಹೈಕೋರ್ಟ್ ತೀರ್ಪು ನೀಡಿತು. ಆದರೆ ಇಂದಿರಾ ಗಾಂಧಿಯವರು ಸರ್ವೋಚ್ಚ ನ್ಯಾಯಾಲಯದ ಮೊರೆ ಹೊಕ್ಕರು. ಪ್ರಧಾನಿ ಹುದ್ದೆಗೆ ರಾಜೀನಾಮೆ ನೀಡಬೇಕೆಂದು ಜೆ.ಪಿ. ಒತ್ತಾಯಿಸಿ ಚಳವಳಿ ತೀವ್ರಗೊಳಿಸಿದರು. ಇಂದಿರಾ ಗಾಂಧಿಯವರು 1975ನೇ ಜೂನ್ 15ರಂದು ದೇಶಾದ್ಯಂತ ತುರ್ತುಪರಿಸ್ಥಿತಿ ಹೇರಿದರು. ಜೆ.ಪಿ. ಮುಂತಾದ ನಾಯಕರನ್ನು ಬಂಧಿಸಲಾಯಿತು.

ಇಂದಿರಾ ಗಾಂಧಿ ತುರ್ತುಪರಿಸ್ಥಿತಿ ಘೋಷಿಸಿದರು. ಬಹುಪಾಲು ದಲಿತ ಸಾಹಿತಿಗಳು ಜೆ.ಪಿ. ಚಳವಳಿಯಲ್ಲಿದ್ದರೆ, ದಲಿತ ಜನರು ಇಂದಿರಾ ಗಾಂಧಿ ಮೇಲೆ ಭರವಸೆ ಇಟ್ಟಿದ್ದರು. ಸಮಾಜವಾದಿ ಹಿನ್ನೆಲೆಯ ಹಾಗೂ ಸಿ.ಪಿ.ಎಂ. ಒಲವಿನ ಸಾಹಿತಿಗಳು ಕೂಡ ಜೆ.ಪಿ. ಚಳವಳಿಯಲ್ಲಿದ್ದರು. ಆದರೆ ಸಿ.ಪಿ.ಐ. ಒಲವಿನ ಯುವಕರೆಲ್ಲ ಜೆ.ಪಿ. ಚಳವಳಿಯನ್ನು ವಿರೋಧಿಸುತ್ತಿದ್ದರು. ಈ ಸಂದರ್ಭದಲ್ಲಿ ಅನೇಕ ಕಾಂಗ್ರೆಸ್ ನಾಯಕರ ಮತ್ತು ಯುವ ನಾಯಕರ ಸಂಪರ್ಕ ನನಗೆ ಬಂದಿತು.

1977ನೇ ಮಾರ್ಚ್ 16ರಿಂದ 20ರ ವರೆಗೆ ತುರ್ತು ಪರಿಸ್ಥಿತಿಯಲ್ಲೇ 6ನೇ ಲೋಕಸಭೆಯ ಸಾರ್ವತ್ರಿಕ ಚುನಾವಣೆ ನಡೆಯಿತು. ಮಾರ್ಚ್ 21 ರಂದು ತುರ್ತುಪರಿಸ್ಥಿತಿಯನ್ನು ತೆಗೆಯಲಾಯಿತು. ಇಂದಿರಾ ಸಮೇತ ಅವರ ಪಕ್ಷ ಸೋಲು ಅನುಭವಿಸಿತು. ಅನೇಕ ಇಂದಿರಾ ಕಾಂಗ್ರೆಸ್ ವಿರೋಧಿ ಪಕ್ಷಗಳು ಸೇರಿ ಜನತಾ ಪಕ್ಷ ಸ್ಥಾಪಿಸಿದವು. ಮೊರಾರ್ಜಿ ದೇಸಾಯಿ ಮಾರ್ಚ್ 24ರಂದು ದೇಶದ ಮೊದಲ ಕಾಂಗ್ರೆಸ್ಸೇತರ ಪ್ರಧಾನಿ ಆದರು.

ಮುಂದೆ ನಾನು ಭಾವಿಸಿದಂತೆಯೆ ಆಯಿತು. ಜನಸಂಘದಿಂದ ಕೇವಲ ಇಬ್ಬರು ಎಂ.ಪಿ.ಗಳು ಆಯ್ಕೆಯಾಗುತ್ತಿದ್ದರು. ನಂತರ ಜನತಾ ಪರಿವಾರದಿಂದ ಹೊರಬಂದು ಭಾರತೀಯ ಜನತಾ ಪಕ್ಷವಾಗಿ ದೇಶವನ್ನೇ ಆಳತೊಡಗಿದರು.

ಜನಸಂಘ ಸೇರಿದಂತೆ ಅನೇಕ ಕಾಂಗ್ರೆಸ್ ವಿರೋಧಿ ಪಕ್ಷಗಳು ಸೇರಿ ಜನತಾ ಪಕ್ಷವಾಗಿ ಅಧಿಕಾರಕ್ಕೆ ಬಂದ ನಂತರ ಜೆ.ಪಿ. ಅವರಿಗೆ ಕೇಳುವವರೇ ಇರಲಿಲ್ಲ! ಕೋಮುಶಕ್ತಿಗಳು ಮಾಡಿದ ಮೋಸದಿಂದ ಅವರು ಕೊನೆಯ ದಿನಗಳನ್ನು ಬಹಳ ಹತಾಶರಾಗಿ ಕಳೆದರು.

ತುರ್ತುಪರಿಸ್ಥಿತಿ ಮುಗಿದ ನಂತರ ನಡೆದ ಚುನಾವಣೆಯಲ್ಲಿ ಕಾಂಗ್ರೆಸ್ ಕೇಂದ್ರದಲ್ಲಿ ಸೋತರೂ ಕರ್ನಾಟಕದಲ್ಲಿ ಜನಪರ ಕಾರ್ಯಕ್ರಮಗಳಿಂದಾಗಿ ಕಾಂಗ್ರೆಸ್ ಗೆದ್ದಿತು. 1978ರಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ದೇವರಾಜ ಅರಸು ಅವರು ಮತ್ತೆ ಮುಖ್ಯಮಂತ್ರಿಯಾದರು. 1978ನೇ ಮಾರ್ಚ್ 17ರಿಂದ 1980ನೇ ಜೂನ್ 8ರ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾದರು.

1978ರ ಚಿಕ್ಕಮಗಳೂರಿನಿಂದ ಸಂಸತ್‌ಗೆ ನಡೆದ ಉಪ ಚುನಾವಣೆಯಲ್ಲಿ ವೀರೇಂದ್ರ ಪಾಟೀಲರನ್ನು ಸೋಲಿಸಿ ಇಂದಿರಾ ಗಾಂಧಿ ಆಯ್ಕೆಯಾದರು. ಅದೇ ವರ್ಷ ಅರಸು ಮತ್ತು ಇಂದಿರಾ ಮಧ್ಯೆ ಮನಸ್ತಾಪ ಉಂಟಾದಾಗ ಅರಸು ಅವರು ಕಾಂಗ್ರೆಸ್ಸಿನಿಂದ ಹೊರಬಂದರು. ಅರಸು ಕಾಂಗ್ರೆಸ್ ಸ್ಥಾಪನೆ ಮಾಡಿ ಮುಖ್ಯಮಂತ್ರಿಯಾಗಿ ಮುಂದುವರಿದರು.

ಆದರೆ 1980ರ ಸಂಸತ್ ಚುನಾವಣೆಯಲ್ಲಿ ಇಂದಿರಾಗಾಂಧಿಯವರ ಕೈ ಮೇಲಾಗಿ ಅರಸು ಕಾಂಗ್ರೆಸ್ ಸೋತಿತು. ತತ್ಪರಿಣಾಮವಾಗಿ ಅರಸು ಅವರು ರಾಜೀನಾಮೆ ನೀಡಿದರು. ಮುಂದೆ ಇಂದಿರಾ ಕಾಂಗ್ರೆಸ್‌ನಿಂದ ಗುಂಡುರಾಯರು ಮುಖ್ಯಮಂತ್ರಿಯಾದರು.

ಸಿಂಹಾವಲೋಕನ ಮಾಡಿದಾಗ ಈ 50 ವರ್ಷಗಳಲ್ಲಿ ಕಾಂಗ್ರೆಸ್, ಕಮ್ಯುನಿಸ್ಟ್ ಪಕ್ಷಗಳು, ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಮಾಡಿದ ತಪ್ಪುಗಳಿಂದಲೇ ಕೋಮುವಾದಿಗಳು ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂಬುದರ ಅರಿವಾಗುವುದು.

(ಗಾಂಧೀಜಿ)

ಮುಂದಿನ ದಿನಗಳಲ್ಲಿ ಜನತಾಪಕ್ಷ ಇಬ್ಭಾಗವಾಗುತ್ತ ಮತ್ತೆ ಅನೇಕ ಪಕ್ಷಗಳಾಗಿ ಹಿಂದುಳಿದವು. ಆದರೆ ಜನಸಂಘ ಮೂಲದವರು ಭಾರತೀಯ ಜನತಾ ಪಕ್ಷವಾಗಿ ದೇಶವನ್ನು ಆಳತೊಡಗಿದರು.

ಷಾ ಬಾನೂ ಪ್ರಕರಣ: ಷಾ ಬಾನೂ ಜೊತೆಗಿನ 43 ವರ್ಷಗಳ ವೈವಾಹಿಕ ಜೀವನದ ನಂತರ ಆಕೆ 70 ವರ್ಷದವಳಿದ್ದಾಗ, ಇಂದೋರ್‍ನಲ್ಲಿ ವಕೀಲನಾಗಿದ್ದ ಗಂಡ ಮಹಮ್ಮದ್ ಅಹಮದ್ ಖಾನ್ ಅವಳನ್ನು ತ್ರಿವಳಿ ತಲಾಖ್ ನೀಡಿ ಹೊರಗೆ ಹಾಕಿದ. ಆತ ಅದಾಗಲೇ ಇನ್ನೊಂದು ಮದುವೆಯಾಗಿದ್ದ. ಅವಳು ಕೋರ್ಟಿಗೆ ಹೋದಳು. 1983ನೇ ಏಪ್ರಿಲ್ 23ರಂದು ಸುಪ್ರೀಂ ಕೋರ್ಟ್, ಮಧ್ಯಪ್ರದೇಶ ಹೈ ಕೋರ್ಟ್ ಆಜ್ಞೆಯನ್ನು ಎತ್ತಿಹಿಡಿಯಿತು. ತನ್ನ ತೀರ್ಪಿಗೆ ಕುರಾನ್ ಬೆಂಬಲವನ್ನೂ ಪಡೆಯಿತು. ಮಾಸಾಶನ ಕೇವಲ 177 ರೂಪಾಯಿ 20 ಪೈಸೆ ಆಗಿತ್ತು! ಅಷ್ಟಕ್ಕೇ ಮುಸ್ಲಿಂ ಮೂಲಭೂತವಾದಿಗಳು ‘ಇಸ್ಲಾಂ ಗಂಡಾಂತರದಲ್ಲಿದೆ’ ಎಂದು ಘೋಷಿಸುತ್ತ ಬಡ ಮುಸ್ಲಿಮರನ್ನು ದೇಶಾದ್ಯಂತ ಬೀದಿಗೆ ಎಳೆದರು. ಕೋಮುವಾದಿಗಳಿಗೂ ಇಷ್ಟೇ ಬೇಕಾಗಿತ್ತು. ಹಿಂದೂ ಕೋಮುವಾದ ತೀವ್ರವಾಗಿ ಬೆಳೆಯಲು ಮುಸ್ಲಿಂ ಮೂಲಭೂತವಾದಿಗಳೇ ಕಾರಣರಾದರು. ಅದು ಬಾಬರಿ ಮಸೀದಿ ಬೀಳುವವರೆಗೂ ನಂತರ ಕೋಮುವಾದಿಗಳು ದೇಶವನ್ನು ಆಳುವವರೆಗೂ ಮುಂದುವರಿಯಿತು.

(ಡಾ. ಬಿ.ಆರ್.‌ ಅಂಬೇಡ್ಕರ್)

ಭರವಸೆಯ ದಲಿತ ನಾಯಕರು ಬಿ.ಜೆ.ಪಿ. ಸೇರಿ ಮಂತ್ರಿಗಳಾದರು. ಬಿ.ಜೆ.ಪಿ. ಬೆಂಬಲದೊಂದಿಗೆ ಮಾಯಾವತಿ ಉತ್ತರ ಪ್ರದೇಶದ ಮುಖ್ಯಮಂತ್ರಿಗಳಾದರು. ಕೆಲ ದಲಿತ ನಾಯಕರು ಗಾಂಧೀಜಿಯವರನ್ನು ಟೀಕಿಸುವ ಕ್ರಮಕ್ಕೂ ಸಂಘಪರಿವಾರದವರು ಟೀಕಿಸುವ ಕ್ರಮಕ್ಕೂ ವ್ಯತ್ಯಾಸವೇ ಇಲ್ಲದಂತಾಯಿತು. ಕಮ್ಯುಸನಿಸ್ಟರು ದಲಿತ ದೌರ್ಜನ್ಯದ ವಿರುದ್ಧ ಮಾತನಾಡಿದರೂ ಹೋರಾಟ ಮಾಡಿದರೂ ಬಹಳ ವರ್ಷಗಳವರೆಗೆ ಅಂಬೇಡ್ಕರ್ ಚಿಂತನೆಯ ಮಹತ್ವವನ್ನು ಮನಗಾಣಲೇ ಇಲ್ಲ. ಮೊದಲಿನಿಂದಲೂ ಕಮ್ಯುನಿಸ್ಟರು ಅಂಬೇಡ್ಕರರ ಮಹತ್ವವನ್ನು ಅರಿತುಕೊಂಡಿದ್ದರೆ ದೇಶದ ಪರಿಸ್ಥಿತಿ ಬೇರೆಯೆ ಆಗಿರುತ್ತಿತ್ತು. ಇನ್ನು ಕಾಂಗ್ರೆಸ್ಸಿಗರಂತೂ ಭ್ರಷ್ಟತೆಯನ್ನೇ ಜೀವನವಿಧಾನವಾಗಿಸಿಕೊಂಡರು. ಈ ಎಲ್ಲ ಕಾರಣಗಳಿಂದ ದೇಶ ಇಂದು ಭಯಾನಕ ಸ್ಥಿತಿಗೆ ಬಂದು ನಿಂತಿದೆ.

ಇಂಥ ವಿಷಮ ಪರಿಸ್ಥಿತಿಯಲ್ಲಿ ಅಲ್ಪಸಂಖ್ಯಾತರು, ಹಿಂದುಳಿದವರು ಮತ್ತು ದಲಿತರು ಒಂದಾಗುವ ಅವಶ್ಯಕತೆ ಇದೆ. ಬುದ್ಧ, ಬಸವ, ಮಾರ್ಕ್ಸ್‌ ಮತ್ತು ಅಂಬೇಡ್ಕರರ ಚಿಂತನೆಗಳು ಮಾತ್ರ ನಮ್ಮನ್ನು ಬೆಳಕಿನೆಡೆಗೆ ಒಯ್ಯಬಲ್ಲವು.