ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್‌ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್‌ಗಾಗಿ ಹುಡುಕಾಟದಲ್ಲಿದ್ದರು. ಈ ವಿಷಯವನ್ನು ಬೋರ್ನ್‌ರಲ್ಲಿ ಪ್ರಸ್ತಾಪಿಸಿದ ಇಸ್ಮಾಯಿಲ್ ಸಾಹೇಬರು, ಬೋರ್ನ್‌ರಿಗೆ ಯಾರಾದರೂ ಅಂತಹ ಆರ್ಕಿಟೆಕ್ಟ್ ಗೊತ್ತಿರುವರೇ ಎಂದು ಕೇಳಿದರು.
ಶೇಷಾದ್ರಿ ಗಂಜೂರು ಬರೆಯುವ ವಿಜ್ಞಾನ ಸರಣಿಯ ಬರಹ

ಇತ್ತೀಚೆಗೆ ಖ್ಯಾತ ಗಾಯಕಿ-ನಟಿ ಒಲಿವಿಯಾ ನ್ಯೂಟನ್ ಜಾನ್ ಮೃತಪಟ್ಟರು. ೧೯೮೦ರ ದಶಕದಲ್ಲಿ ಬೆಂಗಳೂರಿನಂತಹ ದೊಡ್ಡ ನಗರಗಳಲ್ಲಿ ಓದುತ್ತಿದ್ದ ನನ್ನಂತಹ ಅನೇಕರಿಗೆ, ಜಾನ್ ಟ್ರವೋಲ್ಟಾ ಜೊತೆಗೆ ಆಕೆ ನಟಿಸಿರುವ ಗ್ರೀಸ್ ಚಲನಚಿತ್ರ ಮರೆಯಲಾಗದ ನೆನಪು. “ಗ್ಲಾಮರ್ ಕ್ವೀನ್ ಎನ್ನಬಹುದಾದಂತಹ ಆಕೆ ಎಲ್ಲಿ -ಬೆಂಗಳೂರಿನ ಕೃಷ್ಣರಾವ್ ಪಾರ್ಕಿನಲ್ಲಿರುವ ನೀರು ಮತ್ತು ಒಳಚರಂಡಿ ಆಫೀಸು ಎಲ್ಲಿ” ಎಂದು ಹಲವರಿಗೆ ಅನ್ನಿಸಬಹುದು. ಆದರೆ ಅಂತಹ ಒಂದು ಸಂಬಂಧವಿದೆ. ಅದಕ್ಕೆ ವಿಜ್ಞಾನ – ಇತಿಹಾಸಗಳ ಕತೆಯಿದೆ.

ಒಲಿವಿಯಾ ನ್ಯೂಟನ್ ಜಾನ್, ಖ್ಯಾತ ಭೌತಶಾಸ್ತ್ರಜ್ಞ ಮ್ಯಾಕ್ಸ್ ಬೋರ್ನ್ ಅವರ ಮೊಮ್ಮಗಳು. ಬೋರ್ನ್ ಸಾಮಾನ್ಯ ವಿಜ್ಞಾನಿಯಲ್ಲ; ಕ್ವಾಂಟಮ್ ಫಿಸಿಕ್ಸ್‌ನ ಅಪ್ರತಿಮರಲ್ಲಿ ಒಬ್ಬರು. ೧೯೫೪ರಲ್ಲಿ ನೊಬೆಲ್ ಪ್ರಶಸ್ತಿಗೆ ಭಾಜನರಾದವರು. ಆದರೆ, ಈ ಕತೆ ಆರಂಭವಾಗುವುದು ಅದಕ್ಕೂ ಇಪ್ಪತ್ತು ವರ್ಷ ಹಿಂದೆ. ೧೯೩೦ರ ದಶಕದ ಆರಂಭದಲ್ಲಿ. ಜರ್ಮನಿಯಲ್ಲಿ.

೧೯೩೦ರ ದಶಕದ ಆರಂಭದಲ್ಲಿ ಹಿಟ್ಲರನ ನಾಜ಼ಿಗಳು ಪ್ರವರ್ಧಮಾನಕ್ಕೆ ಬರುತ್ತಿದ್ದಂತೆಯೇ, ಜರ್ಮನಿಯಲ್ಲಿದ್ದ ಯೆಹೂದಿಗಳ ಜೀವನ ದುರ್ಗಮವಾಗುತ್ತಾ ಬಂತು. ಅವರ ಮೇಲಿನ ಹಲ್ಲೆಗಳು, ಆಧಾರ ರಹಿತ ದೋಷಾರೋಪಣೆಗಳು, ಸಮಾಜ ಮತ್ತು ಸರ್ಕಾರದಿಂದ ತಾರತಮ್ಯಗಳು ವ್ಯವಸ್ಥಿತವಾಗತೊಡಗಿದವು. ಮ್ಯಾಕ್ಸ್ ಬೋರ್ನ್ ಅವರೂ ಸಹ ಯೆಹೂದಿ ಧರ್ಮಕ್ಕೆ ಸೇರಿದ್ದವರು. ೧೯೩೩ರಲ್ಲಿ, ನಾಜ಼ಿಗಳ ಹಿಂಸೆ ಸಹಿಸಲಾಗದೇ, ಮ್ಯಾಕ್ಸ್ ಬೋರ್ನ್ ಜರ್ಮನಿ ಬಿಟ್ಟು ಇಂಗ್ಲೆಂಡಿಗೆ ಬಂದರು.

(ಸಿ.ವಿ.ರಾಮನ್ ಅವರೊಟ್ಟಿಗೆ ಬೋರ್ನ್)

ಬೋರ್ನ್ ಇಂಗ್ಲೆಂಡಿಗೆ ಬರುವ ವೇಳೆಗೆ, ಇನ್ನೊಬ್ಬ ಮಹಾನ್ ಭೌತ ಶಾಸ್ತ್ರಜ್ಞ ಅರ್ನೆಸ್ಟ್ ರೂದರ್ಫಡ್ ಕೇಂಬ್ರಿಜ್ ವಿಶ್ವವಿದ್ಯಾಲಯದಲ್ಲಿದ್ದರು. ಅವರಿಗೆ ಮ್ಯಾಕ್ಸ್ ಬೋರ್ನ್‌ರ ಅಪ್ರತಿಮ ಪ್ರತಿಭೆಯ ಅರಿವಿತ್ತು. ಅವರು, ಬೋರ್ನ್‌ಗೆ ತಮ್ಮ ವಿಶ್ವವಿದ್ಯಾಲಯದಲ್ಲಿ ಒಂದು ಟೆಂಪರರಿ ಹುದ್ದೆಯನ್ನು ಸದ್ಯಕ್ಕೆ ಕೊಡಿಸಿ, ಹೆಚ್ಚು ವೇತನ ನೀಡುವ ಖಾಯಂ ಹುದ್ದೆಯನ್ನು ಒದಗಿಸುವ ಪ್ರಯತ್ನದಲ್ಲಿದ್ದರು.

ಅದೇ ಸಮಯದಲ್ಲಿ, ದೂರದ ಬೆಂಗಳೂರಿನಲ್ಲಿ, ಇನ್ನೊಬ್ಬ ಮಹಾನ್ ವಿಜ್ಞಾನಿ ತಮ್ಮ ಸಂಸ್ಥೆಯನ್ನು ಭೌತಶಾಸ್ತ್ರದ ವಿಷಯದಲ್ಲಿ ಮತ್ತಷ್ಟು ಪಾಂಡಿತ್ಯ ಪೂರ್ಣಗೊಳಿಸುವ ಪ್ರಯತ್ನದಲ್ಲಿದ್ದರು. ಅವರು ಬೇರಾರೂ ಅಲ್ಲ. ಸಿ.ವಿ.ರಾಮನ್. ರಾಮನ್ ಆ ಕಾಲದಲ್ಲಿ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್‌ನ ನಿರ್ದೇಶಕರಾಗಿದ್ದರು. ಅವರಿಗೂ, ಮ್ಯಾಕ್ಸ್ ಬೋರ್ನ್ ಅವರ ಪ್ರತಿಭೆ ಮತ್ತು ಪರಿಸ್ಥಿತಿಯ ಅರಿವು ಇತ್ತು.

ರಾಮನ್, ಮ್ಯಾಕ್ಸ್ ಬೋರ್ನ್‌ರಿಗೆ ಒಂದು ಪತ್ರವನ್ನು ಬರೆದು, ೧೫,೦೦೦ ರೂಪಾಯಿಗಳ ಗೌರವಧನದೊಂದಿಗೆ ಐ.ಐ.ಎಸ್.ಸಿ.ಯಲ್ಲಿ ರೀಡರ್ ಹುದ್ದೆ ನೀಡುವುದಾಗಿ ತಿಳಿಸಿದರು. ಜೊತೆಗೇ, ಕೆಲವೇ ಸಮಯದಲ್ಲೇ, ರೀಡರ್ ಪದವಿಯಿಂದ ಪೂರ್ಣ ಪ್ರೊಫೆಸರ್ ಪದವಿ ನೀಡುವ ಆಶ್ವಾಸನೆಯನ್ನೂ ಕೊಟ್ಟರು. ಈ ಹಣ ಮತ್ತು ಪದವಿ, ಬೋರ್ನ್‌ಗೆ ಕೇಂಬ್ರಿಜ್‌ನಲ್ಲಿ ದೊರಕುತ್ತಿದ್ದ ಹುದ್ದೆ ಮತ್ತು ಹಣಕ್ಕಿಂತ ಹೆಚ್ಚಿನದಾಗಿತ್ತು. ಬೋರ್ನ್, ರಾಮನ್‌ರ ಆಮಂತ್ರಣವನ್ನು ಒಪ್ಪಿಕೊಂಡರು. ೧೯೩೪ರ ಸೆಪ್ಟೆಂಬರಿನಲ್ಲಿ ಅವರು ಐ.ಐ.ಎಸ್.ಸಿ. ಸೇರಿಕೊಂಡರು.

ಆದರೆ, ಬೋರ್ನ್ ಮತ್ತು ಐ.ಐ.ಎಸ್.ಸಿ.ಯ ನಂಟು ಹೆಚ್ಚು ಕಾಲ ಉಳಿಯಲಿಲ್ಲ. ಎಲ್ಲ ಸಂಸ್ಥೆಗಳಲ್ಲಿ ಇರುವಂತೆ, ಐ.ಐ.ಎಸ್.ಸಿ.ಯಲ್ಲೂ ಆಡಳಿತ ವರ್ಗದಲ್ಲಿ ರಾಜಕಾರಣ ನಡೆಯುತ್ತಿತ್ತು. ರಾಮನ್ ಮಹಾನ್ ವಿಜ್ಞಾನಿಯಾಗಿದ್ದರೂ, ಆಡಳಿತಗಾರಿಕೆಗೆ ಬೇಕಿರುವ ಡಿಪ್ಲೊಮಸಿಯ ಚಾತುರ್ಯ ಅವರಲ್ಲಿ ಕೆಲವೊಮ್ಮೆ ಕಾಣುತ್ತಿರಲಿಲ್ಲ. ಬೋರ್ನ್‌ಗೆ ರಾಮನ್ ನೀಡಿದ ಸಂಭಾವನೆ ಮತ್ತು ಪ್ರೊಫೆಸರ್ ಹುದ್ದೆಯ ಆಶ್ವಾಸನೆಗಳು ಐ.ಐ.ಎಸ್.ಸಿ.ಯ ಆಡಳಿತವರ್ಗದ ಹಲವರಿಗೆ ಹಿಡಿಸಲಿಲ್ಲ. ಇದು ಮತ್ತು ಇಂತಹ ಹಲವಾರು ಜಟಾಪಟಿಗಳಿಂದಾಗಿ, ಕೊನೆಗೆ, ಐ.ಐ.ಎಸ್.ಸಿ.ಯ ನಿರ್ದೇಶಕ ಪದವಿಯಿಂದ ರಾಮನ್ ಕೆಳಗಿಳಿಯಬೇಕಾಯಿತು. ಇವೆಲ್ಲದರ ಮಧ್ಯೆ, ಕೇಂಬ್ರಿಜ್‌ನಿಂದ ರೂದರ್ಫರ್ಡ್, ಮ್ಯಾಕ್ಸ್ ಬೋರ್ನ್ ಹೊಸ ಆಮಂತ್ರಣಗಳನ್ನು ಕಳುಹಿಸುತ್ತಲೇ ಇದ್ದರು.

ಐ.ಐ.ಎಸ್.ಸಿ.ಯನ್ನು ಸೇರಿದ ಆರೇ ತಿಂಗಳಲ್ಲಿ ಮ್ಯಾಕ್ಸ್ ಬೋರ್ನ್, ಕೇಂಬ್ರಿಜ್ ವಿಶ್ವವಿದ್ಯಾಲಯಕ್ಕೆ ವಾಪಸಾದರು.

ಈ ಹಣ ಮತ್ತು ಪದವಿ, ಬೋರ್ನ್‌ಗೆ ಕೇಂಬ್ರಿಜ್‌ನಲ್ಲಿ ದೊರಕುತ್ತಿದ್ದ ಹುದ್ದೆ ಮತ್ತು ಹಣಕ್ಕಿಂತ ಹೆಚ್ಚಿನದಾಗಿತ್ತು. ಬೋರ್ನ್, ರಾಮನ್‌ರ ಆಮಂತ್ರಣವನ್ನು ಒಪ್ಪಿಕೊಂಡರು. ೧೯೩೪ರ ಸೆಪ್ಟೆಂಬರಿನಲ್ಲಿ ಅವರು ಐ.ಐ.ಎಸ್.ಸಿ. ಸೇರಿಕೊಂಡರು.

ಮ್ಯಾಕ್ಸ್ ಬೋರ್ನ್ ಬೆಂಗಳೂರಿನಲ್ಲಿದ್ದ ಕೆಲವೇ ತಿಂಗಳುಗಳಲ್ಲಿ, ರಾಮನ್‌ರ ಮೂಲಕ ಅವರಿಗೆ ಮೈಸೂರು ಸಂಸ್ಥಾನದ ಅಂದಿನ ಹಲವಾರು ಗಣ್ಯರ ಪರಿಚಯವಾಯಿತು. ಹೀಗೆ ಪರಿಚಯವಾದವರಲ್ಲಿ ದಿವಾನ್ ಮಿರ್ಜಾ ಇಸ್ಮಾಯಿಲ್ ಸಾಹೇಬರೂ ಒಬ್ಬರು. ಆ ಕಾಲದಲ್ಲಿ, ಇಸ್ಮಾಯಿಲ್ ಸಾಹೇಬರು ಬೆಂಗಳೂರಿನಲ್ಲಿ ಹಲವಾರು ಸಾರ್ವಜನಿಕ ಮೂಲ ಸೌಕರ್ಯ ಮತ್ತು ಕಟ್ಟಡಗಳನ್ನು ನಿರ್ಮಿಸುವ ಆಲೋಚನೆಯಲ್ಲಿದ್ದರು. ಈ ಕಟ್ಟಡಗಳನ್ನು ವಿನ್ಯಾಸ ಮಾಡಲು ಅವರು ಒಬ್ಬ ನುರಿತ ಆರ್ಕಿಟೆಕ್ಟ್‌ಗಾಗಿ ಹುಡುಕಾಟದಲ್ಲಿದ್ದರು. ಈ ವಿಷಯವನ್ನು ಬೋರ್ನ್‌ರಲ್ಲಿ ಪ್ರಸ್ತಾಪಿಸಿದ ಇಸ್ಮಾಯಿಲ್ ಸಾಹೇಬರು, ಬೋರ್ನ್‌ರಿಗೆ ಯಾರಾದರೂ ಅಂತಹ ಆರ್ಕಿಟೆಕ್ಟ್ ಗೊತ್ತಿರುವರೇ ಎಂದು ಕೇಳಿದರು.

ಬೋರ್ನ್‌ರಿಗೆ ಅಂತಹ ಒಬ್ಬ ಆರ್ಕಿಟೆಕ್ಟ್‌ನ ಸಂಪರ್ಕವಿತ್ತು; ಆಟ್ಟೊ ಕೋನಿಗ್ಸ್‌ಬರ್ಗರ್. ಈ ಕೋನಿಗ್ಸ್‌ಬರ್ಗರ್ ಬೇರಾರೂ ಆಗಿರಲಿಲ್ಲ. ಅವರು, ಮ್ಯಾಕ್ಸ್ ಬೋರ್ನ್ ಅವರ ಸೋದರ ಅಳಿಯನೇ ಆಗಿದ್ದರು. ಆಗಿನ್ನೂ ಮೂವತ್ತೂ ಮುಟ್ಟದ್ದಿದ್ದ ಕೋನಿಗ್ಸ್‌ಬರ್ಗರ್, ಪ್ರಶಸ್ತಿ ವಿಜೇತ ಆರ್ಕಿಟೆಕ್ಟ್ ಆಗಿದ್ದರು. ೧೯೩೬ರ ಬರ್ಲಿನ್ ಒಲಿಂಪಿಕ್ಸ್‌ನ ಈಜುಕೊಳಕ್ಕಾಗಿ ಅವರು ಮಾಡಿದ್ದ ವಿನ್ಯಾಸಕ್ಕೆ ಪ್ರತಿಷ್ಠಿತ ಪ್ರಶಸ್ತಿಯೊಂದು ಸಿಕ್ಕಿತ್ತು.

(ನೆಹರೂ ಅವರೊಂದಿಗೆ ಕೋನಿಗ್ಸ್‌ಬರ್ಗರ್)

ಹೀಗಿದ್ದರೂ, ಯೆಹೂದಿಯಾಗಿದ್ದ ಅವರು, ಹಿಟ್ಲರ್‌ನ ಪಾಶವೀ ಬಂಧದಿಂದ ಹೊರಬರುವ ಯತ್ನದಲ್ಲೇ ಇದ್ದರು. ತನ್ನ ಸೋದರ ಮಾವನ ಶಿಫಾರಿಸಿನ ಮೂಲಕ ದೊರಕಿದ ಇಸ್ಮಾಯಿಲ್ ಸಾಹೇಬರ ಆಮಂತ್ರಣವನ್ನು ಅವರು ನಿರಾಕರಿಸಲಿಲ್ಲ.

೧೯೩೦ರ ದಶಕದ ಕೊನೆಯ ಭಾಗದಲ್ಲಿ ಭಾರತಕ್ಕೆ ಬಂದ ಆಟ್ಟೊ ಕೋನಿಗ್ಸ್‌ಬರ್ಗರ್, ಮೈಸೂರು ಸಂಸ್ಥಾನದ ಚೀಫ್ ಆರ್ಕಿಟೆಕ್ಟ್ ಆಗಿ ನೇಮಕವಾದರು. ಬೆಂಗಳೂರಿನ ಬಸ್ ನಿಲ್ದಾಣ, ಐ.ಐ.ಎಸ್.ಸಿ.ಯ ಹಲವಾರು ಕಟ್ಟಡಗಳು ಹೀಗೆ ಬೆಂಗಳೂರು-ಮೈಸೂರು ನಗರಗಳ ಹಲವಾರು ಮಹತ್ವದ ಕಟ್ಟಡಗಳ ವಿನ್ಯಾಸಕ್ಕೆ ಅವರು ಕಾರಣರಾದರು. ಮುಂದೆ ಭಾರತದ ಪೌರತ್ವವನ್ನು ಪಡೆದುಕೊಂಡು, ಭಾರತ-ಪಾಕಿಸ್ತಾನಗಳ ವಿಭಜನೆಯ ನಂತರ, ಪಾಕಿಸ್ತಾನದಿಂದ ಬಂದಿದ್ದ ನಿರಾಶ್ರಿತರಿಗೆ ಗೃಹ ನಿರ್ಮಾಣ ಮಾಡಿಕೊಡುವ ಯೋಜನೆಯ ಮುಖ್ಯಸ್ಥರೂ ಆದರು. ಈ ಯೋಜನೆ, ನಾನಾ ಕಾರಣಗಳಿಂದ ವಿಫಲವಾಗಿ, ಅವರು ಕೆಲಸ ಕಳೆದುಕೊಂಡು ಕೊನೆಗೆ ಭಾರತವನ್ನೇ ಬಿಟ್ಟು ಹೋಗಿದ್ದು ಬೇರೆಯ ಕತೆ.

ಕೋನಿಗ್ಸ್‌ಬರ್ಗರ್ ಬೆಂಗಳೂರಿನಲ್ಲಿದ್ದಾಗ, ಯೂರೋಪಿನ ಹಲವಾರು ನಗರಗಳಲ್ಲಿ ಕಂಡು ಬರುವ ಆರ್ಕೆಸ್ಟ್ರಾ ಹೌಸ್ ಒಂದನ್ನು ಬೆಂಗಳೂರಿನಲ್ಲೂ ನಿರ್ಮಾಣ ಮಾಡುವ ಯೋಜನೆ ಅವರ ಮುಂದೆ ಬಂತು. ಕೃಷ್ಣರಾವ್ ಪಾರ್ಕಿನಲ್ಲಿರುವ, ‘ಕೃಷ್ಣರಾವ್ ಪೆವಿಲಿಯನ್’ ಎಂದು ಕರೆಸಿಕೊಳ್ಳುತ್ತಿದ್ದ ಕಟ್ಟಡ ನಿರ್ಮಾಣವಾಗಿದ್ದು ಹೀಗೆ.

ಅಂದು, ಆರ್ಕೆಸ್ಟ್ರಾ ಗಾಯನಕ್ಕೆ ನಿರ್ಮಿಸಲಾಗಿದ್ದ ಕಟ್ಟಡ ಇಂದು ಒಳ ಚರಂಡಿ ವ್ಯವಸ್ಥೆಯ ಆಫೀಸಾಗಿ ಮಾರ್ಪಾಡಾಗಿದೆ. ನಾವು ಗ್ಲಾಮರ್ ಕ್ವೀನ್ ಎಂದು ಭಾವಿಸಿದ್ದ ಗಾಯಕಿ ಒಲಿವಿಯಾ ನ್ಯೂಟನ್ ಜಾನ್ ಚಿರ ನಿದ್ರೆಗೆ ಜಾರಿದ್ದಾರೆ.


(ನಾನು ಬೆಂಗಳೂರಿಗೆ ಬಂದು ಕೆಲ ವರ್ಷಗಳೇ ಆಗಿವೆ. BWSSB ಆಗಿದ್ದ ಕಟ್ಟಡವನ್ನು ಲೈಬ್ರರಿಯಾಗಿಸುವ ಪ್ರಯತ್ನಗಳ ಬಗೆಗೆ ಓದಿದ್ದೇನೆ. ಅದು ಫಲಪ್ರದವಾಗಿದೆಯೋ ಇಲ್ಲವೋ ತಿಳಿಯದು)

*****

ರಾಮನ್, ಮ್ಯಾಕ್ಸ್ ಬೋರ್ನ್‌ರನ್ನು ಬೆಂಗಳೂರಿಗೆ ಕರೆತಂದ ಮತ್ತಷ್ಟು ವಿವರಗಳನ್ನು ತಿಳಿಯಲು ಕೆಳಗಿನ ಈ ಲೇಖನವನ್ನು ಓದಿರಿ. ಈ ಲೇಖನದ ಹಲವು ವಿವರ ಮತ್ತು ಚಿತ್ರಗಳನ್ನು ಅಲ್ಲಿಂದಲೇ ತೆಗೆದುಕೊಳ್ಳಲಾಗಿದೆ:
https://connect.iisc.ac.in/2019/12/when-raman-brought-born-to-bangalore/