ಐಹೊಳೆಯಲ್ಲಿರುವ ಅಪಾರಸಂಖ್ಯೆಯ ಗುಡಿಗಳಿಗೆ ಯಾವುದಾದರೊಂದು ಹೆಸರಿಡುವ ಸಮಸ್ಯೆ ಬ್ರಿಟಿಷರ ಆಳ್ವಿಕೆಯ ಕಾಲಕ್ಕೆ ಎದುರಾಯಿತು. ಬಹುತೇಕ ಗುಡಿಗಳಲ್ಲಿ ದೇವತಾಮೂರ್ತಿಗಳಿರಲಿಲ್ಲ. ಹಳ್ಳಿಯ ಜನರು ತಮತಮಗೆ ಸಿಕ್ಕ ಗುಡಿಯಂಗಳಗಳನ್ನು ಆಕ್ರಮಿಸಿಕೊಂಡು ವಾಸಸ್ಥಳವಾಗಿ ಮಾರ್ಪಡಿಸಿಕೊಂಡಿದ್ದರು.  ಆಯಾ ಗುಡಿಯಲ್ಲಿ ವಾಸವಿದ್ದ ಜನರ ಹೆಸರೇ ಗುಡಿಗೂ ಅಂಕಿತನಾಮವಾಯಿತು. ಲಾಡಖಾನ ಗುಡಿ, ಗೌಡರ ಗುಡಿ, ರಾಚೀ ಗುಡಿ, ಅಂಬಿಗೇರ ಗುಡಿ, ಹುಚ್ಚಪ್ಪಯ್ಯನ ಗುಡಿ ಮೊದಲಾದ ಹೆಸರುಗಳು ಇಂದಿಗೂ ಉಳಿದುಕೊಂಡು ಬಂದಿವೆ. ಈ ಎಲ್ಲ ಗುಡಿಗಳ ನಡುವೆ ತನ್ನ ವಿಶಿಷ್ಟ ವಾಸ್ತುಶೈಲಿಯಿಂದ ದುರ್ಗ ದೇವಾಲಯ ಕಣ್ಸೆಳೆಯುತ್ತದೆ.
ಟಿ.ಎಸ್. ಗೋಪಾಲ್ ಬರೆಯುವ ದೇಗುಲಗಳ ಸರಣಿಯ ಹದಿನಾರನೆಯ ಕಂತು

 

ವಿಜಯಪುರ ಜಿಲ್ಲೆಯ ಐಹೊಳೆ ಇತಿಹಾಸಪ್ರಸಿದ್ಧ ನಗರ. ಆರ್ಯಪುರವೆಂದೂ ಅಯ್ಯಾವೊಳೆಯೆಂದೂ ಕರೆಯಲ್ಪಡುತ್ತಿದ್ದ ಧಾರ್ಮಿಕಕ್ಷೇತ್ರ. ಈ ಪ್ರಾಂತ್ಯವನ್ನು 250ಕ್ಕೂ ಹೆಚ್ಚು ವರ್ಷಗಳ ಕಾಲ ಆಳಿದ ಬಾದಾಮಿ ಚಾಲುಕ್ಯರು (ಕ್ರಿ.ಶ.500 ರಿಂದ 750) ಐಹೊಳೆ, ಬಾದಾಮಿ, ಪಟ್ಟದಕಲ್ಲು ಮುಂತಾದೆಡೆಗಳಲ್ಲಿ ಅನೇಕ ದೇವಾಲಯಗಳನ್ನು ಕಟ್ಟಿಸಿದರು. ಐಹೊಳೆಯೊಂದರಲ್ಲಿಯೇ ಎಪ್ಪತ್ತಕ್ಕೂ ಹೆಚ್ಚು ಪುರಾತನ ಗುಡಿಗಳಿವೆಯೆಂದಮೇಲೆ ಈ ಸ್ಥಳದ ಧಾರ್ಮಿಕ, ಸಾಮಾಜಿಕ , ಸಾಂಸ್ಕೃತಿಕ ಶ್ರೀಮಂತಿಕೆ ಎಷ್ಟಿದ್ದಿರಬಹುದೆಂದು ಊಹಿಸಿಕೊಳ್ಳಬಹುದು.

ಕಲ್ಲಿನಲ್ಲಿ ಕಟ್ಟಿರುವ ಗುಡಿಗಳಲ್ಲಿ ಕರ್ನಾಟಕದಲ್ಲೇ ಅತ್ಯಂತ ಪ್ರಾಚೀನವಾದ ಹಲವು ಗುಡಿಗಳನ್ನು ನೀವು ಐಹೊಳೆಯಲ್ಲಿ ಕಾಣಬಹುದು. ಅಂತಹ ಪುರಾತನಗುಡಿಗಳಲ್ಲಿ ದುರ್ಗದ ದೇವಾಲಯವೂ ಒಂದು.

ಕರ್ನಾಟಕದ ಇತಿಹಾಸದ ಮಹತ್ವದ ಸಂಕೇತಗಳೆಂದು ನೀವು ಗುರುತಿಸಬಹುದಾದ ಕಟ್ಟಡಗಳಲ್ಲಿ ಐಹೊಳೆಯ ದುರ್ಗದ ದೇವಾಲಯವನ್ನೂ ಹೆಸರಿಸಬೇಕು. ದುರ್ಗಾನ ಗುಡಿ ಎಂದು ಸ್ಥಳೀಯರು ಕರೆಯುವ ಈ ಗುಡಿಗೂ ದುರ್ಗೆದೇವತೆಗೂ ಸಂಬಂಧವಿಲ್ಲ. ದುರ್ಗ ಎಂದರೆ ಕೋಟೆಯೊಳಗಿನ ಗುಡಿ ಎಂದಷ್ಟೇ ಇದರ ಸೀಮಿತ ಅರ್ಥ.

ಐಹೊಳೆಯಲ್ಲಿರುವ ಅಪಾರಸಂಖ್ಯೆಯ ಗುಡಿಗಳಿಗೆ ಯಾವುದಾದರೊಂದು ಹೆಸರಿಡುವ ಸಮಸ್ಯೆ ಬ್ರಿಟಿಷರ ಆಳ್ವಿಕೆಯ ಕಾಲಕ್ಕೆ ಎದುರಾಯಿತು. ಬಹುತೇಕ ಗುಡಿಗಳಲ್ಲಿ ದೇವತಾಮೂರ್ತಿಗಳಿರಲಿಲ್ಲ. ಹಳ್ಳಿಯ ಜನರು ತಮತಮಗೆ ಸಿಕ್ಕ ಗುಡಿಯಂಗಳಗಳನ್ನು ಆಕ್ರಮಿಸಿಕೊಂಡು ವಾಸಸ್ಥಳವಾಗಿ ಮಾರ್ಪಡಿಸಿಕೊಂಡಿದ್ದರು. ಆಯಾ ಗುಡಿಯಲ್ಲಿ ವಾಸವಿದ್ದ ಜನರ ಹೆಸರೇ ಗುಡಿಗೂ ಅಂಕಿತನಾಮವಾಯಿತು. ಲಾಡಖಾನ ಗುಡಿ, ಗೌಡರ ಗುಡಿ, ರಾಚೀ ಗುಡಿ, ಅಂಬಿಗೇರ ಗುಡಿ, ಹುಚ್ಚಪ್ಪಯ್ಯನ ಗುಡಿ ಮೊದಲಾದ ಹೆಸರುಗಳು ಇಂದಿಗೂ ಉಳಿದುಕೊಂಡು ಬಂದಿವೆ.

ಈ ಎಲ್ಲ ಗುಡಿಗಳ ನಡುವೆ ತನ್ನ ವಿಶಿಷ್ಟ ವಾಸ್ತುಶೈಲಿಯಿಂದ ದುರ್ಗ ದೇವಾಲಯ ಕಣ್ಸೆಳೆಯುತ್ತದೆ. ಗುಡಿಯ ಹಿಂಭಾಗದಿಂದ ನೀವು ಸಾಗುತ್ತಿರುವಂತೆಯೇ ಈ ಕಟ್ಟಡದ ಶೈಲಿಯ ನಿರ್ಮಾಣ ಬಹುಪರಿಚಿತವಾಗಿದೆಯಲ್ಲ ಎನ್ನಿಸಿದರೆ ಅಚ್ಚರಿಯಿಲ್ಲ. ನವದೆಹಲಿಯ ಪಾರ್ಲಿಮೆಂಟ್ ಭವನವನ್ನು ಇದೇ ವಿನ್ಯಾಸದಲ್ಲಿ ಕಟ್ಟಲಾಗಿದೆಯೆಂದಮೇಲೆ ಕ್ರಿ.ಶ. 600ರಷ್ಟು ಪುರಾತನವಾದ ಈ ದೇಗುಲನಿರ್ಮಾಣದ ಬಗೆಗೆ ಅಭಿಮಾನ ಮೂಡಲೇಬೇಕು.

ಎರಡು ಪ್ರದಕ್ಷಿಣಾಪಥಗಳನ್ನುಳ್ಳ , ಅರ್ಧವೃತ್ತಾಕಾರದ ಗರ್ಭಗುಡಿಯ ವಿನ್ಯಾಸವುಳ್ಳ ಈ ಕಟ್ಟಡ ಬಹುವಿಶಿಷ್ಟವಾಗಿದೆ. ನಾಗರಶೈಲಿಯ ಶಿಖರದ ಮೇಲ್ಭಾಗವು ಕುಸಿದುಬಿದ್ದಿದ್ದರೂ ಕಟ್ಟಡದ ಒಟ್ಟಂದಕ್ಕೇನೂ ಕಡಿಮೆಯಿಲ್ಲ. ನೆಲದಿಂದ ಹತ್ತು ಮೀಟರು ಎತ್ತರವಿರುವ ಕಟ್ಟಡವು ಪ್ರದಕ್ಷಿಣಾಪಥಗಳಲ್ಲದೆ, ಮುಖಮಂಟಪ, ಒಳಮಂಟಪಗಳನ್ನೂ ಗರ್ಭಗುಡಿಯನ್ನೂ ಹೊಂದಿದೆ.

ಮುಂಬಾಗಿಲೆಡೆಯ ಕಂಬಗಳ ಮೇಲೆಲ್ಲ ರಸಿಕದಂಪತಿಗಳೂ ಯಕ್ಷಗಂಧರ್ವರೂ ಸ್ಥಾನಪಡೆದಿದ್ದಾರೆ. ಪ್ರಾಚೀನ ಸಾಮಾಜಿಕ ಜೀವನದ ಸರಸಸಮೃದ್ಧಿಯನ್ನು ಪ್ರದರ್ಶಿಸುವ ದಂಪತಿಶಿಲ್ಪಗಳು ಈ ದೇಗುಲದ ಮುಖ್ಯ ಆಕರ್ಷಣೆ.

ಮುಖ್ಯದ್ವಾರದ ಚೌಕಟ್ಟು ಪುಷ್ಪ, ಹೂಬಳ್ಳಿ, ಸುಂದರಿಯರು, ಕಂಬವಿನ್ಯಾಸ ಮತ್ತಿತರ ಸಿಂಗಾರದ ಪಟ್ಟಿಕೆಗಳಿಂದ ಶೋಭಾಯಮಾನವಾಗಿದೆ. ಪಟ್ಟಿಕೆಗಳ ಕೆಳಭಾಗದಲ್ಲೂ ರತಿಮನ್ಮಥರೂ ಹಲವು ರಸಿಕಜೋಡಿಗಳೂ ಕಂಡುಬರುತ್ತಾರೆ. ಲಲಾಟದಲ್ಲಿ ಸರ್ಪಗಳನ್ನು ಹಿಡಿದ ಗರುಡನ ಶಿಲ್ಪವಿದೆ. ಒಳಮಂಟಪದ ಭುವನೇಶ್ವರಿಯೂ ಸೊಗಸಾದ ವಿನ್ಯಾಸದಿಂದ ಅಲಂಕೃತವಾಗಿದೆ.

ಗರ್ಭಗುಡಿಯಲ್ಲಿ ಮೂರ್ತಿಯಿಲ್ಲ. ಸ್ವಸ್ತಿಕ, ಚಕ್ರ ಮೊದಲಾದ ವಿನ್ಯಾಸಗಳನ್ನು ಪ್ರದರ್ಶಿಸುವ ಜಾಲಂದ್ರಗಳನ್ನು ಅಳವಡಿಸಿರುವುದು ಗುಡಿಯ ಇನ್ನೊಂದು ವಿಶೇಷ. ಮಂಟಪದ ಅಧಿಷ್ಠಾನದ ಭಾಗದಲ್ಲಿ ರಾಮಾಯಣದ ಕೆಲವು ದೃಶ್ಯಗಳನ್ನು ಚಿತ್ರಿಸಿರುವುದನ್ನು ಕಾಣಬಹುದು. ಇವುಗಳಲ್ಲಿ ವನವಾಸಕ್ಕೆ ಹೊರಟ ರಾಮ, ಲಕ್ಷ್ಮಣ,ಸೀತೆಯರನ್ನು ಗುಹನು ನಾವೆಯ ಮೂಲಕ ನದಿದಾಟಿಸುತ್ತಿರುವ ಚಿತ್ರವು ಗಮನಾರ್ಹವಾಗಿದೆ.

(ಚಿತ್ರಗಳು: ಟಿ.ಎಸ್. ಗೋಪಾಲ್)

ಹೊರಮಂಟಪದಲ್ಲಿ ಕಂಡುಬರುವ ದೇವಕೋಷ್ಠಗಳಲ್ಲಿ ಉಳಿದುಕೊಂಡಿರುವ ಹಲವು ಶಿಲ್ಪಗಳು ಮನೋಹರವಾಗಿವೆ. ವೃಷಭವಾಹನ ಶಿವ ಅಷ್ಟಭುಜಗಳನ್ನು ಧರಿಸಿ ನಂದಿಗೆ ಒರಗಿ ನಿಂತಿರುವ ಶಿಲ್ಪ, ಚತುರ್ಭುಜಧಾರಿ ಸ್ಥಾನಕ(ನಿಂತಿರುವ) ನರಸಿಂಹ, ಲಕ್ಷ್ಮೀಸಹಿತನಾಗಿ ಗರುಡನನ್ನೇರಲು ಸನ್ನದ್ಧನಾದ ವಿಷ್ಣು, ಹಾಗೂ ಹರಿಹರನ ಶಿಲ್ಪಗಳನ್ನು ಗಮನಿಸಬಹುದು. ಎಡಮೇಲುಗೈಯಲ್ಲಿ ಭೂದೇವಿಯನ್ನು ಎತ್ತಿಹಿಡಿದು ಅವಳತ್ತ ಪ್ರೇಮದಿಂದ ಮುಖತಿರುಹಿ, ಬಲಗೈಯನ್ನು ಸೊಂಟದ ಮೇಲಿಟ್ಟು ವಿಶಿಷ್ಟಭಂಗಿಯಲ್ಲಿ ನಿಂತ ವರಾಹಮೂರ್ತಿ. ಪಾತಾಳವನ್ನು ಸಂಕೇತಿಸುವ ಸಲುವಾಗಿ ನಾಗರಾಜನ ಮೇಲೆ ಕಾಲಿಟ್ಟು ನಿಂತಿರುವಂತೆ ತೋರಿಸಿದೆ.

ಕೋಣನ ರೂಪದಲ್ಲಿರುವ ಮಹಿಷಾಸುರನನ್ನು ಮೆಟ್ಟುತ್ತಿರುವ ಅಷ್ಟಭುಜಧಾರಿಣಿ ದುರ್ಗೆಯಾದ ಮಹಿಷಾಸುರಮರ್ದಿನಿಗೆ, ಎಂಟೂ ಕೈಗಳಲ್ಲಿ ಕಂಕಣದಿಂದ ಮುಂದುವರೆದಂತೆ ತೋಳುಕವಚದ ವಿನ್ಯಾಸದ ತೊಡುಗೆಯನ್ನು ಕಲ್ಪಿಸಿರುವುದೊಂದು ವಿಶೇಷ. ಮಹಿಷನನ್ನು ತುಡುಕುವ ಭರದಲ್ಲಿ ಆಭರಣಗಳು ಅಸ್ತವ್ಯಸ್ತವಾಗಿರುವ ರೀತಿಯನ್ನು ಸೊಗಸಾಗಿ ಚಿತ್ರಿಸಿದೆ.

ಇನ್ನುಳಿದಂತೆ, ಹಿರಣ್ಯಕಶಿಪುವನ್ನು ಕೊಲ್ಲುತ್ತಿರುವ ನರಸಿಂಹ, ಅರ್ಧನಾರೀಶ್ವರ, ಶಿವ ಮೊದಲಾದ ಶಿಲ್ಪಗಳೂ ಈ ದೇಗುಲದಲ್ಲಿದ್ದು ಬಾದಾಮಿ ಚಾಲುಕ್ಯರ ಕಾಲದ ಶಿಲ್ಪಕಲಾಪ್ರೌಢಿಮೆಗೆ ಸಾಕ್ಷಿಯಾಗಿವೆ. ಇವೆಲ್ಲ ಸಾಕಷ್ಟು ಎತ್ತರದ ಶಿಲ್ಪಗಳಾಗಿದ್ದು ಅಷ್ಟಿಷ್ಟು ಭಗ್ನವಾಗಿದ್ದರೂ ನಮ್ಮ ನಾಡಿನ ಶಿಲ್ಪಕಲೆಯ ಪುರಾತನ ಪ್ರತಿನಿಧಿಗಳಾಗಿ ಮಹತ್ವಪಡೆದಿವೆ.