ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎಂದು ಈ ಲೋಕವನ್ನೇ ಮರೆಯುತ್ತಿದ್ದೆ.
ಮೊಗಳ್ಳಿ ಗಣೇಶ್‌ ಬರೆಯುವ “ನನ್ನ ಅನಂತ ಅಸ್ಪೃಶ್ಯ ಆಕಾಶ” ಆತ್ಮಕತೆಯ ಸರಣಿಯ 33ನೇ ಕಂತು

ಅದೊಂದು ಅಪೂರ್ವ ಸಂದರ್ಭವಾಗಿತ್ತು. ಜೀಶಂಪ ಮತ್ತು ಕು.ಶಿ. ಹರಿದಾಸಭಟ್ಟರು ಸೇರಿ ಕರ್ನಾಟಕದ ಜಾನಪದ ಅಧ್ಯಯನಕ್ಕೆ ಸಮರ್ಥ ಯುವ ವಿದ್ವಾಂಸರ ತಂಡ ಕಟ್ಟುವ ಸಲುವಾಗಿ ‘ಇಂಟರ್ ನ್ಯಾಷನಲ್ ಫೋಕ್‌ಲೋರ್‌ ವರ್ಕ್‌ಶಾಪ್’ ಒಂದನ್ನು ಆಯೋಜಿಸಿದ್ದರು. ಬೇರೆ ಬೇರೆ ನೆಲೆಯ ಇಪ್ಪತ್ತು ಮಂದಿ ಯುವ ವಿದ್ವಾಂಸರನ್ನು ಆಯ್ಕೆ ಮಾಡಿದ್ದರು. ಒಂದು ತಿಂಗಳ ಅವಧಿಯ ಕಮ್ಮಟ. ನಾನಾಗ ಜಾನಪದ ಎಂ.ಎ. ಅಂತಿಮ ವರ್ಷದ ವಿದ್ಯಾರ್ಥಿ. ಅಂತರರಾಷ್ಟ್ರೀಯ ಕಮ್ಮಟ ಹೇಗಿರುತ್ತದೆ ಎಂಬ ಸಾಕ್ಷಾತ್ ದರ್ಶನ ನನಗಾಗಿತ್ತು. ಫೋರ್ಡ್ ಫೌಂಡೇಶನ್ ಅದಕ್ಕಾಗಿ ಭಾರೀ ಧನ ಸಹಾಯ ಮಾಡಿತ್ತು. ಯೋಗ್ಯವಾಗಿ ಆ ಯೋಜನೆಯನ್ನು ರೂಪಿಸಿದ್ದರು. ಅದರಲ್ಲಿ ಭಾಗವಹಿಸಲು ಮೈಸೂರಿನ ಅನೇಕರು ಲಾಬಿ ನಡೆಸಿದ್ದರು. ಜೀ.ಶಂ.ಪ ಅದಕ್ಕೆ ಅನುವು ಮಾಡಿರಲಿಲ್ಲ. ಅವರ ಉದ್ದೇಶ ಸ್ಪಷ್ಟವಾಗಿತ್ತು. ತನ್ನ ಕಾಲದಲ್ಲಿ ಅತ್ಯುನ್ನತ ಯುವ ತಂಡವನ್ನು ತಯಾರು ಮಾಡಿ ಜಾನಪದ ಅಧ್ಯಯನದಲ್ಲಿ ಕ್ರಾಂತಿಯನ್ನೆ ಮಾಡಿಬಿಡಬೇಕು ಎಂದುಕೊಂಡಿದ್ದರು. ಅದರ ಮಹತ್ವ ದೇವನೂರು ಮಹದೇವ ಅವರಿಗೆ ಗೊತ್ತಾಗಿ ಬಂದು ಕಮ್ಮಟದಲ್ಲಿ ಕೂರುತ್ತೇನೆ ಎಂದು ಕೋರಿದ್ದರು. ಜೀಶಂಪ ಒಪ್ಪಿರಲಿಲ್ಲ. ಅದಾಗಲೆ ನಾನು ಜೀಶಂಪ ಅವರ ಗಮನಕ್ಕೆ ಬಂದಿದ್ದೆ. ಕಮ್ಮಟದ ಕೊಠಡಿಯ ಕೊನೆ ಸಾಲಿನ ಒಂದು ಮೂಲೆಯಲ್ಲಿ ಕೂತು ವಿಚಾರಗಳ ಕೇಳಿಸಿಕೊಳ್ಳಲು ಕೃಪೆ ತೋರಿದ್ದರು. ಅತ್ಯಂತ ಶಿಸ್ತುಬದ್ಧ ಅತ್ಯಾಧುನಿಕ ಡಿಜಿಟಲ್ ಕ್ಲಾಸ್ ರೂಂನ ರೀತಿಯಲ್ಲಿ ವಿನ್ಯಾಸಗೊಳಿಸಿದ್ದರು. ಇಪ್ಪತ್ತು ಜನ ಯುವ ವಿದ್ವಾಂಸರಿಗೆ ಟೇಬಲು ಕುರ್ಚಿ ನಂತರ ಎಕ್ಸ್‌ಟ್ರಾ ಒಂದು ಛೇರನ್ನೂ ಅಲ್ಲಿ ಹಾಕಿರಲಿಲ್ಲ. ಆದರೆ ಕೊನೆ ಸಾಲಿನಲ್ಲಿ ಎರಡು ಸಾದಾ ಛೇರುಗಳಿದ್ದವು. ಅಲ್ಲಿ ನಾನು ಕೂತುಕೊಂಡೆ. ಘನ ವಿದ್ವಾಂಸರ ನೋಡುವುದೇ ಒಂದು ಪ್ರೇರಣೆ, ಸುಖ, ಕನಸು.

ಬೇರೆ ಬೇರೆ ವಿಷಯಗಳ ಬಗ್ಗೆ ಆಳವಾದ ಬೌದ್ಧಿಕ ಉಪನ್ಯಾಸಗಳಿದ್ದವು. ಲಡಾಸುಗಳು ಅತ್ತ ಸುಳಿಯುವಂತೆಯೆ ಇರಲಿಲ್ಲ. ಅವತ್ತಿನ ಕಾಲದ ಆ ಕಮ್ಮಟದ ಉಪನ್ಯಾಸಕರು ತಮ್ಮ ಕ್ಷೇತ್ರದಲ್ಲಿ ಅಪಾರವಾಗಿ ಸಂಶೋಧನೆ ಮಾಡಿದ್ದಂತವರು. ಇಪ್ಪತ್ತನೇ ಶತಮಾನದ ಅಗ್ರಮಾನ್ಯ ಜಾನಪದ ಚಿಂತಕ ಎಂದರೆ ಅಲೆನ್‍ಡೆಂಡಸ್. ತೊಂಬತ್ತರ ದಶಕದಲ್ಲಿ ಅವರು ವಿಖ್ಯಾತ ಅಮೆರಿಕನ್ ಜಾನದಪ ತಜ್ಞರಾಗಿದ್ದರು. ಯೂರೋಪಿನ ಜಾನಪದ ಅಧ್ಯಯನದ ಗ್ರಹಿಕೆಯನ್ನೆ ಬದಲಿಸಿದ್ದರು. ಬೈಬಲ್ ಮತ್ತು ಕುರಾನ್ ಎರಡೂ ಪವಿತ್ರ ಧರ್ಮಗ್ರಂಥಗಳನ್ನು ಜಾನಪದೀಯವಾಗಿ ವಿಶ್ಲೇಷಿಸಿ ವಿವಾದಕ್ಕೆ ಈಡಾಗಿದ್ದರು. ನನ್ನ ಬೆನ್ನನ್ನು ನಾನೆ ತಟ್ಟಿಕೊಂಡಿದ್ದೆ. ಡಂಡೆಸ್ ಅವರನ್ನು ವೇದಿಕೆಯ ಮೇಲೆ ಜೀಶಂಪ ಅವರು ಕನ್ನಡದಷ್ಟೇ ಸಲೀಸಾದ ಇಂಗ್ಲೀಷಿನಲ್ಲಿ ಪರಿಚಯಿಸುತ್ತಿದ್ದಾಗ ಧರ್ಮ ಮತ್ತು ಜಾನಪದ ಸಂಬಂಧಗಳನ್ನು ಡಂಡೆಸ್ ಅತಿ ಸೂಕ್ಷ್ಮವಾಗಿ ವಿಶ್ಲೇಷಿಸುತ್ತಾರೆ ಎಂದು ಹೇಳಿದ್ದರು. ಆದರೆ ಆಗ ತಾನೆ ನಾನು ಒಂದು ಅಪರೂಪದ ಪುಸ್ತಕವ ಓದಿದ್ದೆ. ಜೇಮ್ಸ್ ಜಾರ್ಜ್ ಫ್ರೇಜರ್ ಎಂಬ ಪ್ರಸಿದ್ಧ ಮಾನವ ಶಾಸ್ತ್ರಜ್ಞರು `ಫೋಕ್ ಲೋರ್ ಇನ್ ದಿ ಓಲ್ಡ್ ಟೆಸ್ಟಮೆಂಟ್’ ಎನ್ನುವ ಪುಸ್ತಕ ಬರೆದಿದ್ದರು. `ಗೋಲ್ಡನ್ ಬೋವ್’ ಹೆಸರಿನ ಹನ್ನೆರಡು ಸಂಪುಟಗಳು ಲೈಬ್ರರಿಯಲ್ಲಿ ಸಾಲಂಕೃತವಾಗಿ ಇದ್ದುದನ್ನು ನೋಡಿದ್ದೆ. ಜಗತ್ತಿನ ಧರ್ಮ, ಪುರಾಣ, ಸಂಸ್ಕೃತಿಯ ಆಚಾರ ವಿಚಾರಗಳನ್ನೆಲ್ಲ ತೌಲನಿಕವಾಗಿ ಅಧ್ಯಯನ ಮಾಡಿ ಬರೆದಿದ್ದರು ಫ್ರೇಜರ್ ಅಂತವರಿಗೆ ಡಂಡೆಸ್ ಹತ್ತಿರ ಇದ್ದವರು. ಡಂಡೆಸ್ ಓದಿರುವುದನ್ನು ನಾನೂ ಓದಿದ್ದೇನೆ ಎಂಬ ಹೆಮ್ಮೆ ನೆತ್ತಿಯಲ್ಲಿ ಚಿಮ್ಮಿತ್ತು. ಆ ಲೈಬ್ರರಿಯ ಪುಸ್ತಕದ ಮರೆ ಪುಟದಲ್ಲಿ ನಾನು ಸಹಿ ಮಾಡಿದ್ದಂತೆ ನೆನಪು.

ಅಲೆನ್ ಡೆಂಡಸ್ ಆಧುನಿಕೋತ್ತರ ಯುಗದ ಜಾನಪದ ಚಿಂತಕರಾಗಿದ್ದರು. ಉತ್ಪಾದನಾ ವಿಧಾನ ಬದಲಾದಂತೆಲ್ಲ ಜೀವನ ಮೌಲ್ಯಗಳು, ಅಭಿವ್ಯಕ್ತಿಗಳು ಬದಲಾಗಿ ನಗರ ಜಾನಪದ, ಕೈಗಾರಿಕಾ ಜಾನಪದ ಹೇಗೆ ವಿಸ್ತರಿಸುತ್ತವೆ ಎಂದು ಸಿದ್ಧಾಂತಗಳನ್ನೆ ಮಂಡಿಸಿದ್ದರು. ಉದ್ದೇಶ ಸ್ಪಷ್ಟವೇ ಇಲ್ಲದೆ ಜಾನಪದಕ್ಕೆ ಸೇರಿದ್ದೆ. ಈಗ ನೋಡಿದರೆ ಆ ಅಧ್ಯಯನವೇ ನನ್ನನ್ನು ತನ್ನ ಉದ್ದೇಶಕ್ಕೆ ತಕ್ಕಂತೆ ರೂಪಿಸುತ್ತಿದೆಯಲ್ಲಾ ಎಂಬ ಅಚ್ಚರಿ ಉಂಟಾಗಿತ್ತು. ಅತಾರ್ಕಿಕವಾಗಿಯೆ ಒಂದು ತರ್ಕ ಹುಟ್ಟಿ ಬೆಳೆಯುತ್ತದೆ. ಉದ್ದೇಶವೇ ಇಲ್ಲದೆ ಒಂದು ಉದ್ದೇಶ ಸಾಮಾಜಿಕವಾಗಿ ವ್ಯಾಪಿಸಿಕೊಳ್ಳುತ್ತ ಸಾಗುತ್ತದೆ. ನಂಬಿಕೆಯೆ ಇಲ್ಲದೆ ನೂರಾರು ನಂಬಿಕೆಗಳು ನಮ್ಮನ್ನು ಆವರಿಸಿಕೊಳ್ಳುತ್ತವೆ… ಮನುಷ್ಯರ ಮೆದುಳಿನ ವಿಕಾಸದಲ್ಲಿ ಇವೆಲ್ಲ ಹೇಗೆ ಬಂದವು ಎಂದುಕೊಳ್ಳುತ್ತಲೆ ಡಂಡೆಸ್ ಉಪನ್ಯಾಸವನ್ನು ತಕ್ಕಮಟ್ಟಿಗೆ ಗ್ರಹಿಸಿದೆ. ಅವರ ಉಚ್ಛಾರ ಬೇರೆಯಾಗಿತ್ತು. ನಂತರ ಹೊಂದಿಕೊಂಡೆ.

ವಿಶೇಷ ಎಂದರೆ ಏಷ್ಯಾ, ಆಸ್ಟ್ರೇಲಿಯಾ, ಆಫ್ರಿಕಾ, ದಕ್ಷಿಣ ಅಮೇರಿಕ ದೇಶಗಳ ಯಾವುದಾವುದೊ ಸಮುದಾಯಗಳ ಆಚಾರ ವಿಚಾರಗಳ ಉದಾಹರಣೆಗಳನ್ನು ಕೊಡುತ್ತಿದ್ದರು. ನಮ್ಮ ವಿದ್ವಾಂಸರು ಅವರ ಊರುಕೇರಿ ಜಾತಿಯ ಸಂಪ್ರದಾಯಗಳ ವಿವರ ಬಿಟ್ಟು ಆಚೆಗೆ ಹೋಗುತ್ತಲೆ ಇರಲಿಲ್ಲ.  ಅಮೇರಿಕದ ಡಿಜಿಟಲ್ ಉಪಕರಣಗಳ ಬಳಸಿ ವಿಚಾರ ಮಂಡಿಸುತ್ತಿದ್ದರು. ಇಡೀ ಕಮ್ಮಟದ ಪ್ರತಿ ಆ್ಯಂಗಲನ್ನು ವೀಡಿಯೋ ಆಡಿಯೋ ಮಾಡಿಕೊಳ್ಳುತ್ತಿದ್ದರು. ಯಾರೂ ಆಕಳಿಸಿ ಮೂಗಿಗೆ ಬೆರಳೇರಿಸಿ ಮುಸುರೆ ಸ್ವಚ್ಛ ಮಾಡಿಕೊಳ್ಳುವಂತಿರಲಿಲ್ಲ. ಪ್ರಶ್ನಿಸುವುದಕ್ಕೆ ಎಂಟೆದೆ ಬೇಕಾಗುತಿತ್ತು. ಭಾಷೆಯ ತೊಡಕು. ಆ ಯುವ ವಿದ್ವಾಂಸರಲ್ಲಿ ನನಗೆ ಬಹಳ ಇಷ್ಟವಾಗಿದ್ದವರು ಡಾ. ಪುರುಷೋತ್ತಮ ಬಿಳಿಮಲೆ, ಹನೂರು ಕೃಷ್ಣಮೂರ್ತಿ, ಸಂಧ್ಯಾರೆಡ್ಡಿ ಇನ್ನಿತರರು. ಬಿಳಿಮಲೆ ಖಂಡಿತ ಅತ್ಯುತ್ತಮ ಜಾನಪದ ಚಿಂತಕರಾಗಿದ್ದರು. ಅಲ್ಲದೆ ಬಂಡಾಯ ಸಾಹಿತ್ಯ ಸಂಘಟನೆಯ ಜೊತೆ ಹಲವು ಹೋರಾಟಗಳಲ್ಲಿ ಗುರುತಿಸಿಕೊಂಡಿದ್ದರು. ಪೀಟರ್ ಜೆ ಕ್ಲಾಸ್, ಬ್ಲಾಕ್ ಬರ್ನ್ ಎಂಬ ಇನ್ನಿಬ್ಬರು ಅಮೆರಿಕನ್ ಜಾನಪದ ತಜ್ಞರು ಕಮ್ಮಟದ ಸಂಪನ್ಮೂಲ ವ್ಯಕ್ತಿಗಳಾಗಿ ಬಂದಿದ್ದರು. ಪೀಟರ್ ಜೆ ಕ್ಲಾಸ್ ತುಳುಜಾನಪದ ಸಾಹಿತ್ಯವನ್ನು ಚೆನ್ನಾಗಿ ಬಲ್ಲವರಾಗಿದ್ದರು. ಅತಿ ಮುಖ್ಯ ಎಂದರೆ ಒಂದು ತಿಂಗಳ ಕಾಲ ಎ.ಕೆ. ರಾಮಾನುಜನ್ ಭಾರತೀಯ ಜಾನಪದವನ್ನು ಹೇಗೆ ಅಧ್ಯಯನ ಮಾದಲು ಸಾಧ್ಯವಿದೆ ಎಂಬುದನ್ನು ಸಾಧ್ಯಂತ ತಣ್ಣನೆಯ ಕೀರಲು ಮೆಲುದನಿಯಲ್ಲಿ ಹೇಳುತ್ತಿದ್ದ ಪರಿ ಮಾಂತ್ರಿಕವಾಗಿತ್ತು. ಅವರು ಬಹಳ ಸರಳವಾಗಿದ್ದರು. ಚಿಕಾಗೊ ಯೂನಿವರ್ಸಿಟಿಯ ದಕ್ಷಿಣ ಏಷ್ಯಾದ ಭಾಷೆಗಳ ಅಧ್ಯಯನ ಕೇಂದ್ರದಲ್ಲಿ ಪ್ರಾಧ್ಯಾಪಕರಾಗಿದ್ದರು. ಕನ್ನಡದ ನವ್ಯ ಸಾಹಿತ್ಯದಲ್ಲಿ ಅವರದೇ ಒಂದು ಮೈಲಿಗಲ್ಲು. ಅವರು ಹಿಂದಿನ ಲಡಾಸು ಹಿಡಿದ ಛೇರಿನಲ್ಲಿ ಕೂತಿದ್ದರು. ಆ ಎರಡು ಛೇರುಗಳು ಇದ್ದಿದ್ದು ಜವಾನರು ಕೂತಿರಲಿ ಎಂದು ಹಾಕಿದ್ದು. ಅವರ `ಹೊಕ್ಕುಳಲ್ಲಿ ಹೂವಿಲ್ಲ’ ಕವನ ಸಂಕಲನವನ್ನು ಆಗ ನಾನು ಸೆಕ್ಸ್ ಕವಿತೆಗಳಿರಬಹುದೆಂದು ಭ್ರಮಿಸಿ ಓದಿ ಹೀಗೂ ಬರೆಯಬಹುದೇ ಎಂದು ಯತ್ನಿಸಿ ಸೋತಿದ್ದೆ. ಇವರೇ ರಾಮಾನುಜನ್ ಎಂದು ಗೊತ್ತಾಯಿತು. ನಾನು ಅವರ ಪಕ್ಕದಲ್ಲೆ ಕೂತಿದ್ದೆ ಎಂದು ಸಾರ್ಥಕ ಭಾವನೆ ಬಂದಿತ್ತು.

ಚಹಾ ವಿರಾಮ ಬಂತು. ಟೀ ಕುಡಿಯುತ್ತಿದ್ದೆವು. ಕನ್ನಡ ಸಾಹಿತಿಗಳು ಬಂದು ಪರಿಚಯ ಮಾಡಿಕೊಳ್ಳುತ್ತಿದ್ದರು. ಅವರ ಹಿಂದೆಯೆ ಅಡ್ಡಾಡಿದ್ದೆ. ನಾನೇನೂ ಆಗಿರಲಿಲ್ಲ. ಪರಿಚಯ ಮಾಡಿಕೊಳ್ಳುವ ಧೈರ್ಯ ಬಂದಿರಲಿಲ್ಲ. ಆಗಲ್ಲಿಗೆ ದೇವನೂರು ಮಹದೇವ ಬಂದು ರಾಮಾನುಜನ್ ಜೊತೆ ಮಾತಾಡುತ್ತ ನಿಂತಿದ್ದರು. ಅವರ ಬಗ್ಗೆ ನನಗೆ ಅಂತಹ ಆಸಕ್ತಿ ಬರಲಿಲ್ಲ. ಈ ಯಪ್ಪನನ್ನು ಸಂತನಂತಹ ಲೇಖಕ ಎನ್ನವರು ಎಲ್ಲ! ನಿಜನೊ ಸುಳ್ಳೋ ಗೊತ್ತಾಗೋದಿಲ್ಲವಲ್ಲಾ… ಅಯ್ಯೋ ಅವೆಲ್ಲ ನನಗ್ಯಾಕೆ ಎಂದು ಕಮ್ಮಟದಲ್ಲಿ ಕೂತಿದ್ದೆ. ರಾಮಾನುಜನ್ ಸಾಂದರ್ಭಿಕ ಸಿದ್ಧಾಂತವನ್ನು ಭಾರತೀಕರಿಸುವಂತೆ ಹೇಗೆ ಒಂದು ಸಮಾಜ, ಕುಟುಂಬ, ದೇಶ, ಭಾಷೆ, ಸಂಸ್ಕೃತಿಗಳು ವೈವಿಧ್ಯ ಕಾಲಮಾನಗಳಲ್ಲಿ ತಮ್ಮ ತಮ್ಮ ಅಭಿವ್ಯಕ್ತಿಗಳನ್ನು ಮೌಖಿಕವಾಗಿ ವಿಸ್ತರಿಸಿಕೊಳ್ಳುತ್ತ ಮಾನವ ಸಂಬಂಧಗಳನ್ನು ಬೆಳೆಸುತ್ತವೆ ಎಂಬ ವಿಚಾರಗಳನ್ನು ಪ್ರಚುರ ಪಡಿಸುತ್ತಿದ್ದರು. ಆಗಲೇ ಅವರು ಹಿತ್ತಲು ಮತ್ತು ಜಗುಲಿ, ಹಝಾರ, ಅಡುಗೆ ಮನೆಯಲ್ಲಿ ಭಾಷೆ ಮತ್ತು ಮಾನವ ನಡವಳಿಕೆಗಳು ಹೇಗೆ ಸಂರಚನೆಗೊಳ್ಳುತ್ತವೆ ಎಂದು ಪ್ರತಿಪಾದಿಸಿದ್ದಿದ್ದು. ನಮ್ಮ ರೂಢಿಯ ಜೀವನ ಕ್ರಮಗಳನ್ನು ಕವಿ ಮನದ ಸೃಜನಶೀಲ ವಿದ್ವಾಂಸ ಹೇಗೆ ಉಳಿದವರಿಗಿಂತ ಹೊರತಾಗಿ ಗ್ರಹಿಸುತ್ತಾನೆ ಎಂಬುದು ತಿಳಿದು ಬೆರಗಾದೆ. ಆ ಕೂಡಲೆ ನಾನವರ ವಿದ್ಯಾರ್ಥಿ ಆಗಿಬಿಟ್ಟಿದೆ.

ಆ ಅಂತರ ರಾಷ್ಟ್ರೀಯ ಕಮ್ಮಟ ಯಾರ್ಯಾರಿಗೆ ಎಷ್ಟೆಷ್ಟು ಉಪಕಾರ ಮಾಡಿತೊ ತಿಳಿಯಲಿಲ್ಲ. ಆ ಘನವಾದ ಉದ್ದೇಶ ಈಡೇರಲಿಲ್ಲ. ನನಗಂತು ಜಾನಪದ ವಿಚಾರಗಳ ಹೆಬ್ಬಾಗಿಲುಗಳ ಮುಂದೆ ನಿಲ್ಲಿಸಿತ್ತು. ಜಾನಪದ ಕಮ್ಮಟಕ್ಕೆ ಆಗ ಚಿದಾನಂದ ಮೂರ್ತಿ ಅವರನ್ನು ವಿಶೇಷ ಉಪನ್ಯಾಸಕ್ಕಾಗಿ ಕರೆಸಿದ್ದರು. ಕೋಟು ಸೂಟಲ್ಲಿ ಬಂದಿದ್ದರು.  ಆಗಿನ್ನೂ ಮತೀಯವಾದಿ ಆಗಿರಲಿಲ್ಲ.  ಶ್ರೇಷ್ಟ ವಿದ್ವಾಂಸರೆಂದು ಕರೆಸಿಕೊಂಡಿದ್ದರು. ಪ್ರಾಚೀನ ಶಾಸನ, ಹಸ್ತಪ್ರತಿ, ಬಕೈರುಗಳು, ದೇಗುಲ ಅವಶೇಷ ಇತ್ಯಾದಿ ಗತಸಾಕ್ಷ್ಯಗಳನ್ನು ಇಟ್ಟುಕೊಂಡು ಅವುಗಳ ಮೂಲಕ ಜಾನಪದವನ್ನು ಹೇಗೆ ಅಧ್ಯಯನ ಮಾಡಲು ಸಾಧ್ಯವಿದೆ ಎಂಬ ನಿರೀಕ್ಷೆಯಲ್ಲಿ ಚಿ.ಮೂ. ಅವರನ್ನು ಆಹ್ವಾನಿಸಿದ್ದರು. ನೇರ ವಿಷಯಕ್ಕೆ ಬಂದರು. ವಶಾಹತುಶಾಹಿ ಕಾಲದ ಪಶ್ಚಿಮದ ವಿದ್ವಾಂಸರು ನಮ್ಮ ದೇಶದ ಸಂಸ್ಕೃತಿ ಮತ್ತು ಜಾನಪದಗಳ ಬೇರುಗಳನ್ನು ಅರಿಯಲಾರದೆ; ಯಾರೊ ಹೇಳಿದ್ದನ್ನು ದಾಖಲಿಸಿ ಅರ್ಥೈಸಿ ತಪ್ಪು ಮಾಡಿದ್ದಾರೆ ಎಂದು ಅಲೆನ್‍ಡೆಂಡಸ್ ಮೇಲೆ ದಾಳಿಗೇ ಇಳಿದುಬಿಟ್ಟರು.

ಓತೋಪ್ರೇತ ಇಂಗ್ಲೀಷ್ ಝರಿಯ ಹರಿಸಿದ್ದರು. ಯಾರೊಬ್ಬರು ಪ್ರಶ್ನಿಸಲಿಲ್ಲ. ಅಷ್ಟೊಂದು ಲಾರಿಗಟ್ಟಲೆ ಆಕರ ಸಾಮಗ್ರಿ ಅವರ ಬಳಿ ಇತ್ತು. ಯಾರೂ ಕೆಮ್ಮುವಂತಿರಲಿಲ್ಲ. ಅಂತಹ ಅಥೆಂಟಿಸಿಟಿ ಅವರಿಗಿತ್ತು. ತಮ್ಮ ಉಪನ್ಯಾಸದ ಮೊದಲೇ ಜಾನಪದ ಪರಿಕಲ್ಪನೆಯನ್ನು ಮುರಿದು; `ಐ ಯೂಸ್ ಟು ಕಾಲ್; ಆಲ್ ಅವರ್ ಕಲ್ಚರಲ್ ವ್ಯಾಲ್ಯೂಸ್ ಆ್ಯಸ್ ಆಂಟಿಕ್‍ಲೋರ್, ದಿಸ್ ಆ್ಯಂಟಿಕ್ ಲೋರ್ ಈಸ್ ನಾಟ್ ಆ್ಯನ್ ಆ್ಯಂಟಿಕ್ ಐಟಂ ಇನ್ ಅವರ್ ಶೋಕೇಸ್; ದೋಸ್‌ ಆರ್ ಆಲ್ ಅವರ್ ಪಾರ್ಟ್ಸ್‌ ಆಫ್ ಲೈಫ್ ಸ್ಟೈಲ್, ನತಿಂಗ್ ಈಸ್ ಡೆಡ್ ಇನ್ ಆ್ಯಂಟಿಕ್ ಲೋರ್… ಥ್ರೂ ದಿ ಏಜ್ ಓಲ್ಡ್ ಟ್ರೆಡಿಸನ್ಸ್ ದೇ ಆರ್ ರೀ ಕ್ರಿಯೇಟಿಂಗ್ ಈಚ್ ಅದರ್.’ ಅವರ ಆರಂಭದ ಈ ಮಾತೇ ಸೆರೆ ಹಿಡಿದಿತ್ತು. ಈ ನಿಲುವಿಗೆ ಪುಂಕಾನುಪುಂಕವಾಗಿ ಪ್ರಾಚೀನ ಇತಿಹಾಸದ ಪಳೆಯುಳಿಕೆಗಳನ್ನೆಲ್ಲ ವರ್ತಮಾನದ ಜೊತೆಗೆ ಬೆಸೆದಿದ್ದರು. ಅಷ್ಟು ಚೆಂದ ವಿಚಾರವನ್ನೆಲ್ಲ ಹೋಮಕ್ಕೆ ಸುರಿಯುತ್ತಿದ್ದರು. ಅಲ್ಲಿ ನಾನು ಅವರ ವಿಚಾರಗಳ ಎಡಿಟ್ ಮಾಡಿಕೊಳ್ಳುತಿದ್ದೆ. ಎ.ಕೆ. ರಾಮಾನುಜನ್ ಚೀಮೂಗೆ ಕೈ ಮುಗಿದು ಪ್ರಶಂಸಿದ್ದರು.

ಮುಗಿದೇ ಹೋಗುತ್ತಿತ್ತು ಕಮ್ಮಟ. ಮೂರುದಿನ ಬಾಕಿ ಇದ್ದವು. ಆಗತಾನೆ ಸಮಾಜ ಶಾಸ್ತ್ರೀಯ ವಿಚಾರಗಳ ಬರೆಯಲು ಮನಸ್ಸು ಮಿಸುಕಾಡುತ್ತಿತ್ತು. ಎ.ಕೆ.ರಾಮಾನುಜನ್ನರ ಮುಂದೆ ಕೂತು ಜೀವನದಲ್ಲಿ ಒಮ್ಮೆ ಮಾತಾಡಲೇ ಬೇಕೆನಿಸಿತು. ಚಹಾ ವಿರಾಮದ ವೇಳೆ ಧೈರ್ಯ ಮಾಡಿ ಒಂದು ಸುಳ್ಳು ವ್ಯಕ್ತಿತ್ವ ಸ್ಥಾಪಿಸಿಕೊಂಡು ಅವರನ್ನು ಪರಿಚಯ ಮಾಡಿಕೊಂಡೆ. ಸಾರ್ ನಾನು ಮೊಗಳ್ಳಿ ಗಣೇಶ್, ಲಂಕೇಶ್ ಪತ್ರಿಕೆಯ ವರದಿಗಾರ. ತಮ್ಮನ್ನು ಸಂದರ್ಶನ ಮಾಡಬೇಕು ಎಂದು ವಿನಯವಾಗಿ ವಿನಂತಿಸಿದೆ. `ಒಹ್; ನೀವು ಲಂಕೇಶ್ ಪತ್ರಿಕೆಯವರು ಎಂದು ಯಾಕೆ ಮೊದಲೆ ಪರಿಚಯ ಮಾಡಿಕೊಳ್ಳಲಿಲ್ಲ. ನಾನು ಚಿಕಾಗೊದಲ್ಲಿದ್ದರೂ; ಇಂಡಿಯಾಕೆ ಬಂದಾಗ ಲಂಕೇಶ್ ಪತ್ರಿಕೆಯ ಹಳೆಯ ಸಂಚಿಕೆಗಳನ್ನೆಲ್ಲ ತಿರುವಿ ಹಾಕುವೆ. ಬಹಳ ಸಂತೋಷವಾಯಿತು. ನಿಮ್ಮನ್ನು ನೋಡಿ ವಿದ್ಯಾರ್ಥಿ ಎಂದುಕೊಂಡಿದ್ದೆ’ ಎಂದರು. ಹೌದು ಸಾರ್; ನಾನು ಜಾನಪದ ಎಂ.ಎ. ಓದುತ್ತಲೆ ವರದಿಗಾರನಾಗಿಯು ಕೆಲಸ ಮಾಡುತ್ತಿರುವೆ’ ಎಂದೆ. `ನಾನು ತುಂಬ ಬ್ಯುಸೀ.. ನೀವು ನಾಳೆ ಮೆಟ್ರೋ ಪಾಲಿಟಿನ್ ಹೋಟೆಲಿಗೆ ಸಂಜೆ ಐದು ಗಂಟೆಗೆ ಬನ್ನಿ. ಚಹಾ ಕುಡಿಯುತ್ತ ಮಾತಾಡುವ’ ಎಂದರು. ನನ್ನ ಕೈಗೆ ಆಕಾಶ ಎಟುಕಿಸಿತ್ತು.

ಮರುದಿನ ಆ ಮೆಟ್ರೋಪಾಲಿಟಿನ್ ಸ್ಟಾರ್ ಹೋಟೆಲಿಗೆ ಹೋಗಿದ್ದೆ. ಸರಿ ಸಮಯ ಪಾಲಿಸಿದ್ದೆ. ನನ್ನ ನಿರೀಕ್ಷೆಯಲ್ಲಿದ್ದರು. ಅವರು ಇಂಗ್ಲೀಷಿನಲ್ಲಿ ಒಂದು ಪದವನ್ನು ಬಳಸದೆ ಕನ್ನಡ ಮಾತಾಡುತ್ತಿದ್ದರು. ಯಾವ ಪ್ರಶ್ನೆ ಕೇಳಬೇಕು ಎಂದುಕೊಂಡಿದ್ದೆನೊ ಅವೆಲ್ಲ ಮರೆತಿದ್ದವು. ಒಂದು ರೇನಾಲ್ಡ್ ಪೆನ್ ಹಾಗೂ ಡೈರಿ ಇತ್ತು. ರೆಕಾರ್ಡ್ ಮಾಡಿಕೊಳ್ಳಿ… ಕ್ಯಾಮರಾ ಇದೆಯಾ ಎಂದರು. ಅಂತಹ ಮಟ್ಟದಲ್ಲಿ ನಾನು ಇರಲಿಲ್ಲ. ಅರ್ಥಮಾಡಿಕೊಂಡರು. ನರ್ವಸ್ ಆದೆ. ನಾನು ನಿಜಕ್ಕೂ ಲಂಕೇಶ್ ಪತ್ರಿಕೆಗೆ ಆ ಇಂಟರ್ವ್ಯೂ ಕಳಿಸುವಂತಿರಲಿಲ್ಲ. ನಾನಾಗ ಸೊನ್ನೆ. ಏನೂ ಬರೆದಿರಲಿಲ್ಲ. ರಾಮಾನುಜನ್ನರು ಚಹಾ ತರಿಸಿದರು. ಕುಡಿಸಿದರು. ನನ್ನ ಊರು ತಂದೆ ತಾಯಿಯ ಬಗ್ಗೆ ಕೇಳಿದರು. ಹಳ್ಳಿಯ ಮುಗ್ಧ ಹುಡುಗ ಎಂದು ಮರುಕ ತೋರಿದರು. ನಿಮ್ಮ ತಂದೆ ಹೋಟೆಲ್ ಬ್ಯುಸಿನೆಸ್ ಮಾಡ್ತಾರಾ? ಎಲ್ಲಿ? ನಿಮ್ಮ ಹಳ್ಳಿಯಲ್ಲಿ ಯಾವ ಯಾವ ಜನಪದ ಕಲಾವಿದರಿದ್ದಾರೆ ಎಂದು ಗಂಟೆ ಮೇಲೆ ನನ್ನ ಹಳ್ಳಿಯ ಜನರ ವರ್ತಮಾನದ ನಿರೀಕ್ಷೆಗಳಲ್ಲಿ ಕೇಳಿದರು. `ಸಾರ್; ಚಿದಾನಂದ ಮೂರ್ತಿ ಅವರು ಆ್ಯಂಟಿಕ್ ಲೋರ್ ಅನ್ನೋ ಪದ ಬಳಸಿದ್ರು. ನಾನು ಅಸ್ಪೃಶ್ಯರ ಕೇರಿಯಿಂದ ಬಂದವನು; ನಾನು `ದಲಿತ ಜಾನಪದ’ ಎಂದು ಕರೆದು ನಮ್ಮ ಜನರ ಜಾನಪದವ ಅಧ್ಯಯನ ಮಾಡಬಹುದೇ ಎಂದು ಅಂಜುತ್ತ ಕೇಳಿದೆ.

ಒಹ್! ಒಳ್ಳೆಯ ಆಲೋಚನೆ… ವಿಮೋಚನಾ ಜಾನಪದ. ಅಂಬೇಡ್ಕರ್ ಅವರು ತಮ್ಮ ಸಮುದಾಯವನ್ನು ಜಾತಿಯ ಸಂಕೋಲೆಯಿಂದ ಬಿಡಿಸಲು ಹೋರಾಡಿದರು. ಅದು ಕೂಡ `ಜಾನಪದ! ಒಹ್! ಮೊದಲೆ ಗೊತ್ತಿದ್ದರೆ ನಿನ್ನನ್ನು ಅಲೆನ್ ಡಂಡೆಸ್ಗೆ ಪರಿಚಯ ಮಾಡ್ತಿದ್ದೆ. ಅಮೆರಿಕಾದಲ್ಲಿ ಬ್ಲಾಕ್ ಫೋಕ್‌ಲೋರ್ ಒಂದು ವಿಶೇಷ ಅಧ್ಯಯನ ಕ್ರಮ ಇದೆ. ಇಂಡಿಯಾದಲ್ಲಿ ದಲಿತ್ ಫೋಕ್‌ಲೋರ್ ಮಾಡಿದರೆ ಅದೊಂದು ಹೊಸ ದಾರಿಯಾಗುತ್ತದೆ… ನೀವು ಅದನ್ನು ವಿಸ್ತರಿಸಿ’ ಎಂದು ಮೆಚ್ಚಿದರು. ಏನೊ ಒಂದು ಸಂದರ್ಶನ ಮುಗಿದಿತ್ತು. ಕಮ್ಮಟದಲ್ಲಿ ಅವರಿಗೆ ಆ ಕಾಲದ ವಿ.ಐ.ಪಿ. ಸೂಟ್‌ಕೇಸ್ ಕೊಟ್ಟಿದ್ದರು. ಜೇಮ್ಸ್ ಬಾಂಡ್ ಹಿಡಿದಿರುತ್ತಾನಲ್ಲಾ; ಅಂತದ್ದು. ಅದನ್ನು ಹಾಗೂ ಮೂರು ಅಮೆರಿಕನ್ ಪೆನ್ನುಗಳ ಕೊಟ್ಟರು. `ಯಾಕೆ ಸಾರ್ʼ ಎಂದೆ. `ಸಿಂಬಲ್ ಆಫ್ ಲವ್ʼ ಎಂದರು. ಪಡೆದೆ, ಕಮ್ಮಟ ಮುಗಿದಿತ್ತು. ಒಂದು ವಾರ ಸತ್ತಂತೆ ಇದ್ದೆ. ಅದೇ ಸಯ್ಯಾಜಿ ರಾವ್ ರಸ್ತೆಯಲ್ಲಿ ಅಲೆಯುತ್ತಿದ್ದೆ. ಚಲುವಾಂಬ ಆಸ್ಪತ್ರೆ ಬಳಸಿ ಬಂದಿದ್ದೆ. ಸಿದ್ರಾಮಣ್ಣನ ಪತ್ತೆ ಮಾಡಿದ್ದೆ. `ಏನಪ್ಪಾ; ಮತ್ತೆ ಬೀದಿಗೆ ಬಿದ್ದಾ… ಬಾ ಬಾ… ನಮ್ಮಂತವರ ಪಾಡೇ ಇಂಗೆ ಬಾ’ ಎಂದು ವಿಚಾರಿಸಿಕೊಂಡ. `ಇಲ್ಲ ಅಣ್ಣಾ; ತಗ್ಗಿ ಬಗ್ಗಿ ಬಾಳ್ತಾ ಇವ್ನಿ. ನಿನ್ನ ನೋಡ್ಲೆ ಬೇಕು ಅನಿಸ್ತು; ಬಂದೆ’ ಎಂದೆ. ಬಹಳ ಖುಷಿಪಟ್ಟ. ಹಿಂದಿನದನ್ನು ಮರೆಯುವಂತಿರಲಿಲ್ಲ, `ಬಾರಪ್ಪ ಮನೆಗೆ ಹೋಗೋಣ’ ಎಂದ. `ಎಲ್ಲಣ್ಣ ಮನೆ’ ಎನ್ನುತ್ತಿದ್ದಂತೆಯೆ ಕೆಸರೆ ಬಡಾವಣೆಗೆ ಕರೆದೊಯ್ದಿದ್ದ. ಆಗದು ಬಿಡಿಯಾಗಿ ಬಡವಾಗಿದ್ದ ಪ್ರದೇಶ. ಪುಟ್ಟ ಬಾಡಿಗೆ ಮನೆ ಮಾಡಿದ್ದ. ತುಂಬ ಕುತೂಹಲವಿತ್ತು. ಅವನ ಹೆಂಡತಿ ಮಕ್ಕಳ ನೋಡುವ ಆಸೆಯಾಗಿತ್ತು. ಆಟೋದಲ್ಲಿ ಹೋದೆವು. ಅವನ ಹೆಂಡತಿ ಮನೆ ಮುಂದೆಯೆ ಅಕ್ಕಿ ಸೋಸುತಿದ್ದಳು. ಒಂದು ಹೆಣ್ಣು ಒಂದು ಗಂಡು ಮಗು. ಮುದ್ದಾಗಿದ್ದವು. ಪರಿಚಯಿಸಿದ. ಅವನ ಹೆಂಡತಿ ಮರಳಿ ಗೂಡಿಗೆ ಸೇರಿದ್ದಳು. `ನಿಮ್ಮ ಬಗ್ಗೆ ನಮ್ಮನೆಯೋರು ಯೇಳವರೆ ಅಣ್ಣಾ… ತುಂಬಾ ಕಸ್ಟ ಪಟ್ಟು ದೊಡ್ಡ ವಿದ್ಯಾವಂತ ಆಗವರೆ ಅಂತಾ… ಯಂಗೋ ಚೆನ್ನಾಗಿ ಇರ್ರಣ್ಣಾ… ನಮ್ಮನೆಯೋನು ನಿಮ್ಮಂತೆವುರ ಕಂಡ್ರೆ ಪ್ರಾಣನೆ ಕೊಡ್ತನೆ’ ಎಂದಳು. ಅದು ಸತ್ಯವಾಗಿತ್ತು. ಸಂಜೆ ಆಗಿತ್ತು `ಇವತ್ತು ನಮ್ಮನೆಲೆ ಊಟ ಮಾಡಿ ಮಲಿಕಪಾ… ನಿನ್ನಂತೆವ್ನ ಎಲ್ಲೆಲ್ಲಿ ಮಲಗ್ಸಿದ್ದೇ… ಆ ಪಾಪನಾದ್ರು ಕಳಿತದೇ ಇಲ್ಲಿದ್ದು ನಾಳೆ ವೋಗಪ್ಪ’ ಎಂದು ಸಿದ್ಧರಾಜು ತಡೆದ.

ಗಂಡ ಹೆಂಡಿರ ಮಾತಿನಲ್ಲಿ ನಿಜವಾದ ಪ್ರೇಮವಿತ್ತು. ಅವರು ಒಬ್ಬರನ್ನೊಬ್ಬರು ಮತ್ತೆಂದೂ ಬಿಟ್ಟಿರಲಾರರು ಎಂಬ ವಿಶ್ವಾಸ ಬಂತು. ಮಾಂಸದ ಅಡುಗೆ ಮಾಡಿದ್ದರು. ನನ್ನ ಮೇಲೆ ಅದೆಂತಹ ವಿಶ್ವಾಸ ಪ್ರೀತಿ ಮಮಕಾರವೊ ಅವನಿಗೆ, ನಡುರಾತ್ರಿ ತನಕ ಹಳೆಯದನ್ನೆಲ್ಲ ನೆನೆದು ಮಾತಾಡಿದ್ದ. ಬೇಗ ಎದ್ದಿದ್ದೆವು. ಬಸ್ಸು ಹಿಡಿದು ಗಂಗೋತ್ರಿಗೆ ಬಂದಿದ್ದೆ. ವಿಳಾಸ ಕೊಡುವುದನ್ನು ಮರೆತಿರಲಿಲ್ಲ. `ಅಣ್ಣಾ; ಬಂದು ವೋಗಿ’ ಎಂದು ಗೌರವ ತೋರಿ ಮಾಮನಿಗೆ ಟಾಟಾ ಮಾಡಿ ಎಂದು ಮಕ್ಕಳಿಂದ ಟಾಟಾ ಮಾಡಿದ್ದಳು. ತರಗತಿಗೆ ಹೋಗಲು ಮನಸ್ಸೆ ಆಗುತ್ತಿರಲಿಲ್ಲ. ಆ ಗಾದೆ ಪ್ರಾಧ್ಯಾಪಕರು ಎದುರಾದರು. ಅವರ ಕೈಗೆ ಸಿಕ್ಕಿರಲಿಲ್ಲ. ತಲೆ ತಪ್ಪಿಸಿಕೊಂಡು ಏನಾದರು ಒಂದು ಸಬೂಬು ಹೇಳುತ್ತಿದ್ದೆ. ಅವತ್ತು ತೀರ್ಮಾನಿಸಿಕೊಂಡೇ ಬಂದಿದ್ದರು ಎಂಬುದು ಖಾತ್ರಿಯಾಗಿತ್ತು. ನಾಯಿಯನ್ನು ಹಿಡಿದು ಕೊಡದಿದ್ದರೆ ಪರೀಕ್ಷೆಯಲ್ಲಿ ಫೇಲೇ ಮಾಡಿಬಿಡುವನು ಎಂದು ಹೆದರಿದೆ.

ಆಗತಾನೆ ಸಮಾಜ ಶಾಸ್ತ್ರೀಯ ವಿಚಾರಗಳ ಬರೆಯಲು ಮನಸ್ಸು ಮಿಸುಕಾಡುತ್ತಿತ್ತು. ಎ.ಕೆ.ರಾಮಾನುಜನ್ನರ ಮುಂದೆ ಕೂತು ಜೀವನದಲ್ಲಿ ಒಮ್ಮೆ ಮಾತಾಡಲೇ ಬೇಕೆನಿಸಿತು. ಚಹಾ ವಿರಾಮದ ವೇಳೆ ಧೈರ್ಯ ಮಾಡಿ ಒಂದು ಸುಳ್ಳು ವ್ಯಕ್ತಿತ್ವ ಸ್ಥಾಪಿಸಿಕೊಂಡು ಅವರನ್ನು ಪರಿಚಯ ಮಾಡಿಕೊಂಡೆ.

ಆಗ ಪ್ರಾಧ್ಯಾಪಕರ ಆ ನಾಯಿಗೆ ನಾನು ಕೊಟ್ಟಿದ್ದ ಹೊಡೆತಗಳು ಒಂದೆರಡಲ್ಲ. ಅಂತಾ ಸಿಟ್ಟಿತ್ತು. ಆ ನಾಯಿಗೆ ಚಂದ್ರನಿಂದ ಬಲವಾಗಿ ಹೊಡೆಸಿದ್ದೆ… ಏಟಿನ ಪರಿಗೆ ಅದು ಅರಚಿದ ಕೂಡಲೆ ಅಲ್ಲೆಲ್ಲ ಇದ್ದ ಕನಿಷ್ಟ ಇಪ್ಪತ್ತು ನಾಯಿಗಳು ಅದರ ಸಹಾಯಕ್ಕೆ ಬಂದು ಗಲಾಟೆ ಮಾಡಿದ್ದವು. ಅಷ್ಟರಲ್ಲಾಗಲೆ ಮಾಸ್ತರ ನಾಯಿ ಇನ್ನೊಂದು ಜನ್ಮ ಬಂದರೂ ಇತ್ತ ಬರಬಾರದು ಎಂದು ಕಿರುಚಿಕೊಂಡು ಕಲ್ಪವಲ್ಲಿ ಕ್ಯಾಂಟೀನಿನ ಕಡೆಗೆ ಓಡಿ ಹೋಗಿತ್ತು. ಗಾದೆ ಪ್ರಾಧ್ಯಾಪಕರು ಹಿಡಿದು ಕೇಳಿದ್ದರು! ನಾನು ನಿನಗೆ ಏನು ಹೇಳಿದ್ದೆ? ನೀನು ನಾಯಿಗೆ ಏನು ಮಾಡಿದೆ? ಅದರ ಪತ್ತೆಯೆ ಇಲ್ಲವಲ್ಲೊ ಎಂದು ರಗಳೆ ಮಾಡಿದ್ದರು. ಸಾರ್ ಓನರ್ ಇಲ್ಲಾ ಅಂತಾ ಅದು ಯಾವುದೊ ಗಂಡು ನಾಯಿಯ ಜೊತೆ ಹೊರಟು ಹೋಯಿತು, ನಾನೇನು ಮಾಡಲಿ. ಆ ಹೆಣ್ಣು ನಾಯಿಗೆ ಜೀವನದಲ್ಲಿ ಒಂದು ಎಂತದಾದರು ಕರಿನಾಯಿಯಾದರೂ ಜೊತೆಗೆ ಬೇಡವೇನು ಸಾರ್… ನಮ್ಮ ಸಂತೋಷಕ್ಕೆ ಅದಾ ಸಾಕಿಕೊಂಡು ಅದರ ನಾಯಿ ಲೋಕದಿಂದಲೆ ಬೇರೆ ಮಾಡಿ ಸರಪಳಿ ಹಾಕಿ ಕಟ್ಟಿಕೊಂಡರೆ ಎಂಗೆ ಸಾರ್! ಯಾವುದೊ ರೀತಿಯಲ್ಲಿ ನಮ್ಮನ್ನು ಝೂನಲ್ಲಿ ಪ್ರಾಣಿಗಳ ಜೊತೆ ಕೂಡಿ ಆಕಿದ್ರೆ ಎಂಗಿರ್ತದೆ ಸಾರ್?

`ಹೇಯ್ ನನಗೇ ಬುದ್ಧಿ ಹೇಳುವಂತಾದೇನು? ನಾಯಿ ಪರವಾಗಿ ನಾಯಿ ತರನೆ ಮಾತಾಡ್ತಿಯಲ್ಲಾ…’ `ಹೂಂ ಸಾರ್ ನಾಯಿ ಅಂದ್ರೆ ನಾರಾಯಣ ಅಂತಾ ನೀವೇ ಹೇಳ್ತಿದ್ರಲ್ಲಾ… ನಾಯಿ ಬಾಲ ಡೊಂಕು; ದಬ್ಬೆ ಕಟ್ಟಿದ್ರು ಅಷ್ಟೆಯೇ ಬಿಟ್ಟಿದ್ರು ಅಷ್ಟೆಯೇ ಅಂತಿದ್ರಿ… ಗಂಡು ನಾಯಿನ ಹುಡಿಕಂಡದೆ ಬಿಡೀ ಸಾರ್… ಎಂಗೊ ವಯಸ್ಸಾದ್ಮೇಲಾದ್ರೂ ಇದ್ದಷ್ಟು ದಿನ ಸಂಸಾರವ ಮಾಡ್ಕಲಿ’, `ಹೇಯ್ ಅದೆಲ್ಲ ಪುರಾಣ ವದುರ್ ಬ್ಯಾಡಾ! ನನ್ನ ನಾಯಿ ನನ್ನ ಮನೆಗೆ ಬರ್ಬೇಕು ಅಷ್ಟೇ’ `ಆಯ್ತು ಸಾರ್; ಕರ್ಕ ಬತ್ತಿನಿ ಬಿಡೀ’ ಎಂದು ಹೇಳಿ ತಪ್ಪಿಸಿಕೊಂಡೆ. ಆ ನಾಯಿ ಅಲ್ಲೆ ಕಲ್ಪವಲ್ಲಿಯಲ್ಲೆ ಇತ್ತು. ಹೊಸದಾಗಿ ನಾನ್‌ವೆಜ್ ಹೋಟೆಲು ಆರಂಭವಾಗಿತ್ತು. ಆ ಗಬ್ಬಿಗೆ ಮಾಸ್ತರ ನಾಯಿ ಮಾರುಹೋಗಿತ್ತು. ಜೊತೆಗೆ ಬಲಿಷ್ಟ ಕರಿನಾಯಿಯ ಪ್ರೇಮವೂ ಸಿಕ್ಕಿತ್ತು. ನನ್ನನ್ನು ಕಂಡ ಕೂಡಲೆ ಮಾಯವಾಗುತ್ತಿತ್ತು. ಹೇ ರಾಣಿ; ಬಾ ಇಲ್ಲೀ; ನಿನ್ನ ಯಜಮಾನ ನನಗೆ ಕಾಟ ಕೊಡ್ತಿದ್ದಾನೆ ಬಾ… ಬಿರಿಯಾನಿ ಕೊಡಿಸ್ತೀನಿ ಎಂದರೂ ತಿರುಗಿ ನೋಡದೆ ಬೇಲಿ ಮರೆಗೆ ನುಗ್ಗಿ ಓಡಿ ಹೋಗಿತ್ತು. ತನ್ನ ಪ್ರೇಯಸಿಗೆ ಈ ಸೊಣಕಲ ಏನೋ ತೊಂದರೆ ಮಾಡಿದ್ದಾನೆ ಎಂದು ಗ್ರಹಿಸಿದ ಕರಿನಾಯಿ ನನ್ನತ್ತ ಗುರಾಯಿಸಿತ್ತು. ಈ ನಾಯಿಗಳ ಸಹವಾಸ ಬೇಡ ಎಂದು ಚಹಾ ಕುಡಿಯುತ್ತಿದ್ದಾಗಲೇ ಗುರುಗಳು ಸಂಜೆ ವೇಳೆ ಅಲ್ಲಿಗೆ ಬಂದರು. `ಸಿಕ್ಕಿತ್ತೇನಯ್ಯಾ… ಕಂಡರೆ ಹಿಡಿದು ಕತ್ತಿಗೆ ಈ ಹಗ್ಗ ಕಟ್ಟಿ ಎಳೆದುಕೊಂಡು ಬಂದು ಮನೆಯ ಗೇಟಿಗೆ ಕಟ್ಟಿ ಹಾಕು’ ಎಂದು ಜೇಬಿಂದ ಹಗ್ಗ ತೆಗೆದುಕೊಟ್ಟರು. `ರಾಣಿನಾ ಹುಡಿಕಂಡು ಬಂದಿರಾ ಸಾರ್’ ಎಂದೆ. `ಹೌದಪ್ಪಾ… ನೀನೇನು ಕಿತಾಪತಿ ಮಾಡಿ ಮನೆ ಬಿಟ್ಟು ಓಡಿಸಿದೆಯೊ ಏನೊ! ಆ ಮಾವಿನ ಮರದಲ್ಲಿ ಒಂದೇ ಒಂದು ಸೀಕಲು ಕಾಯನ್ನೂ ಬಿಟ್ಟಿಲ್ಲ. ಯಾರು ಕದ್ದರೊ; ನೀನೇ ಮಾರಿಕೊಂಡೆಯೊ ಏನೊ! ನನ್ನ ಹೆಂಡ್ತಿ ಕಾಟ ಕೊಡ್ತಿದ್ದಾಳೆ. ಆ ನಾಯಿಗೆ ಊಟ ಹಾಕದೆ ಅದು ಎಲ್ಲೊ ಹೋಗಿರುತ್ತೇ; ಹೋಗಿ ಹುಡಿಕಂಡು ಹಗ್ಗ ಕಟ್ಟಿ ಹಿಡ್ಕ ಬರೋಗು ಅಂತಾ ಕಳಸವಳೇ! ನಿನ್ನಿಂದ ನನ್ನ ಪಾಡು ನಾಯಿಗಿಂತ್ಲು ಅತತ್ಲೆ ಆಗೋಗದೆ’ ಎಂದು ಬೇಸರಿಸಿದರು. ಕರುಣೆ ಬಂತು! `ಸಾರ್ ಆ ನಾಯಿ ಇಲ್ಲೇ ಇತ್ತು ಸಾರ್. ಆ ಬೇಲಿ ಮರೆಲಿ ಇರಬಹುದು; ನೋಡನ ಬನ್ನಿ ಸಾರ್’ ಎಂದೆ. `ಹೌದೇ ಬಾಬಾ ಹಿಡ್ಕೊಡೂ’ ಎಂದು ಹಿಂದೆ ಬಂದರು. ಕರಿನಾಯಿ ಇರಲಿಲ್ಲ. ಬೇಲಿ ತಂಪಲ್ಲಿ ಕೆಡಿದುಕೊಂಡಿತ್ತು. `ಹೇ ರಾಣೀ; ರಾಣಿ… ಎಂಗಿದ್ದೀಯಮ್ಮರಾಣಿ’ ಎಂದು ಕರೆದರು.

`ಸಾರ್ ಅದು ಈಗ ನಿಮ್ಮ ರಾಣಿಯಾಗಿ ಉಳಿದಿಲ್ಲ! ಅದು ನಿಸರ್ಗದ ಜೊತೆಗಿರಲಿ ಬಿಟ್ಟುಬಿಡೀʼ ಎಂದು ಆಕ್ಷೇಪಿಸಿದೆ. ನನ್ನ ಸದ್ದಿಗೆ ಕಿವಿ ನಿಮಿರಿಸಿ ಎದ್ದು ನಿಂತು ಇಬ್ಬರನ್ನು ನೋಡಿತು. `ನನ್ನ ಕಂಡ್ರೆ ಬೆದುರ್ತದೆ; ತಲೆ ಸವುರಿ ಹಗ್ಗವ ನೀವೆ ಕಟ್ಟಿ’ ಎಂದೆ. ನಮ್ಮಂತಹ ಜನರ ಸಾಕಷ್ಟು ಕಂಡಿದ್ದ ಆ ನಾಯಿ ತಿರಸ್ಕರಿಸುವಂತೆ ತನ್ನ ಯಜಮಾನರಿಗೇ ಹಲ್ಲುಗಿಂಜಿ ಗೊರ್ ಎಂದಿತು! `ಯಾಕೊ… ಮರೆತೆಯಾ… ನಿಮ್ಮಮ್ಮ ನೀನಿಲ್ಲ ಅಂತ ಕೊರುಗ್ತಾ ಅವಳೆ ಬಾರಪ್ಪಾ’ ಎಂದರು. ತಲೆ ಮುಟ್ಟಿಸಿಕೊಳ್ಳಲಿಲ್ಲ. ನನ್ನ ಇವತ್ತಿನ ಬಿಕಾರಿ ಸ್ಥಿತಿಗೆ ನೀನೆ ಕಾರಣ ಎಂಬಂತೆ ಬೊಗಳಿತು ರಭಸವಾಗಿ. ಆ ಕರಿನಾಯಿ ಅದೆಲ್ಲಿತ್ತೋ ನುಗ್ಗಿ ಬಂದು ಗುರುಗಳ ಮೇಲೆ ದಾಳಿ ಮಾಡಿತು. ಇಂತಾದ್ದೇನಾದರೂ ಆಗಬಹುದು ಎಂಬ ಮುನ್ನೆಚ್ಚರಿಕೆಯಲ್ಲಿದ್ದೆ. ಅದು ನೆಗೆದು ಅಬ್ಬರಿಸಿದ್ದರಿಂದ ಭೀತರಾದ ಗುರುಗಳು ಮುಳ್ಳಿನ ಬೇಲಿಗೆ ಮಗುಚಿಕೊಂಡಿದ್ದರು. ನಾನ್‌ವೆಜ್ ಸವಿಯುತ್ತಿದ್ದವರು ಗುರುಗಳು ಅರಚಿಕೊಂಡ ಸದ್ದಿಗೆ ಬೆಚ್ಚಿಬಿದ್ದಿದ್ದರು. ಏನಾಯ್ತು ಎಂದು ಬಂದಾಗ ಕರಿನಾಯಿ ಮಾಸ್ತರ ಬಿಳಿ ನಾಯಿಯನ್ನು ಕರೆದುಕೊಂಡು ಕಣ್ಮರೆಯಾಗಿತ್ತು. ಹಿಡಿದು ಎತ್ತಿ ಕರೆತಂದು ಪ್ಲಾಸ್ಟಿಕ್ ಛೇರಿನ ಮೇಲೆ ಕೂರಿಸಿದೆವು. `ಹಾಹಾಹಾ; ಯಪ್ಪಾ ಮುಳ್ಳು ವಕ್ಕಂದದೆ’ ಎಂದು ಎದ್ದು ನಿಂತರು. ಕ್ಯಾಂಟೀನಿನ ಕ್ಲೀನರ್ ಕೈ ಹಾಕಿ ನೋಡಿ ಮುಳ್ಳನ್ನು ತೆಗೆದ. ಅದು ಕಾರೆ ಮುಳ್ಳಾಗಿತ್ತು. ಇನ್ನಿಲ್ಲಿ ಇರಬಾರದು ಎಂದು ಗುರುಗಳ ಕಣ್ಣಿಗೆ ಕಾಣದೆ ಎಸ್ಕೇಪ್ ಆದೆ.

ಸ್ವಾಮಿ ಆನಂದನೂ ಅಶ್ವಥ್ ಅವರೂ ಲೋಕಾಭಿರಾಮವಾಗಿ ಕ್ಯಾಂಟೀನಿನಲ್ಲಿದ್ದರು. ಹೀಗಾಯ್ತು ಎಂದೆ. ಚಹಾ ಚೆಲ್ಲಿಕೊಂಡು ಅಶ್ವಥ್ ಬಿದ್ದು ಬಿದ್ದು ನಕ್ಕರು. `ಲೋ; ನಿನ್ನನ್ನ ಯಾವ ಯಾವ ಆ್ಯಂಗಲಿಂದ ಫಿಲ್ಮ್ ಶೂಟ್ ಮಾಡುವುದೊ… ಹಾಲಿವುಡ್‌ನವರೇ ನಿನ್ನ ವ್ಯಕ್ತಿತ್ವವನ್ನು ಸೆರೆ ಹಿಡಿಯಲು ಸಾಧ್ಯ ಕಣೊ! ಇವತ್ತು ರಾತ್ರಿ ನಿದ್ದೆ ಬರಲ್ಲ ಆ ಮನಷ್ಯನಿಗೆ ಬಿಡೂ’ ಎಂದರು. ಆನಂದ ಮೈ ತುಂಬ ನಕ್ಕು ನಕ್ಕು ನೆತ್ತಿಗೇರಿಸಿಕೊಂಡು; `ನೀನವುನಿಗೆ ತಕ್ಕ ಪಾಠ ಕಲ್ಸಿದ್ದಿಯೆ ಬಿಡ್ಲಾ ಅಣ್ಣಾ’ ಎಂದು ಇನ್ನು ಕುಲು ಕುಲು ನಗುತ್ತ; ಸಿಗರೇಟು ಸೇದಲು ಸಾಧ್ಯವಾಗದೆ ಅದಾ ಅತ್ತ ಬಿಸಾಡಿ ಕೆಮ್ಮಿ ಕೆಮ್ಮಿ ನಗುತ್ತಿದ್ದ. ಜಾನಪದ ಕಮ್ಮಟದ ಅನನ್ಯ ಅನುಭವವ ಹಂಚಿಕೊಂಡೆ. ನನಗೂ ಕೆಲವು ಕ್ವಶ್ಚನ್ ಇದ್ದವು ಕಣೋ; ಒರಲ್ ಇಸ್ಟ್ರೀ… ಅಂದ್ರೆ ಮೌಖಿಕ ಇತಿಹಾಸದ ಬಗ್ಗೆ ತಿಳ್ಕೊಬೇಕು ಅನ್ಸಿತ್ತು. ಹೊರಗಿನವರಿಗೆ ಅವಕಾಶ ಇರ್ಲಿಲ್ಲ ಅಂತೇಳಿ ಕೈಬಿಟ್ಟಿದ್ದೆ ಎಂದರು. ಅದೂ ಬಂತೂ ಸಾರ್; ಆರ್ಕಿಯಾಲಜಿ ಮೂಲಕ ಸ್ಥಳೀಯ ಜನ ಇತಿಹಾಸದ ಐತಿಹ್ಯಗಳನ್ನು ಹೇಗೆ ಇತಿಹಾಸದ ಪುನರ್ರಚನೆಯಲ್ಲಿ ಸೇರಿಸಬೇಕು ಅಂಬೊ ಪ್ರಶ್ನೆ ಬಂದವು. ಆ ಬಗ್ಗೆ ಬಿಳಿಮಲೆ, ಹನೂರು ಕೃಷ್ಣಮೂರ್ತಿ ಕೇಳಿದ್ದರು. ಅವನ್ನೆಲ್ಲ ವೈದಿಕ ಯಜ್ಞಕುಂಡಗಳಿಗೆ ತುಪ್ಪದಂತೆ ಸುರಿಯುತ್ತಿದ್ದರು. ಅಂತಹ ಯಾವ ವಿದ್ವಾಂಸರನ್ನು ಅಶ್ವಥ್ ಚರ್ಚೆಗೆ ಎತ್ತಿಕೊಳ್ಳುತ್ತಿರಲಿಲ್ಲ. ಮೊದಲಿನಂತೆ ಎಲ್ಲರ ಕೈಗೂ ಸಿಗುತ್ತಿರಲಿಲ್ಲ. ಸ್ವಾಮಿ ಆನಂದ ನನ್ನ ರೂಮಿಗೆ ಅಪರೂಪಕ್ಕೆ ಬರುತ್ತಿದ್ದ. ಆಗಂತು ಬಾಡಿನ ಸಮಾರಾಧನೆ ಮಾಡದೆ ಆತ ಬಿಡುತ್ತಿರಲಿಲ್ಲ. ನಮಗೆಲ್ಲ ನಳಮಹಾರಾಜ ಅವನೆ ಆಗಿದ್ದ. ಅಷ್ಟು ಪರಿಯಲ್ಲಿ ತರಾವರಿ ಭಕ್ಷ್ಯಗಳ ತಯಾರಿಸಿ ಬಡಿಸುತ್ತಿದ್ದ. ಜೊತೆಗೆ ಎಣ್ಣೆ ಇದ್ದೇ ಇರುತ್ತಿತ್ತು. ಲಂಕೇಶ್ ಪತ್ರಿಕೆಯಲ್ಲಿ ಅವನು ಮಾಡುತ್ತಿದ್ದ ತನಿಖಾ ರಾಜಕೀಯ ವರದಿಗಳು ಚುನಾವಣೆಗಳಲ್ಲಿ ನಿರ್ಣಾಯಕ ಪಾತ್ರ ವಹಿಸಿ ಹಲವರ ಸೋಲಿಗೆ ಕಾರಣವಾಗಿದ್ದವು. ಈ ರಾಜಕೀಯದ ಸಹವಾಸವೆ ಬೇಡ ಎಂದು ಅನೇಕರು ಸನ್ಯಾಸತ್ವ ಸ್ವೀಕರಿಸಿದ್ದರು. ಇಡಿಯಾಗಿ ಅದು ಲಂಕೇಶ್ ಪತ್ರಿಕೆಯ ಶಕ್ತಿಯಾಗಿತ್ತು.

ಹಾಗೆ ಹೀಗೆ ಕಾಲ ಸುತ್ತಿ ಎಂ.ಎ. ಜಾನಪದ ಅಂತಿಮ ವರ್ಷದ ಪರೀಕ್ಷೆಗಳು ಬಂದಿದ್ದವು. ಓದಿನ ಜ್ವರ ಏರಿಸಿಕೊಂಡಿದ್ದೆ. ಐ.ಎ.ಎಸ್. ಬರೆದರೂ ಪಾಸಾಗಬಲ್ಲೆ ಎಂಬ ವಿಶ್ವಾಸ ನನಗಿಂತ ನನ್ನ ಸ್ನೇಹಿತರಿಗೇ ಇತ್ತು. ಎಂ.ಎ. ಜಾನಪದ ಮುಗಿದ ಮೇಲೆ ಪಿಎಚ್.ಡಿ ಮಾಡೋ ಎಂದರು ಅಶ್ವಥ್. `ನನಗೆ ಗೈಡ್ ಯಾರಾಗ್ತಾರೆ ಸಾರ್! ಇವನು ತೊಲಗಿದ್ರೆ ಸಾಕು ಅನ್ಕೊತಾ ಇದ್ದಾರೆ’ ಎಂದೆ. ಯು.ಜಿ.ಸಿ. ಎಕ್ಸಾಮ್ ಬರೆಯೊ! ಪಾಸಾಗೊ! ಇಂಡಿಯಾದ ಯಾವುದೆ ಯೂನಿವರ್ಸಿಟಿಗಾದರೂ ಹೋಗಿ ಪಿಎಚ್.ಡಿ ಮಾಡಬಹುದು’ ಎಂದರು. `ಹೌದಾ? ಅಂಗಿದೆಯಾ?’ ಕೆಲವೊಂದು ಅಗತ್ಯ ವಿಷಯಗಳಲ್ಲಿ ನಿನ್ನಂತಹ ಬುದ್ದಿವಂತರು ಬಹಳ ಇಗ್ನೋರೆಂಟಾಗಿರ್ತಿರಿ ಕಣಯ್ಯಾ… ಇನ್ನು ಒಂದು ವಾರ ಟೈಂ ಇದೇ; ಕ್ರಾಫರ್ದ್ ಹಾಲ್‌ನಲ್ಲಿ ಯುಜಿಸಿ ಸೆಲ್ ಇದೆ. ಅಲ್ಲಿ ನಾಳೆನೆ ಹೋಗಿ ಅರ್ಜಿ ಹಾಕು’ ಎಂದು ಆದೇಶಿಸಿದರು. ಮರುದಿನ ಅದೇ ಮೊದಲ ಕೆಲಸ ಎಂದು ಮಾಡಿದೆ. ಎರಡನೆ ವರ್ಷದ ಎಂ.ಎ. ರಿಜಲ್ಟ್ ಬರದೇ ಇದ್ದರೂ ಪ್ರವೇಶ ಪರೀಕ್ಷೆ ಬರೆಯಲು ಅವಕಾಶ ಇತ್ತು. ಒಂದೇ ಸಮನೆ ಓದಿದೆ. ಪರೀಕ್ಷೆ ಬರೆದೆ. ನಿರಾಳನಾದೆ. ಮರುವಾರವೆ ಯುಜಿಸಿ ಪರೀಕ್ಷೆ ಬಂತು. ಅದನ್ನೂ ನಿರಾಯಾಸವಾಗಿ ಬರೆದೆ. ಯುವರಾಜ ಕಾಲೇಜಿನಲ್ಲಿ ಪರೀಕ್ಷೆ ಇತ್ತು. ನನ್ನಂತೆಯೇ ಹಲವರು ಬರೆದಿದ್ದರು. ಕನ್ನಡ ವಿಭಾಗದವರೂ ಸಾಕಷ್ಟಿದ್ದರು. ಜಾನಪದವನ್ನು ಇಂಗ್ಲೀಷಿನಲ್ಲಿ ಬರೆಯಬೇಕಿತ್ತು. ಬಹಳ ಸರಳ ಪ್ರಶ್ನೆಗಳು. ಚಕಚಕನೆ ಬರೆದಿದ್ದೆ. ಹೊರ ಬಂದೆವು. ಎಲ್ಲರೂ ಸಪ್ಪೆ ಮೋರೆಯಲ್ಲಿದ್ದರು. ಆಗತಾನೆ ರಾಜಪ್ಪ ದಳವಾಯಿ ಪರಿಚಯವಾಗಿದ್ದ. ನನಗಿಂತ ಹಿರಿಯ. ಸಂಶೋಧನೆ ಮಾಡಲೆಂದೆ ಬಂದು ನನ್ನ ಜೊತೆ ಯುಜಿಸಿ ಬರೆದಿದ್ದ. ಎಲ್ಲರ ಎದಿರು ಹರ್ಷಚಿತ್ತನಾಗಿ ಜೋರಾಗಿ ಘೋಷಿಸಿದ್ದೆ. ನಾನೊಬ್ಬನೇ ಈ ಯುಜಿಸಿ ಪರೀಕ್ಷೆಯಲ್ಲಿ ಪಾಸಾಗುವುದು ಎಂದು ಅಬ್ಬರಿಸಿದ್ದೆ. ಜೇಬಲ್ಲಿ ಬೈಟು ಟೀ ಕುಡಿಯಲು ಕಾಸಿರಲಿಲ್ಲ. ಗೆಳೆಯರು ಹಂಗಿಸಿ ನಕ್ಕಿದ್ದರು. ಫೇಲಾಗುವ ಹತಾಶೆಯಲ್ಲಿ ಅವನಿಗೆ ತಲೆ ಕೆಟ್ಟಿದೆ ಎಂದರು. ಗೆಳೆಯರು ಚಹಾ ಕುಡಿಸಿದ್ದರು. ಏನೊ ಮಾರಾಯ ಆ ಪರಿ ಕಾನ್ಪಿಡೆನ್ಸ್ ತುಂಬಿದೆಯಲ್ಲೊ ನಿನ್ನೆದೆಯಲ್ಲೀ’ ಎಂದು ದಳವಾಯಿ ಬೆನ್ನು ತಟ್ಟಿದ. ಆ ವೇಳೆಗಾಗಲೆ ನನ್ನ ವಿಚಾರ ವೈಖರಿಗೆ ಮೆಚ್ಚಿ ಆತ ತನ್ನ ಕಥಾಸಂಕಲನಕ್ಕೆ ಬೆನ್ನುಡಿ ಬರೆಸಿಕೊಂಡಿದ್ದ.

ಬರಹದ ವಿಪರೀತ ಹುರುಪಿನ ಮನುಷ್ಯನಾಗಿದ್ದ ದಳವಾಯಿ ಕನ್ನಡ ಸಾಹಿತ್ಯದ ಎಲ್ಲ ಕಾಲಮಾನದ ಮುಖ್ಯ ಕೃತಿಗಳನ್ನು ಚೆನ್ನಾಗಿ ಓದಿಕೊಂಡಿದ್ದ. ಅವನಿಗೂ ನನ್ನ ಮೇಲೆ ಏನೊ ವಿಶೇಷ ಪ್ರೀತಿಯಿತ್ತು. ಹಳೆಗೆಳೆಯರು ದೂರ ಹೋದಂತೆಲ್ಲ ಹೊಸ ಮಿತ್ರರು ಆಪ್ತವಾಗಿದ್ದರು. ನಾನು ಹೋರಾಟಗಾರ ಆಗಿದ್ದೆ ಎಂಬುದು ಒಳಗಿತ್ತೆ ಹೊರತು ಹೊರಗೆ ಮುಚ್ಚಿಹೋಗಿತ್ತು. ಮೆಲ್ಲಗೆ ಹುಡುಗಿಯರು ಹಿಂಬಾಲಿಸಿ ನಗಾಡಿದ್ದರು. ನನ್ನ ಕೀಳರಿಮೆ ಕಡಿಮೆ ಆಗುತ್ತಿತ್ತು. ಒಬ್ಬಳು ನಕ್ಕಳು ಎಂದರೆ ಒಂದು ದಿನದ ಊಟವಿಲ್ಲದೆ ಅವಳ ಗುಂಗಿನಲ್ಲಿರಬಹುದು ಎನಿಸಿತ್ತು. ದಳವಾಯಿ ನನ್ನ ಮಾತಿನ ಕಥೆಗಳಿಗೆ ನಕ್ಕು ಉರುಳಾಡುತಿದ್ದ. ಇದೇ ಕಣೊ ಮಾರಾಯ ಕಥೆ ಎಂದರೇ; ಬರೆಯೊ ಎಂದಿದ್ದ. ಅವೆಲ್ಲ ಕಾಂಜಿಪೀಂಜಿ ಎಂದಿದ್ದೆ. ಪರೀಕ್ಷೆ ಮುಗಿದು ರಿಸಲ್ಟ್‌ಗೆ ಕಾಯುತಿದ್ದೆ.

ಯಾರೂ ನಂಬಿರಲಿಲ್ಲ. ಹಾಗೆ ಪಾಸಾಗಿದ್ದೆ. ಇಡೀ ಮಾನವಿಕ ಅಧ್ಯಯನಗಳು ಎಷ್ಟು ವಿಭಾಗಗಳು ಇದ್ದವೊ; ಅಲ್ಲಿನ ಯಾರೊಬ್ಬರು ನನ್ನಷ್ಟು ಅಂಕ ಪಡೆದು ಪಾಸಾಗಿರಲಿಲ್ಲ. ನಾನೆ ಮೊದಲಿಗನಾಗಿ ಚಿನ್ನದ ಪದಕ ಪಡೆದಿದ್ದೆ. ಅಹಾ! ಎಂತಹ ಅದೃಷ್ಟ; ಯುಜಿಸಿಯಲ್ಲೂ ಜನರಲ್ ಮೆರಿಟಲ್ಲಿ ಪಾಸಾಗಿದ್ದೆ. ಫೆಲೋಷಿಪ್‌ಗೆ ಪಾಸಾಗಿದ್ದಂತೆಯ ಲೆಕ್ಚರ್‍ಶಿಪ್‌ಗೂ ಅರ್ಹತೆ ಪಡೆದಿದ್ದೆ. ಎರಡೂ ಹಂತಗಳಲ್ಲಿ ಪಾಸಾಗುವವರು ಅತಿ ವಿರಳರಲ್ಲಿ ಅತಿ ವಿರಳ ಎಂದು ಜೀಶಂಪ ಅವರು ಹೇಳಿದಾಗಲೆ ನನಗೆ ಎರಡು ಕೊಂಬು ಬಂದಿದ್ದವು. ಲೆಕ್ಚರ್‍ಶಿಪ್ ವರ್ಗದಲ್ಲು ಪಾಸಾದವರಿಗೆ ಆ ಕೂಡಲೆ ಆತ ಎಲ್ಲಿ ಪಿಎಚ್.ಡಿ ಮಾಡುವನೊ ಅದೇ ವಿಭಾಗದಲ್ಲಿ ಅಧ್ಯಾಪಕನನ್ನಾಗಿ ಪರಿಗಣಿಸಿ ಪಾಠಮಾಡಲು ತರಗತಿಗಳ ನಿಗಧಿ ಮಾಡಿಕೊಡಬೇಕಿತ್ತು. ನನ್ನ ಜೂನಿಯರ್‍ಗಳೆ ನನಗೆ ವಿದ್ಯಾರ್ಥಿಗಳಾಗಬೇಕಾಯಿತು. ಕೊಠಡಿಯಲ್ಲಿ ಅವರ ಹಾಜರಾತಿ ಹಾಕಲು ಹೆಸರು ಕರೆಯುತ್ತಿದ್ದೆ ತಮಾಷೆಗೆ. ಹೊರಗೆ ಬಂದು; ಅಣ್ಣಾ ನಮ್ಮ ಹೆಸರ ಕರಿಬೇಡ; ಒಂಥರಾ ನಾಚಿಕೆ ಆಗುತ್ತೆ ಅನ್ನುತ್ತಿದ್ದರು.

ಒಂದೇ ತಿಂಗಳಲ್ಲಿ ನಾನು ಆಳ ಆಳವಾಗಿ ಪಾಠಗಳಲ್ಲಿ ಮುಳುಗಿ; ಇಂಗ್ಲೀಷ್ ಕನ್ನಡ ಎರಡೂ ಮಾಧ್ಯಮಗಳಲ್ಲಿ ಉಪನ್ಯಾಸ ನೀಡುತ್ತಿದ್ದೆ. ನಾನು ಆ ಸ್ಥಿತಿಗೆ ಬಂದದ್ದು ಆ ಸಂಸ್ಥೆಯಲ್ಲಿ ಯಾರಿಗೂ ಇಷ್ಟ ಇರಲಿಲ್ಲ. ಡಿಪ್ಲಮೊ ಇನ್ ಫೋಕ್‌ಲೋರ್ ಎಂಬ ಒಂದು ವರ್ಷದ ಕೋರ್ಸ್ ಇತ್ತು. ವಿದೇಶಿ ವಿದ್ಯಾರ್ಥಿಗಳು ಆ ಕ್ಲಾಸಿಗೆ ಬರುತ್ತಿದ್ದರು. ಬೆಳಿಗ್ಗೆ ಎಂಟು ಗಂಟೆಯಿಂದ ಹತ್ತು ಗಂಟೆ ತನಕ ಪಾಠ ಮಾಡಬೇಕಿತ್ತು. ಒಬ್ಬಳು ಕೀನ್ಯಾದವಳು, ಇನ್ನೊಬ್ಬಳು ಸೈಪ್ರಸ್‌ನವಳು; ಮತ್ತೊಬ್ಬ ಲೆಬನಾನಿನವ. ಇನ್ನಿಬ್ಬರು ಕನ್ನಡದವರು. ಇಂಗ್ಲೀಷಿನಲ್ಲೆ ಜಾನಪದದ ಬಗ್ಗೆ ಸತತ ಎರಡು ಗಂಟೆ ಇಂಗ್ಲೀಷಿನಲ್ಲಿ ಮಾತಾಡುವುದು ಕಠಿಣವಾಗಿತ್ತು. ಹೆಚ್ಚು ಓದಿದ್ದರಿಂದ ಕಷ್ಟ ಆಗುತ್ತಿರಲಿಲ್ಲ. ಸೃಜನಶೀಲ ಲೇಖಕ ಒಬ್ಬ ಹೇಗೆ ತನ್ನ ದೇಶದ ಜನಪದ ಸಂಸ್ಕೃತಿಯನ್ನು ಪರಿಚಯಿಸಬೇಕೋ ಹಾಗೇ ಮಾಡುತ್ತಿದ್ದೆ. ಈ.ಬಿ. ಟೇಲರನ `ಪ್ರಿಮಿಟೀವ್ ಕಲ್ಚರ್’ ಎಂಬ ಪುಸ್ತಕ ನನ್ನ ಸಹಾಯಕ್ಕೆ ಬಂದಿತ್ತು. ಬಹಳ ಕಾಲದ ನನ್ನ ಮೌನವನ್ನೆಲ್ಲ ನಾನು ಪ್ರತಿಧ್ವನಿಯಾಗಿಸಿ ಮೊಳಗಿಸಬೇಕಿತ್ತು.

ಜಾನಪದ ಎಂದರೆ ನೆನ್ನೆ ಮೊನ್ನೆಗಳ ಗತಕಾಲದ ಮೌನ; ಹಾಗೆಯೇ ಅದೇ ಹೊತ್ತಿಗೆ ಅದು ವರ್ತಮಾನ ಕಾಲದ ಆಸ್ಪೋಟಕ ದನಿ’ ಎಂದು ಸಿ.ಎಫ್. ಪಾಟರ್ ಎಂಬ ಮಾರ್ಕ್ಸ್‌ವಾದಿ ಒಲವಿನ ಚಿಂತಕ ಹೇಳಿದ್ದರು. ಅವರ ಆ ಮಾತು ದಮನಿತನಾದ ನನಗೆ ಆಳವಾಗಿ ಕೇಳಿಸಿತ್ತು. ಮೌನದ ಕಣಿವೆಗಳಿಂದ ಬರುವುದು ಬೇರೆ! ಅದೊಂದು ಸೌಂದರ್ಯ. ಆದರೆ ಬರ್ಬರ ಊರುಕೇರಿಗಳಲ್ಲಿ ಸದಾ ಸತ್ತು ಹುಟ್ಟಿ ಹಾಡುಕಟ್ಟಿ ಬೆಳೆಸಿ ಬಂದವರ ಪಾತಾಳ ಮೌನದ ಅನುಭವವೇ ಬೇರೆ. ಆ ದಟ್ಟ ಮೂಕ ಮಾತುಗಳನ್ನೆಲ್ಲ ವರ್ತಮಾನದಲ್ಲಿ ಆಸ್ಫೋಟಿಸಿ ಪ್ರತಿದ್ವನಿಸಬೇಕು ಎಂಬ ಒತ್ತಡದಿಂದಾಗಿಯೆ ನಾನು ಪಾಠ ಮಾಡುವ ರೀತಿಯೆ ಬೇರೆ ಆಗಿಬಿಟ್ಟಿತು. ಮೂಕಲೋಕದ ಪ್ರತಿನಿಧಿಯಾಗಿ ಜಾನಪದವನ್ನು ಅರ್ಥೈಸಲು ಮುಂದಾದೆ.

ನನಗೆ ಒಂದು ಬೊಗಸೆ ನೀರು ಸಾಕಾಗಿತ್ತು. ಪಶ್ಚಿಮ ಜಗತ್ತು ಹೇಗೆ ಆಧುನಿಕೋತ್ತರ ಜ್ಞಾನಶಾಖೆಗಳನ್ನು ವಿಂಗಡಿಸಿಕೊಂಡು ಆಳವಾಗಿ ಮುಳುಗಿ ಅಧ್ಯಯನ ಮಾಡುತ್ತದೆ ಎಂಬುದೇ ಮುಖ್ಯವಾಗಿತ್ತು. ಬೂಸಾ ವಿದ್ವತ್ತನ್ನು ಕಂಡರೆ ಸಿಡಿಸಿಡಿಯಾಗುತ್ತಿದ್ದೆ. ಮೆಲ್ಲಗೆ ಒಳಗೊಳಗೆ ಜಾತಿವಾದಿಗಳು ಹೆಡೆ ಬಿಚ್ಚಿ ಬುಸುಗುಟ್ಟುತ್ತಿದ್ದರು. ಬಹಳ ನಿರ್ಲಕ್ಷ್ಯದಿಂದ ಅವನ್ನೆಲ್ಲ `ತಣ್ಣಿ ಪಾಂಬು’ ಎಂದು ದಾಟಿಕೊಂಡು ಹೋಗುತ್ತಿದ್ದೆ. ಆಳದಲ್ಲಿ ಯಾರೊ ತಿವಿದಂತಾಗುತ್ತಿತ್ತು. ಅಹಂಕಾರದ ತುತ್ತ ತುದಿಯಲ್ಲಿದ್ದಾನೆ… `ನೋಡ್ತಾ ಇರೀ… ಎಂಗೆ ಇವ್ನ ಬೀಳಿಸ್ತೀವಿ’ ಎಂದು ವಿಚಾರವಾದಿ ಬೋರ್ಡು ಹಾಕಿಕೊಂಡಿದ್ದ ತಜ್ಞನೊಬ್ಬ ಎಚ್ಚರಿಸಿದ್ದ. `ಅರೇ ಹೋಗಯ್ಯಾ… ಕೊಕ್ಕರೆಗೆ ಒಂದೂರೊ ಒಂದು ಕೆರೆಯೊ’ ಎಂದು ಉತ್ತರ ರವಾನಿಸಿದ್ದೆ. ಅವನಿಗೆ ಒಮ್ಮೆ ಒಂದು ಪುಸ್ತಕ ಕೊಟ್ಟಿದ್ದೆ. Insect Folklore ಎಂಬ ಆ ಪುಸ್ತಕವ ಅನುವಾದಿಸಬೇಕು ಎಂಬ ಆಸೆ ಇತ್ತು. ಕೀಟಜಾನಪದ ಎಂದು ಕರೆದಿದ್ದೆ. ಲೂಸಿಕ್ಲಾಸೆನ್ ಎಂಬ ಲೇಖಕಿ ಬರೆದಿದ್ದ ಕೃತಿ. ನಮ್ಮ ಸುತ್ತಣ ಹುಳು ಹುಪ್ಪಟ್ಟೆ ಕೀಟಗಳ ಬಗ್ಗೆ ಪ್ರಾಚೀನರು ಯಾವ ಬಗೆಯ ಕಥನ ಕಟ್ಟಿದ್ದಾರೆ ಎಂಬ ವಿವರಗಳಿದ್ದ ಪುಸ್ತಕ. ಆ ಪುಸ್ತಕವ ಆ ತಜ್ಞ ಮೇದು `ಕೀಟ ಜಾನಪದ’ ಕೃತಿಯನ್ನೆ ಮಾಯ ಮಾಡಿದ್ದ. ಒಂದು ದಿನ ಸೆಮಿನಾರ್ ತರಗತಿಯಲ್ಲಿ `ಕೂರೆಹೇನು ನೊಣ ಜಾನಪದ’ ಎಂದು ಉಪನ್ಯಾಸ ಕೊಟ್ಟಿದ್ದರು. ಅವತ್ತು ನಕ್ಕು ನಕ್ಕು ನನ್ನ ಹೊಟ್ಟೆ ನೋವಾಗಿತ್ತು. ಭಯಂಕರ ಕೊರೆತಜ್ಞನಾಗಿ ಕಂಡಿದ್ದರು. ಅವರು ನನ್ನ ಮೇಲೆ ಗುರಿ ಇಟ್ಟಿದ್ದರು. ಹೊಡ್ಕಂಡೋದ್ರೆ ಹೊಡ್ಕಂಡು ಹೋಗ್ಲಿ ಬಿಡೂ… ಸಾಧಿಸ್ಬೇಕಾದ್ದು ಏನೂ ಇಲ್ಲ ಎಂದು ಉಪೇಕ್ಷೆ ಮಾಡಿದ್ದೆ. ನಗುನಗುತ್ತಲೇ ಜಾತ್ಯಾತೀತವಾಗಿ ಚಾಕುವಿನಿಂದ ಗೀರೆಳೆದು ಮಾತಿನಲ್ಲೆ ಮಾನವೀಯತೆಯ ಮೆರೆದು; ಹೇಗಿದೆ ನನ್ನ ಇರಿತಾ… ಉರೀತಿದೆಯಾ… ಸಿಹಿಯಾಗಿದೆಯಾ… ಹಿತವಾಗಿರು ಎಂದು ನನ್ನ ನೋಡಿ ನಗುತ್ತಿದ್ದರು.
ಪರಮಾನಂದದಲ್ಲಿ ಲೀನವಾಗಿದ್ದೇನೆ ಎನ್ನುತ್ತಿದ್ದೆ. ನನ್ನ ನೋವನ್ನು ಗಾಯವನ್ನು ಅಪಮಾನವನ್ನು ಯಾರೊಂದಿಗೂ ಹೇಳಿಕೊಳ್ಳುತ್ತಿರಲಿಲ್ಲ. ಹಿಂತಿರುಗಿ ಹೊಡೆಯಲು ಕಷ್ಟವಾಗುತ್ತಿತ್ತು. ಒಳಗೆ ಬರಲೇ ಎಂದು ಹಿಂಸೆ ಮನದ ಬಾಗಿಲ ಬಡಿಯುತಿತ್ತು. ಅಯ್ಯೋ ಅದ್ಯಾಕಪ್ಪ ನಮಗೇ… ಬಡವಾ! ಮಡಗಿದಂಗಿರೊ ಅಂತಾರಲ್ಲಾ… ನಾನ್ಯಾಕೆ ಹೊಡೆಯಲಿ? ಹೊಡೆದುರುಳಿಸೋನು ಬೀಳ್ಸೇ ಬೀಳಿಸ್ತಾನೆ… ಕಾಲಾ ಮುಟ್ಟಾ ಏಟು ತಿಂದುಕೊಂಡೇ ಬಂದವರು ನಾವಲ್ಲವೇ… ವಾಪಸ್ಸು ಕೈ ಎತ್ತಿಲ್ಲ! ಉಗಿಸಿಕೊಂಡು ಒರೆಸಿಕೊಂಡು ತಲೆತಗ್ಗಿಸಿಕೊಂಡು ನಮ್ಮ ಪೂರ್ವಿಕರು ಸುಮ್ಮನೇ ಇದ್ದರಲ್ಲಾ… ಯಾಕೆ ಹಿಂಸೆ ಕೊಡುವೆ… ಹೊಡೆದೋಡಿಸಲು ಬೇಟೆ ಆಡುವೆ ಎಂದು ಇವತ್ತಿಗೂ ಯಾರನ್ನೂ ಪ್ರಶ್ನಿಸುವಂತಿಲ್ಲ. ಇದನ್ನೆಲ್ಲ ಎಷ್ಟೊಂದು ಸಲ ಯೋಚಿಸಿರುವೆ, ಬರೆದಿರುವೆ… ಪಾಠ ಮಾಡಿರುವೆ… ಯಾರಿಗೂ ತಟ್ಟಲೇ ಇಲ್ಲವೇನೊ… ಒಳಗುದಿಯನ್ನೆಲ್ಲ ಯಾರಿಗೆ ಹೇಳಲಿ ಹೇಗೆ ದುಃಖಿಸಲಿ ಎಂದು ಕಂಗಾಲಾಗುತಿದ್ದೆ.

ಆಗ ನನಗೆ ಒಂದು ಸುಂದರ ಹವ್ಯಾಸ ಇತ್ತು. ಈಗಲೂ ಅದನ್ನು ಬಿಟ್ಟಿಲ್ಲ… ಹಳೆಯ ಹಿಂದಿ ಸಿನಿಮಾ ಹಾಡುಗಳನ್ನು ಕೇಳುತ್ತಲೇ ಇರುವುದು… ಆ ಮುಖೇಶ್, ರಫೀ, ಸೈಗಲ್, ಕಿಶೋರ್ ಕುಮಾರ್, ಲತಾ ಅವರ ಕೊನೆ ಮೊದಲಿಲ್ಲದ ಹಾಡುಗಳ ನನ್ನ ಪೂರ್ವಿಕರಿಗೆಲ್ಲ ಕೇಳಿಸಬೇಕು ಎಂಬಂತೆ ಸುಪ್ತ ಪ್ರಜ್ಞೆಯಲ್ಲಿ ಮಲಗಿದ್ದ ಅವರನ್ನೆಲ್ಲ ಎಬ್ಬಿಸಿ ಈ ಹಾಡನ್ನು ಕೇಳಿ… ಈ ಅನಂತ ಹಿಂದೂಸ್ತಾನಿ ಸಂಗೀತದ ಸಮುದ್ರದ ಅಲೆಯ ರಾಗಗಳ ಆಲಿಸಿ ಎಂದು ಈ ಲೋಕವನ್ನೇ ಮರೆಯುತ್ತಿದ್ದೆ. ನನ್ನ ಸಂಕಟದ ಕಡುದುಃಖದ ಅಳಲನ್ನು ಈ ಸಂಗೀತಗಾರರು ಅದೆಷ್ಟು ಸಲ ಸಂತೈಸಿ ಕಂಬನಿಯ ಒರೆಸಿದ್ದಾರೊ ಏನೊ; ಲೆಕ್ಕ ಹೇಳಲಾಗದು… ಆ ಕಿಶೋರಿ ಅಮೋನ್ಕರ್… ನನ್ನ ತಾಯಿ ಈಕೆ ಎಂದೇ ನಂಬಿಬಿಟ್ಟಿದ್ದೆ. ಅವಳ ತರತರಂಗದ ತೀವ್ರ ರಾಗಗಳೆಲ್ಲ ನನ್ನ ತಾಯಿಯ ಅಳಲೇ ಆಗಿತ್ತೇನೊ ಎನಿಸಿಬಿಟ್ಟಿತ್ತು. ಹಾಗಾಗಿ ನನ್ನ ಸುತ್ತಣ ಬೇಟೆಯ ಹೊತ್ತಲ್ಲಿ ತಪ್ಪಿಸಿಕೊಳ್ಳಲು ಅಮೋನ್ಕರ್‌ಗಳ ಹಾಡುಗಳನ್ನೆಲ್ಲ ಎದೆಗೆ ತುಂಬಿಕೊಂಡು ಚೈತನ್ಯಶಾಲಿ ಆಗುತ್ತಿದ್ದೆ. ಭಾರತದ ಎಲ್ಲ ಉನ್ನತ ಹಿಂದೂಸ್ತಾನಿ ಸಂಗೀತಗಾರರ ಕ್ಯಾಸೆಟ್‌ಗಳು ಆಗ ನನ್ನ ಬಳಿ ಇದ್ದವು. ಹೇಯ್ ಇವೆಲ್ಲ ಯಾವ ಲಡಾಸು ಸಂಗೀತ… ನಮಗೆ ಯಾಕೆ ಬೇಕು ಎಂದು ಪಿಚ್ಚಳ್ಳಿ ಶ್ರೀನಿವಾಸ ಕಿಕ್ಕೇರಿ ಹಳಿದು; ತನ್ನ ತತ್ವಪದಗಳ ಗಾನವ ಎಳೆದೆಳೆದು ಬಿಡುತ್ತಿದ್ದ. ಅವನ್ನೂ ಕೂಡ ಮೈದುಂಬುತಿದ್ದೆ. ಲೈಟಾಗಿ ಎಣ್ಣೆ ಸೇವಿಸುತ್ತ ದುಃಖ ಗೀತೆಗಳನ್ನು ಕೇಳುತ್ತಿದ್ದಂತೆಯೇ ನಿದ್ದೆ ಏರಿ ಬರುತ್ತಿತ್ತು. ಚಿಂತೆ ಮರೆತು ಹೊಸ ಮನುಷ್ಯನಾಗಿ ಅದೇ ಗೇಲಿ, ವಿಡಂಬನೆ ಹಾಸ್ಯಕ್ಕೆ ಮರುಳುತ್ತಿದ್ದೆ. ನನ್ನ ತಬ್ಬಲಿತನಕ್ಕೆ ಅವೇ ಆಪ್ತವಾಗಿ ಬಿಟ್ಟಿದ್ದವು.

ಎಷ್ಟೊಂದು ಸಂಗೀತ ಆಲಿಸುವುದು… ಓದುವುದು… ಚಿಂತಿಸಿ ಟಿಪ್ಪಣಿ ಬರೆದಿಡುವುದು… ಇಷ್ಟೇ ಆಯಿತಲ್ಲಾ; ಪಿಎಚ್‌ಡಿಯನ್ನಾದರು ಅದ್ಭುತವಾಗಿ ಬರೆಯಬೇಕು ಎನಿಸಿತ್ತಾದರೂ ಎಲ್ಲಿಂದ ಆರಂಭಿಸುವುದು ಎಂದು ಹೊಳೆಯುತ್ತಿರಲಿಲ್ಲ. ಅದೊಂದು ಮಧ್ಯಾಹ್ನದ ನಾಲ್ಕು ಗಂಟೆಯ ಸಮಯ. ತುಂಬ ಅಳು ಬರುತ್ತಿತ್ತು. ಕಾರಣವೇ ಹೊಳೆಯುತ್ತಿರಲಿಲ್ಲ. ಯಾರೂ ಇರಲಿಲ್ಲ. ಬಿಳಿ ಹಾಳೆ ಮೇಲೆ `ಒಂದು ಹಳೆಯ ಚಡ್ಡಿ’ ಎಂಬ ಶೀರ್ಷಿಕೆ ಬರೆದೆ. ಕಥೆ ಬರೆಯಬೇಕು ಎಂದುಕೊಂಡಿರಲಿಲ್ಲ. ಹಳ್ಳಿಯ ಬಾಲ್ಯದ ಒಂದು ನೆನಪಿಗೆ ಕೊಟ್ಟಿದ್ದ ಒಂದು ಹೆಸರದು. ಕಣ್ಣು ಮುಚ್ಚಿದೆ. ತಲೆ ತುಂಬ ಅದೇ ತಂಗಿ ಶಾಂತಿಯ ಮದುವೆಯ ಚಿತ್ರಗಳು ಮುತ್ತಿಕೊಂಡವು. ಸಂಕಟ ಮಿಡಿಯಿತು. ಪೆನ್ನನ್ನು ಹಾಗೇ ಹಿಡಿದಿದ್ದೆ. `ಇಲ್ಲಾ; ಅವನು ಚಡ್ಡಿಹಾಕಲೇ ಬೇಕು… ಮದುವೆ ಮನೇಲಿ ತಿಕಾ ಬಿಟ್ಕಂದು ಒಡಾಡುದ್ರೆ ಜನ ಏನಂದಾರು’… ಈ ವಾಕ್ಯ ಅನಿಯಂತ್ರಿವಾಗಿ ಬಂದು; ಒಂದು ವಾಕ್ಯ ಇನ್ನೊಂದು ವಾಕ್ಯವ ಬಿಡುವಿಲ್ಲದೆ ಬರೆಸಿಕೊಂಡಿತು. ಕಥೆ ಮುಗಿದಿತ್ತು. ನನ್ನ ಕಣ್ಣಲ್ಲಿ ದುಃಖ ಇನ್ನೂ ತಗ್ಗಿರಲಿಲ್ಲ. ಯಾರೊ ಬಾಗಿಲು ಬಡಿದರು. ತೆಗೆದೆ. ಬಂಜಗೆರೆ, ದಳವಾಯಿ, ನಂಜುಂಡೇಗೌಡ ಮೂವರೂ ನನ್ನನ್ನು ಕಲ್ಪವಲ್ಲಿಗೆ ಚಹಾ ಕುಡಿಸಲು ಕರೆದೊಯ್ಯಲು ಬಂದಿದ್ದರು. ದಳವಾಯಿ ಗಮನಿಸಿದ. `ಇದ್ಯಾರ್ದೋ ಹಳೇ ಚಡ್ಡೀ’ ಎಂದು ಸ್ಕ್ರಿಪ್ಟ್ ಎತ್ತಿಕೊಂಡು ಜೋರಾಗಿ ಓದತೊಡಗಿದ. ತಟ್ಟನೆ ಸೆಳೆದಿತ್ತು ಕಥೆ ಗೆಳೆಯರನ್ನು. ತಮಾಷೆಯಿಂದ ನಗುನಗುತ್ತ ಓದುತ್ತಿದ್ದ ದಳವಾಯಿ; ಕಥೆ ಮುಗಿಯುತ್ತಿದೆ ಎನ್ನುವಷ್ಟರಲ್ಲಿ ಓದಲಾಗದೆ ಗದ್ಗದಿತನಾದ. ಅದನ್ನವನು ಕೊಂಡೊಯ್ದು ಪ್ರಜಾವಾಣಿಯ ದೀಪಾವಳಿ ಕಥಾ ಸ್ಪರ್ಧೆಗೆ ನನಗೆ ಹೇಳದೇ ಕಳಿಸಿದ್ದ. ಅಂತಹ ಒಂದು ಸ್ಪರ್ಧೆ ಇದೆ; ನಾನು ಬರೆದು ಕಳಿಸಬಹುದು ಎಂಬ ಕಲ್ಪನೆಯೂ ನನಗೆ ಇರಲಿಲ್ಲ. ಬಂಜಗೆರೆ ಅಭಿಮಾನದಿಂದ ನನ್ನ ಬೆನ್ನು ತಟ್ಟಿದ್ದ. ಆ ಕಥೆಗೆ ಮೊದಲ ಬಹುಮಾನ ಬಂದಿತ್ತು. ರಾತ್ರೋರಾತ್ರಿ ನಾನು ಕಥೆಗಾರನಾಗಿ ಬಿಟ್ಟಿದ್ದೆ. `ನೀನು ಕಥೆ ಬರೀತಿಯಾ… ನಿನಗೆ ಎಂಗೆ ಸಾಧ್ಯ ಆಯ್ತು’ ಎಂದು ಎಲ್ಲರೂ ಕೇಳಿ ಬೆರಗಾಗುತ್ತಿದ್ದರು. ಹೌದಲ್ಲವೇ; ನನಗೂ ಅದೇ ಪ್ರಶ್ನೆ ಕಾಡಿತ್ತು. ಇದೇ ಒಳ್ಳೆಯ ಕಥೆ ಎನ್ನುವುದಾದರೆ ನಾನು ಇನ್ನೂ ಒಂದು ನೂರು ಚೆಂದದ ಕತೆ ಬರೆಯುವೆ ಎಂದು ಬೀಗಿದ್ದೆ.

ದಳವಾಯಿ ಆಗ ಅಜ್ಜಂಪುರದಲ್ಲಿ ತಾತ್ಕಾಲಿಕ ಅಧ್ಯಾಪಕನಾಗಿದ್ದ. ಬಂದಿದ್ದ. ಇಬ್ಬರೂ ದೊಡ್ಡ ಯುದ್ಧ ಗೆದ್ದಂತೆ ಸಡಗರಿಸಿ ಕುಡಿದು ತೂರಾಡಿದೆವು. ಅಧ್ಯಯನ ಸಂಸ್ಥೆಯಲ್ಲಿ ಮತ್ತೆ ಶತ್ರುಗಳು ಹೆಚ್ಚಾದರು. ದಮಕಿ ಹಾಕುತ್ತಿದ್ದ ದಾಂಡಿಗರು ನನ್ನ ಕಥೆಗೆ ಕರಗಿದ್ದರೆ; `ಜಾತ್ಯತೀತ’ ಪ್ರಾಧ್ಯಾಪಕರು ಕಡುಕೋಪಗೊಂಡಿದ್ದರು. ಅಲ್ಲಿ ನನ್ನ ಹಳ್ಳಿಯಲ್ಲಿ ನಮ್ಮ ಮನೆತನದ ಮಾನವ ಹರಾಜಾಕಿದ್ದಾನೆ ಎಂದು ನನ್ನ ಮೇಲೆಯೆ ಬಹಿಷ್ಕಾರ ಹಾಕಿದ್ದರು. ಪಂಚಾಯ್ತಿಗೆ ಬಂದು ದಂಡ ಕಟ್ಟಬೇಕು ಎಂದು ಫರ್ಮಾನು ಹೊರಡಿಸಿದ್ದರು. ಅನಾಥವಾಗಿ ಚಂಡಿ ಹಿಡಿದಿದ್ದ ನನ್ನ ಮನಸ್ಸು ಆಗಲೆ ತೀರ್ಮಾನಿಸಿತು. ನಾನು ಬಣ್ಣಕಟ್ಟಿ ಏನನ್ನೂ ಬರೆಯಬೇಕಾದ್ದಿಲ್ಲ. ನನ್ನ ನರಕ ಹೇಗಿದೆಯೊ ಹಾಗೇ ಬರೆಯಬೇಕು ಎಂದು ಹಠಗೊಂಡೆ.

ಮೂರು ದಿನದ ಕಥೆಯ ಸಂಭ್ರಮ ಮರೆತು ಹೋಗಿತ್ತು. ಈ ಸಂಸ್ಥೆಯಲ್ಲಿ ಇವನು ಬೇರು ಬಿಡದಂತೆ ತಡೆಯಬೇಕು ಎಂದು ಮಹರಾಜ ಕಾಲೇಜಿಗೆ ಎತ್ತೆಸೆದರು. ಬಿ.ಎ. ವಿದ್ಯಾರ್ಥಿಗಳಿಗೆ ಜಾನಪದ ಪಾಠ ಮಾಡಬೇಕಿತ್ತು. ಅದು ನನ್ನ ಪುಣ್ಯದ ಕೆಲಸ. ರಾಮದಾಸರು ನೆನಪಾದರು. ಮೊದಲಿಗೆ ಹೋಗಿ ಅವರಿಗೆ ನಮಸ್ಕರಿಸಿದೆ. ಕೇಳಿ ಆನಂದಗೊಂಡರು. ಅವರು ಕೊಟ್ಟಿದ್ದ ಶುಲ್ಕದ ಹಣ ಆ ಕ್ಷಣ ನೆನಪಾಯಿತು. ಪಾಠದಲ್ಲಿ ಮುಳುಗುವುದು ಎಂದರೆ ಗತಪೂರ್ವಿಕರ ಮೌನಕ್ಕೆ ದುಮ್ಮಿಕ್ಕಿ ಎದ್ದು ಅಲೆ ಅಲೆಯಾಗಿ ಜೀವನದ ಅನುಭವಗಳನ್ನೆ ಪಾಠ ಮಾಡುವುದು ನನ್ನ ಕ್ರಮವಾಗಿತ್ತು. ತಂತಾನೆ ಓದಿನಿಂದ ಪಡೆದಿದ್ದೆಲ್ಲವನ್ನು ಕಲಾತ್ಮಕವಾಗಿ ಜೋಡಣೆ ಮಾಡುತ್ತಿದ್ದೆ. ನನ್ನ ಪಾಠಕ್ರಮವ ಮರೆಯಲ್ಲಿ ಆಲಿಸಿ ಮೆಚ್ಚಿದ್ದರು ರಾಮದಾಸರು. ಅವತ್ತಿನ ಆ ಸಂತೋಷಕ್ಕೆ ಬೇರೆ ಯಾವುದೂ ಸಮನಿಲ್ಲ. ಒಂದು ಶತಮಾನ ಕಂಡಿದ್ದ ಕಾಲೇಜು ಅದು. ನಿಜಕ್ಕೂ ಆಗ ಅದು ನನ್ನ ಪಾಲಿನ ದೇಗುಲವಾಗಿತ್ತು. ಬಿ.ಎಂ.ಶ್ರೀ., ಕುವೆಂಪು ಅಂತಹ ಮಹಾತ್ಮರು ಬೋಧಿಸಿದ ತರಗತಿಗಳಲ್ಲಿ ನಿಂತು ನಾನು ಕೂಡ ಏನೊ ಒಂದಿಷ್ಟು ಹೇಳುವುದು ಇದೆ ಎಂಬ ವಿಶ್ವಾಸದಲ್ಲಿ ಬಾಯಿ ಬಿಡುವುದರ ದಿವ್ಯತೆಯೇ ಬೇರೆ. ಅದನ್ನು ಅನುಭವಿಸಿಯೇ ಪಡೆಯಬೇಕು! ತಕ್ಷಣ ಅಲ್ಲಿ ಗಮನ ಸೆಳೆದಿದ್ದೆ.

ನಾಗಣ್ಣ ಎಸ್. ಎಂಬ ಇಂಗ್ಲೀಷ್ ಪ್ರಾಧ್ಯಾಪಕರು ಪರಿಚಯವಾಗಿದ್ದರು. ಅಂತಃಕರಣದ ವ್ಯಕ್ತಿ. ಬೆಂಬಲಕ್ಕಿದ್ದರು. ಮತ್ತೆ ಅಪಪ್ರಚಾರದ ಉಡುಗೊರೆಗಳು ಸಾಲಾಗಿ ಬಂದವು. ಈತ ನಕ್ಸಲ್ ವಿಚಾರಗಳ ಬಿತ್ತುತ್ತಿದ್ದಾನೆ. ಹಳ್ಳಿಹುಡುಗರ ದಾರಿ ತಪ್ಪಿಸುತ್ತಿದ್ದಾನೆ… ಇವನಿಗೆ ಇಂಗ್ಲೀಷ್ ಬರುವುದಿಲ್ಲ. ಇಂತವನಿಂದ ಕಲಿಯುವ ವಿದೇಶಿ ವಿದ್ಯಾರ್ಥಿಗಳು ನೊಂದು ಪತ್ರ ಬರೆದಿದ್ದಾರೆ ಎಂಬ ಪುಕಾರುಗಳ ಹಬ್ಬಿಸಿದ್ದರು. ತಕ್ಷಣ ಜೀಶಂಪ ಕರೆಸಿ ವಿಚಾರಿಸಿದರು. `ಹಾಗೆ ಏನೂ ಇಲ್ಲಾ ಸಾರ್… ನೀವೇ ನನ್ನ ತರಗತಿಗೆ ಬಂದು ಕೂತು ಪರೀಕ್ಷಿಸಿ’ ಎಂದು ದಿಟ್ಟವಾಗಿ ನುಡಿದೆ. `ಹಾಂsss ನಾನು ನಿನ್ನ ತರಗತಿಗೆ ಬಂದು ಕೂರಬೇಕೇ’ ಎಂದು ಕಣ್ಣರಳಿಸಿ ದಿಟ್ಟಿಸಿದರು. `ಸಾರಿಸಾರ್’ ಎಂದು ತಲೆ ತಗ್ಗಿಸಿದ್ದೆ. ಬೇಸರ ಮಾಡಿಕೊಂಡರು. `ಹೂಂ; ಇಲ್ಲಿ ನಾನು ಹೆಚ್ಚು ಕಾಲ ಇರಲಾರೆ… ನಾನೇ ಬಿಟ್ಟು ಹೋಗುವುದು ಒಳಿತು’ ಎಂದುಕೊಂಡು ಹೊರ ಬಂದೆ. ತರಗತಿ ಇತ್ತು. ತೆಗೆದುಕೊಳ್ಳಲಿಲ್ಲ. ಲೈಬ್ರರಿಗೆ ಹೋದೆ. ಪಕ್ಷಿವಿಜ್ಞಾನ ಪುಸ್ತಕಗಳನ್ನು ಅಂತಹ ಬೇಸರದಲ್ಲಿ ಚಿತ್ರನೋಡಿ ಓದುವುದು ನನ್ನ ಸಂಕಟ ನಿವಾರಣೆಯ ಕ್ರಮಗಳಲ್ಲಿ ಒಂದು. ಸಲೀಂ ಅಲಿಯವರ `Birds of Indo Pakistan’ ಎಂಬ ಹೆಬ್ಬೊತ್ತಿಗೆಯ ವಿಶಾಲ ಟೇಬಲಿನಲ್ಲಿ ಇಟ್ಟುಕೊಂಡು ತಿರುವಿ ಹಾಕುತ್ತಿದ್ದೆ. ಇಡೀ ಇಂಡಿಯಾ ಪಾಕಿಸ್ತಾನದ ಎಲ್ಲಾ ಹಕ್ಕಿಗಳ ಹುಡುಕಿ ನೋಡಿ ತಿಳಿದು ಪಟ ತೆಗೆದು ಅಧ್ಯಯನ ಮಾಡಿ ಇಂತಹ ಒಂದು ಗ್ರಂಥ ಬರೆದಿದ್ದಾರಲ್ಲಾ ಈ ಸಲೀಂ ಅಜ್ಜಾ… ಇವರಿಗೆ ಎಲ್ಲ ನೊಬೆಲ್ ಪ್ರಶಸ್ತಿಗಳನ್ನು ಕೊಟ್ಟರೂ ಕಡಿಮೆಯೇ ಎಂದು ಏನೇನೊ ಟಿಪ್ಪಣಿ ಬರೆದುಕೊಂಡೆ. ನೆಮ್ಮದಿ ಇಲ್ಲದ ಮನಸ್ಸು. ಒಡಲ ಒಳಗೆ ಏನೋ ಉರಿಯುತಿತ್ತು. ಆಗಾಗ ಏದುಸಿರಿನಂತೆ ದುಃಖಳಿಕೆ ಬರುತ್ತಿತ್ತು.

ಕುಂತಲ್ಲಿ ಕೂರಲಾಗುತ್ತಿಲ್ಲ. ಎದ್ದು ಕ್ಯಾಂಟೀನಿಗೆ ಬಂದೆ. ಅದೇ ದುಂಡು ಕ್ಯಾಂಟೀನ್. ಪ್ರಾಯದ ಕಣ್ಣುಗಳು ಕೂಡುವ ಜಾಗ ಅದು. ಮೆಟ್ಟಿಲ ಮೇಲೆ ಈಚೆ ಮೂಲೆಯಲ್ಲಿ ನನ್ನ ಶಿವಮೊಗ್ಗದ ಗೆಳೆಯರು ಹುಡುಗಿಯರಿಗೆ ಕಾಳು ಹಾಕುತ್ತ ಕೂತಿದ್ದರು. ನನಗೆ ತುಂಬ ಆಪ್ತರು. ಅವರ ನಡುವೆ ಕೂತೆ. ಲೇಡೀಸ್ ಹಾಸ್ಟೆಲಿನ ಕಡೆಯಿಂದ ಸಂಜೆ ಆದ್ದರಿಂದ ಕ್ಯಾಂಟೀನಿಗೆ ಅಂದವಾದ ಹುಡುಗಿಯರು ಹಿಂಡು ಹಿಂಡು ಹಂಸ ಪಕ್ಷಿಗಳಂತೆ ಬರುತ್ತಲೇ ಇದ್ದರು. ಚುಡಾಯಿಸುವವರು ತಲ್ಲೀನರಾಗಿದ್ದರು. ಹುಡುಗಿಯರೂ ಅದನ್ನೇ ಬಯಸಿದಂತಿತ್ತು. ನನ್ನೊಳಗೆ ಏನೋ ವ್ಯಥೆ ಬಾಧೆ ತಬ್ಬಲಿತನ. ಅವರ ಬೆರಗಾಗಿ ದಿಟ್ಟಿಸಿದೆ. ಎದೆಗಾತಿಯರು. ತುಂಬು ತೊಡೆಯವರು. ತಂಬೂರಿ ನಿತಂಬದವರು. ಚೆಲುವಿನ ಪ್ರಾಯ ಅವರ ಮುಖದಲ್ಲಿ ಕನಿಯುತ್ತಿತ್ತು. `ಅಹಾ! ದೇವರೇ… ಎಂತೆಂತಹ ಚೆಂದದ ಬಣ್ಣದ ಬೆಡಗಿನ ಬುಗುರಿಗಳು ಇವೂ… ಈ ಇಷ್ಟೂ ಬುಗುರಿಗಳಲ್ಲಿ ಒಂದೇ ಒಂದಾದರೂ ಬುಗುರಿ ನನ್ನದಲ್ಲವಲ್ಲಾ… ಈ ಬುಗುರಿಗಳ ಆಡಿಸುವ ಕಲೆಯೇ ನನಗೆ ಇಲ್ಲವಲ್ಲಾ… ಚಿನ್ನದ ಬಣ್ಣದ ಈ ಬುಗುರಿಗಳೆಲ್ಲ ಎಲ್ಲೆಲ್ಲಿ ಹೋಗಿ ಸೇರುತ್ತವೊ… ಯಾವ ಬುಗುರಿಯನ್ನು ಆಡಿಸಲಾರೆ… ನಾನೊಂದು ವ್ಯರ್ಥ…ʼ ಎಂದು ಕೊಂಡೆ.

ಆ ಗೆಳೆಯರತ್ತ ಆ ಹುಡುಗಿಯರು ನೋಡಿ ಸೊಂಟ ನುಲಿದು ನಗುತ್ತ ವಯ್ಯಾರದಲ್ಲಿ ಹೊರಟು ಹೋದರು. ಎದೆಗೆ ಬುಗುರಿಯ ಗುನ್ನ ಬಿದ್ದಂತಾಗಿತ್ತು. ಎದ್ದು ನಡೆದೆ. ಮತ್ತೆ ಲೈಬ್ರರಿಗೆ ಬಂದೆ. ನನ್ನ ಫೈಲ್ ಅಲ್ಲೇ ಇತ್ತು. ಬುಗುರಿ ಎಂದು ಹೆಸರು ಬರೆದೆ. ಏನೊ ಕೈ ಚಡಪಡಿಸಿ ನಡುಗಾಡಿತು. ಚಿನ್ನದ ಬಣ್ಣದ ಹಸಿರು ಬಿಳಿ ಕೇಸರಿಯ ಚಲುವನ ರನ್ನದ ಬುಗುರಿ ಕಕ್ಕಸ್ಸು ಗುಂಡಿಗೆ ಬಿದ್ದು ಹೋಯಿತು ಎಂಬ ವಾಕ್ಯ ಅನಾಯಾಸವಾಗಿ ಬಂದು ಕೈ ಹಿಡಿದು ಬರೆಸಿಕೊಂಡಿತು. ನಾನೂ ನನ್ನ ತಾಯಿಯೂ ಆ ಬುಗುರಿಯಲ್ಲಿ ರೂಪಕವಾಗಿ ಮೂಡಿದ್ದೆವು. ಇಡೀ ನನ್ನ ಊರುಕೇರಿ ಮನೆಯವರೆಲ್ಲ ಬೆರೆತು ಆ ನರಕದ ಹೇಲುಗುಂಡಿಯಲ್ಲಿ ಮನುಷ್ಯ ಬಂಧಿಯಾಗಿರುವಂತೆ ಕಂಡಿತು. ಒಂದೇ ಪಟ್ಟಿಗೆ ಐವತ್ತಮೂರು ಪುಟ ಬರೆದಿದ್ದೆ. ಗೆಳೆಯ ದಳವಾಯಿ ಪಿಎಚ್.ಡಿ ಮಾಡಲು ಮರಳಿ ಗಂಗೋತ್ರಿಗೆ ಬಂದಿದ್ದ. ಅದನ್ನು ಇಪ್ಪತ್ತೈದು ಪುಟಗಳಿಗೆ ಇಳಿಸಿ ತಿದ್ದಿದ್ದೆ. ಓದಿದ್ದೆ. ಹಲವಾರು ಗೆಳೆಯರು ಕೊಠಡಿಯಲ್ಲಿ ನೆರೆದಿದ್ದರು. ನಕ್ಕು ನಗಿಸುತ್ತ ಸಾಗುವ ಕಥೆಯ ಒಳನೇಯ್ಗೆಯಲ್ಲೇ ತಬ್ಬಲಿತನ ಸಂಕಟ ಅಪಮಾನ ಹಿಂಸೆ ಮಾನವ ಸಂಬಂಧಗಳ ಭಗ್ನತೆಗಳೆಲ್ಲ ತಂತಾನೆ ಬೆರೆತು ಐಕ್ಯವಾಗಿದ್ದವು. ನಾನು ಹಾಗೆ ಬರೆಯಬೇಕು ಎಂಬ ಯಾವ ಪೂರ್ವ ಸಿದ್ಧತೆಗಳನ್ನು ಮಾಡಿಕೊಂಡಿರಲಿಲ್ಲ. ಇವತ್ತಿಗೂ ಹಾಗೆಯೇ! ಬರೆವ ಮುನ್ನ ಖಾಲಿ ಖಾಲಿಯಾಗಿ ಹತಾಶನಾಗಿ ಕೂತಿರುತ್ತೇನೆ. ಆಗಲೇ ಬರಹ ಮಾಯಾವಿಯಂತೆ ಮೈ ಮೇಲೆ ಬಂದುಬಿಡುವುದು. ಆಗ ನನಗೆ ಕಾಡಿದ ಯಾವುದಾದರೂ ಒಂದು ನೆನಪು ಹಾಗೂ ಅದರ ಜೊತೆಗೆ ನನಗೆ ಬೇಕಾದ ನಾದಮಯ ಸಂಗೀತ ಇದ್ದರೆ ಸಾಕು… ಮುಂದುವರಿದು ಹೇಳುವುದಾದರೆ; ನನಗೆ ಒಂದು ಕಂಬನಿ ಇದ್ದರೆ ಸಾಕು… ನಾನು ಅದೊಂದೆ ಕಂಬನಿಯನ್ನು ಸಾಗರದ ತನಕ ಸಾಗಿಸಬಲ್ಲೆ…

ದಳವಾಯಿಯ ಮೂಲಕವೆ ಪ್ರಜಾವಾಣಿ ಕಥಾ ಸ್ಪರ್ಧೆಗೆ ಕಳಿಸಿದೆ. ಸ್ಟ್ಯಾಂಪ್ ಹಚ್ಚಿ ವಿಳಾಸ ಬರೆದು ದಳವಾಯಿಯೆ ಡಬ್ಬಿಗೆ ಹಾಕಿದ್ದ. ಅಲ್ಲಿಗದು ಮುಗಿದಿತ್ತು. ಅಲ್ಲಿ ಬರೆದು ಅಲ್ಲಿಗೇ ಅದನ್ನು ಮರೆಯುವುದು ನನ್ನ ನಡೆ. ಹಾಗೇ ಇದ್ದೆ. ಆಗಾಗ ನಾಗವಾರರು ಕ್ಷೇಮ ವಿಚಾರಿಸುತ್ತಿದ್ದರು. `ಯಾವ್ದಾದ್ರೂ ಕಾಂಪಿಟೇಟಿವ್ ಎಕ್ಸಾಂ ಬರೀರೀ… ಇಲ್ಲಿ ಯ್ಯಾರ್ರಿ ನಿಮ್ಮನ್ನ ಉಳಿಸ್ಕೋತಾರೇ… ಎಲ್ಲಾದ್ರೂ ಒಬ್ಬ ಅಧಿಕಾರಿಯಾಗಿ ಹೋಗ್ರಿ. ನೂರಾರು ಬಡಜನರಿಗೆ ಉಪಕಾರ ಮಾಡಬಹುದು’ ಎಂದು ಕಿವಿ ಮಾತು ಹೇಳುತಿದ್ದರು. ಬ್ಯುರಾಕ್ರಸಿಯೊಂದು ಅತ್ಯಂತ ಹೇಯವಾದ ನಿರ್ದಯ ವ್ಯವಸ್ಥೆ ಎಂಬುದು ಚೆನ್ನಾಗಿ ಗೊತ್ತಿತ್ತು. ಅದರ ಒಳಗೆ ಹೋಗಿ ಒಳ್ಳೆಯದು ಮಾಡುವಷ್ಟು ತಾಳ್ಮೆ ನನಗಿಲ್ಲ ಎಂಬ ನನ್ನ ಮಿತಿ ನನಗೆ ಗೊತ್ತಿತ್ತು. ಐ.ಎ.ಎಸ್. ಆಸೆಯನ್ನು ಯಾವತ್ತೊ ಬಿಸಾಡಿದ್ದೆ. ನನಗಂತು ತಾಳ್ಮೆ ಎಂಬುದು ಮರುಭೂಮಿಯ ಮರೀಚಿಕೆಯಾಗಿತ್ತು. ನೋಡಿದರೆ ಸಹನೆ ತಾಳ್ಮೆ ಇದೆ ಎಂಬಂತೆ ಕಾಣುತ್ತಿತ್ತಾದರೂ ಯಾವ ಕ್ಷಣದಲ್ಲಿ ಸಿಡಿಯುತ್ತೇನೆ ಎಂಬುದರ ಅಂದಾಜು ನನಗೇ ಇರಲಿಲ್ಲ. ಉಗ್ರವಾದ ಸಿಟ್ಟು ನುಗ್ಗಿ ಬರುತ್ತಿತ್ತು. ತಡೆತಡೆದು ಸಾಕಾಗಿದ್ದೆ. ಒಂದು ಕ್ಷಣ ಇದ್ದಂತೆ ಇನ್ನೊಂದು ಕ್ಷಣ ಇರಲಾಗುತ್ತಿರಲಿಲ್ಲ. ಬಾಲ್ಯದಲ್ಲಿ ಒಂದು ಎರೆಹುಳುವಿನಂತೆ ಇದ್ದೆ. ಈಗಿನ ಅವಸ್ಥೆಯೆ ಬೇರೆ ಆಗಿತ್ತು. ಕಾಳಿಂಗ ಸರ್ಪದಂತೆ ಬುಸುಗುಡುತ್ತಿದ್ದೆ.

ವಿಭಾಗದಲ್ಲಿ ಬೇಕೆಂತಲೆ ಬೌದ್ಧಿಕ ಅಸ್ಪೃಶ್ಯತೆಯನ್ನು ಆಚರಿಸುತ್ತಿದ್ದರು. ಆ ಗಾದೆ ಪ್ರಾಧ್ಯಾಪಕರು ಒಂದು ದಿನ ಕ್ಯಾಂಟೀನ್ ಬಳಿ ಬಂದುಬೆನ್ನು ತಟ್ಟಿದಂತೆ ಮಾಡಿ; ಜೋರಾಗಿಯೇ ಹೊಡೆದು… `ನಿನ್ಗೆ ಒಂದಳೆ ಚಡ್ಡಿನು ಗತಿ ಇರ್ಲಿಲ್ಲೇನೊ… ತಿಕಾ ಬಿಟ್ಕಂದು ಬೆಳ್ದವನು ಇವತ್ತು ಜೀನ್ಸ್ ಪ್ಯಾಂಟ್ ಹಾಕಂಡು ಶೋಕಿ ಮಾಡ್ತಿದ್ದೀಯಲ್ಲೊ…’ ಎಂದು ಕರೆದು ಚಹಾ ಕುಡಿಸಿ ಕಥೆಯ ಮೆಚ್ಚಿದಂತೆ ಚುಚ್ಚಿ ಚುಚ್ಚಿ ವಿಮರ್ಶೆ ಮಾಡುತ್ತಲೇ ನನ್ನ ವ್ಯಕ್ತಿತ್ವ ವಧೆ ಮಾಡಿದ್ದರು. `ಅಂತಾ ಕೆಟ್ಟು ಹುಳನೇನಯ್ಯಾ ನಿಮ್ಮಪ್ಪಾ… ಲೋಪರ್ ಅವನು… ಛೀ; ಅಂತವನಿಗೆ ಹುಟ್ಟಿ ಬಂದ ನೀನು ನನ್ನ ಮನೆಯ ನಾಯಿಯ ಬೀದಿಗೆ ಅಟ್ಟಿಬಿಟ್ಟೆಯಲ್ಲೊ… ನಿಮ್ಮಪ್ಪನ ಕ್ಯಾರೆಕ್ಟರ್ ನಿನ್ನಲ್ಲು ಇದೆ ಅನ್ಸುತ್ತೆ’ ಎಂದು ಇವನ ಎದೆಗೆ ಬಾಣ ಬಿಟ್ಟೆ ಎಂಬ ಸಂತೋಷದಲ್ಲಿ ಹೊರಟು ಹೋದರು. ನಿಟ್ಟುಸಿರು ಬಿಟ್ಟೆ.

ನಾವು ಇಲ್ಲಿ ಈ ದೇಶದಲ್ಲಿ ಯಾವುದೇ ಒಂದು ಪುಟ್ಟ ಒಳ್ಳೆಯದನ್ನು ಮಾಡಿದರೂ ಅದನ್ನು ನಾನು ಹುಟ್ಟಿ ಬಂದ ಜಾತಿಯಿಂದಲೆ ಅಳೆದು ತಿವಿದು ಸಾಯಿಸಿಬಿಡುತ್ತಾರಲ್ಲಾ… ಯಾಕೆ ಈ ಪ್ರವೃತ್ತಿ ಈ ಮೇಲುಜಾತಿಗಳಿಗೆ ಎಂದು ಬೇಸರಗೊಂಡೆ. ನನ್ನ ಬಳಿ ಅವರ ಭಾವನೆಗಳಿಗೆ ಉತ್ತರ ಇರಲಿಲ್ಲ. ಮನಸ್ಸನ್ನು ಮತ್ತಷ್ಟು ಗಟ್ಟಿ ಮಾಡಿಕೊಂಡು `ಅಂಕಲ್‌ಟಾಮ್ಸ್ ಕ್ಯಾಬಿನ್’ ಕಾದಂಬರಿಯನ್ನು ಹಿಡಿದು ಲೈಬ್ರರಿಯ ಮರೆಯಲ್ಲಿ ಓದುತ್ತ ಕೂತೆ. ಅದೊಂದು ಗುಲಾಮಗಿರಿ ವ್ಯವಸ್ಥೆಯ ವಿರುದ್ಧದ ಕಥನವಾಗಿತ್ತು. ಕಪ್ಪು ಜನಾಂಗದ ಧಾರುಣ ಕತೆಯನ್ನು ಲೇಖಕ ಹ್ಯಾರಿಯೆಟ್ ಬೀಚರ್ ಸ್ಟೋವ್ 1852ರಲ್ಲಿಯೇ ಬರೆದಿದ್ದ. ಆಗತಾನೆ ಆಫ್ರಿಕಾಖಂಡದಿಂದ ಜಗತ್ತಿನಾದ್ಯಂತ ಕರಿಯ ಜನಾಂಗದವರ ಮಾರಾಟ ವ್ಯಾಪಕವಾಗಿತ್ತು. ಅವರ ದೀನವಾದ ಬದುಕನ್ನು ಓದುತ್ತಿದ್ದಂತೆಯೇ ನಮ್ಮ ಪೂರ್ವಿಕರು ಇದಕ್ಕಿಂತಲು ಘೋರವಾಗಿ ಜಾತಿಯ ನರಕದಲ್ಲಿ ಆಳಾಗಿ ಹಳಿದು ಹೋಗಿದ್ದಾರೆ… ಅವರ ದೂರದ ಕೊಂಡಿ ನಾನು ಎಂದುಕೊಂಡು ಮರುಗಿದೆ. ಕಾದಂಬರಿಯ ನಾಯಕ ಅಂಕಲ್ ಟಾಮ್ ನಮ್ಮ ಮುತ್ತಾತನಲ್ಲದೆ ಬೇರೆ ಯಾರೊ ಎಂದೆನಿಸಲಿಲ್ಲ.

ದೀಪಾವಳಿ ಬಂದಿತ್ತು. ಗೆಳೆಯರೊಬ್ಬರು ಬೆಳಿಗ್ಗೆಯೇ ಸುದ್ದಿ ಹೇಳಿ ವಿಶೇಷಾಂಕವ ತೋರಿದ್ದರು. ಬುಗುರಿಗೆ ಮೊದಲ ಬಹುಮಾನ ಬಂದಿತ್ತು. ನನಗೆ ಅದೇನೊ ಅಚ್ಚರಿ ಎನಿಸಲಿಲ್ಲ. ಆ ಕಥೆಯ ಹೇಸಿಗೆ ರೇಜಿಗೆ ಹಿಂಸೆ ನೆನಪಾಗಿ ನನ್ನನ್ನು ನಾನೇ ಹೇಲುಗುಂಡಿಗೆ ಅದ್ದಿಕೊಂಡಂತೆ ಭಾಸವಾಗಿ ಆ ದಿನ ಬೆಳಗಿನ ಬಿಸಿಬೇಳೆ ಬಾತನ್ನ ಹಾಸ್ಟಲಲ್ಲಿ ತಿನ್ನಲಾಗಲಿಲ್ಲ. ನೋಡೋಣ ಇವರ ಪ್ರತಿಕ್ರಿಯೆ ಹೇಗಿರುತ್ತದೆ ಎಂದು ಅಧ್ಯಯನ ಸಂಸ್ಥೆಗೆ ಬಂದೆ. ಯಾವೊಬ್ಬನೂ ಕಮಕ್ಕಿಮಕ್ ಎನ್ನಲಿಲ್ಲ. ಅದೇನೊ ಗೊತ್ತಿಲ್ಲ… ನಾವು ನೋಡಿಲ್ಲ ಎಂಬಂತೆ ಬಹಳ ಕಷ್ಟಪಟ್ಟು ನಾಟಕ ಮಾಡಿದರು. ಜೀಶಂಪ ಕೊಂಡಾಡಿದರು. ಉಳಿದ ಯಾರೊಬ್ಬರು ಕನಿಷ್ಟ ಮೆಚ್ಚಲಿಲ್ಲ. ಸಾಹಿತ್ಯ ಭಾಷೆ, ಸಂಸ್ಕೃತಿ ಜಾನಪದಗಳ ಅಧ್ಯಯನ ಮಾಡುವ ಆ ಸಂಸ್ಥೆಯೇ ಒಂದೇ ಒಂದು ಒಳ್ಳೆಯ ಮಾತಾಡಲಿಲ್ಲ. ಆ ಪ್ರಾಧ್ಯಾಪಕರು ನನ್ನ ಎದುರು ಬರಲಾಗದೆ ಹಿಂಬಾಗಿಲಲ್ಲಿ ಅಡ್ಡಾಡುತ್ತಿದ್ದರು. ಅಲ್ಲಿಗೂ ಹೋಗಿ ಎದುರಾಗಿ ಕಿರಿಕಿರಿ ಮಾಡುತ್ತಿದ್ದೆ. ಕಥೆ ಬರೆದು ಅವರನ್ನು ಸಲೀಸಾಗಿ ಪೇಚಿಗೆ ಸಿಲುಕಿಸಬಹುದು… ಇದು ಒಳ್ಳೆಯ ಆಟ. ಕ್ರಿಕೆಟ್ ಶಾಟ್‌ಗಿಂತಲು ಇಲ್ಲಿ ಬಲವಾಗಿ ಹೊಡೆಯಬಹುದೆನಿಸಿತು. ನನ್ನ ಗೆಳೆಯರು ಮಾತ್ರ ಹುಚ್ಚೆದ್ದು ಕುಣಿದು ನನ್ನ ಮೆರೆಸಿದ್ದರು. ಸ್ವಾಮಿ ಆನಂದ ನನ್ನ ಎತ್ತಿ ಹೆಗಲ ಮೇಲೆ ಕೂರಿಸಿಕೊಂಡು ಮಾರಮ್ಮನ ಹಬ್ಬದ ತಮಟೆ ನೃತ್ಯವನ್ನೇ ಮಾಡಿದ್ದ. `ಬ್ಯಾಡ ಬಿಡ್ಲಾಲೋ… ಅಮೆಕೆ ನನ್ನೇ ಕ್ವಾಣನ ಮಾಡ್ಕಂದು ಎಲ್ರೂ ಸೇರ್ಕಂದು ಬಲಿಕೊಟ್ಟರೂ’ ಎಂದು ಬಿಡಿಸಿಕೊಂಡೆ. `ನಾನು ಮಹಿಷಾಸುರ…ಹುಡುಗಾಟ್ವೇ… ಯಾವ ಮಗಾ ಮುಟ್ಟನು ಮುಟ್ಲಿ ನಿನ್ನಾ… ಸುಟ್ಟೋಯ್ತರೆ ಅಷ್ಟೇ’ ಎಂದು ನನ್ನ ಬೆಂಗಾವಲಿಗಿದ್ದ. ಅಣ್ಣನೊ ತಮ್ಮನೊ ರೀತಿಯಲ್ಲಿ ಕಾಯುತ್ತಿದ್ದ.

ಇವನೇ ಬುಗುರಿ ಕಥೆಗಾರ ಎಂದು ಎಲ್ಲೆಡೆ ಪ್ರಚಾರವಾಗಿತ್ತು. ಅದರ ಬಗ್ಗೆ ಅನೇಕ ಮರುಕಥೆಗಳು ಹುಟ್ಟಿದ್ದವು. ತೀರ್ಪುಗಾರರಾಗಿದ್ದ ಎಚ್.ಎಸ್. ರಾಘವೇಂದ್ರರಾವ್ ಅವರು ಬುಗುರಿ ಕಥೆ ಒಂದು ಸರ್ವೋಚ್ಛ ಕಥೆ ಎಂದು ಘೋಷಿಸಿಬಿಟ್ಟಿದ್ದರು. ಅದು ಏನೇನು ತರದಲ್ಲಿ ರಿಂಗಣಿಸಿತ್ತು ಎಂಬುದನ್ನೆಲ್ಲ ಹೇಳಿಕೊಳ್ಳಲಾರೆ. ಪ್ರಜಾವಾಣಿಗೆ ಕಳಿಸಿದ್ದ ಆ ಕಥೆಯ ಮೊದಲ ಸುತ್ತಿನ ಓದಿನಲ್ಲಿ ಉಪಸಂಪಾದಕರೊಬ್ಬರು ಅದನ್ನು ಕಸದ ಬುಟ್ಟಿಗೆ ಎಸೆದಿದ್ದರಂತೆ. ಹಾಗೆ ನಿರಾಕರಿಸಲ್ಪಟ್ಟ ಕಥೆಗಳತ್ತ ಸುಮ್ಮನೆ ಕಣ್ಣಾಡಿಸುವಾಗ ಜಿ.ಎನ್. ರಂಗನಾಥ್ ಅವರು ಬುಗುರಿಯನ್ನು ಎತ್ತಿಕೊಂಡು ಓದಿ ದಂಗಾದರಂತೆ. ಹೇಸಿಗೆ ಅಂಟಿಕೊಂಡಿದ್ದ ಕಾಗದ ಎಂಬಂತೆ ಬಿಸಾಡಿದ್ದ ಸಂಪಾದಕ; ಛೀ ಅದನ್ನು ಬಿಸಾಡಿ ಎಂದಿದ್ದನಂತೆ. ಸ್ವತಃ ರಂಗರಾವ್ ಬಹಿರಂಗವಾಗಿ ಹೇಳಿದ್ದರು. ಇದು ಯಾವತ್ತೂ ಉಳಿಯುವ ಕಥೆ; ಸ್ಪರ್ಧೆಗೆಂದು ಬರೆದದ್ದಲ್ಲ ಬಂದದ್ದಲ್ಲ! ಕಾಲದ ಅನಿವಾರ್ಯತೆಯ ಚಾರಿತ್ರಿಕ ಕಾರಣಕ್ಕೆ ಹುಟ್ಟಿರುವ ಕಥೆ ಇದು ಎಂದು ಸಮರ್ಥಿಸಿಕೊಂಡಿದ್ದರಂತೆ. ನನಗೇ ವಿಸ್ಮಯ ಎನಿಸಿತ್ತು. ಒಂದೇ ಕಥೆ ಅವರವರ ಸಂಸ್ಕಾರಗಳಲ್ಲಿ ಹೇಗೆಲ್ಲ ಬೇರೆ ಬೇರೆಯಾಗಿ ಕಾಣುತ್ತದಲ್ಲಾ ಎಂದು. ಅವತ್ತು ಭಾನುವಾರ. ಕೊಠಡಿಯಲ್ಲೆ ಇದ್ದೆ. ಬಟ್ಟೆಗಳ ತೊಳೆದು; ಅನುವಾದಿತ ಅನ್ಯ ಕಾದಂಬರಿಯ ಓದುತ್ತಿದ್ದೆ. ಅದು ಅಲ್ಪರ್ಟ್ ಕಮೂನ ಅಸಂಗತ ಬರವಣಿಗೆಯ ದೊಡ್ಡ ಮಾದರಿ. ಡಿ.ಎ.ಶಂಕರ್ ಅನುವಾದಿಸಿದ್ದರು. ಬಾಗಿಲು ನೂಕಿಕೊಂಡು ಒಬ್ಬರು ಒಳ ಬಂದರು. ಮೋಡ ಮುಸುಕಿದ್ದ ಮಬ್ಬು ಬೆಳಕು. ಪಂಚೆ ತೊಟ್ಟಿದ್ದರು. ಲೂಸು ಅಂಗಿ. ಗೊತ್ತಾಯಿತು. ಸಾರ್‍ಸಾರ್ ಬನ್ನೀ ಎಂದು ಕೂರಿಸಿದೆ.

`ಬುಗುರಿ ಕಥೆ ಓದಿದೆ ಕಣ್ರೀ… ತುಂಬ ಡಿಸ್ಟರ್ಬ್ ಆಗೋಯ್ತು. ನೋಡಿ ಮಾತಾಡಿಸಿ ಬರೋಣ ಅಂತಾ ಬಂದೇರೀ… ನಿಮ್ಮನ್ನ ಸಾಕಷ್ಟು ಸಲ ಕ್ಯಾಂಪಸ್ಸಲ್ಲಿ ನೋಡಿದ್ದೆ. ಇವನೊಳಗೇ ಇಂತಾ ಕಥೆಗಾರ ಇದ್ದಾನೆ ಎಂದು ಗೊತ್ತಿರಲಿಲ್ಲ’ ಎಂದು ಮೆಚ್ಚಿದರು. ಸಿಗರೇಟು ಹಚ್ಚಿ ಹೊಗೆ ಬಿಟ್ಟರು. ಕರಗಿ ಹೋಗಿದ್ದೆ. ಇದೇನಪ್ಪಾ… ಇಂತಾ ದೊಡ್ಡ ಲೇಖಕ ನನ್ನ ಹುಡುಕಿಕೊಂಡು ಬರುವಂತಾಯಿತೇ ಎಂದು ನಂಬದಾದೆ. ತಟ್ಟನೆ ಹಳೆಯ ಘಟನೆ ನೆನಪಾಯಿತು. ಎಕನಾಮಿಕ್ಸ್ ಎಂ.ಎ.ಗೆ ಸೇರಿ ಹಾಸ್ಟಲಲ್ಲಿ ಸೀಟು ಸಿಗದೆ ಅಬ್ಬೇಪಾರಿಯಾಗಿ ಯಾರ ಸಹಾಯವಾದರೂ ಸಿಗಲಿ ಎಂದು ಪರದಾಡುತ್ತಿದ್ದಾಗ… `ಸಾರ್… ನನಗೆ ಪಿ.ಜಿ. ಓಲ್ಡ್ ಬ್ಲಾಕ್ ಹಾಸ್ಟಲಲ್ಲಿ ಸೀಟು ಕೊಟ್ಟಿಲ್ಲ ಸಾರ್… ನನಗೆ ಅನ್ಯಾಯ ಆಗಿದೆ ಸಾರ್. ನೀವು ವಾರ್ಡನ್‍ಗೆ ಹೇಳಿ ಸಾರ್’ ಎಂದು ವಿನಂತಿಸಿದ್ದೆ. ಅದು ಲೈಬ್ರರಿಯ ನ್ಯೂಸ್ ಪೇಪರ್ ಸೆಕ್ಷನ್‍ನಲ್ಲಿ ಪೇಪರ್ ಓದಲೆಂದು ಮೇಲೇರಿ ಹೋಗುತ್ತಿದ್ದೆ. ಕೆಳಕ್ಕೆ ಇಳಿದು ಬರುತ್ತಿದ್ದವರು ದೇವನೂರು ಮಹದೇವ. ಅಷ್ಟಾಗಿ ಪರಿಚಯ ಇರಲಿಲ್ಲ. `ಇಲ್ಲಪ್ಪಾ… ಇಂತಾ ಸಮಸ್ಯೆಗಳ ನೀವೇ ಬಗೆಹರಿಸ್ಕೋಬೇಕೂ… ನನ್ನಿಂದಾಗಲ್ಲ’ ಎಂದು ಮುಖವನ್ನೇ ನೋಡದೆ ತಪ್ಪಿಸಿಕೊಂಡು ಹೋದಂತಿದ್ದ ಅವರೆನಾ ಈಗ ಈ ನನ್ನ ಕೊಠಡಿಯಲ್ಲಿ ಸಿಗರೇಟು ಸೇದುತ್ತ ಕೂತಿರುವುದೂ ಎನಿಸಿ ಮನಸ್ಸು ಒಂಥರಾ ಆಯಿತು. ಹೆಚ್ಚು ಏನನ್ನೂ ಹೇಳಲಿಲ್ಲ. ಆದರೆ ನಮ್ಮಿಬ್ಬರ ಮಧ್ಯೆ ಆದಿಮ ಕಾಲದಿಂದಲು ಏನೊ ನೆಂಟಸ್ತಿಕೆ ಒಪ್ಪಂದ ಮಾತು ಕಥೆ ಆಗಿದ್ದಂತೆ ಮೌನ ಸುಳಿದಾಡುತ್ತಿತ್ತು. ಹಾ ಓ ಎಂದು ಒದರಾಡಬೇಕಿರಲಿಲ್ಲ. ವಿಮರ್ಶೆ ಹೊಗಳಿಕೆ ಮಾಡಿಕೊಳ್ಳಬೇಕಿರಲಿಲ್ಲ. ಅಂತೂ ಒಟ್ಟಿಗೆ ಕೂತಿದ್ದೆವು.

ಸಿಗರೇಟು ಕೊಟ್ಟರು. ಅವರ ಜೊತೆಯಲ್ಲೆ ಸೇದಿದೆ. ವಿಶಾಲ ಕಿಟಕಿಯತ್ತ ನೋಡುತ್ತ ಸಿಗರೇಟ್ ಸುಡುತ್ತಿದ್ದರು. ಯಾವಾಗಲೊ ಒಮ್ಮೆ ಒಂದು ಸಲ ಪುಸ್ ಎಂದು ಹೊಗೆ ಎಳೆದು ಬಿಟ್ಟು ಹಾಗೇ ಬೆರಳ ನಡುವೆ ಸಿಗರೇಟು ತನ್ನನ್ನು ತಾನೇ ಸುಟ್ಟುಕೊಳ್ಳಲಿ ಎಂದು ಬಿಟ್ಟುಬಿಡುತ್ತಿದ್ದರು. ತಂತಾನೆ ಬೂದಿ ಉದುರಿ ಬೀಳುತಿತ್ತು. ಸಿಗರೇಟನ್ನು ಅವರು ಕೊಡವುತ್ತಿರಲಿಲ್ಲ. ಅವರ ಆ ದಾಟಿಯಲ್ಲಿ ನನಗೇನೊ ವಿಲಕ್ಷಣ ಗುಣ ಕಂಡಿತು. ಅವರು ಈ ಲೋಕದ ಕೇಡನ್ನು ಸುಡುತ್ತಿದ್ದಾರೊ; ಬರಿದೇ ತಂಬಾಕಿನ ಸಿಗರೇಟನ್ನು ಬೂದಿ ಮಾಡುತ್ತಿರುವರೊ ಎಂಬುದೆ ತಿಳಿಯುತ್ತಿರಲಿಲ್ಲ. ಒಂದಂತು ಖಂಡಿತ ನಿಜ ಎನಿಸಿತ್ತು. ಈ ಕಥೆಗಾರ ಮಾಯಾವಿ! ಇವರ ನೆರಳು ಸೋಕದಂತೆ ಅಂತರ ಕಾಯ್ದುಕೊಂಡು ನಾನು ದೂರವೇ ಇರಬೇಕು ಎನಿಸಿತು.

ಎದ್ದು ಹೊರಟೇ ಹೋದರು. ಗರಬಡಿದಂತಾಗಿತ್ತು. ಗೇಟಿನ ತನಕ ಹೋಗಿ ಬೀಳ್ಕೊಟ್ಟಿರಲಿಲ್ಲ. ಈಗ ಇವರು ಬಂದು ಹೋದದ್ದು ನಿಜವಾ ಎಂದು ಪ್ರಶ್ನಿಸಿಕೊಂಡೆ. ಅವರು ಸೇದಿದ್ದ ಸಿಗರೇಟಿನ ಬೂದಿ ಅಲ್ಲೇ ಉದುರಿತ್ತು. ಕಸಗುಡಿಸಿದೆ. ನನಗೇ ಕಿರಿಕಿರಿ ಆಗುವಷ್ಟು ಹೊಗಳಿಕೆಯ ಪತ್ರಗಳು ರಾಶಿಯಾಗಿ ಬಂದಿದ್ದವು. ಅವನ್ನೆಲ್ಲ ಒಂದು ದಿನ ಓದಿ; ಈ ಹೊಗಳಿಕೆಗಳೆಲ್ಲ ಸುಳ್ಳು ಎಂದು ಹರಿದು ಹಾಕಿದ್ದೆ. ನನ್ನ ಕೆಲಸಗಳಲ್ಲಿ ನಾನು ತೊಡಗಿದೆ. ಮಸ್ತು ಹುಡುಗಿಯರು ಹಿಂದೆ ಬಿದ್ದಿದ್ದರು. ವಿಷಾದ ಎಂದರೆ; ಯಾವ ಹುಡುಗಿಯರ ಚೆಲುವ ಕಂಡು; ಈ ಯಾವೊಂದು ಬುಗುರಿಯೂ ನನ್ನವಲ್ಲ ಎಂದು ದುಃಖದಲ್ಲಿ ಲೈಬ್ರರಿಗೆ ತೆರಳಿ ಬುಗುರಿ ಎಂದು ಕಥೆ ಬರೆದಿದ್ದೆನೊ; ಅದರಿಂದಲೇ ಹುಡುಗಿಯರು ನನ್ನನ್ನು ಚುಡಾಯಿಸಿ ಕರೆಯುತ್ತಿದ್ದರು. ವ್ಯಂಗ್ಯ ಎಂದರೆ; ಆ ಕಥೆಗೂ ಆ ಹುಡುಗಿಯರ ರತಿನಗೆಗೂ ಯಾವುದೇ ಸಂಬಂಧ ಇರಲಿಲ್ಲ. ಅರ್ಥದ ಲೋಕವೇ ಎಷ್ಟೋ ಸಲ ಅಸಂಗತ, ನಿರರ್ಥಕ, ವ್ಯರ್ಥ ಎನಿಸಿಬಿಡುತ್ತಿತ್ತು.