ಬಸ್ಸು ಇನ್ನೇನು ಹುಣಸೂರು ತಲುಪಬೇಕು, ಮೊಬೈಲು ಬಡಿದುಕೊಳ್ಳತೊಡಗಿತು. ಹತ್ತಿರ ಕುಳಿತವರು ಆ ಶಬ್ದಕ್ಕೆ ಬೆಚ್ಚಿದಂತೆ ತೋರಿತು. ಅವರು ಬೆಚ್ಚಿದರೂ ಆಶ್ಚರ್ಯ ಇರಲಿಲ್ಲ. ಯಾಕೆಂದರೆ ನನ್ನ ಮೊಬೈಲು ರಿಂಗಾಗುತ್ತಿರಲಿಲ್ಲ. ಬಡಿದುಕೊಳ್ಳುತ್ತಿತ್ತು. ವೃದ್ಧಾಪ್ಯದ ಮೆಟ್ಟಿಲ ಬುಡಕ್ಕೆ ಬಂದು ನಿಂತಿರುವ ನನಗೆ ಕಿವಿ ಸ್ವಲ್ಪ ಮಂದವಾಗಿತ್ತು. ಹಾಗಾಗಿ ಕರೆ ಬಂದಾಗ ಕೇಳಿಸಲೆಂದು ನನ್ನ ತಂಗಿಯ ಮಗಳು ಶುಭಾ ಹೀಗೆ ಶಬ್ದ ಕೊಟ್ಟಿದ್ದಳು. ಬಸ್ಸಿನ ಶಬ್ದಕ್ಕೆ ನನಗೆ ಆಚೆ ಕಡೆಯಿಂದ ಮಾತಾಡುವುದು ಕೇಳುತ್ತಿರಲಿಲ್ಲ. ನಿಲ್ದಾಣ ತಲುಪಿದ ಮೇಲೆ ನಾನೆ ಕರೆ ಮಾಡಿದರಾಯಿತೆಂದು ಮೊಬೈಲು ಬಂದು ಮಾಡಿದೆ.

ನಿಲ್ದಾಣದಲ್ಲಿ ಮೊಬೈಲಿಗೆ ಬಂದ ಕರೆ ನೋಡುತ್ತೇನೆ, ಯಾವುದೊ ಹೊಸ ನಂಬರು. ಅದಕ್ಕೆ ಕರೆ ಮಾಡಿದೆ. ನನ್ನ ಪಕ್ಕದ ಮನೆಯವರ ಮಗ ಚೇತನಕೃಷ್ಣ ಕರೆ ಮಾಡಿದ್ದ. ಮುಖ-ಮುಖ ಕಂಡರೂ ನಾವು ಮಾತಾಡುವುದಿಲ್ಲ. ಹಾಗಿದ್ದ ಮೇಲೆ ಕರೆ ಯಾಕೆ ಮಾಡಿದ ಎಂದು ಸಂಶಯದಿಂದಲೇ ಮಾತಾಡಿದೆ. ಅವನು ಮಾತಾಡಿದ ಮೇಲೆ ಗೊತ್ತಾಯಿತು, ನಾನು ಪ್ರಮಾದ ಮಾಡಿಕೊಂಡೇ ಮನೆ ಬಿಟ್ಟಿರುವುದು. ಮನೆಗೆ ಬೀಗ ಹಾಕಿ ಹೊರಟದ್ದು ಮಾತ್ರವಲ್ಲ, ಶುಭಾ ಕೋಣೆ ಬಾಗಿಲಿನ ಚಿಲಕವನ್ನೂ ಏರಿಸಿ ಬಂದು ಬಿಟ್ಟಿದ್ದೇನೆ. ಕೋಣೆಯೊಳಗೆ ಅವಳು ಬಂಧಿಯಾಗಿದ್ದಾಳೆ. ಅವಳ ಮೊಬೈಲು ಕೋಣೆಯೊಳಗಿಲ್ಲವಂತೆ. ಬೆಳಿಗ್ಗೆ ಎಂಟಕ್ಕೆಲ್ಲ ಕಾಲೇಜಿಗೆ ಹೊರಡಬೇಕಾದವಳು ಕೋಣೆಯೊಳಗೇ ಇದ್ದಾಳೆ. ಕಿಡಿಕಿ ಬಾಗಿಲು ತೆಗೆದು ರಸ್ತೆಯಲ್ಲಿ ಹೋಗುತ್ತಿದ್ದವರನ್ನು ಕೂಗಿ ಕರೆದು, ಪಕ್ಕದ ಮನೆಯವರಿಗೆ ರಸ್ತೆ ಬಳಿ ಬರುವಂತೆ ಕೇಳಿಕೊಂಡಳಂತೆ. ಏನೊ ಅನಾಹುತ ನಡೆದುಹೋಗಿದೆ ಎಂದು ಚೇತನಕೃಷ್ಣ ಓಡಿ ಹೋಗಿದ್ದಾನೆ. ಶುಭಾ ಅವನೊಡನೆ ಗೋಳು ತೋಡಿಕೊಂಡು ನನಗೆ ಫೋನು ಮಾಡಿಸಿದ್ದಾಳೆ.

ಗಂಟೆ ನೋಡಿದೆ ಹತ್ತೂ ಮುಕ್ಕಾಲು ಆಗಿತ್ತು. ಎರಡು ದಿನ ಇದ್ದು ಬರಲು ಮಡಿಕೇರಿಗೆ ಹೊರಟಿದ್ದೆ. ಇನ್ನೇನು ಎರಡು ಗಂಟೆ ದಾರಿಯಷ್ಟೆ ಬಾಕಿ ಇತ್ತು. ನಾನು ಮಾಡಿದ ಅನಾಹುತದಿಂದ ಗಾಬರಿಯಾಯಿತು. ಬೆಳಿಗ್ಗೆಯಿಂದ ಕೋಣೆಯೊಳಗೆ ಅಂದರೆ, ಶೌಚಕ್ಕು ಹೋಗಲಾಗದೆ ಒದ್ದಾಡುತ್ತಿಬೇಕು, ಕಾಲೇಜು ಬೇರೆ ತಪ್ಪಿ ಹೋಯಿತು. ನಕಲಿ ಕೀಲಿ ಮತ್ತೊಂದು ಕೋಣೆಯಲ್ಲಿದೆ. ಅವಳ ಒದ್ದಾಟವನ್ನು ಊಹಿಸಿಕೊಂಡಷ್ಟು ನನಗೆ ಗಾಬರಿಯೇ ಆಗುತ್ತಿತ್ತು. ತಿರುಗಿ ಬೆಂಗಳೂರಿಗೆ ಹೋಗಲು ಬಸ್ಸು ಇಳಿದೆ. ಬೆಂಗಳೂರಿಗೆ ಹೋಗುವ ಬಸ್ಸಿಲ್ಲದಿದ್ದರೆ, ಮೈಸೂರಿಗಾದರು ಬಸ್ಸು ಸಿಗಬಹುದು. ಅಲ್ಲಿಂದ ನಾನ್ ಸ್ಟಾಪು ಹಿಡಿಯುವುದು ಎಂದೆಲ್ಲ ಯೋಚಿಸಿಕೊಂಡು ಬಸ್ಸಿಗಾಗಿ ಹುಡುಕಾಡಿದೆ. ಅತ್ತ ಹೋಗುವ ಬಸ್ಸು ಒಂದೂ ಇರಲಿಲ್ಲ. ಬರಬಹುದೆಂದು ಕಟ್ಟೆಯಲ್ಲಿ ಕುಳಿತೆ.

ಹೀಗೆ ಮಾಡಿಕೊಂಡು ನಾನು ಯಾಕೆ ಮಡಿಕೇರಿಗೆ ಹೊರಟೆ? ಶುಭಾ ಕೋಣೆ ಬಾಗಿಲೇರಿಸಿ, ಹೊರಗಿನಿಂದ ಎಷ್ಟು ಹೊತ್ತಿಗೆ ಚಿಲಕ ಹಾಕಿದೆನೊ ನನಗೇ ಗೊತ್ತಾಗುತ್ತಿಲ್ಲ. ತಲೆದಿಂಬಿನ ಕೆಳಗೆ ಯಾವತ್ತೂ ಅವಳ ಮೊಬೈಲು ಇರುತ್ತದೆ. ಆದರೆ ಈಗ ಇಲ್ಲ ಅಂದರೆ, ಅದನ್ನೂ ನಾನೇ ತೆಗೆದು ಹೊರಗೆ ಇಟ್ಟೆನೆ…. ನಾನು ಹೀಗೆ ಮಾಡಿದ್ದೂ ನೆನಪಾಗುತ್ತಿಲ್ಲ. ನನಗೆ ನನ್ನನ್ನೇ ವಿಚಿತ್ರವಾಗಿ ಕಾಣತೊಡಗಿತು. ಮೊನ್ನೆ ಇದ್ದಕ್ಕಿದ್ದಂತೆ ಒಂದು ದೊಡ್ಡ ದೇವಸ್ಥಾನದ ಅರ್ಚಕರು ನೆನಪಾದರು. ಅದೂ ಐದಾರು ವರ್ಷಗಳ ಹಿಂದೆ ಪತ್ರಿಕೆಯಲ್ಲಿ ಓದಿದ ವರದಿಯಿಂದ! ಅವರು ಅವರ ಮಗನನ್ನು ಕೈ-ಕಾಲುಗಳಿಗೆ ಚೈನು ಕಟ್ಟಿ ಕೋಣೆಯಲ್ಲಿ ಕೂಡಿ ಹಾಕುತ್ತಿದ್ದರಂತೆ. ಅವನು ಬುದ್ಧಿಮಾಂದ್ಯ, ಅವನನ್ನು ನೋಡಿಕೊಳ್ಳುವುದು ತೊಂದರೆ ಎಂದು ಆರೇಳು ವರ್ಷದ ಬಾಲಕನಾಗಿದ್ದಾಗಿನಿಂದಲೂ ಹೀಗೆ ಕೋಣೆಯೊಳಗೆ ಇಟ್ಟಿದ್ದರಂತೆ. ಅವನಿಗೆ ಮೂವತ್ತೈದು ವರ್ಷವಾದಾಗ ವಿಷಯ ಹೇಗೋ ಬಯಲಾಗಿ, ಅರ್ಚಕರ ವಿರುದ್ಧ ಮಾನವ ಹಕ್ಕುಗಳ ಆಯೋಗ ಕ್ರಮ ತೆಗೆದುಕೊಂಡು, ಮಗನನ್ನು ಮಾನಸಿಕ ಚಿಕಿತ್ಸೆಗೆ ಆಸ್ಪತ್ರೆಗೆ ಸೇರಿಸಿತ್ತು. ವರದಿ ಓದಿ ಆ ಅರ್ಚಕನನ್ನು ನಾನು ಮನಸಾರೆ ಶಪಿಸಿದ್ದೆ. ಪೂಜೆ, ಭಕ್ತಿ, ಕ್ರೌರ‍್ಯಗಳ ಸಮ್ಮಿಲನದ ಆ ಅರ್ಚಕರ ವ್ಯಕ್ತಿತ್ವ ವಿಚಿತ್ರವೆನಿಸಿತ್ತು.

ಅದಕ್ಕು, ಈಗ ನಾನು ಬೀಗ ಹಾಕಿ ಬಂದಿರುವುದಕ್ಕು ನಂಟು ಬೆಸೆಯುತ್ತಲೇ ಇತ್ತು ನನ್ನ ಮನಸ್ಸು. ಶುಭಾ ನನ್ನ ಕೊನೆ ತಂಗಿ ಮಗಳು. ಮಂಗಳೂರಿನ ಹುಡುಗಿ. ಅವಳಿಗೆ ಬೆಂಗಳೂರಿನಲ್ಲೆ ಎಂಜಿನಿಯರಿಂಗ್ ಓದಬೇಕೆಂದು ಹಟ. ನನ್ನ ತಂಗಿಯೂ ಅವಳ ಹಟಕ್ಕೆ ತಲೆ ಬಗ್ಗಿಸಿದ್ದಳು. ಅಲ್ಲಿ ಸರಿಯಿಲ್ಲ, ಇಲ್ಲಿ ಸರಿಯಿಲ್ಲ ಎಂದು ಸೇರಿದ ಹಾಸ್ಟೆಲ್, ಪಿಜಿ ಬಿಟ್ಟು ನನ್ನ ಮನೆಗೆ ಬಂದಿದ್ದಳು. ನನಗೊ ‘ಇಲ್ಲ’ ಎಂದು ಹೇಳುವುದಕ್ಕೆ ಸಾಧ್ಯವಾಗಲಿಲ್ಲ. ಒಡಹುಟ್ಟಿದ ತಂಗಿ. ನಾವು ಸಹಾಯ ಮಾಡದೆ ಯಾರು ಮಾಡುವುದು. ಆರು ವರ್ಷದ ಹಿಂದೆ ಬಂದಿದ್ದ ಕ್ಯಾನ್ಸರ್ ಕಾಯಿಲೆ ನನ್ನ ಶಕ್ತಿಯನ್ನೆಲ್ಲ ಹೀರಿ ಬಿಟ್ಟಿತ್ತು. ಶುಭಾನನು ನನ್ನ ಮನೆಯಲ್ಲಿ ಇಟ್ಟುಕೊಳ್ಳುವುದು ಕಷ್ಟವಾಗಬಹುದು ಎಂದು ಅನಿಸಿತಾದರು ‘ಇಲ್ಲ’ ಎಂದು ಹೇಳಲು ಸಾಧ್ಯವಾಗಲಿಲ್ಲ. ನನ್ನ ಸಮಸ್ಯೆಗೊತ್ತಿದ್ದ ತಂಗಿಯೂ ಮಗಳಿಗೆ ನನಗೆ ಸಹಾಯ ಮಾಡಿಕೊಡುವಂತೆ ಕಿವಿಮಾತು ಹೇಳಿ ಹೋಗಿದ್ದಳು. ನನ್ನ ತಂಗಿಯ ಮುದ್ದಿನ ಮಗಳಿಗೆ ಕೆಲಸ ಮಾಡಿ ಗೊತ್ತಿಲ್ಲ. ಓದಲಿಕ್ಕಾಗಿಯೇ ಬಂದಿರುವ ಅವಳಿಗೆ ತೊಂದರ ಕೊಡುವುದು ಬೇಡವೆನಿಸಿತು ನನಗೆ. ಕೆಲವೊಮ್ಮೆ ಕೆಲಸ ಮಾಡಿಕೊಳ್ಳಲಾಗದೆ ಆಯಾಸವಾಗುತ್ತಿತ್ತು. ಕಿರಿ-ಕಿರಿಯಾಗುತ್ತಿತ್ತು. ಅವಳಿಗೆ ಜೋರು ಮಾಡಿಬಿಡಬೇಕು ಎಂದೆಲ್ಲ ಅನಿಸುತ್ತಿತ್ತು.

ಈಗಿನ ಮಕ್ಕಳ ಮನಸ್ಸು ಬಹಳ ಸೂಕ್ಷ್ಮ. ಗದರಿದರೆ ಕೊರಗಬಹುದು, ಆಗ ಓದಲು ತೊಂದರೆಯಾಗಬಹುದು ಎಂದೆಲ್ಲ ಯೋಚಿಸಿ ಸುಮ್ಮನಾಗುತ್ತಿದ್ದೆ. ಜೊತೆಗೆ ಅದೇನೊ ‘ಸ್ಪೇಸ್’ ಬೇಕು ಹೇಳಿಕೊಂಡು, ಫೋನು ಬಂದಾಗಲೆಲ್ಲ ಕೋಣೆ ಬಾಗಿಲು ಹಾಕಿಕೊಳ್ಳುತ್ತಿದ್ದಳು. ಕೊನೆಗೆ ಸ್ಪೇಸ್ ಸಾಲದು ಎಂದು ಮನೆ ಟೆರೇಸಿಗೆ ಮೊಬೈಲು ಹಿಡಿದು ಓಡುತ್ತಿದ್ದಳು. ಇವೆಲ್ಲ ನನಗೆ ಯಾವತ್ತು ವಿಷಯವೇ ಆಗಲಿಲ್ಲ. ಅವಳ ಸೋಮಾರಿತನ, ನಾಜೂಕುಗಳಿಂದ ನನ್ನ ಮನಸ್ಸು ವರ್ಕ್‌ಶಾಪ್ ಆಗುತ್ತಿದ್ದದ್ದು ನಿಜ. ಅವಳು ಕಾಲೇಜಿಗೆ ಹೊರಡುವಾಗ ಕೈಯಲ್ಲಿ ಹಾರ್ಲಿಕ್ಸ್ ಲೋಟ ಹಿಡಿದು ನಿಂತಾಗ, ಮಧ್ಯಾಹ್ನಕ್ಕೆ ಬುತ್ತಿ ಕಟ್ಟಿ ಚೀಲಕ್ಕೆ ಹಾಕುವಾಗ, ಕಾಲೇಜಿನಿಂದ ಬಂದವಳಿಗೆ ಬಿಸಿಯಾಗಿ ಟೀ ಮಾಡಿಕೊಡುವಾಗ ಈ ವರ್ಕ್ ಶಾಪ್ ಗಪ್ ಚಿಪ್ ಆಗುತ್ತಿತ್ತು. ರಾತ್ರಿ ಮಲಗುವಾಗ ಕೆಲಸ ಶುರು ಮಾಡುತ್ತಿತ್ತು. ಬೆಳಿಗ್ಗೆ ಅವಳು ಹಾರ್ಲಿಕ್ಸ್ ಕುಡಿಯಲು ಬರುವಾಗ ನನಗೆ ಆಗುವ ತೊಂದರೆ ಹೇಳಿಬಿಡಬೇಕು, ಸ್ವಲ್ಪವಾದರು ಕೆಲಸ ಮಾಡಿಕೊಡು, ಮನೆ ಕೆಲಸ ಮಾಡಿಕೊಂಡು ಎಂಜಿನಿಯರಿಂಗ್ ಓದುವ ಮಕ್ಕಳಿಲ್ಲವೆ…., ಬೀದಿ ದೀಪಗಳ ಕೆಳಗೆ ಓದಿ ಮುಂದೆ ಬಂದವರಿಲ್ಲವೆ… ನೀನು ಬೆಂಗಳೂರೇ ಬೇಕೆಂದು ಬಂದಾಗ ಇಲ್ಲಿ ಬಂದ ತೊಂದರೆಗಳನ್ನು ಎದುರಿಸಲು ಕಲಿಯಬೇಕು, ಅದು ಬಿಟ್ಟು ಸುಖ ಹುಡುಕಿಕೊಳ್ಳುವುದು ನಿಲ್ಲಿಸಬೇಕು ಎಂದೆಲ್ಲ ಭಾಷಣ ಬಿಗಿಯುತ್ತೇನೆ ಎಂದು ಯೋಚಿಸಿಕೊಳ್ಳುವುದು, ಬೆಳಿಗ್ಗೆ ಅವಳು ಅಡುಗೆ ಕೋಣೆಗೆ ಬಂದಾಗ ಹಾರ್ಲಿಕ್ಸ್ ತಣ್ಣಗಾಯಿತ? ಬಿಸಿ ಮಾಡಬೇಕ? ಮಧ್ಯಾಹ್ನಕ್ಕೆ ಸ್ವಲ್ಪ ಜಾಸ್ತಿ ಪಲಾವು ಹಾಕಿದ್ದೇನೆ. ನಿನಗೆ ಇಷ್ಟ ತಾನೆ, ಹಾಕಿದ್ದೆಲ್ಲ ತಿನ್ನು…. ಹೀಗೆ ಸಾಗುತ್ತಿತ್ತು ನನ್ನ ಮಾತು. ‘ಆಗಲಿ… ದೊಡ್ಡಮ್ಮ…’ ಎಂದು ರಾಗ ಎಳೆದು ಸವಿನಯದಿಂದ ಶುಭನೂ ಹೇಳುತ್ತಿದ್ದಳು. ಪಾಪದ ಹುಡುಗಿ, ಅವಳಿಗೆ ಹೇಗೆ ಗೊತ್ತಾಗಬೇಕು ನನ್ನ ತಾಕಲಾಟಗಳು!

ಸೋಮವಾರಪೇಟೆ ಬೆಂಗಳೂರು ಬಸ್ಸು ಬರುವುದು ಕಾಣಿಸಿತು. ದಡಬಡ ಎದ್ದು ಬಸ್ಸು ನಿಲ್ಲುವ ಮೊದಲೇ ಹತ್ತುವ ಆತುರ ಮಾಡಿದೆ. ಕೈಯಲ್ಲಿದ್ದ ಒಂದು ಚೀಲ ಬಿತ್ತು. ನನ್ನ ತಮ್ಮನ ಮಗ ಸುಧಾಂಶುಗೆ ಕೊಂಡಿದ್ದ ಒಂದು ಕೆಜಿ ಕೇಕನ್ನು ಬಹಳ ಜಾಗರೂಕತೆಯಿಂದ ಹಿಡಿದುಕೊಂಡು ಬಂದಿದ್ದೆ. ನನ್ನ ಹಾಗೆ ಬಸ್ಸು ಹತ್ತಲು ಆತುರ ಮಾಡಿದ ಮತ್ತೊಬ್ಬರು ಅದನ್ನು ಮೆಟ್ಟಿದರು. ನಾನು ಜೋರಾಗಿ ಕಿರುಚಿಕೊಂಡೆ. ಥಟ್ಟನೆ ಎಚ್ಚರವಾಯಿತು. ಓಹ್ ಕನಸು…! ಮನಸ್ಸಿನ ಉದ್ವೇಗವೆಲ್ಲ ಮಂಜಿನಂತೆ ಕರಗಿ ಹೋಯಿತು. ಶುಭಾನಿಗೆ ಬೆಳಿಗ್ಗೆ ಮತ್ತು ಮಧ್ಯಾಹ್ನಕ್ಕೆ ಇರುವ ಬುತ್ತಿಯನ್ನು ಡಬ್ಬಿಗೆ ಹಾಕಿ ಕುಳಿತ್ತಿದ್ದ ನನಗೆ, ಅಲ್ಲೆ ನಿದ್ದೆ ಬಂದು ಹೋಗಿತ್ತು, ನನ್ನ ಮೊಬೈಲು ಬಡಿದುಕೊಳ್ಳುತ್ತಿದೆ. ಇದು ಕನಸಲ್ಲವಲ್ಲ ಎಂದು ಧೈರ್ಯದಿಂದ ಅದನ್ನು ಎತ್ತಿಕೊಂಡೆ. ಶುಭಾನ ಫೋನು. ‘ಕೋಣೆಯಿಂದ ನಡುಕೋಣೆಗೆ ಫೋನು ಮಾಡಬೇಕ? ಬಂದು ಮಾತಾಡು’ ಹೇಳಿದೆ.

‘ದೊಡ್ಡಮ್ಮ, ನೀವು ಕೋಣೆ ಚಿಲುಕ ಹಾಕಿಬಿಟ್ಟಿದ್ದೀರಿ. ತೆಗೀತೀರ…. ನಾನು ಕಾಲೇಜಿಗೆ ಹೊರಡಬೇಕಲ್ಲ.’
ಏನು ಹೇಳಲಿ… ಅರ್ಚಕರ ವ್ಯಕ್ತಿತ್ವ!